ಶನಿವಾರ, ನವೆಂಬರ್ 30, 2013

ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನ

ನವಂಬರ್ 2013 ರ ಮಾಹೆಯುದ್ದಕ್ಕೂ ನಡೆದ ಕಹಳೆ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.

=> ಕಹಳೆ ತಂಡ.

ಭ್ರಮರದ ಗುಣವೂ ಯಕ್ಷಗಾನದ ಗುಣವೂ ಒಂದೇ.. ಸದಾ ನಿನಾದ.. ಕರ್ಣಕಠೋರ ದನಿಯಲ್ಲ, ವೀರವೂ ಭಯ ಹುಟ್ಟಿಸದು, ಕೌರ್ಯವೂ ದಿಕ್ಕೆಡಿಸದು, ಸದಾ ಆನಂದದಾಯಕ ಈ ಕಲೆ. "ರಾಮನ ಹಾಗೆ ವ್ಯವಹರಿಸಿ, ರಾವಣನಂತೆ ಅಲ್ಲ" ಎಂದು ತಿದ್ದಿ ಬುದ್ಧಿ ಹೇಳುವ ಗುಣವುಳ್ಳ ಪುರಾಣಗಳ ಕಥೆಗಳನ್ನು ನೋಡಿ ಆದರ್ಶ ಪುರುಷರಾಗಿ ಎನ್ನುವುದು ಯಕ್ಷಗಾನ ಮೇಳಗಳ ಧ್ಯೇಯವಾಕ್ಯ.

ಯಕ್ಷಗಾನವು ನೃತ್ಯ, ಸಂಗೀತ, ಮಾತುಗಾರಿಕೆ, ಹಾಡುಗಾರಿಕೆ ಹಾಗೂ ವೇಷಭೂಷಣಗಳನ್ನು ಒಳಗೊಂಡ ಒಂದು ಶಾಸ್ತ್ರೀಯ ಕಲೆ. ಕರ್ನಾಟಕದ ಕರಾವಳಿ ಪ್ರದೇಶಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಗೂ ನೆರೆಯ ಕಾಸರಗೋಡಿನಲ್ಲಿ ಈ ಕಲೆಯು ಜನಪ್ರಿಯವಾಗಿದೆ. ಯಕ್ಷಗಾನವು ಕರ್ನಾಟಕದ ಪುರಾತನ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದುದು. ಕ್ರಿ. ಶ. 1500 ರ ಸುಮಾರಿನಲ್ಲಿಯೇ ವ್ಯವಸ್ಥಿತವಾಗಿ ಯಕ್ಷಗಾನವು ರೂಢಿಯಲ್ಲಿತ್ತು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಇಂದಿಗೆ ನಶಿಸಿಹೋಗಿರುವ 'ಗಂಧರ್ವ ಗ್ರಾಮ' ಎಂಬ ಗಾನಪದ್ಧತಿಯಿಂದ ಹಾಡುಗಾರಿಕೆಯು ಹಾಗೂ ಸ್ವತಂತ್ರ ಜಾನಪದ ಶೈಲಿಯಿಂದ ನೃತ್ಯವು ರೂಪುಗೊಂಡಿದೆ ಎಂದು ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಪ್ರಬಂಧದಲ್ಲಿ ಉಲ್ಲೇಖವಿದೆ.

ರಾತ್ರಿಯಿಂದ ಆರಂಭವಾಗುವ ಯಕ್ಷಗಾನವು ಬೆಳಗಿನವರೆಗೆ ಸುಮಾರು ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾಪ್ರಕಾರ. ಇದರಲ್ಲಿ ಕನ್ನಡ ಹಾಗೂ ತುಳು ಭಾಷೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕನ್ನಡ ಎಂದರೆ ಪರಿಶುದ್ಧ ಕನ್ನಡ, ಈ ಕನ್ನಡ ಭಾಷೆಯನ್ನು ಕೇಳುವುದೇ ಒಂದು ಆನಂದ.. ಮಾತುಗಾರಿಕೆಯ ಸಮಯದಲ್ಲಿ ತಪ್ಪಿನಿಂದಾದರೂ ಒಂದು ಆಧುನಿಕ ಪದವನ್ನು ಬಳಸಿದರೂ ಅದು ಅಭಾಸವಾಗುತ್ತದೆ. ಯಕ್ಷಗಾನದಲ್ಲಿ ಬಹಳ ಮುಖ್ಯವಾದುದು ಏಕಾಗ್ರತೆ - ಪ್ರಸಂಗ, ಅವುಗಳನ್ನು ವ್ಯಾಖ್ಯಾನಿಸುವ ರೀತಿ, ಎದುರಿನ ಕಲಾವಿದರ ಮಾತಿನ ಚಾಟಿಗೆ ಸರಿಸಾಟಿ ಪ್ರತ್ಯುತ್ತರ ನೀಡುವ ಮಾತುಗಾರಿಕೆ, ಚಂಡೆಯ ಬಡಿತಕ್ಕೆ ಸರಿಯಾಗಿ ಕುಣಿಯುವ ಚಾಕಚಕ್ಯತೆ ಹೀಗೆ ಎಲ್ಲವೂ ಅತ್ಯಂತ ಮುಖ್ಯವೆನಿಸುತ್ತವೆ. ಭಾಗವತರ ಶೃತಿಗೆ ತಕ್ಕಂತೆ ಅಂದರೆ ಸಮಶೃತಿಯಲ್ಲೇ ಮಾತನಾಡಬೇಕು. ಭಾಗವತಿಕೆ ಹಾಗೂ ಮಾತುಗಾರಿಕೆ ಸಮಶೃತಿಯಾದರೆ ಅಲ್ಲೊಂದು ವಿಭಿನ್ನ ಯಕ್ಷಗಾನ ಕಲಾಲೋಕವೇ ಸೃಷ್ಟಿಯಾಗುತ್ತದೆ. ಹೀಗಾಗಿ ಯಕ್ಷಗಾನದ ಎಲ್ಲಾ ಕಲಾವಿದರಿಗೂ ಕನಿಷ್ಠ ಶೃತಿಯ ಬಗ್ಗೆ ಜ್ಞಾನ ಇರಬೇಕಾಗುತ್ತದೆ. ಮೂಲ ಪ್ರಸಂಗವನ್ನು ಹಾಡಿನ ರೂಪದಲ್ಲಿ ಬರೆದಿರುತ್ತಾರೆ. ಆದರೆ, ಹಾಡಿನ ಅರ್ಥವನ್ನು ವಿಸ್ತಾರಗೊಳಿಸಿ ಪ್ರೇಕ್ಷಕರಿಗೆ ಮಾತುಗಾರಿಕೆಯ ಮೂಲಕ ತಿಳಿಸಿಕೊಡುವುದು ಪಾತ್ರಧಾರಿಯ ಜವಾಬ್ದಾರಿಯಾಗಿರುತ್ತದೆ.

ನಾಟಕಕ್ಕೂ ಯಕ್ಷಗಾನಕ್ಕೂ ಬಹಳ ವ್ಯತ್ಯಾಸವಿದೆ. ನಾಟಕದಲ್ಲಿ ಮೂಲನಾಟಕಕಾರ ಬರೆದಿರುವ ಸಂಭಾಷಣೆಯನ್ನು ಬದಲಾಯಿಸುವುದಿಲ್ಲ, ಯಥಾರೀತಿಯಲ್ಲಿಯೇ ಹೇಳಬೇಕು. ಆದರೆ, ಯಕ್ಷಗಾನದಲ್ಲಿ ಪ್ರಸಂಗದ ಮೇಲಿರುವ ಹಿಡಿತದ ಆಧಾರದ ಮೇಲೆ, ಕಥೆಯ ಚೌಕಟ್ಟಿನೊಳಗೆ ಪಾತ್ರಧಾರಿಯು ಎಷ್ಟು ಬೇಕಾದರೂ ಮಾತನಾಡಬಹುದು. ಈ ಮಾತಿನ ಚಾಕಚಕ್ಯತೆಯಿಂದಾಗಿ ಯಕ್ಷಗಾನದ ಯಾವುದೇ ಪ್ರಸಂಗವನ್ನು ಎಷ್ಟೇ ಬಾರಿ ವೀಕ್ಷಿಸಿದರೂ ಪುನರಾವರ್ತನೆ ಎಂಬ ಭಾವನೆ ಬರುವುದಿಲ್ಲ.

ಯಕ್ಷಗಾನದಲ್ಲಿ ಹಲವು ತಾಳಗಳುಂಟು. ಒಂದು ತಾಳದಿಂದ ಇನ್ನೊಂದು ತಾಳಕ್ಕೆ ತೆರಳುವಾಗ 'ಗತಿ' ಇರುತ್ತದೆ. ತಾಳದ ಬದಲಾವಣೆಯನ್ನು ಈ ಗತಿಯಲ್ಲಿಯೇ ಮಾಡಬೇಕು. ಒಂದು, ಎರಡು, ಮೂರು ಮತ್ತು ನಾಲ್ಕು ಕಾಲಗಳನ್ನು ಈ ಕಲೆಯಲ್ಲಿ ಗುರುತಿಸಬಹುದು. ಆರಂಭವಾಗುವುದು ಒಂದನೇ ಕಾಲದಲ್ಲಿ. ನಂತರ ಎರಡನೇ ಹಾಗೂ ಮೂರನೇ ಕಾಲಕ್ಕೆ ತಲುಪುವುದು ಮಧ್ಯರಾತ್ರಿಯ ವೇಳೆಗೆ. ನಾಲ್ಕನೇ ಕಾಲ ತಲುಪುವ ವೇಳೆಗೆ ಬೆಳಗಿನ ಸಮಯವಾಗಿರುತ್ತದೆ, ಪ್ರೇಕ್ಷಕರನ್ನು ಹಿಡಿದಿಡುವ ಸಲುವಾಗಿ ಈ ಸಮಯದಲ್ಲಿ ಸಭಿಕರ ಮಧ್ಯದಲ್ಲಿ ರಾಕ್ಷಸರ ಪ್ರವೇಶ, ಅವನೊಂದಿಗೆ ಇನ್ನೂ ಕೆಲವು ರಕ್ಕಸರು ಆರ್ಭಟವನ್ನು ಮಾಡುತ್ತಾ ದೊಂದಿ ಹಿಡಿದುಕೊಂಡು ಬರುವ ಸನ್ನಿವೇಶವಿರುತ್ತದೆ. ಯಕ್ಷಗಾನದಲ್ಲಿ ಅನೇಕ ಮೇಳಗಳನ್ನು ನಾವು ನೋಡಬಹುದು; ಇವುಗಳಲ್ಲಿ ಸುಮಾರು ಮೂವತ್ತು ವೃತ್ತಿಪರ ಮೇಳಗಳಾದರೆ, ಇನ್ನೂರಕ್ಕೂ ಹೆಚ್ಚು ಹವ್ಯಾಸಿ ಮೇಳಗಳಿವೆ. ಉದಾಹರಣೆಗೆ ಕಮಲಶಿಲೆ ಮೇಳ, ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಕ್ಕಳ ಮೇಳ, ಮಹಿಳಾ ಮೇಳ, ದುರ್ಗಾಪರಮೇಶ್ವರಿ ಮೇಳ ಮತ್ತು ಕೆರೆಮನೆ ಮೇಳ.

ಸುಂದರ ರಾವಣ - ಚಿಟ್ಟಾಣಿ ರಾಮಚಂದ್ರ ಹೆಗಡೆ; ಕೃಪೆ : YouTube

ಯಕ್ಷಗಾನ ನಡೆಯುವ ಚೌಕಿಯಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಈ ಸಂಪ್ರದಾಯವು ಇಂದಿಗೂ ನಡೆದುಕೊಂಡು ಬರುತ್ತಿದ್ದು ದೇವಾಲಯದಲ್ಲಿ ಹೂವಿನ ಪೂಜೆ, ಬೊಂಡಾಭಿಷೇಕ (ಎಳನೀರು ಅಭಿಷೇಕ), ರಂಗಪೂಜೆ ಮುಂತಾದ ಆಚರಣೆಗಳೊಂದಿಗೆ ಯಕ್ಷಗಾನ ಸೇವೆಯನ್ನು ಮಾಡಿಸಲಾಗುತ್ತದೆ. ರಂಗಪ್ರವೇಶಿಸುವ ಮುನ್ನ ಮೊದಲಿಗೆ ಗಣೇಶ ಪೂಜೆ, ಚೌಕಿಯಲ್ಲಿ ದೇವರ ಪೂಜೆ, ಕಿರೀಟಪೂಜೆ, ಆ ಕ್ಷೇತ್ರದ ದೇವರಲ್ಲಿ ಪ್ರಾರ್ಥನೆ, ನಂತರ ಜಾಗಟೆ, ಚಂಡೆ, ಮದ್ದಳೆ ಮತ್ತು ಹಾರ್ಮೋನಿಯಂಗೆ ವಂದಿಸುತ್ತಾ, ಮೇಳದ ಹಿರಿಯರ ಆಶೀರ್ವಾದವನ್ನು ಪಡೆದುಕೊಂಡು ಗೆಜ್ಜೆಪೂಜೆಯ ನಂತರ ಗೆಜ್ಜೆಯನ್ನು ಕಟ್ಟಿ ರಂಗಪ್ರವೇಶ ಮಾಡುವುದೇ ವಾಡಿಕೆ.

ಹಲವು ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯು ಕರಾವಳಿ ಪ್ರದೇಶದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇಲ್ಲಿಯ ಜನರು ಯಕ್ಷಗಾನವನ್ನು ಕೇವಲ ಮನೋರಂಜನೆ ಅಥವಾ ಹವ್ಯಾಸಕ್ಕೆ ವೀಕ್ಷಿಸುವವರಲ್ಲ, ಈ ಕಲೆಯಲ್ಲಿ ಅವುಗಳೊಂದಿಗೆ ಭಕ್ತಿಯೂ ಇರುತ್ತದೆ. ಆದರೆ, ಕಾಲದ ಪ್ರಭಾವಕ್ಕೆ ಸಿಲುಕಿ ಎಲ್ಲ ಕಲೆಗಳಂತೆ ಯಕ್ಷಗಾನ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಊರೂರುಗಳಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನಗಳ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಅಲ್ಲದೇ, ಒಂಭತ್ತು-ಹತ್ತು ಗಂಟೆಗಳ ಕಾಲ ನಡೆಯುತ್ತಿದ್ದ ಆಟ ಈಗ ಕೇವಲ ಮೂರು-ನಾಲ್ಕು ಗಂಟೆಗೆ ಸೀಮಿತವಾಗಿದೆ. ಯಕ್ಷಗಾನವೆಂಬ ದಿವ್ಯ ಪರಂಪರೆಯು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳದಂತೆ ಆ ಕಲೆಯನ್ನು ಉಳಿಸಿ, ಕಲಿಸಿ, ಬೆಳಸಬೇಕಾದುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ.

ಲೇಖಕರ ಕಿರುಪರಿಚಯ
ಡಾ. ಶ್ವೇತ ಕೆ. ಎಸ್.

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಪ್ರಸ್ತುತ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ.

ಯಕ್ಷಗಾನ ಕಲಾವಿದರೂ ಆಗಿರುವ ಇವರು ಕಾಲೇಜಿನ ದಿನಗಳಿಂದ ಮೊದಲ್ಗೊಂಡು ಇಲ್ಲಿಯವರೆಗೆ ಅನೇಕ ಯಕ್ಷಗಾನ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 29, 2013

ನಂಗೂ ಸನ್ಮಾನ ಆಯ್ತು..?!!

ಕಾಲಿಂಗ್ ಬೆಲ್ ಹೊಡ್ಕೊಂಡ ಕೂಡ್ಲೇ ಮಾಮೂಲಿನಂತೆ ನಾನು "ಯಾರೂ..." ಎಂದೆನ್ನುವ ರೂಢಿಯಂತೆ ಕೇಳಿದೆ. ಅದಕ್ಕವರು ಯಾರು ಅಂತ ಹೇಳಿದರು, ಆದರೆ ನನಗೆ ಕೇಳಿಸಲಿಲ್ಲ. ಮಹಡಿಯ ಮೇಲೆ ನನಗೆ ತೋಚಿದ್ದು ಗೀಚ್ತಾ ಕುಳಿತಿದ್ದೆ. "ಮೇಲೆ ಬನ್ನಿ" ಅಂದೆ. ಬಂದವರನ್ನು ಕೂರಲು ತಿಳಿಸಿ ಏನು ಎತ್ತ ಎಂದು ವಿಚಾರಿಸಿದೆ. ಬಂದವರಿಬ್ಬರೂ ತಮ್ಮ ಪರಿಚಯ ಹೇಳಿಕೊಂಡರು. ಅವರು ಸಮಾಜ ಸೇವಾ ನಿರತರೆಂದು, ಅವರದೊಂದು ಸಂಘವಿದೆ ಎಂದೂ ತಿಳಿಸಿದರಲ್ಲದೆ ಆ ಮುಖಾಂತರ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಮತ್ತು ಗಣ್ಯರನ್ನು ಸನ್ಮಾನ ಮಾಡುತ್ತಾರಂದು ತಿಳಿಸಿದರು. ಹಾಗೆಯೇ ಈ ವರ್ಷದಲ್ಲಿ ನಿಮ್ಮನ್ನೂ ಒಬ್ಬ ಗಣ್ಯ ವ್ಯಕ್ತಿಗಳಲ್ಲೊಬ್ಬರೆಂದು ಪರಿಗಣಿಸಿ ಸನ್ಮಾನಿಸಲಿದ್ದೇವೆಂದು, ಅದಕ್ಕೆ ನೀವು ಒಪ್ಪಿಕೊಳ್ಳಬೇಕೆಂದು, ನಿಮ್ಮ ಹೆಸರು ನಿಮ್ಮ ಕುಲಗೋತ್ರದ ಪರಿಚಯಪತ್ರವನ್ನೂ ಕೊಡಬೇಕೆಂದು ಕೇಳಿದರು. ಅವರ ಯಾರ ಪರಿಚಯವೂ ನನಗಿರಲಿಲ್ಲ. ಗೊತ್ತಾಗಲೂ ಇಲ್ಲ. ಅದಕ್ಕೆ "ನಾನು ಅಂಥ ದೊಡ್ಡ ಸಾಧನೆ ಮಾಡಿದವನಲ್ಲ, ಇನ್ನೂ ಅನೇಕರು ಹೆಚ್ಚಿನ ಸಾಧನೆ ಮಾಡಿದವರು ಇದ್ದಾರೆ. ಅವರನ್ನು ಹುಡುಕಿ ಅವರಿಗೆ ಸನ್ಮಾನ ಮಾಡಿದರೆ ನೀವು ಮಾಡುವ ಸನ್ಮಾನಕ್ಕೊಂದು ಅರ್ಥ ಬರುತ್ತದೆ" ಎಂದು ಉಚಿತ ಉಪದೇಶ ನೀಡಿದೆ.  ಆದರೆ ಅವರು ನನ್ನ ಮಾತನ್ನು ಕೇಳುವ ಗೋಜಿಗೆ ಹೋಗಲಿಲ್ಲ.. "ಆಯ್ತು ಆಯ್ತು, ಇನ್ವಿಟೀಷನ್ ಕಳಿಸ್ತೀವಿ, ಆ ದಿನ ಗಾಡಿ ವ್ಯವಸ್ಥೆನೂ ಮಾಡ್ತೀವಿ, ನೀವು ಆ ದಿನ ಸುಮ್ಮನೆ ಬಂದ್ಬಿಡಿ ಅಷ್ಟೇ" ಅಂತ ಹೇಳ್ಬಿಟ್ಟು ಹೊರಟೇಬಿಟ್ರು. ಅವರು ಯಾರು? ಏನು? ಇವರಿಗೆ ನನ್ನ ಹೆಸರು ಸೂಚಿಸಿದವರು ಯಾರು? ಏನು ಎತ್ತ ಅಂತ ನನ್ನ ಮನಸಿನಲ್ಲಿ ನೂರಾರು ಪ್ರಶ್ನೆಗಳು ಉಳಿದುಬಿಟ್ಟವು. ಏನಾದರೂ ಆಗಲಿ ಅಂತ ಮನಸ್ಸಿಗೆ ಹಾಕಿಕೊಳ್ಳದೇ ಸುಮ್ಮನಾಗಿಬಿಟ್ಟೆ.

ಅಷ್ಟರಲ್ಲೊಂದು ದಿನ ನನಗೊಂದು ಇನ್ವಿಟೀಷನ್ ಬಂತು. ಅದರಲ್ಲಿ ಅಂದು ಬಂದಿದ್ದವರ ಸಂಘದ ಹೆಸರು, ಸಮಾರಂಭ ನಡೆಯುವ ಸ್ಥಳ, ದಿನಾಂಕ, ಸಮಯದ ಜೊತೆಗೆ ಹತ್ತಾರು ಹೆಸರುಗಳು, ರಾಜಕೀಯ ಗಣ್ಯರ ಹೆಸರೂ ಇತ್ತು. ಜೊತೆಗೆ ಗಣ್ಯರಿಗೆ ಸನ್ಮಾನವಿದೆಯೆಂದೂ ಪ್ರಕಟಿಸಲಾಗಿತ್ತು. ಸನ್ಮಾನಿತರ ಯಾರ ಹೆಸರುಗಳನ್ನೂ ನಮೂದಿಸಿರಲಿಲ್ಲ. ಏನೋ ಎಂತೋ.. ಎಂದು ಸುಮ್ಮನಾದೆ.

ಕಲೆ: ಶ್ರೀ ಸು. ವಿ. ಮೂರ್ತಿ
ಸಮಾರಂಭದ ದಿನವೂ ಬಂತು. ನಾನೇನೋ ತಯಾರಾಗಿ ಇವರ ವಾಹನದ ನಿರೀಕ್ಷೆಯಲ್ಲಿರುವಾಗ ನನ್ನ ಮೊಬೈಲ್ ರಿಂಗಣಿಸಿತು. ಕಿವಿಗೊಟ್ಟಾಗ ಬಂದುತ್ತರ ಅವರು ಕಳಿಸಿದ ವಾಹನ ಕೈಕೊಟ್ಟಿದೆ, ನೀವೇ ಏನಾದರು ವ್ಯವಸ್ಥೆ ಮಾಡಿಕೊಂಡು ಬನ್ನಿ. ಅದಕ್ಕೆ ಕನ್ವೇಯನ್ಸ್ ಹಣ ಒಂದಿಷ್ಟು ಕೊಡುತ್ತೇವೆಂದು ಉಸುರಿತು. ಸರಿ ಹಾಗೆ ಬೆಂಗಳೂರಿನ ಯಾವುದೋ ಮೂಲೆಯಲ್ಲಿರುವ ಸಮಾರಂಭಕ್ಕೆ ಬೆಂಗಳೂರನ್ನೆಲ್ಲಾ ಸುತ್ತಿ ಬಂದಾಗ ರಿಕ್ಷಾದ ಬಿಲ್ಲು 245 ರೂ ಆಗಿತ್ತು. ಅದನ್ನು ಕೊಟ್ಟು ಸಭಾಂಗಣದ ಒಳಗೆ ಕಾಲಿಟ್ಟೆ. ಅಲ್ಲಿ ಯಾರೂ ಗುರುತಿನವರಿರಲಿಲ್ಲ. ಮಾತನಾಡಿಸುವರ್ಯಾರೂ ಇರಲಿಲ್ಲ. ಸಮಾರಂಭದ ಸಮಯ ಮೀರಿ ಒಂದೆರಡು ಗಂಟೆ ಆದ ಮೇಲೆ ವೇದಿಕೆಗೊಂದಿಷ್ಟು ಜನ ದಬದಬಾಂತ ಬಂದರು. ನಂತರ ಎಲ್ಲರೂ ತಲೆಬುಡವಿಲ್ಲದೆ ಅಲ್ಲಿರುವ ಒಬ್ಬರನ್ನೊಬ್ಬರು ಹೊಗಳಿಕೊಳ್ಳತೊಡಗಿದರು. ಆದರೆ ಸಮಾರಂಭ ಯಾಕೆ ಏನು ಎಂಬ ವಿಷಯದ ಬಗ್ಗೆ ಯಾರೂ ಮಾತಾಡಲಿಲ್ಲ. ಅಷ್ಟರಲ್ಲಿ ಮೈಕ್ ನಲ್ಲಿ ಈಗ ಗಣ್ಯರಿಗೆ ಸನ್ಮಾನವೆಂದು ಸಾರಿದರು. ಅಲ್ಲದೆ ಎಲ್ಲರನ್ನು ಕರೆದ ಕೂಡಲೇ ಎಲ್ಲರೂ ವೇದಿಕೆಗೆ ಬಂದು ಸನ್ಮಾನವನ್ನು ಸ್ವೀಕರಿಸಬೇಕೆಂದು ಘೋಷಿಸಿದರು. ಹಾಗೆಯೇ ಒಂದಾದ ಮೇಲೊಂದರಂತೆ ಹೆಸರುಗಳನ್ನೂ ಕೂಗುತ್ತಲೇ ಎಲ್ಲರೂ ವೇದಿಕೆ ಮೇಲೆ ಒಟ್ಟಿಗೆ ಬಂದಾಗ ಯಾರು ಏನು ಅಂತ ಗೊತ್ತಾಗದೆ ಗೊಂದಲ ಉಂಟಾಯಿತು. ಮುಂದಿನ ಅರ್ಧ ಗಂಟೆಯಲ್ಲೇ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿಯೂ ಆಯ್ತು. ಅಷ್ಟರಲ್ಲಿ 4-6 ಜನ ಕಾರ್ಯಕರ್ತರು ಬಂದು ಎಲ್ಲರ ಸನ್ಮಾನದ ವಸ್ತುಗಳನ್ನೂ ಅಂದರೆ ಹಾರ, ಹಣ್ಣು, ಶಾಲು, ಸರ್ಟಿಫಿಕೇಟ್ ಕಿತ್ತುಕೊಂಡು ಒಂದು ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ಕೈಗಿತ್ತರು. ನಂತರ ಕೆಲವೇ ನಿಮಿಷಗಳಲ್ಲಿ ವೇದಿಕೆ ಖಾಲಿಯೂ ಆಯಿತು. ಆಗ ಅಲ್ಲಿ ಸಮಾರಂಭ ಆಣಿಗೊಳಿಸಿದವರ್ಯಾರೂ ಕಾಣಿಸಲಿಲ್ಲ. ಸಭಾಂಗಣವನ್ನೊಮ್ಮೆ ದಿಟ್ಟಿಸಿ ನೋಡಿ ಹೊರಕ್ಕೆ ಬಂದೆ. ಹೇಳುವುದಕ್ಕಾಗಲಿ, ಕೇಳುವುದಕ್ಕಾಗಲಿ ಯಾರೂ ಇಲ್ಲದ ಕಾರಣ ಒಂದು ರಿಕ್ಷಾವೊಂದನ್ನು ತಡೆದೆ. ಅಷ್ಟರಲ್ಲಾಗಲೇ ರಾತ್ರಿ 10:30 ಘಂಟೆ ಆಗಿದ್ದರಿಂದ ಯಾರೊಬ್ಬರೂ ಬರಲೊಪ್ಪಲಿಲ್ಲ. ಕೊನೆಗೊಬ್ಬ ರಿಕ್ಷಾದವನು ಒಂದಕ್ಕೆ ಡಬ್ಬಲ್ ಚಾರ್ಜು ಕೊಟ್ಟರೆ ಅಷ್ಟು ದೂರಕ್ಕೆ ಬರುತ್ತೇನೆಂದು ಒಪ್ಪಿದ. ಅಂತೂ ಇಂತೂ ಮನೆಗೆ ಬರುವುದು ತುಂಬಾ ಹೊತ್ತಾಗಿದ್ದರಿಂದ ಗಾಬರಿಯಾಗಿದ್ದ ಮನೆಯವಳ ಕೈನಲ್ಲಿ ಚೀಲವನ್ನಿಟ್ಟೆ. ಕುತೂಹಲದಿಂದ ನನ್ನ ಹೆಂಡ್ತಿ ಚೀಲದಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಹೊರತೆಗೆದಳು. ಶಾಲನ್ನು ಬಿಡಿಸಿದಾಗ ಅದರಲ್ಲಿ ಹತ್ತಾರು ಕಣ್ಣುಗಳು ಇಡೀ ಜಗತ್ತನ್ನೇ ನೋಡುತ್ತಿತ್ತು. ಮೊಮೆಂಟೋನಲ್ಲಿ ನನ್ನ ಚಿತ್ರ ಇರಲಿಲ್ಲ, ಬದಲಿಗೆ ಸಮಾರಂಭ ಏರ್ಪಡಿಸಿದ ಮಹಾನುಭಾವರ ಭಾವಚಿತ್ರ, ಹೆಸರುಗಳು ಇದ್ದವು. ಹಣ್ಣಿನ ಬುಟ್ಟಿಯನ್ನು ಬಿಡಿಸುತ್ತಲೇ ಅದರೊಳಗಿಂದ ಪಿತಪಿತನೆಂದು ಕೊಳೆತ ಕೆಲವು ಹಣ್ಣುಗಳು ಭೂಮಿ ಪಾಲಾದವು. ಅವುಗಳನ್ನು ಕಿತ್ತು ಎಷ್ಟು ದಿವಸಗಳಾಗಿದ್ದವೋ ಏನೋ. ಇನ್ನು ಸರ್ಟಿಫಿಕೇಟ್ನಲ್ಲಿ ಅಭಿನಯ ಚಕ್ರವರ್ತಿ ಸೂ. ವಿ. ಮೂರ್ತಿಯವರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪತ್ರವೆಂದು ಬರೆಯಲಾಗಿತ್ತು. ನಾನು ಚಿತ್ರನಟನೆಂತಲೂ ಮುದ್ರಿಸಲಾಗಿತ್ತು. ಓದಿ ನೋಡಿ ನಾನು ಮೂರ್ಛೆ ಹೋಗುವುದೊಂದೇ ಬಾಕಿ. "ನಾನೇನು ಈ ಸನ್ಮಾನ ಬಯಸಿದ್ದೆನಾ? ಕೇಳಿದ್ದೆನಾ? ಇವೆಲ್ಲ ಯಾರಿಗಾಗಿ? ನಾನು ಚಿತ್ರನಟನಾಗಿದ್ದು ಯಾವಾಗ? ಅಲ್ಲದೆ ಇದರಿಂದ ಯಾರಿಗೆ ಏನು ಲಾಭ ಆಯಿತು..?" ಎಂಬುದೆಲ್ಲವೂ ನನಗೆ ಇಂದಿಗೂ ಗೊತ್ತಾಗದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಲೇಖಕರ ಕಿರುಪರಿಚಯ
ಶ್ರೀ ಸು. ವಿ. ಮೂರ್ತಿ

ಇವರು ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರು. ಮಕ್ಕಳಿಗಾಗಿ ಹಲವಾರು "ನೋಡಿ ಕಲಿ - ಮಾಡಿ ನಲಿ" ಮಾದರಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ.

ಬಸವನಗುಡಿಯ ವಿದ್ಯಾರ್ಥಿ ಭವನ ಹೋಟೆಲಿನ ಗೋಡೆಯ ಸುತ್ತಮುತ್ತಲೂ ರಾರಾಜಿಸುತ್ತಿರುವ ಕನ್ನಡದ ಕಣ್ಮಣಿಗಳ ಚಿತ್ರಪಟಗಳು ಇವರ ಪ್ರತಿಭೆ ಹಾಗೂ ಕಲಾಸೇವೆಗೆ ಸಾಕ್ಷಿ.

Blog  |  Facebook  |  Twitter

ಗುರುವಾರ, ನವೆಂಬರ್ 28, 2013

ಬೊಂಬೆಯ ಸೀರೆ

ಒಂದು ಪ್ರಶ್ನೆ ಕೇಳ್ತೀನಿ, ಅದಕ್ಕೆ ನಿಮ್ಮಿಂದ ಪ್ರಾಮಾಣಿಕ ಉತ್ತರ ಬರಬೇಕು, ನಾನು ಖಂಡಿತವಾಗೂ ಯಾರಿಗೂ ಹೇಳಲ್ಲ. "ನೀವು ನಿಮ್ಮ ಹೆಂಡತಿಯು (ನಿಮಗೆ ಮದುವೆಯಾಗಿದ್ದಲ್ಲಿ) ಸೀರೆ ಕೊಳ್ಳಬೇಕಾದಾಗ, ಅವರು ಸೀರೆ ಆರಿಸಲು ಅವರ ಸಹಾಯಕ್ಕಾಗಿ ಅವರ ಜೊತೆಗೆ ಹೋಗುತ್ತೀರಾ?" ಉತ್ತರ ಮಾತ್ರ ಪ್ರಾಮಾಣಿಕವಾಗಿರಬೇಕು ಮಾರಾಯ್ರೆ. ನಿಮ್ಮ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ, ಆದರೆ ನನ್ನ ಹೆಂಡತಿಯಂತೂ, ಆಕೆ ಸೀರೆ ಕೊಳ್ಳಬೇಕಾದಾಗಲೆಲ್ಲಾ, ನಾನು ಒಲ್ಲೆನೆಂದರೂ ಬೇಡಿಕೊಂಡರೂ ಬಿಡದೆ ಕರೆದೊಯ್ಯುತ್ತಾಳೆ.

"ಇದೇನೇ ಸೀತಾ, ನನಗೆ ನನ್ನ ಪ್ಯಾಂಟಿನ ಬಟ್ಟೆ ಆರಿಸುವುದೇ ತಿಳಿಯೋದಿಲ್ಲ, ನಿನ್ನ ಸೀರೆ ಸೆಲೆಕ್ಷನ್ನಿಗೆ ನನ್ನ ಯಾಕೆ ಪೀಡಿಸ್ತೀಯಾ? ಹೇಗೂ ನಿಮ್ಮಮ್ಮನ ಮನೆ ಹತ್ತಿರಾನೆ ಇದೆ, ಅವರನ್ನ ಕರೆದುಕೊಂಡು ಹೋಗು, ಇಲ್ಲವಾದರೆ ನಿನ್ನ ತಂಗೀನ ಕರೆದುಕೊಂಡು ಹೋಗು, ಅವಳು ತುಂಬಾ ಚೆನ್ನಾಗಿ ಸೆಲೆಕ್ಷನ್ ಮಾಡ್ತಾಳೆ. ಅದೂ ಆಗದಿದ್ದರೆ, ಆ ನಿನ್ನ ಸ್ನೇಹಿತೆ ಮಿಟಕಲಾಡಿ ಮೀನಾಕ್ಷಿನಾದ್ರೂ ಕರೆದುಕೊಂಡು ಹೋಗು, ಅವಳು ಖಂಡಿತಾ ಆ ಸೀರೆ ಅಂಗಡಿ ಮಾಲಿಕನನ್ನೇ ತನ್ನ ಮಾತಿನಿಂದ ಮರುಳು ಮಾಡಿ ಬಾಯಿ ಮುಚ್ಚಿಸಿ, ನಿನಗೆ ಕಡಿಮೆ ಬೆಲೇಲೆ ಸೀರೆ ಕೊಡಿಸ್ತಾಳೆ. ಅವರನ್ನೆಲ್ಲ ಬಿಟ್ಟು ನನ್ನನ್ನ್ಯಾಕೆ ಗೋಳು ಹುಯ್ಕೊತ್ತೀಯಾ?" ಎಂದು ಅಂಗಲಾಚಿದರೂ ನನ್ನನ್ನು ಬಿಡುವುದಿಲ್ಲ. ಅದಕ್ಕೆ ನನಗೆ ತಿಳಿದಿರುವ ಕಾರಣಾನೂ ಹೇಳಿಬಿಡ್ತೀನಿ, ನನ್ನ ಹೆಂಡತಿಗೆ ಹೇಳೋಲ್ಲ ಎಂದರೆ. ಅಲ್ಲ, ಒಂದು ಸಾರಿನೋ, ಎರಡು ಸಾರಿನೋ ಆದರೆ ಅವರ್ಯಾರಾದರೂ ಬಂದಾರು, ಇವಳಿಗೆ ಕಂಪನಿ ಕೊಟ್ಟಾರು. ಈಕೆ ಸೀರೆ ಕೊಳ್ಳಬೇಕಾದಾಗಲೆಲ್ಲಾ ಈಕೆ ಹಿಂದೆ ಬರೋದಿಕ್ಕೆ, ಅವರೇನು ಈಕೆಯನ್ನು ಕಟ್ಟಿಕೊಂಡ ಗಂಡನೇ? ಅಲ್ಲದೇ ಮತ್ತೊಬ್ಬ ಹೆಂಗಸನ್ನು ಕರೆದುಕೊಂಡು ಹೋದರೆ, ಅಲ್ಲಿಗೆ ಮುಗೀತೂ ಸೀರೆ ಸೆಲೆಕ್ಷನ್ನು! ಹತ್ತು ಅಂಗಡಿ ಸುತ್ತಿದರೂ, ಈಕೆಗೆ ಒಪ್ಪಿಗೆಯಾದ ಸೀರೆಗೆ ಅವಳೇನೋ ಕೊಂಕು ಆಡಿಬಿಡುತ್ತಾಳೆ. ಅವಳು ಒಪ್ಪಿದ್ದನ್ನು ಈಕೆ ಹೇಗೆ ಒಪ್ಪಿಯಾಳು? ಅವಳ ಸೆಲೆಕ್ಷನ್ ಒಪ್ಪಿಕೊಳ್ಳೋಕೆ ಈಕೆಗೇನು ಸ್ವಂತ ಬುದ್ಧಿಯಿಲ್ಲವೇ? ಇನ್ನು ಇಬ್ಬರೂ ಒಂದೇ ಸೀರೇನ ಒಪ್ಪೋ ಮಾತು ದೂರಾನೇ ಉಳಿಯಿತು. ಹಾಗೂ ಏನಾದರೂ ದುರದೃಷ್ಟವಶಾತ್ ಇಬ್ಬರೂ ಒಪ್ಪಿದರೆ, ಇವರು ಕೇಳೋ ಬೆಲೆಗೆ ಆ ಅಂಗಡಿಯವನು ಕೊಡೋಕೆ ಒಪ್ಪಬೇಕಲ್ಲ! ಹೀಗಾಗಿ ಅರ್ಧ ದಿನವೆಲ್ಲಾ ಅಲೆದಾಡಿ. ಎರಡು ಡಜನ್ ಅಂಗಡಿ ಅಲೆದು, ಹತ್ತು ಡಜನ್ ಸೀರೆಗಳನ್ನು ನೋಡಿದರೂ ಒಂದು ಸೀರೆಯೂ ಆಯ್ಕೆಯಾಗುವುದಿಲ್ಲ. ಬೇರೆಯವರು ಬಿಟ್ಟ ಕೆಲಸ ಬಿಟ್ಟು ಈಕೆಯೊಂದಿಗೆ ಈಕೆಗೆ ಬೇಕಾದಾಗಲೆಲ್ಲಾ ಕಂಪೆನಿ ಕೊಡೋಕೆ ಅವರೇನು ಅಷ್ಟೊಂದು ಪುರುಸೊತ್ತಾಗಿರ್ತಾರಾ?

ಇಷ್ಟೆಲ್ಲಾ ತೊಂದರೆ ತಪ್ಪಿ, ಆಕೆ ಒಪ್ಪಿದ್ದಕ್ಕೆ ತಾನೂ ಗೋಣು ಆಡಿಸಿ, ಆಕೆಯ ಆಯ್ಕೆಗೆ ಮೆಚ್ಚಿಗೆ ತೋರಿಸಿ, ಆಕೆ ಚೌಕಾಶಿ ಮಾಡುವಾಗ ಎತ್ತಲೋ ನೋಡುವಂತೆ ನಟಿಸಿ, ಅವರಿಬ್ಬರೂ ಒಪ್ಪಿದ ಬೆಲೆಯನ್ನು ತೆತ್ತು, ಬಿಡಿಸಿಕೊಂಡು ಬರುವಂತಹ ಸ್ನೇಹಿತರೋ, ಬಂಧುಗಳೋ, ಗಂಡನಲ್ಲದೇ ಬೇರಾರಿದ್ದಾರು ಹೇಳಿ. ಆದುದರಿಂದ ಬಹಳಷ್ಟು ಜನ ಹೆಂಗಸರ ಗಂಡಂದಿರಂತೆ ನಾನೂ ಆಗಾಗ ಬಲಿಪಶುವಾಗುತ್ತೇನೆ.

ಒಮ್ಮೆ ಸೀತಾಳ ಸೀರೆ ಸೆಲೆಕ್ಷನ್ನಿಗೆ ಕಂಪೆನಿ ಕೊಡುವ ಸಲುವಾಗಿ ಹೋಗಿದ್ದಾಗ ಒಂದು ಅಂಗಡಿಯ ಷೋ ಕೇಸಿನಲ್ಲಿದ್ದ ಬೊಂಬೆಗೆ ಉಡಿಸಿದ್ದ ಸೀರೆ ಇವಳಿಗೆ ಬಹುವಾಗಿ ಮೆಚ್ಚಿಗೆಯಾಗಿಬಿಟ್ಟಿತ್ತು. "ನೋಡ್ರೀ, ಆ ಬೊಂಬೆಗೆ ಉಡಿಸಿರೋ ಸೀರೆ ಎಷ್ಟು ಚೆನ್ನಾಗಿದೆ, ಆ ಕಲರ್ರೂ, ಆ ಬಾರ್ಡರ್ರೂ, ಆ ಡಿಸೈನು, ಎಲ್ಲಾ ಎಷ್ಟು ಚೆನ್ನಾಗಿದೆ ಆಲ್ವಾ?" ಎಂದು ಎತ್ತಲೋ ನೋಡುತ್ತಿದ್ದ ನನ್ನನ್ನು ತಿವಿದು ಕೇಳಿದಳು. ಆಗ ನಾನೇನು ಹೇಳಬಹುದು. "ಅಮ್ಮಾ ತಾಯೀ, ಆ ಮೈಮಾಟದ, ಆ ಗೌರವರ್ಣದ ಬೊಂಬೆಗೆ ಯಾವ ಸೀರೆ ಉಡಿಸಿದರೂ ಚೆನ್ನಾಗಿ ಕಾಣಿಸುತ್ತೆ. ಅದು ಎಷ್ಟೆಂದರೂ ಬೊಂಬೆ. ಆ ಸೀರೆ ನೀನು ಉಟ್ಟರೆ ಚೆನ್ನಾಗಿರುವುದೇ ಯೋಚಿಸು. ಸೀರೆಯ ಬಣ್ಣ, ಡಿಸೈನಿಗಿಂತ ಉಡುವವರ ಬಣ್ಣ, ಮೈಮಾಟ ಮುಖ್ಯ. ಆದುದರಿಂದ ಅದು ನಿನಗೆ ಅಷ್ಟೇನೂ ಚೆನ್ನಾಗಿ ಕಾಣಿಸದು" ಎಂದು ಹೇಳೋಕ್ಕಾಗುತ್ತ್ಯೇ? ಅಲ್ಲ, ಎಲ್ಲ ಹೆಂಗಸರು ಜಯಪ್ರದ, ಹೇಮಾಮಾಲಿನಿಯರಂತೆ ಇರೋದಿಕ್ಕಾಗುತ್ತ್ಯೇ? ಅಥವಾ ಎಲ್ಲಾ ಗಂಡಸರೂ ಧರ್ಮೇಂದ್ರ, ರಾಜೇಶ ಖನ್ನಾರಂತೆ ಇರಲು ಸಾಧ್ಯವೇ? ಅಲ್ಲದೆ ಪಾಪ, ಎಲ್ಲ ಗೃಹಿಣಿಯರೂ ಅವರಂತೆ ಬಾಹ್ಯ ಸೌಂದರ್ಯಕ್ಕಾಗಿ ಕಳೆಯಲು ಅವರಲ್ಲಿ ಸಮಯವಾದರೂ ಎಲ್ಲಿ? ಗಂಡ, ಮಕ್ಕಳ ಸಂಸಾರ ತಾಪತ್ರಯದಲ್ಲಿ ಒಂದರ್ಧ ಗಂಟೆ ಸಹ ಕನ್ನಡಿ ಮುಂದೆ ಕಳೆಯಲು ಸಾಧ್ಯವಾಗುವುದಿಲ್ಲ. ಅಥವಾ ಸಿನಿಮಾ ತಾರೆಯರಂತೆ, ಮನೆಗೆಲಸ, ಅಡುಗೆ ಮಾಡಿದರೆ ತಮ್ಮ ಉಗುರಿನ ಸೌಂದರ್ಯ, ಕೇಶ ಸೌಂದರ್ಯ ಹಾಳಾಗುವುದೆಂದು ಸುಮ್ಮನೆ ಕೈಕಟ್ಟಿ ಕುಳಿತರಾದೀತೇ? ಹಾಗಾದರೆ ಗಂಡ, ಮಕ್ಕಳು ಊಟಕ್ಕೆ ಏನು ಮಾಡಬೇಕು? ಆದರೆ ನನ್ನ ವಾದ ಏನೆಂದರೆ ಕೇವಲ ಕೊಳ್ಳುವ ಸೀರೆ ಚೆನ್ನಾಗಿದ್ದರೆ ಪ್ರಯೋಜನವಿಲ್ಲ; ಆ ಸೀರೆ ಉಡುವುದರಿಂದ ಉಡುವವರ ಸೌಂದರ್ಯ ಹೆಚ್ಚುತ್ತದೆಯೇ ಎನ್ನುವುದು ಮುಖ್ಯ. ಅವರ ಮೈಬಣ್ಣ, ಆಕಾರಕ್ಕೆ ತಕ್ಕಂತೆ ಆರಿಸಿದರೆ, ಅದರಿಂದ ಅವರೂ ಚೆನ್ನಾಗಿ ಕಾಣಬಲ್ಲರು. ಗಂಡಸರೂ ಅಷ್ಟೇ, ಸಾಧಾರಣ ಮೈಬಣ್ಣವುಳ್ಳವರು ದಟ್ಟವರ್ಣದ ಉಡುಪುಗಳನ್ನು ಧರಿಸಿದರೆ ಮತ್ತಷ್ಟು ಕೆಟ್ಟದಾಗಿ ಕಾಣುತ್ತಾರೆ. ಕೋಲಿನಂತೆ ಸಣ್ಣಗೆ, ಆರಡಿಗಳಷ್ಟು ಎತ್ತರವಿದ್ದು, ಒಂಟೆಯ ಕತ್ತಿನಂತಹ ಗೋಣಿದ್ದು, ಅಂತಹವರು ಸೂಟ್ ಧರಿಸಿದರೆ ಅಥವಾ ಕುಬ್ಜಾಕಾರವಿದ್ದು, ಡೊಳ್ಳಿನಂತಹ ಬೊಜ್ಜಿದ್ದವರು ಸೂಟ್ ಧರಿಸಿದರೆ ಚೆನ್ನಾಗಿ ಕಾಣುತ್ತಾರೆಯೇ? ಖಂಡಿತ ಇಲ್ಲ. ಆದರೆ ದೇಹದ ಆಕಾರಕ್ಕೆ ತಕ್ಕಂತೆ ಉಡುಪು ಧರಿಸುವುದರಿಂದ ಕೆಟ್ಟದಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಬಹುದೆಂದು ನನ್ನ ವಾದ. ಒಳ್ಳೆಯ ಆಕಾರ, ವರ್ಣದವರು, ಗಂಡಸರಾಗಿರಲಿ ಅಥವಾ ಹೆಂಗಸರಾಗಿರಲಿ, ಯಾವುದೇ ರೀತಿಯ ಉಡುಪು ಧರಿಸಿದರೂ ಚೆನ್ನಾಗಿಯೇ ಕಾಣುತ್ತಾರೆ. ಅಥವಾ ಅಂಥಹವರು ಧರಿಸುವುದರಿಂದ ಆ ಉಡುಪೇ ಚೆನ್ನಾಗಿ ಕಾಣುತ್ತದೆ. ಅದಕ್ಕೆ ಅಲ್ಲವೇ ಒಳ್ಳೆಯ ದೇಹಾಕಾರ, ವರ್ಣದವರನ್ನು ತಮ್ಮ ಮಿಲ್ಲಿನ ಬಟ್ಟೆಗಳನ್ನು ಜನಪ್ರಿಯಗೊಳಿಸಲು ಬಳಸಿಕೊಳ್ಳುವುದು. ಅಯ್ಯೋ, ನೋಡಿ ಎಲ್ಲಿಂದ ಎಲ್ಲಿಗೋ ಹೋಯಿತು ವಿಷಯ. ಇರಲಿ. ಆದರೆ ಗಂಡಂದಿರ ವಾದ, ಉಪದೇಶವನ್ನು ಹೆಂಡತಿಯರು ಒಪ್ಪುವರೇ? ಅಥವಾ ಆ ಅಂಗಡಿಯಲ್ಲಿ ಆ ಬೊಂಬೆ ಚೆನ್ನಾಗಿದೆ, ಅರವಿಂದ ವದನ, ಕಮಲ ನಯನ, ಸಿಂಹಕಟಿ, ದಂತ ವರ್ಣ, ತುಂಬು ತೋಳು... ಎಂದೆಲ್ಲಾ ಆ ಬೊಂಬೆಯ ಅಂಗಾಂಗವನ್ನು ವರ್ಣಿಸಿ, ಮೇಲೆ ತಿಳಿಸಿದ ವಿಷಯವನ್ನೆಲ್ಲಾ ತಿಳಿಸಿ ಹೇಳಲಾದೀತೇ? ಅಥವಾ ಹೇಳಿ, ಹೆಂಡತಿಯಿಂದ ಮುಖ ಪ್ರಕ್ಷಾಳನ ಮಾಡಿಸಿಕೊಳ್ಳಲಾದೀತೇ? ಅದೂ ಅಂಗಡಿಯಲ್ಲಿ, ಅಷ್ಟು ಜನರ ಮುಂದೆ?

ಇದೆಲ್ಲದರಿಂದ ಪಾರಾಗಬೇಕೆಂದು "ನೋಡು ಮಾರಾಯ್ತೀ, ನಿನಗೆ ಯಾವುದು ಇಷ್ಟಾನೋ ಅದನ್ನೇ ತಗೋ, ಖಂಡಿತಾ ಅದು ನನಗೂ ಇಷ್ಟ ಆಗುತ್ತೆ. ನಾನು ಹೊರಗೇ ನಿಂತಿರ್ತೀನಿ, ಒಳಗೆ ಬಹಳ ಸೆಖೆ, ಇರೋಕಾಗೋಲ್ಲ" ಎಂದೆ. "ಒಹೋ, ಒಳಗೆ ಬಂದು ಹೆಂಡತಿಗೆ ಸಹಾಯ ಮಾಡುವುದಕ್ಕಿಂತ, ಹೊರಗೆ ನಿಂತು ಹೋಗಿ ಬರುವ ಹೆಂಗಸರ ಸೌಂದರ್ಯ ಆರಾಧಿಸಬೇಕೇನೋ? ಸುಮ್ಮನೆ ಒಳಗೆ ಬನ್ರೀ ಸಾಕು, ನಾನೊಬ್ಬಳೇ ಒಳಗೆ ಹೋಗೋದಾದರೆ ನಿಮ್ಮನ್ನ ಯಾಕೆ ಕರ್ಕೊಂಡು ಬರಬೇಕಾಗಿತ್ತು, ಬೆಕ್ಕನ್ನ ಕಂಕುಳಲ್ಲಿ ಇಟ್ಟುಕೊಂಡು ಬಂದ ಹಾಗೆ. ನಾನೊಬ್ಬಳೇ ಒಳಗೆ ಹೋದ್ರೆ ಅಂಗಡಿಯೋನಿಂದ ಹಿಡಿದು ಎಲ್ಲರೂ ಏನಂದ್ಕೋತಾರೆ? ಬನ್ನಿ, ಬನ್ನಿ, ಸಾಕು" ಎಂದು ಮುಖದಲ್ಲಿ ನೀರಿಳಿಸಿ, ಹಿಂಬಾಲಿಸುತ್ತಾನೆಂಬ ಧೈರ್ಯದಿಂದ ತಾನು ಅಂಗಡಿಯೊಳಗೆ ನಡೆದಳು. ನಂತರ ನಾನೂ ಒಳಗೆ ಹೋದೆನೆಂದು ಬೇರೆ ಹೇಳಬೇಕಾಗಿಲ್ಲ, ಅಲ್ಲವೇ?

ಸರಿ, ಒಳಗೆ ಹೋದ ಮೇಲೆ, ಅಲ್ಲಿದ್ದ ಹುಡುಗನಿಗೆ, ಸೀತಾ, ಆ ಷೋ ಕೇಸಿನಲ್ಲಿದ್ದ ಬೊಂಬೆಗೆ ಉಡಿಸಿದ್ದ ಸೀರೆಯೇ ಬೇಕೆಂದಳು. ಅಲ್ಲಿದ್ದ ಆ ಹುಡುಗ, ಅಂಗಡಿಯ ಮಾಲಿಕನ ಮಗ, ಅದೇ ರೀತಿಯ ಸೀರೆಯನ್ನೇನೋ ತಂದು ಮುಂದೆ ಹರಡಿದ. ಆದರೆ ಅವನಿಗೂ ನನಗೆ ಅನಿಸಿದಂತೆ ಅನಿಸಿರಬೇಕು. "ಮೇಡಂ, ನಿಮಗೆ ಈ ಡಾರ್ಕ್ ಕಲರ್ ಸೀರೆಗಿಂತ ಅದೇ ಡಿಸೈನು, ಬಾರ್ಡರು ಇರೋ ಲೈಟ್ ಕಲರ್ ಸೀರೆ ಚೆನ್ನಾಗಿ ಕಾಣಬಹುದು, ತೋರಿಸ್ತೀನಿ. ನೋಡಿ, ಅದು ನಿಮಗೆ ಖಂಡಿತಾ ಚೆನ್ನಾಗಿ ಕಾಣುತ್ತೆ, ಅಲ್ವೇ ಸಾರ್?" ಎಂದು ನನ್ನನ್ನು ನೋಡಿ ಕೇಳಿದ. ನನಗೆ ಮನದೊಳಗೆ "ಶಭಾಷ್, ನಾನು ಹೇಳಲಾಗದ್ದನ್ನು ನೀನಾದರೂ ಹೇಳಿದೆಯಲ್ಲಾ" ಎನಿಸಿದರೂ ಮುಂದೆ ಏನಾಗುವುದೋ ಎಂದು ಕಳವಳವಾಯಿತು. ಯಾವುದೇ ಹೆಣ್ಣಿಗೆ ಈ ಸೀರೆ ನಿಮಗೆ ಚೆನ್ನಾಗಿ ಕಾಣೋದಿಲ್ಲ ಎಂದು ಯಾರಾದರೂ ನೇರವಾಗಿ ಹೇಳಿದರೆ ಹೇಗಿರಬಹುದು? ಸರಿ, ಸೀತಾ ಕೆಣಕಿದ ಸಿಂಹಿಣಿಯಾದಳು. "ನಮಗೆ ಯಾವುದು ಚೆನ್ನಾಗಿ ಕಾಣುತ್ತೆ ಅಂತ ನಮಗೆ ಗೊತ್ತಾಗತ್ತೆ, ನೀನು ಸುಮ್ಮನೆ ನಾವು ಕೇಳಿದ ಸೀರೆ ತೋರಿಸಪ್ಪ ಸಾಕು" ಎಂದು ತರಾಟೆಗೆ ತೆಗೆದುಕೊಂಡಳು. ಅಷ್ಟರಲ್ಲಿ ಆ ಹುಡುಗನ ಅಪ್ಪನಿಗೆ, ಅಂದರೆ ಅಂಗಡಿ ಮಾಲಿಕನಿಗೆ ಸಂದರ್ಭದ ಅರಿವಾಯಿತು. ತಕ್ಷಣ ಅವನು ಮಗನ ರಕ್ಷಣೆಗೆ ಧಾವಿಸಿದ. "ಲೇ, ನೀನು ಗಲ್ಲಾ ಮೇಲೆ ಕೂತ್ಕೋ ಹೋಗು, ನಾನು ಅಮ್ಮಾವ್ರಿಗೆ ಸೀರೆ ತೋರಿಸ್ತೀನಿ," ಎಂದು ಮಗನನ್ನು ಕಳುಹಿಸಿ, ತಾನೇ ಆ ಬೊಂಬೆಗೆ ಉಡಿಸಿದ್ದ ಸೀರೆಯನ್ನೇ ಮತ್ತೆ ತೆಗೆದು ಮುಂದೆ ಹರಡಿದ. "ಅವನು ಪಡ್ಡೆಹುಡ್ಗ ತಾಯಿ, ಅವನ ಮಾತಿಗೆ ನೀವು ಬೇಜಾರಾಗ್ಬೇಡಿ, ನೀವು ಆರಿಸಿ, ಈ ಬಣ್ಣ, ಈ ಡಿಸೈನು, ಹೊಸದು ಅಮ್ಮಾ, ಇದೆ ಡಿಸೈನು, ಕಲರ್ರೂ ತುಂಬಾ ಓಡ್ತಾ ಇರೋದು. ಒಂದು ವಾರದಿಂದ ಐವತ್ತು ಸೀರೆ ಮಾರಿದ್ದೀನಿ, ಖಂಡಿತಾ ನಿಮಗೆ ಚೆನ್ನಾಗಿ ಕಾಣುತ್ತೆ, ತಗೊಂಡು ಹೋಗಿ ಅಮ್ಮಾ, ಲೇ ಮೇಲಿನ ಲೈಟುಗಳನ್ನೆಲ್ಲಾ ಹಾಕೋ, ಅಮ್ಮಾವ್ರಿಗೆ ತೋರಿಸೋಣ" ಎಂದು ಮಗ ಮಾಡಿದ ತಪ್ಪಿಗೆ ತಾನು ಕ್ಷಮೆ ಯಾಚಿಸಿದ. ಮರುಳು ಮಾಡುವ ಮಾರವಾಡಿ ಬುದ್ಧಿಗೆ ಸೀತಳು ಸ್ವಲ್ಪ ಶಾಂತಳಾದಳು.

ಸೀತಾಳಿಗೆ ಅದೇ ಸೀರೆಯನ್ನೇ ಕೊಳ್ಳಬೇಕೆಂದು ರೋಷ ಬಂದುಬಿಟ್ಟಿತ್ತು. ಆ ದಿನ ಹೆಚ್ಚು ಚೌಕಾಶಿ ಸಹ ಮಾಡದೆ, ಆ ಸೀರೆಯನ್ನು ಪ್ಯಾಕ್ ಮಾಡಿಸಿ ಕೈಲಿ ಹಿಡಿದುಕೊಂಡು ಮನೆಗೆ ಹೊರಟೇಬಿಟ್ಟಳು. ನಾನೂ ದುಡ್ಡನ್ನು ತೆತ್ತು ರಶೀದಿ ಹಿಡಿದು ಅವಳತ್ತ ಧಾವಿಸಿದೆ. ದಾರಿಯುದ್ದಕ್ಕೂ ಆ ಹುಡುಗನ ಜನ್ಮ ಜಾಲಾಡುವುದನ್ನು ಮರೆಯಲಿಲ್ಲ. ನಾನು ಹೂಂಗುಡುತ್ತಾ, ಯಾವ ಶಬ್ದವನ್ನೂ ಕಿವಿಗೆ ಹಾಕಿಕೊಳ್ಳದೇ ನಡೆದಿದ್ದೆ. ಮನೆಗೆ ಹಿಂದಿರುಗಿದಾಗ, ಮನೆಯಲ್ಲಿ ಸೀತಾಳ ತಂಗಿ ಬಂದಿದ್ದಳು, ಅವಳಿಗೆ ತೋರಿಸಿದ್ದೂ ಆಯಿತು. ಅವಳೂ ಸೀರೆ ಚೆನ್ನಾಗಿದೆ (ಇದನ್ನು ನೀನು ಉಟ್ಟರೆ ನೀನು ಚೆನ್ನಾಗಿ ಕಾಣುವೆ ಎಂದಲ್ಲ) ಎಂದು ಸರ್ಟಿಫಿಕೇಟ್ ಕೊಟ್ಟೂ ಆಯಿತು. ಆದರೆ ಸೀತಾಳ ಮಗ (ಅರ್ಥಾತ್ ನನ್ನ ಮಗನೂ ಕೂಡಾ) "ಈ ಕಲರ್ ನಿನಗೆ ಅಷ್ಟಾಗಿ ಸರಿ ಹೋಗೋಲ್ಲ ಅಮ್ಮಾ, ಸ್ವಲ್ಪ ಲೈಟ್ ಕಲರ್ ಆಗಿದ್ರೆ ಚೆನ್ನಾಗಿರ್ತಿತ್ತು" ಎಂದು ಬಿಟ್ಟ. ನಾನು ಬೇಡವೆಂದು ಸನ್ನೆ ಮಾಡುತ್ತಿದ್ದುದನ್ನು ಗಮನಿಸಲೇ ಇಲ್ಲ. "ಥೂ ಈ ಹಾಳು ಗಂಡಸರಿಗೆ ತಮ್ಮ ಮನೆಯ ಹೆಂಗಸರನ್ನ ಬಿಟ್ಟು ಉಳಿದವರೆಲ್ಲರೂ ಚೆನ್ನಾಗಿ ಕಾಣಿಸ್ತಾರೆ. ಇವನೊಬ್ಬ ಸಾಲದಾಗಿದ್ದ ಅಮ್ಮನ್ನ ಆಡಿಕೊಳ್ಳೋಕೆ, ಹೋಗೋ ಸಾಕು, ಆಮೇಲೆ, ಮುಂದೆ ನಿನ್ನ ಹೆಂಡತಿಗೂ ಹೀಗೆ ಹೇಳು, ನಿನ್ನ ಕಿವಿ ಕಿತ್ತಿಡ್ತಾಳೆ. ಕತ್ತೆ ಭಡವಾ, ಇದೇನು ಇವತ್ತು ಫ್ರೆಂಡ್ಸ್ ಜೊತೆ ವಾಕಿಂಗ್ ಹೋಗಲಿಲ್ಲವಾ, ಅಥವಾ ಚಿಕ್ಕಮ್ಮ ಬಂದಳೆಂದು ಹೋಗದೇ ಉಳಿದೆಯಾ? ಹೋಗೋ ಸಾಕು" ಎಂದು ಪ್ರೀತಿಯಿಂದ ಗದರಿದಳು.

ಮುಂದೆ ಒಂದೆರಡು ಬಾರಿ ಆ ಸೀರೆ ಉಟ್ಟ ನಂತರ ನಮ್ಮ ಹೇಳಿಕೆಗಳು (ಅದರಲ್ಲೂ ತನ್ನ ಮುದ್ದಿನ ಮಗನೂ ಅದೇ ರೀತಿ ಹೇಳಿದ ಮಾತುಗಳು ಆಕೆಯ ಮನಸ್ಸಿಗೆ ಸೇರಿ) ಆಕೆಗೂ ಸರಿ ತೋರಿದವೇನೋ! ಅದನ್ನು ವಾರ್ಡ್ ರೋಬಿನಲ್ಲಿ ಭದ್ರವಾಗಿ ಇಟ್ಟಿದ್ದಾಳೆ, ಹೆಚ್ಚು ಬಳಸುವುದಿಲ್ಲ. ಅಯ್ಯೋ ನಾನೊಬ್ಬ, ಇಷ್ಟನ್ನೆಲ್ಲಾ ನಿಮ್ಮೆದುರು ಒದರಿದ್ದೇನಲ್ಲಾ? ಆದದ್ದಾಯಿತು, ಹೀಗೆಂದು ನನ್ನ ಸೀತಾಳಿಗೆ ಮಾತ್ರ ದಯವಿಟ್ಟು ತಿಳಿಸಬೇಡಿ, ಆಯಿತಾ?

ಲೇಖಕರ ಕಿರುಪರಿಚಯ
ಶ್ರೀ ಜೆ. ಆರ್. ನರಸಿಂಹಸ್ವಾಮಿ

ಪ್ರಸ್ತುತ ನಾಗಪುರದಲ್ಲಿನ ಭಾರತೀಯ ಅಂಚೆ ಕಚೇರಿಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಭಾಷಾಂತರ ತಜ್ಞರೂ ಕೂಡ.

ಸಮಯ ಸಿಕ್ಕಾಗಲೆಲ್ಲ ಪುಸ್ತಕ ಪ್ರಪಂಚದೊಳಗೆ ಮುಳುಗಿ ಬಿಡುವ ಇವರಿಗೆ ಓದು ಅತ್ಯಂತ ನೆಚ್ಚಿನ ಹವ್ಯಾಸ. ಇವರ ಅನೇಕ ಬರವಣಿಗೆಗಳು ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

Blog  |  Facebook  |  Twitter

ಬುಧವಾರ, ನವೆಂಬರ್ 27, 2013

ನೆರೆ ಹಾವಳಿ

ಮಳೆಗಾಲದ ಒಂದು ದಿನ. 1982ರ ಆಗಸ್ಟ್ ತಿಂಗಳು. ಮಲೆನಾಡಿನ ಮಳೆಗಾಲವೆಂದರೆ ಬಹಳ ಸುಂದರ ಹಾಗೂ ಸಂಭ್ರಮದ ಕಾಲ. ಮಲೆನಾಡಿನಲ್ಲಿ ಮಳೆಗಾಲವನ್ನು ಬಹಳ ಸಿದ್ಧತೆಗಳಿಂದ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದ ಕಾಲವದು. ಮಳೆಗಾಲಕ್ಕೆ ಬೇಕಾದ ಎಲ್ಲ ದಿನಸಿ ಸಾಮಾನುಗಳನ್ನು ಪೇಟೆಯಿಂದ ಒಮ್ಮೆಲೇ ಖರೀದಿಸಿ, ಸ್ವಚ್ಛಗೊಳಿಸಿ, ಒಣಗಿಸಿ, ಭದ್ರವಾಗಿ ತುಂಬಿಸಿ ಇಟ್ಟುಕೊಂಡು, ಮನೆಯ ಗೋಡೆಗಳಿಗೆ ಇಂಚಲು ತಟಿಕೆಗಳನ್ನು ಕಟ್ಟಿಕೊಂಡು, ಸೌದೆ, ಹುಲ್ಲು ಮುಂತಾದ ಎಲ್ಲಾ ವಸ್ತುಗಳನ್ನು ಕನಿಷ್ಠ ಆರು ತಿಂಗಳಿಗಾಗುವಷ್ಟಾದರೂ ಅದಕ್ಕಾಗಿ ನಿರ್ಮಿಸಿದ ಜಾಗದಲ್ಲಿ ಕೂಡಿಟ್ಟುಕೊಂಡು, ಅಂಗಳದಲ್ಲಿ ಓಡಾಡಲು ದಬ್ಬೆಗಳಿಂದ ನಿರ್ಮಿಸಿದ ಫುಟ್ ಪಾತ್ ಗಳನ್ನು ನಿರ್ಮಿಸಿಕೊಂಡು, ಒಂದೇ ಎರಡೇ; ಮಳೆಗಾಲವನ್ನು ಸ್ವಾಗತಿಸುವ ಸಿದ್ಧತೆಗಳೇ ಸಿದ್ಧತೆಗಳು. ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾರೇ ಸಿಕ್ಕರೂ 'ಮಳೆಗಾಲದ ಕೆಲಸ ಆಯ್ತಾ' ಅಂತ ಕೇಳುವುದು ಸಾಮಾನ್ಯ ಪ್ರಶ್ನೆ. 'ಎಲ್ಲಿಂದ ಮಾರಾಯ್ರೆ? ಇನ್ನು ಗೊಬ್ಬರ ಹೊಡೆದಿಲ್ಲ, ತೋಟದ ಕಪ್ಪು ಕೀಸಿಲ್ಲ, ಗದ್ದೆ ಹೊಳಕೆ ಆಗಿಲ್ಲ, ಈ ಮದುವೆ ಮನೆಗಳು ಮುಗಿದ ಹೊರತು ಯಾವ ಕೆಲಸಾನು ಆಗೂದಿಲ್ಲ' ಅಂತ ತಮ್ಮ ಬೇಜವಾಬ್ದಾರಿನೆಲ್ಲಾ ಮದುವೆ ಮನೆ ಮೇಲೆ ಹಾಕುವುದು ಸಾಮಾನ್ಯ.

ಆಗಿನ್ನೂ ಕೆಲಸ ಸಿಕ್ಕ ಹೊಸತು. ನಾನು, ನನ್ನ ತಂಗಿ, ನಮ್ಮ ಶಾಲೆಯ ಇನ್ನೊಬ್ಬರು ಶಿಕ್ಷಕಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು. ಅನೇಕ ಆದರ್ಶಗಳನ್ನು ಹೊತ್ತು ಸುಂದರ ಕನಸುಗಳನ್ನು ಕಾಣುತ್ತಿದ್ದ ನಮಗೆ ಪ್ರಪಂಚವೇ ಸ್ವರ್ಗ. ಶಾಲೆಯೆಂದರೆ ಬಗೆಬಗೆಯ ಹೂಗಳಿರುವ ಹೂದೋಟ. ನಾನು ಮಲೆನಾಡಿನ ಕೊಪ್ಪ ತಾಲೂಕಿನವಳಾಗಿದ್ದ ಕಾರಣ ಮಳೆ, ಹೊಳೆ, ಪ್ರವಾಹ ನನಗೆ ಮಾಮೂಲು. ಆದರೆ ನನ್ನ ಗೆಳತಿ (ಸಹೋದ್ಯೋಗಿ) ದಾವಣಗೆರೆಯವರಾದ್ದರಿಂದ ಅವರಿಗೆ ಇವೆಲ್ಲ ಹೊಸ ಅನುಭವ. ನಾವು ತೀರ್ಥಹಳ್ಳಿ ತಾಲೂಕಿನ ಒಂದು ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಯೇ ವಾಸಿಸುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ತೂದೂರಿನಲ್ಲಿ ವಾಸಿಸುತ್ತಿದ್ದರು. ಮಳೆ ಜಾಸ್ತಿ ಬಂದಾಗ ತೂದೂರಿನಲ್ಲಿ ತುಂಗಾನದಿ ತುಂಬಿ ರಸ್ತೆ ಮೇಲೆ ಬರುತ್ತದೆ ಎಂದು ಕೇಳಿ ನೆರೆ ಬಂದಾಗ ನಮಗೆ ಹೇಳುವಂತೆ ತಿಳಿಸಿದ್ದೆವು. ರಸ್ತೆ ಮೇಲೆ ನೀರು ಬಂದಾಗ ಹೇಗಿರುತ್ತದೆ ಎಂದು ನೋಡುವ ಆಸೆ ನಮಗೆ.

ಆ ದಿನ ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಅಡಿಗೆ ಮಾಡಿ ಊಟ ಮುಗಿಸಿ ಮಲಗುವ ತರಾತುರಿಯಲ್ಲಿದ್ದೆವು. ತೂದೂರಿಂದ ಬಂದ ಪೋಸ್ಟ್ ಮ್ಯಾನ್ 'ನಿಮ್ಮ ಮೇಷ್ಟ್ರ ಮನೆಯಲ್ಲಿ ಹೇಳಿಕಳಿಸಿದ್ದಾರೆ. ನೆರೆ ಬಂದಿದೆಯಂತೆ ಬರಬೇಕಂತೆ' ಎಂದು ತಿಳಿಸಿದರು. ಸರಿ ಎಂದು ತೂದೂರಿಗೆ ಹೊರಟೆವು. ಆಗ ಅಲ್ಲಿಗೆ ಯಾವುದೇ ವಾಹನದ ವ್ಯವಸ್ಥೆ ಇರಲ್ಲಿಲ್ಲ. ನಡೆದುಕೊಂಡೇ ಹೊರಟೆವು. ತೂದೂರಿಗೆ ತಲುಪಿದಾಗ 3:30 ಇರಬಹುದು. ಅಷ್ಟೇನೂ ಜೋರಾಗಿ ಮಳೆ ಬರುತ್ತಿರಲಿಲ್ಲ. 5 ಘಂಟೆ ಹೊತ್ತಿಗೆ ಮೇಷ್ಟರ ಮನೆಯವರು ಮತ್ತು ನಾವೆಲ್ಲಾ ಹೋಗಿ ರಸ್ತೆ ಮೇಲೆ ಹೊಳೆ ನೀರು ಉಕ್ಕಿ ಹರಿಯುವುದನ್ನು ನೋಡಿ ಬಂದೆವು. ಹೊಳೆ ತುಂಬಿ ಗಂಭೀರವಾಗಿ ಸ್ವಲ್ಪ ವೇಗವಾಗಿ ಹೋಗುತ್ತಿದ್ದಂತೆ ಕಾಣುತ್ತಿತ್ತು. ರಸ್ತೆಯ ಮೇಲೆ ಒಂದು ಕಡೆ ಉಕ್ಕಿ ನೀರು ಹರಿದು ಹೋಗುತ್ತಿತ್ತು. ಶನಿವಾರ ಭಾನುವಾರ ಹಬ್ಬದ ರಜಾದಿನಗಳಲ್ಲಿ ಊರಿಗೆ ಹೋಗದಿದ್ದರೆ ನಾವು ಮೇಷ್ಟರ ಮನೆಯಲ್ಲಿ ಝಂಡಾ. ಊರಿ ಹರಟೆ ಹೊಡೆಯುತ್ತ, ಸಿನಿಮಾದ ಕಥೆ ಹೇಳುತ್ತಾ, ಸಮಯ ಕಳೆಯುತ್ತಿದ್ದೆವು. ಅದರಂತೆ ಈ ದಿನವೂ ಸಮಯ ಕಳೆಯುತ್ತಿದ್ದೆವು. 6 ಘಂಟೆ ಹೊತ್ತಿಗೆ ಮಳೆ ಜಾಸ್ತಿಯಾಗತೊಡಗಿತು. ಕೊಪ್ಪ, ಶೃಂಗೇರಿ ಕಡೆ ಬಹಳ ಮಳೆ ಅಂತೆ ಎಂದು ವರ್ತಮಾನ ಆಚೀಚೆ ಮನೆಯವರಿಂದ ಬರತೊಡಗಿದವು. 7 ಘಂಟೆ ಆಯಿತು. ಮಳೆ ಕಡಿಮೆ ಆಗಲಿಲ್ಲ. ನಮ್ಮೂರ ಮಳೆಯಂತೆ ಜೋರಾಗಿ ಬರುತ್ತಾ ಇರಲಿಲ್ಲ. ನೆರೆ ಮೇಲೆ ಹತ್ತುತ್ತಿದೆಯಂತೆ ಅಂತ ಊರಲ್ಲಿ ಜನ ಮಾತನಾಡುತ್ತಾ ಓಡಾಡುತ್ತಿದ್ದರು. 8 ಘಂಟೆ ಆಯಿತು. ಎಲ್ಲರೂ ಊಟ ಮುಗಿಸಿದೆವು. ಈಗಿನಂತೆ ಆಗ ಟಿವಿಯ ಹಾವಳಿ ಇರಲಿಲ್ಲ. ಯಾರಿಗೂ ಮಲಗುವ ಮನಸ್ಸಾಗಲಿಲ್ಲ. ಏಕೆಂದರೆ ಮಳೆ ಬರುತ್ತಲೇ ಇತ್ತು. 9 ಘಂಟೆ ಆಯಿತು, ಮನೆಯ ಎದುರು ರಸ್ತೆಯ ಮೇಲೆ ಹೆಜ್ಜೆ ಮುಳುಗುವಷ್ಟು ನೀರು ಬಂದಿತ್ತು. ಮನೆಯ ಮುಂಭಾಗದ ರಸ್ತೆಯಲ್ಲಿ ಒಂದು ಕಿಲೋಮೀಟರ್ ಕಲ್ಲು ಇತ್ತು. ಅದರ ಬುಡಕ್ಕೆ ನೀರು ಬಂದಿತ್ತು. 10 ಘಂಟೆ ಹೊತ್ತಿಗೆ ಇನ್ನೂ ಸ್ವಲ್ಪ ನೀರು ಏರಿತು. ಇನ್ನೂ ಸ್ವಲ್ಪ ನೀರು ಏರಿದರೆ ಹೊಳೆ ಮಗುಚುತ್ತದೆ. ಅಂದರೆ ಪೇಟೆಯಿಂದ ಹೊಳೆಗೆ ಹೋಗುವ ರಸ್ತೆಯಲ್ಲಿ ಹೊಳೆಯ ನೀರು ರಭಸದಿಂದ ನುಗ್ಗಿ ಊರೊಳಗೆ ಬರುತ್ತದೆ ಎಂದು ನಮ್ಮ ಮುಖ್ಯೋಪಾಧ್ಯಾಯರು ತಿಳಿಸಿದರು. ನೆರೆ ಏಳುತ್ತಿದ್ದಂತೆ ಮುಂಭಾಗದ ಗದ್ದೆ ಬಯಲಿನಲ್ಲೂ ನೀರು ಏರತೊಡಗಿತು. ತೂದೂರಿನಲ್ಲಿ ಒಂದು ಕಡೆ ಹೊಳೆ ಇನ್ನೊಂದು ಕಡೆ ಗದ್ದೆ ಬಯಲು.

ಊರಿನ ಪ್ರಾರಂಭದ ಹಳ್ಳಿಗೆ ಹೋಗುವ ರಸ್ತೆಯಲ್ಲೂ ನೀರು ಏರುತ್ತದೆ. ಊರಿನ ಕೊನೆಯಲ್ಲಿ ತೂದೂರು ಬೇಗುವಳ್ಳಿಯ ಮಧ್ಯೆಯೂ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ನಾವು ಆಗ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಂತೆ ಆಗುತ್ತದೆ ಎಂದೂ ತಿಳಿಸಿದರು. ಘಂಟೆ 12 ಆದರೂ ಯಾರಿಗೂ ನಿದ್ದೆ ಬಂದಿರಲಿಲ್ಲ. ಮಳೆ ಬರುತ್ತಲೇ ಇತ್ತು. ಹೊಳೆಯ ನೀರು ಏರುತ್ತಲೇ ಇತ್ತು. ಇದೇ ಮೊದಲ ಬಾರಿಗೆ ಮಳೆ ಮತ್ತು ನೆರೆಯ ಬಗ್ಗೆ ನನಗೆ ಸ್ವಲ್ಪ ಭಯ ಉಂಟಾಯಿತು.

ನಾನು ಹುಟ್ಟಿದ ಮನೆಯಲ್ಲಿ ಹಿಂಭಾಗ ಗುಡ್ಡ, ಮುಂಭಾಗದಲ್ಲಿ ತೋಟ ಇತ್ತು. ತೋಟದ ದಂಡೆಯ ಉದ್ದಕ್ಕೂ ಬೇಲಿಸುರಿಗೆ ಎಂಬ ಮರ ಬೆಳೆಸಿರುತ್ತಿದ್ದೆವು. ಮಳೆಗಾಲದಲ್ಲಿ ಅದರ ತುಂಬಾ ಮಿಂಚು ಹುಳುಗಳು ಕುಳಿತು ಕ್ರಿಸ್ಮಸ್ ಟ್ರೀಗಿಂತ ಚೆನ್ನಾಗಿ ಅಲಂಕಾರ ಮಾಡಿರುತ್ತಿದ್ದವು. ಮಳೆ ಬಂದಾಗ ಕಿಟಕಿಯಲ್ಲಿ ಕುಳಿತು ರಾತ್ರಿಯಲ್ಲಿ ಅದರ ಸೊಬಗನ್ನು ಸವಿಯುತ್ತ ಘಂಟೆಗಟ್ಟಲೆ ಕೂತಿರುತ್ತಿದ್ದೆವು. ಜೋರಾದ ಮಳೆಯಲ್ಲಿ ಕೊಡೆ ಹಿಡಿದುಕೊಂಡು, ಹಾಡನ್ನು ಹೇಳುತ್ತಾ ಮೈಲುಗಟ್ಟಲೆ ನಡೆದು ಶಾಲೆಗೆ ಹೋಗುತ್ತಿದ್ದೆವು. ಮಳೆ ಜಾಸ್ತಿಯಾದಾಗ ವಿದ್ಯಾರ್ಥಿಗಳಿಗೆ ಹಳ್ಳ ಕಟ್ಟಿ ಮನೆಗೆ ಹೋಗಲು ತೊಂದರೆ ಆಗುತ್ತದೆ ಎಂದು ಅರ್ಧ ಘಂಟೆ ಮುಂಚೆ ಶಾಲೆ ಬಿಟ್ಟಾಗ ಕುಣಿದು ಕುಪ್ಪಳಿಸುತ್ತಾ ಚರಂಡಿಯಲ್ಲೇ ನಡೆದು ಬಟ್ಟೆ ಪೂರ್ತಿ ಒದ್ದೆ ಮಾಡಿಕೊಂಡು ಬಂದಾಗ ಮನೆಯಲ್ಲಿ ಬೈಯಿಸಿಕೊಂಡಾಗ ಕೂಡ ಮಳೆಯ ಬಗ್ಗೆ ಬೇಜಾರಾಗಲಿ, ಭಯವಾಗಲಿ ಆದದ್ದೇ ಇಲ್ಲ. ಇಂಥಾ ನನಗೆ ಈ ದಿನ ಮಳೆಯ ಇನ್ನೊಂದು ಮುಖ ಕಾಣತೊಡಗಿತು.

ಬೆಳಗಿನ ಜಾವ 4 ಘಂಟೆಗೆ ಹೊಳೆಯ ನೀರು ಮೇಲೇರಿ ಹೊಳೆ ರಸ್ತೆಯಿಂದ ಮುಖ್ಯ ರಸ್ತೆಗೆ ನುಗ್ಗತೊಡಗಿತು. ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಮನೆಯಲ್ಲಿದ್ದ ಮುಖ್ಯ ವಸ್ತುಗಳನ್ನು ಅಟ್ಟದ ಮೇಲೆ ಇಟ್ಟು ಗಂಡಸರು ಮಾತ್ರ ಮನೆಯಲ್ಲಿದ್ದು ಹೆಂಗಸರು ಮಕ್ಕಳೆಲ್ಲಾ ಸಮೀಪದಲ್ಲಿ ಸ್ವಲ್ಪ ಎತ್ತರದಲ್ಲಿದ್ದ ಹೋಟೆಲಿನವರ ಮನೆಗೆ ಹೋಗಬೇಕೆಂದು ತೀರ್ಮಾನಿಸಿದರು. ಅದರಂತೆ ನಾವೆಲ್ಲಾ ಮೊಣಕಾಲೆತ್ತರದ ನೀರಿನಲ್ಲಿ ನಡೆದು ಆ ಮನೆಗೆ ಹೋದೆವು. ಹೊಳೆಯ ನೀರು ನುಗ್ಗುತ್ತಿದ್ದ ಕಾರಣ ನೀರು ಬಹಳ ರಭಸವಾಗಿತ್ತು.

ಒಂದೆಡೆ ಮಳೆ, ಇನ್ನೊಂದೆಡೆ ನೀರಿನ ಸೆಳೆತ ಜೊತೆಗೆ ಚಳಿ, ಮನಸ್ಸಿನಲ್ಲಿ ಏನೋ ಆತಂಕ, ಭಯ. ನಾವು ಹೋಗುವ ಹೊತ್ತಿಗಾಗಲೇ ಅಲ್ಲಿಗೆ ಅನೇಕರು ಮನೆ ಒಳಗೆ ನೀರು ನುಗ್ಗಿದ ಕಾರಣ ಅಲ್ಲಿಗೆ ಬಂದಿದ್ದರು. ಆ ಹೋಟೆಲಿನವರು ಎಲ್ಲರಿಗೂ ಬಿಸಿ ಬಿಸಿ ಚಹಾ, ಕಾಫಿ, ಉಪ್ಪಿಟ್ಟು, ಅವಲಕ್ಕಿಯ ವ್ಯವಸ್ಥೆಯನ್ನು ಉಚಿತವಾಗಿಯೇ ಮಾಡಿದರು. ಬೆಳಗಿನ 10 ಘಂಟೆಯವರೆಗೂ ಜನ ಅದೇ ನೆರೆ ನೀರಿನಲ್ಲಿ ಓಡಾಡುತ್ತಾ ಅವರ ಮನೆ ಕೊಟ್ಟಿಗೆ ಬಿತ್ತಂತೆ, ಇವರ ಮನೆ ದನ ತೇಲಿ ಹೋಯ್ತಂತೆ, ಇನ್ನೊಬ್ಬರ ಮನೆಯ ಹಾಸಿಗೆಗಳೇ ತೇಲಿ ಹೋಯ್ತಂತೆ ಎಂದು ಮಾತನಾಡುತ್ತಾ ಓಡಾಡುತ್ತಿದ್ದರು. ಇನ್ನೂ ನೀರು ಏರುತ್ತಾ ಹೋದಂತೆ ಮಾತು ಓಡಾಟ ಕಡಿಮೆಯಾಗುತ್ತಾ ಬಂದು ಎಲ್ಲರಿಗೂ ಆತಂಕ ಜಾಸ್ತಿಯಾಗುತ್ತಾ ಹೋಯಿತು. ನಾವಿದ್ದ ಹೋಟೆಲಿನ ಬಾಗಿಲಿಗೂ ನೀರು ಬಂತು. ಆಗ ಊರಿನ ಯುವಕರೆಲ್ಲಾ ಸ್ವಯಂ ಸೇವಕರಂತೆ ಸೇರಿ  ಎಲ್ಲರನ್ನೂ ಒಂದು ಕಿ.ಮೀ. ಅಗಲದ ಗದ್ದೆ ಬಯಲಿನ ಆಚೆಗಿನ ಊರಿಗೆ ಸಾಗಿಸುವ ತೀರ್ಮಾನ ಕೈಗೊಂಡರು. ಆದರೆ ಗದ್ದೆ ಬಯಲಿನ ತುಂಬಾ ನೀರು ನಿಂತಿದ್ದು ಅದರಲ್ಲಿ ಎಷ್ಟು ಅಡಿ ನೀರು ನಿಂತಿದೆ ಎಂದೇ ಗೊತ್ತಾಗುತ್ತಿರಲಿಲ್ಲ. ದೋಣಿಯಲ್ಲಿ ಕರೆದೊಯ್ಯೋಣವೆಂದರೆ ದೋಣಿ ದಾಟಿಸುವವನು ಹೊಳೆಯ ಆಚೆ ದಡದ ಊರವನಾದ್ದರಿಂದ ಹಿಂದಿನ ದಿನ ರಾತ್ರಿಯೇ ದೋಣಿಯನ್ನು ಆಚೆ ದಡಕ್ಕೆ ತೆಗೆದುಕೊಂಡು ಹೋಗಿದ್ದು ಈ ಕಡೆಗೆ ಬರುವಂತಿರಲ್ಲಿಲ್ಲ. ಕೊನೆಗೆ ಎದೆ ಎತ್ತರದ ನೀರಿನಲ್ಲಿ ಎಲ್ಲರೂ ಕೈಕೈ ಹಿಡಿದುಕೊಂಡು ಗುತ್ತಿ ಎಡೆ ಹಳ್ಳಿಗೆ ಹೋಗುವ ರಸ್ತೆಯಲ್ಲಿ ಗದ್ದೆ ಬಯಲಿನ ಆಚೆ ದಡಕ್ಕೆ ಹೊರಟೆವು. ಅಷ್ಟು ಎತ್ತರದ ನೀರಿನಲ್ಲಿ ರಸ್ತೆ ಯಾವುದು? ಗದ್ದೆ ಯಾವುದು? ಎಂದೇ ಗೊತ್ತಾಗುತ್ತಿರಲಿಲ್ಲ. ಬೇಲಿಯ ಗಿಡಗಳ ತಲೆ ಮಾತ್ರ ಕಾಣುತ್ತಿದ್ದರಿಂದ ರಸ್ತೆಯನ್ನು ಅಂದಾಜಿನ ಮೇಲೆ ದಾಟಿದೆವು. ಅಲ್ಲಿಂದ ಸುಬ್ಬರಾಯ ಭಟ್ಟರು ಎಂಬುವವರ ಮನೆಗೆ ಹೋದೆವು. ಅದು ಒಂದು ಅವಿಭಕ್ತ ಕುಟುಂಬ. ಅವರು ಎಲ್ಲರನ್ನೂ ತುಂಬಾ ಸಂತೋಷದಿಂದ ಸ್ವಾಗತಿಸಿದರು. ಎಲ್ಲರಿಗೂ ಸ್ನಾನಕ್ಕೆ ಬಿಸಿ ಬಿಸಿ ನೀರು, ಸೋಪು, ಪೇಸ್ಟ್ ಕೂಡ ಒದಗಿಸಿದರು. ಊರಿನ ಅರ್ಧದಷ್ಟು ಜನರು ಅವರ ಮನೆಯಲ್ಲಿ ಆಶ್ರಯ ಪಡೆದರು. ಇನ್ನುಳಿದವರು ಅಲ್ಲಿದ್ದ ಇನ್ನೂ ನಾಲ್ಕೈದು ಮನೆಗಳಲ್ಲಿ ಉಳಿದುಕೊಂಡರು. ಭಾನುವಾರ ಮತ್ತು ಸೋಮವಾರ ನಾವು ಅವರ ಮನೆಯಲ್ಲೇ ಇದ್ದೆವು. ದೊಡ್ಡ ಮದುವೆ ಮನೆಯಂತೆ ನಮ್ಮೆಲ್ಲರನ್ನೂ ಅವರು ಸತ್ಕರಿಸಿದ ರೀತಿ ಅದ್ಭುತ. ನಾವು ಅವರಿಗೆ ಎಂದೆಂದಿಗೂ ಚಿರರುಣಿಗಳು. ಅವರು ತಂಪಾಗಿ ಸಂತೋಷವಾಗಿ ಇರಲಿ ಎಂದು ನಾನು ಈಗಲೂ ಹಾರೈಸುತ್ತಿರುತ್ತೇನೆ.

 ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮಳೆ ಸ್ವಲ್ಪ ಕಡಿಮೆಯಾಯಿತು. ನೆರೆ ನೋಡೋಣವೆಂದು ಗದ್ದೆ ಬಯಲು ದಂಡೆಗೆ ಬಂದೆವು. ಮುಂದೆ ಗದ್ದೆ ಬಯಲಿನಲ್ಲಿ ಸಮುದ್ರದಂತೆ ನೀರು ನಿಂತಿತ್ತು. ತೂದೂರಿನ ಮನೆಗಳು ಸಮುದ್ರದಲ್ಲಿ ತೇಲುತ್ತಿದ್ದಂತೆ ಕಂಡವು. ಕೆಲವು ನಾಯಿಗಳು ಮನೆಯ ಮಾಡನ್ನು ಹೇಗೋ ಹತ್ತಿ ಕುಳಿತು ಓ..... ಎಂದು ಊಳಿಡುತ್ತಿದ್ದವು. ಪಾಪ ಅವುಗಳಿಗೆ ಎರಡು ದಿನದಿಂದ ಊಟ ಇರಲಿಲ್ಲ. ಬೆಕ್ಕುಗಳು ಏನಾಗಿದ್ದವೋ? ದನಗಳನ್ನು ಶಾಲೆಯ ಹಿಂಭಾಗದ ಎತ್ತರದ ಜಾಗದಲ್ಲಿ ಕಟ್ಟಿ ಹಾಕಿದ್ದರಂತೆ. ಅವು ಹಾಗೂ ಅವುಗಳ ಕರುಗಳ ಕಥೆ ಏನಾಗಿತ್ತೋ ದೇವರಿಗೇ ಗೊತ್ತು. ಶೆಟ್ಟರ ಅಂಗಡಿಯ ಬಾಗಿಲಿನಿಂದ ಒಳನುಗ್ಗಿದ ನೀರು ಕಿಟಕಿಯ ಮೂಲಕ ಹೊರಕ್ಕೆ ಬರುತ್ತಿತ್ತು. ಮಳೆ ನಿಂತಿತ್ತು. ನೀರು ಶಾಂತ ಸಾಗರದಂತೆ ನಿಂತಿತ್ತು. ತಣ್ಣನೆಯ ಗಾಳಿ ಬೀಸುತ್ತಿತ್ತು. ಎಲ್ಲಾ ಕಡೆ ಮೌನ ಆವರಿಸಿತ್ತು. ದೂರದಲ್ಲಿ ಆಗಾಗ ಮನೆಗಳು ಮುರಿದು ಬೀಳುವ ಲಟಲಟ ಸದ್ದು ಮಾತ್ರ ಕೇಳಿಸುತ್ತಿತ್ತು. ಎಲ್ಲರೂ ತಮ್ಮ ತಮ್ಮ ಮನೆಗಳ ಬಗ್ಗೆ ಯೋಚಿಸುತ್ತಿದ್ದರು. ಮನೆಗೆ ಯಾವಾಗ ಹೋಗುತ್ತೇವೋ ಎಂದು ಚಿಂತಿಸುತ್ತಿದ್ದರು. ನಾವು ವಾಸವಾಗಿದ್ದ ಊರಿಗೆ ಹೋಗಲು ನಮಗೆ ಯಾವ ತೊಂದರೆಯೂ ಇರಲಿಲ್ಲ ಆದರೆ ನಾವು ನಮ್ಮ ಮನೆಯ ಕೀಗಳಿರುವ ಬ್ಯಾಗನ್ನು ತೂದೂರಿನಲ್ಲಿಯೇ ಬಿಟ್ಟು ಬಂದಿದ್ದೆವು. ಅಲ್ಲದೆ ಎಲ್ಲರನ್ನೂ ಬಿಟ್ಟು ಹೋಗಲು ಮನಸ್ಸೂ ಬರಲಿಲ್ಲ. ಬುಧವಾರದ ದಿನ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದೆವು. ನೆರೆ ನೋಡಲು ಬಂದವರು ನೆರೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದೆವು.

ನಮ್ಮ ಊರಿನಲ್ಲಿ ಒಂದೊಂದು ಮಳೆಗೆ ಒಂದೊಂದು ವಿಶೇಷತೆ ಇದೆ. ಆರಿದ್ರ ಮಳೆ ಬಂದರೆ ಮುಂದಿನ ಆರೂ ದಿನ ಮಳೆ ಬರುತ್ತದೆ. ಪುನರ್ವಸು ಮತ್ತು ಪುಷ್ಯ ಮಳೆಗಳು ಅಣ್ಣ ಮತ್ತು ತಮ್ಮ. ಅಣ್ಣನಿಗಿಂತ ತಮ್ಮನ ಮಳೆ ಜೋರು. ಅಣ್ಣ ಹುಸಿಯಾದರೂ ತಮ್ಮ ಹುಸಿಯಾಗುವುದಿಲ್ಲ. ಆಶ್ಲೇಷ ಮಳೆ ಆಶ್ಲಾ ಬಶ್ಲಾ (ಜೋರಾಗಿ) ಹೊಡೆಯುತ್ತದೆ. ಮಘೆ ಮಳೆ ಬಂದಷ್ಟೂ ಸಾಲದು, ಮನೆ ಮಗ ಉಂಡಷ್ಟೂ ಸಾಲದು. ಹುಬ್ಬೆ ಮಳೆ ಬಂದಷ್ಟೂ ಒಳ್ಳೆಯದು, ಅಬ್ಬೆ (ಅಮ್ಮ) ಹಾಲು ಕುಡಿದಷ್ಟೂ ಒಳ್ಳೆಯದು. ಒತ್ತೆ ಮಳೆ ಬಂದರೆ ಬೆಳೆಗೆ ಚಿಟ್ಟೆ ಹುಳ ಹಿಡಿಯುತ್ತದೆ ಇತ್ಯಾದಿ. ಈ ನೆರೆ ಬಂದಿದ್ದು ಪುಷ್ಯದ ಮಳೆಯಲ್ಲಿ. ಅಬ್ಬಾ ಆ ನೀರು, ಆ ರಭಸ ಎಲ್ಲಿತ್ತು? ಹೇಗೆ ಬಂತು? ಇಂದಿಗೂ ಹೊಳೆಯ ದಡದಲ್ಲಿ ನಿಂತು ತಣ್ಣಗೆ ಹರಿಯುತ್ತಿರುವ ನದಿಯನ್ನು ಕಂಡಾಗ ಮನಸಿನಲ್ಲೇ ಅಂದುಕೊಳ್ಳುತ್ತೇನೆ 'ಅಬ್ಬಾ ನದಿಯೇ, ನೀನು ಕಾಣುವಷ್ಟು ಶಾಂತಳೂ ಅಲ್ಲ, ಗಂಭೀರಳೂ ಅಲ್ಲ. ನಿನ್ನ ಇನ್ನೊಂದು ಮುಖ ಬೇರೆಯೇ ಇದೆ' ಎಂದು.

ಲೇಖಕರ ಕಿರುಪರಿಚಯ
ಶ್ರೀಮತಿ ಕೆ. ಎಸ್. ನಾಗಲಕ್ಷ್ಮಿ

ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ತೋಟಗಾರಿಕೆ ಸಂಬಂಧಿತ ಚಟುವಟಿಕೆ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಶಾಲೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರು.

Blog  |  Facebook  |  Twitter

ಮಂಗಳವಾರ, ನವೆಂಬರ್ 26, 2013

ಕೊಡಗಿನ ಮಡಿಲಲ್ಲಿ

ಟಿಕ್.... ಟಿಕ್ .... ಟಿಕ್.... ಟಿಕ್ .... ರಾತ್ರಿ ಸಮಯ 2:15. ಶುಕ್ರವಾರ ಮುಗಿದು ಶನಿವಾರ ಶುರು ಆಗಿದೆ. ಕೆಲಸ ಮುಗಿಸಿ ಹೊರಡೋದಕ್ಕೆ ಇನ್ನೂ 15 ನಿಮಿಷ ಇದೆ. 150 ನಿಮಿಷದಲ್ಲಿ ಮುಗಿಯದೇ ಇರೋ ಕೆಲಸಾನ ಹೇಗಾದ್ರೂ ಮಾಡಿ ಹದಿನೈದೇ ನಿಮಿಷದಲ್ಲಿ ಮುಗಿಸೋ ಆತುರ. ಅದಕ್ಕಿಂತ ಮಿಗಿಲಾಗಿ ಮಾಡಿರೋ ಯೋಜನೆ ಪ್ರಕಾರ ನಾನು ನನ್ನ ಗೆಳೆಯರ ಜೊತೆ ಕೊಡಗಿಗೆ ಟ್ರಿಪ್ ಹೋಗೋ ಕಾತುರ. ನಿಮಿಷದ ಮುಳ್ಳು 30ನೇ ನಿಮಿಷದ ಕಡೆ ಓಡ್ತಾ ಇತ್ತು, ಹಾಗೆಯೇ ನನ್ನ ಎದೆ ಬಡಿತಾನೂ ಹೆಚ್ತಾ ಇತ್ತು, ಯಾಕಂದ್ರೆ ನನ್ ಜೀವನದಲ್ಲಿ ಇದೇ ಮೊದಲನೇ ಬಾರಿಗೆ ನಾನು ಕೊಡಗಿಗೆ ಹೋಗ್ತಾ ಇದ್ದೆ. ಹಾಗೇ ನನ್ ಗೆಳೆಯ ನಾಗರಾಜ್ ಕಡೆಯಿಂದ ಟೈಮ್‍ ಗೆ ಸರಿಯಾಗಿ ಹೋಗ್ದಿದ್ದಕ್ಕೆ ಬೈಯಿಸ್ಕೋ ಬೇಕಲ್ಲ ಅಂತ ತಲೆ ನೋವು; ರಾತ್ರಿ 12 ಘಂಟೆಗೆ ಹೊರಡ್‍ ಬೇಕಾಗಿದ್ದ ಟ್ರಿಪ್ ಶೆಡ್ಯೂಲ್ನ 2:30 ತನಕ ನಾಗರಾಜ್ ನನ್ ಸಲುವಾಗಿ ಮುಂದೆ ಹಾಕಿದ್ದ. ಲಾಗ್‍ ಔಟ್ ಟೈಮ್‍ ಗೆ ಸರಿಯಾಗಿ ಕಂಪ್ಯೂಟರ್‍ ನ ರೀಸ್ಟಾರ್ಟ್ ಮಾಡಿ ಬ್ಯಾಗ್‍ ನ ಎತ್ಕೊಂಡು ಓಡಿದ್ದೇ ಸೀದಾ ಎಲ್ಲರ ಎದುರುಗಡೆ ಹೋಗಿ ಬೈಯಿಸ್ಕೋಳ್ಳೋಕೆ ಸಿದ್ಧನಾಗಿದ್ದೆ.

ಟ್ರಿಪ್ ಸಲುವಾಗಿ ಬುಕ್ ಮಾಡಿದ್ದ ಟೆಂಪೋ ಟ್ರಾವೆಲ್ಲರ್ ಗಾಡಿಯ ಒಳಗೆ ಲಾಸ್ಟ್ ಸೀಟಲ್ಲಿ ಮಲ್ಕೊಂಡೆ. ಚಹಾ ಕುಡಿಲಿಕ್ಕೆ ಒಳ್ಳೆ ಟೀ ಅಂಗಡಿ ನೋಡ್ತಾ ಇದ್ದ ನಮಗೆ ಶ್ರೀರಂಗಪಟ್ಟಣದ ಹತ್ರ ಗಾಡಿ ನಿಲ್ಲಿಸಲಿಕ್ಕೆ ಒಳ್ಳೆ ನಿಲ್ದಾಣನೇ ಸಿಕ್ಕಿತ್ತು. ಚಹಾ ಹೀರುತ್ತಾ ಒಬ್ಬರನ್ನೊಬ್ಬರು ಚುಡಾಯಿಸುತ್ತಾ ಅನೇಕ ವಿಚಾರಗಳನ್ನ ಮಾತಾಡಿದ್ದು ಮನಸ್ಸಿಗೆ ಸ್ವಲ್ಪ ಮಜಾ ನೀಡಿತ್ತು. ಅಲ್ಲಿಂದ ಹುಣಸೂರು ದಾಟೊ ತನಕ ನಿದ್ರಾದೇವಿ ಭೇಟಿನೇ ಆಗ್ಲಿಲ್ಲ. ಮನಸಲ್ಲಿ ಖುಷಿ ಕೊಡೊ ಹಳೆ ನೆನಪುಗಳಲ್ಲಿ ಈಜಾಡ್ತಾ, ಖುಷಿ ಕೊಟ್ಟಿರೋ ಆ ದಿನಗಳು ಮತ್ತೆ ಜೀವನದ ದಾರಿಯಲ್ಲಿ ಬರಲ್ಲಾ ಅನ್ನೋ ದುಃಖದ ಜೊತೆ ನಿದ್ದೆಗೆ ಜಾರಿದ್ದೆ.

ಚಳಿ ಚಳಿ ಆಗ್ತಾ ಇದೆ; ಕೊಡಗಿಗೆ ಎಂಟ್ರಿ ಆದ್ವಿ ಅನ್ನೋ ಸಂದೇಶ ಮನಸ್ಸು-ಮೆದುಳಿಗೆ ತಲುಪಿತ್ತು. ಎಚ್ಚರ ಆದಾಗ ಮಡಿಕೇರಿಯ ದೃಶ್ಯ ಮನಸ್ಸಿನಲ್ಲಿ ಮಾಸದೆ ಇರೋ ಛಾಪು ಮೂಡಿಸಿತ್ತು. ಮಡಿಕೇರಿಯ ಆ ಪ್ರಕೃತಿ ಸೌಂದರ್ಯಕ್ಕೆ ನನ್ನ ಮನಸ್ಸಿನ ಒತ್ತಡಗಳನ್ನ ಎರಡು ದಿವಸ ಅಡ ಇಟ್ಟು, ದೈವದತ್ತವಾದ ನೆಮ್ಮದಿಯನ್ನು ಪಡ್ಕೊಂಡಿದ್ದೆ. ಮೊದಲೇ ನಿರ್ಧರಿಸಿರೋ ಹೋಂ ಸ್ಟೇ ಗೆ ಹೋದ ನಾವು ಒಂದೇ ಘಂಟೆಯೊಳಗೆ ರೆಡಿ ಆಗಿ ಹೊರಗೆ ಯಾವುದಾದ್ರು ಹೋಟೆಲ್ ಗೆ ದಾಳಿ ಮಾಡೋಕ್ಕೆ ಹೊರಟೆವು. ತಿಂಡಿ ಮುಗಿಸಿ ಬಿಸಿ ಬಿಸಿ ಕಾಫಿ ಹೀರುತ್ತಾ ಮುಂದಿನ ಕಾರ್ಯಕ್ರಮಗಳನ್ನು ನಿರ್ಧಾರ ಮಾಡ್ಕೊಂಡು ತಲಕಾವೇರಿ ಕಡೆ ನಮ್ಮ ಪಯಣ ಸಾಗಿತು.

ತಲಕಾವೇರಿ ನೋಡೋ ಖುಷಿಲಿ ಒಂದು ಘಂಟೆ ಪ್ರಯಾಣ ಮಾಡಿದ್ದು ಗೊತ್ತೇ ಆಗಲಿಲ್ಲ. ಗಾಡಿ ಇಳ್ಕೊಂಡು ಮಂಜಿನ ನಡುವೆ ನಡಕೊಂಡು ಹೋಗ್ತಾ ಇದ್ರೆ ಏನೋ ರೋಮಾಂಚನ. ಮಧ್ಯೆ ಮಧ್ಯೆ ನಮ್ಮ ಫೋಟೋ ಕ್ಲಿಕ್ಕಿಸುವ ಕಾರ್ಯವೂ ಸಾಂಗವಾಗಿ ನಡೆಯುತ್ತಿತ್ತು. ಕಾವೇರಿ ಉಗಮ ಸ್ಥಾನಕ್ಕೆ ಬಂದ ನಾನು ಕಾವೇರಿ ನೀರನ್ನ ಸ್ಫಟಿಕಕ್ಕೆ ಹೊಲಿಸಿದ್ದೆ. ಅಷ್ಟು ನಿರ್ಮಲವಾದ ನೀರನ್ನ ಕುಡಿದಿದ್ದಕ್ಕೆ ಧನ್ಯತಾಭಾವ ನನ್ನಲ್ಲಿ ಮೂಡಿತ್ತು. ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಮತ್ತೆ ಆಹಾರದ ಬೇಟೆ ಆಡ್ತಾ ಮಡಿಕೇರಿಗೆ ಪಾದಾರ್ಪಣೆ ಮಾಡಿದೆವು. ಹೊಟ್ಟೆ ಪೂಜೆ ಮುಗಿಸಿಕೊಂಡು ರಾಜಾ ಸೀಟ್ ಗೆ ನಮ್ಮ ಪಯಣ. ರಾಜಾ ಸೀಟ್ ಪಾರ್ಕಿಗೆ ಪ್ರವೇಶ ಶುಲ್ಕ ಕಟ್ಟಿ ಅಲ್ಲಿ ಬಂದಿರೋ ಜೋಡಿ ಹಕ್ಕಿಗಳ ಬಗ್ಗೆ ತಮಾಷೆ ಮಾಡ್ತಾ ಒಳಗೆ ಬಂದ ನಮಗೆ ಅಲ್ಲಿಯ ವಾತಾವರಣ ದಿನ ಪೂರ್ತಿ ಅಡ್ಡಾಡಿ ಆಗಿದ್ದ ಆಯಾಸಕ್ಕೆ ತಂಪು ನೀಡಿತ್ತು. ಅಲ್ಲೆಲ್ಲ ಅಡ್ಡಾಡಿ ಮತ್ತೆ ಹೋಂ ಸ್ಟೇ ಗೆ ಬಂದಾಗ ರಾತ್ರಿ 8 ಘಂಟೆಯಾಗಿತ್ತು. ಎಲ್ಲರೂ ಹಸಿದ ಹೆಬ್ಬುಲಿಗಳಾಗಿದ್ದರು. ಮತ್ತೆ ಹೊಟ್ಟೆ ಪೂಜೆ, ನಿದ್ರಾ ದೇವಿ ಮಡಿಲಲ್ಲಿ ಪ್ರಕೃತಿ ಮಾತೆಯ ಜೋಗುಳ.


ರವಿವಾರ ಬೆಳಿಗ್ಗೆ ತಿಂಡಿ ತಿಂದ್ಕೊಂಡು ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ. ಅಲ್ಲಿಂದ ನಮ್ಮ ದೌಡು ಶುರು ಆಗಿದ್ದು ದುಬಾರೆ ಕಾಡಿಗೆ. ಅಲ್ಲಿ ಕ್ಯಾಮೆರ ಕಣ್ಣಿಗೆ ಪೋಸ್ ಕೊಡ್ತಾ ಸ್ವಲ್ಪ ಕಾಲಹರಣ ಮಾಡಿದೆವು. ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ರವಿವಾರ, ಮಧ್ಯಾಹ್ನ ಆದರೂ ಅಂಬರದಲ್ಲಿ ರವಿಯ ದರ್ಶನದ ಸುಳಿವು ಸ್ವಲ್ಪವೂ ಇರಲಿಲ್ಲ. ಹೀಗೇ ಮುಂದೆ ಕಾವೇರಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್‍ ಗಳನ್ನೆಲ್ಲಾ ನೋಡಿದ ಮೇಲೆ ನನ್ನ ಬಹು ಕಾಲದ ಕೊಡಗಿನ ಪ್ರಯಾಣದ ಆಸೆ ಈಡೇರಿತು. ಪ್ರಕೃತಿ ಮಾತೆಯಲ್ಲಿ ಅಡ ಇಟ್ಟ ಟೆನ್ಶನ್‍ ಗಳನ್ನೆಲ್ಲ ವಾಪಾಸ್ ತೆಗೆದುಕೊಂಡು ನಮ್ಮ ಪಯಣ ಉದ್ಯಾನನಗರಿಯ ಕಡೆಗೆ ಸಾಗಿತ್ತು.

ಲೇಖಕರ ಕಿರುಪರಿಚಯ
ಶ್ರೀ ಕಾರ್ತಿಕ್ ದಿವೇಕರ್

ಮೂಲತಃ ಹಾವೇರಿ ಜಿಲ್ಲೆಯವರಾದ ಇವರು ಪ್ರಸ್ತುತ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ.

ಓದು ಇವರ ನೆಚ್ಚಿನ ಹವ್ಯಾಸಗಳಲ್ಲೊಂದು, ಸಂಗೀತ ಕೇಳುವುದರ ಜೊತೆಗೆ ಆಧ್ಯಾತ್ಮ ಸಂಬಂಧಿತ ವಿಚಾರಗಳಲ್ಲಿ ಅಪಾರ ಆಸಕ್ತಿ. ಬರವಣಿಗೆ ಕ್ಷೇತ್ರದಲ್ಲಿ ಇದು ಇವರ ಪ್ರಥಮ ಪ್ರಯತ್ನ.

Blog  |  Facebook  |  Twitter

ಸೋಮವಾರ, ನವೆಂಬರ್ 25, 2013

ಬೆಂಗಳೂರಿನ ಸುತ್ತಲಿರುವ ನವ-ದುರ್ಗಗಳು

ಹಿಂದೊಮ್ಮೆ ಉದ್ಯಾನವನಗಳ ನಗರಿಯೆಂದೇ ಪ್ರಸಿದ್ಧವಾಗಿದ್ದ ನಮ್ಮ ಬೆಂಗಳೂರು ಇಂದು ಉದ್ಯೋಗ ನಗರಿಯಾಗಿ ಮಾರ್ಪಾಡಾಗಿದೆ. ಅಭಿವೃಧ್ಧಿಯ ಮಜಲಿನಲ್ಲಿ ಅನೇಕ ಉದ್ಯಾನವನಗಳು, ಕೃಷಿಭೂಮಿ, ಹಸಿರು ತಾಣಗಳು ಇಂದು ದೊಡ್ಡ-ದೊಡ್ಡ ಕಟ್ಟಡಗಳು, ಮಾಲ್‍ ಗಳು, ಫ್ಲಾಟ್‍ ಗಳಿಂದಾಗಿ ಕಾಂಕ್ರೀಟ್ ನಾಡಾಗಿ ಪರಿವರ್ತನೆ ಹೊಂದಿದೆ! ಇಂತಹ ವಾತಾವರಣದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು, ಸಾಫ್ಟ್-ವೇರ್ ಉದ್ಯೋಗಸ್ಥರು, ಕಾಲೇಜು ವಿದ್ಯಾರ್ಥಿಗಳು ಹೀಗೆ ವಿವಿಧ ವರ್ಗದ ಅನೇಕ ಜನರ ಸಾಮಾನ್ಯವಾದ ಫಿರ್ಯಾದು ಏನು ಗೊತ್ತಾ? "ತಮ್ಮ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು, ಅಥವಾ ಪಿಕ್ನಿಕ್‍ ಗಾಗಿ ಬೆಂಗಳೂರಲ್ಲಿ ಕೇವಲ ಕೆಲವೊಂದು ಪ್ರಸಿದ್ಧ ಸ್ಥಳಗಳು, ಮಾಲ್‍ ಗಳನ್ನು ಹೊರತು ಪಡಿಸಿದರೆ, ಒಳ್ಳೆಯ ತಾಣಗಳು ಬಹಳ ವಿರಳ!".

ನನಗೂ ಒಂದೊಮ್ಮೆ ಹೀಗೆಯೇ ಅನಿಸುತ್ತಿತ್ತು... ಮದುವೆಯ ನಂತರ, ನನ್ನ ಪತಿಯು ಈ ಅನಿಸಿಕೆಯನ್ನು ಬದಲಾಯಿಸಿದರು. ಅವರ ಪಯಣದ ಹುಚ್ಚು, ಹೊಸ ಜಾಗಗಳ ಅನ್ವೇಷಣೆ, ಸ್ಥಳಗಳ ಪೂರ್ವ ಇತಿಹಾಸ ತಿಳಿದುಕೊಳ್ಳುವ ಆಸಕ್ತಿ, ನನ್ನ ದೃಷ್ಟಿಕೋನ ಅವರಂತೆಯೇ ಬದಲಾಯಿಸಿತು... ಹಾಗಾಗಿ ಈ ಬರವಣಿಗೆ. ಬೆಂಗಳೂರಿನ ಸುತ್ತಲಿರುವ ಪ್ರಕೃತಿ ಸೌಂದರ್ಯ, ಏಕಾಂತತೆ, ನೆಮ್ಮದಿ, ರಜಾದಿನಗಳನ್ನು ಸವಿಯಲು ಸೂಕ್ತ ತಾಣಗಳ ಹುಡುಕಾಟದಲ್ಲಿರುವವರಿಗೆ ಒಂದು ಸಣ್ಣ ಮಾಹಿತಿ. ವಿಷೇಶವಾಗಿ ನಾನು ಆರಿಸಿರುವ ವಿಷಯ ನಮ್ಮ ಬೆಂಗಳೂರಿನ ಸುತ್ತಮುತ್ತ ಇರುವ ನವ ಅಂದರೆ ಒಂಭತ್ತು ದುರ್ಗಗಳು. ಈ ಕೋಟೆಗಳ ಬಗ್ಗೆ ಕಿರುಪರಿಚಯ ಇಲ್ಲದೆ:

1. ಸಾವನ ದುರ್ಗ
ಸಾವನ ದುರ್ಗ, ಬೆಂಗಳೂರಿನಿಂದ ಸುಮಾರು 60 ಕಿ. ಮೀ. ಪಶ್ಚಿಮ ದಿಕ್ಕಿಗೆ ಮಾಗಡಿ ರಸ್ತೆಯ ಬದಿಗಿದೆ. ಸಮುದ್ರ ಮಟ್ಟದಿಂದ 1226 ಅಡಿ ಎತ್ತರವಿರುವ ಈ ದುರ್ಗವು, ಏಷಿಯಾ ಖಂಡದಲ್ಲಿ ದೊಡ್ಡ ಏಕಶಿಲಾ ಬಂಡೆಗಳಲ್ಲೊಂದಾಗಿದೆ. ಸಾವನ ದುರ್ಗವು, ಕರಿ-ಗುಡ್ಡ ಹಾಗು ಬಿಳಿ-ಗುಡ್ಡ ಎಂಬ ಎರಡು ಬೆಟ್ಟಗಳಿಂದ ರೂಪುಗೊಂಡಿದೆ.

ಹೊಯ್ಸಳರ ಅವಧಿಯಲ್ಲಿ ಸಾವಂದಿಯೆಂದು ಕರೆಯಲ್ಪದುತ್ತಿ. ಹೈದರಾಲಿ ಸಮಯದಲ್ಲಿ ಶಿಕ್ಷೆಗೊಳಗಾದವರನ್ನು ಬೆಟ್ಟದ ತುದಿಯಿಂದ ತಳ್ಳಿ ಮರಣದಂಡನೆ ನೀಡುತ್ತಿದ್ದರಿಂದ ಈ ಸ್ಥಳವು ಸಾವನ ದುರ್ಗವೆಂದು ಕರೆಯಲ್ಪಟ್ಟಿತು.

ಕೆಂಪೇಗೌಡರ ಆಳ್ವಿಕೆಯಲ್ಲಿ ಇದು ಅವರ ಉಪಸಂಸ್ಥಾನವಾಗಿದ್ದು, ಬೆಟ್ಟದ ತುದಿಯಲ್ಲಿ ಒಂದು ನಂದಿ ಮಂಟಪವನ್ನು ನಿರ್ಮಿಸಿದ್ದಾರೆ. ದುರ್ಗದ ಅಡಿಯಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿಯ ದರ್ಶನ ಪಡೆಯಲು ಆಸ್ತಿಕರು ಆಗಮಿಸುತ್ತಾರೆ. ಬೆಟ್ಟದ ಸುತ್ತ ಮುತ್ತ ಕಾಡು ಆವರಿಸಿದ್ದು, ದುರ್ಗದ ಮೇಲಿನಿಂದ ಒಮ್ಮೆ ಸುತ್ತ ನೋಡಿದರೆ ಒಂದೆಡೆ ಮಾಗಡಿ ಪಟ್ಟಣ, ಮತ್ತೊಂದೆಡೆ ಮಂಚಿನಬಲೆ ಅಣೆಕಟ್ಟು, ಇವನ್ನು ಸುತ್ತುವರಿದ ಕಾಡು... ಅದ್ಭುತ!!! ಇತ್ತೀಚಿನ ದಿನಗಳಲ್ಲಿ ಬೆಟ್ಟ-ಗುಡ್ಡ ಹತ್ತುವ ಹವ್ಯಾಸಿಗರಿಗೆ, ಸಾವನ ದುರ್ಗ ಪ್ರಿಯವಾದ ತಾಣ. ಸಮೀಪದಲ್ಲೇ ಇರುವ ಮಂಚನಬಲೆ ಅಣೆಕಟ್ಟು ಜಲಕ್ರೀಡೆಗಳಿಗೂ ಹೆಸರುವಾಸಿ.


2. ದೇವರಾಯನ ದುರ್ಗ
ಬೆಂಗಳೂರಿನಿಂದ ಸುಮಾರು 70 ಕಿ. ಮೀ., ತುಮಕೂರು ರಸ್ತೆ, ದಾಬಸ್ ಪೇಟೆಯ ಬಳಿಯಿದೆ. ಬೆಟ್ಟದ ಎತ್ತರ 3940 ಅಡಿ. ದುರ್ಗದ ಸುತ್ತಲೂ ಕಾಡು ಆವರಿಸಿಕೊಂಡಿದ್ದು, ಅನೇಕ ದೇವಾಲಯಗಳನ್ನು ಹೊಂದಿದೆ. ಬೆಟ್ಟದ ತುದಿಯಲ್ಲಿ ಶ್ರೀ ಯೋಗನರಸಿಂಹ ಹಾಗು ಆದಿಯಲ್ಲಿ ಭೋಗನರಸಿಂಹ ಸ್ವಾಮಿ ದೇವಸ್ಥಾನಗಳು ಪ್ರಮುಖವಾದವು. ಈ ದುರ್ಗದುದ್ದಕ್ಕೂ ಸಂಪೂರ್ಣ ರಸ್ತೆಯ ಸೌಲಭ್ಯವಿದ್ದು, ವಾಹನದಲ್ಲಿಯೇ ಬೆಟ್ಟದೆಲ್ಲೆಡೆ ಸಂಚರಿಸಬಹುದಾದ್ದರಿಂದ, ಮಕ್ಕಳಾದಿ ವೃದ್ಧರೂ ಇಡೀ ಸಂಸಾರ ಸಮೇತ ಪ್ರವಾಸಕ್ಕೆ ಪೂರಕವಾಗಿದೆ.

ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಇದರ ಹಿಂದೆ ಪೌರಾಣಿಕ ಸಂಗತಿಯೊಂದು ಅಡಗಿದೆ, ತ್ರೇತಾಯುಗದಲ್ಲಿ ಶ್ರೀರಾಮ ವನವಾಸದ ಸಂಧರ್ಭದಲ್ಲಿ ಇಲ್ಲಿ ನೆಲೆಸಿದ್ದ ಸಂಕೇತ ಈ ಚಿಲುಮೆ. ತಿಲಕ ಹಚ್ಚಲು ಸಮೀಪದಲ್ಲೆಲ್ಲೂ ನೀರು ಸಿಗದ ಕಾರಣ ಶ್ರೀರಾಮ ಅಲ್ಲೇ ಕಂಡ ಬಂಡೆಯೊಂದಕ್ಕೆ ಬಾಣಬೀಸಿದ ಕೂಡಲೆ ಬಂಡೆಯಿಂದ ನೀರು ಚಿಮ್ಮತೊಡಗಿತು, ಆ ನೀರಿನಿಂದ ಕುಂಕುಮ ಮಿಶ್ರಿತಮಾಡಿ ತಿಲಕ ಹಚ್ಚಿಕೊಂಡರೆಂಬ ಕಥೆಯಿದೆ. ಬಂಡೆಯಿಂದ ಇಂದಿಗೂ ನೀರು ಹರಿಯುತ್ತಿದೆ, ಅಲ್ಲೇ ಶ್ರೀರಾಮನ ಪಾದಗಳ ಗುರುತೂ ಕಾಣಬಹುದು. ಇದು ಜಯಮಂಗಳ ನದಿಯ ಉಗಮಸ್ಥಾನವೂ ಹೌದು!

ಮೈಸೂರ ಚಿಕ್ಕದೇವರಾಯ ಒಡೆಯರ ಕಾಲದಲ್ಲಿ ದೇವರಾಯನ ದುರ್ಗವೆಂದು ನಾಮಾಂಕಿತಗೊಂಡಿತು. ಇಲ್ಲಿನ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲದ್ದು ಶ್ರೀಕಂಠೀರವ ನರಸರಾಜ-1 ರಿಂದ ನಿರ್ಮಿತವಾಗಿದೆ. ದೇವಾಲಯದ ಬಳಿ ಮೂರು ಸುಂದರ ಕಲ್ಯಾಣಿಗಳಿವೆ. ಅದೇ ನರಸಿಂಹ ತೀರ್ಥ, ಪರಸರ ತೀರ್ಥ ಮತ್ತು ಪಾದ ತೀರ್ಥ. ಇಲ್ಲಿ ಕಾಣಬಹುದಾದ ಮತ್ತೊಂದು ಗುಡಿ, ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೂ ಪುರಾತನವಾದದ್ದು - ಹನುಮಂತನು ಕೈಮುಗಿದು ನಿಂತಿರುವ ಭಂಗಿ, ಅದೇ ಸಂಜೀವರಾಯನ ಗುಡಿ.

ಬೆಟ್ಟದ ಮೇಲಿನಿಂದ ಕಾಣುವ ದೃಶ್ಯ ಮನೋಹರ, ಪಕ್ಷಿಗಳ ವೀಕ್ಷಣೆ ಹಾಗು ಬೈಸೈಕಲ್ ಸವಾರರಿಗೂ ಆಹ್ಲಾದಕರ ತಾಣ. ಒಟ್ಟಾರೆ ಹೇಳುವುದಾದರೆ ಒಮ್ಮೆಯಾದರೂ ವೀಕ್ಷಿಸಲೇಬೇಕಾದಂತಹ ಸ್ಥಳ.


3. ಕಬ್ಬಾಳ ದುರ್ಗ
ಕಬ್ಬಾಳ ದುರ್ಗವಿರುವುದು ಬೆಂಗಳೂರಿನಿಂದ ಸುಮಾರು 80 ಕಿ. ಮೀ., ದೂರದಲ್ಲಿ. ಇಲ್ಲಿಗೆ 2-3 ತಾಸುಗಳ ಪ್ರಯಾಣ. ಮೊದಲಿಗೆ ಕನಕಪುರ ತಲುಪಿ ನಂತರ ಸಾತನೂರಿನೆಡೆಗೆ ಸಾಗಿ, ಅಲ್ಲಿ ಬಲಕ್ಕೆ 6 ಕಿ. ಮೀ. ಕ್ರಮಿಸಿದರೆ ಸಿಗುವುದೇ ಕಬ್ಬಾಳ ಹಳ್ಳಿ. ಬೆಟ್ಟದ ಮೇಲೆ ಕಬ್ಬಾಳಮ್ಮನ ಗುಡಿಯಿರುವ ಕಾರಣ ದುರ್ಗವು ಅದೇ ಹೆಸರಿನಿಂದ ಕರೆಯಲ್ಪಟ್ಟಿದೆ.

ದುರ್ಗದ ಕಟ್ಟಡಗಳು ಅವಶೇಷಗಳಾಗಿ ಮಾರ್ಪಾಡಾಗಿದ್ದರೂ, ಕಬ್ಬಾಳಮ್ಮನ ಗುಡಿಯಲ್ಲಿ ಮಾತ್ರ ಇಂದಿಗೂ ಪೂಜಾಕಾರ್ಯಗಳು ನಡೆಯುತ್ತಿದ್ದು, ತಾಯಿಯ ಕೃಪೆಗಾಗಿ ಬಹುತೇಕ ಹಳ್ಳಿಯ ಜನರು ಇಲ್ಲಿಗೆ ಆಗಮಿಸುತ್ತಾರೆ. ಹೊಸದಾಗಿ ಬೆಟ್ಟ-ಗುಡ್ಡಗಳನ್ನೇರುವ ಹವ್ಯಾಸ ಆರಂಭಿಸಲು ಸೂಕ್ತವಾದ ಸ್ಥಳ. ಹಸಿರು ಹಾಗು ಬಂಡೆಗಳ ಮಿಶ್ರತ ಪ್ರದೇಶವು ನೋಡಲು ಸುಂದರ!


4. ಹುತ್ರಿದುರ್ಗ
ಕುಣಿಗಲ್ ಮಾಗಡಿ ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ. ಮೀ. ದೂರದಲ್ಲಿದೆ. ಸರಿಸುಮಾರು 500 ವರ್ಷಗಳ ಹಿಂದೆ, ಕೆಂಪೇಗೌಡರಿಂದ ನಿರ್ಮಿತವಾಗಿದ್ದು, ಅವರ ಬೇಸಿಗೆಯ ರಾಜಧಾನಿಯಾಗಿತ್ತು. ದುರ್ಗದ ಮೇಲೆ ಶಾಕಾರೇಶ್ವರ ದೇವಾಲಯ ಹಾಗು ನಂದಿ ಮಂಟಪ ಕಾಣಬಹುದು. ಬೆಟ್ಟದ ಮಧ್ಯಭಾಗದಲ್ಲಿ ಆಂಜನೇಯ ಸ್ವಾಮಿ ಗುಡಿ, ಕೆಳಭಾಗದ ಹಳ್ಳಿಯಲ್ಲಿ ಶ್ರೀ ಆದಿ ನಾರಾಯಣಸ್ವಾಮಿ ಮತ್ತು ವೀರಭದ್ರಸ್ವಾಮಿ ದೇವಾಲಯಗಳಿವೆ. ಇಲ್ಲಿ ಕೇವಲ ಸೋಮವಾರ, ಶುಕ್ರವಾರಗಳಂದು ಮಾತ್ರ ಪೂಜೆ ಸಲ್ಲಿಸಲಾಗುತ್ತದೆ.

ದುರ್ಗದಲ್ಲಿ ಕೋಟೆ, ಸೈನಿಕರ ಮನೆಗಳು, ಕಲ್ಲಿನ ಮಂಚ ಹೀಗೆ ಅನೇಕ ಅವಶೇಷಗಳು ಉಳಿದಿದೆ, ಐತಿಹಾಸಿಕ ಕಥೆಗಳನ್ನು ಸಾರುವ ಇಂತಹ ಜೀವಂತ ಪ್ರದೇಶಗಳೆಡೆಗೆ ಸರ್ಕಾರ ಸ್ವಲ್ಪ ಗಮನ ಹರಿಸಬೇಕು. ನಾಡಗೌಡ ಕೆಂಪೇಗೌಡರ ನೆನಪಿಗಾಗಿ ಸಂಗ್ರಹಾಲಯ ಸ್ಥಾಪನೆ, ಅವರು ನಿರ್ಮಿಸಿದ ಅನೇಕ ಕಟ್ಟಡಗಳ ಸಂರಕ್ಷಣಾ ಕಾರ್ಯಕ್ರಮ ಜರುಗಬೇಕಾಗಿದೆ.


5. ಮಕಳೀ ದುರ್ಗ
ಮಕಳೀ ದುರ್ಗ ದೊಡ್ಡಬಳ್ಳಾಪುರದಿಂದಾಚೆಗೆ 10 ಕಿ. ಮೀ. ವ್ಯಾಪ್ತಿಯಲ್ಲಿದೆ. ಅಂದರೆ ಬೆಂಗಳೂರಿನಿಂದ ದೂರ ಸುಮಾರು 60 ಕಿ. ಮೀ. 117 ಮಿ ಎತ್ತರವಿದ್ದು, ಇಲ್ಲಿನ ಬಂಡೆಗಳು ಬೆಣಚು ಕಲ್ಲಿನದಾಗಿವೆ. ದಿಣ್ಣೆಯ ತುತ್ತ ತುದಿಯಲ್ಲಿ ಮಕಳೀ ದುರ್ಗದ ಕೋಟೆಯಿದೆ. ಇಲ್ಲಿ ಪುರಾತನ ಶಿವನ ಮಂದಿರವಿದೆ.

ಆರ್ಯುವೇದ ಸಸ್ಯರಾಶಿ ಬೆಟ್ಟದೆಲ್ಲೆಡೆ ಹಬ್ಬಿದೆ. ಸಮೀಪದಲ್ಲೇ ರೈಲ್ವೇ ಹಳಿಯಿದ್ದು. ರೈಲ್ವೇ ಟ್ರೆಕ್ಕಿಂಗ್‍ಗಾಗಿಯೇ ಅನೇಕ ಹುಡುಗರು ಇಲ್ಲಿಗೆ ಬರುತ್ತಾರೆ. ಪರಿಸರವನ್ನು ಆನಂದಿಸಲು ಪೂರಕವಾದ ಪ್ರದೇಶ. ಬೆಟ್ಟದ ಮೇಲೆ ಕುಳಿತು, ಕೆಳಗಡೆ ರೈಲುಗಳು ಸಂಚರಿಸುವುದನ್ನು ಗಮನಿಸುವುದೇ ಒಂದು ಸಂತಸ!!


6. ಚನ್ನರಾಯನ ದುರ್ಗ
ಬೆಂಗಳೂರಿನಿಂದ ಸುಮಾರು 100 ಕಿ. ಮೀ., ತುಮಕೂರು ಜಿಲ್ಲೆಯ ಮಧುಗಿರಿಯ ಹತ್ತಿರವಿದೆ ಈ ಚನ್ನರಾಯನ ದುರ್ಗ. ಇದರ ಇತಿಹಾಸ ಕೆದಕುತ್ತಾ ಹೋದಲ್ಲಿ, ತಿಳಿಯುವ ಇತಿಹಾಸ – ಇದು ಮೊದಲಿಗೆ ಮರಾಠರ ನೇತೃತ್ವದಲ್ಲಿತ್ತು. ನಂತರ ಮೈಸೂರು ಒಡೆಯರ ಪಾಲಾಯಿತು. ತದನಂತರ ಮೂರನೇ ಮೈಸೂರು ಯುಧ್ಧದಲ್ಲಿ ಬ್ರಿಟಿಷರು ಆಕ್ರಮಿಸಿದರು.

ಚನ್ನರಾಯನ ದುರ್ಗದ ಬಂಡೆಗಳು ಕಡಿದಾಗಿದ್ದು ಹತ್ತಲು ಬಹಳ ಕಷ್ಟಕರ. ಬೇರೆಲ್ಲ ದುರ್ಗಗಳಂತೆ ಇಲ್ಲಿಯೂ ಕೋಟೆ, ಕಲ್ಲಿನ ಮಂಟಪ ಹೀಗೆ ಇನ್ನಿತೆರೆ ಅವಶೇಷಗಳಿದ್ದು, ನಶಿಸುವ ಅಂಚಿನಲ್ಲಿವೆ.

ಇಲ್ಲಿನ ಕೋಟೆ 3 ಹಂತದಲ್ಲಿದೆ:
ಅ. ಮೊದಲನೆಯ ಹಂತದಲ್ಲಿ ಒಂದು ಸಣ್ಣ ಪುಷ್ಕರಿಣಿಯಿದೆ. ಕೋಟೆಯಲ್ಲಿ ವಾಸಿಸುತ್ತಿದ್ದ ಜನರಿಗೆ ನೀರಿನ ಆಧಾರವಿರಬಹುದು. ಬದಿಗೆ ಸಣ್ಣ ಗುಡಿಯಿದ್ದು, ಆಕರ್ಷಣೀಯವಾಗಿದೆ.
ಆ. ಎರಡನೇ ಹಂತ, ತೀರ ಹದಗೆಟ್ಟ ಸ್ಥಿತಿಯಲ್ಲಿದೆ. ಕಾರಣ ನಿಧಿ ಅನ್ವೇಷಣೆಯ ಹುಡುಕಾಟದಲ್ಲಿ ಕಟ್ಟಡಗಳೆಡೆ ಗಮನ ಹರಿಸದೇ ಎಲ್ಲಂದರಲ್ಲಿ ಕೆಡವಿ ಹಾಳುಮಾಡಿದ್ದಾರೆ. ನಿಧಿಯೂ ಸಿಗಲಿಲ್ಲ, ಕೋಟೆಯೂ ಹಾಳಾಯಿತು. ಈ ಕೋಟೆಯ ನಿರ್ಮಾಣದ ವೈಶಿಷ್ಟ್ಯ ಹೇಗಿದೆಯೆಂದರೆ, ಹೊರಗಿನವರಿಗೆ ಇದೇ ಕೋಟೆಯ ಕೊನೆಯೆಂಬಂತೆ ಭಾಸವಾಗುತ್ತದೆ, ಗುಪ್ತ ದಾರಿಯ ಇರುವಿಕೆಯ ಸಂಶಯ ಸಹ ಬಾರದಂತೆ ರಚಿಸಿದ್ದಾರೆ. ಪ್ರಾಯಶಃ ಶತ್ರುಗಳನ್ನು ದಾರಿತಪ್ಪಿಸುವ ತಂತ್ರವಿರಬಹುದು.
ಇ. ಮೂರನೇ ಹಂತ, ದುರ್ಗದ ತುತ್ತ ತುದಿಯಲ್ಲಿ ಕೋಟೆಯ ಕಾವಲಿಗಾಗಿ ಮೀಸಲಾದ ಸ್ಥಳ. ಸೈನಿಕರು ಕೋಟೆ ಕಾಯುತಿದ್ದರೆನ್ನಲೂ ಅಲ್ಲಿರುವ ಪಾಳುಬಿದ್ದ ಕಟ್ಟಡಗಳೇ ಸಾಕ್ಷಿ. ಇಲ್ಲಿಂದ ಕಾಣುವ ದೃಶ್ಯ ಮನೋಹರ!


7. ನಂದೀ ದುರ್ಗ
ನಂದೀ ಬೆಟ್ಟ, ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ, ಬೆಂಗಳೂರಿನಿಂದ 60 ಕಿ. ಮೀ. ದೂರ. ನಂದೀ ಬೆಟ್ಟ ಪ್ರವಾಸಿ ತಾಣವಾಗಿ ಬಹಳ ಹಿಂದಿನಿಂದಲೇ ಪ್ರಸಿದ್ಧಿ ಹೊಂದಿದೆ. ಈ ಬೆಟ್ಟವು ಅರ್ಕಾವತಿ ನದಿಯ ಮೂಲವೂ ಹೌದು. ಚೋಳರ ಸಮಯದಲ್ಲಿ ಇದು "ಆನಂದ ದುರ್ಗ"ವಾಗಿತ್ತು. ಮತ್ತೊಂದು ಕಥೆಯ ಪ್ರಕಾರ ಇಲ್ಲಿ ಯೋಗ ನಂದೀಶ್ವರ ತಪಸ್ಸುಗೈದ ಸ್ಥಳ. ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಇಲ್ಲಿ ಕೋಟೆ ನಿರ್ಮಾಣವಾಗಿದೆ. ಬೆಟ್ಟದ ಆಕಾರವೂ ಮಲಗಿರುವ ನಂದಿಯನ್ನು ಹೋಲುತ್ತದೆ. ಟಿಪ್ಪು ಸುಲ್ತಾನ ಹಾಗು ಬ್ರಿಟಿಷರ ಬೇಸಿಗೆಯ ತಂಗುದಾಣ ಪ್ರದೇಶ.

ಟಿಪ್ಪು ಡ್ರಾಪ್ - ಬೆಟ್ಟದ ಮೇಲಿನಿಂದ, ಶಿಕ್ಷೆಗೊಳಗಾದವರನ್ನು ತಳ್ಳಿ ಮರಣದಂಡನೆ ನೀಡುತ್ತಿದ್ದ ಜಾಗ. ಇಲ್ಲಿ ಸುಮಾರು ಆತ್ಮಹತ್ಯೆ ಪ್ರಯತ್ನಗಳೂ ನಡೆದಿವೆ. 1300 ವರ್ಷ ಪೂರ್ವದ ದ್ರಾವಿಡ ಶೈಲಿಯ ಶಿವ ಪಾರ್ವತಿ ದೇವಾಲಯವಿದೆ. 9ನೇ ಶತಮಾನದ ಭೋಗ ನಂದೀಶ್ವರ ದೇವಸ್ಥಾನವುಂಟು. ಬದಿಯಲ್ಲಿ ದೊಡ್ಡದೊಂದು ಕಲ್ಯಾಣಿಯಿದೆ.

ಬೆಟ್ಟದ ಎತ್ತರ 1479 ಮೀ., ತಂಪಾದ ಆಹ್ಲಾದಕರ ಪ್ರದೇಶ. ಕಾಲೇಜು ಪ್ರವಾಸಕ್ಕಾಗಲೀ, ಪರಿವಾರ ಸಮೇತ ವಿಶ್ರಮಿಸುವುದಕ್ಕಾಗಲೀ ಹೇಳಿಮಾಡಿಸಿದ ಪ್ರವಾಸೀ ತಾಣ. ಸಮೇಪದಲ್ಲೇ ಬೆಂಗಳೂರು ಅಂತರಾಷ್ತ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದರ ಕಾರಣ ವಿದೇಶೀ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಬೆಟ್ಟದ ಕೆಳಗಡೆ ಹಳ್ಳಿಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ವೈನ್ ಉತ್ಪಾದನೆಗೂ ಹೆಸರುವಾಸಿಯಾಗಿದೆ. ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಇಲ್ಲಿಂದ ಕಾಣುವ ದೃಶ್ಯ ವರ್ಣಿಸಲು ಪದಗಳು ಸಾಲದು, ಅನುಭವಿಸಿಯೇ ಆನಂದಿಸಬೇಕು.


8. ಹುಲಿಯೂರ ದುರ್ಗ
ಇದು ಕುಣಿಗಲ್ ತಾಲೂಕಿನ ವ್ಯಾಪ್ತಿಯಲ್ಲಿದೆ. ಬೆಂಗಳೂರಿನಿಂದ ಸುಮಾರು 80 ಕಿ. ಮೀ. ದೂರ, ಬೆಟ್ಟವು ತಲೆಕೆಳಗಾದ ಬಟ್ಟಲಿನ ಆಕಾರದಲ್ಲಿದೆ. ಎತ್ತರ 845 ಮೀ.

ಕೆಂಪೇಗೌಡರ ನೇತೃತ್ವ ಈ ದುರ್ಗದಲ್ಲಿಯೂ ಇತ್ತು. ಅವರ ಕಾಲದ ಅನೇಕ ಅವಶೇಷಗಳನ್ನು ಕಾಣಬಹುದು. ಪಕ್ಕಕ್ಕೆ ಸೇರಿದಂತೆ ಹೇಮಗಿರಿ ಬೆಟ್ಟವಿದೆ. ಹುಲಿಯೂರ ದುರ್ಗಕ್ಕಿಂತಲೂ ಎತ್ತರವಾಗಿದೆ. ಮಲ್ಲಿಕಾರ್ಜುನ ಗುಡಿಯೂ ಹೇಮಗಿರಿ ಬೆಟ್ಟದಲ್ಲಿದೆ. ಇಲ್ಲಿ ಸಂಕ್ರಾಂತಿಯ ಮರುದಿನ ಜಾತ್ರೆ ನಡೆಯುತ್ತದೆ. ಹುಲಿಯೂರ ದುರ್ಗವು ಇನ್ನೂ ಅನೇಕರಿಗೆ ಅಪರಿಚಿತ ಸ್ಥಳ. ಟ್ರೆಕ್ಕಿಂಗ್‍ಗಳಿಗೆ ಮಾತ್ರ ಸೀಮಿತವಾಗಿದೆ.


9. ಭೈರವ ದುರ್ಗ
ಬೆಂಗಳೂರಿನಿಂದಾಚೆಗೆ 60 ಕಿ. ಮೀ. ದೂರದಲ್ಲಿ, ಕುಡೂರು ತಾಲೂಕಿನಲ್ಲಿದೆ. ಕೆಂಪೇಗೌಡರಿಂದ ಕಟ್ಟಲ್ಪಟ್ಟ ದುರ್ಗ. ಭೈರವೇಶ್ವರನ ಗುಡಿಯನ್ನು ಕಾಣಬಹುದು. ಭೈರವ ದುರ್ಗ ಇನ್ನೂ ಅನ್ವೇಷಣೆಗೊಳಗಾಗದ ಸ್ಥಳ, ಹೆಚ್ಚಾದ ಮಾಹಿತಿ ಇಲ್ಲ. ಪರಿಶೋಧಕರಿಗೆ ಕುತೂಹಲಕಾರಿಯಾದ ತಾಣ.

