ಮಂಗಳವಾರ, ನವೆಂಬರ್ 18, 2014

ಹೀಗೊಂದು ಸಾವಿನ ಸುತ್ತ

ಅಂದು ನೂಲು ಹುಣ್ಣಿಮೆ, ಬೆಳಿಗ್ಗೆ ಬರಬೇಕಿದ್ದ ರತ್ನ ಬರಲೇ ಇಲ್ಲ. ರತ್ನ ನಮ್ಮ ಮನೆಕೆಲಸದವಳು. ನೋಡಲು ಕಪ್ಪಿದ್ದರೂ ಆಕರ್ಷಕ ಮೈಕಟ್ಟಿನ ಹೆಂಗಸು, ಕಡಿಮೆ ಮಾತು ಅಚ್ಚುಕಟ್ಟು ಕೆಲಸ ಆಕೆಯದು. ತನ್ನ ಪಾಡಿಗೆ ಕೆಲಸ ಮುಗಿಸಿ ಮರಳುತ್ತಿದ್ದಳು. ನಾನೆಂದೂ ಅವಳ ವೈಯಕ್ತಿಕ ಬದುಕಿನ ಬಗ್ಗೆ ಕೆದಕಿದವಳಲ್ಲ. ಅಸಲು ನನಗೆ ಅದರ ಬಗ್ಗೆ ಆಸಕ್ತಿಯೂ ಇರಲಿಲ್ಲ; ಕೇಳಲು ಸಮಯವೂ ಇರಲಿಲ್ಲ. ಅವಳ ಗಂಡ ಕಟ್ಟಡದ ಕಂಬಿ ಕಟ್ಟುವ ಕೆಲಸ ಮಾಡುವವನು, ಅವಳಿಗೆ ಇಬ್ಬರು ಗಂಡು ಮಕ್ಕಳು, ಅವರಲ್ಲಿ ಹಿರಿಯ ಅವಳ ಊರಲ್ಲಿ ಅಜ್ಜಿಯ ಮನೆಯಲ್ಲಿದ್ದು ಓದುತ್ತಿದ್ದ. ಇನ್ನೊಬ್ಬ ಮಗ ನನ್ನ ಮಗಳ ವಯಸ್ಸಿನವನು, ಅವಳ ಜೊತೆಯಲ್ಲಿದ್ದ. ಅವನ ಮೇಲೆ ವಿಪರೀತ ಕನಸುಗಳನ್ನು ಹೊಂದಿದ್ದಳೊ ಏನೋ, ಸರಕಾರಿ ಶಾಲೆಗೆ ಸೇರಿಸದೆ ಅವಳ ಮನೆ ಹತ್ತಿರದ ಖಾಸಗಿ ಶಾಲೆಗೆ ಸೇರಿಸಿದ್ದಳು.. ಇಷ್ಟು ವಿಷಯವಷ್ಟೇ ನನಗೆ ಗೊತ್ತಿದ್ದದ್ದು..

ಮುನ್ನಾ ದಿನ ಸಂಜೆ ಕೆಲಸ ಮುಗಿಸಿ ಹೋಗುವಾಗ ಮರುದಿನ ಬರದಿರುವ ಕುರಿತು ಏನೂ ಹೇಳಿರಲಿಲ್ಲ. ಆದರೆ ಗಂಟೆ ಎಂಟಾದರೂ ಅವಳು ಬರದಿದ್ದಾಗ ಅವಳು ಬರುವ ಕುರಿತು ಅನುಮಾನ ಕಾಡಿತು. ಛೇ! ಒಂದು ದಿನ ಆರಾಮಾಗಿ ಇರೋಣವೆಂದು ಕೆಲಸಕ್ಕೆ ರಜ ಹಾಕಿಕೊಂಡರೆ ರಜೆಯ ಮಜವನ್ನು ಸವಿಯಲು ಬಿಡದವಳ ಕುರಿತು ವಿಪರೀತ ಸಿಟ್ಟು ಬಂತು. ಆದರೇನು ಮಾಡುವುದು? ಅವಳಿಗೆಂದು ಕಾದಿರಿಸಿದ್ದ ಕೆಲಸವನ್ನು ಮಾಡಲಿರದಾದೀತೇ! ಸರಿ ಇನ್ನೇನು ಅವಳನ್ನು ಮನದಲ್ಲೇ ಶಪಿಸುತ್ತ ಪಾತ್ರೆ ತೊಳೆದಿದ್ದಾಯಿತು. ನೆಲವನ್ನು ಒರೆಸದೇ ಬಿಡಲಾದೀತೇ? ಆದರೂ ದೂರದ ಆಸೆ, ಬಂದರೂ ಬರಬಹುದು. ಸುಳಿವೇ ಇಲ್ಲ. ನೆಲ ಒರೆಸುತ್ತ ಅಂದುಕೊಂಡೆ.... ನಾಳೆ ಬರಲಿ ಅವಳು, ಸರಿಯಾಗಿ ಮುಖದ ಮೇಲೆ ಹೊಡೆದ ಹಾಗೆ ಹೇಳಬೇಕು; ನಿನ್ನೆ ನೀನು ಬರದಿದ್ದುದೇ ಒಳ್ಳೆಯದಾಯಿತು, ಒಂದು ದಿನವಾದರೂ ಮನೆ ಸ್ವಚ್ಛವಾಯಿತು.... ಅವಳು ಬರಲಾರದ ಕಾರಣ ನಾನೇ ಎಲ್ಲ ಮಾಡಿಕೊಳ್ಳಬೇಕಾದ ದುಃಖಕ್ಕೆ ನನಗೆ ನಾನೇ ಸಮಾಧಾನ ಮಾಡಿಕೊಂಡ ಪರಿ ಅದು. ನಿಜವಾದ ಪರಿಸ್ಥಿತಿ ಹೇಗಿತ್ತೆಂದರೆ ಅವಳ ಬಗ್ಗೆ, ಅಥವಾ ಅವಳ ಕೆಲಸದ ಬಗ್ಗೆ ಒಂದೂ ಮತಾಡುವ ಹಾಗೇ ಇರಲಿಲ್ಲ, ಹಾಗಿತ್ತು ಅವಳ ಕೆಲಸ ಮತ್ತು ಅವಳ ನಡುವಳಿಕೆ.

ಎಲ್ಲ ಕೆಲಸ ಮುಗಿಸಿದ ಮೇಲೆ ಅನ್ನಿಸಿತು ಅವಳು ನಾಳೆಯೂ ಬಾರದಿದ್ದರೆ!!! ವಿಚಾರಿಸಿ ನೋಡೋಣವೆಂದು ಅವಳೇ ನೀಡಿದ್ದ ನಂಬರಿಗೆ ಕಾಲ್ ಮಾಡಿದೆ. ರಿಂಗಾದರೂ ಅತ್ತ ಕಡೆಯಿಂದ ಸುಳಿವಿಲ್ಲ. ನಾನೂ ಬಿಡಲಿಲ್ಲ ಒಂದಲ್ಲ, ಎರಡಲ್ಲ, ಹತ್ತು ಬಾರಿಯಾದರೂ ಮಾಡಿರಬೇಕು, ಅಂತೂ ನನ್ನ ಕಾಟಕ್ಕೋ ಏನೋ ಆಕಡೆಯಿಂದ ಕ್ಷೀಣವಾದ ಧ್ವನಿ ಕೇಳಿಸಿತು... ನಿಧಾನವಾಗಿ.. ಅರ್ಧಗಂಟೆ ಬಿಟ್ಟುಮಾಡಿ.. ಆ ಧ್ವನಿ ಅವಳ ಗಂಡನದು. ಅವಳು ನೀಡಿದ್ದ ಆ ನಂಬರ್ ಅವಳ ಗಂಡನದು. ಅವಳು ಬರದಿದ್ದಾಗ ಅದೇ ನಂಬರಿಗೆ ವಿಚಾರಿಸುತ್ತಿದ್ದೆನಲ್ಲ ಹಾಗಾಗಿ ಗೊತ್ತಿತ್ತು. ಅವನೂ ಕಡಿಮೆಯೇನಿರಲಿಲ್ಲ, ತುಂಬ ಸಲ ಅವಳು ಕೆಲಸಕ್ಕೆ ಬಂದಾಗ ಕಾರಣವೇ ಇಲ್ಲದೆ ಕಾಲ್ ಮಾಡುತ್ತಿದ್ದ... ತುಂಬ ಸಲ ಅವನ ಬಗ್ಗೆ ಅನುಮಾನ ಕಾಡಿತ್ತು. ಬಹುಶಃ ಅವನು ಸರಿಯಿಲ್ಲ. ಎಂದೋ ಒಮ್ಮೆ ಅವನ ಬಗ್ಗೆ ವಿಚಾರಿಸಿದಾಗ ಅವಳು ಹೇಳಿದ್ದು ಇಷ್ಟೇ.. ನಮ್ಮ ಯಜಮಾನರಿಗೆ ಯಾವುದೇ ಚಟವಿಲ್ಲ... ಹೋಗಲಿ ನನಗೇಕೆ ಎಂದು ಸುಮ್ಮನಾಗಿದ್ದೆ. ಇಂದು ಅವನ ಧ್ವನಿ ಕೇಳಿದಾಗ ಅನ್ನಿಸಿತು ಇವನೆಲ್ಲೋ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರಬೇಕು. ಅವನ ಕಾಲ್‌ ಗೋಸ್ಕರ ಎಷ್ಟು ಹೊತ್ತು ಕಾದರೂ ಬರಲೇ ಇಲ್ಲ.

ಅಂತೂ ಸಂಜೆ ಅವನ ಕಾಲ್ ಬಂತು. ಅವನು ಹೇಳಿದ್ದು ಕೇಳಿ ನನ್ನ ಕಿವಿಯನ್ನು ನಾನು ನಂಬಲಾಗಲಿಲ್ಲ. ಕಾರ್ ಅಪಘಾತದಲ್ಲಿ ತೀರಿಕೊಂಡಳು, ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಎಂತಹ ದುರಂತ! ರತ್ನಳ ಸಾವನ್ನು ನಂಬುವ ಸ್ಥಿತಿಯಲ್ಲಿ ನಾನಿರಲೇ ಇಲ್ಲ. ಕಾರ್ ನವರ ಮೇಲೆ ಕೇಸಾದರೂ ಹಾಕಬೇಕಿತ್ತು ಎಂದು ನನಗೆ ಆ ಸಂದರ್ಭದಲ್ಲಿ ಹೊಳೆದ ಮಾತನ್ನು ಹೇಳಿದೆ. ಅವನು ನೀಡಿದ ಪ್ರತಿಕ್ರಿಯೆ ಹೀಗಿತ್ತು - ಅವಳೇ ಇಲ್ಲವಾದ ಮೇಲೆ ಯಾರ ಮೇಲೆ ಕೇಸು ಹಾಕಿ ಏನು ಪ್ರಯೋಜನ?. ರತ್ನ ಹೋದ ದುಃಖದಲ್ಲಿಯೂ ಅವನ ಒಳ್ಳೆಯ ಗುಣ ನೆನೆದು ಅಭಿಮಾನವೆನಿಸಿತು.

ರತ್ನ ಮನೆಕೆಲಸದವಳು, ನಾವು ಮೊದಲು ಬಾಡಿಗೆಗಿದ್ದ ಮನೆಯ ಪಕ್ಕದ ಮನೆಗೂ ಕೆಲಸಕ್ಕೆ ಹೋಗುತ್ತಿದ್ದಳು. ನಾವು ನಮ್ಮ ಸ್ವಂತ ಮನೆಗೆ ಬಂದ ಮೇಲೆ ಅವರ ಜೊತೆಗಿದ್ದ ಸಂಪರ್ಕ ಕಡಿದುಹೋಗಿತ್ತು. ಅವಳ ಸಾವಿನ ವಾರ್ತೆಯ ಮರು ದಿನ ಆ ಮನೆಯ ಆಂಟಿ ಹೇಳಿದ ವಿಷಯ ಕೇಳಿ ಆಶ್ಚರ್ಯವೆನಿಸಿತು. ಅವಳದು ಸಹಜ ಸಾವಲ್ಲ! ಕೊಲೆ!! ಕೊಲೆಗಾರ ಬೇರೆ ಯಾರೂ ಅಲ್ಲ ಅವಳ ಗಂಡನೇ!!!! ಅವಳ ಸಾವಿನ ಬಗ್ಗೆ ಅಳುತ್ತ ಮಾತಾಡಿ ಅವಳೇ ಇಲ್ಲದ ಮೇಲೆ ಅವಳ ಅಪಘಾತಕ್ಕೆ ಕಾರಣರಾದವರಿಂದ ಬರುವ ಹಣ ತೆಗೆದುಕೊಂಡು ಏನು ಮಾಡಲಿ ಎಂದು ನಾನು ನಂಬುವಂತೆ ಮಾತಾಡಿದ್ದ ಅವಳ ಗಂಡನೇ ಅವಳನ್ನು ಸಾಯಿಸಿದ್ದು ಎಂದರೆ ನಾನು ನಂಬುವುದಾದರೂ ಹೇಗೆ?

ಅವಳ ಸಾವಿನ ನಂತರ ಅವನ ಕಾಲ್ ನನಗೆ ಬರತೊಡಗಿತು. ಮಾತನಾಡಲು ಭಯವಾಗಿ ನಾನು ರಿಜೆಕ್ಟ್ ಲೀಸ್ಟಿಗೆ ಹಾಕಿಬಿಟ್ಟೆ. ಆದರೂ ಅವನು ನನ್ನನ್ನು ಸಂಪರ್ಕಿಸಲು ನಡೆಸುತ್ತಿದ್ದ ಪ್ರಯತ್ನ ನನ್ನ ಮೊಬೈಲ್ ತೋರಿಸುತ್ತಿತ್ತು. ಕೊನೆಗೆ ನನ್ನ ಪತಿಗೆ ಕೊಟ್ಟು ಮಾತಾಡಿಸಿದ್ದಾಯಿತು. ರತ್ನ ಮನೆಕೆಲಸ ಮಾಡಿದ ಬಾಕಿ ವಸೂಲಿಗಾಗಿ ಕಾಲ್ ಮಾಡಿದ್ದು ಅವನು. ಆದರೆ ನಿಜ ಸಂಗತಿ ಎಂದರೆ ಅವಳೇ ನಮಗೆ ಕೊಡುವುದು ಬಾಕಿ ಉಳಿದಿತ್ತು.. ಅದನ್ನೇ ಅವನಿಗೆ ಹೇಳಿದ ಮೇಲೆ ಅವನ ಕಾಲ್ ಬರುವುದು ನಿಂತಿತು.

ಆದರೆ ರತ್ನಳ ಸಾವನ್ನು ಮರೆಯುವುದು ಅಷ್ಟು ಸುಲಭಸಾಧ್ಯವಿರಲಿಲ್ಲ. ಅವಳ ಗಂಡ ಅವಳನ್ನು ಸಾಯಿಸಿದನೆಂದರೆ ನಂಬುವುದೂ ಸಾಧ್ಯವಿರಲಿಲ್ಲ. ಎಷ್ಟೋ ದಿನಗಳ ಮೇಲೆ ಅವಳ ನಾದಿನಿ ಸಿಕ್ಕವಳು ಅವಳ ಗಂಡನ ನಿಜರೂಪವನ್ನು ಬಹಿರಂಗಪಡಿಸಿದಳು. ಜೂಜಾಡಿ ಸಾಲ ಮಾಡಿಕೊಂಡಿದ್ದ ಅವನು ಅವಳ ಬಂಗಾರವನ್ನೆಲ್ಲ ಮಾರಿದ್ದನಂತೆ. ಹಣಕ್ಕಾಗಿ ಅವರಿಬ್ಬರ ನಡುವೆ ದಿನವೂ ಕದನ ನಡೆಯುತ್ತಿತ್ತಂತೆ. ಸಾಲದ್ದಕ್ಕೆ ಅವನಿಗೆ ಅವಳ ಮೇಲೆ ಅನುಮಾನವಂತೆ. ಇಷ್ಟೆಲ್ಲ ಕಾರಣಗಳ ಮಧ್ಯೆ ಆ ಮಧ್ಯರಾತ್ರಿ ಅವನು ಕಾದ ಕಬ್ಬಿಣವನ್ನು ಅವಳು ಮಲಗಿದ ಹೊತ್ತಿನಲ್ಲಿ ಅವಳ ಕತ್ತಿಗೆ ಇಟ್ಟುಸಾಯಿಸಿ, ನಂತರ ಸೀರೆಯಿಂದ ನೇಣುಹಾಕಿ ಅವಳೇ ಆತ್ಮಹತ್ಯೆ ಮಾಡಿಕೊಂಡಳೆಂದು ಗುಲ್ಲು ಹಬ್ಬಿಸಿದ್ದ. ವಿಷಯ ತಿಳಿದ ಅವಳ ಅಣ್ಣ ಅವಳ ಹೆಸರಲ್ಲಿದ್ದ ಅಲ್ಪಸ್ವಲ್ಪ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಅವಳ ಗಂಡನನ್ನು ಅವನು ಮಾಡಿದ ಪಾಪ ಕಾರ್ಯದಿಂದ ಮುಕ್ತಿಗೊಳಿಸಿದ್ದ..

ರತ್ನಳ ಸಾವಿನ ನಂತರ ನನಗೇನೋ ಮನೆಕೆಲಸದವರು ಸಿಕ್ಕಿದರು, ಬದಲಾದರು, ಒಬ್ಬರಲ್ಲ ನಾಲ್ವರು ಬಂದುಹೋದರು. ಅವರೆಲ್ಲರಲ್ಲಿ ಅವಳನ್ನು ಹುಡುಕುವ ನನ್ನ ಪ್ರಯತ್ನ ವಿಫಲವಾಯಿತು. ನನಗೇನೋ ಮನೆಕೆಲಸಕ್ಕೆ ಯಾರಾದರೂ ಸಿಗುತ್ತಾರೆ. ಆದರೆ ಅವಳ ಮಕ್ಕಳಿಗೆ ಯಾರು ಸಿಗುತ್ತಾರೆ? ಅವಳ ಮನೆ, ಊರು ಯಾವುದೂ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದೂ ನಾನು ಮಾಡುವುದೇನು? ಅವಳ ಸ್ವಂತದವರೇ ಅವಳ ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವಳ ಮಕ್ಕಳು ಅನಾಥಾಶ್ರಮದ ಪಾಲಾದರೆಂದು ಕೇಳಿಪಟ್ಟೆ. ಅವಳ ಗಂಡನೂ ಇನ್ನೊಂದು ಮದುವೆಯಾದನಂತೆ. ರತ್ನಳ ಪುಣ್ಯವೋ ಮಕ್ಕಳ ಅದೃಷ್ಟವೋ ಅವರು ಗಂಡು ಮಕ್ಕಳು.. ಎಲ್ಲಾದರೂ ಹೇಗಾದರೂ ಬೆಳೆಯುತ್ತಾರೆ.

ರತ್ನಳ ನೆನಪಾದಾಗಲೆಲ್ಲ ಹಲವು ಪ್ರಶ್ನೆಗಳು ಈಗಲೂ ಕಾಡುತ್ತಿರುತ್ತವೆ. ರತ್ನಳಂತೆ ದುರಂತದ ಸಾವನ್ನು ಎಷ್ಟು ಹೆಣ್ಣು ಮಕ್ಕಳು ಅನುಭವಿಸುತ್ತಾರೋ! ಅವರ ಸಾವಿನ ಕುರಿತು ಎಲ್ಲೂ ಸುದ್ದಿಯಾಗದೇ ಇತಿಹಾಸಕ್ಕೂ ಸೇರದೇ ಕಣ್ಮರೆಯಾಗುವವು. ಎಷ್ಟು ಘಟನೆಗಳು ಕಣ್ಣೆದುರಿಗೇ ನಡೆಯುತ್ತವೆಯೋ? ರತ್ನಳ ಮಕ್ಕಳಂತೆ ತಂದೆಯಿದ್ದೂ ಅನಾಥಾಶ್ರಮ ಸೇರುವ ಮಕ್ಕಳೆಷ್ಟೋ! ಅವಳ ಕೊಲೆಗಾರ ಗಂಡನಂತವರಿಗೆ ಏನೂ ವಿಚಾರಿಸದೆ ಮಗಳ ಮದುವೆಯಾದರೆ ಸಾಕೆಂದು ಹೆಣ್ಣು ನೀಡುವ ಮಾತಾಪಿತೃಗಳೆಷ್ಟೋ! ಹೋಗಲಿ, ಕೊಲೆಗಾರ ಗಂಡನೊಂದಿಗೆ ಯಾವುದೇ ಹಿನ್ನೆಲೆ ಗೊತ್ತಿಲ್ಲದೆ ಹಸೆಮಣೆ ಏರುವ ಮುಗ್ಧ ಕನ್ಯಾಮಣಿಯರೆಷ್ಟೋ! ನೆನೆಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ.

ರತ್ನ ಸತ್ತು ಒಂದು ವರ್ಷವಾಯಿತು. ಅವಳ ಸಾವಿನ ಬಗ್ಗೆ ಅವಳ ಸ್ವಂತದವರೇ ತಲೆಕೆಡಿಸಿಕೊಳ್ಳಲಿಲ್ಲ. ಅವಳ ಸಾವಿನಿಂದ ಅವರು ಕಳೆದುಕೊಂಡಿದ್ದರ ಬಗ್ಗೆ ಯೋಚಿಸದೇ ಅವಳ ಸಾವಿನ ನಂತರ ತಮಗೆ ಸಿಗಬಹುದಾದ ಲಾಭದ ಬಗ್ಗೆಯೇ ಯೋಚಿಸಿರಬಹುದು. ಅವಳ ಗಂಡನ ಮೇಲೆ ಕೇಸು ಹಾಕಿದರೆ ಕೋರ್ಟು ಕಛೇರಿ ಅಲೆಯಬೇಕಾದುದರ ಬಗ್ಗೆ ಅವರಿಗೆ ಚಿಂತೆಯಾಗಿರಬಹುದು. ನಾನೂ ಅಷ್ಟೇ ನಿಜಕ್ಕೂ ಅವಳ ಸಾವಿನ ಕಾರಣವೇನಿರಬಹುದು? ಎಂದಾಗಲಿ ಅಥವಾ ಅವಳ ಗಂಡನೇ ಕೊಲೆಗಾರನಾಗಿದ್ದರೆ ಅವನಿಗೆ ಶಿಕ್ಷೆ ಕೊಡಿಸುವುದರ ಕುರಿತಾಗಲೀ ಆಲೋಚಿಸಲಿಲ್ಲ. ಅವಳ ಸ್ವಂತದವರಿಗೇ ಬೇಕಿಲ್ಲದ ಗೊಡವೆ ನನಗೇಕೆ? ಎಂದು ಸುಮ್ಮನಾಗಿಬಿಟ್ಟೆ.

ನಿಜಕ್ಕೂ ರತ್ನಳನ್ನು ಮರೆಯಲೇ ಆಗುತ್ತಿಲ್ಲ. ಅವಳು ನಮ್ಮ ಮನೆಕೆಲಸ ಬಿಡುವುದಾಗಲೀ ಅವಳ ನಂತರ ಇನ್ನೊಬ್ಬರನ್ನು ಹುಡುಕುವುದರ ಕುರಿತಾಗಲೀ ಎಂದೂ ಆಲೋಚಿಸಿರಲಿಲ್ಲ. ಇನ್ನು ಅವಳ ಸಾವಿನ ಕಲ್ಪನೆ ಮೂಡುವುದಾದರೂ ಹೇಗೆ? ಹೀಗೊಂದು ಸಾವಿನ ಸುತ್ತ ನನ್ನ ಮನವು ಸುತ್ತುತ್ತಿರುವಾಗ ಕಾಲಿಂಗ್ ಬೆಲ್ ಸದ್ದಾಯಿತು. ಬಾಗಿಲು ತೆರೆದು ನೋಡಿದರೆ ನಿಂತಿದ್ದಳು; ಹೊಸದಾಗಿ ಬರುತಿದ್ದ ನಮ್ಮ ಮನೆಕೆಲಸದವಳು!!

ಲೇಖಕರ ಕಿರುಪರಿಚಯ
ಶ್ರೀಮತಿ ಮಮತಾ ಭಾಗ್ವತ್

ಮೂಲತಃ ಬೆಂಗಳೂರಿನವರಾದ ಇವರು ಕನ್ನಡ ಐಚ್ಛಿಕ ವಿಷಯವಾಗಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ಪ್ರಸ್ತುತ ಸರಕಾರಿ ಪ್ರೌಢ ಶಾಲೆ, ಬೇಗೂರು ಇಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