ಸೋಮವಾರ, ನವೆಂಬರ್ 18, 2013

ನಮ್ಮೂರ ಕೆರೆ ತುಂಬಿತು

ಬೆಂಗಳೂರಿನಿಂದ ತಿರುಪತಿಯ ಪಶುವೈದ್ಯಕೀಯ ಕಾಲೇಜಿಗೆ ಬಾಹ್ಯ ಪರೀಕ್ಷಕನಾಗಿ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಹೋಗಿ ಬರುತ್ತಿದ್ದೆ. ಕೋಲಾರ ದಾಟಿ ನರಸಾಪುರದ ಹತ್ತಿರ ಬರುತ್ತಿದ್ದಂತೆ ಬೆಟ್ಟ ಬಂಡೆಗಳ ನಡುವೆ ಇದ್ದ ಪುಟ್ಟದಾದ ಕುರ್ಕಿ ಕೆರೆ ತುಂಬಿತ್ತು. ಕೋಲಾರ ಜಿಲ್ಲೆ ಬರ ಬಂಡೆಗಳ ನಾಡು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ತುಂಬಿ ತುಳುಕುತ್ತಿದ್ದ ಕೆರೆ ನೋಡಿ ಉಲ್ಲಸಿತನಾದೆ. ಬಾಲ್ಯದ ಗೆಳೆಯ ಲಕ್ಷ್ಮೀನಾರಾಯಣನಿಗೆ ಫೋನಾಯಿಸಿ 'ನಮ್ಮೂರ ಕೆರೆ ತುಂಬಿದೆಯೇ?' ಎಂದು ಕೇಳಿದೆ. ಉತ್ತರ ಕೇಳಿ ಇನ್ನಷ್ಟು ಪುಳಕಿತನಾದೆ. 'ಮೊನ್ನೆ ಕೇವಲ ಎರಡು ಗಂಟೆ ಸುರಿದ ಭರ್ಜರಿ ಮಳೆಗೆ ತ್ಯಾವನಹಳ್ಳಿ ಮತ್ತು ಆಲಹಳ್ಳಿ ಕೆರೆಗಳು ಕೋಡಿಹೋದವು' ಎಂದು ಗೆಳೆಯ ಉತ್ತರಿಸಿದ್ದ.

ನಮ್ಮೂರ ಕೆರೆ ತುಂಬಿ ಸುಮಾರು ಮೂವತ್ತು ವರ್ಷಗಳಾಗಿವೆ. ಕೆರೆ ಬತ್ತಿದ್ದರಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನೀರಿನ ಬರ ತಟ್ಟಿದೆ. ಭತ್ತದ ಗದ್ದೆಗಳು ಕಾಣೆಯಾಗಿವೆ. ಭತ್ತ ಬೆಳೆಯುತ್ತಿದ್ದ ಭೂಮಿಯಲ್ಲಿ ರಾಗಿಯನ್ನೋ, ಹುರುಳಿಯನ್ನೋ, ನೀಲಗಿರಿಯನ್ನೋ ಬೆಳೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಜಮೀನನ್ನು ಬೀಡುಬಿಟ್ಟಿದ್ದಾರೆ. ಕೆರೆಯು ಹೂಳಿನಿಂದ ತುಂಬಿಹೋಗಿದೆ. ಕೆರೆಯ ವಿಸ್ತೀರ್ಣವು ನೂರು ಮೀಟರ್ ಅಗಲ ಮತ್ತು ಮುನ್ನೂರು ಮೀಟರ್ ಉದ್ದ. ಇದೊಂದು ಚಿಕ್ಕ ಕೆರೆ. ಈ ವರ್ಷ ತುಂಬಿಬಿಟ್ಟಿದೆ.

ನಮ್ಮೂರು ತ್ಯಾವನಹಳ್ಳಿ. ಈ ಊರಿಗೆ ಈ ಹೆಸರು ಯಾಕೆ ಬಂತು? ನನ್ನ ಚಿಕ್ಕಂದಿನಲ್ಲಿ ಕೇಳಿದ ಹಿನ್ನೆಲೆ ಹೀಗಿತ್ತು: ಊರ ಪೂರ್ವಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಅರ್ಧಚಂದ್ರಾಕಾರವಾಗಿ ಬೆಟ್ಟಸಾಲು ಇದೆ. ಬೆಟ್ಟಸಾಲಿನ ಜೌಗು ಪ್ರದೇಶದಲ್ಲಿರುವುದೇ ತ್ಯಾವನಹಳ್ಳಿ. ಜೌಗಿನಿಂದಾಗಿ ಮಳೆಗಾಲದಲ್ಲಿ ಎಷ್ಟು ತೇವವಿರುತ್ತಿತ್ತೆಂದರೆ ಮನೆಯ ಒರಲುಕಲ್ಲಿನಲ್ಲಿಯೂ ಕೂಡ ನೀರು ಶೇಖರಣೆಯಾಗುತ್ತಿತ್ತಂತೆ. ಆ ಒರಲುಕಲ್ಲಿನ ನೀರಿನಲ್ಲಿ ಹೆಂಗಳೆಯರು ತಮ್ಮ ಮುಖವನ್ನು ನೋಡಿಕೊಂಡು ಹಣೆಯ ಬೊಟ್ಟು ಇಟ್ಟುಕೊಳ್ಳುತ್ತಿದ್ದರಂತೆ. ಈ ತೆರೆನಾದ 'ತೇವದಹಳ್ಳಿ' ಜನರಾಡುವ ಮಾತಿನಲ್ಲಿ ಅಪಭ್ರಂಶವಾಗಿ ಬರುಬರುತ್ತಾ 'ತ್ಯಾವನಹಳ್ಳಿ'ಯಾಗಿದೆ ಎಂಬುದೇ ಊರಿನ ಹೆಸರಿಗೆ ಇರುವ ಒಂದು ಹಿನ್ನೆಲೆ.

ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮೂರಲ್ಲಿ ಮಳೆ ಬಿದ್ದಿದ್ದು ಕರಾರುವಾಕ್ಕು ಮಳೆ. ರಾಗಿ ಬಿತ್ತನೆಗೆ, ಪೈರು ಬೆಳೆಯಲು, ತೆನೆಯೊಡೆಯಲು, ಕಾಳು ಕಟ್ಟಲು ಎಷ್ಟು ಬೇಕೋ ಅಷ್ಟು ಮಾತ್ರ ಕರಾರುವಾಕ್ಕಾದ ಮಳೆ. ಕೆರೆಯ ಮಧ್ಯೆ ದನಕರುಗಳು ಕುಡಿಯಲು ನಿರ್ಮಿಸಿದ್ದ ಒಂದು ಸಣ್ಣ ಗೋಕುಂಟೆಯೂ ಸರಿಯಾಗಿ ತುಂಬುತ್ತಿರಲಿಲ್ಲ. ಊರಿಗೆ ಹೋದಾಗಲೆಲ್ಲಾ ನನ್ನ ಆದ್ಯತೆಯ ಭೇಟಿಯೆಂದರೆ ನಮ್ಮೂರ ಕೆರೆಯನ್ನು ನೋಡಿ ಬರುವುದಾಗಿತ್ತು. ಯಾವುದಾದರೂ ಮಳೆಗೆ ಒಂದಷ್ಟು ನೀರು ಬಂದಿದೆಯೇ? ಗೋಕುಂಟೆಯಾದರೂ ತುಂಬಿದೆಯೇ? ಎಂಬುದನ್ನು ಮನಸ್ಸಿನಲ್ಲಿಯೇ ಅಂದಾಜಿಸಿಕೊಳ್ಳುತ್ತಿದ್ದೆ. ಮಾಯದ ಮಳೆ ಎಂದಾದರೊಮ್ಮೆ ಬಂದೇ ಬರುತ್ತದೆ, ಕೆರೆ ತುಂಬುತ್ತದೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ.