ಮೇಲೆ ವಿವರಿಸಿದ 9 ದುರ್ಗಗಳಲ್ಲಿ ಕೆಲವು ಮಾತ್ರ ಪ್ರವಾಸಿ ತಾಣಗಳಾಗಿ ಒಳ್ಳೆಯ ಸ್ಥಿತಿಯಲ್ಲಿವೆ, ಅನೇಕ ದುರ್ಗಗಳ ಅಸ್ತಿತ್ವವೂ ಹಲವರಿಗೆ ತಿಳಿದಿಲ್ಲ. ಬೆಂಗಳೂರಿನ ಇತಿಹಾಸದ ಸಂಕೇತವಾಗಿರುವ ಇಂತಹ ದುರ್ಗಗಳು ನಶಿಸುವ ಅಂಚಿನಲ್ಲಿವೆ, ಇವುಗಳ ಸಂರಕ್ಷಣೆಗೆ ಕರ್ನಾಟಕ ಸರ್ಕಾರ ಅದರಲ್ಲೂ ವಿಷೇಷವಾಗಿ, ಪ್ರವಾಸಿ ನಿಗಮ ಗಮನ ಹರಿಸಬೇಕು. ಹಾಗೆಯೇ ಪ್ರವಾಸಿಗರೂ ಸಹ ಇಂತಹ ಪ್ರದೇಶಗಳಿಗೆ ಭೇಟಿ ನೀಡಿದಾಗ, ಸ್ವಚ್ಛತೆ ಕಾಪಾಡಿ. ಕಟ್ಟಡಗಳನ್ನು ಕೆಡವುವುದಾಗಲೀ, ಬಂಡೆಗಳ ಮೇಲೆ ಹೆಸರು ಅಥವಾ ಇನ್ನಿತರೇ ಅವಾಚ್ಯ ಪದಗಳನ್ನು ಕೊರೆಯುವುದಾಗಲೀ ಮಾಡಬೇಡಿ... ಇದು ನನ್ನ ವಿನಯಪೂರ್ವಕ ಮನವಿ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು!!!

ಲೇಖಕರ ಕಿರುಪರಿಚಯ
ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರ

ಬೆಂಗಳೂರಿನ ಸಾಫ್ಟ್-ವೇರ್ ಕಂಪನಿಯೊಂದರಲ್ಲಿ ಲೀಡ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಕನ್ನಡ ನಾಡು-ನುಡಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ.

ಕನ್ನಡ ಚಲನಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುವ ಇವರಿಗೆ ಪ್ರಯಾಣವೆಂದರೆ ಅಚ್ಚು-ಮೆಚ್ಚು; ದೇಶ-ವಿದೇಶಗಳನ್ನು ಸಂಚರಿಸುವ ಆಸೆ.

Blog  |  Facebook  |  Twitter

ಭಾನುವಾರ, ನವೆಂಬರ್ 24, 2013

ಹನಿಗವನಗಳು

ನನ್ನವಳು
ಮೋಡದ ಮರೆಯಿಂದ ಹೊರಬಂದ ಹುಣ್ಣಿಮೆ ಚಂದ್ರನಂಥ ಮುಖ
ಅದರಲ್ಲಿ ಜಿಂಕೆಯಂತೆ ಓಡಾಡುವ ಕರಿಮಣಿಗಳ ಹೋಲುವ ಕಣ್ಣುಗಳು
ನೇರನಿಂತ ಸ್ತಂಭದಂತೆ ತಿದ್ದಿ ತೀಡಿದ ಸಂಪಿಗೆ ಎಸಳ ಮೂಗು
ಕೆಂಪು ತೊಂಡೆಯಂಥ ತುಟಿಗಳೆರಡು ಬಿರಿದು ನಗಲು
ಬಿಳಿಯ ಮುತ್ತು ಪೋಣಿಸಿದಂತೆ ಕಾಣುವ ದಂತಪಂಕ್ತಿ
ಹೀಗಿರುವ ನನ್ನವಳು ಕಂಡಾಕ್ಷಣ ಎಲ್ಲವನು ಮರೆಸುವವಳು.


ಭೂಮಿತಾಯಿ
ಭೂಮಿತಾಯಿ ನಮ್ಮ ಜನ್ಮದಾತೆ
ಅವಳು ಎಲ್ಲ ಜೀವಗಳ ಜಗನ್ಮಾತೆ
ಸಹಿಸುವಳು ನಮ್ಮೆಲ್ಲ ತಪ್ಪು-ಒಪ್ಪುಗಳ ಕಂತೆ
ನಾವು ಕೊಟ್ಟರೆ ಆರೈಕೆ, ಆಗುವಳು ನಿಜ ಮಾತೆ.


ಸಂಸಾರ ನೌಕೆ
ಸರಸಮಯ ಪ್ರೀತಿಯ ದಾಂಪತ್ಯದಲ್ಲಿ
ವಿರಸವೆಂಬ ವಿಷವು ನಡುವೆ ಬಂದಾಗ
ಅಹಂಕಾರದ ರಂಧ್ರವ ಈರ್ವರೂ ಮುಚ್ಚಿ
ಸೋತು ಗೆದ್ದು ಸಾಗಬೇಕು ಸಂಸಾರದ ನೌಕೆ
ಅದೇ ಸಮರಸ ಜೀವನದ ಹಾದಿ.


ನಿನ್ನ ಆಗಮನ
ಮೋಡದ ಮರೆಯಿಂದ ಬರುವ ಸೂರ್ಯನಂತೆ ನೀ ಬಂದೆ
ವರ್ಣಿಸಲಾಗದ ಸಂತೋಷದ ಬೆಳಕನ್ನು ಹೊತ್ತು ತಂದೆ
ಆದರೆ ಅನುಮಾನದ ಕಾರ್ಮೋಡ ಕವಿದಾಗ
ಮರೆಯಾದೆ ಹಗಲಿನ ಚಂದ್ರಮನಂತೆ
ಮತ್ತೆ ಬಂದೆ ಮಳೆ ಸುರಿಸುವ ಮೋಡವಾಗಿ
ಹರುಷದ ಮಳೆ ಬಿಂದುಗಳ ಹನಿಸುತ್ತ ನೀನು.


ಮರೀಚಿಕೆ
ಮುಸ್ಸಂಜೆಯ ಬಾನಿನ ಬಣ್ಣ
ಸೆಳೆಯಿತು ನನ್ನ ಒಳ ಕಣ್ಣ
ಹುಡುಕಿದೆ ಕಡಲಿನಲಿ ಸೂರ್ಯನ ಕಿರಣ
ಆದರೆ ತಿಳಿಯಿತಾಗ ಅದು ಮರೀಚಿಕೆಯ ಪಯಣ.

  - ಬಿಂದು ಜಿ.

ಲೇಖಕರ ಕಿರುಪರಿಚಯ
ಕುಮಾರಿ ಬಿಂದು ಜಿ.

ಇವರು ಬೆಂಗಳೂರಿನ ಸೌಂದರ್ಯ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ  ದ್ವಿತೀಯ ಪದವಿಪೂರ್ವ ವಿದ್ಯಾರ್ಥಿನಿ. ಓದುತ್ತಿರುವುದು ವಿಜ್ಞಾನ ವಿಷಯವಾದರೂ ಕನ್ನಡ ಉಪಾಧ್ಯಾಯರಾಗಿರುವ ತಂದೆಯವರ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು.

ಹಾಡುಗಾರಿಕೆ ಮತ್ತು ಕನ್ನಡ ಭಾಷೆಯಲ್ಲಿ ಕವನಗಳ ರಚನೆ ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

ಶನಿವಾರ, ನವೆಂಬರ್ 23, 2013

ಶತಮಾನದ ಗೋಕಥೆ

ಒಂದು ಶತಮಾನವೆಂದರೆ ಬಹಳ ದೀರ್ಘವಾದ ಕಾಲ. ಪಶ್ಚಿಮಘಟ್ಟಗಳ ನಟ್ಟನಡುವಿನ ಉತ್ತರಕನ್ನಡ ಜಿಲ್ಲೆಯ ಘೋರಾಕಾರ ಅಡವಿಯಿಂದ ಆವೃತ್ತವಾದ ಪಟ್ಟಣ ಶಿರಸಿ. ನೂರು ವರ್ಷಗಳ ಹಿಂದೆಯೇ ಇಲ್ಲಿ ಪಶುಪಾಲನೆಗೆ ಪೂರಕವಾಗಿ ಜಾನುವಾರು ಆಸ್ಪತ್ರೆ ಪ್ರಾರಂಭವಾಗಿದ್ದು ಅತ್ಯಂತ ಸೋಜಿಗದ ವಿಷಯ. ಪಶುಪಾಲನೆಯಲ್ಲಿ ಆಗ ವಾಣಿಜ್ಯಿಕ ಉದ್ದೇಶಗಳಿರಲಿಲ್ಲ. ಒಮ್ಮೆ ಊಹಿಸಿಕೊಳ್ಳಿ. ಕ್ರಿ. ಶ. 1901ನೇ ಇಸವಿಯ ಸಮಯ. ಅಂದಿನ ಬ್ರಿಟಿಷ್ ಆಡಳಿತದ 'ಕಾನಡಾ' ಜಿಲ್ಲೆಯ ಘಟ್ಟದ ಮೇಲಿನ ಪ್ರಮುಖ ವ್ಯಾಪಾರಿ ಕೇಂದ್ರ ಶಿರಸಿ. ತಾಲೂಕು ಕೇಂದ್ರವೂ ಹೌದು. ಅಡಿಕೆ, ಏಲಕ್ಕಿ, ಕಾಳುಮೆಣಸು ಇತ್ಯಾದಿ ಸಂಬಾರ ಬೆಳೆಗಳ ಖ್ಯಾತಿ. ಪಟ್ಟಣದ ಜನಸಂಖ್ಯೆ 4000. (ಈಗ ಇದು ಒಂದು ಲಕ್ಷ ಮೀರುತ್ತದೆ). ಆ ವರ್ಷ ಮೈಲಿ ಬೇನೆ ಮತ್ತು ಪ್ಲೇಗ್ ರೋಗದಿಂದಾಗಿ ಇಡೀ ಊರಿಗೆ ಊರೇ ಖಾಲಿ! ಮುಕ್ಕಾಲು ಪಾಲು ಜನ ರೋಗದಿಂದ ತಪ್ಪಿಸಿಕೊಳ್ಳಲು ಶಿರಸಿಯಿಂದ ಕಾಲ್ತೆಗೆದಿದ್ದರೆ ಉಳಿದವರು ರೋಗಕ್ಕೆ ಇಂಜೆಕ್ಷನ್ ಹಿಡಿದುಕೊಂಡು ಬರುತ್ತಿದ್ದ ದಾದಿಯರ ಸೂಜಿಗೆ ಹೆದರಿ ಊರು ಬಿಟ್ಟಿದ್ದರು. ನೂರಾರು ಜನ ಸತ್ತೂ ಹೋಗಿದ್ದರು.

ಮಾನವ ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಡಬೇಕಾದ ಆ ಸಂದರ್ಭದಲ್ಲಿ ಕೂಡಾ ಅಂದಿನ ಬ್ರಿಟಿಷ್ ಸರಕಾರವು ಪಶುಗಳಿಗಾಗಿ ಒಂದು ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡಿತು. ಅಂತೆಯೇ ಕ್ರಿ. ಶ. 1908 ರಲ್ಲಿ ಶಿರಸಿ ಮುನಿಸಿಪಾಲಿಟಿ ಶಾಲೆಯ ಎದುರಿನ ಧರ್ಮಶಾಲೆಯ ಒಂದು ಪುಟ್ಟ ಕೋಣೆಯಲ್ಲಿ ಪಶುವೈದ್ಯ ಆಸ್ಪತ್ರೆ ಉದಯಿಸಿತು. ಆಸ್ಪತ್ರೆ  ಪ್ರಾರಂಭವಾದರೂ ಅದಕ್ಕೆ ವೈದ್ಯರ ಆಗಮನವಾದದ್ದು ಕ್ರಿ. ಶ. 1911ರಲ್ಲಿ. ಬಾಂಬೆ ಪಶುವೈದ್ಯಕೀಯ ಕಾಲೇಜಿನ ಪದವೀಧರ ಡಾ. ಮೇಲುಕೋಟೆ  ಶ್ರೀನಿವಾಸ ಗರುಡಾಚಾರ್ ಆಸ್ಪತ್ರೆಯ ಪ್ರಪ್ರಥಮ ಪಶುವೈದ್ಯರು. ಶಿರಸಿಯಲ್ಲಿ ಇವರ ಅಮೋಘ ಸೇವೆ ಸತತವಾಗಿ 12 ವರ್ಷ ನಡೆಯಿತು. ಆ ಸಂದರ್ಭದಲ್ಲಿ ಸಮಾಜಸೇವಕರೂ ಶ್ರೀಮಂತರೂ ಆಗಿದ್ದ ಶ್ರೀ ಧರಣೇಂದ್ರಪ್ಪ ಪದ್ಮಪ್ಪ ಆಲೂರರು ಆಸ್ಪತ್ರೆಗೆ ಸುಮಾರು ಎರಡು ಎಕರೆಗಳಷ್ಟು ಸ್ಥಳವನ್ನು ಕ್ರಿ. ಶ. 1923ರಲ್ಲಿ ದಾನ ಮಾಡಿದುದಲ್ಲದೇ ಒಂದು ಕಟ್ಟಡವನ್ನೂ ಕಟ್ಟಿಸಿಕೊಟ್ಟ್ಟಿದ್ದನ್ನು ಮರೆಯಲಾಗದು. ಈಗಿನ ಮಾನದಲ್ಲಿ ಈ ಜಾಗದ ಬೆಲೆ ಐದು ಕೋಟಿ ರೂಪಾಯಿಗಳನ್ನು ಮೀರಬಹುದು. ಅವರು ಬ್ರಿಟಿಷರಿಂದ ರಾವ್ ಬಹದ್ದೂರ್ ಬಿರುದು ಪಡೆದ ಊರ ಪ್ರಮುಖರು. ದಾನವಾಗಿ ಬಂದ ಈ ಸ್ಥಳದಲ್ಲಿ  ಡಾ. ಗರುಡಾಚಾರರು ಒಂದು ವೃತ್ತಾಕಾರದ ಶಸ್ತ್ರಚಿಕಿತ್ಸಾ ಕೊಠಡಿ ನಿರ್ಮಿಸಿದರು. ಇದನ್ನು 1927ನೇ ಇಸವಿಯ ಜನವರಿ 26 ರಂದು ಬ್ರಿಟಿಷ್ ಆಡಳಿತದ ಮುಂಬೈ ಸರ್ಕಲ್ಲಿನ ಐ.ವಿ.ಎಸ್. ಶ್ರೇಣಿಯ ಇಂಗ್ಲೆಂಡಿನ ಪಶುವೈದ್ಯ ಸಿ. ಎಸ್. ಫೇರ್ ಬ್ರದರ್ ಉದ್ಘಾಟಿಸಿದರು (ಚಿತ್ರ ನೋಡಿ). ಈ ಕೊಠಡಿ ಈಗಲೂ ಸುಸ್ಥಿತಿಯಲ್ಲಿದೆ. ಅದೇ ಸ್ಥಳದ ಅದೇ ಕಟ್ಟಡದಲ್ಲಿ ಈಗಲೂ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ವಿಶೇಷವೆಂದರೆ ಈ ಪಶು ಆಸ್ಪತ್ರೆಯಲ್ಲಿ 1911ರಿಂದ ಇಂದಿನವರೆಗೂ ಕಾರ್ಯನಿರ್ವಹಿಸಿದ ಎಲ್ಲ ಪಶುವೈದ್ಯರ ಹೆಸರುಗಳು ಮತ್ತು ಅವರು ಸೇವೆ ಸಲ್ಲಿಸಿದ ಅವಧಿ ಒಂದು ದಿನವೂ ಬಿಡದಂತೆ ದಾಖಲಾಗಿದೆ! ಇದನ್ನೆಲ್ಲ 2012ರ ಫೆಬ್ರುವರಿಯಲ್ಲಿ ನಡೆದ ಶತಮಾನೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದ ಸ್ಮರಣಸಂಚಿಕೆ ಪುಸ್ತಕದಲ್ಲಿ ಮುದ್ರಿಸಲಾಗಿದೆ.
 ಆಗಿನ ದಿನಗಳಲ್ಲಿ ಸಂವಹನದ ಕೊರತೆಯಿತ್ತು. ಸಾರಿಗೆ ಸೌಲಭ್ಯ ತೀರಾ ಕಡಿಮೆಯಿತ್ತು. ಒಬ್ಬರೇ ವೈದ್ಯರು ಇಡೀ ತಾಲೂಕನ್ನು ಸಂಭಾಳಿಸುವ ಪರಿಸ್ಥಿತಿಯಿತ್ತು. ಹೀಗಾಗಿ ರೈತರು ತಮ್ಮ ಜಾನುವಾರುಗಳ ಕಾಯಿಲೆ ಕಸಾಲೆಗಳಿಗೆ ದಿನಗಟ್ಟಲೆ ಅವರಿಗಾಗಿ ಕಾಯಬೇಕಾಗಿತ್ತು. ಆಗ ಇಲ್ಲಿಯ ತೋಟಿಗರೂ ತುಂಬಾ ಬಡವರೇ. ಐವತ್ತು ಅರುವತ್ತು ವರ್ಷಗಳ ಹಿಂದೆ ಒಂದು ಕ್ವಿಂಟಾಲು ಅಡಿಕೆಯ ದರ ಸುಮಾರು ಹದಿನೈದರಿಂದ ಇಪ್ಪತ್ತು ರೂಪಾಯಿ (ಈಗ ಅದರ ಸಾವಿರ ಪಟ್ಟು ಹೆಚ್ಚು ಬೆಲೆ ಇದೆ). ಎಕರೆಗೆ ನಾಲ್ಕೈದು ಕ್ವಿಂಟಾಲು ಇಳುವರಿ (ಈಗಿನ ಇಳುವರಿ 15-20 ಕ್ವಿಂಟಾಲುಗಳು). ಪಕ್ಕದ ಹಾವೇರಿ, ಅಕ್ಕಿ ಆಲೂರಿನಿಂದ 20 ರೂಪಾಯಿ ಕೊಟ್ಟು ನಾಟಿ ಹಸುಗಳನ್ನು ಕೊಂಡು ತರುತ್ತಿದ್ದರು. ಆಗಲೂ ದಿನಕ್ಕೆ ನಾಲ್ಕೈದು ಲೀಟರು ಹಾಲು ಹಿಂಡುತ್ತಿದ್ದ ಎಮ್ಮೆಗಳಿದ್ದವು. ಅಂಥವಕ್ಕೆ ಇನ್ನೊಂದು ಹತ್ತು ರೂಪಾಯಿ ಜಾಸ್ತಿ. ಜೋಡಿ ಎತ್ತುಗಳಿಗೆ 50 ರಿಂದ 100 ರೂಪಾಯಿ. ಹೀಗೆ ಕೊಂಡು ತಂದ ಜಾನುವಾರುಗಳನ್ನು ಮೇಯಲು ಕಾವಲಿಲ್ಲದೇ ಹೊರಗೆ ಬಿಡುವಂತಿರಲಿಲ್ಲ. ಅಡವಿಯಲ್ಲಿ ಮೇಯುವಾಗ ಹುಲಿ ಹಿಡಿದುಬಿಡುತ್ತಿತ್ತು. (ಈ ಸಮಸ್ಯೆ ಈಗ ಹಳ್ಳಿಯ ನಾಯಿಗಳದು. ಕತ್ತಿಗೆ ಕಟ್ಟಿದ ಕಬ್ಬಿಣದ ಸರಪಳಿಯೂ ಹರಿದುಹೋಗುವಂತೆ ಕಾಡಿನ ಕಿರುಬಗಳು ಊರಿಗೆ ಬಂದು ನಾಯಿಗಳನ್ನು ಎಳೆದೊಯ್ಯುತ್ತವೆ).

ಹಾಲು ಕೂಡ ಆಗ ಮಾರಾಟದ ವಸ್ತುವಾಗಿರಲಿಲ್ಲ. ಹತ್ತಾರು ಜನರಿರುವ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು ಮೂವತ್ತು, ಕೆಲವೊಮ್ಮೆ ಒಂದು ನೂರರವರೆಗೂ ಜಾನುವಾರುಗಳು ಇರುತ್ತಿದ್ದವು. ನಾಟಿ ಮಲೆನಾಡ ಗಿಡ್ಡಗಳೇ ಹೆಚ್ಚು. ಮನೆಗೆ ಉಪಯೋಗಿಸಿ ಹೆಚ್ಚಾದ ಹಾಲು ಮಜ್ಜಿಗೆಗಳನ್ನು ಪುನಃ ದನಗಳಿಗೆ ಕುಡಿಸಿಯೋ ಇಲ್ಲವೇ ಹಳ್ಳದಲ್ಲಿ ಸುರುವಿಯೋ ಖರ್ಚು ಮಾಡುತ್ತಿದ್ದರು. ಇದೇ ಕಾರಣಕ್ಕೆ ಇಲ್ಲಿಯ ಕೆಲವು ಹಳ್ಳಿಗಳಿಗೆ ಮಜ್ಜಿಗೆ ಹಳ್ಳ, ಹಾಲಳ್ಳ (ಹಾಲ ಹಳ್ಳ), ಮೊಸರಕುಣಿ, ತುಪ್ಪದ ಜಡ್ಡಿ ಇತ್ಯಾದಿ ಹೆಸರುಗಳು ರೂಢಿಗತವಾದಂತೆ ಕಾಣುತ್ತದೆ.

ಆಗ ಅಡವಿಕಳ್ಳರೂ ಇದ್ದರು. ದೂರದ ಹಳ್ಳಿಗಳಿಂದ ರೈತರು ತಾವು ಬೆಳೆದ ಅಡಿಕೆ ಮೆಣಸು, ಭತ್ತ ಇತ್ಯಾದಿ ಉತ್ಪನ್ನಗಳನ್ನು ನಲವತ್ತು ಐವತ್ತು ಕಿಲೋಮೀಟರು ದೂರದ ಶಿರಸಿ ಪಟ್ಟಣಕ್ಕೆ ಸಾಗಿಸಬೇಕಾಗುತ್ತಿತ್ತು. ದುರ್ಗಮ ದಾರಿಯ ದಟ್ಟಾರಣ್ಯದಲ್ಲಿ ಜೋಡು ಎತ್ತಿನ ಗಾಡಿಯ ಮೇಲೆ ಸಾಮಾನು ಹೇರಿಕೊಂಡು ಬುತ್ತಿಯನ್ನೂ ಕಟ್ಟಿಕೊಂಡು ಹೊರಡುತ್ತಿದ್ದರು. ನಾಲ್ಕಾರು ದಿನಗಳೇ ತಗಲುವ ದೀರ್ಘ ಪ್ರಯಾಣ. ಕಳ್ಳರಿಂದ ತಪ್ಪಿಸಿಕೊಳ್ಳಲು ಎಂಟು ಹತ್ತು ಬಂಡಿಗಳು ಸಾಲಾಗಿ ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದವು. ಒಮ್ಮೊಮ್ಮೆ ಕಾಡುಗಳ್ಳರು ತನ್ನ ಯಜಮಾನನನ್ನು ದೋಚಿ ಸಾಯಿಸಿದರೂ ಬಂಡಿಯಲ್ಲಿರುವ ಆತನ ಹೆಣದ ಸಮೇತ ಸೀದಾ ಮನೆ ಸೇರುವಷ್ಟು ಬುದ್ಧಿವಂತ ಎತ್ತುಗಳಿದ್ದವು! ಒಮ್ಮೊಮ್ಮೆ ಕಳ್ಳರಿಂದ ತಪ್ಪಿಸಿಕೊಂಡರೂ ಸಾಲಿನ ಹೊಂಚುಹಾಕಿ ಕೂರುತ್ತಿದ್ದ ಹುಲಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವಿತ್ತು. ಕೊನೆಯಲ್ಲಿರುವ ಬಂಡಿಯ ಎತ್ತಿನ ಕತ್ತಿಗೇ ಬಾಯಿ ಹಾಕಿ ಮ್ಯಾಳೆ ಮುರಿಯುವ ವ್ಯಾಘ್ರಗಳಿದ್ದವು. ಹೀಗಾಗಿ ಹುಲಿಯನ್ನು ಪೂಜಿಸುವ ಪದ್ಧತಿ ಬಂತು. ಈಗಲೂ ರಸ್ತೆಯ ಬದಿಯಲ್ಲಿ, ಅರಣ್ಯದ ಮಧ್ಯೆ ಕಲ್ಲಿನ ಮೂರ್ತಿಯ ಹುಲಿಯಪ್ಪನ ಕಟ್ಟೆಗಳನ್ನು ಕಾಣಬಹುದು.

ಈ ಹಿಸ್ಟರಿ ಹೇಳುತ್ತಿರುವಾಗ ಬರಹಗಾರ ಮಿತ್ರ ಶಿವಾನಂದ ಕಳವೆ ಬರೆದ ಒಂದು ಘಟನೆ ನೆನಪಾಗುತ್ತಿದೆ. ಅದು 1760ನೇ ಇಸವಿ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಈಗಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಡಲ ತೀರದಲ್ಲಿ ಒಂದು ಕಾಳುಮೆಣಸಿನ ಗೋದಾಮು ತೆರೆದಿದ್ದರು. ಅಲ್ಲಿಂದ ಮೆಣಸು ಖರೀದಿಸಿ ಒಯ್ಯಲು ಜಾನ್ ಬೆಸ್ಟ್ ಎಂಬುವವನ ನೇತೃತ್ವದಲ್ಲಿ 17 ಜನರ ಬ್ರಿಟಿಷ್ ವ್ಯಾಪಾರಿಗಳ ತಂಡವೊಂದು ಹಡಗಿನಲ್ಲಿ ಬಂದಿಳಿಯಿತು. ಅವರ ಜೊತೆ ಬೃಹದ್ಗಾತ್ರದ ಬುಲ್ ಡಾಗ್ ನಾಯಿಯೊಂದಿತ್ತಂತೆ. ಅವರೆಲ್ಲ ಗೋದಾಮಿನತ್ತ ನಡೆದು ಹೋಗುತ್ತಿರುವಾಗ ಆ ನಾಯಿ ಅಲ್ಲೇ ಮೇಯುತ್ತಿದ್ದ ಹಸುವೊಂದನ್ನು ಕಚ್ಚಿ ಸಾಯಿಸಿಬಿಟ್ಟಿತು! ಈ ಸುದ್ದಿ ಕ್ಷಣಾರ್ಧದಲ್ಲಿ ಊರಲ್ಲಿ ಹಬ್ಬಿತು. ಆ ಹಸುವಾದರೋ ಸಾಮಾನ್ಯದ್ದಲ್ಲ. ಊರ ದೇವಸ್ಥಾನಕ್ಕೆ ಬಿಟ್ಟ ಹಸು! ರೊಚ್ಚಿಗೆದ್ದ ಊರವರೆಲ್ಲ ಸೇರಿ ಆ ಗೋಹಂತಕ ನಾಯಿಯ ಜೊತೆಗೆ ಆ ಎಲ್ಲ 17 ವರ್ತಕರನ್ನು ಹೊಡೆದು ಕೊಂದರಂತೆ!

ಈ ಹಿಸ್ಟರಿಯೇ ಒಂದು ಮಿಸ್ಟರಿ!!

ಲೇಖಕರ ಕಿರುಪರಿಚಯ
ಡಾ. ಗಣೇಶ ಎಂ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಇವರ ಹುಟ್ಟೂರು. ವೃತ್ತಿಯಲ್ಲಿ ಪಶುವೈದ್ಯರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸಾಲ್ಕಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪಶುವೈದ್ಯ ಸಾಹಿತ್ಯ ಲೋಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಇವರ ನಾಲ್ಕು ಕನ್ನಡ ಪುಸ್ತಕಗಳು ಹಾಗೂ ಅನೇಕ ಲೇಖನಗಳು ಪ್ರಕಟಣೆ ಕಂಡಿವೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 22, 2013

ಜಾನುವಾರುಗಳ ಮಧುಮೇಹ - ಕಿಟೋಸಿಸ್ ಕಾಯಿಲೆ

ಅಧಿಕ ಹಾಲು ನೀಡುವ ಮಿಶ್ರತಳಿ ಆಕಳುಗಳನ್ನು ಬಾಧಿಸುವ ಕಾಯಿಲೆಗಳಲ್ಲಿ ಜಾನುವಾರುಗಳ ಮಧುಮೇಹವೆನ್ನಬಹುದಾದ ಕಿಟೋಸಿಸ್ ಕಾಯಿಲೆ ಒಂದು. ಇದು ಮಿಶ್ರ ತಳಿಯ ಆಕಳುಗಳನ್ನು ಕರು ಹಾಕಿದ ಪ್ರಾರಂಭಿಕ ದಿನಗಳಲ್ಲಿ ಅದರಲ್ಲೂ ಆರಂಭದ 6 ವಾರಗಳಲ್ಲಿ ಹಸುಗಳನ್ನು ಸಾಮಾನ್ಯವಾಗಿ ಬಾಧಿಸುವ ಒಂದು ಕಾಯಿಲೆ. ಕರು ಹಾಕುವ ಮೊದಲು ಕೆಲವು ಆಕಳುಗಳಲ್ಲಿ ಇದು ಅಪರೂಪವಾಗಿ ಬರುತ್ತದೆ. ಈ ಕಾಯಿಲೆ ಪ್ರಪಂಚಾದ್ಯಂತ ಎಲ್ಲಾ ಹೆಚ್ಚು ಹಾಲು ಹಿಂಡುವ ಶುದ್ಧ ತಳಿ, ಮಿಶ್ರ ತಳಿ ಜಾನುವಾರುಗಳನ್ನು ಕಾಡುವುದು. ಎಮ್ಮೆಗಳಲ್ಲೂ ಸಹ ಈ ಕಾಯಿಲೆ ಬಹಳ ಸಾಮಾನ್ಯ. ಶರೀರದಲ್ಲಿ ಗ್ಲುಕೋಸ್ ಅಂಶವಿದ್ದರೂ ಸಹ ಅದನ್ನು ಬಳಸಿಕೊಳ್ಳುವಲ್ಲಿ ಆಕಳು ವಿಫಲವಾಗುವುದರಿಂದ ಇದನ್ನು ಜಾನುವಾರುಗಳ ಮಧುಮೇಹವೆನ್ನಬಹುದು.

ಈ ಕಾಯಿಲೆ ಹೇಗೆ ಬರುವುದೆಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಆಕಳು ಕರು ಹಾಕಿದ ಕೂಡಲೇ ಹಾಲು ಉತ್ಪಾದನೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅಗಾಧವಾದ ಪ್ರಮಾಣದಲ್ಲಿ ಶಕ್ತಿಯು ಆಕಳಿನ ಶರೀರದಿಂದ ಬಸಿದು ಹೋಗುತ್ತದೆ. ಇದನ್ನು ಭರಿಸಲು ಆಕಳು ಗರ್ಭ ಧರಿಸಿದ ಸಮಯದಲ್ಲಿ ಅಗಾಧವಾದ ಶಕ್ತಿಯ ಅಂಶವನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿ ಇಡಬೇಕಾಗಿರುತ್ತದೆ. ಕರು ಹಾಕಿದ ಕೂಡಲೇ ಜಾನುವಾರಿನ ಶರೀರದಿಂದ ಹಾಲಿನ ರೂಪದಲ್ಲಿ ಅಗಾಧ ಪ್ರಮಾಣದ ಶಕ್ತಿ ಬಸಿದು ಹೋಗುತ್ತದೆ. ಇದನ್ನು ಆಕಳಿಗೆ ಮೇವಿನ ಅಥವಾ ಹಿಂಡಿಯ ರೂಪದಲ್ಲಿ ನೀಡಿದರೆ ಭರಿಸಲು ಸಾಧ್ಯವಿಲ್ಲ. ಏಕೆಂದರೆ ಇಷ್ಟೊಂದು ಅಹಾರವನ್ನು ಹೊಟ್ಟೆಯಲ್ಲಿ ತುಂಬಿಸಿಕೊಳ್ಳುವ ಅಥವಾ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆಕಳಿಗೆ ಇರುವುದಿಲ್ಲ. ಇದನ್ನು ಭರಿಸಲು ಶರೀರದಲ್ಲಿನ ಕೊಬ್ಬು ಅಥವಾ ಜಿಡ್ಡಿನ ಅಂಶವು ಕರಗಲೇಬೇಕಾಗುತ್ತದೆ. ಕರು ಹಾಕುವ ಮೊದಲೇ ಸಾಕಷ್ಟು ಶಕ್ತಿಯ ಅಂಶವು ಅವಶ್ಯಕ ಪ್ರಮಾಣದ ಕೊಬ್ಬು ಅಥವಾ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗದಿದ್ದಲ್ಲಿ ಹಸುವಿನ ಶರೀರದಲ್ಲಿ ಶಕ್ತಿ ಅಂಶವು ಋಣಾತ್ಮಕವಾಗುತ್ತದೆ. ಕೊಬ್ಬು ಶಕ್ತಿಯ ರೂಪಕ್ಕೆ ಬದಲಾವಣೆಯಾಗಬೇಕಾದಾಗ ಅದರ ಜೊತೆಯೇ ಶರೀರಕ್ಕೆ ಅನವಶ್ಯವಾದ ಕಿಟೋನ್‍ಗಳೆಂಬ ಕಣಗಳೂ ಸಹ ಉತ್ಪನ್ನವಾಗುತ್ತವೆ. ಕಿಟೋನ್ ಕಣಗಳು ಅಸಿಟೋನ್, ಅಸಿಟೋಅಸಿಟೇಟ್ ಮತ್ತು ಬೀಟಾ ಹೈಡ್ರೋಕ್ಸಿಬ್ಯುಟೈರೇಟ್ ರೂಪದಲ್ಲಿರುತ್ತವೆ. ಶರೀರದಲ್ಲಿನ ಕೊಬ್ಬಿನಂಶವೂ ಕಡಿಮೆಯಾಗಿ ಅಹಾರದಲ್ಲಿಯೂ ಸೂಕ್ತ ಶಕ್ತಿಯ ಅಂಶವು ಇರದಿದ್ದರೆ ರಕ್ತದಲ್ಲಿ ಕೀಟೋನ್ ಕಣಗಳ ಅಂಶ ಜಾಸ್ತಿಯಾಗಿ ಕಿಟೋಸಿಸ್ ಕಾಯಿಲೆ  ಬರುತ್ತದೆ. ಈ ಕಾಯಿಲೆಯಲ್ಲಿ ಪಿತ್ತಜನಕಾಂಗವು ಸಹ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆನುವಂಶೀಯತೆ ಸಹ ಈ ಕಾಯಿಲೆಗೆ ಒಂದು ಕಾರಣ.

