ಶನಿವಾರ, ನವೆಂಬರ್ 30, 2013

ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನ

ನವಂಬರ್ 2013 ರ ಮಾಹೆಯುದ್ದಕ್ಕೂ ನಡೆದ ಕಹಳೆ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.

=> ಕಹಳೆ ತಂಡ.

ಭ್ರಮರದ ಗುಣವೂ ಯಕ್ಷಗಾನದ ಗುಣವೂ ಒಂದೇ.. ಸದಾ ನಿನಾದ.. ಕರ್ಣಕಠೋರ ದನಿಯಲ್ಲ, ವೀರವೂ ಭಯ ಹುಟ್ಟಿಸದು, ಕೌರ್ಯವೂ ದಿಕ್ಕೆಡಿಸದು, ಸದಾ ಆನಂದದಾಯಕ ಈ ಕಲೆ. "ರಾಮನ ಹಾಗೆ ವ್ಯವಹರಿಸಿ, ರಾವಣನಂತೆ ಅಲ್ಲ" ಎಂದು ತಿದ್ದಿ ಬುದ್ಧಿ ಹೇಳುವ ಗುಣವುಳ್ಳ ಪುರಾಣಗಳ ಕಥೆಗಳನ್ನು ನೋಡಿ ಆದರ್ಶ ಪುರುಷರಾಗಿ ಎನ್ನುವುದು ಯಕ್ಷಗಾನ ಮೇಳಗಳ ಧ್ಯೇಯವಾಕ್ಯ.

ಯಕ್ಷಗಾನವು ನೃತ್ಯ, ಸಂಗೀತ, ಮಾತುಗಾರಿಕೆ, ಹಾಡುಗಾರಿಕೆ ಹಾಗೂ ವೇಷಭೂಷಣಗಳನ್ನು ಒಳಗೊಂಡ ಒಂದು ಶಾಸ್ತ್ರೀಯ ಕಲೆ. ಕರ್ನಾಟಕದ ಕರಾವಳಿ ಪ್ರದೇಶಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಗೂ ನೆರೆಯ ಕಾಸರಗೋಡಿನಲ್ಲಿ ಈ ಕಲೆಯು ಜನಪ್ರಿಯವಾಗಿದೆ. ಯಕ್ಷಗಾನವು ಕರ್ನಾಟಕದ ಪುರಾತನ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದುದು. ಕ್ರಿ. ಶ. 1500 ರ ಸುಮಾರಿನಲ್ಲಿಯೇ ವ್ಯವಸ್ಥಿತವಾಗಿ ಯಕ್ಷಗಾನವು ರೂಢಿಯಲ್ಲಿತ್ತು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಇಂದಿಗೆ ನಶಿಸಿಹೋಗಿರುವ 'ಗಂಧರ್ವ ಗ್ರಾಮ' ಎಂಬ ಗಾನಪದ್ಧತಿಯಿಂದ ಹಾಡುಗಾರಿಕೆಯು ಹಾಗೂ ಸ್ವತಂತ್ರ ಜಾನಪದ ಶೈಲಿಯಿಂದ ನೃತ್ಯವು ರೂಪುಗೊಂಡಿದೆ ಎಂದು ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಪ್ರಬಂಧದಲ್ಲಿ ಉಲ್ಲೇಖವಿದೆ.

ರಾತ್ರಿಯಿಂದ ಆರಂಭವಾಗುವ ಯಕ್ಷಗಾನವು ಬೆಳಗಿನವರೆಗೆ ಸುಮಾರು ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾಪ್ರಕಾರ. ಇದರಲ್ಲಿ ಕನ್ನಡ ಹಾಗೂ ತುಳು ಭಾಷೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕನ್ನಡ ಎಂದರೆ ಪರಿಶುದ್ಧ ಕನ್ನಡ, ಈ ಕನ್ನಡ ಭಾಷೆಯನ್ನು ಕೇಳುವುದೇ ಒಂದು ಆನಂದ.. ಮಾತುಗಾರಿಕೆಯ ಸಮಯದಲ್ಲಿ ತಪ್ಪಿನಿಂದಾದರೂ ಒಂದು ಆಧುನಿಕ ಪದವನ್ನು ಬಳಸಿದರೂ ಅದು ಅಭಾಸವಾಗುತ್ತದೆ. ಯಕ್ಷಗಾನದಲ್ಲಿ ಬಹಳ ಮುಖ್ಯವಾದುದು ಏಕಾಗ್ರತೆ - ಪ್ರಸಂಗ, ಅವುಗಳನ್ನು ವ್ಯಾಖ್ಯಾನಿಸುವ ರೀತಿ, ಎದುರಿನ ಕಲಾವಿದರ ಮಾತಿನ ಚಾಟಿಗೆ ಸರಿಸಾಟಿ ಪ್ರತ್ಯುತ್ತರ ನೀಡುವ ಮಾತುಗಾರಿಕೆ, ಚಂಡೆಯ ಬಡಿತಕ್ಕೆ ಸರಿಯಾಗಿ ಕುಣಿಯುವ ಚಾಕಚಕ್ಯತೆ ಹೀಗೆ ಎಲ್ಲವೂ ಅತ್ಯಂತ ಮುಖ್ಯವೆನಿಸುತ್ತವೆ. ಭಾಗವತರ ಶೃತಿಗೆ ತಕ್ಕಂತೆ ಅಂದರೆ ಸಮಶೃತಿಯಲ್ಲೇ ಮಾತನಾಡಬೇಕು. ಭಾಗವತಿಕೆ ಹಾಗೂ ಮಾತುಗಾರಿಕೆ ಸಮಶೃತಿಯಾದರೆ ಅಲ್ಲೊಂದು ವಿಭಿನ್ನ ಯಕ್ಷಗಾನ ಕಲಾಲೋಕವೇ ಸೃಷ್ಟಿಯಾಗುತ್ತದೆ. ಹೀಗಾಗಿ ಯಕ್ಷಗಾನದ ಎಲ್ಲಾ ಕಲಾವಿದರಿಗೂ ಕನಿಷ್ಠ ಶೃತಿಯ ಬಗ್ಗೆ ಜ್ಞಾನ ಇರಬೇಕಾಗುತ್ತದೆ. ಮೂಲ ಪ್ರಸಂಗವನ್ನು ಹಾಡಿನ ರೂಪದಲ್ಲಿ ಬರೆದಿರುತ್ತಾರೆ. ಆದರೆ, ಹಾಡಿನ ಅರ್ಥವನ್ನು ವಿಸ್ತಾರಗೊಳಿಸಿ ಪ್ರೇಕ್ಷಕರಿಗೆ ಮಾತುಗಾರಿಕೆಯ ಮೂಲಕ ತಿಳಿಸಿಕೊಡುವುದು ಪಾತ್ರಧಾರಿಯ ಜವಾಬ್ದಾರಿಯಾಗಿರುತ್ತದೆ.

ನಾಟಕಕ್ಕೂ ಯಕ್ಷಗಾನಕ್ಕೂ ಬಹಳ ವ್ಯತ್ಯಾಸವಿದೆ. ನಾಟಕದಲ್ಲಿ ಮೂಲನಾಟಕಕಾರ ಬರೆದಿರುವ ಸಂಭಾಷಣೆಯನ್ನು ಬದಲಾಯಿಸುವುದಿಲ್ಲ, ಯಥಾರೀತಿಯಲ್ಲಿಯೇ ಹೇಳಬೇಕು. ಆದರೆ, ಯಕ್ಷಗಾನದಲ್ಲಿ ಪ್ರಸಂಗದ ಮೇಲಿರುವ ಹಿಡಿತದ ಆಧಾರದ ಮೇಲೆ, ಕಥೆಯ ಚೌಕಟ್ಟಿನೊಳಗೆ ಪಾತ್ರಧಾರಿಯು ಎಷ್ಟು ಬೇಕಾದರೂ ಮಾತನಾಡಬಹುದು. ಈ ಮಾತಿನ ಚಾಕಚಕ್ಯತೆಯಿಂದಾಗಿ ಯಕ್ಷಗಾನದ ಯಾವುದೇ ಪ್ರಸಂಗವನ್ನು ಎಷ್ಟೇ ಬಾರಿ ವೀಕ್ಷಿಸಿದರೂ ಪುನರಾವರ್ತನೆ ಎಂಬ ಭಾವನೆ ಬರುವುದಿಲ್ಲ.