ಕೆರೆಗೆ ನೀರು ಹರಿದುಬರುವ ಕಾಲುವೆಗಳು ಮುಚ್ಚಿಹೋಗಿವೆ. ಕೃಷಿ ಭೂಮಿಯನ್ನು ಹಿಗ್ಗಿಸಿಕೊಳ್ಳುವ ಮನುಷ್ಯನ ದುರಾಸೆಗೆ ಬಸಿ ಕಾಲುವೆಗಳು ಒತ್ತುವರಿಯಾಗಿ ಕಿರಿದಾಗಿವೆ. ಬಿದ್ದ ಮಳೆನೀರು ಅಲ್ಲಲ್ಲೇ ಇಂಗಿಹೋಗುತ್ತದೆ. ಬೇಸಿಗೆಯಲ್ಲೂ ನೀರಿರುತ್ತಿದ್ದ, ಊರ ಸುತ್ತಲೂ ಇದ್ದ ಚಕ್ರಬಾವಿಗಳು ಎಂದೋ ಒಣಗಿಹೋಗಿವೆ. ಪರ್ಷಿಯನ್ ತಾಂತ್ರಿಕತೆಯ ನೀರೆತ್ತುವ ಕಪಿಲೆಗಳು, ಅವುಗಳ ಬೆಳಗಿನ ಹಾಗೂ ಸಂಜೆಯ ಕಿರ್‍ ಗುಟ್ಟುವ ನಿನಾದ ಪ್ರಸ್ತುತ ಪೀಳಿಗೆಗೆ ಸಿಗದಾಗಿದೆ. ಕುಡಿಯುವ ನೀರಿಗೂ ತತ್ವಾರ ಬಂದಿದ್ದರಿಂದ ಎಲ್ಲಿ ನೋಡಿದರೂ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಒಂದು ಸಾವಿರ ಅಡಿಯಿಂದ ಒಂದು ಸಾವಿರದ ಇನ್ನೂರು ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರಷ್ಟೇ ಗಂಗಮ್ಮನ ದರುಶನವಾಗುತ್ತದೆ.

ನಮ್ಮೂರ ಕೆರೆ ತುಂಬಿದೆ ಎಂಬ ಸುದ್ದಿ ಸಿಕ್ಕಾಗ ಅಕ್ಟೋಬರ್ ತಿಂಗಳ ಕೊನೆಯ ಭಾನುವಾರ ತುಂಬಿದ ಕೆರೆಯನ್ನು ನೋಡಿ ಕಣ್ದುಂಬಿಸಿಕೊಳ್ಳಲು ಹೊರಟುನಿಂತೆ. ಬೆಂಗಳೂರಿನಿಂದ ಪೂರ್ವಕ್ಕೆ, ಕೊಂಚ ಈಶಾನ್ಯ ದಿಕ್ಕಿಗೆ ಸುಮಾರು ಅರವತ್ತೈದು ಕಿಲೋಮೀಟರ್ ದೂರವಿರುವ ನಮ್ಮೂರಿಗೆ ಕಾರಿನಲ್ಲಿ ಪಯಣಿಸುವಾಗ ಅದೆಷ್ಟೋ ನೆನಪುಗಳು. ಚಿಕ್ಕವನಾಗಿದ್ದಾಗ, 1970ರ ಸುಮಾರಿಗೆ ಈ ಕೆರೆ ಕಟ್ಟಿದ್ದು ನನಗೆ ನೆನಪಿದೆ. ಕೆರೆಗೆ ಹತ್ತಿರವಿರುವ ಬೆಟ್ಟದಿಂದ ಸಣ್ಣ ಸಣ್ಣ ಬಂಡೆ ಕಲ್ಲುಗಳನ್ನು ಒಂಟಿ ಎತ್ತಿನ ಮರದ ಗಾಡಿಯಲ್ಲಿ ತುಂಬಿಸಿಕೊಂಡು ಬಂದು ಕೆರೆಯ ಏರಿಗೆ ಜೋಡಿಸಿದ್ದು, ಮೊದಲ ಸಲ ಕೆರೆ ತುಂಬಿದಾಗ ದೀಪೋತ್ಸವ ಮಾಡಿದ್ದು, ಊರಿನ ವಯಸ್ಕ ಕಟ್ಟುಮಸ್ತಾದ ಗಂಡಸರು ಕೆರೆಯೊಳಗೆ ಧುಮುಕಿ ಏನನ್ನೋ ಎತ್ತಿ ತಂದಿದ್ದು, ಇತ್ಯಾದಿ ಅರೆಬರೆ ನೆನಪುಗಳು ಸುಳಿದುಹೋದವು. ಐದನೇ ತರಗತಿಯ ಕನ್ನಡ ಪಠ್ಯದಲ್ಲಿದ್ದ 'ಸತಿಯೊಡನೆ ಸಹಗಮನ' ಗದ್ಯ-ಪದ್ಯ ಪಾಠವನ್ನು ಆಲಿಸುವಾಗ, ಮತ್ತೆ ಮತ್ತೆ ಓದಿಕೊಂಡಾಗ, ನಮ್ಮೂರ ಕೆರೆಯ ಕಲ್ಪನೆಯೇ ನನಗಿತ್ತು. ಭಾಗೀರಥಿ ಅಲ್ಲಿ ಬಟ್ಟಲು ತೆಗೆದುಕೊಳ್ಳುವಷ್ಟರಲ್ಲಿ ಕೆರೆ ತುಂಬಿದಂತೆ, ನೀರಿನಲ್ಲಿ ಆಕೆ ಮುಳುಗಿಹೋದಂತೆ, ಕಲ್ಲನಕೇರಿ ಮಲ್ಲನಗೌಡರು ಕಿರಿಸೊಸೆಯನ್ನು ಕೆರೆಗೆ ಹಾರ ಕೊಟ್ಟಂತೆ, ದಂಡಿನಿಂದ ಬಂದ ಗಂಡ ಮಾದೇವರಾಯ ತನ್ನ ಪತ್ನಿ ಭಾಗಿರಥಿಯನ್ನು ಹುಡುಕುತ್ತಾ ಕುದುರೆಯನೇರಿ ಕೆರೆಯ ಏರಿಗೆ ಬಂದು ನಿಂತು, ಕೆರೆಗೆ ಹಾರಿ 'ಸತಿಯೊಡನೆ ಸಹಗಮನ' ಮಾಡಿಕೊಂಡಂತೆ...... ಹೀಗೆ, ಆ ಗದ್ಯ - ಪದ್ಯ ಪಾಠ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿದೆ.

ಇಂತಹ ನನ್ನ ಕೆರೆಯ ಐಕಾನ್ ಆದ ನಮ್ಮೂರ ಕೆರೆ ತುಂಬಿದೆ. ಹೊಲದಲ್ಲಿ, ತೋಟದಲ್ಲಿ ಕೆಲಸ ಮಾಡುವಾಗ ದಣಿವಾರಿಸಿಕೊಳ್ಳಲು ಕೆರೆಯ ನೀರು ಕುಡಿದಿದ್ದೇನೆ. ನೀರು ಖಾಲಿಯಾಗುತ್ತಾ ಬಂದಾಗ ಕೆರೆಯೊಳಗಿನ ಕುಂಟೆಗಳಲ್ಲಿನ ನೀರನ್ನು ಬಸಿದು ತೂಬಿನ ಕಡೆಗೆ ಹರಿಯುವಂತೆ ಮಾಡಿ ಖಾನೆಯಲ್ಲಿದ್ದ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ನೀರು ಕಟ್ಟಿದ್ದೇನೆ. ಮೀನು ಹಿಡಿದಿದ್ದು, ಮೀನಿನ ಮುಳ್ಳಿನಿಂದ ಚುಚ್ಚಿಸಿಕೊಂಡಿದ್ದು, ಏಡಿ ಹಿಡಿದಿದ್ದು, ಅದರಿಂದ ಕಚ್ಚಿಸಿಕೊಂಡಿದ್ದು, ಗದ್ದೆ ಬದುಗಳ ಮೇಲೆ, ಗದ್ದೆ ಬಯಲಿನಲ್ಲಿ ದನಗಳಿಗಾಗಿ ಹುಲ್ಲು ಕೊಯ್ದಿದ್ದು, ಹುಲ್ಲು ಕೊಯ್ಯುವಾಗ ಎಡಗೈ ಬೆರಳುಗಳಿಗೆ ಗಾಯ ಮಾಡಿಕೊಂಡಿದ್ದು...... ಹೀಗೇ ಮಳೆ-ನೀರು-ಕೆರೆ-ಭರ್ತಿ-ಹಸಿರು-ಬದುಕು ಇನ್ನೂ ಏನೇನೋ ನೆನಪುಗಳು, ಕಾರಿನಲ್ಲಿ ದಾರಿ ಸವೆಸುತ್ತಿದ್ದಾಗ.

ವಿಶ್ವಬ್ಯಾಂಕಿನಿಂದ 2002ರಲ್ಲೋ, 2003ರಲ್ಲೋ ಸುಮಾರು ಐನೂರು ಕೋಟಿ ರೂಪಾಯಿಗಳು ಕೆರೆ ಅಭಿವೃದ್ಧಿಗಾಗಿ ಸಿಗಲಿದೆ ಎಂಬ ಸುದ್ದಿ ವೃತ್ತಪತ್ರಿಕೆಗಳಲ್ಲಿತ್ತು. ಆಗ ನಮ್ಮೂರ ಕೆರೆಯೂ ಅಭಿವೃದ್ಧಿಯಾಗಬಹುದೆಂದುಕೊಂಡೆ. ಆಗಲಿಲ್ಲ. ಕೆರೆ ಅಭಿವೃದ್ಧಿ ಸಂಘ ರಚಿಸಿ ಕೆರೆ ಹೂಳೆತ್ತಲು ಶೇ. 50ರಷ್ಟು ಹಣವನ್ನು ಊರಿನವರೇ ನೀಡಬೇಕು ಎಂಬ ನಿಯಮವನ್ನು ಸರ್ಕಾರ ವಿಧಿಸಿದಾಗ ಸ್ಥಳೀಯ ರಾಜಕಾರಣದ ಕಾರಣಗಳಿಗಾಗಿ ಅದು ಸಾಧ್ಯವಾಗಲಿಲ್ಲ ಎನ್ನಬಹುದು.

ಕೆರೆ ಅಭಿವೃದ್ಧಿ ದೂರದ ಕನಸಾಗಿದೆ. ಎಲ್ಲಿ ನೋಡಿದರೂ ನೀಲಗಿರಿ ತೋಪುಗಳಿವೆ. ಬೆಂಗಳೂರಿನಿಂದ ಹೊಸಕೋಟೆ ದಾಟಿ ಕೋಲಾರದ ಕಡೆ ಹೊರಟರೆ ಅಥವಾ ಹೊಸಕೋಟೆಯಿಂದ ಮಾಲೂರಿನ ಕಡೆ ಕ್ರಮಿಸಿದರೆ ಕಣ್ಣು ಕಂಡಷ್ಟು ದೂರವೂ ನೀಲಗಿರಿ ತೋಪುಗಳೇ. ಈ ನೀಲಗಿರಿ ಮರಗಳು ವಾತಾವರಣದ ತೇವಾಂಶವನ್ನೂ ನುಂಗಿಹಾಕಿಬಿಡುತ್ತವೆ. ಇಂತಹ ನೀಲಗಿರಿ ಮರಗಳು ಅಲ್ಲಿ ಮೋಡ ಕೂಡಲು ಬಿಟ್ಟಾವೆಯೇ? ಈ ಬರಬಂಡೆಗಳ ನಾಡಿಗೆ ನೀಲಗಿರಿ ಕಾಲಿಟ್ಟಿದ್ದು 1970 ರ ಸುಮಾರಿಗೆ. ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯವು ನೀಲಗಿರಿ ನೆಡುವುದು ಬೇಡ ಎಂದು ಹೇಳಿದೆಯಂತೆ. ಜಿಲ್ಲಾಡಳಿತವೂ ಹೇಳುತ್ತಿದೆ. ಆದರೆ, ಇರುವ ನೀಲಗಿರಿ ತೋಪುಗಳನ್ನು ಇಲ್ಲವಾಗಿಸಬೇಕಿದೆಯಲ್ಲ!

ಎಂಭತ್ತರ ದಶಕದಲ್ಲಿ 'ನೀಲಗಿರಿ ಮರ, ತರುವುದು ಬರ' ಎಂಬ ಕಾರ್ಟೂನ್ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ರೈತಸಂಘದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ನಿಲುವೂ ಇದೇ ಆಗಿತ್ತು. ಆದರೂ, ನೀಲಗಿರಿಯ ಅಪಾಯಗಳು ಜನರ ಅರಿವಿಗೆ ಬಂದಂತಿಲ್ಲ. ರಾಜಸ್ಥಾನದ ಜಲತಜ್ಞರಾದ ರಾಜೇಂದ್ರಸಿಂಗ್ ಅವರು ಕೋಲಾರಕ್ಕೆ ಬಂದು ಮಾತನಾಡಿಹೋಗಿದ್ದಾರೆ. ಇಲ್ಲಿಯ ಭೂಮಿಗೆ ಜಲಪೂರಣವಾಗಬೇಕಿದೆ. ಕೋಲಾರ ಜಿಲ್ಲೆ ಕೆರೆಗಳ ಜಿಲ್ಲೆ. ಇಲ್ಲಿ ಗಂಗರಸರು ಆಳುತ್ತಿದ್ದಾಗ ಕೆರೆಕುಂಟೆಗಳು ತುಂಬಿ ಹರಿಯುತ್ತಿದ್ದವಂತೆ. ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದೆಂಬ ಸುದ್ದಿಯಿದೆ. ಯಾವ ಯೋಜನೆ, ಪ್ಯಾಕೇಜುಗಳೂ ಇಲ್ಲದ ಕೋಲಾರ ಎಂಬ ಬೆಂಗಾಡಿಗೆ ಇದರ ಪ್ರಥಮ ಪ್ರಯೋಜನ ಸಿಗಲಿ ಎಂಬ ಆಶಯ..... ಹೀಗೆ ಹತ್ತಾರು ಆಲೋಚನೆಗಳು - ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಮ್ಮೂರಿನತ್ತ ಸಾಗುತ್ತಿದ್ದಂತೆ.

ಹಿಂದಿನ ದಿನವೇ ಅಮ್ಮನಿಗೆಂದು ಒಣಹಣ್ಣುಗಳು ಹಾಗೂ ಒಂದಷ್ಟು ತಿನಿಸುಗಳನ್ನು ತೆಗೆದುಕೊಂಡಿದ್ದೆ. ಊರು ತಲುಪಿದ ತಕ್ಷಣ ತಿಂಡಿ ತಿನಿಸುಗಳನ್ನು ಮನೆಯಲ್ಲಿಟ್ಟು ತುಂಬಿದ ಕೆರೆಯನ್ನು ನೋಡುವ ಆತುರದಲ್ಲಿ ನನ್ನ ತಮ್ಮ ಹಾಗೂ ಗೆಳೆಯ ಲಕ್ಷ್ಮಿನಾರಾಯಣನೊಂದಿಗೆ ಅತ್ತ ಹೆಜ್ಜೆ ಹಾಕಿದೆ. ನಮ್ಮೂರ ಕೆರೆ ಕೋಡಿ ಹರಿಯಿತೆಂದರೆ ಅದು ತಲುಪುವುದು ದಕ್ಷಿಣ ದಿಕ್ಕಿನ ಆಲಹಳ್ಳಿ ಕೆರೆಗೆ. ಅದು ಆಳವಾದ ಕೆರೆ. ವಿಸ್ತೀರ್ಣದಲ್ಲಿಯೂ ದೊಡ್ಡ ಕೆರೆ. ಆ ಕೆರೆಯ ದಿಕ್ಕಿನಿಂದ ತಮಟೆಯ ಶಬ್ದ ಕೇಳಿ ಬರುತ್ತಿತ್ತು. ಕೆರೆ ತುಂಬಿದ್ದಕ್ಕೆ ಅಲ್ಲಿ ದೀಪೋತ್ಸವ ನಡೆಯುತ್ತಿತ್ತು.

ಅಂತೂ ಕೆರೆಯ ಬಳಿ ಬಂದೆವು. ಹೂಳು ತುಂಬಿಕೊಂಡಿರುವುದರಿಂದ ಕೆರೆಯ ಮಧ್ಯೆ ಅಲ್ಲಲ್ಲಿ ದಿಬ್ಬದ ರೀತಿಯಲ್ಲಿ ಬೆಳೆದುನಿಂತ ಗಿಡಗಂಟಿಗಳು. ಹಿನ್ನೀರಿನಲ್ಲಿ ಬಂಡೆಯ ಮೇಲೆ ಕುಳಿತು ಬಟ್ಟೆ ಒಗೆಯುತ್ತಿರುವ ಮಹಿಳೆಯರು. ಮೂವತ್ತು ವರ್ಷಗಳಿಂದ ಮರೆಯಾಗಿದ್ದ ದೃಶ್ಯ ಅದು. ಕೆರೆಯ ಏರಿ ಮೇಲೆ ಬೆಳೆದು ನಿಂತ ಪೊದೆಗಳು. ಸವೆದುಹೋದ ಏರಿ. ಹೀಗಿದ್ದರೂ ತುಂಬಿದ ಕೆರೆ. ನಾನಂತೂ ಸಂತಸದಲ್ಲಿ ತೇಲಿಹೋದೆ. ಸೋನಿ ಕ್ಯಾಮೆರಾದಲ್ಲಿ ಹತ್ತಾರು ಚಿತ್ರಗಳನ್ನು ಕ್ಲಿಕ್ಕಿಸಿದೆ. ಸ್ಥಿರಚಿತ್ರಗಳ ಖುಷಿ ಸಾಲದೆಂಬಂತೆ ಹತ್ತು-ಹದಿನೈದು ನಿಮಿಷಗಳ ಒಂದು ವಿಡಿಯೋ ಕೂಡ ಮಾಡಿಕೊಂಡೆ. ಕೆರೆಯ ನೀರನ್ನು ಮುಟ್ಟಿ ನಮಸ್ಕರಿಸಿದೆ. ಬೊಗಸೆಯಷ್ಟು ನೀರು ಕುಡಿದೆ. ಒಂದೆರಡು ಗಂಟೆ ಕಾಲ ಕಳೆದಿದ್ದಾಯಿತು. ಅಲ್ಲಿಂದ ಹೊರಡಲು ಮನಸ್ಸಾಗಲಿಲ್ಲ. ಬೆಂಗಳೂರು ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದ. ದಿನದ ಆಹಾರದ ಬೇಟೆ ಮುಗಿಸಿದ ಬೆಳ್ಳಕ್ಕಿಗಳ ಹಿಂಡು ಉತ್ತರದಿಂದ ದಕ್ಷಿಣ ದಿಕ್ಕಿಗೆ ತಮ್ಮ ನೆಲೆಗಳತ್ತ ಸಾಲು ಸಾಲಾಗಿ ಹಾರುತ್ತಿದ್ದವು. ಇನ್ನು ವಾಪಸ್ಸು ಹೊರಟು ಬೆಂಗಳೂರಿನ ಗೂಡು ಸೇರಿಕೊಳ್ಳುವುದು ನಮ್ಮ ಮುಂದಿನ ಗುರಿಯಾಯ್ತು.

ಲೇಖಕರ ಕಿರುಪರಿಚಯ
ಡಾ. ಎಂ. ನಾರಾಯಣ ಸ್ವಾಮಿ

ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿನ ಪ್ರಾಣಿ ಶರೀರ ಕ್ರಿಯಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಇವರು ಮೂಲತಃ ಕೋಲಾರ ಜಿಲ್ಲೆಯವರು.

ಕನ್ನಡ ಭಾಷೆಯ ಮೇಲಿನ ಇವರ ಹಿಡಿತ ಅಪೂರ್ವವಾಗಿದ್ದು, ಕನ್ನಡದಲ್ಲಿ ಎರಡು ಪುಸ್ತಕಗಳು ಹಾಗೂ ಅನೇಕ ಲೇಖನಗಳು ಇವರ ಲೇಖನಿಯಿಂದ ಮೂಡಿಬಂದಿವೆ.

Blog  |  Facebook  |  Twitter

1 ಕಾಮೆಂಟ್‌: