ಶನಿವಾರ, ನವೆಂಬರ್ 2, 2013

ನನ್ನ ಬುದ್ಧಿಗೆ ತಿಳಿದದ್ದನ್ನು ನಾನು ಮಾಡಿದ್ದೇನೆ.

ಒಂದು ದಿನ ಡಿ.ವಿ.ಜಿ. ಯವರು ತಮ್ಮ ಗೆಳೆಯರೊಂದಿಗೆ ಬೆಳಿಗ್ಗೆ ಬೆಂಗಳೂರಿನಲ್ಲಿ ನರಹರಿ ಗುಡ್ಡದ ಕಡೆಗೆ ವಾಕಿಂಗ್ ಹೊರಟಿದ್ದರು. ಅಲ್ಲಿ ಅವರಿಗೆ ಪರಿಚಿತರಾದ ಸೆಂಟ್ರಲ್ ಕಾಲೇಜಿನ ಒಬ್ಬ ಸೀನಿಯರ್ ಪ್ರೊಫೆಸರ್ ಗೋಣಿಚೀಲದ ಮೇಲೆ ಕೆಲವು ಪುಸ್ತಕಗಳನ್ನು ಇಟ್ಟುಕೊಂಡು ಕಾಗದದ ಮೇಲೆ ಲೆಕ್ಕ ಮಾಡುತ್ತಿದ್ದರು. ಅದೇನೆಂದು ಡಿ.ವಿ.ಜಿ. ಯವರು ವಿಚಾರಿಸಿದಾಗ ಈ ದಿನದ ಪಾಠದ ಲೆಕ್ಕವೆಂದು ಪ್ರೊಫೆಸರರು ಹೇಳಿದರು. 'ನೀವು ಸೀನಿಯರ್ ಪ್ರೊಫೆಸರ್ ಇದ್ದೀರಿ, ಅಲ್ಲದೇ ಗಣಿತಶಾಸ್ತ್ರದಲ್ಲಿ ಮಹಾಪಂಡಿತರು ಕೂಡಾ, ಆದರೂ ಪಾಠಕ್ಕೆ ಹೋಗುವಾಗ ಲೆಕ್ಕ ಮಾಡಿಕೊಂಡು ಹೋಗಬೇಕಾ?' ಎಂದರು ಡಿ.ವಿ.ಜಿ. ಯವರು.

'ಪಾಂಡಿತ್ಯವೇನೋ ಸರಿ. ಆದರೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಮಹಾ ಬುದ್ಧಿವಂತರಿರುತ್ತಾರೆ. ನಮ್ಮ ತಪ್ಪುಗಳನ್ನು ಹುಡುಕಬಲ್ಲವರೂ ಇರುತ್ತಾರೆ. ಸೂಕ್ಷ್ಮವಾದ ಪ್ರಶ್ನೆಗಳನ್ನು ಕೇಳುವವರೂ ಇರುತ್ತಾರೆ. ಅವರೆದುರು ನಿಲ್ಲುವಾಗ ತಾವು ತಯಾರಿಲ್ಲವೆಂದು ಅವರಿಗೆ ಗೊತ್ತಾದರೆ ನಾವು ಬಹಳ ಸಣ್ಣವರಾಗುತ್ತೇವೆ. ಪ್ರತಿದಿನದ ತಮ್ಮ ಪಾಠದ ಬಗ್ಗೆ ಅಧ್ಯಯನ ಮಾಡಬೇಕಾದದ್ದು ಉಪಾಧ್ಯಾಯನ ಕರ್ತವ್ಯ. ಹಾಗೆ ವ್ಯಾಸಂಗ ಮಾಡಿಕೊಳ್ಳದೇ ಕ್ಲಾಸಿಗೆ ಹೋದರೆ ನಾವು ಕರ್ತವ್ಯಭ್ರಷ್ಟರಾಗುತ್ತೇವೆ’ ಎಂದರು ಪ್ರೊಫೆಸರರು. ಹೀಗೆ ತಮ್ಮ ಕರ್ತವ್ಯದ ಬಗ್ಗೆ ಅಪಾರ ಶ್ರದ್ಧೆ, ಪ್ರೀತಿ, ಕಾಳಜಿ ಇದ್ದ ಪ್ರೊಫೆಸರ್ ಬೇರೆ ಯಾರೂ ಅಲ್ಲ, ಅವರೇ ಬೆಳ್ಳಾವೆ ವೆಂಕಟನಾರಾಣಪ್ಪನವರು.

