ಚಿತ್ರ ಕೃಪೆ: ಹಲೋ ಟ್ರಾವೆಲ್ |
ಹಳ್ಳಿ ಎಂದರೆ ಸುಂದರ ವಾತಾವರಣ ಇರುವಂತಹ ಪ್ರದೇಶ. ಹೆಸರಘಟ್ಟದ ಮೊದಲ ಹೆಸರು ವ್ಯಾಸರಘಟ್ಟವಾಗಿತ್ತು. ಏಕೆಂದರೆ, ಒಂದು ಕಾಲದಲ್ಲಿ ವ್ಯಾಸ ಮಹರ್ಷಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಆದ್ದರಿಂದ ವ್ಯಾಸರಘಟ್ಟ ಎಂಬ ಹೆಸರು ಬಂದಿತು.
ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲು ಹಿಂದೆ ಹೆಸರಘಟ್ಟ ಕೆರೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಅಲ್ಲಿ ಇಟ್ಟಿಗೆಗಳಿಂದ ನಿರ್ಮಿಸಿರುವ ಕಾಲುವೆ ಮೂಲಕ ಕೆರೆಯ ನೀರನ್ನು ತರಬನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿ ನೀರನ್ನು ಶುದ್ಧೀಕರಿಸಿ ಸೋಲದೇವನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿಂದ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಕ್ರಿ. ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು ಎನ್ನಲಾಗುತ್ತದೆ.
ಅರ್ಕಾವತಿ ನದಿಯ ನೀರೇ ಹೆಸರಘಟ್ಟ ಕೆರೆಗೆ ಜಲಮೂಲ. ನೂರಾರು ವರ್ಷಗಳ ಕಾಲ ಈ ಕೆರೆಯ ನೀರೇ ಸುತ್ತಮುತ್ತಲಿನ ಜಮೀನುಗಳಲ್ಲಿ ನೀರಾವರಿಗೂ ಮೂಲ. ಆಗಿನ ದಿವಾನ್ ಕೆ. ಶೇಷಾದ್ರಿ ಅಯ್ಯರ್ 1894 ರಲ್ಲಿ ಹೆಸರಘಟ್ಟ ಕೆರೆಯಿಂದ ನೀರುಣಿಸುವ ಯೋಜನೆ ರೂಪಿಸಿದರು. ಕೇವಲ ಎರಡೇ ವರ್ಷದಲ್ಲಿ, ಅಂದರೆ 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಹೆಸರಘಟ್ಟ ಯೋಜನೆ ಸಿದ್ಧವಾಯಿತು. ಹತ್ತಿರದ ಊರುಗಳಾದ ಬ್ಯಾತ, ಹನಿಯೂರು, ಕಾಕೋಳು, ಮಧುರೆ, ದೊಡ್ಡಬೆಳವಂಗಲ ಕೆರೆಗಳು ತುಂಬಿದ ಮೇಲೆ ಹೆಚ್ಚುವರಿ ನೀರು ಹೆಸರಘಟ್ಟ ಕೆರೆಗೆ ಹರಿದು ಬರುತ್ತದೆ.
ಹೆಸರಘಟ್ಟ ಕೆರೆಯ ಹತ್ತಿರದಲ್ಲಿ ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ಜನಪ್ರಿಯ ನೃತ್ಯಗ್ರಾಮ, ಸರ್ಕಾರಿ ಅಕ್ವೇರಿಯಂ, ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ತೋಟಗಾರಿಕೆ ಸಂಸ್ಥೆ, ಪೌಲ್ಟ್ರಿ ಫಾರಂ ಮತ್ತು ಡೈರಿ ಫಾರಂಗಳು ಇಲ್ಲಿವೆ. ಇತ್ತೀಚಿನ ದಿನಗಳಲ್ಲಿ ಕೆರೆಯ ಸುತ್ತಲಿನ ಏರಿಯನ್ನು ವಾಯುವಿಹಾರಕ್ಕೆ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿ ವಾಸಮಾಡುವ ಜನರಿಗೆ ಇದೊಂದು ಪಿಕ್‍ನಿಕ್ ತಾಣವೂ ಆಗಿದೆ. ಮಕ್ಕಳಿಗಂತೂ ಈ ಸ್ಥಳ ತುಂಬ ಇಷ್ಟವಾಗುತ್ತದೆ.
ವಿದ್ಯಾರ್ಥಿ ಕಿರುಪರಿಚಯ | |
ಕೀರ್ತನ, ಕೆ. 7ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಹೆಸರಘಟ್ಟ ಬಗ್ಗೆ ಬರವಣಿಗೆ ನೋಡಿ ನನಗೆ ಹಿಂದೆ ನಾನು ಅಲ್ಲಿ ಕೆಲಸಮಾಡುತ್ತಿದ್ದ ಸಮಯದ ನೆನಪಾಯಿತು. ಈಗಲೂ ಅದು ಒಂದು ಸುಂದರ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿದೆ .ಪದೇ ಪದೇ ಅಲ್ಲಿಗೆ ಭೇಟಿ ಮಾಡಿ ಜಾನುವಾರಗಳ ಪಾರಂಗಳು ಹಾಗೂ ಅಡಿಕೆತೋಟಗಳು ತುಂಬಿ ಕೊಡಿಹೋಗುವ ಕೆರೆಯನ್ನು ನೋಡಲು ಖುಷಿಯಾಗುತ್ತದೆ. ತೋಟಗಾರಿಕೆಯ ಇಲಾಖೆಯ ವಿವಿಧ ಜಾತಿಯ ಹಣ್ಣಿನ ಮರಗಳು,ಮೀನುಸಾಕಿಣಿಕೆ ಕೇಂದ್ರದ ಬಣ್ಣ ಬಣ್ಣದ ಮೀನಿನ ಮರಿಗಳು ನೋಡಲು ಬಹಳ ಸುಂದರವಾಗಿರುತ್ತವೆ .. ಇದು ರಜಾ ದಿನಗಳಲ್ಲಿ ಕಾಲ ಕಳೆಯಲು ಒಂದು ಸೂಕ್ತವಾದ ಸ್ಥಳ
ಪ್ರತ್ಯುತ್ತರಅಳಿಸಿ