ಬುಧವಾರ, ನವೆಂಬರ್ 30, 2011

ರಾಜ್ಯೋತ್ಸವದ ನೆನಪಿನಂಗಳದಲ್ಲಿ ಕನ್ನಡ ನಾಡು-ನುಡಿ ನಮನ


ಸಂಪದ್ಭರಿತವಾದ ಐತಿಹಾಸಿಕ ಭವ್ಯ ಪರಂಪರೆ, ಭವ್ಯ ಹಿನ್ನಲೆಯುಳ್ಳ ಕನ್ನಡಾಂಬೆಗೆ ನಮೋನಮಃ. ಹರಿದು ಹಂಚಿ ಹಂಚಿ ಹೋಗಿದ್ದ ಕನ್ನಡ ನಾಡು, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ಮತ್ತು ಅಸಂಖ್ಯಾತ ಕನ್ನಡಿಗರಿಂದ, ಕನ್ನಡಾಭಿಮಾನಿಗಳಿಂದ ಒಂದಾಗಿ ಇಡಿಯಾಗಿದೆ. ಈ ನಾಡ ಇತಿಹಾಸ ಕ್ರಿ. ಪೂ. ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನದು. ಕರ್ನಾಟಕದ ಚಿನ್ನದ ಮೃದುಹೆಜ್ಜೆಗಳು ಹರಪ್ಪ- ಮೊಹಂಜೋದಾರೋ ನಾಗರೀಕತೆಯಲ್ಲಿಯೂ ಮೂಡಿವೆ. ಕದಂಬರು, ಗಂಗರು, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ಬಹಮನಿ, ವಿಜಾಪುರದ ಸುಲ್ತಾನರು, ಮೈಸೂರು ವಿಜಯನಗರ ಅರಸರು, ಸಾಮಂತರು, ಪಾಳೆಗಾರರು, ಹೀಗೆಯೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಕನ್ನಡ ನಾಡಿನ ಭವ್ಯತೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಕನ್ನಡಿಗರು ಮೆರೆದ ಪರಾಕ್ರಮ ಅದ್ವಿತೀಯ. ವಿಜಯನಗರ ಸಾಮ್ರಾಜ್ಯ ಗುರು ವಿದ್ಯಾರಣ್ಯರ ಮೂಲಕ ಸ್ಥಾಪಿಸಲ್ಪಟ್ಟು, ಬಳ್ಳಗಳಿಂದ ಮುತ್ತು ರತ್ನಗಳನ್ನು ಅಳೆದ ಸಿರಿನಗರ ಸಾಹಿತ್ಯ, ಸಂಸ್ಕೃತಿ ಮತ್ತು ವಾಸ್ತುಶಿಲ್ಪಗಳಿಗೆ, ಕಲೆಗಳಿಗೆ ಅಂದಿಗೂ ಇಂದಿಗೂ ಸುಪ್ರಸಿದ್ಧ ಕನ್ನಡಕ್ಕೆ ಎತ್ತಿದ ಕೈ, ಕಲ್ಪವೃಕ್ಷ.

ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ – ಕವಿವಾಣಿ, ಕಬ್ಬಿಗರುದಿಸಿದ ಮಂಗಳಧಾಮ – ಕವಿ ಕೋಗಿಲೆಗಳ ಪುಣ್ಯಾರಾಮ, ಕನ್ನಡ ನಾಡಿನ ಆಂತರ್ಯವೇ ಈ ಕಬ್ಬಿಗರು. 'ಕುಮಾರವ್ಯಾಸರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದು' ಕವಿರಾಜಮಾರ್ಗದ ಕರ್ತೃ ಅಮೋಘವಾಗಿ ಚಿತ್ರಿಸಿದ್ದಾನೆ. ಆದಿಕವಿ ಪಂಪ, ರನ್ನ, ಪೊನ್ನರ ಹಳೆಗನ್ನಡ; ಹರಿಹರ, ರಾಘವಾಂಕ, ಶರಣರ ನಡುಗನ್ನಡ; ನಂತರ ಹೊಸಗನ್ನಡ, ಹೀಗೆಯೇ ಭವ್ಯ ಸಾಹಿತ್ಯ ಪರಂಪರೆ ಬೆಳೆಯುತ್ತಲೇ ಇದೆ. 'ಚಲುವನರಸುವ ಜಾಣ ಬಂದು ನೋಡು' ಈ ಕನ್ನಡ ಅಕ್ಷರಗಳು ಬಳ್ಳಿಯನೇರಿರುವ ಹೂಕಾಯಿ ಹಣ್ಣುಗಳಂತೆ ಎಷ್ಟು ಸುಂದರ! ಕೇಶಿರಾಜನ 'ಶಬ್ದಮಣಿದರ್ಪಣ'ಕ್ಕೆ ಸರಿಸಾಟಿ ಬೇರೆ ದರ್ಪಣವಿಲ್ಲ. ನವ್ಯ, ನವೋದಯ, ಬಂಡಾಯ ಹೀಗೆ ಹೊಸ ಹೊಸ ಪ್ರಯೋಗಗಳಾಗಿವೆ. ರೂಪಕ, ಉಪಮಾ, ಅಲಂಕಾರ ಸಾಮ್ರಾಜ್ಯ ಚಕ್ರವರ್ತಿಗಳು ಕನ್ನಡ ನೆಲದಲ್ಲಿ ರಾರಾಜಿಸಿದ್ದಾರೆ. ಭಾಷಾಭಂಡಾರ ಚಿನ್ನದ ರೇಖೆಯಲ್ಲಿ ಕುಂದಣವಿದ್ದಂತಿದೆ. ಕನ್ನಡ ಮುತ್ತಿನ ಅಕ್ಷರಗಳ ಪ್ರಪಂಚಕ್ಕೆ ಯಥೇಚ್ಛವಾದ ಮಳೆ ಬೆಳೆ ಕೊಟ್ಟು ಸುಭಿಕ್ಷವನ್ನುಂಟುಮಾಡಿ; ಸತ್ಯ, ಧರ್ಮ, ಭಕ್ತಿ, ಜ್ಞಾನ, ಸುಖ, ಸಂತಸದ ಸೌಭಾಗ್ಯ ನೆಲೆಸುವಂತೆಯೂ ಅನುಗ್ರಹಿಸು ಎಂದು ಬಳ್ಳಾರಿ ಜಿಲ್ಲೆಯ ಹರಿಹರ ಶ್ರೀ ಪಂಪಾಪುರಾಧೀಶ್ವರ ವಿರೂಪಾಕ್ಷನನ್ನು ಪ್ರಾರ್ಥಿಸಿದ್ದಾನೆ. ಕನ್ನಡ ನಾಡಿನ ಇತಿಹಾಸ ಸಂಸ್ಕೃತಿಗಳು ಈ ಮಂಗಳ ಪ್ರಾರ್ಥನೆಯ ನಿಲುವಿನಲ್ಲೆಯೇ ವಿಜೃಂಭಿಸುತ್ತವೆ. ಪ್ರಕೃತಿದತ್ತ ಸಂಪನ್ಮೂಲಗಳಿಂದ, ಶಿಲ್ಪಕಲೆಗಳಿಂದ ಕೂಡಿದ ಬಳ್ಳಾರಿ ನಕ್ಷೆಯು ನಂದಿಯ ಆಕಾರದಲ್ಲಿದ್ದು, ಪರಮಪಾವನೆ ತುಂಗೆಯು ನಂದಿಯ ಬಲದಿಂದ ಹಾಯ್ದು, ಬೆನ್ನಿನ ಮೇಲೆ ಹರಿದು, ಕೊಂಬುಗಳ ಮಧ್ಯ ಸಾಗಿ ಹಾಗೆಯೇ ಕನ್ನಡ ನೆಲವನ್ನು ಪಾವನಗೊಳಿಸಿದೆ.

ತನ್ನದೇ ಆದ ಸಂಸ್ಕೃತಿ ಹೊಂದಿದ ಬಳ್ಳಾರಿ ಆದಿಮಾನವನ ಮೂಲ ಸ್ಥಾನವಾಗಿದೆ. ಪ್ರಾಚೀನ ಮಾನವನು ಈ ಜಿಲ್ಲೆಯಲ್ಲಿ ಎಲ್ಲಾ ಯುಗಗಳಲ್ಲಿಯೂ ನಡೆಯುತ್ತಾ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ. ರಾಮಾಯಣದ ಮೂಲ ಸುಗ್ರೀವ, ಹನುಮಂತ ಮೊದಲಾದವರು ಸಂಸ್ಕೃತಿಯ ಪ್ರತಿನಿಧಿಗಳು. ಹಂಪೆಯು ದಕ್ಷಿಣಕಾಶಿ ಮತ್ತು ಪಂಪಾಕ್ಷೇತ್ರವೆಂದು ಪ್ರಸಿದ್ಧಿಯಾಗಿದೆ. ಬ್ರಹ್ಮನ ಮಗಳು ಪಂಪಾದೇವಿ ಇಲ್ಲಿಯ ಪಂಪಾ ಸರೋವರದ ದಡದಲ್ಲಿ ತಪಸ್ಸುಮಾಡಿ ವಿರೂಪಾಕ್ಷನನ್ನು ಒಲಿಸಿ ಮದುವೆಯಾದ ರೋಚಕ ಪುರಾಣ ಕಥೆಯಿದೆ. ಬೆಟ್ಟವೊಂದರ ಮೇಲೆ ಮಾತಂಗ ಋಷಿ ತಪಸ್ಸು ಮಾಡಿದ ಮಾತಂಗ ಪರ್ವತವಿದೆ. ನದಿಯ ಮಧ್ಯದ ಮಂಟಪದಲ್ಲಿ ವಶಿಷ್ಠ ಋಷಿ ತಪಸ್ಸು ಮಾಡಿದ್ದಾಗಿದೆ. ರಾಮ ಸೀತಾ ಲಕ್ಷ್ಮಣರು ಬೀಡುಬಿಟ್ಟ ಕೋದಂಡರಾಮನ ದೇವಸ್ಥಾನ, ಶಬರಿ ಆಶ್ರಮ, ಅಂಜನಾದ್ರಿ ಬೆಟ್ಟ, ಆಂಜನೇಯನ ಜನ್ಮಸ್ಥಳ, ವಾಲಿಯ ರಾಜಧಾನಿ ಕಿಷ್ಕಿಂಧೆ - ಇವೆಲ್ಲ ಕನ್ನಡ ಹರಿಶ್ಚಂದ್ರ ಕಾವ್ಯದಲ್ಲಿದೆ. 'ಕೌಮುದಿ ಮಹೋತ್ಸವ' ಪಂಪಾಕ್ಷೇತ್ರದ ವರ್ಣನೆಯಿಂದ ಕೂಡಿದೆ.

ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ನಂದರು, ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ರಾಜ್ಯವಾಳಿದ್ದಾರೆ. ಶ್ರೀ ವಿದ್ಯಾರಣ್ಯರ ಅನುಗ್ರಹದಿಂದ ಹಕ್ಕ-ಬುಕ್ಕರು ಶ್ರೀ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದರೆ, ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಹಂಪೆಯ ವಿಜಯನಗರ ಸಾಮ್ರಾಜ್ಯದ ವೈಭವವು ದಶ-ದಿಕ್ಕುಗಳಿಗೂ ಹಬ್ಬಿತ್ತು. 'ರಮಾರಮಣ' ಬಿರುದು ಹೊಂದಿದ ಶ್ರೀ ಕೃಷ್ಣದೇವರಾಯನು ಮಹಾಶೂರನು, ಆಡಳಿತಗಾರನು, ಕಲೆ ಸಾಹಿತ್ಯಗಳ ಆಶ್ರಯದಾತನೂ, ಕವಿಶ್ರೇಷ್ಠನೂ ಆಗಿದ್ದನು. ಅಚ್ಚಳಿಯದ ಐತಿಹಾಸಿಕ ಪರಂಪರೆ ಹುಟ್ಟುಹಾಕಿದ ವಿಜಯನಗರದ ಸಂಸ್ಥಾಪಕನೂ ಆಗಿರುವನು. ಬಳ್ಳಾರಿ ಜಿಲ್ಲೆಯ ಎಲ್ಲ ತಾಲ್ಲೂಕು, ಹಳ್ಳಿಗಳು ತಮ್ಮವೇ ಆದ ಧಾರ್ಮಿಕ ಐತಿಹಾಸಿಕ ಭವ್ಯ ಮಹತ್ವ ಪಡೆದಿವೆ. ಅನೇಕ ಸಾಧುಸಂತರುಗಳಿಂದ, ತೀರ್ಥಕ್ಷೇತ್ರಗಳಿಂದ ಚಾರಿತ್ರಿಕ, ಪೌರಾಣಿಕ, ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದೇ ಅಲ್ಲದೆ ಇಂದಿಗೂ ಉಳಿಸಿಕೊಂಡು ಬಂದಿದೆ.

ಇಂದು ನಮ್ಮ ಜೀವನದ ವಿಧಾನ ಬದಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮಾನವನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಈ ಕ್ಷೇತ್ರವನ್ನು ನಮ್ಮ ಕನ್ನಡ ನಾಡು, ನುಡಿ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿದೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಿಶ್ವಕೋಶದ ಗಣಕೀಕರಣ ಮಾಡುತ್ತಿದೆ. ಸಹಸ್ರಾರು ಕನ್ನಡಿಗರು 'ಫೇಸ್ ಬುಕ್ ತಾಣ' ಬಳಸುತ್ತಿದ್ದಾರೆ. ಈಗ ಅಂತರ್ಜಾಲದಲ್ಲಿ ಕರ್ನಾಟಕ ಸರ್ಕಾರ 'ಈ-ಆಡಳಿತ' ಜಾರಿಗೆ ತಂದಿದೆ. ಇದು ಕನ್ನಡಿಗರಿಗೆ ಕೊಡುಗೆ. ಬೇರೆ ಭಾಷೆಯೊಂದಿಗೆ ಕನ್ನಡಿಗರೂ ಮತ್ತು ಕನ್ನಡ ಭಾಷೆ ತಲೆಯೆತ್ತಿ ನಿಲ್ಲಬೇಕಾದರೆ 'ತಂತ್ರಜ್ಞ ಕನ್ನಡಿಗರು' ಶ್ರಮಿಸಬೇಕು. ಶ್ರೀಗಂಧದ ಕನ್ನಡ, ಚೆನ್ನುಡಿ; ಅದು ಅರಳುವಂತೆ ಕನ್ನಡೇತರರು ಸಹಕರಿಸಬೇಕು.

'ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ' - ವಿಶ್ವಪರಂಪರೆಯ ತಾಣಗಳಲ್ಲಿ ಒಂದಾದ ಹಂಪೆಯು, ವಿಜಯನಗರದ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಬಿರುಬಿಸಿಲಿನ ಮಧ್ಯೆ ಕಲ್ಲುಗುಡ್ಡಗಳಲ್ಲಿ ಕಲೆ ಅರಳಿಸಿದ ಇತಿಹಾಸದ ಕುರುಹು ಭವ್ಯಪರಂಪರೆಗೆ ಸಾಕ್ಷಿ. ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲ ಈ ಕನ್ನಡಾಂಬೆಯ ಗುಡಿಯು!

ಜೈ ಭುವನೇಶ್ವರಿ – ಜೈ ಕರ್ನಾಟಕ.

ಲೇಖಕರ ಕಿರುಪರಿಚಯ
ಶ್ರೀಮತಿ ರೇಣುಕಾ ಪ್ರಕಾಶ್ ರಾವ್

ಬಳ್ಳಾರಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಂ. ಎ., ಬಿ. ಎಡ್., ಎಲ್. ಎಲ್. ಬಿ. ಪದವೀಧರರಾಗಿದ್ದು, ಶ್ರೀ ಗಿರೀಶ್ ಕಾರ್ನಾಡ್ ಮತ್ತು ವರಕವಿ ಬೇಂದ್ರೆಯವರಲ್ಲಿ ಶಿಷ್ಯತ್ವವನ್ನು ಪಡೆದಿದ್ದಾರೆ.

ಇವರು ಸುಧೀರ್ಘ ಮೂವತ್ತೊಂದು ವರ್ಷಗಳ ಭೋಧನಾನುಸಾರವನ್ನು ಹೊಂದಿದ್ದು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಸಹಸ್ರಾರು ವಿದ್ಯಾರ್ಥಿಗಳನ್ನು ಶಿಷ್ಯರನ್ನಾಗಿ ಪಡೆದಿದ್ದರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 29, 2011

ರಾಹುಲ್ ದ್ರಾವಿಡ್

ರಾಹುಲ್ ಶರದ್ ದ್ರಾವಿಡ್

ರಾಹುಲ್ ದ್ರಾವಿಡ್ ಎಂಬ ಹೆಸರು ಭಾರತೀಯ ಕ್ರಿಕೆಟ್ ನಲ್ಲಿ ನಂಬಿಕೆಯ ಸಂಕೇತ. ಭಾರತ ಕ್ರಿಕೆಟ್ ನ ಗೋಡೆ ಎಂದೇ ಹೆಸರಾಗಿರುವ ದ್ರಾವಿಡ್ ಬೆಂಗಳೂರಿನವರು ಎನ್ನುವುದು ಹೆಮ್ಮೆಯ ವಿಷಯ. ಅದರಲ್ಲೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಈ ಸ್ಫುರದ್ರೂಪಿ ಕ್ರಿಕೆಟ್ ತಾರೆ ಕನ್ನಡದ ಹೆಮ್ಮೆಯ ನಕ್ಷತ್ರ ಎಂದರೆ ತಪ್ಪಾಗಲಾರದು.

ರಾಹುಲ್ ಶರದ್ ದ್ರಾವಿಡ್ ಅವರು ಜನವರಿ 11, 1973 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದರು. ತಂದೆ ಶರದ್ ದ್ರಾವಿಡ್ ಮತ್ತು ತಾಯಿ ಪುಷ್ಪ. ಡಿಗ್ರಿ ಓದಿದ್ದು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ. ಅವರಿಗೆ ವಿಜಯ ಎಂಬ ಹೆಸರಿನ ಸಹೋದರನಿದ್ದಾನೆ. ದ್ರಾವಿಡ್ ತನ್ನ 12ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಪೂರ್. ತಮ್ಮ ಶಾಲೆಗೆ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್ ಅದ್ಭುತವಾದ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಮಾಜಿ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಪೂರ ಅವರ ಸಲಹೆಯಂತೆ ವಿಕೆಟ್ ಕೀಪಿಂಗ್ ಅನ್ನು ನಿಲ್ಲಿಸಿದರು.

1996 ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ದ್ರಾವಿಡ್ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲಂಡ್ ನ ಲಾರ್ಡ್ಸ್ ಮೈದಾನದಲ್ಲಿ ಆಡಿದರು. ಮೊದಲ ಏಕ ದಿನ ಪಂದ್ಯವನ್ನು ಶ್ರೀಲಂಕಾದ ವಿರುದ್ದ ಸಿಂಗಪುರದಲ್ಲಿ ಆಡಿದರು. ಇವರು ಏಕದಿನ ಪಂದ್ಯಗಳಲ್ಲಿ 344 ಪಂದ್ಯಗಳನ್ನು ಆಡಿ 10889 ರನ್ ಗಳನ್ನು 39.16 ಸರಾಸರಿಯಲ್ಲಿ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳನ್ನು ಹಾಗೂ 83 ಅರ್ಧ ಶತಕಗಳನ್ನು ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 160 ಪಂದ್ಯಗಳನ್ನು ಆಡಿ 13094 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 62 ಅರ್ಧ ಶತಕಗಳು ಕೂಡಿವೆ. ಟೆಸ್ಟ್ ನಲ್ಲಿ 13000 ರನ್ನುಗಳನ್ನು ಪೂರೈಸಿದ ವಿಶ್ವದ ದ್ವಿತೀಯ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 10000 ರನ್ ಗಳಿಗೂ ಅಧಿಕ ರನ್ ಗಳನ್ನು ಗಳಿಸಿದ ಭಾರತದ ಮೂರನೆ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಔಟಾಗದೆ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ “ ದ ವಾಲ್ ” (ಗೋಡೆ) ಎಂಬ ಅಡ್ಡಹೆಸರೂ ಪ್ರಾಪ್ತಿಯಾಗಿದೆ. ಪ್ರತಿಷ್ಠಿತ ವಿಸ್ಡನ್ ಸಂಸ್ಥೆಯು ಇವರನ್ನು 2000 ನೇ ಇಸವಿಯಲ್ಲಿ 'ವರ್ಷದ ಕ್ರಿಕೆಟಿಗ' ನೆಂದು ಪುರಸ್ಕರಿಸಿದೆ. 2004ರಲ್ಲಿ ಭಾರತ ಸರ್ಕಾರವು 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವರ್ಷ ಐಸಿಸಿ ಯು 'ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ' ನೆಂದು ಗೌರವಿಸಿದೆ ಹಾಗೂ ಭಾರತ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದರು. 2004 ನೇ ವರ್ಷದಲ್ಲಿ ಭಾರತ ತಂಡದ ನಾಯಕನಾಗಿ ಆಡಿದ ದ್ರಾವಿಡ್ ಶ್ರೀಲಂಕಾ ವಿರುದ್ದ ಸರಣಿ ಜಯವನ್ನೂ ಸಾಧಿಸಿದ್ದರು.

ಇವರು ಪ್ರತಿನಿಧಿಸಿದ ತಂಡಗಳು:
  1. ಭಾರತ
  2. ಸ್ಕಾಟ್ ಲ್ಯಾಂಡ್
  3. ಏಷ್ಯ 11
  4. ಐಸಿಸಿ ವರ್ಲ್ಡ್ 11
  5. ಕರ್ನಾಟಕ
  6. ಕೆಂಟ್
  7. ಎಂಸಿಸಿ
  8. ರಾಜಸ್ತಾನ್ ರಾಯಲ್ಸ್
  9. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇವರಿಗೆ ಒಲಿದು ಬಂದ ಪ್ರಶಸ್ತಿಗಳು:
  1. 1999: ಸಿಯೆಟ್ ಕ್ರಿಕೆಟರ್ ಆಫ್ 1999 ವರ್ಲ್ಡ್ ಕಪ್
  2. 2000: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ
  3. 2004: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ (ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)
  4. 2004: ಭಾರತ ಸರ್ಕಾರದ 'ಪದ್ಮಶ್ರಿ' ಪ್ರಶಸ್ತಿ
  5. 2004: ವರ್ಷದ ಐಸಿಸಿ ಟೆಸ್ಟ್ ಆಟಗಾರ
  6. 2006: ಐಸಿಸಿ ಟೆಸ್ಟ್ ತಂಡದ ನಾಯಕ

ಲೇಖಕರ ಕಿರುಪರಿಚಯ
ಶ್ರೀ ಆರ್ತೇಶ

ಇವರು ಹುಟ್ಟಿದ್ದು ಉಡುಪಿಯಲ್ಲಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಐಟಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಇವರ ಹವ್ಯಾಸಗಳಲ್ಲಿ ಅಂತರ್ಜಾಲ ಜಾಲಾಡುವುದು, ಸಂಗೀತ ಕೇಳುವುದು, ತಾಂತ್ರಿಕ ವಿಷಯಗಳ ಕುರಿತಾದ ಲೇಖನಗಳನ್ನು ಓದುವುದೂ ಸೇರಿದೆ. ಕ್ರಿಕೆಟ್ ನ ಕಟ್ಟಾ ಅಭಿಮಾನಿಯಾದ ಇವರು ತಮ್ಮ ಈ ಮೊದಲ ಲೇಖನವನ್ನು ಕಹಳೆಗಾಗಿ ನೀಡಿದ್ದಾರೆ.

Blog  |  Facebook  |  Twitter

ಸೋಮವಾರ, ನವೆಂಬರ್ 28, 2011

ತಾಯಿಯ ಒಡಲಾಳದಿಂದ

ಛಾಯಾಚಿತ್ರ ಕೃಪೆ : ಆಲ್ಬರ್ಟ್ ಐನ್ಸ್ಟೀನ್

ಕ್ಷೇಮಉಭಯ ಕುಶಲೋಪರಿ ಸಾಂಪ್ರತ28-11-2011


ಮಗೂ.. ಹೇಗಿದ್ದಿಯಾ..? ಎಲ್ಲವೂ ಸೌಖ್ಯವೇ?? ನಿನ್ನ ಕ್ಷೇಮದ ವಿಚಾರವಾಗಿಯೇ ನಾನು ಸದಾಕಾಲ ಚಿಂತಿಸುತ್ತಿರುವೆ. ನಿಮ್ಮೆಲ್ಲರುಗಳ ಹೊರತು ನನ್ನವರೆಂದು ಹೇಳಿಕೊಳ್ಳಲು ಮತ್ತಿನ್ಯಾರೂ ಇಲ್ಲವಲ್ಲ ನನಗೆ! ನನ್ನೊಳಗಿರುವ ಸಮಸ್ತ ಜೀವರಾಶಿಗಳ ಆರೈಕೆಯೊಂದಲ್ಲದೆ ನನಗೆ ಇನ್ಯಾವುದರ ಹಂಬಲವಿದ್ದೀತು ಹೇಳು?