ಈ ಕಾಯಿಲೆಯಲ್ಲಿ ಮೊದಲು ಜಾನುವಾರು ಮೇವು ತಿನ್ನುವುದನ್ನು ಅದರಲ್ಲೂ ವಿಶೇಷವಾಗಿ ಹಿಂಡಿ ತಿನ್ನುವುದನ್ನು ನಿಲ್ಲಿಸುತ್ತದೆ. ಆದರೆ ಹುಲ್ಲನ್ನು ತಿನ್ನುವುದನ್ನು ಮುಂದುವರೆಸುತ್ತವೆ. ಕೆಲವು ಜಾನುವಾರುಗಳಲ್ಲಿ ನರಮಂಡಲದ ಉದ್ರೇಕವೂ ಸಹ ಕಂಡು ಬರುವುದು. ಇಂತಹ ಸಂದರ್ಭದಲ್ಲಿ ಜಾನುವಾರು ಅದರ ಮೈಯನ್ನು ಅಸಹಜವಾಗಿ ನೆಕ್ಕಿಕೊಳ್ಳುವುದು, ನಡೆದಾಡುವಾಗ ತೊಡರುವುದು, ಅಸಹಜವಾಗಿ ಕೂಗುವುದು ಮತ್ತು ಸುತ್ತು ಹೊಡೆಯುವುದು ಇತ್ಯಾದಿ ಲಕ್ಷಣಗಳನ್ನು ತೋರಿಸಬಹುದು. ಪ್ರಾರಂಭದಲ್ಲಿ ಹಾಲಿನ ಇಳುವರಿ ಸಾಮಾನ್ಯವಾಗೇ ಇದ್ದರೂ ಸಹ ನಂತರ ಕ್ರಮೇಣ ಕಡಿಮೆಯಾಗುತ್ತದೆ. ಶರೀರದಿಂದ ಕೊಬ್ಬಿನಂಶವು ಸೋರಿ ಹೋಗಿ ಆಕಳುಗಳು ಸೊರಗುತ್ತವೆ ಮತ್ತು ದೇಹದ ತೂಕದಲ್ಲಿ ಗಣನೀಯ ಇಳಿಮುಖವಾಗುತ್ತದೆ.

ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಅಂತಹ ಕಷ್ಟವೇನಲ್ಲ. ರೋಗಲಕ್ಷಣಗಳು ಮತ್ತು ಕರುಹಾಕಿರುವ ಸಂಗತಿಯನ್ನು ಗಮನಿಸಿದರೆ ರೋಗವನ್ನು ಪತ್ತೆಹಚ್ಚಬಹುದು. ಆದರೆ ಕೆಲವು ಸಲ ಕರುಹಾಕಿದ 6-8 ವಾರದ ನಂತರವೂ ಸಹ ಈ ಕಾಯಿಲೆ ಬಂದಾಗ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದರೂ ಸಹ ಅಸಾಧ್ಯವೇನೂ ಅಲ್ಲ. ಅಲ್ಲದೇ ಆಕಳಿನ ಮೂತ್ರ ಮತ್ತು ಹಾಲಿನಲ್ಲಿ ಕೀಟೋನ್ ಕಣಗಳ ಪತ್ತೆಯನ್ನು ಪ್ರಯೋಗಶಾಲೆಯಲ್ಲಿ ಮಾಡಬಹುದು. ಆಕಳಿನ ಉಸಿರಿನ ವಾಸನೆ ಕಾಕಂಬಿಯ ವಾಸನೆಯನ್ನು ಹೋಲುತ್ತದೆ.

ತಜ್ಞ ಪಶುವೈದ್ಯರು ಈ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಆಕಳಿಗೆ ರಕ್ತನಾಳದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಗ್ಲುಕೋಸ್ ದ್ರಾವಣ ನೀಡುವ ಮೂಲಕ ಮತ್ತು ಸ್ಟಿರಾಯ್ಡ್ ನೀಡುವ ಮೂಲಕ ಗುಣಪಡಿಸಬಲ್ಲರು. ಆದರೆ ಯುಕ್ತ ಪರಿಣಾಮ ಬರಲು ಐದಾರು ದಿನಗಳ ಕಾಲಾವಕಾಶ ಬೇಕು. ಆದರೆ ಸೂಕ್ತ ಪ್ರಮಾಣದಲ್ಲಿ ಶಕ್ತಿಯ ಅಂಶವನ್ನು ನೀಡುವ ಹಿಂಡಿಯನ್ನು ನೀಡದಿದ್ದಲ್ಲಿ ಕಾಯಿಲೆ ಮರುಕಳಿಸುವ ಸಾಧ್ಯತೆ ಬಹಳ ಇದೆ. ಕೆಲವು ಪ್ರಕರಣಗಳಲ್ಲಿ ತೀವ್ರತರವಾದ ರೋಗಲಕ್ಷಣಗಳು ಇದ್ದಲ್ಲಿ ಗ್ಲುಕೋಸ್ ನೀಡಿದ ನಂತರ ಇನ್ಸುಲಿನ್ ಸಹ ಬೇಕಾದೀತು. ಕೆಲವು ಸಲ 400-500 ಮಿಲಿ ಗ್ಲಿಸರಿನ್‍ನನ್ನು ನಿಧಾನವಾಗಿ ದಿನಕ್ಕೆ ಎರಡು ಸಲ ಮೂರು ದಿನ ಕುಡಿಸಿದಲ್ಲಿ ಪರಿಣಾಮಕಾರಿಯಾಗುತ್ತದೆ. ಎಮ್ಮೆಗಳು ಕರು ಹಾಕುವ ಸಮಯದಲ್ಲಿ ತುಂಬಾ ಕೊಬ್ಬಿದ್ದರೆ ಅವುಗಳಲ್ಲಿ ಈ ಕಾಯಿಲೆ ಬರುವುದು ಜಾಸ್ತಿ. ಎಮ್ಮೆಗಳಲ್ಲಿ ಈ ಕಾಯಿಲೆಯ ಚಿಕಿತ್ಸೆ ಸ್ವಲ್ಪ ಕಷ್ಟವೇ ಸರಿ. ಶರೀರದಲ್ಲಿನ ಕೊಬ್ಬಿನಂಶ ಸಂಪೂರ್ಣವಾಗಿ ಕರಗಿದ ನಂತರ ಅವು ಸಾಮಾನ್ಯ ಪರಿಸ್ಥಿತಿಗೆ ಮರಳುತ್ತವೆ.
ಕಿಟೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಎಮ್ಮೆ

ಎಲ್ಲ ಕಾಯಿಲೆಗಳ ತರಹವೇ ಈ ಕಾಯಿಲೆಯಲ್ಲೂ ಸಹ ಕಾಯಿಲೆಯು ಬರದಂತೆ ತಡೆಯುವುದು ಸೂಕ್ತ. ಆಕಳು ಗರ್ಭಧರಿಸಿದ ಏಳು ತಿಂಗಳುಗಳ ನಂತರ ಅದು ಜಾಸ್ತಿ ಕೊಬ್ಬದಂತೆ ನೋಡಿಕೊಳ್ಳಬೇಕು. ಆದರೆ ಅದಕ್ಕೆ ಪೋಷಕಾಂಶಗಳ ಕೊರತೆಯೂ ಆಗಬಾರದು. ಅದರಲ್ಲೂ ಕರು ಹಾಕುವ 3 ವಾರದ ಮೊದಲು ಜಾನುವಾರುಗಳು ಹಿಂಡಿ ತಿನ್ನುವುದನ್ನು ಕ್ರಮೇಣ ಕಡಿಮೆ ಮಾಡಿದಲ್ಲಿ ಅವು ಕಿಟೋಸಿಸ್ ಕಾಯಿಲೆಗೆ ತುತ್ತಾಗುತ್ತಿವೆ ಎಂದು ತಿಳಿಯಬಹುದು. ಗರ್ಭಧರಿಸಿದ ಜಾನುವಾರುಗಳಿಗೆ 7 ತಿಂಗಳ ನಂತರ ಹಾಲು ಬತ್ತಿಸಿ ಶರೀರದ ನಿರ್ವಹಣೆಗೆ 2 ಕಿಲೋ ಮತ್ತು ಕರುವಿನ ಬೆಳವಣಿಗೆಗೆ 1 ಕಿಲೋ ಸೂಕ್ತ ಗುಣ ಮಟ್ಟದ ಪಶುಆಹಾರವನ್ನು ಉತ್ತಮ ನಾರಿನಂಶ ಹೊಂದಿದ ರಾಗಿ ಹುಲ್ಲು ಅಥವಾ ಜೋಳದ ದಂಟಿನ ಜೊತೆ ನೀಡಬೇಕು. ಕರು ಹಾಕಿದ ಕೂಡಲೇ ಸುಲಭವಾಗಿ ಜೀರ್ಣವಾಗುವಂತಹ ಹೆಚ್ಚಿನ ಶಕ್ತಿ ಅಂಶ ಹೊಂದಿದ ಪಶುಆಹಾರವನ್ನು ನೀಡಬೇಕು. ಅಥವಾ ದಿನಕ್ಕೆ ಎರಡು ಕಿಲೋ ಗೋವಿನ ಜೋಳದ ಹುಡಿಯನ್ನು ಪಶು ಆಹಾರದ ಜೊತೆ ಬೆರೆಸಿ ಕೊಡಬೇಕು. ಅದರಲ್ಲೂ ಆಕಳುಗಳು ಕರು ಹಾಕಿದ ನಂತರ 3-7 ವಾರದ ವರೆಗೆ ಅವುಗಳ ಪೋಷಣೆಯ ಬಗ್ಗೆ ಸೂಕ್ತ ಗಮನ ನೀಡಿದಲ್ಲಿ ಧೀರ್ಘಾವಧಿಯಲ್ಲಿ ಆಗುವ ನಷ್ಟಗಳನ್ನು ತಪ್ಪಿಸಬಹುದು.

ಲೇಖಕರ ಕಿರುಪರಿಚಯ
ಡಾ. ಎನ್. ಬಿ. ಶ್ರೀಧರ

ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿನ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು.

ಸುಮಾರು 100ಕ್ಕೂ ಹೆಚ್ಚು ಕನ್ನಡ ವೈಜ್ಞಾನಿಕ ಲೇಖನಗಳನ್ನು, 4 ಕನ್ನಡ ಪುಸ್ತಕಗಳನ್ನು ಬರೆದಿರುವ ಇವರಿಗೆ ಒಲಿದು ಬಂದ ಪ್ರಶಸ್ತಿಗಳು ಹಲವಾರು.

Blog  |  Facebook  |  Twitter

ಗುರುವಾರ, ನವೆಂಬರ್ 21, 2013

ವೃತ್ತಿ ಕೌಶಲ್ಯ - ಸಧ್ಯದ ಅಗತ್ಯತೆ

'ವೃತ್ತಿ ಕೌಶಲ್ಯ' (ಸಾಫ್ಟ್ ಸ್ಕಿಲ್) ಎಂಬುದು ಬಹುಚರ್ಚಿತ ವಿಷಯ. ಬಹುಶಃ ಅದರ ಅರ್ಥ ಮತ್ತು ಪ್ರಾಮುಖ್ಯತೆಯ ಬಗ್ಗೆ ಇರುವಷ್ಟು ಪ್ರಶ್ನೋತ್ತರಗಳು, ಬೇರೆ ಯಾವ ವಿಷಯದ ಬಗ್ಗೆಯೂ ಇರಲಿಕ್ಕಿಲ್ಲ. ಎಲ್ಲ ಚರ್ಚೆಗಳ ಅಂತಿಮ ನಿರ್ಧಾರವೆಂದರೆ, ಯಾವುದೇ ವೃತ್ತಿನಿರತ ವ್ಯಕ್ತಿಗೆ ವೃತ್ತಿ ಕೌಶಲ್ಯ ಅಗತ್ಯವಾಗಿ ಇರಲೇಬೇಕು ಎಂಬುದು. ಇಲ್ಲಿ ವೃತ್ತಿನಿರತ ವ್ಯಕ್ತಿ ಎಂದರೆ ಕೇವಲ ವೃತ್ತಿಪರ ಅಥವಾ ತಾಂತ್ರಿಕ ಪದವಿ ಹೊಂದಿ ವೃತ್ತಿ ನಡೆಸುತ್ತಿರುವವನಲ್ಲ; ಯಾವುದೇ ವೃತ್ತಿ ನೆಡೆಸುತ್ತಿರುವ ಯಾರೇ ವ್ಯಕ್ತಿ ಆಗಿರಬಹುದು. ಹಾಗಾಗಿ ಆತ/ಆಕೆ ವೈದ್ಯರಾಗಿರಬಹುದು, ಚಾರ್ಟರ್ಡ್ ಅಕೌಂಟೆಂಟ್ ಆಗಿರಬಹುದು, ಗ್ರಾಹಕ ಸೇವಾ ಅಧಿಕಾರಿಯಾಗಿರಬಹುದು, ವಿಮಾನ ಪರಿಚಾರಕಿಯಾಗಿರಬಹುದು ಅಥವಾ ಹೆಸರಿಸುವ ಇನ್ನಾವುದೇ ವೃತ್ತಿಯವರಾಗಿರಬಹುದು.

ನಮ್ಮ ಕ್ಷೇತ್ರದಲ್ಲಿನ ನಮ್ಮ ಅನುಭವ ಮತ್ತು ಪರಿಣಿತಿ, ನಮ್ಮ ವೃತ್ತಿ 'ಏನು' ಎಂಬುದನ್ನು ಮಾತ್ರ ತಿಳಿಸಿಕೊಡುತ್ತದೆ; ಆದರೆ ವೃತ್ತಿ ಕೌಶಲ್ಯವು ನಮ್ಮ ವೃತ್ತಿ 'ಹೇಗೆ' ಎಂಬುದನ್ನು ಕಲಿಸಿಕೊಡುತ್ತದೆ. ಅಂದರೆ, ಅದು ನಾವು ನಮ್ಮ ವೃತ್ತಿಯನ್ನು ಹೇಗೆ ಮಾಡುತ್ತೇವೆ? ಅದರಲ್ಲಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಂಡಿದ್ದೇವೆ? ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ? ಸಮಯದ ನಿರ್ವಹಣೆ ಹೇಗೆ ಮಾಡುತ್ತಿದ್ದೇವೆ? ಇತರರ ಎದುರಿಗೆ ನಮ್ಮನ್ನು ನಾವು ಹೇಗೆ ಪ್ರದರ್ಶಿಸಿಕೊಳ್ಳುತ್ತಿದ್ದೇವೆ ಹಾಗೂ ನಮ್ಮ ವೃತ್ತಿಯನ್ನು ಹೇಗೆ ಇತರರ ಮುಂದಿಡುತ್ತಿದ್ದೇವೆ? ಇತ್ಯಾದಿ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಆದ್ದರಿಂದ ತನ್ನ ವೃತ್ತಿಯ ಬಗ್ಗೆ 'ಏನು' ಎಂಬುದನ್ನು ಮಾತ್ರ ತಿಳಿದ ಸ್ಥಿತಿ ಅಪೂರ್ಣ; 'ಏನು' ಎಂಬುದರ ಜೊತೆಗೆ ಸರಿಯಾದ 'ಹೇಗೆ' ಎಂಬುದನ್ನು ಅರಿತಾಗ ಮಾತ್ರ ಅದು ಪರಿಪೂರ್ಣ ಮತ್ತು ಅದರಿಂದ ನಿಜವಾದ ವೃತ್ತಿ ಪರಿಣಿತಿ ಸಾಧ್ಯ.

ವೈದ್ಯನೊಬ್ಬ ತನ್ನ ರೋಗಿಯ ರೋಗವನ್ನು ಸ್ಪಷ್ಟವಾಗಿ ಕಂಡುಕೊಂಡು, ಅದಕ್ಕೆ ನಿಖರ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಿದಾಗ ಅತ್ಯುತ್ತಮ ವೈದ್ಯನೆನಿಸಿಕೊಳ್ಳುತ್ತಾನೆ. ಬದಲಿಗೆ ಚಿಕಿತ್ಸೆಯ ಜೊತೆಗೆ, ರೋಗದ ಬಗ್ಗೆ ಅಗತ್ಯ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ತನ್ನ ರೋಗಿಗೆ ನೀಡಿ, ಆತ ಮತ್ತೆ ಆ ರೋಗ ತನ್ನನ್ನು ಆಕ್ರಮಿಸದ ಹಾಗೆ ಎಚ್ಚರಿಕೆ ವಹಿಸುವಂತೆ ಮಾಡಿದರೆ ಅಂತಹ ವೈದ್ಯ ಮಾನವೀಯತೆಯುಳ್ಳ ಶ್ರೇಷ್ಠ ವೈದ್ಯನೆನಿಸಿಕೊಳ್ಳುತ್ತಾನೆ. ಒಬ್ಬ ಸಾಫ್ಟ್-ವೇರ್ ಇಂಜಿನಿಯರ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಪ್ರಗತಿಗೆ ಅತ್ಯಂತ ಸೂಕ್ತವಾದ ಪ್ರೋಗ್ರಾಂ ತಯಾರಿಸಿಕೊಟ್ಟಾಗ ಅವನೊಬ್ಬ ಅತ್ಯುತ್ತಮ ಇಂಜಿನಿಯರ್ ಎನಿಸಿಕೊಳ್ಳುತ್ತಾನೆ. ಬದಲಿಗೆ ಆತ ತಾನು ತಯಾರಿಸಿದ ಪ್ರೋಗ್ರಾಂ ಬಗ್ಗೆ ಅದನ್ನು ಬಳಸುವವರು ಸ್ಪಷ್ಟವಾಗಿ ಅರ್ಥೈಸಿಕೊಂಡು ಸುಲಭವಾಗಿ ಬಳಸುವಂತೆ ತಿಳಿಸಿಕೊಟ್ಟರೆ ಅವನೊಬ್ಬ ಶ್ರೇಷ್ಠ ಇಂಜಿನಿಯರ್ ಆಗುತ್ತಾನೆ. ಹೀಗೆ ವೃತ್ತಿ ಕೌಶಲ್ಯವು ನಮ್ಮ ವೃತ್ತಿ ಜೀವನದಲ್ಲಿ ವಹಿಸುವ ಪಾತ್ರದ ಪ್ರಾಮುಖ್ಯತೆ ಹಾಗೂ ಅದು ಮಾಡಬಲ್ಲ ಪವಾಡ ಸದೃಶ ಬದಲಾವಣೆಗಳನ್ನು ಹೆಚ್ಚಾಗಿ ವಿವರಿಸುವ ಅಗತ್ಯ ಖಂಡಿತ ಇಲ್ಲ.

ವೃತ್ತಿ ಕೌಶಲ್ಯವು ವೃತ್ತಿಜೀವನದಲ್ಲಿ ನಮ್ಮ ವ್ಯಕ್ತಿತ್ವವು ಪ್ರಜ್ವಲಿಸುವಂತೆ ರೂಪಿಸಲು ಅಗತ್ಯವಿರುವ ಎಲ್ಲ ಅಂಶಗಳನ್ನೊಳಗೊಂಡಿದ್ದು, ನಮ್ಮ ಕ್ಷೇತ್ರದಲ್ಲಿ ನಾವು ಇತರರಿಗಿಂತ ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ವೃತ್ತಿ ಕೌಶಲ್ಯಗಳೆಂದರೆ ಸಹೋದ್ಯೋಗಿಗಳೊಂದಿಗೆ ಸಾಮರಸ್ಯ ವರ್ಧನೆ, ಉತ್ಕೃಷ್ಟ ಸಂವಹನಾ ಸಾಮರ್ಥ್ಯ, ಸಭ್ಯತೆ ಮತ್ತು ಶಿಷ್ಟಾಚಾರದ ನಡೆ-ನುಡಿ ಹಾಗೂ ಯಥೋಚಿತ ಸಾಮಾಜಿಕ ಸಾಂಸ್ಕೃತಿಕ ಅರಿವು. ಅಲ್ಲದೆ ಅದು ಸಮಯ ಪರಿಪಾಲನೆ, ಒತ್ತಡ ಪರಿಸ್ಥಿತಿಗಳ ನಿರ್ವಹಣೆ, ಬಿನ್ನಾಭಿಪ್ರಾಯಗಳ ನಿಭಾಯಿಸುವಿಕೆ, ಇತರರನ್ನು ಕ್ರಿಯಾಶೀಲತೆಗೆ ಪ್ರೇರೇಪಿಸುವುದು, ನಾಯಕತ್ವ ವಹಿಸುವುದು ಇತ್ಯಾದಿ ಅನೇಕ ಅಂಶಗಳನ್ನೊಳಗೊಂಡಿದೆ. ಜೊತೆಗೆ ಕ್ಷಿಪ್ರವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಚಾಕಚಕ್ಯತೆ, ವಿಶ್ಲೇಷಣಾ ಸಾಮರ್ಥ್ಯ, ಸಮಸ್ಯೆಗಳನ್ನು ಪರಿಹರಿಸುವ ಜಾಣ್ಮೆ, ಸೃಜನಶೀಲತೆ ಇತ್ಯಾದಿ ಕುಶಲತೆಗಳನ್ನೂ ತನ್ನಲ್ಲಿ ಅಡಗಿಸಿಕೊಂಡಿದೆ.

ಇವೆಲ್ಲವೂ ಯಾವುದೇ ವೃತ್ತಿಗೆ ಅತ್ಯಗತ್ಯ ಕೌಶಲ್ಯಗಳೆಂದು ಎಲ್ಲರೂ ಒಪ್ಪಿದರೂ, ನಮ್ಮ ದುರದೃಷ್ಟವೆಂದರೆ ಇವುಗಳನ್ನು ಯಾವುದೇ ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಕಲಿಸುವ ಅಥವಾ ಅವುಗಳಿಗೆ ನಮ್ಮನ್ನು ಸಿದ್ಧಪಡಿಸುವ ಪ್ರಯತ್ನಗಳಾಗುತ್ತಿಲ್ಲ. ವಾಸ್ತವವಾಗಿ ನಮ್ಮ ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇತರರೊಂದಿಗಿನ ನಮ್ಮ ವರ್ತನೆಗಳು ಈ ವೃತ್ತಿ ಕೌಶಲ್ಯಗಳಿಗೆ ತರಬೇತಿ ನೀಡುತ್ತವೆ ಹಾಗೂ ನಮ್ಮನ್ನು ಯಶಸ್ವೀ ವೃತ್ತಿ ಜೀವನಕ್ಕೆ ಸಿದ್ಧಪಡಿಸುತ್ತವೆ. ಈ ತರಬೇತಿಯನ್ನು ನಾವು ಹೊಂದಲು ಬೇಕಾಗಿರುವುದು ನಮ್ಮ ಸುತ್ತಲಿನ ಜನರನ್ನೂ, ಅವರ ನಡೆ-ನುಡಿಗಳನ್ನೂ, ಅವರಲ್ಲಿ ನಡೆಯುವ ಸಂವಹನಾ ಕ್ರಿಯೆಗಳನ್ನೂ, ಪ್ರಚೋದನೆ-ಪ್ರತಿಕ್ರಿಯೆಗಳನ್ನೂ ಅರ್ಥಪೂರ್ಣವಾಗಿ ಗಮನಿಸುವುದು ಮತ್ತು ಗ್ರಹಿಸುವುದು ಹಾಗೂ ಅವುಗಳಲ್ಲಿ ಸಕಾರಾತ್ಮಕವಾದವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದು. ಒಂದರ್ಥದಲ್ಲಿ ಹೇಳುವುದಾದರೆ ಯಾವುದಾದರೊಂದು ಉತ್ಪನ್ನಕ್ಕೆ ಜಾಹೀರಾತು ಏನನ್ನು ಮಾಡುತ್ತದೆಯೋ ಅದನ್ನು ವೃತ್ತಿ ಕೌಶಲ್ಯವು ನಮ್ಮ ವ್ಯಕ್ತಿತ್ವಕ್ಕೆ ನೀಡುತ್ತದೆ. ಹಾಗಾಗಿ ವೃತ್ತಿ ಕೌಶಲ್ಯವು ಸಧ್ಯದ ಅಗತ್ಯತೆಯಾಗಿದೆ.

ಲೇಖಕರ ಕಿರುಪರಿಚಯ
ಶ್ರೀಮತಿ ರಮಾ ಸತೀಶ್

ಆಂಗ್ಲ ಸಾಹಿತ್ಯ ಐಚ್ಚಿಕ ವಿಷಯವಾಗಿ ಎಂ.ಫಿಲ್. ಪದವಿ ಹೊಂದಿರುವ ಇವರು ಪ್ರಸ್ತುತ ಬೆಂಗಳೂರಿನ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಂಶುಪಾಲರಾಗಿ ಕರ್ತ್ಯವ್ಯ ನಿರ್ವಹಿಸುತ್ತಿದ್ದಾರೆ.

ಐತಿಹಾಸಿಕ ಸ್ಥಳಗಳಿಗೆ ಪ್ರವಾಸ, ಕಾದಂಬರಿ ಓದುವುದು, ಪದಬಂಧ ಬಿಡಿಸುವುದು ಹಾಗೂ ಸಂಗೀತ ಆಲಿಸುವುದು ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

ಬುಧವಾರ, ನವೆಂಬರ್ 20, 2013

ಕನ್ನಡ ಮತ್ತು ಉಪಭಾಷೆಗಳು

ಕನ್ನಡ ನಾಡು ಬಹಳ ವಿಶಾಲವಾಗಿದ್ದು, ಕನ್ನಡ ಭಾಷೆಯು ಸಾಕಷ್ಟು ವಿಸ್ತಾರವಾದ ಭೂಪ್ರದೇಶದಲ್ಲಿ ಬಳಕೆಯಲ್ಲಿದೆ. ವಿವಿಧ ಸಾಮಾಜಿಕ ವರ್ಗದ ಜನರು ಇದನ್ನು ಬಳಸುತ್ತಾ ಬಂದಿದ್ದಾರೆ. ಅನ್ಯಭಾಷಾ ಸಂಸರ್ಗವಿದ್ದರೂ, ಅನ್ಯ ನಾಗರೀಕತೆಗಳು ಮತ್ತು ಸಂಸ್ಕೃತಿಗಳ ಪ್ರಭಾವವಿದ್ದರೂ ಸಹ ಕಾಲಕಾಲಕ್ಕೆ ಕನ್ನಡ ಉತ್ಕೃಷ್ಟ ಭಾಷೆಯಾಗಿ ಬೆಳೆಯುತ್ತಾ ಬಂದಿದೆ.

ಕನ್ನಡ ಭಾಷೆಯಲ್ಲಿ ಉಪಭಾಷೆಗಳು ಅಥವಾ ಒಳಭೇದಗಳು ಇಂದು ಹುಟ್ಟಿಕೊಂಡಿಲ್ಲ. ಕನ್ನಡ ಗ್ರಾಂಥಿಕ ರೂಪವನ್ನು ಪಡೆದಾಗಿನಿಂದ ಕನ್ನಡಿಗರ ಮನಸ್ಸಿನಲ್ಲಿ ಅದು ಬೇರುಬಿಟ್ಟಿದೆ. ಕವಿರಾಜಮಾರ್ಗದ ಕೇಶಿರಾಜ ಕನ್ನಡದ ಉಪಭಾಷೆಗಳ ಅಸ್ತಿತ್ವವನ್ನು ಗುರುತಿಸಿದ್ದಾನೆ. ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ್ದ ಅಂದಿನ ಕನ್ನಡ ನಾಡಿನಲ್ಲಿ ಹಲವಾರು ಉಪಭಾಷೆಗಳಿದ್ದರೆ ಆಶ್ಚರ್ಯವಿಲ್ಲ.

ಒಂದು ಭಾಷೆ ಮತ್ತು ಅದರ ಉಪಭಾಷೆಗಳಿಗಿರುವ ವ್ಯತ್ಯಾಸವನ್ನು ತಿಳಿಸುವುದು ಕಷ್ಟ ಹಾಗೂ ಅದು ಅತಿ ಸೂಕ್ಷ್ಮವಾದದ್ದು. ಉಪಭಾಷೆ ಅಥವಾ ಒಳಭೇದ ಎನ್ನುವುದು ಭಾಷಾಶಾಸ್ತ್ರಜ್ಞರಿಂದ ಉಪಯೋಗಿಸಲಟ್ಟ ಪಾರಿಭಾಷಿಕ ಶಬ್ದವಷ್ಟೆ. ಸಾಮಾನ್ಯ ಅರ್ಥದಲ್ಲಿ ಒಳಭೇದಗಳನ್ನೆಲ್ಲಾ ಭಾಷೆಗಳೆಂದೇ ಕರೆಯಲಾಗುತ್ತದೆ.

ಯಾವುದೇ ಭಾಷೆಯಲ್ಲಿ ನಾವು ಏಕರೂಪತೆ ಹಾಗೂ ಕೆಲವು ಸಾಮಾನ್ಯ ಲಕ್ಷಣಗಳನ್ನು ಗುರುತಿಸಬಹುದು. ಜನ ಸಂಪರ್ಕ ಎಷ್ಟೆಷ್ಟು ಹೆಚ್ಚಾಗಿರುತ್ತದೋ ಅಷ್ಟು ಏಕರೂಪತೆ ಇರುತ್ತದೆ. ಸಂಪರ್ಕ ಕಡಿಮೆಯಾದಂತೆ ವ್ಯತ್ಯಾಸಗಳು ಜಾಸ್ತಿಯಾಗುತ್ತಾ ಹೋಗುತ್ತವೆ. ಮನುಷ್ಯ ಅನುಕರಣಾಶೀಲ, ಕ್ರಮೇಣ ವ್ಯತ್ಯಾಸಗಳೇ ಹೆಚ್ಚಾಗಿ, ಸಾಮ್ಯತೆ ಏಕರೂಪತೆ ಕಡಿಮೆಯಾಗಿ ಅದೇ ಪ್ರತ್ಯೇಕ ಭಾಷೆ ಎನ್ನುವಂತೆ ಕಾಣತೊಡಗುತ್ತದೆ. ಅದನ್ನೇ ನಾವು 'ಉಪಭಾಷೆ' ಎಂದು ಕರೆಯುತ್ತೇವೆ.

ಉಪಭಾಷೆಗಳಲ್ಲಿ ಎರಡು ವಿಧ - ಪ್ರಾದೇಶಿಕ ಉಪಭಾಷೆ ಹಾಗೂ ಸಾಮಾಜಿಕ ಉಪಭಾಷೆ.

ಪ್ರಾದೇಶೀಕ ಉಪಭಾಷೆ: ಈ ಉಪಭಾಷೆ ರೂಪುಗೊಳ್ಳಲು ಭೌಗೋಳಿಕ ಕಾರಣಗಳು, ರಾಜಕೀಯ ಕಾರಣಗಳು ಹಾಗೂ ಅನ್ಯಭಾಷಾ ಸಂಸರ್ಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಿಂದಿನಿಂದಲೂ ಕನ್ನಡ ನಾಡು ಒಂದೇ ಅಧಿಪತ್ಯಕ್ಕೆ ಒಳಪಟ್ಟಿರಲಿಲ್ಲ. ಹಲವು ಭಾಗಗಳಾಗಿ ಹಂಚಿಹೋಗಿತ್ತು. ಮೈಸೂರು ಅಧಿಪತ್ಯದ ಕನ್ನಡಿಗರು, ಮದ್ರಾಸು ಅಧಿಪತ್ಯದ ಕನ್ನಡಿಗರು, ಬೊಂಬಾಯಿ ಅಧಿಪತ್ಯದ ಕನ್ನಡಿಗರು, ಹೈದರಾಬಾದು ಅಧಿಪತ್ಯದ ಕನ್ನಡಿಗರು.. ಹೀಗೆ ರಾಜಕೀಯ ಕಾರಣಗಳಿಂದ ತುಂಡಾಗಿದ್ದ ಆಯಾ ಗಡಿಭಾಷೆಯ ಪ್ರಭಾವದಿಂದ ಒಂದೇ ಭಾಷೆಯು ಉಪಭಾಷೆಗಳಾಗಿ ಕಾಣಿಸಿಕೊಂಡವು.

ಸಾಮಾಜಿಕ ಉಪಭಾಷೆ: ಒಂದೊಂದು ಸಮುದಾಯಕ್ಕೆ ಸೇರಿದ ಜನರು ಪ್ರತ್ಯೇಕ ಗುಂಪುಗಳಾಗಿ, ಅವರಲ್ಲಿನ ಒಡನಾಟದಿಂದ ಅವರ ಭಾಷೆಯಲ್ಲಿ ಕಾಣುವ ವಿಶಿಷ್ಟತೆಯು ಕ್ರಮೇಣ ಉಪಭಾಷೆಯಾಗಿ ಬಳಕೆಯಾಗಬಹುದು. ಕನ್ನಡದಲ್ಲಿ ಸಾಮಾಜಿಕ ಉಪಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ನಡೆಯುತ್ತಿದೆ.

ಕನ್ನಡದಲ್ಲಿ ಮುಖ್ಯವಾಗಿ ನಾಲ್ಕು ಉಪಭಾಷೆಗಳನ್ನು ಗುರುತಿಸಬಹುದು: ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು / ಕರಾವಳಿ ಕನ್ನಡ ಮತ್ತು ಹೈದರಾಬಾದ್ / ಗುಲ್ಬರ್ಗಾ / ಕಲ್ಯಾಣ ಕನ್ನಡ.

1. ಮೈಸೂರು ಕನ್ನಡ: ಮೈಸೂರು, ಚಾಮರಾಜನಗರ, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ 'ಮೈಸೂರು ಕನ್ನಡ' ಪ್ರಾದೇಶಿಕ ಉಪಭಾಷೆಯನ್ನು ಗುರ್ತಿಸಬಹುದು. ಮೈಸೂರು ಕನ್ನಡ ಗ್ರಾಂಥಿಕ ಭಾಷೆಗೆ ಸ್ವಲ್ಪ ಹತ್ತಿರವಾಗಿದೆ.

2. ಧಾರವಾಡ ಕನ್ನಡ: ಉತ್ತರ ಕರ್ನಾಟಕವು ಕ್ರಿ. ಪೂ. ಮೂರನೇ ಶತಮಾನದಿಂದ ದಕ್ಷಿಣ ಕರ್ನಾಟಕಕ್ಕಿಂತ ಬೇರೊಂದು ರಾಜಕೀಯ ಆಡಳಿತಕ್ಕೊಳಪಟ್ಟಿತ್ತು. ಧಾರವಾಡ ಕನ್ನಡದಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ ಹಾಗೂ ಇದು ಗ್ರಂಥಸ್ತ ಕನ್ನಡ ಭಾಷೆಗೆ ದೂರವಿರುವುದನ್ನು ಗಮನಿಸಬಹುದು.

ಕನ್ನಡ ಭಾಷೆಯ ಪ್ರಾಂತ್ಯ ಭೇದಗಳ ಸ್ವರೂಪವನ್ನು ತಿಳಿಯಲು ಮೈಸೂರು ಮತ್ತು ಧಾರವಾಡ ಉಪಭಾಷೆಗಳನ್ನು ತೌಲನಿಕವಾಗಿ ನೋಡಬಹುದು. ಮೈಸೂರು ಪ್ರಾಂತ್ಯದಲ್ಲಿ 'ಎ'ಕಾರಾಂತವಾಗಿ ಉಚ್ಛರಿಸಲ್ಪಡುವ ಶಬ್ಧಗಳು ಧಾರವಾಡ ಪ್ರಾಂತ್ಯದ ಉಚ್ಛಾರಣೆಯಲ್ಲಿ 'ಇ'ಕಾರಾಂತವಾಗುತ್ತದೆ. ಉದಾ: ಮನೆ – ಮನಿ; ಆನೆ – ಆನಿ. ಮೈಸೂರು ಕನ್ನಡದ ವ್ಯಂಜನಾಂತ ಪದಗಳಿಗೆ 'ಉ' ಎಂದಾದರೆ, ಧಾರವಾಡ ಕನ್ನಡದಲ್ಲಿ 'ಅ' ಎಂದಾಗುತ್ತದೆ. ಉದಾ: ಬಟ್ಟಲು - ಬಟ್ಟಲ; ಇಂಗ್ಲೆಂಡು – ಇಂಗ್ಲೆಂಡ; ಕಾಲೇಜು – ಕಾಲೇಜ. ಮೈಸೂರು ಹಾಗೂ ಧಾರವಾಡ ಕನ್ನಡಗಳಲ್ಲಿ ಅರ್ಥ ವ್ಯತ್ಯಾಸಗಳನ್ನೂ ಕಾಣಬಹುದು. ಮೈಸೂರು ಕನ್ನಡದಲ್ಲಿ 'ತಿಂಡಿ' ಎಂದರೆ 'ಆಹಾರ' ಎಂದರ್ಥ, ಧಾರವಾಡ ಕನ್ನಡದಲ್ಲಿ 'ನವೆ', 'ಕಡಿತ' ಎಂಬರ್ಥಗಳಿವೆ. ಧಾರವಾಡ ಕನ್ನಡದಲ್ಲಿ ಪದಮಧ್ಯದ 'ಎ' ಕಾರ 'ಯ' ಕಾರವಾಗುತ್ತದೆ. ಉದಾ: ಮೇಲೆ – ಮ್ಯಾಲೆ; ಪೇಟೆ - ಪ್ಯಾಟೆ.

