ಸೋಮವಾರ, ನವೆಂಬರ್ 18, 2019

ವೀರಗಾಸೆ

ಕೃಪೆ: YouTube

ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜಾನಪದ ಕಲೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚವಾದ್ಯಗಳಾದ ತಾಳ, ಶ್ರುತಿ, ಚಮಾಳ, ಓಲಗ, ಕರಡೆ ಬಳಕೆಯಾಗುತ್ತವೆ. ಕಂಡೆಯು ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ವೀರಗಾಸೆ ಕುಣಿತದವರ ವೇಷ-ಭೂಷಣ ವಿಶೇಷವಾಗಿರುತ್ತದೆ. ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕರ್ಣಕುಂಡಲ, ಸೊಂಟಪಟ್ಟಿ, ಬಿಚ್ಚುಗತ್ತಿ, ಕಾಲ್ಗೆಜ್ಜೆ ಧರಿಸುತ್ತಾರೆ.

ಚಮಾಳ ಹಾಗೂ ಕರಡೆಯ ಬಡಿತ ಇವರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಆನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ, ಕುಣಿತ ಮತ್ತು ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.

ವೀರಭದ್ರನ ಕುಣಿತ ಒಬ್ಬ ವ್ಯಕ್ತಿಯ ಕುಣಿತ. ವೀರಗಾಸೆ ಸಾಮೂಹಿಕ ನೃತ್ಯ. ವೀರಭದ್ರ ಕುಣಿತಕ್ಕೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಲಿಂಗಬೀರ, ಲಿಂಗಧೀರ, ಲಿಂಗವೀರ ಕುಣಿತವೆಂದು ಹೆಸರಿದೆ. ಉತ್ತರ ಕರ್ನಾಟಕದಲ್ಲಿ ಪುರವಂತರ ಕುಣಿತವೆಂದು ಜನಪ್ರಿಯವಾಗಿದೆ. ಕೆಲ ವೀರಶೈವ ಸಂಪ್ರದಾಯದ ಕುಟುಂಬದವರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ವೀರಭದ್ರನ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಇದಕ್ಕೆ "ಖಡ್ಗ" ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ "ಒಡಪು" ಎನ್ನುವರು. ಮೊತ್ತೊಬ್ಬ ವ್ಯಕ್ತಿ "ಭಲರೇ ವೀರ.. ಆಹಾ ವೀರ.." ಎಂದು ಕಾಕು ಹೇಳುತ್ತಾ ಜಾಗಟೆ ಬಡೆಯುತ್ತಾ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ, ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ವೀರಭದ್ರನ ಕುಣಿತ ಏರ್ಪಡಿಸುತ್ತಾರೆ. ವೀರಗಾಸೆಯು ದೊಡ್ಡ ಕಾರ್ಯಕ್ರಮಗಳಲ್ಲಿ ಮನರಂಜನೆಗಾಗಿಯೂ ಪ್ರದರ್ಶನವಾಗುತ್ತದೆ. ಈ ಕುಣಿತವು ನೋಡುವವರಿಗೆ ರೋಮಾಂಚನವನ್ನು ಉಂಟುಮಾಡುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಅಂಬಿಕ, ಬಿ. ಎಸ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು: