ಶನಿವಾರ, ನವೆಂಬರ್ 30, 2019

ಹಂಪೆ ಹಾಳು ಕೊಂಪೆಯಲ್ಲ

ನವಂಬರ್ 2019ರ ಮಾಹೆಯುದ್ದಕ್ಕೂ ಪ್ರಸ್ತುತಗೊಂಡ ಕಹಳೆ ಒಂಭತ್ತನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಸಿದ್ಧಪಡಿಸಿದ ಹೆಸರಘಟ್ಟದ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಕಡ್ಲೆಕಾಳು ಗಣಪತಿ
ಚಿತ್ರ ಕೃಪೆ : ಗೂಗಲ್

ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅದರ ಗತವೈಭವದ ಗಾಥೆ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಹರಡಿತ್ತು. ಅದರಲ್ಲೂ ಕೃಷ್ಣದೇವರಾಯನ ಕಾಲದಲ್ಲಿ ಹಂಪೆಯು ಎಂತಹ ಅದ್ದೂರಿಯಲ್ಲಿ ಮೆರೆಯಿತೆಂದರೆ, ಅದರ ಮನಮೋಹಕ ಮತ್ತು ಅಪರೂಪದ ಕೆತ್ತನೆಗಳನ್ನು ವರ್ಣಿಸಲಸಾಧ್ಯವಾಗಿತ್ತು. ಹಂಪಿ ಈಗ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿದೆ.

ವಿರೂಪಾಕ್ಷ ದೇವಾಲಯ: ಹಂಪಿಗೆ ಹೋಗಿ ಮುಂಭಾಗದ ಪಶ್ಚಿಮ ದಿಕ್ಕಿನತ್ತ ತಿರುಗಿದರೆ ಭವ್ಯವಾಗಿ ಎತ್ತರವಾಗಿ ಕಂಗೊಳಿಸುವಂತಹ ದೇವಾಲಯ ಇದು. ಈ ವಿರೂಪಾಕ್ಷ ದೇವಾಲಯದ ಗೋಪುರ ಸುಮಾರು 165 ಅಡಿ ಎತ್ತರವಿದ್ದು, ತಳಭಾಗ 150 ಅಡಿಗಳಷ್ಟು ಅಗಲವಾಗಿಯೂ 120 ಅಡಿ ಉದ್ದನಾಗಿಯೂ ಇದ್ದು ಒಟ್ಟು ಹನ್ನೊಂದು ಅಂತಸ್ತುಗಳಿಂದ ಕೂಡಿದೆ. ಈ ದೇವಾಲಯಕ್ಕೆ ಎರಡು ಗೋಪುರಗಳಿವೆ. ಇವುಗಳನ್ನು ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ಸವಿನೆನಪಿಗಾಗಿ ಕಟ್ಟಿಸಿದನೆಂದು ಹೇಳಲಾಗುತ್ತದೆ.

ಅಚ್ಯುತರಾಯನ ಗುಡಿ: ಈ ದೇವಾಲಯವು 1513 ರಲ್ಲಿ ಕೃಷ್ಣದೇವರಾಯನ ತಮ್ಮನಾದ ಅಚ್ಯುತರಾಯನಿಂದ ಕಟ್ಟಿಸಲ್ಪಟ್ಟಿತು. ಇಲ್ಲಿ ಏಕಶಿಲೆಯಲ್ಲಿ ನಿರ್ಮಿಸಿರುವ ಅವಳಿ ಕಂಬಗಳಿದ್ದು, ಕಂಬದ ಕೆತ್ತನೆ ಮನಮೋಹಕವಾಗಿದೆ. ಈ ದೇವಾಲಯದ ದಕ್ಷಿಣ ಬಾಗಿಲಿನಿಂದ ಹೊರಬಂದರೆ ಸಕಲಾಯುಧ ಪಾಣಿಯಾದ ಹತ್ತು ಕೈಗಳುಳ್ಳ ಒಂದೇ ಶಿಲೆಯಿಂದ ನಿರ್ಮಿಸಲ್ಪಟ್ಟಿರುವ ದೇವಿಯ ವಿಗ್ರಹವು ಕಾಣುತ್ತದೆ.

ವಿಜಯ ವಿಠಲ ದೇವಸ್ಥಾನ ಮತ್ತು ಕಲ್ಲಿನ ರಥ: ವಾಸ್ತುಶಿಲ್ಪದ ಶ್ರೇಷ್ಠತೆಗೆ ಸೇರಿದ ಮೂರು ದೇವಾಲಯಗಳು ಹಂಪಿಯಲ್ಲಿವೆ. ಅದರಲ್ಲಿ ಮೊದಲನೆಯದು ವಿಜಯ ವಿಠಲ ದೇವಾಲಯ. ಇಲ್ಲಿರುವ ಕಲ್ಲಿನ ರಥವನ್ನು ಒರಟು ಬೆಣಚು ಕಲ್ಲಿನಿಂದ ನಿರ್ಮಿಸಲಾಗಿದೆ.

ಉಗ್ರ ನರಸಿಂಹ ಮೂರ್ತಿ: ಇದು ಹಂಪೆಯಲ್ಲಿರುವ ಎಲ್ಲಾ ಮೂರ್ತಿಗಳಿಗಿಂತÀಲೂ ಬೃಹದಾಕಾರವಾದ ಮೂರ್ತಿ. ಇದರ ಸುತ್ತು ಎತ್ತರ ಸುಮಾರು 22 ಅಡಿಗಳು. 1528ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಓರ್ವ ಬ್ರಾಹ್ಮಣನಿಂದ ನಿರ್ಮಿಸಲ್ಪಟ್ಟಿತೆಂದು ಹೇಳಲಾಗಿದೆ. ಈ ಮೂರ್ತಿಯ ಹಿಂದೆ ಬೃಹದಾಕಾರದ ಪ್ರಭಾವಳಿ, ಹೆಡೆಬಿಚ್ಚಿದ ಸರ್ಪ ಇದೆ.

ಪಾತಾಳೇಶ್ವರ ದೇವಾಲಯ: ಈ ದೇವಾಲಯವು ಭೂಮಿ ಮಟ್ಟಕ್ಕಿಂತ ಕೆಳಗಿದೆ. ಇದರ ನಿರ್ಮಾಣ ಬುಕ್ಕರಾಯನ ಕಾಲದ್ದಾಗಿರಬಹುದೆಂದೆ ಊಹಿಸಲಾಗಿದೆ. ದೇವಾಲಯವು ಅನೇಕ ಕಂಬಗಳಿಂದ ಕೂಡಿದೆ. ದೇವಾಲಯದ ಒಳಭಾಗದಲ್ಲಿ ಕಾಲುವೆಯ ನೀರು ಹರಿಯುತ್ತದೆ, ಅದ್ದರಿಂದ ಸದಾ ತಂಪಾಗಿರುತ್ತದೆ.

ಹಂಪಿಯಲ್ಲಿ ಈ ಶಿಲ್ಪಕಲೆಗಳಲ್ಲದೆ, ವೀರಭದ್ರ ದೇವಾಲಯ, ಅಕ್ಕ-ತಂಗಿಯರ ಗುಡ್ಡ, ದಂಡನಾಯಕನ ಕೋಟೆ, ಹೇಮಕೂಟ, ಕಡ್ಲೆಕಾಳು ಗಣಪತಿ, ಕೃಷ್ಣ ದೇವಾಲಯ, ಕಮಲ ಮಹಲ್, ಗಜಶಾಲೆ, ಗಾನಗಿತ್ತಿ ಮಹಲ್, ವಸ್ತು ಸಂಗ್ರಹಾಲಯ, ಮಲ್ಲಪ್ಪನ ಗಡಿ, ಅನಂತಶಯನ ಗುಡಿ ಮುಂತಾದ ಅನೇಕ ಸ್ಥಳಗಳಿವೆ. ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ಸುಲ್ತಾನರ ನಡುವೆ ರಕ್ಕಸ ತಂಗಡಿಯೆಂಬ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಮುಸಲ್ಮಾನರ ಕೈ ಮೇಲಾಗಿ ವಿಜಯನಗರದ ವಿನಾಶಕ್ಕೆ ಕಾರಣವಾಯಿತು.

ವಿದ್ಯಾರ್ಥಿ ಕಿರುಪರಿಚಯ
ವೈಷ್ಣವಿ, ಎಂ. ಎಸ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 29, 2019

ಜಾನಪದ ಕಲೆಗಳು

  ಕಂಸಾಳೆ
ಕೃಪೆ: YouTube

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆಯ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ. ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ.

ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ.

ವೀರಗಾಸೆ: ಶೈವ ಸಂಪ್ರದಯದ ಒಂದು ಮಹತ್ವಪೂರ್ಣ ಕಲೆ ವೀರಗಾಸೆ. ದಕ್ಷ ಬ್ರಹ್ಮನ ಯಜ್ಞವನ್ನು ಧ್ವಂಸಮಾಡಿ ಬಂದ ವೀರಭದ್ರನ ವಿಜೃಂಭಣೆಯೇ ವೀರಗಾಸೆ.

ಕೊಂಬು ಕಹಳೆ: ನಮ್ಮ ನಾಡಿನ ಹಳ್ಳಿಗಳಲ್ಲಿ ಬಳಕೆಯಲ್ಲಿರುವ ವಾದ್ಯಗಳ ಗುಂಪುಗಳಲ್ಲಿ ಕೊಂಬು ಕಹಳೆಗಳಿಗೆ ಮೊದಲನೇ ಸ್ಥಾನ. ಜಾತ್ರೆ ಉತ್ಸವದಲ್ಲಿ ಎಲ್ಲಾ ವಾದ್ಯಗಳಿಗೂ ಮೊದಲು ಕೊಂಬು ಕಹಳೆ ಮೊಳಗಲೇಬೇಕು.

ಬೀಸು ಕಂಸಾಳೆ: ಏಳು ಬೆಟ್ಟದ ಸಾಲುಗಳ ಸುಂದರ ಮಲೆಗಳನ್ನು ತಾಣವನ್ನಾಗಿ ಮಾಡಿಕೊಂಡಿರುವ ಮಹದೇಶ್ವರನ ಪರಮ ಭಕ್ತರು ಗುಡ್ಡರು. ಸ್ವಾಮಿಯ ಆರಾಧನೆಗಾಗಿ ಕಂಚಿನ ಅಥವಾ ಹಿತ್ತಾಳೆಯ ತಾಳ ಹಿಡಿದು ಹಾಡುವುದೇ "ಕಂಸಾಳೆ". ಬೀಸು ತಾಳದೊಂದಿಗೆ ಕುಣಿಯುವುದೇ "ಬೀಸು ಕಂಸಾಳೆ".

ಪಟ ಕುಣಿತ: ಬಣ್ಣ ಬಣ್ಣದ ಬಟ್ಟೆಯ ಸುತ್ತಿ, ಅದರ ಮೇಲೆ ರೇಷ್ಮೆ ಜಾಲರಿ ಕಟ್ಟಿ, ತುತ್ತ ತುದಿಗೆ ಬಣ್ಣದ ಕುಚ್ಚು ಅಲಂಕಾರ ಮಾಡಿದ ಹದಿನೈದು-ಇಪ್ಪತ್ತು ಅಡಿ ಎತ್ತರದ ಬಿದಿರಿನ ಜವಳಿಯ ಕೋಲನ್ನು ಕೈಯಲ್ಲಿ ಹಿಡಿದು ವಾದ್ಯದ ಲಯಕ್ಕೆ ಕುಣಿಯುವ ಒಂದು ಕಲೆ ಪಟದ ಕುಣಿತ.

ಕೀಲು ಕುದುರೆ: ಇದು ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಚಲಿತವಿರುವ ಜನಪ್ರಿಯ ಕುಣಿತ. ಕೊಡಗಿನಲ್ಲಿ ಇದನ್ನು ಪೋಯಾ ಕುದುರೆ ಎನ್ನುತ್ತಾರೆ. ಕೀಲು ಕುದುರೆಗಳನ್ನು ಮುಖ್ಯವಾಗಿ ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ.

ಹೆಜ್ಜೆ ಮೇಳ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂದರ್ಭದ ಒಂದು ವಿಶೇಷ ಕುಣಿತ "ಹೆಜ್ಜೆ ಮೇಳ". ಇದು ದಕ್ಷಿಣ ಕರ್ನಾಟಕದ ಸುಗ್ಗಿಯ ಕುಣಿತವನ್ನು ಹೋಲುತ್ತದೆ. ಇದು ಮುಸ್ಲಿಂ ಹಬ್ಬದ ಕುಣಿತವಾದರೂ ಹಿಂದೂಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.

ಸುಗ್ಗಿ ಕುಣಿತ: ನಾಡಿನ ನಾನಾ ಭಾಗಗಳಲ್ಲಿ ಸುಗ್ಗಿ ಕುಣಿತ ಕಲೆ ಪ್ರಚಲಿತದಲ್ಲಿದೆ. ವರ್ಷವೆಲ್ಲ ಬೆವರು ಸುರಿಸಿ ದುಡಿದ ಫಲ ಕೈಗೆ ಸಿಕ್ಕುವ ಹಿಗ್ಗಿನ ಕಾಲ ಸುಗ್ಗಿನ ಕಾಲ ಸುಗ್ಗಿಯ ಕಾಲ. ಕಾಮನ ಹುಣ್ಣಿಮೆಯ ಸಂದರ್ಭದಲ್ಲಿ ಈ ಕಲೆಯ ಪ್ರದರ್ಶನವಾಗುತ್ತದೆ.

ತಮಟೆ ಮೇಳ: ಹಳ್ಳಿ ಎಂದರೆ ತಮಟೆ ಇರಲೇಬೇಕು. ತಮಟೆಗೆ ತಪ್ಪಟೆ, ಹಲಗೆ ಎಂದೂ ಕರೆಯುತ್ತಾರೆ. ಹಲಗೆ ವಾದ್ಯವು ಬಹಳ ಸರಳ. ವೃತ್ತಾಕಾರದ ಮರದ ಬಳೆಗೆ ಹದಗೊಳಿಸಿ ನಯಗೊಳಿಸಿದ ಚರ್ಮವನ್ನು ಬಿಗಿದು ತಮಟೆ ತಯಾರಿಸಲಾಗುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ವರ್ಷ, ಎಸ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 28, 2019

ತಂದೆ - ತಾಯಿ


ಚಿತ್ರ ಕೃಪೆ: ಪಿನ್ ಕ್ಲಿಪ್ ಆರ್ಟ್

ಹೂವಿನ ಬೆಲೆ ಬಾಡುವ ತನಕ
ಮಂಜಿನ ಬೆಲೆ ಕರಗುವ ತನಕ
ಸ್ನೇಹಿತರ ಬೆಲೆ ಕಣ್ಣಿಗೆ ಕಾಣುವ ತನಕ
ಆದರೆ ತಂದೆ-ತಾಯಿಯ ಬೆಲೆ ಉಸಿರು ಇರುವ ತನಕ

ಮೋಡವಿಲ್ಲದೆ ಮಳೆಯಿಲ್ಲ
ಭೂಮಿಯಿಲ್ಲದೆ ಬೆಳೆಯಿಲ್ಲ
ಸ್ನೇಹಿತರಿಲ್ಲದೆ ಸ್ನೇಹವಿಲ್ಲ
ಆದರೆ ತಂದೆ-ತಾಯಿ ಇಲ್ಲದೆ ನಿಜವಾದ ಪ್ರೀತಿ ಇಲ್ಲ


ಮೋಡದ ಖುಷಿ ಮಳೆಯಲ್ಲಿ
ಭೂಮಿಯ ಖುಷಿ ಬೆಳೆಯಲ್ಲಿ
ಬಡವರ ಖುಷಿ ಕಾಯಕದಲ್ಲಿ
ಶ್ರೀಮಂತರ ಖುಷಿ ಹಣದಲ್ಲಿ
ನವಿಲಿನ ಖುಷಿ ನಾಟ್ಯದಲ್ಲಿ
ಆದರೆ ತಂದೆ-ತಾಯಿಯ ಖುಷಿ ಮಕ್ಕಳಲ್ಲಿ

ವಿದ್ಯಾರ್ಥಿ ಕಿರುಪರಿಚಯ
ಯಮುನ, ಎಂ. ವಿ.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 27, 2019

ಕರ್ನಾಟಕದ ಐತಿಹಾಸಿಕ ಸ್ಥಳಗಳು

ಭಾರತ ದೇಶದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನ ಎಲ್ಲ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರಲ್ಲಿ ಮೈಸೂರು, ಬಾದಾಮಿ, ಹಂಪಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮುಂತಾದವು ಪ್ರಮುಖವಾದುವು. ಇವುಗಳಲ್ಲಿ ಅನೇಕ ಸ್ಥಳಗಳು, ಕೆತ್ತಲ್ಪಟ್ಟಿರುವ ಶಿಲ್ಪಕಲೆಗಳಿಗೆ ಪ್ರಖ್ಯಾತಿಯಾಗಿದ್ದು, ಕಳೆದುಹೋದ ಕಾಲದ ಬಗ್ಗೆ ಸಾವಿರಾರು ಕಥೆಗಳನ್ನು ಹೇಳುತ್ತವೆ.

ಚಿತ್ರ ಕೃಪೆ: ಕರ್ನಾಟಕ.ಕಾಂ


ಜೋಗ ಜಲಪಾತ: ಜೋಗ ಅಥವಾ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಅತೀ ಎತ್ತರದ ಜಲಪಾತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ದಟ್ಟವಾದ ಕಾಡು ಹಾಗೂ ಗುಡ್ಡಗಳಿಂದ ಆವೃತವಾದ ಜೋಗ ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸೀ ತಾಣ. ಇಲ್ಲಿ ಸುಮಾರು 292 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಶರಾವತಿ ನದಿ ಅದ್ಭುತವಾದ ಜಲಪಾತವನ್ನು ಸೃಷ್ಟಿಸಿದೆ.

ಹಂಪಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ಇರುವ ಊರು. 1336 ರಿಂದ 1565 ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು "ಪಂಪಾ" ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು "ವಿಜಯನಗರ" ಮತ್ತು "ವಿರೂಪಾಕ್ಷಪುರ" ಎಂದು ಕರೆಯಲ್ಪಟ್ಟಿತು.

ಮೈಸೂರು: ಮೈಸೂರು ಜಿಲ್ಲೆಯು ಹಲವು ಪ್ರವಾಸೀ ತಾಣಗಳನ್ನು ಹೊಂದಿದೆ. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಶ್ರೀ ಚಾಮರಾಜೇಂದ್ರ ಮೃಗಾಲಯ, ರೈಲ್ವೆ ಮ್ಯೂಸಿಯಂ, ಲಲಿತ ಮಹಲ್, ಸೇರಿದಂತೆ ಮುಂತಾದ ಸ್ಥಳಗಳನ್ನು ಹೊಂದಿದೆ.

ಗೋಲ ಗುಂಬಜ್: ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದು ಜಗತ್ತಿನ ಒಂದು ಅದ್ಭುತವಾಗಿದೆ. ಮಂಡ್ಯದಲ್ಲಿರುವ ಗಗನ ಚುಕ್ಕಿ ಮತ್ತು ಭರ ಚುಕ್ಕಿ ಎರಡು ಅದ್ಭುತ ತಾಣಗಳಾಗಿವೆ.

ವಿದ್ಯಾರ್ಥಿ ಕಿರುಪರಿಚಯ
ಸಂಜನ್, ಬಿ. ಎನ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 26, 2019

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಚಿತ್ರ ಕೃಪೆ: ವಿಕಿ ಮೀಡಿಯ

1. ರಾಷ್ಟ್ರಕವಿ ಕುವೆಂಪು: ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೋಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಕಳೆಯಿತು. ಇವರ "ಶ್ರೀ ರಾಮಾಯಣ ದರ್ಶನಂ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿತು. 

2. ದ. ರಾ. ಬೇಂದ್ರೆ: ಬೇಂದ್ರೆ ಅವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಅವರು 1896ನೇ ಜನವರಿ 31ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ ಅಂಬವ್ವ. ಬೇಂದ್ರೆಯವರ ಕಾವ್ಯನಾಮ "ಅಂಬಿಕಾತನಯದತ್ತ". ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ಇವರಿಗೆ 1973ರಲ್ಲಿ "ನಾಕು ತಂತಿ" ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

3. ಶಿವರಾಮ ಕಾರಂತ: ಕಾರಂತರವರ ಪೂರ್ಣ ಹೆಸರು ಕೋಟ ಶಿವರಾಮ ಕಾರಂತ. ಅವರು 1902ರ ಅಕ್ಟೋಬರ್ 10ರಂದು ಜನಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟದಲ್ಲಿ ಜನಿಸಿದರು. ತಂದೆ ಶೇಷ ಕಾರಂತ, ತಾಯಿ ಲಕ್ಷ್ಮಮ್ಮ. ಕಾರಂತರಿಗೆ 1977ರಲ್ಲಿ "ಮೂಕಜ್ಜಿಯ ಕನಸುಗಳು" ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

4. ಮಾಸ್ತಿ ವೆಂಕಟೇಶ ಅಯ್ಯಂಗಾರ್: ಇವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ 6 1891ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. "ಶ್ರೀನಿವಾಸ" ಮಾಸ್ತಿಯವರ ಕಾವ್ಯನಾಮ. ಮಾಸ್ತಿ ಅವರ "ಚಿಕವೀರ ರಾಜೇಂದ್ರ" ಎಂಬ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

5. ವಿ. ಕೃ. ಗೋಕಾಕ್: ಇವರ ಪೂರ್ಣ ಹೆಸರು ವಿನಾಯಕ ಕೃಷ್ಣ ಗೋಕಾಕ್. 1909ರ ಆಗಸ್ಟ್ 9ರಂದು ಅವಿಭಜಿತ ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ತಂದೆ ಕೃಷ್ಣ ಗೋಕಾಕ್ ವಕೀಲರಾಗಿದ್ದರು, ತಾಯಿ ಸುಂದರಮ್ಮ. 1990 ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

6. ಯು. ಆರ್. ಅನಂತಮೂರ್ತಿ: ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಲ್ಲೂಕಿನ ಮಳಿಗೆ ಹಳ್ಳಿಯಲ್ಲಿ, 1932ರ ಡಿಸೆಂಬರ್ 21ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ. ಇಂಗ್ಲೀಷ್ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಪ್ರಾಂರಂಭಿಸಿದ ಇವರಿಗೆ 1994 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

7. ಗಿರೀಶ್ ಕಾರ್ನಾಡ್: ಇವರು 1938 ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ರಘುನಾಥ ಕಾರ್ನಾಡ ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ. ಇವರಿಗೆ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

8. ಚಂದ್ರಶೇಖರ ಕಂಬಾರ: ಇವರು ಜನವರಿ 2 1937ರಲ್ಲಿ ಬೆಳಗಾವಿ ಜಿಲ್ಲೆಯ ಘೋಡಿಗೇರಿ ಗ್ರಾಮದಲ್ಲಿ ಜನಿಸಿದರು. ತಂದೆ ಬಸವಣ್ಣೆಪ್ಪ ಕಂಬಾರ ಮತ್ತು ತಾಯಿ ಚೆನ್ನಮ್ಮ. ಇವರಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ವಿದ್ಯಾರ್ಥಿ ಕಿರುಪರಿಚಯ
ಸ್ನೇಹ, ಆರ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 25, 2019

ಡೊಳ್ಳು ಕುಣಿತ

ಕೃಪೆ: YouTube

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈಕಟ್ಟು ಮತ್ತು ಶಕ್ತಿಯುಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ, ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಪ್ರಸಿದ್ಧವಾಗಿದೆ.

ಡೊಳ್ಳು ಕುಣಿತ ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂದು ಹೆಸರು.

ಇತಿಹಾಸ: ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕøತಿ ಹಾಗೂ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳು ವಾದ್ಯದ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಢಿಯಲ್ಲಿದ್ದು, ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುವಂತೆ ಮಾಡುತ್ತವೆ. ಅವುಗಳಲ್ಲಿ ಒಂದು ಕತೆಯ ಪ್ರಕಾರ, ಡೊಳ್ಳಾಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ, ಅವನು ತನ್ನ ಹೊಟ್ಟೆಯಲ್ಲಿಯೇ ನೆಲೆಸಬೇಕೆಂದು ವರ ಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖತಪ್ತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕವು. ವಿಷ್ಣು ಡೊಳ್ಳಾಸುರನ ಹೊಟ್ಟೆಯನ್ನೇ ವಾದ್ಯವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಭಿಸಿದ. ಶಿವನು ಆ ವಾದ್ಯದ ದನಿಗೆ ರಕ್ಕಸನ ಹೊಟ್ಟೆಯಿಂದ ಹೊರಬಂದ.

ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಡೊಳ್ಳು ಕುಣಿತವನ್ನು ಒಂದು ಮುಖ್ಯ ಕಲೆಯಾಗಿ ಗುರುತಿಸಲಾಗುತ್ತದೆ..

ವಿದ್ಯಾರ್ಥಿ ಕಿರುಪರಿಚಯ
ನೇಹಾ, ಎಸ್. ಎ.

8ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 24, 2019

ನೀನಾಗು..

