ಶುಕ್ರವಾರ, ನವೆಂಬರ್ 2, 2018

ಸೋಮಾರಿ ಸೋಮಣ್ಣ

ಸೋಮಣ್ಣ ಒಬ್ಬ ಸೋಮಾರಿ. ತನ್ನದೇ ಹೊಲ ಇದ್ದರೂ ಒಂದು ದಿನವೂ ಹೊಲದಲ್ಲಿ ಹೋಗಿ ಕೆಲಸ ಮಾಡಿದವನಲ್ಲ. ಅವರಿವರು ಕೊಟ್ಟಿದ್ದನ್ನಷ್ಟೆ ಪಡೆದು ಬದುಕುತ್ತಿದ್ದ ಅವನಿಗೆ ಶೇಂಗಾ ಎಂದರೆ ಪಂಚಪ್ರಾಣ. ಅದರಲ್ಲೂ ಹುರಿದ ಶೇಂಗಾ ಎಂದರೆ ಅತೀ ಪ್ರೀತಿ.

ಒಮ್ಮೆ ಹೀಗೆಯೇ ಹುರಿದ ಶೇಂಗಾ ಬೀಜ ತಿನ್ನುವಾಗ ಸೋಮಣ್ಣನಿಗೆ ಒಂದು ಆಲೋಚನೆ ಹೊಳೆಯಿತು. ತನ್ನ ಖಾಲಿ ಹೊಲದಲ್ಲಿ ಶೇಂಗಾ ಬೀಜ ಬಿತ್ತಿದರೆ ಸಾಕಷ್ಟು ಶೇಂಗಾ ಬೀಜ ದೊರೆಯುತ್ತದೆ, ಬೇರೆಯವರನ್ನು ಕೇಳುವ ಅವಶ್ಯಕತೆ ಇರುವುದಿಲ್ಲ ಎಂದು ತೀರ್ಮಾನಿಸಿದ. ಆದರೆ ಹಸಿ ಶೇಂಗಾ ಬೀಜಕ್ಕಿಂತ ಹುರಿದ ಶೇಂಗಾ ಬೀಜ ತಿನ್ನಲು ಚೆಂದ, ಏನು ಮಾಡುವುದು ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದ. ಹಸಿ ಶೇಂಗಾ ಬೀಜಗಳನ್ನು ತನ್ನ ಹೊಲದಲ್ಲಿ ಬಿತ್ತುವುದಕ್ಕಿಂತ, ಹುರಿದ ಶೇಂಗಾ ಬೀಜ ಬಿತ್ತಿದರೆ, ಹುರಿದ ಶೇಂಗಾ ಬೀಜಗಳೇ ಬೆಳೆಯುತ್ತವೆ. ಮತ್ತೆ ಶೇಂಗಾ ಬೀಜಗಳನ್ನು ಹುರಿಯುವ ತೊಂದರೆ ಇರುವುದಿಲ್ಲ ಎಂದು ಯೋಚಿಸಿದ.

ಬೆಳೆ ಬೆಳೆಯಲು ಎಂತಹ ಬೀಜ ಬಿತ್ತಬೇಕು ಎಂದು ತಿಳಿಯದ ಸೋಮಣ್ಣ ಮರುದಿನ ಹೊಲದಲ್ಲಿ ಒಲೆ ಮಾಡಿ ಶೇಂಗಾ ಬೀಜಗಳನ್ನು ಹುರಿಯತೊಡಗಿದ. ಇದನ್ನು ನೋಡಿದ ಅಕ್ಕ-ಪಕ್ಕದ ಹೊಲದವರು ಕೊನೆಗೂ ಸೋಮಣ್ಣ ಸೋಮಾರಿತನ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಖುಷಿಪಟ್ಟರು.

ದಿನಗಳು ಕಳೆದವು. ಎಲ್ಲರ ಹೊಲದಲ್ಲಿ ಹಸಿರು ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಸೋಮಾರಿ ಸೋಮಣ್ಣನ ಹೊಲದಲ್ಲಿ ಒಂದು ಸಸಿಯೂ ಹುಟ್ಟಲಿಲ್ಲ. ಸೋಮಾರಿ ಸೋಮಣ್ಣ ಕೊನೆಗೂ ಪಾಠ ಕಲಿಯಲಿಲ್ಲ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಅಂಜಲಿ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