ಮಂಗಳವಾರ, ನವೆಂಬರ್ 19, 2013

ನಾರಿ ಎಂಬ ಮಾರಿ

ಭಗವಂತನನ್ನು ಸಂಕೀರ್ತನ ರೂಪದಿಂದ ಸ್ತೋತ್ರ ಮಾಡಿ ಧರ್ಮಪ್ರಚಾರ ಮಾಡುವುದನ್ನು "ಭಾಗವತ ಧರ್ಮ" ಎನ್ನಲಾಗುತ್ತದೆ. ಭಾಗವತ ಧರ್ಮವನ್ನು ಸರಳಗನ್ನಡದಲ್ಲಿ ಪಸರಿಸಿದವರು ಹರಿದಾಸರು. ಅನ್ಯಧರ್ಮೀಯರಾದರೂ ದಾಸಸಾಹಿತ್ಯ ರಚನೆಯ ಮೂಲಕ ಪಾರಮಾರ್ಥದತ್ತ ಮನಹರಿಸಿದವರು ಶ್ರೀ ರಾಮದಾಸರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿಗೆ ಸೇರಿದ ಜೋಳದಹೆಡಿಗೆ ಗ್ರಾಮದಲ್ಲಿ ಮುಸಲ್ಮಾನ ಪಿಂಜಾರ ಮನೆತನದಲ್ಲಿ ದಾಸರು ಜನಿಸಿದರು. ಖಾಜಾಸಾಹೇಬ, ಪೀರಮ್ಮ ದಂಪತಿಗಳ ಮಗ ಬಡೇಸಾಹೇಬ. ಬಡತನದಲ್ಲೂ ವಿದ್ಯಾಭ್ಯಾಸದ ಅನುಕೂಲ ಬಡೇಸಾಹೇಬರಿಗೆ ದೊರೆಯಿತು. ಇಸ್ಲಾಂ ಧರ್ಮೀಯರಾದರೂ, ಹಿಂದೂ ಧರ್ಮದ ವೈದಿಕ ಸಂಪ್ರದಾಯ ಅವರನ್ನು ಆಕರ್ಷಿಸಿತ್ತು. ಉದರ ಪೋಷಣೆಗಾಗಿ ಕುಟುಂಬದೊಡನೆ ಗೋನವಾರಕ್ಕೆ ಬಂದು ನೆಲೆಸಿದರು. ಆ ನಂತರ ಗೋನವಾರದ ರಾಮದಾಸರೆಂದೇ ಹೆಸರಾದರು. ವೈದಿಕ ಸಂಪ್ರದಾಯದ ಗೆಳೆಯರ ಒಡನಾಟದಿಂದ ಸಂಗೀತ, ಭಜನೆ, ಪುರಾಣ ಪ್ರವಚನಗಳ ಪರಿಚಯವಾಯ್ತು. ಚಿತ್ರಕಲೆಯಲ್ಲೂ ರಾಮದಾಸರಿಗೆ ನೈಪುಣ್ಯವಿತ್ತು. ರಾಮಾವಧೂತರು ಬಡೇಸಾಹೇಬರಿಗೆ ಹಿಂದೂ ಧರ್ಮಗ್ರಂಥಗಳ ಜ್ಞಾನವನ್ನು ನೀಡಿದರು. ಶ್ರೀರಾಮನ ಪರಮಭಕ್ತರಾಗಿ, ಅದೇ ಅಂಕಿತದಲ್ಲಿ ಕೃತಿಗಳನ್ನು ರಚಿಸಿ ಗೋನವಾರದ ರಾಮದಾಸರಾದರು.

ದಾಸಕೂಟದ ಪರಂಪರೆಗೆ ಅನುಸಾರವಾಗಿ ರಾಮದಾಸರು ಕೃತಿಗಳನ್ನು ರಚಿಸಿದರು. ಇವರ ಕೃತಿಗಳಲ್ಲಿನ ಪೌರಾಣಿಕ ಪ್ರಜ್ಞೆ ಮೆಚ್ಚುವಂತಹದ್ದು. ದ್ವೈತ ಮತದ ಹರಿ ಸರ್ವೋತ್ತಮ ತತ್ವವನ್ನು ತಮ್ಮ ಕೀರ್ತನೆಗಳಲ್ಲಿ ಪ್ರತಿಪಾದಿಸಿದ್ದಾರೆ. ತಮ್ಮ ಒಂದು ಕೀರ್ತನೆಯಲ್ಲಿ 'ನಾರಿ ಎಂಬ ಮಾರಿ' ಎಂದು ಹೇಳುತ್ತಾ ಅನೇಕ ಪೌರಾಣಿಕ ಪ್ರಸಂಗಗಳನ್ನು ನೆನಪಿಸುತ್ತಾರೆ.

ನಾರ್ಯೆಂಬ ಮಾರಿಯನು ಆರು ನಿರ್ಮಿಸಿದರೋ
ಸೂರೆಗೊಂಡು ಮೂಲೋಕ ಘೋರಿಸುವುದಕಟ        || ಪ ||

ಹರಿಯ ಧರೆಗಿಳಿಸಿತು ಹರನ ಕಾಡಿಗೆಳಸಿತು
ಶಿರವೊಂದನೆಗರಿತು ವರ ಬ್ರಹ್ಮನಕಟ        || 1 ||

ರಂಧ್ರೆಗೊಳಿಸಿತು ದೇವೇಂದ್ರನಂಗಾಂಗವನು
ಚಂದ್ರನ ಮುಖ ಪ್ರಭೆಗೆ ಕುಂದಿಟ್ಟಿತಕಟ        || 2 ||

ಅಸಮ ವಾಲಿಯ ಬಲಕೆ ಮಸಿ ಮಣ್ಣು ಹಾಕಿಸಿತು
ದಶಶಿರನ ವರವಖಿಲ ಪುಸಿಯೆನಿಸಿತಕಟ        || 3 ||

ಹಾರಿಸಿತು ಕೀಚಕನ ಕೌರವನ ಮನೆ ಮುರಿಯಿತು
ಧೀರ ಪಾಂಡವರನು ತಿರಿದುಣಿಸಿತಕಟ        || 4 ||

ನರಕಕ್ಕೆ ತವರಿದನು ಸ್ಮರಿಸಲಳವಲ್ಲೆನೆಗೆ
ಹರಿದರಭಯ ತ್ವರಿತ ವರದ ಶ್ರೀರಾಮ        || 5 ||

ಐದು ದ್ವಿಪದಿಗಳಲ್ಲಿ ಹೆಣ್ಣಿನ ವ್ಯಾಮೋಹದಿಂದ ಹಾಳಾದವರನ್ನು ಕುರಿತು ವಿವರಿಸುತ್ತಾರೆ. ಪರಸ್ತ್ರೀಗೆ ಆಶಿಸಿದವರ ದುರ್ಗತಿಯನ್ನು ಹೇಳುತ್ತಾರೆ. ನಾರಿಯೆಂಬ ಮಾರಿಯನ್ನು ಮೂರುಲೋಕದಲ್ಲೂ ಘೋರ ದುಃಖ ಉಂಟು ಮಾಡುವವಳೆಂದು ಹೇಳುತ್ತಾರೆ.

1. ಭೃಗು ಮುನಿಯು ಶ್ರೀಹರಿಯ ವಕ್ಷಸ್ಥಳಕ್ಕೆ ಕಾಲಿನಿಂದ ಒದ್ದಾಗ ಅಪಮಾನಿತಳಾದ ಲಕ್ಷ್ಮೀದೇವಿಯು ಕೊಲ್ಲಾಪುರಕ್ಕೆ ಬರುತ್ತಾಳೆ. ಅವಳನ್ನು ಹುಡುಕಿಕೊಂಡು ಶ್ರೀಹರಿಯು ಧರೆಗಿಳಿದು ಬರುತ್ತಾನೆ. (ವೆಂಕಟೇಶ ಮಹಾತ್ಮೆ). ದಕ್ಷ ಯಜ್ಞದಲ್ಲಿ ದಗ್ಧಳಾದ ಸತೀದೇವಿಯ ನೆನಪಲ್ಲಿ ಹರನು ಕಾಡಿನಲ್ಲಿ ಅಲೆದಾಡುವು ಪ್ರಸಂಗವನ್ನು ಮತ್ತು ಬ್ರಹ್ಮನ ಐದನೇ ತಲೆಯನ್ನು ಹರನು ಕತ್ತರಿಸಿದ ಪ್ರಸಂಗವನ್ನು ಚಿತ್ರಿಸಿದ್ದಾರೆ.

2. ಗೌತಮ ಋಷಿಗಳ ಪತ್ನಿ ಅಹಲ್ಯೆ. ಈಕೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಗೌತಮರಂತೆ ಮಾರುವೇಷ ಧರಿಸಿ ಬಂದು ಆಕೆಯ ಪಾತಿವ್ರತ್ಯ ಕೆಡಿಸಿದ್ದರಿಂದ ಗೌತಮರಿಂದ ಸಹಸ್ರಾಕ್ಷನಾಗೆಂದು ಶಪಿಸಲ್ಪಡುತ್ತಾನೆ. ಚಂದ್ರದೇವ ಗುರು ಬೃಹಸ್ಪತಿಯ ಪತ್ನಿಯನ್ನು ಅಪಹರಿಸಿದ್ದರಿಂದ ಅವನ ಪ್ರಭೆ ಕುಂದಲೆಂದು ಬೃಹಸ್ಪತಿ ಶಾಪ ನೀಡಿದ ಕಥೆ.

3. ವಾಲಿ ಮಹಾನ್ ಪರಾಕ್ರಮಿ, ತನ್ನ ತಮ್ಮ ಸುಗ್ರೀವನ ಪತ್ನಿಯಾದ ರುಮೆಯನ್ನು ಹೊಂದಿ ಸುಗ್ರೀವನ ಶತೃವಾಗುತ್ತಾನೆ. ರಾಮ ಸುಗ್ರೀವರ ಭೇಟಿಯಾದ ನಂತರ ರಾಮ ವಾಲಿಯನ್ನು ಕೊಲ್ಲುತ್ತಾನೆ. ದಶಕಂಠನಾದ ರಾವಣನು ಬ್ರಹ್ಮಜ್ಞಾನಿಯೂ, ಅನೇಕ ವರಗಳನ್ನು ಪಡೆದವನಾಗಿದ್ದರೂ ಸೀತೆಯನ್ನು ಕದ್ದೊಯ್ದು ರಾಮನಿಂದ ಹತನಾದನು.

4. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯು ವಿರಾಟನ ಅರಮನೆಯಲ್ಲಿ ಸೈರಂಧ್ರಿಯಾಗಿರುತ್ತಾಳೆ. ವಿರಾಟನ ಮೈದುನ ಕೀಚಕ ಅವಳನ್ನು ಬಯಸಿದಾಗ, ಭೀಮನ ಕೈಯಲ್ಲಿ ಮರಣಿಸುತ್ತಾನೆ. ದ್ರೌಪದಿಯ ಕಾರಣದಿಂದಾಗಿ ಕೌರವ ನಾಶವಾಗುತ್ತಾನೆ. ಜಗತ್ತಿನಲ್ಲೇ ಅಸಮ ಪರಾಕ್ರಮಿಗಳಾದ ಪಾಂಡವರು ವನವಾಸ ಅನುಭವಿಸಬೇಕಾಗುತ್ತದೆ.

5. ನಾರಿಯೆನ್ನುವಳು ನರಕಕ್ಕೆ ತವರೆಂದು ದಾಸರು ಹೇಳುತ್ತಾರೆ. ಅದನ್ನು ಸ್ಮರಿಸಲೂ ಶಕ್ಯವಿಲ್ಲವೆಂದು ಹೇಳುತ್ತಾರೆ. ಶ್ರೀರಾಮನು ಭಯ ಹರಿಸಿ ಅಭಯ ನೀಡಲೆಂದು ಪ್ರಾರ್ಥಿಸುತ್ತಾರೆ.

ಇಂತಹ ಅನೇಕ ಕೀರ್ತನೆಗಳನ್ನು ರಾಮದಾಸರು ರಚಿಸಿದ್ದಾರೆ. ರಾಮ ರಹೀಮರನ್ನು ಸಮವಾಗಿ ಭಾವಿಸಿ ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಿದ್ದಾರೆ. ರಾಮದಾಸರ ಕುಲದ ಬಗ್ಗೆ ಪ್ರಶ್ನಿಸಿದಾಗ "ನಳಿನನಾಭನ ಪ್ರೇಮಗಳಿಸುವ ಕುಲ ನಂದು" ಎಂದಿದ್ದಾರೆ.

ಮುಸ್ಲಿಮರಾದರೂ ಸ್ವಂತ ಪ್ರಯತ್ನ, ಸಾಧನೆ ಮುಖಾಂತರ ದಾಸ ಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿದ್ದಾರೆ. ಹರಿ ಕಾರುಣ್ಯಕ್ಕೆ ಶುದ್ಧ ಭಕ್ತಿಯೇ ಸಾಕೆಂಬುದನ್ನು ಸಾಬೀತುಗೊಳಿಸಿದ್ದಾರೆ. ಮತ ಕುಲಗಳನ್ನು ಮೀರಿ ಹಿಂದೂ-ಮುಸಲ್ಮಾನ ಧರ್ಮಗಳ ಐಕ್ಯತೆಯ ಸಂಕೇತವಾಗಿದ್ದಾರೆ.

ಲೇಖಕರ ಕಿರುಪರಿಚಯ
ಶ್ರೀಮತಿ ವಾಣಿಶ್ರೀ ಗಿರೀಶ್

ಬೆಂಗಳೂರಿನ ಎ.ಪಿ.ಎಸ್. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ಇವರು ದಾಸ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ್ದಾರೆ.

ಕನ್ನಡ ಸಾಹಿತ್ಯ ರಚನೆ ಹಾಗೂ ಸಂಗೀತದ ಕಡೆಗೆ ಹೆಚ್ಚಿನ ಒಲವು ತೋರುವ ಇವರ ಅನೇಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ರಾಮದಾಸರ ಬಗ್ಗೆ ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದೀರಿ. ಸ್ತ್ರೀ ವ್ಯಾಮೋಹದ ಬಗ್ಗೆ ರಾಮದಾಸರ ವಚನಗಳನ್ನು ಉಲ್ಲೇಖಿಸಿದ್ದೀರಿ. ಇದು ಸರ್ವಕಾಲಿಕ ಸತ್ಯ.
    ರಾಮದಾಸರು ಜನ್ಮದಾರಭ್ಯ ಪಿಂಜಾರ ಕುಲದವರು ಎಂದು ತಿಳಿಸಿದ್ದೀರಿ. ಜೊತೆಗೆ ಅವರ ಮೂಲ ಹೆಸರನ್ನು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.

    ಪ್ರತ್ಯುತ್ತರಅಳಿಸಿ
  2. @RBG Holagundi ಅವರ ಮೂಲ ಹೆಸರು ಬಡೇಸಾಹೇಬ ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.. ಕನ್ನಡಕ್ಕೆ ದಾಸ ಸಾಹಿತ್ಯಕ್ಕೆ ರಾಮದಾಸರ ಕೊಡುಗೆ ಅತ್ಯಮೂಲ್ಯ..

    ಪ್ರತ್ಯುತ್ತರಅಳಿಸಿ