ಶುಕ್ರವಾರ, ನವೆಂಬರ್ 7, 2014

ಕನ್ನಡ ಭಾಷೆ, ಒಂದು ಹಿನ್ನೋಟ

ಕನ್ನಡವು ಬ್ರಾಹ್ಮಿ ಲಿಪಿಯನ್ನೊಳಗೊಂಡ, ಮೂಲತಃ ದ್ರಾವಿಡ ಭಾಷೆ. ಐದನೆಯ ಶತಮಾನದಲ್ಲಿ ಕದಂಬ ಭಾಷಾ ಲಿಪಿಯಾಗಿ ಮೊದಲ ಬಾರಿಗೆ ಹೊರಬಂದಿದೆ. ಕ್ರಿ. ಶ. 840 ರಲ್ಲಿ ರಾಷ್ಟ್ರಕೂಟರ ದೊರೆ ನೃಪತುಂಗ ಒಂದನೆಯ ಅಮೋಘವರ್ಷನ ಕೊಡುಗೆ 'ಕವಿರಾಜ ಮಾರ್ಗ'ವು ಕನ್ನಡ ಸಾಹಿತ್ಯಕ್ಕೆ ಊರುಗೋಲು. ಕನ್ನಡ ಪದವು ಇಂದು ನಮ್ಮ ಭಾಷೆಯ ಸೂಚಕವಾಗಿ ಬಳಸಲ್ಪಡುತ್ತಿದೆ. ಆದರೆ, ಹಿಂದೆ ಕನ್ನಡ ಎಂಬುದು ಭಾಷೆಯ ಸೂಚಕವಾಗಿ ಮಾತ್ರವಲ್ಲ ದೇಶ ಸೂಚಕವಾಗಿಯೂ ಬಳಕೆಯಲ್ಲಿತ್ತು. ಇದಕ್ಕೆ ಉದಾಹರಣೆ ಕವಿರಾಜ ಮಾರ್ಗದಲ್ಲಿರುವ 'ಕಾವೇರಿಯಿಂದಮಾ ಗೋದಾವರಿಮರೆಗಿರ್ದ ನಾಡದಾ ಕನ್ನಡದೊಳ್' ಎಂಬ ಉಲ್ಲೇಖ.

ಕ್ರಿ. ಪೂ. 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆ ಎನ್ನಲಾದ ಮಹಾಭಾರತದಲ್ಲಿ 'ಕರ್ನಾಟ' ಎಂಬ ಶಬ್ದದ ಪ್ರಯೋಗವನ್ನು ಕಾಣುತ್ತೇವೆ. ಹಾಗಾಗಿ ಕ್ರಿ. ಪೂ. ದ ವೇಳೆಗಾಗಲೇ ಕನ್ನಡ ಇದ್ದಿರಬೇಕೆಂದು ಊಹಿಸಲಾಗಿದೆ. ಕ್ರಿ. ಶ. 1ನೇ ಶತಮಾನದ ಮಾರ್ಕಂಡೇಯ ಪುರಾಣದಲ್ಲಿ ಅನೇಕ ದೇಶಗಳ ಉಲ್ಲೇಖವಿದ್ದು, ಅವುಗಳಲ್ಲಿ ಕರ್ನಾಟಕವೂ ಒಂದು. ಇದಲ್ಲದೆ, ಕ್ರಿ. ಶ. 5ನೇ ಶತಮಾನಕ್ಕೆ ಸೇರಿರುವ ಸೋಮದೇವನ ಕಥಾಸರಿಸ್ಸಾಗರದಲ್ಲಿ ಕರ್ನಾಟಕದ ಉಲ್ಲೇಖವಾಗಿದೆ. ಈ ಮೇಲಿನ ಕಾರಣಗಳಿಂದ ಕ್ರಿ. ಪೂ. ದಿಂದಲೇ ಕನ್ನಡ ಪ್ರದೇಶವು ಅಸ್ತಿತ್ವದಲ್ಲಿದ್ದಿರಬೇಕು; ಹಾಗೂ ಕನ್ನಡ ಭಾಷೆಯೂ ಸಹ ಬಳಕೆಯಲ್ಲಿದ್ದಿರಬಹುದೆಂದು ಊಹಿಸಲು ಅಡ್ಡಿಯಿಲ್ಲ.

ಖಚಿತವಾಗಿ ನಮಗೆ ಕನ್ನಡ ಸಿಗುವುದು ಕ್ರಿ. ಪೂ. 3ನೇ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ; ಅದರಲ್ಲಿರುವ ಮೊದಲ ಕನ್ನಡ ಪದ - 'ಇಸಿಲ'. ಇದು ಒಂದು ಊರಿನ ಹೆಸರೆಂದು ಹೇಳಲ್ಪಟ್ಟಿದೆ; ಅರ್ಥ ’ಕೋಟೆ’ ಎಂದಾಗುತ್ತದೆ. ಮುಂದೆ ಕ್ರಿ. ಶ. 2ನೇ ಶತಮಾನದಲ್ಲಿ ಶಾತವಾಹನರ ಕಾಲದ ಶಾಸನವೊಂದರಲ್ಲಿ 'ಊರ್' ಎಂಬ ಪದದ ಬಳಕೆಯಿದೆ; ಇದರ ಅರ್ಥ 'ಊರು' ಎಂಬುದು. ತದನಂತರದಲ್ಲಿ ಕನ್ನಡ ಭಾಷೆಯ ಅಧಿಕೃತ ಪದಗಳು ಕ್ರಿ. ಶ. 450 ರ ಕಾಲಘಟ್ಟದ ಹಲ್ಮಡಿ ಶಾಸನದಲ್ಲಿ ಸಿಗುತ್ತವೆ. ಒಟ್ಟಾರೆಯಾಗಿ ಕನ್ನಡ ಬಾಷೆಯ ಪ್ರಾಚೀನತೆಯನ್ನು ಕ್ರಿ. ಪೂ. ದಿಂದಲೇ ಗುರುತಿಸಲು ವಿದ್ವಾಂಸರು ಪ್ರಯತ್ನಿಸಿದ್ದಾರೆ ಎಂಬುದರ ಅರಿವಾಗುತ್ತದೆ.

ಹಾಸನದಲ್ಲಿರುವ ಹಲ್ಮಿಡಿ ಶಾಸನ

ಬದಲಾವಣೆಯು ಪ್ರಕೃತಿಯ ನಿಯಮ; ಇದು ಬದುಕಿಗೂ, ದೇಶಕ್ಕೂ, ಭಾಷೆಗೂ ಅನ್ವಯಿಸುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯು ನಿರಂತರವಾಗಿ ಬದಲಾಗುತ್ತಾ, ಬೆಳೆಯುತ್ತಾ ಬಂದಿದೆ. ಇಂತಹ ಬೆಳವಣಿಗೆಯು ಹಲವು ಕಾಲಮಾನಗಳ ಅಂತರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೆ ನಿರ್ದಿಷ್ಟ ಹಂತಗಳಲ್ಲಿ ಆಗುವ ಬದಲಾವಣೆ, ಬೆಳವಣಿಗೆಗಳನ್ನು ಅವಸ್ಥಾಂತರ ಎಂದು ಕರೆಯಲಾಗುತ್ತದೆ. ಕನ್ನಡ ಭಾಷೆಯ ಮೂರು (ಪೂರ್ವ ಹಳಗನ್ನಡ, ಹಳಗನ್ನಡ, ಹೊಸಗನ್ನಡ) ಅವಸ್ಥಾಂತರಗಳನ್ನು ಮೊದಲು ಗುರುತಿಸಿದವರು ಬಿ. ಎಲ್. ರೈಸ್, 1884 ರಲ್ಲಿ. ನಂತರ ಕಿಟ್ಟೆಲ್ ಸಹ ಕನ್ನಡ ಭಾಷೆಯ ಅವಸ್ಥಾಂತರಗಳನ್ನು ಮೂರು (ಹಳಗನ್ನಡ, ಮಧ್ಯಕಾಲದ ಕನ್ನಡ, ಹೊಸಗನ್ನಡ) ಹಂತಗಳಾಗಿ ವಿಂಗಡಿಸಿದರು. ಮುಂದೆ, ರಾ. ನರಸಿಂಹಾಚಾರ್ ಅವರು ಈ ಕೆಳಕಂಡ ನಾಲ್ಕು ಹಂತಗಳನ್ನು ಗುರುತಿಸಿದ್ದಾರೆ:
  1. ಪೂರ್ವದ ಹಳಗನ್ನಡ: ಪ್ರಾರಂಭದಿಂದ ಕ್ರಿ. ಶ. 9 ನೇ ಶತಮಾನದವರೆಗೆ.
  2. ಹಳಗನ್ನಡ: ಕ್ರಿ. ಶ. 9 ನೇ ಶತಮಾನದಿಂದ 12 ನೇ ಶತಮಾನದವರೆಗೆ.
  3. ನಡುಗನ್ನಡ: ಕ್ರಿ. ಶ. 12 ನೇ ಶತಮಾನದಿಂದ 14 ನೇ ಶತಮಾನದವರೆಗೆ.
  4. ಹೊಸಗನ್ನಡ: ಕ್ರಿ. ಶ. 14 ನೇ ಶತಮಾನದ ನಂತರ.
ಇಂದಿಗೆ, ರಾ. ನರಸಿಂಹಾಚಾರ್ ಅವರು ಗುರುತಿಸಿದ ನಾಲ್ಕು ಹಂತಗಳನ್ನೇ ಪರಿಗಣಿಸಲಾಗುತ್ತಿದೆ. ಪೂರ್ವದ ಹಳಗನ್ನಡದ ಅಸ್ತಿತ್ವದ ಬಗ್ಗೆ ವಾದ-ವಿವಾದಗಳಿವೆಯಾದರೂ, ಹಳಗನ್ನಡಕ್ಕೆ ಸೇರುವ ಕವಿರಾಜ ಮಾರ್ಗದಲ್ಲಿ 'ಪಳಗನ್ನಡ' ಎಂಬ ಪದದ ಬಳಕೆಯಾಗಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ. ಹಳಗನ್ನಡ ಬಳಕೆಯಲ್ಲಿದ್ದ ಕಾಲವನ್ನು 'ಚಂಪು ಯುಗ', ನಡುಗನ್ನಡದ ಕಾಲವನ್ನು 'ವಚನ ಯುಗ' ಹಾಗೂ ಹೊಸಗನ್ನಡದ ಕಾಲಘಟ್ಟವನ್ನು 'ಆಧುನಿಕ ಯುಗ' ಎಂದೂ ಸಹ ಗುರುತಿಸಬಹುದಾಗಿದೆ.

