ಅದೊಂದು ಸಂಜೆ, ಸುಮಾರು 6.30ರ ಸಮಯ. ಆ ದಿನದ ಬಿಡುವಿಲ್ಲದ ಕೆಲಸಗಳನ್ನು ಮುಗಿಸಿ, ಮನೆಗೆ ಹಿಂತಿರುಗಿದ್ದು, ಹೊರ ಗೇಟಿನ ಬಳಿ ನಿಂತು, ಬೀದಿಯಲ್ಲಿ ಮಕ್ಕಳಾಡುವುದನ್ನು ನೋಡುತಿದ್ದೆನು. ರಸ್ತೆಯ ಆ ಬದಿಯಿಂದ ಒಂದು ಸರ್ಕಾರಿ ಕಾರು ಬಂದಿತು. ಚಾಲಕ ಯಾರದೋ ವಿಳಾಸ ಕೇಳುತ್ತಿದ್ದನು. ಆ ಕಾರು ನಮ್ಮ ಮನೆಯ ಕಡೆಗೆ ಬರುತ್ತಿತ್ತು. ಹತ್ತಿರ ಬಂದಾಗ ಅದರ ಮೇಲಿದ್ದ ಬಾವುಟ ಫಲಕಗಳನ್ನು ನೋಡಿದಾಗ ಆ ಕಾರು ಯಾವುದೋ ಮಂತ್ರಿಗಳ ವಾಹನವೆಂಬುದು ಖಚಿತವಾಯಿತು. ನೋಡುತ್ತಿದ್ದಂತೆ ಆ ಕಾರು ನನ್ನ ಮನೆಯ ಮುಂದೆ ಬಂದು ನಿಂತಿತು.
'ಇದು ವೆಟರಿನರಿ ಡಾಕ್ಟರ್ ಮನೇನಾ?' ಚಾಲಕ ಪ್ರಶ್ನಿಸಿದ.
'ಹೌದೆಂದು' ನಾನು ತಲೆ ಆಡಿಸಿದೆ.
ಕಾರನ್ನು ಪಕ್ಕಕ್ಕೆ ನಿಲ್ಲಿಸಿದ. ಕಾರಿನ ಒಳಗಿನಿಂದ ಸುಮಾರು 25 ವರ್ಷ ಪ್ರಾಯದ ಓರ್ವ ಯುವಕ ಇಳಿದು ಬಂದ. ಅವನ ಕೈಯಲ್ಲಿ ಮುಚ್ಚಳ ಮುಚ್ಚಿದ್ದ ಬಿದಿರಿನ ಒಂದು ಬುಟ್ಟಿ ಇತ್ತು.
'ವೆಟರಿನರಿ ಡಾಕ್ಟರ್ ಶಿವಕುಮಾರ್ ಇದ್ದಾರ?' ಪ್ರಶ್ನಿಸಿದ. ನಾನು ಧರಿಸಿದ್ದ ಅಂಗಿ ಮತ್ತು ಪಂಚೆ ನೋಡಿ ಆತನಿಗೆ ಸಂಶಯ ಬಂದಿತ್ತೇನೋ.
'ನಾನೇ ವೆಟರಿನರಿ ಡಾಕ್ಟರ್ ಶಿವಕುಮಾರ್, ಏನಾಗಬೇಕು?' ಎಂದೆನು.
'ಅಣ್ಣ, ಇದು ಮಿನಿಸ್ಟರ್ ............... ರವರ ನಾಯಿ, ನಿನ್ನೆಯಿಂದ ಏನೂ ತಿನ್ನುತ್ತಿಲ್ಲ, ಸುಮ್ಮನೆ ಮಲಗಿದೆ, ಆಟವಾಡುತ್ತಿಲ್ಲ, ಸ್ವಲ್ಪ ನೋಡಣ್ಣ. ಯಾವುದಾದರು ಇಂಜೆಕ್ಷನ್ ಕೊಡಣ್ಣ' ಎಂದು ಗ್ರಾಮೀಣ ಶೈಲಿಯಲ್ಲಿ ಬಡಬಡಿಸಿದ.
ಒಳ ಬರಮಾಡಿಕೊಂಡು ಅವನಿಗೆ ನಾಯಿಯನ್ನು ಹೊರತೆಗೆಯಲು ಹೇಳಿದೆನು.
