ಶಿಕ್ಷಣ, ಉದ್ಯೋಗ, ತಂತ್ರಜ್ಞಾನಗಳ ವಿಶಾಲವಾದ ಚಟುವಟಿಕೆಗಳಲ್ಲಿ ತೊಡಗಿರುವ ಮನುಷ್ಯ ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿದ ಉದ್ಯಾನವನದ ಗಿಡದ ಹಾಗೆ ತನ್ನೊಳಗಿನ ಅಗತ್ಯಗಳನ್ನು ಗುರುತಿಸಿಕೊಳ್ಳುತ್ತಾನೆ. ಹೊಳೆಯ ಸುಳಿಗಳ ಕುಣಿವ ಅಲೆಗಳ ಕನಸು ಬಿದ್ದ ಬಣ್ಣದ ಮೀನು ಗಾಜಿನ ಜಾಡಿಯನ್ನು ಮೂತಿಯಿಂದ ತಿವಿದು ಚಡಪಡಿಸಿದರೆ ಅದನ್ನು ನೋಡಿ ಚೆಂದದ ಕುಣಿತವೆಂದು ನಾವು ಖುಷಿ ಪಡುತ್ತೇವೆ. ಹೀಗೆಯೆ ಯೋಚಿಸುತ್ತಾ ಹೋದರೆ ಅನಿಸುತ್ತದೆ - ಏನೆಲ್ಲಾ ಬೇಕು ಈ ಜೀವಕ್ಕೆ! ಯಾರೆಲ್ಲಾ ಬೇಕು ಈ ಭಾವಕ್ಕೆ.
ಒಬ್ಬ ವ್ಯಕ್ತಿಗೆ ಯಾವುದೇ ರೀತಿಯ ನೋವಾದರೂ ಮೊದಲು ಕರೆಯುವುದು 'ಅಮ್ಮಾ' ಎಂದು. ಹಾಗಾದರೆ ಈ ಅಮ್ಮ ಎಂದರೆ ಯಾರು? ಪುರುಷನೊಬ್ಬನ ವೀರ್ಯಾಣುವಿನಿಂದ ಗರ್ಭ ಧರಿಸಿ, ಮತ್ತೊಂದು ಜೀವವನ್ನು ಹೊತ್ತು, ಹೆತ್ತು, ಹಾಲುಣಿಸಿ ಸಾಕಿ ಬೆಳೆಸಿ ಪಕ್ಕಕ್ಕೆ ಸರಿದು ಬಿಡುವ ಒಬ್ಬ ಮಹಿಳೆ ಮಾತ್ರವೇ? ಅಲ್ಲ. ಎದುರಿಗಿರುವ ವ್ಯಕ್ತಿಯ ಕಾಣದಿರುವ ಮನದಾಳದ ಗಾಯಗಳನ್ನು ವಾತ್ಸಲ್ಯದ ಹಾಲುಣಿಸಿ ಗುಣಪಡಿಸುವ ಚೈತನ್ಯವೇ ಅಮ್ಮ. ಅಮ್ಮ ಎಂದರೆ ಒಬ್ಬ ಮಹಿಳೆ ಅಥವಾ ವ್ಯಕ್ತಿ ಮಾತ್ರವೇ ಅಲ್ಲ, ಅದು ಒಂದು ಮನೋಭಾವವೂ ಹೌದು. ಈ ನಿಟ್ಟಿನಲ್ಲಿ ಸ್ನೇಹಿತ, ಸ್ನೇಹಿತೆ, ಅಕ್ಕ, ಅಣ್ಣ, ಗುರುಗಳು ಹೀಗೆ ಸಹೃದಯ ಇರುವ ಯಾವ ವ್ಯಕ್ತಿ ಬೇಕಾದರೂ ಅಮ್ಮನಾಗಬಹುದು. ಇದಕ್ಕೆ ಯಾವುದೇ ಲಿಂಗ ಬೇಧವಿಲ್ಲ. ಕೇವಲ ನಾವೇ ಹೊತ್ತು, ಹೆತ್ತ ಮಕ್ಕಳನ್ನಷ್ಟೇ ಪ್ರೀತಿಸುತ್ತಾ ಅವರನ್ನು ಹೊತ್ತು ಹೊತ್ತಿಗೆ ಗಮನಿಸಿ, ರುಚಿಯಾದ, ಆರೋಗ್ಯಕರ ಹಾಗೂ ಪೌಷ್ಠಿಕವಾದ ಊಟ ಹಾಕಿ, ಬೆಚ್ಚಗಿರಿಸಿ, ಚೆನ್ನಾಗಿ ಓದಿಸಿ ಜಗತ್ತಿನ ಕೆಟ್ಟದರಿಂದ ರಕ್ಷಿಸಿ ಅವರಿಗೊಂದು ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ಕೊಡಿಸಿಬಿಟ್ಟರೆ ಮಾತ್ರ ಆದರ್ಶ ತಾಯಿಯಾಗುತ್ತಾರೆಯೇ ಎಂಬುದನ್ನು ಯೋಚಿಸಬೇಕು.
ಇಂದಿನ ಮನುಷ್ಯ ತುಂಬಾ ಹಸಿದಿದ್ದಾನೆ, ಶಿಷ್ಟಾಚಾರದ ಪ್ರತಿಷ್ಠಿತ ಶಾಲೆ ಮತ್ತು ಟ್ಯೂಷನ್ ನೆಪದಲ್ಲಿ ಕಸಿದಿಟ್ಟಿ ಮುಗ್ಧ ಬಾಲ್ಯದ ಹಸಿವು, ಸಭ್ಯತೆಯ ಹೆಸರಿನಲ್ಲಿ ಪೋಷಕರ ಒತ್ತಡದ ಮೇರೆಗೆ ರುಚಿ ನೋಡದೆ ಬಿಟ್ಟ ತುಂಟತನದ ಹಸಿವು, ಸ್ಪರ್ಧಾತ್ಮಕ ಯುಗದ ನೆಪದಲ್ಲಿ ಹುಟ್ಟಿಕೊಂಡ ಈರ್ಷೆ, ಮಾತ್ಸರ್ಯಗಳಿಂದ ಕಾಣದಿರುವ ಶುದ್ಧ ಸ್ನೇಹದ ಹಸಿವು, ಹೀಗೆ ಈ ಎಲ್ಲಾ ಹಸಿವುಗಳಿಗೂ ಸೌಟುಗಳ ಎಣಿಸದೆ, ಕೂಪನ್ ಗಳ ವಿತರಿಸಿದೆ, ಪ್ರೀತಿ ವಾತ್ಸಲ್ಯವನ್ನು ಮೊಗೆಮೊಗೆದು ಬಡಿಸುವ ಪ್ರೇಮದ ಅಮ್ಮ ಬೇಕು.
ಮನುಷ್ಯ ವಯಸ್ಸಾಗುತ್ತಾ ಹೋದಂತೆ ನಿಜವಾದ ಅರಿವು ಪಡೆದುಕೊಂಡಿದ್ದು ನಿಜವಾದರೆ ಸೃಷ್ಟಿಯತ್ತ ಸಾಗಬೇಕು, ಪ್ರಕೃತಿಯನ್ನು ಅನುಸರಿಸಬೇಕು. ಸೂರ್ಯ, ಚಂದ್ರ, ಭೂಮಿ, ಮಳೆ, ನದಿ, ಗಾಳಿಯ ಹಾಗೆ ನಮ್ಮಲ್ಲಿರುವ ಚೈತನ್ಯವನ್ನು, ಶಕ್ತಿಯನ್ನು, ಸತ್ವವನ್ನು, ಪ್ರೀತಿಯನ್ನು ಉತ್ತಮ ವಿಚಾರಗಳನ್ನು ಸಮಾಜಕ್ಕೆ ಸುರಿಯಬೇಕು. ನೊಂದವರ ಕೈ ಹಿಡಿದು ಮೇಲೆತ್ತಬೇಕು. ಎಲ್ಲರನ್ನೂ ಪ್ರೀತಿಸು, ಎಲ್ಲರನ್ನೂ ಸೇವಿಸು ಎಂಬ ಮಾತಿನಂತೆ ಎದುರಿಗಿರುವವರ ಕುಲ, ಗೋತ್ರ, ಜಾತಿ, ಲಿಂಗ, ಅಂತಸ್ತುಗಳನ್ನು ಎಣಿಸದೇ, ಗಿರಿ-ಶಿಖರ, ಸಾಗರ ಎಂದು ಯಾವುದನ್ನೂ ಲೆಕ್ಕಿಸದೆ ಧೋ ಎಂದು ಸುರಿವ ಮಳೆಯ ಹಾಗೆ ನಮ್ಮ ಅಂತಃಕರಣ ಉಕ್ಕಿದ ದಿನ ನಾವು ನಿಜವಾದ 'ಅಮ್ಮ' ಆಗುತ್ತೇವೆ. ಆ ಉಕ್ಕಿದ ಪ್ರೀತಿ ಪಡೆದವನು ವಯಸ್ಸು, ಲಿಂಗ, ಜಾತಿ, ಅಂತಸ್ತುಗಳ ಯಾವ ಹಂಗೂ ಇಲ್ಲದೆ ಮಗುವಾಗುತ್ತಾನೆ.