ಚಿತ್ರ : ಸಾಮ್ರಾಟ್; ಕೃಪೆ : YouTube

3. ಮಂಗಳೂರು ಕನ್ನಡ: ಕರ್ನಾಟಕ ಏಕೀಕರಣಕ್ಕೆ ಮೊದಲು ದಕ್ಷಿಣ ಕನ್ನಡ ಮದ್ರಾಸು ಪ್ರಾಂತ್ಯಕ್ಕೆ ಒಳಪಟ್ಟಿದ್ದರಿಂದ, ಮಲೆಯಾಳಂ, ತುಳು ಹಾಗೂ ಕೊಂಕಣಿ ಭಾಷೆಗಳ ಪ್ರಭಾವವಿದೆ. ಮಂಗಳೂರು ಪ್ರಾಂತ್ಯದ ಜನ ಗ್ರಾಂಥಿಕ ಕನ್ನಡವನ್ನೇ ಸಾಮಾನ್ಯವಾಗಿ ಬಳಸುತ್ತಾರೆ. ಇದು ಗ್ರಂಥಸ್ತ ಕನ್ನಡ ಭಾಷೆಗೆ ಬಹಳ ಹತ್ತಿರವಾಗಿದ್ದರೂ ಕೆಲವು ವಿಶಿಷ್ಟ ಪದಬಳಕೆಯನ್ನು ಕಾಣುತ್ತೇವೆ. ಉದಾ: ಸಪೂರು – ಗುಟ್ಟು; ಬೈಸಾರೆ - ಸಂಜೆ; ಹಸಿರುವಾಣಿ – ತರಕಾರಿ; ತೋರ – ದಪ್ಪ. ತುಳುವಿನ ಪ್ರಭಾವದಿಂದ 'ಮಾರಾಯರೆ' ಎಂಬ ಪದದ ಬಳಕೆ ಹೆಚ್ಚಾಗಿ ಬಳಕೆಯಾಗುತ್ತದೆ. 'ಎಂಥದ್ದು', 'ಉಂಟು', 'ಅಲ್ಲವೋ' ಎಂಬ ಪದಗಳೂ ಹೆಚ್ಚು ಬಳಕೆಯಲ್ಲಿವೆ.

4. ಹೈದರಾಬಾದ್ ಕನ್ನಡ: ಬೀದರ್, ಗುಲ್ಬರ್ಗಾ, ವಿಜಾಪುರ ಜಿಲ್ಲೆಯ ಪೂರ್ವಭಾಗ, ರಾಯಚೂರು ಇಲ್ಲಿ ಹೈದರಾಬಾದ್ ಕನ್ನಡ ಬಳಕೆಯಲ್ಲಿದೆ. ಇದು ಆದಿಲ್-ಷಾಹಿ ಆಡಳಿತಕ್ಕೆ ಒಳಪಟ್ಟಿದ್ದರಿಂದ, ಉರ್ದು ಭಾಷೆಯಿಂದ ಹೆಚ್ಚಾಗಿ ಪ್ರಭಾವಿತಗೊಂಡಂತೆ ತೋರುತ್ತದೆ. ಉದಾ: ಉದ್ರಿ - ಸಾಲ; ದೌಡ್ - ಬೇಗ; ಜರಾ - ಸ್ವಲ್ಪ; ಬಿಲ್-ಕುಲ್ – ಖಂಡಿತ. ಇದಲ್ಲದೇ, ಮೂರು ಅಕ್ಷರಗಳುಳ್ಳ ಗುಲ್ಬರ್ಗಾ ಕನ್ನಡದ ಶಬ್ಧಗಳಲ್ಲಿ ಸಾಮಾನ್ಯವಾಗಿ ಎರಡನೇ ಅಕ್ಷರ ಲೋಪವಾಗುತ್ತದೆ. ಉದಾ: ಹೆಂಡತಿ - ಹೆಂಣ್ತಿ; ಅಡಿಕೆ – ಅಡ್ಕಿ; ಬಾಗಿಲು - ಬಾಗ್ಲ.

ಶ್ರೀ ಡಿ. ಎನ್. ಶಂಕರಭಟ್ಟರು ಉಪಭಾಷೆಯ ಬಗ್ಗೆ ಆಳವಾದ ಅಧ್ಯಯನ ಮಾಡಿ ಕನ್ನಡದಲ್ಲಿ ಇನ್ನೂ ಕೆಲವು ಉಪಭಾಷೆಗಳಾದ ಹವ್ಯಕ ಕನ್ನಡ, ಬೆಳ್ಳಾರಿ ಕನ್ನಡ, ನಂಜನಗೂಡು ಕನ್ನಡ ಇತ್ಯಾದಿಗಳ ಅಸ್ತಿತ್ವದ ಸಾಧ್ಯತೆಯನ್ನು ಗುರುತಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.

ಅದೇನೇ ಇದ್ದರೂ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಅನ್ಯಭಾಷೆಗಳ ಪ್ರಭಾವಕ್ಕೊಳಗಾಗಿದ್ದರೂ, ಅನೇಕಾನೇಕ ಉಪಭಾಷೆಗಳಿದ್ದರೂ, ಕಾಲಕಾಲಕ್ಕೆ ಶ್ರೀಮಂತವಾಗಿ ಬೆಳೆಯುತ್ತಾ ಬಂದಿದೆ. ಹೀಗೆ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಬನ್ನಿ, ನಾವೆಲ್ಲರೂ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗೋಣ. ಜೈ ಕನ್ನಡ, ಜೈ ಕರ್ನಾಟಕ!

ಲೇಖಕರ ಕಿರುಪರಿಚಯ
ಡಾ. ಪ್ರೇಮ್ ಕುಮಾರ್ ಆರ್.

ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿರುವ ಇವರು, ಪ್ರಸ್ತುತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಲಿತದ್ದು ವಿಜ್ಞಾನದ ವಿಷಯವಾದರೂ ಕನ್ನಡ ನಾಡು ಹಾಗೂ ಕನ್ನಡ ಸಾಹಿತ್ಯದ ಕುರಿತಾಗಿ ಸ್ವಇಚ್ಛೆಯಿಂದ ಓದಿ ತಿಳಿದುಕೊಂಡಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 19, 2013

ನಾರಿ ಎಂಬ ಮಾರಿ

ಭಗವಂತನನ್ನು ಸಂಕೀರ್ತನ ರೂಪದಿಂದ ಸ್ತೋತ್ರ ಮಾಡಿ ಧರ್ಮಪ್ರಚಾರ ಮಾಡುವುದನ್ನು "ಭಾಗವತ ಧರ್ಮ" ಎನ್ನಲಾಗುತ್ತದೆ. ಭಾಗವತ ಧರ್ಮವನ್ನು ಸರಳಗನ್ನಡದಲ್ಲಿ ಪಸರಿಸಿದವರು ಹರಿದಾಸರು. ಅನ್ಯಧರ್ಮೀಯರಾದರೂ ದಾಸಸಾಹಿತ್ಯ ರಚನೆಯ ಮೂಲಕ ಪಾರಮಾರ್ಥದತ್ತ ಮನಹರಿಸಿದವರು ಶ್ರೀ ರಾಮದಾಸರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿಗೆ ಸೇರಿದ ಜೋಳದಹೆಡಿಗೆ ಗ್ರಾಮದಲ್ಲಿ ಮುಸಲ್ಮಾನ ಪಿಂಜಾರ ಮನೆತನದಲ್ಲಿ ದಾಸರು ಜನಿಸಿದರು. ಖಾಜಾಸಾಹೇಬ, ಪೀರಮ್ಮ ದಂಪತಿಗಳ ಮಗ ಬಡೇಸಾಹೇಬ. ಬಡತನದಲ್ಲೂ ವಿದ್ಯಾಭ್ಯಾಸದ ಅನುಕೂಲ ಬಡೇಸಾಹೇಬರಿಗೆ ದೊರೆಯಿತು. ಇಸ್ಲಾಂ ಧರ್ಮೀಯರಾದರೂ, ಹಿಂದೂ ಧರ್ಮದ ವೈದಿಕ ಸಂಪ್ರದಾಯ ಅವರನ್ನು ಆಕರ್ಷಿಸಿತ್ತು. ಉದರ ಪೋಷಣೆಗಾಗಿ ಕುಟುಂಬದೊಡನೆ ಗೋನವಾರಕ್ಕೆ ಬಂದು ನೆಲೆಸಿದರು. ಆ ನಂತರ ಗೋನವಾರದ ರಾಮದಾಸರೆಂದೇ ಹೆಸರಾದರು. ವೈದಿಕ ಸಂಪ್ರದಾಯದ ಗೆಳೆಯರ ಒಡನಾಟದಿಂದ ಸಂಗೀತ, ಭಜನೆ, ಪುರಾಣ ಪ್ರವಚನಗಳ ಪರಿಚಯವಾಯ್ತು. ಚಿತ್ರಕಲೆಯಲ್ಲೂ ರಾಮದಾಸರಿಗೆ ನೈಪುಣ್ಯವಿತ್ತು. ರಾಮಾವಧೂತರು ಬಡೇಸಾಹೇಬರಿಗೆ ಹಿಂದೂ ಧರ್ಮಗ್ರಂಥಗಳ ಜ್ಞಾನವನ್ನು ನೀಡಿದರು. ಶ್ರೀರಾಮನ ಪರಮಭಕ್ತರಾಗಿ, ಅದೇ ಅಂಕಿತದಲ್ಲಿ ಕೃತಿಗಳನ್ನು ರಚಿಸಿ ಗೋನವಾರದ ರಾಮದಾಸರಾದರು.

ದಾಸಕೂಟದ ಪರಂಪರೆಗೆ ಅನುಸಾರವಾಗಿ ರಾಮದಾಸರು ಕೃತಿಗಳನ್ನು ರಚಿಸಿದರು. ಇವರ ಕೃತಿಗಳಲ್ಲಿನ ಪೌರಾಣಿಕ ಪ್ರಜ್ಞೆ ಮೆಚ್ಚುವಂತಹದ್ದು. ದ್ವೈತ ಮತದ ಹರಿ ಸರ್ವೋತ್ತಮ ತತ್ವವನ್ನು ತಮ್ಮ ಕೀರ್ತನೆಗಳಲ್ಲಿ ಪ್ರತಿಪಾದಿಸಿದ್ದಾರೆ. ತಮ್ಮ ಒಂದು ಕೀರ್ತನೆಯಲ್ಲಿ 'ನಾರಿ ಎಂಬ ಮಾರಿ' ಎಂದು ಹೇಳುತ್ತಾ ಅನೇಕ ಪೌರಾಣಿಕ ಪ್ರಸಂಗಗಳನ್ನು ನೆನಪಿಸುತ್ತಾರೆ.

ನಾರ್ಯೆಂಬ ಮಾರಿಯನು ಆರು ನಿರ್ಮಿಸಿದರೋ
ಸೂರೆಗೊಂಡು ಮೂಲೋಕ ಘೋರಿಸುವುದಕಟ        || ಪ ||

ಹರಿಯ ಧರೆಗಿಳಿಸಿತು ಹರನ ಕಾಡಿಗೆಳಸಿತು
ಶಿರವೊಂದನೆಗರಿತು ವರ ಬ್ರಹ್ಮನಕಟ        || 1 ||

ರಂಧ್ರೆಗೊಳಿಸಿತು ದೇವೇಂದ್ರನಂಗಾಂಗವನು
ಚಂದ್ರನ ಮುಖ ಪ್ರಭೆಗೆ ಕುಂದಿಟ್ಟಿತಕಟ        || 2 ||

ಅಸಮ ವಾಲಿಯ ಬಲಕೆ ಮಸಿ ಮಣ್ಣು ಹಾಕಿಸಿತು
ದಶಶಿರನ ವರವಖಿಲ ಪುಸಿಯೆನಿಸಿತಕಟ        || 3 ||

ಹಾರಿಸಿತು ಕೀಚಕನ ಕೌರವನ ಮನೆ ಮುರಿಯಿತು
ಧೀರ ಪಾಂಡವರನು ತಿರಿದುಣಿಸಿತಕಟ        || 4 ||

ನರಕಕ್ಕೆ ತವರಿದನು ಸ್ಮರಿಸಲಳವಲ್ಲೆನೆಗೆ
ಹರಿದರಭಯ ತ್ವರಿತ ವರದ ಶ್ರೀರಾಮ        || 5 ||

ಐದು ದ್ವಿಪದಿಗಳಲ್ಲಿ ಹೆಣ್ಣಿನ ವ್ಯಾಮೋಹದಿಂದ ಹಾಳಾದವರನ್ನು ಕುರಿತು ವಿವರಿಸುತ್ತಾರೆ. ಪರಸ್ತ್ರೀಗೆ ಆಶಿಸಿದವರ ದುರ್ಗತಿಯನ್ನು ಹೇಳುತ್ತಾರೆ. ನಾರಿಯೆಂಬ ಮಾರಿಯನ್ನು ಮೂರುಲೋಕದಲ್ಲೂ ಘೋರ ದುಃಖ ಉಂಟು ಮಾಡುವವಳೆಂದು ಹೇಳುತ್ತಾರೆ.

1. ಭೃಗು ಮುನಿಯು ಶ್ರೀಹರಿಯ ವಕ್ಷಸ್ಥಳಕ್ಕೆ ಕಾಲಿನಿಂದ ಒದ್ದಾಗ ಅಪಮಾನಿತಳಾದ ಲಕ್ಷ್ಮೀದೇವಿಯು ಕೊಲ್ಲಾಪುರಕ್ಕೆ ಬರುತ್ತಾಳೆ. ಅವಳನ್ನು ಹುಡುಕಿಕೊಂಡು ಶ್ರೀಹರಿಯು ಧರೆಗಿಳಿದು ಬರುತ್ತಾನೆ. (ವೆಂಕಟೇಶ ಮಹಾತ್ಮೆ). ದಕ್ಷ ಯಜ್ಞದಲ್ಲಿ ದಗ್ಧಳಾದ ಸತೀದೇವಿಯ ನೆನಪಲ್ಲಿ ಹರನು ಕಾಡಿನಲ್ಲಿ ಅಲೆದಾಡುವು ಪ್ರಸಂಗವನ್ನು ಮತ್ತು ಬ್ರಹ್ಮನ ಐದನೇ ತಲೆಯನ್ನು ಹರನು ಕತ್ತರಿಸಿದ ಪ್ರಸಂಗವನ್ನು ಚಿತ್ರಿಸಿದ್ದಾರೆ.

2. ಗೌತಮ ಋಷಿಗಳ ಪತ್ನಿ ಅಹಲ್ಯೆ. ಈಕೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಗೌತಮರಂತೆ ಮಾರುವೇಷ ಧರಿಸಿ ಬಂದು ಆಕೆಯ ಪಾತಿವ್ರತ್ಯ ಕೆಡಿಸಿದ್ದರಿಂದ ಗೌತಮರಿಂದ ಸಹಸ್ರಾಕ್ಷನಾಗೆಂದು ಶಪಿಸಲ್ಪಡುತ್ತಾನೆ. ಚಂದ್ರದೇವ ಗುರು ಬೃಹಸ್ಪತಿಯ ಪತ್ನಿಯನ್ನು ಅಪಹರಿಸಿದ್ದರಿಂದ ಅವನ ಪ್ರಭೆ ಕುಂದಲೆಂದು ಬೃಹಸ್ಪತಿ ಶಾಪ ನೀಡಿದ ಕಥೆ.

3. ವಾಲಿ ಮಹಾನ್ ಪರಾಕ್ರಮಿ, ತನ್ನ ತಮ್ಮ ಸುಗ್ರೀವನ ಪತ್ನಿಯಾದ ರುಮೆಯನ್ನು ಹೊಂದಿ ಸುಗ್ರೀವನ ಶತೃವಾಗುತ್ತಾನೆ. ರಾಮ ಸುಗ್ರೀವರ ಭೇಟಿಯಾದ ನಂತರ ರಾಮ ವಾಲಿಯನ್ನು ಕೊಲ್ಲುತ್ತಾನೆ. ದಶಕಂಠನಾದ ರಾವಣನು ಬ್ರಹ್ಮಜ್ಞಾನಿಯೂ, ಅನೇಕ ವರಗಳನ್ನು ಪಡೆದವನಾಗಿದ್ದರೂ ಸೀತೆಯನ್ನು ಕದ್ದೊಯ್ದು ರಾಮನಿಂದ ಹತನಾದನು.

4. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯು ವಿರಾಟನ ಅರಮನೆಯಲ್ಲಿ ಸೈರಂಧ್ರಿಯಾಗಿರುತ್ತಾಳೆ. ವಿರಾಟನ ಮೈದುನ ಕೀಚಕ ಅವಳನ್ನು ಬಯಸಿದಾಗ, ಭೀಮನ ಕೈಯಲ್ಲಿ ಮರಣಿಸುತ್ತಾನೆ. ದ್ರೌಪದಿಯ ಕಾರಣದಿಂದಾಗಿ ಕೌರವ ನಾಶವಾಗುತ್ತಾನೆ. ಜಗತ್ತಿನಲ್ಲೇ ಅಸಮ ಪರಾಕ್ರಮಿಗಳಾದ ಪಾಂಡವರು ವನವಾಸ ಅನುಭವಿಸಬೇಕಾಗುತ್ತದೆ.

5. ನಾರಿಯೆನ್ನುವಳು ನರಕಕ್ಕೆ ತವರೆಂದು ದಾಸರು ಹೇಳುತ್ತಾರೆ. ಅದನ್ನು ಸ್ಮರಿಸಲೂ ಶಕ್ಯವಿಲ್ಲವೆಂದು ಹೇಳುತ್ತಾರೆ. ಶ್ರೀರಾಮನು ಭಯ ಹರಿಸಿ ಅಭಯ ನೀಡಲೆಂದು ಪ್ರಾರ್ಥಿಸುತ್ತಾರೆ.

ಇಂತಹ ಅನೇಕ ಕೀರ್ತನೆಗಳನ್ನು ರಾಮದಾಸರು ರಚಿಸಿದ್ದಾರೆ. ರಾಮ ರಹೀಮರನ್ನು ಸಮವಾಗಿ ಭಾವಿಸಿ ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಿದ್ದಾರೆ. ರಾಮದಾಸರ ಕುಲದ ಬಗ್ಗೆ ಪ್ರಶ್ನಿಸಿದಾಗ "ನಳಿನನಾಭನ ಪ್ರೇಮಗಳಿಸುವ ಕುಲ ನಂದು" ಎಂದಿದ್ದಾರೆ.

ಮುಸ್ಲಿಮರಾದರೂ ಸ್ವಂತ ಪ್ರಯತ್ನ, ಸಾಧನೆ ಮುಖಾಂತರ ದಾಸ ಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿದ್ದಾರೆ. ಹರಿ ಕಾರುಣ್ಯಕ್ಕೆ ಶುದ್ಧ ಭಕ್ತಿಯೇ ಸಾಕೆಂಬುದನ್ನು ಸಾಬೀತುಗೊಳಿಸಿದ್ದಾರೆ. ಮತ ಕುಲಗಳನ್ನು ಮೀರಿ ಹಿಂದೂ-ಮುಸಲ್ಮಾನ ಧರ್ಮಗಳ ಐಕ್ಯತೆಯ ಸಂಕೇತವಾಗಿದ್ದಾರೆ.

ಲೇಖಕರ ಕಿರುಪರಿಚಯ
ಶ್ರೀಮತಿ ವಾಣಿಶ್ರೀ ಗಿರೀಶ್

ಬೆಂಗಳೂರಿನ ಎ.ಪಿ.ಎಸ್. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ಇವರು ದಾಸ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ್ದಾರೆ.

ಕನ್ನಡ ಸಾಹಿತ್ಯ ರಚನೆ ಹಾಗೂ ಸಂಗೀತದ ಕಡೆಗೆ ಹೆಚ್ಚಿನ ಒಲವು ತೋರುವ ಇವರ ಅನೇಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

Blog  |  Facebook  |  Twitter

ಸೋಮವಾರ, ನವೆಂಬರ್ 18, 2013

ನಮ್ಮೂರ ಕೆರೆ ತುಂಬಿತು

ಬೆಂಗಳೂರಿನಿಂದ ತಿರುಪತಿಯ ಪಶುವೈದ್ಯಕೀಯ ಕಾಲೇಜಿಗೆ ಬಾಹ್ಯ ಪರೀಕ್ಷಕನಾಗಿ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಹೋಗಿ ಬರುತ್ತಿದ್ದೆ. ಕೋಲಾರ ದಾಟಿ ನರಸಾಪುರದ ಹತ್ತಿರ ಬರುತ್ತಿದ್ದಂತೆ ಬೆಟ್ಟ ಬಂಡೆಗಳ ನಡುವೆ ಇದ್ದ ಪುಟ್ಟದಾದ ಕುರ್ಕಿ ಕೆರೆ ತುಂಬಿತ್ತು. ಕೋಲಾರ ಜಿಲ್ಲೆ ಬರ ಬಂಡೆಗಳ ನಾಡು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ತುಂಬಿ ತುಳುಕುತ್ತಿದ್ದ ಕೆರೆ ನೋಡಿ ಉಲ್ಲಸಿತನಾದೆ. ಬಾಲ್ಯದ ಗೆಳೆಯ ಲಕ್ಷ್ಮೀನಾರಾಯಣನಿಗೆ ಫೋನಾಯಿಸಿ 'ನಮ್ಮೂರ ಕೆರೆ ತುಂಬಿದೆಯೇ?' ಎಂದು ಕೇಳಿದೆ. ಉತ್ತರ ಕೇಳಿ ಇನ್ನಷ್ಟು ಪುಳಕಿತನಾದೆ. 'ಮೊನ್ನೆ ಕೇವಲ ಎರಡು ಗಂಟೆ ಸುರಿದ ಭರ್ಜರಿ ಮಳೆಗೆ ತ್ಯಾವನಹಳ್ಳಿ ಮತ್ತು ಆಲಹಳ್ಳಿ ಕೆರೆಗಳು ಕೋಡಿಹೋದವು' ಎಂದು ಗೆಳೆಯ ಉತ್ತರಿಸಿದ್ದ.

ನಮ್ಮೂರ ಕೆರೆ ತುಂಬಿ ಸುಮಾರು ಮೂವತ್ತು ವರ್ಷಗಳಾಗಿವೆ. ಕೆರೆ ಬತ್ತಿದ್ದರಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನೀರಿನ ಬರ ತಟ್ಟಿದೆ. ಭತ್ತದ ಗದ್ದೆಗಳು ಕಾಣೆಯಾಗಿವೆ. ಭತ್ತ ಬೆಳೆಯುತ್ತಿದ್ದ ಭೂಮಿಯಲ್ಲಿ ರಾಗಿಯನ್ನೋ, ಹುರುಳಿಯನ್ನೋ, ನೀಲಗಿರಿಯನ್ನೋ ಬೆಳೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಜಮೀನನ್ನು ಬೀಡುಬಿಟ್ಟಿದ್ದಾರೆ. ಕೆರೆಯು ಹೂಳಿನಿಂದ ತುಂಬಿಹೋಗಿದೆ. ಕೆರೆಯ ವಿಸ್ತೀರ್ಣವು ನೂರು ಮೀಟರ್ ಅಗಲ ಮತ್ತು ಮುನ್ನೂರು ಮೀಟರ್ ಉದ್ದ. ಇದೊಂದು ಚಿಕ್ಕ ಕೆರೆ. ಈ ವರ್ಷ ತುಂಬಿಬಿಟ್ಟಿದೆ.

ನಮ್ಮೂರು ತ್ಯಾವನಹಳ್ಳಿ. ಈ ಊರಿಗೆ ಈ ಹೆಸರು ಯಾಕೆ ಬಂತು? ನನ್ನ ಚಿಕ್ಕಂದಿನಲ್ಲಿ ಕೇಳಿದ ಹಿನ್ನೆಲೆ ಹೀಗಿತ್ತು: ಊರ ಪೂರ್ವಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಅರ್ಧಚಂದ್ರಾಕಾರವಾಗಿ ಬೆಟ್ಟಸಾಲು ಇದೆ. ಬೆಟ್ಟಸಾಲಿನ ಜೌಗು ಪ್ರದೇಶದಲ್ಲಿರುವುದೇ ತ್ಯಾವನಹಳ್ಳಿ. ಜೌಗಿನಿಂದಾಗಿ ಮಳೆಗಾಲದಲ್ಲಿ ಎಷ್ಟು ತೇವವಿರುತ್ತಿತ್ತೆಂದರೆ ಮನೆಯ ಒರಲುಕಲ್ಲಿನಲ್ಲಿಯೂ ಕೂಡ ನೀರು ಶೇಖರಣೆಯಾಗುತ್ತಿತ್ತಂತೆ. ಆ ಒರಲುಕಲ್ಲಿನ ನೀರಿನಲ್ಲಿ ಹೆಂಗಳೆಯರು ತಮ್ಮ ಮುಖವನ್ನು ನೋಡಿಕೊಂಡು ಹಣೆಯ ಬೊಟ್ಟು ಇಟ್ಟುಕೊಳ್ಳುತ್ತಿದ್ದರಂತೆ. ಈ ತೆರೆನಾದ 'ತೇವದಹಳ್ಳಿ' ಜನರಾಡುವ ಮಾತಿನಲ್ಲಿ ಅಪಭ್ರಂಶವಾಗಿ ಬರುಬರುತ್ತಾ 'ತ್ಯಾವನಹಳ್ಳಿ'ಯಾಗಿದೆ ಎಂಬುದೇ ಊರಿನ ಹೆಸರಿಗೆ ಇರುವ ಒಂದು ಹಿನ್ನೆಲೆ.

ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮೂರಲ್ಲಿ ಮಳೆ ಬಿದ್ದಿದ್ದು ಕರಾರುವಾಕ್ಕು ಮಳೆ. ರಾಗಿ ಬಿತ್ತನೆಗೆ, ಪೈರು ಬೆಳೆಯಲು, ತೆನೆಯೊಡೆಯಲು, ಕಾಳು ಕಟ್ಟಲು ಎಷ್ಟು ಬೇಕೋ ಅಷ್ಟು ಮಾತ್ರ ಕರಾರುವಾಕ್ಕಾದ ಮಳೆ. ಕೆರೆಯ ಮಧ್ಯೆ ದನಕರುಗಳು ಕುಡಿಯಲು ನಿರ್ಮಿಸಿದ್ದ ಒಂದು ಸಣ್ಣ ಗೋಕುಂಟೆಯೂ ಸರಿಯಾಗಿ ತುಂಬುತ್ತಿರಲಿಲ್ಲ. ಊರಿಗೆ ಹೋದಾಗಲೆಲ್ಲಾ ನನ್ನ ಆದ್ಯತೆಯ ಭೇಟಿಯೆಂದರೆ ನಮ್ಮೂರ ಕೆರೆಯನ್ನು ನೋಡಿ ಬರುವುದಾಗಿತ್ತು. ಯಾವುದಾದರೂ ಮಳೆಗೆ ಒಂದಷ್ಟು ನೀರು ಬಂದಿದೆಯೇ? ಗೋಕುಂಟೆಯಾದರೂ ತುಂಬಿದೆಯೇ? ಎಂಬುದನ್ನು ಮನಸ್ಸಿನಲ್ಲಿಯೇ ಅಂದಾಜಿಸಿಕೊಳ್ಳುತ್ತಿದ್ದೆ. ಮಾಯದ ಮಳೆ ಎಂದಾದರೊಮ್ಮೆ ಬಂದೇ ಬರುತ್ತದೆ, ಕೆರೆ ತುಂಬುತ್ತದೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ.

ಕೆರೆಗೆ ನೀರು ಹರಿದುಬರುವ ಕಾಲುವೆಗಳು ಮುಚ್ಚಿಹೋಗಿವೆ. ಕೃಷಿ ಭೂಮಿಯನ್ನು ಹಿಗ್ಗಿಸಿಕೊಳ್ಳುವ ಮನುಷ್ಯನ ದುರಾಸೆಗೆ ಬಸಿ ಕಾಲುವೆಗಳು ಒತ್ತುವರಿಯಾಗಿ ಕಿರಿದಾಗಿವೆ. ಬಿದ್ದ ಮಳೆನೀರು ಅಲ್ಲಲ್ಲೇ ಇಂಗಿಹೋಗುತ್ತದೆ. ಬೇಸಿಗೆಯಲ್ಲೂ ನೀರಿರುತ್ತಿದ್ದ, ಊರ ಸುತ್ತಲೂ ಇದ್ದ ಚಕ್ರಬಾವಿಗಳು ಎಂದೋ ಒಣಗಿಹೋಗಿವೆ. ಪರ್ಷಿಯನ್ ತಾಂತ್ರಿಕತೆಯ ನೀರೆತ್ತುವ ಕಪಿಲೆಗಳು, ಅವುಗಳ ಬೆಳಗಿನ ಹಾಗೂ ಸಂಜೆಯ ಕಿರ್‍ ಗುಟ್ಟುವ ನಿನಾದ ಪ್ರಸ್ತುತ ಪೀಳಿಗೆಗೆ ಸಿಗದಾಗಿದೆ. ಕುಡಿಯುವ ನೀರಿಗೂ ತತ್ವಾರ ಬಂದಿದ್ದರಿಂದ ಎಲ್ಲಿ ನೋಡಿದರೂ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಒಂದು ಸಾವಿರ ಅಡಿಯಿಂದ ಒಂದು ಸಾವಿರದ ಇನ್ನೂರು ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರಷ್ಟೇ ಗಂಗಮ್ಮನ ದರುಶನವಾಗುತ್ತದೆ.

ನಮ್ಮೂರ ಕೆರೆ ತುಂಬಿದೆ ಎಂಬ ಸುದ್ದಿ ಸಿಕ್ಕಾಗ ಅಕ್ಟೋಬರ್ ತಿಂಗಳ ಕೊನೆಯ ಭಾನುವಾರ ತುಂಬಿದ ಕೆರೆಯನ್ನು ನೋಡಿ ಕಣ್ದುಂಬಿಸಿಕೊಳ್ಳಲು ಹೊರಟುನಿಂತೆ. ಬೆಂಗಳೂರಿನಿಂದ ಪೂರ್ವಕ್ಕೆ, ಕೊಂಚ ಈಶಾನ್ಯ ದಿಕ್ಕಿಗೆ ಸುಮಾರು ಅರವತ್ತೈದು ಕಿಲೋಮೀಟರ್ ದೂರವಿರುವ ನಮ್ಮೂರಿಗೆ ಕಾರಿನಲ್ಲಿ ಪಯಣಿಸುವಾಗ ಅದೆಷ್ಟೋ ನೆನಪುಗಳು. ಚಿಕ್ಕವನಾಗಿದ್ದಾಗ, 1970ರ ಸುಮಾರಿಗೆ ಈ ಕೆರೆ ಕಟ್ಟಿದ್ದು ನನಗೆ ನೆನಪಿದೆ. ಕೆರೆಗೆ ಹತ್ತಿರವಿರುವ ಬೆಟ್ಟದಿಂದ ಸಣ್ಣ ಸಣ್ಣ ಬಂಡೆ ಕಲ್ಲುಗಳನ್ನು ಒಂಟಿ ಎತ್ತಿನ ಮರದ ಗಾಡಿಯಲ್ಲಿ ತುಂಬಿಸಿಕೊಂಡು ಬಂದು ಕೆರೆಯ ಏರಿಗೆ ಜೋಡಿಸಿದ್ದು, ಮೊದಲ ಸಲ ಕೆರೆ ತುಂಬಿದಾಗ ದೀಪೋತ್ಸವ ಮಾಡಿದ್ದು, ಊರಿನ ವಯಸ್ಕ ಕಟ್ಟುಮಸ್ತಾದ ಗಂಡಸರು ಕೆರೆಯೊಳಗೆ ಧುಮುಕಿ ಏನನ್ನೋ ಎತ್ತಿ ತಂದಿದ್ದು, ಇತ್ಯಾದಿ ಅರೆಬರೆ ನೆನಪುಗಳು ಸುಳಿದುಹೋದವು. ಐದನೇ ತರಗತಿಯ ಕನ್ನಡ ಪಠ್ಯದಲ್ಲಿದ್ದ 'ಸತಿಯೊಡನೆ ಸಹಗಮನ' ಗದ್ಯ-ಪದ್ಯ ಪಾಠವನ್ನು ಆಲಿಸುವಾಗ, ಮತ್ತೆ ಮತ್ತೆ ಓದಿಕೊಂಡಾಗ, ನಮ್ಮೂರ ಕೆರೆಯ ಕಲ್ಪನೆಯೇ ನನಗಿತ್ತು. ಭಾಗೀರಥಿ ಅಲ್ಲಿ ಬಟ್ಟಲು ತೆಗೆದುಕೊಳ್ಳುವಷ್ಟರಲ್ಲಿ ಕೆರೆ ತುಂಬಿದಂತೆ, ನೀರಿನಲ್ಲಿ ಆಕೆ ಮುಳುಗಿಹೋದಂತೆ, ಕಲ್ಲನಕೇರಿ ಮಲ್ಲನಗೌಡರು ಕಿರಿಸೊಸೆಯನ್ನು ಕೆರೆಗೆ ಹಾರ ಕೊಟ್ಟಂತೆ, ದಂಡಿನಿಂದ ಬಂದ ಗಂಡ ಮಾದೇವರಾಯ ತನ್ನ ಪತ್ನಿ ಭಾಗಿರಥಿಯನ್ನು ಹುಡುಕುತ್ತಾ ಕುದುರೆಯನೇರಿ ಕೆರೆಯ ಏರಿಗೆ ಬಂದು ನಿಂತು, ಕೆರೆಗೆ ಹಾರಿ 'ಸತಿಯೊಡನೆ ಸಹಗಮನ' ಮಾಡಿಕೊಂಡಂತೆ...... ಹೀಗೆ, ಆ ಗದ್ಯ - ಪದ್ಯ ಪಾಠ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿದೆ.

ಇಂತಹ ನನ್ನ ಕೆರೆಯ ಐಕಾನ್ ಆದ ನಮ್ಮೂರ ಕೆರೆ ತುಂಬಿದೆ. ಹೊಲದಲ್ಲಿ, ತೋಟದಲ್ಲಿ ಕೆಲಸ ಮಾಡುವಾಗ ದಣಿವಾರಿಸಿಕೊಳ್ಳಲು ಕೆರೆಯ ನೀರು ಕುಡಿದಿದ್ದೇನೆ. ನೀರು ಖಾಲಿಯಾಗುತ್ತಾ ಬಂದಾಗ ಕೆರೆಯೊಳಗಿನ ಕುಂಟೆಗಳಲ್ಲಿನ ನೀರನ್ನು ಬಸಿದು ತೂಬಿನ ಕಡೆಗೆ ಹರಿಯುವಂತೆ ಮಾಡಿ ಖಾನೆಯಲ್ಲಿದ್ದ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ನೀರು ಕಟ್ಟಿದ್ದೇನೆ. ಮೀನು ಹಿಡಿದಿದ್ದು, ಮೀನಿನ ಮುಳ್ಳಿನಿಂದ ಚುಚ್ಚಿಸಿಕೊಂಡಿದ್ದು, ಏಡಿ ಹಿಡಿದಿದ್ದು, ಅದರಿಂದ ಕಚ್ಚಿಸಿಕೊಂಡಿದ್ದು, ಗದ್ದೆ ಬದುಗಳ ಮೇಲೆ, ಗದ್ದೆ ಬಯಲಿನಲ್ಲಿ ದನಗಳಿಗಾಗಿ ಹುಲ್ಲು ಕೊಯ್ದಿದ್ದು, ಹುಲ್ಲು ಕೊಯ್ಯುವಾಗ ಎಡಗೈ ಬೆರಳುಗಳಿಗೆ ಗಾಯ ಮಾಡಿಕೊಂಡಿದ್ದು...... ಹೀಗೇ ಮಳೆ-ನೀರು-ಕೆರೆ-ಭರ್ತಿ-ಹಸಿರು-ಬದುಕು ಇನ್ನೂ ಏನೇನೋ ನೆನಪುಗಳು, ಕಾರಿನಲ್ಲಿ ದಾರಿ ಸವೆಸುತ್ತಿದ್ದಾಗ.

ವಿಶ್ವಬ್ಯಾಂಕಿನಿಂದ 2002ರಲ್ಲೋ, 2003ರಲ್ಲೋ ಸುಮಾರು ಐನೂರು ಕೋಟಿ ರೂಪಾಯಿಗಳು ಕೆರೆ ಅಭಿವೃದ್ಧಿಗಾಗಿ ಸಿಗಲಿದೆ ಎಂಬ ಸುದ್ದಿ ವೃತ್ತಪತ್ರಿಕೆಗಳಲ್ಲಿತ್ತು. ಆಗ ನಮ್ಮೂರ ಕೆರೆಯೂ ಅಭಿವೃದ್ಧಿಯಾಗಬಹುದೆಂದುಕೊಂಡೆ. ಆಗಲಿಲ್ಲ. ಕೆರೆ ಅಭಿವೃದ್ಧಿ ಸಂಘ ರಚಿಸಿ ಕೆರೆ ಹೂಳೆತ್ತಲು ಶೇ. 50ರಷ್ಟು ಹಣವನ್ನು ಊರಿನವರೇ ನೀಡಬೇಕು ಎಂಬ ನಿಯಮವನ್ನು ಸರ್ಕಾರ ವಿಧಿಸಿದಾಗ ಸ್ಥಳೀಯ ರಾಜಕಾರಣದ ಕಾರಣಗಳಿಗಾಗಿ ಅದು ಸಾಧ್ಯವಾಗಲಿಲ್ಲ ಎನ್ನಬಹುದು.

ಕೆರೆ ಅಭಿವೃದ್ಧಿ ದೂರದ ಕನಸಾಗಿದೆ. ಎಲ್ಲಿ ನೋಡಿದರೂ ನೀಲಗಿರಿ ತೋಪುಗಳಿವೆ. ಬೆಂಗಳೂರಿನಿಂದ ಹೊಸಕೋಟೆ ದಾಟಿ ಕೋಲಾರದ ಕಡೆ ಹೊರಟರೆ ಅಥವಾ ಹೊಸಕೋಟೆಯಿಂದ ಮಾಲೂರಿನ ಕಡೆ ಕ್ರಮಿಸಿದರೆ ಕಣ್ಣು ಕಂಡಷ್ಟು ದೂರವೂ ನೀಲಗಿರಿ ತೋಪುಗಳೇ. ಈ ನೀಲಗಿರಿ ಮರಗಳು ವಾತಾವರಣದ ತೇವಾಂಶವನ್ನೂ ನುಂಗಿಹಾಕಿಬಿಡುತ್ತವೆ. ಇಂತಹ ನೀಲಗಿರಿ ಮರಗಳು ಅಲ್ಲಿ ಮೋಡ ಕೂಡಲು ಬಿಟ್ಟಾವೆಯೇ? ಈ ಬರಬಂಡೆಗಳ ನಾಡಿಗೆ ನೀಲಗಿರಿ ಕಾಲಿಟ್ಟಿದ್ದು 1970 ರ ಸುಮಾರಿಗೆ. ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯವು ನೀಲಗಿರಿ ನೆಡುವುದು ಬೇಡ ಎಂದು ಹೇಳಿದೆಯಂತೆ. ಜಿಲ್ಲಾಡಳಿತವೂ ಹೇಳುತ್ತಿದೆ. ಆದರೆ, ಇರುವ ನೀಲಗಿರಿ ತೋಪುಗಳನ್ನು ಇಲ್ಲವಾಗಿಸಬೇಕಿದೆಯಲ್ಲ!

ಎಂಭತ್ತರ ದಶಕದಲ್ಲಿ 'ನೀಲಗಿರಿ ಮರ, ತರುವುದು ಬರ' ಎಂಬ ಕಾರ್ಟೂನ್ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ರೈತಸಂಘದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ನಿಲುವೂ ಇದೇ ಆಗಿತ್ತು. ಆದರೂ, ನೀಲಗಿರಿಯ ಅಪಾಯಗಳು ಜನರ ಅರಿವಿಗೆ ಬಂದಂತಿಲ್ಲ. ರಾಜಸ್ಥಾನದ ಜಲತಜ್ಞರಾದ ರಾಜೇಂದ್ರಸಿಂಗ್ ಅವರು ಕೋಲಾರಕ್ಕೆ ಬಂದು ಮಾತನಾಡಿಹೋಗಿದ್ದಾರೆ. ಇಲ್ಲಿಯ ಭೂಮಿಗೆ ಜಲಪೂರಣವಾಗಬೇಕಿದೆ. ಕೋಲಾರ ಜಿಲ್ಲೆ ಕೆರೆಗಳ ಜಿಲ್ಲೆ. ಇಲ್ಲಿ ಗಂಗರಸರು ಆಳುತ್ತಿದ್ದಾಗ ಕೆರೆಕುಂಟೆಗಳು ತುಂಬಿ ಹರಿಯುತ್ತಿದ್ದವಂತೆ. ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದೆಂಬ ಸುದ್ದಿಯಿದೆ. ಯಾವ ಯೋಜನೆ, ಪ್ಯಾಕೇಜುಗಳೂ ಇಲ್ಲದ ಕೋಲಾರ ಎಂಬ ಬೆಂಗಾಡಿಗೆ ಇದರ ಪ್ರಥಮ ಪ್ರಯೋಜನ ಸಿಗಲಿ ಎಂಬ ಆಶಯ..... ಹೀಗೆ ಹತ್ತಾರು ಆಲೋಚನೆಗಳು - ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಮ್ಮೂರಿನತ್ತ ಸಾಗುತ್ತಿದ್ದಂತೆ.

ಹಿಂದಿನ ದಿನವೇ ಅಮ್ಮನಿಗೆಂದು ಒಣಹಣ್ಣುಗಳು ಹಾಗೂ ಒಂದಷ್ಟು ತಿನಿಸುಗಳನ್ನು ತೆಗೆದುಕೊಂಡಿದ್ದೆ. ಊರು ತಲುಪಿದ ತಕ್ಷಣ ತಿಂಡಿ ತಿನಿಸುಗಳನ್ನು ಮನೆಯಲ್ಲಿಟ್ಟು ತುಂಬಿದ ಕೆರೆಯನ್ನು ನೋಡುವ ಆತುರದಲ್ಲಿ ನನ್ನ ತಮ್ಮ ಹಾಗೂ ಗೆಳೆಯ ಲಕ್ಷ್ಮಿನಾರಾಯಣನೊಂದಿಗೆ ಅತ್ತ ಹೆಜ್ಜೆ ಹಾಕಿದೆ. ನಮ್ಮೂರ ಕೆರೆ ಕೋಡಿ ಹರಿಯಿತೆಂದರೆ ಅದು ತಲುಪುವುದು ದಕ್ಷಿಣ ದಿಕ್ಕಿನ ಆಲಹಳ್ಳಿ ಕೆರೆಗೆ. ಅದು ಆಳವಾದ ಕೆರೆ. ವಿಸ್ತೀರ್ಣದಲ್ಲಿಯೂ ದೊಡ್ಡ ಕೆರೆ. ಆ ಕೆರೆಯ ದಿಕ್ಕಿನಿಂದ ತಮಟೆಯ ಶಬ್ದ ಕೇಳಿ ಬರುತ್ತಿತ್ತು. ಕೆರೆ ತುಂಬಿದ್ದಕ್ಕೆ ಅಲ್ಲಿ ದೀಪೋತ್ಸವ ನಡೆಯುತ್ತಿತ್ತು.

ಅಂತೂ ಕೆರೆಯ ಬಳಿ ಬಂದೆವು. ಹೂಳು ತುಂಬಿಕೊಂಡಿರುವುದರಿಂದ ಕೆರೆಯ ಮಧ್ಯೆ ಅಲ್ಲಲ್ಲಿ ದಿಬ್ಬದ ರೀತಿಯಲ್ಲಿ ಬೆಳೆದುನಿಂತ ಗಿಡಗಂಟಿಗಳು. ಹಿನ್ನೀರಿನಲ್ಲಿ ಬಂಡೆಯ ಮೇಲೆ ಕುಳಿತು ಬಟ್ಟೆ ಒಗೆಯುತ್ತಿರುವ ಮಹಿಳೆಯರು. ಮೂವತ್ತು ವರ್ಷಗಳಿಂದ ಮರೆಯಾಗಿದ್ದ ದೃಶ್ಯ ಅದು. ಕೆರೆಯ ಏರಿ ಮೇಲೆ ಬೆಳೆದು ನಿಂತ ಪೊದೆಗಳು. ಸವೆದುಹೋದ ಏರಿ. ಹೀಗಿದ್ದರೂ ತುಂಬಿದ ಕೆರೆ. ನಾನಂತೂ ಸಂತಸದಲ್ಲಿ ತೇಲಿಹೋದೆ. ಸೋನಿ ಕ್ಯಾಮೆರಾದಲ್ಲಿ ಹತ್ತಾರು ಚಿತ್ರಗಳನ್ನು ಕ್ಲಿಕ್ಕಿಸಿದೆ. ಸ್ಥಿರಚಿತ್ರಗಳ ಖುಷಿ ಸಾಲದೆಂಬಂತೆ ಹತ್ತು-ಹದಿನೈದು ನಿಮಿಷಗಳ ಒಂದು ವಿಡಿಯೋ ಕೂಡ ಮಾಡಿಕೊಂಡೆ. ಕೆರೆಯ ನೀರನ್ನು ಮುಟ್ಟಿ ನಮಸ್ಕರಿಸಿದೆ. ಬೊಗಸೆಯಷ್ಟು ನೀರು ಕುಡಿದೆ. ಒಂದೆರಡು ಗಂಟೆ ಕಾಲ ಕಳೆದಿದ್ದಾಯಿತು. ಅಲ್ಲಿಂದ ಹೊರಡಲು ಮನಸ್ಸಾಗಲಿಲ್ಲ. ಬೆಂಗಳೂರು ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದ. ದಿನದ ಆಹಾರದ ಬೇಟೆ ಮುಗಿಸಿದ ಬೆಳ್ಳಕ್ಕಿಗಳ ಹಿಂಡು ಉತ್ತರದಿಂದ ದಕ್ಷಿಣ ದಿಕ್ಕಿಗೆ ತಮ್ಮ ನೆಲೆಗಳತ್ತ ಸಾಲು ಸಾಲಾಗಿ ಹಾರುತ್ತಿದ್ದವು. ಇನ್ನು ವಾಪಸ್ಸು ಹೊರಟು ಬೆಂಗಳೂರಿನ ಗೂಡು ಸೇರಿಕೊಳ್ಳುವುದು ನಮ್ಮ ಮುಂದಿನ ಗುರಿಯಾಯ್ತು.

ಲೇಖಕರ ಕಿರುಪರಿಚಯ
ಡಾ. ಎಂ. ನಾರಾಯಣ ಸ್ವಾಮಿ

ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿನ ಪ್ರಾಣಿ ಶರೀರ ಕ್ರಿಯಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಇವರು ಮೂಲತಃ ಕೋಲಾರ ಜಿಲ್ಲೆಯವರು.

ಕನ್ನಡ ಭಾಷೆಯ ಮೇಲಿನ ಇವರ ಹಿಡಿತ ಅಪೂರ್ವವಾಗಿದ್ದು, ಕನ್ನಡದಲ್ಲಿ ಎರಡು ಪುಸ್ತಕಗಳು ಹಾಗೂ ಅನೇಕ ಲೇಖನಗಳು ಇವರ ಲೇಖನಿಯಿಂದ ಮೂಡಿಬಂದಿವೆ.

Blog  |  Facebook  |  Twitter

ಭಾನುವಾರ, ನವೆಂಬರ್ 17, 2013

ಕರುನಾಡು

ಕರುನಾಡು ನಮ್ಮದು ಕನ್ನಡಿಗರು ನಾವು
ಇತಿಹಾಸದಿಂದ ತೊಯ್ದಿದೆ ಕನ್ನಡದ ಮಣ್ಣು
ನಮ್ಮ ರೈತ ಸ್ಪರ್ಶಿಸಿ ಮಣ್ಣಾಗಿದೆ ಹೊನ್ನು


 ಮಲೆನಾಡಿನಿಂದ ಬಂದಿದೆ ಜಲವೆಂಬ ಕಣಜ
 ಕನ್ನಡಾಂಬೆಯ ಗುಣ ಹೊತ್ತು ನಾಚಿ ನಿಂತಿದೆ ನೀರಜ
 ಕರುನಾಡು ನಮ್ಮದು ಕನ್ನಡಿಗರು ನಾವು


 ಬಸವಣ್ಣನಿಂದ ಸಾಹಿತ್ಯದಲ್ಲಿ ವಚನ ಗೀತೆ
 ಪಂಪ ಪೊನ್ನ ರನ್ನರ ಸಾಹಿತ್ಯದ ಯಶೋಗಾಥೆ
 ವಿಜಯನಗರ ಹೊಯ್ಸಳ ಚಾಳುಕ್ಯ ಸಾಮ್ರಾಜ್ಯದ ಮೆರೆದಾಟ
 ಸಾರಿ ಹೇಳುತ್ತಿದೆ ನಮ್ಮಯ ಕನ್ನಡ ಬಾವುಟ
 ಕರುನಾಡು ನಮ್ಮದು ಕನ್ನಡಿಗರು ನಾವು


 ಕುವೆಂಪು ಸಾರಿದ ಮಾನವ ಧರ್ಮದ ಉಕ್ತಿ
 ಮರೆತರೆ ಸಿಗುವುದಿಲ್ಲ ಮನುಷ್ಯನಿಗೆ ಮುಕ್ತಿ
 ಭಾರತದ ಸಾಹಿತ್ಯಕ್ಕೆ ಕನ್ನಡವೇ ಶಿಖರವು
 ಅಷ್ಟ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದದ್ದು ಕನ್ನಡಕೆ ಕಳಸವು
 ಕರುನಾಡು ನಮ್ಮದು ಕನ್ನಡಿಗರು ನಾವು

  - ಮಹಬೂಬ್ ಬಾಷಾ ಎಂ.

ಲೇಖಕರ ಕಿರುಪರಿಚಯ
ಶ್ರೀ ಮಹಬೂಬ್ ಬಾಷಾ ಎಂ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಇವರು ಪ್ರಸ್ತುತ ಬಿ. ಎ. ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಆಟೋಟದಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಕವಿತೆಗಳನ್ನು ಬರೆಯುವುದು, ಕನ್ನಡ ಸಾಹಿತ್ಯ ಓದುವುದು ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹವ್ಯಾಸ.

Blog  |  Facebook  |  Twitter

ಶನಿವಾರ, ನವೆಂಬರ್ 16, 2013

ನಾವು ಹಾಗೂ ಕನ್ನಡದ ಹಿರಿಮೆ

ಮತ್ತೊಂದು ಕನ್ನಡ ರಾಜ್ಯೋತ್ಸವ ಮುಗಿದಿದೆ. ಅದು ಹತ್ತು ಹಲವು ಸವಾಲುಗಳನ್ನು ಜೊತೆ ಜೊತೆಗೆ ಹೊತ್ತು ತಂದಿದೆ. 2500 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಭಾಷೆ ಎಂಬ ಹೆಗ್ಗಳಿಕೆ ಒಂದಾದರೆ ಮತ್ತೊಂದೆಡೆ ಇಂದಿನ ಜಾಗತಿಕ ವಾಸ್ತವದ ನೆಲೆಗಟ್ಟಿನಲ್ಲಿ ಕನ್ನಡ ಭಾಷೆ ಎಲ್ಲೆಡೆಯಲ್ಲೂ ತೆರೆದುಕೊಳ್ಳದೆ ಬೆಳವಣಿಗೆ ಮರೀಚಿಕೆ ಎಂದೆನಿಸಿದೆ. ಭಾಷೆ ಉಳಿಯುವುದು ಹಾಗು ಬೆಳೆಯುವುದು ಆಯಾ ಭಾಷಾ ಜನರು / ಸಮುದಾಯದ ನಡುವಳಿಕೆಯ ಮೇಲೆ ನಿಂತಿದೆ. ಉದಾ: ಸಂಸ್ಕೃತ ತನ್ನ ಅಸ್ತಿತ್ವ ಕಳೆದುಕೊಳ್ಳುವುದಕ್ಕೆ ಇಂತಹುದೇ ಕಾರಣಗಳಿರಬಹುದು.  ಇಂದು ವಿಶ್ವವೇ ಒಂದು ಹಳ್ಳಿ - ಗ್ಲೋಬಲ್ ವಿಲೇಜ್ – "ವಸುದೈವ ಕುಟುಂಬ" ಎನ್ನುವ ಹಿರಿಯರ ದೃಷ್ಟಿಕೋನದ ಆದರ್ಶಚಿಂತನೆ ವಾಸ್ತವವಾಗಿದೆ. ಹೀಗಿರುವಾಗ ಒಂದು ಭಾಷೆ, ಒಂದು ಧರ್ಮ, ಒಂದು ಜನಾಂಗ ಎನ್ನುವ ಸಂಕೀರ್ಣ ಚಿಂತನೆಗೆ ಅವಕಾಶಗಳೇ ಇಲ್ಲದಂತಾಗಿದೆ. ಆದಿಕವಿ ಪಂಪನ "ಮನುಷ್ಯ ಕುಲಂ ತಾನೊಂದೆ ವಲಂ" ಎಂಬುದು ಸಹಜತೆಗೆ ಹತ್ತಿರವಾಗುತ್ತಿದೆ. ಹೊಸತನಗಳಿಗೆ ಪ್ರತಿಯೊಬ್ಬರೂ ತೆರೆದುಕೊಳ್ಳುವ ಇಂದಿನ ದಿನಗಳಲ್ಲಿ ವ್ಯಾಪಾರೀಕರಣದ ಭರಾಟೆಯಲ್ಲಿ ಭಾಷೆ ಮತ್ತೊಂದು ಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ. ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ದಿನಕ್ಕೊಂದರಂತೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಅನ್ಯಭಾಷೆಗಳು ಹಾಗು ನಮ್ಮ ಭಾಷೆ ಈ ತೆರನಾದ ಪ್ರಕ್ರಿಯೆಗೆ ಹೇಗೆ ಒಡ್ಡಿಕೊಳ್ಳುತ್ತದೆ? ಹೇಗೆ ಬದಲಾವಣೆ ತಂದುಕೊಳ್ಳುತ್ತದೆ? ಎನ್ನುವುದರ ಮೇಲೆ ಭಾಷೆಯ ಬೆಳವಣಿಗೆ ಹಾಗು ಅವನತಿ ಅವಲಂಬಿತವಾಗಿದೆ. ವೈಜ್ಞಾನಿಕ ಆವಿಷ್ಕಾರಗಳೊಂದೇ ಅಲ್ಲ ಜಾಗತೀಕರಣ, ವಸಾಹತೀಕರಣಕ್ಕೆ ನಮ್ಮ ಭಾಷೆ ಹೇಗೆ ಬದಲಾಗಿದೆ ಅನ್ನುವುದೂ ಮುಖ್ಯ. ಜಾಗತೀಕರಣದಿಂದ ನಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೆ ನಮ್ಮ ಭಾಷೆ ಹಾಗೆ ಬದಲಾಗಿದೆಯೇ? ಇಂದಿನ ಈ ದಿನಗಳಲ್ಲಿ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಸವಾರಿ ಮಾಡಿ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿ ಕಾಣಸಿಗುತ್ತದೆ. ಅಂತಹುದರಲ್ಲಿ ಭಾಷಾ ಅಭಿಮಾನ, ವ್ಯಾಮೋಹಗಳಿಗಿಂತ ಜನತೆ ಸುಲಭ, ಚೆನ್ನಾಗಿದೆ, ಹೊಂದಿಕೆಯಾಗುತ್ತದೆ, ಸ್ಟೇಟಸ್‍ಗಾಗಿ, ಪ್ರಿಸ್ಟೀಜ್‍ಗಾಗಿ ಎನ್ನುವ ಕಾರಣಗಳಿಗಾಗಿ ತಮ್ಮತನ ಕಳೆದುಕೊಳ್ಳುವುದು ಎಷ್ಟು ಸಮಂಜಸ? ಜಾಗತೀಕ ಮಟ್ಟದಲ್ಲಿ ನಾವು ಬೆಳೆಯಬೇಕಾದರೆ ನಮ್ಮತನವನ್ನು ನಾವು ಕಳೆದುಕೊಳ್ಳಬೇಕೆ?

ಇನ್ನು ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಾವು ನಮ್ಮ ಭಾಷೆಯನ್ನು ಎಷ್ಟು ಉಪಯೋಗಿಸುತ್ತೇವೆ? ನಾವೇ ಪ್ರಶ್ನಿಸಿಕೊಂಡರೆ - ತೀರ ಕಡಿಮೆ. ನಾವಿರುವ ವ್ಯವಸ್ಥೆ ನಮ್ಮ ಭಾಷೆಗೆ ಪೂರಕವಾಗಿದೆಯೇ? ಮೊಟ್ಟಮೊದಲು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸುವಾಗಲೇ ಅಡ್ಡಿ ಆತಂಕಗಳು ಸಾಲುಸಾಲಾಗಿಯೇ ಎದುರಾಗುತ್ತವೆ. ಪ್ರೀ-ನರ್ಸರಿ, ನರ್ಸರಿ, ಎಲ್‍ಕೆಜಿ, ಯುಕೆಜಿ ಶಾಲೆಗೆ ಸೇರಿಸುವಾಗಲೇ ತೊಂದರೆ ಅನುಭವಿಸುತ್ತೇವೆ.  ಕಾಲಕ್ಕೆ ತಕ್ಕ ಹಾಗೆ ಇರಬೇಕೆಂಬ ಮಾತಿನಂತೆ ಹೆಚ್ಚು ಮಾನ್ಯತೆ ಇರುವ ಸಿಬಿಎಸ್‍ ಸಿ ಅಥವಾ ಐಸಿಎಸ್‍ ಇ ಶಿಕ್ಷಣ ಪಠ್ಯ ವ್ಯವಸ್ಥೆಗೆ ಎಲ್ಲರೂ ಹಾತೊರೆಯುತ್ತಾರೆ. ಇಂದಿನ ವ್ಯಾಪಾರದ ಯುಗ ಲಾ ಆಫ್ ಡಿಮ್ಯಾಂಡ್ ಅಂಡ್ ಸಪ್ಲೈ ಗೆ ಬದ್ಧವಾಗಿವೆ. ಜನ ಏನನ್ನು ಬಯಸುತ್ತಾರೋ ಅದನ್ನೇ ಶಾಲೆ-ಕಾಲೇಜಿನವರು ಜನರ ಮುಂದಿಡುತ್ತಾರೆ, ಅದು ನಿಜವೂ ಹೌದು. ನಾವೇ ನಮ್ಮ ಪಠ್ಯ ವ್ಯವಸ್ಥೆ ಸರಿಯಿಲ್ಲ ಎನ್ನುತ್ತಿದ್ದೇವೆ. ಎಷ್ಟು ವಿಪರ್ಯಾಸವಲ್ಲವೆ! ಅಂದರೆ ನಮ್ಮ ಭಾಷೆ, ನಮ್ಮ ಪಠ್ಯ ನಮಗೇ ಸಹ್ಯವಿಲ್ಲ. ಏಕೆ ಹೀಗೆ? ಇದಕ್ಕೆ ಪರಿಹಾರವೇನು? ನಮ್ಮ ಭಾಷೆಗೆ ಅನ್ನಕೊಡುವ ಶಕ್ತಿ ಇಲ್ಲವೆ? ಹೊಟ್ಟೆಗೆ ಹಿಟ್ಟು ಕೊಡುವ ಭಾಷೆಯನ್ನಾಗಿ ನಮ್ಮ ಭಾಷೆಯನ್ನು ಬದಲಾಯಿಸುವುದಾದರೂ ಹೇಗೆ?

ಇದು ಒಂದು ಉದಾಹರಣೆಯಷ್ಟೆ. ನಮ್ಮ ದಿನನಿತ್ಯದಲ್ಲಿ ವ್ಯವಹರಿಸುವ ಪ್ರತಿಯೊಂದು ವ್ಯವಸ್ಥೆಯಲ್ಲೂ ಕನ್ನಡ ಇಂದು ಕಣ್ಮರೆಯಾಗಿದೆ. ನಿತ್ಯ ವ್ಯವಹರಿಸುವ ಬ್ಯಾಂಕ್, ಸಾರಿಗೆ, ಮಾಲ್‍ ಗಳಿಗೆ ಭೇಟಿನೀಡಿ ವ್ಯವಹರಿಸುವಾಗ, ಅವಶ್ಯಕ ಅರ್ಜಿಗಳನ್ನು ತುಂಬಿಸುವಾಗ ನಾವು ಬಳಸುವುದು ಇಂಗ್ಲೀಷ್ ಭಾಷೆಯನ್ನು. ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೆ ಹಿಂದಿ ಭಾಷೆಯಾದರೂ ಗೊತ್ತಿರಬೇಕು ಇಲ್ಲದಿದ್ದಲ್ಲಿ ಅರ್ಜಿ ತುಂಬಿಸಲು ಆಗುವುದಿಲ್ಲ ಅಥವಾ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ನಮ್ಮ ದಿನನಿತ್ಯದ ಆಡುಭಾಷೆ ಕನ್ನಡವನ್ನು ಬಳಸುವ ಅವಕಾಶಗಳನ್ನು ನಮ್ಮ ಇಂದಿನ ವ್ಯವಸ್ಥೆ ಕಿತ್ತುಕೊಳ್ಳುತ್ತಿದೆ. ವ್ಯವಸ್ಥಿತ ಸಂಸ್ಥೆಯಲ್ಲಿ ಈ ತರಹದ ತೊಂದರೆ ಇದ್ದರೆ ಇನ್ನು ಪ್ರತಿನಿತ್ಯ ವ್ಯವಹರಿಸುವ ಮನೆಕೆಲಸದವಳು, ತರಕಾರಿಯವನು, ಮನೆ ಕಟ್ಟುವವನು ಅನ್ಯಭಾಷೆಯವನಾಗಿರುತ್ತಾನೆ. ಅಲ್ಲಿಯೂ ಸಹ ನಮ್ಮ ಕನ್ನಡಕ್ಕೆ ಕತ್ತರಿ ಬಿದ್ದಂತಾಯಿತು. ಇನ್ನು ದೊಡ್ಡ ದೊಡ್ಡ ಮಾಲ್‍ ಗಳಿಗೆ ಹೋದರೆ ಎಲ್ಲವೂ ಹಿಂದಿಮಯ - ದಾಲ್, ಚಾವಲ್, ನಮಕ್, ನಮ್ಮ ಕನ್ನಡ ಪದಗಳಿಗೆ ಜಾಗವೇ ಇಲ್ಲ. ಹೀಗೆ ಕನ್ನಡ ಪದಗಳು ಕನ್ನಡಿಗರ ನಾಲಗೆಯಲ್ಲೇ ಹೊರಳಲಾರದ ಸ್ಥಿತಿಯಲ್ಲಿದೆ.

ಇನ್ನು ಸಾಹಿತ್ಯದ ವಿಷಯದಲ್ಲಿ ಎಂಟು ಜ್ಞಾನಪೀಠಗಳು ಕನ್ನಡಮ್ಮನ ಮುಡಿಗೇರಿದೆ. ಅದಕ್ಕೆ ಎಲ್ಲರೂ ಹೆಮ್ಮೆಪಡೋಣ. ಆದರೆ ಇಲ್ಲಿ ಭಾಷೆಯ ಬೆಳವಣಿಗೆಗೆ ಅವಕಾಶ ಕಡಿಮೆಯಾಗಿದೆ ಎನಿಸುತ್ತದೆ. ಹೊಸ ಪದಗಳ ಅನ್ವೇಷಣೆ ಇಲ್ಲಿ ಆಗುವುದೇ ಇಲ್ಲ. ವಿಜ್ಞಾನ, ಗಣಿತ, ತಂತ್ರಜ್ಞಾನ ವಿಷಯಗಳು ಕನ್ನಡಭಾಷೆಗೆ ದೂರ. ಇನ್ನು ಅವುಗಳ ಬಗ್ಗೆ ಪುಸ್ತಕಗಳು ಹೊರಬರುವುದು ಕನಸೇ ಸರಿ. ನಮ್ಮ ಆಡುಭಾಷೆ ಕೇವಲ ಮನೆಗಷ್ಟೇ, ಮಾತಿಗಷ್ಟೇ ಮೀಸಲಾಗಿದೆ ಎನ್ನದೆ ವಿಧಿಯಿಲ್ಲ.

ಕನ್ನಡಕ್ಕೆ ಕೇವಲ ಶಾಸ್ತ್ರೀಯ ಸ್ಥಾನಮಾನ ಒದಗಿಸಿಕೊಟ್ಟರಷ್ಟೇ ಸಾಲದು. ಭಾಷೆಯ ಅಭಿವೃದ್ಧಿಗೆ ಯೋಜನೆಗಳನ್ನು ಸಹ ರೂಪಿಸಬೇಕಿದೆ. ಚಿತ್ರರಂಗದಲ್ಲಿ ಕನ್ನಡ ನುಡಿಯ ಬಗ್ಗೆ ಯೋಚಿಸಿದರೆ ಬೇಸರವಾಗುತ್ತದೆ. ನಿಜ, ವರ್ಷಕ್ಕೆ ನೂರು-ಇನ್ನೂರು ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತವೆ ಆದರೆ ಅವುಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ಅವು ಬೇರೆ ಭಾಷೆಗಳಿಗೆ ಸಾಟಿಯಾಗಲಾರದೆನಿಸುತ್ತವೆ. ಕನ್ನಡಚಿತ್ರಗಳಲ್ಲಿ ಗುಣಮಟ್ಟ, ಹೊಸತನದ ಕೊರತೆಯಿದೆ. ಜಾಗತೀಕರಣದಿಂದ ಅನೇಕಾನೇಕ ಭಾಷೆಯ ಚಲನಚಿತ್ರಗಳು ವೀಕ್ಷಕರಿಗೆ ಲಭ್ಯವಿವೆ. ಕನ್ನಡಿಗರ ದೌರ್ಭಾಗ್ಯವೆಂದರೆ ನಮ್ಮ ಕನ್ನಡ ಚಿತ್ರರಂಗ ಡಬ್ಬಿಂಗ್‍ ಗೆ ತೆರೆದುಕೊಳ್ಳದೆ ಇರುವುದು, ಅನ್ಯಭಾಷೆಯ ಚಿತ್ರಗಳು ಕನ್ನಡದಲ್ಲಿ ಲಭ್ಯವಾಗದೆ ಮೂಲಭಾಷೆಯಲ್ಲೇ ನೋಡುವ, ಚಲನಚಿತ್ರದ ಉತ್ತಮ ಗುಣಮಟ್ಟವನ್ನು ಆಸ್ವಾದಿಸುವ ಭಾಗ್ಯ ನಮ್ಮ ಕನ್ನಡಿಗರಿಗಿಲ್ಲ. ನಮ್ಮ ಮಕ್ಕಳು ಪೋಗೊ, ಕಾರ್ಟುನ್ ನೆಟ್‍ ವರ್ಕ್, ಹಿಸ್ಟರಿ..... ಮುಂತಾದ ಉತ್ತಮ ಕಾರ್ಯಕ್ರಮಗಳನ್ನು ಕನ್ನಡ ಭಾಷೆಯ ಮೂಲಕ ಅರಿಯುವಂತೆ ಮಾಡಲು ನಾವು ಅಸಫಲರಾಗಿದ್ದೇವೆ. ನಮ್ಮ ಭಾವಿ ಕನ್ನಡಿಗರಿಗೆ ವಿಶ್ವವನ್ನು ಕನ್ನಡದ ಕಂಗಳಿಂದ ತೋರಿಸಲು ನಾವು ಅಸಮರ್ಥರಾಗಿದ್ದೇವೆ.

ಒಟ್ಟಾರೆ ಹೇಳಬೇಕೆಂದರೆ ನಮ್ಮ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದಾಗುವುದಕ್ಕೆ ಹೆಣಗಾಡುತ್ತಿರುವುದಂತೂ ನಿಜ. ನಮ್ಮ ಭಾಷೆಯಲ್ಲದೆ ಪರಕೀಯ ಭಾಷೆಯನ್ನೇ ಹೆಚ್ಚು ಬಳಸುವ ನಾವುಗಳು ನಮ್ಮ ಭಾಷೆಯ ಅವನತಿಗೆ ನೇರವಾಗಿ ಕಾರಣರಾಗುತ್ತಿದ್ದೇವೆ. ನಮ್ಮೊಳಗಿನ ಕನ್ನಡಪ್ರಜ್ಞೆ ಜಾಗೃತಗೊಳಿಸುವ ಕೆಲಸಗಳು ಅಗತ್ಯವಾಗಿ ಆಗಬೇಕಿದೆ. ಕುವೆಂಪುರವರು ಹೇಳಿದ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎನ್ನುವ ಕನ್ನಡತನ, ಕನ್ನಡಪ್ರಜ್ಞೆಯ ಜಾಗೃತಿಯು ಈ ಕ್ಷಣದ ಅವಶ್ಯಕತೆಯಾಗಿದೆ. ಅದನ್ನು ಹೇಗೆ ಸಾಧಿಸಬೇಕು ಎನ್ನುವುದರ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ.

ಲೇಖಕರ ಕಿರುಪರಿಚಯ
ಶ್ರೀ ನಾಗೇಂದ್ರ ಕುಮಾರ್ ಕೆ. ಎಸ್.

ಬೆಂಗಳೂರಿನ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಗೌರೀಬಿದನೂರಿನವರು. ಕಲಿತದ್ದು ಇಂಜಿನಿಯರಿಂಗ್ ಆದರೂ ಕನ್ನಡ ಭಾಷಾ ಸಾಹಿತ್ಯವನ್ನು ಸ್ವಪ್ರೇರಣೆಯಿಂದ ಅಭ್ಯಾಸ ಮಾಡಿದ್ದಾರೆ.

ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುವ ಇವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವಿದೆ.

Blog  |  Facebook  |  Twitter