ಬುಧವಾರ, ನವೆಂಬರ್ 30, 2016

ಒಡಲಾಳ - ದೇವನೂರ ಮಹಾದೇವ

ಒಡಲಾಳ - ದೇವನೂರ ಮಹಾದೇವ

ಶೀರ್ಷಿಕೆ: ಒಡಲಾಳ
ಲೇಖಕರು: ದೇವನೂರ ಮಹಾದೇವ
ಪ್ರಕಾಶಕರು: ನವ್ವಾಲೆ ಪ್ರಕಾಶನ, ಕುವೆಂಪುನಗರ, ಮೈಸೂರು. 
ಪ್ರಧಮ ಮುದ್ರಣ: 2003 

ಪುಸ್ತಕ ಕುರಿತು: ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ 'ಒಡಲಾಳ' ಎಂಬೊಂದು ಕಥೆ ಬರೆದರು. ಓದಿದವರಿಗೆ ಗುಂಗು ಹಿಡಿಸುವ ಕತೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಪ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಫಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತಗಳನ್ನು ಹುಟ್ಟಿಹಾಕಬಲ್ಲವು ಎಂಬುದನ್ನು ತಮ್ಮ ಗಮನಕ್ಕೆ ತರುವುದಕ್ಕೆ ಈ ಮಾತು ಹೇಳಿದೆ. ಕೃತಿಯನ್ನು ಅರಿಯಲು ಲೋಕದ ಮಾನದಂಡಗಳನ್ನು ಹುಡುಕುವ ನಮಗೆ 'ಅಯ್ಯಾ ಹಾಗಲ್ಲ, ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು' ಎಂದು ಇಂಥ ಕೃತಿಗಳು ಕೇಳುತ್ತವೆ. - ಡಾ. ಕೆ.ವಿ. ನಾರಾಯಣ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಪರಿಚಯಿಸುವ ಅಭಿಲಾಷೆಯೊಂದಿಗೆ ಮೂಡಿಬಂದ ಕಹಳೆ ಆರನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.

ಮಂಗಳವಾರ, ನವೆಂಬರ್ 29, 2016

ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್! - ಚಿರಂಜೀವಿ

ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್! - ಚಿರಂಜೀವಿ

ಶೀರ್ಷಿಕೆ: ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್!
ಮೂಲ ಲೇಖಕರು: ಸ್ವಾಮಿ ಸುಖಬೋಧಾನಂದ
ಕನ್ನಡ ಅನುವಾದ: ಚಿರಂಜೀವಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಕೆಂಪೇಗೌಡನಗರ, ಬೆಂಗಳೂರು. 
ಪ್ರಧಮ ಮುದ್ರಣ: 2000
ಐ.ಎಸ್.ಬಿ.ಎನ್.: 81-7531-024-3

ಪುಸ್ತಕ ಕುರಿತು: ಮತಗಳನ್ನೂ ಮನುಷ್ಯ-ಮನಸ್ಸುಗಳನ್ನೂ ಒಂದಾಗಿ ನೇಯ್ದು ಹೆಣೆಯುವಂಥ ಯಾವ ಪುಸ್ತಕವಾದರೂ ಆಗಲಿ, ಅದನ್ನು ಒಂದು ಸಲ ಆ ಕೊನೆಯಿಂದ ಈ ಕೊನೆಯವರೆಗೆ ಓದಿ ಮಗುಚಿಟ್ಟುಬಿಟ್ಟರೆ ಅದರಿಂದ ಪೂರ್ಣ ಪ್ರಯೋಜನ ದೊರೆಯಲಾರದು. ನಮ್ಮನ್ನು ನಾವು ಬೆಳೆಸಿಕೊಳ್ಳಬೇಕಾದರೆ ಇಂಥ ಸಾಹಿತ್ಯವನ್ನು ಅವಧಾನಪೂರ್ವಕ ಮತ್ತೆ ಮತ್ತೆ ಓದಿ ಮನನ ಮಾಡಬೇಕಾಗುತ್ತದೆ. ಈ ಪುಸ್ತಕದಲ್ಲಿ ಹೇಳಿರುವ ವಿಷಯಗಳನ್ನು ತಾಳ್ಮೆಯಿಂದ ಓದಿ, ತೂಗಿನೋಡಿ, ಚಿಂತನೆಗೊಳಪಡಿಸಿ, ಅಂದಂದಿನ ಬದುಕಿನಲ್ಲಿ ಜಾರಿಗೆ ತರಲು ಪ್ರಯತ್ನಿಸಿ ನೋಡಿ. ಆಗ ಅವೇ ಮಾತುಗಳು ನಿಮ್ಮ ಅರಿವನ್ನು ಜಾಗೃತಗೊಳಿಸಿ ನಿಮ್ಮನ್ನು ಇಡಿಯಾಗಿ ಬದಲಾಯಿಸಿಯಾವು! ನಾನು ಇಲ್ಲಿ ಬಳಸಿರುವ ವಿಷಯಗಳೂ ಉಪಕಥೆಗಳೂ ಹಿಂದೂ, ಬೌದ್ಧ, ಜೈನ, ಸೂಫೀ ಮೊದಲಾದ ಅನೇಕ ಮತಗಳ ಆಧಾರಗ್ರಂಥಗಳಿಂದ ಹೆಕ್ಕಿತೆಗೆದಂಥವು. ಪ್ರಸಿದ್ಧರಾದವರ ಹಾಗೂ ಅಜ್ಞಾತ ಜನಸಾಮಾನ್ಯರ ಜೀವನಗಳಿಂದಲೂ ಎಷ್ಟೊ ನೀತಿಗಳನ್ನು ತೆಗೆದು ಅಳವಡಿಸಿದ್ದೇನೆ. ಹೀಗಿರುವುದರಿಂದ, ಇಲ್ಲಿ ತೋರಿರುವ ದಿಕ್ಸೂಚಕ ಸೂತ್ರಗಳನ್ನು ಬದುಕಿನಲ್ಲಿ ಅನ್ವಯಿಸುವುದು ಕಠಿಣವಾಗಲಾರದು. ನೀವು ಪ್ರಯತ್ನ ಮಾಡಿ ನೋಡಿ; ನಿಮ್ಮ ಪ್ರಯತ್ನಗಳಿಗೆ ಫಲ ಖಂಡಿತ ಉಂಟು. - ಸ್ವಾಮಿ ಸುಖಬೋಧಾನಂದ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಸೋಮವಾರ, ನವೆಂಬರ್ 28, 2016

ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಪ್ರೊ. ಎಂ. ನಾರಾಯಣಸ್ವಾಮಿ

ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಪ್ರೊ. ಎಂ. ನಾರಾಯಣಸ್ವಾಮಿ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ
ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ
ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು. 
ಪ್ರಧಮ ಮುದ್ರಣ: 2012
ಐ.ಎಸ್.ಬಿ.ಎನ್.: 978-81-925246-4-1

ಪುಸ್ತಕ ಕುರಿತು: ಲಕ್ಷ್ಮಣಯ್ಯನವರ ಜನನ 1921ರ ಮೇ 15 ರಂದು ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದು. ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ 1946ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್.ಸಿ. ಪದವಿ. ರೈಲ್ವೆ ಇಲಾಖೆಯಲ್ಲಿ ಅಲ್ಪ ಕಾಲದ ಸೇವೆಯ ನಂತರ, 1949ರಲ್ಲಿ ಮಂಡ್ಯದ ವಿಸಿ ಫಾರಂನಲ್ಲಿ 'ಕಿರಿಯ ಸಹಾಯಕ ಸಸ್ಯ ಶಾಸ್ತ್ರಜ್ಞ'ರಾದರು. 1964ರ ಹೊತ್ತಿಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ತಳಿಗಳನ್ನು ಲಕ್ಷ್ಮಣಯ್ಯನವರು ಬಿಡುಗಡೆ ಮಾಡಿದರು. 1964ರ ನಂತರ ದೇಸೀ ರಾಗಿ ತಳಿಗಳನ್ನು ಆಫ್ರಿಕಾ ದೇಶದ ರಾಗಿ ತಳಿಗಳೊಂದಿಗೆ ಸಂಕರಣ ಮಾಡಿ ಇಂಡಾಫ್ 1ರಿಂದ ಇಂಡಾಫ್ (ಇಂಡಿಯಾ + ಆಫ್ರಿಕಾ) 15ರವರೆಗೆ ಅಧಿಕ ಇಳುವರಿ ರಾಗಿ ತಳಿಗಳನ್ನು ಅಭಿವೃದ್ಧಿಗೊಳಿಸಿದರು. ಇದರಿಂದ ಎಕರೆಗೆ ಐದಾರು ಕ್ವಿಂಟಾಲ್ ರಾಗಿ ಇಳುವರಿಯ ಬದಲಿಗೆ ಎಕರೆಗೆ 15ರಿಂದ 20 ಕ್ವಿಂಟಾಲ್ ರಾಗಿ ಬೆಳೆಯಲು ಸಾಧ್ಯವಾಯಿತು. ಇದರ ಪರಿಣಾಮವಾಗಿ ಕೋಟ್ಯಾಂತರ ಜನರ ಹಸಿವು ನೀಗಿತು. ಇದನ್ನು "ಕರ್ನಾಟಕದ ಹಸಿರು ಕ್ರಾಂತಿ" ಎನ್ನಬಹುದು. - ಪ್ರಕಾಶಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಭಾನುವಾರ, ನವೆಂಬರ್ 27, 2016

ಮಾಲ್ಗುಡಿ ದಿನಗಳು - ಡಾ. ಎಚ್. ರಾಮಚಂದ್ರ ಸ್ವಾಮಿ

ಮಾಲ್ಗುಡಿ ದಿನಗಳು - ಡಾ. ಎಚ್. ರಾಮಚಂದ್ರ ಸ್ವಾಮಿ

ಶೀರ್ಷಿಕೆ: ಮಾಲ್ಗುಡಿ ದಿನಗಳು
ಮೂಲ ಲೇಖಕರು: ಆರ್. ಕೆ. ನಾರಾಯಣ್
ಕನ್ನಡ ಅನುವಾದ: ಡಾ. ಎಚ್. ರಾಮಚಂದ್ರ ಸ್ವಾಮಿ
ಪ್ರಕಾಶಕರು: ಪ್ರಿಸಮ್ ಬುಕ್ಸ್ ಪ್ರೈ. ಲಿ., ಬನಶಂಕರಿ 2ನೇ ಹಂತ, ಬೆಂಗಳೂರು.
ಪ್ರಧಮ ಮುದ್ರಣ: 2009
ಐ.ಎಸ್.ಬಿ.ಎನ್.: 978-81-7286-588-7

ಪುಸ್ತಕ ಕುರಿತು: ಆರ್ .ಕೆ. ನಾರಾಯಣ್ ಅವರ ಬರಹವೆಂದರೆ ದಕ್ಷಿಣ ಭಾರತದ ಮಧ್ಯಮವರ್ಗದ ಜನರಿಗೆ ಒಂದು ರಸದೌತಣವಿದ್ದಂತೆ. ಅವರ ಕಲ್ಪನೆಯ ಮಾಲ್ಗುಡಿ ನಮ್ಮ ಮನೋರಾಜ್ಯದ ಆಶೋತ್ತರಗಳನ್ನೆಲ್ಲ ಸಾಕರಗೊಳಿಸುವ ಯಶಸ್ವೀ ಪ್ರಯತ್ನ. ಇಂಗ್ಲೀಷಿನಂತಹ ಪರಕೀಯ ಭಾಷೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ, ನಿಜ; ಆದರೆ ನಮ್ಮ ಮನಸ್ಸಿಗೂ ಕೊಡಿಸಿ ಕೊಟ್ಟು ಅದನ್ನು ನಮ್ಮದೇ ಭಾಷೆಯನ್ನಾಗಿ ಮಾಡಿಬಿಟ್ಟಿವೆ, ಆರ್. ಕೆ. ನಾರಾಯಣ್ ಅವರ ಕೃತಿಗಳು. ಮಾಲ್ಗುಡಿಯ ವರ್ಣಮಯ ಜೀವನಸಿರಿಗೆ ಮೂವತ್ತೆರಡು ಸಣ್ಣ ಕಥೆಗಳನ್ನು ಸೇರಿಸುವ ಮೂಲಕ ಅದರ ರುಚಿವೈವಿಧ್ಯವನ್ನು 'ಮಾಲ್ಗುಡಿ ದಿನಗಳು' ಇನ್ನೂ ಹೆಚ್ಚಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. 'ಮಾಲ್ಗುಡಿ ಎಲ್ಲಿದೆ?' ಎಂದು ಕೇಳಿದವರಿಗೆ ಅದು ದಕ್ಷಿಣ ಭಾರತದ ಕಾಲ್ಪನಿಕವಾದ ಒಂದು ಪುಟ್ಟ ಊರು ಎಂದರೆ ಅರ್ಧಸತ್ಯ ಅಷ್ಟೇ; ಏಕೆಂದರೆ ಮಾಲ್ಗುಡಿಯ ವ್ಯಕ್ತಿಗಳು ಎಲ್ಲಲ್ಲೂ ಕಂಡುಬರುವಂಥವರು ಎನ್ನುವ ಆರ್. ಕೆ. ನಾರಾಯಣ್ ಒಬ್ಬ ಮಾಂತ್ರಿಕ ಕಥೆಗಾರ-ಪದಗಳ ಅದ್ಭುತ ನೇಯ್ಗೆಯಲ್ಲಿ ಅನುಪಮ ಸುಂದರ ಕನಸುಗಳನ್ನು ಮಾಸದ ಹಾಗೆ ಹಿಡಿದು ಕಟ್ಟಿಕೊಡುವ ಕಲೆ ಅವರಿಗೆ ಸಿದ್ಧಿಸಿದೆ. ಹಾಗೆಂದೇ ಅವರ ಸಾಹಿತ್ಯ ಬಹುಕಾಲ ನಿಲ್ಲಬಲ್ಲುದಾಗಿದೆ, ಲೋಕವಿಖ್ಯಾತವಾಗಿದೆ. - ಪ್ರಕಾಶಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶನಿವಾರ, ನವೆಂಬರ್ 26, 2016

ಭಾವನಾತ್ಮಕ ಬದುಕು - ಡಾ. ಜೆ. ಎಸ್. ಅಶ್ವತ್ಥ ಕುಮಾರ್

ಭಾವನಾತ್ಮಕ ಬದುಕು - ಡಾ. ಜೆ. ಎಸ್. ಅಶ್ವತ್ಥ ಕುಮಾರ್

ಶೀರ್ಷಿಕೆ: ಭಾವನಾತ್ಮಕ ಬದುಕು
ಲೇಖಕರು: ಡಾ. ಜೆ. ಎಸ್. ಅಶ್ವತ್ಥ ಕುಮಾರ್
ಪ್ರಕಾಶಕರು: ಸಂಸ್ಕೃತಿ ಪ್ರಕಾಶನ, ಆದರ್ಶ ಕಾಲೋನಿ, ಬಳ್ಳಾರಿ. 
ಪ್ರಧಮ ಮುದ್ರಣ: 2012