ಬುಟ್ಟಿಯ ಮುಚ್ಚಳ ತೆಗೆದರೆ ಬುಟ್ಟಿಯ ತಳಭಾಗದಲ್ಲಿ ಬಟ್ಟೆಯನ್ನು ಹಾಸಲಾಗಿದ್ದು ಅದರ ಮೇಲೆ ಸುಮಾರು 2 ತಿಂಗಳ ಪ್ರಾಯದ ಲ್ಹಾಸ ಅಪ್ಸೋ ನಾಯಿ ಮರಿಯೊಂದು ಮಲಗಿತ್ತು. ಅದನ್ನು ಅ ಯುವಕ ಹೊರತೆಗೆದು ಗೋಣಿ ಚೀಲದ ಮೇಲೆ ಮಲಗಿಸಿದನು. ಮುಖವೇ ಕಾಣದಷ್ಟು ಮೈತುಂಬ ನೀಳ ಕೂದಲು, ಮಾಸಲು ಕಂದು ಮತ್ತು ಬಿಳಿ ಬಣ್ಣ, ಯಾರೇ ನೋಡಿದರೂ ಇಷ್ಟಪಡುವಂತಹ ಬಹಳ ಮುದ್ದಾದ ಮರಿ ಅದಾಗಿತ್ತು
ನಾಯಿ ಮರಿಯನ್ನು ಪರಿಶೀಲಿಸಿದೆನು. ದೇಹದ ಉಷ್ಣತೆ ಕಡಿಮೆಯಾಗಿತ್ತು, ನಾಡಿ ಬಡಿತ ಕ್ಷೀಣಿಸಿತ್ತು, ಬಾಯಿ ಒಣಗಿತ್ತು, ಕಣ್ಣುಗಳು ತೇಲಿಸಿಬಿಟ್ಟಿದ್ದವು, ಕೈಕಾಲುಗಳು ತಣ್ಣಗಾಗಿದ್ದವು.
'ಏನಣ್ಣ, ಏನಾಗಿದೆ? ನಾಯಿ ಗುಣವಾಗುತ್ತಾ?' ಮತ್ತೆ ಪ್ರಶ್ನಿಸಿದ.
'ನಾಯಿ ಮರಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ನೀನು ಬಹಳ ತಡವಾಗಿ ಬಂದಿದ್ದಿಯಾ, ಏನೇ ಇರಲಿ ನನ್ನ ಪ್ರಯತ್ನ ಮಾಡುತ್ತೀನಿ, ಕೆಲವು ಔಷಧಗಳು ಬರೆದು ಕೊಡುತ್ತೇನೆ, ಬೇಗ ಹೋಗಿ ತೆಗೆದುಕೊಂಡು ಬಾ' ಎಂದವನೇ ಔಷಧಗಳ ಪಟ್ಟಿಯೊಂದನ್ನು ಅವನಿಗೆ ನೀಡಿದೆನು.
'ಅಣೌ, ನಿನ್ನ ಹತ್ತಿರ ಔಷಧ ಇದ್ದರೆ ಹಾಕಣ್ಣ, ನಾನು ಕಾಸು ಕೊಡ್ತೀನಿ' ಎಂದ ಆ ಯುವಕ.
'ನನ್ನ ಹತ್ತಿರ ಇಲ್ಲದ್ದಕ್ಕೆ ಬರೆದು ಕೊಟ್ಟಿದ್ದೇನೆ, ಮೆಡಿಕಲ್ ಸ್ಟೋರ್ ನಲ್ಲಿ ತೆಗೆದುಕೊಂಡು ಬಾ' ಎಂದೆನು.
ಕಾರಿನಲ್ಲಿ ತೆರಳಿದ ಆ ಯುವಕ 30 ನಿಮಿಷಗಳ ಬಳಿಕ ಹಿಂತಿರುಗಿ ಬಂದನು. ಅತ ಬರುವವರೆಗೆ ನನ್ನ ಕುಟುಂಬದ ಎಲ್ಲರೂ ಆ ನಾಯಿ ಮರಿಯನ್ನೇ ನೋಡುತ್ತಿದ್ದರು. ಉಸಿರಾಟ ಬಿಟ್ಟು ಯಾವುದೇ ಚಟುವಟಿಕೆ ಇಲ್ಲ, ಕಣ್ಣು ತೆರೆದಿಲ್ಲ. ಎಲ್ಲರ ಮನಸ್ಸಿನಲ್ಲಿ ಕಳವಳ, 'ದೇವರೇ ಹೇಗಾದರೂ ಮುದ್ದಾದ ಈ ಮರಿಯನ್ನು ಬದುಕಿಸು' ಎಂಬ ಮೂಕ ಪ್ರಾರ್ಥನೆ ನಡೆದಿತ್ತು.