ಯಕ್ಷಗಾನದಲ್ಲಿ ಹಲವು ತಾಳಗಳುಂಟು. ಒಂದು ತಾಳದಿಂದ ಇನ್ನೊಂದು ತಾಳಕ್ಕೆ ತೆರಳುವಾಗ 'ಗತಿ' ಇರುತ್ತದೆ. ತಾಳದ ಬದಲಾವಣೆಯನ್ನು ಈ ಗತಿಯಲ್ಲಿಯೇ ಮಾಡಬೇಕು. ಒಂದು, ಎರಡು, ಮೂರು ಮತ್ತು ನಾಲ್ಕು ಕಾಲಗಳನ್ನು ಈ ಕಲೆಯಲ್ಲಿ ಗುರುತಿಸಬಹುದು. ಆರಂಭವಾಗುವುದು ಒಂದನೇ ಕಾಲದಲ್ಲಿ. ನಂತರ ಎರಡನೇ ಹಾಗೂ ಮೂರನೇ ಕಾಲಕ್ಕೆ ತಲುಪುವುದು ಮಧ್ಯರಾತ್ರಿಯ ವೇಳೆಗೆ. ನಾಲ್ಕನೇ ಕಾಲ ತಲುಪುವ ವೇಳೆಗೆ ಬೆಳಗಿನ ಸಮಯವಾಗಿರುತ್ತದೆ, ಪ್ರೇಕ್ಷಕರನ್ನು ಹಿಡಿದಿಡುವ ಸಲುವಾಗಿ ಈ ಸಮಯದಲ್ಲಿ ಸಭಿಕರ ಮಧ್ಯದಲ್ಲಿ ರಾಕ್ಷಸರ ಪ್ರವೇಶ, ಅವನೊಂದಿಗೆ ಇನ್ನೂ ಕೆಲವು ರಕ್ಕಸರು ಆರ್ಭಟವನ್ನು ಮಾಡುತ್ತಾ ದೊಂದಿ ಹಿಡಿದುಕೊಂಡು ಬರುವ ಸನ್ನಿವೇಶವಿರುತ್ತದೆ. ಯಕ್ಷಗಾನದಲ್ಲಿ ಅನೇಕ ಮೇಳಗಳನ್ನು ನಾವು ನೋಡಬಹುದು; ಇವುಗಳಲ್ಲಿ ಸುಮಾರು ಮೂವತ್ತು ವೃತ್ತಿಪರ ಮೇಳಗಳಾದರೆ, ಇನ್ನೂರಕ್ಕೂ ಹೆಚ್ಚು ಹವ್ಯಾಸಿ ಮೇಳಗಳಿವೆ. ಉದಾಹರಣೆಗೆ ಕಮಲಶಿಲೆ ಮೇಳ, ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಕ್ಕಳ ಮೇಳ, ಮಹಿಳಾ ಮೇಳ, ದುರ್ಗಾಪರಮೇಶ್ವರಿ ಮೇಳ ಮತ್ತು ಕೆರೆಮನೆ ಮೇಳ.