ಕ್ರಿ. ಶ. 1874 ರಲ್ಲಿ ವಿದೇಶೀಯ ಫರ್ಡಿನಂಡ್ ಕಿಟ್ಟಲ್ ಮೊಟ್ಟಮೊದಲು ಭಾರತೀಯ ಭಾಷೆ ಕನ್ನಡಕ್ಕೆ ನಿಘಂಟು ಬರೆದರು. ಎರಡನೇ ಶತಮಾನದಲ್ಲಿ ಕನ್ನಡ ಲಿಪಿಯು ಗ್ರೀಕರ ಹಾಸ್ಯ ವಿಡಂಬನೆಗಳಲ್ಲಿ ಕಾಣಸಿಗುತ್ತದೆ. ಶ್ರೀ ವಿನೋಬ ಭಾವೆ ಅವರು ಕನ್ನಡ ಲಿಪಿಯನ್ನು 'ವಿಶ್ವದ ಲಿಪಿಗಳ ರಾಣಿ' ಎಂದು ಬಣ್ಣಿಸಿದ್ದಾರೆ. ಕನ್ನಡದಲ್ಲಿ ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣದ ಛಾಯೆ ಹಾಸುಕೊಕ್ಕಾಗಿದೆ. ಕನ್ನಡ ಭಾಷೆಯ ಬರವಣಿಗೆ, ಪಠ್ಯಕ್ರಮ, ಉಚ್ಛಾರಾಂಶ ಸೂಚ್ಯಕವಾಗಿದೆ. ಕನ್ನಡ ಬರಹ 49 ಅಕ್ಷರಗಳನ್ನೊಳಗೊಂಡು, ಮೂರು ಭಾಗಗಳಾಗಿ ವಿಭಜನೆಗೊಂಡಿದೆ - ಸ್ವರಗಳು, ವ್ಯಂಜನಗಳು ಮತ್ತು ಯೋಗವಾಹಕಗಳು. ಸಂಸ್ಕೃತ ಭಾಷೆಯ ನಂತರದ ಪೂರ್ವಿ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡದ ಮಾತು ಮತ್ತು ಬರಹಗಳಲ್ಲಿ ಶೇಕಡ 99.99 ರಷ್ಟು ಹೊಂದಾಣಿಕೆ ಇರುವುದನ್ನು ನಾವು ಕಾಣಬಹುದು.

ಇಂತಹ ಎಲ್ಲಾ ಗುಣವಿಶೇಷಗಳಿರುವ ನಮ್ಮ ಪ್ರಾಚೀನ ಹಾಗೂ ಶ್ರೀಮಂತ ಕನ್ನಡ ಭಾಷೆಯನ್ನು ಮರೆಯದೇ, ಆದರಿಸಿ, ಗೌರವಿಸೋಣ, ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ.

ಸಿರಿಗನ್ನಡಂ ಗೆಲ್ಗೆ!

ಲೇಖಕರ ಕಿರುಪರಿಚಯ
ಶ್ರೀ ನಾರಾಯಣನ್ ಸಪ್ತರ್ಷಿ

ಮೈಸೂರು ವಿಶ್ವವಿದ್ಯಾನಿಲಯದಿಂದ 1975 ರಲ್ಲಿ ಬಿ.ಇ. (ಮೆಕಾನಿಕಲ್‍) ಪದವಿ ಪಡೆದಿರುವ ಇವರು ಪ್ರತಿಷ್ಠಿತ ಎಲ್‍. ಅಂಡ್‍ ಟಿ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಅದೇ ಸಂಸ್ಥೆಯಲ್ಲಿ ಸಲಹೆಗಾರರಾಗಿ ಪ್ರಸ್ತುತ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