ಪುಸ್ತಕ ಕುರಿತು: ಪ್ರಾಣಿಗಳೊಂದಿಗೆ ಕೆಲ ಕಾಲ ಒಡನಾಟವಿಟ್ಟುಕೊಂಡರೆ, ಅವುಗಳನ್ನು ಅಪರಿಮಿತವಾಗಿ ಪ್ರೀತಿಸಿದರೆ ಅದರಿಂದ ಸಿಕ್ಕುವ ಅನುಭವಗಳೇ ಬೇರೆ, ಬಹುಶಃ ಮತ್ಯಾವ ಮಾಧ್ಯಮದಿಂದಲೂ ಇಂಥಹ ಪ್ರೀತಿ, ಪ್ರೇಮವನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಅಂಥಹ ನನ್ನ ಕೆಲವು ಅನುಭವಗಳನ್ನು ಇಲ್ಲಿ ನೀಡಿದ್ದೇನೆ. ಈ ಅನುಭವಗಳನ್ನು ನಾನು ಪತ್ಪ್ರೇಕ್ಷೆ ಮಾಡಿ ಬರೆದಿಲ್ಲ, ಅವು ವಾಸ್ತವವಾಗಿ ನಡೆದ ಘಟನೆಗಳ ದಾಖಲೆಗಳಷ್ಟೇ. ಪ್ರಾಣಿಗಳು ಹುಟ್ಟುವುದಕ್ಕೆ ಹೋರಾಡಬೇಕು, ಬೆಳೆಯುವಾಗ ಶತ್ರುಗಳನ್ನೆದುರಿಸಬೇಕು, ಆಹಾರಕ್ಕಾಗಿ ಹರ ಸಾಹಸ ಪಡಬೇಕು, ತನ್ನದೇ ಒಂದು ಗೂಡು ಕಟ್ಟುವುದೇ ಅವುಗಳಿಗೆ ಒಂದು ಸಾಧನೆ, ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಒಲಿಸಿಕೊಳ್ಳಲು ಹಠ ಬೇಕು, ತಾಳ್ಮೆ ಬೇಕು, ಪ್ರತಿಸ್ಪರ್ಧಿಗಳನ್ನೆದುರಿಸಿ ಕಾದಾಡಿ ಸಂಗಾತಿ ಕೈ ಹಿಡಿಯಬೇಕು. ಹೀಗೆ ಜೀವನದ ಪ್ರತಿ ಹಂತವೂ ಹೋರಾಟದಿಂದಲೇ ಸಾಗಬೇಕು. ಇಡಿಯ ಜೀವನವನ್ನು ಗಾಳಿಗಿಟ್ಟ ದೀಪವನ್ನು ಕಾಪಾಡಿದಂತೆ ಉಸಿರು ಬಿಗಿಹಿಡಿದು ಎಚ್ಚರವಹಿಸಬೇಕು. ಎಲ್ಲವೂ ಅನಿಶ್ಚಿತ. ಆದರೂ ಬದುಕುವ ಛಲವಿದೆ, ಸಂತತಿ ಬೆಳೆಸುವ ಬಯಕೆಯಿದೆ, ತೊಡಕು ತೊಂದರೆಗಳ ನಡುವೆಯೇ ಹರ್ಷ ಪಡುವ ವಿಶಾಲ ಮನೋಭಾವವನ್ನು ಕಾಪಾಡಿಕೊಂಡೇ ಜೀವಿಸುವ ಪ್ರಾಣಿಗಳಿಂದ ನಾವು ಕಲಿಯಲು ಸಾಕಷ್ಟಿದೆಯಲ್ಲವೇ? ಈ ಪುಸ್ತಕದ ಪ್ರಯೋಜನ ಕೆಲವರಿಗೆ ಕೆಲವು ತೆರನಾಗಿರಬಹುದು, ವಿದ್ಯಾರ್ಥಿಗಳಿಗೆ ಮಾಹಿತಿ ಸಾಕಾದರೆ, ಬದುಕನ್ನು ಅರ್ಥಮಾಡಿಕೊಳ್ಳಬಯಸುವವರಿಗೆ ಇದೊಂದು ವ್ಯಕ್ತಿತ್ವ ವಿಕಸನದ ಪುಸ್ತಕವಾಗಿ ಪ್ರಯೋಜನಕ್ಕೆ ಬರಬಹುದು. ನಿಮಗಿದು ಇಷ್ಟವಾದರೆ, ನನ್ನ ಶ್ರಮ ಸಾರ್ಥಕವಾದಂತೆ. - ಡಾ. ಜೆ. ಎಸ್. ಅಶ್ವತ್ಥ ಕುಮಾರ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶುಕ್ರವಾರ, ನವೆಂಬರ್ 25, 2016

ಉಯ್ಯಾಲೆ - ಚದುರಂಗ

ಉಯ್ಯಾಲೆ - ಚದುರಂಗ

ಶೀರ್ಷಿಕೆ: ಉಯ್ಯಾಲೆ
ಲೇಖಕರು: ಚದುರಂಗ
ಪ್ರಕಾಶಕರು: ಅಭಿರುಚಿ ಪ್ರಕಾಶನ, ಸರಸ್ವತೀಪುರ, ಮೈಸೂರು. 
ಪ್ರಧಮ ಮುದ್ರಣ: 1960
ಐ.ಎಸ್.ಬಿ.ಎನ್.: 81-7877-006-7

ಪುಸ್ತಕ ಕುರಿತು: ಸರ್ವಮಂಗಳೆಯನ್ನು ಸೃಷ್ಟಿಸಿ ಓದುಗರ ಮನಸ್ಸನ್ನು ತಮ್ಮತ್ತ ಸೆಳೆದುಕೊಂಡ ಗೆಳೆಯ ಚದುರಂಗರು ರಾಧೆಯನ್ನು, ಶೇಷಗಿರಿಯನ್ನು, ಕೃಷ್ಣೇಗೌಡರನ್ನು, ಪ್ರಭಾವತಿಯನ್ನು - ಜೀವಂತವಾಗಿ ಹಲವು ಪಾತ್ರಗಳನ್ನು - ನಮ್ಮ ಮುಂದೆ ನಿಲ್ಲಿಸಿದ್ದಾರೆ. ಸುಂದರಿ ರಾಧೆ, ಪುಸ್ತಕಪ್ರಿಯ ಶೇಷಗಿರಿ, ಜೀವನೋಲ್ಲಾಸಿ ಕೃಷ್ಣೇಗೌಡ, ಸುಕುಮಾರಿ ಮುಗ್ದೆ ಪ್ರಭಾವತಿ, ಒಳ್ಳೆಯವನಾದರೂ ಪುಸ್ತಕದ ಹಾಳೆಯಲ್ಲಿ ಹುದುಗಿ, ಹೆಂಡತಿ ರಾಧೆಯ ಸುತ್ತ ಅಸಹನೆಯ ಕೋಟೆ ಬೆಳೆಯಲು ಕಾರಣನಾಗಿ ಓದುಗರಿಂದ ಸಹಾನುಭೂತಿಯ ನಿಟ್ಟುಸಿರನ್ನು ಸಂಪಾದಿಸುವ ಶೇಷಗಿರಿ, ರಾಧೆ-ಶೇಷಗಿರಿಗಳ ನಡುವೆ ಬಂದು, ಪ್ರಭಾವತಿಯ ಪ್ರೀತಿಯನ್ನೂ ರಾಧೆಯ ಒಲವನ್ನೂ ಗಳಿಸಿ, ಅವರ ಸಂಸಾರದಲ್ಲಿ ಸ್ನೇಹದ ಒರತೆಯನ್ನು ಹರಿಸಲೆತ್ನಿಸಿದ ಕೃಷ್ಣೇಗೌಡ, ಜನ್ಮತಃ ಕಲಾವಿದೆಯಾದ ಪುಟ್ಟ ಪ್ರಭಾವತಿ. ಹೀಗೆ ಈ ಪಾತ್ರಗಳು ನಿಚ್ಚಳವಾಗಿ ನಿಲ್ಲುತ್ತವೆ. ರಾಧೆ ಕೃಷ್ಣೇಗೌಡರು ಪರಸ್ಪರ ಆಕರ್ಷಣೆಗೆ ಗುರಿಯಾಗಿದ್ದಾಗ ಬರುವ ಹಾವಿನ ಪ್ರಸಂಗ ಎಷ್ಟು ಎದೆ ನಡುಗಿಸುವುದೋ ಅಷ್ಟೇ ಮಾರ್ಮಿಕವಾಗಿದೆ. ಚದುರಂಗರು ಪ್ರಯತ್ನಿಸಿದರೆ ಮನಸ್ಸಿನ ಅಂತರಾಳದ ನಾನಾ ಪದರಗಳನ್ನು ಬಿಚ್ಚಿರಿಸಬಲ್ಲರು ಎಂಬುದಕ್ಕೆ ಇದು ದ್ಯೋತಕವಾಗಿದೆ. - ಎಚ್ಚೆಸ್ಕೆ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಗುರುವಾರ, ನವೆಂಬರ್ 24, 2016

ಗರ್ಭಗುಡಿ - ಅನುಪಮಾ ಸತೀಶ್

ಗರ್ಭಗುಡಿ - ಅನುಪಮಾ ಸತೀಶ್

ಶೀರ್ಷಿಕೆ: ಗರ್ಭಗುಡಿ
ಲೇಖಕರು: ಅನುಪಮಾ ಸತೀಶ್
ಪ್ರಕಾಶಕರು: ಸಮೃದ್ಧ ಸಾಹಿತ್ಯ, ಹನ್ನೊಂದನೇ 'ಬಿ' ಅಡ್ಡರಸ್ತೆ, ವಿಠಲನಗರ, ಬೆಂಗಳೂರು. 
ಪ್ರಧಮ ಮುದ್ರಣ: 2015
ಐ.ಎಸ್.ಬಿ.ಎನ್.: 978-81-931900-1-2

ಪುಸ್ತಕ ಕುರಿತು: ಪ್ರತಿಯೊಂದು ಹೆಣ್ಣಿಗೂ ಅತ್ಯಂತ ಸಂತಸದ ಬಯಕೆಯೆಂದರೆ ತನ್ನ ಮಗುವನ್ನು ಪಡೆಯುವುದು. ತಾಯ್ತನ ಮೇರಿದ ಸಂಭ್ರಮವಿಲ್ಲ. ಜೀವನದಲ್ಲಿ ಯಾವುದು ಪ್ರಾಮುಖ್ಯವೋ ಅದೇ ಇಲ್ಲದಿದ್ದಲ್ಲಿ ಬದುಕಿ ಪ್ರಯೋಜನವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲಿನ ಪ್ರಶ್ನೆಗೆ ಉತ್ತರದಂತೆ 'ಗರ್ಭಗುಡಿ' ಬಯಕೆ ಈಡೇರದ ತಾಯಿಯ ಒಂದು ಸತ್ಯಕಥೆ. ವೈವಾಹಿಕ ಜೀವನದ ಪ್ರಾರಂಭದಲ್ಲೇ ಮಗು ಬೇಡವೆಂದು ನಿರ್ಧರಿಸಿ ಗರ್ಭಪಾತ ಚಿಕಿತ್ಸೆಯಿಂದಾಗಿ ಮುಂದೆ ಮಕ್ಕಳೇ ಆಗದಂತಹ ಪರಿಸ್ಥಿತಿಯನ್ನು ಎದುರಿಸಿದ ಒಂದು ಸಂದರ್ಭ. ಮಗುವನ್ನು ಪಡೆಯಲು ಮಾಡಿದ ಪೂಜೆ, ಪುನಸ್ಕಾರಗಳು, ವ್ರತಗಳು, ಹರಕೆಗಳ ಸತ್ಯದರ್ಶನವಿದೆ. ಜ್ಯೋತಿಷಿಗಳಿಂದ ಹಿಡಿದು ಪವಾಡಪುರುಷರವರೆಗೂ ಭೇಟಿ ನೀಡಿದ ವಿವರಗಳಿವೆ. ಆಧುನಿಕ ಜಗತ್ತಿನ ವೈದ್ಯಕೀಯ ಚಿಕಿತ್ಸಾಕ್ರಮಗಳ ಮಾಹಿತಿಯೂ ಇದೆ. ಯಾವುದೇ ರೀತಿಯ ಪರಿಹಾರವು ಯಶಸ್ವೀಯಾಗದಿದ್ದಾಗ ಜೀವನಕ್ರಮವನ್ನೇ ಬದಲಿಸಿಕೊಂಡು ಮಗುವಿಲ್ಲದ ಬದುಕಿಗೆ ಸಾರ್ಥಕತೆಯನ್ನು ಕಲ್ಪಿಸಿರುವ ಒಂದು ನಿದರ್ಶನ. ಜೊತೆಗೆ ಸಮಾಜಕ್ಕೆ ಬೇಕಾಗುವ ಒಂದು ಮಾದರಿ ವ್ಯಕ್ತಿಯಾಗಿದ್ದಾರೆ ಅನುಪಮ. ಎಲ್ಲ ಸಂದರ್ಭಗಳಲ್ಲಿಯೂ ಅವರ ಪತಿ ಸತೀಶ್ ರವರ ಸಹಕಾರ ಎದ್ದು ಕಾಣುತ್ತದೆ. ಮಕ್ಕಳನ್ನು ಪಡೆಯಲು ಸಮಸ್ಯೆಯಿರುವ ಎಲ್ಲಾ ಮಹಿಳೆಯರಿಗೆ ಒಂದು ಅದ್ಭುತ ಮಾರ್ಗದರ್ಶಿ. ಜೊತೆಗೆ ಪ್ರೀತಿಯ ಹಾಗೂ ಯಶಸ್ವೀ ಜೀವನ ನಡೆಸಲು ಹಲವಾರು ಉದಾಹರಣೆಗಳಿವೆ. ಕನ್ನಡ ಸಾಹಿತ್ಯದ ಒಂದು ಅಪರೂಪದ ಕೃತಿ. - ಬಿ. ಆರ್. ಪ್ರಸಾದ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಬುಧವಾರ, ನವೆಂಬರ್ 23, 2016

ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ - ಡಾ. ಮೀನಗುಂಡಿ ಸುಬ್ರಮಣ್ಯ

ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ - ಡಾ. ಮೀನಗುಂಡಿ ಸುಬ್ರಮಣ್ಯ

ಶೀರ್ಷಿಕೆ: ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ 
ಲೇಖಕರು: ಡಾ. ಮೀನಗುಂಡಿ ಸುಬ್ರಮಣ್ಯ 
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಕ್ರೆಸೆಂಟ್ ರಸ್ತೆ, ಬೆಂಗಳೂರು. 
ಪ್ರಧಮ ಮುದ್ರಣ: 1988
ಐ.ಎಸ್.ಬಿ.ಎನ್.: 978-81-7302-037-7

ಪುಸ್ತಕ ಕುರಿತು: ಎಲ್ಲಿಂದಲಾದರೂ ಓದಲು ಪ್ರಾರಂಭಿಸಿದರೆ ಸರಿಯಾಗಿ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ. ಒಂದು ವಾಕ್ಯದಲ್ಲಿ ಮಂಡಿಸಿದ ವಿಷಯ ಸರಿ ಅಲ್ಲ ಎಂದು ನಿಮಗೆ ಅನಿಸಿದರೆ, ದಯಮಾಡಿ, ಆ ಅಧ್ಯಾಯ ಮುಗಿಯುವವರೆಗೆ ನಿಮ್ಮ ನಿರ್ಣಯವನ್ನು ಕಾಯ್ದಿರಿಸಿ. ಈ ಪುಸ್ತಕದ ವಿಷಯ ಮನಸ್ಸು ಅಥವಾ ಮನಶ್ಶಾಸ್ತ್ರ ಅಲ್ಲ. ಈ ಪುಸ್ತಕ ಬರೆದಿರುವುದು ಮನುಷ್ಯರ ಬಗ್ಗೆ. ಎಂದರೆ ನಮ್ಮ ಬಗ್ಗೆ, ನಮ್ಮ ಸಹವರ್ತಿಗಳ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ನಮ್ಮ ಜೀವನ ಶೈಲಿಯ ಬಗ್ಗೆ. ಮಾನಸಿಕ ಸಮಸ್ಯೆಗಳ ಬಗ್ಗೆ ಪ್ರಚಲಿತವಿರುವ ಕೆಲವು ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ನಂಬಿಕೆಗಳ ಔಚಿತ್ಯವನ್ನು ನಾನು ಪ್ರಶ್ನಿಸಿದ್ದೇನೆ. ನಾನು ಮಂಡಿಸಿರುವ ವಾದಗಳಿಗೆ, ನಾನು ಎತ್ತಿರುವ ಪ್ರಶ್ನೆಗಳಿಗೆ ಸರಿಯಾದ ಸಾಂಪ್ರದಾಯಿಕ ವೈಜ್ಞಾನಿಕ ಉತ್ತರಗಳು ಇವೆ ಎಂಬ ಅರಿವು ನನಗಿದೆ. ಆದರೆ ಆ ಉತ್ತರಗಳು ಕೇವಲ ಉತ್ತರಗಳಾಗಿಯೇ ಉಳಿಯುತ್ತವೇ ವಿನಾ ಅವುಗಳಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಇಲ್ಲಿನ ವಾದಗಳೆಲ್ಲ ಸಮಸ್ಯೆಯನ್ನು ಪರಿಹಾರ ಮಾಡುವುದು ಹೇಗೆ ಎಂಬ ಚಿಕಿತ್ಸಾ ತಂತ್ರಗಳ ಕುರಿತದ್ದು. 'ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ' ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ 'ತಲೆ ಸರಿ ಇರುವವರು' ಕೂಡ ಸೈಕಾಲಜಿ ತಿಳಿದು ತಮ್ಮ 'ಸರಿಯಾದ' ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಕನ್ನಡ ಓದುವ ಎಲ್ಲರಿಗೂ ಅರ್ಥವಾಗುವಂತೆ ನಿತ್ಯ ಬಳಕೆಯಲ್ಲಿರುವ ಶಬ್ಧಗಳನ್ನೇ ಉಪಯೋಗಿಸಬೇಕು ಎಂಬ ಮಿತಿ ಹಾಕಿಕೊಂಡು ಬರೆಯಲು ಶುರು ಮಾಡಿದಾಗ 'ಭಾಷಾ ಸಮಸ್ಯೆ' ಎದುರಿಸಬೇಕಾಯಿತು. ಕನ್ನಡದಲ್ಲೇ ಮಾತನಾಡಿ ಚಿಕಿತ್ಸೆ ಪಡೆದ, ಚೆನ್ನಾಗಿ ಇಂಗ್ಲೀಷ್ ಗೊತ್ತಿರುವ ನನ್ನ ಸಮಸ್ಯಾ ವ್ಯಕ್ತಿಗಳೊಡನೆ ಸುಮಾರು ಐದು ವರ್ಷಗಳಿಂದ ಚರ್ಚಿಸಿ, ಪ್ರಯೋಗದಲ್ಲಿ ಸರಾಗವಾಗಿ ಅಂಗೀಕರಿಸಲ್ಪಟ್ಟ ಭಾಷಾ ಸೂತ್ರವನ್ನು ನೀವು ಅಂಗೀಕರಿಸುತ್ತೀರಿ ಎಂದು ಆಶಿಸುತ್ತೇನೆ. - ಡಾ. ಮೀನಗುಂಡಿ ಸುಬ್ರಮಣ್ಯ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಮಂಗಳವಾರ, ನವೆಂಬರ್ 22, 2016

ತುಘಲಕ್ - ಗಿರೀಶ ಕಾರ್ನಾಡ

ತುಘಲಕ್ - ಗಿರೀಶ ಕಾರ್ನಾಡ

ಶೀರ್ಷಿಕೆ: ತುಘಲಕ್
ಲೇಖಕರು: ಗಿರೀಶ ಕಾರ್ನಾಡ
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ. 
ಪ್ರಧಮ ಮುದ್ರಣ: 1964
ಐ.ಎಸ್.ಬಿ.ಎನ್.: 81-85728-90-9


ಅರ್ಪಣೆ: ಪ್ರಿಯ ಕೃಷ್ಣ, ಎರಡು ವರ್ಷಗಳ ಹಿಂದೆ ಪ್ಯಾರಿಸಿನಲ್ಲಿ ನಾವು ನಡೆಸಿದ ಚರ್ಚೆಯ ಫಲ ಈ ನಾಟಕ. ಇದರಲ್ಲಿಯ ಒಳ್ಳೆಯ ಅಂಶಗಳಿಗೆಲ್ಲ ನಾನು ನಿನಗೆ ಋಣಿಯಾಗಿದ್ದೇನೆ. ಹಾಗೆ ನೋಡಿದರೆ ನಿನ್ನ ಹೆಸರೂ ಸಹ ಲೇಖಕನೆಂದು ಮುಖಪೃಷ್ಠದ ಮೇಲೆ ಮೂಡಬೇಕಿತ್ತು. ಆದರೆ ನೀನು ಜಾಣತನದಿಂದ ಆ ಹೊಣೆ ಒಪ್ಪಿಕೊಳ್ಳಲಿಕ್ಕೆ ಸಿದ್ಧನಾಗಲಿಲ್ಲ. ಈಗ ಈ ಅರ್ಪಣೆಯನ್ನು ಸ್ವೀಕರಿಸುವ ಹೊಣೆಯನ್ನಾದರೂ ಒಪ್ಪಿಕೊಳ್ಳಬೇಕು - ನಿನ್ನ, ಗಿರೀಶ.


ಪುಸ್ತಕ ಕುರಿತು: ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಾಗಿದ್ದರೂ ಇದು ವಿವೇಕ-ಅವಿವೇಕಗಳ ದ್ವಂದ್ವವನ್ನು ನಾಟಕೀಯವಾಗಿ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವುದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ. ಹೊಸ ಕಾಯಿದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳ್ಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ಮಾಡುವ ಸರದಾರರು, ರಾಜಕಾರಣವನ್ನು ದೇವರ ಕಾರ್ಯವೆಂದು ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಕೊನೆಗೆ ಮುಹಮ್ಮದನಿಗೆ ಆಗುವದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ಸಂಸ್ಕಾರಗಳಿಗೆ ತಾನೇ ಪರಕೀಯವಾಗಿ, ದಿಲ್ಲಿಯಿಂದ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನೂ, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಈ ಅರಸ, 'ಆತ್ಮ-ಹತ್ಯೆ'ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ದುರಂತ. ಹತ್ತು ರೀತಿಯ ವೇಷವನ್ನು ತೊಟ್ಟರೂ ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು. ಅರಮನೆ, ರಾಜಬೀದಿ, ಮಸೀದೆ, ಕೋಟೆಯ ಬುರುಜು, ಹೀಗೆ ಬೇಕಾದಲ್ಲಿ ಪ್ರತ್ಯಕ್ಷವಾಗುವ ಸನ್ನಿವೇಶಗಳು, ಇವೆರಡನ್ನೂ ಬೆಸೆದಂತಿರುವ ನಾಟ್ಯಧ್ವನಿ, ದೃಶ್ಯಕಾವ್ಯದ ಭಾಷೆ-ಹೀಗೆ ನಾಟಕದ ರಚನಾಕೌಶಲ ಅದ್ಭುತವಾಗಿದೆ.. - ಸಂಪಾದಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಸೋಮವಾರ, ನವೆಂಬರ್ 21, 2016

ಹೋರಾಟದ ಹಾದಿ - ಡಾ. ಎಚ್. ನರಸಿಂಹಯ್ಯ

ಹೋರಾಟದ ಹಾದಿ - ಡಾ. ಎಚ್. ನರಸಿಂಹಯ್ಯ

ಶೀರ್ಷಿಕೆ: ಹೋರಾಟದ ಹಾದಿ
ಲೇಖಕರು: ಡಾ. ಎಚ್. ನರಸಿಂಹಯ್ಯ
ಪ್ರಕಾಶಕರು: ಕರ್ನಾಟಕ ಸರ್ಕಾರದ ಪರವಾಗಿ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 
ಪ್ರಧಮ ಮುದ್ರಣ: 2006


ಪುಸ್ತಕ ಕುರಿತು: ಕೆಲವು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತರು ನನ್ನ ಆತ್ಮ ಕಥೆಯನ್ನು ಬರೆಯಬೇಕೆಂದು ಸೂಚಿಸಿದರು. ನಾನು ಒಂದಲ್ಲ ಒಂದು ಸಬೂಬು ಹೇಳಿಕೊಂಡು ಅವರ ಸಲಹೆಗೆ ಅಷ್ಟಾಗಿ ಗಮನ ಕೊಡಲಿಲ್ಲ. ಕೊನೆಗೆ ಸಲಹೆ ಒತ್ತಾಯವಾಯಿತು. ಆಗ ನಾನು ನನ್ನ ಆತ್ಮ ಕಥೆಯ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾಯಿತು. ನಾನು ದಿನಚರಿಯನ್ನು ಇಟ್ಟಿಲ್ಲ. ಒಂದು ಫೋಟೋ ಕೂಡ ನನ್ನಲ್ಲಿ ಇಲ್ಲ. ನನ್ನ ಆತ್ಮ ಕಥೆಯನ್ನು ಬರೆಯುವ ಮಟ್ಟದ ವ್ಯಕ್ತಿಯಾಗಬಹುದೆಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆತ್ಮಕಥೆ ಆತ್ಮ ಪ್ರಶಂಸೆಯಾಗಬಾರದು. ಇದನ್ನು ನಾನು ಬಹು ಎಚ್ಚರಿಕೆಯಿಂದ ಗಮನದಲ್ಲಿಟ್ಟುಕೊಂಡು ವಸ್ತುನಿಷ್ಠವಾಗಿ ಬರೆದಿದ್ದೇನೆ. ನಾನು ದಿನಚರಿ ಇಡದೇ ಇದ್ದರೂ ನನ್ನ ಜೀವನದಲ್ಲಿ ಎದ್ದು ಕಾಣುವ ಘಟನೆಗಳನ್ನು ನನ್ನ ಸ್ನೇಹಿತರಿಗೆ ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಿದ್ದೆ, ಹೀಗೆ ಪದೇ ಪದೇ ಹೇಳಿ ಕೆಲವಂತೂ ಬಾಯಿಪಾಠದ ಹಂತಕ್ಕೆ ಮುಟ್ಟಿದ್ದವು. ಆದುದರಿಂದ ನಾನು ಸರಾಗವಾಗಿ ಈ ಪುಸ್ತಕವನ್ನು ಬರೆಯಲು ಸಹಾಯವಾಯಿತು. ಕಡು ಬಡತನದಲ್ಲಿ ಹುಟ್ಟಿ ಬಸ್ ಚಾರ್ಜಿಗೆ ದುಡ್ಡಿಲ್ಲದೆ ನಮ್ಮೂರಿನಿಂದ 53 ಮೈಲಿ ದೂರದಲ್ಲಿರುವ ಬೆಂಗಳೂರಿಗೆ ಒಂದು ಸಲ ನಡೆದುಕೊಂಡು ಬಂದೆ. ಅಂತಹವನು ಯಾವ ಜಾತಿ, ರಾಜಕೀಯ ಮತ್ತು ಹಣದ ಬೆಂಬಲವೂ ಇಲ್ಲದೆ ಇಂತಹ ಒಂದು ಪುಸ್ತಕವನ್ನು ಬರೆಯುವ ಹಂತಕ್ಕೆ ಮುಟ್ಟಿರುವುದೇ ಒಂದು ಪರಮಾಶ್ಚರ್ಯ. ನನ್ನ ಜೀವನಕ್ಕೆ ತಿರುವು ಕೊಟ್ಟ ಕೆಲವು ಘಟನೆಗಳು ನಡೆದಿವೆ. ಅವು ಆಕಸ್ಮಿಕವೋ ಅಥವಾ ಇನ್ನೇನೋ ನಾನು ಹೇಳಲಾರೆ. ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ನಾನು ಜೀವನದಲ್ಲಿ ಒಂಟಿ. ಹೋರಾಟದಲ್ಲಿಯೂ ಬಹುತೇಕ ಒಂಟಿಯೇ. ನನ್ನ ಈ ಪುಸ್ತಕಕ್ಕೆ ನಾಮಕರಣ ಮಾಡಲು ಹಲವರ ಸಹಾಯವನ್ನು ಕೇಳಿದೆ. ಅದಕ್ಕೆ ಏನೇ ಹೆಸರಾಗಲಿ 'ಹೋರಾಟ' ಎನ್ನುವ ಪದ ಆ ಹೆಸರಿನ ಒಂದು ಭಾಗವಾಗಬೇಕು ಎಂಬ ನನ್ನ ದೃಢ ನಿಶ್ಚಯವನ್ನು ತಿಳಿಸಿದ್ದೆ. ಪ್ರಸಿದ್ಧ ಸಾಹಿತಿಗಳೂ, ಕವಿಗಳೂ ಆದ ಡಾ|| ಜಿ. ಎಸ್. ಶಿವರುದ್ರಪ್ಪನವರು ಅದಕ್ಕೆ 'ಹಾದಿ' ಕೂಡಿಸಿ 'ಹೋರಾಟದ ಹಾದಿ' ಯಾಗಿ ಮಾಡಿದರು. ನನ್ನ ಜೀವನ ಒಂದು ಪುಸ್ತಕ ರೂಪವಾಗಿ ಪ್ರಕಟವಾಗಿರುವುದು ಸಹಜವಾಗಿಯೇ ನನಗೆ ಸಂತೋಷವನ್ನು ಕೊಟ್ಟಿದೆ. ಈ ಪುಸ್ತಕವನ್ನು ಓದಿದವರಿಗೆ ಒಂದಲ್ಲಾ ಒಂದು ವಿಧದಲ್ಲಿ ಉಪಯೋಗವಾದರೆ ನಾನು ಈ ಪುಸ್ತಕ ಬರೆದಿದ್ದಕ್ಕೆ ಸಾರ್ಥಕವಾಗುತ್ತದೆ. - ಎಚ್. ನರಸಿಂಹಯ್ಯ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಭಾನುವಾರ, ನವೆಂಬರ್ 20, 2016

ಜನಪದ ಅಡುಗೆ - ಡಾ. ವೈ. ಸಿ. ಭಾನುಮತಿ

ಜನಪದ ಅಡುಗೆ - ಡಾ. ವೈ. ಸಿ. ಭಾನುಮತಿ

ಶೀರ್ಷಿಕೆ: ಜನಪದ ಅಡುಗೆ
ಲೇಖಕರು: ಡಾ. ವೈ. ಸಿ. ಭಾನುಮತಿ
ಪ್ರಕಾಶಕರು: ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು. 
ಪ್ರಧಮ ಮುದ್ರಣ: 2007


ಪುಸ್ತಕ ಕುರಿತು: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಸೆನೆಟ್ ಸಭೆಯಲ್ಲಿ ಹೇಳಿದ ಮಾತುಗಳನ್ನು ಈಗ ನೆನಪಿಸಿಕೊಳ್ಳಬಹುದು. "ಕಾರಣಾಂತರಗಳಿಂದ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಲು ಅಶಕ್ತರಾದ ಜನಸಾಮಾನ್ಯರಿಗೆ ವಿಶ್ವವಿದ್ಯೆಯ ಪರಿಚಯ ಮಾಡಿಕೊಡಲು ನಮ್ಮ ವಿಶ್ವವಿದ್ಯಾನಿಲಯ ಶ್ರಮಿಸಬೇಕು. ಈ ಕಾರ್ಯವು ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ನಡೆಯಬೇಕಾಗಿದೆ. ಅತ್ಯಂತ ಪ್ರಯೋಜನಕಾರಿಯಾದ ಈ ಮಹತ್ಕಾರ್ಯವನ್ನು ವಿಶ್ವವಿದ್ಯಾನಿಲಯವು ಬೇಗನೆ ಕಾರ್ಯರೂಪಕ್ಕೆ ತರುವುದೆಂದು ನಂಬಿದ್ದೇನೆ." 1933ರಲ್ಲಿ ಸ್ಥಾಪನೆಯಾದ ಅಧ್ಯಾಪಕರ ಸಂಘ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಈ ಪ್ರಚಾರೋಪನ್ಯಾಸಗಳನ್ನು ಪ್ರಾರಂಭಿಸಿತು. ಈ ಪ್ರಯೋಗದ ಖ್ಯಾತಿ ವಿದೇಶಗಳಿಗೂ ಹಬ್ಬಿತು. "ನಹಿ ಜ್ಞಾನೇನ ಸದೃಶಂ" ಎಂಬ ಮೈಸೂರು ವಿಶ್ವವಿದ್ಯಾನಿಲಯದ ಆದರ್ಶದ ಕಾರ್ಯಾಚರಣೆಯಲ್ಲಿ ಪ್ರಚಾರೋಪನ್ಯಾಸ ಮಾಲೆಯೂ ಒಂದು. ಈ ಉಪನ್ಯಾಸಗಳನ್ನು ಕೇಳಲು ಅವಕಾಶ ಸಿಕ್ಕದವರು ತಿಳಿವಳಿಕೆ ಪಡೆಯಲು ಅನುವಾಗುವಂತೆ ಪ್ರಚಾರ ಪುಸ್ತಕಮಾಲೆ ಅಸ್ತಿತ್ವಕ್ಕೆ ಬಂದು, ಅದು ಅತ್ಯಂತ ಜನಪ್ರಿಯವಾಗಿದೆ. ಸುವರ್ಣ ಪ್ರಚಾರ ಪುಸ್ತಕಮಾಲೆಯಡಿಯಲ್ಲಿ ಒಂದು ದಶಕದ ನಂತರ ಈಗ ಹೊಸದಾಗಿ 50 ಶೀರ್ಷಿಕೆಗಳು ಪ್ರಕಟವಾಗುತ್ತಿವೆ. ಇವುಗಳಲ್ಲಿ ಸಾಹಿತ್ಯ, ಅರ್ಥಶಾಸ್ತ್ರ, ವೈದ್ಯ ವಿಜ್ಞಾನ, ಪ್ರಾಣಿ ವಿಜ್ಞಾನ ಮುಂತಾದ ವಿಷಯಗಳನ್ನು ಕುರಿತಂತೆ ಅತ್ಯಂತ ಉಪಯುಕ್ತ ಪುಸ್ತಿಕೆಗಳು ಸೇರಿದ್ದು, ಇವು ಕೂಡ ಎಲ್ಲ ಪುಸ್ತಕ ಪ್ರೇಮಿಗಳ ಮತ್ತು ಜ್ಞಾನಾಸಕ್ತರ ಮೆಚ್ಚುಗೆ ಪಡೆಯುತ್ತವೆಂದು ಆಶಿಸುತ್ತೇನೆ. - ಜೆ. ಶಶಿಧರ ಪ್ರಸಾದ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶನಿವಾರ, ನವೆಂಬರ್ 19, 2016

ರೂಪದರ್ಶಿ - ಕೆ. ವಿ. ಅಯ್ಯರ್

ರೂಪದರ್ಶಿ - ಕೆ. ವಿ. ಐಯ್ಯರ್

ಶೀರ್ಷಿಕೆ: ರೂಪದರ್ಶಿ
ಲೇಖಕರು: ಕೆ. ವಿ. ಅಯ್ಯರ್
ಪ್ರಕಾಶಕರು: ವಸಂತ ಪ್ರಕಾಶನ, ಹತ್ತನೇ 'ಬಿ' ಮುಖ್ಯರಸ್ತೆ, ಜಯನಗರ, ಬೆಂಗಳೂರು. 
ಪ್ರಧಮ ಮುದ್ರಣ: 1950
ಐ.ಎಸ್.ಬಿ.ಎನ್.: 978-93-8305248-6


ಪುಸ್ತಕ ಕುರಿತು: 1942ನೆಯ ಇಸವಿ ಏಪ್ರಿಲ್ ತಿಂಗಳಲ್ಲಿ ಪ್ರಚುರವಾದ Reader's Digest ಎಂಬ ಅಮೆರಿಕದ ಮಾಸ ಪತ್ರಿಕೆಯಲ್ಲಿ The Face of Judas Inscariot ಎಂದು, ಮುಕ್ಕಾಲು ಪುಟದಷ್ಟು ಒಂದು ಕತೆ ಇತ್ತು. ಅದರಲ್ಲಿನ ಪಾತ್ರಗಳು ಎರಡೇ: ಯಾರೋ ಒಬ್ಬ ಕಲಾವಂತ ಶಿಲ್ಪಿ, ಅವನಿಗೆ ರೂಪದರ್ಶಿ (Model) ಯಾಗಿ ಸಿಕ್ಕದ ಒಬ್ಬ ಬೀದಿಯ ಹುಡುಗ. ಕತೆಯೂ ಬಹು ಚಿಕ್ಕದು. ಅದನ್ನು ಓದಿದಾಗ 'ಕಥಾವಸ್ತು ಚೆನ್ನಾಗಿದೆ. ಒಂದು ಪುಟದಲ್ಲಿರುವ ಇದನ್ನು ಎಂಟು ಹತ್ತು ಪುಟಗಳ ಪುಟ್ಟ ಕತೆಯಾಗಿ ಕನ್ನಡದಲ್ಲಿ ಬರೆಯಬಹುದು' ಎನ್ನಿಸಿತು. ಬರೆಯುವುದಕ್ಕೆ ತೊಡಗಿದಾಗ, ಹೀಗೆ, ಈಗ ಇರುವ ಸ್ಥಿತಿಗೇ ಬೆಳೆಯಿತು; ನನ್ನ ಮನಸ್ಸಿಗಾಗಲಿ ಲೇಖನಿಗಾಗಲಿ ತಡೆಯಿಲ್ಲದೆ, ಶ್ರಮವಿಲ್ಲದೆ, ಕತೆ ಈ ರೂಪ ತಾಳಿತು. ಮೂಲದಲ್ಲಿನ 'ಶಿಲ್ಪಿ' ಮತ್ತು ಅವನ 'ರೂಪದರ್ಶಿ' ಹೊರತು ಉಳಿದ ಎಲ್ಲ ಪಾತ್ರಗಳೂ ನನ್ನ ಮನಃ ಸೃಷ್ಟಿ. ಯಾವೊಂದು ಉದ್ದೇಶದಿಂದ ಈ ಕತೆಯನ್ನು ಬರೆಯಲಿಲ್ಲ. ಇದು ಏನು ಸಾಧಿಸಬಲ್ಲದೆಂಬುದನ್ನೂ ನಾನು ಅರಿಯೆ. ಮನಸ್ಸಿನಲ್ಲಿ ಮೂಡಿದುದನ್ನು ಇನ್ನೂ ಚೆನ್ನಾಗಿ ಚಿತ್ರಿಸಲು ನನ್ನ ಭಾಷೆಗೆ, ಲೇಖನಿಗೆ ಸಾಮರ್ಥ್ಯ ಏನೇನೂ ಸಾಲದಾಯಿತು. Reader's Digest ಪತ್ರಿಕೆಯಲ್ಲಿ ಈ ಕತೆಯ ತಲೆ ತುದಿಗೆ 'Who wrote this?' ಎಂದು ಇತ್ತು. ಈಗ ಈ ಕತೆಯನ್ನು ಓದಿದವರಿಗೂ ಏನಾದರೂ ಹಾಗೇ ಎನಿಸಿದರೆ, ಅದರ ಹೊಣೆ ನನ್ನದಲ್ಲ - ಈ ಬರಹವನ್ನು ಅಚ್ಚಿಗೆ ಸಿದ್ಧಪಡಿಸಿದ, ಅಚ್ಚು ಮಾಡಿಸಿದ ಮಿತ್ರರು ಶ್ರೀ ಜಿ.ಪಿ. ರಾಜರತ್ನಂ ಅವರದು. - ಕೆ. ವಿ. ಅಯ್ಯರ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶುಕ್ರವಾರ, ನವೆಂಬರ್ 18, 2016

ನೂರಿ - ಡಾ. ಜಾನಕಿ ಸುಂದರೇಶ್

ನೂರಿ - ಡಾ. ಜಾನಕಿ ಸುಂದರೇಶ್

ಶೀರ್ಷಿಕೆ: ನೂರಿ
ಲೇಖಕರು: ಡಾ. ಜಾನಕಿ ಸುಂದರೇಶ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಕ್ರೆಸೆಂಟ್ ರಸ್ತೆ, ಬೆಂಗಳೂರು. 
ಪ್ರಧಮ ಮುದ್ರಣ: 2009
ಐ.ಎಸ್.ಬಿ.ಎನ್.: 978-81-8467-076-9

ಅರ್ಪಣೆ: ಎರಡು ಸಾವಿರದ ಆರನೇ ಇಸವಿಯ ಜುಲೈ ತಿಂಗಳ ಪ್ರಥಮ ದಿನ. ಎಡೆಬಿಡದೇ ಸುರಿವ ಮಳೆಗೆ ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. ತನ್ನಿಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಬಿ.ಸಿ. ರೋಡಿನ ಬಳಿ ಸೇತುವೆಯ ಮೇಲೆ ನಡೆದು ಬಂದ ಓರ್ವ ನತದೃಷ್ಟ ತಂದೆ, ಕೊಸರಾಡುತ್ತ ಪ್ರತಿಭಟಿಸುತ್ತಿದ್ದ ಮಕ್ಕಳಿಬ್ಬರನ್ನೂ ಬಲವಂತವಾಗಿ ನೀರಿಗೆ ಎಸೆದು, ತಾನೂ ಹಾರಿದರು. ನದೀತೀರದಲ್ಲಿದ್ದ ನಾಲ್ವರು ಈ ಕ್ರೂರಕೃತ್ಯವನ್ನು ಕಂಡು ಆಘಾತಗೊಂಡರು. ಅಬ್ಬರಿಸಿ ಹರಿಯುತ್ತಿದ್ದ ನದಿಗೆ ಹೆದರದೇ ದೋಣಿಯನ್ನು ನೀರಿಗಿಳಿಸಿ ಎರಡೂ ಮಕ್ಕಳ ಪ್ರಾಣ ಉಳಿಸಿದರು. ಆ ಹೃದಯವಿದ್ರಾವಕ ಘಳಿಗೆಯಲ್ಲಿ ಜಾತಿ ಧರ್ಮಗಳ ನೆನಪೂ ಸುಳಿಯದಂತೆ ಅವರ ಹೃದಯಗಳಲ್ಲಿ ಭೋರ್ಗರೆದು ಹರಿದ ಮಾನವೀಯತೆಯ ಜೀವಜಲಕ್ಕೆ ಈ ಕೃತಿಯ ಅರ್ಪಣೆ.

ಪುಸ್ತಕ ಕುರಿತು: ಮಮ್ತಾಜ್ ಳ ಸಾಕುಮಗಳು ನೂರಿ. ರೈಲ್ವೆ ಸ್ಟೇಷನ್ನಿನಲ್ಲಿ ಸಿಕ್ಕಿದ ಮಗು. ಸಾಕುತಾಯಿಯೊಂದಿಗೆ ಕೊಳೆಗೇರಿಯಲ್ಲಿ ವಾಸ. ಸದಾ ವಟಗುಟ್ಟುವ ಮುದುಕಿ ಮಮ್ತಾಜ್ ಗೆ ಜನರೊಂದಿಗೆ ಒಡನಾಟ ಅಷ್ಟಕ್ಕಷ್ಟೆ. ಆದರೆ ಪುಟ್ಟ ನೂರಿಗೆ ಊರಿನ ಎಲ್ಲರೂ ದೋಸ್ತಿಗಳೇ. ಬಹಳ ಹುಡುಗಾಟಿಕೆಯ ಹುಡುಗಿ ನೂರಿ. ಆದರೆ ತನ್ನ ಸುತ್ತಲಿನ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸುವ ಬುದ್ಧಿವಂತೆ! ವಿನೋದ ಪ್ರಜ್ಞೆಯ ಜೊತೆಗೆ ಸಂಪರ್ಕಕ್ಕೆ ಬಂದವರನ್ನು ತನ್ನದೇ ರೀತಿಯಲ್ಲಿ ಅಂದಾಜು ಮಾಡುವ ಮೂಲಕ ಎದುರಾಗಬಹುದಾದ ಅಪಾಯಗಳಿಂದ ಪಾರಾಗುವ ಜಾಣೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಸೋನಿಯ ರೂಪದಲ್ಲಿ ಅವಳಿಗೊಂದು ಬಾಲ! ಎಲ್ಲರಿಗೂ ಪ್ರಿಯರಾಗುವ ಹುಡುಗಿಯರು 'ನೂರಿ' ಮತ್ತು 'ಸೋನಿ'. - ಪ್ರಕಾಶಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಗುರುವಾರ, ನವೆಂಬರ್ 17, 2016

ಗೃಹಭಂಗ - ಎಸ್. ಎಲ್. ಭೈರಪ್ಪ

ಗೃಹಭಂಗ - ಎಸ್. ಎಲ್. ಭೈರಪ್ಪ

ಶೀರ್ಷಿಕೆ: ಗೃಹಭಂಗ
ಲೇಖಕರು: ಎಸ್. ಎಲ್. ಭೈರಪ್ಪ
ಪ್ರಕಾಶಕರು: ಸಾಹಿತ್ಯ ಭಂಡಾರದ ಪ್ರಕಾಶನ, ಬಳೇಪೇಟೆ, ಬೆಂಗಳೂರು. 
ಪ್ರಧಮ ಮುದ್ರಣ: 1970

ಪುಸ್ತಕ ಕುರಿತು: ಈ ಕಾದಂಬರಿ ಯಾವ ಸಮಸ್ಯೆಯನ್ನೂ ಕುರಿತದ್ದಲ್ಲ-ವಸ್ತುನಿಷ್ಠವಾಗಿ ಜೀವನವನ್ನು ಕಾಣಿಸುವ ಪ್ರಯತ್ನ. ಜೀವನವೆಂಬುದು ಯಾರೊಬ್ಬನ ಅನುಭವ ಅಥವಾ ಬೌದ್ಧಿಕ ಹಿಡಿತದ ಸಮಗ್ರತೆಗೆ ಸಿಕ್ಕದಷ್ಟು ವಿಶಾಲವಾದದ್ದು; ಜಟಿಲವಾದದ್ದು. ಆದುದರಿಂದ ಈ ಕಾದಂಬರಿಯು ನಿಮಗೆ ಕಾಣಿಸಲು ಪ್ರಯತ್ನಿಸಿರುವ ಜೀವನದ ಕಾಲ ಪರಿಧಿಗಳ ಅಂದಾಜನ್ನು ಹೇಳುವುದು ಅಗತ್ಯ. ಸಾವಿರದ ಒಂಭೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, 'ಇದೊಂದು ಪ್ರಾದೇಶಿಕ ಕಾದಂಬರಿ' ಎಂಬ ಆತುರದ ಕ್ಲಾಸ್ ರೂಮು ಬುದ್ಧಿಯ ವರ್ಗೀಕರಣ ಮಾಡಬಾರದು. ಕಥೆ ನಡೆಯುವುದಕ್ಕೆ ಒಂದು ಭೌಗೋಳಿಕ ಜಾಗಬೇಕು. ನಾನು ಈ ಜಾಗವನ್ನು ಆಯ್ದುಕೊಂಡಿರುವ ಕಾರಣ, ನನಗೆ ಅದು ಹೆಚ್ಚು ಪರಿಚಿತವಾಗಿರುವುದು ಮಾತ್ರ. ಈ ಕಾದಂಬರಿ ನಿಮ್ಮನ್ನು ನಾಗಾಲೋಟ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ, ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತದೆಂಬುದು ನನಗೆ ಗೊತ್ತಿದೆ. ನಡೆಯುವವನು ತನ್ನ ಸುತ್ತನ್ನು ನೋಡುವಷ್ಟು ಸ್ಪಷ್ಟವಾಗಿ ಓಟಹೊಡೆಯುವವನು ನೋಡಲಾರ. ಗೃಹಭಂಗ ಎಂಬುದು ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧ್ಯವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, 'ಗೃಹಭಂಗ' ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ. - ಎಸ್. ಎಲ್. ಭೈರಪ್ಪ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಬುಧವಾರ, ನವೆಂಬರ್ 16, 2016

ಏಳು ರೊಟ್ಟಿಗಳು - ಡಾ. ಕೆ. ಎನ್. ಗಣೇಶಯ್ಯ

ಏಳು ರೊಟ್ಟಿಗಳು - ಡಾ. ಕೆ. ಎನ್. ಗಣೇಶಯ್ಯ

ಶೀರ್ಷಿಕೆ: ಏಳು ರೊಟ್ಟಿಗಳು
ಲೇಖಕರು: ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು. 
ಪ್ರಧಮ ಮುದ್ರಣ: 2011

ಪುಸ್ತಕ ಕುರಿತು: ಹೈದರಾಬಾದನ್ನು ಆಳಿದ ನಿಜಾಮ, ಸ್ವಾತಂತ್ರ್ಯಾನಂತರ ಭಾರತದೊಂದಿಗೆ ವಿಲೀನಗೊಳ್ಳಲಿಚ್ಛಿಸದೆ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಹಾಗಾದರೆ ನಿಜಾಮ ಒಯ್ಯಲೆತ್ನಿಸಿದ್ದ ಅಪಾರ ನಿಧಿ ಏನಾಯಿತು? ಆ ನಿಧಿಯ ಹುಡುಕಾಟವೇ 'ಏಳು ರೊಟ್ಟಿಗಳು' ಕಾದಂಬರಿಯ ವಸ್ತು. ಇಲ್ಲಿ ಚರಿತ್ರೆಯಿದೆ. ಸಾಕ್ಷ್ಯಾಧಾರಗಳಿಗೆ ಚಿತ್ರ-ನಕ್ಷೆ-ಮಾಹಿತಿಗಳಿವೆ. ಕುತೂಹಲಕಾರಿ ನಿರೂಪಣೆಯಿದೆ. ನಮಗೆ ಗಾಬರಿ ಹಿಡಿಸಲು ಟೆರರಿಸ್ಟ್ ಗಳಿದ್ದಾರೆ. ಅವರನ್ನು ಬಗ್ಗು ಬಡಿಯಲು ಪೋಲಿಸರಿದ್ದಾರೆ. ಒಟ್ಟಿನಲ್ಲಿ ಗಣೇಶಯ್ಯನವರ ವಿಶಿಷ್ಟ ಶೈಲಿಯ ಕಥೆ ಇಲ್ಲಿ ಅನಾವರಣಗೊಂಡಿದೆ. ಈಗಾಗಲೇ 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ' ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿರುವ ಗಣೇಶಯ್ಯನವರು 'ಏಳು  ರೊಟ್ಟಿಗಳಲ್ಲಿ' ಓದುಗರನ್ನು ನಿಬ್ಬೆರಗಾಗಿಸುವ ಅದ್ಭುತ-ರೋಚಕ ಕಥಾನಕವನ್ನು ನಿರೂಪಿಸಿದ್ದಾರೆ. - ಪ್ರಕಾಶಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಮಂಗಳವಾರ, ನವೆಂಬರ್ 15, 2016

ಹುಳಿಮಾವಿನ ಮರ - ಪಿ. ಲಂಕೇಶ್

ಹುಳಿಮಾವಿನ ಮರ - ಪಿ. ಲಂಕೇಶ್

ಶೀರ್ಷಿಕೆ: ಹುಳಿಮಾವಿನ ಮರ - ಒಂದು ಆತ್ಮಕಥನ 
ಲೇಖಕರು: ಪಿ. ಲಂಕೇಶ್ 
ಪ್ರಕಾಶಕರು: ಪತ್ರಿಕೆ ಪ್ರಕಾಶನ, ಬಸವನಗುಡಿ, ಬೆಂಗಳೂರು. 
ಪ್ರಧಮ ಮುದ್ರಣ: 1997

ಪುಸ್ತಕ ಕುರಿತು: ನಾನು ನನ್ನ ಐವತ್ತೆಂಟನೇ ವರ್ಷದವರೆಗೆ ಆತ್ಮಚರಿತ್ರೆಯನ್ನು ಬರೆಯುವ ಯೋಚನೆಯಲ್ಲಿಯೇ ಇರಲಿಲ್ಲ. ಐವತ್ತೆಂಟು ದಾಟುತ್ತಿದ್ದಂತೆ ಇದ್ದಕ್ಕಿದ್ದಂತೆ ಆರೋಗ್ಯ ಕೆಟ್ಟು stock- verification ರೀತಿಯ ಚಿಂತನೆ ಶುರುವಾಯಿತು. ಈ ಸಾಮಾನ್ಯ ಬದುಕಿನಲ್ಲೂ ಒಂದು ರೀತಿಯ ಲಯಬದ್ಧತೆ ಇರುವಂತೆ ಕಂಡಿತು. ಅದು ಅಸ್ಪಷ್ಟವಾಗಿಯೇ ಇತ್ತು. ಬರೆಯತೊಡಗಿದರೆ ನೆನಪು ಮರುಕಳಿಸಬಹುದು ಎಂದು ಅರಿವಿನ ಮೊದಲ ರೂಹುಗಳನ್ನು ಕಾಗದದ ಮೇಲೆ ಗುರುತಿಸುತ್ತಾ ಹೋದೆ. ನೆನಪುಗಳೇ ವಿಚಿತ್ರ. ನಾನು ಚಿಕ್ಕಂದಿನಲ್ಲಿ ಕಂಡ ಯಾವುದೋ ಹೆಣ್ಣು ಮತ್ತೆಮತ್ತೆ ನೆನಪಾಗಿ ಅವಳ ಆಲಿಂಗನ ಇವತ್ತಿಗೂ ಹೃದಯವನ್ನು ಬೆಚ್ಚಗೆ ಮಾಡುತ್ತದೆ; ಅವಳ ಸೆರಗಿನ ಕಮ್ಮನೆಯ ವಾಸನೆ ಮೈ ನವಿರೇಳಿಸುತ್ತದೆ. ಆಕೆ ನನ್ನ ಅವ್ವನೋ, ಅಕ್ಕನೋ, ನೆರೆಮನೆಯವಳೋ ಇರಬಹುದು. ಆದರೆ ಇದಕ್ಕಿಂತ ಸೋಜಿಗದ್ದು ನಮ್ಮ ಗದ್ದೆಯ ಹತ್ತಿರ ಇದ್ದ ಹುಳಿಮಾವಿನ ಮರ. ಪುಟ್ಟ ಹುಡುಗನಿಗೆ ಹೂವು, ಕಾಯಿ, ಹಣ್ಣು ಇವುಗಳಿಂದ ಖುಷಿ ಕೊಡುತ್ತಿದ್ದುದು ಮಾತ್ರವಲ್ಲದೆ ತನ್ನ ದೈತ್ಯಾಕಾರದಿಂದ ಭಯ ಹುಟ್ಟಿಸುತ್ತಿದ್ದ, ತನ್ನ ನೂರಾರು ವರ್ಷಗಳ ಜೀವಿತದಿಂದ ಅಮರತ್ವಕ್ಕೆ ಸಂಕೇತದಂತಿದ್ದ ಈ ಹುಳಿಮಾವಿನ ಮರ ನಾನು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಬಿದ್ದುಹೋಯಿತು. ನಾನು ಪಟ್ಟಣದಿಂದ ಹೋಗಿ ಅದನ್ನು ನೋಡುವಷ್ಟರಲ್ಲಿ ಕೊಂಬೆಗಳೆಲ್ಲ ಹೊರಟುಹೋಗಿ ಬೊಡ್ಡೆ ಮಾತ್ರ ಉಳಿದಿತ್ತು. ಆದರೆ ನನ್ನ ಕಾಲೇಜು ದಿನಗಳು ಮುಗಿದು ಈ ಬದುಕು ಅನಿರೀಕ್ಷಿತ ಪಾತ್ರಗಳಲ್ಲಿ ಹರಿಯುತ್ತಿದ್ದಾಗ ಈ ಮರ ನನ್ನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಯಿತು. ಹೀಗಿದ್ದಾಗ ಒಂದು ದಿನ ಮಾವಿನ ಮರ ಕುರಿತ ಬಾಗಲೋಡಿ ದೇವರಾಯರ 'ಅಜ್ಜ ನೆಟ್ಟ ಮರ' ಕತೆಯನ್ನು ಓದಿ ವಿಸ್ಮಯನಾದೆ. ಹೀಗಾಗಿ ಈ ಪುಸ್ತಕಕ್ಕೆ 'ಹುಳಿಮಾವಿನ ಮರ' ಎಂದೇ ಹೆಸರಿಟ್ಟೆ. - ಪಿ. ಲಂಕೇಶ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಸೋಮವಾರ, ನವೆಂಬರ್ 14, 2016

ದಿನಕ್ಕೊಂದು ಕಥೆ - ಅನುಪಮಾ ನಿರಂಜನ

ದಿನಕ್ಕೊಂದು ಕಥೆ - ಅನುಪಮಾ ನಿರಂಜನ

ಶೀರ್ಷಿಕೆ: ದಿನಕ್ಕೊಂದು ಕಥೆ - ಮಾಘ ಸಂಪುಟ
ಲೇಖಕರು: ಅನುಪಮಾ ನಿರಂಜನ
ಪ್ರಕಾಶಕರು: ಡಿ.ವಿ.ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು.
ಪ್ರಧಮ ಮುದ್ರಣ: 1972

ಪುಸ್ತಕ ಕುರಿತು: ನನ್ನ ಮಕ್ಕಳು "ಅಮ್ಮ, ಕಥೆ ಹೇಳು" ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿ ಕಥೆಗಳನ್ನು ಹೆಣೆದು ಹೇಳಿದೆ. ಇವು ಮುಗಿದ ಬಳಿಕ, ಜಗತ್ತಿನ ಇತರ ದೇಶಗಳ ಮಕ್ಕಳ ಕಥೆಗಳಿಗೂ ಕೈಚಾಚಿದೆ. ಹೀಗೆ, ಭಾರತದ ಪಂಚತಂತ್ರ-ಹಿತೋಪದೇಶ-ಪುರಾಣೇತಿಹಾಸ ಮೂಲದ ಕಥೆಗಳು, ಪ್ರಾಚೀನ ಗ್ರೀಸಿನ ಈಸೋಪನ ನೀತಿಕಥೆಗಳು ಹಾಗೂ ಪುರಾಣಕಥೆಗಳು, ಯೂರೋಪಿನ ಗ್ರಿಮ್ ಸೋದರರು ಮತ್ತು ಹ್ಯಾನ್ಸ್ ಕ್ರಿಶ್ಚಿಯನ್ ಆ್ಯಂಡರ್ ಸನ್ ಮತ್ತಿತರರ ಕಥೆಗಳು, ಪೂರ್ವ ಪಶ್ಚಿಮಗಳ ಇನ್ನಿತರ ದೇಶಗಳ ಕಥೆಗಳು - ಇವೆಲ್ಲವುಗಳನ್ನು ನಾನು ಆಧರಿಸಿದೆ. ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, 'ಕನ್ನಡ ನಾಡಿನ ಇತರೆ ಮಕ್ಕಳೂ ಇವುಗಳಿಂದ ಸಂತೋಷಪಡುವಂತಾಗಬೇಕು' ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ. ಈ ರೀತಿ 'ದಿನಕ್ಕೊಂದು ಕಥೆ'ಯ ಉಯದವಾಯಿತು. ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು. ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ಧಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಟರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವಣಿಗೆಗೆ ನೆರವಾಗುತ್ತವೆ. ಈ ಹೊತ್ತಿಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ; ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. ಆ ದಿಸೆಯಲ್ಲಿ ಈ ಕಥೆಗಳು ಒಂದಿಷ್ಟಾದರೂ ನೆರವಾದರೆ ನನ್ನ ಶ್ರಮ ಸಾರ್ಥಕ ಆಯಿತೆಂದು ಭಾವಿಸುವೆ. - ಅನುಪಮಾ ನಿರಂಜನ.ಮಕ್ಕಳ ದಿನಾಚರಣೆ ಅಂಗವಾಗಿ, ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಅನುಪಮಾ ನಿರಂಜನರ ಪ್ರಸಿದ್ಧ 'ದಿನಕ್ಕೊಂದು ಕಥೆ' ಗಳಿಂದ ಮಾಘ ಸಂಪುಟದ ಪುಸ್ತಕ ಮಣಿರತ್ನವನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಭಾನುವಾರ, ನವೆಂಬರ್ 13, 2016

ಹುಚ್ಚುಮನಸ್ಸಿನ ಹತ್ತುಮುಖಗಳು - ಶಿವರಾಮ ಕಾರಂತ

ಹುಚ್ಚುಮನಸ್ಸಿನ ಹತ್ತುಮುಖಗಳು - ಶಿವರಾಮ ಕಾರಂತ

ಶೀರ್ಷಿಕೆ: ಹುಚ್ಚುಮನಸ್ಸಿನ ಹತ್ತುಮುಖಗಳು - ಅಳಿದುಳಿದ ನೆನಪುಗಳೊಂದಿಗೆ
ಲೇಖಕರು: ಶಿವರಾಮ ಕಾರಂತ
ಪ್ರಕಾಶಕರು: ಎಸ್.ಬಿ.ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು.
ಪ್ರಧಮ ಮುದ್ರಣ: 1983

ಪುಸ್ತಕ ಕುರಿತು: ಬದುಕಿನ ದೀರ್ಘ ಅವಧಿಯನ್ನು ಕುರಿತು ಎಷ್ಟೋ ಬಾರಿ ನಾನು ಯೋಚಿಸಲೇ ಬೇಕಾಗುತ್ತದೆ. ಅದನ್ನು ಯೋಚಿಸದೇ ಹೋಗಿದ್ದರೆ ನನ್ನ ಲೇಖನಿಗೆ ಯಾವ ಕೆಲಸವೂ ಇರುತ್ತಿರಲಿಲ್ಲ. ಬದುಕಿನ ಬಗ್ಗೆ ಆಳವಾಗಿ ಯೋಚಿಸಲು ಕಲಿತವನು ನಾನು. ನನ್ನ ಬಗ್ಗೆಯೂ, ನಾನು ಬದುಕಿನ ಕ್ಷಮೆ ಯಾಚಿಸಲು ಇಷ್ಟಪಡುವುದಿಲ್ಲ. ಆದರೆ ನನ್ನ ಎಳೆತನದಿಂದ ಇಂದಿನ ತನಕ, ನನ್ನ ಕಣ್ಮುಂದೆಯೇ ಹಾದುಹೋಗುತ್ತಿದ್ದ ಭಾರತೀಯ ಜನಜೀವನದ ಚಿತ್ರಪಟವನ್ನು ನಿರೀಕ್ಷಿಸಿದಾಗ ದೊರೆತ ಒಂದು ಸಂತೋಷಕ್ಕೆ ಪ್ರತಿಯಾಗಿ ಹತ್ತು ದುಃಖಗಳು ಕಾಣಿಸಿವೆ. ನಮ್ಮ ಪುರಾತನ ಶ್ರದ್ಧೆ ಮತ್ತು ಸೃಷ್ಟಿಗಳನ್ನು ಕುರಿತು ಅತೀವ ಆದರ ನನಗಿದೆ. ಆದರೆ, ಆ ಆದರ, ಕೃತಜ್ಞತೆ, ಹೆಮ್ಮೆ, ವರ್ತಮಾನ ಕಾಲದ ಜನರ ಸ್ವಾರ್ಥಕ್ಕೆ, ಅಪಮೌಲ್ಯಗಳಿಗೆ, ಕುತ್ಸಿತ ಜೀವನಕ್ಕೆ ಏನೇನೂ ಸಮಾಧಾನ ಕೊಡಲಾರದು. ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? ಆ ಪ್ರಶ್ನೆಗೆ ಉತ್ತರವಾಗಿ ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ, ವ್ಯಕ್ತಿಯಿಂದ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ. - ಶಿವರಾಮ ಕಾರಂತ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶನಿವಾರ, ನವೆಂಬರ್ 12, 2016

ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರೀ

ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರೀ

ಶೀರ್ಷಿಕೆ: ಯೇಗ್ದಾಗೆಲ್ಲಾ ಐತೆ
ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರೀ 
ಪ್ರಕಾಶಕರು: ಅಭಿನವ, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 1994

ಪುಸ್ತಕ ಕುರಿತು: 'ಯೇಗ್ದಾಗೆಲ್ಲಾ ಐತೆ' ಕನ್ನಡದ ಅನುಭಾವ ಸಾಹಿತ್ಯಕ್ಕೆ ಬೆಲೆಗಟ್ಟಲಾಗದ ಒಂದು ಕಾಣಿಕೆ. ಮುಕುಂದೂರು ಸ್ವಾಮಿಗಳ ಕಾರಣೀಕಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಬಿಡಿಸಿಡುವ ಈ ಪುಸ್ತಕದಲ್ಲಿ ಬರುವ ಆಧ್ಯಾತ್ಮಿಕತೆ ಆಕಾಶ ಕುಸುಮವಲ್ಲ; ನೆಲದಲ್ಲೇ ಅರಳಿದ ಬೆಟ್ಟತಾವರೆಯಂತದು. ಪ್ರದೇಶ ವಿಶಿಷ್ಟ, ಸಾಂಸ್ಕೃತಿಕ ವಿವರಗಳ ಮೂಲಕ ಪ್ರದೇಶ ವಿಶಿಷ್ಟ ನುಡಿಗಟ್ಟುಗಳಲ್ಲಿ ಕಡೆದಿಟ್ಟಿರುವ ಆ ಅವಿಸ್ಮರಣೀಯ ಚೈತನ್ಯ ಅಲ್ಲಿ, ಇಲ್ಲಿ ಎಲ್ಲೆಲ್ಲಿಯೂ ಸಲ್ಲುವಂಥದು. ಈ ಪುಸ್ತಕವನ್ನು ಬರೆದವರು, ಅಚ್ಚು ಹಾಕಿಸಿದವರು, ಓದುವರು, ಮನನ ಮಾಡುವರು ಎಲ್ಲರೂ ಪರಾ ಪ್ರತಿಭೆಯ ಸಜೀವ ಸ್ಪಂದನಗಳಲ್ಲಿ ಪಾಲುಗೊಳ್ಳುತ್ತಾರೆ, ಮುಕುಂದೂರು ಸ್ವಾಮಿಗಳೆಂಬ ನಡೆಲಿಂಗ ಈ ಪುಸ್ತಕದ ಮೂಲಕ ನುಡಿಲಿಂಗವಾಗಿದೆ. - ಎಚ್. ಎಸ್. ಶಿವಪ್ರಕಾಶ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶುಕ್ರವಾರ, ನವೆಂಬರ್ 11, 2016

ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ - ಟಿ. ಆರ್. ಅನಂತರಾಮು

ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ - ಟಿ. ಆರ್. ಅನಂತರಾಮು

ಶೀರ್ಷಿಕೆ: ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ
ಲೇಖಕರು: ಟಿ. ಆರ್. ಅನಂತರಾಮು 
ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು.
ಪ್ರಧಮ ಮುದ್ರಣ: 2002
ಐ.ಎಸ್.ಬಿ.ಎನ್.: 81-280-0088-8

ಪುಸ್ತಕ ಕುರಿತು: ಅಬ್ದುಲ್ ಕಲಾಂ ಅವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿತವಾದಮೇಲೆ ಅವರ ಬದುಕಿನ ಬಗ್ಗೆ ಸಹಜವಾಗಿಯೇ ನನಗೂ ಕುತೂಹಲ ಉಂಟಾಯಿತು. ಅವರ ಬಾಹ್ಯ ಚಹರೆಯ ಬಗ್ಗೆ ಇದ್ದ ಭಾವನೆಗಳೆಲ್ಲ ಕರಗಿ, ಈಗ ಆದರ್ಶಪ್ರಾಯವಾದ ವ್ಯಕ್ತಿ ಕಣ್ಣಮುಂದೆ ನಿಂತಿದ್ದರು. ಇದೇ ವೇಳೆಗೆ ನಾಡಿನ ಹಿರಿಯ ವಿದ್ವಾಂಸರೂ, ನನ್ನ ಬಗ್ಗೆ ಶಿಷ್ಯ ಪ್ರೀತಿಯನ್ನು ತಳೆದು ಅನೇಕ ಪುಸ್ತಕಗಳನ್ನೂ ನನ್ನಿಂದ ಬರೆಸಿದ್ದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು "ಅಬ್ದುಲ್ ಕಲಾಂ ಅವರ ಜೀವನ ಕುರಿತು, ಸಾಧನೆಗೆ ಒತ್ತುಕೊಟ್ಟು ಒಂದು ಪುಸ್ತಕ ಬರೆಸಬೇಕಲ್ಲ, ಸಪ್ನ ಬುಕ್ ಹೌಸ್ ಪ್ರಕಟಿಸಲು ಮುಂದಾಗಿದೆ" ಎಂದರು. ಯಾರೇ ಪುಸ್ತಕ ಬರೆಯಲಿ ಅವರ ಎದುರಿಗೆ ಕ್ಯಾಲೆಂಡರ್ ಇರುತ್ತದೆ, ಗಡಿಯಾರವಲ್ಲ. ನನ್ನೆದುರಿಗಿದ್ದದ್ದು ಕ್ಯಾಲೆಂಡರ್ ಅಲ್ಲ, ಗಡಿಯಾರ. ಹದಿನೇಳು ದಿನಗಳೊಳಗೆ ಬರವಣಿಗೆ ಮುಗಿಸಲೇಬೇಕಾದ ಪರಿಸ್ಥಿತಿ. ರಾಕೆಟ್ ತಂತ್ರಜ್ಞ ಅಬ್ದುಲ್ ಕಲಾಂ ಅವರು ಈಗ ರಾಷ್ಟ್ರದ ಸಂವಿಧಾನ ರಕ್ಷಕರಾಗಿದ್ದಾರೆ. ಅವರ ಬದುಕು ಮತ್ತು ಸಾಧನೆ ನಮ್ಮೊಳಗೆ ಒಂದಿಷ್ಟು ಕಿಚ್ಚು, ಒಂದಿಷ್ಟು ಕೆಚ್ಚು ಹುಟ್ಟಿಸುವಂತಾದರೆ ಅದಕ್ಕಿಂತ ಇನ್ನೇನು ಬೇಕು ಬರೆದವರಿಗೆ? - ಟಿ. ಆರ್. ಅನಂತರಾಮು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಗುರುವಾರ, ನವೆಂಬರ್ 10, 2016

ಹಿಮಾಲಯನ್ ಬ್ಲಂಡರ್ - ರವಿ ಬೆಳಗೆರೆ

ಹಿಮಾಲಯನ್ ಬ್ಲಂಡರ್ - ರವಿ ಬೆಳಗೆರೆ

ಶೀರ್ಷಿಕೆ: ಹಿಮಾಲಯನ್ ಬ್ಲಂಡರ್ - ಸಹಸ್ರ ಯೋಧರ ನೆತ್ತರಗಾಥೆ
ಮೂಲ ಲೇಖಕರು: ಬ್ರಿಗೇಡಿಯರ್ ಜಾನ್ ಪಿ. ದಳವಿ
ಕನ್ನಡ ಅನುವಾದ: ರವಿ ಬೆಳಗೆರೆ
ಪ್ರಕಾಶಕರು: ಭಾವನಾ ಪ್ರಕಾಶನ, ಬನಶಂಕರಿ ಎರಡನೇ ಹಂತ, ಪದ್ಮನಾಭನಗರ, ಬೆಂಗಳೂರು.
ಪ್ರಧಮ ಮುದ್ರಣ: 1999

ಪುಸ್ತಕ ಕುರಿತು: ಈ ಪುಸ್ತಕಕ್ಕೊಂದು ಮುನ್ನುಡಿ ಬೇಕಾಗಿಲ್ಲ. ಇಡೀ ಪುಸ್ತಕವೇ ಒಂದು ಚಮರಗೀತೆ. ಒಬ್ಬ ಮಹಾ ಯೋಧನ ಕಣ್ಣೀರು. ಒಂದು ದೇಶ ಅನುಭವಿಸಿದ ಕಳಂಕ. ಮೂವತ್ತೇಳು ವರ್ಷಗಳಾಗಿ ಹೋದವು; ಆ ಕಳಂಕವನ್ನು ನಾವ್ಯಾರೂ ಮರೆಯಲಾಗಿಲ್ಲ. ಆ ಕಳಂಕಕ್ಕೆ ಕಾರಣರಾದ ಪಂಡಿತ ಜವಾಹರಲಾಲ್ ನೆಹರೂ, ನಮ್ಮ ರಕ್ಷಣಾ ಮಂತ್ರಿ ವೆಂಗಳಿಲ್ ಕೃಷ್ಣನ್ ಮೆನನ್, ಇಬ್ಬರು ಮಹಾದಂಡನಾಯಕರಾದ ಜನರಲ್ ಪ್ರಾಣನಾಥ ಥಾಪರ್ ಮತ್ತು ಲೆಫ್ಟಿನೆಂಟ್ ಜನರಲ್ ಬಿ.ಎಂ. ಕೌಲ್ ಮುಂತಾದವರ್ಯಾರನ್ನೂ ನಮ್ಮ ದೇಶದ ಇತಿಹಾಸ ಕ್ಷಮಿಸಿಲ್ಲ. ಯಾವತ್ತಿಗೂ ಕ್ಷಮಿಸಲಾರದು. ಅಲ್ಲಿ ಭಾರತದ ಗಡಿಯಲ್ಲಿ ನಮ್ಮ ನಿಸ್ಸಹಾಯಕ ಯೋಧನೊಬ್ಬ ಜೇಬಿನಲ್ಲಿದ್ದ ಕಟ್ಟಕಡೆಯ ಕಾಡತೂಸನ್ನು ಶತ್ರುವಿನೆಡೆಗೆ ಫೈರ್ ಮಾಡಿ, ಆ ನಂತರ ಏನೇನೂ ಮಾಡಲಾಗದೆ ಹಿಮಕಾಡಿನ ಬಟಾಬಯಲಿನಲ್ಲಿ ಬೆಚ್ಚನೆಯದೊಂದು ಅಂಗಿಯೂ ಇಲ್ಲದಂತೆ ನಿಂತಿದ್ದ. ಅವನನ್ನು ಚೀನೀ ಸೈನಿಕರು ನಾಲ್ಕೂ ಕಡೆಯಿಂದ ಸುತ್ತುವರೆದು ಪ್ರಾಣಿಯನ್ನು ಬೇಟೆಯಾಡಿದಂತೆ ಬೇಟೆಯಾಡಿ ಕೊಂದುಬಿಟ್ಟರು. - ರವಿ ಬೆಳಗೆರೆ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಬುಧವಾರ, ನವೆಂಬರ್ 9, 2016

ನನ್ನ ತಮ್ಮ ಶಂಕರ - ಅನಂತ್ ನಾಗ್

ನನ್ನ ತಮ್ಮ ಶಂಕರ - ಅನಂತ್ ನಾಗ್

ಶೀರ್ಷಿಕೆ: ನನ್ನ ತಮ್ಮ ಶಂಕರ......
ಲೇಖಕರು: ಅನಂತ್ ನಾಗ್
ಪ್ರಕಾಶಕರು: ಟೋಟಲ್ ಕನ್ನಡ, ಹತ್ತನೇ 'ಬಿ' ಮುಖ್ಯರಸ್ತೆ, ಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 2001
(2001ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪುಸ್ತಕ)

ಪುಸ್ತಕ ಕುರಿತು: ಇಂದಿಗೆ ಶಂಕರ ಹೋಗಿ ಇಪ್ಪತ್ತು ವರ್ಷಗಳು ಸಂದಿವೆ. ಅಂದು ಅವನ ಸಾವು ಎಷ್ಟು ಭೀಕರ ಮತ್ತು ಅನಿರೀಕ್ಷಿತವೋ ಅಷ್ಟೇ ಆಘಾತಕರ. ಆಗ ಆ ಶೋಕದಿಂದ ಹೊರಬರಲೆಂದೇ ಅನವ ಬಗ್ಗೆ ಬರೆಯಲು ಮುಂದಾದೆ. ಅವನು ಬೆಳೆದ ಪರಿಸರದ ಕುರಿತು ಕೂಡ. ಅದೇ ಬರಹ ಅನಂತರ 'ನನ್ನ ತಮ್ಮ ಶಂಕರ' ಪುಸ್ತಕವಾಯಿತು. ಚಲನಚಿತ್ರ ನಟನಾಗಿ ಊರೂರು ಸುತ್ತುವುದಾಗುತ್ತದೆ. ಎಲ್ಲಿ ಹೋದರೂ ಜನರು ಶಂಕರನನ್ನು ನೆನಪಿಸಕೊಳ್ಳುತ್ತಾರೆ. ಮರಗುತ್ತಾರೆ. ಇವತ್ತಿಗೂ ಬೆಂಗಳೂರಿನ ರಸ್ತೆಗಳಲ್ಲಿ ಹೋಗುವಾಗ ಆಗಾಗ ಶಂಕರನ ಪಟವಿರುವ ಆಟೋಗಳು, ಆಟೋ ನಿಲ್ದಾಣಗಳು ಕಣ್ಣಿಗೆ ಬೀಳುತ್ತವೆ. ಅಷ್ಟೋಂದು ಅಭಿಮಾನಿಗಳನ್ನು ಅಷ್ಟಲ್ಪ ವಯಸ್ಸಿನಲ್ಲಿ ಪಡೆದುಕೊಂಡು ನಿರ್ಗಮಿಸಿದ ಶಂಕರನನ್ನು ಇಪ್ಪತ್ತು ವರ್ಷಗಳ ನಂತರವೂ ಆರಾಧಿಸುವವರಿದ್ದಾರೆಂದರೆ ಸೋಜಿಗವೇ! - ಅನಂತ್ ನಾಗ್.ಇಂದು ನವಂಬರ್ 9, ಶಂಕರ್ ನಾಗ್ ಜನ್ಮದಿನ; ನಮ್ಮೊಡನಿಲ್ಲದೆಯೂ ನಮ್ಮೆಲ್ಲರ ಮಧ್ಯೆ ಶಾಶ್ವತವಾಗಿ ಬದುಕಿರುವ ಆ ಮಹಾನ್ ಚೇತನವನ್ನು ಸ್ಮರಿಸುತ್ತಾ, ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಶಂಕರ್ ನಾಗ್ ಕುರಿತಾದ ಪುಸ್ತಕ ಮಣಿರತ್ನವನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಮಂಗಳವಾರ, ನವೆಂಬರ್ 8, 2016

ದೇವರು - ಎ. ಎನ್. ಮೂರ್ತಿರಾವ್

ದೇವರು - ಎ. ಎನ್. ಮೂರ್ತಿರಾವ್

ಶೀರ್ಷಿಕೆ: ದೇವರು (ಪಂಪ ಪ್ರಶಸ್ತಿ ಪಡೆದಿರುವ ವೈಚಾರಿಕ ಕೃತಿ)
ಲೇಖಕರು: ಎ. ಎನ್. ಮೂರ್ತಿರಾವ್
ಪ್ರಕಾಶಕರು: ಡಿ.ವಿ.ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು.
ಪ್ರಧಮ ಮುದ್ರಣ: 1991

ಪುಸ್ತಕ ಕುರಿತು: 'ಇವನು ದೇವರನ್ನು ನಂಬದಿದ್ದರೆ ಬಿಡಲಿ; ತನ್ನ ಅಪನಂಬಿಕೆಯನ್ನು ಊರಿಗೆಲ್ಲ ಹಂಚಬೇಕೆ?' ಎಂಬ ಟೀಕೆಯನ್ನು ಕೇಳಿದ್ದೇನೆ. ನನಗೆ ದೇವರಲ್ಲಿ ನಂಬಿಕೆಯಿಲ್ಲವೆಂಬ ಮಾತು ನನ್ನ 'ಸಂಜೆಗಣ್ಣಿನ ಹಿನ್ನೋಟ'ದಲ್ಲಿ ಬಂದಿದೆ; ಸ್ನೇಹಿತರು ಪ್ರಶ್ನೆ ಹಾಕಿದಾಗ (ನಾನು ಮುಂದೊಡಗಿಯಲ್ಲ!) ನನ್ನ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದೇನೆ - ಇದೆಲ್ಲ ನಿಜ. ದೇವರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ, ಅವನ ಮಹಿಮೆಯನ್ನು ಹೊಗಳುವ, ಭಾಷಣ ಲೇಖನಗಳು ಸರ್ವಸಾಮಾನ್ಯವಾದ್ದರಿಂದ ಅವು news (ವಿಶೇಷ ಸಮಾಚಾರ) ಆಗುವುದಿಲ್ಲ; ನಂಬಿಕೆ ಇಲ್ಲ ಎನ್ನುವುದು news ಆಗಿ ಪ್ರಚಾರ ಎನ್ನಿಸಿಕೊಳ್ಳುತ್ತದೆ; ಇದು ಸ್ವಾಭಾವಿಕ. ಸಂದರ್ಭ ಬಂದಾಗ ನಾನು ದೇವರ ವಿಷಯದಲ್ಲಿ ನನ್ನ ಅಭಿಪ್ರಾಯ ಹೇಳಿದ್ದೂ ಅಷ್ಟೇ ಸ್ವಾಭಾವಿಕ. ನನಗೆ ಪ್ರಚಾರ ಮಾಡುವ ಚಪಲವೂ ಇಲ್ಲ; ನನ್ನ ನಿಲುವನ್ನು ಬಚ್ಚಿಡುವ ಹಿಂಜರಿಕೆಯೂ ಇಲ್ಲ. - ಎ. ಎನ್. ಮೂರ್ತಿರಾವ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಸೋಮವಾರ, ನವೆಂಬರ್ 7, 2016

ವೈದ್ಯರ ಶಿಕಾರಿ - ಡಾ. ಟಿ. ಎಸ್. ರಮಾನಂದ್

ವೈದ್ಯರ ಶಿಕಾರಿ - ಡಾ. ಟಿ. ಎಸ್. ರಮಾನಂದ್

ಶೀರ್ಷಿಕೆ: ವೈದ್ಯರ ಶಿಕಾರಿ - ಶಿಕಾರಿಯಲ್ಲದ ಶಿಕಾರಿ ಅನುಭವಗಳು
ಲೇಖಕರು: ಡಾ. ಟಿ. ಎಸ್. ರಮಾನಂದ್
ಪ್ರಕಾಶಕರು: ಅಭಿನವ, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 2005

ಪುಸ್ತಕ ಕುರಿತು: ವನ್ಯಜೀವಿ ವೈದ್ಯನಾಗಿ ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ನನಗಾದ ಅನುಭವಗಳಲ್ಲಿ ಕೆಲವನ್ನು ಮಾತ್ರ ಈ ಬರಹದ ಮೂಲಕ ದಾಖಲಿಸಿರುತ್ತೇನೆ. ನನಗಿಂತಲೂ ಹೆಚ್ಚು ಸಮಯ ವನ್ಯಜೀವಿಗಳೊಂದಿಗೆ ಒಡನಾಡಿದ ಮಿತ್ರರು ಇನ್ನೂ ವಿಶೇಷ ಅನುಭವಗಳನ್ನು ಪಡೆದಿರಬಹುದು. ಬರೆಯುವ ಪ್ರಯತ್ನ ಮಾಡಿರುವ ಪಶುವೈದ್ಯರು ಕಡಿಮೆ, ಇಲ್ಲವೆಂದರೂ ತಪ್ಪಲ್ಲ. ಇದು ನನ್ನ ಪ್ರಥಮ ಪ್ರಯತ್ನವಾಗಿರುವುದರಿಂದ ತಪ್ಪನ್ನು ಮನ್ನಿಸಲು ವಾಚಕ ಮಹಾಶಯರನ್ನು ಕೋರುತ್ತೇನೆ. ಅನುಭವಗಳಿಗೂ ಮತ್ತು ಬರವಣಿಗೆಗೂ ತುಂಬಾ ಸಮಯದ ಅಂತರವಿರುವುದರಿಂದ, ಅನೇಕರ ಹೆಸರುಗಳು ವ್ಯತ್ಯಾಸವಾಗಿರಬಹುದು. ಅವರು ನನ್ನನ್ನು ಕ್ಷಮಿಸುತ್ತಾರೆಂದು ನಂಬಿರುತ್ತೇನೆ. - ಡಾ. ಟಿ. ಎಸ್. ರಮಾನಂದ್.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಭಾನುವಾರ, ನವೆಂಬರ್ 6, 2016

ಅಣ್ಣನ ನೆನಪು - ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ಅಣ್ಣನ ನೆನಪು - ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ಶೀರ್ಷಿಕೆ: ಅಣ್ಣನ ನೆನಪು
ಲೇಖಕರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಒಂಭತ್ತನೇ ಮುಖ್ಯ ರಸ್ತೆ, ಸರಸ್ವತಿಪುರಂ, ಮೈಸೂರು.
ಪ್ರಧಮ ಮುದ್ರಣ: 1996

ಪುಸ್ತಕ ಕುರಿತು: ನನ್ನ ಚಿಕ್ಕಂದಿನಿಂದ ನಾನು ಓದಿ ಮುಗಿಸುವವರೆಗಿನ ನಮ್ಮ ತಂದೆಯ ನೆನಪುಗಳನ್ನು ನನ್ನ ದೈನಂದಿನ ದಿನಚರಿ ಮಾದರಿಯಲ್ಲಿ ಬರೆದಿದ್ದೇನೆ. ಅಣ್ಣನ ವೈವಿಧ್ಯತಮ ವ್ಯಕ್ತಿತ್ವದಿಂದಾಗಿ ಈ ನೆನಪಿನ ಸರಣಿಯಲ್ಲಿ ರಾಜಕೀಯ ಮಿಮಾಂಸೆ, ತತ್ವಚಿಂತನೆ, ಕರ್ನಾಟಕ ಸಂಸ್ಕೃತಿ ಅವಲೋಕನ, ಸಾಹಿತ್ಯ ಮೀಮಾಂಸೆ, ಸಾಮಾಜಿಕ ಜಿಜ್ಞಾಸೆ, ಮುಂತಾದವೆಲ್ಲ ಮಿಳಿತಗೊಂಡಿವೆ. ಆದರೂ ನೆನಪುಗಳು ಸಂಕೀರ್ಣವಾಗದಂತೆ, ಜಟಿಲವಾಗದಂತೆ, ಸರಳವಾಗಿ, ಜೀವನದ ಸಹಜ ಲಯದಲ್ಲಿ ರೂಪಿಸಲು ಯತ್ನಿಸಿದ್ದೇನೆ. ಇದನ್ನು ಬರೆಯುತ್ತ ಕುವೆಂಪುರವರೊಡನಿದ್ದ ಅನೇಕರು ತಮಗೆ ಗೊತ್ತಿದ್ದುದನ್ನೆಲ್ಲ ಕಾಗದ ಬರೆದು ನನಗೆ ಸ್ಪಷ್ಟಪಡಿಸಿದ್ದಾರೆ. ಕೆಲವರು ಕೋಪಗೊಂಡು ಬಯ್ದು ಪ್ರೋತ್ಸಾಹ ನೀಡಿದ್ದಾರೆ. ಕೆಲವರು ಬಿದ್ದು ಬಿದ್ದು ನಕ್ಕು ಸ್ಫೂರ್ತಿ ನೀಡಿದ್ದಾರೆ. ಆ ಹಿರಿಕಿರಿಯರೆಲ್ಲರಿಗೂ ನನ್ನ ನಮಸ್ಕಾರಪೂರ್ವಕ ಕೃತಜ್ಞತೆಗಳು. ಇದನ್ನು ಬರೆಯುತ್ತಲೇ ಧಾರಾವಾಹಿಯಾಗಿ ಪ್ರಕಟಿಸಿದ ಗೆಳೆಯ ಲಂಕೇಶರಿಗೆ ನಾನು ಕೃತಜ್ಞ. ನನ್ನ ಬಳಿಯಿದ್ದ ಫೋಟೋಗಳ ಜೊತೆಗೆ ಅನೇಕರು ತಮ್ಮ ಬಳಿ ಇದ್ದ ಅಣ್ಣನ ಫೋಟೋಗಳನ್ನು ಒದಗಿಸಿ ತುಂಬ ಸಹಾಯ ಮಾಡಿದ್ದಾರೆ. ಅವೆಲ್ಲಾ ಕಲಬೆರಕೆಯಾಗಿ ಯಾರದ್ದು ಯಾವುದು ಎಂದು ತಿಳಿಯಲಾಗದೆ ಎಲ್ಲರಿಗೂ ಒಟ್ಟಾರೆ ಕೃತಜ್ಞತೆ ಅರ್ಪಿಸಬೇಕಾಗಿದೆ. ಎಲ್ಲಕ್ಕಿಂತ ಇದನ್ನು ಅಭೂತಪೂರ್ವವಾಗಿ ಮೆಚ್ಚಿದ ಕನ್ನಡಿಗರಿಗೆ ನನ್ನ ಕೃತಜ್ಞತೆಗಳು. - ಕೆ. ಪಿ. ಪೂರ್ಣಚಂದ್ರ ತೇಜಸ್ವಿ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶನಿವಾರ, ನವೆಂಬರ್ 5, 2016

ಬೆಳಕು ತಂದ ಬಾಲಕ - ತ. ರಾ. ಸು.

ಬೆಳಕು ತಂದ ಬಾಲಕ - ತ. ರಾ. ಸು.

ಶೀರ್ಷಿಕೆ: ಬೆಳಕು ತಂದ ಬಾಲಕ
ಲೇಖಕರು: ತ. ರಾ. ಸು. (ತಳುಕು ರಾಮಸ್ವಾಮಯ್ಯ ಸುಬ್ಬರಾಯ)
ಪ್ರಕಾಶಕರು: ಹೇಮಂತ ಸಾಹಿತ್ಯ, ಹತ್ತನೇ 'ಎ' ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು.
ಪ್ರಧಮ ಮುದ್ರಣ: 1961

ಪುಸ್ತಕ ಕುರಿತು: 'ಬೆಳಕು ತಂದ ಬಾಲಕ' ಭಾರತೀಯ ಉಪನಿಷತ್ ಸಾಹಿತ್ಯದಲ್ಲಿ ಅತ್ಯಂತ ಪ್ರಖ್ಯಾತವಾದ ಕಠೋಪನಿಷತ್ತಿನಲ್ಲಿ ಬರುವ ನಚಿಕೇತೋಪಾಖ್ಯಾನವನ್ನು ಮೂಲವಾಗಿಟ್ಟುಕೊಂಡು ರಚಿತವಾದ ಕಾದಂಬರಿ. ನಚಿಕೇತನ ಕಥೆ, ಅದನ್ನು ಓದಿದ ದಿನದಿಂದಲೂ ಬಹು ವಿಚಿತ್ರವಾಗಿ ನನ್ನ ಹೃದಯವನ್ನು ಆಕರ್ಷಿಸಿ, ಬಹುದಿನಗಳಿಂದಲೂ ಅದನ್ನು ವಸ್ತುವನ್ನಾಗಿಟ್ಟುಕೊಂಡು ಕಾದಂಬರಿಯನ್ನು ರಚಿಸಬೇಕೆಂಬ ಹಂಬಲ ನನ್ನ ಹೃದಯದಲ್ಲಿ ಮನೆ ಮಾಡಿಕೊಂಡಿತ್ತು. ಕಠೋಪನಿಷತ್ತಿನಲ್ಲಿ ದೊರೆಯುವ ಕಥಾವಸ್ತು ಅತ್ಯಂತ ಅಲ್ಪ; ಕೇವಲ ನಾಲ್ಕಾರು ಶ್ಲೋಕಗಳಲ್ಲಿ, ಮಿಂಚಿನ ವೇಗದಲ್ಲಿ, ಅಷ್ಟೇ ಮಟ್ಟಿಗೆ ಕಣ್ಣು ಕೋರೈಸುವಂತೆ, ನಚಿಕೇತನ ಕಥೆ ಆರಂಭವಾಗಿ ಮುಕ್ತಾಯವಾಗುತ್ತದೆ. ಕಥೆ ಅಷ್ಟು ಅಲ್ಪವಾದರೂ, ಅದು ಸಾರುವ ಸಂದೇಶ, ಜೀವನಕ್ಕೆ ನೀಡುವ ಬೆಳಕು ಸಾಗರದಷ್ಟು ವಿಸ್ತಾರವಾದುದ್ದು; ಭಾರತೀಯ ತತ್ತ್ವಶಾಸ್ತ್ರದ ಆಳವಾದ ಅಭ್ಯಾಸ, ನಿಕಟವಾದ ಅರಿವು ಇಲ್ಲದಿದ್ದವರಿಗೆ ಸುಲಭವಾಗಿ ಅರ್ಥವಾಗದಂಥದ್ದು. ಈ ಕೃತಿರಚನೆಗೆ ಬೇಕಾದ ಈ ಅರ್ಹತೆಯ ಅರಿವು ನನಗಿದ್ದಂತೆಯೇ, ಆ ಅರ್ಹತೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೆಂಬ ಅರಿವೂ ನನ್ನಲ್ಲಿದ್ದಿತು. ಕಠೋಪನಿಷತ್ತಿನಲ್ಲೇ ಅಲ್ಲದೆ, ಋಗ್ವೇದ, ಛಾಂದೋಗ್ಯ, ಬೃಹದಾರಣ್ಯಕ ಉಪನಿಷತ್ತುಗಳು, ಮಹಾಭಾರತಗಳಲ್ಲಿ ದೊರೆಯುವ ವಸ್ತುಗಳನ್ನು ಅಳವಡಿಸಿಕೊಂಡು ಈ ಕಾದಂಬರಿಯನ್ನು ರಚಿಸಿದ್ದೇನೆ. ಈ ಕಾದಂಬರಿ, ಇದನ್ನು ನಾನು ಬರೆಯುತ್ತಿರುವಾಗ ನನಗೆ ನೀಡಿದ ಸಂತೋಷವನ್ನೇ, ಓದುಗರಿಗೂ ವಾಚನ ಸಮಯದಲ್ಲಿ ನೀಡಿದರೆ ಕೃತಾರ್ಥ. - ತ.ರಾ.ಸು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಶುಕ್ರವಾರ, ನವೆಂಬರ್ 4, 2016

ಗಾಂಧೀ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ - ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗಾಂಧೀ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ - ಗೊರೂರು ರಾಮಸ್ವಾಮಿ ಅಯ್ಯಂಗಾರ್

ಶೀರ್ಷಿಕೆ: ಗಾಂಧೀ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ
ಮೂಲ ಲೇಖಕರು: ಮಹಾತ್ಮ ಗಾಂಧೀ
ಕನ್ನಡಕ್ಕೆ ಅನುವಾದ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು: ಜಿತೇಂದ್ರ ಟಿ ದೇಸಾಯಿ, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್.
ಪ್ರಧಮ ಮುದ್ರಣ: 1995

ಪುಸ್ತಕ ಕುರಿತು: ಒಂದು ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದುದರಿಂದ ಈ ಕಥೆ ಆತ್ಮಕಥೆಯ ರೂಪವನ್ನು ಹೊಂದುವುದೂ ಸತ್ಯ. ಇದರ ಪ್ರತಿಯೊಂದು ಪುಟದಲ್ಲಿಯೂ ನನ್ನ ಪ್ರಯೋಗಗಳ ವಿಷಯವನ್ನೇ ಹೇಳುವುದಾದರೂ ನನಗೆ ಚಿಂತೆಯಿಲ್ಲ. ಈ ಎಲ್ಲ ಪ್ರಯೋಗಗಳ ಒಟ್ಟು ಕಥೆ ವಾಚಕರಿಗೆ ಲಾಭವಾಗದಿರದೆಂದು ನಾನು ನಂಬುತ್ತೇನೆ. ಈಗ, ರಾಜಕೀಯ ಕ್ಷೇತ್ರದ ನನ್ನ ಪ್ರಯೋಗಗಳು ಭಾರತದಲ್ಲಿ ಮಾತ್ರವೇ ಅಲ್ಲದೆ "ನಾಗರಿಕ" ಪ್ರಪಂಚಕ್ಕೆಲ್ಲ ತಕ್ಕಮಟ್ಟಿಗೆ ಗೊತ್ತಾಗಿದೆ. ಅವುಗಳಿಂದ ನನಗೆ ಬಂದಿರುವ "ಮಹಾತ್ಮ" ಎಂಬ ಬಿರುದು ನನಗೆ ಇನ್ನೂ ಕಡಿಮೆ ಬೆಲೆಯುಳ್ಳದ್ದು. ಅನೇಕ ವೇಳೆ ಈ ಬಿರುದು ನನಗೆ ನೋವನ್ನುಂಟುಮಾಡಿದೆ. ಇದರಿಂದ ಒಂದು ಕ್ಷಣವಾದರೂ ನಾನು ಉಬ್ಬಿಹೋದುದು ನನಗೆ ನೆನಪಿಲ್ಲ. ಆದರೆ ಆಧ್ಯಾತ್ಮ ಕ್ಷೇತ್ರದಲ್ಲಿ ನಾನು ನಡೆಸಿದ ಪ್ರಯೋಗಗಳನ್ನು ವಿವರಿಸುವುದು ನನಗೆ ನಿಜವಾಗಿಯೂ ಇಷ್ಟ. ಇವು ಗೊತ್ತಿರುವುದು ನನಗೆ ಮಾತ್ರ. ಈ ಪ್ರಯೋಗಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸಮಾಡಲು ನನಗೆ ಶಕ್ತಿಯನ್ನು ಕೊಟ್ಟಿವೆ. ಇವುಗಳಿಂದ ನನ್ನ ನಮ್ರತೆಯೇ ಹೆಚ್ಚಾಗಬಲ್ಲದು, ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತಿದೆ.. - ಗಾಂಧೀ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಗುರುವಾರ, ನವೆಂಬರ್ 3, 2016

ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ - ಕವಿತಾಕೃಷ್ಣ

ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ - ಕವಿತಾಕೃಷ್ಣ

ಶೀರ್ಷಿಕೆ: ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ
ಮೂಲ ಲೇಖಕರು: ಡಿ.ವಿ.ಜಿ. (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ)
ವ್ಯಾಖ್ಯಾನ: ಕವಿತಾಕೃಷ್ಣ
ಪ್ರಕಾಶಕರು: ತನು ಮನು ಪ್ರಕಾಶನ, ಜಿ-ಬ್ಲಾಕ್, ರಾಮಕೃಷ್ಣನಗರ, ಮೈಸೂರು.
ಮುದ್ರಣ: 2003

ಪುಸ್ತಕ ಕುರಿತು: 'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮಂಕುತಿಮ್ಮನ ಕಗ್ಗ' ಯುಗದ ಕವಿ ಜಗದ ಕವಿ ಡಿ.ವಿ.ಜಿ. ಯವರ ಮೇರುಕೃತಿ. ಕನ್ನಡ ಸಾರಸ್ವತ ಲೋಕದ ಅಮರಕೃತಿ. ಯಾವಿದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸತ್ವವನ್ನು ಗರ್ಭೀಕರಿಸಿಕೊಂಡು ಒಡಮೂಡಿದರೆ ಅದು ಕಾಲದೇಶಾದಿ ಗಡಿಗಳನ್ನು ಮೀರಬಹುದು. ಸಾಮಾನ್ಯರಿಂದ ಮಾನ್ಯರವರೆಗೆ ಎಲ್ಲರ ಮನಸೂರೆಗೊಳ್ಳಬಹುದು. ತನ್ಮೂಲಕ ಮನುಕುಲಕ್ಕೊಂದು ಕೈ ದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ - ಮಾನಸ, ಪ್ರಕಾಶಕರು.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಬುಧವಾರ, ನವೆಂಬರ್ 2, 2016

ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ - ಎಂ. ಎಚ್. ಕೃಷ್ಣಯ್ಯ

ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ - ಎಂ. ಎಚ್. ಕೃಷ್ಣಯ್ಯ

ಶೀರ್ಷಿಕೆ: ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ
ಲೇಖಕರು: ಎಂ. ಎಚ್. ಕೃಷ್ಣಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು.
ಮುದ್ರಣ: 1999 (ಪರಿಷ್ಕೃತ, ವಿಸ್ತೃತ ಪ್ರಥಮ ಆವೃತ್ತಿ)
ಐ. ಎಸ್. ಬಿ. ಎನ್.: 81-87321-33-4

ಪುಸ್ತಕ ಕುರಿತು: ಪ್ರೊಫೆಸರ್ ಎಂ. ಎಚ್. ಕೃಷ್ಣಯ್ಯನವರ 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ'ಯ ವ್ಯಾಪ್ತಿ ಅದರ ಹೆಸರು ಸೂಚಿಸುವುದಕ್ಕಿಂತ ಹೆಚ್ಚಿನದು. ಮೊದಲ ಆರು ಅಧ್ಯಾಯಗಳಲ್ಲಿ ಭಾಷೆಯ ಅಧ್ಯಯನಕ್ಕೆ ಅಗತ್ಯವಾದ ಹಿನ್ನೆಲೆಯನ್ನು ರೂಪಿಸಿದ್ದಾರೆ. ಕನ್ನಡ ಭಾಷೆ ನಡೆದು ಬಂದ ದಾರಿಯನ್ನು ಕೃತಿಯು ಹಂತ ಹಂತವಾಗಿ ಗುರುತಿಸುತ್ತದೆ. ಲಿಪಿ, ಶಬ್ಧ ಸಂಪತ್ತು, ವ್ಯಾಕರಣ ಎಲ್ಲ ಅಂಗಗಳ ಬೆಳವಣಿಗೆಯನ್ನು ಶಾಸ್ತ್ರೀಯವಾಗಿ ಚಾರಿತ್ರಿಕ ದೃಷ್ಟಿಯಿಂದ ಪ್ರೊ. ಕೃಷ್ಣಯ್ಯ ವಿವರಿಸುತ್ತಾರೆ. ಅಡಕತನ, ಖಚಿತತೆ, ಸ್ಫುಟತೆ ಇವು ಪ್ರೊ. ಕೃಷ್ಣಯ್ಯನವರ ನಿರೂಪಣೆಯ ಗುಣಗಳು - ಪ್ರೊ. ಎಲ್. ಎಸ್. ಶೇಷಗಿರಿರಾವ್.

ಲೇಖಕರ ನುಡಿ: ಈ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆ ಅನಿರೀಕ್ಷಿತ ಸಂತೋಷವನ್ನು ಕೊಟ್ಟಿತು. ಅಪರಿಚಿತ ಸಹೃದಯರೂ ಓದಿ ಹುಡುಕಿಕೊಂಡು ಬಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಪುರಸ್ಕರಿಸಿ ಮೆಚ್ಚುಗೆ ಸೂಚಿಸಿತು. ಅವರಿಗೆಲ್ಲ ಕೃತಜ್ಞನಾಗಿದ್ದೇನೆ. ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ, ಸರಳವಾಗಿ, ಆದಷ್ಟು ಕಡಿಮೆ ಪಾರಿಭಾಷಿಕಗಳೊಡನೆ ಕನ್ನಡ ಭಾಷೆ ನಡೆದುಬಂದ ದಾರಿಯ ಬಗ್ಗೆ, ಅಸ್ತಿತ್ವವನ್ನು ವೈಶಿಷ್ಟ್ಯಗಳನ್ನು ಪಡೆದುಕೊಂಡ ಬಗ್ಗೆ, ಸ್ವರೂಪ ವರ್ತನೆ ಬದಲಾವಣೆಗಳ ಹಲವು ಮಜಲು ಮಗ್ಗಲುಗಳ ಬಗ್ಗೆ ಪರಿಚಯ ಮಾಡಿಕೊಡುವುದು ಉದ್ದೇಶ. ಕನ್ನಡ ಭಾಷೆಯನ್ನು ವಿಶೇಷ ಅಧ್ಯಯನ ವಿಷಯವಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ, ಕುತೂಹಲ ಆಸಕ್ತಿಯುಳ್ಳ ಸಾಮಾನ್ಯ ಓದುಗರಿಗೆ ಇದರಿಂದ ಅಲ್ಪಸ್ವಲ್ಪ ಪ್ರಯೋಜನವಾಗುವುದಾದರೆ ನನ್ನ ಶ್ರಮ ಸಾರ್ಥಕ.ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಮಂಗಳವಾರ, ನವೆಂಬರ್ 1, 2016

ಶ್ರೀ ರಾಮಾಯಣ ದರ್ಶನಂ - ಕುವೆಂಪು

ಶ್ರೀ ರಾಮಾಯಣ ದರ್ಶನಂ - ಕುವೆಂಪು

ಶೀರ್ಷಿಕೆ: ಶ್ರೀ ರಾಮಾಯಣ ದರ್ಶನಂ
ಲೇಖಕರು: ಕುವೆಂಪು
ಮೊದಲ ಆವೃತ್ತಿ ಪ್ರಕಾಶಕರು: ಉದಯ ರವಿ ಪ್ರಕಾಶನ, ವಾಣೀವಿಲಾಸಪುರಂ, ಮೈಸೂರು.
(ಸರ್ಕಾರದ ವಿಶೇಷ ಅನುದಾನದಿಂದ ರಿಯಾಯಿತಿ ದರದಲ್ಲಿ ಪ್ರಕಟಿಸಿದೆ)

ಪುಸ್ತಕ ಕುರಿತು: ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ 'ಶ್ರೀ ರಾಮಾಯಣ ದರ್ಶನಂ' ಕನ್ನಡ ಸಾರಸ್ವತ ಪ್ರಪಂಚದ ಮಹಾಸಿದ್ಧಿಗಳಲ್ಲಿ ಒಂದು. 'ಮಹಾಕಾವ್ಯ'ದ ಕಾಲ ಮುಗಿದುಹೋಯಿತು ಎನ್ನುವವರಿಗೆ ಒಂದು ಸವಾಲಾಗಿ, ಮಹತ್ತಾದುದಕ್ಕೆ ಕಾಲದ ಕಟ್ಟಲ್ಲವೆನ್ನುವುದಕ್ಕೆ ಒಂದು ಸಾಕ್ಷಿಯಾಗಿ 'ರಾಮಾಯಣ ದರ್ಶನಂ' ಸೃಷ್ಟಿಯಾಗಿದೆ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೆ ಒಂದು ಅನನ್ಯವಾದ ಸ್ಥಾನವಿದೆ. ಈ ಮಹಾಕಾವ್ಯಕ್ಕೆ ಬಗೆಬಗೆಯಾದ ಗೌರವಗಳು ಹೊರಕಿವೆ. ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರವಾದ ಮೊದಲ ಕನ್ನಡ ಗ್ರಂಥ ಇದು; ರಾಷ್ಟ್ರದ ಅತ್ಯುಚ್ಛ ಸಾಹಿತ್ಯ ಗೌರವವಾದ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆಯಿತು - ಹಾ. ಮಾ. ನಾಯಕ, ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು (ಏಪ್ರಿಲ್ 4, 1971).


ಕನ್ನಡ ರಾಜ್ಯೋತ್ಸವ ನಾಡಹಬ್ಬದ ಶುಭದಿನದಂದು ಸಮಸ್ತ ಕನ್ನಡಿಗರಿಗೆ ಹೃತ್ಪೂರ್ವಕ ಶುಭಾಶಯಗಳು.

ಕೃಪೆ: YouTube

2011ರ ನವಂಬರ್ ನಿಂದ ಪ್ರಾರಂಭಗೊಂಡ ಕಹಳೆ ಕಾರ್ಯಕ್ರಮಕ್ಕೆ ಈಗ ಆರರ ಸಂಭ್ರಮ; ಕನ್ನಡಿಗರೆಲ್ಲರಿಂದ ದೊರೆತಿರುವ ಅಪೂರ್ವ ಸಹಕಾರ-ಪ್ರೋತ್ಸಾಹಕ್ಕೆ ನಾವು ಆಭಾರಿ. ತಮಗೆಲ್ಲರಿಗೂ ತಿಳಿದಿರುವಂತೆ, ಕನ್ನಡ ಪುಸ್ತಕಗಳ ಬಗೆಗೆ ಹೆಚ್ಚಿನ ಆಸಕ್ತಿ ಮೂಡಿಸುವುದೂ ಸಹ ಕಹಳೆ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಆರನೇ ಕಹಳೆ ಆವೃತ್ತಿಯನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ.