ಶುಕ್ರವಾರ, ನವೆಂಬರ್ 30, 2018

ಮಹರ್ಷಿ ವಾಲ್ಮೀಕಿ

ನವಂಬರ್ 2018ರ ಮಾಹೆಯುದ್ದಕ್ಕೂ ನಡೆದ ಕಹಳೆ ಎಂಟನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಪ್ರಸ್ತುತಿಪಡಿಸಿದ ಇಟಕದಿಬ್ಬನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಚಿತ್ರ ಕೃಪೆ : ಗೂಗಲ್

ಹೆಸರು ರತ್ನ, ದೊಡ್ಡ ಡಕಾಯಿತ. ಸುತ್ತಮುತ್ತಲಿನ ಹಳ್ಳಿಗರು ಅವನ ಹೆಸರನ್ನು ಕೇಳಿದರೆ ಸಾಕು, ಬೆಚ್ಚಿಬೀಳುತ್ತಿದ್ದರು. ಕಾಡಿನಲ್ಲಿ ಪ್ರಯಾಣ ಮಾಡಿತ್ತಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕುತ್ತಿದ್ದ. ವೃದ್ಧರೋ, ಮಹಿಳೆಯರೋ, ಹಸುಕಂದಮ್ಮಗಳೋ ಎಂಬುದನ್ನು ನೋಡುವಷ್ಟು ತಾಳ್ಮೆ ಕರುಣೆ ರತ್ನನಿಗೆ ಇರಲಿಲ್ಲ. ಕೊಲ್ಲುವುದು ಅವನಿಗೆ ಚಟವಾಗಿ ಬಿಟ್ಟಿತ್ತು, ಇವನ ಹರಿತವಾದ ಖಡ್ಗಕ್ಕೆ ಬಲಿಯಾದ ಮುಗ್ಧರೆಷ್ಟೋ ಲೆಕ್ಕವಿರಲಿಲ್ಲ. ಇವನ ಉಪಟಳಕ್ಕೆ ಹೆದರಿ, ಆ ಮಾರ್ಗವಾಗಿ ಜನ ಓಡಾಡುವುದನ್ನೇ ಬಿಟ್ಟಿದ್ದರು. ಕಾಡಿನ ಕ್ರೂರ ಮೃಗಗಳಿಗಿಂತ ಈ ಮನುಷ್ಯ ಮಹಾ ಕ್ರೂರಿಯಾಗಿದ್ದ.

ಹೀಗೊಂದು ದಿನ ನಾರದ ಮುನಿಗಳು ಆ ಮಾರ್ಗವಾಗಿ ಸಂಚರಿಸುತ್ತಿದ್ದರು. ನಡೆದು ಹೋಗುತ್ತಿದ್ದ ನಾರದರ ಎದುರು ರತ್ನ ಮೃತ್ಯು ಸ್ವರೂಪವಾಗಿ ನಿಂತ! ರತ್ನನ ಬೃಹತ್ ಶರೀರ, ದಷ್ಟ ಪುಷ್ಟ ಮಾಂಸ ಖಂಡಗಳು, ಮುಖದ ಮೇಲಿನ ಚಂಗು ಮೀಸೆ ಗಡ್ಡಗಳನ್ನು ಕಂಡ ನಾರದರು ನಗತೊಡಗಿದರು. "ರತ್ನ, ನೀರಡಿಕೆಯಾದರೆ ನೀರನ್ನು ನೀನೇ ಕುಡಿಯುವೆ ಅಲ್ಲವೇ?" ಎಂದರು ನಾರದ ಮುನಿ. ಅವಕ್ಕಾದ ರತ್ನ "ಇದೊಳ್ಳೆ ಕಥೆಯಾಯಿತಲ್ಲಾ. ಹೌದು. ಇಂತಹ ಸಾಮಾನ್ಯ ವಿಚಾರವನ್ನು ವೇದಾಂತದಂತೆ ಹೇಳುತ್ತಿರುವೆಯಲ್ಲಾ, ನಿನ್ನ ಒಣ ಪಾಂಡಿತ್ಯಕ್ಕೆ ಮರುಳಾಗುವವನಲ್ಲ ನಾನು. ಮೊದಲು ಸಾಯುವುದಕ್ಕೆ ಸಿದ್ಧನಾಗು" ಎಂದು ತನ್ನ ಖಡ್ಗ ಎತ್ತಿದ.

"ನಿಧಾನಿಸು ರತ್ನ. ನೀನು ಅದೆಷ್ಟು ಜನರನ್ನು ಬಲಿ ತೆಗೆದುಕೊಂಡಿದ್ದೀಯೋ ಅದರ ಪಾಪದ ಗಂಟನ್ನು ನೀನೇ ಹೊರಬೇಕು ತಾನೆ?" ಎಂದರು. ರತ್ನನಿಗೆ ಒಂದು ಕ್ಷಣ ಅಳುಕಾಯಿತು. ಆದರೂ ಸಾವರಿಸಿಕೊಂಡವನಂತೆ "ಇಲ್ಲ, ನನಗೆ ಅರ್ಧಾಂಗಿ ಇದ್ದಾಳೆ. ಮಕ್ಕಳು ಇದ್ದಾರೆ. ನಾನು ದೋಚಿದ ಹಣದಿಂದ ಅವರನ್ನು ಸುಖವಾಗಿ ನೋಡಿಕೊಂಡಿದ್ದೇನೆ. ಅವರು ನನ್ನನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾರರು" ಎಂದ ಕೋಪದಿಂದ. "ಕೋಪಗೊಳ್ಳಬೇಡ ರತ್ನ. ಈ ವಿಚಾರವಾಗಿ ಯಾವತ್ತಾದರೂ ನಿನ್ನ ಮಡದಿ ಮಕ್ಕಳನ್ನು ವಿಚಾರ ಮಾಡಿದ್ದೀಯಾ? ಇಲ್ಲವಾದರೆ ಈಗಲೇ ಹೋಗಿ ವಿಚಾರ ಮಾಡು. ನೀನು ಬರುವವರೆಗೂ ಇದೇ ಸ್ಥಳದಲ್ಲಿ ನಿಂತಿರುತ್ತೇನೆ" ಎಂದು ನಾರದರು ಹೇಳಿದರು.

ರತ್ನ ತನ್ನ ಮನೆಗೆ ಹೋಗಿ ಕಾಡಿನಲ್ಲಿ ನಡೆದ ವಿಚಾರಗಳನ್ನು ಹೆಂಡತಿಗೆ ತಿಳಿಸಿ, ತಾನು ಮಾಡಿದ್ದ ಪಾಪದಲ್ಲಿ ಅರ್ಧ ಪಾಲು ನಿನ್ನದಲ್ಲವೇ? ಎಂದು ಕೇಳಿದ. ಅದಕ್ಕೆ ಪ್ರತಿಯಾಗಿ ಆತನ ಪತ್ನಿಯು "ಇಲ್ಲ. ನಿಮ್ಮ ಪಾಪದ ಗಂಟನ್ನು ಪಾಲುಮಾಡಿಕೊಳ್ಳಲು ನಾನು ಸಿದ್ಧಳಿಲ್ಲ. ಗಂಡನಾಗಿ ಸಂಸಾರದ ಹೊಣೆ ನಿಮ್ಮದು. ಆದರೆ, ನಾವು ಕೊಲೆ-ಸುಲಿಗೆ ಮಾಡಿ ನಮ್ಮನ್ನು ಸಾಕಲು ಹೇಳಲಿಲ್ಲ" ಎಂದಳು. ನಂತರ ತನ್ನ ಮಕ್ಕಳ ಹತ್ತಿರ ರತ್ನ ವಿಚಾರ ಪ್ರಸ್ತಾಪಿಸಿದ. ಮಕ್ಕಳೂ ಸಹ ತಾಯಿಯಂತೆಯೇ ಉತ್ತರಿಸಿದರು.

ರತ್ನ ಓಡೋಡಿ ಬಂದು ನಾರದ ಮುನಿಗಳಿಗೆ ದೀರ್ಘದಂಡ ನಮಸ್ಕಾರ ಮಾಡಿದ. "ಏಳು ರತ್ನ. ಕೊಲ್ಲುವುದು ಮಹಾ ಪಾಪ. ಹೋಗು, ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊ. ದೇವರು ಎಲ್ಲರನ್ನೂ ಕಾಪಾಡುವ ಕರುಣಾಮಯಿ. ಆತ ನಿನ್ನನ್ನೂ ಉದ್ಧರಿಸಬಹುದು" ಎಂದು ನಾರದರು ಆಶೀರ್ವದಿಸಿದರು.

ಆಯುಧಗಳನ್ನು ಬಿಸಾಡಿದ ರತ್ನ ಕಾಡಿನ ಮಧ್ಯೆ ಹರಿಯುವ ತಮಸಾ ನದಿ ತೀರದಲ್ಲಿ ಧ್ಯಾನಕ್ಕೆ ಕುಳಿತ. ದಿನಗಳು ಕಳೆದವು. ತಿಂಗಳುಗಳು, ವರ್ಷಗಳೇ ಉರುಳಿದವು. ಆತನಿಗೆ ಬಾಹ್ಯ ಪ್ರಜ್ಞೆಯೇ ಇರಲಿಲ್ಲ. ಜಡವಸ್ತುವಿನಂತೆ ಕುಳಿತಿದ್ದ ಇವನ ಸುತ್ತಲೂ ಗೆದ್ದಲು ಹುತ್ತ ಕಟ್ಟಿದವು.

ರತ್ನನಿಗೆ ಜ್ಞಾನೋದಯವಾದಾಗ ಹುತ್ತದಿಂದ ಹೊರಬಂದ. ಬೆಂಕಿಯಲ್ಲಿ ಬೆಂದ ಚಿನ್ನ ಸುಂದರ ಆಭರಣವಾಗುವಂತೆ ಅವನ ಮನಸ್ಸು ಪರಿಶುದ್ಧವಾಗಿತ್ತು. ಅವನ ಮನಸ್ಸಿನಲ್ಲಿ ಕರುಣೆಯ ಸಾಗರವೇ ಹರಿಯಿತು. ರಕ್ತಕ್ಕಾಗಿ ಹಪಹಪಿಸುತ್ತಿದ್ದ ಕೈಗಳು ಪ್ರೀತಿಯಿಂದ ಜೀವಕೋಟಿಯನ್ನು ಅಪ್ಪಿಕೊಂಡಿತು. ತಾಯಿಯ ಗರ್ಭದಿಂದ ಮರುಹುಟ್ಟು ಪಡೆದವನಂತೆ ಕರುಣಾಮೂರ್ತಿಯಾಗಿ, ಮುಂದೆ ವಾಲ್ಮೀಕಿ ಮಹರ್ಷಿಯೆಂದು (ವಾಲ್ಮೀಕಿ ಎಂದರೆ ಹುತ್ತ ಎಂದರ್ಥ) ಪ್ರಖ್ಯಾತಿಗೊಂಡು ರಾಮಾಯಣ ರಚಿಸಿದರು. ರಾಮನ ಈ ಚರಿತೆಯು ಭೂಲೋಕದ ನಮ್ಮೆಲ್ಲರಿಗೆ ದಾರಿದೀಪವಾಗಿದೆ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ನಂದಿನಿ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