ಚಿತ್ರ ಕೃಪೆ: ವಿಕಿ-ಹೌ

ನೀ..
ಬೀಸೋ ಗಾಳಿಯಾಗು
ಹರಿವ ನೀರಿನಂತಾಗು
ಜಗದಿ ಪಾದರಸದಂತಾಗು
ಅಂತೆ ಕಂತೆಯ ಬಲೆಗೆ ಸಿಗದಿರು
ಸಿಕ್ಕರೂ ಸಿಗದಂತೆ ನಟಿಸುತ್ತಿರು
ಎಲ್ಲರೊಳಗೊಂದಾಗಿ ತನ್ನನ್ನು ಗುರುತಿಸಿಕೊ
ನಿನ್ನ ವೈಶಿಷ್ಟ್ಯತೆ ತೋರಿಸು
ಕಲ್ಪನೆಯ ಕಣ್ಣಾಗು
ನಿಷ್ಕಲ್ಮಶವಾಗು
ತಾನಿದ್ದಲ್ಲಿ ಜಯಿಸುವೆ
ಎಂಬ ಧೈರ್ಯವುಳ್ಳವಳಾಗು..

ವಿದ್ಯಾರ್ಥಿ ಕಿರುಪರಿಚಯ
ಅನನ್ಯ, ಆರ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 23, 2019

ಹೆಸರಘಟ್ಟ ಕೆರೆ ಇತಿಹಾಸ

ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್

ಹೆಸರಘಟ್ಟ ಕೆರೆ ಬೆಂಗಳೂರಿನ ಉತ್ತರ ದಿಕ್ಕಿನಲ್ಲಿ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೇಲ್ವೇ ನಿಲ್ದಾಣದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಹಿಂದೆ ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು. ಕ್ರಿ.ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು ಎನ್ನಲಾಗುತ್ತದೆ. ಅರ್ಕಾವತಿ ನದಿಯ ನೀರೇ ಹೆಸರಘಟ್ಟ ಕೆರೆಯ ನೀರಿನ ಮೂಲ.

19ನೇ ಶತಮಾನದ ಅಂತ್ಯಕ್ಕೆ ಬೆಂಗಳೂರು ನಗರ ವೇಗವಾಗಿ ಬೆಳೆಯಲಾರಂಭಿಸಿತು. ಆಗ ನಗರಕ್ಕೆ ನೀರುಣಿಸುತ್ತಿದ್ದುದು ಧರ್ಮಾಂಬುಧಿ, ಸಂಪಂಗಿ, ಅಲಸೂರು ಮತ್ತು ಸ್ಯಾಂಕಿ ಕೆರೆಗಳು. ಆದರೆ, ವೇಗವಾಗಿ ಬೆಳೆಯುತ್ತಿದ್ದ ಬೆಂಗಳೂರಿಗೆ ಈ ಕೆರೆಗಳ ನೀರೂ ಸಾಕಾಗಲಿಲ್ಲ. ಹೀಗಾಗಿ ಆಗಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ 1894ರಲ್ಲಿ ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿದರು. ಆಗಿನ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಎಂ. ಸಿ. ಹಚಿನ್ಸನ್ ತಾಂತ್ರಿಕ ನೆರವು ನೀಡಿದರು.

ಬೆಂಗಳೂರಿನ ಆಗಿನ ಜನಸಂಖ್ಯೆ ಕೇವಲ ಎರಡು ಲಕ್ಷ ಐವತ್ತು ಸಾವಿರ. ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರಿನಂತೆ ಸತತ 37 ವರ್ಷ ಕಾಲ ನೀರು ಸರಬರಾಜು ಮಾಡಿದ ಹಿರಿಮೆ ಹೆಸರಘಟ್ಟ ಕೆರೆಯದ್ದು. ಹೆಸರಘಟ್ಟ ಕೆರೆಗೆ ನೀರು ಹರಿದು ಬರುತ್ತಿದ್ದ ಜಲಾನಯನ ಪ್ರದೇಶದಲ್ಲಿ ಒತ್ತುವರಿ, ಕೃಷಿ ಹಾಗೂ ಕೈಗಾರಿಕೆ ಚಟುವಟಿಕೆಗಳಿಂದ ಮಳೆ ನೀರು ಹರಿದು ಬರುವ ಮಾರ್ಗ ಕುಗ್ಗುತ್ತಾ ಬಂದು ಈಗ ಕೆರೆಯಲ್ಲಿ ನೀರು ಕಡಿಮೆಯಾಗಿದೆ.

ವಿದ್ಯಾರ್ಥಿ ಕಿರುಪರಿಚಯ
ಸೂರ್ಯ, ಎಚ್. ಎನ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 22, 2019

ಯಕ್ಷಗಾನ

ಚಿತ್ರ ಕೃಪೆ: ದಿ ಹಿಂದೂ

ಯಕ್ಷಗಾನ - ನೃತ್ಯ, ಹಾಡಗಾರಿಕೆ, ಮಾತುಗಾರಿಕೆ ಮತ್ತು ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. 

ಉಗಮ: ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ" ದಲ್ಲಿ (ಕ್ರಿ.ಶ. 1210) "ಜಕ್ಕ" ಎಂದು ಆಗಿದ್ದು, ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿಹೋಗಿರುವ ಗಾನ ಪದ್ಧತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪುಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. 1500 ರಷ್ಟರಲ್ಲಿ ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.

ಪ್ರಭೇದಗಳು: ಯಕ್ಷಗಾನದ ಇನ್ನೊಂದು ಪ್ರಮುಖ ಭಾಗವೆಂದರೆ "ತಾಳ ಮದ್ದಳೆ". ಬಯಲಾಟಗಳಿಗಿಂತ ಇದು ವಿಭಿನ್ನವಾದುದು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡುಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ. ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಸಾಮಾನ್ಯವಾಗಿ ಇದನ್ನು "ಆಟ" ಎಂದೂ ಕರೆಯುತ್ತಾರೆ.

ಯಕ್ಷಗಾನದ ಪ್ರಮುಖ ಅಂಶಗಳು ಹೀಗಿವೆ:
ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ.

ಪಾತ್ರಧಾರಿಗಳು: ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು.
ವೇಷಭೂಷಣ: ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳು ಇರುತ್ತವೆ. ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷಭೂಷಣಗಳಿಗಿಂತ ಭಿನ್ನವಾಗಿರುತ್ತದೆ.

ಭಾಗವತಿಕೆ: ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ.

ಮಾತುಗಾರಿಕೆ: ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತಪಡಿಸುತ್ತಾರೆಯೋ ಅದೇ ಭಾಗದ ಅರ್ಥವನ್ನು ಜನಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.

ವಿದ್ಯಾರ್ಥಿ ಕಿರುಪರಿಚಯ
ಅನ್ನಪೂರ್ಣ, ಎ.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 21, 2019

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ

ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ

ಕೈಯ ತುಂಬ ಕೆಲಸ ಬೇಕು
ಬೇಕು ಹೊಟ್ಟೆಗನ್ನ
ಅಕ್ಷರಗಳ ಕನ್ನ ಕೊರೆದು
ಬರಲಿ ಅರಿವು-ಚಿನ್ನ

ಮೈಯ ತುಂಬ ಬಟ್ಟೆ ಬೇಕು
ನೆತ್ತಿಗೊಂದು ಆಸರ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ

ತಲೆಯ ತುಂಬ ಬೆಂಕಿ ತುಂಬಿ
ಮಿಂಚಬೇಕು ಕಂಗಳು
ಎದೆಯ ತುಂಬಿ ತುಳುಕಬೇಕು
ಪ್ರೀತಿಯ ಬೆಳದಿಂಗಳು

ಇಂಥ ನಾಡು ಕಟ್ಟಬೇಕು
ಬರ್ರಿ ನಮ್ಮ ಸಂಗಡ
ಎಲ್ಲೆಲ್ಲೂ ಮೊಳಗಬೇಕು
ಕನ್ನಡ ಕನ್ನಡ ಕನ್ನಡ

ರಚನೆ: ಚಂದ್ರಶೇಖರ ಪಾಟೀಲ

ವಿದ್ಯಾರ್ಥಿ ಕಿರುಪರಿಚಯ
ಬಿಂದು, ಟಿ. ಎಂ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 20, 2019

ಭಾರತದ ಐತಿಹಾಸಿಕ ಸ್ಮಾರಕಗಳು

ಚಿತ್ರ ಕೃಪೆ: ಗೂಗಲ್
ತಾಜ್ ಮಹಲ್: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲನ್ನು ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಪಾತ್ರಳಾದ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿಸಿದನು. ಭಾರತೀಯ, ಪರ್ಷಿಯಾ ಮತ್ತು ಇಸ್ಲಾಂ ವಾಸ್ತುಶೈಲಿಯ ಅನನ್ಯ ಸಂಯೋಜನೆಯಾಗಿರುವ ಮೊಘಲ್ ವಾಸ್ತುಶಿಲ್ಪ ಶೈಲಿಯ ಅತ್ಯುತ್ತಮ ಉದಾಹರಣೆ ಇದು. ಕ್ರಿ.ಶ. 1632 ರಲ್ಲಿ ತಾಜ್ ಮಹಲ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 1653 ರಲ್ಲಿ ಪೂರ್ಣಗೊಂಡಿತು. ತಾಜ್ ಮಹಲ್ 1983ರಲ್ಲಿ ವಿಶ್ವ ಪರಂಪರೆ ಸ್ಥಳವಾಗಿ ಮಾನ್ಯತೆ ಪಡೆಯಿತು. ಪ್ರಪಂಚದ ಏಳು ವಿಸ್ಮಯಗಳಲ್ಲಿ ತಾಜ್ ಮಹಲ್ ಕೂಡ ಒಂದು.



ಚಿತ್ರ ಕೃಪೆ: ಗೂಗಲ್
ಚಾರ್ ಮಿನಾರ್: ಸುಪ್ರಸಿದ್ಧ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಇರುವುದು ಆಂಧ್ರಪ್ರದೇಶದ ಹೈದರಾಬಾದಿನಲ್ಲಿ. ಅಲ್ಲಿ ಕಾಣಿಸಿಕೊಂಡಿದ್ದ ಭೀಕರ ಪ್ಲೇಗ್ ಕಾಯಿಲೆಯು ಕೊನೆಗೊಂಡ ನೆನಪಿಗಾಗಿ 1591 ರಲ್ಲಿ ಮೊಹಮ್ಮದ್ ಖುಲಿ ಕುತುಬ್ ಶಾಯ್ ಮಹಾರಾಜನು ಈ ಸ್ಮಾರಕವನ್ನು ನಿರ್ಮಿಸಿದನು. ಚಾರ್ ಮಿನಾರ್ ಸ್ಮಾರಕವು ಪ್ರಮುಖವಾಗಿ ನಾಲ್ಕು ಮಿನಾರ್‍ಗಳನ್ನು ಒಳಗೊಂಡಿದೆ. ಹೈದರಾಬಾದ್ ನಗರವನ್ನು ಸಾಂಸ್ಕøತಿಕವಾಗಿ ಶ್ರೀಮಂತಗೊಳಿಸುವಲ್ಲಿ ಚಾರ್ ಮಿನಾರ್ ಪಾತ್ರ ಮಹತ್ತರದ್ದಾಗಿದೆ.



ಚಿತ್ರ ಕೃಪೆ: ಗೂಗಲ್
ಕುತುಬ್ ಮಿನಾರ್: ಕುತುಬ್ ಮಿನಾರ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿದೆ. ಈ ಐತಿಹಾಸಿಕ ಸ್ಮಾರಕವನ್ನು ಕ್ರಿ. ಶ. 1199 ರಲ್ಲಿ ಕುತುಬ್ ಉದ್ದೀನ್ ಐಬಕ್ ಪ್ರಾರಂಭಿಸಿದನು. ಈತನ ಉತ್ತರಾಧಿಕಾರಿ ಹಾಗೂ ಅಳಿಯನಾದ ಇಲ್ತುಮಶ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದನು. ಕೆಂಪು ಕಲ್ಲಿನಿಂದ ನಿರ್ಮಿತವಾಗಿರುವ ಈ ಕಟ್ಟಡವು ಐದು ಅಂತಸ್ತಿನದ್ದಾಗಿದೆ ಹಾಗೂ 379 ಮೆಟ್ಟಿಲುಗಳನ್ನು ಹೊಂದಿದೆ. ಕುತುಬ್ ಮಿನಾರ್ ಹೊರಮೈ ಅನೇಕ ಅರಬ್ಬಿ ಹಾಗೂ ನಾಗರಿ ಲಿಪಿಯ ಕೆತ್ತನೆಗಳನ್ನೊಳಗೊಂಡಿದೆ.

ವಿದ್ಯಾರ್ಥಿ ಕಿರುಪರಿಚಯ
ಗಜೆಂದ್ರ, ಡಿ. ಎಂ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 19, 2019

ಕನ್ನಡ ನಾಡಿನ ಏಕೀಕರಣ

ಆಲೂರು ವೆಂಕಟರಾಯರು
(ಚಿತ್ರ ಕೃಪೆ: ಸಿಟಿ ಐಡಲ್)

ಕನ್ನಡ ನಾಡು ಕನ್ನಡಿಗರ ನಾಡು. ಅದು ಹರಿದು ಹಂಚಿ ಹೋಗಿ ಬೇರೆ ಬೇರೆಯಾಗಿದ್ದ ಕಾಲವೊಂದಿತ್ತು. ಕನ್ನಡಿಗರು ಚಳುವಳಿಯ ಮೂಲಕ ನ್ಯಾಯ ಪಡೆಯಲು ಹೋರಾಟ ನಡೆಸಿದರು. ಅಂದಿನ ಕರ್ನಾಟಕ ಏಕೀಕರಣ ಚಳುವಳಿಯನ್ನು ಇಂದೂ ನಾವು ಸ್ಮರಿಸಿಕೊಳ್ಳಬೇಕು.

ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ನಾಡು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿವೆ. ಹಲವು ಸಾಮ್ರಾಜ್ಯಗಳ ಆಳ್ವಿಕೆಯ ನಂತರ ಕನ್ನಡ ನಾಡಿನ ಅಸ್ತಿತ್ವ ಮೈಸೂರು ಸಂಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಸಮಗ್ರ ಕನ್ನಡಕ್ಕಾಗಿ ಕೆಲವು ಮಹನೀಯರು ಹೋರಾಟ ನಡೆಸಿದರು. ಇಂಥವರಲ್ಲಿ ರಾ.ಹ. ದೇಶಪಾಂಡೆ, ಶ್ರೀನಿವಾಸ್ ರಾವ್, ಆಲೂರು ವೆಂಕಟರಾಯ, ಡೆಪ್ಯೊಟಿ ಚೆನ್ನಬಸಪ್ಪ ಮೊದಲಾದವರು ಅಗ್ರಗಣ್ಯರು.

ದಕ್ಷಿಣ ಭಾಗದಲ್ಲಿ ಅಂದಿನ ಮೈಸೂರು ಸಂಸ್ಥಾನದ ಕೆಲವು ಹಿರಿಯರು, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರು ಕನ್ನಡದ ಬಗ್ಗೆ ಚಿಂತಿಸಿದರು. 1915 ರಲ್ಲಿ "ಕರ್ನಾಟಕ ಸಾಹಿತ್ಯ ಪರಿಷತ್ತು" ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಕನ್ನಡ ಗ್ರಂಥಗಳ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಮುಂತಾದ ಸವಾಲುಗಳನ್ನು ಗಟ್ಟಿತನದಿಂದ ಎದುರಿಸಿ ಕನ್ನಡಕ್ಕೊಂದು ನೆಲೆ ಕಲ್ಪಿಸುವಲ್ಲಿ ಸಾಹಿತ್ಯ ಪರಿಷತ್ತಿನ ಸಾಧನೆ ಅಗಾಧವಾದುದು.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅನಂತರ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳ ರಚನೆಗೆ ನಿರ್ಧರಿಸಿದ್ದರಿಂದ, ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956 ರ ನವಂಬರ್ 1 ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದರು. ಆಗ ಅದನ್ನು "ಮೈಸೂರು ರಾಜ್ಯ" ಎಂದು ಕರೆಯಲಾಯಿತು. ಮುಂದೆ 1973 ರ ನವಂಬರ್ 1 ರಂದು ಮೈಸೂರು ರಾಜ್ಯವು "ಕರ್ನಾಟಕ" ಎಂಬ ಹೆಸರು ಪಡೆಯಿತು.

ವಿದ್ಯಾರ್ಥಿ ಕಿರುಪರಿಚಯ
ನವ್ಯ, ಎನ್.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 18, 2019

ವೀರಗಾಸೆ

ಕೃಪೆ: YouTube

ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜಾನಪದ ಕಲೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚವಾದ್ಯಗಳಾದ ತಾಳ, ಶ್ರುತಿ, ಚಮಾಳ, ಓಲಗ, ಕರಡೆ ಬಳಕೆಯಾಗುತ್ತವೆ. ಕಂಡೆಯು ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ವೀರಗಾಸೆ ಕುಣಿತದವರ ವೇಷ-ಭೂಷಣ ವಿಶೇಷವಾಗಿರುತ್ತದೆ. ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕರ್ಣಕುಂಡಲ, ಸೊಂಟಪಟ್ಟಿ, ಬಿಚ್ಚುಗತ್ತಿ, ಕಾಲ್ಗೆಜ್ಜೆ ಧರಿಸುತ್ತಾರೆ.

ಚಮಾಳ ಹಾಗೂ ಕರಡೆಯ ಬಡಿತ ಇವರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಆನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ, ಕುಣಿತ ಮತ್ತು ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.

ವೀರಭದ್ರನ ಕುಣಿತ ಒಬ್ಬ ವ್ಯಕ್ತಿಯ ಕುಣಿತ. ವೀರಗಾಸೆ ಸಾಮೂಹಿಕ ನೃತ್ಯ. ವೀರಭದ್ರ ಕುಣಿತಕ್ಕೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಲಿಂಗಬೀರ, ಲಿಂಗಧೀರ, ಲಿಂಗವೀರ ಕುಣಿತವೆಂದು ಹೆಸರಿದೆ. ಉತ್ತರ ಕರ್ನಾಟಕದಲ್ಲಿ ಪುರವಂತರ ಕುಣಿತವೆಂದು ಜನಪ್ರಿಯವಾಗಿದೆ. ಕೆಲ ವೀರಶೈವ ಸಂಪ್ರದಾಯದ ಕುಟುಂಬದವರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ವೀರಭದ್ರನ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಇದಕ್ಕೆ "ಖಡ್ಗ" ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ "ಒಡಪು" ಎನ್ನುವರು. ಮೊತ್ತೊಬ್ಬ ವ್ಯಕ್ತಿ "ಭಲರೇ ವೀರ.. ಆಹಾ ವೀರ.." ಎಂದು ಕಾಕು ಹೇಳುತ್ತಾ ಜಾಗಟೆ ಬಡೆಯುತ್ತಾ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ, ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ವೀರಭದ್ರನ ಕುಣಿತ ಏರ್ಪಡಿಸುತ್ತಾರೆ. ವೀರಗಾಸೆಯು ದೊಡ್ಡ ಕಾರ್ಯಕ್ರಮಗಳಲ್ಲಿ ಮನರಂಜನೆಗಾಗಿಯೂ ಪ್ರದರ್ಶನವಾಗುತ್ತದೆ. ಈ ಕುಣಿತವು ನೋಡುವವರಿಗೆ ರೋಮಾಂಚನವನ್ನು ಉಂಟುಮಾಡುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಅಂಬಿಕ, ಬಿ. ಎಸ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 17, 2019

ಶಾಯಿರಿಗಳು

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಎಲ್ಲರೂ ಪ್ರಯತ್ನಪಡುತ್ತಿರುತ್ತಾರೆ. ಎಲ್ಲರೂ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರಿಗೆ ಅನುಕೂಲವಾಗುವಂತಹ ಮತ್ತು ಅವರಿಗೆ ಸಾಧಿಸಲು ಸಾಧ್ಯವಾಗುವಂತಹ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಅದೇ ರೀತಿ ನಾನೂ ಸಹ, ಹಲವಾರು ಸಾಹಿತಿಗಳು, ಕವಿಗಳು, ಗೀತ ರಚನಾಕಾರರ ಸ್ಪೂರ್ತಿಯಿಂದ ಕೆಲವು ಶಾಯಿರಿಗಳನ್ನು ಬರೆದಿರುವೆ.

* * *

ಹಕ್ಕಿಗಳ ಇಂಪಾದ ಚಿಲಿಪಿಲಿ ಗಾನ
ಇದನ್ನು ಕೇಳಿ ದೂರವಾಯಿತು ನನ್ನಲ್ಲಿದ್ದ ಮೌನ
ಹಕ್ಕಿಯಂತೆ ಹಾಡಲು ಬಂದಿತು ನನಗೆ ಜ್ಞಾನ
ಇದೇ ನನಗೆ ಸಿಕ್ಕ ದೊಡ್ಡ ಬಹುಮಾನ

* * *

ನಾ ವಾಸಮಾಡಲು ಬೇಕಾಗಿತ್ತು ಒಂದು ನಿವಾಸ
ನಿವಾಸ ಪಡೆಯಲು ಆಯಿತು ಬಹಳ ಪ್ರಯಾಸ
ಪಡೆದ ಮೇಲೆ ನಿವಾರಿಸಿಕೊಂಡೆ ನನ್ನಲ್ಲಿದ್ದ ಎಲ್ಲಾ ಆಯಾಸ

* * *

ಕೆಲವೊಮ್ಮೆ ಬರುವುದು ನಮಗೆಲ್ಲಾ ಆಪತ್ತು
ಜಾಸ್ತಿ ಇದ್ದರೆ ನಮ್ಮಲ್ಲಿ ಸಂಪತ್ತು
ಇದೆಲ್ಲಾ ನಮಗೆ ಗೊತ್ತು
ಆದರೂ ನಾವು ಬಿಡುವುದಿಲ್ಲ ಹಣ ಇದೆಯಲ್ಲ ಎನ್ನುವ ಗತ್ತು

* * *

ನಾನು ವಾಸ ಮಾಡುತ್ತಿದ್ದ ಮಹಡಿ ಮನೆಗೆ
ಕಟ್ಟಲಾಗಲಿಲ್ಲ ನನ್ನಿಂದ ಅದರ ಬಾಡಿಗೆ
ಅದಕ್ಕಾಗಿ ಈಗ ನಾ ಬಂದೆ ಬೀದಿಗೆ

* * *

ನಾ ನೋಡಿದ ಸ್ವಲ ಜನ
ಅವರಿಗಿಲ್ಲ ಒಂದಿಷ್ಟು ಮಾನ
ಸಾಯಂಕಾಲ ಆಯಿತೆಂದರೆ ಮಾಡುತ್ತಾರೆ ಪಾನ
ಮನಸ್ಸಿಗೆ ಬಂದಂತೆ ಹಾಡುತ್ತಾರೆ ಗಾನ

* * *

ಸ್ವಲ್ಪವೇ ತುಂಟತನ
ಸ್ವಲ್ಪ ಸಿರಿತನ
ಸ್ವಲ್ಪವೇ ಭಾವುಕತನ
ಸ್ವಲ್ಪ ಪುಕ್ಕಲುತನ
ಸ್ವಲ್ಪವೇ ಬರೆಯುತ್ತೇನೆ ಕವನ
ಇದು ನನ್ನ ನಿತ್ಯ ಜೀವನ


ವಿದ್ಯಾರ್ಥಿ ಕಿರುಪರಿಚಯ
ಲಿಖಿತ, ಎಲ್.

8ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 16, 2019

ನಮ್ಮ ಹೆಸರಘಟ್ಟ

ಚಿತ್ರ ಕೃಪೆ: ಹಲೋ ಟ್ರಾವೆಲ್

ಹಳ್ಳಿ ಎಂದರೆ ಸುಂದರ ವಾತಾವರಣ ಇರುವಂತಹ ಪ್ರದೇಶ. ಹೆಸರಘಟ್ಟದ ಮೊದಲ ಹೆಸರು ವ್ಯಾಸರಘಟ್ಟವಾಗಿತ್ತು. ಏಕೆಂದರೆ, ಒಂದು ಕಾಲದಲ್ಲಿ ವ್ಯಾಸ ಮಹರ್ಷಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಆದ್ದರಿಂದ ವ್ಯಾಸರಘಟ್ಟ ಎಂಬ ಹೆಸರು ಬಂದಿತು.

ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲು ಹಿಂದೆ ಹೆಸರಘಟ್ಟ ಕೆರೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಅಲ್ಲಿ ಇಟ್ಟಿಗೆಗಳಿಂದ ನಿರ್ಮಿಸಿರುವ ಕಾಲುವೆ ಮೂಲಕ ಕೆರೆಯ ನೀರನ್ನು ತರಬನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿ ನೀರನ್ನು ಶುದ್ಧೀಕರಿಸಿ ಸೋಲದೇವನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿಂದ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಕ್ರಿ. ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು ಎನ್ನಲಾಗುತ್ತದೆ.