ಮಗ, ಮಗಳು, ಗುರು, ಶಿಷ್ಯ, ಗೆಳೆಯ, ಒಡೆಯ ಅಂತ ಸಂಬಂಧಗಳಿಗೆ ಹೆಸರಿಟ್ಟು ಒಂದು ನಿರ್ದಿಷ್ಟ ವ್ಯಾಪ್ತಿಯನ್ನು ಅಳೆದಿಟ್ಟು ಈ ಸಂಬಂಧಗಳು ಆಚೀಚೆ ಹೋಗದಂತೆ ಎಚ್ಚರ ವಹಿಸುತ್ತೇವೆ; ಅದರ ಬದಲಿಗೆ ನಮ್ಮನ್ನು ಪ್ರೀತಿಸುವವರನ್ನು ಪ್ರೀತಿ, ಆದರಗಳಿಂದ ಕಾಣಬೇಕು, ಅವರ ಮನದಾಳದ ನೋವು ನಲಿವುಗಳಿಗೆ ಸ್ಪಂದಿಸಬೇಕು. ಒಬ್ಬ ಸ್ನೇಹಿತನ ಬಳಿ ಉತ್ತಮ ಸ್ನೇಹ ಸಂಬಂಧವನ್ನು ಯಾವುದೇ ಸ್ವಾರ್ಥವಿಲ್ಲದೆ ಇರಿಸಿಕೊಂಡು ಅವನ ಮನಸ್ಸಿನ ನಲಿವುಗಳಷ್ಟೇ ಅಲ್ಲದೆ ನೋವಿನ ಸಂದರ್ಭದಲ್ಲಿಯೂ ನಾವು ಸ್ಪಂದಿಸಿದಾಗ ಆ ಸ್ನೇಹಿತನಿಗೆ 'ಅಮ್ಮ'ನಾಗಿ ಮಾತೃಸ್ಥಾನದಲ್ಲಿ ನಿಲ್ಲುತ್ತೇವೆ.
ಲೇಖಕರ ಕಿರುಪರಿಚಯ | |
ಶ್ರೀಮತಿ ಶ್ವೇತ ವಿ. ಮೂಲತಃ ಮೈಸೂರಿನವರಾದ ಇವರು ಎಂ.ಬಿ.ಎ. ಪದವೀಧರರು. ಕನ್ನಡ ಲೇಖನಗಳನ್ನು ಓದುವ ಹಾಗೂ ಬರೆಯುವ ಹವ್ಯಾಸ ಹೊಂದಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. Blog | Facebook | Twitter |
ಶ್ರೀಮತಿ ಶ್ವೇತ ಅವರೇ ನಿಮ್ಮ ಮಾತೃಸ್ಥಾನ ಲೇಖನ ತುಂಬಾ ತುಂಬಾ ಚನ್ನಗಿದೆ ಹಾಗೆಯೆ ಮುಂದುವರಿಸಿರಿ. ಪ್ರೀತಿಯ ವಂಧನೆಗಳೊಂದಿಗೆ
ಪ್ರತ್ಯುತ್ತರಅಳಿಸಿ