ಆ ಯುವಕ ಬಂದೊಡನೆ ಎಲ್ಲರಲ್ಲೂ ಅವಸರ. ಅವನ ಕೈಯಲ್ಲಿದ್ದ ಔಷಧದ ಕವರ್ ಪಡೆದು ಇಂಜೆಕ್ಷನ್ ಕೊಡಲು ಸಜ್ಜಾದೆನು. ನನ್ನ ಪತ್ನಿ ನಾಯಿ ಮರಿಯ ಕಾಲನ್ನು ಹಿಡಿದಳು, ಮಗ ತಲೆಯನ್ನು ಗಟ್ಟಿ ಹಿಡಿದನು, ತಂದೆಯವರು ಗ್ಲೂಕೋಸ್ ಬಾಟಲ್ ಹಿಡಿದರು. ಸುಮಾರು 45 ನಿಮಿಷಗಳ ಕಾಲ ಔಷಧಗಳು ನಿಧಾನವಾಗಿ ರಕ್ತಕ್ಕೆ ಹನಿ ಹನಿಯಾಗಿ ಸೇರಿದವು. ಸಮಯ ರಾತ್ರಿ 8.30, ಚಿಕಿತ್ಸೆ ಮುಗಿದಿತ್ತು.
'ನಾಯಿ ಮರಿಯನ್ನು ಬೆಚ್ಚಗೆ ಮಲಗಿಸಬೇಕು. ಪ್ರತಿ 2 ಘಂಟೆಗಳಿಗೊಮ್ಮೆ ಗಂಜಿ ಕುಡಿಸಬೇಕು, ಔಷಧಗಳನ್ನು ಜೇನು ತುಪ್ಪದಲ್ಲಿ ಬೆರಸಿ ದಿನಕ್ಕೆ ಮೂರು ಬಾರಿ ಕೊಡಬೇಕು. ಮರಿ ಗುಣಮುಖವಾದರೆ ನಾಳೆ ಸಂಜೆ 6 ಕ್ಕೆ ಮತ್ತೆ ಕರೆದುಕೊಂಡು ಬಾ' ಎಂಬ ಸೂಚನೆಗಳನ್ನು ಹೇಳಿದೆನು.
'ಅಯ್ತಣ್ಣ, ನಾಳೆ ಬರುತ್ತೀನಿ, ಬಂದಾಗ ಫೀಜು ಕೊಡುತ್ತೀನಿ' ಎಂದವನು ನಾಯಿ ಮರಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ಕಾರಿನಲ್ಲಿ ತೆರಳಿದ.
ನಾವೆಲ್ಲರೂ ಉಟಕ್ಕೆ ಕುಳಿತೆವು. ಮತ್ತೆ ನಾಯಿ ಮರಿಯದೇ ಚರ್ಚೆ. 'ಅಪ್ಪಾ, ಛೆ ಪಾಪ, ಆ ನಾಯಿ ಮರಿಗೆ ಏಕೆ ಹೀಗಾಗಿದೆ? ಸರಿಯಾಗಿ ನೋಡಿಕೊಂಡಿಲ್ಲವಾ?' ಎಂದು ನನ್ನ ಮಗ ಕೇಳಿದರೆ, 'ರೀ, ಆ ಮರಿ ಬದುಕಿ ಉಳಿಯುತ್ತದಲ್ಲವೇ?' ನನ್ನ ಪತ್ನಿಯ ಪ್ರಶ್ನೆ. 'ದೇವರಿಗೆ 100 ರೂಪಾಯಿ ಮೀಸಲು ಕಟ್ಟಿಡುತ್ತೇನೆ, ನಾಯಿ ಗುಣವಾದರೆ ಮಂಜುನಾಥನಿಗೆ ಕಾಣಿಕೆ ಅರ್ಪಿಸುತ್ತೇನೆ' ಎಂದು ನನ್ನ ತಾಯಿಯ ಕೋರಿಕೆ. ಏನೋ ಒಟ್ಟಿನಲ್ಲಿ ಮನಸ್ಸಿನಲ್ಲಿ ತಳಮಳ, ಊಟ ಸೇರಲಿಲ್ಲ. ಹಾಗೆಯೇ ಮಲಗಿದೆನು. ನಿದ್ರೆ ಬರಲಿಲ್ಲ. ಬೆಳಿಗ್ಗೆ ಕರೆಘಂಟೆ ಬಾರಿಸಿತು. ಎದ್ದೆನು. ಮಗ ಬಂದು 'ಅಪ್ಪಾ ನಾಯಿ ಮರಿ ಇವತ್ತು ಬರುತ್ತಾ, ಚೆನ್ನಾಗಿ ಆಗಿರುತ್ತಲ್ಲವೇ?' ಪ್ರಶ್ನಿಸಿದ.
ನಾನು ಎಂದಿನಂತೆ ಬೆಳಿಗ್ಗೆ 8 ಕ್ಕೆ ಆಸ್ಪತ್ರೆಗೆ ತೆರಳಿದೆನು. ದಿನದ ಕೆಲಸಗಳನ್ನು ಮುಗಿಸಿ ಸಂಜೆ 5.30 ಕ್ಕೆ ಹಿಂತಿರುಗಿದೆನು. ಮಗ ಆ ಸಂಜೆ ಆಟಕ್ಕೆ ರಜೆ ಮಾಡಿದ್ದ. ನಾನು ಮನೆಗೆ ಬಂದೊಡನೆ 'ಆ ನಾಯಿಯವರು ಫೋನ್ ಏನಾದರೂ ಮಾಡಿದ್ದಾರ?' ನನ್ನ ತಂದೆಯವರ ಪ್ರಶ್ನೆ. ಮುಖ ತೊಳೆದು, ಕಾಫಿ ಕುಡಿದು ನಾಯಿ ಮರಿಯ ನಿರೀಕ್ಷಯಲ್ಲಿದ್ದೆ. ಸಂಜೆ 6, 6.30, 6.45 ದಾಟಿತು. ಮಗ ಗೇಟಿನ ಬಳಿ ನಿಂತು ಆ ರಸ್ತೆಗೆ ಬರುವ ಕಾರುಗಳನ್ನು ನೋಡುತ್ತಿದ್ದ. ಕತ್ತಲಾಗಿತ್ತು. ನಾಯಿ ಮರಿ ಬರಲಿಲ್ಲ.
ಬಹುಶಃ ನಾಯಿ ಮರಿ ಸತ್ತುಹೊಗಿರಬೇಕೆಂಬ ಸಂಶಯ ಎಲ್ಲರ ಮನಸ್ಸಿನಲ್ಲಿ ಪಸರಿಸಿತ್ತು. ಆದರೆ ಇದನ್ನು ಹೇಳುವ ಧೈರ್ಯ ಯಾರಲ್ಲೂ ಇರಲಿಲ್ಲ. ಸಮಯ ಸಂಜೆ 7 ಆಯಿತು. 'ಬಾರೋ, ಬಂದು ಹೋಂ ವರ್ಕ್ ಮುಗಿಸಿ ಓದಿಕೋ' ನನ್ನ ಪತ್ನಿ ಮಗನನ್ನು ಕರೆದಳು. ನಾನಾದರೋ ದಿನಪತ್ರಿಕೆಯನ್ನು ಕೈಯಲ್ಲಿ ಓದುವಂತೆ ಹಿಡಿದಿದ್ದೆನು. ಆದರೆ ಮನಸ್ಸು ಬೇರೆಲ್ಲೋ ಹೋಗಿತ್ತು. ರಾತ್ರಿ 8 ಆಗಿತ್ತು. ನನ್ನ ಊಹೆ ಸರಿಯಂಬಂತೆ ಭಾಸವಾಗತೊಡಗಿತ್ತು.
'ಎಂಟೂವರೆ ಆಯಿತು ಉಟಕ್ಕೆ ಏಳಿ' ನನ್ನ ತಾಯಿ ಕೂಗಿದರು. ನನ್ನ ಪತ್ನಿ ಎಲ್ಲರಿಗೂ ತಟ್ಟೆ ಇಟ್ಟು ನೀರು ಇಟ್ಟು ತಯಾರಿ ಮಾಡಿದಳು. ಎಲ್ಲರಲ್ಲೂ ಒಂದು ರೀತಿಯ ಭೀತಿ, ಮೌನ. ಉಟಕ್ಕೆ ಕುಳಿತೆವು, ಮನೆಯ ಮುಂದೆ ಕಾರೊಂದು ಬಂದು ನಿಂತಿತು.
ನನ್ನ ಮಗ ಓಡಿ ಹೋಗಿ ಬಾಗಿಲು ತೆರೆದವನೇ ಒಂದೇ ಕ್ಷಣದಲ್ಲಿ ಮತ್ತೆ ಓಡಿ ಬಂದ.
'ಅಪ್ಪಾ, ನಾಯಿ ಮರಿ ಬಂತು. ಆದರೆ ಅದು ಬುಟ್ಟಿಯಲ್ಲಿಯೇ ಇದೆ. ಇನ್ನು ಗುಣವಾಗಿಲ್ಲ, ಪಾಪ' ಎಂದ.
ನಾನು ಎದ್ದವನೇ ಹೊರಗೆ ಹೋದೆ. 'ಏನಪ್ಪಾ ಹೇಗಿದೆ ನಿಮ್ಮ ನಾಯಿ?' ಗುಣವಾಗಿಲ್ಲವೆಂಬ ಖಾತರಿ ಇದ್ದರೂ ಕೇಳಬೇಕಾದ ಪ್ರಶ್ನೆ ಕೇಳಿದೆ. 'ದೇವರೇ, ಈ ನಾಯಿ ಮರಿಗೆ ಏಕಿಷ್ಟು ಶೋಧನೆ. ನಿನ್ನೆಯೇ ಸಾಯಬಾರದಿತ್ತೇಕೆ?' ಎಂದು ನನ್ನ ಮನಸ್ಸು ಹೇಳುತ್ತಿತ್ತು.
'ನೀನೆ ನೋಡಣ್ಣ, ಹೇಗಿದೆ ಅಂತ' ಎಂದ ಆ ಯುವಕ ಬುಟ್ಟಿಯನ್ನು ಕೆಳಗಿಟ್ಟು ಅದರ ಮುಚ್ಚಳ ತೆಗೆದ.
ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಂತೆ ಆ ಮುದ್ದಾದ ಜೀವ ಚಂಗನೆ ಬುಟ್ಟಿಯಿಂದ ಹೊರ ನೆಗೆದು ತನ್ನ ಪುಟ್ಟ ನಡಿಗೆಯಲ್ಲಿ ಮನೆಯಲ್ಲೆಲ್ಲ ಓಡಾಡಿ, ನನ್ನ ಮಗನ ಬಳಿಗೆ ಬಂದಿತು.
ನಮ್ಮೆಲ್ಲರಿಗೂ ಅದ ಸಂತೋಷಕ್ಕೆ ಎಲ್ಲೆ ಇರಲಿಲ್ಲ. ಯಾರು ಏನು ಮಾಡುತ್ತಿದ್ದಾರೆ, ಏನಾಗುತ್ತಿದೆ ಎಂದು ತಿಳಿಯಲು ಕೆಲ ನಿಮಿಷಗಳೇ ಬೇಕಾಯಿತು. ನಾಯಿ ಮರಿಯನ್ನು ಎತ್ತಿಕೊಂಡು ಮತ್ತೆ ಪರಿಶೀಲಿಸಿದೆನು. ಕೆಲ ಇಂಜೆಕ್ಷನ್‌ಗಳನ್ನೂ ನೀಡಿ, ಮನೆಯಲ್ಲಿ ಮುಂದುವರೆಸಬೇಕಾದ ಚಿಕಿತ್ಸೆಯ ಬಗ್ಗೆ ಸಲಹೆಗಳನ್ನು ನೀಡಿದೆನು.
'ಅಣ್ಣೌ, ಈ 50 ತೊಗೋ, 20 ಮಡಿಕೊಂಡು ಚಿಲ್ಲರೆ ಕೊಡಣ್ಣ' ಎಂದ ಆ ಯುವಕ.
'ಬೇಡ ಹೋಗಪ್ಪಾ' ಎಂದು ಅವನನ್ನು ಕಳುಹಿಸಿದೆನು.
'ಬೇಗ ಬನ್ನಿ, ಉಟಕ್ಕೆ ಲೇಟ್ ಆಯಿತು' ಅಮ್ಮ ಕರೆದಿದ್ದರು. ಆದರೆ ಆ ನಾಯಿ ಮರಿ ಕೆಲ ಕ್ಷಣಗಳಲ್ಲಿ ನೀಡಿದ್ದ ಮುದದೌತಣದಿಂದ ಎಲ್ಲರಿಗೂ ಹೊಟ್ಟೆ ತುಂಬಿತ್ತು.
ಈ ಪ್ರಸಂಗದ ಪ್ರತಿ ಕ್ಷಣ ಸವಿದ ನನಗಂತೂ ನಾಯಿ ನೀಡಿದ್ದು .................. ಕೋಟಿ ರೂಪಾಯಿ.
ಲೇಖಕರ ಕಿರುಪರಿಚಯ |
| ಡಾ. ಶಿವಕುಮಾರ್
ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ಮೈಸೂರಿನವರು. ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Blog | Facebook | Twitter |