ಭಾನುವಾರ, ನವೆಂಬರ್ 2, 2014

ಬೇವರ್ಸಿಯ ಬಯೋಡೇಟಾ

ನನಗೂ ಶತಮಾನಗಳ ಇತಿಹಾಸವಿದೆ
ನನ್ನ ಹಡೆದವರ ಹೆಸರು ನೆನಪಿಲ್ಲ
ನಿಜ ಹೇಳಬೇಕೆಂದರೆ ನಾನು
ಒಬ್ಬನಿಗೆ ಹುಟ್ಟಿದವನಲ್ಲ.
ಹುಟ್ಟುವವನೂ ಅಲ್ಲ
ನನ್ನ ಬಯೋಡೇಟಾದಲ್ಲಿ
ಜಾತಿ-ಧರ್ಮಗಳ ಕಾಲಂ ಇರುವುದಿಲ್ಲ
ಗಂಡು ಕುಲದ ಮಹಾಶಯರ
ತೀಟೆಗೆ ಗುರುತು ನಾನು.
ಉಳ್ಳವರ ಶೋಕಿಗೊಂದು ಮೈಲಿಗಲ್ಲು
ನಿತ್ಯವೂ ಜನಿಸುವ ವರ ಪಡೆದಿದ್ದೇನೆ.


ಕೌರವರ ಆಸ್ಥಾನ, ಮನೆ-ಮಠ
ಲಾಡ್ಜು,  ರೆಸಾರ್ಟು, ಮಂದಿರ-ಮಸೀದಿ
ಶೌಚಾಲಯ, ಕಛೇರಿ, ಶಾಲೆ ಇವೆಲ್ಲವೂ
ನನ್ನ ಒಳಾಂಗಣ ಜನ್ಮ ತಾಣಗಳು.
ಕೆರೆ, ಕೊಳ್ಳ, ನದಿ, ತೊರೆ, ಬೇಲಿ
ತೋಟ, ಬೆಟ್ಟ-ಬಯಲು, ಕಾಡು
ಹೀಗೆ ಪ್ರಕೃತಿಯ ಮಡಿಲಲ್ಲೂ
ನಾನು ಜನಿಸಬಲ್ಲೆ.
ಆಷಾಡ ಶ್ರಾವಣಗಳನ್ನು ಮೀರಿದ ಸರಕು ನಾನು.


ನಾನು ಸಾರ್ವಕಾಲಿಕ
ನಾನು ಸಾಂಕ್ರಾಮಿಕ
ಜಗದ ಎಲ್ಲಾ ಸಂಬಂಧಗಳನ್ನೂ
ಕೊಲ್ಲುವ ತಾಕತ್ತು ನನಗಿದೆ.
ನಾನು ಜನಿಸಿದ ಪರಿಣಾಮ ಅದೆಷ್ಟೋ
ಕನಸು ತುಂಬಿದ ಕಣ್ಣುಗಳು ಸತ್ತಿವೆ.
ಸ್ವಚ್ಛಂದವಾಗಿ ಅರಳಿ ಪರಿಮಳ ಬೀರಲು
ಹೊರಟ ಮೊಗ್ಗುಗಳನೆಲ್ಲಾ ಎರಡೂ ಕೈಗಳಿಂದ
ಚಿವುಟಿ ಹಾಕುವ ಖಯಾಲಿಗೆ ಬಿದ್ದಿದ್ದೇನೆ.
ಇದು ನನ್ನ ಸದ್ಯದ ಸಾಧನೆ!


ಯಾವ ದೇವರಿಗೂ ನಾನು ಗಡ್ಡ ಬಿಟ್ಟು
ವರ ಕೇಳದಿದ್ದರೂ ಕೂಡ
ಚಿರಂಜೀವಿಯಾಗಿ ಬದುಕುವ ಅದೃಷ್ಟ
ನನಗೆ ಒಲಿದು ಬಂದಿದೆ!
ನನ್ನ ಮೇಲೆ ನಾಕಾಬಂಧಿ ಹಾಕಿ
ದಸ್ತಗಿರಿ ಮಾಡುವ ಪ್ರಯತ್ನಗಳೆಲ್ಲವೂ ವಿಫಲವಾಗಿವೆ.
ಯಾರ ಜಪ್ತಿಗೂ ನಾನು ಸಿಕ್ಕುವುದಿಲ್ಲ.


ಮನಸ್ಸು ಮಾಡಿದರೆ ನೀವು
ನನ್ನ ಅಪ್ಪಂದಿರನ್ನು ಕ್ಯಾಕರಿಸಿ ಉಗಿಯಬಹುದಷ್ಟೆ
ಇನ್ನೊಂದು ಹೆಜ್ಜೆ ಮುಂದೆ ಹೋಗಿ
ಜೈಲಿಗೆ ತಳ್ಳಬಹುದು.
ಆದರೆ ನನ್ನನ್ನು ಗಲ್ಲಿಗೆ ಹಾಕುವ ತಾಕತ್ತು
ನಿಮಗ್ಯಾರಿಗೂ ಇಲ್ಲ?
ಮಾನವನ ಎದೆಯಲಿ ಮಾನವೀಯತೆಯ
ಹೂ ಅರಳದ ಹೊರತು
ನಾನು ಸಾಯುವುದಿಲ್ಲ!


ಇಷ್ಟೂ ಬಾಯಿಬಿಟ್ಟ ಮೇಲೆ
ಇನ್ನೇನು ಉಳಿದಿದೆ?
ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಟ್ಟಿದ್ದೇನೆ.
ಸಮಾಜ ನನಗೆ ಇಟ್ಟಿರುವ ಹೆಸರು "ಅತ್ಯಾಚಾರ"
ಅಡ್ಡ ಹೆಸರುಗಳನ್ನಿಡುವುದು ನಿಮಗೆ ಬಿಟ್ಟ ವಿಚಾರ!
ಏನು ಬೇಕಾದರು ಕರೆಯಿರಿ
ಯಾರ ಮೇಲೂ ನಾನು
ಮಾನನಷ್ಟ ಮೊಕದ್ದೊಮ್ಮೆ ಹೂಡುವುದಿಲ್ಲ!!!!


ಲೇಖಕರ ಕಿರುಪರಿಚಯ
ಡಾ. ಮಹೇಂದ್ರ ಎಸ್‍. ತೆಲಗರಹಳ್ಳಿ

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರ ಹುಟ್ಟೂರು ಆನೇಕಲ್‍ ತಾಲೂಕಿನ ತೆಲಗರಹಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಂಡಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Blog  |  Facebook  |  Twitter

4 ಕಾಮೆಂಟ್‌ಗಳು:

 1. ಬಹಳ ಚೆನ್ನಾಗಿದೆ. ಪ್ರತಿ ಸಾಲಿನಲ್ಲೂ ನಾನೊಬ್ಬ ಸಮಾಜಘಾತುಗ ಅನ್ನೋ ಮಾತು, ಮಧ್ಯ ಅಣಕದ ಮಾತು, "ಮಾನವನೆದೆಯಲಿ ಮಾನವೀಯತೆಯ ಹೂವು" ಈ ಸಾಲಂತೂ ಅದ್ಭುತ. ನಿಮ್ಮ ಕವನ ಮತ್ತೆ ಮತ್ತೆ ಓದಬೇಕೆನ್ನುವ ಆಸೆ, ಪ್ರತೀಬಾರಿ ಓದಿದಾಗಲೂ ಒಂದು ಹೊಸ ಕಥೆ ಕಣ್ಣ ಮುಂದೆ ಹಾದುಹೋಗುತ್ತದೆ. ನಿಮಗೆ ಶುಭವಾಗಲಿ

  ಪ್ರತ್ಯುತ್ತರಅಳಿಸಿ
 2. ವಿಭಿನ್ನವಾದ ಬರಹ.. ಈ ಮಾರಿಗೆ ಆದಷ್ಟು ಬೇಗ ಮೋಕ್ಷ ಸಿಗಲೆಂದು ಪ್ರಾಥಿರ್ ಸುತ್ತೇನೆ.

  ಪ್ರತ್ಯುತ್ತರಅಳಿಸಿ
 3. ಮಾನವೀಯತೆಯ ಹೂ ಅರಳದ ಹೊರತು ನಾನು ಸಾಯುವುದಿಲ್ಲ
  ಅದ್ಭುತ ವಿಚಾರ
  - ರಾಜೇಂದ್ರ ಪಾಟೀಲ್
  ಲೇಖಕ, ಪತ್ರಕರ್ತ
  ಸಂಯುಕ್ತ ಕರ್ನಾಟಕ
  ಹುಬ್ಬಳ್ಳಿ
  9591323453
  8197748049. Whatsapp

  ಪ್ರತ್ಯುತ್ತರಅಳಿಸಿ