ಸುಂದರ ರಾವಣ - ಚಿಟ್ಟಾಣಿ ರಾಮಚಂದ್ರ ಹೆಗಡೆ; ಕೃಪೆ : YouTube

ಯಕ್ಷಗಾನ ನಡೆಯುವ ಚೌಕಿಯಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಈ ಸಂಪ್ರದಾಯವು ಇಂದಿಗೂ ನಡೆದುಕೊಂಡು ಬರುತ್ತಿದ್ದು ದೇವಾಲಯದಲ್ಲಿ ಹೂವಿನ ಪೂಜೆ, ಬೊಂಡಾಭಿಷೇಕ (ಎಳನೀರು ಅಭಿಷೇಕ), ರಂಗಪೂಜೆ ಮುಂತಾದ ಆಚರಣೆಗಳೊಂದಿಗೆ ಯಕ್ಷಗಾನ ಸೇವೆಯನ್ನು ಮಾಡಿಸಲಾಗುತ್ತದೆ. ರಂಗಪ್ರವೇಶಿಸುವ ಮುನ್ನ ಮೊದಲಿಗೆ ಗಣೇಶ ಪೂಜೆ, ಚೌಕಿಯಲ್ಲಿ ದೇವರ ಪೂಜೆ, ಕಿರೀಟಪೂಜೆ, ಆ ಕ್ಷೇತ್ರದ ದೇವರಲ್ಲಿ ಪ್ರಾರ್ಥನೆ, ನಂತರ ಜಾಗಟೆ, ಚಂಡೆ, ಮದ್ದಳೆ ಮತ್ತು ಹಾರ್ಮೋನಿಯಂಗೆ ವಂದಿಸುತ್ತಾ, ಮೇಳದ ಹಿರಿಯರ ಆಶೀರ್ವಾದವನ್ನು ಪಡೆದುಕೊಂಡು ಗೆಜ್ಜೆಪೂಜೆಯ ನಂತರ ಗೆಜ್ಜೆಯನ್ನು ಕಟ್ಟಿ ರಂಗಪ್ರವೇಶ ಮಾಡುವುದೇ ವಾಡಿಕೆ.

ಹಲವು ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯು ಕರಾವಳಿ ಪ್ರದೇಶದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇಲ್ಲಿಯ ಜನರು ಯಕ್ಷಗಾನವನ್ನು ಕೇವಲ ಮನೋರಂಜನೆ ಅಥವಾ ಹವ್ಯಾಸಕ್ಕೆ ವೀಕ್ಷಿಸುವವರಲ್ಲ, ಈ ಕಲೆಯಲ್ಲಿ ಅವುಗಳೊಂದಿಗೆ ಭಕ್ತಿಯೂ ಇರುತ್ತದೆ. ಆದರೆ, ಕಾಲದ ಪ್ರಭಾವಕ್ಕೆ ಸಿಲುಕಿ ಎಲ್ಲ ಕಲೆಗಳಂತೆ ಯಕ್ಷಗಾನ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಊರೂರುಗಳಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನಗಳ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಅಲ್ಲದೇ, ಒಂಭತ್ತು-ಹತ್ತು ಗಂಟೆಗಳ ಕಾಲ ನಡೆಯುತ್ತಿದ್ದ ಆಟ ಈಗ ಕೇವಲ ಮೂರು-ನಾಲ್ಕು ಗಂಟೆಗೆ ಸೀಮಿತವಾಗಿದೆ. ಯಕ್ಷಗಾನವೆಂಬ ದಿವ್ಯ ಪರಂಪರೆಯು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳದಂತೆ ಆ ಕಲೆಯನ್ನು ಉಳಿಸಿ, ಕಲಿಸಿ, ಬೆಳಸಬೇಕಾದುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ.

ಲೇಖಕರ ಕಿರುಪರಿಚಯ
ಡಾ. ಶ್ವೇತ ಕೆ. ಎಸ್.

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಪ್ರಸ್ತುತ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ.

ಯಕ್ಷಗಾನ ಕಲಾವಿದರೂ ಆಗಿರುವ ಇವರು ಕಾಲೇಜಿನ ದಿನಗಳಿಂದ ಮೊದಲ್ಗೊಂಡು ಇಲ್ಲಿಯವರೆಗೆ ಅನೇಕ ಯಕ್ಷಗಾನ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