ಸೌರಮಂಡಲದ ಮೂರನೇ ಸಂತಾನವಾಗಿ ಹುಟ್ಟಿ, ವರುಣ ದೇವನ ಕೃಪೆಯಿಂದ, ಜೀವಿಸಲು ಪೂರಕವಾದ ವಾತಾವರಣ ಹೊಂದಿರುವುದು ನನ್ನ ಸೌಭಾಗ್ಯವೇ ಸರಿ. ಅದರಿಂದ, ಕೋಟ್ಯನುಕೋಟಿ ಜೀವ ವೈವಿಧ್ಯಗಳನ್ನು ಸೃಷ್ಟಿಸಿ, ಅವೆಲ್ಲವುಗಳ ಲಾಲನೆ-ಪಾಲನೆಯಲ್ಲಿ ನಾನು ಕಂಡುಕೊಂಡ ಸಾರ್ಥಕತೆ ಅಪಾರ. ನಾ ಹೆತ್ತ ಜೀವಕೋಟಿಗಳಲ್ಲಿ ಅತ್ಯಂತ ಉನ್ನತ ಮಟ್ಟದ ಪ್ರಬುದ್ಧತೆ ಸಾಧಿಸಿರುವುದು ಮಾನವರುಗಳಾದ ನೀವು ಮಾತ್ರವೇ.

ಮನುಕುಲವು ಬೆಳೆದಂತೆಲ್ಲಾ, ತಾವುಗಳು ಇತರರಂತೆ ಕೇವಲ ನನ್ನ ಸಾಮಾನ್ಯ ಸಂಜಾತರು ಎನ್ನುವುದನ್ನು ಮರೆತ ಮಾನವರುಗಳು ನನ್ನೊಡಲಿನ ಮಾನವೇತರರನ್ನೆಲ್ಲಾ ಸ್ವಾರ್ಥಸಾಧನೆಗೆ ಬಳಸಿಕೊಂಡದ್ದು ಎಷ್ಟರ ಮಟ್ಟಿಗೆ ಎಂದರೆ, ಅನೇಕ ಜೀವ ಸಂಕುಲಗಳು ಶಾಶ್ವತವಾಗಿ ನಶಿಸಿಹೋಗುವಷ್ಟು! ತಂತ್ರಜ್ಞಾನದ ಅನ್ವೇಷಣೆಯಲ್ಲಿ ಅನೇಕ ಅದ್ಭುತ ಸಾಧನೆಗೈದ ಮನುಷ್ಯ, ನನ್ನೊಳಗಿನ ಸಂಪನ್ಮೂಲಗಳು ಬರಿಯ ಮಾನವಕುಲಕ್ಕೆ ಮಾತ್ರವೇ ಸೀಮಿತವಾಗಿರದೆ ಪ್ರತಿಯೊಂದು ಜೀವಕಣಕ್ಕೂ ಮೀಸಲಾಗಿರುವುದೆಂಬ ಸರಳ ವಾಸ್ತವವನ್ನು ಮನಗಾಣದೇ ಹೋಗಿರುವುದು ದುರಂತದ ಸಂಗತಿ.

ಮಗುವೇ, ನಿನ್ನ ಜಾಣ್ಮೆಯ ಅಟ್ಟಹಾಸ ಇತರೆ ಜೀವಿಗಳ ಶೋಷಣೆಗಷ್ಟೇ ಕೊನೆಗಾಣದೆ, ನನ್ನ ಜೀವಕ್ಕೇ ಸಂಚಕಾರ ತಂದೊದಗಿಸುವ ಮಟ್ಟಕ್ಕೆ ತಲುಪಿಬಿಟ್ಟಿದೆ. ಪೂರ್ವದಿಂದಲೂ ನಾನು ಕಾಪಾಡಿಕೊಂಡು ಬರುತ್ತಿದ್ದ ಪ್ರಾಕೃತಿಕ ಸಮತೋಲನವನ್ನು ನೀನು ಬುಡಮೇಲು ಮಾಡುತ್ತಿರುವುದರ ಅಂತಿಮ ಪರಿಣಾಮ ಮನುಕುಲದ ಸರ್ವನಾಶವೇ ಆಗಿದೆ ಎನ್ನುವ ಘೋರ ಸತ್ಯದ ಅರಿವು ನಿನಗಾಗುವುದಾದರೂ ಎಂದು?

ಇನ್ನು, ಮಾಲಿನ್ಯದ ಪರಾಕಾಷ್ಟೆಯನ್ನು ಬಣ್ಣಿಸುವುದೆಂತು? ಮಲಿನ ಗಾಳಿಯು ನನ್ನ ಉಸಿರುಗಟ್ಟಿಸುವುದಲ್ಲದೆ, ಸುರಕ್ಷಾ ಮೇಲ್ಪದರವನ್ನು ದುರ್ಬಲಗೊಳಿಸಿ ಅಪಾಯಕಾರಿ ವಿಕಿರಣಗಳು ನುಸುಳಲು ಎಡೆಮಾಡಿಕೊಟ್ಟಿದೆ. ಕಲುಷಿತಗೊಂಡ ನೀರು ಬಾಯಾರಿಸಿದೆಯಲ್ಲದೆ, ಅಸಂಖ್ಯಾತ ಕೊಳವೆ ಬಾವಿಗಳು ನನ್ನ ಒಡಲನ್ನು ಬಗೆದು ಬರಿದು ಮಾಡಿವೆ. ಎಲ್ಲೆ ಮೀರಿ ಬೆಳೆದಿರುವ ನಾಗರೀಕತೆಯು ಹಸಿರನ್ನೇ ಇಲ್ಲವಾಗಿಸಿ ನನ್ನ ಋತುಚಕ್ರವನ್ನು ಹಾಳುಮಾಡಿದೆ. ಅನ್ನಾಹಾರ ಬೆಳೆಯಲು ರಾಸಾಯನಿಕಗಳ ನಿರಂತರ ಬಳಕೆ ಫಲವತ್ತಾದ ಭೂಮಿಯನ್ನು ಮಣ್ಣಾಗಿಸಿದೆ. ಪರ್ಯಾಯ ಶಕ್ತಿಯುತ್ಪಾದನೆಗೆಂದು ನಿರ್ಮಿಸಲಾಗಿರುವ ಅಣುಸ್ಥಾವರಗಳು ನನ್ನ ಮಡಿಲಿಗೆ ಕಟ್ಟಿದ ಕೆಂಡದಂತಾಗಿವೆ.

ಸರಿ ಸುಮಾರು 200 ಸಾವಿರ ವರ್ಷಗಳಿಂದ ನಿನ್ನ ಅವಿರತ ಆರೈಕೆಯಲ್ಲಿಯೇ ಜೀವ ಸವೆಸಿರುವ ನಿನ್ನ ಈ ತಾಯಿಯು ಇನ್ನು ನಿನಗೆ ಬೇಡವಾದಳೇ? ಮಂಗಳಾದಿಯಾಗಿ ಅನ್ಯ ಗ್ರಹಗಳು ಮಲತಾಯಿಯಂತಾದಾವೆಯೇ ವಿನಃ ನನ್ನಂತೆ ತಾಯ್ತನದ ವಾತ್ಸಲ್ಯ ತೋರಲಾರವು. ಮುಪ್ಪಿನಿಂದ ಕೃಶವಾಗಿ ಹೋಗುತ್ತಿರುವ ನಿನ್ನ ತಾಯಿಯಲ್ಲಿ ಮಮತೆ ಮೂಡದೆ? ವೃದ್ಧಾಪ್ಯದಲ್ಲಿ ನೀನಲ್ಲದೇ ನನ್ನ ಕಾಳಜಿ ಮಾಡುವವರು ಇನ್ಯಾರಿದ್ದಾರೆ ಕಂದಾ..?? ಈ ನನ್ನ ಅಂತರಾಳದ ತಳಮಳ ನಿನಗೆ ತಿಳಿದೀತೆ? ಮನದಾಳದ ಈ ಮರುಗು ನಿನ್ನ ಹೃದಯ ಮುಟ್ಟೀತೆ.? ಒಡಲಾಳದ ನನ್ನ ಕೂಗು ನಿನ್ನ ಕಿವಿಯ ತಟ್ಟೀತೆ..??


ಇಂತು ನಿನ್ನ ಪ್ರೀತಿಯ,
ಭೂತಾಯಿ.

ಲೇಖಕರ ಕಿರುಪರಿಚಯ
ಶ್ರೀ ಪ್ರಶಾಂತ್ ಜಚಿ

ಉದ್ಯಾನನಗರಿ ಬೆಂಗಳೂರಿನವರಾದ ಇವರು, ಕರ್ನಾಟಕ ಹಾಗೂ ಕನ್ನಡದ ಬಗೆಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ.

ಕನ್ನಡ ನಾಡು-ನುಡಿಗೆ ತಮ್ಮ ಶಕ್ತಿಯಾನುಸಾರ ಪ್ರಾಮಾಣಿಕ ಸೇವೆಯನ್ನು ಸದಾಕಾಲ ಸಲ್ಲಿಸುವ ಹಂಬಲ ಇವರದು.

Blog  |  Facebook  |  Twitter

ಭಾನುವಾರ, ನವೆಂಬರ್ 27, 2011

ನಮ್ಮೂರ ಸಿಡಿ ಹಬ್ಬ

ಊರ ಹಬ್ಬ ಅಥವಾ ಜಾತ್ರೆ ಎಂದರೆ ನಮ್ಮ ಕಣ್ಣ ಮುಂದೆ ಸರಿಯುವುದು ಜನ ತುಂಬಿದ ಊರು, ಸಡಗರ ಸಂಭ್ರಮದ ಬೀದಿಗಳು, ಗ್ರಾಮದೇವತೆ, ಆ ಪ್ರದೇಶಕ್ಕೆ ಸೀಮಿತವಾದ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು. ಇಂದಿಗೂ ನಗರದಲ್ಲಿ ಹುಟ್ಟಿ ಬೆಳೆದವರಿಗೆ ಜಾತ್ರೆಗಳದ್ದು ಅಪರಿಚಿತ ಅನುಭವ. ಹಳ್ಳಿಯ ಹಿನ್ನಲೆಯ ನಗರವಾಸಿಗಳಿಗೆ ನೆನಪುಗಳ ಮೆರವಣಿಗೆಗೊಂದು ಮತ್ತೊಂದು ಅವಕಾಶ.

ಬೃಹದಾಕಾರದ ದೀಪಾಲಂಕಾರ

ಇಲ್ಲೊಂದು ಊರು; ನಾನು ಓದಿ, ಬೆಳೆದ ಊರು, ಹೆಸರು - ಮಳವಳ್ಳಿ. ಸಕ್ಕರೆಯ ನಾಡು ಮಂಡ್ಯ ಜಿಲ್ಲೆಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು 104 ಕಿ.ಮಿ. ದೂರದಲ್ಲಿದೆ. 'ಸಿಡಿ ಹಬ್ಬ' ಇಲ್ಲಿಯ ಊರ ಹಬ್ಬ, 'ಸಿಡಿ ಜಾತ್ರೆ' ಅಂತಲೂ ಪ್ರಸಿದ್ಧ. ಪ್ರತಿ ವರ್ಷ ಜನವರಿಯ ಕೊನೆಯ ಅಥವಾ ಫೆಬ್ರವರಿಯ ಮೊದಲ ಹುಣ್ಣಿಮೆಗೆ ಬರುವ ಶುಕ್ರವಾರ ಹಾಗೂ ಶನಿವಾರದಂದು ಸಿಡಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಆಚರಣೆಗಳ ಉಸ್ತುವಾರಿ ಒಂದು ಪಂಗಡ ಅಥವಾ ಒಂದು ಜನಾಂಗಕ್ಕೆ ಸೇರಿದ್ದಲ್ಲ ಎಂಬುದು ಇಲ್ಲಿಯ ವಿಶೇಷತೆ. ಹಿಂದಿನ ಕಾಲದಿಂದಲೂ ಎಲ್ಲಾ ಕೋಮಿನವರು ಒಂದೊಂದು ಜವಾಬ್ದಾರಿ ಹೊತ್ತು, ಸೌಹಾರ್ದತೆಯಿಂದ ಹಬ್ಬ ಆಚರಿಸುತ್ತಾರೆ.

ಸಿಡಿ ಹಬ್ಬ

ಇಲ್ಲಿಯ ಗ್ರಾಮದೇವತೆ, ದಂಡಿನ ಮಾರಮ್ಮ. ಹಿಂದಿನ ಕಾಲದಲ್ಲಿ ರಾಜರು ದಂಡೆತ್ತಿ ಹೋಗುವ ಮುನ್ನ ಈ ದೇವತೆಯ ಆಶೀರ್ವಾದ ಪಡೆದು ಹೋಗುತ್ತಿದ್ದರು. ಆದ್ದರಿಂದ ಈ ದೇವಿಗೆ ದಂಡಿನ ಮಾರಮ್ಮ ಎಂಬ ಹೆಸರು ಪ್ರಾಪ್ತಿಯಾಯಿತೆನ್ನುತ್ತಾರೆ ಇಲ್ಲಿಯ ಸ್ಥಳೀಯರು. ಗ್ರಾಮಕ್ಕೆ ಯಾವುದೇ ರೀತಿಯ ಮಾರಕಗಳು ಬಾರದಿರಲಿ ಹಾಗೂ ಗ್ರಾಮಸ್ಥರು ಸುಭಿಕ್ಷವಾಗಿರಲೆಂದು ಸಿಡಿ ಹಬ್ಬವನ್ನು ಊರಿನ ಜನರು ಶ್ರದ್ಧೆಯಿಂದ ಆಚರಿಸುತ್ತಾರೆ. ಭಕ್ತಿ ಪೂರ್ವಕ ಹಬ್ಬದ ಆಚರಣೆಯಿಂದ ಸುಖ-ಶಾಂತಿ ಲಭಿಸುತ್ತದೆ ಮತ್ತು ತಮ್ಮ ಕೋರಿಕೆಗಳು ಈಡೇರುತ್ತವೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ.

ದಂಡಿನ ಮಾರಮ್ಮ

ಹಬ್ಬದ ವಾರದ ಹಿಂದಿನ ಶುಕ್ರವಾರ ಮತ್ತು ಮಂಗಳವಾರದಂದು ದಂಡಿನ ಮಾರಮ್ಮ ದೇವಿಗೆ ಅದ್ದೂರಿ ಪೂಜೆ ಸಲ್ಲಿಸುವುದರ ಮೂಲಕ ಸಿಡಿ ಹಬ್ಬ ಪ್ರಾರಂಭವಾಗುತ್ತದೆ. ಶುಕ್ರವಾರದ ಸಂಜೆ ಸಿಡಿರಣ್ಣ ಅಲಂಕೃತಗೊಳ್ಳುವ ಸಮಯ. ಸುಮಾರು 44 ಅಡಿ ಉದ್ದದ ತವಸದ ಮರದ ಕಂಬಕ್ಕೆ ಮನುಷ್ಯನ ಕಂಚಿನ ಪ್ರತಿಮೆಯನ್ನು ನೇತು ಹಾಕಿ, ಬಲೂನು, ಹೂಗಳಿಂದ ಸಿಂಗರಿಸಿದ ರಥಕ್ಕೆ ಸಿಡಿರಣ್ಣ ಎಂದು ಹೆಸರು. ಮೆರವಣಿಗೆಗೆ ಹೊರಟ ಸಿಡಿರಣ್ಣನಿಗೆ ಬಾಳೆ ಹಣ್ಣು, ಜವನವನ್ನು ಎಸೆಯುವುದು ಪದ್ಧತಿ. ಬಹಳ ಹಿಂದಿನ ದಿನಗಳಲ್ಲಿ ಕಂಚಿನ ಪ್ರತಿಮೆಯ ಬದಲು ಮನುಷ್ಯನನ್ನು ನೇತು ಹಾಕುವ ಪ್ರತೀತಿಯಿತ್ತು. ಕಾಲ ಕ್ರಮೇಣ ಮನುಷ್ಯನನ್ನು ಕಂಬಕ್ಕೆ ನೇತು ಹಾಕುವ ಆಚರಣೆ ಹಿಂಸೆಯ ಸಂಕೇತವೆನಿಸಿ, ಕಂಚಿನ ಪ್ರತಿಮೆಯನ್ನು ಕಟ್ಟುವ ಪದ್ಧತಿ ಶುರುವಾಯಿತು.

ಸಿಡಿರಣ್ಣ ರಥ

ಹಬ್ಬದಲ್ಲಿ ಸಿಡಿರಣ್ಣನ ಜೊತೆಗೆ ಅಣ್ಣೂರು ತಿಬ್ಬಾದೇವಿ ಹಾಗೂ ತೊರೆ ಬೊಮ್ಮನಹಳ್ಳಿ ಪಟ್ಟಲದಮ್ಮ ದೇವಿಗಳ ಉತ್ಸವ ಮೂರ್ತಿಗಳು ಕೂಡ ಮೆರವಣಿಗೆಗೆ ಸಜ್ಜಾಗುತ್ತವೆ. ಅಲಂಕೃತಗೊಂಡ ಎಲ್ಲಾ ರಥಗಳು ರಾತ್ರಿಯೆಲ್ಲಾ ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಹೊರಟು, ಬೆಳಗಿನ ಜಾವದ ಹೊತ್ತಿಗೆ ಪಟ್ಟಲದಮ್ಮನ ದೇಗುಲ ಸೇರುತ್ತದೆ. ಜನಪದ ಕಲಾ ತಂಡಗಳು, ಕೋಲಾಟಗಳು, ತಂಬಿಟ್ಟು ಆರತಿ ಹೊತ್ತ ಹೆಂಗಸರು ಹಾಗೂ ಮತ್ತಿತರ ಮನರಂಜನೆ ನೀಡುವ ತಂಡಗಳು ಮೆರವಣಿಗೆಯ ಜೊತೆಯಾಗುತ್ತಾರೆ. ಉತ್ಸವ ಮೂರ್ತಿಗಳ ಪೂಜೆಯ ನಂತರ, ಪೂಜಾರಿಯಿಂದ ಬೆಂಕಿ ಕೊಂಡ ಹಾಯಿಸುತ್ತಾರೆ. ತದ ನಂತರ ನೂರಾರು ಭಕ್ತರು ತಮ್ಮ ಹರಕೆಯ ನಿಮಿತ್ತ ಇಲ್ಲಿ ಬೆಂಕಿ ಕೊಂಡ ಹಾಯುತ್ತಾರೆ ಹಾಗೂ ಪ್ರಾಣಿಗಳನ್ನು ಬಲಿ ನೀಡಿ ಪೂಜೆ ಸಲ್ಲಿಸುತ್ತಾರೆ.

ತಿಬ್ಬಾ ದೇವಿ

ಜಾತ್ರೆಗಳ ಮತ್ತೊಂದು ವಿಶೇಷತೆ ಅಂಗಡಿಗಳು. ಕಡ್ಲೆಪುರಿ, ಬತಾಸು, ಕಡ್ಲೆಕಾಯಿ, ಬಲೂನು, ಬೊಂಬೆಗಳು, ಮಿಠಾಯಿಗಳು ಎಲ್ಲವೂ ಲಭ್ಯ. ಖರೀದಿಗಂತೂ ತುಂಬಾ ಆಯ್ಕೆಗಳು ಇರುತ್ತವೆ. ಅದರಲ್ಲೂ ಮಕ್ಕಳಿಗಂತೂ ವಿವಿಧ ಆಟಿಕೆಗಳು ಲಭ್ಯ. ದಿನವಿಡೀ ಜಾತ್ರೆಯ ಸಡಗರ ಸಂಭ್ರಮ ಊರಲೆಲ್ಲಾ ಕಂಡು ಬರುತ್ತದೆ.

ಸಂಭ್ರಮದ ಜಾತ್ರೆಗೆ ನೀವೂ ಮರೆಯದೇ ಬರುತ್ತೀರಲ್ಲ..?? ನೆನಪುಗಳ ಮೆರವಣಿಗೆಗೆ ಸಜ್ಜಾಗುತ್ತೀರಲ್ಲ..?? ನಿಮಗೆಲ್ಲರಿಗೂ ಹಬ್ಬದ ಪ್ರೀತಿಪೂರ್ವಕ ಆಮಂತ್ರಣ...

ಲೇಖಕರ ಕಿರುಪರಿಚಯ
ಶ್ರೀಮತಿ ಪವಿತ್ರ ಹೆಚ್.

ಸಾಫ್ಟ್ ವೇರ್  ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಇವರು, ಪರಿಸರ ಪ್ರೇಮಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ವೈದ್ಯಕೀಯ ನ್ಯಾಯಶಾಸ್ತ್ರ (Forensic Science) ದಲ್ಲಿ ಬಳಸುವ ಬರವಣಿಗೆಯ ವಿಶ್ಲೇಷಣೆ (Handwriting Analysis) ಯಲ್ಲಿಯೂ ಪದವಿಯನ್ನು ಹೊಂದಿದ್ದಾರೆ.

ಇವರು ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುವ ಉದಯೋನ್ಮುಕ ಛಾಯಾಗ್ರಾಹಕಿ ಎಂಬುದಕ್ಕೆ ಮೇಲಿನ ಛಾಯಾಚಿತ್ರಗಳೇ ಸಾಕ್ಷಿ.

Blog  |  Facebook  |  Twitter

ಶನಿವಾರ, ನವೆಂಬರ್ 26, 2011

ಬೆಂಗಳೂರಿನ ಕೆಂಪೇಗೌಡ ಗೋಪುರಗಳು

ಲಾಲ್-ಬಾಗ್ ಕೆಂಪೇಗೌಡ ಗೋಪುರ
ಉದ್ಯಾನನಗರಿ ಎಂದೇ ಪ್ರಖ್ಯಾತವಾಗಿರುವ ಬೆಂಗಳೂರು ಮಹಾನಗರದ ನಾಲ್ಕೂ ದಿಕ್ಕುಗಳಲ್ಲಿ ಕೆಂಪೇಗೌಡ ಕಟ್ಟಿಸಿದರು ಎನ್ನಲಾದ ಗೋಪುರಗಳು ಇವೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಗೋಪುರಗಳ ಇತಿಹಾಸಕ್ಕೆ ಹೊಂದಿಕೊಂಡಂತೆ ಹಲವಾರು ಕುತೂಹಲಕಾರಿ ಹಿನ್ನೆಲೆಗಳನ್ನೂ ಸಹ ನಾವು ಕೇಳಿದ್ದೇವೆ. ಸಾಮಾನ್ಯವಾಗಿ ಬಹುತೇಕ ಮಂದಿ ಹೇಳುವುದೇನೆಂದರೆ, ಬೆಂಗಳೂರು ನಗರವು ಅದರ ನಾಲ್ಕೂ ದಿಕ್ಕಿಗೆ ಇರುವ ಕೆಂಪೇಗೌಡ ಗೋಪುರಗಳ ಸಹರದ್ದು ಮೀರಿ ಬೆಳೆದರೆ ಕೇಡುಂಟಾಗುತ್ತದೆ; ಬೆಂಗಳೂರು ನಗರವು ನಾಲ್ಕೂ ದಿಕ್ಕಿಗಿರುವ ಗೋಪುರಗಳವರೆಗೆ ಬೆಳೆಯುವ ಸಾಧ್ಯತೆ ಇದೆಯೆಂದು ಕೆಂಪೇಗೌಡರು ಅವುಗಳನ್ನು ನಿರ್ಮಿಸಿದರು; ಇತ್ಯಾದಿ.

ಶ್ರೀ ಕರ್ಲಮಂಗಲಂ ಶ್ರೀಕಂಠಯ್ಯ ಇವರು ರಚಿಸಿದ 'ಕೆಂಪೇಗೌಡನ ಜಯಪ್ರಶಸ್ತಿ' ಎಂಬ ಗ್ರಂಥದಲ್ಲಿ ಈ ಗೋಪುರಗಳು ಎರಡನೆಯ ಕೆಂಪೇಗೌಡನ ಕಾಲದಲ್ಲಿ ನಿರ್ಮಾಣವಾಗಿವೆ ಹಾಗೂ ಈ ರೀತಿಯ ಗೋಪುರಗಳನ್ನು ಬೆಂಗಳೂರಿನ ಚತುರ್ದಿಕ್ಕಿನಲ್ಲಿಯೂ ಕಟ್ಟಿಸಲಾಯಿತು ಎಂಬುದಾಗಿ ತಿಳಿಸಲಾಗಿದೆ. ಈ ಕಾರಣಕ್ಕಾಗಿಯೇ ಏನೋ, ಬೆಂಗಳೂರಿನಲ್ಲಿ ಇರುವ ಗೋಪುರಗಳ ಸಂಖ್ಯೆ ನಾಲ್ಕು ಎಂಬ ನಂಬಿಕೆ ಉಂಟಾಗಿದೆ. ಆದರೆ, ಇತ್ತೀಚಿನ ಕೆಲವು ತಜ್ಞರ ಪ್ರಕಾರ ಬೆಂಗಳೂರಿನಲ್ಲಿರುವ ಕೆಂಪೇಗೌಡರ ಕಾಲದ ಗೋಪುರಗಳ ಸಂಖ್ಯೆ ಎಂಟು. ಅವು ಯಾವುವೆಂದರೆ:
  1. ಲಾಲ್-ಬಾಗ್ ಹಿಂಭಾಗದ ಬೃಹತ್ ಬಂಡೆಯ ಮೇಲಿರುವ ಗೋಪುರ
  2. ಅಲಸೂರು ಕೆರೆಯ ಬದಿಯ ಗುಡ್ಡದ ಮೇಲಿರುವ ಗೋಪುರ
  3. ಕೆಂಪಾಂಬುಧಿ ಕೆರೆಯ ಬದಿಗಿರುವ ಗೋಪುರ
  4. ಕೆಂಪಾಂಬುಧಿ ಕೆರೆಯ ಇನ್ನೊಂದು ಬದಿಗಿರುವ ಗೋಪುರ
  5. ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದ ಬಳಿಯಿರುವ ಗೋಪುರ
  6. ಗವಿಗಂಗಾಧರೇಶ್ವರ ಗುಹಾಂತರ ದೇವಾಲಯದ ಬದಿಗಿರುವ ಗೋಪುರ
  7. ದೊಡ್ಡ ಬಸವಣ್ಣನ ಗುಡಿಯ ಹಿಂಭಾಗದಲ್ಲಿರುವ ಗೋಪುರ
  8. ಬಿನ್ನಿಮಿಲ್ ಕೆರೆಯ ಬದಿಯಲ್ಲಿದ್ದ ಗೋಪುರ
ಕೆಂಪೇಗೌಡರ ಗೋಪುರಗಳೆಲ್ಲವೂ ಎತ್ತರವಾದ ಪ್ರದೇಶಗಳಲ್ಲಿದ್ದು, ಬಹುಶಃ ತನ್ನ ಸಾಮ್ರಾಜ್ಯವನ್ನು ಶತ್ರುಗಳ ಧಾಳಿಯಿಂದ ರಕ್ಷಿಸಿಕೊಳ್ಳಲು ಆತ ಮಾಡಿಕೊಂಡಿದ್ದ ರಕ್ಷಣಾ ವ್ಯವಸ್ಥೆಯ ಅಂಶಗಳಂತೆ ತೋರುತ್ತವೆ. ಗೋಪುರಗಳಲ್ಲಿ ಸದಾ ಕಾವಲುಗಾರರು ಬೀಡುಬಿಟ್ಟು, ಶತ್ರುಗಳಿಂದ ಒದಗಬಹುದಾದ ತೊಂದರೆಗಳ ಬಗೆಗೆ ಮುನ್ನೆಚ್ಚರಿಕೆ ನೀಡುತ್ತಿದ್ದಿರಬೇಕು. ಆದ್ದರಿಂದಲೇ, ಎಲ್ಲಾ ಗೋಪುರಗಳೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಾರ್ಗದಲ್ಲಿಯೇ ಇವೆ.

ಈ ಎಲ್ಲಾ ಗೋಪುರಗಳ ಪೈಕಿ, ಲಾಲ್-ಬಾಗ್ ಹಾಗೂ ಮೇಖ್ರಿ ವೃತ್ತದ ಬಳಿಯಿರುವ ಗೋಪುರಗಳನ್ನು ಪುನರ್ ನಿರ್ಮಿಸಲಾಗಿದ್ದು, ತಮ್ಮ ಹಳೆಯ ವಿನ್ಯಾಸವನ್ನು ಕಳೆದುಕೊಂಡಂತೆ ಕಾಣುತ್ತವೆಯಾದರೂ ಮಹಾನಗರ ಪಾಲಿಕೆಯ ಸೂಕ್ತ ನಿರ್ವಹಣೆಯ ಕಾರಣ ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಅಲಸೂರು ಕೆರೆಯ ಬಳಿಯಿರುವ ಗೋಪುರವು ಸೈನಿಕರ ಸುಪರ್ದಿಯಲ್ಲಿರುವುದರಿಂದ, ವೀಕ್ಷಣೆಗೆ ಅವಕಾಶಗಳು ಕಡಿಮೆ. ಉಳಿದವುಗಳ ಅವಸ್ಥೆ ಹೇಳತೀರದಾಗಿದ್ದು, ಅತ್ಯಂತ ಶಿಥಿಲಗೊಂಡಿದ್ದರೆ, ಬಿನ್ನಿಮಿಲ್ ಸಮೀಪದ ಗೋಪುರವು ಸಂಪೂರ್ಣವಾಗಿ ನಾಶವಾಗಿದೆ.

ನಾಗರೀಕತೆ ಬೆಳೆದಂತೆಲ್ಲಾ ಹಳೆಯ ಅವಶೇಷಗಳನ್ನು ನೆಲಸಮ ಮಾಡಿ, ಮುಗಿಲೆತ್ತರದ ವಿನೂತನ ಕಟ್ಟಡಗಳನ್ನು ನಿರ್ಮಿಸುತ್ತಿರುವ ನಾವು ಬೆಂಗಳೂರಿನಲ್ಲಿರುವ ಭವ್ಯವಾದ ಪುರಾತನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಬಗೆಗೆ ಚಿಂತನೆ ನಡೆಸುತ್ತಿಲ್ಲವೇನೋ ಎಂಬ ಶಂಕೆ ಮೂಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಾಗರಿಕ ಪ್ರಜ್ಞೆ ಮೆರೆದು ನಮ್ಮಲ್ಲಿರುವ ಪುರಾತನ ಸ್ಮಾರಕಗಳ ಸಂರಕ್ಷಣೆ ಮಾಡಬೇಕಿದೆ.

ಲೇಖಕರ ಕಿರುಪರಿಚಯ
ಶ್ರೀ ವಿವೇಕಾನಂದ ವಿ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಬಿ.ಇ. ಪದವೀಧರರು. ಪ್ರಸ್ತುತ ಬೆಂಗಳೂರಿನ ಹೆಸರಾಂತ ಐಟಿ ಕಂಪನಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಕಥೆ, ಕಾದಂಬರಿ ಓದಿವ ಹಾಗೂ ಹಳೆಯ ಚಿತ್ರಗೀತೆಗಳನ್ನು ಕೇಳುವ ಹವ್ಯಾಸ ಹೊಂದಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 25, 2011

ಕಂಪ್ಯೂಟರ್ ಬರವಣಿಗೆ - ಅಂದ ಚೆಂದ

ನಾವು ಕೈಯಲ್ಲಿ ಎಲ್ಲಿ ಬರೀತೀವಿ, ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ್ರೆ ಸಾಕು ಚೆನ್ನಾಗಿಯೇ ಬರುತ್ತಲ್ಲ... ಇದೇನು ಹೊಸ ವಿಷಯ ಅಂದುಕೊಂಡಿರಾ? ನಾವು ಟೈಪ್ ಮಾಡಿದ್ದು ಬರುತ್ತೆ ಎನ್ನುವುದು ನಿಜವಾದರೂ ಚೆನ್ನಾಗಿ ಕಾಣಿಸಲು ಅಕ್ಷರಗಳೊಂದೇ ಮುಖ್ಯ ಅಲ್ಲ ಎಂದು ಕೂಡಾ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಯಾವುದನ್ನು ಕೂಡ ಹೀಗೇ ಬಳಸಬೇಕು ಅಂತ ಹೇಳಲಾಗುವುದಿಲ್ಲ, ಕೆಲವರಿಗೆ ಒಂದು ತರಹದ್ದು ಇಷ್ಟವಾದರೆ ಇನ್ನು ಕೆಲವರಿಗೆ ಇನ್ನೊಂದಷ್ಟು.

ಸುತ್ತಲ ಜಾಗ
ಇಕ್ಕಟ್ಟಾಗಿ ಇರುವುದು ಯಾರಿಗೂ ಇಷ್ಟ ಇಲ್ಲ, ಹಾಗಿದ್ದಲ್ಲಿ ನಮ್ಮ ಬರಹಗಳೇಕೆ ಒತ್ತೊತ್ತಾಗಿ ಇರಬೇಕು? ಸುತ್ತಲೂ ಜಾಗ ಸರಿಯಾಗಿ ಬಿಡದಿದ್ದರೆ ಓದಲಿಕ್ಕೇನೂ ಕಷ್ಟವಾಗದಿದ್ದರೂ ನೋಡಲಿಕ್ಕೆ ಚೆನ್ನಾಗಿ ಕಾಣಿಸುವುದಿಲ್ಲ. ಕೆಳಗಿನ ಚಿತ್ರಗಳಲ್ಲಿ ಯಾವ ಬಾಕ್ಸ್ ನಲ್ಲಿ ಬರೆದಿದ್ದು ಚೆನ್ನಾಗಿ ಕಾಣಿಸುತ್ತಿದೆ? ಸುತ್ತಲ ಜಾಗ ವಿಶಾಲವಾಗಿದ್ದಷ್ಟೂ ಚೆನ್ನಾಗಿ ಕಾಣಿಸುತ್ತದೆ.


ಸಾಲುಗಳ ಉದ್ದ
ಕೆಲವು ಅಂತರ್ಜಾಲ ಪುಟಗಳಲ್ಲಿ ಕಂಪ್ಯೂಟರ್ ಪರದೆ ಅಗಲವಾಗಿ ಇದ್ದಷ್ಟೂ ಜಾಗಕ್ಕೆ ಲೇಖನವನ್ನು ಹಾಕಿರುತ್ತಾರೆ, ಆದರೆ ಬಹಳಷ್ಟು ಅಧ್ಯಯನಗಳ ಪ್ರಕಾರ ಸಾಲುಗಳು ಬಹಳಷ್ಟು ಉದ್ದವಿದ್ದಷ್ಟೂ ಓದಲು ಹೆಚ್ಚು ಕಷ್ಟವಂತೆ. ಉದ್ದ ಸಾಲುಗಳು ಓದುವಾಗ ಕುತ್ತಿಗೆಯನ್ನು ಹೆಚ್ಚು ಹೆಚ್ಚು ತಿರುಗಿಸಬೇಕಾಗುತ್ತದೆ ಹಾಗೂ ಓದುತ್ತಿರುವ ಲೈನ್ ತಪ್ಪಿ ಹೋಗುತ್ತಿರುತ್ತದೆ. ಪ್ರೋಗ್ರಾಮಿಂಗ್ ಮಾಡುವವರೂ ಕೂಡ ಎಷ್ಟೇ ಅಗಲದ ಮಾನಿಟರ್ ಇದ್ದರೂ ಓದಲು ಸುಲಭವಾಗುತ್ತದೆಂದು ತಮ್ಮ ಪ್ರೋಗ್ರಾಮ್ ನ ಸಾಲುಗಳನ್ನು ಮೊಟಕುಗೊಳಿಸಿರುತ್ತಾರೆ.

ಅಕ್ಷರಗಳ ಎತ್ತರ
ಬಹಳಷ್ಟು ಹುಡುಕಿ ಕೊನೆಗೊಂದು Wordpress/Drupal/Blogspot ಗೆ ಒಂದು ಚೆಂದದ theme ಹುಡುಕಿಕೊಂಡಿರುತ್ತೀವಿ, ಅದು ಚೆನ್ನಾಗಿಯೇ ಕಾಣಿಸುತ್ತಿರುತ್ತದೆ ಆದರೆ ನಮ್ಮ ಅಂತರ್ಜಾಲ ಪುಟಕ್ಕೆ ಹಾಕಿದ ನಂತರ ಚೆನ್ನಾಗಿ ಕಾಣಿಸ್ತಿರೋಲ್ಲ. ಇದಕ್ಕೆ ಎರಡು ಕಾರಣಗಳಿವೆ; ಮೊದಲನೆಯದು ಅಕ್ಷರಗಳ ಎತ್ತರ ಮತ್ತೊಂದು ಸಾಲುಗಳ ಮಧ್ಯದ ಜಾಗ. ಕೆಳಗಿನ ಚಿತ್ರ ನೋಡಿ, ಕನ್ನಡದ ಅಕ್ಷರದ ಎತ್ತರಕ್ಕೂ ಇಂಗ್ಲಿಷ್ ಅಕ್ಷರಗಳ ಎತ್ತರವನ್ನೂ ಹೋಲಿಕೆ ಮಾಡಿ ನೋಡಿ. ಕನ್ನಡದ ಅಕ್ಷರಗಳು ಇಂಗ್ಲಿಷ್ ನ ಸಣ್ಣ ಅಕ್ಷರಗಳ ಎತ್ತರದಷ್ಟಿದೆ, ಹಾಗಾಗಿ ಸಣ್ಣಗೆ ಕಾಣಿಸುತ್ತಿವೆ, ಇದು ಫಾಂಟ್ ತಯಾರಕರ ತೊಂದರೆ ಇದ್ದರೂ ಇರಬಹುದು. ಆ ಥೀಮ್ ಅನ್ನು ಕನ್ನಡದ ಅಕ್ಷರಗಳಿಗೆ ಮಾಡಿದ್ದಲ್ಲವಾದುದರಿಂದ ಅಕ್ಷರಗಳು ಓದಲು ತುಂಬಾ ಸಣ್ಣವಾಗಿ ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಥೀಮ್ ನಲ್ಲಿ ಈ ತೊಂದರೆ ಇದ್ದರೆ ಅಕ್ಷರಗಳ ಎತ್ತರವನ್ನು ಒಂದೆರಡು ಪಾಯಿಂಟ್ ಜಾಸ್ತಿ ಮಾಡಿ ನೋಡಿ.
ಕೆಲವೊಂದು ಕಡೆ ಬಹಳ ದೊಡ್ಡ ದೊಡ್ಡ ಅಕ್ಷರಗಳನ್ನೇ ಬಳಸಿರುತ್ತಾರೆ ಲೇಖನಗಳಲ್ಲಿ, ಹಾಗೆ ಬಳಸಿದಾಗ heading ಯಾವುದು, ಲೇಖನ ಯಾವುದು ಎಂದು ತಿಳಿಯುವುದಿಲ್ಲ. ಲೇಖನಕ್ಕೆ ದೊಡ್ಡ ಅಕ್ಷರಗಳು ಬೇಕಿದ್ದಲ್ಲಿ heading ಗೆ ಇನ್ನೂ ದೊಡ್ಡ ಅಕ್ಷರಗಳನ್ನು ಬಳಸಿ.

ಸಾಲುಗಳ ಮಧ್ಯದ ಜಾಗ
ಸುತ್ತಲೂ ಬಿಡುವ ಜಾಗ ಎಷ್ಟು ಮುಖ್ಯವೋ ಹಾಗೆಯೇ ಎರಡು ಸಾಲುಗಳ ಮಧ್ಯೆ ಬಿಡುವ ಜಾಗಕ್ಕೂ ಮಹತ್ವವಿದೆ. ಇಂಗ್ಲಿಷ್ ಬರಹಗಳಲ್ಲಿ ಒತ್ತಕ್ಷರಗಳು ಇಲ್ಲವಾದ್ದರಿಂದ ಸಾಲಿನ ಕೆಳಗಡೆ ಬರವಣಿಗೆಗಳು ಬರಲ್ಲ, ಹಾಗಾಗಿ ಎರಡು ಸಾಲುಗಳ ಮಧ್ಯೆ ಜಾಗ ಕಡಿಮೆ ಇದ್ದರೂ ಚೆನ್ನಾಗಿಯೇ ಕಾಣುತ್ತದೆ. ಕೆಳಗಿನ ಚಿತ್ರದಲ್ಲಿರುವ ಉದಾಹರಣೆ ನೋಡಿ, ಇಂಗ್ಲಿಷ್ ಬರಹದಲ್ಲಿ ಬಳಸಿದಷ್ಟೇ ಜಾಗವನ್ನು ಕನ್ನಡಕ್ಕೆ ಬಳಸಿದಾಗ ಸಾಲುಗಳು ಇಕ್ಕಟ್ಟಾಗುತ್ತವೆ.


ಬಣ್ಣಗಳ ಆಯ್ಕೆ
ಕೆಲವರ ಲೇಖನಗಳಲ್ಲಿ ಅವರಿಗೆ ಇಷ್ಟವಾದ ಬಣ್ಣಗಳನ್ನೆಲ್ಲಾ ಬಳಸಿರುತ್ತಾರೆ! ನಮಗೆ ಬೇಕಾದಂತೆ ಬಣ್ಣಗಳನ್ನು ಬಳಸುತ್ತೇವೆ ಅಂತ ಹೇಳೋರೂ ಇದ್ದಾರೆ. ಹಲವು ಬಣ್ಣಗಳನ್ನು ಬಳಸುವುದು ತಪ್ಪಿಲ್ಲ ಆದರೆ ಅದರಲ್ಲಿ ಕೆಲವು ವಿಷಯಗಳನ್ನು ಗಮನಿಸದೇ ಹೋದರೆ ಲೇಖನ ಚೆನ್ನಾಗಿ ಕಾಣಿಸುವುದಕ್ಕಿಂತ ಹಾಳಾಗಿ ಕಾಣಿಸುವುದೇ ಹೆಚ್ಚು.

ಈಗ ಉದಾಹರಣೆಗೆ ಅಂತರ್ಜಾಲ ಪುಟದಲ್ಲಿ ನೀಲಿ ಬಣ್ಣದ Text ನೋಡಿದಾಗ ಮೊದಲಿಗೆ ನನ್ನ ಮನಸ್ಸಿಗೆ ಬರುವುದು 'ಅದು ಲಿಂಕ್ ಇರಬಹುದು ಕ್ಲಿಕ್ ಮಾಡುವಾ' ಎಂದು. ಆದರೆ ಕೆಲವು ಕಡೆ ನೀಲಿ ಬಣ್ಣದ ಲಿಂಕ್ ಗಳೂ ಇರುತ್ತವೆ, ಅದರ ಜೊತೆಗೆ ಲೇಖನದಲ್ಲಿ ಅದೇ ಬಣ್ಣದ Text ಗಳೂ ಇರುತ್ತವೆ, ಹಾಗಿದ್ದಾಗ ಗುರುತು ಹಿಡಿಯುವುದೇ ಕಷ್ಟ. ಇನ್ನಷ್ಟು ಉದಾಹರಣೆಗಳೆಂದರೆ ತಿಳಿ ಹಿನ್ನಲೆಯಲ್ಲಿ ತಿಳಿ ಬಣ್ಣದ ಅಕ್ಷರಗಳು, ಕಪ್ಪು ಹಿನ್ನಲೆಯ ಮೇಲೆ ಕಡು ನೀಲಿ ಬರಹಗಳು. ಹಾಗೆ ಬರೆದಿರುವುದನ್ನೆಲ್ಲಾ ಓದಲು ಹರಸಾಹಸ ಪಡಬೇಕಾಗುತ್ತದೆ.

ಉತ್ತಮ FONT ಆಯ್ಕೆ
ಕನ್ನಡದಲ್ಲಿ ಉತ್ತಮ ಫಾಂಟ್ ಗಳು ಬಹಳ ಕಡಿಮೆ ಇದೆ, ಹಾಗಾಗಿ ಈ ವಿಷಯದ ಬಗ್ಗೆ ಜಾಸ್ತಿ ಹೇಳಲು ಹೋಗುವುದಿಲ್ಲ. ಆದರೂ ತುಂಬಾ ಧೀರ್ಘವಾದ ಲೇಖನಗಳಿಗೆ ಕೈಬರಹ ಫಾಂಟ್ ಉಪಯೋಗಿಸಿದ್ದರೆ ಓದುವುದು ಬಹಳ ಕಷ್ಟ.

ನನ್ನ ಅಂತರ್ಜಾಲ ಪುಟಗಳನ್ನು ಮಾಡುವಾಗಿನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ನೀವೂ ನಿಮ್ಮ ಅನುಭವಗಳನ್ನೂ ತಿಳಿಸಿ.

ಕಂಪ್ಯೂಟರ್ ನ ಕನ್ನಡ ಕಾಗಕ್ಕ ಗುಬ್ಬಕ್ಕ ಬರವಣಿಗೆಯಾಗದಿರಲಿ.

ಲೇಖಕರ ಕಿರುಪರಿಚಯ
ಶ್ರೀ ಹಳ್ಳಿಮನೆ ಅರವಿಂದ

ಮಲೆನಾಡಿನವರಾದ ಇವರು ಪ್ರಸ್ತುತ ಬೆಂಗಳೂರಿನ ಒಂದು ಕಂಪನಿಯಲ್ಲಿ ತಂತ್ರಾಂಶ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಾರಣಗಳು, ಛಾಯಾಗ್ರಹಣ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಇವರಿಗೆ ಅಪಾರವಾದ ಒಲವು.

ತಂತ್ರಜ್ಞಾನದ ಬಗ್ಗೆ ಹೊಸತಾಗಿ ತಿಳಿಯುವುದೆಂದರೆ ಅರವಿಂದ ಅವರಿಗೆ ಎಲ್ಲಿಲ್ಲದ ಉತ್ಸಾಹ.

Blog  |  Facebook  |  Twitter

ಗುರುವಾರ, ನವೆಂಬರ್ 24, 2011

ಕಾದಂಬರಿ ಸಾರ್ವಭೌಮರಿಗೆ ಕಲಾನಮನ

ಡಾ. ಅ ನ ಕೃಷ್ಣರಾಯರು
ಕಲೆ : ರಘುಪತಿ ಶೃಂಗೇರಿ

ಅನಕೃ ಎಂದೇ ಚಿರಪರಿಚಿತರಾದ ಡಾ. ಅ ನ ಕೃಷ್ಣರಾಯರು "ಕಾದಂಬರಿ ಸಾರ್ವಭೌಮ" ಎಂದೇ ಪ್ರಖ್ಯಾತರಾದ ಕರ್ನಾಟಕದ ಪ್ರಸಿದ್ಧ ಬರಹಗಾರರು. ಕೋಲಾರದಲ್ಲಿ 9 ಮೇ 1908 ರಂದು ಅನ್ನಪೂರ್ಣಮ್ಮ ಮತ್ತು ನರಸಿಂಗರಾವ್ ದಂಪತಿಗಳಿಗೆ ಜನಿಸಿದ ಅನಕೃ ರವರು 'ಕಥಾ ಮಂಜರಿ', 'ವಿಶ್ವ ವಾಣಿ' ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ 'ಕನ್ನಡ ನಾಡಿ'ಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ನಾಡು, ನುಡಿ, ಜನರ ಬಗ್ಗೆ ಇವರಿಗೆ ಅಪಾರವಾದ ಪ್ರೀತಿ. ಯಾರೇ ಆದರೂ ಕನ್ನಡಕ್ಕೆ ಅಪಮಾನ ಮಾಡಿದರೆ ಅದನ್ನು ಇವರು ತಮ್ಮ ಬರವಣಿಗೆಯ ಮೂಲಕ ಪ್ರತಿಭಟಿಸುತ್ತಿದ್ದರು. ಇವರು ಮಣಿಪಾಲದಲ್ಲಿ ನಡೆದ '43ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದರು. ಇವರ ಮೊದಲ ಕಾದಂಬರಿ 'ಜೀವನ ಯಾತ್ರೆ'. ಇವರು ಸುಮಾರು 40 ವರ್ಷಗಳಲ್ಲಿ 100 ಕೃತಿಗಳನ್ನು ರಚಿಸಿದ್ದಾರೆ. ಇವರ 'ಸಂಧ್ಯಾರಾಗ' ಕೃತಿಯು 1966 ರಲ್ಲಿ ಚಲನಚಿತ್ರವಾಗಿ ಮೂಡಿಬಂದಿದೆ.

ಇವರ ಕೃತಿಗಳು:
  1. ಸಾಹಿತ್ಯ ಮತ್ತು ಕಾಮಪ್ರಚೋದನೆ
  2. ಸಾಹಿತ್ಯ ಮತ್ತು ಜೀವನ
  3. ಪೊರಕೆ (ಹರಟೆ)
  4. ಕಾಮನ್ ಬಿಲ್ಲು
  5. ನನ್ನನ್ನು ನಾನೇ ಕಂಡೆ
  6. ಮದುವೆಯೋ ಮನೆಹಾಳು
  7. ರಾಜ ನರ್ತಕಿ
  8. ಬಣ್ಣದ ಬೀಸಣಿಕೆ
  9. ರಸಿಕಾಗ್ರಣಿ
  10. ಸಮರ ಸುಂದರಿ
  11. ರಣ್ ವಿಕ್ರಂ
  12. ಅಣ್ಣ ತಂಗಿ
  13. ಸಂಧ್ಯಾರಾಗ
ಅನಕೃ ರವರಿಗೆ ಕರ್ನಾಟಕ ರಾಜ್ಯವು "ಸಾಹಿತ್ಯ ಅಕಾಡೆಮಿ" ಪ್ರಶಸ್ತಿ ಮತ್ತು ಮೈಸೂರು ವಿಶ್ವವಿದ್ಯಾಲಯವು "ಡಾಕ್ಟರೇಟ್" ಪದವಿಯನ್ನು ನೀಡಿ ಗೌರವಿಸಿವೆ. ಅನಕೃ ರವರು 1971 ರಲ್ಲಿ ಜುಲೈ ತಿಂಗಳ 8 ರಂದು ತಮ್ಮ 63 ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.

(ಸಂಗ್ರಹ : ರಘುಪತಿ ಶೃಂಗೇರಿ)

ಕಲಾವಿದರ ಕಿರುಪರಿಚಯ
ಶ್ರೀ ರಘುಪತಿ ಶೃಂಗೇರಿ

ಮೂಲತಃ ಶೃಂಗೇರಿಯವರಾದ ರಘುಪತಿಯವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಟಿಸಿಎಸ್ ಕಂಪನಿಯಲ್ಲಿ 'ಸೀನಿಯರ್ ಗ್ರಾಫಿಕ್ ಡಿಸೈನೆರ್' ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರು. ಇವರ 7000 ಕ್ಕೂ ಅಧಿಕ ಚಿತ್ರಗಳು 'ಸುಧಾ', 'ಕರ್ಮವೀರ', 'ರೀಡಿಂಗ್ ಅವರ್' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ.

ಇವರ ಕೆಲವು ವ್ಯಂಗ್ಯಚಿತ್ರಗಳಿಗೆ 6 ಅಂತರಾಷ್ಟ್ರೀಯ, 2 ರಾಷ್ಟ್ರೀಯ ಮತ್ತು ಹಲವು ರಾಜ್ಯ ವಲಯದ ಪ್ರಶಸ್ತಿಗಳು ಲಭಿಸಿವೆ. ಇದುವರೆಗೆ ಇವರ ಹಲವಾರು ಕಲಾಕೃತಿಗಳು ಪ್ರದರ್ಶನಗೊಂಡಿವೆ.

Blog  |  Facebook  |  Twitter

ಬುಧವಾರ, ನವೆಂಬರ್ 23, 2011

ಶ್ರೀ ಬಾದಾಮಿ ಬನಶಂಕರಿ ಕ್ಷೇತ್ರದ ಪವಿತ್ರ ತೀರ್ಥಗಳು

ಶ್ರೀ ಬಾದಾಮಿ ಬನಶಂಕರಿ ದೇವಾಲಯ
ಛಾಯಾಚಿತ್ರ ಕೃಪೆ : e-ತೀರ್ಥ

ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು.

ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ - ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು.

ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ  ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭುವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು.

ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ.

ವೈಶಾಖ ಮಾಸದಲ್ಲಿ ಬರುವ 'ಆಗಿ ಹುಣ್ಣಿಮೆ' (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾ-ಪಿತೃ ದ್ರೋಹವು, ವೇದನಿಂದ ಪಾತಕವೂ, ಪರಕನ್ಯಾಯಾಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ.

ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು:
  1. ಮಾಲಿನಿ (ಮಲಪ್ರಭಾ ನದಿ) ತೀರ್ಥ
  2. ಸರಸ್ವತಿ (ಹಳ್ಳ) ತೀರ್ಥ
  3. ಹರಿದ್ರಾ (ದೊಡ್ಡ ಹೊಂಡ) ತೀರ್ಥ
  4. ಪದ್ಮ ತೀರ್ಥ
  5. ತೈಲ ತೀರ್ಥ
  6. ರಂಗ ತೀರ್ಥ
  7. ಅಗಸ್ತ್ಯ ತೀರ್ಥ
  8. ಅಶ್ವತ್ಥಾಮ  ತೀರ್ಥ
  9. ಭಾಸ್ಕರ ತೀರ್ಥ
  10. ಕೋಟಿ ತೀರ್ಥ
  11. ವಿಷ್ಣು ಪುಷ್ಕರಣಿ
  12. ನಾಗೇಶ ತೀರ್ಥ

ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು.

ಬಾದಾಮಿ ಬನಶಂಕರಿ ಕ್ಷೇತ್ರವು 'ದಕ್ಷಿಣ ಕಾಶಿ' ಎಂದೂ ಕರೆಯಲ್ಪಡುತ್ತದೆ. ಇಂತಹ ಕ್ಷೇತ್ರದ ಮಹಿಮೆಯನ್ನು ರಾಮಲಿಂಗ ದೇವಸ್ಥಾನವೆಂದು ಕರೆಯಲ್ಪಡುವ ಹಾಸನ ಜಿಲ್ಲೆಯ 'ರಾಮದೇವರಹಳ್ಳಿ' ಎಂಬ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿಯೂ ಸಹ ನೀರು ಉದ್ಭವವಾಗುವಂತಹದ್ದನ್ನು ನೋಡಬಹುದು. ಅದೇ ರೀತಿ ತುಮಕೂರು ಜಿಲ್ಲೆಯ 'ಶಿವಗಂಗೆ' ಪುಣ್ಯಕ್ಷೇತ್ರದಲ್ಲಿ 'ರಾಮ ಚುಲುಮೆ' ಎಂಬ ಪ್ರದೇಶವಿದ್ದು, ಇಲ್ಲಿ ಸದಾ ನೀರನ್ನು ನೋಡಬಹುದು. ಇಂಥಹ ಕ್ಷೇತ್ರಗಳಿಗೆ ಪೌರಾಣಿಕ ವಸ್ತುವನ್ನು ಸೇರಿಸಿ, ಆರಾಧಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

'ಗಂಗಾಸ್ನಾನ - ತುಂಗಾಪಾನ' ಎಂಬುದು ಗಾದೆ ಮಾತು. ಈ ಪವಿತ್ರ ಕ್ಷೇತ್ರಗಳಿಗೆ ಒಂದೊಂದು ನಂಬಿಕೆ, ಆಚರಣೆ ಇರುವುದನ್ನು ನಾವು ಕಾಣಬಹುದು.

ಲೇಖಕರ ಕಿರುಪರಿಚಯ
ಶ್ರೀ ಎ. ಆರ್. ಮಹೇಂದ್ರ

ಹಾಸನ ಜಿಲ್ಲೆಯವರಾದ ಇವರು ಪ್ರಸ್ತುತ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್. ಸಿ. ಹಿರೇಮಠ ಅಧ್ಯಯನ ಪೀಠ ಇಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 22, 2011

ರುಚಿ ರುಚಿಯಾದ ಮಂಡಕ್ಕಿ-ಮೆಣಸಿನಕಾಯಿ....

ಮಂಡಕ್ಕಿ-ಮೆಣಸಿನಕಾಯಿ
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸರ್ವೇಸಾಮಾನ್ಯವಾದ ಸಂಜೆಯ (ಕೆಲವೊಮ್ಮೆ ಬೆಳಗಿನ) ಉಪಹಾರದ ಒಂದು ಜನಪ್ರಿಯ ಜೋಡಿ ವಿಶೇಷ ಮಂಡಕ್ಕಿ-ಮೆಣಸಿನಕಾಯಿ ಅಥವಾ ಮಂಡಕ್ಕಿ ಉಸಲಿ + ಮೆಣಸಿನಕಾಯಿ ಬೋಂಡ. ಅಂದರೆ, ಪುರಿ ಒಗ್ಗರಣೆ + ಮೆಣಸಿನಕಾಯಿ ಬಜ್ಜಿ. ಪುರಿಯನ್ನು ಆ ಭಾಗದಲ್ಲಿ ಮಂಡಕ್ಕಿ ಎನ್ನುತ್ತಾರೆ. ಆದರೆ, ಬೆಂಗಳೂರಿನ ಕಡೆಯ ಪುರಿಗೂ ದಾವಣಗೆರೆ ಕಡೆಯ ಮಂಡಕ್ಕಿಗೂ ಸ್ವಲ್ಪ ವ್ಯತ್ಯಾಸವಿದೆ. ಇಲ್ಲಿನ ಪುರಿ ಹೆಚ್ಚು ಟೊಳ್ಳಿಲ್ಲದೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಅಲ್ಲಿನ ಮಂಡಕ್ಕಿ ಹೆಚ್ಚು ಟೊಳ್ಳಾಗಿದ್ದು, ಲಘುವಾಗಿರುತ್ತದೆ. ಈ ಉಸಲಿಗೆ ಆ ಕಡೆಯ ಮಂಡಕ್ಕಿಯೇ ಸೂಕ್ತ. ಇದು ಬೆಂಗಳೂರಿನಲ್ಲೂ ಕೆಲವು ಕಡೆ ಲಭ್ಯ.

ಮಂಡಕ್ಕಿ ಉಸಲಿಗೆ ಬೇಕಾಗುವ ಪದಾರ್ಥಗಳು:
  1. ಮಂಡಕ್ಕಿ (ಒಬ್ಬರಿಗೆ ಸುಮಾರು ಒಂದು ಲೀಟರ್ ನಷ್ಟು)
  2. ಸಣ್ಣಗೆ ಕತ್ತರಿಸಿದ 2-3 ಈರುಳ್ಳಿ
  3. ಕತ್ತರಿಸಿದ  3-4 ಹಸಿರು ಮೆಣಸಿನಕಾಯಿ
  4. ಸ್ವಲ್ಪ ತೆಂಗಿನ ತುರಿ
  5. ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳುಗಳು
  6. ಒಗ್ಗರಣೆಗೆ ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ
  7. ಸ್ವಲ್ಪ ಅರಿಶಿನ ಪುಡಿ, ಉಪ್ಪು, ಶುದ್ಧ ಎಣ್ಣೆ

ತಯಾರಿಸುವ ವಿಧಾನ: (ಚಿತ್ರಾನ್ನ ಅಥವಾ ಅವಲಕ್ಕಿ ಒಗ್ಗರಣೆಯಂತೆಯೇ ಸರಳ)
  • ಮಂಡಕ್ಕಿಯನ್ನು ಸುಮಾರು ಅರ್ಧ ಬಕೆಟ್ ನೀರಿನಲ್ಲಿ 2-3 ನಿಮಿಷ ಕೈಆಡುತ್ತಾ ನೆನೆಸಿ, ಲಘುವಾಗಿ ಹಿಂಡಿ ತೆಗೆದಿರಿಸಿಕೊಳ್ಳಬೇಕು (ಇದರಿಂದ ಮಂಡಕ್ಕಿ ಮೃದುವಾಗುವುದರ ಜೊತೆಗೆ ಸ್ವಚ್ಚಗೊಳ್ಳುತ್ತದೆ)
  • ಬಾಣಲೆಯಲ್ಲಿ ಕಾದ ಎಣ್ಣೆಗೆ, ಜ್ವಾಲೆಯನ್ನು ಸ್ವಲ್ಪ ಸಣ್ಣಗೆ ಮಾಡಿ ಸಾಸಿವೆ ಹಾಕಿ ಸಿಡಿಸಿ, ಕಡ್ಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಅವು ಹೊಂಬಣ್ಣಕ್ಕೆ ತಿರುಗಿದಾಗ ಹಸಿರು ಮೆಣಸಿನಕಾಯಿ ಚೂರುಗಳು, ಕರಿಬೇವಿನ ಎಸಳುಗಳನ್ನು ಹಾಕಿ ಮಿಶ್ರ ಮಾಡುತ್ತಾ ಮಾಗಿಸಬೇಕು
  • ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಕೆಂಪಾಗುವವರೆಗೆ ಬೇಯಿಸಬೇಕು
  • ಒಗ್ಗರಣೆ ಪೂರ್ಣವಾಗಿ ಬೆಂದ ನಂತರ, ಒಲೆ ಆರಿಸಿ ಕೊಡಲೇ ಒಂದೆರಡು ಚಿಟಿಕೆ ಅರಿಶಿನಪುಡಿ ಬೆರಸಿ ಮಿಶ್ರ ಮಾಡಿ ಇರಿಸಿಕೊಳ್ಳಬೇಕು
  • ನೆನೆಸಿ ತೆಗೆದಿರಿಸಿದ್ದ ಮಂಡಕ್ಕಿಗೆ ಅಗತ್ಯ ಪ್ರಮಾಣದ ಉಪ್ಪು ಬೆರಸಿ ತಯಾರಾಗಿರುವ ಒಗ್ಗರಣೆಯನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಬೇಕು
  • ಕೊತ್ತಂಬರಿ ಸೊಪ್ಪಿನ ಚೂರುಗಳು, ತೆಂಗಿನ ತುರಿ ಸೇರಿಸಿ ಮತ್ತೆ ಬಿಸಿ ಮಾಡಿದರೆ ರುಚಿ ರುಚಿಯಾದ ಮಂಡಕ್ಕಿ ಉಸಲಿ ಸವಿಯಲು ತಯಾರು


ಮೆಣಸಿನಕಾಯಿ ಬೋಂಡಾಕ್ಕೆ ಬೇಕಾಗುವ ಪದಾರ್ಥಗಳು:
  1. ಖಾರ ಕಡಿಮೆ ಇರುವ ಬೋಂಡಾದ ಮೆಣಸಿನಕಾಯಿಗಳು
  2. ಕಡ್ಲೆ ಹಿಟ್ಟು (10-12 ಮೆಣಸಿನಕಾಯಿಗಳಿಗೆ 100-150 ಗ್ರಾಂ ಹಿಟ್ಟು ಬೇಕಾಗುತ್ತದೆ)
  3. ಸ್ವಲ್ಪ ಅಕ್ಕಿ ಹಿಟ್ಟು
  4. ಸ್ವಲ್ಪ ಜೀರಿಗೆ, ಸ್ವಲ್ಪ ಓಮ (ಅಜ್ವಾನ)
  5. ಉಪ್ಪು, ಅಡಿಗೆ ಸೋಡಾ ಪುಡಿ, ಶುದ್ಧ ಎಣ್ಣೆ
(ಗಮನಿಸಿ: ಕಡ್ಲೆ ಹಿಟ್ಟು ಉತ್ತಮ ಗುಣಮಟ್ಟದ್ದಾಗಿರಬೇಕು. ಅದರಲ್ಲಿ ಕೆಲವೊಮ್ಮೆ ಮೆಕ್ಕೆ ಜೋಳದ ಹಿಟ್ಟು ಕಲಬೆರಿಕೆಯಾಗಿರುತ್ತದೆ. ಅಂತಹ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು ಒರಟಾಗಿರುವುದಲ್ಲದೇ ರುಚಿ ಕಡಿಮೆ)

ತಯಾರಿಸುವ ವಿಧಾನ:
  • ಹಸಿಮೆಣಸಿನಕಾಯಿಗಳನ್ನು ನೀರಿನಲ್ಲಿ ಸ್ವಚ್ಚ ಮಾಡಿಕೊಂಡು, ಹತ್ತಿ ಬಟ್ಟೆಯ ಮೇಲೆ ಹರಡಿ, ನೀರಿನ ಅಂಶ ಪೂರ್ಣವಾಗಿ ಹೋಗುವಂತೆ ವರೆಸಬೇಕು
  • ಸೂಜಿ ಅಥವಾ ಪಿನ್ನಿನಿಂದ ಅವುಗಳ ಮಧ್ಯದ ಸ್ವಲ್ಪ ಭಾಗ ಸೀಳಿ, ಒಳಗಿನ ಬೀಜಗಳನ್ನು ಸಾಧ್ಯವಾದಷ್ಟೂ ಉದುರಿಸಿ ತೆಗೆಯಬೇಕು
  • ಜರಡಿ ಮಾಡಿದ ಕಡ್ಲೆ ಹಿಟ್ಟಿಗೆ ಸುಮಾರು ಹತ್ತನೇ ಒಂದು ಭಾಗದಷ್ಟು ಅಕ್ಕಿ ಹಿಟ್ಟು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಒಂದೊಂದು ಚಮಚೆಯಷ್ಟು ಜೀರಿಗೆ, ಓಮ ಬೆರಸಬೇಕು
  • ಈ ಮಿಶ್ರಣಕ್ಕೆ 2-3 ಚಮಚಗಳಷ್ಟು ಚೆನ್ನಾಗಿ ಕಾಯಿಸಿರುವ ಎಣ್ಣೆಯನ್ನು ಹಾಕಿ ನೀರು ಸೇರಿಸುತ್ತಾ ಕಲಸಿ (ಮಿಶ್ರಣವು ಸುಮಾರು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು) ಸುಮಾರು 10-15 ನಿಮಿಷ ಹಾಗೆಯೇ ಇಡಬೇಕು (ಗಮನಿಸಿ: ಅಕ್ಕಿ ಹಿಟ್ಟು, ಕಾಯಿಸಿದ ಎಣ್ಣೆ ಸೇರಿಸುವುದರಿಂದ ಬೋಂಡಾ ಗರಿಗರಿಯಾಗಿರುತ್ತವೆ)
  • ಬಾಣಲೆಯಲ್ಲಿ ಚೆನ್ನಾಗಿ ಕಾದ ಎಣ್ಣೆಗೆ, ಜ್ವಾಲೆ ಸ್ವಲ್ಪ ಕಡಿಮೆ ಮಾಡಿಕೊಂಡು, ಒಂದೊಂದಾಗಿ ಹಸಿಮೆಣಸಿನಕಾಯಿಗಳನ್ನು ಹಿಟ್ಟಿನಲ್ಲಿ ಅದ್ದಿ ತೆಗೆದು ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಬೇಕು

(ಗಮನಿಸಿ: ಮೆಣಸಿನಕಾಯಿಗಳನ್ನು ಹಿಟ್ಟಿನಲ್ಲಿ ಅದ್ದಿ ತೆಗೆಯುವಾಗ, ಸೀಳಿರುವ ಭಾಗವನ್ನು ಮೇಲ್ಮುಖವಾಗಿರುವಂತೆ ಹಿಡಿದು, ಬಟ್ಟಲಿನ ಕಂಠಕ್ಕೆ ತಾಗಿಸುತ್ತಾ ಹೊರತೆಗೆದರೆ ಒಂದು ಮಗ್ಗುಲಿನ ಹಿಟ್ಟು ಇಲ್ಲವಾಗಿ, ಮೆಣಸಿನಕಾಯಿಗಳು ಎಣ್ಣೆಯ ನೇರ ಸಂಪರ್ಕಕ್ಕೆ ಬಂದು ಚೆನ್ನಾಗಿ ಬೇಯುವುದರ ಜೊತೆಗೆ ಆಕರ್ಷಕವಾಗಿಯೂ ಕಾಣುತ್ತವೆ)

ಮೆಣಸಿನಕಾಯಿ ಬೋಂಡಾ ಬಿಸಿಬಿಸಿಯಾಗಿರುವಾಗಲೇ ತಿನ್ನಲು ಚೆಂದ. ಬಿಸಿ ಬಿಸಿ ಮಂಡಕ್ಕಿ-ಮೆಣಸಿನಕಾಯಿ ಜೋಡಿ ಸೋನೆ ಮಳೆಯ ಅಥವಾ ಚಳಿಗಾಲದ ಸಂಜೆಗಳನ್ನು ಸುಂದರಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರಯತ್ನಿಸಿ ನೋಡಿ....

ಲೇಖಕರ ಕಿರುಪರಿಚಯ
ಶ್ರೀಮತಿ ಬಿ. ಎಂ. ಚಂದ್ರವದನ

ಮೂಲತಃ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನವರಾದ ಇವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಗೃಹಿಣಿ.

ಅಪಾರ ದೈವಭಕ್ತಿ ಹೊಂದಿರುವ ಇವರು ಭಾವಗೀತೆಗಳು ಮತ್ತು ಹಳೆಯ ಕನ್ನಡ ಚಿತ್ರಗೀತೆಗಳನ್ನು ಕೇಳುವ ಹವ್ಯಾಸ ಹೊಂದಿದ್ದು, ವಿವಿಧ ಬಗೆಯ ಅಡಿಗೆ-ತಿಂಡಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.

Blog  |  Facebook  |  Twitter

ಸೋಮವಾರ, ನವೆಂಬರ್ 21, 2011

ಕನ್ನಡದ ಗೊರೂರು

ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಒಬ್ಬರೇ? ಇಬ್ಬರೇ?... ಅಸಂಖ್ಯಾತ ಕನ್ನಡಿಗರು. ಅವರೆಲ್ಲರಲ್ಲಿ ಇಂಥಹವರು ಹೆಚ್ಚು, ಇಂಥಹವರು ಕಡಿಮೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸಿದವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

'ತಾಯಿಗೆ ಎಲ್ಲಾ ಮಕ್ಕಳೂ ಒಂದೇ' ಎನ್ನುವ ಹಾಗೆ ಕನ್ನಡ ತಾಯಿ ಕನ್ನಡಾಂಬೆಗೆ ನಿಸ್ವಾರ್ಥವಾಗಿ ದುಡಿದ ಎಲ್ಲಾ ಸಾಹಿತಿಗಳೂ ಸಮಾನರೇ, ಎಲ್ಲರೂ ಕನ್ನಡದ ರತ್ನಗಳೇ ಅಲ್ಲವೇ?!. ಅಂತಹ ಅನರ್ಘ್ಯ ರತ್ನಗಳಲ್ಲಿ 'ಗೊರೂರು' ಎಂದೇ ಪ್ರಸಿದ್ಧರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಒಬ್ಬರು.

1904, ಜುಲೈ 4 ರಂದು ಜನಿಸಿದ ಇವರ ಜನ್ಮಸ್ಥಳ ಹಾಸನ ಜಿಲ್ಲೆಯ ಗೊರೂರು. ಅಪ್ರತಿಮ ಗಾಂಧೀವಾದಿಗಳಾಗಿದ್ದ ಗೊರೂರರು ತಮ್ಮ ಶಾಲಾದಿನಗಳಲ್ಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓಗೊಟ್ಟು ತಮ್ಮ ಓದಿಗೆ ತಿಲಾಂಜಲಿಯಿತ್ತು ರಾಷ್ರ್ಟಸೇವೆಗೆ ಧುಮುಕಿದವರು. ಆನಂತರ ಅನೇಕ ಪತ್ರಿಕೆಗಳಲ್ಲಿ ಲೇಖಕರಾಗಿ, ಉಪಸಂಪಾದಕರಾಗಿ ಸೇವೆಸಲ್ಲಿಸಿದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಮಹನೀಯರು.

ಗೊರೂರು ರವರ ಬರಹಗಳಲ್ಲಿ ಹೆಚ್ಚಾಗಿ ಸಮಾಜದ ಅಂಕು-ಡೊಂಕು ತಿದ್ದುವ, ವಿಡಂಬನೆ, ವಿಮರ್ಶೆಗೊಳಪಡಿಸುವ, ನವಿರಾದ ಹಾಸ್ಯ ಓದುಗರನ್ನು ಸೆಳೆಯುತ್ತದೆ. ಹಳ್ಳಿಯ ಚಿತ್ರಗಳನ್ನು ಮನಮುಟ್ಟುವಂತೆ ಚಿತ್ರಿಸಿದ ರೀತಿ ಅನುಪಮವಾದುದು. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅನುಪಮ ಸೇವೆ ಸದಾ ನೆನಪಿಸಿಕೊಳ್ಳುವಂತಹುದು.


ಗೊರೂರರ ಕೃತಿಗಳು

ಕಾದಂಬರಿ
  1. ಹೇಮಾವತಿ
  2. ಪುನರ್ಜನ್ಮ
  3. ಮೆರವಣಿಗೆ
  4. ಊರ್ವಶಿ

ಪ್ರಬಂಧ ಮತ್ತು ಕಥಾ ಸಂಕಲನ
  1. ಹಳ್ಳಿಯ ಚಿತ್ರಗಳು
  2. ಗರುಡಗಂಬದ ದಾಸಯ್ಯ
  3. ನಮ್ಮ ಊರಿನ ರಸಿಕರು
  4. ಶಿವರಾತ್ರಿ
  5. ಕಮ್ಮಾರ ವೀರಭದ್ರಾಚಾರಿ
  6. ಬೆಸ್ತರ ಕರಿಯ
  7. ಬೆಟ್ಟದ ಸಂಪರ್ಕದ ಹೆಸರುಮನೆಯಲ್ಲಿ ಮತ್ತು ಇತರ ಕಥೆಗಳು
  8. ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
  9. ಗೋಪುರದ ಬಾಗಿಲು
  10. ಉಸುಬು
  11. ವೈಯ್ಯಾರಿ
  12. ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಪ್ರವಾಸ ಕಥನ
  1. ಅಮೇರಿಕಾದಲ್ಲಿ ಗೊರೂರು

ಅನುವಾದಗಳು
  1. ಮಲೆನಾಡಿನವರು
  2. ಭಕ್ತಿಯೋಗ
  3. ಭಗವಾನ್ ಕೌಟಿಲ್ಯ

ಗೊರೂರರು 1991, ಸೆಪ್ಟೆಂಬರ್ 8 ರಂದು ನಿಧನರಾದರು.

(ಕೃತಿಗಳ ವಿವರ : ಕನ್ನಡ ವಿಕಿಪೀಡಿಯಾ)

ಲೇಖಕರ ಕಿರುಪರಿಚಯ
ಶ್ರೀ ನಾಗೇಂದ್ರ ಕುಮಾರ್ ಕೆ. ಎಸ್.

ಗೌರೀಬಿದನೂರಿನವರಾದ ಇವರು, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುವ ನಾಗೇಂದ್ರ ಅವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವೂ ಇದೆ.

ಓದಿದ್ದು ಇಂಜಿನಿಯರಿಂಗ್ ಆದರೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಾರೆ. ಕಥೆ, ಕವನ ಹಾಗೂ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದು, ತಮ್ಮ ಕವಿತೆಗಳ ಪುಸ್ತಕ ಅಚ್ಚುಹಾಕಿಸುವ ಕನಸು ಹೊತ್ತಿದ್ದಾರೆ.

'ಕನ್ನಡದ ಸೇವೆಗೆ ಇಳಿದಿರುವ ಕಹಳೆ ತಂಡಕ್ಕೆ ಶುಭಾಶಯಗಳು' ಎಂಬ ಸಂದೇಶದೊಂದಿಗೆ ಈ ಲೇಖನವನ್ನು ಕಳುಹಿಸಿಕೊಟ್ಟಿದ್ದಾರೆ.

Blog  |  Facebook  |  Twitter

ಭಾನುವಾರ, ನವೆಂಬರ್ 20, 2011

ಲುಬುಂಟು - ಮುಕ್ತ ಪ್ರಪಂಚದ ಕೀಲಿಕೈ

'ವಿಂಡೋಸ್' - ಗಣಕಲೋಕದಲ್ಲಿ ಕ್ರಾಂತಿಯನ್ನುಂಟುಮಾಡಿ, ಬಳಕೆದಾರರಿಗೆ ಡಾಸ್-ಪ್ರಾಂಪ್ಟ್ ಪರದೆಯಿಂದ ಬಣ್ಣದ ವಿಸ್ಮಯ ಪ್ರಪಂಚಕ್ಕೆ ಪ್ರವೇಶ ಒದಗಿಸಿಕೊಟ್ಟ 'ಮಾಯಾ ಸಾಧನ'. ಇಂದಿಗೂ ಸಹ ಗಣಕಯಂತ್ರ ಎಂದೊಡನೆ ಬಹಳಷ್ಟು ಮಂದಿಯ ಸ್ಮೃತಿಗೆ ಅರಿವಾಗುವುದು 'ಮೈಕ್ರೋಸಾಫ್ಟ್' ಅವರ ವಿಂಡೋಸ್ ಮಾತ್ರ ಎನ್ನುವುದನ್ನು ನಾವೆಲ್ಲಾ ಒಪ್ಪುವುದಾದರೆ, ಅದು ನಮ್ಮೆಲ್ಲರ ಮೇಲೆ ಬೀರಿರುವ ಅಗಾಧವಾದ ಪ್ರಭಾವವನ್ನು ಊಹಿಸಿಕೊಳ್ಳಬೇಕು. ಇದರ ಹಿಂದೆ ಬಿಲ್ ಗೇಟ್ಸ್ ಹಾಗೂ ಇನ್ನಿತರರ ಅವಿರತ ಪರಿಶ್ರಮ ಇಲ್ಲದಿಲ್ಲ.

ವಿಂಡೋಸ್ ಗಣಕ ಸಾಧನದ ಪ್ರಖ್ಯಾತಿ ಪ್ರಪಂಚದಾದ್ಯಂತ ವಿಸ್ತಾರವಾಗಿ ಹರಡಿರುವುದು ಎಷ್ಟು ಸತ್ಯವೋ, ವಿಂಡೋಸ್ ಮಾತ್ರವೇ ಸಮಸ್ತ ಗಣಕಪ್ರಪಂಚವಲ್ಲ ಎನ್ನುವುದೂ ಅಷ್ಟೇ ಸತ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಬಹುತೇಕ ಮಂದಿ ಬಳಕೆದಾರರು ವಿಂಡೋಸ್ ನ ನಕಲಿ ಆವೃತ್ತಿಗಳನ್ನೇ ಇಂದಿಗೂ ತಮ್ಮ ಗಣಕಯಂತ್ರಗಳಲ್ಲಿ ಸ್ಥಾಪಿಸಿಕೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ. ಇಂಥಹ ನಕಲು ಮಾಡಿದ ಸಾಧನಗಳ ಮೂಲಕ ಗಣಕಲೋಕದೊಂದಿಗಿನ ನಮ್ಮ ಒಡನಾಟದ ಅನುಭವ ಸಂಕುಚಿತಗೊಳ್ಳದೇ ಇರದು.

ಹಾಗಾದರೆ, ಮೈಕ್ರೋಸಾಫ್ಟ್ ನ ನಕಲಿ ತಂತ್ರಾಂಶಗಳ ಮಾಯಾಜಾಲದಿಂದ ಮುಕ್ತಿ ಇಲ್ಲವೇ? ವಿಂಡೋಸ್ ಹಾಗೂ ಸಂಬಂಧಿತ ಸಾಧನಗಳ ಪರವಾನಗಿಗಳ ಕಪಿಮುಷ್ಟಿಯಿಂದ ಬಿಡುಗಡೆ ಸಾಧ್ಯವಿಲ್ಲವೇ? ದುಬಾರಿ ಹಣ ತೆರದೆ ಗುಣಮಟ್ಟದ ಗಣಕ ತಂತ್ರಾಂಶಗಳ ಬಳಕೆ ಅಸಾಧ್ಯವೇ? ಯಾವುದೇ ನಿರ್ಬಂಧಗಳಿಲ್ಲದೆ ಸ್ವಚ್ಛಂದವಾಗಿ ಗಣಕತೆರೆಯ ಒಳಹೊಕ್ಕು ವಿಹರಿಸುವುದಾದರೂ ಹೇಗೆ? ಎಂಬಿತ್ಯಾದಿಯಾದ ಪ್ರಶ್ನೆಗಳಿಗೆಲ್ಲಾ ಇರುವ ಏಕೈಕ ಉತ್ತರ : ಗಣಕಲೋಕದ ಸವಿಸ್ತಾರ ಮುಕ್ತ ಪ್ರಪಂಚದ ಒಂದು ಪ್ರಮುಖ ಭಾಗವಾದ - 'ಲಿನಕ್ಸ್'.

ಹೌದು, 'ಲಿನಕ್ಸ್', ನಿಜವಾಗಿಯೂ ಮುಕ್ತ ತಂತ್ರಾಂಶಗಳ ಒಂದು ಅದ್ಭುತ ಲೋಕ. ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಸ್ವಾಮ್ಯದಲ್ಲಿರದೆ, ಪ್ರಪಂಚದಾದ್ಯಂತ ಇರುವ ಬಳಕೆದಾರರ ರಚನಾತ್ಮಕ ಸಂಘಟನೆಯಿಂದ ಜನ್ಮ ತಳೆದು ಬೆಳೆಯುತ್ತಲಿದೆ. ಒಂದು ಕಾಲಕ್ಕೆ ಗಣಕಲೋಕದ ದೊರೆ ಎನಿಸಿಕೊಂಡಿದ್ದ ಮೈಕ್ರೋಸಾಫ್ಟ್, ಇಂದು ಲಿನಕ್ಸ್ ತಂತ್ರಾಂಶಗಳಿಗನುಸಾರವಾಗಿ ತನ್ನೊಳಗೆ ಬದಲಾವಣೆಗಳನ್ನು ತಂದುಕೊಳ್ಳುತ್ತಿದೆ ಎಂದರೆ - ಲಿನಕ್ಸ್ ನ ಅಸಾಮಾನ್ಯ ಸಾಮರ್ಥ್ಯ ಹಾಗೂ ಅಗಾಧ ಬೆಳವಣಿಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.

ವಿಂಡೋಸ್ ಗೆ ಹೋಲಿಸಿದರೆ ಲಿನಕ್ಸ್ ಉತ್ತವಾದುದು, ಏಕೆ? ಎನ್ನುವ ಪ್ರಶ್ನೆಗೆ ಉತ್ತರಿಸುವ ನೂರಾರು ಉತ್ತಮ ಲೇಖನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಪೂರ್ಣವಾಗಿ ವಿಂಡೋಸ್ ಬಳಸುತ್ತಿರುವವರಿಗೆ, ಲಿನಕ್ಸ್ ಒಂದು ಪರಕೀಯ ಪ್ರಪಂಚವೆನ್ನುವ ಭಾವನೆ ಬರುವುದು ಸಹಜ. ಇಂಥಹವರಿಗೆಂದೇ ಹೇಳಿ ಮಾಡಿಸಿದಂತಿರುವುದು 'ಉಬುಂಟು' ಗುಂಪಿಗೆ ಸೇರಿದ 'ಲುಬುಂಟು' ಆಪರೇಟಿಂಗ್ ಸಿಸ್ಟಮ್ ತಂತ್ರಾಂಶ.




ಲುಬುಂಟು ವಿಶೇಷತೆಗಳು:
  1. ಕನ್ನಡ ಹಾಗೂ ಪ್ರಪಂಚದ ಬಹುತೇಕ ಭಾಷೆಗಳಲ್ಲಿ ಲಭ್ಯವಿರುವ ಹಗುರವಾದ (light weight) ಆಪರೇಟಿಂಗ್ ಸಿಸ್ಟಮ್
  2. ಹಳೆಯ ಮಾದರಿ ಗಣಕಯಂತ್ರಗಳಲ್ಲೂ ಯಶಸ್ವಿಯಾಗಿ ಉಪಯೋಗಿಸಬಹುದು
  3. ಗಣಕಯಂತ್ರದಲ್ಲಿ ಅನುಸ್ಥಾಪಿಸಿಕೊಳ್ಳದೆಯೇ ಸಿ. ಡಿ. (Live CD) ಮೂಲಕ ಉಪಯೋಗಿಸುವ ಅವಕಾಶವಿದೆ
  4. ಎಲ್. ಎಕ್ಸ್. ಡಿ. ಇ. (LXDE) ಡೆಸ್ಕ್-ಟಾಪ್ ಹೊಂದಿದ್ದು, ಅತ್ಯಂತ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ
  5. ಎಲ್ಲಾ ವಿಧವಾದ ಹಾರ್ಡ್-ವೇರ್ ಗಳಿಗೂ ಅಳವಡಿಸಬಹುದಾದ ಡ್ರೈವರ್ ಲಭ್ಯವಿರುತ್ತವೆ
  6. ಅನುಸ್ಥಾಪನೆ ಮಾಡಿದ ನಂತರ, ಕನಿಷ್ಠ ಕಂಪ್ಯೂಟಿಂಗ್ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಯಾವುದೇ ತಂತ್ರಾಂಶಗಳು ಇರುವುದಿಲ್ಲ. ನಮಗೆ ಬೇಕಾದ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಳ್ಳಬಹುದು
  7. ನಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಬಗೆಯ ತಂತ್ರಾಂಶಗಳ ಮುಕ್ತ ಆವೃತ್ತಿಗಳು 'ಉಬುಂಟು ರೆಪಾಸಿಟರಿ'ಯಲ್ಲಿ ಲಭ್ಯ
  8. ತಂತ್ರಾಂಶಗಳ ನವೀನ ಬದಲಾವಣೆಗಳನ್ನೂ ಸಹ ಅಂತರ್ಜಾಲದ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು
  9. ಬಳಕೆಯಲ್ಲಿನ ಅನುಮಾನಗಳು ಹಾಗೂ ತೊಂದರೆಗಳಿಗೆ ಅತ್ಯಂತ ತ್ವರಿತವಾಗಿ ಸಲಹೆ/ಸೂಚನೆ/ಸಹಕಾರ ನೀಡುವ ಉಬುಂಟು ಸಮುದಾಯದ ಸಹಾಯ ಸದಾ ಉಚಿತವಾಗಿ ದೊರೆಯುತ್ತದೆ (20ನೇ ನವೆಂಬರ್ 2011, ಉಬುಂಟು ಸಮುದಾಯ ಅಭಿನಂದನಾ ದಿನ - UCA Day).

ಗಣಕಯಂತ್ರವನ್ನು ನಮ್ಮ ಅಭಿರುಚಿಗೆ ತಕ್ಕಂತೆ ಮಾಯಾಪೆಟ್ಟಿಗೆಯಾಗಿಸಲು ಇದಕ್ಕಿಂತ ಹೆಚ್ಚಿನ ಅಗತ್ಯವೇನಿದೆ? ಬನ್ನಿ, ಲುಬುಂಟು ಕೀಲಿಕೈ ಬಳಸಿ ಲಿನಕ್ಸ್ ಎಂಬ ಮುಕ್ತ ಗಣಕಪ್ರಪಂಚದಲ್ಲಿ ಸ್ವಚ್ಛಂದವಾಗಿ ವಿಹರಿಸೋಣ...

(ನನಗೆ ಕನ್ನಡ ಅಕ್ಷರಜ್ಞಾನ ಇಲ್ಲದಿದ್ದರೂ ಸಹ 'ಕಹಳೆ'ಯಲ್ಲಿ ಭಾಗವಹಿಸುವ ಬಯಕೆ. ಆದ್ದರಿಂದ, ಇಂಗ್ಲಿಷ್ ನಲ್ಲಿ ನಾನು ಬರೆದ ಈ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಿ, 20ನೇ ನವೆಂಬರ್ ದಿನದಂದು ಪ್ರಕಟಿಸಲು ಕಹಳೆ ತಂಡದವರಲ್ಲಿ ಕಳಕಳಿಯ ಮನವಿ)

ಲೇಖಕರ ಕಿರುಪರಿಚಯ
ಶ್ರೀಮತಿ ವೀಣಾ ರೂಬಿನಿ.

ಮೂಲತಃ ಗುಜರಾತ್ ರಾಜ್ಯದವರಾದ ಇವರು, ಹತ್ತು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನದ ಅಲೆಯಲ್ಲಿ ಬೆಂಗಳೂರು ತಲುಪಿದರು. ಕನ್ನಡ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವ ಇವರಿಗೆ ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ಅಪಾರವಾದ ಗೌರವ.

ಹಳೆಯ ಚಲನಚಿತ್ರ ಗೀತೆಗಳನ್ನು ಆಲಿಸುವುದು, ಕಸೂತಿ ಹಾಗೂ ಚಿತ್ರಗಳಿಗೆ ಅಂದವಾಗಿ ಬಣ್ಣ ತುಂಬುವುದು ಇವರ ಹವ್ಯಾಸ.

Blog  |  Facebook  |  Twitter

ಶನಿವಾರ, ನವೆಂಬರ್ 19, 2011

ಕ್ಯಾಮರಾ ಕಣ್ಣಲ್ಲಿ ಜನಜೀವನ

ಛಾಯಾಗ್ರಹಣ ಒಂದು ವೃತ್ತಿಪರ ಹವ್ಯಾಸ; ವಿಸ್ಮಯ ಜಗತ್ತು. ಇಡಿಯ ಪ್ರಪಂಚದ ಸೌಂದರ್ಯವೆಲ್ಲವನ್ನೂ ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ತವಕ ಹೊತ್ತ ಛಾಯಾಗ್ರಾಹಕ, ಅದರಲ್ಲಿ ಯಶಸ್ವಿಯಾಗುತ್ತಾನೆ ಕೂಡ. ನಮ್ಮ ಕಣ್ಣೋಟವು ಸಾಮಾನ್ಯವಾಗಿ ಸುತ್ತಮುತ್ತಲಿರುವ ಅದೆಷ್ಟೋ ಚೆಲುವನ್ನು ಕಾಣದೇ ಹೋದರೂ ಸಹ, ಕ್ಯಾಮರಾ ಕಣ್ಣು ಮಾತ್ರ ಇಂತಹ ಅಂದವನ್ನು ಸೆರೆಹಿಡಿಯದೆ ಇರಲಾರದು. ಸಾವಿರ ಪದಗಳ ಸಾಲುಗಳು ಹೇಳಲಾರದ್ದನ್ನು ಒಂದು ಸ್ತಬ್ಧ ಛಾಯಾಚಿತ್ರವು ಮೌನವಾಗಿ ಹೇಳಿಬಿಡುವುದೇ ಇದರ ವೈಶಿಷ್ಟ್ಯ.

ಮನುಷ್ಯರಾದ ನಾವು ಸಾಮಾಜಿಕ ಜೀವಿಗಳು, ನಮ್ಮ ಹಾವ-ಭಾವಗಳ ಮೇಲೆ ಸಮಾಜದ ಪ್ರಭಾವ ಅಗಾಧವಾಗಿರುತ್ತದೆ. ಅದೆಷ್ಟೋ ಬಾರಿ ಸಮಾಜದಲ್ಲಿನ ಒತ್ತಡಗಳು ನಮ್ಮ ಜೀವನಶೈಲಿಯನ್ನೇ ಬದಲಿಸಿಬಿಡಬಹುದು. ಹೀಗಿರುವ ಜನರ ಬದುಕಿನ ವಿಭಿನ್ನ ಹಾಗೂ ವಿಶೇಷ ಸೂಕ್ಷ್ಮತೆಗಳನ್ನು ಕ್ಯಾಮರಾ ಕಣ್ಣಲ್ಲಿ ಹಿಡಿದಿಡುವ ಬಯಕೆ, ಹಂಬಲ ಹಾಗೂ ಹವ್ಯಾಸ ನನ್ನದು. ಈ ವಿಷಯದ ನಿಟ್ಟಿನಲ್ಲಿ ನಾನು ಕ್ಲಿಕ್ಕಿಸಿದ ಕೆಲವು ಆಯ್ದ ಛಾಯಾಚಿತ್ರಗಳು ಇಲ್ಲಿವೆ; ಅವುಗಳನ್ನು ನಿಮ್ಮ ಅಂತರಾಳದ ಭಾವನಾತ್ಮಕ ಕಣ್ಣುಗಳಿಂದೊಮ್ಮೆ ನೋಡಿ..


















ಛಾಯಾಗ್ರಾಹಕರ ಕಿರುಪರಿಚಯ
ಶ್ರೀ ನವೀನ್ ಗುರುಪ್ರಸಾದ್.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಐಟಿ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಛಾಯಾಚಿತ್ರಗ್ರಹಣದಲ್ಲಿ ಅಪೂರ್ವ ನೈಪುಣ್ಯತೆ ಸಾಧಿಸಿರುವ ನವೀನ್ ರವರು ವನ್ಯಜೀವಿಗಳ ಹಾಗೂ ಜನರ ಜೀವನಶೈಲಿಯ ಕುರಿತಾದ ಛಾಯಾಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಸಿದ್ಧಹಸ್ತರು.

ವಿನೂತನ ಮಾದರಿ ಕಾರುಗಳ ಬಗ್ಗೆ ಇವರು ಬರೆದ ವಿಮರ್ಶಾತ್ಮಕ ಲೇಖನಗಳು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಇತರೆ ಹವ್ಯಾಸಗಳಲ್ಲಿ ಪ್ರವಾಸ ಹಾಗೂ ಹಿಂದೂ ಸಿದ್ಧಾಂತಗಳ ಅಧ್ಯಯನವೂ ಸೇರಿದೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 18, 2011

ಜಿ. ಪಿ. ರಾಜರತ್ನಂ ಅಯ್ಯಂಗಾರ್

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?
ತಿಂಡಿ ಬೇಕು ತೀರ್ಥ ಬೇಕು, ಎಲ್ಲ ಬೇಕು
ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು..

ಈ ಶಿಶು-ಗೀತೆಯನ್ನ ಎಷ್ಟು ಜನ ತಮ್ಮ ಬಾಲ್ಯದಲ್ಲಿ ಕಲಿತಿಲ್ಲ? "ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪ, ಕೂಸು ಮರಿ ಬೇಕೇ? ಕೂಸುಮರಿ" ಹೀಗೆ ಹತ್ತು ಹಲವು ಮಕ್ಕಳ ಪದ್ಯಗಳನ್ನು ಹಾಡಿ ನಲಿದಿದ್ದೇವೆ. ಒಮ್ಮೆಯಾದರೂ ಅದನ್ನು ಬರೆದವರು ಯಾರಿರಬಹುದು ಎಂದು ಯೋಚಿಸಿದ್ದೀವಾ? ಪ್ರಾಯಶಃ ಇಲ್ಲ. ಈ ಎಲ್ಲ ಗೀತೆಗಳ, ಇನ್ನೂ ಹಲವು ಗೀತೆಗಳ ಕರ್ತೃ ಒಬ್ಬರೇ ಎಂದರೆ ಅಚ್ಚರಿ ಆಗಬಹುದೇನೋ. ನಿಜ, ಆ ಮಕ್ಕಳ ಮನಸನ್ನು, ಅದರ ತದಗುದಿಯನ್ನು ಅರ್ಥ ಮಾಡಿಕೊಂಡ ಜೀವಿ ಜಿ.ಪಿ.ರಾಜರತ್ನಂ.

ಜಿ.ಪಿ.ರಾಜರತ್ನಂ
ಜಿ. ಪಿ. ರಾಜರತ್ನಂ ಅಯ್ಯಂಗಾರ್ ಅವರು 1905, ಡಿಸೆಂಬರ್ 5 ರಂದು ಜನಿಸಿದರು. ತಾಯಿಯಿಲ್ಲದ ತಬ್ಬಲಿಯಾಗಿ, ತಂದೆಯ ವಾತ್ಸಲ್ಯದಿ, ಅಜ್ಜಿಯ ಅಕ್ಕರೆಯಲ್ಲಿ ಬೆಳೆದರು. 1931 ರಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದರು.

''ಯಂಡ್ಕುಕ ರತ್ನ'' ಪದ್ಯ ಮಾಲೆ ರಚಿಸಿದರು. ಒಬ್ಬ ಬಡವ, ಕುಡುಕ, ಅವನ ಪ್ರಿಯತಮೆ, ಅವನ ಕನ್ನಡ ಪ್ರೇಮ, ಅವನ ಸುತ್ತಲಿನ ಜಗತ್ತನ್ನು ಕಾಣುವ ರೀತಿಯನ್ನು ಪದ್ಯದ ರೂಪದಲ್ಲಿ ಚಿತ್ರಿಸಿದ್ದಾರೆ. ಅವು ಹಳ್ಳಿ ಸೊಗಡಿನ ಭಾಷಾ ಪ್ರಯೋಗದಲ್ಲಿ ಇದ್ದು, ಜೀವನದ ದಾರ್ಶಣಿಕ ಸತ್ಯಗಳನ್ನು ಪ್ರತಿಬಿಂಬಿಸುತ್ತವೆ. ಪಿ. ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಮತ್ತು ಹಲವು ಗಾಯಕರು ಅವರ ಸಾಹಿತ್ಯಕ್ಕೆ ಸಂಗೀತ ಉಸಿರು ಕೊಟ್ಟು ಬದುಕಿಸಿದ್ದಾರೆ.

ಇನ್ನ ಮಕ್ಕಳ ಸಾಹಿತ್ಯಕ್ಕೆ ಬಂದರೆ, ಅದರ ರಚನೆಯ ಹಿಂದೊಂದು ಕುತೂಹಲಕಾರಿ ಕಥೆ ಇದೆ.

1932 ರಲ್ಲಿ, ಎಂ. ಎ. ಪದವೀಧರರಾದರೂ, ಅವರಿಗೆ ಅದಕ್ಕೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಅಷ್ಟರಲ್ಲಾಗಲೇ ಅವರು ರತ್ನನ ಪದಗಳನ್ನು ರಚಿಸಿ ಆಗಿತ್ತು. ಹೀಗಿರುವಾಗ ಅವರ ತಂದೆಯ ಆರೋಗ್ಯ ಕೆಟ್ಟಿತು. ಅವರ ತಂದೆ ಮಾಧ್ಯಮಿಕ ತರಗತಿಯ ಶಿಕ್ಷಕರಾಗಿದ್ದರು. ಅಂದು 'ಬದಲಿ' ಶಿಕ್ಷಕರಾಗಿ ಶಾಲೆಗೆ ಹೋದರು. ಅಲ್ಲಿ ಶಾಲಾ ಮಕ್ಕಳ ಪಠ್ಯ ಪದ್ದತಿಯಲ್ಲಿ ಇದ್ದ ಪಾಠ, ಪದ್ಯಗಳನ್ನು ನೋಡಿ, "ಮಕ್ಕಳು ಇದನ್ನು ಹೇಗೆ ತಾನೇ ಸವಿದಾವು?" ಎಂದು ಬೇಸರಿಸಿದರು. ಮಾಧ್ಯಮಿಕ-ಎರಡನೇ ತರಗತಿಯ ಮಕ್ಕಳಿಗೆ ಪುಸ್ತಕದಲ್ಲಿನ ಪದ್ಯ 'ಹರಿ ಭಕ್ತಿ ಸಾರ' ಹೇಳಿಕೊಟ್ಟು ಬಂದರು. ಅಂದು ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸ್ನಾನ ಘಟ್ಟದಲ್ಲಿ ಕಾಲು ಚಾಚಿ ಕುಳಿತು ಕೊಂಡಾಗ ಅವರಿಗೆ ಮಕ್ಕಳಿಗೆ ಇಷ್ಟ ಆಗುವ ಹಾಗೆ ಏನಾದರು ಬರಿಯಬೇಕು ಎಂಬ ಹಂಬಲದೋರಿತು. ಆಗ
"ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ"

ರೂಪುಗೊಂಡಿತು. ಅದನ್ನು ಪೂರ್ತಿ ಬರೆದು, ರಾಗ ಹಾಕಿ, ರಾತ್ರಿಯೆಲ್ಲ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ಕಳೆದರು. ಮುಂದಿನ ದಿನ, ಪಾಠ ಮುಗಿದ ಮೇಲೆ, "ತುತ್ತೂರಿ"ಯನ್ನು ಕರಿ ಹಲಗೆಯ ಮೇಲೆ ಬರೆದು ಅದನ್ನು ಮಕ್ಕಳಿಗೆ ಹೇಳಿ ಕೊಟ್ಟರು. ಮಕ್ಕಳಿಗೆ ಹಿಗ್ಗೋ ಹಿಗ್ಗು. ಮಕ್ಕಳ ಸಂತಸ ಕಂಡರೆ ಸಂತಸ ಪಡದ ಜೀವ ಈ ಭುವಿಯಲ್ಲಿ ಉಂಟೆ?

ಅದೇ ವಾರ ಇನ್ನ ಒಂದಷ್ಟು ಶಿಶು ಗೀತೆಗಳನ್ನು ಬರೆದರು. ಮನೆಯ ಬೀದಿಯಲ್ಲಿ ಇದ್ದ ಮಕ್ಕಳಿಗೆ ಹೇಳಿಕೊಟ್ಟರು. ಮಕ್ಕಳ ಪೋಷಕರಿಗೆ ಬಹಳಾನೇ ಇಷ್ಟವಾಗ ತೊಡಗಿತು. ಅದೇ ಬೀದಿಯಲಿ ಶ್ರೀ. ಎ. ವೆಂಕಟ ರಾವ್ ಎಂಬ ಪುಸ್ತಕ ಮಾರುವ, ಮುದ್ರಿಸುವ "ಪ್ರೋಗ್ರೆಸ್ಸ್ ಬುಕ್ ಸ್ಟಾಲ್ " ನಡೆಸುವವರು ಇದ್ದರು. ಅವರು ರಾಜರತ್ನಂ ಅವರ ಶಿಶು ಗೀತೆಗಳನ್ನು "ಹೀಗೆ ನನ್ನ ತುತ್ತೂರಿ" ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಪ್ರಕಟಿಸಿದರು.

ಅದೇ ಕಾಲದಲ್ಲಿ ಡಾ|| ಎಂ. ವೀ. ಗೋಪಾಲ ಸ್ವಾಮಿ ಎಂಬ ಮನಶಾಸ್ತ್ರಜ್ಞರು ಸಣ್ಣ ಮಕ್ಕಳಿಗಾಗಿ ಒಂದು ಶಿಶು ವಿಹಾರ ಆರಂಭ ಮಾಡಿದ್ದರು. ಅವರು ತುತ್ತೂರಿ ಓದಿ, ಪ್ರಭಾವಿತರಾಗಿ ಇವರನ್ನು ಅಲ್ಲೇ ಕೆಲಸ ಮಾಡಲು ಆಹ್ವಾನವಿತ್ತರು. ಅಲ್ಲಿ ರಾಜರತ್ನಂ ಅವರು ಒಂದು ವರ್ಷ ಸೇವೆ ಸಲ್ಲಿಸಿದರು, ಅದೇ ಸಮಯದಲ್ಲಿ 1933 ರಲ್ಲಿ 'ಕಡಲೆಪುರಿ', 'ಚುಟುಕ' ಎಂಬ ಎರಡು ಕವನ ಸಂಕಲನಗಳು ಬಿಡುಗಡೆಯಾದವು. ಅಲ್ಲಿಂದ ಬೆಂಗಳೂರಿನ ರಾಮ ಮೋಹನ ಕಂಪನಿ ಪ್ರಕಾಶಕರು "ಚೀನಾ ದೇಶದ ಬುದ್ಧ ಯಾತ್ರಿಕರು" ಇದರ ಬಗ್ಗೆ ಬರೆದು ಕೊಡಲು ಕೋರಿಕೊಂಡರು. ಅದೇ ವೇಳೆಗೆ ರಾಜರತ್ನಂ ಧರ್ಮ-ಪತ್ನಿ ಕ್ಷಯ ರೋಗದಿಂದ ಬಳಲುತಿದ್ದರು. ಅವರ ಆಸ್ಪತ್ರೆ ಖರ್ಚಿಗೆ ತಡಕಾಡುತಿದ್ದಾಗ, ಈ ಆಹ್ವಾನವು ಮರುಳುಗಾಡಿನಲ್ಲಿ ನೀರು ಸಿಕ್ಕ ಹಾಗೆ ಆಯಿತು.

ಸಮಯವಿದ್ದಾಗೆಲ್ಲಾ ಬರೆದಿದ್ದನ್ನ ಕೂಡಿಸಿ 'ಕಲ್ಲುಸಕ್ಕರೆ' 1935 ರಲ್ಲಿ ಪ್ರಕಟಿಸಿದರು. ಮುಂದೆ ಸಣ್ಣ ಗದ್ಯ ಪಾಠಗಳ ಸಮ್ಮಿಲನವೇ 'ಗುಲಗಂಜಿ' ಹಾಗೂ 'ಕೋಳಿಕಳ್ಳ' ಆಯಿತು . ಹೀಗೆ ಮುಂದೆ ಬಹಳ ಪ್ರಕಟಿಸಿದರು.

ರಾಜರತ್ನಂ ಅವರು ಮಕ್ಕಳ ಮನಸ್ಸನ್ನು ಎಷ್ಟು ಚನ್ನಾಗಿ ಗ್ರಹಿಸಿದ್ದರು ಎಂದರೆ, ಆಟದ ಜೊತೆ ಪಾಠ ಇದ್ದರೆ, ಮಕ್ಕಳಿಗೆ ಕಲಿಕೆ ತ್ರಾಸು ಎನಿಸುವುದೇ ಇಲ್ಲ ಎಂದು ತಿಳಿದಿದ್ದರು .ಅವರ ಮಾತಿನಲ್ಲೇ ಹೇಳಬೇಕೆಂದರೆ "ಮಕ್ಕಳು ನಾದ ಪ್ರಿಯರು. ಕೇಳಿದ ವರ್ಣಗಳನ್ನು, ಕೇಳಿದ ಪದಗಳನ್ನು, ಕೇಳಿದ ಪಂಕ್ತಿಗಳನ್ನು ಪುನಃ ಪುನಃ ಕೇಳುತಿದ್ದರೆ ಅವರಿಗೆ ಸಂತೋಷ".

ಒಂದು ಎರಡು ಬಾಳೆಲೆ ಹರಡು, ವಾರಕೆ ಎಳೇ ಏಳು ದಿನ, ಹತ್ತು ಮಕ್ಕಳು ಇಂತಹವು ಪದ್ಯರೂಪದಿ ಬಾಯಿಪಾಠ ಮಾಡಿದರೆ ಬಹಳ ದಿನ ನೆನಪು ಉಳಿಯುತ್ತದೆ ಎಂದು ರಚಿಸಿದರು.

ಇಂತಹ ಜೀವಿ ಬಹು ವಿರಳ. ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರೆ ಗದ್ಯ ಪ್ರಕಾರಗಳು ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಗೆ ಆಪ್ತವಾದ ಬರವಣಿಗೆಗೆ ಮೊಹರು ಅಚ್ಚು ಒತ್ತುತ್ತದೆ.

ಇದು ಶಿಶು-ಸಾಹಿತ್ಯಕ್ಕೆ ಅವರಿತ್ತ ಕೊಡುಗೆಯ ಬಗ್ಗೆ ಕಿರು ಲೇಖನ. ಒಬ್ಬ ತಾಯಿಯಿಲ್ಲದ ತಬ್ಬಲಿ ಬರೆದ ಕವಿತೆಗಳನ್ನು ನಮ್ಮ ರಾಜ್ಯದ ಎಲ್ಲಾ ತಾಯಂದಿರು ಅವರ ಮಕ್ಕಳಿಗಾಗಿ ಹಾಡುತ್ತಾರೆ. ಅವರ ಬಗ್ಗೆ, ಅವರಿಂದ ಶಿಶು-ಸಾಹಿತ್ಯ ಹೊರಹೊಮ್ಮಿದ ಹಿನ್ನಲೆ ಈ ಲೇಖನದಲ್ಲಿದೆ. ಇದೇ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅದರ ಬಗ್ಗೆ ಬರೆಯುತ್ತಾ ಹೋದರೆ ಒಂದು ಕಿರು ಹೊತ್ತಿಗೆಯೇ ತಯಾರಾಗುವುದೇನೋ.

ರಾಜರತ್ನಂ ಕನ್ನಡಭಾಷೆಯ ಪ್ರಾವೀಣ್ಯತೆ, ಅದರ ಮೇಲಿನ ದಟ್ಟ ಒಲವನ್ನು ನಿರೂಪಿಸಲು ಈ ಸಾಲುಗಳು ಸಾಕಲ್ಲವೇ?

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯೋಲ್ಸಾಕಿದ್ರೂನೇ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ ನೀ ಕಾಣೆ..

1969 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಕರ್ನಾಟಕ ರಾಜ್ಯ ಸರ್ಕಾರವು 1970 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಲೇಖಕರ ಕಿರುಪರಿಚಯ
ಶ್ರೀಮತಿ ಸಹನಾ ಸುಹಾಸ್.

ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಕಳೆದ 4 ವರ್ಷಗಳುದ್ದಕ್ಕೂ ಯಾಂತ್ರಿಕ ಬದುಕು ನಡೆಸಿ, ಈಗ ಕೆಲಸ ಬಿಟ್ಟು ತಾಯಿತನವೆಂಬ ಮಾಂತ್ರಿಕ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆ, ಅದರ ಸಾಹಿತ್ಯದ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವ ಇವರು ಬಹುತೇಕ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

Blog  |  Facebook  |  Twitter

ಗುರುವಾರ, ನವೆಂಬರ್ 17, 2011

ಅಣ್ಣಾ ಬಾಂಡ್ !!!

ಅಣ್ಣಾ ಬಾಂಡ್ ಎಂದರೆ ಒಂದು ಬ್ರಾಂಡ್.. ಒಂದು ಟ್ರೆಂಡ್.. ಇಷ್ಟು ಹೊತ್ತಿಗೆ ನಿಮಗೂ ಗೊತ್ತಾಗಿರಬಹುದು ಯಾರ ಬಗ್ಗೆ ನಾನು ಹೇಳಲು ಹೊರಟಿದ್ದೇನೆಂದು.. ಅದೇ.. ಡಾ|| ರಾಜ್ ಕುಮಾರ್ ಬಗ್ಗೆ...
ಕಲೆ: ಶ್ರೀಯುತ ಸು. ವಿ. ಮೂರ್ತಿ
ಸರಿಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಸಾರ್ವಭೌಮ ಡಾ|| ರಾಜ್ ಕುಮಾರ್ ಬಗ್ಗೆ ತಿಳಿಯದವರು ಯಾರಾದರೂ ಇರುವರೇ?? ಅವರ ವಿಭಿನ್ನ ಅಭಿನಯದಿಂದ ಆಬಾಲವೃದ್ಧರಾದಿಯಾಗಿ ಎಲ್ಲರ ಮನಸೂರೆ ಮಾಡಿದ ಅಣ್ಣಾವ್ರನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭೂಮಿಗೆ ಕರೆಸಲು ನಮ್ಮ ಗಾಂಪರ ಗುಂಪು ಆಲೋಚಿಸಿತು.. ಅಭಿಮಾನಿಗಳೇ ದೇವರು ಎಂದು ತಿಳಿದಿರುವ ಅಣ್ಣಾವ್ರು ಇಲ್ಲ ಅನ್ನುತ್ತಾರೆಯೇ? ಅವ್ರು ಬರೋದು ಗೊತ್ತಾಗುತ್ತಿದ್ದಂತೆ ನಮ್ಮ ಪತ್ರಕರ್ತರೆಲ್ಲ ಅವರ ಸಂದರ್ಶನ ಮಾಡಲು ದೌಡಾಯಿಸಿದರು.

ಕಾರ್ಯಕ್ರಮ ಸಂಘಟಕರು ಅಣ್ಣಾವ್ರ ಸನ್ಮಾನದ ದಿನ ಪತ್ರಕರ್ತರೊಡನೆ ಸಂದರ್ಶನಕ್ಕೆ ಸಮಯ ನಿಗದಿ ಪಡಿಸಿದರು. ಆ ಸಂದರ್ಶನದ ಸಾರಾಂಶ ನಮ್ಮ ಕಹಳೆ ಓದುಗರಿಗೆ ವಿಶೇಷವಾಗಿ ಪ್ರಕಟಿಸಲಾಗುತ್ತಿದೆ.. ಓದಿ ನಿಮ್ಮ ಅಭಿಪ್ರಾಯ ತಿಳಿಸಿ..

ಸಮಯ: ಬೆಳಿಗ್ಗೆ 10:30.

ಅಣ್ಣಾವ್ರು ಬಿಳಿ ಪಂಚೆ, ಬಿಳಿ ಶರ್ಟು ಹಾಕಿ ತಮ್ಮ ಟ್ರೇಡ್-ಮಾರ್ಕ್ ಗೆಟಪ್ಪಿನಲ್ಲಿ ಪತ್ರಕರ್ತರ ಎದುರು ಕುಳಿತುಕೊಂಡರು.. ಶುರುವಾಯಿತು ಪ್ರಶ್ನೆಗಳ ಸುರಿಮಳೆ..

ಪ್ರಶ್ನೆ: ಅಣ್ಣಾವ್ರೆ, ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು.. ಹೇಗಿದ್ದೀರ?.. ಹೇಗಿದೆ ಸ್ವರ್ಗ?
ಅಣ್ಣಾವ್ರು: ಆ ಆಹಾ.. ನಾನು ಚೆನ್ನಾಗಿದ್ದೀನ್ರಪ್ಪ.. ನೀವೆಲ್ಲ ಹೇಗಿದ್ದೀರ? ನೋಡಿ ಬಾಳ ಆನಂದವಾಯ್ತು... ಅಭಿಮಾನಿ ದೇವ್ರುಗಳು ಇಲ್ದೆ ಇರೋ ಸ್ವರ್ಗ ಸ್ವರ್ಗನೇನ್ರಪ್ಪ?.. ಇಲ್ಲ ಇಲ್ಲ, ಖಂಡಿತ ಇಲ್ಲ.. ಇಲ್ಲಿರೋ ವಾತಾವರಣ, ಅಭಿಮಾನಿ ದೇವರುಗಳ ಪ್ರೀತಿ, ಆ ವಿದ್ಯಾರ್ಥಿ ಭವನ್ ದೋಸೆ, ಎಂ ಟಿ ಆರ್ ತಿಂಡಿಗಳು, ಕನ್ನಡ ಚಿತ್ರರಂಗ, ಶುಕ್ರವಾರ ಬಂದ್ರೆ ಡಬ್ಬದಿಂದ ಬೆಳಕು ಕಾಣೋ ಡಬ್ಬಾ ಕನ್ನಡ ಚಿತ್ರಗಳು.. ಎಲ್ಲದನ್ನೂ ಮಿಸ್ ಮಾಡ್ಕೊತಾ ಇದೀನಿ ಕಣ್ರಯ್ಯ..

ಪ್ರಶ್ನೆ: ಹೇಗೆ ಅನ್ನಿಸ್ತಾ ಇದೆ ಬೆಂಗಳೂರು?
ಅಣ್ಣಾವ್ರು: ಟ್ರಾಫಿಕ್ ತುಂಬಾ ಜಾಸ್ತಿ ಆಗಿದೆ ಅನ್ಸುತ್ತೆ.. ಆದ್ರೂ ಪಾಪ ನಮ್ಮ ಸರ್ಕಾರದವರು ಮೆಟ್ರೋ ಅದು ಇದು ಅಂತ ಏನಾದ್ರೂ ಮಾಡ್ತಾನೇ ಇರ್ತಾರೆ ನೋಡಿ. ಒಟ್ನಲ್ಲಿ ಜನಗಳಿಗೆ ಒಳ್ಳೆದಾದ್ರೆ ಸಾಕು ನೋಡಿ.. ಮೆಟ್ರೋನಲ್ಲಿ ಹೋಗಿದ್ದೆ ಕಣ್ರಪ್ಪ.. ಬಾಳ ಚೆನ್ನಾಗ್ ಮಾಡಿದಾರೆ.. ನಮ್ ಜನ ಅದನ್ನ ಹೆಂಗೆ ನೋಡ್ಕೋತಾರೆ ಅಂತ ನೋಡ್ಬೇಕು..

ಪ್ರಶ್ನೆ: ಈಗಿನ ರಾಜಕೀಯ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯ?
ಅಣ್ಣಾವ್ರು: ನಮಗೂ ರಾಜಕೀಯಕ್ಕೂ ಬಾಳ ದೂರ. ಅದ್ರೂ ಕೇಳಿ ಬಾಳ ಬೇಜಾರಾಯ್ತು.. ಜನಕ್ಕೆ ಸಾಧ್ಯವಾದಷ್ಟು ಒಳ್ಳೇದು ಮಾಡ್ಬೇಕು.. ಆಗಿಲ್ಲ ಅಂದ್ರೆ ಕೆಟ್ಟದ್ದನ್ನು ಮಾತ್ರ ಮಾಡ್ಲೇಬಾರ್ದು.. ಈಗ ನೋಡಿ.. ಎಲ್ಲ ಒಬ್ಬೊಬ್ಬರಾಗಿ ಜೈಲ್ ಸೇರ್ತಾ ಇದಾರೆ.. ಉಪ್ಪು ತಿಂದವರು ನೀರು ಕುಡಿಲೇಬೇಕು.. ತ್ರೇತಾಯುಗದಲ್ಲಿ ರಾಮ, ದ್ವಾಪರಯುಗದಲ್ಲಿ ಕೃಷ್ಣ ಇದ್ಹಂಗೆ, ಈ ಕಾಲದಲ್ಲಿ ನಮ್ಮ ಲೋಕಾಯುಕ್ತ ಹೆಗ್ಡೆಯವರು, ಅಣ್ಣಾ ಹಜಾರೆ ಅವ್ರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡ್ಸೋ ಕೆಲಸ ಮಾಡ್ತಾ ಇದಾರೆ.. ಕೇಳಿದ್ರೆ ಬಾಳ ಆನಂದ ಆಗುತ್ತೆ.. ಆ ಆಹಾ..

ಪ್ರಶ್ನೆ: ಈಗಿನ ಚಲನಚಿತ್ರಗಳ/ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ..
ಅಣ್ಣಾವ್ರು: ನೋಡಿ.. ನಮ್ ಕಾಲದಲ್ಲಿ ಒಳ್ಳೊಳ್ಳೇ ಚಿತ್ರ ಬರೋವು.. ಕಾದಂಬರಿ ಆಧಾರಿತ ಚಿತ್ರ ಬರ್ದೇ ಎಷ್ಟು ಸಮಯ ಆಗಿದೆ ನೀವೇ ಲೆಕ್ಕಹಾಕಿ.. ರೀಮೇಕ್ ಮಾಡ್ತಾ ಕೂತಿದ್ರೆ ಚಿತ್ರರಂಗ ಹೇಗಪ್ಪ ಉದ್ದಾರ ಆಗುತ್ತೆ.?? ಸ್ವಮೇಕ್ ಕೂಡ ಮಾಡ್ರಪ್ಪ.. ಒಳ್ಳೆ ಕಾದಂಬರಿ ಆಧಾರಿತ ಚಿತ್ರ ಮಾಡಿ, ಒಳ್ಳೆ ಕಥೆ ಆಯ್ಕೆ ಮಾಡ್ಕೊಳಿ.. ಆಗ ನೋಡಿ ನಮ್ ಚಿತ್ರರಂಗ ಹೇಗೆ ಮುಂದುವರಿಯುತ್ತೆ ಅಂತ..

ಪ್ರಶ್ನೆ: ನಿಮ್ ಮಗ ಪುನೀತ್ 'ಹುಡುಗರು' ಅಂತ ರೀಮೇಕ್ ಚಿತ್ರ ಮಾಡಿದ್ದಾರಲ್ಲ..?
ಅಣ್ಣಾವ್ರು: ನೋಡಪ್ಪ ನಮ್ ಕಂಪನಿಯಿಂದ ಇದುವರೆಗೂ ರೀಮೇಕ್ ಮಾಡೇ ಇರ್ಲಿಲ್ಲ.. ಈಗ ಕಾಲ ಬದಲಾಗಿದೆ. ಜನಕ್ಕೆ ಏನಾದ್ರೂ ಒಳ್ಳೆ ಸಂದೇಶ ಕೊಡ್ಬೇಕು ಅನ್ನೋ ಪ್ರಯತ್ನ ಮಾಡಿದಾರೆ ಅಷ್ಟೇ.. ನಮ್ ಶಿವಣ್ಣನ್ನೇ ನೋಡಿ.. ರೀಮೇಕ್ ಮಾಡಲ್ಲ ಅಂತ ಹೇಳಿ ಶಪಥ ಮಾಡಿದಾನೆ.. ಅದನ್ನ ಪಾಲಿಸ್ತ ಇದಾನೆ ಕೂಡ. ಇನ್ನು ಪುನೀತ್ ಕೂಡ ಒಳ್ಳೊಳ್ಳೆ ಚಿತ್ರ ಮಾಡ್ತಾ ಇರ್ತಾನೆ.. ಅವ್ನ ಡಾನ್ಸು, ಹೊಡೆದಾಟ ಎಲ್ಲ ಚೆನ್ನಗಿರುತ್ತೆ.. ಮೊನ್ನೆ ಜಾಕಿ ಚಿತ್ರದಲ್ಲಿ ಸುಮಾರ್ ಜನನ್ನ ಮೇಲಕ್ಕೆ ಕಳ್ಸಿದ್ದ.. ನಮ್ಮ ಯಮರಾಜ್ರು ಅಪ್ಪು ಆಕ್ಷನ್ ಚಿತ್ರಗಳ ದೊಡ್ಡ ಫ್ಯಾನ್.. ಅವ್ರ ಕೆಲಸ ಸುಲಭ ಮಾಡ್ತಾನೆ ನೋಡಿ..

ಪ್ರಶ್ನೆ: ಈಗ ಬಿಡುಗಡೆ ಆಗ್ತಿರೋ ಚಿತ್ರಗಳ ಬಗ್ಗೆ ಒಂದೆರಡು ಮಾತು..
ಅಣ್ಣಾವ್ರು: ಸ್ವಲ್ಪ ಬೇಜಾರಗುತ್ತೆ ಕಣ್ರಪ್ಪ.. ನೀವೇ ನೋಡಿ.. ನಮ್ ದೂದ್ ಪೇಡ.. ಕನ್ನಡದ ಹುಡ್ಗ ದಿಗಂತ್ ಮಾಡಿರೋ ಚಿತ್ರಗಳು ಪ್ರತಿವಾರ ಒಂದೊಂದು ರಿಲೀಸ್ ಆಗ್ತಿದೆ. ಫಸ್ಟು ಲೈಫು ಇಷ್ಟೇನೆ, ಅದಾದ ಮೇಲೆ ಪುತ್ರ.. ನಂತರ ತಾರೆ.. ಈ ವಾರ ಕಾಂಚಾಣ... 4 ವಾರ 4 ಚಿತ್ರ ಒಂದೇ ಹೀರೋದು ರಿಲೀಸ್ ಆದ್ರೆ ಜನ ಎಷ್ಟು ಅಂತ ನೋಡ್ತಾರೆ? ಇದ್ರಿಂದ ಯಾರ್ಗೂ ಲಾಭ ಇಲ್ಲ..

ಪ್ರಶ್ನೆ: ನಿಮಗೆ ಈಗ ಅಭಿನಯ ಮಾಡಲು ಅವಕಾಶ ಸಿಕ್ರೆ ಯಾವ ನಿರ್ದೇಶಕರ ಜೊತೆ ಕೆಲಸ ಮಾಡಲು ಇಷ್ಟಪಡ್ತೀರ?
ಅಣ್ಣಾವ್ರು: ಎಲ್ಲರ ಹತ್ರನೂ ಕಲಿಯೋಕೆ ಒಂದೊಂದು ವಿಷ್ಯ ಇರುತ್ತೆ ಅನ್ನೋದು ನನ್ನ ಅನುಭವ.. ಆದ್ರೂ ಚಾನ್ಸ್ ಸಿಕ್ರೆ ಯೋಗರಾಜ್ ಭಟ್, ಉಪೇಂದ್ರ, ಸೂರಿ ಅವ್ರ ಚಿತ್ರಗಳಲ್ಲಿ ಅಭಿನಯಿಸೋ ಆಸೆ ಇದೆ..

ಪ್ರಶ್ನೆ: ನೀವು ಒಳ್ಳೆ ಗಾಯಕರು.. ಮತ್ತು ರಂಗಭೂಮಿಯಿಂದ ಬಂದಿರೋರು.. ಈಗಿನ ಚಿತ್ರಗಳಲ್ಲಿರೋ ಸಂಗೀತ-ಸಾಹಿತ್ಯದ ಬಗ್ಗೆ?
ಅಣ್ಣಾವ್ರು: ಹರಿಕೃಷ್ಣ, ಅರ್ಜುನ, ವೀರ ಸಮರ್ಥ, ಶ್ರೀಧರ್ ಥರ ಒಳ್ಳೊಳ್ಳೆ ಸಂಗೀತ ನಿರ್ದೇಶಕರು ಬಂದಿದ್ದಾರೆ.. ನಮ್ ಯೋಗರಾಜ್ ಭಟ್ರು, ಜಯಂತ್ ಕಾಯ್ಕಿಣಿ, ಕವಿರಾಜ್ ಅವ್ರ ಸಾಹಿತ್ಯಗಳು ಅಮೋಘವಾಗಿದೆ.. ಸೋನು ನಿಗಮ್ ಹಾಡುಗಳಂತೂ ದೇವಲೋಕದಲ್ಲೂ ಫೇಮಸ್ಸು.. ಇಂದ್ರ ಯಾವಾಗ್ಲೂ ಹಾಕ್ತ ಇರ್ತಾನೆ.. ಯಮರಾಜರಿಗಂತೂ ಕೈಲಾಶ್ ಖೇರ್ ಹಾಡಿರೋ ಹಾಡ್ಗಳು ಸಿಕ್ಕಾಪಟ್ಟೆ ಇಷ್ಟ..

ಪ್ರಶ್ನೆ: ಹಾಗಾದ್ರೆ ಪಂಕಜ.. ಊರಿಗೊಬ್ಳೆ ಪದ್ಮಾವತಿ.. ಅಂತ ಹಾಡುಗಳು ಇರ್ಬೇಕು ಅಂತಿರ..?!
ಅಣ್ಣಾವ್ರು: (ನಗುತ್ತಾ) ಅದೇನೋ ನಾ ಕಾಣೆ ಶಿವ.. ನನ್ಗಿರೋದ್ ಒಬ್ಳೆ ಪಾರ್ವತಿ..

ಸರಿ, ನಾನು ಹೊರ್ಡ್ತಿನ್ರಪ್ಪ.. ಅಲ್ಲಿ ನಮ್ ಸಾಹಸಸಿಂಹ ಕಾಯ್ತಾ ಇರ್ತಾರೆ..

(ಅಣ್ಣಾವ್ರ ಹಾಗೂ ಅಣ್ಣಾವ್ರ ಸಮಸ್ತ ಅಭಿಮಾನಿ ದೇವರುಗಳ ಕ್ಷಮೆ ಕೋರಿ..)

ಲೇಖಕರ ಕಿರುಪರಿಚಯ
ಶ್ರೀ ಗುರುರಾಜ ವಿ.

ತಂದೆ ಶ್ರೀಯುತ ಸು. ವಿ. ಮೂರ್ತಿ, ಸುಪ್ರಸಿದ್ಧ ಕಲಾವಿದರು ಹಾಗೂ ವ್ಯಂಗ್ಯಚಿತ್ರಕಾರರ ಆಸರೆಯಲ್ಲಿ ಬೆಳೆದ ಶ್ರೀ ಗುರುರಾಜ ಇವರಲ್ಲಿ ಸಂಗೀತ, ಸಾಹಿತ್ಯ ಹಾಗೂ ಕಲೆ ಬಗೆಗಿನ ಆಸಕ್ತಿ ರಕ್ತಗತವಾಗಿದೆ.

ವೃತ್ತಿಯಲ್ಲಿ ಗಣಕಯಂತ್ರ ನಿರ್ವಾಹಕರಾದ ಇವರ ಕನ್ನಡ ಬ್ಲಾಗ್ ನಲ್ಲಿ ಪ್ರಕಟವಾಗುವ ಬರವಣಿಗೆಗಳು ಅತ್ಯಂತ ವಿಶಿಷ್ಟ, ವಿಶೇಷ ಹಾಗೂ ವಿರಳ.

Blog  |  Facebook  |  Twitter

ಬುಧವಾರ, ನವೆಂಬರ್ 16, 2011

ಕನ್ನಡ ಕಡೆಗಣಿಸಿದ ಸರ್ಕಾರದ ಹಿಂದಿರುವ ಸತ್ಯದ ನೆಲೆ

ಛಾಯಾಚಿತ್ರ ಕೃಪೆ : ಬಿ. ಎಸ್. ಶಿವಕುಮಾರ
ಐವತ್ತಾರನೆಯ ಕನ್ನಡ ರಾಜ್ಯೋತ್ಸವವನ್ನು ನಾವಿಂದು ಆಚರಿಸಿದ್ದೇವೆ. ಇದೇ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಅಥವಾ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಗೆ ವಿಲೀನಗೊಳಿಸುವ ವಿಚಾರ ಬಹು ಚರ್ಚೆಗೆ ಗ್ರಾಸವಾಗಿದೆ. ಆಳುವ ಸರ್ಕಾರವೇ ಕನ್ನಡದ ಬಗೆಗೆ ನಿರ್ಲಕ್ಷ್ಯ ತಾಳಿದರೆ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವವರ್ಯಾರು? ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮಾತೃಭಾಷೆಯೊಂದೇ ಸರ್ವಸ್ವ. ವಾತ್ಸಲ್ಯಮಯಿಯಾದ ತಾಯಿ ಮಡಿಲಲ್ಲಿ ಮಲಗಿ ಅವಳ ಜೋಗುಳದ ನಿನಾದದೊಡನೆ ಭಾವೈಕ್ಯಗೊಂಡು ಅದರ ಅಂತಃಸತ್ವವನ್ನು ಹೀರಿ ಮಾತೃ ನುಡಿಯಲ್ಲೇ ಬೆಳೆದ ಅವರ ಮುಗ್ಧ ಭಾವಕ್ಕೆ ಕನ್ನಡ ಒಲಿದಿದೆ.

ನಮ್ಮ ನಗರ ಪ್ರದೇಶಗಳಲ್ಲಿ ಪ್ರತಿವರ್ಷ ನವೆಂಬರ್ ಬಂತೆಂದರೆ ರಾಜ್ಯೋತ್ಸವವನ್ನು ನಾಡಿನ ಹಬ್ಬವಾಗಿ ಆಚರಿಸುತ್ತಾರೆ. ನಮ್ಮ ಸಂಸ್ಕೃತಿಯ ಪ್ರತೀಕವೆಂಬಂತೆ ಆಚರಿಸುತ್ತಿದ್ದರೂ ನಗರ ಪ್ರದೇಶದ ವಿದ್ಯಾವಂತ ಕನ್ನಡಿಗರು ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಸಹಜ. ಹೀಗಾಗಲು ಮೂಲ ಕಾರಣವೇನು? ಇವತ್ತಿನ ವಿದ್ಯಾವಂತ ವರ್ಗ ಏಕೆ ಕನ್ನಡ ಭಾಷಾ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಲು ಹಿಂಜರಿಯುತ್ತಿದ್ದಾರೆ? ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಲು ಏಕೆ ಬಯಸುತ್ತಾರೆ? ಅದರ ಹಿಂದಿರುವ ಸತ್ಯವನ್ನು ಹುಡುಕಿ ಅರ್ಥೈಸಿಕೊಳ್ಳುವುದು ಸೂಕ್ತ.

ಕನ್ನಡಿಗರಾದ ನಾವೆಲ್ಲಾ ನಮ್ಮ ಮಾತೃ ಸಂಸ್ಕೃತಿಯನ್ನು ಬೆಳೆಸಿ, ಉಳಿಸಿ, ಸಂರಕ್ಷಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ನಿಜ. ಆದರೆ, ಇದುವರೆವಿಗೂ ನಾವು ಪರಿಪೂರ್ಣವಾಗಿ ಕನ್ನಡ ಭಾಷಾ ಮಾಧ್ಯಮವನ್ನು ಅನುಸರಿಸಿ ಪ್ರಗತಿಪಥದ ಹೆಜ್ಜೆಯಲ್ಲಿ ಹಾದುಬಂದಿದ್ದೇವೆಯೇ? ಎಂಬ ಪ್ರಶ್ನೆಯನ್ನು ಹಾಕಿಕೊಂಡು ಚಿಂತಿಸಬೇಕಾದುದು ಅನಿವಾರ್ಯವಾಗಿದೆ. ಕನ್ನಡಿಗರಾದ ನಾವು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ರಾಷ್ಟೀಯ ಮಟ್ಟದಲ್ಲಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಾದರೆ ಯಾವ ಭಾಷೆಯ ಮೊರೆ ಹೋಗಬೇಕು ಎಂಬುದಕ್ಕೆ ನಾವೆಲ್ಲಾ ಉತ್ತರವನ್ನು ಹುಡುಕಿಕೊಳ್ಳಬೇಕು. ಈ ಮಾತಿನ ಮೂಲಕ ನಾನು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿರೋಧಿಸುತ್ತಿಲ್ಲ; ಇದು ವಾಸ್ತವತೆಯ ದೃಷ್ಟಿಯ ಆಲೋಚನೆಯಾಗಿದೆ.

ಮುಖ್ಯವಾಗಿ ನಮ್ಮೆದುರಿಗಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಗತಿಯತ್ತ ಸಾಗಬೇಕಾದರೆ ಜ್ಞಾನಾರ್ಜನೆಯನ್ನು ರೂಡಿಸಿಕೊಳ್ಳುವ ಕಾಲೇಜು ಹಂತದಲ್ಲಿ ಎಲ್ಲಾ ಜ್ಞಾನಶಿಸ್ತುಗಳ ವಿಷಯಗಳು ಮಾತೃಭಾಷೆಯಲ್ಲಿ ಬೋಧಿಸಲ್ಪಟ್ಟಾಗ ಮಾತ್ರ. ಒಂದು ರೀತಿಯಲ್ಲಿ ಆ ಕ್ರಮ ಔಚಿತ್ಯಪೂರ್ಣವೆಂದು ನಾವು ಭಾವಿಸುವುದಾದರೂ ವಿಶ್ವಮಟ್ಟದ ವಿಜ್ಞಾನ ತಂತ್ರಜ್ಞಾನಗಳ ವಿಷಯಗಳು ಎಂದು ಭಾವಿಸಿದಾಗ ಇಂಗ್ಲಿಷ್ ಭಾಷೆ ಬಲ್ಲವರಾಗಿರಲೇಬೇಕು. ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲು ಹೇಗೆ ಸವಾಲಾಗಿ ಸ್ವಿಕರಿಸಬೇಕು ಎಂಬುದನ್ನು ಬುದ್ಧಿಜೀವಿಗಳೇ ಕಾಲಧರ್ಮಕ್ಕನುಗುಣವಾಗಿ ಮಾರ್ಗೋಪಾಯಗಳನ್ನು ಸೂಚಿಸಬೇಕು.

ಜಾಗತೀಕರಣದ ನಿಯಮಾನುಸಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಹಣ ಗಳಿಸುವುದಕ್ಕೆ ಹೊರಟಿದ್ದು, ಶಿಕ್ಷಣ ವ್ಯವಸ್ಥೆಯಲ್ಲೂ ಭಿನ್ನ ಸ್ವರೂಪವನ್ನು ಕಾಯ್ದುಕೊಳ್ಳುವುದಕ್ಕೆ ತೊಡಗಿವೆ. ಕನ್ನಡ ಮಾಧ್ಯಮದಲ್ಲಿ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮದ ಬೋಧನೆಯಲ್ಲಿ ತೊಡಗಿದ್ದರೂ ಅಂತಹ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಗೋಜಿಗೇ ಹೋಗದ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವುದಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ. ಇದರ ಹಿಂದಿರುವ ಸತ್ಯವೇನೆಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬೇಕಾಗಿದೆ. ಇಂಗ್ಲಿಷ್ ವ್ಯಾಮೋಹ ಉಳ್ಳವರ ಕಡೆಗೆ ಸರ್ಕಾರ ಹೊರಳುತ್ತಿದೆ ಎಂದರೆ ತಪ್ಪಾಗಲಾರದು.

ಪ್ರಮುಖ ಐಚ್ಚಿಕ ವಿಷಯಗಳ ಶಾಸ್ತ್ರಜ್ಞಾನಗಳ ಬೋಧನೆಯ ನಡುವೆ ಕನ್ನಡ ಭಾಷಾ ವಿಷಯಗಳು ಇಂದು ಊಟಕ್ಕೆ ಉಪ್ಪಿನಕಾಯಿಯ ಸ್ಥಿತಿಯಲ್ಲಿವೆ.  ಹಾಗಾದರೆ ಮುಂದಿನ ದಿನಗಳಲ್ಲಿ ಕನ್ನಡವನ್ನೇ ನಂಬಿದವರ ಪಾಡೇನು? ಹಿಂದಿನಿಂದಲೂ ಕನ್ನಡಪರ ಹೋರಾಟ, ಧೋರಣೆಗಳು ವ್ಯಕ್ತವಾಗಿವೆ ನಿಜ. ಹಾಗಾದರೆ, ಇಂಗ್ಲಿಷ್ ವ್ಯಾಮೋಹ ತಪ್ಪಿದೆಯೇ? ಕನ್ನಡಪರ ಹೋರಾಟ ಮತ್ತು ಧೋರಣೆಯುಳ್ಳವರು ಪರಿಪೂರ್ಣವಾಗಿ ಯಶಸ್ಸು ಗಳಿಸಿದ್ದಾರೆಯೇ? ಕನ್ನಡವನ್ನೇ ನಂಬಿದವರ ಭವಿಷ್ಯದ ಬದುಕೇನು? ಉನ್ನತ ಸ್ಥಾನ-ಮಾನಗಳುಳ್ಳ ವಿದ್ಯಾವಂತ ವರ್ಗ ತಮ್ಮ ಮಕ್ಕಳಿಗೆ ಯಾವ ಜ್ಞಾನಶಿಸ್ತುಗಳ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ? ಬಡ ಹಾಗೂ ಅವಿದ್ಯಾವಂತ ವರ್ಗದ ಮಕ್ಕಳು ಯಾವ ಜ್ಞಾನಶಿಸ್ತುಗಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ? ಅವುಗಳ ಫಲಾಫಲ ಹಾಗೂ ಭವಿಷ್ಯದಲ್ಲಿ ಸುಂದರ ಬದುಕು ಯಾರದಾಗಿದೆ? ಸುಮಾರು ವರ್ಷಗಳಿಂದಲೂ ಶಿಕ್ಷಣ ಮಾಧ್ಯಮಗಳ ತರ್ಕ-ತಕರಾರು ನಡೆಯುತ್ತಲೇ ಇದೆ.

ಸರ್ಕಾರದ ಶಿಕ್ಷಣ ಮಾಧ್ಯಮದ ನೀತಿಯನುಸಾರ, ಶಾಲೆಯಲ್ಲಿ ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆಯಿದೆ. ಇಂಗ್ಲಿಷ್ ಭಾಷೆಯನ್ನು ಹೊರತು ಪಡಿಸಿದರೆ ಉಳಿದ ಜ್ಞಾನಶಿಸ್ತುಗಳನ್ನು ಶಿಕ್ಷಣ ನೀತಿಯಾನುಸಾರವಾಗಿ ಕನ್ನಡದಲ್ಲಿಯೇ ಕಲಿಯುತ್ತಾರೆ ಹಳ್ಳಿಯ ಮಕ್ಕಳು. ಇವರು ಇಂಗ್ಲೀಷನ್ನು ಕಂಠಪಾಠ ಮಾಡಿ ಉಪಾಧ್ಯಾಯರಿಗೆ ಒಪ್ಪಿಸಿ 'good' ಎನಿಸಿಕೊಳ್ಳುತ್ತಾರೆಯೇ ಹೊರತು ಇಂಗ್ಲಿಷ್ ವಿಷಯದ ಭಾವಪೂರ್ಣ ಅರ್ಥದ ಅರಿವು ಅವರಿಗಿರುವುದಿಲ್ಲ. ಇಂಥಹ ಮಕ್ಕಳು ಕಷ್ಟಪಟ್ಟು ಎಸ್. ಎಸ್. ಎಲ್. ಸಿ. ಹಂತ ಹತ್ತಿದರೂ ಇಂಗ್ಲಿಷ್ ಅವರಿಗೆ ಕಬ್ಬಿಣದ ಕಡಲೆಯಾಗಿ ಉಳಿಯುತ್ತದೆ.

ಇಂದು, ಬದುಕನ್ನು ರೂಪಿಸುವ ಶಿಕ್ಷಣದ ಅಗತ್ಯತೆಯಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಮೇಧಾವಿಗಳು ಕನ್ನಡ ಭಾಷೆಗೆ ಧಕ್ಕೆ ಬಾರದ ಹಾಗೆ ಯುವ ಜನತೆಗೆ ಬೇಕಾದ ಪೂರಕ ಶಿಕ್ಷಣ ಮಾಧ್ಯಮ ಹಾಗೂ ಮೌಲ್ಯಾಧಾರಿತವಾದ ಜ್ಞಾನಶಿಸ್ತುಗಳನ್ನು ಹೇಗಿರಬೇಕೆಂಬುದನ್ನು ಚಿಂತಿಸುವುದರ ಜೊತೆಗೆ ಕನ್ನಡ ಬೆಳವಣಿಗೆಯನ್ನೂ ಒಂದು ಸವಾಲಾಗಿ ಸ್ವಿಕರಿಸಿ ಓದುಗರ ಬದುಕಿಗೆ ಎಂತಹ ಭದ್ರಬುನಾದಿ ಹಾಕಬೇಕೆಂಬುದರತ್ತ ಯೋಚಿಸಬೇಕು. ಶಿಕ್ಷಣ, ಕಲಿತವರ ಬದುಕಿಗೆ ಬೆಳಕಾಗಬೇಕು. ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣವನ್ನು ನಂಬಿದವರ ಬದುಕು ಬರಡಾಗದಂತೆ ನೋಡಿಕೊಂಡರಷ್ಟೇ ಸಾಕು.

ಲೇಖಕರ ಕಿರುಪರಿಚಯ
ಡಾ|| ಬಸವರಾಜು ತೋಟಹಳ್ಳಿ.

ಇವರು ಮಂಡಿಸಿದ 'ಕನಕಪುರ ತಾಲ್ಲೂಕಿನ ಗ್ರಾಮದೇವತೆಗಳು - ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತುಮಕೂರು ವಿಶ್ವವಿದ್ಯಾಲಯ, ಕನಕಪುರ ಮುನಿಸಿಪಾಲ್ ಕಾಲೇಜು ಮುಂತಾದ ಗ್ರಾಮಾಂತರ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸುರಾನಾ ಕಾಲೇಜು, ಬೆಂಗಳೂರು ಇಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.

ವೃತ್ತಿಯಲ್ಲಿ ಉತ್ತಮ ಹಿಡಿತ ಹೊಂದಿರುವ ಶ್ರೀಯುತರು 'ಬಲಿಪೀಠ' ಮತ್ತು 'ಕ್ರಾಂತಿಯ ಕಿಡಿ' ಎಂಬ ನಾಟಕಗಳನ್ನು, 'ಚಿಗುರಿದ ಗರಿಕೆ' ಎಂಬ ಕವನ ಸಂಕಲನವನ್ನು, 'ಕನಕಪುರ ತಾಲ್ಲೂಕಿನ ಶಾಸನಗಳು' ಎಂಬಿತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ವೈಚಾರಿಕ ಲೇಖನಗಳ ರಚನೆ, ಸಾಹಿತ್ಯ ವಿಮರ್ಶೆ ಮುಂತಾದವುಗಳನ್ನು ಹವ್ಯಾಸವಾಗಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 15, 2011

ಇದು ಮೊಬೈಲ್ ಮತ್ತು ವೆಬ್ ಬ್ರೌಸರ್ ‌ಗಳ ಯುಗ

ಛಾಯಾಚಿತ್ರ ಕೃಪೆ : ಟೆಕ್ ಲೊಕೇಷನ್
ಇಪ್ಪತ್ತೊಂದನೆಯ ಶತಮಾನದ ಹೊತ್ತಿಗೆ ಕಂಪ್ಯೂಟರ್ ಮತ್ತದರ ಬಳಕೆಯ ರೂಪುರೇಷೆಗಳು ದಿನದಿನಕ್ಕೂ ಬದಲಾಗುವ ಹಂತಕ್ಕೆ ಬಂದಿವೆ. ಬೃಹದಾಕಾರದ ಮನೆಗಳಲ್ಲಿ ದೊಡ್ಡ ಯಂತ್ರಗಳಂತೆ ಕೆಲಸ ಮಾಡುತ್ತಾ ಗಣಿತದ ಲೆಕ್ಕಾಚಾರಗಳನ್ನು ಚಕಚಕನೆ ಮುಗಿಸುತ್ತಿದ್ದ ಕಂಪ್ಯೂಟರ್ ಈಗ ಎಲ್ಲರ ಕೈಬೆರಳುಗಳ ಕೀಲಿಮಣೆ ಆಟದ ಆಟಿಕೆಯಾಗಿದೆ. ಡೆಸ್ಕ್ ಟಾಪ್‌ಗಳು ಲ್ಯಾಪ್ಟಾಪ್ ಗಳಾಗಿ, ಮೊಬೈಲ್ ಫೋನುಗಳು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಟಚ್ ಪ್ಯಾಡ್ ಹೀಗೆ ಹತ್ತು ಹಲವು ಮಾದರಿಗಳ ರೂಪ ಪಡೆದಿವೆ. ನೆಟ್‌ಬುಕ್ ‌ಗಳು ಸಾಮಾನ್ಯನಿಗೂ ಕಂಪ್ಯೂಟರ್ ಅನ್ನು ದಿನ ನಿತ್ಯದ ಡೈರಿಗಿಂತ ಹೆಚ್ಚಾಗಿ ಸಂಗಾತಿಯಂತೆ ಕೈ ಸೇರುತ್ತಿದೆ. ಈ ಹಂತದಲ್ಲಿ ನಾವುಗಳು ದಿನನಿತ್ಯ ಬಳಸುತ್ತಿರುವ ತಂತ್ರಾಂಶಗಳಲ್ಲಿ ಬದಲಾವಣೆ ಆಗಿದೆಯೇ ನೋಡೋಣ.

ಕಂಪ್ಯೂಟರ್ ನಲ್ಲಿ ಕೆಲಸ ಮಾಡಲು ಬೇಕಿರುವ ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು, ಅದನ್ನು ಸ್ನೇಹಿತರಿಂದ ಪಡೆದು ತಾವೇ ಸ್ಥಾಪಿಸಿಕೊಳ್ಳುವುದು, ಇಲ್ಲವೇ ಇಂಟರ್ನೆಟ್ ನ ಯಾವುದೋ ವೆಬ್‌ಸೈಟ್ ಒಂದರಿಂದ ಪೈರೇಟೆಡ್ ತಂತ್ರಾಂಶಗಳನ್ನು ಇಳಿಸಿಕೊಂಡು ಉಪಯೋಗಿಸುವುದು ಸಾಮಾನ್ಯವಾಗಿ ನಮ್ಮಲ್ಲನೇಕರು ಮಾಡಿರಬಹುದು. ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಿದ್ದಂತೆ ತಂತ್ರಾಂಶಗಳು ಬ್ರೌಸರ್ ಎಂಬ ಒಂದು ಸಣ್ಣ ತಂತ್ರಾಂಶದ ಮಡಿಲೇರಿವೆ. ಇಂಟರ್ನೆಟ್ ವೇಗ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಈ ಸಮಯದಲ್ಲಿ ಕೇವಲ ವೆಬ್‌ಸೈಟ್ ಗಳನ್ನು ವೀಕ್ಷಿಸಲು, ಇ-ಮೈಲ್ ಕಳಿಸಲು ಉಪಯೋಗಿಸುತ್ತಿದ್ದ ಬ್ರೌಸರ್ ಇಂದು ನಮ್ಮೆಲ್ಲ ಕೆಲಸಗಳನ್ನು ಮಾಡಲಿಕ್ಕೆ ಬೇಕಿರುವ ಪ್ರತಿಯೊಂದು ತಂತ್ರಾಂಶವನ್ನು 'ಪ್ಲಗಿನ್' ಅಥವಾ 'ಎಕ್ಸ್‌ಟೆನ್ಷನ್' ಗಳ ರೂಪದಲ್ಲಿ ನಮಗೆ ಕೊಡುತ್ತಿದೆ.

ಒಂದಿಷ್ಟು ಮಾತು - ಮತ್ತಿಷ್ಟು ಮೋಜು
ಸ್ನೇಹಿತರೊಂದಿಗೆ ಹರಟಬೇಕೆ? ನಿಮ್ಮ ಇ-ಮೈಲ್ ಅನ್ನು ಚೆಕ್ ಮಾಡಬೇಕೆ? ಕಾಮಿಕ್ಸ್, ವಾರ್ತೆ, ಸಂಗೀತ, ಫೇಸ್‌ಬುಕ್, ಗೂಗಲ್ ಪ್ಲಸ್, ಬಜ್, ಟ್ವಿಟರ್ ಮತ್ತಿತರ ತಾಣಗಳನ್ನು ಒಮ್ಮೆಲೆ ಜಾಲಾಡಬೇಕೆ? ಆಂಗ್ರಿ ಬರ್ಡ್ ಆಟವಾಡಬೇಕೆ? ಗೂಗಲ್ ಕ್ರೋಮ್ ಬ್ರೌಸರ್ ತೆರೆದು, ಅದರಲ್ಲಿನ ವೆಬ್ ಸ್ಟೋರ್ ಪ್ರವೇಶಿಸಿ. Extensions ಮತ್ತು Apps ಮೆನುವಿನಲ್ಲಿ ನಿಮಗೆ ಇದೆಲ್ಲ ಲಭ್ಯ. ಹುಡುಕಿ, ಇನ್ಸ್ಟಾಲ್ ಮಾಡು ಎಂದರಾಯ್ತು.. ಕ್ಷಣಾರ್ಧದಲ್ಲಿ ಇವುಗಳು ನಿಮ್ಮ ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಅಥವಾ ಬ್ರೌಸರ್ ನ ಹೊಸ ಪುಟದ ಮುಖದಲ್ಲಿ ಮೂಡುತ್ತವೆ. ಇಂಟರ್ನೆಟ್ ಇದ್ದು ಅದರ ವೇಗ 256 ಎಂ. ಬಿ. ಅಥವಾ ಅದಕ್ಕಿಂತ ತುಸು ಹೆಚ್ಚಿದ್ದರೆ ಮೇಲೆ ಹೇಳಿದ ಎಲ್ಲಾ ತರಾವರಿ ಕೆಲಸಗಳನ್ನು ಯಾವುದೇ ಅಡಚಣೆಯಿಲ್ಲದೆ ಮಾಡಬಹುದು.

ಕಲಿಕೆ
ಇಂಟರ್ನೆಟ್ ಎಷ್ಟೆಲ್ಲಾ ಮೋಜು, ಕಾಡು ಹರಟೆ ಇತ್ಯಾದಿಗಳಿಗೆ ಹೆಸರಾಗಿದರೂ, ಇಂದು ಕಲಿಕೆಗೆ ಬಹಳಷ್ಟು ದಾರಿಗಳನ್ನು ನಮ್ಮ ಮುಂದಿಡುತ್ತದೆ. ಆನ್-ಲೈನ್ ಯುನಿವರ್ಸಿಟಿಗಳ, ತಮ್ಮ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳುವವರ, ವಿಕಿಪೀಡಿಯಾದಂತದ ಎನ್-ಸೈಕ್ಲೋಪೀಡಿಯಾಗಳ ಸವಿಸ್ತಾರ ಪಟ್ಟಿಯನ್ನೇ ಇದಕ್ಕೆ ನೀಡಬಹುದು. ಇವುಗಳನ್ನು ಮೊಬೈಲ್ ಅಥವಾ ಕಂಪ್ಯೂಟರಿನ ಬ್ರೌಸರ್ ಗಳಲ್ಲಿಂದು ಸುಲಭವಾಗಿ ವೀಕ್ಷಿಸಿ ನಮ್ಮ ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಬಹುದು.

ಒಂದಿಷ್ಟು ಕೆಲಸ
ನೀವು ವೆಬ್‌ಡಿಸೈನ್ ಇನ್ನಿತರ ಕೆಲಸಗಳಲ್ಲಿ ತೊಡಗಿದವರೇ? ಅಂತರ್ಜಾಲದ ಪುಟಗಳನ್ನು ಹೆಣೆಯುವ ನಿಮ್ಮ ಕೆಲಸಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಹುಡುಕಾಟಕ್ಕೆ ಬ್ರೌಸರ್ ಪ್ಲಗಿನ್ ಮತ್ತು ಎಕ್ಸ್ಟೆನ್ಷನ್ ಗಳು ಕೊನೆ ಆಡುತ್ತವೆ. ಮೊಜಿಲ್ಲಾ ಫೈರ್-ಫಾಕ್ಸ್ ನಿಂದಾಗಿ ಬ್ರೌಸರ್ ಡೆವೆಲಪರ್ ಗಳ ಕೆಲಸದ ಡೆಸ್ಕ್ಟಾಪ್ ಆಯಿತು. ಈಗ ಗೂಗಲ್ ಕ್ರೋಮ್ ಕೂಡ ಡೆವೆಲಪರ್ ಗಳಿಗೆ ಅನೇಕ ವಿಶಿಷ್ಟ ಎಕ್ಸ್ಟೆನ್ಷನ್ ಗಳನ್ನು ತಂದು ಕೆಲಸವನ್ನೂ ಬ್ರೌಸರ್ ನಲ್ಲೇ ಮಾಡಿ ಎನ್ನುತ್ತಿದೆ.

ಉದಾಹರಣೆಗೆ:- ನಿಮ್ಮ ಬ್ಲಾಗ್ ನ ಪುಟದಲ್ಲಿನ ಬಣ್ಣ ಸರಿಯಿಲ್ಲ ಅಥವಾ ಅದರ ಡಿಸೈನ್ ಬದಲಿಸಬೇಕು ಎಂದಿಟ್ಟುಕೊಳ್ಳಿ. ಅದರ ಮೂಲ ಬ್ಲಾಗ್ ಪುಟದಲ್ಲಿನ ಕೊಡ್ ಅನ್ನು ಬದಲಿಸುವ ಮುಂಚೆ Firebug ಎಂಬ ಎಕ್ಸ್ಟೆನ್ಷನ್ ಬಳಸಿ ಬದಲಾವಣೆಗಳು ಹೇಗೆ ಕಾಣುತ್ತವೆ, ಎಲ್ಲಿ ಬದಲಾವಣೆ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಪರೀಕ್ಷಿಸಿಕೊಳ್ಳಬಹುದು. ನಿಮ್ಮ ಪುಟ ಇಂಟರ್ನೆಟ್ ನಲ್ಲಿ ಎಷ್ಟು ವೇಗವಾಗಿ ಲೋಡ್ ಆಗುತ್ತದೆ, ಅದನ್ನು ಉತ್ತಮ ಪಡಿಸುವ ಸಲಹೆಗಳನ್ನು ಕೂಡ ಈ ಪ್ಲಗಿನ್ ನೀಡುತ್ತದೆ.

ಮೊಬೈಲ್ ಫೋನ್ - ನೆಟ್ ಬುಕ್ - ಟ್ಯಾಬ್ ಅಗ್ಗದ ಬೆಲೆಯ ಆಂಡ್ರಾಯಿಡ್ ಫೋನುಗಳು ಕಂಪ್ಯೂಟರ್ ನ ಸಾಮರ್ಥ್ಯದೊಂದಿಗೆ ಟಚ್ ಅನುಭವ ಕೊಡುತ್ತಾ ಇಂದಿನ ಯುವ ಪೀಳಿಗೆ ಇಂಟರ್ನೆಟ್ ನೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಡಿವೆ. ಇತ್ತೀಚೆಗೆ ಬಂದ ನೆಟ್ ಬುಕ್ ಮತ್ತು ಟ್ಯಾಬ್‌ ಗಳೂ ಕೂಡ ಆಂಡ್ರಾಯಿಡ್ ಬಳಸುತ್ತಿರುವುದನ್ನು ನೋಡಬಹುದು. ಅತಿ ಸಣ್ಣ ತಂತ್ರಾಶಗಳು ದೈನಂದಿನ ಕೆಲಸಕ್ಕೆ ಬೇಕಾದ ಸೌಲಭ್ಯಗಳನ್ನು ಬೆರಳಂಚಿನಲ್ಲಿ ತಂದಿರುವುದು ನಮಗಿಲ್ಲಿ ಕಾಣಸಿಗುತ್ತದೆ.

ಕಂಪ್ಯೂಟರ್ ಬಳಸಬೇಕಿದ್ದಲ್ಲಿ ಮನೆಗೋ, ಸೈಬರ್ ಕೆಫೆಗೋ ಇಲ್ಲ ಮತ್ತೆ ಆಫೀಸಿಗೋ ಓಡಿ ಹೋಗುವ ಸಂದರ್ಭ ಇಂದು ಒದಗುವುದಿಲ್ಲ. ನಾವಿದ್ದಲ್ಲೇ ನಮ್ಮ ಕಂಪ್ಯೂಟರ್ ಬಳಸುವ ಅವಕಾಶವಿದೆ. ನಿಮ್ಮ ಮೊಬೈಲ್ ಫೋನ್ ನಿಂದ ಕೂಡ. ಜೊತೆಗೆ ನಮ್ಮ ಇಷ್ಟದ ಕೆಲವೊಂದು ತಂತ್ರಾಂಶಗಳನ್ನೆಲ್ಲಾ ಒಂದೆಡೆ ಹಾಕಿ ಬೇಕಾದಾಗ ಕೇವಲ ಬಳಕೆದಾರನ ಹೆಸರು ಮತ್ತು ಪಾಸ್ ವರ್ಡ್ ನೀಡುವುದರ ಮೂಲಕ ಮರುಬಳಕೆ ಮಾಡುವ ಸೌಲಭ್ಯವನ್ನು ನೀಡುವ JoliCloud ನಂತಹ ಕ್ಲೌಡ್ ತಂತ್ರಜ್ಞಾನ ಇಂದಿನ ಜನಾಂಗವನ್ನು ಮತ್ತಷ್ಟು ಬ್ರೌಸರ್ ನಲ್ಲಿಯೇ ಕಟ್ಟಿಡುವ ಕೆಲಸ ಮಾಡುತ್ತಿದೆ.

ಮುಂದಿನ ದಿನಗಳಲ್ಲಿ ಬರೀ ಬ್ರೌಸರ್ ಒಂದರಿಂದಲೇ ನಿಮ್ಮೆಲ್ಲ ಕೆಲಸಗಳು ಎಲ್ಲಿಂದಲಾದರೂ ಆಗುವ ಸಮಯ ದೂರ ಇಲ್ಲ. ಗೂಗಲ್ ಓ.ಎಸ್. ತಂತ್ರಾಂಶ ತನ್ನ ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಆಧಾರವಾಗಿರಿಸಿಕೊಂಡು ಈಗಾಗಲೇ ನಮ್ಮ ನೆಟ್ ಬುಕ್ ‌ಗಳಲ್ಲಿನ ಸಾಮಾನ್ಯ ಆಪರೇಟಿಂಗ್ ಗಳಿಗೆ ಕೊಕ್ ಕೊಡಲು ಸಜ್ಜಾಗಿದೆ.

ನಿಮ್ಮ ಮೊಬೈಲ್ ನಲ್ಲಿ ಜಿ.ಪಿ‌.ಆರ್.ಎಸ್. ಅಥವಾ ವೈಫೈ ಇದ್ದರಾಯ್ತು. ಗೂಗಲ್ ಐಡಿ ಕೊಟ್ಟು ನಿಮ್ಮ ಕಡತಗಳನ್ನು ಉಪಯೋಗಿಸುವುದು, ಇ-ಮೈಲ್, ಚಾಟ್, ಯು-ಟ್ಯೂಬ್, ಸೋಷಿಯಲ್ ನೆಟ್ವರ್ಕಿಂಗ್, ಸಂಗೀತ, ಆಟಗಳು, ಕೆಲಸ ಎಲ್ಲವೂ ಸಲೀಸು... ಹಿನ್ನೆಲೆ - ಇದೆಲ್ಲಾ ಸಾಧ್ಯವಾಗುತ್ತಿರುವುದು ಹೇಗೆ?

ಕ್ಲೌಡ್ ಕಂಪ್ಯೂಟಿಂಗ್ ಅಂದರೆ, ನಮಗೆ ಬೇಕಿರುವ ಎಲ್ಲ ಐ.ಟಿ. ತಂತ್ರಜ್ಞಾನವನ್ನು ಸೇವೆಯ ರೂಪದಲ್ಲಿ ಇಂಟರ್ನೆಟ್ ಮೂಲಕ ದೊರೆಯುವಂತೆ ಮಾಡಿರುವ ತಂತ್ರಜ್ಞಾನ, ಮೊಬೈಲ್ ಗಳಿಗೆ ಆಂಡ್ರಾಯಿಡ್ ನಂತಹ ಮುಕ್ತ ತಂತ್ರಾಂಶ, ಉಚಿತ ತಂತ್ರಾಂಶಗಳನ್ನು ಬಳಕೆದಾರರಿಗೆ ಬ್ರೌಸರ್, ಮೊಬೈಲ್ ಅಪ್ಲಿಕೇಷ‌ನ್ ಇತ್ಯಾದಿಗಳ ಮೂಲಕ ನೀಡಿ ಜಾಹಿರಾತುಗಳ ಮೂಲಕವೇ ಕಿಸೆ ತುಂಬಿಸಿಕೊಳ್ಳಬಹುದಾದ ಅವಕಾಶ, ಇದೆಲ್ಲಕ್ಕೆ ಆಧಾರವೆಂಬತೆಯೇ ಬೆಳೆದು ಬಂದ ಇಂಟರ್ನೆಟ್ ತಂತ್ರಜ್ಞಾನ ಇವೆಲ್ಲಕ್ಕೆ ಕಾರಣ. ಏನೇ ಇರಲಿ, ಪರದೆಯ ಮುಂದೆಯೇ ಕೂತು ವರುಷಗಳನ್ನೇ ಕಳೆದರೂ ನಾವು ಪರಿಸರದ ಜೊತೆಗೆ ಒಡನಾಡುವ ನೈಜ ಅನುಭವ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ನೀಡಲಾರವು. ಆಗಾಗ್ಗೆ ಇವುಗಳಿಂದ ಹೊರಬಂದು ಪ್ರಕೃತಿಯ ಸವಿಯನ್ನು ಸವಿಯಿರಿ ಹಾಗೂ RSI (ರಿಪಿಟಿಟೀವ್ ಸ್ಟ್ರೈನ್ ಇಂಜುರಿ) ನಂತಹ ಕಾಯಿಲೆಗಳಿಂದ ದೂರವಾಗಿ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಮತೋಲನದ ಜೀವನ ನೆಡೆಸಿ.

ಲೇಖಕರ ಕಿರುಪರಿಚಯ
ಶ್ರೀ ಓಂಶಿವಪ್ರಕಾಶ್ ಹೆಚ್. ಎಲ್.

ಮೂಲತಃ ಬೆಂಗಳೂರಿನವರೇ ಆದ ಇವರಿಗೆ ಹವ್ಯಾಸ, ಕೆಲಸ ಎರಡೂ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಇತ್ಯಾದಿ ಇವರಿಗೆ ಖುಷಿ ಕೊಡುವ ಕೆಲಸಗಳು.

ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ಧಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ ಹೊಂದಿರುವ ಇವರು ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನೂ ಹೆಣೆಯುತ್ತಾರೆ.

Blog  |  Facebook  |  Twitter

ಸೋಮವಾರ, ನವೆಂಬರ್ 14, 2011

ಅಕ್ಷರ ಚಿತ್ರ

'ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು' ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹುಟ್ಟಿದ ಮಗುವಿನ ಕಲಿಕೆಯು ತಾಯಿಯ ಗರ್ಭದಿಂದ ಹೊರಬರುತ್ತಿದ್ದಂತೆಯೇ ಪ್ರಾರಂಭವಾಗುತ್ತದೆ. ನವಮಾಸದುದ್ದಕ್ಕೂ ತನ್ನೊಳಗೇ ಇರಿಸಿಕೊಂಡು, ಪಾಲನೆ ಮಾಡಿ, ಮಗುವಿಗೆ ಸರ್ವಸ್ವವನ್ನೂ ಧಾರೆಯೆರೆಯುವ ತಾಯಿಯ ತ್ಯಾಗಕ್ಕೆ ತಾಯಿಯೇ ಸಾಟಿ!

ಜೀವ ಕೊಟ್ಟ ತಾಯಿಯು ಮಗುವಿಗೆ ವಿದ್ಯೆ-ಸನ್ನಡತೆಗಳನ್ನು ಕಲಿಸದಿದ್ದರೆ, ಆಕೆಯೇ ಆ ಮಗುವನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾಳೆ. ವಿದ್ಯೆಗಿಂತ ಮಿಗಿಲಾದ ಸಂಪತ್ತು ಇನ್ಯಾವುದುಂಟು? ತನ್ನ ಮಗುವನ್ನು ವಿದ್ಯಾವಂತವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ತಾಯಿಯದ್ದಾಗಿರುತ್ತದೆ. ಆಶ್ಚರ್ಯವೆಂಬಂತೆ, ಮಗುವು ಕಲಿಯುವ ಮೊಟ್ಟಮೊದಲ ಪದ 'ಅಮ್ಮಾ'; ಇದು ಪ್ರಾರಂಭವಾಗುವುದು 'ಅ' ಅಕ್ಷರದಿಂದ. ತನಗರಿವಿಲ್ಲದೆಯೇ ಮಗುವು ಸ್ವಾಭಾವಿಕವಾಗಿ ವರ್ಣಮಾಲೆಯ ಮೊದಲನೇ ಅಕ್ಷರವನ್ನು 'ಅಮ್ಮ'ನಿಂದ ಕಲಿಯುತ್ತದೆ.

ಮಕ್ಕಳಿಗೆ ಕಲಿಕೆಯು ಹೊರೆಯಾಗದಂತೆ, ಸರಳ-ಸುಲಭ ವಿಧಾನಗಳ ಮೂಲಕ ಪಾಠ ಹೇಳುವುದು ಎಲ್ಲಾ ಹಿರಿಯರ ಮುಂದಿರುವ ಸವಾಲೇ ಸರಿ. ಶ್ರವ್ಯ ಮಾಧ್ಯಮಕ್ಕಿಂತ, ದೃಶ್ಯ ಮಾಧ್ಯಮದ ಮೂಲಕ ಕಲಿಕೆಯು ಹೆಚ್ಚು ಪ್ರಭಾವಶಾಲಿ ಆಗುವುದರಿಂದ, ಕನ್ನಡ ವರ್ಣಮಾಲೆಯನ್ನು ಬಣ್ಣ ಬಣ್ಣದ ಚಿತ್ರಗಳನ್ನುಪಯೋಗಿಸಿ ಪುಟಾಣಿ ಮಕ್ಕಳಿಗೆ ಕಲಿಸಬಹುದಾದ ವಿಧಾನವೊಂದನ್ನು ಈ ಕೆಳಗೆ ನಿರೂಪಿಸಿದ್ದೇನೆ:



ಲೇಖಕರ ಕಿರುಪರಿಚಯ
ಶ್ರೀಯುತ ಸು. ವಿ. ಮೂರ್ತಿ.

ಇವರು ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರು. ಹೋಟೆಲ್ ಉದ್ಯಮದಲ್ಲಿದ್ದುಕೊಂಡು ಬಹಳಷ್ಟು ಕಲಾ ಸೇವೆ ಮಾಡಿದ್ದಾರೆ. ವಿದ್ಯಾರ್ಥಿ ಭವನದಲ್ಲಿ ಗೋಡೆಯ ಸುತ್ತಮುತ್ತಲೂ ರಾರಾಜಿಸುತ್ತಿರುವ ಕನ್ನಡದ ಕಣ್ಮಣಿಗಳ ಚಿತ್ರಪಟಗಳು ಇವರ ಪ್ರತಿಭೆಗೆ ಸಾಕ್ಷಿ.

ಮಕ್ಕಳಿಗಾಗಿ ಹಲವಾರು "ನೋಡಿ ಕಲಿ - ಮಾಡಿ ನಲಿ" ಮಾದರಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ. ಕಹಳೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ತಮ್ಮ ಅಕ್ಷರ ಚಿತ್ರಗಳ ಲೇಖನವನ್ನು ಒದಗಿಸಿದ್ದಾರೆ. ಇದಲ್ಲದೆ ಕಹಳೆಯ ಇನ್ನೂ ಇತರ ಲೇಖನಗಳಿಗೂ ಚಿತ್ರಗಳನ್ನು ಒದಗಿಸಿರುವ ಇವರಿಗೆ ಕಹಳೆ ತಂಡದ ಪರವಾಗಿ ಧನ್ಯವಾದಗಳು.

Blog  |  Facebook  |  Twitter