ಮಂಗಳವಾರ, ನವೆಂಬರ್ 12, 2013

ರಾಬರ್ಟ್ ಜೆಯ್ಡೆನ್ಬೋಸ್

ರಾಬರ್ಟ್ ಜೆಯ್ಡೆನ್ಬೋಸ್ (Robert Zydenbos) ಅವರು ಒಬ್ಬ ಅಪರೂಪದ ವಿದ್ವಾಂಸ. ಅವರು ಡಚ್-ಕೆನಡಿಯನ್. ಅವರ ಊರು ನೆಧರ್-ಲ್ಯಾಂಡ್. ಅವರು ಭಾರತೀಯ ತತ್ವಶಾಸ್ತ್ರ ಹಾಗು ದ್ರಾವಿಡೀಯ ಅಧ್ಯಯನಗಳ ಬಗ್ಗೆ ಸ್ನಾತಕೋತ್ತರ (ಡಾಕ್ಟೊರೇಟ್) ಪದವಿ ಪಡೆದಿದ್ದಾರೆ. ಜೆಯ್ಡೆನ್ಬೋಸ್ ಅವರು, ಜರ್ಮನಿಯ ಹೈಡೆಲ್ಬರ್ಗ್ ಮಹಾವಿದ್ಯಾಲಯದಲ್ಲಿ ಭಾರತೀಯ ಧರ್ಮಗಳು ಹಾಗೂ ಭಾಷೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೆಯ್ಡೆನ್ಬೋಸ್ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ ಪ್ರಾಧ್ಯಾಪಕರಾಗಿದ್ದರು. ಅವರು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಬೌದ್ಧ ಧರ್ಮದ ಪ್ರಾಧ್ಯಾಪಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

ರಾಬರ್ಟ್ ಜೆಯ್ಡೆನ್ಬೋಸ್ ಅವರು ಭಾರತೀಯ ಸಂಪ್ರದಾಯದಂತೆ ಉಪನಯನ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಇವರು ಭಾರತೀಯ ಸಂಸ್ಕೃತಿಯ ರೀತಿಯಲ್ಲೇ ಮದುವೆ ಮಾಡಿಕೊಂಡಿದ್ದಾರೆ.

ಈ ವ್ಯಕ್ತಿ ನಮ್ಮ ಕಹಳೆಯಲ್ಲಿ ಉಲ್ಲೇಖಗೊಳ್ಳುವುದಕ್ಕೆ ಇದೆಲ್ಲಾ ಮುಖ್ಯ ಕಾರಣಗಳಲ್ಲ. ಅವರು ಒಂದು ಅಪರೂಪದ ಸಾಧನೆ ಮಾಡುವಲ್ಲಿ ವಿಶ್ವದ ಮೊದಲಿಗರಾಗಿದ್ದಾರೆ. ರಾಬರ್ಟ್ ಜೆಯ್ಡೆನ್ಬೋಸ್ ಅವರು, ಕನ್ನಡದ ಪ್ರಚಲಿತ-ಕಾಲ್ಪನಿಕ ಕೃತಿಗಳ (contemporary fiction) ಬಗ್ಗೆ ಸ್ನಾತಕೋತ್ತರ (ಡಾಕ್ಟೊರೇಟ್) ಪದವಿ ಪಡೆದ ಮೊಟ್ಟಮೊದಲ ಪಾಶ್ಚಾತ್ಯರು. ಪಶ್ಚಿಮ ಘಟ್ಟಗಳಲ್ಲಿನ ಕನ್ನಡ ಸಾಹಿತ್ಯದ ಇತಿಹಾಸವನ್ನು ಅತಿ-ವಿಸ್ತಾರವಾಗಿ ಅಧ್ಯಯನ ಮಾಡಿದ್ದಾರೆ. ದಾಖಲಿಸಿದ್ದಾರೆ ಕೂಡ. ಕನ್ನಡ ಸಾಹಿತ್ಯದ ಎಷ್ಟೊಂದು ಮೇರು ಕೃತಿಗಳನ್ನು ಜರ್ಮನ್ ಹಾಗೂ ಆಂಗ್ಲ ಭಾಷೆಗಳಿಗೆ ಅನುವಾದಿಸಿದ್ದಾರೆ.

ಶಿವರಾಮ ಕಾರಂತರ ಕೃತಿಗಳ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ಜೆಯ್ಡೆನ್ಬೋಸ್, ನಮ್ಮ ಮೈಸೂರಿನಲ್ಲಿ ಹದಿನೇಳು ವರ್ಷ ವಾಸ ಮಾಡಿದ್ದಾರೆ. ಕನ್ನಡವಲ್ಲದೆ ಏಳೆಂಟು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಇವರಿಗೆ, ಕನ್ನಡದ ಬಗ್ಗೆ ಇರುವ ಅಭಿಮಾನ ಅಪಾರವಾದದ್ದು. ಇಷ್ಟೆಲ್ಲಾ ಇದ್ದೂ ಕೂಡ ಇವರನ್ನು ನಮ್ಮ ನಾಡಿನಲ್ಲಿ ಕೆಲವರು  ಪರಕೀಯರಂತೆ ಕಂಡು, ಮಲತಾಯಿ ಧೋರಣೆ ಮಾಡಿದ್ದರ ಬಗ್ಗೆ ಅವರಿಗೆ ಅಸಮಾಧಾನ; ನನಗೆ ಸಿಟ್ಟು ಹಾಗೂ ನಾಚಿಕೆ. ಕನ್ನಡವನ್ನು ಮಾತನಾಡುವಾಗ ಒಂದೇ ಒಂದು ಅನ್ಯಭಾಷಾ ಪದವನ್ನು ಇವರು ಬಳಸುವುದಿಲ್ಲ. ಬೇರೆಯವರು ಹಾಗೆ ಮಾಡಿದರೆ ತಕ್ಷಣ ಅವರನ್ನು ತಿದ್ದುತ್ತಾರೆ. ಯಾರಾದರೂ ಅವರನ್ನು "ನೀವು ಎಲ್ಲಿಯವರು" ಎಂದು ಕೇಳಿದರೆ, ಇವರ ಉತ್ತರ, "ನಾನು ಕೆಳನಾಡಿನವನು" ಎನ್ನುತ್ತಾರೆ. ಅದು ನೆಧರ್-ಲ್ಯಾಂಡ್‍ನ ನೇರ ಕನ್ನಡ ಪ್ರಯೋಗ.

ಕನ್ನಡವನ್ನು ಮರೆತು ಇಂಗ್ಲೀಷಿಗೆ ಶರಣಾದ ನಮ್ಮ ಮಧ್ಯೆ ಪಾಶ್ಚಾತ್ಯರೊಬ್ಬರು ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾಡಿದ್ದನ್ನು ಕೇಳಿದರೆ ನಮ್ಮ ಬಗ್ಗೆ ನಮಗೆ ಸ್ವಲ್ಪವಾದಾರೂ ಅಸಮಾಧಾನ ಆಗಬೇಕು ಅಲ್ಲವೇ. ಅವರು ಹಲವು ಬಾರಿ ಹೇಳಿದ್ದುಂಟು: "ನೀವೆಲ್ಲ ಬೇರೆ ಭಾಷೆಯ ಗುಲಾಮರಾಗಿದ್ದಾಯಿತು. ಒಂದು ದಿನ ಈ ನಾಡಿನಲ್ಲಿ ಕನ್ನಡ ಕಲಿಯಲು ಆಗದೆ ಇದ್ದರೆ, ನಮ್ಮ ನಾಡಿಗೆ ಬನ್ನಿ. ನಾವು ಇದನ್ನು ಅತ್ಯಂತ ಪ್ರೀತಿಯಿಂದ ಕಾಪಾಡಿಕೊಂಡಿರುತ್ತೇವೆ." ನಮ್ಮ ಭಾಷೆಯನ್ನು ನಮಗೆ ಹೇಳಿಕೊಡಲು ಅವರು ಹಿಂಜರಿಯುವುದಿಲ್ಲ, ನಮ್ಮ ಭಾಷೆಯನ್ನು ಕಲಿಯಲು ನಾವೇ ಮುಂಜರಿಯಬೇಕಷ್ಟೇ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಕನ್ನಡವನ್ನು ಹೇಳಿಕೊಡದೇ ಇದ್ದರೆ, ಅವರು ಹೇಳಿದ ಆ ದಿನ ಬಹುದೂರವೇನೂ ಇಲ್ಲ. ಜಾಗ್ರತೆ.

ಕೊನೆಯದಾಗಿ ಜೆಯ್ಡೆನ್ಬೋಸರ ಕನ್ನಡ ಪ್ರೇಮದ ಬಗ್ಗೆ ಒಂದು ಚಿಕ್ಕ ಉಲ್ಲೇಖ:

ಮೈಸೂರಿನಲ್ಲಿ ಇವರೊಂದಿಗೆ ಇದ್ದ ಇವರ ಮಗಳು, ಏನಾದರೂ ತರಲು ಹೇಳಿದ್ದರೆ, ಇವರು ತಮ್ಮ ಕೆಲಸಗಳ ಮಧ್ಯೆ ಮರೆತುಹೋಗುತ್ತಿದ್ದರಂತೆ. ಎರಡು ಮೂರು ಬಾರಿ ಜ್ಞಾಪಿಸಿದಾಗಲೂ ಕೆಲಸ ಆಗದೆ ಇದ್ದರೆ, ಇವರ ಮಗಳು "ನಾಳೆ ತರದಿದ್ದರೆ ನಾನು ಡಚ್ ಭಾಷೆಯಲ್ಲಿ ಮಾತನಾಡುತ್ತೇನೆ" ಅನ್ನುತ್ತಿದ್ದರಂತೆ. ಹಾಗೆಂದ ಮರುದಿನವೇ ಮಗಳಿಗೆ ಅವರು ಕೇಳಿದ್ದು ತಪ್ಪದೇ ಬಂದು ತಲುಪುತ್ತಿತ್ತಂತೆ. ಇದು ಮಗಳ ಕನ್ನಡದ ಬಗ್ಗೆ ಕನ್ನಡದ ಮಗನಿಗಿದ್ದ ಕಾಳಜಿ!

ಲೇಖಕರ ಕಿರುಪರಿಚಯ
ಶ್ರೀ ವಿಜಯ್ ಸಿ. ಎನ್.

ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಕಾರ್ಯನಿವಹಿಸುತ್ತಿರುವ ಇವರು ಮೂಲತಃ ಬೆಂಗಳೂರಿನವರು. ಇವರ ಸಾಹಿತ್ಯಿಕ ಜ್ಞಾನ ಹಾಗೂ ನೈಪುಣ್ಯತೆಗಳು ತಲೆತಲಾಂತರದಿಂದ ಬಂದಿರುವಂಥದ್ದು.

ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