ಭಾನುವಾರ, ನವೆಂಬರ್ 30, 2014

ಒಲವೇ ಸಾಕ್ಷಾತ್ಕಾರ

ನವಂಬರ್ 2014 ರ ಮಾಹೆಯುದ್ದಕ್ಕೂ ನಡೆದ ಕಹಳೆ ನಾಲ್ಕನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.



ಅಮ್ಮಾ... ನಿನ್ನದೇ 'ಅನಂತ ಪರಿಪೂರ್ಣತೆಯ ಸೊಬಗು'
ಅಗಣಿತ ಸದ್ಗುಣಗಳಲಿ ಆಯ್ದ ವಾತ್ಸಲ್ಯದ
ಸಿಹಿಸಾರದ 'ವಿಶ್ವರೂಪ' ತಳೆದಿಹೆ ಏನು?!
ಪ್ರತಿಕ್ಷಣವೂ ನಿಬ್ಬೆರಗುಗಳೇ ಉದಯಿಸುವ
'ಜ್ಞಾನ - ಬ್ರಂಹ್ಮಾಂಡ'.. ನೀ!.. ಹರಿತ ಸತ್ಯದಲೂ
ಎಂಥ ಸಹನೆಯ ನಿಯಮ; ಸಾಧನೆಯ
ಪ್ರಜ್ವಲಿಸಲು ನಡೆಸುತಿಹೆ ನಿರಂತರ
'ನಿರಾಕಾರ ತನ್ಮಯ ಧ್ಯಾನ'!!

ತಾಯೇ... ಅಣುರೇಣುವೂ ನಿನ್ನದೇ ತದ್ರೂಪದ ದೈವಾಂಶ..
ನಿನ್ನ ಕುಡಿಗಳೆಲ್ಲ 'ಅರಿ'ಯದ ಹಾಲ-'ಹಸು'ಳೆಗಳು!!
ಅಪವಾದವೀ ನರಜೀವಿಯು!..  'ಅಸು'ರನು; ಕಾರಣವೀ
'ಅರಿ'ಯೇ!.. ಅಮ್ಮಾ... ಈ ಅಗೋಚರ ಅಂಗವಿದು
ಇವಗೆ ಹೇಗೆ ಬಂತು!!

ಮೀರಿಹೋದರೂ ಈ ಸುಪ್ರಸನ್ನತೆ ಏಕೆ ತಾಯೇ?
ಇನ್ನೂ ಕರುಳು ಮಿಡಿದಿದೆಯೇನು?!.. ರಾಕ್ಷಸತ್ವವನೂ
ಹೊಟ್ಟೆಗೆ ಹಾಕಿಕೊಳ್ಳಲು 'ಅಣಿ'ಯಾಗಿಹೆಯೇನು?
ಸಾಕು ಸಾಕು... ಸಹನೆಯ 'ಅರ್ಥ'...
ಸಾಯುವ ಮುನ್ನ..
ತೋರಿಸು ಸಾತ್ವಿಕತೆಯಲ್ಲಿಹ ಆ 'ದಂಗಾಗಿಸುವ' ಝಳಪು!!

ಎಲ್ಲದರೊಳಗೊಂದಾಗಿಸು... ನರನನೂ ಪ್ರಕೃತಿ ಮಾಡು..,
ಸರ್ವಸಾಕ್ಷಾತ್ಕಾರದ 'ಒಲವ' ಅನುಗ್ರಹಿಸಿ
ತಪವರಿಯದವನಿಗೂ 'ವರವ' ನೀಡು!!

ಲೇಖಕರ ಕಿರುಪರಿಚಯ
ಶ್ರೀಮತಿ ಶೈಲಜ ಜೆ. ಸಿ.

ತಮ್ಮ ಕನ್ನಡ ಬರೆಹ ಹಾಗೂ ಚಿಂತನೆಗಳಲ್ಲಿ ಪ್ರೌಢಿಮೆ ಸಾಧಿಸಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನ್ನೈ ನಲ್ಲಿರುವ ಭಾರತ ಹವಾಮಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಶನಿವಾರ, ನವೆಂಬರ್ 29, 2014

ಗುಂಡಣ್ಣನ ರಗಳೆಗಳು

ಡೊನೇಷನ್ ಇಲ್ಲದ ಶಾಲೆ
ವರದಕ್ಷಿಣೆ ಇಲ್ಲದ ಮದುವೆ
ಲಂಚವಿಲ್ಲದ ಕಛೇರಿ
ದ್ವಂದ್ವಾರ್ಥವಿಲ್ಲದ ಸಿನಿಮಾ
ಎಲ್ಲಿಯೂ ಸಿಗದೋ ಗುಂಡಣ್ಣ


ಅಪ್ಪನ ಜೇಬಿಗೆ ಅಮ್ಮನ ಕಣ್ಣು
ಅಮ್ಮನ ಡಬ್ಬಿಯ ದುಡ್ಡು
ಮಗನ ಪಾಲು
ಮಗನ ಹಿಂದೆಯೇ ಉಂಟು
ಪೋಲಿ ಪುಂಡರ ದಂಡೋ ದಂಡು ಗುಂಡಣ್ಣ


ಮಾತೃ ಹೋಗಿ ಅಮ್ಮ ಆಯ್ತು
ಅಮ್ಮ ಹೋಗಿ ಮಮ್ಮಿ ಆಯ್ತು
ಅಮ್ಮ ಗುಮ್ಮ ಎಲ್ಲ ಹೋಗಿ
ಮಾಮ್ಸ್ ಆಯ್ತಲ್ಲೋ ಗುಂಡಣ್ಣ


ಕೊಡು ನಿನ್ನ ಓಟು
ತಗೋ ನನ್ನೀ ನೋಟು
ಮುಳುಗಿಸುವೆ ನಿನ್ನ ಹೆಂಡದಿ
ಗೆದ್ದೆನಾದರೆ ಮುಂದೆ
ಹೇರುವೇ ನಾ ನಿನ್ನ ಬೆನ್ನಿಗೆ
ವಿದೇಶಿ ಸಾಲದ ಭಾರೀ ದೊಡ್ಡ ಮೂಟೆಯ ಗುಂಡಣ್ಣ


ಕೆಟ್ಟದ್ದು ಕೇಳದಿರು
ಕೆಟ್ಟದ್ದು ನೋಡದಿರು
ಕೆಟ್ಟದ್ದು ಮಾಡದಿರು ಓ ಮಂಗ
ದಿಟ್ಟತನವೇ ಎಲ್ಲಕ್ಕೂ ಮೂಲವಯ್ಯ ಗುಂಡಣ್ಣ


ಒಲಿದರೆ ನಾರಿ
ಮುನಿದರೆ ಮಾರಿ
ಉಟ್ಟಿಹಳು ಭಾರೀ ಜರತಾರಿ ಸಾರಿ
ಬಾಯ್ಬಿಟ್ಟರೆ ಚಿನ್ನಕೆ ಪಿತೂರಿ
ಜಿರಳೆ ಕಂಡರೆ ಮಾತ್ರ ಕೂಡಲೇ ಪರಾರಿಯಲ್ಲೋ ಗುಂಡಣ್ಣ


ಎಲೈ ಮತದಾರ ಪ್ರಭುವೆ
ನಿನಗೇನು ಕಡಿಮೆ ಮಾಡಿದೆ ನಾನು
ನೀರು, ಲೈಟು, ಹಾಲು, ಗ್ಯಾಸು
ನಿನ್ನ ಜೀವನ ಮಟ್ಟವ
ಬೆಲೆಗಳಂತೆಯೇ ಆಗಸದೆತ್ತರಕೆ ಮೇಲೇರಿಸಲಿಲ್ಲವೇ ಗುಂಡಣ್ಣ


ಒಳಗಡಿ ಇಡೆ ಬರುವ ಪರಿಮಳ
ಮಾಣಿ ಉಸುರುವ ಖಾದ್ಯ ನಾಮಾವಳಿ
ಮೆಲ್ಲುವ ತನಕ ಎಲ್ಲವೂ ರುಚಿಯಯ್ಯಾ
ಮಿಗೆ ಮುಂಬರುವ ಬಿಲ್ಲು ಮಾತ್ರ
ಕಣ್ಣಿಗೆ ಕಂಡೊಡೆ ಕಹಿಯೋ ಕಹಿಯಾಗಿರುವುದಲ್ಲೋ ಗುಂಡಣ್ಣ.


ಲೇಖಕರ ಕಿರುಪರಿಚಯ
ಶ್ರೀ ಸು. ವಿ. ಮೂರ್ತಿ

ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಾಗಿರುವ ಇವರದು ಬಹುಮುಖ ಪ್ರತಿಭೆ; ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜ್ಞಾನಾರ್ಜನೆ ಮತ್ತು ಸಮಾಜಿಕ ಅರಿವು ಮೂಡಿಸುವುದು ಇವರ ಬರೆಹ ಹಾಗೂ ಕಲಾಕೃತಿಗಳ ಮೂಲ ಉದ್ದೇಶ.

Blog  |  Facebook  |  Twitter

ಶುಕ್ರವಾರ, ನವೆಂಬರ್ 28, 2014

ನೆನಪುಗಳು

ನನಗೂ 'ಕಹಳೆ' ಊದುವ ತವಕ. ಗೆಳತಿಯೊಬ್ಬಳ ಲೇಖನ ಓದಿದ್ದೇ ತಡ, ನನಗೂ ಬರೆಯುವ ಆಸಕ್ತಿ ಹುಟ್ಟಿಕೊಂಡಿತು. ಕನ್ನಡ ನಾಡಿನ ಹೆಸರಾಂತ ಜಿಲ್ಲೆಯಾದ ಉಡುಪಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದ ನನಗೆ 'ಕನ್ನಡದಲ್ಲಿ ಬರೆಯಿರಿ' ಎಂಬ 'ಕಹಳೆ'ಯ ನಿಯಮವು ಬರೆಯಲು ಸ್ಫೂರ್ತಿಯನ್ನು ನೀಡಿತು. 'ಐಛ್ಛಿಕ ವಿಷಯ' ಎಂದಾಗ ತುಸು ಜಾಸ್ತಿಯೇ ಎನ್ನುವ ಉತ್ಸಾಹ ಹುಟ್ಟಿಕೊಂಡಿತು. ಕಾರಣ ಶಾಲೆಯಲ್ಲಿ ಪ್ರಬಂಧಗಳನ್ನು ಬಿಟ್ಟರೆ ಇಲ್ಲಿಯವರೆಗೆ ಯಾವ ಲೇಖನವನ್ನೂ ನಾನು ಬರೆದವಳಲ್ಲ!

ಹಳ್ಳಿಯಲ್ಲಿ ಸ್ವಚ್ಛಂದವಾಗಿ ನಲಿದು. ಬೆಳೆದ ನಾನು ಪಟ್ಟಣಕ್ಕೆ ಬಂದಾಗ ನನ್ನ ಮನಸ್ಸಿನ ಭಯ, ಆತಂಕ, ಸ್ವಾಭಿಮಾನ, ಧೈರ್ಯ, ಸಂತೃಪ್ತಿ ಇವುಗಳ ಸರಮಾಲೆಯೇ ಈ 'ನೆನಪುಗಳು'.

ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನನ್ನ ಅಣ್ಣ ಮುಂದಿನ ಶಿಕ್ಷಣವನ್ನು ಕೊಡಿಸುವ ನಿಸ್ವಾರ್ಥ ಸೇವೆಗೆ ಮುಂದಾದರು. ಒಂದು ದಿನ ಪಿ. ಯೂ. ಸಿ. ಗೆ ಪ್ರವೇಶ ಪಡೆಯಲು ಒಂದು ಪ್ರತಿಷ್ಠಿತ ಕಾಲೇಜಿಗೆ ಕರೆದುಕೊಂಡು ಹೋದರು. ಯಾಕೋ ಏನೋ ಆ ಕಾಲೇಜಿನ ಕಟ್ಟಡವನ್ನು ನೋಡಿಯೇ ನನ್ನ ಕಣ್ಣುಗಳು ಬೆರಗುಗೊಂಡಿದ್ದವು. ನಮ್ಮ ಊರಿನಲ್ಲಿ ಶಾಲಾ - ಕಾಲೇಜುಗಳು ವಿಶಾಲವಾದ ಹೆಚ್ಚೆಂದರೆ ಒಂದು ಮಹಡಿಯುಳ್ಳ ಕಟ್ಟಡಗಳು. ಸುತ್ತಲೂ ಹಸಿರು ಕಂಗೊಳಿಸುವ ಕೈತೋಟಗಳು. ಎಲ್ಲೆಲ್ಲೂ ವಿಶಾಲತೆ. ಮನಸ್ಸಿನಲ್ಲಿ ಆಗಲೇ ತಕ್ಕಡಿ ತೂಗಲು ಆರಂಭವಾಗಿತ್ತು. ಬೆಂಗಳೂರಿನ ಕಾಲೇಜು. ನಾಲ್ಕು ದಿಕ್ಕುಗಳಿಗೂ ಆವರಿಸಿಕೊಂಡು ಎತ್ತರವಾಗಿ ಎದ್ದುನಿಂತ ಬಹುಮಹಡಿ ಕಟ್ಟಡ. ಒಳಗೆ ಹೋಗಲು. ಹೊರಬರಲು ಒಂದೇ ಬಾಗಿಲು! ಅದಕ್ಕೂ ಕಬ್ಬಿಣದ ಸರಳುಗಳ ರಕ್ಷಣೆ. ಜೊತೆಗೆ ಒಬ್ಬ ಕಾವಲುಗಾರ!. ಯಾಕೋ ನನ್ನ ಅಣ್ಣನ ಮೇಲೆ ಸಂಶಯ. ಪತ್ರಿಕೆಗಳಲ್ಲಿ ಶಾಲಾ ದಿನಗಳಲ್ಲಿ ಜೈಲಿನ ಚಿತ್ರ ಕಂಡ ನೆನಪು. ಕೈಕಾಲುಗಳಲ್ಲಿ ಸಣ್ಣನೆಯ ನಡುಕ.

'ನನಗೆ ಇಲ್ಲಿ ಪ್ರವೇಶ ದೊರೆಯದಂತೆ ಮಾಡು' ದೇವರಲ್ಲಿ ಪರಿಪರಿಯಾಗಿ ಬೇಡಿಕೊಂಡೆ. ಆದರೆ ದೇವರು ದಯೆ ತೋರಲಿಲ್ಲ. ಅದೇ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಒಳಗೆ ಪ್ರವೇಶ ಮಾಡಿ ತಲೆ ಎತ್ತಿ ನೋಡಿದರೆ ಬೆಂಕಿಪೊಟ್ಟಣಗಳು ಒಂದರ ಮೇಲೊಂದು ಜೋಡಿಸಿದಂತಹ ನೋಟ. ಇನ್ನೂ ಕತ್ತೆತ್ತಿ ಮೇಲಕ್ಕೆ ನೋಡಿದರೆ ಕಂಡದ್ದು? ಆಕಾಶವೇ ಚೌಕಾಕಾರ!

ನನ್ನ ಅಣ್ಣನಿಗೋ ತಂಗಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ದೊರೆಯಿತು ಎಂಬ ಸಮಾಧಾನ. ನನಗೋ ಒಳಗೊಳಗೇ ಶೂನ್ಯದ ಅನುಭವ. ಅಂತೂ ಕಾಲೇಜು ದಿನಗಳು ಪ್ರಾರಂಭವಾದವು. ಮೊದಲ ದಿನ ಮೌನ. ನಮ್ಮ ಶಾಲೆಯಲ್ಲಿ ತರಗತಿಗೇ ಪ್ರಥಮ ಸ್ಥಾನ ಪಡೆಯುತ್ತಿದ್ದ ನನಗೆ ಸಂಗೀತ, ಪ್ರಬಂಧ, ಭಾಷಣ ಮುಂತಾದುವುಗಳಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ಇಲ್ಲಿಗೆ ಬಂದು ಮೊತ್ತ ಮೊದಲಿಗೆ ಇಂಗ್ಲೀಷ್ ಭಾಷೆಗೆ ನಡುಗಿ ಹೋದೆ. ಒಬ್ಬಳಾದರೂ ಬಂದು ಕನ್ನಡದಲ್ಲಿ ಮಾತನಾಡಿಸಬಾರದೇ? ಎಂದು ಹಾತೊರೆಯುತ್ತಿದ್ದಾಗ ಒಬ್ಬಳು ಬಂದು ನನ್ನ ಪರಿಚಯವನ್ನು ಕನ್ನಡದಲ್ಲಿ ಕೇಳಿದಳು. ಕನ್ನಡವೂ, ನಾನೂ ಇಬ್ಬರೂ ಈ ಪಟ್ಟಣದಲ್ಲಿ ಇನ್ನೂ ಬದುಕಿದ್ದೇವೆ ಎಂಬ ಅನುಭವವಾಯಿತು. ಮುಂದೆ ಎಲ್ಲರೊಡನೆ ಬೆರೆತು ಅಲ್ಪ ಸ್ವಲ್ಪ ಇಂಗ್ಲೀಷ್ ಸಂಭಾಷಣೆಯನ್ನು ಕಲಿತೆ.

ಇನ್ನು ಪರೀಕ್ಷೆಗಳ ಸರದಿ. ಯಾಕೋ ಮೊದಮೊದಲ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗುವುದಕ್ಕೇ ಹೆಣಗಬೇಕಾಯಿತು. ಮುಂದೆ ಗೆಳತಿಯರ ಸಾಂತ್ವನಗಳಿಂದ, ಗುರುಗಳ ಪ್ರೋತ್ಸಾಹದಿಂದ, ಅಣ್ಣನ ಧೈರ್ಯ ತುಂಬುವ ಮಾತುಗಳಿಂದ ಉತ್ತಮ ಫಲಿತಾಂಶವನ್ನು ಪಡೆದು ಡಿಗ್ರಿಯನ್ನು ಉತ್ತಮ ಶ್ರೇಣಿಯಲ್ಲಿಯೇ ಪಡೆದುಕೊಂಡೆ. ಆಗಲೇ ನನಗೆ ಏನೋ ಸಾಧಿಸಿದ ಸಂತೋಷ.

ಆ ವೇಳೆಗಾಗಲೇ 'ಇಂಗ್ಲೀಷ್' ಭೂತದ ಭಯವು ಕಡಿಮೆಯಾಗಿತ್ತು. ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿದಾಗ ನನ್ನ ಅಣ್ಣನಿಗೆ ಸಾರ್ಥಕ ಭಾವನೆ. ನನಗೋ ಧನ್ಯತಾ ಭಾವನೆ. ಮುಂದಿನ ದಿನಗಳಲ್ಲಿ ನನ್ನ ಸಂಗೀತದ ಆಸಕ್ತಿಯನ್ನು ಬೆಳೆಸಲು ಅವಕಾಶವೂ ದೊರೆಯಿತು.

ಮುಂದೆ ಕನ್ನಡಾಂಬೆಯ ಆಶೀರ್ವಾದದಿಂದ, ಮಂಗಳೂರು ಮೂಲದ, ಬೆಂಗಳೂರಿನಲ್ಲಿ ನೆಲೆಸಿದ ಒಬ್ಬ ಅಚ್ಚ ಕನ್ನಡಿಗನೇ ಪತಿಯಾಗಿ ದೊರೆತರು. ಬಿಡುವಿನ ವೇಳೆಯಲ್ಲಿ ಸಂಗೀತ, ಮೃದಂಗ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಪ್ರೀತಿಯ ಮಗನಿದ್ದಾನೆ. ನಮ್ಮ ಮನೆಯ ಸುತ್ತಲೂ ಬಾಲ್ಯವನ್ನು ಮೆಲಕು ಹಾಕಿಸುವ ಸುಂದರ ಕೈತೋಟವಿದೆ. ಅದೆಷ್ಟೋ ಹಕ್ಕಿಗಳು, ಚಿಟ್ಟೆಗಳು, ಅಳಿಲುಗಳು, ನಾಯಿ ಮತ್ತು ಬೆಕ್ಕುಗಳು ನಮ್ಮ ಸಂಸಾರದ ಸಂತೋಷದಲ್ಲಿ ಭಾಗಿಯಾಗಿವೆ.

ಬಾಲ್ಯದಲ್ಲಿ ನನ್ನ ತಾತನಿಂದ ಕಲಿತ ಶಿಸ್ತು, ಸಮಯ ಪ್ರಜ್ಞೆ, ಸರಳ ಜೀವನ ಇವುಗಳೇ ನನ್ನ 'ಸುಖೀ ಸಂಸಾರ'ದ ತಳಹದಿ. ತಾಯಿಯ ಸಹನೆ, ಅಣ್ಣಂದಿರ ಕರ್ತವ್ಯ ಪಾಲನೆ, ಅಕ್ಕಂದಿರ ಪ್ರೀತಿಯನ್ನು ಕಂಡು ಬೆಳೆದ ನನಗೆ 'ನಾನೇ ಪುಣ್ಯವಂತೆ' ಎನ್ನುವ ತೃಪ್ತಿ. ಪತಿ ಹಾಗೂ ಮಗನ ಪ್ರೋತ್ಸಾಹವೇ ನಾನು ಇಂದು ನನ್ನ ನೆನಪುಗಳನ್ನು ಹಂಚಿಕೊಳ್ಳಲು ಪ್ರೇರೇಪಣೆ.

ಜ್ಞಾನದ ನಿಧಿಯೇ ಅಗಿರುವ ನನ್ನ ಸಂಗೀತದ ಗುರುಗಳ ಬೋಧನಾ ಕ್ರಮವು, 'ಕ್ಷಣಕ್ಷಣವೂ ನನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು' ಎಂಬ ಛಲವನ್ನು ನನ್ನಲ್ಲಿ ಮೂಡಿಸಿದೆ. ಗೆಳತಿಯರು, ನನ್ನ ಕಿರಿಯ ಬಂಧುಗಳ ನಡುವೆ ಸ್ನೇಹದ ಸಂಕೋಲೆಯನ್ನು ಬೆಸೆದು ಪ್ರತಿದಿನವೂ ನನ್ನನ್ನು ಉತ್ಸಾಹಭರಿತಳನ್ನಾಗಿ ಮಾಡುತ್ತಿರುವ 'ವಾಟ್ಸ್-ಆಪ್'ಗೂ ನಾನು ಚಿರಋಣಿ.

ಕನ್ನಡ ನಾಡು, ನುಡಿಯ ಪ್ರೀತಿ, ಅಭಿಮಾನಗಳು ನಮ್ಮನ್ನು ಬಂಧಿಸಿ ಕನ್ನಡ ನಾಡಿನಲ್ಲಿಯೇ ಬೇರೂರುವಂತೆ ಮಾಡಿವೆ. ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಕನ್ನಡಿಗರನ್ನು ತಾಯಿ ಕನ್ನಡಾಂಬೆ ಎಂದೆಂದೂ ಕೈಹಿಡಿದು ಮುನ್ನಡೆಸುತ್ತಾಳೆ.

'ಜೈ ಕರ್ನಾಟಕ ಮಾತೆ'

ಲೇಖಕರ ಕಿರುಪರಿಚಯ
ಶ್ರೀಮತಿ ನಯನಾ ಕಾರಂತ್

ಮೂಲತಃ ಉಡುಪಿ ಜಿಲ್ಲೆಯವರಾದ ಇವರಿಗೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

Blog  |  Facebook  |  Twitter

ಗುರುವಾರ, ನವೆಂಬರ್ 27, 2014

ಮನೆಮದ್ದು

ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಕೊಳ್ಳಲು ವಿಧಾನಗಳನ್ನು ಹೇಳಲಾಗಿದೆ. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವಿಧಾನಗಳನ್ನು ಮನೆಮದ್ದು ಎಂದು ಕರೆಯಬಹುದು. ನಮಗೆ ಸುಲಭವಾಗಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಗಳೆಂದರೆ – ಅಮೃತಬಳ್ಳಿ, ತುಳಸಿ, ಒಂದೆಲಗ, ಲೋಳೆಸರ, ಕರಿಬೇವು, ದೊಡ್ಡಪತ್ರೆ, ಬಸಳೆ ಸೊಪ್ಪು, ಹೊನಗೊನೆ ಸೊಪ್ಪು ಮುಂತಾದವುಗಳು. ಕೆಲವು ಔಷಧಿ ಸಸ್ಯಗಳನ್ನು ಮನೆಮದ್ದಾಗಿ ಬಳಸಬಹುದಾದ ಸುಲಭ ವಿಧಾನಗಳು ಕೆಳಕಂಡಂತಿವೆ:

1. ಅಮೃತಬಳ್ಳಿ
ಹೆಸರೇ ಹೇಳುವ ಹಾಗೆ ಈ ಔಷಧಿ ಸಸ್ಯ ಅಮೃತಕ್ಕೆ ಸಮನಾದ ಗುಣಗಳನ್ನು ಹೊಂದಿದೆ. ಇದನ್ನು ರೋಗಿಗಳಲ್ಲದೆ ಆರೋಗ್ಯವಂತರೂ ಕೂಡ ಬಳಸಬಹುದು.

ಚಹರೆ: ಇದೊಂದು ಬಳ್ಳಿ, ಕಾಂಡ ಕತ್ತರಿಸಿದರೆ ಚಕ್ರಾಕಾರವಿರುತ್ತದೆ, ಹೃದಯಾಕಾರದ ಎಲೆಗಳು, ಬಳ್ಳಿಯಿಂದ ಅಲ್ಲಲ್ಲಿ ದಾರ ಜೋತಾಡುತ್ತಿರುತ್ತದೆ.
ಅಮೃತಬಳ್ಳಿ
ಉಪಯೋಗ
  • ಜ್ವರ: ಎಲ್ಲಾ ರೀತಿಯ ಜ್ವರಗಳಲ್ಲಿ ಈ ಔಷಧ ಪರಿಣಾಮಕಾರಿಯಾಗಿದೆ. 4 ಚಮಚ ಕಾಂಡದ ರಸವನ್ನು 1 ಚಮಚ ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಬಳಸಬೇಕು. ಅಲ್ಲದೇ, ಒಣಗಿದ ಕಾಂಡದ ಕಷಾಯ ತಯಾರಿಸಿ ಕೂಡ ಸೇವಿಸಬಹುದು. 1 ಭಾಗ ಕಾಂಡವನ್ನು 4 ಭಾಗ ನೀರಿನಲ್ಲಿ ಸಣ್ಣ ಉರಿಯ ಮೇಲೆ 1/4 ಭಾಗಕ್ಕೆ ಇಳಿಸಿ, ಶೋಧಿಸಿ, 30 ಮಿ. ಲೀ. ಜೇನಿನ ಜೊತೆ 3 ಬಾರಿ ಸೇವಿಸಬೇಕು.
  • ಚರ್ಮರೋಗ: ಎಲೆಗಳನ್ನು ಸ್ವಚ್ಛಮಾಡಿ, ಅರಿಶಿನದ ಜೊತೆ ಅರೆದು ಲೇಪಮಾಡಬೇಕು. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
  • ಸಕ್ಕರೆ ಕಾಯಿಲೆ: 1 ಇಂಚು ಬಲಿತ ಕಾಂಡವನ್ನು ಜಗಿದು ರಸವನ್ನು ದಿನಕ್ಕೆ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

2. ತುಳಸಿ
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ತುಳಸಿ
ಉಪಯೋಗ
  • ಕೆಮ್ಮು, ನೆಗಡಿ: 10 ಎಲೆಗಳನ್ನು ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು
  • ಚರ್ಮರೋಗ: ಎಲೆಗಳನ್ನು ಅರಿಶಿನದ ಜೊತೆಗೆ ಅರೆದು ಲೇಪಿಸಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
  • ಜಂತುಹುಳು: ತುಳಸಿ ಬೀಜ (1/2 ಚಮಚ) ವನ್ನು ಬೆಲ್ಲದೊಂದಿಗೆ ಊಟದ ನಂತರ ದಿನದಲ್ಲಿ 2 ಬಾರಿ ಸೇವಿಸಬೇಕು.
  • ನೀರು ಶುದ್ಧೀಕರಣ: 8 ರಿಂದ 10 ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ, ನೀರಿನಿಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.
  • ಸೊಳ್ಳೆಗಳ ನಿಯಂತ್ರಣ: ಮನೆಯ ಸುತ್ತ ಹೆಚ್ಚಾಗಿ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಶುದ್ಧ ಗಾಳಿ ಪಡೆಯಬಹುದು. ಒಣಗಿದ ಎಲೆಗಳನ್ನು (ಒಂದು ಹಿಡಿ) ಕೆಂಡದಲ್ಲಿ ಧೂಪ ಹಾಕಿದರೆ ಸೊಳ್ಳೆಗಳು ಇಲ್ಲವಾಗುತ್ತವೆ.

3. ಒಂದೆಲಗ
ಚಹರೆ: ಇದೊಂದು ನೆಲದ ಮೆಲೆ ಹರಡುವ ಬಳ್ಳಿಯಾಗಿದೆ, ಎಲೆಗಳು ಮೆದುಳಿನ ಆಕಾರದಲ್ಲಿರುತ್ತವೆ; ಹೆಚ್ಚು ನೀರಿರುವ ಜಾಗದಲ್ಲಿ ಬೆಳೆಯುತ್ತದೆ.
ಒಂದೆಲಗ
ಉಪಯೋಗ
  • ಜ್ಞಾಪಕಶಕ್ತಿ ವರ್ಧನೆ: ಪ್ರತಿನಿತ್ಯ ಬೆಳಿಗ್ಗೆ 4 ರಿಂದ 6 ಎಲೆಗಳನ್ನು ಜಗಿದು ನುಂಗಬೇಕು.
  • ರಕ್ತದೊತ್ತಡ: ಒಂದೆಲಗದ ಎಣ್ಣೆ ತಯಾರಿಸಿ ನೆತ್ತಿಗೆ ಹಚ್ಚಿಕೊಳ್ಳಬೇಕು.
  • ನಿದ್ರಾಹೀನತೆ: ಎಣ್ಣೆಯನ್ನು ಬೆಚ್ಚಗೆ ಮಾಡಿ ಮಲಗುವ ಮುನ್ನ ನೆತ್ತಿಗೆ ಹಾಗೂ ಪಾದಗಳಿಗೆ ಹಚ್ಚಿ ಮೃದುವಾಗಿ ಅಭ್ಯಂಗ ಮಾಡಿಕೊಳ್ಳಬೇಕು.
  • ತೊದಲು: ಒಂದೆಲಗ ಎಲೆಯ ರಸವನ್ನು (3 ಟೀ ಚಮಚ) 3 ಬಾರಿ ಊಟದ ನಂತರ ಜೇನಿನ ಜೊತೆ ಸೇವಿಸಬೇಕು.

4. ಲೋಳೆಸರ
ಚಹರೆ: ಇದೊಂದು ಸಣ್ಣ ಗಿಡ, ದಪ್ಪನೆಯ ಎಲೆಗಳು, ಎಲೆಗಳ ಅಂಚಿನುದ್ದಕ್ಕೂ ಮುಳ್ಳುಗಳಿರುತ್ತವೆ ಹಾಗೂ ಎಲೆ ಒಳಗಿನ ತಿರುಳು ಲೋಳೆಯಾಗಿರುತ್ತದೆ.
ಲೋಳೆಸರ
ಉಪಯೋಗ
  • ಕೂದಲ ಆರೈಕೆ: ಲೋಳೆಸರದ ರಸವನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಂತು, ಬೆಳವಣಿಗೆ ಹೆಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.
  • ಮುಖದ ಕಾಂತಿ: ಲೋಳೆಸರದ ರಸವನ್ನು ಮುಖಕ್ಕೆ ವಾರಕ್ಕೊಂದು ಬಾರಿ ಹಚ್ಚಿ 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
  • ಚರ್ಮರೋಗ: ಒಣ ಚರ್ಮ ಇದ್ದವರು ಲೋಳೆಸರದ ರಸವನ್ನು ಅರಿಶಿನದ ಜೊತೆ ಸೇರಿಸಿ ದಿನಕ್ಕೆರಡು ಬಾರಿ ಹಚ್ಚಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
  • ಸುಟ್ಟ ಗಾಯ: ಸುಟ್ಟಗಾಯಕ್ಕೆ ತಕ್ಷಣ ಲೋಳೆಸರವನ್ನು ಹಚ್ಚುವುದರಿಂದ ಉರಿ ಬೇಗ ಕಡಿಮೆಯಾಗುತ್ತದೆ.
  • ಕೈಕಾಲು ಉರಿ: ಮಧುಮೇಹ ರೋಗಿಗಳಲ್ಲಿ ಲೋಳೆಸರದ ರಸವನ್ನು ಪಾದಗಳಿಗೆ ಹಾಗೂ ಅಂಗೈಗೆ ಹಚ್ಚಿಕೊಂಡಲ್ಲಿ ಉರಿ ನಿವಾರಣೆಯಾಗುತ್ತದೆ. ಶೀತ ಉಂಟಾಗುವ ಸಂಭವವಿರುವುದರಿಂದ, ಇದನ್ನು ರಾತ್ರಿಯ ಬದಲು ಮಧ್ಯಾಹ್ನದ ವೇಳೆ ಹಚ್ಚುವುದು ಸೂಕ್ತ.

5. ಕರಿಬೇವು
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಕರಿಬೇವು
ಉಪಯೋಗ
  • ದೇಹದ ತೂಕ ಕುಗ್ಗಿಸಲು: 10 ರಿಂದ 15 ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು; ಮೂರು ತಿಂಗಳು ಸೇವಿಸುವುದರಿಂದ ದೇಹದ ಕೊಬ್ಬು ಕರಗಿ, ತೂಕ ಕಡಿಮೆಯಾಗುತ್ತದೆ.
  • ರಕ್ತಹೀನತೆ: ಅರ್ಧ ಚಮಚ ಕರಿಬೇವಿನ ಸೊಪ್ಪಿನ ಪುಡಿಯನ್ನು ಸಮಪ್ರಮಾಣ ಜೇನಿನ ಜೊತೆ ಸೇವಿಸಬೇಕು. ಕರಿಬೇವಿನಲ್ಲಿರುವ ಕಬ್ಬಿಣಾಂಶ ರಕ್ತಹೀನತೆ ನಿವಾರಿಸುತ್ತದೆ.
  • ಹುಳಿತೇಗು: ಅರ್ಧ ಚಮಚ ಕರಿಬೇವಿನ ಸೊಪ್ಪನ್ನು ಒಂದು ಲೋಟ ಮಜ್ಜಿಗೆಯ ಜೊತೆ ಊಟಕ್ಕೆ ಅರ್ಧ ಗಂಟೆ ಮುಂಚೆ ದಿನದಲ್ಲಿ 3 ಬಾರಿ, 7 ದಿನ ಸೇವಿಸಬೇಕು.
  • ಕೇಶಚ್ಯುತಿ: ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೀರಿನ ಜೊತೆ ಅರೆದುಕೊಳ್ಳಬೇಕು. 250 ಗ್ರಾಂ. ಕೊಬ್ಬರಿ / ಎಳ್ಳೆಣ್ಣೆ ಕಾಯಿಸಿ, ಅರೆದ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ನೀರಿನ ಅಂಶ ಹೋಗುವವರೆಗೆ ಕಾಯಿಸಿ, ತಣ್ಣಗಾದ ನಂತರ ಶೋಧಿಸಿ ಶೇಖರಿಸಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಹೊಟ್ಟು ನಿವಾರಣೆಯಾಗಿ, ಕೇಶ ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.

ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.

ಲೇಖಕರ ಕಿರುಪರಿಚಯ
ಡಾ. ಚಂದ್ರಕಲ ಸಿ.

ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಕರ್ನಾಟಕ ಸರ್ಕಾರದ ಆಯುಷ್‍ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಬುಧವಾರ, ನವೆಂಬರ್ 26, 2014

ಸಂದೀಪ್ ಉನ್ನಿಕೃಷ್ಣನ್

ನವೆಂಬರ್ 26, 2008. ಕೊಳಾಬ, ಮುಂಬೈ; 9 ಜನ ಪಾಕಿಸ್ತಾನದ ಭಯೋತ್ಪಾದಕರು ದೋಣಿಯಲ್ಲಿ ಬಂದಿಳಿಯುತ್ತಾರೆ. ಪಾಕಿಸ್ತಾನದ ಐ.ಎಸ್‌.ಐ. ಎಂಬ ಸರ್ಕಾರಿ ಸಂಸ್ಥೆಯಿಂದ ತರಬೇತಿ ಪಡೆದು, ಭಾರತೀಯರನ್ನು ಕೊಲ್ಲುವ ಉದ್ದೇಶದಿಂದ ಬಂದಿಳಿಯುತ್ತಾರೆ. ಮೊದಲು ಅವರ ಧಾಳಿ ಛತ್ರಪತಿ ಶಿವಾಜಿ ಟರ್ಮಿನಸ್ ಎಂಬ ರೈಲು ನಿಲ್ದಾಣದಲ್ಲಿ. ಅಲ್ಲಿ 58 ಜನರನ್ನು ಕೊಂದು 104 ಜನರನ್ನು ಗಾಯಗೊಳಿಸಿ ಮುಂದೆ ಹೊರಟರು. ಆಮೇಲೆ ನಾರಿಮನ್ ಹೌಸ್, ಲಿಯೋಪೋಲ್ಡ್ ಕೆಫೆ, ಒಬೆರಾಯ್ ಹೋಟೆಲ್ ಮತ್ತು ತಾಜ್ ಮಹಲ್ ಹೋಟೆಲ್ ಗಳಲ್ಲಿ ಇದ್ದ ಜನರ ಮೇಲೆ ದಾಳಿ ಮಾಡಿ, ಅಲ್ಲಿದ್ದವರನ್ನು ತಮ್ಮ ವಶದಲ್ಲಿಟ್ಟುಕೊಂಡರು. ಈ ಜಾಗಗಳಲ್ಲಿ ಭಾರತದ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಆ ಪಾಕಿಸ್ತಾನೀ ಭಯೋತ್ಪಾದಕರ ನಡುವೆ 4 ದಿನಗಳವರೆಗೆ ನಿರಂತರ ಹಾಗೂ ಭಯಂಕರ ಹೋರಾಟ ನಡೆಯಿತು. ತಾಜ್ ಮಹಲ್ ಹೋಟೆಲ್ ನಲ್ಲಿ ಹೋರಾಟ ಮಾಡಿದ ತಂಡದ ಹೆಸರು 51 ಎಸ್‌.ಎ.ಜಿ. ಅದರ ಮುಖಂಡ, ಕರ್ನಾಟಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್.


ಸಂದೀಪ್ ಉನ್ನಿಕೃಷ್ಣನ್ 1995 ನಲ್ಲಿ ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿ ಸೇರುತ್ತಾರೆ. ಆಗ ಅವರಿಗೆ ಕೇವಲ 18 ವರ್ಷಗಳು. ಆಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದ ವಯಸ್ಸು. ವಯಸ್ಸಿಗೆ ತಕ್ಕ ಹುಮ್ಮಸ್ಸು. ಅವರೊಳಗಿನ ಸುದೃಢ ಹಾಗೂ ನಿರ್ದಯ ಸೈನಿಕನನ್ನು ಅವರ ನಗುಮುಖದಲ್ಲಿ ಸಂಪುಟೀಕರಿಸುವ ಸ್ಥಿರಧೃತಿ ಅವರ ಮೇಲಧಿಕಾರಿಗಳು ಗುರುತಿಸಿದ ಒಂದು ಗುಣ. ತಮ್ಮ 22 ನೇ ವಯಸ್ಸಿನಲ್ಲಿ ಬಿಹಾರ್ ರೆಜಿಮೆಂಟ್ ನ 7 ನೇ ಬೆಟಾಲಿಯನ್‌ ಗೆ ಅವರು ಲಿಯೂಟೆನಂಟ್ ಆಗಿ ನೇಮಕಗೊಳ್ಳುತ್ತಾರೆ. ಡಿಸೆಂಬರ್ 31 1999, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನಗಳಲ್ಲಿ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಅವರು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಪಡೆಗೆ ಆಯ್ಕೆಯಾಗುತ್ತಾರೆ.  ಎನ್‌.ಎಸ್‌.ಜಿ. ಯ ತರಬೇತಿ ಪಡೆದ ನಂತರ ಸ್ಪೆಷಲ್ ಆಕ್ಷನ್ ಗ್ರೂಪ್‌ ನ ಕಾರ್ಯಾಚರಣೆಯಲ್ಲಿ ತೊಡಗುತ್ತಾರೆ. ಬೆಳಗಾವಿಯ ಕಮಾಂಡೋ ವಿಂಗ್‌ ನಲ್ಲಿ ಅತ್ಯಂತ ಕ್ಲಿಷ್ಟವಾದ 'ಘಾತಕ್' ಎಂಬ ತರಬೇತಿಯಲ್ಲಿ ಮೊದಲಿಗರಾಗುತ್ತಾರೆ. ಆ ಕಾರಣದಿಂದ ಅವರನ್ನು ಅಲ್ಲಿ ಬೋಧಕರಾಗಿ ಪರಿಗಣಿಸಲಾಗುತ್ತದೆ. ಇಷ್ಟೆಲ್ಲಾ ಸಾಧಿಸಿದ ಅವರನ್ನು ಎನ್‌.ಎಸ್‌.ಜಿ. ಯ ಕಮಾಂಡೋ ಮಾಡಲು ಮೇಲಧಿಕಾರಿಗಳು ನಿರ್ಧರಿಸುತ್ತಾರೆ. 2006 ರಲ್ಲಿ ಎನ್‌.ಎಸ್‌.ಜಿ. ಯ ಕಮಾಂಡೋ ಆಗಿ ನೇಮಕಗೊಳ್ಳುತ್ತಾರೆ ನಮ್ಮ ಸಂದೀಪ್ ಉನ್ನಿಕೃಷ್ಣನ್.

ಇಷ್ಟು ಸಾಧನೆಗಳ ಹಿನ್ನೆಲೆ ಇದ್ದ ಸಂದೀಪ್ ಉನ್ನಿಕೃಷ್ಣನ್ ಅವರು 2008ರ ನವೆಂಬರ್ 27 ರಂದು 100 ವರ್ಷಗಳಷ್ಟು ಹಳೆಯ ತಾಜ್ ಮಹಲ್ ಹೋಟೆಲ್‌ ನ ಮೇಲ್ಮಹಡಿಯಲ್ಲಿ ಹೆಲಿಕ್ಯಾಪ್ಟರ್‌ ನಿಂದ ಇಳಿದು ನಿಂತಿದ್ದಾರೆ. ಹೋಟೆಲ್‌ ನ ಒಳಗಡೆ ಹಳೆಯ ವೈರಿ ಪಾಕಿಸ್ತಾನದ ಭಯೋತ್ಪಾದಕರು. ಹಿಂದೆ ಕಾರ್ಗಿಲ್ ಕಾಳಗದ ಸಮಯದಲ್ಲಿ, ಪಾಕಿಸ್ತಾನದ ನಿರಂತರ ಧಾಳಿಯ ನಡುವೆ ತಮ್ಮೊಂದಿಗಿದ್ದ 6 ಸೈನಿಕರನ್ನು ಪಾಕಿಸ್ತಾನದ ಪಡೆಯಿಂದ ಕೇವಲ 200 ಮೀಟರ್ ದೂರದ ತನಕ ನುಗ್ಗಿಸಿ ವೈರಿಗಳನ್ನು ಗೆದ್ದಿರುತ್ತಾರೆ. ಅಷ್ಟು ಹತ್ತಿರ ಬರುತ್ತಿರುವುದನ್ನು ನೋಡಿಯೂ ಏನೂ ಮಾಡಲಿಕ್ಕಾಗದೇ ಪಾಕಿಸ್ತಾನದವರು ಕಂಗಾಲಾಗಿ ಕಕ್ಕಾಬಿಕ್ಕಿಯಾಗಿ ಇವರ ರಣನೀತಿಯನ್ನು ತಿಳಿಯಲು ವಿಫಲರಾಗಿ ಸೋತು ಸತ್ತ ನೆನೆಪು ಬಂದಿತ್ತೇನೋ.. ಅದೇ ರೀತಿಯಲ್ಲಿ ಇಲ್ಲಿ ಮತ್ತೆ ಧಾಳಿ. 6 ಮಹಡಿ ಕೆಳಗಿಳಿಯುತ್ತಾರೆ. ತಮ್ಮೊಂದಿಗಿದ್ದ 10 ಕಮಾಂಡೋಗಳನ್ನೂ ಇಳಿಸುತ್ತಾರೆ. 3ನೇ ಮಹಡಿಯಲ್ಲಿ ಭಯೋತ್ಪಾಕರು ಇರುವ ಗುಮಾನಿ. ಭಯೋತ್ಪಾದಕರು 3ನೇ ಮಹಡಿಯ ಒಂದು ಕೋಣೆಯಲ್ಲಿ ಕೆಲವು ಹೆಂಗಸರನ್ನು ಒತ್ತೆಯಾಳಾಗಿಟ್ಟುಕೊಂಡು ಒಳಗಿಂದ ಬಾಗಿಲ ಚಿಲಕ ಹಾಕಿಕೊಂಡಿರುತ್ತಾರೆ. ಸಂದೀಪ್ ಅವರ ನೇತೃತ್ವದಲ್ಲಿ ಆ ಬಾಗಿಲನ್ನು ಮುರಿದು ಕಮಾಂಡೋಗಳು ಒಳನುಗ್ಗುತ್ತಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಕಮಾಂಡೋ ಸುನಿಲ್ ಯಾದವ್ ಅವರನ್ನು ಹಾಗೂ ಅಲ್ಲಿ ಬಂಧಿಯಾಗಿದ್ದವರನ್ನು ಹೊರಗೆ ಹೋಗುವಂತೆ ಮಾಡುತ್ತಾರೆ. ತಮ್ಮೊಡನೆ ಇದ್ದ ಕಮಾಂಡೋಗಳಿಗೆ ಒತ್ತೆಯಾಳುಗಳನ್ನೂ ಹಾಗೂ ಸುನಿಲ್ ಯಾದವ್ ಅವರನ್ನು ಬಿಡುಗಡೆ ಮಾಡುವ ಆಜ್ಞೆ ಕೊಡುತ್ತಾರೆ. ಅಷ್ಟರಲ್ಲಿ ಭಯೋತ್ಪಾದಕರು ಮುಂದಿನ ಮಹಡಿಗೆ ತಪ್ಪಿಸಿಕೊಳ್ಳುವುದನ್ನು ಗಮನಿಸುತ್ತಾರೆ. ಭಯೋತ್ಪಾದಕರ ಧಾಳಿಯಿಂದ ತಮ್ಮವರನ್ನು ರಕ್ಷಿಸಲು ಸಂದೀಪ್ ತಾವೊಬ್ಬರೇ ಭಯೋತ್ಪಾದಕರನ್ನು ಹಿಂಬಾಲಿಸಿಕೊಂಡು ಅವರ ಹಿಂದೆ ಹೋಗುತ್ತಾರೆ. ಹೀಗೆ ಮಾಡುವಾಗ ಅವರು ತಮ್ಮ ವಯ್ಯಕ್ತಿಕ ಸುರಕ್ಷತೆ ಮರೆತುಬಿಡುತ್ತಾರೆ. ನಿರಂತರವಾಗಿ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ಮಾಡುತ್ತಲೇ ಇರುತ್ತಾರೆ. 3ನೇ ಮಹಡಿಯಿಂದ 4ನೇ ಮಹಡಿಯತ್ತ  ಹೋಗಿದ್ದ ಅವರನ್ನು 5ನೇ ಮಹಡಿಯ ತನಕ ಓಡಿಸುತ್ತಾರೆ. ಭಯಾನಕವಾದ ಗುಂಡಿನ ಸುರಿಮಳೆಯೇ ನಡೆಯುತ್ತದೆ. ಅಷ್ಟರಲ್ಲಿ ಒಬ್ಬ ಹೇಡಿ ಭಯೋತ್ಪಾದಕ, ಹಿಂದಿನಿಂದ ಸಂದೀಪ್ ಅವರ ಬೆನ್ನಿನ ಮೇಲೆ ಗುಂಡು ಹಾರಿಸುತ್ತಾನೆ. ತೀವ್ರವಾಗಿ ಗಾಯಗೊಂಡ ಸಂದೀಪ್, ಹಿಂತಿರುಗಿ ಅವನನ್ನು ಕೊಂದು ತಾವೂ ಅಸುನೀಗುತ್ತಾರೆ. ಆಗ ಅವರ ವಯಸ್ಸು ಕೇವಲ 31.

ನಮ್ಮ ನಾಡಿನ ಈ ವೀರಯೋಧನಿಗೆ ಭಾರತ ಸರ್ಕಾರ ಅಶೋಕ ಚಕ್ರ ಪ್ರಶಸ್ತಿ ಕೊಟ್ಟಿರುತ್ತದೆ. ಸಾವಿರಾರು ಜನರ ಮಧ್ಯೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ಸಂದೀಪ್ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತದೆ. ಸಂದೀಪ್ ಅವರನ್ನು ಭಾರತ ಭೂಮಿಯ ಸೇವೆಗೆಂದೇ ಹೆತ್ತ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮೀ ದಂಪತಿಗಳೇ ಧನ್ಯರು. ಅಂತಹ ವೀರ ಯೋಧನನ್ನು ನಾಡಿಗೆ ಕೊಟ್ಟ ಕೀರ್ತಿ ಕರುನಾಡಿನದ್ದು.  ಅವರನ್ನು ನೆನಪಿಸಿಕೊಳ್ಳುವ ಹೊಣೆ ನಮ್ಮದು. ಇಂಥವರ ಕೀರ್ತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಹೇಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಲೇಖಕರ ಕಿರುಪರಿಚಯ
ಶ್ರೀ ಸಿ. ಎನ್‍. ವಿಜಯ್‍

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ. ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 25, 2014

ನನಗದು ಕೋಟಿ ರುಪಾಯಿ....

ಅದೊಂದು ಸಂಜೆ, ಸುಮಾರು 6.30ರ ಸಮಯ. ಆ ದಿನದ ಬಿಡುವಿಲ್ಲದ ಕೆಲಸಗಳನ್ನು ಮುಗಿಸಿ, ಮನೆಗೆ ಹಿಂತಿರುಗಿದ್ದು, ಹೊರ ಗೇಟಿನ ಬಳಿ ನಿಂತು, ಬೀದಿಯಲ್ಲಿ ಮಕ್ಕಳಾಡುವುದನ್ನು ನೋಡುತಿದ್ದೆನು. ರಸ್ತೆಯ ಆ ಬದಿಯಿಂದ ಒಂದು ಸರ್ಕಾರಿ ಕಾರು ಬಂದಿತು. ಚಾಲಕ ಯಾರದೋ ವಿಳಾಸ ಕೇಳುತ್ತಿದ್ದನು. ಆ ಕಾರು ನಮ್ಮ ಮನೆಯ ಕಡೆಗೆ ಬರುತ್ತಿತ್ತು. ಹತ್ತಿರ ಬಂದಾಗ ಅದರ ಮೇಲಿದ್ದ ಬಾವುಟ ಫಲಕಗಳನ್ನು ನೋಡಿದಾಗ ಆ ಕಾರು ಯಾವುದೋ ಮಂತ್ರಿಗಳ ವಾಹನವೆಂಬುದು ಖಚಿತವಾಯಿತು. ನೋಡುತ್ತಿದ್ದಂತೆ ಆ ಕಾರು ನನ್ನ ಮನೆಯ ಮುಂದೆ ಬಂದು ನಿಂತಿತು.
'ಇದು ವೆಟರಿನರಿ ಡಾಕ್ಟರ್ ಮನೇನಾ?' ಚಾಲಕ ಪ್ರಶ್ನಿಸಿದ.
'ಹೌದೆಂದು' ನಾನು ತಲೆ ಆಡಿಸಿದೆ.
ಕಾರನ್ನು ಪಕ್ಕಕ್ಕೆ ನಿಲ್ಲಿಸಿದ. ಕಾರಿನ ಒಳಗಿನಿಂದ ಸುಮಾರು 25 ವರ್ಷ ಪ್ರಾಯದ ಓರ್ವ ಯುವಕ ಇಳಿದು ಬಂದ. ಅವನ ಕೈಯಲ್ಲಿ ಮುಚ್ಚಳ ಮುಚ್ಚಿದ್ದ ಬಿದಿರಿನ ಒಂದು ಬುಟ್ಟಿ ಇತ್ತು.
'ವೆಟರಿನರಿ ಡಾಕ್ಟರ್ ಶಿವಕುಮಾರ್ ಇದ್ದಾರ?' ಪ್ರಶ್ನಿಸಿದ. ನಾನು ಧರಿಸಿದ್ದ ಅಂಗಿ ಮತ್ತು ಪಂಚೆ ನೋಡಿ ಆತನಿಗೆ ಸಂಶಯ ಬಂದಿತ್ತೇನೋ.
'ನಾನೇ ವೆಟರಿನರಿ ಡಾಕ್ಟರ್ ಶಿವಕುಮಾರ್, ಏನಾಗಬೇಕು?' ಎಂದೆನು.
'ಅಣ್ಣ, ಇದು ಮಿನಿಸ್ಟರ್ ............... ರವರ ನಾಯಿ, ನಿನ್ನೆಯಿಂದ ಏನೂ ತಿನ್ನುತ್ತಿಲ್ಲ, ಸುಮ್ಮನೆ ಮಲಗಿದೆ, ಆಟವಾಡುತ್ತಿಲ್ಲ, ಸ್ವಲ್ಪ ನೋಡಣ್ಣ. ಯಾವುದಾದರು ಇಂಜೆಕ್ಷನ್ ಕೊಡಣ್ಣ' ಎಂದು ಗ್ರಾಮೀಣ ಶೈಲಿಯಲ್ಲಿ ಬಡಬಡಿಸಿದ.
ಒಳ ಬರಮಾಡಿಕೊಂಡು ಅವನಿಗೆ ನಾಯಿಯನ್ನು ಹೊರತೆಗೆಯಲು ಹೇಳಿದೆನು.
ಬುಟ್ಟಿಯ ಮುಚ್ಚಳ ತೆಗೆದರೆ ಬುಟ್ಟಿಯ ತಳಭಾಗದಲ್ಲಿ ಬಟ್ಟೆಯನ್ನು ಹಾಸಲಾಗಿದ್ದು ಅದರ ಮೇಲೆ ಸುಮಾರು 2 ತಿಂಗಳ ಪ್ರಾಯದ ಲ್ಹಾಸ ಅಪ್ಸೋ ನಾಯಿ ಮರಿಯೊಂದು ಮಲಗಿತ್ತು. ಅದನ್ನು ಅ ಯುವಕ ಹೊರತೆಗೆದು ಗೋಣಿ ಚೀಲದ ಮೇಲೆ ಮಲಗಿಸಿದನು. ಮುಖವೇ ಕಾಣದಷ್ಟು ಮೈತುಂಬ ನೀಳ ಕೂದಲು, ಮಾಸಲು ಕಂದು ಮತ್ತು ಬಿಳಿ ಬಣ್ಣ, ಯಾರೇ ನೋಡಿದರೂ ಇಷ್ಟಪಡುವಂತಹ ಬಹಳ ಮುದ್ದಾದ ಮರಿ ಅದಾಗಿತ್ತು

ನಾಯಿ ಮರಿಯನ್ನು ಪರಿಶೀಲಿಸಿದೆನು. ದೇಹದ ಉಷ್ಣತೆ ಕಡಿಮೆಯಾಗಿತ್ತು, ನಾಡಿ ಬಡಿತ ಕ್ಷೀಣಿಸಿತ್ತು, ಬಾಯಿ ಒಣಗಿತ್ತು, ಕಣ್ಣುಗಳು ತೇಲಿಸಿಬಿಟ್ಟಿದ್ದವು, ಕೈಕಾಲುಗಳು ತಣ್ಣಗಾಗಿದ್ದವು.
'ಏನಣ್ಣ, ಏನಾಗಿದೆ? ನಾಯಿ ಗುಣವಾಗುತ್ತಾ?' ಮತ್ತೆ ಪ್ರಶ್ನಿಸಿದ.
'ನಾಯಿ ಮರಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ನೀನು ಬಹಳ ತಡವಾಗಿ ಬಂದಿದ್ದಿಯಾ, ಏನೇ ಇರಲಿ ನನ್ನ ಪ್ರಯತ್ನ ಮಾಡುತ್ತೀನಿ, ಕೆಲವು ಔಷಧಗಳು ಬರೆದು ಕೊಡುತ್ತೇನೆ, ಬೇಗ ಹೋಗಿ ತೆಗೆದುಕೊಂಡು ಬಾ' ಎಂದವನೇ ಔಷಧಗಳ ಪಟ್ಟಿಯೊಂದನ್ನು ಅವನಿಗೆ ನೀಡಿದೆನು.
'ಅಣೌ, ನಿನ್ನ ಹತ್ತಿರ ಔಷಧ ಇದ್ದರೆ ಹಾಕಣ್ಣ, ನಾನು ಕಾಸು ಕೊಡ್ತೀನಿ' ಎಂದ ಆ ಯುವಕ.
'ನನ್ನ ಹತ್ತಿರ ಇಲ್ಲದ್ದಕ್ಕೆ ಬರೆದು ಕೊಟ್ಟಿದ್ದೇನೆ, ಮೆಡಿಕಲ್ ಸ್ಟೋರ್‌ ನಲ್ಲಿ ತೆಗೆದುಕೊಂಡು ಬಾ' ಎಂದೆನು.
ಕಾರಿನಲ್ಲಿ ತೆರಳಿದ ಆ ಯುವಕ 30 ನಿಮಿಷಗಳ ಬಳಿಕ ಹಿಂತಿರುಗಿ ಬಂದನು. ಅತ ಬರುವವರೆಗೆ ನನ್ನ ಕುಟುಂಬದ ಎಲ್ಲರೂ ಆ ನಾಯಿ ಮರಿಯನ್ನೇ ನೋಡುತ್ತಿದ್ದರು. ಉಸಿರಾಟ ಬಿಟ್ಟು ಯಾವುದೇ ಚಟುವಟಿಕೆ ಇಲ್ಲ, ಕಣ್ಣು ತೆರೆದಿಲ್ಲ. ಎಲ್ಲರ ಮನಸ್ಸಿನಲ್ಲಿ ಕಳವಳ, 'ದೇವರೇ ಹೇಗಾದರೂ ಮುದ್ದಾದ ಈ ಮರಿಯನ್ನು ಬದುಕಿಸು' ಎಂಬ ಮೂಕ ಪ್ರಾರ್ಥನೆ ನಡೆದಿತ್ತು.
ಆ ಯುವಕ ಬಂದೊಡನೆ ಎಲ್ಲರಲ್ಲೂ ಅವಸರ. ಅವನ ಕೈಯಲ್ಲಿದ್ದ ಔಷಧದ ಕವರ್ ಪಡೆದು ಇಂಜೆಕ್ಷನ್ ಕೊಡಲು ಸಜ್ಜಾದೆನು. ನನ್ನ ಪತ್ನಿ ನಾಯಿ ಮರಿಯ ಕಾಲನ್ನು ಹಿಡಿದಳು, ಮಗ ತಲೆಯನ್ನು ಗಟ್ಟಿ ಹಿಡಿದನು, ತಂದೆಯವರು ಗ್ಲೂಕೋಸ್ ಬಾಟಲ್ ಹಿಡಿದರು. ಸುಮಾರು 45 ನಿಮಿಷಗಳ ಕಾಲ ಔಷಧಗಳು ನಿಧಾನವಾಗಿ ರಕ್ತಕ್ಕೆ ಹನಿ ಹನಿಯಾಗಿ ಸೇರಿದವು. ಸಮಯ ರಾತ್ರಿ 8.30, ಚಿಕಿತ್ಸೆ ಮುಗಿದಿತ್ತು.
'ನಾಯಿ ಮರಿಯನ್ನು ಬೆಚ್ಚಗೆ ಮಲಗಿಸಬೇಕು. ಪ್ರತಿ 2 ಘಂಟೆಗಳಿಗೊಮ್ಮೆ ಗಂಜಿ ಕುಡಿಸಬೇಕು, ಔಷಧಗಳನ್ನು ಜೇನು ತುಪ್ಪದಲ್ಲಿ ಬೆರಸಿ ದಿನಕ್ಕೆ ಮೂರು ಬಾರಿ ಕೊಡಬೇಕು. ಮರಿ ಗುಣಮುಖವಾದರೆ ನಾಳೆ ಸಂಜೆ 6 ಕ್ಕೆ ಮತ್ತೆ ಕರೆದುಕೊಂಡು ಬಾ' ಎಂಬ ಸೂಚನೆಗಳನ್ನು ಹೇಳಿದೆನು.
'ಅಯ್ತಣ್ಣ, ನಾಳೆ ಬರುತ್ತೀನಿ, ಬಂದಾಗ ಫೀಜು ಕೊಡುತ್ತೀನಿ' ಎಂದವನು ನಾಯಿ ಮರಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ಕಾರಿನಲ್ಲಿ ತೆರಳಿದ.
ನಾವೆಲ್ಲರೂ ಉಟಕ್ಕೆ ಕುಳಿತೆವು. ಮತ್ತೆ ನಾಯಿ ಮರಿಯದೇ ಚರ್ಚೆ. 'ಅಪ್ಪಾ, ಛೆ ಪಾಪ, ಆ ನಾಯಿ ಮರಿಗೆ ಏಕೆ ಹೀಗಾಗಿದೆ? ಸರಿಯಾಗಿ ನೋಡಿಕೊಂಡಿಲ್ಲವಾ?' ಎಂದು ನನ್ನ ಮಗ ಕೇಳಿದರೆ, 'ರೀ, ಆ ಮರಿ ಬದುಕಿ ಉಳಿಯುತ್ತದಲ್ಲವೇ?' ನನ್ನ ಪತ್ನಿಯ ಪ್ರಶ್ನೆ. 'ದೇವರಿಗೆ 100 ರೂಪಾಯಿ ಮೀಸಲು ಕಟ್ಟಿಡುತ್ತೇನೆ, ನಾಯಿ ಗುಣವಾದರೆ ಮಂಜುನಾಥನಿಗೆ ಕಾಣಿಕೆ ಅರ್ಪಿಸುತ್ತೇನೆ' ಎಂದು ನನ್ನ ತಾಯಿಯ ಕೋರಿಕೆ. ಏನೋ ಒಟ್ಟಿನಲ್ಲಿ ಮನಸ್ಸಿನಲ್ಲಿ ತಳಮಳ, ಊಟ ಸೇರಲಿಲ್ಲ. ಹಾಗೆಯೇ ಮಲಗಿದೆನು. ನಿದ್ರೆ ಬರಲಿಲ್ಲ. ಬೆಳಿಗ್ಗೆ ಕರೆಘಂಟೆ ಬಾರಿಸಿತು. ಎದ್ದೆನು. ಮಗ ಬಂದು 'ಅಪ್ಪಾ ನಾಯಿ ಮರಿ ಇವತ್ತು ಬರುತ್ತಾ, ಚೆನ್ನಾಗಿ ಆಗಿರುತ್ತಲ್ಲವೇ?' ಪ್ರಶ್ನಿಸಿದ.
ನಾನು ಎಂದಿನಂತೆ ಬೆಳಿಗ್ಗೆ 8 ಕ್ಕೆ ಆಸ್ಪತ್ರೆಗೆ ತೆರಳಿದೆನು. ದಿನದ ಕೆಲಸಗಳನ್ನು ಮುಗಿಸಿ ಸಂಜೆ 5.30 ಕ್ಕೆ ಹಿಂತಿರುಗಿದೆನು. ಮಗ ಆ ಸಂಜೆ ಆಟಕ್ಕೆ ರಜೆ ಮಾಡಿದ್ದ. ನಾನು ಮನೆಗೆ ಬಂದೊಡನೆ 'ಆ ನಾಯಿಯವರು ಫೋನ್ ಏನಾದರೂ ಮಾಡಿದ್ದಾರ?' ನನ್ನ ತಂದೆಯವರ ಪ್ರಶ್ನೆ. ಮುಖ ತೊಳೆದು, ಕಾಫಿ ಕುಡಿದು ನಾಯಿ ಮರಿಯ ನಿರೀಕ್ಷಯಲ್ಲಿದ್ದೆ. ಸಂಜೆ 6, 6.30, 6.45 ದಾಟಿತು. ಮಗ ಗೇಟಿನ ಬಳಿ ನಿಂತು ಆ ರಸ್ತೆಗೆ ಬರುವ ಕಾರುಗಳನ್ನು ನೋಡುತ್ತಿದ್ದ. ಕತ್ತಲಾಗಿತ್ತು. ನಾಯಿ ಮರಿ ಬರಲಿಲ್ಲ.
ಬಹುಶಃ ನಾಯಿ ಮರಿ ಸತ್ತುಹೊಗಿರಬೇಕೆಂಬ ಸಂಶಯ ಎಲ್ಲರ ಮನಸ್ಸಿನಲ್ಲಿ ಪಸರಿಸಿತ್ತು. ಆದರೆ ಇದನ್ನು ಹೇಳುವ ಧೈರ್ಯ ಯಾರಲ್ಲೂ ಇರಲಿಲ್ಲ. ಸಮಯ ಸಂಜೆ 7 ಆಯಿತು. 'ಬಾರೋ, ಬಂದು ಹೋಂ ವರ್ಕ್ ಮುಗಿಸಿ ಓದಿಕೋ' ನನ್ನ ಪತ್ನಿ ಮಗನನ್ನು ಕರೆದಳು. ನಾನಾದರೋ ದಿನಪತ್ರಿಕೆಯನ್ನು ಕೈಯಲ್ಲಿ ಓದುವಂತೆ ಹಿಡಿದಿದ್ದೆನು. ಆದರೆ ಮನಸ್ಸು ಬೇರೆಲ್ಲೋ ಹೋಗಿತ್ತು. ರಾತ್ರಿ 8 ಆಗಿತ್ತು. ನನ್ನ ಊಹೆ ಸರಿಯಂಬಂತೆ ಭಾಸವಾಗತೊಡಗಿತ್ತು.
'ಎಂಟೂವರೆ ಆಯಿತು ಉಟಕ್ಕೆ ಏಳಿ' ನನ್ನ ತಾಯಿ ಕೂಗಿದರು. ನನ್ನ ಪತ್ನಿ ಎಲ್ಲರಿಗೂ ತಟ್ಟೆ ಇಟ್ಟು ನೀರು ಇಟ್ಟು ತಯಾರಿ ಮಾಡಿದಳು. ಎಲ್ಲರಲ್ಲೂ ಒಂದು ರೀತಿಯ ಭೀತಿ, ಮೌನ. ಉಟಕ್ಕೆ ಕುಳಿತೆವು, ಮನೆಯ ಮುಂದೆ ಕಾರೊಂದು ಬಂದು ನಿಂತಿತು.
ನನ್ನ ಮಗ ಓಡಿ ಹೋಗಿ ಬಾಗಿಲು ತೆರೆದವನೇ ಒಂದೇ ಕ್ಷಣದಲ್ಲಿ ಮತ್ತೆ ಓಡಿ ಬಂದ.
'ಅಪ್ಪಾ, ನಾಯಿ ಮರಿ ಬಂತು. ಆದರೆ ಅದು ಬುಟ್ಟಿಯಲ್ಲಿಯೇ ಇದೆ. ಇನ್ನು ಗುಣವಾಗಿಲ್ಲ, ಪಾಪ' ಎಂದ.
ನಾನು ಎದ್ದವನೇ ಹೊರಗೆ ಹೋದೆ. 'ಏನಪ್ಪಾ ಹೇಗಿದೆ ನಿಮ್ಮ ನಾಯಿ?' ಗುಣವಾಗಿಲ್ಲವೆಂಬ ಖಾತರಿ ಇದ್ದರೂ ಕೇಳಬೇಕಾದ ಪ್ರಶ್ನೆ ಕೇಳಿದೆ. 'ದೇವರೇ, ಈ ನಾಯಿ ಮರಿಗೆ ಏಕಿಷ್ಟು ಶೋಧನೆ. ನಿನ್ನೆಯೇ ಸಾಯಬಾರದಿತ್ತೇಕೆ?' ಎಂದು ನನ್ನ ಮನಸ್ಸು ಹೇಳುತ್ತಿತ್ತು.
'ನೀನೆ ನೋಡಣ್ಣ, ಹೇಗಿದೆ ಅಂತ' ಎಂದ ಆ ಯುವಕ ಬುಟ್ಟಿಯನ್ನು ಕೆಳಗಿಟ್ಟು ಅದರ ಮುಚ್ಚಳ ತೆಗೆದ.
ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಂತೆ ಆ ಮುದ್ದಾದ ಜೀವ ಚಂಗನೆ ಬುಟ್ಟಿಯಿಂದ ಹೊರ ನೆಗೆದು ತನ್ನ ಪುಟ್ಟ ನಡಿಗೆಯಲ್ಲಿ ಮನೆಯಲ್ಲೆಲ್ಲ ಓಡಾಡಿ, ನನ್ನ ಮಗನ ಬಳಿಗೆ ಬಂದಿತು.
ನಮ್ಮೆಲ್ಲರಿಗೂ ಅದ ಸಂತೋಷಕ್ಕೆ ಎಲ್ಲೆ ಇರಲಿಲ್ಲ. ಯಾರು ಏನು ಮಾಡುತ್ತಿದ್ದಾರೆ, ಏನಾಗುತ್ತಿದೆ ಎಂದು ತಿಳಿಯಲು ಕೆಲ ನಿಮಿಷಗಳೇ ಬೇಕಾಯಿತು. ನಾಯಿ ಮರಿಯನ್ನು ಎತ್ತಿಕೊಂಡು ಮತ್ತೆ ಪರಿಶೀಲಿಸಿದೆನು. ಕೆಲ ಇಂಜೆಕ್ಷನ್‌ಗಳನ್ನೂ ನೀಡಿ, ಮನೆಯಲ್ಲಿ ಮುಂದುವರೆಸಬೇಕಾದ ಚಿಕಿತ್ಸೆಯ ಬಗ್ಗೆ ಸಲಹೆಗಳನ್ನು ನೀಡಿದೆನು.
'ಅಣ್ಣೌ, ಈ 50 ತೊಗೋ, 20 ಮಡಿಕೊಂಡು ಚಿಲ್ಲರೆ ಕೊಡಣ್ಣ' ಎಂದ ಆ ಯುವಕ.
'ಬೇಡ ಹೋಗಪ್ಪಾ' ಎಂದು ಅವನನ್ನು ಕಳುಹಿಸಿದೆನು.
'ಬೇಗ ಬನ್ನಿ, ಉಟಕ್ಕೆ ಲೇಟ್ ಆಯಿತು' ಅಮ್ಮ ಕರೆದಿದ್ದರು. ಆದರೆ ಆ ನಾಯಿ ಮರಿ ಕೆಲ ಕ್ಷಣಗಳಲ್ಲಿ ನೀಡಿದ್ದ ಮುದದೌತಣದಿಂದ ಎಲ್ಲರಿಗೂ ಹೊಟ್ಟೆ ತುಂಬಿತ್ತು.
ಈ ಪ್ರಸಂಗದ ಪ್ರತಿ ಕ್ಷಣ ಸವಿದ ನನಗಂತೂ ನಾಯಿ ನೀಡಿದ್ದು .................. ಕೋಟಿ ರೂಪಾಯಿ.

ಲೇಖಕರ ಕಿರುಪರಿಚಯ
ಡಾ. ಶಿವಕುಮಾರ್

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ಮೈಸೂರಿನವರು. ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಸೋಮವಾರ, ನವೆಂಬರ್ 24, 2014

ಚಂಪಕಧಾಮ

'ಯಾಕೋ ಕೆಲಸಕ್ಕೆ ಹೋಗಲಿಕ್ಕೆ ಬೇಜಾರು... ಬಾ, ಬನ್ನೇರುಘಟ್ಟಕ್ಕೆ ಹೋಗಿ ಬರೋಣ...'

'ಹಾ... ಬನ್ನೇರುಘಟ್ಟಕ್ಕಾ..? ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?..'

ಹೀಗೆ ಮಿತ್ರನ ಜೊತೆ ಮೋಟಾರು ಬೈಕನಲ್ಲಿ ಚಿಕ್ಕ ಪಯಣ. ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿಗೆಂಪಲ್ಲಿ, 'ಓ ಒಲವೆ ನೀನೆಲ್ಲಿ, ಹುಡುಕಾಟ ನಿನಗಿನ್ನೆಲ್ಲಿ' ಪದ್ಯದ ಸಾಲುಗಳನ್ನು ಹಾಡುತ್ತಿದ್ದ ನಮಗೆ ಅಲ್ಲಲ್ಲಿ ತುಂತುರು ಮಳೆಯ ಸಾಥ್.. ಮನಸ್ಸಿಗೆ ತುಂಬಾ ಉಲ್ಲಾಸ ನಿಡುತಿತ್ತು. ಸುಮಾರು ಹದಿನಾಲ್ಕು ವರುಷದ ನಂತರ ಹೋದ ನನಗೆ ನಿರಾಸೆ ಕಾದಿತ್ತು. ಮಂಗಳವಾರ ರಜೆ. 'ಸರಿ ನಡಿಯಪ್ಪಾ ಇನ್ನೇನು ಮಾಡೋದು, ಬಂದ ದಾರಿಗೆ ಸುಂಕವಿಲ್ಲಾ' ಅಂತಾ ಬೈಕ್ ತಿರುಗಿಸಿ ಹೊರಟ ನಮ್ಮ ಕಣ್ಣಿಗೆ ಬಿದ್ದಿದ್ದೇ 'ಚಂಪಕಧಾಮ' ಮಂದಿರ.
ಚಂಪಕಧಾಮ ಮಂದಿರ
ಬೈಕ್ ಪಾರ್ಕ್ ಮಾಡಿ ದೇವಸ್ಥಾನದ ಒಳ ಹೊಗುತ್ತಿದ್ದಿರೆ ಆ ಭವ್ಯ ಕಟ್ಟಡದ ಸುಂದರ ಶಿಲ್ಪಕಲೆ, ವಿಶಾಲವಾದ ಪ್ರಾಂಗಣ ಎಂಥವರಿಗೂ ಮನಸೋಲುವ ಹಾಗೆ ಮಾಡುತ್ತಿತ್ತು. ದೇವರಿಗೆ ಅರ್ಚನೆ ಮುಗಿಸಿ ಹೊರಬಿದ್ದ ನಂಗೆ  ದೇವಸ್ಥಾನದ ಇತಿಹಾಸ ತಿಳಿಯುವ ಕುತೂಹಲ ಉಂಟಾಗಿ ಅಲ್ಲೆ ಇದ್ದ ಅರ್ಚಕರನ್ನ ಸಂದರ್ಶಿಸಿದೆ. ದೇವಸ್ಥಾನ ಸರಿಸುಮಾರು 1000 ವರುಷ ಹಳೇಯದ್ದು, ಹಾಗೂ ಈ ದೇವಸ್ಥಾನದ ಕೆಳಗೆ ದ್ವಾಪರ ಯುಗದ ಇನ್ನೊಂದು ದೇವಸ್ಥಾನ ಇರುವದಾಗಿಯೂ ತಿಳಿದುಕೊಂಡೆ. ಚಂಪಕಧಾಮದ ದರುಶನ ಮುಗಿಸಿಕೊಂಡು ಅಲ್ಲಲ್ಲಿ ನೋಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸ್ವಲ್ಪ ಕಾಲಹರಣ ಮಾಡಿದೆವು.

'ಲೋ.. ಬೆಟ್ಟದ ಮೇಲೆ ಹೊಗೊಣ್ವಾ? ಯಾವುದೋ ದೇವಸ್ಥಾನ ಕಾಣ್ತಾ ಇದೆ.'

ಚಂಪಕಧಾಮ ದೇವಸ್ಥಾನದ ಹಿಂದೆ ಇರುವ ಬೆಟ್ಟ ಹತ್ತಲು ಶುರು ಮಾಡಿದೆವು. ಮೇಲೆ ಮೇಲೆ ಏರುತ್ತಾ ಇದ್ದ ನಮಗೆ, ಬೆಂಗಳೂರು ದೂರದಿಂದಲೇ ಅನಾವರಣಗೊಳ್ಳಲು ಶುರುವಾಯಿತು. ಪೂರ್ತಿ ಬೆಟ್ಟ ಹತ್ತಿದ ಮೇಲೆ, ಹುಣ್ಣಿಮೆ ಚಂದ್ರ ದೂರದಿಂದಲೆ ಹೇಗೆ ಪ್ರಕಾಶಮಾನವಾಗಿ ಕಾಣುವುದೋ ಹಾಗೆ ಬೆಟ್ಟದ ತುದಿಯಿಂದ ನಮ್ಮ ಬೆಂಗಳೂರಿನ ನೋಟ ಕಣ್ಣಿಗೆ ಬಡಿಯುತ್ತಿತ್ತು. ಬೆಟ್ಟದ ತುದಿಯೇರಿದ ನಮಗೆ ಕಣ್ಣಿಗೆ ಬಿದ್ದಿದ್ದು ನರಸಿಂಹ ಸ್ವಾಮಿಯ ದೇವಸ್ಥಾನ. ಅದರ ದರುಶನವೂ ಆಯ್ತು.
ಭವಾನಿಶಂಕರ ಮಂದಿರ
'ಸಾಮಿ, ಇಲ್ಲೆ ಕಾಲುದಾರಿಯಿಂದ 2-3 ಕಿಲೋಮೀಟರ್ ಹೋದ್ರೆ ಹನುಮಾನ್ ಮಂದಿರ, ಭವಾನಿಶಂಕರ ಮಂದಿರ ಇದೆ. ವಿಶೇಷ ಅಂದ್ರೆ ಮಾರುತಿ ವಿಗ್ರಹ ಕಲ್ಯಾಣಿಯೊಳಗಿದೆ. ಅದನ್ನ ವರುಷಕ್ಕೊಮ್ಮೆನೆ ನೋಡಿಲಿಕ್ಕಾಗೊದು..'. 'ಹೌದಾ!' ಅಂತಾ ಗೆಳೆಯನ ಬಾಯಿಂದ ಉದ್ಗಾರವಾಚಕ ಪದ. ದಣಿವಾರಿಸಿಕೊಳ್ಳಲು ನೀರು ಖರೀದಿ ಮಾಡುತ್ತಿದ್ದಾಗ ಆ ಮಹಿಳೆ ನಮಗೆ ಆ ಸ್ಥಳಕ್ಕೆ ಹೋಗಿ ಬರಲು ಸೂಚಿಸುತ್ತಿದ್ದರು. ಸರಿ ಅಂತ ಹೊರಟ ನಮಗೆ ದಾರಿಯುದ್ದಕ್ಕೂ ಸಿಕ್ಕಿದ್ದು ಕುರುಚಲು ಗಿಡಗಳ ಹಾಸು, ಕಲ್ಲು ಬಂಡೆಗಳು, ತಣ್ಣನೆ ಗಾಳಿ, ಮನಸ್ಸಿಗೆ ಹಿತ. ಅಲ್ಲಲ್ಲಿ ಸಿಗುತಿದ್ದ ಅರಣ್ಯ ಇಲಾಖೆಯ ಸೂಚನಾ ಫಲಕಗಳು 'ಇದು ಕಾಡುಪ್ರಾಣಿಗಳು ಸಂಚರಿಸುವ ಸ್ಥಳ' ಎಂಬ ಎಚ್ಚರದ ಸೂಚನೆಗಳು. ಹಾಗೂ ಹೀಗೂ, ದೇವಸ್ಥಾನಕ್ಕೆ ಬಂದು ತಲುಪಿದ ನಾವು ನಮ್ಮ ದಣಿವನ್ನು ಅಲ್ಲಿಯ ಪ್ರಶಾಂತತೆಯೊಳಗೆ ಲೀನಗೊಳಿಸಿ ದರುಶನಕ್ಕೆ ಅಣಿಯಾದೆವು.
    
ಸಂಸಾರ ಸಾಗರದಲಿ ದಿಕ್ಕು ತಪ್ಪಿಹೆ ಪಶುಪತಿಯೆ,
ಪ್ರಶಾಂತತೆಯ ಈ ಜಾಗದಲಿ ನನ್ನನು ನಿನಗರ್ಪಿಹೆ.
ನನ್ನ ಮಾತು ಮೌನವಾಗಿದೆ ಸಂಸಾರದ ಸದ್ದುಗದ್ದಲದಲಿ,
ಶಂಭುವೆ ಬಂದು ಕಾಪಾಡು ನೀ ಭರದಲಿ.
ಮನಕೆ ಬುದ್ಧಿಯ ಕೊಟ್ಟು ಕೆಡಿಸಿರುವೆ ಪರಿಸ್ಥಿಯ ಆಕಾರ,
ಹೆ ಶಂಕರ ಪರಿಹರಿಸು ಎನ್ನಯ ಮನೋವಿಕಾರ.

ಎನ್ನುತ್ತಾ  ಭವಾನಿ ಶಂಕರನ ದರುಶನದ ಧನ್ಯತಾ ಭಾವವನ್ನು ನನ್ನ ಜೋಳಿಗೆಯಲಿ ತುಂಬಿಸಿ, ನನ್ನ ವ್ಯವಸ್ಥೆ ಅವ್ಯವಸ್ಥೆಗಳ ನಡುವೆ ನನ್ನ ವಿಚಾರಗಳನ್ನು ತೂಗಿ ಹಾಕಿ ಮೈಮರೆತಿದ್ದ ನನಗೆ, 'ಲೇ.. ಹೊಟ್ಟೆ ಪೂಜೆಗೆ ಬಾರಲೇ. ಅಲ್ಲಿ ಕಡ್ಲೆಪುರಿ ಮಾರ್ತಾ ಇದ್ದಾರೆ, ಹೋಗಿ ಏನಾದರು ತಿನ್ನೋಣ' ಅಂತ ಗೆಳೆಯನ ಮಾತು ಕಿವಿಗೆ ಬಿದ್ದ ಕ್ಷಣ ನಾನು ಮೈಮರೆತ ಸ್ಥಿತಿಯಲ್ಲೆ ಮುನ್ನಡೆದಿದ್ದೆ. ಕಡ್ಲೆಪುರಿ ಕೊಳ್ಳುವ ಹೊತ್ತಿನಲ್ಲಿ ಅಕಸ್ಮಾತಾಗಿ ಒಂದು ಚಿತ್ರದ ಕಡೆಗೆ ದೃಷ್ಟಿ ಬಿತ್ತು. 'ಏನಮ್ಮಾ ಇದು?' ಅಂತಾ ಮಾರುವವಳ ಹತ್ತಿರ ಕೇಳಿದಾಗ ಕಲ್ಯಾಣಿಯಲ್ಲಿರುವ ಮಾರುತಿಯ ಚಿತ್ರ ಎಂದು ತಿಳಿಯಿತು.
ಕಲ್ಯಾಣಿಯ ಮಾರುತಿ
ಅದನ್ನ ಕ್ಯಾಮೇರಾದಲ್ಲಿ ಸೆರೆ ಹಿಡಿದದ್ದಾಯಿತು. ಇಬ್ಬರು ಸ್ವಲ್ಪ ಕಾಲಹರಣ ಮಾಡಿ, ಹಿಂತಿರುಗುತ್ತಿದ್ದ ವೇಳೆ ಸಿಕ್ಕ ಸಿಕ್ಕಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಾ ನಮ್ಮ ಪಯಣ ಮತ್ತೆ ಬೆಂದಕಾಳೂರಿನ ಕಡೆ ತಿರುಗಿತು.

ಲೇಖಕರ ಕಿರುಪರಿಚಯ
ಶ್ರೀ ಕಾರ್ತಿಕ್ ದಿವೇಕರ್

ಆಧ್ಯಾತ್ಮ ಸಂಬಂಧಿತ ವಿಚಾರಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮೂಲತಃ ಹಾವೇರಿ ಜಿಲ್ಲೆಯವರು. ಓದು ಇವರ ನೆಚ್ಚಿನ ಹವ್ಯಾಸ; ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಭಾನುವಾರ, ನವೆಂಬರ್ 23, 2014

ನೆನಪು


ಓ ನನ್ನ ಗೆಳೆಯ
ನೀನಿಲ್ಲದ ಈ ಜೀವನ
ನೀರಿಲ್ಲದ ಮೀನಿನಂತೆ
ಕಂಪನ್ನ ಸೂಸದ ಹೂವಿನಂತೆ
ಈಗ ಬರೀ ಶೂನ್ಯ..

ಏನೆಂದು ವರ್ಣಿಸಲಿ ನಮ್ಮ
ಒಡನಾಟದ ಸಿಹಿ ನೆನಪುಗಳನ್ನು
ಅಂತರಾಳದ ಕೊಳಕ್ಕೆ ಕಲ್ಲನ್ನು ಹಾಕಿ
ನೆನಪೆಂಬ ಅಲೆಗಳನ್ನು ಎಬ್ಬಿಸಿ ನಗುವೆ ಏಕೆ?

ಹೇಗೆ ಬಣ್ಣಿಸಲಿ ನನ್ನ ಅಂತರಾಳದ ಭಾವನೆಯನ್ನ..
ಯಾರಲ್ಲಿ ಹೇಳಲಿ ನನ್ನ ನೋವನ್ನ?
ವಿಧಿಯ ಆಟ ನನ್ನಿಂದ ನಿನ್ನನ್ನು
ದೂರ.. ಬಹುದೂರ ಕರೆದೊಯ್ಯಿತು
ಈಗ ನೀನು ಕೇವಲ ನೆನಪು....

ಲೇಖಕರ ಕಿರುಪರಿಚಯ
ಶ್ರೀಮತಿ ವಸುಧಾ ಪೈ

ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕವನ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಶನಿವಾರ, ನವೆಂಬರ್ 22, 2014

ಮಾತೃಸ್ಥಾನ

ಸಂಬಂಧಗಳೆಂದರೇನು? ನಮ್ಮ ವೈಯಕ್ತಿಕ ಮತ್ತು ಸಮಾಜಿಕ ಅಗತ್ಯಗಳನ್ನು ಪೂರೈಸಬಹುದಾದ ವ್ಯಕ್ತಿಗಳ ಜೊತೆಗೆ ಮನುಷ್ಯ ಹುಟ್ಟಿನೊಂದಿಗೆ ಅಥವಾ ಮುಂದಿನ ಜೀವನದಲ್ಲಿ ಬೆಸೆದುಕೊಳ್ಳುವ ಕೊಂಡಿಗಳೇ ವಿವಿಧ ಸಂಬಂಧಗಳು. ನಮ್ಮ ಅಗತ್ಯಗಳನ್ನು ಅವಲಂಬಿಸಿ ಆ ಸಂಬಂಧದ ಸ್ವರೂಪ ಬದಲಾಗುತ್ತದೆ. ನಿದ್ದೆ, ನೀರಡಿಕೆ, ಹಸಿವೆಗಳಂತಹ ಪ್ರಾಥಮಿಕ ಅಗತ್ಯಗಳಿಗೆ ವ್ಯವಹಾರಿಕ ಸಂಬಂಧ ಏರ್ಪಟ್ಟರೆ, ಸ್ನೇಹ-ಪ್ರೀತಿಗಳಿಗಾಗಿ ಭಾವನಾತ್ಮಕ ಸಂಬಂಧ ಏರ್ಪಡಬಹುದು. ಸಲಹೆ-ಸೂಚನೆಗಳಿಗೆ ಬೌದ್ಧಿಕ ಸಂಬಂಧ ಬೇಕಾಗುತ್ತದೆ. ಹೀಗೆ ಹಲವು ಹದಿನೆಂಟು ಸಂಬಂಧಗಳು. ಮನುಷ್ಯ ತೀರಾ ಸಂಕೀರ್ಣವಾದ ಸೃಷ್ಟಿಯಾಗಿದ್ದಾನೆ. ಉಳಿದ ಪ್ರಾಣಿಗಳಂತಲ್ಲದೆ ಬಹಳಷ್ಟು ಬಗೆಯ ಅಗತ್ಯಗಳಿರುವ ಮತ್ತು ಅವುಗಳ ಈಡೇರಿಕೆಗಾಗಿ ಪರಸ್ಪರ ವಿಭಿನ್ನ ಮಾರ್ಗಗಳನ್ನು ಅನುಸರಿಸುವ ಜೀವಿಯಾಗಿದ್ದಾನೆ.

ಶಿಕ್ಷಣ, ಉದ್ಯೋಗ, ತಂತ್ರಜ್ಞಾನಗಳ ವಿಶಾಲವಾದ ಚಟುವಟಿಕೆಗಳಲ್ಲಿ ತೊಡಗಿರುವ ಮನುಷ್ಯ ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿದ ಉದ್ಯಾನವನದ ಗಿಡದ ಹಾಗೆ ತನ್ನೊಳಗಿನ ಅಗತ್ಯಗಳನ್ನು ಗುರುತಿಸಿಕೊಳ್ಳುತ್ತಾನೆ. ಹೊಳೆಯ ಸುಳಿಗಳ ಕುಣಿವ ಅಲೆಗಳ ಕನಸು ಬಿದ್ದ ಬಣ್ಣದ ಮೀನು ಗಾಜಿನ ಜಾಡಿಯನ್ನು ಮೂತಿಯಿಂದ ತಿವಿದು ಚಡಪಡಿಸಿದರೆ ಅದನ್ನು ನೋಡಿ ಚೆಂದದ ಕುಣಿತವೆಂದು ನಾವು ಖುಷಿ ಪಡುತ್ತೇವೆ. ಹೀಗೆಯೆ ಯೋಚಿಸುತ್ತಾ ಹೋದರೆ ಅನಿಸುತ್ತದೆ - ಏನೆಲ್ಲಾ ಬೇಕು ಈ ಜೀವಕ್ಕೆ! ಯಾರೆಲ್ಲಾ ಬೇಕು ಈ ಭಾವಕ್ಕೆ.
ಒಬ್ಬ ವ್ಯಕ್ತಿಗೆ ಯಾವುದೇ ರೀತಿಯ ನೋವಾದರೂ ಮೊದಲು ಕರೆಯುವುದು 'ಅಮ್ಮಾ' ಎಂದು. ಹಾಗಾದರೆ ಈ ಅಮ್ಮ ಎಂದರೆ ಯಾರು? ಪುರುಷನೊಬ್ಬನ ವೀರ್ಯಾಣುವಿನಿಂದ ಗರ್ಭ ಧರಿಸಿ, ಮತ್ತೊಂದು ಜೀವವನ್ನು ಹೊತ್ತು, ಹೆತ್ತು, ಹಾಲುಣಿಸಿ ಸಾಕಿ ಬೆಳೆಸಿ ಪಕ್ಕಕ್ಕೆ ಸರಿದು ಬಿಡುವ ಒಬ್ಬ ಮಹಿಳೆ ಮಾತ್ರವೇ? ಅಲ್ಲ. ಎದುರಿಗಿರುವ ವ್ಯಕ್ತಿಯ ಕಾಣದಿರುವ ಮನದಾಳದ ಗಾಯಗಳನ್ನು ವಾತ್ಸಲ್ಯದ ಹಾಲುಣಿಸಿ ಗುಣಪಡಿಸುವ ಚೈತನ್ಯವೇ ಅಮ್ಮ. ಅಮ್ಮ ಎಂದರೆ ಒಬ್ಬ ಮಹಿಳೆ ಅಥವಾ ವ್ಯಕ್ತಿ ಮಾತ್ರವೇ ಅಲ್ಲ, ಅದು ಒಂದು ಮನೋಭಾವವೂ ಹೌದು. ಈ ನಿಟ್ಟಿನಲ್ಲಿ ಸ್ನೇಹಿತ, ಸ್ನೇಹಿತೆ, ಅಕ್ಕ, ಅಣ್ಣ, ಗುರುಗಳು ಹೀಗೆ ಸಹೃದಯ ಇರುವ ಯಾವ ವ್ಯಕ್ತಿ ಬೇಕಾದರೂ ಅಮ್ಮನಾಗಬಹುದು. ಇದಕ್ಕೆ ಯಾವುದೇ ಲಿಂಗ ಬೇಧವಿಲ್ಲ. ಕೇವಲ ನಾವೇ ಹೊತ್ತು, ಹೆತ್ತ ಮಕ್ಕಳನ್ನಷ್ಟೇ ಪ್ರೀತಿಸುತ್ತಾ ಅವರನ್ನು ಹೊತ್ತು ಹೊತ್ತಿಗೆ ಗಮನಿಸಿ, ರುಚಿಯಾದ, ಆರೋಗ್ಯಕರ ಹಾಗೂ ಪೌಷ್ಠಿಕವಾದ ಊಟ ಹಾಕಿ, ಬೆಚ್ಚಗಿರಿಸಿ, ಚೆನ್ನಾಗಿ ಓದಿಸಿ ಜಗತ್ತಿನ ಕೆಟ್ಟದರಿಂದ ರಕ್ಷಿಸಿ ಅವರಿಗೊಂದು ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ಕೊಡಿಸಿಬಿಟ್ಟರೆ ಮಾತ್ರ ಆದರ್ಶ ತಾಯಿಯಾಗುತ್ತಾರೆಯೇ ಎಂಬುದನ್ನು ಯೋಚಿಸಬೇಕು.

ಇಂದಿನ ಮನುಷ್ಯ ತುಂಬಾ ಹಸಿದಿದ್ದಾನೆ, ಶಿಷ್ಟಾಚಾರದ ಪ್ರತಿಷ್ಠಿತ ಶಾಲೆ ಮತ್ತು ಟ್ಯೂಷನ್ ನೆಪದಲ್ಲಿ ಕಸಿದಿಟ್ಟಿ ಮುಗ್ಧ ಬಾಲ್ಯದ ಹಸಿವು, ಸಭ್ಯತೆಯ ಹೆಸರಿನಲ್ಲಿ ಪೋಷಕರ ಒತ್ತಡದ ಮೇರೆಗೆ ರುಚಿ ನೋಡದೆ ಬಿಟ್ಟ ತುಂಟತನದ ಹಸಿವು, ಸ್ಪರ್ಧಾತ್ಮಕ ಯುಗದ ನೆಪದಲ್ಲಿ ಹುಟ್ಟಿಕೊಂಡ ಈರ್ಷೆ, ಮಾತ್ಸರ್ಯಗಳಿಂದ ಕಾಣದಿರುವ ಶುದ್ಧ ಸ್ನೇಹದ ಹಸಿವು, ಹೀಗೆ ಈ ಎಲ್ಲಾ ಹಸಿವುಗಳಿಗೂ ಸೌಟುಗಳ ಎಣಿಸದೆ, ಕೂಪನ್ ಗಳ ವಿತರಿಸಿದೆ, ಪ್ರೀತಿ ವಾತ್ಸಲ್ಯವನ್ನು ಮೊಗೆಮೊಗೆದು ಬಡಿಸುವ ಪ್ರೇಮದ ಅಮ್ಮ ಬೇಕು.

ಮನುಷ್ಯ ವಯಸ್ಸಾಗುತ್ತಾ ಹೋದಂತೆ ನಿಜವಾದ ಅರಿವು ಪಡೆದುಕೊಂಡಿದ್ದು ನಿಜವಾದರೆ ಸೃಷ್ಟಿಯತ್ತ ಸಾಗಬೇಕು, ಪ್ರಕೃತಿಯನ್ನು ಅನುಸರಿಸಬೇಕು. ಸೂರ್ಯ, ಚಂದ್ರ, ಭೂಮಿ, ಮಳೆ, ನದಿ, ಗಾಳಿಯ ಹಾಗೆ ನಮ್ಮಲ್ಲಿರುವ ಚೈತನ್ಯವನ್ನು, ಶಕ್ತಿಯನ್ನು, ಸತ್ವವನ್ನು, ಪ್ರೀತಿಯನ್ನು ಉತ್ತಮ ವಿಚಾರಗಳನ್ನು ಸಮಾಜಕ್ಕೆ ಸುರಿಯಬೇಕು. ನೊಂದವರ ಕೈ ಹಿಡಿದು ಮೇಲೆತ್ತಬೇಕು. ಎಲ್ಲರನ್ನೂ ಪ್ರೀತಿಸು, ಎಲ್ಲರನ್ನೂ ಸೇವಿಸು ಎಂಬ ಮಾತಿನಂತೆ ಎದುರಿಗಿರುವವರ ಕುಲ, ಗೋತ್ರ, ಜಾತಿ, ಲಿಂಗ, ಅಂತಸ್ತುಗಳನ್ನು ಎಣಿಸದೇ, ಗಿರಿ-ಶಿಖರ, ಸಾಗರ ಎಂದು ಯಾವುದನ್ನೂ ಲೆಕ್ಕಿಸದೆ ಧೋ ಎಂದು ಸುರಿವ ಮಳೆಯ ಹಾಗೆ ನಮ್ಮ ಅಂತಃಕರಣ ಉಕ್ಕಿದ ದಿನ ನಾವು ನಿಜವಾದ 'ಅಮ್ಮ' ಆಗುತ್ತೇವೆ. ಆ ಉಕ್ಕಿದ ಪ್ರೀತಿ ಪಡೆದವನು ವಯಸ್ಸು, ಲಿಂಗ, ಜಾತಿ, ಅಂತಸ್ತುಗಳ ಯಾವ ಹಂಗೂ ಇಲ್ಲದೆ ಮಗುವಾಗುತ್ತಾನೆ.

ಮಗ, ಮಗಳು, ಗುರು, ಶಿಷ್ಯ, ಗೆಳೆಯ, ಒಡೆಯ ಅಂತ ಸಂಬಂಧಗಳಿಗೆ ಹೆಸರಿಟ್ಟು ಒಂದು ನಿರ್ದಿಷ್ಟ ವ್ಯಾಪ್ತಿಯನ್ನು ಅಳೆದಿಟ್ಟು ಈ ಸಂಬಂಧಗಳು ಆಚೀಚೆ ಹೋಗದಂತೆ ಎಚ್ಚರ ವಹಿಸುತ್ತೇವೆ; ಅದರ ಬದಲಿಗೆ ನಮ್ಮನ್ನು ಪ್ರೀತಿಸುವವರನ್ನು ಪ್ರೀತಿ, ಆದರಗಳಿಂದ ಕಾಣಬೇಕು, ಅವರ ಮನದಾಳದ ನೋವು ನಲಿವುಗಳಿಗೆ ಸ್ಪಂದಿಸಬೇಕು. ಒಬ್ಬ ಸ್ನೇಹಿತನ ಬಳಿ ಉತ್ತಮ ಸ್ನೇಹ ಸಂಬಂಧವನ್ನು ಯಾವುದೇ ಸ್ವಾರ್ಥವಿಲ್ಲದೆ ಇರಿಸಿಕೊಂಡು ಅವನ ಮನಸ್ಸಿನ ನಲಿವುಗಳಷ್ಟೇ ಅಲ್ಲದೆ ನೋವಿನ ಸಂದರ್ಭದಲ್ಲಿಯೂ ನಾವು ಸ್ಪಂದಿಸಿದಾಗ ಆ ಸ್ನೇಹಿತನಿಗೆ 'ಅಮ್ಮ'ನಾಗಿ ಮಾತೃಸ್ಥಾನದಲ್ಲಿ ನಿಲ್ಲುತ್ತೇವೆ.

ಲೇಖಕರ ಕಿರುಪರಿಚಯ
ಶ್ರೀಮತಿ ಶ್ವೇತ ವಿ.

ಮೂಲತಃ ಮೈಸೂರಿನವರಾದ ಇವರು ಎಂ.ಬಿ.ಎ. ಪದವೀಧರರು. ಕನ್ನಡ ಲೇಖನಗಳನ್ನು ಓದುವ ಹಾಗೂ ಬರೆಯುವ ಹವ್ಯಾಸ ಹೊಂದಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 21, 2014

ಸತ್ಯದರ್ಶನ - ಒಂದು ಅನುಭವ

ಕಾರು ಬೈಕು ಇವೆಲ್ಲಾ ಆಧುನಿಕ ಜಗತ್ತಿನ ಅದ್ಭುತ ಸಂಚಾರಿ ಸಾಧನಗಳಾಗಿ ಹೊರಹೊಮ್ಮಿದ್ದರೂ ಆರ್ಥಿಕವಾಗಿ ಆ ಮಟ್ಟಕ್ಕಿನ್ನೂ ಬೆಳೆದಿಲ್ಲವಾದ್ದರಿಂದ ದಿನಂಪ್ರತಿ ಬಸ್ಸನ್ನು ನೆಚ್ಚಿಕೊಳ್ಳುವುದು ನನ್ನ ಜಾಯಮಾನ. ಹೀಗೇ ನೆಡೆಯುತ್ತಿರುವಾಗ ಒಂದುದಿನ ನನಗಾದ ಅನುಭವ ಇದು.

ನಾನು ಹತ್ತಬೇಕಾದ ನಿಲ್ದಾಣದಲ್ಲಿ ನಾನಾಗಲೇ ಕಾಯುತ್ತಾ ನಿಂತಿದ್ದೆ. ಏಕೆಂದರೆ ಒಮ್ಮೆ ಈ ಬಸ್ಸು ತಪ್ಪಿದರೆ ಇನ್ನೂ ಹದಿನೈದು ನಿಮಿಷ ಕಾಯುವ ವ್ಯವಧಾನ ಖಂಡಿತ ನನಗಿಲ್ಲ. ತಲುಪಬೇಕಾದ ಸ್ಥಳ ಸುಮಾರು ಮುಕ್ಕಾಲು ಘಂಟೆಯ ಸಮಯಯನ್ನು ಒಳಗೊಂಡಿದ್ದರಿಂದ ಯಾವಾಗಲೂ ತೇಜಸ್ವಿಯವರದ್ದೋ ಇಲ್ಲ ಯಂಡಮೂರಿಯವರದ್ದೋ ಪುಸ್ತಕಗಳು ಬ್ಯಾಗಿನ ಒಳಗಿರುತ್ತಿದ್ದವು. ನೋಡುತಿದ್ದಂತೆ ನನ್ನ ಬಸ್ಸು ಬಂದಿತು. ನಿರ್ವಾಹಕ 'ಉಡುಪಿ , ಉಡುಪಿ....' ಎಂದೊಮ್ಮೆ ಜೋರಾಗಿ ಕೂಗಿದ. ನಾನೂ ಸೇರಿದಂತೆ ಒಂದೈದು ಜನ ಹತ್ತಿಕೊಂಡೆವು. ಹಿಂದಿನ ಮೂಲೆಯ ಕಿಟಕಿಯ ಪಕ್ಕದ ಸೀಟ್ ಹಿಡಿಯುವುದು ಅಭ್ಯಾಸ. ಹತ್ತಿದ ಕೆಲವೇ ಕ್ಷಣಗಳಿಗೆ ನನ್ನ ಟಿಕೆಟ್ ನನ್ನ ಕೈ ಸೇರಿತ್ತು. ಮಾಮೂಲಿ ಅಭ್ಯಾಸದಂತೆ ಬ್ಯಾಗಿನೊಳಕ್ಕೆ ಕೈ ಹಾಕಿದೆ ತಕ್ಷಣಕ್ಕೇನೂ ಸಿಗಲಿಲ್ಲ. ಮತ್ತೊಮ್ಮೆ ಕೈಯಾಡಿಸಿದೆ ಈ ಬಾರಿ ಆಶ್ಚರ್ಯಗೊಳ್ಳಲೇ ಬೇಕಾದ ಸರದಿ ನನ್ನದಾಗಿತ್ತು. ಮೊದಲ ಬಾರಿಗೆ ನಾನು ಯಾವುದೇ ಕಾದಂಬರಿ ಇಲ್ಲದೇ ಬಸ್ಸು ಹತ್ತಿದ್ದೆ! . ಎಫ್.ಎಂ. ಕೇಳುವ ಹವ್ಯಾಸ ನನಗಿರಲಿಲ್ಲ. ಮೊದಲ ಬಾರಿಗೆ ನಾನೆಂದೂ ಬಿಡುವಾಗಿ ಮಾಡದ ಕೆಲಸವೊಂದನ್ನು ಮಾಡಹತ್ತಿದೆ. ಅದು 'ಯೋಚನೆ' - ನಾನು ಯೋಚನೆ ಮಾಡಹತ್ತಿದೆ!!

ನನ್ನ ಯೋಚನೆಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ರಾಜ್ಯ, ರಾಷ್ಟ್ರ, ಕಾಲೇಜು ಹೀಗೇ ಎಲ್ಲೆ ಇಲ್ಲದಂತೆ ಯಾವುದೇ ಕೊನೆಯಿಲ್ಲದೇ ವೇಗವಾಗಿ ಅನಂತವಾಗಿ ಸಾಗಿದ್ದವು. ಒಮ್ಮೆ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ನೋಡಿದೆ ಎಲ್ಲೋ ನೋಡಿದಂತಿದೆ.... ಅರೇ ಇವರು ನನ್ನ ಹಳೇ ಶಾಲೆಯ ಟೀಚರ್ ಅಲ್ಲವೇ? ಸರಿ ಮತ್ತೇನೂ ಮಾಡಲಾಗದೆ ಅವರನ್ನೊಮ್ಮೆ ಮಾತನಾಡೋಣ ಎನ್ನಿಸಿತು. ಸ್ಡಲ್ಪ ಮುಜುಗರವಾದರೂ ನಾನೇ ಶುರು ಮಾಡಿದೆ...

'ಹಾಯ್ ಸರ್' ಬಲಗೈ ಎತ್ತಿ ಒಮ್ಮೆ ಆಡಿಸಿದೆ.

'ಹಾಯ್....' ನನ್ನಲ್ಲಿ ಉಂಟಾದ ಸಮಾನ ಆಶ್ಚರ್ಯ ಅವರಿಗಾಗಿತ್ತು. ಬೆಂಗಳೂರಿನಲ್ಲಿ ಇರಬೇಕಾದ ಅವರು ಅಚಾನಕ್ಕಾಗಿ ಇಲ್ಲಿರುವುದು ನನಗೂ ಆಶ್ಚರ್ಯ ಉಂಟುಮಾಡಿತ್ತು. ಕೆಲವು ಕ್ಷಣಗಳವರೆಗೆ ನಾವಿಬ್ಬರೂ ಹಳೆಯ ಶಾಲೆಯ ಬಗ್ಗೆ, ಈಗಿನ ಸಮಾರಂಭ-ಅತಿಥಿಗಳ ಆಗಮನ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆವು. ಆದರೆ ನನ್ನ ಗಮನಕ್ಕೆ ಬಂದ ಒಂದು ವಿಷಯವೆಂದರೆ ನಾನು ಬಂದಮೆಲೂ ಏನೂ ಬದಲಾವಣೆ ಆಗಿರಲಿಲ್ಲ. ಎಲ್ಲವೂ ಕರಾರುವಕ್ಕಾಗಿ ನಾನು ಹಿಂದೆ ಅನುಭವಿಸಿದ - ಭಾಗಿಯಾಗಿದ್ದ ಘಟನೆಗಳೇ ನೆಡೆದಿದ್ದವು ಅನ್ನಿಸುತ್ತಿತ್ತು. ಹೇಗೆ...?

'ಟಣ್...!!'

ಸದ್ದಾದೆಡೆಗೆ ನೋಡಿದೆ. ಲಿಖಿತ್.... ನನ್ನ ಹಳೆಯ ಶಾಲೆಯ ಅತ್ಯಾಪ್ತ ಗೆಳೆಯ. ಆದರೆ ಅವನಿಲ್ಲಿ?? ಒಂದೇ ಬಾರಿಗೆ ಹಳೆಯ ಶಾಲೆಯ ಇಬ್ಬರು ವ್ಯಕ್ತಿಗಳು? ಈ ಬಾರಿ ನನ್ನ ಎದೆ ಬಡಿತ ಹೆಚ್ಚಾದದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಆಶ್ಚರ್ಯದೊಂದಿಗೆ ಪಕ್ಕಕ್ಕೆ ನೋಡಿದೆ.. ಅರೇ ಯಾರೂ ಇಲ್ಲ!! ನನ್ನ ಹಳೆಯ ಶಿಕ್ಷಕರು, ಅವರು ಇಲ್ಲೇ ಇದ್ದರು ಈಗತಾನೇ ಆದರೆ ಈಗ.. ನನ್ನ ಯೋಚನೆ ಮುಗಿಯುವಷ್ಟರಲ್ಲಿಯೇ ಲಿಖಿತ್ ಬಂದು ಮಾಮೂಲಿಯಂತೆ ಕೈ ಬೀಸಿ ಹಾಯ್ ಎಂದ. ನಾನೂ ಅಭ್ಯಾಸದಂತೆಯೇ ಒಮ್ಮೆ ಕೈ ಬೀಸಿ ಇಲ್ಲಿ ಕರೆದೆ. ನನ್ನ ಬಳಿಗೆ ಬಂದಾಕ್ಷಣ ನಾನೇ ಮೊದಲು ಮಾತು ಪ್ರಾರಂಬಿಸಿದೆ.

'ಹಾಯ್. ನಮ್ಮ ಶಾಲೆಯ ಶಿಕ್ಷಕರು ಇಲ್ಲಿಯೇ ಪಕ್ಕದಲ್ಲಿಯೇ ಇದ್ದರು ನೋಡಿದೆಯಾ?'

'ಯಾರು?? ನಿನ್ನ ಪಕ್ಕದಲ್ಲಿಯೇ ಯಾರೂ ಇರಲಿಲ್ಲವಲ್ಲ! ನಿನ್ನ ಸುತ್ತಮುತ್ತ ಯಾರೂ ಇರಲಿಲ್ಲ ಅದಕ್ಕೇ ನಿನ್ನನ್ನು ಗುರುತಿಸಲು ಸಾಧ್ಯವಾಗಿದ್ದು!' ಆಶ್ಚರ್ಯವಾದರೂ ಆಗ ನೆಡೆದಿದ್ದು ನನ್ನ ಭ್ರಮೆ ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದಾದ ಮೇಲೆ ಸ್ವಲ್ಪ ಹೊತ್ತು ಅದೇ ಹಳೆಯ ನೆನಪುಗಳಿಗೆ ಬಣ್ಣ ಕೊಟ್ಟೆವು. ಜಾಸ್ತಿ ಹೊತ್ತಾಗತೊಡಗಿತ್ತು. ಆದರೆ ನನ್ನ ಆ ಕಡೆಯ ತೀರ ಇನ್ನೂ ಬಂದಿಲ್ಲ!.

'ಸರಿ ಕಣೋ ನನಗೆ ಟೈಮ್ ಆಯ್ತು ಇನ್ನೊಂದಿನ ಬರ‍್ತೀನಿ' ಅವನಿಂದ ಬಂದ ಆ ತಿಲಾಂಜಲಿಗೆ ನಾನು 'ಸರಿ ಕಣೋ, ಮತ್ತೊಮ್ಮೆ ಸಿಗೋಣ.' ಎಂದೆ. ನಾವಿಬ್ಬರೂ ಎಂಟು ವರ್ಷಕ್ಕೂ ಹೆಚ್ಚಿನ ಗೆಳೆಯರಾದ್ದರಿಂದ ಮಾತುಗಳು ತುಂಬಾನೆ 'ಇನ್ ಫಾರ‍್ಮಲ್' ಆಗಿದ್ದವು. ನಾನು ಅವನನ್ನು ಬೀಳ್ಕೊಡಲು ಮೇಲೇಳಲು ನನ್ನ ತೊಡೆಯ ಮೇಲಿದ್ದ ಬ್ಯಾಗನ್ನು ಪಕ್ಕಕ್ಕಿಟ್ಟೆ. ಸರಿ '......' ಅರೇ!! ಲಿಖಿತ್ ಹಾಗಿರಲಿ ಈಗ ಬಸ್ಸಿನಲ್ಲಿದ್ದವರು ಯಾರೂ ಕಾಣುತ್ತಿಲ್ಲ!!

ಅಸಲಿಗೆ ನಾನು ಬಸ್ಸಿನಲ್ಲಿಯೇ ಇರಲಿಲ್ಲ. ನಾನು ಶಾಲೆಯಲ್ಲಿದ್ದೆ. ಈಗಿನದಲ್ಲ ಹಳೆಯದು!!!!. ಯಾಕೋ ಈ ಶಾಲೆ ಇವತ್ತು ಮತ್ತೆ ಮತ್ತೆ ತನ್ನ ಕಬಂಧ ಬಾಹುಗಳಿಂದ ನನಗೆ ಕಾಡುತ್ತಿದೆಯಲ್ಲಾ.. ಎನ್ನಿಸಿತು. ಇದನ್ನೇನಾದರೂ ಮುಂದೊಮ್ಮೆ ಬರೆದರೆ ಐದಾರು ಆಶ್ಚರ್ಯಕರ ಚಿಹ್ನೆಗಳನ್ನು ಹಾಕಬಹುದುತ್ತು. (ಅದನ್ನು ಈಗ ಹಾಕಿದ್ದೇನೆ...!!).

ನನ್ನ ಗೆಳೆಯರು, ನಾನು ಎಲ್ಲರೂ ನನಗೀಗ ಕಾಣುತಿತ್ತು. ನಾನೇನೋ ಹೇಳುತಿದ್ದೆ. ಏನದು?? ಈ ತರಹದ ಕುತೂಹಲ ಎಲ್ಲರಂತೆ ನನಗೂ ಇತ್ತು. ನಿಧಾನವಾಗಿ ಅತ್ತ ನೆಡೆದೆ. ಯಾವುದೋ ಸಿನಿಮಾದಂತೆ ಕಾಣುತಿತ್ತು. ನಾನು ಅದೃಶ್ಯ ಮಾನವನೋ, ಇಲ್ಲಿ ನೆರೆದಿರುವರಿಗೆಲ್ಲಾ 'ನನ್ನನ್ನು' ನೋಡಿದಾಗ ಏನೆನ್ನಿಸಬಹುದು? ನನ್ನ ಮನಸ್ಸು ಪಕ್ಕಾ ಸಿನಿಮೀಯವಾಗಿ ಯೋಚಿಸಹತ್ತಿತು. ಅವರೆಲ್ಲರ ಮಾತುಗಳು ಕೇಳುತ್ತಿದ್ದವು.

'ಈ ರಿಸಲ್ಟ್ ಬಂದ್ಬಿಟ್ಟರೆ ಮತ್ತೊಮ್ಮೆ ಇಲ್ಲಿ ತಲೆಹಾಕಿಯೂ ಮಲಗುವುದಿಲ್ಲ ಕಣೋ' ಮತ್ತೊಂದು ಇನ್ ಫಾರ‍್ಮಲ್ ಮಾತು.

'ನಾನೂ ಅಷ್ಟೇ ಕಣೋ. ಕಮ್ಮಿ ಮಾರ್ಕ್ಸ್ ಬರೋದಂತು ಗ್ಯಾರೆಂಟಿ, ಅದ್ಯಾವ ಮುಖ ಎತ್ತಿಕೊಂಡು ಇಲ್ಲಿಗೆ ಬರೋದು?' ಇದು ನನ್ನ ಸ್ವರದಂತೆ ಕೇಳಿತು. ನನಗೆ ಎಪ್ಪತ್ನ್ಲಾಲ್ಕು ಪ್ರತಿಶತ ಬಂದಿದ್ದರೂ ಅದು ಆಗಲೂ ನನಗೆ ಕಮ್ಮಿ ಎಂದೆನ್ನಿಸತೊಡಗಿದ್ದು ಸತ್ಯ.

ಅದೆಲ್ಲಾ ಮಂಜಾಗತೊಡಗಿತು. ಏನೂ ಕಾಣುತ್ತಿರಲಿಲ್ಲ. ನನ್ನ ಗೆಳೆಯರು.. ನಾನು... ಉಹೂಂ.. ಇಲ್ಲ, ಏನೂ ಇಲ್ಲ... ನಾನು ಅಲುಗಾಡುತ್ತಿರುವುದು ಅರಿವಿಗೆ ಬಂತು. ಅದಲ್ಲ, ಯಾರೋ ತಳ್ಳುತ್ತಿದ್ದಾರೆ ಅಲುಗಾಡಿಸುತ್ತಿದ್ದಾರೆ. ಈಗ ಕಾಣತೊಡಗಿತು. ನನ್ನ ಪಕ್ಕದ ಸೀಟಿನವ. ಉಡುಪಿ, ಅಂದರೆ ನಾನು ಇಳಿಯಬೇಕಾದ ಸ್ಥಳ ಬಂತೆಂದು ಸನ್ನೆ ಮಾಡಿದ. ಮೌನವಾಗಿ ಕೆಳಗಿಳಿದೆ. ಹತ್ತಿರದ ವಿರಾಮ ಕುರ್ಚಿಯಲ್ಲಿ ಕುಳಿತೆ. ನನ್ನ ಸರ್ ಬಳಿ ಮಾತನಾಡುವಾಗ ಏಕೆ ನನಗೆ ಹಿಂದೆ ನೆಡೆದಿದ್ದ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದೆನೆಂದು ಅರ್ಥವಾಯಿತು. ನನಗೆ ಈಗಿನ ಸಂಗತಿ ಗೊತ್ತಿದ್ದರಲ್ಲವೇ ಅದರ ಬಗ್ಗೆ ಕನಸುಗಳು ಬೀಳುವುದು!?. ನಾನೇ ಕರೆದ ಸ್ವಪ್ನ ಪಾತ್ರಕ್ಕೆ ಅಂತ್ಯದ ಗುರುತೆಲ್ಲಿದೆ? ಇಷ್ಟಕ್ಕೂ ನನಗೆ ಬಿದ್ದ ಕನಸು ನನ್ನ ಶಾಲೆ ಸಂಗತಿಗಳ ಬಗ್ಗೆಯೇ ಏಕೆ ತಿರುಗುತಿತ್ತು? ಇದಕ್ಕೆ ಉತ್ತರ ತಿಳಿಯಲು ಹೊರಟಾಗ ಬೆಳಿಗ್ಗೆ ನನ್ನ ಹಳೆಯ ಶಾಲೆಯ ಗೆಳೆಯರು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಾರ್ಯಕ್ರಮವೊಂದಿದೆ, ಬರಬೇಕೆಂದು ಕರೆದಿದ್ದರು. ನಾನು ತುಂಬು ಹೃದಯದಿಂದ ಒಪ್ಪಿಕೊಂಡಿದ್ದು ಜ್ಞಾಪಕಕ್ಕೆ ಬಂದಿತು.

ಅಬ್ಬಾ!! ಸಮಯ ಕಳೆದಂತೆಲ್ಲಾ ಕಹಿ ಘಟನೆಗಳಾವುದೇ ಇರಲಿ ಒಲುಮೆ ಇಟ್ಟುಕೊಂಡ, ನೆನಪುಗಳನ್ನು ಉಳಿಸಿದ ಯಾವುದೇ ವಸ್ತುವಾದರೂ ಜೀವವಾದರೂ ಅದನ್ನು ಎದುರಿಗೆ ತೋರ್ಪಡಿಸದೇ ಇದ್ದರೂ ಒಳಗೊಳಗೇ ಅದರೆಡೆಗೆ ವಿಶೇಷವಾದುದೊಂದು ಕಾಳಜಿ-ಜವಾಬ್ದಾರಿ ಹಾಗೂ ಮುಖ್ಯವಾಗಿ ಪ್ರೀತಿ ಇರುತ್ತದೆ ಎಂಬುದು ಎಂತಹ ಅದ್ಭುತ ಸತ್ಯ ಅನ್ನಿಸಿತು.

ಕೊನೆಯ ಪ್ರಶ್ನೆ - ಈ ಸತ್ಯದರ್ಶನಕ್ಕೆ ಕಾರಣವಾದ ಕನಸಿನ ಲೊಕಕ್ಕೆ ಕರೆದೊಯ್ಯಲು ಯಾವುದೇ ಪುಸ್ತಕ ತರದಂತೆ ಮಾಡಿದ ಮರೆವಿಗೊಂದು ಧನ್ಯವಾದ ಹೇಳಲೇ!!??

ಲೇಖಕರ ಕಿರುಪರಿಚಯ
ಶ್ರೀ ಆಶ್ರಿತ್ ಎಸ್.

ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾದ ಇವರು ಕನ್ನಡ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದಾರೆ. ಪ್ರಸ್ತುತ ಮಣಿಪಾಲ್‍ ವಿಶ್ವವಿದ್ಯಾನಿಲಯದಲ್ಲಿ ಬಿ.ಬಿ.ಎಂ. ವ್ಯಾಸಂಗ ಮಾಡುತ್ತಿದ್ದಾರೆ.

Blog  |  Facebook  |  Twitter

ಗುರುವಾರ, ನವೆಂಬರ್ 20, 2014

ದೇವರ ದಾಸಿಮಯ್ಯ

ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಕವಾಗಿಯೂ ಅತ್ಯಂತ ಸಮುದ್ಧವಾದ ದೇಶ 'ಭಾರತ'. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.

ಅಂತಹ ಸಾಧುಗಳಲ್ಲೊಬ್ಬರು 'ಶ್ರೀ ದೇವರ ದಾಸಿಮಯ್ಯ'. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, 10ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಹೌದು. ಹಾಗಾಗಿ ಈ ಮಹರ್ಷಿಯ ಒಂದು ಕಿರುಪರಿಚಯ ಹಾಗೂ ಇವರ ಕೃತಿಗಳ ಬಗ್ಗೆ ಚುಟುಕಾದ ಪಕ್ಷಿನೋಟವನ್ನು ನೀಡಲು ಪ್ರಯತ್ನಿಸುತ್ತೇನೆ!

ದೇವರ ದಾಸಿಮಯ್ಯ (ದೇವಲ ಮಹರ್ಷಿ) ಸರಿ ಸುಮಾರು 10ನೇ ಶತಮಾನದವರು. ಶೊರಾಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.

ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.

ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ 'ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆಯನ್ನು ತಿಳಿಸು..'

ಮಹದಾನಂದದಿಂದ ಋಷಿ ವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: 'ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ...'

ಶಿವನು: 'ದಾಸಿಮಯ್ಯ .. ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ..'

ಶಿವನ ಕೃಪೆಗೆ ಪಾತ್ರನಾದ ಅಸಿತ ದೇವಲನು (ದಾಸಿಮಯ್ಯ), ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ. ವಸ್ತ್ರವು ಜನರ ಮಾನವನ್ನು ಕಾಪಾಡುವ ಮತ್ತು ದೇಹಕ್ಕೆ ರಕ್ಷಣೆಕೊಡುವ ಭಗವಂತನ ಒಂದು ವರಪ್ರದಾನವೆಂದು ತಿಳಿದ ದಾಸಿಮಯ್ಯ ವಸ್ತ್ರ ನಿರ್ಮಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ‍್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.

ದಾಸಿಮಯ್ಯರ ಚಿತ್ರಗಳನ್ನು ಗಮನಿಸಿ , ಜನಿವಾರ ತೊಟ್ಟ ಮುನಿ-ವರ್ಯರ ಎಡಗೈಯಲ್ಲಿ ಕಮಂಡಲ ಹಾಗೂ ಬಲಗೈಯಲ್ಲಿ ಬಟ್ಟೆ ಕಾಣಬಹುದು. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದರು.

ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ) ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವು ಬುದ್ಧಿಜೀವಿಗಳು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ. ಅಂತಹವರಲ್ಲಿ ಒಬ್ಬರಾದ ಶ್ರೀ ಚಿನ್ಮೂಲಾದ್ರಿಯವರು, ದೇವಾಂಗರ ವಚನಗಳನ್ನು, ಅರ್ಥ- ಸಾರಾಂಶಗಳೊಂದಿಗೆ ಬಿತ್ತರಿಸುತ್ತಿದ್ದಾರೆ. ಇವುಗಳಲ್ಲಿ ಕೆಲವೊಂದು ವಚನಗಳನ್ನು ಈ ಲೇಖನದಲ್ಲಿ ನಮೂದಿಸಿದ್ದೇನೆ!

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗದ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ

--

ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು

--

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ವಾಯು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ

--
 
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ

--

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ

ಸಮಾಜದ ಒಳಿತಿಗಾಗಿ ವಸ್ತ್ರವನ್ನು ಅರ್ಪಿಸಿ, ತಮ್ಮ ಜೀವನ ಶೈಲಿಯಿಂದ ಇತರರಿಗೆ ಮಾರ್ಗದರ್ಶಿಯಾಗಿ, ವಚನಗಳ ಮೂಲಕ ಸನ್ಮಾರ್ಗ, ಬದುಕಿನ ರೀತಿ-ನೀತಿ ತಿಳಿಹೇಳಿದ ದೇವರ ದಾಸಿಮಯ್ಯರಿಗೆ, ಶರಣು ಶರಣೆಂದೆ!!!

ಲೇಖಕರ ಕಿರುಪರಿಚಯ
ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರ

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಒಲವು ಹಾಗೂ ಗೌರವ ಹೊಂದಿರುವ ಇವರಿಗೆ ಸಂಗೀತದಲ್ಲೂ ವಿಶೇಷ ಆಸಕ್ತಿ.

Blog  |  Facebook  |  Twitter

ಬುಧವಾರ, ನವೆಂಬರ್ 19, 2014

ಕಾಲುಬಾಯಿ ರೋಗ - ನಿರ್ಮೂಲನೆ ಸಾದ್ಯವೇ?

ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಗಳಲ್ಲಿ ಕಾಲುಬಾಯಿ ಜ್ವರ ಭೀಕರವಾದುದು. ದೇಶದಲ್ಲಿ ಪ್ರತಿ ವರ್ಷ ಈ ರೋಗೋದ್ರೇಕದಿಂದಾಗುವ ಹಾನಿ 20,000 ಕೋಟಿ ರೂಪಾಯಿಗಳಷ್ಟು! ವಿಶ್ವ ಆರೋಗ್ಯ ಸಂಸ್ಥೆ (WHO) ಈ ರೋಗವನ್ನು ಶತಮಾನದ ಮಹಾಮಾರಿ ಎಂದಿದೆ.

ಭಾರತ ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಜಾಗತೀಕರಣ, ಉದಾರೀಕರಣ ನೀತಿಯಂತೆ ಆಮದು ರಪ್ತಿನಲ್ಲಿ ಭಾಗವಹಿಸುವ ರಾಷ್ಟ್ರಗಳು ಸಾಂಕ್ರಮಿಕ ರೋಗಗಳಿಂದ ಮುಕ್ತವಾಗಿರಬೇಕು ಎನ್ನುವ ನೀತಿ ಭಾರತದ ಪಾಲಿಗೆ ಉರುಳಾಗಿದೆ. ಕಾಲು ಬಾಯಿ ರೋಗ ಇಂದು ನಿನ್ನೆಯದಲ್ಲ. ಉತ್ತರಾಂಚಲ ರಾಜ್ಯದ ಮುಕ್ತೇಶ್ವರದಲ್ಲಿ ಈ ರೋಗದ ಸಂಶೋಧನಾ ಕೇಂದ್ರ 1943 ರಲ್ಲಿಯೇ ಸ್ಥಾಪಿತವಾಗಿದೆ. ಆದಾಗ್ಯೂ ಪ್ರತಿ ವರ್ಷ ಒಂದಿಲ್ಲೊಂದು ಭಾಗದಲ್ಲಿ ರೋಗೋದ್ರೇಕ ಕಂಡುಬರುತ್ತದೆ.  ಕಳೆದ ವರ್ಷ ಕೂಡ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿಯೂ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ರೋಗ ಮಾರಣಾಂತಿಕವಾಗಿ ಪರಿಣಮಿಸಿ ಸಾವಿರಾರು ರಾಸುಗಳನ್ನು ಬಲಿ ತೆಗೆದುಕೊಂಡಿದ್ದರಿಂದ ದೊಡ್ಡ ಸುದ್ದಿಯಾಗಿದೆ. ಸುದ್ದಿ ಹಳೆಯದಾಗಿ ಮಹತ್ವ ಕಳೆದುಕೊಳ್ಳುವ ಮುನ್ನ ರೋಗ ನಿರ್ಮೂಲನೆ ಬಗ್ಗೆ ಚಿಂತನೆ ನಡೆದು ಕಾರ್ಯರೂಪಕ್ಕೆ ಬಂದರೆ ಒಳಿತು. 

ಕಾಲುಬಾಯಿ ಬೇನೆ, ಸೀಳು ಗೊರಸು ಹೊಂದಿದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಅಲ್ಲದೇ ವನ್ಯ ಜೀವಿಗಳಲ್ಲಿಯೂ ಕಂಡು ಬರುತ್ತದೆ. ಶುದ್ಧ ವಿದೇಶಿ ಹಾಗೂ ಮಿಶ್ರತಳಿ ರಾಸುಗಳಲ್ಲಿ ರೋಗದ ತೀವ್ರತೆ ಹೆಚ್ಚು. ರೋಗಕ್ಕೆ ಕಾರಣವಾದ ವೈರಾಣುವಿನಲ್ಲಿ ಏಳು ಪ್ರಬೇಧಗಳಿದ್ದು, ಇವುಗಳ ಮಧ್ಯ-ರಕ್ಷಣೆ (Cross Protection) ಇಲ್ಲದ ಕಾರಣ ಪ್ರತಿಯೊಂದು ಪ್ರಬೇಧವೂ ಒಂದೊಂದು ರೋಗವೇ ಸರಿ. ಭಾರತದಲ್ಲಿ ಎ, ಓ, ಹಾಗೂ ಏಷ್ಯಾ-1 ಪ್ರಬೇಧಗಳು ರೋಗವುಂಟು ಮಾಡುತ್ತವೆ.

ಜಾನುವಾರು ಜಾತ್ರೆ ಅಥವಾ ಮಾರುಕಟ್ಟೆಗಳು ಈ ರೋಗದ ಆಶ್ರಯ ತಾಣಗಳಿದ್ದಂತೆ. ದೂರದ ಸಾಗಾಣಿಕೆಯಿಂದ ಆಗುವ ಒತ್ತಡ, ಬಂದ ನಂತರ ವಾತಾವರಣ ಹಾಗೂ ಆಹಾರ ಕ್ರಮದ ವ್ಯತ್ಯಾಸಗಳಿಂದ ಒತ್ತಡದಲ್ಲಿರುವ ಲಸಿಕೆ ಹಾಕಿಸದ ಜಾನುವಾರುಗಳು ರೋಗಕ್ಕೆ ಮೊದಲು ಬಲಿಯಾಗುತ್ತವೆ. ರೋಗದಿಂದ ನರಳುತ್ತಿರುವ ಪ್ರಾಣಿಯ ಜೊಲ್ಲು, ವಿಸರ್ಜಿತ ದ್ರವ, ಕಲುಷಿತ ನೀರು, ಮೇವು, ಆಹಾರ, ಇತ್ಯಾದಿಗಳಿಂದ ಪಕ್ಕದ ಮನೆಯ ಜಾನುವಾರುಗಳು ನಂತರ ಪಕ್ಕದ ಊರು, ಹೀಗೆ ತೀವ್ರಗತಿಯಲ್ಲಿ ವ್ಯಾಪಕವಾಗಿ ರೋಗ ಹರಡುತ್ತದೆ. ಅಲ್ಲದೇ ಕಲುಷಿತ ಗಾಳಿ, ಕೊಟ್ಟಿಗೆಯಲ್ಲಿ ಕೆಲಸ ಮಾಡುವರು, ರೋಗ ಪೀಡಿತ ಪ್ರಾಣಿಗಳ ಸಾಗಾಣಿಕೆ, ನೊಣ, ಸೊಳ್ಳೆ, ಕಾಗೆ, ಹಕ್ಕಿ-ಪಕ್ಷಿಗಳ ಮೂಲಕ ಸಹಾ ರೋಗ ಹರಡುತ್ತದೆ. ಅಲ್ಲದೇ ರೋಗಪೀಡಿತ ಕುರಿ ಹಾಗೂ ಹಂದಿಗಳಿಂದ ವೈರಾಣು ಅತ್ಯಧಿಕ ಪ್ರಮಾಣದಲ್ಲಿ ವಿಸರ್ಜಿತವಾಗಿ ರೋಗ ಹರಡುತ್ತದೆ. ಇದು ವೈರಸ್‌ನಿಂದ ಬರುವ ರೋಗವಾಗಿರುವುದರಿಂದ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುಂಜಾಗೃತಾ ಲಸಿಕೆಯೇ ಮದ್ದು. ರೋಗ ಬಂದ ಪ್ರಾಣಿಗಳಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ. (ನಾಟಿ ದನಗಳಲ್ಲಿ ಶೇ. 2 ಹಾಗೂ ಮಿಶ್ರತಳಿ ಹಾಗೂ ಕರುಗಳಲ್ಲಿ ಶೇ. 10-20 ರಷ್ಟು; ಆದರೆ ಈ ವರ್ಷ ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡ ರೋಗದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದಿದ್ದು ವಿಶೇಷ). ರೋಗದಿಂದ ನರಳಿ ಗುಣಮುಖ ಹೊಂದಿದರೂ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದು, ಎತ್ತುಗಳಲ್ಲಿ ಕೆಲಸದ ಸಾಮರ್ಥ್ಯ ಕುಂದುವುದು, ಗರ್ಭಪಾತ, ಬರಡಾಗುವುದು, ಇತ್ಯಾದಿ ಪರಿಣಾಮಗಳಿಂದ ಆರ್ಥಿಕ ಹಾನಿ ಸಂಭವಿಸುತ್ತದೆ. ಡಬ್ಲೂ. ಹೆಚ್. ಒ. ವರದಿಯಂತೆ ಪ್ರತಿ ವರ್ಷ ಭಾರತದಲ್ಲಿ ಈ ಕಾಯಿಲೆಯಿಂದಾಗುವ ಆರ್ಥಿಕ ಹಾನಿ 20,000 ಕೋಟಿ ರೂಪಾಯಿಗಳು!

ಈ ರೋಗದ ನಿರ್ಮೂಲನೆಗೆ ಕೇಂದ್ರ ಪುರಷೃತ ಕಾಲುಬಾಯಿ ರೋಗ ನಿಯಂತ್ರಣ (ಎಫ್. ಎಂ. ಡಿ. ಸಿ. ಪಿ.) ಯೋಜನೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ (ಫೆಬ್ರವರಿ-ಮಾರ್ಚ್ ಹಾಗೂ ಆಗಸ್ಟ್-ಸೆಪ್ಟೆಂಬರ್) ಉಚಿತ ಲಸಿಕಾ ಕಾರ್ಯಕ್ರಮ ರಾಜ್ಯದಲ್ಲಿ 2011 ರಿಂದಲೇ ಜಾರಿಯಲ್ಲಿದ್ದು ಐದನೇ ಹಂತ ಪೂರ್ಣಗೊಂಡಿದೆ. ಆದಾಗ್ಯೂ ಈ ವರ್ಷ 20,000 ಕ್ಕೂ ಹೆಚ್ಚು ಜಾನುವಾರುಗಳಿಗೆ ರೋಗೊದ್ರೇಕ ಕಂಡುಬಂದಿದ್ದು ಕಳವಳಕಾರಿ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರೋಗೋದ್ರೇಕ ಕಂಡದ್ದು ಈಗಲೇ. ಲಸಿಕಾ ಕಾರ್ಯಕ್ರಮ ಜಾರಿಯಲ್ಲಿದ್ದಾಗಲೇ ರೋಗೋದ್ರೇಕ ಕಾಣಿಸಿಕೋಡಿದ್ದಕ್ಕೆ ಕಳಪೆ ಗುಣಮಟ್ಟದ ಲಸಿಕೆ ಕಾರಣವೇ? ಅಸಮರ್ಪಕ ಲಸಿಕಾ ವಿಧಾನ ಅಥವಾ ರೋಗಕ್ಕೆ ಕಾರಣವೆಂದು ಹೇಳುವ 'ಓ' ಪ್ರಬೇಧದ ರೂಪಾಂತರ (Mutation) ಕಾರಣವೇ? ಸಂಬಂದಿಸಿದ ವಿಜ್ಞಾನಿಗಳು ಅಥವಾ ಸರ್ಕಾರ ರಚಿಸಿದ ಉನ್ನತ ಮಟ್ಟದ ತಜ್ಞರ ಸಮಿತಿಯೇ ಉತ್ತರಿಸಬೇಕು.

ರೋಗ ನಿರ್ಮೂಲನೆಗೆ ಇರುವ ಅಡಚಣೆಗಳು
ರೋಗಕ್ಕೆ ಕಾರಣವಾದ ವೈರಾಣು ಏಳು ಪ್ರಬೇಧಗಳನ್ನು ಹೊಂದಿದ್ದು ಅತಿ ಬಲಿಷ್ಠವಾಗಿದೆ. ರೋಗ ಕಾಣಿಸಿಕೊಂಡ ಜಾಗದಿಂದ 60 ಕಿ.ಮೀ. ದೂರ ಗಾಳಿಯಲ್ಲಿ ಚಲಿಸಬಲ್ಲದು. ರೋಗದಿಂದ ನರಳಿ ಗುಣಮುಖ ಹೊಂದಿದ ಪ್ರಾಣಿಗಳ ದೇಹದಲ್ಲಿ ಮೂರು ವರ್ಷದವರೆಗೆ ಇದ್ದು ರೋಗ ಹರಡುವ ಸಾಮರ್ಥ್ಯ ಹೊಂದಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಆ ಪ್ರದೇಶದ ಎಲ್ಲ ಜಾನುವಾರುಗಳನ್ನೂ ಸಾಯಿಸುತ್ತಾರೆ. ಅದು ನಮ್ಮ ದೇಶದಲ್ಲಿ ಆಗದ ಮಾತು. ಲಸಿಕೆಯನ್ನು ಶೀತಲ (4 ಡಿಗ್ರೀ ಸೆಲ್ಸಿಯಸ್) ವಾತಾವರಣದಲ್ಲಿ ಸಂಗ್ರಹಿಸಿ ಉಪಯೋಗಿಸಿದರೆ ಮಾತ್ರ ಅದು ಫಲಕಾರಿ. ಕೇವಲ ನಾಲ್ಕಾರು ಗಂಟೆಗಳವರೆಗೆ ವಿದ್ಯುತ್ ಸರಬರಾಜು ಇರುವ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಈ ಕೋಲ್ಡ್ ಚೈನ್ ನಿರ್ವಹಣೆ ಸಾಧ್ಯವಿಲ್ಲ. ಅಂತಹ ಲಸಿಕೆ ಹಾಕಿದರೆ ರೋಗನಿರೋಧಕ ಶಕ್ತಿ ಎಲ್ಲಿಂದ ಬರಬೇಕು? ಅತಿವೃಷ್ಟಿ, ಅನಾವೃಷ್ಟಿ, ಬರಗಾಲದಿಂದ ತತ್ತರಿಸುವ ಭಾರತದಂತಹ ದೇಶದಲ್ಲಿ ಪ್ರಾಣಿಗಳ ವಲಸೆ ಸಾಮಾನ್ಯ. ಇದನ್ನು ತಡೆದರೆ ರೋಗ ತಹಬಂದಿಗೆ ಬರುತ್ತದೆ. ಆದರೆ ಪ್ರಾಣಿಗಳ ವಲಸೆ ತಡೆಯುವುದು ಸುಲಭವೇ? ಸುಮಾರು 50 ಬಗೆಯ ವನ್ಯ ಜೀವಿಗಳೂ ಸೇರಿದಂತೆ ಸೀಳು ಗೊರಸುಗಳುಳ್ಳ ಎಲ್ಲ ಪ್ರಾಣಿಗಳಿಗೂ ಈ ರೋಗ ಬರುತ್ತದೆ. ಅಲ್ಲದೇ ಒಂದು ಜಾತಿಯ ಪ್ರಾಣಿಯಿಂದ ಇನ್ನೊಂದಕ್ಕೆ ಹರಡುತ್ತದೆ. ಅಂದರೆ ಹಂದಿಗಳಿಗೆ ರೋಗ ಬಂದರೆ ಅದರ ಸಂಪರ್ಕಕ್ಕೆ ಬರುವ ಹಸು ಎಮ್ಮೆಗಳಿಗೆ ಬರುತ್ತದೆ. ಅದೇ ರೀತಿ ರೋಗವಿರುವ ಹಸು ಎಮ್ಮೆಗಳು ಕಾಡಿನಲ್ಲಿ ಮೇವುವಾಗ ಕಾಡು ಪ್ರಾಣಿಗಳಿಗೆ ಹರಡುತ್ತದೆ. ಈ ರೀತಿ ನೆಟ್‌ ವರ್ಕ್ ಹೊಂದಿದ ರೋಗವನ್ನು ತಡೆಯುವುದು ಕಷ್ಟ. ಪ್ರಸ್ತುತ ಜಾರಿಯಲ್ಲಿರುವ ಲಸಿಕಾ ಕಾರ್ಯಕ್ರಮ ಎಮ್ಮೆ ದನಗಳಿಗೆ ಮಾತ್ರ ಸಿಮಿತವಾಗಿದೆ. ಅಲ್ಲದೆ, ಕಸಾಯಿಖಾನೆಗಳು ವೈರಾಣು ಬ್ಯಾಂಕುಗಳಿದ್ದಂತೆ. ಇಲ್ಲಿಂದ ಹೊರಡುವ ಮಾಂಸ ರೋಗಾಣುಗಳನ್ನು ಹೊರ ರಾಜ್ಯ ಅಥವಾ ಹೊರ ದೇಶಗಳಿಗೆ ಸುಲಭವಾಗಿ ಕೊಂಡೊಯ್ಯಬಹುದು.

ಲಸಿಕೆ ಹಾಕಿಸಿಕೊಂಡ ಜಾನುವಾರುಗಳಿಗೆ ಜ್ವರ, ಗರ್ಭಪಾತ, ಹಾಲು ಕಡಿಮೆಯಾಗುತ್ತದೆ ಎನ್ನುವ ನೆಪ ಹೇಳಿ ಲಸಿಕೆ ಹಾಕಿಸಿಕೊಳ್ಳಲು ಕೆಲವು ಗೋಪಾಲಕರು ನಿರಾಕರಿಸುತ್ತಾರೆ. ನೂರಕ್ಕೆ ನೂರರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸದಿದ್ದರೆ ರೋಗ ನಿರ್ಮೂಲನೆ ಸಾಧ್ಯವಿಲ್ಲ.

ನಿರ್ಮೂಲನೆ ಹೇಗೆ?

ರೋಗದ ಬಗ್ಗೆ ಆಳವಾದ ಸಂಶೋಧನೆ, ಶಿಸ್ತುಬದ್ಧ ಕಾರ್ಯಯೋಜನೆ, ಗುಣಮಟ್ಟದ ಸುರಕ್ಷಿತ ಲಸಿಕೆಯ ಅವಶ್ಯಕತೆ ಉಂಟು. ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ನುರಿತ ತಜ್ಞರು ಹಾಗೂ ಸಿಬ್ಬಂದಿಗಳ ತಂಡ ರಚಿಸಿ ನೂರಕ್ಕೆ ನೂರರಷ್ಟು ಲಸಿಕೆ ಹಾಕುವಂತೆ ಕ್ರಮ ಜರುಗಿಸಬೇಕು. ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಗೆ ಹನಿ ಹಾಕುವ (ಪಲ್ಸ್ ಪೋಲಿಯೋ ಮಾದರಿ ಲಸಿಕೆ) ಅಭಿವೃದ್ಧಿಗೊಂಡರೆ ಈ ಕಾರ್ಯ ಸುಲಭವಾಗುವುದು. ಜಾನುವಾರು ಮಾಲೀಕರಿಗೆ ರೋಗದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದರ ಜೊತೆಗೆ ಲಸಿಕೆ ಹಾಕಿಸುವುದು ಕಡ್ಡಾಯಗೊಳಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಈ ಬಗ್ಗೆ ಸೂಕ್ತ ನಿಗಾ ಅಗತ್ಯ. ಕಾನೂನು ಬಾಹಿರ ಪ್ರಾಣಿಗಳ ವಲಸೆ ತಡೆಯುವುದು, ಪ್ರಾಣಿಜನ್ಯ ಆಹಾರ ವಸ್ತುಗಳ ಆಮದು-ರಪ್ತಿಗೆ ಮುನ್ನ ಸೂಕ್ತ ಪರೀಕ್ಷೆ ಅವಶ್ಯ. ರೋಗ ಕಂಡುಬಂದಾಗ ಜಾನುವಾರು ಸಾಗಾಣಿಕೆಯನ್ನು ಸ್ಥಗಿತಗೊಳಿಸುವುದು/ನಿಯಂತ್ರಿಸುವುದು. ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲಿಂದಲ್ಲಿ ಬಿಸಾಡದೇ ಸೂಕ್ತ ರೀತಿಯಲ್ಲಿ ಶವಸಂಸ್ಕಾರ ಮಾಡುವುದೂ ಕೂಡ ಅತಿ ಮುಖ್ಯ.

ಲೇಖಕರ ಕಿರುಪರಿಚಯ
ಡಾ. ನಾಗರಾಜ  ಕೆ. ಎಂ.

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಅತ್ಯತ್ತುಮ ಯುವ ವಿಜ್ಞಾನಿ', 'ಶ್ರೇಷ್ಠ ಪಶುವೈದ್ಯ', 'ಸರ್ವಧಾರಿ ಸಮ್ಮಾನ' ಮುಂತಾದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 18, 2014

ಹೀಗೊಂದು ಸಾವಿನ ಸುತ್ತ

ಅಂದು ನೂಲು ಹುಣ್ಣಿಮೆ, ಬೆಳಿಗ್ಗೆ ಬರಬೇಕಿದ್ದ ರತ್ನ ಬರಲೇ ಇಲ್ಲ. ರತ್ನ ನಮ್ಮ ಮನೆಕೆಲಸದವಳು. ನೋಡಲು ಕಪ್ಪಿದ್ದರೂ ಆಕರ್ಷಕ ಮೈಕಟ್ಟಿನ ಹೆಂಗಸು, ಕಡಿಮೆ ಮಾತು ಅಚ್ಚುಕಟ್ಟು ಕೆಲಸ ಆಕೆಯದು. ತನ್ನ ಪಾಡಿಗೆ ಕೆಲಸ ಮುಗಿಸಿ ಮರಳುತ್ತಿದ್ದಳು. ನಾನೆಂದೂ ಅವಳ ವೈಯಕ್ತಿಕ ಬದುಕಿನ ಬಗ್ಗೆ ಕೆದಕಿದವಳಲ್ಲ. ಅಸಲು ನನಗೆ ಅದರ ಬಗ್ಗೆ ಆಸಕ್ತಿಯೂ ಇರಲಿಲ್ಲ; ಕೇಳಲು ಸಮಯವೂ ಇರಲಿಲ್ಲ. ಅವಳ ಗಂಡ ಕಟ್ಟಡದ ಕಂಬಿ ಕಟ್ಟುವ ಕೆಲಸ ಮಾಡುವವನು, ಅವಳಿಗೆ ಇಬ್ಬರು ಗಂಡು ಮಕ್ಕಳು, ಅವರಲ್ಲಿ ಹಿರಿಯ ಅವಳ ಊರಲ್ಲಿ ಅಜ್ಜಿಯ ಮನೆಯಲ್ಲಿದ್ದು ಓದುತ್ತಿದ್ದ. ಇನ್ನೊಬ್ಬ ಮಗ ನನ್ನ ಮಗಳ ವಯಸ್ಸಿನವನು, ಅವಳ ಜೊತೆಯಲ್ಲಿದ್ದ. ಅವನ ಮೇಲೆ ವಿಪರೀತ ಕನಸುಗಳನ್ನು ಹೊಂದಿದ್ದಳೊ ಏನೋ, ಸರಕಾರಿ ಶಾಲೆಗೆ ಸೇರಿಸದೆ ಅವಳ ಮನೆ ಹತ್ತಿರದ ಖಾಸಗಿ ಶಾಲೆಗೆ ಸೇರಿಸಿದ್ದಳು.. ಇಷ್ಟು ವಿಷಯವಷ್ಟೇ ನನಗೆ ಗೊತ್ತಿದ್ದದ್ದು..

ಮುನ್ನಾ ದಿನ ಸಂಜೆ ಕೆಲಸ ಮುಗಿಸಿ ಹೋಗುವಾಗ ಮರುದಿನ ಬರದಿರುವ ಕುರಿತು ಏನೂ ಹೇಳಿರಲಿಲ್ಲ. ಆದರೆ ಗಂಟೆ ಎಂಟಾದರೂ ಅವಳು ಬರದಿದ್ದಾಗ ಅವಳು ಬರುವ ಕುರಿತು ಅನುಮಾನ ಕಾಡಿತು. ಛೇ! ಒಂದು ದಿನ ಆರಾಮಾಗಿ ಇರೋಣವೆಂದು ಕೆಲಸಕ್ಕೆ ರಜ ಹಾಕಿಕೊಂಡರೆ ರಜೆಯ ಮಜವನ್ನು ಸವಿಯಲು ಬಿಡದವಳ ಕುರಿತು ವಿಪರೀತ ಸಿಟ್ಟು ಬಂತು. ಆದರೇನು ಮಾಡುವುದು? ಅವಳಿಗೆಂದು ಕಾದಿರಿಸಿದ್ದ ಕೆಲಸವನ್ನು ಮಾಡಲಿರದಾದೀತೇ! ಸರಿ ಇನ್ನೇನು ಅವಳನ್ನು ಮನದಲ್ಲೇ ಶಪಿಸುತ್ತ ಪಾತ್ರೆ ತೊಳೆದಿದ್ದಾಯಿತು. ನೆಲವನ್ನು ಒರೆಸದೇ ಬಿಡಲಾದೀತೇ? ಆದರೂ ದೂರದ ಆಸೆ, ಬಂದರೂ ಬರಬಹುದು. ಸುಳಿವೇ ಇಲ್ಲ. ನೆಲ ಒರೆಸುತ್ತ ಅಂದುಕೊಂಡೆ.... ನಾಳೆ ಬರಲಿ ಅವಳು, ಸರಿಯಾಗಿ ಮುಖದ ಮೇಲೆ ಹೊಡೆದ ಹಾಗೆ ಹೇಳಬೇಕು; ನಿನ್ನೆ ನೀನು ಬರದಿದ್ದುದೇ ಒಳ್ಳೆಯದಾಯಿತು, ಒಂದು ದಿನವಾದರೂ ಮನೆ ಸ್ವಚ್ಛವಾಯಿತು.... ಅವಳು ಬರಲಾರದ ಕಾರಣ ನಾನೇ ಎಲ್ಲ ಮಾಡಿಕೊಳ್ಳಬೇಕಾದ ದುಃಖಕ್ಕೆ ನನಗೆ ನಾನೇ ಸಮಾಧಾನ ಮಾಡಿಕೊಂಡ ಪರಿ ಅದು. ನಿಜವಾದ ಪರಿಸ್ಥಿತಿ ಹೇಗಿತ್ತೆಂದರೆ ಅವಳ ಬಗ್ಗೆ, ಅಥವಾ ಅವಳ ಕೆಲಸದ ಬಗ್ಗೆ ಒಂದೂ ಮತಾಡುವ ಹಾಗೇ ಇರಲಿಲ್ಲ, ಹಾಗಿತ್ತು ಅವಳ ಕೆಲಸ ಮತ್ತು ಅವಳ ನಡುವಳಿಕೆ.

ಎಲ್ಲ ಕೆಲಸ ಮುಗಿಸಿದ ಮೇಲೆ ಅನ್ನಿಸಿತು ಅವಳು ನಾಳೆಯೂ ಬಾರದಿದ್ದರೆ!!! ವಿಚಾರಿಸಿ ನೋಡೋಣವೆಂದು ಅವಳೇ ನೀಡಿದ್ದ ನಂಬರಿಗೆ ಕಾಲ್ ಮಾಡಿದೆ. ರಿಂಗಾದರೂ ಅತ್ತ ಕಡೆಯಿಂದ ಸುಳಿವಿಲ್ಲ. ನಾನೂ ಬಿಡಲಿಲ್ಲ ಒಂದಲ್ಲ, ಎರಡಲ್ಲ, ಹತ್ತು ಬಾರಿಯಾದರೂ ಮಾಡಿರಬೇಕು, ಅಂತೂ ನನ್ನ ಕಾಟಕ್ಕೋ ಏನೋ ಆಕಡೆಯಿಂದ ಕ್ಷೀಣವಾದ ಧ್ವನಿ ಕೇಳಿಸಿತು... ನಿಧಾನವಾಗಿ.. ಅರ್ಧಗಂಟೆ ಬಿಟ್ಟುಮಾಡಿ.. ಆ ಧ್ವನಿ ಅವಳ ಗಂಡನದು. ಅವಳು ನೀಡಿದ್ದ ಆ ನಂಬರ್ ಅವಳ ಗಂಡನದು. ಅವಳು ಬರದಿದ್ದಾಗ ಅದೇ ನಂಬರಿಗೆ ವಿಚಾರಿಸುತ್ತಿದ್ದೆನಲ್ಲ ಹಾಗಾಗಿ ಗೊತ್ತಿತ್ತು. ಅವನೂ ಕಡಿಮೆಯೇನಿರಲಿಲ್ಲ, ತುಂಬ ಸಲ ಅವಳು ಕೆಲಸಕ್ಕೆ ಬಂದಾಗ ಕಾರಣವೇ ಇಲ್ಲದೆ ಕಾಲ್ ಮಾಡುತ್ತಿದ್ದ... ತುಂಬ ಸಲ ಅವನ ಬಗ್ಗೆ ಅನುಮಾನ ಕಾಡಿತ್ತು. ಬಹುಶಃ ಅವನು ಸರಿಯಿಲ್ಲ. ಎಂದೋ ಒಮ್ಮೆ ಅವನ ಬಗ್ಗೆ ವಿಚಾರಿಸಿದಾಗ ಅವಳು ಹೇಳಿದ್ದು ಇಷ್ಟೇ.. ನಮ್ಮ ಯಜಮಾನರಿಗೆ ಯಾವುದೇ ಚಟವಿಲ್ಲ... ಹೋಗಲಿ ನನಗೇಕೆ ಎಂದು ಸುಮ್ಮನಾಗಿದ್ದೆ. ಇಂದು ಅವನ ಧ್ವನಿ ಕೇಳಿದಾಗ ಅನ್ನಿಸಿತು ಇವನೆಲ್ಲೋ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರಬೇಕು. ಅವನ ಕಾಲ್‌ ಗೋಸ್ಕರ ಎಷ್ಟು ಹೊತ್ತು ಕಾದರೂ ಬರಲೇ ಇಲ್ಲ.

ಅಂತೂ ಸಂಜೆ ಅವನ ಕಾಲ್ ಬಂತು. ಅವನು ಹೇಳಿದ್ದು ಕೇಳಿ ನನ್ನ ಕಿವಿಯನ್ನು ನಾನು ನಂಬಲಾಗಲಿಲ್ಲ. ಕಾರ್ ಅಪಘಾತದಲ್ಲಿ ತೀರಿಕೊಂಡಳು, ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಎಂತಹ ದುರಂತ! ರತ್ನಳ ಸಾವನ್ನು ನಂಬುವ ಸ್ಥಿತಿಯಲ್ಲಿ ನಾನಿರಲೇ ಇಲ್ಲ. ಕಾರ್ ನವರ ಮೇಲೆ ಕೇಸಾದರೂ ಹಾಕಬೇಕಿತ್ತು ಎಂದು ನನಗೆ ಆ ಸಂದರ್ಭದಲ್ಲಿ ಹೊಳೆದ ಮಾತನ್ನು ಹೇಳಿದೆ. ಅವನು ನೀಡಿದ ಪ್ರತಿಕ್ರಿಯೆ ಹೀಗಿತ್ತು - ಅವಳೇ ಇಲ್ಲವಾದ ಮೇಲೆ ಯಾರ ಮೇಲೆ ಕೇಸು ಹಾಕಿ ಏನು ಪ್ರಯೋಜನ?. ರತ್ನ ಹೋದ ದುಃಖದಲ್ಲಿಯೂ ಅವನ ಒಳ್ಳೆಯ ಗುಣ ನೆನೆದು ಅಭಿಮಾನವೆನಿಸಿತು.

ರತ್ನ ಮನೆಕೆಲಸದವಳು, ನಾವು ಮೊದಲು ಬಾಡಿಗೆಗಿದ್ದ ಮನೆಯ ಪಕ್ಕದ ಮನೆಗೂ ಕೆಲಸಕ್ಕೆ ಹೋಗುತ್ತಿದ್ದಳು. ನಾವು ನಮ್ಮ ಸ್ವಂತ ಮನೆಗೆ ಬಂದ ಮೇಲೆ ಅವರ ಜೊತೆಗಿದ್ದ ಸಂಪರ್ಕ ಕಡಿದುಹೋಗಿತ್ತು. ಅವಳ ಸಾವಿನ ವಾರ್ತೆಯ ಮರು ದಿನ ಆ ಮನೆಯ ಆಂಟಿ ಹೇಳಿದ ವಿಷಯ ಕೇಳಿ ಆಶ್ಚರ್ಯವೆನಿಸಿತು. ಅವಳದು ಸಹಜ ಸಾವಲ್ಲ! ಕೊಲೆ!! ಕೊಲೆಗಾರ ಬೇರೆ ಯಾರೂ ಅಲ್ಲ ಅವಳ ಗಂಡನೇ!!!! ಅವಳ ಸಾವಿನ ಬಗ್ಗೆ ಅಳುತ್ತ ಮಾತಾಡಿ ಅವಳೇ ಇಲ್ಲದ ಮೇಲೆ ಅವಳ ಅಪಘಾತಕ್ಕೆ ಕಾರಣರಾದವರಿಂದ ಬರುವ ಹಣ ತೆಗೆದುಕೊಂಡು ಏನು ಮಾಡಲಿ ಎಂದು ನಾನು ನಂಬುವಂತೆ ಮಾತಾಡಿದ್ದ ಅವಳ ಗಂಡನೇ ಅವಳನ್ನು ಸಾಯಿಸಿದ್ದು ಎಂದರೆ ನಾನು ನಂಬುವುದಾದರೂ ಹೇಗೆ?

ಅವಳ ಸಾವಿನ ನಂತರ ಅವನ ಕಾಲ್ ನನಗೆ ಬರತೊಡಗಿತು. ಮಾತನಾಡಲು ಭಯವಾಗಿ ನಾನು ರಿಜೆಕ್ಟ್ ಲೀಸ್ಟಿಗೆ ಹಾಕಿಬಿಟ್ಟೆ. ಆದರೂ ಅವನು ನನ್ನನ್ನು ಸಂಪರ್ಕಿಸಲು ನಡೆಸುತ್ತಿದ್ದ ಪ್ರಯತ್ನ ನನ್ನ ಮೊಬೈಲ್ ತೋರಿಸುತ್ತಿತ್ತು. ಕೊನೆಗೆ ನನ್ನ ಪತಿಗೆ ಕೊಟ್ಟು ಮಾತಾಡಿಸಿದ್ದಾಯಿತು. ರತ್ನ ಮನೆಕೆಲಸ ಮಾಡಿದ ಬಾಕಿ ವಸೂಲಿಗಾಗಿ ಕಾಲ್ ಮಾಡಿದ್ದು ಅವನು. ಆದರೆ ನಿಜ ಸಂಗತಿ ಎಂದರೆ ಅವಳೇ ನಮಗೆ ಕೊಡುವುದು ಬಾಕಿ ಉಳಿದಿತ್ತು.. ಅದನ್ನೇ ಅವನಿಗೆ ಹೇಳಿದ ಮೇಲೆ ಅವನ ಕಾಲ್ ಬರುವುದು ನಿಂತಿತು.

ಆದರೆ ರತ್ನಳ ಸಾವನ್ನು ಮರೆಯುವುದು ಅಷ್ಟು ಸುಲಭಸಾಧ್ಯವಿರಲಿಲ್ಲ. ಅವಳ ಗಂಡ ಅವಳನ್ನು ಸಾಯಿಸಿದನೆಂದರೆ ನಂಬುವುದೂ ಸಾಧ್ಯವಿರಲಿಲ್ಲ. ಎಷ್ಟೋ ದಿನಗಳ ಮೇಲೆ ಅವಳ ನಾದಿನಿ ಸಿಕ್ಕವಳು ಅವಳ ಗಂಡನ ನಿಜರೂಪವನ್ನು ಬಹಿರಂಗಪಡಿಸಿದಳು. ಜೂಜಾಡಿ ಸಾಲ ಮಾಡಿಕೊಂಡಿದ್ದ ಅವನು ಅವಳ ಬಂಗಾರವನ್ನೆಲ್ಲ ಮಾರಿದ್ದನಂತೆ. ಹಣಕ್ಕಾಗಿ ಅವರಿಬ್ಬರ ನಡುವೆ ದಿನವೂ ಕದನ ನಡೆಯುತ್ತಿತ್ತಂತೆ. ಸಾಲದ್ದಕ್ಕೆ ಅವನಿಗೆ ಅವಳ ಮೇಲೆ ಅನುಮಾನವಂತೆ. ಇಷ್ಟೆಲ್ಲ ಕಾರಣಗಳ ಮಧ್ಯೆ ಆ ಮಧ್ಯರಾತ್ರಿ ಅವನು ಕಾದ ಕಬ್ಬಿಣವನ್ನು ಅವಳು ಮಲಗಿದ ಹೊತ್ತಿನಲ್ಲಿ ಅವಳ ಕತ್ತಿಗೆ ಇಟ್ಟುಸಾಯಿಸಿ, ನಂತರ ಸೀರೆಯಿಂದ ನೇಣುಹಾಕಿ ಅವಳೇ ಆತ್ಮಹತ್ಯೆ ಮಾಡಿಕೊಂಡಳೆಂದು ಗುಲ್ಲು ಹಬ್ಬಿಸಿದ್ದ. ವಿಷಯ ತಿಳಿದ ಅವಳ ಅಣ್ಣ ಅವಳ ಹೆಸರಲ್ಲಿದ್ದ ಅಲ್ಪಸ್ವಲ್ಪ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಅವಳ ಗಂಡನನ್ನು ಅವನು ಮಾಡಿದ ಪಾಪ ಕಾರ್ಯದಿಂದ ಮುಕ್ತಿಗೊಳಿಸಿದ್ದ..

ರತ್ನಳ ಸಾವಿನ ನಂತರ ನನಗೇನೋ ಮನೆಕೆಲಸದವರು ಸಿಕ್ಕಿದರು, ಬದಲಾದರು, ಒಬ್ಬರಲ್ಲ ನಾಲ್ವರು ಬಂದುಹೋದರು. ಅವರೆಲ್ಲರಲ್ಲಿ ಅವಳನ್ನು ಹುಡುಕುವ ನನ್ನ ಪ್ರಯತ್ನ ವಿಫಲವಾಯಿತು. ನನಗೇನೋ ಮನೆಕೆಲಸಕ್ಕೆ ಯಾರಾದರೂ ಸಿಗುತ್ತಾರೆ. ಆದರೆ ಅವಳ ಮಕ್ಕಳಿಗೆ ಯಾರು ಸಿಗುತ್ತಾರೆ? ಅವಳ ಮನೆ, ಊರು ಯಾವುದೂ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದೂ ನಾನು ಮಾಡುವುದೇನು? ಅವಳ ಸ್ವಂತದವರೇ ಅವಳ ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವಳ ಮಕ್ಕಳು ಅನಾಥಾಶ್ರಮದ ಪಾಲಾದರೆಂದು ಕೇಳಿಪಟ್ಟೆ. ಅವಳ ಗಂಡನೂ ಇನ್ನೊಂದು ಮದುವೆಯಾದನಂತೆ. ರತ್ನಳ ಪುಣ್ಯವೋ ಮಕ್ಕಳ ಅದೃಷ್ಟವೋ ಅವರು ಗಂಡು ಮಕ್ಕಳು.. ಎಲ್ಲಾದರೂ ಹೇಗಾದರೂ ಬೆಳೆಯುತ್ತಾರೆ.

ರತ್ನಳ ನೆನಪಾದಾಗಲೆಲ್ಲ ಹಲವು ಪ್ರಶ್ನೆಗಳು ಈಗಲೂ ಕಾಡುತ್ತಿರುತ್ತವೆ. ರತ್ನಳಂತೆ ದುರಂತದ ಸಾವನ್ನು ಎಷ್ಟು ಹೆಣ್ಣು ಮಕ್ಕಳು ಅನುಭವಿಸುತ್ತಾರೋ! ಅವರ ಸಾವಿನ ಕುರಿತು ಎಲ್ಲೂ ಸುದ್ದಿಯಾಗದೇ ಇತಿಹಾಸಕ್ಕೂ ಸೇರದೇ ಕಣ್ಮರೆಯಾಗುವವು. ಎಷ್ಟು ಘಟನೆಗಳು ಕಣ್ಣೆದುರಿಗೇ ನಡೆಯುತ್ತವೆಯೋ? ರತ್ನಳ ಮಕ್ಕಳಂತೆ ತಂದೆಯಿದ್ದೂ ಅನಾಥಾಶ್ರಮ ಸೇರುವ ಮಕ್ಕಳೆಷ್ಟೋ! ಅವಳ ಕೊಲೆಗಾರ ಗಂಡನಂತವರಿಗೆ ಏನೂ ವಿಚಾರಿಸದೆ ಮಗಳ ಮದುವೆಯಾದರೆ ಸಾಕೆಂದು ಹೆಣ್ಣು ನೀಡುವ ಮಾತಾಪಿತೃಗಳೆಷ್ಟೋ! ಹೋಗಲಿ, ಕೊಲೆಗಾರ ಗಂಡನೊಂದಿಗೆ ಯಾವುದೇ ಹಿನ್ನೆಲೆ ಗೊತ್ತಿಲ್ಲದೆ ಹಸೆಮಣೆ ಏರುವ ಮುಗ್ಧ ಕನ್ಯಾಮಣಿಯರೆಷ್ಟೋ! ನೆನೆಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ.

ರತ್ನ ಸತ್ತು ಒಂದು ವರ್ಷವಾಯಿತು. ಅವಳ ಸಾವಿನ ಬಗ್ಗೆ ಅವಳ ಸ್ವಂತದವರೇ ತಲೆಕೆಡಿಸಿಕೊಳ್ಳಲಿಲ್ಲ. ಅವಳ ಸಾವಿನಿಂದ ಅವರು ಕಳೆದುಕೊಂಡಿದ್ದರ ಬಗ್ಗೆ ಯೋಚಿಸದೇ ಅವಳ ಸಾವಿನ ನಂತರ ತಮಗೆ ಸಿಗಬಹುದಾದ ಲಾಭದ ಬಗ್ಗೆಯೇ ಯೋಚಿಸಿರಬಹುದು. ಅವಳ ಗಂಡನ ಮೇಲೆ ಕೇಸು ಹಾಕಿದರೆ ಕೋರ್ಟು ಕಛೇರಿ ಅಲೆಯಬೇಕಾದುದರ ಬಗ್ಗೆ ಅವರಿಗೆ ಚಿಂತೆಯಾಗಿರಬಹುದು. ನಾನೂ ಅಷ್ಟೇ ನಿಜಕ್ಕೂ ಅವಳ ಸಾವಿನ ಕಾರಣವೇನಿರಬಹುದು? ಎಂದಾಗಲಿ ಅಥವಾ ಅವಳ ಗಂಡನೇ ಕೊಲೆಗಾರನಾಗಿದ್ದರೆ ಅವನಿಗೆ ಶಿಕ್ಷೆ ಕೊಡಿಸುವುದರ ಕುರಿತಾಗಲೀ ಆಲೋಚಿಸಲಿಲ್ಲ. ಅವಳ ಸ್ವಂತದವರಿಗೇ ಬೇಕಿಲ್ಲದ ಗೊಡವೆ ನನಗೇಕೆ? ಎಂದು ಸುಮ್ಮನಾಗಿಬಿಟ್ಟೆ.

ನಿಜಕ್ಕೂ ರತ್ನಳನ್ನು ಮರೆಯಲೇ ಆಗುತ್ತಿಲ್ಲ. ಅವಳು ನಮ್ಮ ಮನೆಕೆಲಸ ಬಿಡುವುದಾಗಲೀ ಅವಳ ನಂತರ ಇನ್ನೊಬ್ಬರನ್ನು ಹುಡುಕುವುದರ ಕುರಿತಾಗಲೀ ಎಂದೂ ಆಲೋಚಿಸಿರಲಿಲ್ಲ. ಇನ್ನು ಅವಳ ಸಾವಿನ ಕಲ್ಪನೆ ಮೂಡುವುದಾದರೂ ಹೇಗೆ? ಹೀಗೊಂದು ಸಾವಿನ ಸುತ್ತ ನನ್ನ ಮನವು ಸುತ್ತುತ್ತಿರುವಾಗ ಕಾಲಿಂಗ್ ಬೆಲ್ ಸದ್ದಾಯಿತು. ಬಾಗಿಲು ತೆರೆದು ನೋಡಿದರೆ ನಿಂತಿದ್ದಳು; ಹೊಸದಾಗಿ ಬರುತಿದ್ದ ನಮ್ಮ ಮನೆಕೆಲಸದವಳು!!

ಲೇಖಕರ ಕಿರುಪರಿಚಯ
ಶ್ರೀಮತಿ ಮಮತಾ ಭಾಗ್ವತ್

ಮೂಲತಃ ಬೆಂಗಳೂರಿನವರಾದ ಇವರು ಕನ್ನಡ ಐಚ್ಛಿಕ ವಿಷಯವಾಗಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ಪ್ರಸ್ತುತ ಸರಕಾರಿ ಪ್ರೌಢ ಶಾಲೆ, ಬೇಗೂರು ಇಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಸೋಮವಾರ, ನವೆಂಬರ್ 17, 2014

ದಾಸವಾಣಿ: ಸಮಾಜ ಸುಧಾರಣೆಯಲ್ಲಿ ಹರಿದಾಸರ ಪಾತ್ರ

ಸಂಗೀತ ಪಿತಾಮಹರೆಂದೇ ಪ್ರಸಿದ್ಧರಾಗಿರುವ ಶ್ರೀ ಪುರಂದರದಾಸರನ್ನು 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಅವರ ಗುರುಗಳಾದ ವ್ಯಾಸರಾಯರು ಕರೆದಿದ್ದಾರೆ. ಅವರು ಬಾಲಕೃಷ್ಣನ ಲೀಲೆಗಳು, ಮಹಾ ವಿಷ್ಣುವಿನ ಅವತಾರಗಳು ಮತ್ತು ಮಹಾನ್ ಕಾರ್ಯಗಳು, ಇಹಲೋಕದ ನಶ್ವರತೆ ಮತ್ತು ಪರಲೋಕದ ಶಾಶ್ವತತೆ, ಇತ್ಯಾದಿ ಅನೇಕ ವಿಷಯಗಳನ್ನು ಕುರಿತು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ, ಹಾಡಿದ್ದಾರೆ. ಈ ಮಾತು ಕೇವಲ ಪುರಂದರದಾಸರಿಗೆ ಮೀಸಲಾಗದೆ ಇತರ ಹಲವಾರು ದಾಸ ಶ್ರೇಷ್ಠರಿಗೂ ಅನ್ವಯಿಸುತ್ತದೆ. ಆದರೆ, ಈ ಕಿರು ಲೇಖನದಲ್ಲಿ ನಾನು, ಪ್ರಾತಿನಿಧಿಕವಾಗಿ, ಇಬ್ಬರು ದಾಸವರೇಣ್ಯರಾದ ಪುರಂದರ ದಾಸರು ಮತ್ತು ಕನಕ ದಾಸರ ಸಮಾಜ ಸುಧಾರಣೆಯನ್ನು ಕುರಿತ ಕೀರ್ತನೆಗಳನ್ನು ಮಾತ್ರ ಪರಿಗಣಿಸಿದ್ದೇನೆ.

ಆಗಿನ (16ನೆಯ ಶತಮಾನದ ಕರ್ನಾಟಕದ) ಸಮಾಜದ ರೀತಿ ನೀತಿಯಲ್ಲಿ ಸುಧಾರಣೆ ತರುವುದರಲ್ಲಿ ಶ್ರೀ ಪುರಂದರದಾಸರ ಕೊಡುಗೆ ಅಪಾರ. ಇವರು ಈ ಕಾರ್ಯಕ್ಕೆ ಹಿಡಿದಿದ್ದ ಮಾರ್ಗವಾದರೂ ಯಾವುದು? ಎಲ್ಲರಿಗೂ ಮನಮುಟ್ಟುವ ನಾದೋಪಾಸನೆಯ ಮಾರ್ಗ, ಎಂದರೆ ಸಂಗೀತದ ಹಾದಿ. ಕೇವಲ ಭಾಷಣ ಮಾಡಿ ಜನರ ಮನಸ್ಸನ್ನು ಪರಿವರ್ತಿಸುವ ಬದಲು ಹರಿ ಪದಗಳ ಮೂಲಕ ಶ್ರೇಷ್ಠ ಬದುಕಿನ ವೈಶಿಷ್ಟ್ಯವನ್ನು ಎತ್ತಿ ಹಿಡಿದು ತೋರಿಸಿದ್ದಾರೆ.

ಉದಾಹರಣೆಗೆ: 'ರಾಗಿ ತಂದಿರಾ, ಭಿಕ್ಷಕೆ ರಾಗಿ ತಂದೀರ/ ಯೊಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಮಾತಾ ಪಿತೃಗಳ ಸೇವಿಪರಾಗಿ, ಅನ್ನ ಛತ್ರವನಿಟ್ಟವರಾಗಿ ಅನ್ಯವಾರ್ತೆಯ ಬಿಟ್ಟವರಾಗಿ, ಅನುದಿನ ಭಜನೆಯ ಮಾಡುವರಾಗಿ|| ರಾಗಿ ತಂದಿರಾ' - ಇದು ಪುರಂದರ ದಾಸರ ಒಂದು ಅತ್ಯಂತ ಜನಪ್ರಿಯ ಕೀರ್ತನೆ; ಈ ಕೀರ್ತನೆಯಲ್ಲಿ, 'ರಾಗಿ' ಎಂಬುದನ್ನು ಒಂದು ರೂಪಕವಾಗಿ ಬಳಸುತ್ತಾ, 'ಯೋಗ್ಯರಾಗಿ ಬದುಕಿ' ಎಂದು ಅವರು ಎಲ್ಲರಿಗೂ ಉಪದೇಶ ಮಾಡುತ್ತಾರೆ. 'ಯೋಗ್ಯ ಬದುಕು' ಎಂದರೆ 'ಮಾತಾಪಿತೃಗಳ ಸೇವೆ ಮಾಡುವುದು, ಅನ್ನದಾನ ಮಾಡುವುದು, ಮತ್ತು ಅವರಿವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಶ್ರೀ ಹರಿಯ ಭಜನೆಯನ್ನು ಸದಾ ಮಾಡುತ್ತಿರುವುದು'. ಇದು ಒಂದು ರೀತಿಯ ಬೋಧನೆಯ ಕ್ರಮ; ರೂಪಕಗಳ ಮೂಲಕ ಮಾಡುವ ಬೋಧನೆ. ಇದೇ ರೀತಿಯಲ್ಲಿ ಅವರು 'ಕಲ್ಲು ಸಕ್ಕರೆ ಕೊಳ್ಳಿರೋ' (ಇಲ್ಲಿ 'ಕಲ್ಲು ಸಕ್ಕರೆ' ಎಂದರೆ 'ಹರಿಭಕ್ತಿ'), 'ಡೊಂಕು ಬಾಲದ ನಾಯಕರೆ' (ಇಲ್ಲಿ ಡೊಂಕು ಬಾಲದವರೆಂದರೆ 'ಭಕ್ತಿಯಿಲ್ಲದವರು'), 'ಅಂಬಿಗ ನಾ ನಿನ್ನ ನಂಬಿದೆ, ಜಗದಂಬಾ ರಮಣ ನಿನ್ನ ನಂಬಿದೆ' (ಇಲ್ಲಿ 'ಅಂಬಿಗ'ನೆಂದರೆ ಈ ಸಂಸಾರ ಸಾಗರವನ್ನು ದಾಟಿಸುವಂತಹ ಪರಮಾತ್ಮ/ ವಿಷ್ಣು), ಇತ್ಯಾದಿ ಅಸಂಖ್ಯಾತ ಕೃತಿಗಳನ್ನು ರಚಿಸಿದ್ದಾರೆ.

ದಾಸವಾಣಿಯ ಮತ್ತೊಂದು ಕ್ರಮವೆಂದರೆ, ಆಗಿನ ಸಮಾಜದಲ್ಲಿ ನಡೆಯುತ್ತಿದ್ದುದನ್ನು ಕಂಡು, ಮನನೊಂದು ನೇರವಾಗಿ ಸಾರುವುದು: 'ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ/ ನಿತ್ಯ ದಾನವ ಮಾಡಿ ಫಲವೇನು,/ ಸತ್ಯ ಸದಾಚಾರ ಇಲ್ಲದವನು ಜಪ/ ಹತ್ತು ಸಾವಿರ ಮಾಡಿ ಫಲವೇನು' ಎಂದು. 'ಸದಾಚಾರ'ವೆಂದರೆ ಜಪ ಮಾಡುವುದು ಮಾತ್ರವಲ್ಲ; ಬದಲಿಗೆ ನಮ್ಮ ಜನ್ಮದಾತರ ಮನಸ್ಸನ್ನು ನೋಯಿಸುವಂತಹ ಯಾವ ಕೆಲಸವನ್ನೂ ಮಾಡದಿರುವುದು; ಅದೇ ನಿಜವಾದ ಜಪ. ಇದೇ ನೀತಿಯನ್ನು, ಕೆಲವು ಬಾರಿ ಕೋಪದಿಂದಲೂ ಅವರು ಕೂಗಿ ಹೇಳಿದ್ದಾರೆ: 'ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ/ ಮಡಿ ಎಲ್ಲಿ ಬಂತೆ ಭಿಕನಾಸಿ!// ಹುಟ್ಟುತ ಸೂತಕ ಸಾಯುತ ಸೂತಕ/ ನಟ್ಟ ನಡುವಿನಲ್ಲಿ ನಿಂತೆ ಭಿಕನಾಸಿ// ಮರುಳಾಟವೇಕೋ ಮನುಜ... ಕದ್ದು ಹೊಟ್ಟೆ ಹೊರೆಯುವವಗೆ ಶುದ್ಧ ಶೀಲ ವೃತ್ತಿಯೇಕೆ' ಇತ್ಯಾದಿ.

ಈ ಎರಡೂ ರೀತಿಗಳಲ್ಲಿ ಶ್ರೀ ಪುರಂದರದಾಸರು ಆಗಿನ ಸಮಾಜದಲ್ಲಿ ಸಾಮಾಜಿಕ ಪೀಡೆಗಳೆಂದೇ ಕರೆಯಲ್ಪಟ್ಟ ಜಾತೀಯತೆ, ಮಾನವೀಯ ಮೌಲ್ಯಗಳ ಅಧಃಪತನ, ಮೂಢ ನಂಬಿಕೆಗಳು, ಕಾಮದ ಮೋಹ, ಚಿನ್ನದ/ಭೂಮಿಯ ಮೋಹ, ಇತ್ಯಾದಿಗಳನ್ನು ಖಂಡಿಸುತ್ತಾ, ಊರೂರು ಸುತ್ತುತ್ತಾ, ಅವುಗಳ ನಿವಾರಣೆಗಾಗಿ ದಣಿವಿಲ್ಲದೆ ಶ್ರಮಿಸಿದರು.

ಇದೇ ಬಗೆಯ ಸಮಾಜ ಸುಧಾರಣೆಯನ್ನು ಕೈಗೊಂಡ ಮತ್ತೊಬ್ಬರು ದಾಸರೆಂದರೆ ಶ್ರೀ ಕನಕದಾಸರು. ಹುಟ್ಟಿನಿಂದ ಕುರುಬರಾಗಿದ್ದ ತಿಮ್ಮಪ್ಪನಾಯಕರನ್ನು ಇಡೀ ಊರಿನ ಜನರು ಬಹಿಷ್ಕರಿಸಿ, ದೇವಸ್ಥಾನದೊಳಗೆ ಪ್ರವೇಶ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಶ್ರೀ ಕೃಷ್ಣನೇ ಅವರಿದ್ದ ಕಡೆಗೆ ತಿರುಗಿ ದರ್ಶನ ನೀಡಿ ಅವರಿಗೆ ಮುಕ್ತಿ ದೊರಕಿಸಿಕೊಟ್ಟ ಪ್ರಸಂಗ ಎಲ್ಲರಿಗೂ ತಿಳಿದಿದ್ದೇ ಆಗಿದೆ. (ಉಡುಪಿಯ ಕೃಷ್ಣ ದೇವಸ್ಥಾನದ 'ಕನಕನ ಕಿಂಡಿ' ಪ್ರಸಂಗ). ಮೊದಲಿಗೆ ತಿಮ್ಮಪ್ಪನಾಯಕನಾಗಿದ್ದವರು ಹರಿದಾಸ ಚಳುವಳಿ ಸೇರಿ, ವ್ಯಾಸರಾಯರ ಶಿಷ್ಯನಾಗಿ, ಅವರಿಂದ ಕನಕದಾಸರೆಂದು ಕರೆಯಲ್ಪಟ್ಟರು. ಅವರೂ ನೂರಾರು ಕೃತಿಗಳನ್ನು ರಚಿಸಿ, ಕೇಳುಗರನ್ನು ಭಕ್ತಿಮಾರ್ಗದಲ್ಲಿ ಕರೆದೊಯ್ಯಲು ಅಹರ್ನಿಶಿ ಶ್ರಮಿಸಿದರು. ಉದಾಹರಣೆಗೆ: ಅಂದಿನ ಕಾಲದ (ಇದು ಇಂದಿನ ಸಮಾಜದಲ್ಲಿಯೂ ಕಾಣುವಂತಹ) ಸಮಾಜದ ಅಧಃಪತನವನ್ನು ಕಂಡು, ನೊಂದು, ಒಂದು ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ: 'ಸತ್ಯ ಧರ್ಮಗಳೆಲ್ಲ ಎತ್ತ ಪೋದವೋ ಕಾಣೆ/ ಉತ್ತಮರ ಜೀವನಕೆ ದಾರಿಯಿಲ್ಲ' ('ಕಲಿಯುಗದ ಮಹಿಮೆ'). ಹಾಗೆಯೇ, ಸಮಾಜ ಸುಧಾರಣೆಯೊಡನೆ ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ಜ್ಞಾನವನ್ನೂ ಅವರು ನೀಡಿದರು. ಉದಾಹರಣೆಗೆ: 'ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ/ ನೀ ದೇಹದೊಳಗೊ ನಿನ್ನೊಳು ದೇಹವೊ' ಎಂಬ ಕೀರ್ತನೆ. ಈ ಲೋಕವನ್ನೆ ಸುತ್ತಿರುವುದು ಮಾಯೆ; ಆದುದರಿಂದ ಅಧಿಕಾರ-ಧನ-ಕನಕ ಮೋಹವನ್ನು ನಾವೆಲ್ಲರೂ ಬಿಡಬೇಕು. ಉಪನಿಷತ್ತುಗಳೂ ಕೂಡಾ ಇದನ್ನೇ ಹೇಳುವುದು ತಾನೆ!

ಒಟ್ಟಿನಲ್ಲಿ, ಎಲ್ಲಾ ಹರಿದಾಸರು ವಿವಿಧ ಕಾಲಘಟ್ಟಗಳಲ್ಲಿ ಸಾರಿರುವುದು ಒಂದೇ: ಮನುಷ್ಯರಲ್ಲಿ 'ಉಚ್ಚ'-'ನೀಚ' ಎಂಬ ಭೇದವಿಲ್ಲ; 'ಜಾತಿ'-'ಧರ್ಮ'ಗಳು ಮನುಷ್ಯರು ಸೃಷ್ಟಿಸಿಕೊಂಡಿರುವುದು; ನಿರ್ಜೀವ ಕಲ್ಲುಗಳ ಪೂಜೆಗಿಂತ ಬದುಕಿರುವ ಮಾನವ ಜಾತಿಯನ್ನು ಪ್ರೀತಿಸಬೇಕು, ಪೂಜಿಸಬೇಕು; ಮತ್ತು ದೇವರೆದುರು ಎಲ್ಲರೂ ದೀನರೆ: 'ದೀನ ನಾನು ಸಮಸ್ತ ಲೋಕಕೆ, ದಾನಿ ನೀನು' ಎಂದು ಕನಕದಾಸರು ಒಂದು ಕೀರ್ತನೆಯಲ್ಲಿ ಹಾಡಿದ್ದಾರೆ. ಹರಿದಾಸ ಚಳುವಳಿಯು ಪ್ರಜಾಸತ್ತಾತ್ಮಕವಾಗಿದ್ದು, ಜನರಿಂದ, ಜನರಿಗೋಸ್ಕರ, ಮತ್ತು ಜನರದ್ದೇ ಆಗಿತ್ತು.

ಲೇಖಕರ ಕಿರುಪರಿಚಯ
ಶ್ರೀಮತಿ ಕೃತ್ತಿಕಾ ಶ್ರೀನಿವಾಸನ್‍

ಮೂಲತಃ ಬೆಂಗಳೂರಿನವರಾದ ಇವರು ಸಾಫ್ಟ್ ವೇರ್‍ ಇಂಜಿನಿಯರ್‍; ಕಲಾತ್ಮಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮ ಐಟಿ ವೃತ್ತಿಯ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಹಲವು ವರ್ಷಗಳಿಂದ ಅಭ್ಯಾಸ ಮಾಡುತ್ತಾ ಅನೇಕ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

Blog  |  Facebook  |  Twitter

ಭಾನುವಾರ, ನವೆಂಬರ್ 16, 2014

ಭೂಮಿಯಾಚೆಗಿನ ಕನಸು

ನಿಜಕ್ಕೂ ಆ ಕನಸು ನನದಲ್ಲ
ನನದಲ್ಲದ ಆ ಕನಸು ಮೂಡಿದ್ದು
ಇನ್ನೂ ಸೋಜಿಗವೆನಿಸುತ್ತಿದೆ, ಏಕೆಂದರೆ
ಅಲ್ಲಿ ಶಾಂತಿ, ಸೌಹಾರ್ದತೆಯದ್ದೇ ಕಾರುಬಾರು!!

ಬಿಳುಪಾದ ಪರದೆಯ ಮೇಲೆ
ನೆರಳಿನಂಥ ಸಂತೆ,
ಮೂಡಿ ಹೋಗುತ್ತಿದ್ದ ನೆರಳಿಂದ
ಪರದೆಗಾವ ನಷ್ಟವಂತೂ ಆಗುತ್ತಿರಲಿಲ್ಲ!!

ಅಲ್ಲಿ ಕಥೆ ಹೇಳುತ್ತಿದ್ದ ತಂಬೂರಿ ದಾಸಯ್ಯ
ಬರೆ ಸತ್ಯವನ್ನಷ್ಟೇ ನುಡಿಯುತ್ತಾನಂತೆ;
ಅಷ್ಟಾಗಿಯೂ ಅವನ ಗತ ಕಥೆಗಳಲ್ಲಿ
ರಕ್ತದ ಜಿಗುಟಾಗಲಿ, ತೊಗಲಿನ ಕಮಟಾಗಲಿ
ಗೋಚರಿಸಲಿಲ್ಲವಾಗಿ ನಾ ನಂಬಲಿಲ್ಲ;

ನಂತರ ನಂಬುಗೆ ಹುಟ್ಟಿತು,
ಆತ ಹೇಳುತ್ತಿದ್ದ ಕಥೆಗಳೆಲ್ಲ
ಭೂಮಿಯಾಚೆಗಿನ
ಅನ್ಯ ಗ್ರಹವಾಸಿಗಳದ್ದು!!

ಮಗು ಅಳುವುದಕ್ಕೂ ಮುನ್ನ
ಹಾಲುಣಿಸಿ ಸಲಹುತ್ತಿದ್ದ ತಾಯಿ
ಅಳುವಿನ ಸದ್ದು ಕೇಳುವ
ಕೊನೆ ಅವಕಾಶವನ್ನೂ ಕಸಿದುಕೊಂಡಳು;
ಅಲ್ಲಿ ಮುಳ್ಳ ಮೆಟ್ಟಿದರೂ ಹೂವಾಗುವುದು
ಕಲ್ಲ ಮೀಟಿದರೂ ಹಾಡಾಗುವುದು
ಅದು ಖಂಡಿತ ಭೂಮಿಯಲ್ಲ;
ನಾ ಲಕ್ಷ-ಲಕ್ಷ ಮೈಲಿ ದೂರದ
ಅನಾಮಧೇಯ ಗ್ರಹದಲ್ಲಿ ಬಾಳುತ್ತಿದ್ದೆ!!

ಬೆಂಕಿ ಬೆಳಕಾಗುತ್ತಿತ್ತು
ಪ್ರೀತಿ ಬದುಕಾಗುತ್ತಿತ್ತು
ಎಲ್ಲರೂ ನಗುವವರೇ;
ಅಲ್ಲಿ ಕಣ್ಣೀರೆಂಬುದು ಕಾಲ್ಪನಿಕ,
ನಿಘಂಟಿಗೂ ನಂಟಿಲ್ಲದ ವಸ್ತು!!
ಎಲ್ಲರೂ ನನ್ನವರೇ, ನಾನೂ ಎಲ್ಲರವ,
ಮನೆ ಬೇಡದ ಸಂಸಾರ
ನಾ ನಿಜಕ್ಕೂ ಅಲ್ಲಿ ಸಾಹುಕಾರ!!

ಅಚಾನಕ್ಕಾಗಿ ಒಬ್ಬ ಬಾಂಡ್ ಥರ
ಕೋಟು, ಹ್ಯಾಟು, ಕಪ್ಪು ಕನ್ನಡಕ ಧರಿಸಿ
"ಯೂ ಆರ್ ಅಂಡರ್ ಅರ್ರೆಸ್ಟ್
ಫಾರ್ ಲಿವಿಂಗ್ ಸೋ ಹ್ಯಾಪಿಲಿ" ಅಂದು
ಕೈಗೆ ಬೇಡಿ ತೊಡಿಸಿ ದರ-ದರನೆ ಎಳೆದು
ರಾಕೆಟ್ ಏರಿಸಿ ಭೂಮಿಗೆ ಕರೆತಂದು
ಮುಖಕ್ಕೆ ನೀರೆರಚಿ ಎಚ್ಚರಗೊಳಿಸುತ್ತಾನೆ;
ಬದುಕ ಬೆನ್ನಿಗೆ ಸಾವ ಸವರುವ ಕಸುಬು ಮುಂದುವರಿಸುತ್ತೇನೆ!!

- ರತ್ನಸುತ

ಲೇಖಕರ ಕಿರುಪರಿಚಯ
ಶ್ರೀ ಭರತ್‍ ಎಂ. ವೆಂಕಟಸ್ವಾಮಿ

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಮೂಲತಹಃ ಬೆಂಗಳೂರು ಸಮೀಪದ ಮಂಚಪ್ಪನಹಳ್ಳಿಯವರಯ; ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Blog  |  Facebook  |  Twitter

ಶನಿವಾರ, ನವೆಂಬರ್ 15, 2014

ಯುವಶಕ್ತಿ - ಪೋಷಕರು - ಸಮಾಜ

 ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು 'ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಘರ್ಜಿಸಿದರು. ನೇತಾಜಿ ಸುಭಾಶ್ ಚಂದ್ರಬೋಸ್ 'ನನಗೆ ನೂರು ಜನ ಯುವಕರನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ' ಎಂದರು. ಆ ಯುವ ವಯಸ್ಸೇ ಹಾಗೆ, ಜಲಪಾತದಂತೆ ಭೋರ್ಗರೆದು ಹಾರುವ ಹುಮ್ಮಸ್ಸು, ಜಿಂಕೆಯಂತೆ ಓಡುವ ಉತ್ಸಾಹ, ಕಾಮನ ಬಿಲ್ಲನ್ನೇ ಹಿಡಿಯುವ ಮಹತ್ವಕಾಂಕ್ಷೆ - ಇವೆಲ್ಲಾ ಯುವಕರನ್ನು ಆಶಾವಾದಿಗಳನ್ನಾಗಿ ಮಾಡಿ ಅವರನ್ನು ಭವ್ಯ ಭವಿಷ್ಯದತ್ತ ಮುಖಮಾಡುವಂತೆ ಮಾಡುತ್ತವೆ. ಅಲ್ಲದೇ ಈ ವಯಸ್ಸಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ತಮ್ಮ ಫಲವತ್ತಾದ ಮನಸ್ಸುಗಳೆಂಬ ಮುಖಜ ಭೂಮಿಯಲ್ಲಿ ಸಿಹಿಯಾದ ಫಲಗಳನ್ನು ಬೆಳೆಯುವ ಹಂಬಲವನ್ನು ಬೆಳೆಸಿಕೊಂಡು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮವಹಿಸುತ್ತಾರೆ. ಈ ಸಮಯದಲ್ಲಿ ಹಿರಿಯರು ಹೇಳುವ ತಿಳಿವಳಿಕೆಯ ಮಾತುಗಳು, ಮಾರ್ಗದರ್ಶನ ಅವರಿಗೆ ಅತ್ಯಗತ್ಯ.

ಅಂದಹಾಗೆ ಕನಸುಗಳು ಎಂದರೆ ಹೇಗೆ? ಎಂತಹ ಕನಸುಗಳು? ಈ ಕನಸುಗಳ ವಿಚಾರಕ್ಕೆ ಬಂದಾಗ ಪ್ರತಿಯೊಬ್ಬರ ಕನಸುಗಳೂ ಬೇರೆ ಬೇರೆಯಾಗಿರುತ್ತವೆ. ನೂರರಲ್ಲಿ ತೊಂಭತ್ತು ಜನರಿಗೆ ಸಾಫ್ಟ್‌ ವೇರ್ ಇಂಜಿನಿಯರ್ ಆಗುವ ಆಸೆ. ಐದರಷ್ಟು ಜನರಿಗೆ ಡಾಕ್ಟರ್ ಆಗುವ ಆಸೆ. ಉಳಿದ ಐದರಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಬಹುದು, ವಕೀಲ ಆಗಬಹುದು, ವ್ಯಾಪಾರಿಯಾಗಬಹುದು ಒಟ್ಟಾರೆ ಹಣ ಗಳಿಸುವ ಕಸುಬುಗಳು. ಎಲ್ಲರ ಮನಸ್ಸುಗಳಲ್ಲೂ ಹಣ ಗಳಿಸುವ ಕಸುಬುಗಳ ಕನಸಿನ ಜೆರಾಕ್ಸ್‌ ಗಳೇ ಹಾರಾಡುತ್ತೀವೆ. ಹೀಗಾದರೆ ಮುಂದೇನು? ಸಮಾಜಕ್ಕೆ ಇವರಷ್ಟೆ ಸಾಕೇ? ಸಂಶೋಧನೆಗಳನ್ನು ನಡೆಸಲು ವಿಜ್ಞಾನಿಗಳೆಲ್ಲಿ? ನಾಳಿನ ಸತ್ಪ್ರಜೆಗಳನ್ನು ರೂಪಿಸುವ ಉತ್ತಮ ಶಿಕ್ಷಕ ಸಮುದಾಯವೆಲ್ಲಿ? ಮನುಕುಲದ ಏಳಿಗೆಯನ್ನು ಚಿಂತಿಸುವ ಬುದ್ಧಿಜೀವಿಗಳೆಲ್ಲಿ? ದೇಶವನ್ನು ಕಾಯುವ ಮತ್ತು ರಕ್ಷಣೆಕೊಡುವ ಸೈನಿಕರೆಲ್ಲಿ? ವಿಜ್ಞಾನ, ತಂತ್ರಜ್ಞಾನ, ಪ್ರಗತಿಯೆಂಬ ಹೆಸರಿನಲ್ಲಿ ನಾವೆಲ್ಲ ಕಳೆದುಕೊಳ್ಳುತ್ತಿರುವ ಮನಃಶಾಂತಿಯನ್ನು ನೀಡಲು ತತ್ವಜ್ಞಾನಿಗಳು ಎಲ್ಲಿದ್ದಾರೆ? ಹೀಗೆಯೇ ಎಲ್ಲರೂ ತಮ್ಮ ತಮ್ಮ ಸ್ವಂತ ಲಾಭವನ್ನು ಯೋಚಿಸಿದರೆ ದೇಶದ ಗತಿಯೇನು?

ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಅದ್ಭುತ ಮಾತನ್ನು ಲೋಕಕ್ಕೆ ಸಾರಿರುವ ನಮ್ಮ ದೇಶದಿಂದಲೇ ಸುಮಾರು ಆರುಲಕ್ಷಕ್ಕೂ ಹೆಚ್ಚುಜನ ಯುವಕರು ಐ. ಟಿ., ಬಿ. ಟಿ. ಹೆಸರಿನಲ್ಲಿ ತಾಯಿ ಮತ್ತು ತಾಯ್ನಾಡು ಎರಡನ್ನೂ ಬಿಟ್ಟು ವಿದೇಶಗಳಲ್ಲಿ ತಮ್ಮ ಬುದ್ಧಿಶಕ್ತಿ ಪ್ರದರ್ಶಿಸುತ್ತಿದ್ದಾರೆ. ಹೀಗೆಯೇ ಬುದ್ಧಿವಂತರು, ಪ್ರತಿಭಾಶಾಲಿಗಳು, ಸಜ್ಜನರು ತಮಗೆ ಹಣ ಹಾಗೂ ಅನುಕೂಲತೆ ಸಿಗುವ ಉದ್ಯೋಗಗಳಲ್ಲಿ ತೊಡಗಿಬಿಟ್ಟರೆ ಚಿಪ್ಪೊಳಗಿನ ಆಮೆಯಂತೆ ಆಗಿಬಿಡುತ್ತಾರೆ. ಆಗ ಕಳ್ಳರು, ಸುಳ್ಳರು, ದಡ್ಡರು, ಅಜ್ಞಾನಿಗಳು ಹೊರಬರುತ್ತಾರೆ, ನಮ್ಮ ನಾಯಕರಾಗುತ್ತಾರೆ, ಜನಪ್ರತಿನಿಧಿಗಳಾಗುತ್ತಾರೆ. ಕಾನೂನುಗಳನ್ನು ಮಾಡುತ್ತಾರೆ, ಆಮೇಲೆ ಇನ್ನೇನಾಗಲು ಸಾಧ್ಯ ನೀವೆ ಯೋಚಿಸಿ.. ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅರಾಜಕತೆ ತಲೆದೋರುತ್ತದೆ. ಆಗ ನಾವು ಯಾರನ್ನೂ ಬೈದು ಪ್ರಯೋಜನವಿಲ್ಲ.

ನಾವು ಈಗ ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತೇವೊ ಹಾಗೆ ನಮ್ಮ ದೇಶದ ಭವಿಷ್ಯ ರೂಪುಗೊಳ್ಳುತ್ತದೆ. ಎಲ್ಲರೂ ಮಾವಿನ ಗಿಡವನ್ನೇ ನೆಟ್ಟರೆ? ಸಾರಿಗೆ ಕರಿಬೇವೂ ಬೇಕಲ್ಲವೇ? ಮೊದಲೆಲ್ಲಾ ಹಲವಾರು ಮಕ್ಕಳನ್ನು ಪಡೆಯುತ್ತಿದ್ದರು; ಒಬ್ಬೊಬ್ಬರನ್ನು ಒಂದೊಂದು ಉದ್ಯೋಗಕ್ಕೆ ಕಳುಹಿಸುತ್ತಿದ್ದರು. ಆದರೆ ಈಗ ಇರುವುದೊಂದೇ ಮಗು, ಅವನು ಅಥವಾ ಅವಳು ಇಂಜಿನಿಯರ್ ಆಗಬೇಕು, ವಿದೇಶಕ್ಕೆ ಹೋಗಬೇಕು ಎಂದು ಆಶಿಸುತ್ತಾರೆ. ಆದ್ದರಿಂದ ಎಲ್ಲರ ಮನೆಗಳಲ್ಲಿ ಕೇವಲ ಪುಸ್ತಕ ಓದಿ ಅಂಕಗಳಿಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಗಳಿಸುವ ಗುರಿಯೊಂದಿಗೆ ಹಿಂದೆಮುಂದೆ ನೋಡದೇ ಮುಂದೆ ದೊಡ್ಡದೊಂದು ಪ್ರಪಾತವಿದೆ ಎಂದು ಕಾಣದೇ ಕುರಿಮಂದೆಯಂತೆ ಒಬ್ಬರ ಹಿಂದೊಬ್ಬರು ಓಡುತ್ತಿರುತ್ತಾರೆ. ಅವರಿಗೆ ನಿಜವಾದ ಜೀವನದ ಪಾಠವಾಗಲೀ, ಅದರ ಅನುಭವವಾಗಲೀ ತಿಳಿದಿರುವುದಿಲ್ಲ.

ಪ್ರತಿಷ್ಠಿತ ಶಾಲೆಗಳೆಂದು ಸಮಾಜದಲ್ಲಿ ಒಂದು ಬೋರ್ಡು ತಗುಲಿಹಾಕಿಕೊಂಡು ಉತ್ತಮ ಸುಸಜ್ಜಿತ ಆಕರ್ಷಣೀಯ ಕಟ್ಟಡಗಳನ್ನು ಹೊಂದಿ ಕೇವಲ ಪಠ್ಯ ಪುಸ್ತಕ, ನೋಟ್ಸ್‌ ಗಳನ್ನೇ ಉರು ಹೊಡೆಸಿ ಶೇಕಡ 100 ಅಂಕಗಳನ್ನು ಗಳಿಸುವಂತೆ ಮಾಡುವ ಆಂಗ್ಲ ಮಾಧ್ಯಮದ ಶಾಲೆ, ಕಾಲೇಜುಗಳಲ್ಲಿ ಇಂತಹ ಹುಡುಗರು ಕಲಿಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅವರ ಲಕ್ಷಣಗಳು ಹೇಗಿರುತ್ತವೆ ಎಂದರೆ ಅವರಿಗೆ ನಮ್ಮ ಮಾತೃ ಭಾಷೆಯ ಬಗ್ಗೆ ಅಸಡ್ಡೆ ಇರುತ್ತದೆ. ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನವಿರುವುದಿಲ್ಲ. ವಿದ್ಯುನ್ಮಾನ ಉಪಕರಣಗಳ ಮೇಲೆ ಅವಲಂಬಿತರಾಗಿರುತ್ತಾರೆ. ಪ್ರಾಯೋಗಿಕ ಬದುಕಿನ ಅನುಭವದ ಕೊರತೆ ಇರುತ್ತದೆ. ಅಂತರ್ಜಾಲ, ಟಿ. ವಿ. ಮತ್ತು ಮೊಬೈಲ್ ಪ್ರೇರಿತ ಜಗತ್ತಿನಲ್ಲಿಯೇ ಉಳಿದು ನೈಜ ಅನುಭವದ ಜಗತ್ತಿನಿಂದ ದೂರ ಉಳಿಯುತ್ತಾರೆ. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ದಾರ್ಶನಿಕತೆ ಇವುಗಳ ಬಗ್ಗೆ ಇವರಿಗೆ ಆಸಕ್ತಿಯೇ ಇರುವುದಿಲ್ಲ. ಜೀನ್ಸ್ ಧರಿಸಿ, ಪಿಜ್ಜಾ, ಬರ್ಗರ್ ತಿಂದು, ಕಂಪ್ಯೂಟರ್ ಕೀಲಿಮಣೆ ಕುಟ್ಟುತ್ತಾ, ಮನರಂಜನೆಗೆ ಅಂತರ್ಜಾಲವನ್ನು ತಡಕಾಡುತ್ತಾ ತಮ್ಮ ಸುಖದ ಬೊಜ್ಜನ್ನು ಜಿಮ್‌ ಗಳಲ್ಲಿ ಕರಗಿಸಲೆತ್ನಿಸುತ್ತಾ ಬದುಕುತ್ತಾರೆ.

ಈ ಮಕ್ಕಳ ತಂದೆತಾಯಿಗಳು ಅಷ್ಟೆ, ತಮ್ಮ ಮಕ್ಕಳ ಬದುಕನ್ನು ಬೇರೆ ರೀತಿ ರೂಪಿಸುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದ ಈ ಏಕಮುಖ ಆಧುನಿಕ ಬದುಕಿನ ದೃಷ್ಟಿಕೋನದಂತೆಯೇ ಬೆಳೆಸುತ್ತಾರೆ. ಸಮಾಜವೆಂಬ ಈ ದಿಬ್ಬಣದಲ್ಲಿ ಶ್ರೀಮಂತಿಕೆಯ ವಿಜಯಮಾಲೆ ಧರಿಸಿ ಹಣೆಬರಹ ಚೆನ್ನಾಗಿರುವವರು ಹೊರಟರೆ, ಅವರನ್ನು ನೋಡಿ ಉಳಿದವರು ಅವರ ಮಕ್ಕಳನ್ನೂ ಸಹ ವಿಜಯಮಾಲೆ ಧರಿಸಿದವರಂತಾಗಿಸಲು ಕೇವಲ ಗುರಿಯೆಡೆಗೆ ದೃಷ್ಟಿ ಕೇಂದ್ರೀಕರಿಸಿ ಓಡಲು ತರಬೇತಿ ನೀಡುತ್ತಾರೆ. ಕಾಲುಗಳು ಜೊರಾಗಿ ಓಡಲು ಅದಕ್ಕೇ ಬೇಕಾದ ವಿಶೇಷ ಪೋಷಕಾಂಶಗಳನ್ನು ನೀಡುತ್ತಾರೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ, ಅಕ್ಕಪಕ್ಕ ಓಡುವವರನ್ನು ಸರಿಸಿ, ಹಿಮ್ಮೆಟ್ಟಿಸಿ, ಕೆಡವಿ ಕಡೆಗೆ ತುಳಿದಾದರೂ ಹಣದ ಹಿಂದೆಯೇ ಬೆನ್ನತ್ತಿ ಓಡಬೇಕೆಂಬ ಪೈಪೋಟಿಯ ಪಾಠ ಹೇಳಿಕೊಡುತ್ತಾರೆ. ಇದು ಸರಿಯೇ? ಏಕೆ ಹೀಗೆ ಮಾಡುತ್ತಿದ್ದೇವೆ. ಅವರು ನಮ್ಮ ಮಕ್ಕಳು, ನಮ್ಮ ದೇಶದ ಆಸ್ತಿ ಅಲ್ಲವೇ? ನಾವೇ ಅವರನ್ನು ಹೀಗೆ ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆಯ ಗತಿಯೇನು? ಎಂದು ಯೋಚಿಸಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕಾದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ತಿಳಿಸಿದಂತಹ ನೈತಿಕ ಅಧ್ಯಾತ್ಮಿಕ ಶಿಕ್ಷಣ ಹಾಗೂ ಭಗವಾನ್ ಶ್ರೀ ಸತ್ಯ ಸಾಯಿಬಾಬ ಅವರು ವಿಶ್ವಶಾಂತಿಗಾಗಿ ಹುಟ್ಟುಹಾಕಿದ ಮಾನವೀಯ ಮೌಲ್ಯಗಳ ಶಿಕ್ಷಣದ ಅವಶ್ಯಕತೆ ಇದೆ.

ಲೇಖಕರ ಕಿರುಪರಿಚಯ
ಶ್ರೀ ತ್ರಿಮೂರ್ತಿ

ಮೂಲತಃ ಮೈಸೂರಿನವರಾದ ಇವರು ಸಮಾಜದ ಬಗ್ಗೆ ಕಾಳಜಿ ಹಾಗೂ ಯುವಶಕ್ತಿಯ ಬಗ್ಗೆ ಭರವಸೆ ಹೊಂದಿದ್ದಾರೆ; ಪ್ರಸ್ತುತ ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 14, 2014

ಕವಣೆ

ಮುಖ ತೊಳೆದು, ಸಿದ್ಧವಾಗಿದ್ದ ರಾಗಿರೊಟ್ಟಿಯ ಬುತ್ತಿ ಕಟ್ಟಿಕೊಂಡು, ಎಮ್ಮೆ ಓಡಿಸಿಕೊಂಡು ಕೆಂಪ ಮತ್ತು ಮಂಜು ಎಮ್ಮೆ ಮೇಯಿಸಲು ಹೊರಟರು. ಯಥಾಪ್ರಕಾರ, ಎಮ್ಮೆಗೆ ನೀರು ಕುಡಿಸುವ ಸ್ಥಳದಲ್ಲಿ ಒಂದು ಗುಬ್ಬಚ್ಚಿಯ ಗೂಡನ್ನು ನೋಡುತ್ತಿದ್ದರು. ಆ ದಿನ ಗುಬ್ಬಚ್ಚಿಯು ಇರಲಿಲ್ಲ. ಆದ್ದರಿಂದ ಹತ್ತಿರ ಹೋಗಿ ನೋಡುತ್ತಾರೆ.

ಹಾಗೆ ನೋಡುತ್ತಿದ್ದಾಗ ಪಕ್ಕದಲ್ಲಿರುವ ಪೊದೆಯಲ್ಲಿ ಗುಬ್ಬಚ್ಚಿಯು ಕಾಣುತ್ತದೆ. ಕೆಂಪ ಕಲ್ಲೊಂದನ್ನು ತೆಗೆದುಕೊಂಡು ಕವಣೆಯಲ್ಲಿ ಹಾಕಿ ಹೊಡೆಯಲು ಹೋಗುತ್ತಿದ್ದಾಗ, ಮಂಜು 'ಗೂಡಿನಲ್ಲಿ ಮರಿಗಳಿವೆ. ಬೇಡ ಕಣೋ' ಅನ್ನುತ್ತಾನೆ.  ಈ ರೀತಿ ಹೇಳುತ್ತಿರುವಾಗಲೇ ಗುಬ್ಬಿಯು ಅಲ್ಲಿಗೆ ಬರಲು, ಕೆಂಪನು ಕವಣೆಯಿಂದ ಹೊಡೆದ ಕಲ್ಲು ಗುಬ್ಬಿಗೆ ತಾಗಿ, ಗುಬ್ಬಿಯು ಕೆಳಗೆ ಬಿದ್ದಿತು.

ಕಲೆ: ಕಹಳೆ ತಂಡ
ಇಬ್ಬರೂ ಗುಬ್ಬಿಯ ಹತ್ತಿರಕ್ಕೆ ಧಾವಿಸುತ್ತಾರೆ. ಕೆಂಪನು 'ಬಿದ್ದಿತು ಗುಬ್ಬಿ' ಎಂದು ಸಂತೋಷದಿಂದ ಕುಣಿದರೆ, ಮಂಜು 'ಅಯ್ಯೋ, ಗುಬ್ಬಿಯು ಕೆಳಗೆ ಬಿದ್ದಿತಲ್ಲ' ಎಂದು ವೇದನೆಯಿಂದ ನೋಡುತ್ತಾನೆ. ಮಂಜು 'ರೆಕ್ಕೆ ಮುರಿದಿದೆ, ಆದರೆ ಜೀವ ಇನ್ನೂ ಇದೆ' ಎಂದಾಗ ಕೆಂಪ, 'ನನ್ನ ಹೊಡೆತಕ್ಕೆ ಇದು ಹೇಗೆ ತಪ್ಪಿಸಿಕೊಂಡಿತು ಎಂಬುದೇ ಅರ್ಥವಾಗುತ್ತಿಲ್ಲ' ಎಂದನು. ಆಗ ಮಂಜು ಕೆಂಪನಿಗೆ ಹಿಡಿ ಶಾಪ ಹಾಕುತ್ತಾ, ಎಮ್ಮೆಗೆ ನೀರು ಕುಡಿಸುವ ಜಾಗಕ್ಕೆ ಗುಬ್ಬಿಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ನೀರನ್ನು ಕುಡಿಸುತ್ತಾನೆ. ಕೆಂಪ 'ಕೊಡೋ ಇಲ್ಲಿ ಅದನ್ನ' ಎಂದಾಗ ಮಂಜು 'ಇದನ್ನ ನಿನಗೆ ಕೊಡೋಕ್ಕೆ ಆಗಲ್ಲ. ಗುಬ್ಬಿ ಇನ್ನೂ ಜೀವಂತವಾಗಿದೆ. ಇದನ್ನು ಕಾಪಾಡಬೇಕು' ಎಂದನು.

ಮಂಜು ಗುಬ್ಬಿಗೆ ನೀರು ಕುಡಿಸಿ, ಕರವಸ್ತ್ರದೊಳಗೆ ಅದನ್ನು ಸುತ್ತಿ 'ಇದನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋಗುವೆ' ಎಂದನು.  ಅದಕ್ಕೆ ಕೆಂಪ 'ಗುಬ್ಬಿಯನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋದರೆ ಊರಲ್ಲಿ ಜನರೆಲ್ಲಾ ನಗ್ತಾರೆ ಅಷ್ಟೇ' ಎಂದನು. ಮಂಜು, 'ಯಾರು ಏನೇ ಹೇಳಿದರೂ ನಾನು ತೆಗೆದುಕೊಂಡು ಹೋಗುವೆ' ಎಂದು ಅದನ್ನು ಅಂಗಿಯ ಜೇಬಿನಲ್ಲಿ ಹಾಕಿಕೊಳ್ಳುತ್ತಿರುವಾಗ ಕೆಂಪ 'ಸರಿ, ಇದನ್ನು ಕಾಪಾಡಬಹುದು, ಆ ಗೂಡಿನಲ್ಲಿರುವ ಮರಿಗಳನ್ನು ಯಾರು ನೋಡುತ್ತಾರೆ' ಎಂದು ಹೇಳುತ್ತಲೇ ಇಬ್ಬರೂ ಆ ಗೂಡಿನ ಕಡೆಗೆ ನಡೆದರು.

ಮಂಜು 'ನೀನು ನೆಲದಲ್ಲಿ ಯಾವಾದರೂ ಹುಳುಗಳು ಸಿಕ್ಕರೆ ಹಿಡಿದುಕೊಂಡು ಬಾ ಹೇಳುತ್ತೇನೆ' ಎಂದಾಗ ಕೆಂಪ 'ಸರಿ' ಎಂದು ಹುಡುಕಲು ಹೋದಾಗ ಮರದಲ್ಲಿ ಒಂದು ಹುಳು ಸಿಕ್ಕಿತು. ಮಂಜು ಕಡ್ಡಿಯಿಂದ ಆ ಹುಳುವನ್ನು ಮರಿಗಳಿಗೆ ಕೊಡುತ್ತಾ 'ಈ ಮರಿಗಳಿಗೆ ಇಷ್ಟು ಆಹಾರ ಸಾಕು, ಗುಬ್ಬಿಯನ್ನು ನಾನು ವೈದ್ಯರ ಹತ್ತಿರ ಕರೆದುಕೊಂಡು ಹೋಗುತ್ತೇನೆ, ಎಮ್ಮೆಗಳನ್ನು ನೀನು ಓಡಿಸಿಕೊಂಡು ಹೋಗು' ಎಂದನು. ಕೆಂಪ ಎಮ್ಮೆಗಳನ್ನು ಮೇಯಿಸಿಕೊಂಡು ಮನೆಗೆ ಹೋದನು. ಇಲ್ಲಿ ಮಂಜು ಗುಬ್ಬಿಯನ್ನು ವೈದ್ಯರ ಬಳಿ ತೋರಿಸಿದನು. ವೈದ್ಯರು ಗುಬ್ಬಿಯನ್ನು ಪರೀಕ್ಷಿಸಿ 'ಇದಕ್ಕೆ ಹೆಚ್ಚೇನೂ ಪೆಟ್ಟು ಬಿದ್ದಿಲ್ಲ. ಆದರೂ ಬ್ಯಾಂಡೇಜ್ ಹಾಕಿದ್ದೇನೆ. ಇದು ಸರಿಯಾಗಲು ಸುಮಾರು ಒಂದು ವಾರ ಬೇಕಾಗುತ್ತದೆ' ಎಂದರು. ಮಂಜು 'ಇದರ ಮರಿಗಳು?' ಎಂದು ಪ್ರಶ್ನಿಸಲು, ವೈದ್ಯರು 'ಅವುಗಳು ಇಷ್ಟೊತ್ತಿಗೆ ಆಹಾರವಿಲ್ಲದೆ ಜೀವ ಬಿಟ್ಟಿರುತ್ತದೆ' ಎಂದರು. ಆಗ ಮಂಜು 'ನಾವು ಅವುಗಳಿಗೆ ಬೇಕಾದ ಆಹಾರವನ್ನು ನೀಡಿ ಬಂದಿದ್ದೇವೆ ಡಾಕ್ಟರೆ' ಎಂದಾಗ ವೈದ್ಯರು 'ಹಾಗಾದರೆ ಒಂದು ವಾರ ಆ ಮರಿಗಳಿಗೆ ಅದೇ ರೀತಿ ಆಹಾರ ನೀಡಿ' ಎಂದರು.

ನಂತರ ಮಂಜು ಗುಬ್ಬಿಯನ್ನು ಮನೆಗೆ ಒಯ್ದನು. ಮನೆಯಲ್ಲಿ ಅತ್ತೆ, ಅಕ್ಕಂದಿರು, 'ಎಲ್ಲಿಗೆ ಹೋಗಿದ್ದೆ' ಎಂದು ಕೇಳಿದರು. ಮಂಜು ನಡೆದ ವಿಷಯವನ್ನು ತಿಳಿಸಿ 'ಅಣ್ಣ ಎಲ್ಲಿ' ಎಂದು ಕೇಳಿದನು. ಅಕ್ಕ 'ಹೊಲಕ್ಕೆ ಹೋಗಿದ್ದಾನೆ' ಎನ್ನಲು, ಮಂಜು 'ಅಣ್ಣನನ್ನು ನಾನು ನೋಡಬೇಕಿತ್ತು' ಎಂದು ಓಡಿ ಹೋದನು. ಕೆಂಪನು ಹೊಲದಲ್ಲಿ ನಿಂತಿದ್ದ. ಮಂಜು 'ಅಣ್ಣಾ' ಎಂದು ಕೂಗಿದನು. ಕೆಂಪನು ತಿರುಗಿ ನೋಡಿದನು. ಮಂಜು 'ನಾವು ಈಗಲೇ ಗುಬ್ಬಿಯ ಮರಿಗಳನ್ನು ನೋಡಬೇಕು, ಬೇಗ ಬಾ ಹೋಗೋಣ' ಎಂದನು. ಕೆಂಪ 'ಯಾಕೆ, ಏನಾಯಿತು? ವೈದ್ಯರು ಏನು ಹೇಳಿದರು?' ಎಂದು ಕೇಳಿದ.  ಮಂಜು 'ಗುಬ್ಬಿ ಸರಿ ಹೋಗಲು ಇನ್ನೂ ಒಂದು ವಾರ ಆಗುತ್ತದೆ ಅಂದರು ವೈದ್ಯರು. ಆ ಮರಿಗಳ ಪರಿಸ್ಥಿತಿಗೆ ನೀನೇ ಕಾರಣನಾಗಿದ್ದೀಯ, ಏಕೆಂದರೆ ನೀನು ತಾನೆ ಗುಬ್ಬಿಯನ್ನು ಕವಣೆ ಹೊಡೆದು ಬೀಳಿಸಿದ್ದು. ಅದಕ್ಕೆ ನೀನೇ ಆ ಮರಿಗಳಿಗೆ ಒಂದು ವಾರಕ್ಕೆ ಬೇಕಾದ ಆಹಾರವನ್ನು ಹುಡುಕಿಸಿಕೊಡಬೇಕು. ಬೇಗ ಬಾ ಅಣ್ಣ ಹೋಗೋಣ. ದಾರಿಯಲ್ಲಿ ಯಾವುದಾದರು ಹುಳು ಸಿಕ್ಕಿದರೆ ಹಿಡಿದುಕೊ, ಬಾ ಹೋಗುವ' ಎಂದನು.

ಕೆಂಪ 'ಇದು ಒಳ್ಳೆ ಸಮಸ್ಯೆ ಅಯಿತಲ್ಲಪ್ಪ, ಸರಿ ಬಾ ಹೋಗೋಣ ಆ ಜಾಗಕ್ಕೆ', ಎಂದು ಇಬ್ಬರು ನಡೆದರು. ಅವರಿಗೆ ದಾರಿಯಲ್ಲಿ ಎರಡು ಹುಳುಗಳು ಸಿಕ್ಕಿದವು. ಮೊದಲು ಆಹಾರ ನೀಡಿದ ರೀತಿಯಲ್ಲಿಯೇ ಆ ಮರಿಗಳಿಗೆ ಹುಳುಗಳನ್ನು ತಿನ್ನಿಸಿದರು. ಮರಿಗಳಿಗೆ ಹುಳುಗಳನ್ನು ನೀಡಿ ಬಂದ ಬಳಿಕ ಇಬ್ಬರೂ ಮನೆಗೆ ಬಂದು ಸೇರಿದರು. ಮನೆಯಲ್ಲಿ ಅಕ್ಕ ಆ ಗುಬ್ಬಿಗೆ ಸ್ವಲ್ಪ ರಾಗಿ ಕಾಳನ್ನು ನೀಡಿ, ಜೊತೆಗೆ ಕುಡಿಯಲು ನೀರನ್ನೂ ಇಟ್ಟಿದ್ದಕ್ಕೆ ಗುಬ್ಬಿಯು ಸ್ವಲ್ಪ ಮಟ್ಟಿಗೆ ಸುಧಾರಿಸಿತು. ಕೆಂಪ 'ಗುಬ್ಬಿ ಸತ್ತಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಇದು ಜೀವಂತ ಆಗಿಬಿಟ್ಟಿತಲ್ಲಪ್ಪ. ಇದನ್ನಲ್ಲದೆ, ಇದರ ಮರಿಗಳನ್ನು ಸಹ ನಾನೇ ನೋಡಿಕೊಳ್ಳಬೇಕು' ಎಂದು ಬೇಸರದಿಂದ ನುಡಿದನು.

ಅದನ್ನು ಕೇಳಿಸಿಕೊಂಡ ಅಕ್ಕ 'ಆ ಗುಬ್ಬಿಯನ್ನು ನೀನು ಕವಣೆಯಿಂದ ಹೊಡೆಯದೆ ಇದ್ದಿದ್ದರೆ, ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ' ಎಂದಳು. ಕೆಂಪ ಮತ್ತು ಮಂಜು ಇಬ್ಬರೂ ಒಂದು ವಾರ ಗುಬ್ಬಿ ಮತ್ತು ಅದರ ಮರಿಗಳ ಸೇವೆ ಮಾಡಿದರು. ದಿನಗಳು ಕಳೆದು, ವಾರದ ಕಡೆಯ ದಿನವೂ ಬಂದಿತು. ಆ ಮುಂಜಾನೆ ಗುಬ್ಬಿಯು ಸ್ವಲ್ಪ ಸ್ವಲ್ಪವಾಗಿ ರೆಂಬೆ ಕೊಂಬೆಗಳಿಗೆ ಹಾರಲು ಪ್ರಯತ್ನಿಸಿ ಪ್ರಯತ್ನಿಸಿ, ಕೊನೆಗೂ ಯಶಸ್ವಿಯಾಯಿತು. ಮಂಜು ಮತ್ತು ಕೆಂಪ ಮುಂಜಾನೆ ಎದ್ದು ಕುಳಿತು ಗುಬ್ಬಿ ಹಾರಿ ಹೋಗುತ್ತಿದ್ದ ಸನ್ನಿವೇಶವನ್ನು ನೋಡುತ್ತಿದ್ದರು. ಆಗ ಕೆಂಪ ಗುಬ್ಬಿಯ ಕಷ್ಟ ನೋಡಲಾಗದೆ 'ಇನ್ನೊಮ್ಮೆ ಈ ಕವಣೆಯನ್ನು ನಾನು ಮುಟ್ಟುವುದೇ ಇಲ್ಲ' ಎಂದು ನುಡಿದನು. ಮಂಜು ಮನಸ್ಸಿನಲ್ಲೇ ಸಂತಸ ಪಡುತ್ತಾ ನಿಟ್ಟುಸಿರು ಬಿಟ್ಟನು.

ಲೇಖಕರ ಕಿರುಪರಿಚಯ
ಆಶಾ ಪ್ರಸಾದ್

ಭದ್ರಾವತಿಯಲ್ಲಿ ಹುಟ್ಟಿ ಬೆಳೆದಿರುವ ಇವರು ತಮ್ಮ ಶಿಕ್ಷಕರ ಸ್ಪೂರ್ತಿಯಿಂದ ಕನ್ನಡವನ್ನು ಐಚ್ಛಿಕ ವಿಷಯವಾಗಿ ಕಲಿತು, ಪ್ರಸ್ತುತ ಕನ್ನಡ ಸಾಹಿತ್ಯದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

Blog  |  Facebook  |  Twitter