ವೆಂಕಟನಾರಾಣಪ್ಪನವರ ಸ್ವಂತ ಊರು ತುಮಕೂರು ಜಿಲ್ಲೆಯ ಬೆಳ್ಳಾವೆ. 1872 ರಲ್ಲಿ ಜನಿಸಿದ ವೆಂಕಟನಾರಾಣಪ್ಪನವರ ತಂದೆ ವೆಂಕಟಕೃಷ್ಣಯ್ಯ ಅಂಚೆ ಇಲಾಖೆಯಲ್ಲಿದ್ದರು. ತಾಯಿ ಲಕ್ಷ್ಮಿದೇವಿ. ವೆಂಕಟನಾರಾಣಪ್ಪನವರ ಪ್ರಾಥಮಿಕ ಶಿಕ್ಷಣ ಬೆಳ್ಳಾವೆಯ ಕೂಲಿಮಠದಲ್ಲಿ ಪ್ರಾರಂಭವಾಯಿತು. ಪ್ರೌಢಶಿಕ್ಷಣ ತುಮಕೂರಿನಲ್ಲಿ ಮುಂದುವರೆಯಿತು. ತುಮಕೂರಿನಲ್ಲಿ ಕಾಲೇಜು ಇಲ್ಲದ್ದರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿ ಬಿ.ಎ. ಪದವಿ ಪಡೆದರು. ಆಗ ಜಾನ್-ಕುಕ್ ರವರು ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರಿಗೆ ತಮ್ಮ ಕಾಲೇಜು ಮತ್ತು ವಿದ್ಯಾರ್ಥಿಗಳ ಮೇಲೆ ಅಪಾರ ಕಾಳಜಿ ಮತ್ತು ಅಭಿಮಾನವಿತ್ತು. ವೆಂಕಟನಾರಾಣಪ್ಪನವರ ಆದ್ಯವಸಾನ ಪ್ರವೃತ್ತಿಯನ್ನು ಗಮನಿಸಿದ ಜಾನ್-ಕುಕ್ ರವರು ಅವರ ಬಿ.ಎ. ಮುಗಿದ ಕೂಡಲೆ ತಮ್ಮ ಕಾಲೇಜಿನಲ್ಲಿ ಅಧ್ಯಾಪಕರನ್ನಾಗಿ ನೇಮಿಸಿಕೊಂಡರು.

ವೆಂಕಟನಾರಾಣಪ್ಪನವರು "ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ" ಎಂಬಂತೆ ಇದ್ದರು. ಅಂದರೆ ಹೊರಗೆ ಕಠಿಣವಾದರೂ ಅಂತರಂಗದಲ್ಲಿ ಕರುಣೆ ಉಳ್ಳವರಾಗಿದ್ದರು. ಇವರ ನಡೆ ನುಡಿ ಸ್ವಭಾವಗಳನ್ನು ಗಮನಿಸಿದ ಜಾನ್-ಕುಕ್ ರವರು ಮದರಾಸಿಗೆ ಹೋಗಿ ಎಂ.ಎ. ಓದಲು ಸಲಹೆ ನೀಡಿದರು. ಅವರ ಆಣತಿಯಂತೆ ಎಂ.ಎ. ಪಾಸಾದ ನಂತರ ಮತ್ತೆ ಸೆಂಟ್ರಲ್ ಕಾಲೇಜಿಗೆ ಬಂದು ಸೇರಿದರು. ಅವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಗಳು ಅಚ್ಚುಮೆಚ್ಚಿನ ವಿಷಯಗಳಾಗಿದ್ದವು. ಆದರ್ಶ ಅಧ್ಯಾಪಕರ ಎಲ್ಲಾ ಗುಣಗಳೂ ಇದ್ದುದರಿಂದ ಬಹುಬೇಗ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ 1927 ರಲ್ಲಿ ಎಂ.ಎ. ಕನ್ನಡ ಪ್ರಾರಂಭವಾಯಿತು. ಅದಕ್ಕಾಗಿ ಪೂರ್ಣ ಪ್ರಮಾಣದ ಪ್ರೊಫೆಸರರನ್ನು ನೇಮಿಸಲು ನಿರ್ಧರಿಸಿ, ಅರ್ಜಿ ಆಹ್ವಾನಿಸಲಾಯಿತು. ಅನೇಕ ಅರ್ಜಿಗಳು ಬಂದವು. ಆಗ ವೈಸ್-ಚಾನ್ಸಲರ್ ಆಗಿದ್ದ ಶ್ರೀ ಹೆಚ್. ವಿ. ನಂಜುಂಡಯ್ಯನವರು, ಬಂದ ಅರ್ಜಿಗಳಲ್ಲಿ ಯಾರೋ ಗೊತ್ತಾದ ಒಬ್ಬರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆಂದು ಸುದ್ದಿ ಹರಡಿತು.

ಆ ನಿರ್ದಿಷ್ಠ ವ್ಯಕ್ತಿಯ ಅರ್ಹತೆ ಕುರಿತು ಅನೇಕರಿಗೆ ಭಿನ್ನಾಭಿಪ್ರಾಯವಿತ್ತು. ಈ ಸಂದರ್ಭದಲ್ಲಿ ವೆಂಕಟನಾರಾಣಪ್ಪನವರು ಆ ವ್ಯಕ್ತಿಯ ಕೆಲವು ಲೇಖನಗಳನ್ನು ಸಂಗ್ರಹಿಸಿ ಅವುಗಳಲ್ಲಿನ ತಪ್ಪುಗಳನ್ನು ಪಟ್ಟಿಮಾಡಿ ಅಚ್ಚುಮಾಡಿಸಿ ಸೆನೆಟ್ ನ ಸದಸ್ಯರಿಗೆಲ್ಲ ಹಂಚಿದರು.

ಈ ಸುದ್ದಿ ನಂಜುಂಡಯ್ಯನವರಿಗೆ ತಿಳಿಯಿತು. ವೆಂಕಟನಾರಾಣಪ್ಪನವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. "ಪ್ರೊಫೆಸರರ ಕೆಲಸ ಬಹಳ ಜವಾಬ್ದಾರಿಯದು. ಅದಕ್ಕೆ ಅರ್ಹ ಪಾಂಡಿತ್ಯವುಳ್ಳವರು, ಎಲ್ಲರಿಗೂ ಒಪ್ಪಿಗೆಯುಳ್ಳವರೂ ಇರಬೇಕು. ಅದಕ್ಕಾಗಿ ನನ್ನ ಬುದ್ಧಿಗೆ ತಿಳಿದದ್ದನ್ನು ನಾನು ಮಾಡಿದ್ದೇನೆ" ಎಂದರು ವೆಂಕಟನಾರಾಣಪ್ಪ. ‘'ನೀವು ಡಿಫಮೊಷನ್(ಅಪಮಾನ ಮಾಡು)ನಂತಹ ಅಕಾರ್ಯ ಮಾಡಿದ್ದೀರಿ. ಅಲ್ಲದೇ ಸರಕಾರದ ಆಡಳಿತ ವಿಷಯದಲ್ಲಿ ಕೈಹಾಕಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವಿರಿ' ಎಂದು ನಂಜುಂಡಯ್ಯನವರು ಘರ್ಜಿಸಿದರು. ಕೋರ್ಟ್ ನೀಡುವ ಶಿಕ್ಷೆಯನ್ನು ಅನುಭವಿಸುವುದಾಗಿ ಹೇಳಿದ ವೆಂಕಟನಾರಾಣಪ್ಪ ತಕ್ಷಣವೇ ರಾಜೀನಾಮೆ ಬರೆದುಕೊಟ್ಟು ಹೋದರು.