ಅರ್ಕಾವತಿ ನದಿಯ ನೀರೇ ಹೆಸರಘಟ್ಟ ಕೆರೆಗೆ ಜಲಮೂಲ. ನೂರಾರು ವರ್ಷಗಳ ಕಾಲ ಈ ಕೆರೆಯ ನೀರೇ ಸುತ್ತಮುತ್ತಲಿನ ಜಮೀನುಗಳಲ್ಲಿ ನೀರಾವರಿಗೂ ಮೂಲ. ಆಗಿನ ದಿವಾನ್ ಕೆ. ಶೇಷಾದ್ರಿ ಅಯ್ಯರ್ 1894 ರಲ್ಲಿ ಹೆಸರಘಟ್ಟ ಕೆರೆಯಿಂದ ನೀರುಣಿಸುವ ಯೋಜನೆ ರೂಪಿಸಿದರು. ಕೇವಲ ಎರಡೇ ವರ್ಷದಲ್ಲಿ, ಅಂದರೆ 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಹೆಸರಘಟ್ಟ ಯೋಜನೆ ಸಿದ್ಧವಾಯಿತು. ಹತ್ತಿರದ ಊರುಗಳಾದ ಬ್ಯಾತ, ಹನಿಯೂರು, ಕಾಕೋಳು, ಮಧುರೆ, ದೊಡ್ಡಬೆಳವಂಗಲ ಕೆರೆಗಳು ತುಂಬಿದ ಮೇಲೆ ಹೆಚ್ಚುವರಿ ನೀರು ಹೆಸರಘಟ್ಟ ಕೆರೆಗೆ ಹರಿದು ಬರುತ್ತದೆ.

ಹೆಸರಘಟ್ಟ ಕೆರೆಯ ಹತ್ತಿರದಲ್ಲಿ ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ಜನಪ್ರಿಯ ನೃತ್ಯಗ್ರಾಮ, ಸರ್ಕಾರಿ ಅಕ್ವೇರಿಯಂ, ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ತೋಟಗಾರಿಕೆ ಸಂಸ್ಥೆ, ಪೌಲ್ಟ್ರಿ ಫಾರಂ ಮತ್ತು ಡೈರಿ ಫಾರಂಗಳು ಇಲ್ಲಿವೆ. ಇತ್ತೀಚಿನ ದಿನಗಳಲ್ಲಿ ಕೆರೆಯ ಸುತ್ತಲಿನ ಏರಿಯನ್ನು ವಾಯುವಿಹಾರಕ್ಕೆ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿ ವಾಸಮಾಡುವ ಜನರಿಗೆ ಇದೊಂದು ಪಿಕ್‍ನಿಕ್ ತಾಣವೂ ಆಗಿದೆ. ಮಕ್ಕಳಿಗಂತೂ ಈ ಸ್ಥಳ ತುಂಬ ಇಷ್ಟವಾಗುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಕೀರ್ತನ, ಕೆ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 15, 2019

ಒಗಟುಗಳು

ಒಗಟುಗಳು ಎಂದರೆ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಇಷ್ಟವೇ. ಒಗಟುಗಳು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗರ ಬಾಯಲ್ಲಿ ಹೆಚ್ಚಾಗಿ ಕೇಳಿಬರುತ್ತವೆ. ಕೆಲವು ಹಳ್ಳಿಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಒಗಟುಗಳ ಸ್ಪರ್ಧೆಯೂ ನಡೆಯುವುದುಂಟು. ಅನುಭವೀ ವೃದ್ಧರ ಮಾತುಗಳಲ್ಲಿ ಕಷ್ಟ ಸುಖಗಳಲ್ಲಿ, ಸಿರಿತನ ಬಡತನದಲ್ಲಿ, ನ್ಯಾಯ ಪಂಚಾಯ್ತಿಗಳಲ್ಲಿ ಒಗಟುಗಳು ಕೇಳಿಬರುತ್ತವೆ. ಒಗಟುಗಳಿಗೆ ತಮ್ಮದೇ ಆದ ಸಾಹಿತ್ಯ ಸೌಂದರ್ಯ ಮತ್ತು ಧಾಟಿ ಇದೆ.

ನಾಲ್ಕಾರು ಮಂದಿ ಒಂದೆಡೆ ಸೇರಿದಾಗ ಒಗಟುಗಳನ್ನು ಬಲ್ಲವರು, ಇಲ್ಲವೇ ಯಾರಿಂದಲೋ ಕೇಳಿದ್ದನ್ನು ಗೆಳೆಯರ ಗುಂಪಿನಲ್ಲಿ ಕೇಳಿ ಅದಕ್ಕೆ ಉತ್ತರವನ್ನು ಬಯಸುತ್ತಾರೆ. ಇದೊಂದು ಸೊಗಸಾದ ಮನರಂಜನೆ. ಹೊಸದಾಗಿ ಕೇಳಿಬಂದ ಒಗಟನ್ನೂ ಅದಕ್ಕೆ ಉತ್ತರವನ್ನೂ ಅವರು ತಮ್ಮ ಜ್ಞಾನ ಭಂಡಾರಕ್ಕೆ ಸೇರಿಸಿಕೊಂಡು ಸಮಯ ಸಂದರ್ಭ ಬಂದಾಗ ಗೆಳೆಯರೊಡನೆ ಸವಾಲಾಗಿ ಕೇಳುವರು.

ಒಗಟುಗಳು ನಮ್ಮ ಹಿರಿಯರ ಬಾಯಿಂದ ಬಂದವು, ಗೆಳೆಯರಿಂದ ಸವಾಲಾಗಿ ಬಂದವು, ಶರಣರ ವಚನಗಳನ್ನು ಕೆಲವೆಡೆ ಒಗಟಾಗಿ ಪರಿವರ್ತಿಸಿ ಬಂದವು, ಹಾಗೂ ಇನ್ನೂ ಕೆಲವಾರು ಒಗಟುಗಳು ಕಲ್ಪನೆಯಿಂದ ಮೂಡಿಬಂದವು. ಹಲವು ಕಥೆಗಳಲ್ಲಿಯೂ ಸಹ ಒಗಟಿನ ಛಾಯೆಯನ್ನು ನಾವು ಕಾಣಬಹುದು.

ಒಗಟುಗಳಲ್ಲಿ ಜ್ಞಾನವಿದೆ, ವಿಚಾರವಿದೆ, ಮನರಂಜನೆಯಿದೆ. ಅಂತಹ ಕೆಲವು ಒಗಟುಗಳನ್ನು ಗಮನಿಸೋಣ:

1. ತಾಯಿಗೆ ಮೂರು ಬಣ್ಣ - ಮಗಳಿಗೆ ಎರಡು ಬಣ್ಣ
ಉತ್ತರ : ನಮ್ಮ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜ

2. ಹಸಿರು ಬೆಟ್ಟದ ಮೇಲೆ ಹಾಲು ಚೆಲ್ಲೈತೆ
ಉತ್ತರ : ಮಲ್ಲಿಗೆ ಗಿಡ

3. ಕೆರೆ ಎಲ್ಲಾ ಕುರಿ ಹೆಜ್ಜೆ
ಉತ್ತರ : ನಕ್ಷತ್ರ

4. ನಾಲ್ಕು ಮೂಲೆ ಚೌಕ, ನಾರಾಯಣನ ಕೊಳ, ಬಗ್ಗಿ ನೋಡಿದರೆ ಒಂದು ಚೂರೂ ನೀರಿಲ್ಲ
ಉತ್ತರ : ಬೆಲ್ಲದ ಅಚ್ಚು

5. ಬೆಳ್ಳಿ ಕಡಗ ಹಾಕವ್ಳೆ, ಬರ್ರನೆ ಬರ್ತಾಳೆ, ಸರ್ರನೆ ಹೋಗ್ತಾಳೆ.
ಉತ್ತರ : ಒನಕೆ

ವಿದ್ಯಾರ್ಥಿ ಕಿರುಪರಿಚಯ
ಕಾವ್ಯ, ಎಂ.

8ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 14, 2019

ನಮ್ಮ ಶಾಲೆ

ಚಿತ್ರ ಕೃಪೆ: ಡೆಲ್ಲಿ ಪಬ್ಲಿಕ್ ಶಾಲೆ

ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ. ನಾನು ಹೆಸರಘಟ್ಟದಲ್ಲಿರುವ ಜ್ಯೋತಿ ವಿದ್ಯಾಲಯದ ವಿದ್ಯಾರ್ಥಿ. ನಮ್ಮ ಶಾಲೆಯು ಹೆಸರಘಟ್ಟ ಗ್ರಾಮದಿಂದ ಬ್ಯಾತ ರಸ್ತೆಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿದೆ.

ಜ್ಯೋತಿ ವಿದ್ಯಾಲಯ ಶಾಲೆಯು 1996 ರಲ್ಲಿ ಸ್ಥಾಪನೆಯಾಯಿತು. ಸ್ಥಾಪನೆಯಾದ ವರ್ಷದಲ್ಲಿ ಈ ಶಾಲೆಗೆ ಸುಮಾರು 35 ವಿದ್ಯಾರ್ಥಿಗಳು ಬರುತ್ತಿದ್ದರು. ಆಗ ಕೆಲವೇ ತರಗತಿಗಳು ನಡೆಯುತ್ತಿದ್ದವು. ಕೆಲವು ವರ್ಷಗಳು ಕಳೆದ ನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.

ಈಗ ನಮ್ಮ ಶಾಲೆಯು ಗಿಡ-ಮರಗಳಿಂದ ಕೂಡಿ, ಸುಂದರವಾದ ವಾತಾವರಣದಲ್ಲಿದೆ. ವಿದ್ಯಾರ್ಥಿಗಳು ಹೆಚ್ಚಾದಂತೆ ತರಗತಿಗಳೂ ಸಹ ಹೆಚ್ಚಾಗಿವೆ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೂ ಸಹ ಹೆಚ್ಚಾಗಿದ್ದಾರೆ. ನಮ್ಮ ಶಾಲೆಯಲ್ಲಿ ವಿಶೇಷ ದಿನಗಳಂದು ನಡೆಯುವ ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳು ಬರುತ್ತಾರೆ.

ನಮ್ಮ ಶಾಲೆಯು ಪ್ರಾರಂಭವಾಗಿ 22 ವರ್ಷ ಕಳೆದು 23ರ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷ ಪರಿಸರ ದಿನವನ್ನು ಜೂನ್ 5 ರಂದು ಆಚರಿಸುತ್ತೇವೆ. ನಂತರ ಆಗಸ್ಟ್ 15 ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ, ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ, ನವಂಬರ್ 14 ರಂದು ಮಕ್ಕಳ ದಿನಾಚರಣೆ, ಜನವರಿ ತಿಂಗಳಿನಲ್ಲಿ ಶಾಲೆಯ ವಾರ್ಷಿಕ ದಿನಾಚರಣೆಯನ್ನು ಹಾಗೂ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

ನಮ್ಮ ಶಾಲೆಯು ಪಾಠದಲ್ಲಿ ಮತ್ತು ಆಟದಲ್ಲಿ ಯಾವಾಗಲೂ ಮುಂದು. ಶಾಲೆಯ ವಿದ್ಯಾರ್ಥಿಗಳು ಆಟದಲ್ಲಿ ಭಾಗವಹಿಸಿ ಮೂರು ವರ್ಷ ತಪ್ಪದೇ ಮೊದಲ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಶ್ರದ್ಧೆಯಿಂದ ಪಾಠ-ಆಟಗಳಲ್ಲಿ ಭಾಗವಹಿಸುತ್ತೇವೆ.

ವಿದ್ಯಾರ್ಥಿ ಕಿರುಪರಿಚಯ
ಶ್ರೇಯಸ್, ಎಂ.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 13, 2019

ಜಾನಪದ ಗೀತೆ


ಬಂಗಾರ ಬಳೆತೊಟ್ಟು ಬೈಬ್ಯಾಡ ಬಡವರನ
ಬಂಗಾರ ನಿನಗೆ ಸ್ಥಿರವಲ್ಲ | ಮಧ್ಯಾಹ್ನದ
ಬಿಸಿಲು ಹೊಳ್ಳೋದು ತಡವಲ್ಲ

ಬಡತನ ಬಂದಾರ ಬಡಿಬ್ಯಾಡ ಬಾಲರನ
ಆಡ್ಯಾಡಿ ಬಂದು ತೊಡಿಮ್ಯಾಲ | ಆಡಿದರ
ಬಡತನವೆಲ್ಲ ಬಯಲಾಗ

ಉತ್ತಮರ ಗೆಳೆತನ ಪುತ್ಥಳಿ ಬಂಗಾರ
ಮತ್ತೆ ಹೀನರ ಗೆಳೆತನ | ಮಾಡಿದರ
ಹಿತ್ತಾಳೆಗಿಂತ ಬಲುಹೀನ

ಇದ್ದರ ಇರಬೇಕು ಬುದ್ಧಿವಂತರ ನೆರೆಯ
ಖದ್ದರಗೇಡಿ ಇರಬೇಕು ಕುಲಗೇಡಿ | ನೆರೆಯಿದ್ದು
ಇದ್ದಟ್ಟು ಬುದ್ಧಿ ಕಳಕೊಂಡ

ಮಂದಿ ಮಕ್ಕಳೊಳಗ ಒಂದಾಗೊಂದಿರಬೇಕ
ನಂದೀಯ ಶಿವನ ದಯದಿಂದ | ಹೋದಾಗ
ಮಂದಿ ಬಾಯಾಗ ಇರಬೇಕ


ವಿದ್ಯಾರ್ಥಿ ಕಿರುಪರಿಚಯ
ಅಮೃತ, ಹೆಚ್. ಎ.

6ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 12, 2019

ಬುದ್ಧಿವಂತ ಮೇಕೆ

ಚಿತ್ರ ಕೃಪೆ: ಗೂಗಲ್

ಒಂದು ದಿನ ಮೇಕೆಯೊಂದು ನದಿಯ ದಡದಲ್ಲಿ ಮೇಯುತ್ತಾ ಇತ್ತು. ನದಿಯ ಇನ್ನೊಂದು ತೀರದಲ್ಲಿ ಹುಲ್ಲು ತುಂಬಾ ಹಸಿರಾಗಿರುವುದನ್ನು ನೋಡಿ, ಅದನ್ನು ತಿನ್ನಬೇಕು ಎಂದು ಆಸೆಯಾಯಿತು. ನದಿಯನ್ನು ದಾಟೋದು ಹೇಗೆ? ಎಂದು ಯೋಚಿಸುತ್ತಿರುವಾಗ ಅದಕ್ಕೆ ಒಂದು ಕಿರಿದಾದ ಸೇತುವೆ ಕಾಣಿಸಿತು. "ಆಹಾ.. ಈ ಸೇತುವೆಯ ಮೇಲಿಂದ ನದಿ ದಾಟ್ತೀನಿ.. ಹೋಗಿ ಹಸಿರಾದ ಹುಲ್ಲನ್ನು ತಿಂತೀನಿ.. ಆಹಾ" ಎಂದು ಸಂತಸದಿಂದ ಸೇತುವೆಯ ಮೇಲೆ ಹತ್ತಿ ನಡೆಯತೊಡಗಿತು.


ಅದೇ ಸಮಯಕ್ಕೆ ಸರಿಯಾಗಿ ಸೇತುವೆಯ ಮತ್ತೊಂದು ತುದಿಯಿಂದ ಇನ್ನೊಂದು ಮೇಕೆ ಬರುತ್ತಿತ್ತು. ಎರಡೂ ಮೇಕೆಗಳು ಸೇತುವೆಯ ಮೇಲೆ ಎದುರಾದಾಗ ಆಕಡೆಯಿಂದ ಬಂದ ಮೇಕೆ "ನಾನು ಮೊದಲು ನದಿ ದಾಟಬೇಕು, ದಾರಿ ಬಿಡು.." ಎಂದು ಹೇಳಿತು. ಇದಕ್ಕೆ ಇನ್ನೊಂದು ಮೇಕೆ ಹೇಳಿತು ಸೇತುವೆಯನ್ನು ನಾನು ಮೊದಲು ನೋಡಿ ಅದರ ಮೇಲೆ ಹತ್ತಿದ್ದು, ಅದಕ್ಕೆ ನಾನೇ ಮೊದಲು ಆಕಡೆಗೆ ಹೋಗ್ತೀನಿ".

ಆಗ ಮೊದಲ ಮೇಕೆ ಯೋಚಿಸಿತು. ಅದರ ತಾತ ಹೇಳಿದ ಒಂದು ಕಥೆ ಅದಕ್ಕೆ ನೆನಪಾಯಿತು. ಇದೇ ರೀತಿ ಎರಡು ಮೇಕೆಗಳು ಒಂದಕ್ಕೊಂದು ದಾರಿಬಿಡದೆ ಜಗಳವಾಡಿ ಕೊನೆಗೆ ನದಿಗೆ ಬಿದ್ದು ಮುಳುಗಿಹೋದ್ವು ಅಂತ ಆ ಕಥೆಯಲ್ಲಿತ್ತು.
ಅದಕ್ಕೆ ಮೊದಲ ಮೇಕೆ ಬುದ್ಧಿ ಉಪಯೋಗಿಸಿ ಯೋಚಿಸಿ ಹೇಳಿತು "ಇದು ಜಗಳ ಆಡುವ ಸಮಯ ಅಲ್ಲ. ಬುದ್ಧಿ ಉಪಯೋಗಿಸೋಣ. ನಾನು ಬಗ್ಗಿ ಸೇತುವೆಯ ಮೇಲೆ ಕರ‍್ತೀನಿ.. ನೀನು ನನ್ನ ಮೇಲಿಂದ ಜಿಗಿದು ಇನ್ನೊಂದು ತೀರಕ್ಕೆ ಹೋಗು".

ಮೊದಲನೇ ಮೇಕೆ ಬಗ್ಗಿ ಕುಳಿತುಕೊಂಡಾಗ ಇನ್ನೊಂದು ಮೇಕೆ ಅದರ ಮೇಲಿಂದ ಜಿಗಿದು ಇನ್ನೊಂದು ಬದಿಗೆ ಹೋಯಿತು. ಎರಡನೆಯ ಮೇಕೆ ಹೇಳಿತು "ಧನ್ಯವಾದ ಗೆಳೆಯ.. ನೀನು ತುಂಬಾ ಬುದ್ಧಿವಂತ". ನಂತರ ಎರಡೂ ಮೇಕೆಗಳು ತಮ್ಮ ತಮ್ಮ ದಾರಿಯಲ್ಲಿ ಹೋದವು.

ನೀತಿ: ಅಹಂಕಾರ ಬಿಟ್ಟು ಯೋಚಿಸಿ ಬುದ್ಧಿವಂತಿಕೆಯಿAದ ಕೆಲಸ ಮಾಡಬೇಕು.

ವಿದ್ಯಾರ್ಥಿ ಕಿರುಪರಿಚಯ
ಭಾನು ಪ್ರಕಾಶ್, ಎಂ.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 11, 2019

ಮೈಸೂರು ದಸರಾ

ಚಿತ್ರ ಕೃಪೆ: ಮೈಸೂರು ಜಿಲ್ಲಾಡಳಿತ ಜಾಲತಾಣ

ಒಂದು ಕಾಲದಲ್ಲಿ ಮೈಸೂರಿನ ಅರಸರ ಮಹೋತ್ಸವವಾಗಿದ್ದ ದಸರಾ ಉತ್ಸವವನ್ನು ಇಂದು ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಿಸುವುದು ಬಹಳ ಅಪರೂಪ.

ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿಯು ವೈಭವದ ವಿಜಯದಶಮಿ ಹಬ್ಬವಾಗಿದೆ. ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ನಂಟು ಇದೆ. ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರದ ಅರಸರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು.

ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮರ್ಥ್ಯ, ಸಂಪತ್ತು, ಸಮೃದ್ಧಿ, ವೈಭವ, ವೀರತ್ವ, ಧೀರತ್ವ, ಕಲೆ, ಸಾಮರ್ಥ್ಯ, ಸಂಗೀತ, ಸಂಪನ್ನತೆ ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು.

ಈ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವುದು ಸಾಮಾನ್ಯ. ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರೆಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. ಇವರಲ್ಲಿ 9ನೇ ಆಳ್ವಿಕೆಯ ರಾಜ ಒಡೆಯರು ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.

ದಸರಾ ಹಬ್ಬದ ಕಾಲಾವಧಿಯ ಎಲ್ಲಾ ಹತ್ತು ದಿನಗಳಂದೂ ಕೂಡ ಮೈಸೂರು ಅರಮನೆಯು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಇದನ್ನು ಅನುಸರಿಸಿಕೊಂಡು ವಿಶೇಷವಾದ ಅರಸರ ಸಭೆ ಅಥವಾ ದರ್ಬಾರು ನಡೆಯುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಆಳ್ವಿಕೆಯ ಅವಧಿಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಅರಮನೆಯಲ್ಲಿ ವಿಶೇಷ ದರ್ಬಾರ್ ಹಮ್ಮಿಕೊಳ್ಳುವ ಸಂಪ್ರದಾಯವನ್ನು ಜಾರಿಗೆ ತಂದಿದ್ದರು. ಅಲ್ಲದೆ ಈ ಸಭೆಯು ಅರಸುಮನೆತನದ ಸದಸ್ಯರು, ವಿಶೇಷ ಆಹ್ವಾನಿತ ಗಣ್ಯರು, ಅಧಿಕಾರಿಗಳು ಮತ್ತು ಪ್ರಜಾವರ್ಗಗಳಿಂದ ತುಂಬಿತುಳುಕುತ್ತಿತ್ತು. ಜಂಬೂ ಸವಾರಿ ಈ ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ.

ವಿದ್ಯಾರ್ಥಿ ಕಿರುಪರಿಚಯ
ಕೀರ್ತನ, ಎಂ.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 10, 2019

ನನ್ನ ಅಮ್ಮ


ಚಿತ್ರ ಕೃಪೆ: ಗೂಗಲ್

ವಿದ್ಯೆ ನೀಡಿದ ಗುರು ಇವಳು
ಸದಾ ನಗುತಿರುವವಳು
ಸ್ವರ್ಗಕ್ಕಿಂತ ಮಿಗಿಲಾದವಳು

ಕಷ್ಟವನ್ನು ಸಹಿಸಿದವಳು
ಪ್ರೀತಿಯಿಂದ ಕಾಣುವವಳು
ವಾತ್ಸಲ್ಯದ ಮೂರ್ತಿ ಇವಳು

ತಿದ್ದಿ ಬುದ್ಧಿ ಹೇಳುವವಳು
ಸದಾ ಜೊತೆಯಲಿದ್ದು ಕಾಳಜಿ ಮಾಡುವವಳು
ತಪ್ಪನ್ನೆಲ್ಲ ಕ್ಷಮಿಸುವವಳು

ನನ್ನ ಜೀವನವೇ ಇವಳು
ಕಣ್ಣಿಗೆ ಕಾಣುವ ದೇವರಿವಳು
ನನಗೆ ದೇವರೇ ಆಗಿರುವವಳು..
ನನ್ನ ಅಮ್ಮ

ವಿದ್ಯಾರ್ಥಿ ಕಿರುಪರಿಚಯ
ಅಮೂಲ್ಯ, ಹೆಚ್. ಸಿ.

6ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 9, 2019

ಹೆಸರಘಟ್ಟ ಕರಗ

ಚಿತ್ರ ಕೃಪೆ: YouTube
ಹೆಸರಘಟ್ಟ ಬೆಂಗಳೂರು ಉತ್ತರ ತಾಲ್ಲೂಕಿನ ಒಂದು ಹಳ್ಳಿಯಾಗಿದ್ದು, ಇದಕ್ಕೆ ಮೊದಲು ವ್ಯಾಸಘಟ್ಟ ಎಂಬ ಹೆಸರಿತ್ತು. ಏಕೆಂದರೆ ವ್ಯಾಸ ಮಹರ್ಷಿಯು ನೆಲೆಸಿದ್ದರು. ನಂತರ ಜನರು ಹೆಸರಘಟ್ಟ ಎಂದು ಕರೆಯಲು ಪ್ರಾರಂಭಿಸಿದರು.

ಹೆಸರಘಟ್ಟದಲ್ಲಿ ಕರಗ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಮಲ್ಲಿಗೆಯ ಕಂಪಿನೊಂದಿಗೆ ಉತ್ಸವ ಕಣ್ತುಂಬಿಕೊಂಡವರು ಲಕ್ಷಾಂತರ ಮಂದಿ. ಪ್ರತಿ ವರ್ಷ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಮಹೋತ್ಸವ ಇಡೀ ರಾತ್ರಿ ವೈಭವಯುತವಾಗಿ ನಡೆಯುತ್ತದೆ.

ಬೆಳದಿಂಗಳಲ್ಲಿ ಮಿಂದ ಕತ್ತಲಿನಲ್ಲಿ ನಡೆಯುವ ಕರಗದ ಆರಾಧನೆ ಮತ್ತು ಮೆರವಣಿಗೆಯಲ್ಲಿ ಮಲ್ಲಿಗೆ ಹೂಗಳನ್ನು ಚೆಲ್ಲಲಾಗುತ್ತದೆ. ಹೂವಿನ ಕರಗ ಹೊತ್ತು ನಡೆಯುವ ಪೂಜಾರಿ ಊರೆಲ್ಲಾ ಮೆರವಣಿಗೆ ಬರುತ್ತಾರೆ. ಇದು ಹಳೆಯ ಸಂಪ್ರದಾಯವಾದರೂ, ಬದಲಾದ ಸಂದರ್ಭದಲ್ಲಿ ಬದಲಾಗದ ಸಂಸ್ಕೃತಿಯೊAದಿಗಿನ ಹೊಸ ತಲೆಮಾರಿನ ನಂಟು ಎದ್ದು ಕಾಣುತ್ತದೆ.

ವಸಂತನ ಆಗಮನದೊಂದಿಗೆ ಮರಗಿಡಗಳಲ್ಲಿ ಹೊಸ ಚಿಗುರು ಕಾಣುತ್ತದೆ. ಚೈತ್ರದ ಚಂದಿರ ಪೂರ್ಣವಾಗಿ ಕಾಣಲು ಇನ್ನು ಕೆಲವೇ ದಿನಗಳು ಉಳಿದಿರುವ ಹುಣ್ಣಿಮೆಯ ಸಮಯದಲ್ಲಿ ಕರಗದ ಸಂಭ್ರಮ. ಸುವಾಸನೆ ಸೂಸುವ ಮಲ್ಲಿಗೆ ಹೂಗಳ ಉತ್ಸವ.

ಈ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ಕೊಟ್ಟರು ಎಂದು ಹೇಳಲಾಗುತ್ತದೆ. ಧರ್ಮರಾಯ ಗುಡಿ ಕಟ್ಟಲು "ಕರಗ" ಹಬ್ಬಕ್ಕೂ ಅವರೆ ನೆರವು ನೀಡಿದರು.. ಬಹಳಷ್ಟು ಊರುಗಳಲ್ಲಿ ಕರಗಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಇದು ಇಂದಿಗೂ ನಿಂತಿಲ್ಲ. ಪಾಂಡವರ ಕುಲಕ್ಕೆ ಸೇರಿದ ವಹ್ನಿ ಕುಲಸ್ಥರು ಆರಾಧಿಸುವ ಧರ್ಮರಾಯನ ದೇವಾಲಯಗಳಲ್ಲಿ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯ. ಕರಗ ಶಕ್ತಿಯ ಮೂಲಸೆಲೆಯೇ ದ್ರೌಪದಿ ಎಂಬುದು ಇದಕ್ಕೆ ಕಾರಣ.

ವಿದ್ಯಾರ್ಥಿ ಕಿರುಪರಿಚಯ
ಕೃತಿಕ ರಾಜೇಶ್

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 8, 2019

ಎರಡು ತಲೆಗಳಿದ್ದ ಪಕ್ಷಿ

ಚಿತ್ರ ಕೃಪೆ: YouTube
ಒಂದಾನೊಂದು ಕಾಲದಲ್ಲಿ ಒಂದು ವಿಚಿತ್ರವಾದ ಎರಡು ತಲೆಗಳುಳ್ಳ ಪಕ್ಷಿಯಿತ್ತು. ಆ ಪಕ್ಷಿಯು ಹಾರುವುದನ್ನು ನೋಡುವುದೇ ಒಂದು ಚೆಂದ. ಅಚ್ಚರಿಯ ವಿಷಯವೆಂದರೆ, ಅದು ತಿನ್ನುವುದನ್ನು ನೋಡುವುದು. ಆ ಪಕ್ಷಿಯು ರುಚಿಕರವಾದ ಆಹಾರಗಳನ್ನು ತನ್ನ ಬಲಗಡೆ ತಲೆಯಿಂದಲೂ, ಸಾಮಾನ್ಯವಾದ ಆಹಾರಗಳನ್ನು ತನ್ನ ಎಡಗಡೆ ತಲೆಯಿಂದಲೂ ತಿನ್ನುವ ಅಭ್ಯಾಸ ಹೊಂದಿತ್ತು.

ಒಂದು ದಿನ ಪಕ್ಷಿಯ ಎಡತಲೆ ಬಲತಲೆಯನ್ನು ಕೇಳುತು "ಪ್ರೀತಿಯ ಬಲ ತಲೆಯೇ, ರುಚಿಕರವಾದ ಆಹಾರವನ್ನು ನೀನೇಕೆ ನನಗೂ ಸ್ವಲ್ಪ ತಿನ್ನಲು ಉಳಿಸಬಾರದು? ನಾನೂ ಕೂಡ ಅದರ ರುಚಿಯನ್ನು ನೋಡಿದಂತಾಗುತ್ತದೆ". ಇದಕ್ಕೆ ಬಲ ತಲೆಯು ಹೇಳುತು "ಅದರಲ್ಲೇನಿದೆ ಎಡ ತಲೆಯೆ? ಇಬ್ಬರೂ ತಿನ್ನುವ ಆಹಾರವು ಒಂದೇ ಹೊಟ್ಟೆಗೆ ತಾನೇ ಹೋಗುವುದು? ನೀನು ಸಾಮಾನ್ಯವಾದ ಆಹಾರವನ್ನೇ ತಿನ್ನು". ಎಡ ತಲೆಗೆ ಬಹಳ ಬೇಸರವಾಯಿತು.

ಅದು ಬರಗಾಲ, ಆಹಾರ ವಿರಳವಾಗಿ ಸಿಗುತ್ತಿತ್ತು. ಯಾವ ಪ್ರಾಣಿಯೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಎರಡು ತಲೆಯ ಪಕ್ಷಿಯು ಒಂದು ಕಾಡು ಮರದಲ್ಲಿ ಕೆಲವು ಹಣ್ಣುಗಳನ್ನು ಕಂಡು ಅಲ್ಲಿಗೆ ಹಾರಿತು. ಬಲ ತಲೆಗೆ ಹಸಿವೆಯಷ್ಟೇ ಗೊತ್ತಾಗುತ್ತಿತ್ತು. ಅದು ಇನ್ನೇನು ಹಣ್ಣನ್ನು ತಿನ್ನಬೇಕು ಎನ್ನುವಷ್ಟರಲ್ಲಿ ಎಡ ತಲೆಯು ತಡೆದು ಹೇಳುತು "ನಿಲ್ಲು ಬಲತಲೆಯೇ, ನೀನು ನಮ್ಮನ್ನು ಕೊಲ್ಲುತ್ತೀಯೆ.. ಈ ಹಣ್ಣು ವಿಷಕಾರಿ. ಮರದ ಕೆಳಗೆ ನೋಡು, ಅಲ್ಲಿ ಅನೇಕ ಪ್ರಾಣಿಗಳ ಮೂಳೆಗಳು ಬಿದ್ದಿವೆ". ಬಲ ತಲೆಯು ಕೆಳಗೆ ಬಗ್ಗಿ ನೋಡಿತು, ವಿಷಕಾರಿ ಹಣ್ಣು ತಿಂದು ಸತ್ತಿರುವ ಅನೇಕ ಪ್ರಾಣಿಗಳ ಮೂಳೆಗಳು ಕಾಣಿಸಿದವು. ಎಡತಲೆಯು ಮಾಡಿದ ಉಪಕಾರವನ್ನು ಕಂಡು ಅದಕ್ಕೆ ತನ್ನ ಸ್ವಾರ್ಥ ಬುದ್ಧಿಯ ಬಗ್ಗೆ ಲಜ್ಜೆಯುಂಟಾಯಿತು.

ಅಂದಿನಿಂದ ಬಲ ತಲೆಯು ಎಲ್ಲಾ ಆಹಾರಗಳನ್ನು ಎಡ ತಲೆಯೊಂದಿಗೆ ಸಮವಾಗಿ ಹಂಚಿಕೊಳ್ಳಲು ಪ್ರಾರಂಭಿಸಿ, ಎರಡೂ ತಲೆಗಳು ಸಂತಸದಿಂದ ಇದ್ದವು.

ನೀತಿ: ಪಕ್ಷಪಾತವು ನೋವನ್ನು ಕೊಡುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಜ್ಞಾನೇಶ್, ವಿ.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 7, 2019

ಶಿಕ್ಷಕರು

ಚಿತ್ರ ಕೃಪೆ: ಗೂಗಲ್
ಶಿಕ್ಷಕರು ಎಂದ ಕೂಡಲೇ ನಮಗೆ ನೆನಪಾಗುವುದು ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೇ ಮಾದರಿಯಾಗಿರುತ್ತಾರೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿವುಳ್ಳವರೆಂದರೆ ಅದು ಶಿಕ್ಷಕರು ಮಾತ್ರ.

ಅಪ್ಪ, ಅಮ್ಮನ ನಂತರ ಮಕ್ಕಳು ಹೆಚ್ಚು ಹಚ್ಚಿಕೊಳ್ಳುವುದು ತಮ್ಮ ಶಿಕ್ಷಕರನ್ನು. ದೇಶಕ್ಕೆ ಉತ್ತಮ ನಾಗರೀಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾವು ಕಾಣುತ್ತೇವೆ. ಉತ್ತಮ ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು. ಅಂಧಕಾರವನ್ನು ದೂರವಾಗಿಸುವವರೇ ಗುರುಗಳು. ಇವರು ನಮ್ಮಲ್ಲಿರುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿರುತ್ತಾರೆ. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ, ಸರಿ ಮಾರ್ಗವನ್ನು ಶಿಕ್ಷಕರು ತೋರಿಸುತ್ತಾರೆ.

ಗುರುವಾದವರು ತಮ್ಮ ಶಿಷ್ಯರಿಗೆ ತಂದೆ, ತಾಯಿ ಎರಡೂ ಆಗಬಲ್ಲರು. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ನಮ್ಮ ಶಿಕ್ಷಕರು. ಶಿಕ್ಷಕರ ಮುಖ್ಯ ಕೆಲಸವೆಂದರೆ ನಮ್ಮ ಬದುಕನ್ನು ಅರ್ಥಪೂರ್ಣವಾಗುವಂತೆ ನಮಗೆ ಮಾರ್ಗದರ್ಶನ ಮಾಡುವುದು. ಸದಭಿರುಚಿಯನ್ನು ಹುಟ್ಟಿಸುವುದೇ ಶಿಕ್ಷಕರ ಉದ್ದೇಶವೇ ಹೊರೆತು ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ. ಶಿಕ್ಷಕರು ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರುತ್ತಾರೆ ಹಾಗೂ ಜೀವನದಲ್ಲಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಶಿಕ್ಷಕರು ನಮ್ಮನ್ನು ಶ್ರೇಷ್ಠ ನಾಗರೀಕರನ್ನಾಗಿ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.

ಶಿಕ್ಷಕರೆಂದರೆ ಒಬ್ಬ ವ್ಯಕ್ತಿಗೆ, ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವವರೇ ಶಿಕ್ಷಕರು. ನನ್ನ ಎಲ್ಲಾ ಶಿಕ್ಷಕರಿಗೂ ನನ್ನ ಅನಂತ ನಮನಗಳು.

ವಿದ್ಯಾರ್ಥಿ ಕಿರುಪರಿಚಯ
ಶಿವಾನಿ ಎನ್. ಗೌಡ

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 6, 2019

ಸುಂದರವಾದ ಮೀನು

ಚಿತ್ರ ಕೃಪೆ: ವೆಕ್ಟರ್ ಸ್ಟಾಕ್
ಆಳವಾದ ನೀರಿನಲ್ಲಿ ಎರಡು ಚಿನ್ನದ ಮೀನುಗಳಿದ್ದವು. ಒಂದು ಮೀನು ಗಂಗಾ ನದಿಯಲ್ಲಿದ್ದರೆ ಮತ್ತೊಂದು ಮೀನು ಯಮುನಾ ನದಿಯಲ್ಲಿತ್ತು. ಒಂದು ದೊಡ್ಡ ಅಲೆ ಬಂದಾಗ ಎರಡೂ ಮೀನುಗಳು ಭೇಟಿಯಾದವು.

ಮೊದಲನೇ ಚಿನ್ನದ ಮೀನು ಹೇಳಿತು "ಹೇ.. ನಾನು ಇಡೀ ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಮೀನು". ಇದನ್ನು ಕೇಳಿದ ಎರಡನೇಯ ಮೀನು ಮೂತಿ ತಿರುಗಿಸುತ್ತಾ ಹೀಗೆ ಹೇಳಿತು "ಯಾರು ಮಾತಾಡುತ್ತಿರುವುದು? ಸರಿಯಾಗಿ ನೋಡು. ನೀನು ನಿನ್ನ ಪ್ರತಿಬಿಂಬವನ್ನು ನೋಡಿರುವೆಯಾ? ನಾನೇ ಬಹಳ ಸುಂದರವಾಗಿರುವ ಮೀನು". ಹೀಗೇ ವಾದ ವಿವಾದ ನಡೆದು ಅವರಿಬ್ಬರಲ್ಲಿ ಜಗಳ ಪ್ರಾರಂಭವಾಯಿತು.

ಅದೇ ಸಮಯಕ್ಕೆ ಒಂದು ಆಮೆ ಅಲ್ಲಿಗೆ ಬಂದಿತು. ಎರಡೂ ಮೀನುಗಳು ಆಮೆಯ ಹತ್ತಿರ ಹೋಗಿ ತಮ್ಮಿಬ್ಬರಲ್ಲಿ ಯಾರು ಅತ್ಯಂತ ಸುಂದರವಾಗಿರುವವರು ಎಂದು ತೀರ್ಮಾನಿಸಲು ಕೇಳಿದವು. ಆಮೆಯು ಇಬ್ಬರನ್ನೂ ಚೆನ್ನಾಗಿ ಗಮನಿಸಿ ಹೀಗೆ ಹೇಳಿತು "ನನಗೆ ತುಂಬಾ ಹಸಿವೆಯಾಗಿದೆ. ನಾನು ಎಷ್ಟು ಹಸಿದಿದ್ದೇನೆಂದರೆ ನಿಮ್ಮಿಬ್ಬರನ್ನೂ ಈಗಲೇ ತಿನ್ನುತ್ತೇನೆ.."

ಕೂಡಲೇ ಎರಡೂ ಮೀನುಗಳು ಜಗಳ ಮರೆತು ತಮ್ಮ ಜೀವವನ್ನು ಉಳಿಸಿಕೊಳ್ಳಲು ವೇಗವಾಗಿ ಈಜಿಕೊಂಡು ಹೊರಟುಹೋದವು.

ನೀತಿ: ಬೇಡದ ಜಗಳ ಅಪಾಯವನ್ನು ತಂದೊಡ್ಡುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ರೋಹಿಣಿ, ಎಂ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 5, 2019

ನಗೆ ಹನಿಗಳು

ಚಿತ್ರ ಕೃಪೆ: ಷಟರ್ ಸ್ಟಾಕ್
ಗುಂಡ: ಡಾಕ್ಟ್ರೆ, ನನ್ನ ಹೆಂಡತಿ ಮದ್ಯಪಾನದ ತೊಂದರೆಯಿಂದ ಬಳಲುತ್ತಿದ್ದಾಳೆ.
ಡಾಕ್ಟರ್: ಓಹೋ.. ಆಕೆ ಅಷ್ಟೊಂದು ಕುಡೀತಾಳಾ?
ಗುಂಡ: ಇಲ್ಲ ಡಾಕ್ಟ್ರೆ.. ಕುಡಿಯೋದು ನಾನು, ತೊಂದರೆ ಮಾತ್ರ ಅವಳಿಗೆ!
* * *

ಪಮ್ಮಿ: ನನ್ನ ಮೊಬೈಲ್ ಚಾರ್ಜ್ ಆಗಿದೆಯಾ?
ಗುಂಡ: ಆಗಿದೆ.
ಪಮ್ಮಿ: ಮತ್ತೆ ಲೋ ಬ್ಯಾಟರಿ ಅಂತ ತೋರಿಸ್ತಿದೆ?
ಗುಂಡ: ರಾತ್ರಿಯೆಲ್ಲಾ ಚಾರ್ಜ್ಗೆ ಇಟ್ರೆ ಮೊಬೈಲ್ ಬ್ಲಾಸ್ಟ್ ಆಗುತ್ತೆ ಅಂದೆಯಲ್ಲಾ, ಅದಕ್ಕೆ ಬ್ಯಾಟರಿ ತೆಗೆದು ಚಾರ್ಜ್ಗೆ ಹಾಗಿದ್ದೆ.
* * *

ಮೇಷ್ಟ್ರು: ವರ್ಷಕ್ಕೆ ಎಷ್ಟು ರಾತ್ರಿಗಳು?
ಗುಂಡ: 10 ರಾತ್ರಿಗಳು ಸಾರ್.
ಮೇಷ್ಟ್ರು: ಅದ್ಹೇಗೆ?
ಗುಂಡ: 9 ನವರಾತ್ರಿ, 1 ಶಿವರಾತ್ರಿ.
* * *

ಪಮ್ಮಿ: ರೀ.. ಯಾಕ್ರೀ ಅವಾಗವಾಗ ನನ್ನ ಮುಖದ ಮೇಲೆ ನೀರು ಚಿಮುಕಿಸುತ್ತೀರ?
ಗುಂಡ: ನಿಮ್ಮಪ್ಪ ನಿನ್ನ ಹೂವಿನ ಥರಾ ನೋಡ್ಕೊಳ್ಳೋಕೆ ಹೇಳಿದ್ದಾರೆ ಕಣೇ..
* * *

ಗುಂಡ: ಹೇರ್ ಕಟ್ಟಿಂಗ್ ಮಾಡಪ್ಪ.
ಅಂಗಡಿಯವ: ಯಾವ ಸ್ಟೈಲ್ ಮಾಡ್ಲಿ ಸಾರ್?
ಗುಂಡ: ಸ್ಟೈಲ್ ಗೀಲ್ ಬೇಡಪ್ಪ.. ಹೆಂಡತಿ ಕೈಗೆ ಕೂದಲು ಸಿಗಬಾರದು ಅಷ್ಟೇ..
* * *

ತಿಮ್ಮ: ನೀನು ಹುಟ್ಟಿದ ನಕ್ಷತ್ರ ಯಾವುದೋ?
ಗುಂಡ: ನಾನು ಹುಟ್ಟುದ್ದು ಹಗಲು ಹೊತ್ತಿನಲ್ಲಿ, ಆಗ ನಕ್ಷತ್ರ ಇರಲಿಲ್ಲ ಕಣೋ!

ವಿದ್ಯಾರ್ಥಿ ಕಿರುಪರಿಚಯ
ರಾಹುಲ್, ಎನ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 4, 2019

ಚುಟುಕಗಳು

ಶಾಂತಿ ಮಂತ್ರ
ಗಡಿಯಲ್ಲಿ ನಡೆಯುತ್ತಿದೆ ಕುತಂತ್ರ
ಎಷ್ಟೋ ಯೋಧರ ಬದುಕಾಗಿದೆ ಅತಂತ್ರ
ಸಾಮರ್ಥ್ಯವಿದ್ದರೂ ಹೂಡುತ್ತಿಲ್ಲ ರಣತಂತ್ರ
ಕಣ್ಮುಚ್ಚಿ ಜಪಿಸುತ್ತಿದ್ದೇವೆ ಶಾಂತಿ ಮಂತ್ರ..
 * * *
ಗಡವ-ಬಡವ
ದುಡಿಯುವ ಮನಸ್ಸಿಲ್ಲದ ಗಡವ
ಎಷ್ಟೇ ಆಸ್ತಿಯಿದ್ದರೂ ನಾಳೆ ಬಡವ
ದುಡಿಯದವ ಅವನತಿ ಕಾಣುವ
ದುಡಿಯುವವ ಉನ್ನತಿ ನೋಡುವ..
* * *
ರಂಗೋಲಿ
ಮನದಲಿ ಮೂಡಲಿ ತಾಳ್ಮೆಯ ರಂಗೋಲಿ
ಆಗದಿರಲಿ ಕೋಪದಲಿ ಬದುಕು ಚಲ್ಲಾಪಿಲ್ಲಿ
ಇದು ಸಮಾಜ ಬಯಸುವ ಸುವ್ವಾಲಿ
ಇದನು ಕಲಿತು ನೀ ನಗುನಗುತಾ ನಲಿ..
 * * *
ಹಠ
ಮನಸ್ಸಿಗೆ ಲಗಾಮಿದ್ದರೆ ಅದು ಗಾಳಿಪಟ
ನಿಯಂತ್ರಣ ತಪ್ಪಿದರೆ ಅದು ಧೂಳಿಪಟ
ಕೆಟ್ಟದನ್ನೇ ಯೋಚಿಸುವುದು ಅದರ ಚಟ
ಅದನ್ನು ಒಳ್ಳೆಯೆಡೆಗೆ ಸೆಳೆಯುವುದೇ ನನ್ನ ಹಠ..
 * * *
ವಿವರ
ಈ ಜೀವನ ಸುಖದುಃಖಗಳ ಸಾಗರ
ಬಹುಪಾಲು ಅದು ಕಷ್ಟಗಳ ಆಗರ
ಸಂತಸದ ಕ್ಷಣಗಳು ವಿರಳ
ನಮ್ಮ ಬಯಕೆಗಳು ಸಾವಿರ
ಇವೆಲ್ಲದರ ಮಧ್ಯೆ ನಾವೇನು ಮಾಡಿದೆವು ಎಂಬುದೇ
ನಮ್ಮ ವಿವರ..
* * *

ವಿದ್ಯಾರ್ಥಿ ಕಿರುಪರಿಚಯ
ಅಮೃತ, ಎಸ್. ಹೆಚ್.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 3, 2019

ಮಾಲಿನ್ಯ

ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲ ಇಡೀ ವಿಶ್ವದ ಜೀವಸಂಕುಲಕ್ಕೇ ಮಾರಕವಾಗುತ್ತಿದೆ. ಆರೋಗ್ಯಕರ ಜೀವನಕ್ಕೆ ಬೇಕಾದ ಗಾಳಿ, ನೀರು ಮತ್ತು ಆಹಾರ ವಿಷಪೂರಿತವಾಗುತ್ತಿವೆ.
ಚಿತ್ರ ಕೃಪೆ: ಗೂಗಲ್
ಪರಿಸರ ಮಾಲಿನ್ಯದ ದುಷ್ಪರಿಣಾಮಗಳು:

1. ಪರಿಸರ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
2. ಓಜೊ಼ನ್ ಪದರದ ನಾಶದಿಂದ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಚರ್ಮ ಕ್ಯಾನ್ಸರ್, ಕಣ್ಣಿನ ತೊಂದರೆಗಳಿಗೆ ಕಾರಣವಾಗುತ್ತದೆ.

ವಾಯು ಮಾಲಿನ್ಯದ ದುಷ್ಪರಿಣಾಮಗಳು:
1. ಇತ್ತೀಚೆಗೆ ವಾಯು ಮಾಲಿನ್ಯದಿಂದ ಪ್ರತಿ ವರ್ಷ ಸುಮಾರು 2.4 ಮಿಲಿಯನ್ ಜನ ಸಾಯುತ್ತಿದ್ದಾರೆ ಮತ್ತು ಒಳಾಂಗಣ ವಾಯು ಮಾಲಿನ್ಯದಿಂದ 1.5 ಮಿಲಿಯನ್ ಜನರ ಸಾವು ಸಂಭವಿಸುತ್ತಿದೆ.
2. ಒಂದು ವರ್ಷದಲ್ಲಿ ವಿಶ್ವದಾದ್ಯಂತ ಸಂಭವಿಸುವ ಹೆಚ್ಚು ಸಾವುಗಳು, ವಾಹನಗಳ ಅಪಘಾತಕ್ಕಿಂತಲೂ ವಾಯುಮಾಲಿನ್ಯಕ್ಕೆ ಸಂಬಂಧಿಸಿವೆ.

ಜಲ ಮಾಲಿನ್ಯದ ದುಷ್ಪರಿಣಾಮಗಳು:
1. ಪ್ರಮುಖವಾಗಿ ಕುಡಿಯಲು ಬಳಕೆಯಾಗುವ ನೀರು ವಿಷವಸ್ತುಗಳ ಸೇರುವಿಕೆಯಿಂದ ಹಾಳಾಗುತ್ತಿದೆ.
2. ಕೆಲವು ರಾಸಾಯನಿಕಗಳು ತುಂಬಾ ದಿನಗಳ ಕಾಲ ಕೆರೆ, ನದಿಗಳಲ್ಲಿರುವುದರಿಂದ ಭೂಮಿಯೊಳಗಿನ ಅಂತರ್ಜಲದ ನೀರೂ ಸಹಾ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಶಬ್ದ ಮಾಲಿನ್ಯದ ದುಷ್ಪರಿಣಾಮಗಳು:
1. ವಿಶ್ವದಾದ್ಯಂತ ಶಬ್ದಮಾಲಿನ್ಯಕ್ಕೆ ಮುಖ್ಯ ಕಾರಣ ಸಾರಿಗೆ ವ್ಯವಸ್ಥೆ. ಎಂದರೆ ವಿವಿಧ ರೀತಿಯ ವಾಹನಗಳ ಸದ್ದು, ರೈಲುಗಳ ಸದ್ದು ಹಾಗೂ ವಿಮಾನಗಳ ಸದ್ದು ಕೂಡ ಇದರಲ್ಲಿ ಸೇರುತ್ತದೆ.
2. ಧ್ವನಿವರ್ಧಕಗಳ ಸದ್ದು, ದೀಪಾವಳಿಯ ಪಟಾಕಿಗಳ ಸದ್ದು ಇತ್ಯಾದಿಗಳೂ ಸಹಾ ಕಾರಣವಾಗುತ್ತವೆ.
3. ಶಬ್ದ ಮಾಲಿನ್ಯದಿಂದ ಅನೇಕ ಅಮಾಯಕ ಪ್ರಾಣಿ-ಪಕ್ಷಿಗಳ ಸಾವು ಸಂಭವಿಸುವುದೂ ಹೆಚ್ಚುತ್ತಿದೆ.

ವಿದ್ಯಾರ್ಥಿ ಕಿರುಪರಿಚಯ
ಹಿತೈಷಿ, ಬಿ. ಆರ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter