ಶುಕ್ರವಾರ, ನವೆಂಬರ್ 30, 2018

ಮಹರ್ಷಿ ವಾಲ್ಮೀಕಿ

ನವಂಬರ್ 2018ರ ಮಾಹೆಯುದ್ದಕ್ಕೂ ನಡೆದ ಕಹಳೆ ಎಂಟನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಪ್ರಸ್ತುತಿಪಡಿಸಿದ ಇಟಕದಿಬ್ಬನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಚಿತ್ರ ಕೃಪೆ : ಗೂಗಲ್

ಹೆಸರು ರತ್ನ, ದೊಡ್ಡ ಡಕಾಯಿತ. ಸುತ್ತಮುತ್ತಲಿನ ಹಳ್ಳಿಗರು ಅವನ ಹೆಸರನ್ನು ಕೇಳಿದರೆ ಸಾಕು, ಬೆಚ್ಚಿಬೀಳುತ್ತಿದ್ದರು. ಕಾಡಿನಲ್ಲಿ ಪ್ರಯಾಣ ಮಾಡಿತ್ತಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕುತ್ತಿದ್ದ. ವೃದ್ಧರೋ, ಮಹಿಳೆಯರೋ, ಹಸುಕಂದಮ್ಮಗಳೋ ಎಂಬುದನ್ನು ನೋಡುವಷ್ಟು ತಾಳ್ಮೆ ಕರುಣೆ ರತ್ನನಿಗೆ ಇರಲಿಲ್ಲ. ಕೊಲ್ಲುವುದು ಅವನಿಗೆ ಚಟವಾಗಿ ಬಿಟ್ಟಿತ್ತು, ಇವನ ಹರಿತವಾದ ಖಡ್ಗಕ್ಕೆ ಬಲಿಯಾದ ಮುಗ್ಧರೆಷ್ಟೋ ಲೆಕ್ಕವಿರಲಿಲ್ಲ. ಇವನ ಉಪಟಳಕ್ಕೆ ಹೆದರಿ, ಆ ಮಾರ್ಗವಾಗಿ ಜನ ಓಡಾಡುವುದನ್ನೇ ಬಿಟ್ಟಿದ್ದರು. ಕಾಡಿನ ಕ್ರೂರ ಮೃಗಗಳಿಗಿಂತ ಈ ಮನುಷ್ಯ ಮಹಾ ಕ್ರೂರಿಯಾಗಿದ್ದ.

ಹೀಗೊಂದು ದಿನ ನಾರದ ಮುನಿಗಳು ಆ ಮಾರ್ಗವಾಗಿ ಸಂಚರಿಸುತ್ತಿದ್ದರು. ನಡೆದು ಹೋಗುತ್ತಿದ್ದ ನಾರದರ ಎದುರು ರತ್ನ ಮೃತ್ಯು ಸ್ವರೂಪವಾಗಿ ನಿಂತ! ರತ್ನನ ಬೃಹತ್ ಶರೀರ, ದಷ್ಟ ಪುಷ್ಟ ಮಾಂಸ ಖಂಡಗಳು, ಮುಖದ ಮೇಲಿನ ಚಂಗು ಮೀಸೆ ಗಡ್ಡಗಳನ್ನು ಕಂಡ ನಾರದರು ನಗತೊಡಗಿದರು. "ರತ್ನ, ನೀರಡಿಕೆಯಾದರೆ ನೀರನ್ನು ನೀನೇ ಕುಡಿಯುವೆ ಅಲ್ಲವೇ?" ಎಂದರು ನಾರದ ಮುನಿ. ಅವಕ್ಕಾದ ರತ್ನ "ಇದೊಳ್ಳೆ ಕಥೆಯಾಯಿತಲ್ಲಾ. ಹೌದು. ಇಂತಹ ಸಾಮಾನ್ಯ ವಿಚಾರವನ್ನು ವೇದಾಂತದಂತೆ ಹೇಳುತ್ತಿರುವೆಯಲ್ಲಾ, ನಿನ್ನ ಒಣ ಪಾಂಡಿತ್ಯಕ್ಕೆ ಮರುಳಾಗುವವನಲ್ಲ ನಾನು. ಮೊದಲು ಸಾಯುವುದಕ್ಕೆ ಸಿದ್ಧನಾಗು" ಎಂದು ತನ್ನ ಖಡ್ಗ ಎತ್ತಿದ.

"ನಿಧಾನಿಸು ರತ್ನ. ನೀನು ಅದೆಷ್ಟು ಜನರನ್ನು ಬಲಿ ತೆಗೆದುಕೊಂಡಿದ್ದೀಯೋ ಅದರ ಪಾಪದ ಗಂಟನ್ನು ನೀನೇ ಹೊರಬೇಕು ತಾನೆ?" ಎಂದರು. ರತ್ನನಿಗೆ ಒಂದು ಕ್ಷಣ ಅಳುಕಾಯಿತು. ಆದರೂ ಸಾವರಿಸಿಕೊಂಡವನಂತೆ "ಇಲ್ಲ, ನನಗೆ ಅರ್ಧಾಂಗಿ ಇದ್ದಾಳೆ. ಮಕ್ಕಳು ಇದ್ದಾರೆ. ನಾನು ದೋಚಿದ ಹಣದಿಂದ ಅವರನ್ನು ಸುಖವಾಗಿ ನೋಡಿಕೊಂಡಿದ್ದೇನೆ. ಅವರು ನನ್ನನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾರರು" ಎಂದ ಕೋಪದಿಂದ. "ಕೋಪಗೊಳ್ಳಬೇಡ ರತ್ನ. ಈ ವಿಚಾರವಾಗಿ ಯಾವತ್ತಾದರೂ ನಿನ್ನ ಮಡದಿ ಮಕ್ಕಳನ್ನು ವಿಚಾರ ಮಾಡಿದ್ದೀಯಾ? ಇಲ್ಲವಾದರೆ ಈಗಲೇ ಹೋಗಿ ವಿಚಾರ ಮಾಡು. ನೀನು ಬರುವವರೆಗೂ ಇದೇ ಸ್ಥಳದಲ್ಲಿ ನಿಂತಿರುತ್ತೇನೆ" ಎಂದು ನಾರದರು ಹೇಳಿದರು.

ರತ್ನ ತನ್ನ ಮನೆಗೆ ಹೋಗಿ ಕಾಡಿನಲ್ಲಿ ನಡೆದ ವಿಚಾರಗಳನ್ನು ಹೆಂಡತಿಗೆ ತಿಳಿಸಿ, ತಾನು ಮಾಡಿದ್ದ ಪಾಪದಲ್ಲಿ ಅರ್ಧ ಪಾಲು ನಿನ್ನದಲ್ಲವೇ? ಎಂದು ಕೇಳಿದ. ಅದಕ್ಕೆ ಪ್ರತಿಯಾಗಿ ಆತನ ಪತ್ನಿಯು "ಇಲ್ಲ. ನಿಮ್ಮ ಪಾಪದ ಗಂಟನ್ನು ಪಾಲುಮಾಡಿಕೊಳ್ಳಲು ನಾನು ಸಿದ್ಧಳಿಲ್ಲ. ಗಂಡನಾಗಿ ಸಂಸಾರದ ಹೊಣೆ ನಿಮ್ಮದು. ಆದರೆ, ನಾವು ಕೊಲೆ-ಸುಲಿಗೆ ಮಾಡಿ ನಮ್ಮನ್ನು ಸಾಕಲು ಹೇಳಲಿಲ್ಲ" ಎಂದಳು. ನಂತರ ತನ್ನ ಮಕ್ಕಳ ಹತ್ತಿರ ರತ್ನ ವಿಚಾರ ಪ್ರಸ್ತಾಪಿಸಿದ. ಮಕ್ಕಳೂ ಸಹ ತಾಯಿಯಂತೆಯೇ ಉತ್ತರಿಸಿದರು.

ರತ್ನ ಓಡೋಡಿ ಬಂದು ನಾರದ ಮುನಿಗಳಿಗೆ ದೀರ್ಘದಂಡ ನಮಸ್ಕಾರ ಮಾಡಿದ. "ಏಳು ರತ್ನ. ಕೊಲ್ಲುವುದು ಮಹಾ ಪಾಪ. ಹೋಗು, ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊ. ದೇವರು ಎಲ್ಲರನ್ನೂ ಕಾಪಾಡುವ ಕರುಣಾಮಯಿ. ಆತ ನಿನ್ನನ್ನೂ ಉದ್ಧರಿಸಬಹುದು" ಎಂದು ನಾರದರು ಆಶೀರ್ವದಿಸಿದರು.

ಆಯುಧಗಳನ್ನು ಬಿಸಾಡಿದ ರತ್ನ ಕಾಡಿನ ಮಧ್ಯೆ ಹರಿಯುವ ತಮಸಾ ನದಿ ತೀರದಲ್ಲಿ ಧ್ಯಾನಕ್ಕೆ ಕುಳಿತ. ದಿನಗಳು ಕಳೆದವು. ತಿಂಗಳುಗಳು, ವರ್ಷಗಳೇ ಉರುಳಿದವು. ಆತನಿಗೆ ಬಾಹ್ಯ ಪ್ರಜ್ಞೆಯೇ ಇರಲಿಲ್ಲ. ಜಡವಸ್ತುವಿನಂತೆ ಕುಳಿತಿದ್ದ ಇವನ ಸುತ್ತಲೂ ಗೆದ್ದಲು ಹುತ್ತ ಕಟ್ಟಿದವು.

ರತ್ನನಿಗೆ ಜ್ಞಾನೋದಯವಾದಾಗ ಹುತ್ತದಿಂದ ಹೊರಬಂದ. ಬೆಂಕಿಯಲ್ಲಿ ಬೆಂದ ಚಿನ್ನ ಸುಂದರ ಆಭರಣವಾಗುವಂತೆ ಅವನ ಮನಸ್ಸು ಪರಿಶುದ್ಧವಾಗಿತ್ತು. ಅವನ ಮನಸ್ಸಿನಲ್ಲಿ ಕರುಣೆಯ ಸಾಗರವೇ ಹರಿಯಿತು. ರಕ್ತಕ್ಕಾಗಿ ಹಪಹಪಿಸುತ್ತಿದ್ದ ಕೈಗಳು ಪ್ರೀತಿಯಿಂದ ಜೀವಕೋಟಿಯನ್ನು ಅಪ್ಪಿಕೊಂಡಿತು. ತಾಯಿಯ ಗರ್ಭದಿಂದ ಮರುಹುಟ್ಟು ಪಡೆದವನಂತೆ ಕರುಣಾಮೂರ್ತಿಯಾಗಿ, ಮುಂದೆ ವಾಲ್ಮೀಕಿ ಮಹರ್ಷಿಯೆಂದು (ವಾಲ್ಮೀಕಿ ಎಂದರೆ ಹುತ್ತ ಎಂದರ್ಥ) ಪ್ರಖ್ಯಾತಿಗೊಂಡು ರಾಮಾಯಣ ರಚಿಸಿದರು. ರಾಮನ ಈ ಚರಿತೆಯು ಭೂಲೋಕದ ನಮ್ಮೆಲ್ಲರಿಗೆ ದಾರಿದೀಪವಾಗಿದೆ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ನಂದಿನಿ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 29, 2018

ಬುದ್ಧಿವಂತ ಕುಂಟು ಮೇಕೆ

ಒಂದು ಊರು. ಆ ಊರಿನ ಹೆಸರು ರಾಮಪುರ. ಆ ಊರಿನಲ್ಲಿ ಮೇಕೆಗಳನ್ನು ಮತ್ತು ಕುರಿಗಳನ್ನು ಸಾಕುತ್ತಿದ್ದರು. ಅದೇ ಊರಿನಲ್ಲಿ ಹತ್ತು-ಹನ್ನೆರಡು ವರ್ಷದ ಹುಡುಗ ಇದ್ದನು. ಆ ಹುಡುಗನ ಹೆಸರು ರಹೀಮ ಎಂದು. ಆ ಹುಡುಗ ಅವರ ಮನೆಯಲ್ಲಿರುವ 12 ಮೇಕೆಗಳನ್ನು 5 ಕುರಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಹುಲ್ಲನ್ನು ಮೇಯಲು ಬಿಡುತ್ತಿದ್ದನು. ಆ ಮೇಕೆಗಳ ಹಿಂಡಿನಲ್ಲಿ ಒಂದು ಕುಂಟು ಮೇಕೆ ಇತ್ತು. ಆ ಮೇಕೆಗೆ ಮಾತು ಬರುತ್ತಿತ್ತು. ಸಂಜೆ ಆಯಿತು, ರಹೀಮ ಮೇಕೆ ಕುರಿಗಳನ್ನು ಮನೆಗೆ ಕರೆದುಕೊಂಡು ಬಂದನು. ಊಟ ಮಾಡಿ, ಮೇಕೆ ಕುರಿಗಳನ್ನು ಲೆಕ್ಕ ಮಾಡಿದ. ಸರಿಯಾಗಿದ್ದವು. ಕುಂಟು ಮೇಕೆಯನ್ನು ಮಾತನಾಡಿಸಿ ಹೋಗಿ ಮಲಗಿಕೊಂಡ.

ಮರುದಿನ ಬೆಳಿಗ್ಗೆ ನಿತ್ಯಕ್ರಮಗಳನ್ನು ಮುಗಿಸಿ, ಊಟ ಮಾಡಿ, ರಹೀಮ ಮೇಕೆ ಕುರಿಗಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಾನೆ. ಮಧ್ಯಾಹ್ನದ ಸಮಯದಲ್ಲಿ ತುಂತುರು ಮಳೆ ಬರುತ್ತಿತ್ತು. ಇದ್ದಕ್ಕಿದ್ದ ಹಾಗೆ ಜೋರಾಗಿ ಮಳೆ ಬಂತು. ಆಗ ಎಲ್ಲಾ ಮೇಕೆ ಕುರಿಗಳನ್ನು ಕರೆದುಕೊಂಡು ಮನೆಗೆ ಓಡಿಬಂದ ರಹೀಮ. ಎಂದಿನಂತೆ ಊಟ ಮಾಡಿ ಕುಂಟು ಮೇಕೆಯನ್ನು ಮಾತನಾಡಿಸಲು ಬಂದ. ಆದರೆ, ಕುಂಟು ಮೇಕೆ ಇರಲಿಲ್ಲ. ಅದಕ್ಕೆ ರಹೀಮ ನಿಧಾನವಾಗಿ ಬರುತ್ತಿರುತ್ತದೆ, ಯೋಚನೆ ಬೇಡ ಅಂತ ಸುಮ್ಮನಾದ.

ಆದರೆ ಆ ಕುಂಟು ಮೇಕೆ ಓಡಲು ಆಗದೆ ಕಾಡಿನಲ್ಲಿ ಇರುತ್ತದೆ. ಕಾಡಿನಲ್ಲಿ ಇದ್ದ ಗುಹೆಯ ಒಳಗಡೆ ಕುಂಟು ಮೇಕೆ ಹೋಗಿದ್ದನ್ನು ಒಂದು ಹುಲಿ ನೋಡುತ್ತದೆ. ಆ ಗುಹೆಯ ಒಳಗಡೆ ಕಾಟುದೇವರ ವಿಗ್ರಹ ಇರುತ್ತದೆ. ಹುಲಿ ಮೇಕೆಯನ್ನು ತಿನ್ನಲು ಮುಂದಾಗುತ್ತದೆ. ಇದನ್ನು ನೋಡಿದ ಮೇಕೆಗೆ ಒಂದು ಉಪಾಯ ಹೊಳೆಯುತ್ತದೆ.

"ನೋಡು ಹುಲಿ, ಕಾಟುದೇವರು ಪ್ರತ್ಯಕ್ಷವಾಗಿ 10 ಜಿಂಕೆ, 10 ಸಿಂಹ, 10 ಹುಲಿಗಳನ್ನು ತಿಂದರೆ ಶಕ್ತಿ ಬರುತ್ತದೆ ಎಂದು ಹೇಳಿದರು. ನಾನು ಈಗ 10 ಜಿಂಕೆ, 10 ಸಿಂಹ, 9 ಹುಲಿಗಳನ್ನು ತಿಂದಿದ್ದೇನೆ. ಇನ್ನೊಂದು ಹುಲಿಯನ್ನು ತಿನ್ನಬೇಕು, ನೀನೇ ಬಂದೆ" ಎಂದು ಮೇಕೆ ಹೇಳುತ್ತದೆ. ಇದನ್ನು ಕೇಳಿ ಕಾಟುದೇವರ ಮಾತು ನಿಜ ಅಂತ ನಂಬಿದ ಹುಲಿ ಹೆದರಿ ಪಲಾಯನ ಮಾಡಿತು. ಮರುದಿನ ಕುಂಟು ಮೇಕೆ ಕಾಡಿಗೆ ಹುಲ್ಲು ಮೇಯಲು ಬಂದ ರಹೀಮನ ಜೊತೆ ಮನೆಗೆ ಹೋಯಿತು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಹರಿತೇಜ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 28, 2018

ಆಸೆಬುರುಕ ನಾಯಿ

ಚಿತ್ರ ಕೃಪೆ : ಗೂಗಲ್

ಒಂದು ನಾಯಿಗೆ ಒಮ್ಮೆ ಎಲುಬಿನ ತುಂಡೊಂದು ಸಿಕ್ಕಿತು. ಅದನ್ನು ತಿನ್ನಲು ನಾಯಿ ಸರಿಯಾದ ಸ್ಥಳವನ್ನು ಹುಡುಕುತ್ತಾ ಹೊರಟಿತು. ಬಾಯಿಯಲ್ಲಿ ಮೂಳೆಯನ್ನು ಹಿಡಿದುಕೊಂಡು ಹೋಗುವಾಗ ಒಂದು ಸೇತುವೆ ಬಂದಿತು. ಆ ಸೇತುವೆಯನ್ನು ದಾಡುತ್ತಿರುವಾಗ ನಾಯಿಗೆ ತನ್ನ ಪ್ರತಿಬಿಂಬ ನೀರಿನಲ್ಲಿ ಕಂಡಿತು.

ಆಗ ನಾಯಿ ಅದು ಮತ್ತೊಂದು ನಾಯಿ ತನ್ನ ಬಾಯಿಯಲ್ಲಿ ಎಲುಬಿನ ತುಂಡು ಹಿಡಿದಿದೆ ಎಂದು ತಪ್ಪಾಗಿ ಭಾವಿಸಿತು. ಆ ಇನ್ನೊಂದು ನಾಯಿ ಹಿಡಿದಿರುವ ಮೂಳೆಯ ಮೇಲೂ ನಾಯಿಗೆ ಆಸೆಯಾಯಿತು. ದುರಾಸೆಯಿಂದ ನಾಯಿ ನೀರಿನ ಪ್ರತಿಬಿಂಬಕ್ಕೆ 'ಬೌ ಬೌ' ಎಂದು ಬೊಗಳಿಬಿಟ್ಟಿತು.

ಬೊಗಳಿದ ಕೂಡಲೇ ತನ್ನ ಬಾಯಿಯಲ್ಲಿದ್ದ ಎಲುಬಿನ ತುಂಡು ಫಟ್ಟೆಂದು ಜಾರಿ ನೀರಿಗೆ ಬಿದ್ದಿತು. ನಾಯಿ ತಬ್ಬಿಬ್ಬಾಗಿ, ತನ್ನ ತಪ್ಪು ಅರಿವಾಗಿ ನೀರಿನಲ್ಲಿ ಬಗ್ಗಿ ತನ್ನ ಕಾಲಿನಿಂದ ಅತ್ತಿತ್ತ ಮೂಳೆಗಾಗಿ ಹುಡುಕಾಡಿತು. ನೀರಿನಲ್ಲಿ ಬಿದ್ದ ಎಲುಬಿನ ತುಂಡು ಎಲ್ಲೋ ದೂರಕ್ಕೆ ಹೋಗಿತ್ತು. ನಾಯಿಗೆ ಅದು ಸಿಕ್ಕಲಿಲ್ಲ. ಹುಡುಕಿ ಹುಡುಕಿ ನಿರಾಸೆಯಾದ ನಾಯಿಯ ಮೋರೆ ಸಪ್ಪಗಾಯಿತು. ಏನೂ ತೋಚದೆ ಸುಮ್ಮನೆ ಮುಂದೆ ನಡೆಯಿತು.

ಅತಿಯಾಸೆ ಗತಿಕೇಡು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಮಂಜುಳ, ಬಿ.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 27, 2018

ನಮ್ಮ ಅಮ್ಮ

ಚಿತ್ರ ಕೃಪೆ : ಗೂಗಲ್


ಮರೆಯದ ಮಮತೆ ನೀಡಿ
ಪ್ರೀತಿ ವಾತ್ಸಲ್ಯ ನಿನ್ನಲಿ ಕೂಡಿ
ಒಳ್ಳೆ ಕೆಲಸಗಳನ್ನು ಮಾಡಿಸಿ
ನಮಗೆ ದೇವರು ನೀನಮ್ಮ.

ಯಶಸ್ಸಿನ ಪಥ ತೋರಿಸಿ
ನಮ್ಮಲ್ಲಿ ಜ್ಞಾನವನ್ನು ತುಂಬಿಸಿ
ಸಮಾಜದಲ್ಲಿ ಒಳ್ಳೆಯವರನ್ನಾಗಿಸಿ
ನಮಗೆ ದೇವರು ನೀನಮ್ಮ.

ಕಷ್ಟ ನೋವುಗಳನ್ನು ಸಹಿಸಿ
ನಮಗೆ ಬೇಕಾದುದ್ದನ್ನು ಕೊಡಿಸಿ
ನಮ್ಮ ಬದುಕನ್ನು ಸೃಷ್ಟಿಸಿ
ನಮಗೆ ದೇವರು ನೀನಮ್ಮ.

ಅಮ್ಮನ ಮುತ್ತಿನ ಮಾತುಗಳು
ನಮ್ಮ ಜೀವನದ ನುಡಿಮುತ್ತುಗಳು
ನಮ್ಮ ತಾಯಂದಿರನ್ನು ಮರೆಯದಿರಿ
ನಮ್ಮೆಲ್ಲರ ಅಮ್ಮಂದಿರು ದೇವರು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ನವೀನ್ ಕುಮಾರ್

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 26, 2018

ಜಾಣ ಕಾಗೆ

ಚಿತ್ರ ಕೃಪೆ : ಗೂಗಲ್

ಒಂದು ದಿನ ಕಾಗೆಗೆ ಬಹಳ ಬಾಯಾರಿಕೆಯಾಗಿತ್ತು. ಅದು ನೀರಿಗಾಗಿ ಹುಡುಕುತ್ತಾ ಹುಡುಕುತ್ತಾ, ಹಾರುತ್ತಾ ಹೊರಟಿತ್ತು. ಬಹಳ ಸುತ್ತಾಡಿದ ಮೇಲೆ ದೂರದಲ್ಲಿ ಒಂದು ಬಿಂದಿಗೆ ಕಾಣಿಸಿತು. ಕಾಗೆಗೆ ಸಂತೋಷ ಉಕ್ಕಿ ಹರಿಯಿತು.

ಸಂತೋಷದಿಂದ ಬಿಂದಿಗೆ ಹತ್ತಿರಕ್ಕೆ ಹಾರುತ್ತಾ ಬಂದಿತು. ಬಿಂದಿಗೆಯ ಮೇಲೆ ಕೂತು, ಒಳಗೆ ಇಣುಕಿ ನೋಡಿತು. ಆದರೆ ನೀರು ಬಿಂದಿಗೆಯ ತಳದಲ್ಲಿ ಇತ್ತು. ಮುಂದೇನು ಮಾಡುವುದು? ಎಂದು ಒಂದು ಕ್ಷಣ ಯೋಚಿಸಿತು. ಕಾಗೆಗೆ ತುಂಬಾ ಬಾಯಾರಿಕೆಯಾಗಿತ್ತು. ನೀರನ್ನು ಕುಡಿಯಲೇಬೇಕಿತ್ತು. ನಿರಾಶೆಯಾಗದೇ ಒಂದು ಉಪಾಯ ಮಾಡಿತು.

ಸಮೀಪದಲ್ಲಿ ಸಣ್ಣ ಸಣ್ಣ ಕಲ್ಲುಗಳು ಬಿದ್ದಿದ್ದವು. ಅವುಗಳನ್ನು ಒಂದೊಂದಾಗಿ ತಂದು ಬಿಂದಿಗೆಯಲ್ಲಿ ಹಾಕಲು ಪ್ರಾರಂಭಿಸಿತು. ಕಲ್ಲುಗಳು ಬಿಂದಿಗೆಯಲ್ಲಿ ತುಂಬುತ್ತಿದ್ದಂತೆ ನೀರು ಮೇಲೆ ಬಂದಿತು. ಸಂತೋಷಗೊಂಡ ಕಾಗೆ ಬಗ್ಗಿ ತನ್ನ ಕೊಕ್ಕಿನಿಂದ ನೀರನ್ನು ಕುಡಿದು ದಾಹವನ್ನು ಇಂಗಿಸಿಕೊಂಡಿತು. ನಂತರ ಹಾಯಾಗಿ ಹಾರುತ್ತಾ ಮುಂದೆ ಮುಂದೆ ಹೊರಟಿತು.

ಸಮಸ್ಯೆ ಬಂದಾಗ ಉಪಾಯದಿಂದ ಎದುರಿಸಬೇಕು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ನವ್ಯ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 25, 2018

ಚುಟುಕಗಳು

ತಾಯಿ
ಜಗತ್ತಿನಲ್ಲಿ ಹಣದಿಂದ ಏನೆಲ್ಲಾ ಕೊಂಡುಕೊಳ್ಳಬಹುದು
ಆದರೆ, ತಾಯಿಯ ಪ್ರೀತಿ ಮಾತ್ರ ಕೊಂಡುಕೊಳ್ಳುವುದಕ್ಕೆ ಆಗಲ್ಲ.
ಜಗತ್ತಿನಲ್ಲಿ ಏನೆಲ್ಲಾ ಮರೆಯಬಹುದು
ಆದರೆ, ತಾಯಿಯ ಋಣ ಮರೆಯುವುದಕ್ಕೆ ಆಗಲ್ಲ.


ಕಿವಿಮಾತು
ಮಳೆ ಬಂದ್ರೆ ಮರದ ಕೆಳಗೆ ಹೋಗಬೇಡ
ಕಷ್ಟ ಬಂದ್ರೆ ನೆಂಟರ ಮನೆಗೆ ಹೋಗಬೇಡ
ಐಶ್ವರ್ಯ ಬಂದ್ರೆ ಜನರನ್ನ ಮರೆಯಬೇಡ
ಸುಖ ಬಂದ್ರೆ ಸ್ನೇಹಿತರನ್ನ ಮರೆಯಬೇಡ.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಮಹೇಶ, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 24, 2018

ಹಾರುವ ಚಿಟ್ಟೆ

ಹಾರುವ ನಲಿಯುವ
ಚಿಟ್ಟೆಯೇ ನಿಲ್ಲು
ನಾನೂ ಬರುವೆ
ನಿನ್ನ ಬಣ್ಣವ ತಿಳಿವೆ.


ಕೆಂಪು, ಗುಲಾಬಿ,
ಹಳದಿ, ನೀಲಿ,
ಹಸಿರು ಬಣ್ಣ ಬಣ್ಣ
ನೋಡಲು ಬಲು ಚೆಂದ.


ಸಂಪಿಗೆ, ಶೇವಿಗೆ
ಗುಲಾಬಿ, ಮಲ್ಲಿಗೆ
ಹೂಗಳಿಗೆಲ್ಲಾ ನೀನೇ ರಾಜ
ಹಾರುವೆ, ನಲಿಯುವೆ
ಏನಿದು ನಿನ್ನ ಮಾಯೆ?


ಗಿಡಗಳ ನಡುವೆ ಆಡಲು
ಬಂದೆ ನಾ ಬಲು ದೂರ
ಆಗ ನನಗೆ ಕಂಡಿತು
ನಿನ್ನ ಬಗೆ ಬಗೆ ಬಣ್ಣದ
ಚಲುವಿನ ಚಿತ್ತಾರ.


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಸ್ಪಂದನ, ಆರ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 23, 2018

ಪದ್ಯಗಳು

ಚಿತ್ರ ಕೃಪೆ : ಗೂಗಲ್

ನಮ್ಮ ಧ್ವಜ
ಅಲ್ಲಿ ನೋಡು ಏನಿದೆ?
ಬಾನಿನಗಲ ಹರಡಿದೆ
ಕಣ್ಗಳನೆಲ್ಲಾ ಸೆಳೆದಿದೆ
ಮನವನೆಲ್ಲಾ ತಣಿಸಿದೆ.

ಬಣ್ಣ ಅದಕೆ ಮೂರು
ಕೇಸರಿ ಬಿಳಿ ಹಸಿರು
ಅದುವೆ ದೇಶದ ಉಸಿರು
ತ್ರಿವರ್ಣ ಧ್ವಜವೇ ಹೆಸರು..



ನಮ್ಮ ಶಾಲೆ
ಬನ್ನಿರಿ ಬನ್ನಿರೋ ಕೂಡಿ ಹೋಗೋಣ
ಜ್ಞಾನದ ಆಲಯದಿ ನಾವು ಕಲಿಯೋಣ.

ಬೇರೆ ಬೇರೆ ಮನೆಗಳಿಂದ ಬರುವೆವು ನಾವು
ವಿಧ ವಿಧದ ಜ್ಞಾನವನ್ನು ಕಲಿವೆವು ದಿನವೂ
ಮೇಲು-ಕೀಳೆಂಬ ಬೇಧ ಮರೆಯುವ ನಾವು
ನಾವೆಲ್ಲಾ ಒಂದೇ ತಿಳಿಯಿರಿ ನೀವು.


ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ನರೇಶ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 22, 2018

ಕೋತಿ ಮತ್ತು ಅಳಿಲು

ಒಂದು ಕೋತಿ ಮರದ ಮೇಲೆ ಆರಾಮವಾಗಿ ಕುಳಿತಿತ್ತು. ಆ ಕೋತಿಯ ಬಾಲ ತುಂಬಾ ಉದ್ದವಿತ್ತು, ಅದು ನೆಲದವರೆಗೆ ನೇತಾಡುತ್ತಿತ್ತು. ಒಂದು ಅಳಿಲು ಕುಣಿದಾಡುತ್ತಾ ಅಲ್ಲಿಗೆ ಬಂದಿತು. ಅಳಿಲು ಕೋತಿಯ ಬಾಲ ಹಿಡಿದು "ಈ ಜೋಲಾಲಿ ಎಷ್ಟು ಚಂದ!" ಎಂದು ಸಂತೋಷಪಟ್ಟಿತು. ಕೋತಿಯ ಉದ್ದನೆಯ ಬಾಲ ಹಿಡಿದು ಅಳಿಲು ಜೋತಾಡತೊಡಗಿತು.

ಕೋತಿಗೆ ಕಚಗುಳಿ ಆಯಿತು. ಅದು ಕೆಳಗೆ ನೋಡಿತು ಮತ್ತು ನಗುತ್ತಾ ಹೇಳಿತು "ತಂಗಿ, ಏನು ಮಾಡುತ್ತಿರುವೆ? ನನಗೆ ಕಚಗುಳಿ ಆಗುತ್ತಿದೆ". ಆಗ ಅಳಿಲಿಗೆ ಗಾಬರಿಯಾಯಿತು. "ಮಂಗಣ್ಣಾ, ಇದು ನಿನ್ನ ಬಾಲವೇ? ನನಗೆ ತಿಳಿಯಲಿಲ್ಲ. ಜೋಕಾಲಿ ಎಂದು ಜೀಕುತ್ತಿದ್ದೆ. ನನ್ನನ್ನು ಕ್ಷಮಿಸು" ಎಂದು ಹೇಳಿತು. ಬಾಲವನ್ನು ಬಿಟ್ಟಿತ್ತು.

ಕೋತಿ ಅಳಿಲಿಗೆ "ನಿನಗೆ ಗೊತ್ತಿಲ್ಲದೆ ತಪ್ಪು ಮಾಡಿದ್ದೀಯ. ಪರವಾಗಿಲ್ಲ, ಹೋಗಿ ಬೇರೆ ಕಡೆ ಆಟ ಆಡು.." ಎಂದು ಹೇಳಿತು. ಅಳಿಲು ಕೋತಿಯ ಬಾಲ ಬಿಟ್ಟು, ಓಡಿ ಹೋಗಿ ಮರದ ಕೊಂಬೆಯನ್ನು ಏರಿತು.

ಗೊತ್ತಿಲ್ಲದೆ ತಪ್ಪು ಮಾಡಿದಾಗ ಅವರನ್ನು ಕ್ಷಮಿಸಬೇಕು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಮಮತ, ಆರ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 21, 2018

ವ್ಯತ್ಯಾಸ

ಅಮ್ಮ ತೊಟ್ಟಿದ್ದ ತೋಳು
ಹರಿದ ರವಿಕೆ -
ಜನರ ಕಣ್ಣಿಗೆ ಅದು ಗೇಲಿ.

ಆಂಟಿ ತೊಟ್ಟಿದ್ದ ತೋಳೇ
ಇಲ್ಲದ ರವಿಕೆ -
ಅದೇ ಜನರ ಕಣ್ಣಿಗೆ ಹೊಸ ಶೈಲಿ.

* * *

ಮೇಲಿದೆ ಗಗನ
ಕೆಳಗಿದೆ ಭುವನ
ಹೇಗಿದೆ ಈ ನನ್ನ ಕವನ?

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಚಂದ್ರಶೇಖರ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 20, 2018

ತಾಯಿ ಶಾರದೆ

ಓ ತಾಯಿ ಶಾರದೆ ನಮ್ಮಮ್ಮ ನೀನು
ನಮ್ಮ ಬಳಿ ನೀನು ಬಾರಮ್ಮ
ನಿನ್ನನ್ನು ಹೃದಯಾಳದಿಂದ ಬೇಡುವೆನಮ್ಮ.

ನಿತ್ಯ ಶುಕ್ರವಾರ ನಿನ್ನನ್ನು
ನಾವು ಪೂಜಿಸುವೆವಮ್ಮ
ವಿದ್ಯೆಯನ್ನು ಕೊಡು ದೇವಿ
ಅಕ್ಷರವ ಕಲಿಸಮ್ಮ.

ಪಾಠ ಶಾಲೆಯೇ ತಾಯಿ
ನಿನ್ನ ಮಂದಿರವಮ್ಮ
ಆ ಮಂದಿರದಲ್ಲಿ
ನಿನ್ನಯ ಮೂರ್ತಿ ಸುಂದರವಮ್ಮ.

ರತ್ನದಂತಹ ಮಾತುಗಳನ್ನಾಡಿ
ಅರಿವನ್ನು ಮೂಡಿಸಮ್ಮ
ನಮ್ಮ ಕೋರಿಕೆಯನ್ನು
ಆಲಿಸಮ್ಮಾ, ನಮ್ಮನು ಪಾಲಿಸಮ್ಮ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಲೀಲಾವತಿ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 19, 2018

ನುಡಿಮುತ್ತುಗಳು

  1. ಆಚಾರವೇ ಸ್ವರ್ಗ, ಅನಾಚಾರವೇ ನರಕ - ಬಸವಣ್ಣ
  2. ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ - ಬಸವಣ್ಣ
  3. ಈಸಬೇಕು, ಇದ್ದು ಜಯಿಸಬೇಕು - ಪುರಂದರದಾಸರು
  4. ದಾಸ್ಯ ಜೀವನದಲ್ಲಿ ಬದುಕುವುದಕ್ಕಿಂತ, ತಾಯಿಯ ಗರ್ಭದಲ್ಲಿ ಸಾಯುವುದು ಮೇಲು - ಡಾ. ಬಿ. ಆರ್. ಅಂಬೇಡ್ಕರ್
  5. ಕಾನೂನು ನೀಡುವ ಯಾವ ಸ್ವಾತಂತ್ರ್ಯವೂ ಪ್ರಯೋಜನಕ್ಕೆ ಬಾರದು - ಡಾ. ಬಿ. ಆರ್. ಅಂಬೇಡ್ಕರ್ 
  6. ಅನ್ನ ದೇವರ ಮುಂದೆ, ಇನ್ನು ದೇವರು ಉಂಟೇ? - ಸರ್ವಜ್ಞ
  7. ಭಯ ಎನ್ನುವುದು ಎಲ್ಲಕಿಂತಲೂ ದೊಡ್ಡ ಖಾಯಿಲೆ - ಮಹಾತ್ಮ ಗಾಂಧೀಜಿ
  8. ಮನಸ್ಸಿನ ದುರ್ಬಲತೆಗಿಂತ ಭಯಂಕರ ಪಾಪವು ಇನ್ನೊಂದಿಲ್ಲ - ಸ್ವಾಮಿ ವಿವೇಕಾನಂದ
  9. ವಿದ್ಯೆ ಸಾಧಕನ ಸ್ವತ್ತೇ ಹೊರೆತು ಸೋಮಾರಿಯ ಸ್ವತ್ತಲ್ಲ – ವೀಣೆ ಶೇಷಣ್ಣ
  10. ನಿದ್ದೆಯಲ್ಲಿ ಕಾಣುವಂತಹದ್ದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದೇ ನಿಜವಾದ ಕನಸು - ಡಾ. ಎ. ಪಿ. ಜೆ. ಅಬ್ದುಲ್ ಕಲಾಂ

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಪದ್ಮನಾಭ, ಎಂ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 18, 2018

ಚುಟುಕಗಳು

ಮುಳ್ಳಿನ ಮಧ್ಯೆ ಹೂವಿರುವಂತೆ
ನೀರಿನ ಮಧ್ಯೆ ಮೀನಿರುವಂತೆ
ನಕ್ಷತ್ರಗಳ ಮಧ್ಯೆ ಚಂದ್ರನಿರುವಂತೆ
ಹಾಲಿನಂತಹ ನಿನ್ನ ಮನಸ್ಸಿನಲ್ಲಿ
ಈ ನಿನ್ನ ಸ್ನೇಹಿತೆಯ ನೆನಪಿರಲಿ.

* * *

ಹಾಲು ಕಪ್ಪಗಾಗುವವರೆಗೂ
ಕಾಗೆ ಬೆಳ್ಳಗಾಗುವವರೆಗೂ
ಆಕಾಶ ಭೂಮಿ ಸೇರುವವರೆಗೂ
ನನ್ನ ನಿನ್ನ ಸ್ನೇಹ, ಪ್ರೀತಿ
ಮನಸ್ಸು ಒಂದೇ ಆಗಿರಲಿ.

* * *

ಎಸ್.ಎಸ್.ಎಲ್.ಸಿ. ಒಂದು ವರ್ಷ
ಪಿ.ಯು.ಸಿ. ಎರಡು ವರ್ಷ
ಡಿಗ್ರಿ ಮೂರು ವರ್ಷ
ನನ್ನ ನಿನ್ನ ಸ್ನೇಹ ನೂರಾರು ವರ್ಷ.

* * *

ಭೂಮಿ ತುಂಬ ಜೀವಿಗಳು
ಆಕಾಶದ ತುಂಬ ನಕ್ಷತ್ರಗಳು
ಸಮುದ್ರದ ತುಂಬ ಅಲೆಗಳು
ನನ್ನ ಹೃದಯದ ತುಂಬ
ನಿನ್ನ ನೆನಪುಗಳು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಭವ್ಯ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 17, 2018

ಪ್ರಾರ್ಥನೆ

ಚಿತ್ರ ಕೃಪೆ : ಗೂಗಲ್


ಅಪ್ಪನೂ ನೀನೆ, ಅಮ್ಮನೂ ನೀನೆ
ನನ್ನ ಹೊತ್ತು ಹೋಗುವ ಒಳ್ಳೆ ಕುರುಬನೂ ನೀನೆ
ಯೇಸಯ್ಯಾ..

ಅನಾಥನು ನಾನು, ಎಲ್ಲಿಗೆ ಹೋಗಲಿ?
ದರಿದ್ರನು ನಾನು, ಏನು ಮಾಡಲಿ?
ನನಗ್ಯಾರೂ ದಿಕ್ಕಿಲ್ಲ, ನನ್ನನು ತೊರೆಯದಿರು
ಯೇಸಯ್ಯಾ..

ಗತಿಹೀನನು ನಾನೆಂದು ತಿಳಿದು ನನ್ನನು ನಿಂದಿಸುತ್ತಾರೆ
ಬಲಹೀನನು ನಾನೆಂದು ತಿಳಿದು ನನ್ನನು ಹಿಂಸಿಸುತ್ತಾರೆ
ನಾನಾದರೂ ನಿನ್ನಲೇ ಭರವಸೆಯ ಇಟ್ಟಿರುವೆ
ಯೇಸಯ್ಯಾ..

ಕರೆದಿರುವೆ ನಿನ್ನ ಸೇವೆಗೆ, ನಾನದನು ಮರೆಯುವೆನೆ?
ನನ್ನ ಆಸೆಯೂ ಅದೇ, ನಿನ್ನ ಸೇವೆ
ಬೇರೇನೂ ಬೇಡ ತಂದೆ, ಕೈಹಿಡಿದು ನಡೆಸು
ಯೇಸಯ್ಯಾ..

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಸುರೇಶ, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 16, 2018

ನಾಣ್ನುಡಿಗಳು

  1. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ
  2. ದೇಶ ಸುತ್ತಿ ನೋಡು, ಕೋಶ ಓದಿ ನೋಡು
  3. ಹಾಸಿಗೆ ಇದ್ದಷ್ಟು ಕಾಲು ಚಾಚು
  4. ಮನಸ್ಸಿದ್ದರೆ ಮಾರ್ಗ
  5. ಕೈ ಕೆಸರಾದರೆ ಬಾಯಿ ಮೊಸರು
  6. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
  7. ಕಣ್ಣಿರುವ ತನಕ ನೋಟ, ಕಾಲಿರುವ ತನಕ ಓಟ
  8. ನೂರು ಬಾರಿ ಸೋತರೂ ಮತ್ತೊಮ್ಮೆ ಪ್ರಯತ್ನಿಸು
  9. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
  10. ಜ್ಞಾನಕ್ಕಾಗಿ ಪಾಠ, ಆರೋಗ್ಯಕ್ಕಾಗಿ ಆಟ

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಆಸ್ಮಭಾನು

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 15, 2018

ಭಾವ ಲಹರಿ

ನಾನು ಮುಗಿಲು ನೀನು ಕಡಲು
ಸುರಿಸೋಣ ಭರಣಿ ಮಳೆ
ನಾನು ಹೊಲ ನೀನು ಜಲ
ಬೆಳೆಸೋಣ ಹುಲುಸು ಬೆಳೆ.

ನಾನು ಎಣ್ಣೆ ನೀನು ಬತ್ತಿ
ಬೆಳಗೋಣ ಮೂಲೆ ಮುಡುಕು
ನಾನು ಎಲರು ನೀನು ಅಲರು
ಹರಡೋಣ ಕಂಪು ಅಗರು.

ನಾನು ಭಾವ ನೀನು ಲಹರಿ
ಹಾಡೋಣ ಭಾವ ಗೀತೆ
ನಾನು ಗೆಜ್ಜೆ ನೀನು ಹೆಜ್ಜೆ
ಮಾಡೋಣ ಭರತ ನಾಟ್ಯ.

ನಾನು ಕುಂಚ ನೀನು ಬಣ್ಣ
ಬಿಡಿಸೋಣ ನವ್ಯ ಚಿತ್ರ
ನಾನು ಸಾಕ್ಷಿ ನೀನು ಅಕ್ಷಿ
ಸಾರೋಣ ನಗ್ನ ಸತ್ಯ.

ನಾನು ಕವಿ ನೀನು ಕಿವಿ
ಹಾಡಿ ಕೇಳೋಣ ಬನ್ನ ಬವಣೆ
ನಾನು ಪಥಿಕ ನೀನು ರಥಿಕ
ಸವೆಸೋಣ ಬಾಳ ಪಯಣ.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ನಿರಂಜನ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 14, 2018

ಮೈಗಳ್ಳ ಕೋಗಿಲೆ

ಚಿತ್ರ ಕೃಪೆ : ಗೂಗಲ್

ಒಂದು ಊರಿತ್ತು. ಆ ಊರಿನಲ್ಲಿ ಒಂದು ದೊಡ್ಡದಾದ ಆಲದ ಮರವಿತ್ತು. ಆ ಆಲದ ಮರದಲ್ಲಿ ಒಂದು ಕಾಗೆ ವಾಸವಾಗಿತ್ತು. ಕಾಗೆಯು ದಿನಾ ಆಹಾರವನ್ನು ಹುಡುಕುತ್ತಾ ಹೋಗುತ್ತಿತ್ತು. ಸಿಕ್ಕಿದ ಆಹಾರವನ್ನು ತಿಂದು ಗೂಡಿಗೆ ಬರುತ್ತಿತ್ತು.

ಒಂದು ದಿನ ಮನೆಯ ಮುಂದೆ ಒಬ್ಬ ಹುಡುಗ ಪಕ್ಷಿಗಳಿಗೆ ಧಾನ್ಯಗಳನ್ನು ಹಾಕುತ್ತಿದ್ದ. ಕಾಗೆಯು ಅಲ್ಲಿಗೆ ಹೋಗಿ ಧಾನ್ಯಗಳನ್ನು ಎತ್ತಿಕೊಂಡು ಬಂದು ಮರದ ಮೇಲೆ ಕುಳಿತುಕೊಂಡು ಧಾನ್ಯಗಳನ್ನು ತಿಂದು ತನ್ನ ಗೂಡಿಗೆ ಹಾರಿ ಹೋಯಿತು.

ಸ್ವಲ್ಪ ದಿನಗಳ ನಂತರ ಕಾಗೆಯು ತನ್ನ ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟಿತು. ಒಂದು ದಿನ ಸೋಮಾರಿ ಕೋಗಿಲೆಯು ಕಾಗೆ ಇಲ್ಲದ ಸಮಯದಲ್ಲಿ ಕಾಗೆಯ ಗೂಡಿಗೆ ಬಂದು ಒಂದು ಮೊಟ್ಟೆಯನ್ನು ಇಟ್ಟು ಹಾರಿ ಹೋಯಿತು.

ಕಾಗೆ ತನ್ನ ಗೂಡಿಗೆ ಬಂದಿತು. ಸ್ವಲ್ಪ ದಿನದವರೆಗೆ ಕಾಗೆ ಮೊಟ್ಟೆಗಳಿಗೆ ಕಾವು ಕೊಟ್ಟಿತು. ಮೊಟ್ಟೆಗಳು ಕೆಲವು ದಿನಗಳ ನಂತರ ಒಡೆದು ಮರಿಗಳು ಹೊರಗೆ ಬಂದವು. ನೋಡಲು ಎಲ್ಲ ಮರಿಗಳೂ ಒಂದೇ ರೀತಿ ಇದ್ದವು. ಎರಡು ದಿನಗಳ ನಂತರ ಕಾಗೆ ಮರಿಗಳು ಕಾ.. ಕಾ.. ಎನ್ನಲು ಪ್ರಾರಂಭಿಸಿದವು. ಆದರೆ ಕೋಗಿಲೆ ಮರಿಗೆ ಕಾ.. ಕಾ.. ಎನ್ನಲು ಬರಲಿಲ್ಲ. ಕಾಗೆ ಅದನ್ನು ಕುಕ್ಕಲು ಹೋದಾಗ ಕೋಗಿಲೆ ಬಂದು ಅದರ ಮರಿಯನ್ನು ಎತ್ತಿಕೊಂಡು ಹಾರಿ ಹೋಯಿತು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಚೈತ್ರ, ಆರ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 13, 2018

ತರಕಾರಿ

ಚಿತ್ರ ಕೃಪೆ : ಗೂಗಲ್

ಕೊಳ್ಳಿರಿ ತಾಜಾ ತರಕಾರಿ
ಆರೋಗ್ಯಕ್ಕೆ ಹಿತಕಾರಿ
ಕೊಳ್ಳಿರಿ ತಾಜಾ ತರಕಾರಿ.

ನಾಲಿಗೆಗೂ ಇದು ರುಚಿಕಾರಿ
ಅಪ್ಪನ ಜೇಬಿಗೂ ಸಹಕಾರಿ
ನಾವಾಗೋಣ ಸಸ್ಯಾಹಾರಿ
ಕೊಳ್ಳಿರಿ ತಾಜಾ ತರಕಾರಿ.

ಎಣ್ಣೆಗಾಯಿಗೆ ಬದನೇಕಾಯಿ
ಗೊಜ್ಜಿಗೆ ಬೇಕು ಬೆಂಡೇಕಾಯಿ
ಬಜ್ಜಿಗೆ ಬೇಡವೆ ಹೀರೇಕಾಯಿ
ಮಜ್ಜಿಗೆ ಹುಳಿಗೆ ಕುಂಬಳಕಾಯಿ
ಕೊಳ್ಳಿರಿ ತಾಜಾ ತರಕಾರಿ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಅಶ್ವಿನಿ ಬಣಗಾರ್

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 12, 2018

ಗಾದೆಗಳು

ಗಾದೆಗಳು ಎಂದರೇನು?
ಜನ ಸಾಮಾನ್ಯರ ಅನುಭವದ ಸಾರವೇ ಗಾದೆಗಳು.

ಗಾದೆಗಳು:
  1. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
  2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ
  3. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
  4. ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು
  5. ಎತ್ತಿಗೆ ಜ್ವರ ಬಂದರೆ, ಎಮ್ಮಗೆ ಬರೆ ಹಾಕಿದಂತೆ
  6. ಕೈಕೆಸರಾದರೆ ಬಾಯಿ ಮೊಸರು
  7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ?
  8. ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು
  9. ಮಾತು ಬೆಳ್ಳಿ, ಮೌನ ಬಂಗಾರ
  10. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು
  11. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ
  12. ಮನೆಗೆ ಮಾರಿ ಊರಿಗೆ ಉಪಕಾರಿ
  13. ಆಳಾಗಬಲ್ಲವನು ಅರಸನಾಗಬಲ್ಲ
  14. ಊರಿಗೆ ದೊರೆ ಆದರೂ ತಾಯಿಗೆ ಮಗನೇ
  15. ಹೆತ್ತವರಿಗೆ ಹೆಗ್ಗಣ ಮುದ್ದು
  16. ಊರೆಲ್ಲ ದೋಚಿಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
  17. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?
  18. ಮಾಡೋದೆಲ್ಲಾ ಅನಾಚಾರ ಮನೆಯ ಮುಂದೆ ಬೃಂದಾವನ
  19. ಮನಸ್ಸಿದ್ದರೆ ಮಾರ್ಗ
  20. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ
  21. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ
  22. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ
  23. ಅಕ್ಕಿ ಮೇಲೂ ಆಸೆ, ನೆಂಟರ ಮೇಲೂ ಪ್ರೀತಿ
  24. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ
  25. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ ಹಾಸಿನಿಕೆ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 11, 2018

ಸಿಂಹ ಮತ್ತು ಇಲಿ

ಚಿತ್ರ ಕೃಪೆ : ಗೂಗಲ್

ಸಿಂಹವೊಂದು ಮರದ ಕೆಳಗೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಆಗ ಒಂದು ಇಲಿಮರಿ ತನ್ನ ಬಿಲದಿಂದ ಹೊರಬಂದು ಸಿಂಹದ ಮೈಮೇಲೆ ಓಡಾಡಲಾರಂಭಿಸಿತು. ಗಾಢ ನಿದ್ರೆಯಲ್ಲಿದ್ದ ಸಿಂಹಕ್ಕೆ ಕಿರಿಕಿರಿಯಾಯಿತು. ಸಿಂಹ ಎಚ್ಚೆತ್ತು ಇಲಿಯನ್ನು ಹಿಡಿಯಿತು. ಗಾಬರಿಯಾದ ಇಲಿ, ತನಗೇನೂ ಮಾಡಬಾರದೆಂದು ಸಿಂಹವನ್ನು ಪ್ರಾರ್ಥಿಸಿತು. ತನ್ನನ್ನು ಬಿಟ್ಟುಬಿಟ್ಟರೆ ಆಪತ್ಕಾಲದಲ್ಲಿ ಸಹಾಯ ಮಾಡುವೆನೆಂದು ಸಿಂಹಕ್ಕೆ ಇಲಿಯು ಭರವಸೆ ಕೊಟ್ಟಿತು. ನನ್ನಂತ ಬಲಿಷ್ಠನಿಗೆ ನಿನ್ನಿಂದ ಏನು ಸಹಾಯವಾಗುವುದು? ಎಂದು ನಿರ್ಲಕ್ಷ್ಯದಿಂದ ಸಿಂಹ ಇಲಿಯನ್ನು ಬಿಟ್ಟುಬಿಟ್ಟಿತು.

ಕೆಲ ದಿನಗಳ ಬಳಿಕ ಬೇಟೆಗಾರನೊಬ್ಬ ಹಾಕಿದ್ದ ಬಲೆಗೆ ಸಿಂಹ ಸಿಲುಕಿಹಾಕಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಲಿಯು ಸಿಂಹವನ್ನು ಕಂಡು ಬಲೆಯನ್ನೆಲ್ಲಾ ತನ್ನ ಹರಿತವಾದ ಹಲ್ಲುಗಳಿಂದ ಕತ್ತರಿಸಿ ಸಿಂಹವನ್ನು ಬಲೆಯಿಂದ ಬಿಡಿಸಿತು.

ಚಿಕ್ಕ ಪ್ರಾಣಿಯಾಗಿದ್ದರೂ ತನ್ನನ್ನು ಕಾಪಾಡಿದ ಇಲಿಗೆ ಸಿಂಹವು ಕೃತಜ್ಞತೆ ಸಲ್ಲಿಸಿತು. ಅಂದಿನಿಂದ ಸಿಂಹ ಮತ್ತು ಇಲಿ ಸ್ನೇಹಿತರಾದರು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್ ವರುಣ್

4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 10, 2018

ಮುದ್ದು ಕಂದ

ಚಿತ್ರ ಕೃಪೆ : ಗೂಗಲ್

ಹಾವಿನ ಹೆಡಿ ಚೆಂದ, ಮಾವಿನ ಮಿಡಿ ಚೆಂದ
ಹಾರ್ಯಾಡಿ ಬರುವ ಗಿಳಿ ಚೆಂದ, ನನ ಕಂದ
ನೀ ಇದ್ದರ ನನ್ನ ಮನಿ ಚೆಂದ.

ನನ್ನ ಕಂದ ಮುದ್ದು, ಹೊನ್ನ ತಾವರೆ ಮುದ್ದು
ಹಣ್ಣುಳ್ಳ ಗಿಡದಿ ಗಿಳಿ ಮುದ್ದು ಕಂದವ್ವ
ನೀ ಮುದ್ದು ನನ್ನ ಬಳಗಾಕ.

ಹಸಿರಂಗಿ ತೊಡಸೀನ, ಕಾಲ್ಗಡಗ ಇಡಸೀನ
ಹಳ್ಳಕ್ಕೆ ನೀನು ಬರಬ್ಯಾಡ ನನಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ.

ಗುಜ್ಜೆ ನನ ಕಂದಯ್ಯನ ಗೆಜ್ಜೆ ಸಪ್ಪಳ ಕೇಳಿ
ನಿಬ್ಬಣದೆತ್ತು ಬೆದರ್ಯಾವ, ಮುದ್ಯಾಣದ
ಹುಲ್ಲು ತಿನ್ನೋದ ಮರೆತಾವ.

ತವರೂರಿಗ್ಹೋದಾಗ ನವಿಲು ಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳುತಿತ್ತು, ಕಂದನ
ಚಲುವೀನ ನೋಡಿ ನಗುತಿತ್ತು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ರಂಜಿತ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 9, 2018

ಕಾಗೆ ಮತ್ತು ಹಾವು

ಚಿತ್ರ ಕೃಪೆ : ಗೂಗಲ್

ಒಂದಾನೊಂದು ಕಾಲದಲ್ಲಿ ಒಂದು ಆಲದ ಮರದ ಮೇಲೆ ಜೋಡಿ ಕಾಗೆಗಳು ಇದ್ದವು. ಆಶ್ರಯಕ್ಕಾಗಿ ಹುಡುಕುತ್ತಿದ್ದ ದೊಡ್ಡ ಹಾವು ಅದೇ ಮರದ ಕೆಳಗೆ ಬಂದು ಅಲ್ಲಿನ ಬಿಲದಲ್ಲಿ ಸೇರಿಕೊಂಡಿತ್ತು. ತಮ್ಮ ನೆರೆಯವನಾಗಿ ಈ ಹಾವು ಬಂದು ಸೇರಿಕೊಂಡಿದ್ದಕ್ಕೆ ಕಾಗೆಗಳಿಗೆ ತುಂಬಾ ಆತಂಕವಾಯಿತು. ಈ ವಿಷಯವನ್ನು ಕಾಗೆಗಳು ಸ್ನೇಹಿತರ ಜೊತೆ ಚರ್ಚಿಸಿದವು. ಎಲ್ಲರ ಮಕ್ಕಳನ್ನು ಈ ದುಷ್ಟ ಹಾವು ತಿನ್ನಬಹುದು, ಆದ್ದರಿಂದ ಹುಷಾರಾಗಿ ಇರಬೇಕು ಎಂದು ಎಚ್ಚರಿಸಿದವು. ನನ್ನ ಎಲ್ಲಾ ಮಕ್ಕಳನ್ನು ಈ ಹಾವು ತಿಂದುಹಾಕಿದರೆ, ನಾನು ಹೇಗೆ ತಾನೆ ಮೊಟ್ಟೆ ಇಟ್ಟು ಮರಿ ಮಾಡುವುದು? ನಾವು ಬೇರೊಂದು ಜಾಗದಲ್ಲಿ ಗೂಡು ಮಾಡೋಣ ಎಂದು ಹೆಣ್ಣು ಕಾಗೆ ದುಃಖದಿಂದ ಹೇಳಿತು. ಅದಕ್ಕೆ ಗಂಡು ಕಾಗೆ ಸಂತೈಸಿ, ನಾವು ಜಾಗವನ್ನು ಬಿಡೋದು ಬೇಡ, ಹೇಗಾದರೂ ಮಾಡಿ ಹಾವನ್ನು ಆಚೆಗೆ ಹಾಕೋಣ ಎಂದು ಹೇಳಿತು.

ಸ್ವಲ್ಪ ದಿನಗಳ ನಂತರ ಹೆಣ್ಣು ಕಾಗೆ ಮೂರು ಮೊಟ್ಟೆಗಳನ್ನು ಇಟ್ಟಿತು. ನಂತರ ಮೂರು ಪುಟ್ಟ ಪುಟ್ಟ ಮರಿಗಳು ಆಚೆಗೆ ಬಂದವು. ಆ ಮರಿ ಕಾಗೆಗಳ ಸದ್ದನ್ನು ಕೇಳಿದ ಹಾವಿಗೆ ತುಂಬಾ ಸಂತೋಷವಾಯಿತು. ಒಂದು ದಿನ ದೊಡ್ಡ ಕಾಗೆಗಳು ಆಚೆ ಹೋಗಿದ್ದಾಗ, ದುರಾಸೆಯಿಂದ ಹಾವು ನಿಧಾನವಾಗಿ ಕಾಗೆಗಳ ಗೂಡಿಗೆ ಬಂದು ಮೂರು ಮರಿಗಳನ್ನು ತಿಂದುಹಾಕಿತು. ದೊಡ್ಡ ಕಾಗೆಗಳು ವಾಪಸ್ಸು ಬಂದಾಗ ಗೂಡು ಖಾಲಿಯಾಗಿರೋದು ನೋಡಿ ಹೆಣ್ಣು ಕಾಗೆ ಜೋರಾಗಿ ಅಳಲಾರಂಭಿಸಿತು. ಆ ಹಾವಿಗೆ ನಾನು ಪಾಠ ಕಲಿಸುತ್ತೇನೆ ಎಂದು ಗಂಡು ಕಾಗೆ ಹೇಳಿತು.

ಕೆಲವು ದಿನಗಳ ನಂತರ ಮತ್ತೆ ಹೆಣ್ಣು ಕಾಗೆ ಮೊಟ್ಟೆಗಳನ್ನು ಇಟ್ಟಿತು. ಮರಿ ಕಾಗೆಗಳನ್ನು ರಕ್ಷಿಸಲು ಗಂಡು ಕಾಗೆಯು ನರಿಯ ಸಲಹೆಯನ್ನು ಕೇಳಿತು. ಕಾಗೆ ಹೇಳಿದ ಕಥೆಯನ್ನು ಕೇಳಿದ ನರಿಯು ಉಪಾಯವನ್ನು ಸೂಚಿಸಿತು. ನದಿಯ ಬಂಡೆಯ ಬಳಿ ಹಾರಿ ಹೋಗು, ಅಲ್ಲಿ ಒಬ್ಬಳು ರಾಣಿ ಸ್ನಾನ ಮಾಡುತ್ತಿರುತ್ತಾಳೆ. ಅವಳ ವಜ್ರದ ಹಾರವನ್ನು ಎತ್ತಿಕೊಂಡು ಬಂದು ಹಾವಿನ ಬಿಲದಲ್ಲಿ ಹಾಕು. ಇದರಿಂದ ಹಾವಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ಉಪಾಯ ಹೇಳಿಕೊಟ್ಟಿತು.

ಕಾಗೆ ಹಾಗೇ ಮಾಡಿತು. ಅದನ್ನು ನೋಡಿದ ಸೈನಿಕರು ಹಾರವನ್ನು ಹೊರಕ್ಕೆ ತೆಗೆಯಲು ಹೋದರು. ಆಗ ಬಿಲದಲ್ಲಿದ್ದ ಹಾವು ಬುಸ್ ಬುಸ್ ಎಂದು ಹೊರಕ್ಕೆ ಬಂದಿತು. ಸೈನಿಕರು ತಂದಿದ್ದ ಆಯುಧಗಳನ್ನು ನೋಡಿದ ಹಾವು ಹೆದರಿಕೊಂಡು ಆ ಜಾಗ ಬಿಟ್ಟು ಮತ್ತೆ ಎಂದೂ ಬರುವುದಿಲ್ಲ ಎಂದು ಓಡಿಹೋಯಿತು. ದುಷ್ಟ ಹಾವನ್ನು ಹೊರಕ್ಕೆ ಹಾಕಿದ್ದಕ್ಕೆ ಕಾಗೆಗಳು ತುಂಬಾ ಸಂತೋಷಪಟ್ಟವು.

ಸೂಕ್ಷ್ಮ ಆಲೋಚನೆ ಮತ್ತು ಚತುರ ಯೋಜನೆ ಅಪಾಯದ ಸಮಯದಲ್ಲಿ ನಮ್ಮನ್ನು ರಕ್ಷಿಸುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಪ್ರೀತಿ

4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 8, 2018

ಸ್ನೇಹಲೋಕ

ಚಿತ್ರ ಕೃಪೆ : ಗೂಗಲ್

ಗಿಳಿ ಪಂಜರದಲ್ಲಿರುತ್ತದೆ
ನನ್ನ ನಿನ್ನ ಸ್ನೇಹ ಮನಸ್ಸಿನಲ್ಲಿ ಹಸಿರಾಗಿರುತ್ತದೆ.

ನಾನು ಯಾವುದನ್ನು ಮರೆತರೂ
ನಮ್ಮ ಸ್ನೇಹವನ್ನು ಎಂದೂ ಮರೆಯಲಾಗದು.

ಈ ಲೋಕದಲ್ಲಿ ಏನೆಲ್ಲಾ ಮರೆಯಬಹುದು
ಆದರೆ ನನ್ನ ಸ್ನೇಹಿತರನ್ನು ಮರೆಯುವುದಿಲ್ಲ.

ದೇವತೆಗಳು ಬಯಸಿದ್ದು ದೇವಲೋಕ
ಅಸುರರು ಬಯಸಿದ್ದು ಅಸುರಲೋಕ
ಆದರೆ ನಾವು ಬಯಸಿದ್ದು ಸ್ನೇಹಲೋಕ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ದಿವ್ಯ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 7, 2018

ನಾನು ಯಾರು ಗೊತ್ತೆ?


1.
ಹಸಿರು ಪುಕ್ಕ, ಕೆಂಪು ಕೊಕ್ಕು
ನೆಟ್ಟ ಕಣ್ಣು, ಊಟ ಹಣ್ಣು.
ನಾನು ಯಾರು ಗೊತ್ತೆ?

2.
ಸೋಗೆ ಗರಿ, ಸೊಗಸು ನಾಟ್ಯ
ನೂರು ನೂರು ಕಣ್ಣು.
ನಾನು ಯಾರು ಗೊತ್ತೆ?

3.
ದೊಡ್ಡ ದೇಹ, ಮೋಟು ಬಾಲ
ಕಣ್ಣು ಸಣ್ಣ, ಸಂಘಜೀವಿ.
ನಾನು ಯಾರು ಗೊತ್ತೆ?

4.
ಬಾಲ ಬಹಳ ಚಿಕ್ಕದು, ವಾಸ ನೀರಿನಲ್ಲಿ
ನನ್ನನ್ನು ಎಲ್ಲರೂ ತಿನ್ನುತಾರೆ.
ನಾನು ಯಾರು ಗೊತ್ತೆ?

5.
ಅಂಗಣ್ಣ ಮಂಗಣ್ಣ
ಅಂಗಿ ಬಿಚ್ಕೊಂಡು ನುಂಗಣ್ಣ.
ನಾನು ಯಾರು ಗೊತ್ತೆ?

6.
ಹಸಿರು ಗಿಡದಲ್ಲಿ
ಮೊಸರು ಚೆಲ್ಲಿದೆ.
ನಾನು ಯಾರು ಗೊತ್ತೆ?

7.
ಒಂದೇ ಮನೆ
ನೂರಾರು ಬಾಗಿಲು.
ನಾನು ಯಾರು ಗೊತ್ತೆ?








ಉತ್ತರಗಳು
4. ಮೀನು
7. ಹುತ್ತ
1. ಗಿಳಿ
5. ಬಾಳೆಹಣ್ಣು
3. ಆನೆ
6. ಮಲ್ಲಿಗೆ ಹೂವು
2. ನವಿಲು


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಭೂಮಿಕ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 6, 2018

ಮಂಗನ ನ್ಯಾಯ

ಚಿತ್ರ ಕೃಪೆ : ಗೂಗಲ್

ಒಮ್ಮೆ ಎರಡು ಬೆಕ್ಕುಗಳು ಕೂಡಿ ಬೆಣ್ಣೆಯನ್ನು ಕದ್ದವು. ಕದ್ದ ಬೆಣ್ಣೆಯನ್ನು ಹಂಚಿಕೊಳ್ಳತೊಡಗಿದವು. ಹಂಚುವಾಗ ಸ್ವಲ್ಪ ಹೆಚ್ಚು ಕಡಿಮೆ ಆಯಿತು. ಅಷ್ಟಕ್ಕೇ ಎರಡೂ ಬೆಕ್ಕುಗಳು ದೊಡ್ಡ ಜಗಳ ಮಾಡತೊಡಗಿದವು.

ಇದನ್ನು ನೊಡುತ್ತಾ ಹತ್ತಿರದ ಮರದಲ್ಲಿ ಕೂತಿದ್ದ ಮಂಗವು ತಕ್ಷಣ ಅಲ್ಲಿಗೆ ಬಂದು, ‘ನಾನು ನಿಮಗೆ ಸರಿಯಾಗಿ ಹಂಚಿ ನ್ಯಾಯ ಕೊಡಿಸುತ್ತೇನೆ' ಎಂದು ಹೇಳಿತು. ಬೆಕ್ಕುಗಳು ಒಪ್ಪಿಕೊಂಡವು. ಮಂಗವು ಎಲ್ಲಾ ಬೆಣ್ಣೆಯನ್ನು ಬೆಕ್ಕುಗಳಿಂದ ಪಡೆದುಕೊಂಡಿತು. ಒಂದು ತಕ್ಕಡಿಯನ್ನು ತಂದು ಇದ್ದ ಎಲ್ಲಾ ಬೆಣ್ಣೆಯನ್ನು ತಕ್ಕಡಿಯ ಎರಡೂ ಬಟ್ಟಲುಗಳಿಗೆ ಹಾಕಿತು. ಒಂದು ಒಟ್ಟಲು ಮೇಲೆ ಮತ್ತು ಇನ್ನೊಂದು ಬಟ್ಟಲು ಕೆಳಗೆ ಬಂದಿತು. ಕೆಳಗೆ ಬಂದ ಬಟ್ಟಲಿನಲ್ಲಿ ಬೆಣ್ಣೆ ಹೆಚ್ಚಾಗಿದೆ ಎಂದು ಅದರಲ್ಲಿ ಒಂದಿಷ್ಟು ಬೆಣ್ಣೆಯನ್ನು ಮಂಗ ತಿಂದಿತು. ಆಗ ಮೇಲೆ ಏರಿದ್ದ ಇನ್ನೊಂದು ಬಟ್ಟಲು ಕೆಳಕ್ಕೆ ಬಂತು. ಈಗ ಇದು ಹೆಚ್ಚಾಗಿದೆ ಎಂದು ಮಂಗ ಅದರಲ್ಲಿದ್ದ ಸ್ವಲ್ಪ ಬೆಣ್ಣೆಯನ್ನು ತಿಂದಿತು.

ಹೀಗೆ ಮಂಗವು ಆ ಬಟ್ಟಲಿನಲ್ಲೊಮ್ಮೆ, ಈ ಬಟ್ಟಲಿನಲ್ಲೊಮ್ಮೆ ತಿನ್ನುತ್ತಾ ಹೋಯಿತು. ಬೆಣ್ಣೆ ಖಾಲಿಯಾಗುತ್ತಾ ಬಂದಿತು. ನ್ಯಾಯ ಸಿಗುವುದೆಂದು ಕುಳಿತ ಬೆಕ್ಕುಗಳು ಕಣ್ಣು ಕಣ್ಣು ಬಿಡುತ್ತಿದ್ದವು. ಮಂಗವು ತಕ್ಕಡಿಯಲ್ಲಿದ್ದ ಎಲ್ಲಾ ಬೆಣ್ಣೆಯನ್ನು ತಿಂದು ಖಾಲಿಮಾಡಿತು. ಬೆಣ್ಣೆಯನ್ನು ಕಳೆದುಕೊಂಡ ಬೆಕ್ಕುಗಳು ತಮ್ಮಲ್ಲಿ ಜಗಳವಾಡಿಕೊಂಡು ಒಂದಿಷ್ಟೂ ಬೆಣ್ಣೆ ಸಿಗದೇ ನಿರಾಶೆಯಾದವು. ಮಂಗ ಖುಷಿಯಿಂದ ತನ್ನ ಕೈಗಳಿಗೆ ಮೆತ್ತಿದ್ದ ಬೆಣ್ಣೆಯನ್ನು ಸವಿಯುತ್ತಾ ಮರ ಏರಿತು.

ಇಬ್ಬರ ಜಗಳ ಮೂರನೆಯವನಿಗೆ ಲಾಭ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಪವಿತ್ರ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 5, 2018

ಕಿತ್ತೂರು ಚೆನ್ನಮ್ಮ

ಚಿತ್ರ ಕೃಪೆ : ಗೂಗಲ್


ಕೇಳಿ ಮಕ್ಕಳೆ, ನಾಳಿನ ಪ್ರಜೆಗಳೆ
ಕೇಳಿರಿ ಹೇಳುವೆ ಮಾತೊಂದ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ
ಕಿತ್ತೂರು ರಾಣಿಯ ಕಥೆಯನ್ನ.


ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ
ವೀರ ಪುತ್ರಿಯು ಜನಿಸಿಹಳು
ದೊಳಪ್ಪ ದೇಸಾಯಿ ಪದ್ಮಾವತಿಯ
ಕುಲಪುತ್ರಿಯೇ ಚೆನ್ನಮ್ಮ.


ತಂದೆಯೊಡನೆ ಪುರುಷ ವೇಷದಿ
ಬೇಟೆಗೆ ಕಾಡಿಗೆ ಹೋಗಿಹಳು
ಕತ್ತಿ ವರಸೆ, ಬಿಲ್ಲು ಬಾಣ
ಕುದುರೆ ಸವಾರಿಯ ಕಲಿತಿಹಳು.


ಕಿತ್ತೂರು ದೊರೆ ಮಲ್ಲಸರ್ಜನ
ಪ್ರೀತಿಯ ಮಡದಿ ಎನಿಸಿಹಳು
ಮಲ್ಲಸರ್ಜನ ಮರಣದ ನಂತರ
ಕಿತ್ತೂರು ರಾಣಿಯೇ ಆಗಿಹಳು.


ನಾಡಿನ ಮೇಲೆ ಬ್ರಿಟಿಷರ ದಬ್ಬಾಳಿಕೆಯ
ಧೈರ್ಯದಿ ಎದುರಿಸಿ ಹೋರಾಡಿಹಳು
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ
ವೀರ ವನಿತೆಯಾಗಿ ಅಮರಳಾಗಿಹಳು.


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಗೌತಮಿ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 4, 2018

ಮುಗ್ಧ ಹುಡುಗನ ಕಥೆ

ಒಂದು ಊರಿನಲ್ಲಿ ಒಬ್ಬ ಹುಡುಗ ಇದ್ದ. ಆ ಹುಡುಗನಿಗೆ ತಂದೆ, ತಾಯಿ, ತಂಗಿ ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿ ಒಬ್ಬರು ಅಜ್ಜಿ ವಾಸವಿದ್ದರು. ಆ ಅಜ್ಜಿಯೇ ಈ ಹುಡುಗನನ್ನು ನೋಡಿಕೊಳ್ಳುತ್ತಿದ್ದರು.

ಒಂದು ದಿನ ಆ ಹುಡುಗನು ರಾತ್ರಿ ಆಕಾಶ ನೋಡುತ್ತಾ ಕುಳಿತಿದ್ದ. ಅಜ್ಜಿಯನ್ನು "ಅಜ್ಜಿ, ನಕ್ಷತ್ರಗಳು, ತಾರೆಗಳು ಅಂದ್ರೆ ಏನು?" ಅಂತ ಕೇಳಿದ ಹುಡುಗ. ಆಗ ಅಜ್ಜಿ ಹೇಳಿದರು "ನೋಡು ಮಗೂ, ಈಗ ಯಾರಾದರೂ ಸತ್ತರೆ ಅವರು ಮೇಲೆ ಆಕಾಶಕ್ಕೆ ಹೋಗಿ ನಕ್ಷತ್ರ ಆಗ್ತಾರೆ". ಹುಡುಗ ತುಂಬಾ ಕುತೂಹಲದಿಂದ "ಅಜ್ಜಿ, ಹಾಗಾದ್ರೆ ನನ್ನ ಅಪ್ಪ, ಅಮ್ಮ, ಆಮೇಲೆ ತಂಗಿ ಎಲ್ಲರೂ ನಕ್ಷತ್ರ ಆಗಿದಾರಾ?" ಅಂತ ಕೇಳಿದ. ಆಗ ಅಜ್ಜಿಗೆ ತುಂಬಾ ದುಃಖ ಆಯಿತು. ಆದ್ರೂ ಅದನ್ನು ತೋರಿಸಿಕೊಳ್ಳದೆ ಹೇಳಿದರು "ಹೌದು ಮಗೂ, ಎಲ್ಲಾರೂ ನಕ್ಷತ್ರ ಆಗಿದಾರೆ".

ಹುಡುಗ ಮೇಲೆ ಆಕಾಶ ನೋಡುತಿದ್ದ, ಆಕಾಶದ ಒಂದು ಮೂಲೆಯಲ್ಲಿ ಪ್ರಕಾಶಮಾನವಾಗಿದ್ದ ಒಂದು ನಕ್ಷತ್ರ ಕಂಡಿತು. ಆಗ ಹುಡುಗ "ಅಜ್ಜಿ, ನೋಡು ಅಲ್ಲಿ, ನನ್ನ ಅಪ್ಪ ಹೇಗೆ ಹೊಳೀತಿದ್ದಾರೆ" ಅಂತ ಹೇಳಿದ. "ಅಲ್ಲೇ ಪಕ್ಕದಲ್ಲಿ ನನ್ನ ಅಮ್ಮ ಇದ್ದಾರೆ. ನೋಡು, ಅಲ್ಲಿ ಸ್ವಲ್ಪ ದೂರದಲ್ಲಿ ತಂಗಿ ಇದ್ದಾಳೆ" ಅಂತ ನಕ್ಷತ್ರಗಳನ್ನು ತೋರಿಸಿ ಅಜ್ಜಿಗೆ ಹೇಳಿದ ಹುಡುಗ. ಇಬ್ಬರೂ ಆಕಾಶ ನೋಡುತ್ತಾ ಇದ್ದರು.

ಹುಡುಗ ಮತ್ತೆ ಅಜ್ಜಿನ ಕೇಳಿದ "ಅಜ್ಜಿ, ನಾನೂ ಅವರ ಹತ್ತಿರ ಹೋಗಬೇಕು. ಹೋಗಕ್ಕಾಗಲ್ವಾ?". ಆಗ ಅಜ್ಜಿ "ಯಾರು ಬೇಕಾದರೂ ಅಲ್ಲಿಗೆ ಹೋಗಕ್ಕಾಗಲ್ಲ ಮಗು. ಈ ಭೂಮಿಯ ಋಣ ಮುಗಿದವರು ಮಾತ್ರ ಅಲ್ಲಿಗೆ ಹೋಗೋದು" ಅಂತ ಹೇಳಿದರು. ಹುಡುಗನಿಗೆ ಉಪಾಯ ಹೊಳೆಯಿತು, ಅವನು ಹೇಳಿದ "ಆಕಾಶಕ್ಕೆ ವಿಮಾನಗಳು ಹೋಗ್ತಾವಲ್ಲ, ನಾನು ವಿಮಾನದಲ್ಲಿ ಅವರ ಹತ್ತಿರ ಹೋಗ್ತೀನಿ ಅಜ್ಜಿ". ಅದಕ್ಕೆ ಅಜ್ಜಿ ಸಮಾಧಾನದಿಂದ ನಗುತ್ತಿದ್ದರು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಸಾಧ್ವಿಕ್

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 3, 2018

ಸಂತಸದ ಸಂತೆ

ಚಿತ್ರ ಕೃಪೆ : ಗೂಗಲ್

ಒಂದಿನ ನಾನು ಪೇಟೆಗೆ ಹೋದೆನು
ಸಂತೆಯು ನಡೆದಿತ್ತು
ಹೂವಿನ ಅಂಗಡಿ ಎದುರಿಗೆ ನಿಲ್ಲಲು
ವಾಸನೆ ಬಡಿದಿತ್ತು
ಘಮಘಮ ವಾಸನೆ ಬರುತ್ತಿತ್ತು.


ಬಣ್ಣವು ತಿರುಗಿದ ಮಾವಿನ ಹಣ್ಣಿನ
ರಾಶಿಯು ಬಿದ್ದಿತ್ತು
ಚಣ್ಣದ ಜೇಬಿಗೆ ಕೈಯನು ತುರುಕಿದೆ
ಝಣಝಣ ಎನುತ್ತಿತ್ತು
ಬಾಯೊಳು ತನನನ ಹಾಡಿತ್ತು.


ನೋಡುತ ಮುಂದಕೆ ಹೋದೆನು ನಾನು
ಜಿಲೇಬಿ ನಗುತಿತ್ತು
ದಳೇದ ಉಂಡಿ ಗಡಾದ ಅಂಟು
ಮನವನು ಸೆಳೆದಿತ್ತು
ನನ್ನನು ನಿಲ್ಲಿಸಿ ಬಿಟ್ಟಿತ್ತು.


ಕರಿದವಲಕ್ಕಿ ಹುರಿದಾ ಕಡಲೆ
ಎಲ್ಲಾ ನರೆದಿತ್ತು
ಉಬ್ಬಿದ ಪೂರಿ ಬಿಸಿಬಿಸಿ ಬಾಜಿ
ಬಾ ಬಾ ಎನುತಿತ್ತು
ಬಾಯೊಳು ನೀರೇ ಸುರಿದಿತ್ತು..


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ವರ್ಷ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 2, 2018

ಸೋಮಾರಿ ಸೋಮಣ್ಣ

ಸೋಮಣ್ಣ ಒಬ್ಬ ಸೋಮಾರಿ. ತನ್ನದೇ ಹೊಲ ಇದ್ದರೂ ಒಂದು ದಿನವೂ ಹೊಲದಲ್ಲಿ ಹೋಗಿ ಕೆಲಸ ಮಾಡಿದವನಲ್ಲ. ಅವರಿವರು ಕೊಟ್ಟಿದ್ದನ್ನಷ್ಟೆ ಪಡೆದು ಬದುಕುತ್ತಿದ್ದ ಅವನಿಗೆ ಶೇಂಗಾ ಎಂದರೆ ಪಂಚಪ್ರಾಣ. ಅದರಲ್ಲೂ ಹುರಿದ ಶೇಂಗಾ ಎಂದರೆ ಅತೀ ಪ್ರೀತಿ.

ಒಮ್ಮೆ ಹೀಗೆಯೇ ಹುರಿದ ಶೇಂಗಾ ಬೀಜ ತಿನ್ನುವಾಗ ಸೋಮಣ್ಣನಿಗೆ ಒಂದು ಆಲೋಚನೆ ಹೊಳೆಯಿತು. ತನ್ನ ಖಾಲಿ ಹೊಲದಲ್ಲಿ ಶೇಂಗಾ ಬೀಜ ಬಿತ್ತಿದರೆ ಸಾಕಷ್ಟು ಶೇಂಗಾ ಬೀಜ ದೊರೆಯುತ್ತದೆ, ಬೇರೆಯವರನ್ನು ಕೇಳುವ ಅವಶ್ಯಕತೆ ಇರುವುದಿಲ್ಲ ಎಂದು ತೀರ್ಮಾನಿಸಿದ. ಆದರೆ ಹಸಿ ಶೇಂಗಾ ಬೀಜಕ್ಕಿಂತ ಹುರಿದ ಶೇಂಗಾ ಬೀಜ ತಿನ್ನಲು ಚೆಂದ, ಏನು ಮಾಡುವುದು ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದ. ಹಸಿ ಶೇಂಗಾ ಬೀಜಗಳನ್ನು ತನ್ನ ಹೊಲದಲ್ಲಿ ಬಿತ್ತುವುದಕ್ಕಿಂತ, ಹುರಿದ ಶೇಂಗಾ ಬೀಜ ಬಿತ್ತಿದರೆ, ಹುರಿದ ಶೇಂಗಾ ಬೀಜಗಳೇ ಬೆಳೆಯುತ್ತವೆ. ಮತ್ತೆ ಶೇಂಗಾ ಬೀಜಗಳನ್ನು ಹುರಿಯುವ ತೊಂದರೆ ಇರುವುದಿಲ್ಲ ಎಂದು ಯೋಚಿಸಿದ.

ಬೆಳೆ ಬೆಳೆಯಲು ಎಂತಹ ಬೀಜ ಬಿತ್ತಬೇಕು ಎಂದು ತಿಳಿಯದ ಸೋಮಣ್ಣ ಮರುದಿನ ಹೊಲದಲ್ಲಿ ಒಲೆ ಮಾಡಿ ಶೇಂಗಾ ಬೀಜಗಳನ್ನು ಹುರಿಯತೊಡಗಿದ. ಇದನ್ನು ನೋಡಿದ ಅಕ್ಕ-ಪಕ್ಕದ ಹೊಲದವರು ಕೊನೆಗೂ ಸೋಮಣ್ಣ ಸೋಮಾರಿತನ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಖುಷಿಪಟ್ಟರು.

ದಿನಗಳು ಕಳೆದವು. ಎಲ್ಲರ ಹೊಲದಲ್ಲಿ ಹಸಿರು ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಸೋಮಾರಿ ಸೋಮಣ್ಣನ ಹೊಲದಲ್ಲಿ ಒಂದು ಸಸಿಯೂ ಹುಟ್ಟಲಿಲ್ಲ. ಸೋಮಾರಿ ಸೋಮಣ್ಣ ಕೊನೆಗೂ ಪಾಠ ಕಲಿಯಲಿಲ್ಲ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಅಂಜಲಿ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 1, 2018

ಅಮ್ಮ

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ನಾಡಹಬ್ಬದ ಶುಭಾಶಯಗಳು.

ನವಂಬರ್ 2018ರ ಕಹಳೆಯ ಎಂಟನೇ ಆವೃತ್ತಿ ಕಾರ್ಯಕ್ರಮವನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.

ಚಿತ್ರ ಕೃಪೆ: ಗೂಗಲ್

ಹುಟ್ಟುವಾಗ ಅಮ್ಮ
ಅಳುವಾಗ ಅಮ್ಮ
ನಗುವಾಗ ಅಮ್ಮ
ಬಿದ್ದಾಗ ಅಮ್ಮ
ತಿನ್ನುವಾಗ ಅಮ್ಮ
ಮಲಗುವಾಗ ಅಮ್ಮ..

ನಾವು ಎಲ್ಲಿದ್ದರೂ
ಯಾವಾಗಲೂ
ಜೊತೆ ಇರುತಾರೆ ಅಮ್ಮ
ಕಾರಣ ಅವರಿಂದಲೇ
ಸಿಕ್ಕಿದೆ ನಮಗೆ
ಈ ಜನ್ಮ..


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಆಯಿಷ, ಎ.

3ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter