ಈ ಬಸ್ ನ ಜಂಜಾಟದಿಂದ ಬಿಡುಗಡೆ ಹೊಂದಲು, ಒಂದು ಕಾರು ತಗೋಬೇಕು ಅನ್ನೋ ಆಸೆ... ಈ ಆಸೆಗೆ ವಯಸ್ಸು ಸುಮಾರು ಎರಡು ವರ್ಷ.. ಈ ಎರಡು ವರ್ಷಗಳು ಸಂಶೋಧನೆ ಮಾಡಿದ್ದೇ ಮಾಡಿದ್ದು.. ನನ್ನ ಕಾರು ಖರೀದಿ ಮಾಡಬೇಕಾದರೆ ನಡೆದ ಘಟನೆಗಳನ್ನು ನೋಡೋಣ - ಒಂದು ಕಥೆಯ ರೂಪದಲ್ಲಿ. ಈ ಕಥೆಯಲ್ಲಿ ನನ್ನ ದೋಸ್ತ್ ಗಳು - ಕೊಲ್ಟೆ, ಹೊಟ್ಟೆ, ಮಂಜ, ಸುಪ್ರೀಂ ಲೀಡರ್ ರಾಮ ಹಾಗು ಪ್ರೆಸಿಡೆಂಟ್ ರಾಯುಡು ಬರ್ತಾರೆ... ಹಾ ಹೌದು.. ಇವೆಲ್ಲ ಅಡ್ಡ ಹೆಸರುಗಳೇ :)
ಎರಡು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಅಂತೂ ಕಾರು ಖರೀದಿ ಮಾಡುವ ಸಮಯ ಬಂದೇ ಬಂತು.. ಮಾಡಿದ ಎಲ್ಲಾ ಸಂಶೋಧನೆಗಳನ್ನು ತೂಕ ಮಾಡಿ, ಲೆಕ್ಕಾಚಾರ ಹಾಕಿ ಹೋಂಡಾ ಅಮೇಜ್ ಗಾಡಿಗೆ ಜೈ ಅಂತ ಗ್ರೀನ್ ಸಿಗ್ನಲ್ ಕೊಟ್ಟೆ.
ಒಂದು ಒಳ್ಳೆ ದಿನ ನೋಡ್ಕೊಂಡು ಹೊಟ್ಟೆ, ಮಂಜ ಮತ್ತೆ ನಾನು ಹೋದ್ವಿ.. ಇಲ್ಲಿ ನಮಗೆ ಪರಿಚಯ ಆಗಿದ್ದು ಅಣ್ಣಾ ಬಾಂಡ್ ಅನಿಲ್.. ಒಂದೆರಡು ಬಾರಿ ಇಲ್ಲಿಗೆ ಬಂದು ಗಾಡಿ ನೋಡ್ಕೊಂಡು ಹೋದ್ವಿ.. ಗಾಡಿ ಓಡಿಸಿ ಟೆಸ್ಟ್ ಕೂಡಾ ಮಾಡಿದ್ವಿ... ನಮ್ ಎಲ್ಲರಿಗೂ ಗಾಡಿ ತುಂಬಾ ಇಷ್ಟ ಆಯ್ತು.. ಬಣ್ಣ ಆಯ್ಕೆ ಮಾಡಿ, ಅನಿಲ್ ಗೆ ತೊಗೋ ಗುರು ಅಂತ ಮುಂಗಡ ಸ್ವಲ್ಪ ಕಾಸು ಕೊಟ್ಟೆವು.. ಅನಿಲ್ ಸಾಹೇಬರು, 'ನೋಡಿ ಸಾರ್, ಇನ್ನೊಂದು ತಿಂಗಳಿನಲ್ಲಿ ನಿಮ್ಮ ಕಾರು ಬಂದೇ ಬಿಡತ್ತೆ' ಅಂದ... ನಮ್ಮೆಲ್ಲರಿಗೋ ಖುಷಿಯೂ ಖುಷಿ.. ಗಾಡಿಗೆ ಬೇಕಾದ ದಾಖಲೆಗಳನ್ನು ಎಲ್ಲಾ ಒಪ್ಪಿಸಿದೆ.
ನಾನೇನು ಸಾಹುಕಾರನಲ್ಲ.. :) ಸಾಲ ಬೇಕೇ ಬೇಕು. ಅನಿಲ್ ಸಾಹೇಬರು, 'ಸಾರ್ ಬೇಕಾದರೆ ನಾನೇ ಬ್ಯಾಂಕಿಂದ ಸಾಲ ಕೊಡಿಸುವೆ' ಅಂದರು.. ನಾನು ದೊಡ್ಡ ಪುದಾಂಗ್ ಥರ 'ನಿಮ್ಮ ಸಹಾಯ ಬೇಕಿಲ್ಲಾ, ನಾನೇ ನೋಡ್ಕೊಳ್ತೀನಿ' ಅಂದೆ.
ಎಲ್ಲಿ ಕಮ್ಮಿ ಬಡ್ಡಿ ಕೊಡ್ತಾರೋ ಅಂತ ಹುಡುಕುತ್ತಾ ನಮ್ಮ ಯಲಹಂಕದಲ್ಲಿ ಇದ್ದ ಸುಮಾರು ಎಲ್ಲಾ ಬ್ಯಾಂಕುಗಳ ದರ್ಶನ ಮಾಡಿದ್ದಾಯ್ತು.... ಎಲ್ಲಾ ಕಡೆ ಬಡ್ಡಿ ಧೂಮ್ ಧಾಮ್ ದರಗಳು.. ಹುಡುಕುತ್ತಾ ಹುಡುಕುತ್ತಾ ಸುಮಾರು 2 ವಾರ ಉಡೀಸ್ಸ್... ಊರೆಲ್ಲಾ ಸುತ್ತಿ ಸುತ್ತಿ.. ಕೊನೆಗೆ ಮನೆಯ ಪಕ್ಕದಲ್ಲೇ ಇದ್ದ ಬ್ಯಾಂಕ್ ಗೆ ಬಂದು ಸೇರ್ಕೊಂಡೆ. ಇಲ್ಲಿ ನಮ್ಗೆ ಇನ್ನೊಬ್ಬ ದೇವರು ಪರಿಚಯ ಆದರು. ನಾಮಧೇಯ 'ತಮ್ಮಾ ಬಾಂಡ್ ಸೂರ್ಯ'!
ತಮ್ಮಾ ಬಾಂಡ್ ಗೆ ನನ್ನ ಕಾರಿನ ಪೂರ್ತಿ ಮ್ಯಾಟರ್ ಹೇಳಿದೆ... ಕೇಳಿದ ಎಲ್ಲಾ ದಾಖಲೆಗಳನ್ನು ಸಮಯದಲ್ಲೇ ಒದಗಿಸಿದೆ. ಮುಂದಿನ ಪ್ರಕ್ರಿಯೆ ಪಟ ಪಟ ಅಂತ ನಡಿಯಿತು. ಕಾರು ಬುಕಿಂಗ್ ಮಾಡಿ ಮೂರು ವಾರ ಆಯಿತು.. ಅಣ್ಣಾ ಬಾಂಡ್ ಅನಿಲ್ ಹೇಳಿದ ಪ್ರಕಾರ ಇನ್ನೂ ಕೆಲವೇ ದಿನಗಳು ಕಾರು ಬರಲು.. ಕಾರಿನ ಸ್ಥಿತಿ ಕೇಳಲು ಒಮ್ಮೆ ಫೋನ್ ಹಚ್ಚಿದೆ .. ಕೊಟ್ಟ ನೋಡಿ ಒಂದ್ ಶಾಕ್.. 'ಸಾರ್ ನಿಮ್ಮ ಗಾಡಿ ಇನ್ನೊಂದ್ ಎರಡು ವಾರದ ನಂತರ ಸಿಗತ್ತೆ' ಅಂದ.'ಯಾಕ್ ಗುರು.. ಏನ್ ಆಯಿತು?'. 'ಯಾರೋ ಬೇರೆಯವರು ಬಂದು ಸಿಕ್ಕಾಪಟ್ಟೆ ಜಗಳ ಮಾಡಿದರು, ಅವರನ್ನು ತಡಿಯಲಾರದೆ ನಿಮ್ಮ ಗಾಡಿ ಕೊಟ್ವಿ' ಅಂದ. ಸ್ವಲ್ಪ ಬೇಜಾರು ಆಯಿತು, ಆದರೂ ಎರಡು ವರುಷ ಕಾದಿರೋ ನಾನು ಇನ್ನೊಂದ್ ಎರಡು ವಾರ ಕಾಯಬೇಕು ಅಷ್ಟೇ ಅಲ್ವಾ, ಪರವಾಗಿಲ್ಲ ಕಾಯುವೆ ಅಂನ್ಕೊಂಡೆ.
ಎರಡು ವಾರ ಆಯಿತು.. 'ಅನಿಲ್ ಅಣ್ಣಾ ಗಾಡಿ ತೊಗೊಳಕ್ಕೆ ಬರುವುದೇ?'. 'ಇಲ್ಲಾ ಸಾರ್, ನಿಮ್ ಗಾಡಿ ಇವಾಗ ಸಿಗಲ್ಲ.. ಇನ್ನೊಂದು ಮೂರು ತಿಂಗಳು ಆಗತ್ತೆ'. 'ಏನ್ ಗುರು ಹೀಗೆ ಹೇಳ್ತಿಯ??'. 'ಕಾರು ಸ್ಟಾಕ್ ಇಲ್ಲಾ ಸಾರ್, ನಾನು ಏನು ಮಾಡಕ್ಕೆ ಆಗಲ್ಲ' ಅಂದ. ಖರ್ಮ ಖರ್ಮ!!
ಅವನ ಮೇಲಿನ ಅಧಿಕಾರಿಗೆ ಸಿಟ್ಟಾಗಿ ಕೇಳಿದೆ, ನಾವು ಕಿತ್ತು ಗುಡ್ಡೆ ಹಾಕೋದು ಏನು ಇಲ್ಲ ಸ್ವಾಮಿ ಅಂದರು. ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡು ವಾಪಸ್ ಮನೆಗೆ ಹೊರಟೆ.
ಬರುವ ದಾರಿಯಲ್ಲಿ ಮತ್ತೊಂದು ಹೊಂಡಾ ಅಂಗಡಿ ಕಾಣಿಸಿತು.. ಸುಮ್ಮನೆ ಹೋಗಿ ನಾನು ಮತ್ತೆ ರಾಯುಡು ವಿಚಾರಿಸಿದೆವು.. ಅಲ್ಲಿ ಸಿಕ್ಕಿದ ಲೇಡಿ ಬಾಸ್ ಹೆಸರು ಶ್ರೀದೇವಿ. ನಡೆದ ವಿಷಯವೆಲ್ಲಾ ಹೇಳಿದೆ.. 'ಹು ಸರ್, ಒಂದೇ ತಿಂಗಳಿನಲ್ಲಿ ನಿಮ್ ಗಾಡಿ ಖಚಿತವಾಗಿ ಸಿಗತ್ತೆ.. ನನ್ನ ಮಾತಿನ ಮೇಲೆ ಭರವಸೆ ಇರಲಿ..' ಅಂದಳು ಶ್ರೀದೇವಿ.. ನಾನು ಸ್ವಲ್ಪ ಯೋಚನೆ ಮಾಡಿ ಹೇಳುವೆ ಅಂತ ಹೇಳಿ ವಾಪಾಸ್ ಮನೆಗೆ ಹೊರಟೆ. ನನಗೆ ಎಲ್ಲೋ ಸ್ವಲ್ಪ ವಿಶ್ವಾಸ ಬರುತ್ತಿತ್ತು. ಸರಿ ಮರು ದಿನ ಅನಿಲ್ ಹತ್ತಿರ ಹೋಗಿ ಮಾಡಿದ ಬುಕ್ಕಿಂಗ್ ರದ್ದು ಮಾಡಿಸಿದೆ.. ಅನಿಲ್ ಮುಖದಲ್ಲಿ ಸಂತೋಷ ಅಥವಾ ದುಃಖ ಏನೂ ಕಾಣಿಸಲಿಲ್ಲ.. ಒಂದು ವಾರದಲ್ಲಿ ಮುಂಚೆ ಕೊಟ್ಟಿದ ಹಣದ ಚೆಕ್ಕು ಮನೆಗೆ ಬರುವುದು ಅಂದ.. ಬರುವ ದಾರಿಯಲ್ಲೇ ಶ್ರೀದೇವಿಗೆ ಬುಕಿಂಗ್ ಕಾಸು ಕೊಟ್ಟು ಕಾರು ಬುಕಿಂಗ್ ಮಾಡಿ ಬಂದೆ.
ಏನು ಸಮಸ್ಯೆ ಇರುವುದಿಲ್ಲಾ ಅಂತ ನಮ್ಮ ಬ್ಯಾಂಕ್ ರಾಜ ಸೂರ್ಯನಿಗೆ ನಡೆದ ಮ್ಯಾಟರ್ ಎಲ್ಲ ಹೇಳಿದೆ.. 'ಅಲ್ಲಾ ಸಾರ್.. ನೀವು ಖರೀದಿ ಮಾಡುವ ಅಂಗಡಿ ಬದಲಾವಣೆ ಆಗಿದ್ದರಿಂದ, ಸಾಲಕ್ಕೆ ನಡೆಸಿದ ಎಲ್ಲಾ ಪ್ರಕ್ರಿಯೆ ಮತ್ತೆ ಮೊದಲಿಂದ ನಡಿಸಬೇಕು' ಅಂದ. ಖರ್ಮ ಖರ್ಮ!!
ಸರಿ, ಮತ್ತೆ ಎಲ್ಲಾ ದಾಖಲೆಗಳನ್ನು ಸಮರ್ಪಿಸಿದೆ. ಇದು ಡಿಸೆಂಬರ್ ತಿಂಗಳು. ಬರುವ ತಿಂಗಳಿನಲ್ಲಿ ಕಾರಿನ ದರ ಹೆಚ್ಚು ಆಗಬಹುದು ಅಂತ ಎಲ್ಲೋ ಸ್ವಲ್ಪ ಹೊಗೆ ಬಂತು.. ಹಠಾತ್ ಶ್ರೀದೇವಿಗೆ ಫೋನ್ ಮಾಡಿ ಕೇಳಿದೆ, ಅವಳು 'ಹೂಂ ಸಾರ್ ಸ್ವಲ್ಪ ಹೆಚ್ಚಾಗಬಹುದು, ಆದರೆ ಎಷ್ಟು ಅಂತ ಸರಿಯಾಗಿ ಗೊತ್ತಿಲ್ಲ' ಅಂದಳು.. ಒಂದು ಅಂದಾಜು ದರವನ್ನು ಪತ್ರದಲ್ಲಿ ಬರೆದು ಕಳಿಸಿದಳು. ಅವಳು ಕೊಟ್ಟಿರುವ ಅಂದಾಜು ದರದ ಮೇಲೆ ಭರವಸೆ ಇಟ್ಕೊಂಡೇ.. ಅದರ ಆಧಾರದ ಮೇಲೆ ಸೂರ್ಯ ಹೇಳಿದಂತೆ ಸಾಲದ ಪ್ರಕ್ರಿಯೆ ಮತ್ತೆ ಶುರು ಮಾಡಿದೆ.
ಮೂರು ವಾರ ಕಳೆದವು. ಬ್ಯಾಂಕ್ ಕೆಲಸ ಪೂರ್ತಿ ಆಯಿತು.. ಕಾರು ತೆಗೆದುಕೊಳ್ಳುವ ಎರಡು ದಿನ ಮುಂಚೆ ಬಂದು ಸಾಲದ ಚೆಕ್ಕು ತೆಗೆದುಕೊಂಡು ಹೋಗಿ ಅಂದ ಸೂರ್ಯ. ಈ ಗ್ಯಾಪ್ನಲ್ಲಿ ಹಿಂದೆ ಅನುಮಾನ ಬಂದ ರೀತಿಯಲ್ಲೇ ಕಾರಿನ ದರ ಹೆಚ್ಚಾಯಿತು, ಗೊತ್ತಲ್ವಾ ನಮ್ಮ ಗ್ರಹಬಲ, ಶ್ರೀದೇವಿ ಕೊಟ್ಟ ಅಂದಾಜು ಹಾಗೂ ಕಾರಿನ ನಿಜವಾದ ದರ, ಎರಡು ಬೇರೆ ಬೇರೆ. ಖರ್ಮ ಖರ್ಮ!!
ಸೂರ್ಯ ನಗುತ್ತಾ, 'ಸಾರ್, ಕಾರು ದರ ಬೇರೆ ಆದರಿಂದ ನೀವು ಮತ್ತೆ ಹೊಸದಾಗಿ ಸಾಲಕ್ಕೆ ಅರ್ಜಿ ಕೊಡಬೇಕು' ಅಂದ. ಖರ್ಮ ಖರ್ಮ!! ಇದೇ ಸಮಯದಲ್ಲಿ, ಶ್ರೀದೇವಿ ಫೋನ್ ಮಾಡಿದಳು. 'ಸಾರ್ ನಿಮ್ಮ ಕಾರು ಬಂದಿದೆ, ಬೇಗ ಬಂದು ಕಾಸು ಕೊಟ್ಟು ಕಾರು ಎತ್ತಾಕೊಂಡ್ ಹೋಗಿ' ಅಂತ.. ಆಹಾ ಎಂಥಾ ಸ್ಥಿತಿ. ಮುಂಚೆ ಕಾಸು ಇತ್ತು ಕಾರು ಇಲ್ಲ. ಈಗ ಕಾರು ಇದೆ ಕಾಸು ಇಲ್ಲ.. ನಮ್ಮ ಸ್ಥಿತಿಯ ಸ್ಥಿತಿ ಅದ್ಭುತ!!
ಸರಿ ಮತ್ತೆ ಹೊಸದಾಗಿ ಎಲ್ಲಾ ಮೊದಲಿಂದ ಸಾಲದ ಪ್ರಕ್ರಿಯೆ ಶುರು ಮಾಡಿದೆ.. ಸೂರ್ಯ ಮೆಂಟಲ್ ಆಗೋದು ಒಂದೇ ಬಾಕಿ.. :)
ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೆ, ಸ್ವಲ್ಪ ಖುಷಿ ಕೊಡುವ ಸುದ್ದಿ. ಅನಿಲ್ ಸಾಹೇಬರು ಚೆಕ್ಕು ಕಳಿಸಿದರು. :) ಈ ಚೆಕ್ಕು ಸೂರ್ಯನಿಗೆ ಕೊಟ್ಟೆ. ಏನಾಯ್ತು ಗೊತ್ತಾ? ಇನ್ನೇನಾಗತ್ತೆ, ಚೆಕ್ಕು ಬೌನ್ಸ್ ಆಯಿತು.. ಖರ್ಮ ಖರ್ಮ!!.
ಅನಿಲ್ಗೆ ಫೋನ್ ಮಾಡಿ ತುಪುಕ್ ತುಪುಕ್ ತುಪುಕ್... ಮೂರು ದಿನದ ನಂತರ ಚೆಕ್ಕು ಕ್ಲಿಯರ್ ಅಯಿತು..
ಈ ಬಾರಿ ಯಾಕೋ ಬ್ಯಾಂಕಿನ ಕಾರ್ಯಗಳು ಸ್ವಲ್ಪ ನಿಧಾನವಾದವು... ಭಯ ಶುರು ಆಯಿತು.. ಪ್ರತಿ ದಿನ ಶ್ರೀದೇವಿ ಫೋನ್ ಮಾಡಿ ಮಾಡಿ ತಲೆ ತಿನ್ನೋವ್ಳು.. ಕಾಸು ಕೊಟ್ಟಿಲ್ಲಾ ಅಂದ್ರೆ ಬುಕಿಂಗ್ ರದ್ದು ಆಗುವುದು ಅಂತ ಶ್ರೀದೇವಿ ಹೆದರಿಸಿದಳು.. ಒಂದು ಕಡೆ ಸೂರ್ಯ, ಇನ್ನೊಂದು ಕಡೆ ಶ್ರೀದೇವಿ, ಇವರಿಬ್ಬರ ನಡುವೆ ನಾನು ಮತ್ತು ನನ್ನ ಕಾರು.. ದೇವ್ರೇ ಕಾಪಡಪ್ಪಾ..!!
ಹಲವು ದಿನಗಳು ಆದಮೇಲೆ.. ಬ್ಯಾಂಕಿನ ಕೆಲಸ ಮುಗಿದು ಚೆಕ್ಕು ನನ್ನ ಕೈಗೆ ಬಂತು. ಅಬ್ಬ! ಕೊನೆಗೂ ಕಾರ್ ಸಿಗತ್ತೆ. ಹುಹೋ!!!
ಆದ್ರೆ ಇನ್ನೊಂದು ಸಣ್ಣ ಟ್ವಿಸ್ಟ್ ಇದೆ.. ಆ ಸಮಯದಲ್ಲಿ ಹತ್ತು ದಿನ ಪೂರ್ತಿ ಒಳ್ಳೆ ದಿನಗಳೇ ಇರಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮ 'ಬೇಡ ಮಗನೆ, ಈ ವಾರ ಮುಗಿಯಿಲಿ, ಒಳ್ಳೆ ದಿನಗಳು ಬರಲಿ, ಇನ್ನೊಂದು ಸ್ವಲ್ಪ ಕಾಯೋಣ'. ಖರ್ಮ ಖರ್ಮ!!
ನಿರೀಕ್ಷಣೆಗೆ ಕೊನೆಯೇ ಕಾಣಲಿಲ್ಲ..
ಆ ಒಂದು ವಾರ ಮುಗಿಯಿತು... ಎಲ್ಲಾ ಪ್ರಕ್ರಿಯೆಗಳು ಮುಗಿದವು. ಕಾರು ಮನೆಗೆ ಬರುವ ದಿನ ಬಂತು. ಕಾರು ತರಲು ನಮ್ ದೋಸ್ತ್ ರಾಮ್, ಅಪ್ಪ ಮತ್ತು ಅಮ್ಮ ಜೊತೆ ಹೋದೆ. ಅಲ್ಲಿ ಅಂಗಡಿಯವರು ಎಲ್ಲಾ ಪೂಜೆ ಕಾರ್ಯಕ್ರಮಗಳು ಮಾಡಿದರು.. ಖರ್ಮ ಖರ್ಮ ಅಲ್ಲ ಖುಷಿ ಖುಷಿ. :) ಪೂಜೆ ಮುಗಿಯಿತು. ಈಗ ಮ್ಯಾಟರ್ ಏನು ಅಂದ್ರೆ, ನನಗೆ ಕಾರು ಓಡಿಸಲು ಬರಲ್ಲ.. :) ರಾಮಾ!!!!!
ಏನೋ ಸ್ವಲ್ಪ ಸ್ವಲ್ಪ ಬರುತ್ತೆ ಅಷ್ಟೇ. ಕಾರು ಓಡಿಸಲು ಎಷ್ಟು ಬರುತ್ತೋ ಅಷ್ಟರಲ್ಲೇ ಕಾರು ಓಡಿಸಲು ಶುರು ಮಾಡಿದೆ. ಬರುವ ದಾರಿಯಲ್ಲಿ ಒಂದು ದೊಡ್ಡ ಟ್ರಾಫಿಕ್ ಜಾಮ್. :( ಯಾವುದೋ ಒಂದು ಲಾರಿ ಮಟಾಶ್... ದೇವರು ಅವನಿಗೆ ಬರುವ ಆಟಗಳೆಲ್ಲಾ ನನ್ನ ಜೊತೆ ಆಡ್ಬಿಟ್ಟಿದ್ದ :)
ಹಾಗೆ ಹೇಗೊ ನೆಮ್ಮದಿಯಲ್ಲಿ ಓಡಿಸಿಕೊಂಡು ಮನೆಗೆ ಬಂದು ಸೇರಿದೆ :) ಅಬ್ಬಾ!! ಎಲ್ಲರಿಗೊ ಖುಷಿಯೋ ಖುಷಿ...
ಗಾಡಿ ಪೂಜೆ ಮಾಡಿದ್ವಿ.. ಸ್ವೀಟ್ಸ್ ಹಂಚಿದ್ವಿ.. ಪೆಟ್ರೋಲ್ ಫುಲ್ ಟ್ಯಾಂಕ್ ಮಾಡ್ಸಿದ್ವಿ.. ಡಂಕನಕಾ.. ಡಂಕನಕಾ :)
ಎಲ್ಲಾ ಆಯ್ತಾ??? ಇನ್ನೇನ್ ಬಾಕಿ ಇದೆ ಸ್ವಾಮಿ? ಇನ್ನು ಏನಾದ್ರು ಆಗಬಹುದೇ?
ಕಾರು ಬಂದ ಮಾರನೇ ದಿನವೇ ಹೋಗಿ ಬಸ್ ಗೆ ಒಂದು ಸಣ್ಣ ಕಿಸ್ ಕೊಟ್ಟೆ.. :) ಕಾರಿಗೆ ಒಂದು ಪುಟಾಣಿ ದ್ರೃಷ್ಟಿ ಚುಕ್ಕೆ ಬಿತ್ತು :)
ಎನೇ ಆಗಲಿ, ಹೇಗೇ ಆಗಲಿ.. ಎಲ್ಲವೂ ಒಂದು ಒಳ್ಳೆ ಕಥೆಗಾಗಿಯೇ!!
ಲೇಖಕರ ಕಿರುಪರಿಚಯ | |
ಶ್ರೀ ಸುರೇಶ್ ಕುಮಾರ್ ದೇಸು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಇವರಿಗೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ವಿಶೇಷ ಪ್ರೀತಿ-ಗೌರವ. ಪ್ರಸ್ತುತ ಇಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. Blog | Facebook | Twitter |
ಬರವಣಿಗೆ ಬಹಳ ಸರಳವಾಗಿ-ಸುಂದರವಾಗಿ , ಮೂಡಿಬಂದಿದೆ :)
ಪ್ರತ್ಯುತ್ತರಅಳಿಸಿ