ಆಗ ಮೆಟ್-ಕಾಫ್ ರವರು ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರಿಗೆ ಈ ವಿಷಯ ತಿಳಿದು ನಂಜುಂಡಯ್ಯನವರ ಬಳಿ ಹೋಗಿ ವೆಂಕಟನಾರಾಣಪ್ಪನವರು ಸರಿಯಾದ ಕಾರ್ಯ ಮಾಡಿರುವುದಾಗಿ ವಿವರಿಸಿ, ಅವರ ರಾಜೀನಾಮೆಯನ್ನು ವಾಪಾಸ್ಸು ತಂದರು. ವೆಂಕಟನಾರಾಣಪ್ಪನವರು ಧೈರ್ಯದಿಂದ ಈ ಕೆಲಸ ಮಾಡದಿದ್ದರೆ ಮೈಸೂರು ವಿ.ವಿ. ಪ್ರಥಮವಾಗಿ ಒಬ್ಬ ಅಸಮರ್ಥ ಕನ್ನಡ ಪ್ರೊಫೆಸರರನ್ನು ಪಡೆಯಬೇಕಾಗುತ್ತಿತ್ತು. ಅದನ್ನು ತಪ್ಪಿಸಿದ ಕೀರ್ತಿ ವೆಂಕಟನಾರಾಣಪ್ಪನವರಿಗೆ ಸಲ್ಲುತ್ತದೆ. ಮುಂದೆ ಒಬ್ಬ ಯೋಗ್ಯ ಪ್ರೊಫೆಸರ್ ಆಗಿ ಬಿ. ಕೃಷ್ಣಪ್ಪನವರು ಆಯ್ಕೆಯಾಗಿ ಬಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ವೆಂಕಟನಾರಾಣಪ್ಪನವರು ಪ್ರಮುಖರು. ಪರಿಷತ್ತು ಪ್ರಾರಂಭವಾದಾಗಿನಿಂದಲೂ ತಮಗೆ ನಡೆದಾಡಲು ಸಾಧ್ಯವಿರುವ ತನಕ ಪರಿಷತ್ತಿನ ಎಲ್ಲಾ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ಕಸ ಗುಡಿಸುವುದರಿಂದ ಸಮ್ಮೇಳನದ ವ್ಯವಸ್ಥೆಯವರೆಗಿನ ಎಲ್ಲಾ ಕಾರ್ಯಗಳಲ್ಲೂ ತನ್ಮಯತೆಯಿಂದ ಭಾಗವಹಿಸುತ್ತಿದ್ದರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಪರಿಷತ್ತಿನ ಪತ್ರಿಕೆಯ ಸಂಪಾದಕರಾಗಿ ಅನೇಕ ಕಾರ್ಯಗಳನ್ನು ಮಾಡಿದರು. 'ಪರಿಷತ್ತು ಎಂದರೆ ವೆಂಕಟನಾರಾಣಪ್ಪ' ಎಂಬಂತೆ ಶ್ರದ್ಧೋತ್ಸಾಹದಿಂದ ಅಹರ್ನಿಶಿ ದುಡಿದರು.

ವೆಂಕಟನಾರಾಣಪ್ಪನವರು ಅನೇಕ ಸೃಜನಶೀಲ ಸಾಹಿತ್ಯ ರಚಿಸಿದರು. ಅವರ ನಾಡು ನುಡಿ ಸೇವೆಯನ್ನು ಗಮನಿಸಿದ ಪರಿಷತ್ತು, ಅವರನ್ನು 1937 ರಲ್ಲಿ ಜಮಖಂಡಿಯಲ್ಲಿ ನಡೆದ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು. ವಿವಿಧ ಸಾಮಾಜಿಕ ಸೇವಾ ಕಾರ್ಯ ಮಾಡಿದ ವೆಂಕಟನಾರಾಣಪ್ಪನವರು 1943 ರಲ್ಲಿ ಅಸ್ತಂಗತರಾದರು. ಆದರೂ ಅವರ ಸತ್ಕಾರ್ಯ ಇಂದಿಗೂ ಧೃವತಾರೆಯಂತೆ ಪ್ರಜ್ವಲಿಸುತ್ತಿದೆ.

ಲೇಖಕರ ಕಿರುಪರಿಚಯ
ಶ್ರೀ ಗುರುಬಸವರಾಜ ಅರ್. ಬಿ.

ಬಳ್ಳಾರಿ ಜಿಲ್ಲೆಯ ಹೊಳಗುಂದಿ ಇವರ ಸ್ವಗ್ರಾಮ. ಪ್ರಸ್ತುತ ಹಗರಿಬೊಮ್ಮನಹಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಓದುವುದು, ವೈಜ್ಞಾನಿಕ ಮತ್ತು ಶೈಕ್ಷಣಿಕ ಲೇಖನಗಳನ್ನು ಬರೆಯುವುದು ಹಾಗೂ ಪವಾಡ ರಹಸ್ಯಗಳನ್ನು ಬಯಲು ಮಾಡುವುದು ಇವರ ಹವ್ಯಾಸ.

Blog  |  Facebook  |  Twitter

4 ಕಾಮೆಂಟ್‌ಗಳು:

 1. ಶ್ರೀಯುತ ವೆಂಕಟನಾರಣಪ್ಪನವರ ಬಗ್ಗೆ ಇಷ್ಟು ವಿವರವಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 2. ಇಂದಿನ ಯುವ ಪೀಳಿಗೆ ಇಂಥಹ ಮಹನೀಯರ ಕುರಿತು ಅರಿತುಕೊಂಡು ಅವರ ಸಾದನೆಯ ಹಾದಿ ಹಿಡಿಯಲಿ ಹಾಗು ಪ್ರತಿಯೊಬ್ಬ ಶಿಕ್ಷಕರಲ್ಲೂ ಒಬ್ಬ ವೆಂಕಟನಾರಾಯಣಪ್ಪ ನೆಲೆಸಲಿ ಎಂದು ಆಶಿಸುತ್ತೇನೆ ಸೊಗಸಾದ ಬರಹಕ್ಕೆ ಧನ್ಯವಾದಗಳು :)

  ಪ್ರತ್ಯುತ್ತರಅಳಿಸಿ
 3. ಬೆಳ್ಳಾವೆ ವೆಂಕಟನಾರಾಣಪ್ಪನವರ ಕರ್ತವ್ಯನಿಷ್ಠೆ ಹಾಗೂ ಜಾಣ್ಮೆಗೆ ಸರಿಸಾಟಿ ಅವರೇ. ಸರಳ ಹಾಗೂ ಶುದ್ಧವಾದ ಲೇಖನ. ಅಭಿನಂದನೆಗಳು..

  ಪ್ರತ್ಯುತ್ತರಅಳಿಸಿ
 4. BELLAVE VEANKATANARANAPA NAVARA BAGGE NIMAGE MATTASTU TILIYUVA AASAKTI IDDARE EE PUSTKKAGALLANNU OADABAUDU.., PAMPAYATRE BY V.C., YETTARADA YAKTIGALU BY H.S.K,. BARAGARANA BADUKU,BY ANAKRU, BHASHANAGALU MATTU LEKHANAGALU BY A.R. KRISHNA SHASTRI, EE PUSTAKAGALLNU, TAAVU ODABAHUDU.. MATTE AVARA SAMPAADIKATVADALLI HORABANDA "VIGNANA " PATRIKEYANNU, BENGALOORINA UDAYABANU KA LALASANGA ,GAVIPURAM MARU PRAKATISIRUTTARE. SAMPUTA 1 MATTU 2, BELE 500/ ROOPAYIGALU.

  ಪ್ರತ್ಯುತ್ತರಅಳಿಸಿ