ಬುಧವಾರ, ನವೆಂಬರ್ 26, 2014

ಸಂದೀಪ್ ಉನ್ನಿಕೃಷ್ಣನ್

ನವೆಂಬರ್ 26, 2008. ಕೊಳಾಬ, ಮುಂಬೈ; 9 ಜನ ಪಾಕಿಸ್ತಾನದ ಭಯೋತ್ಪಾದಕರು ದೋಣಿಯಲ್ಲಿ ಬಂದಿಳಿಯುತ್ತಾರೆ. ಪಾಕಿಸ್ತಾನದ ಐ.ಎಸ್‌.ಐ. ಎಂಬ ಸರ್ಕಾರಿ ಸಂಸ್ಥೆಯಿಂದ ತರಬೇತಿ ಪಡೆದು, ಭಾರತೀಯರನ್ನು ಕೊಲ್ಲುವ ಉದ್ದೇಶದಿಂದ ಬಂದಿಳಿಯುತ್ತಾರೆ. ಮೊದಲು ಅವರ ಧಾಳಿ ಛತ್ರಪತಿ ಶಿವಾಜಿ ಟರ್ಮಿನಸ್ ಎಂಬ ರೈಲು ನಿಲ್ದಾಣದಲ್ಲಿ. ಅಲ್ಲಿ 58 ಜನರನ್ನು ಕೊಂದು 104 ಜನರನ್ನು ಗಾಯಗೊಳಿಸಿ ಮುಂದೆ ಹೊರಟರು. ಆಮೇಲೆ ನಾರಿಮನ್ ಹೌಸ್, ಲಿಯೋಪೋಲ್ಡ್ ಕೆಫೆ, ಒಬೆರಾಯ್ ಹೋಟೆಲ್ ಮತ್ತು ತಾಜ್ ಮಹಲ್ ಹೋಟೆಲ್ ಗಳಲ್ಲಿ ಇದ್ದ ಜನರ ಮೇಲೆ ದಾಳಿ ಮಾಡಿ, ಅಲ್ಲಿದ್ದವರನ್ನು ತಮ್ಮ ವಶದಲ್ಲಿಟ್ಟುಕೊಂಡರು. ಈ ಜಾಗಗಳಲ್ಲಿ ಭಾರತದ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಆ ಪಾಕಿಸ್ತಾನೀ ಭಯೋತ್ಪಾದಕರ ನಡುವೆ 4 ದಿನಗಳವರೆಗೆ ನಿರಂತರ ಹಾಗೂ ಭಯಂಕರ ಹೋರಾಟ ನಡೆಯಿತು. ತಾಜ್ ಮಹಲ್ ಹೋಟೆಲ್ ನಲ್ಲಿ ಹೋರಾಟ ಮಾಡಿದ ತಂಡದ ಹೆಸರು 51 ಎಸ್‌.ಎ.ಜಿ. ಅದರ ಮುಖಂಡ, ಕರ್ನಾಟಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್.


ಸಂದೀಪ್ ಉನ್ನಿಕೃಷ್ಣನ್ 1995 ನಲ್ಲಿ ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿ ಸೇರುತ್ತಾರೆ. ಆಗ ಅವರಿಗೆ ಕೇವಲ 18 ವರ್ಷಗಳು. ಆಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದ ವಯಸ್ಸು. ವಯಸ್ಸಿಗೆ ತಕ್ಕ ಹುಮ್ಮಸ್ಸು. ಅವರೊಳಗಿನ ಸುದೃಢ ಹಾಗೂ ನಿರ್ದಯ ಸೈನಿಕನನ್ನು ಅವರ ನಗುಮುಖದಲ್ಲಿ ಸಂಪುಟೀಕರಿಸುವ ಸ್ಥಿರಧೃತಿ ಅವರ ಮೇಲಧಿಕಾರಿಗಳು ಗುರುತಿಸಿದ ಒಂದು ಗುಣ. ತಮ್ಮ 22 ನೇ ವಯಸ್ಸಿನಲ್ಲಿ ಬಿಹಾರ್ ರೆಜಿಮೆಂಟ್ ನ 7 ನೇ ಬೆಟಾಲಿಯನ್‌ ಗೆ ಅವರು ಲಿಯೂಟೆನಂಟ್ ಆಗಿ ನೇಮಕಗೊಳ್ಳುತ್ತಾರೆ. ಡಿಸೆಂಬರ್ 31 1999, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನಗಳಲ್ಲಿ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಅವರು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಪಡೆಗೆ ಆಯ್ಕೆಯಾಗುತ್ತಾರೆ.  ಎನ್‌.ಎಸ್‌.ಜಿ. ಯ ತರಬೇತಿ ಪಡೆದ ನಂತರ ಸ್ಪೆಷಲ್ ಆಕ್ಷನ್ ಗ್ರೂಪ್‌ ನ ಕಾರ್ಯಾಚರಣೆಯಲ್ಲಿ ತೊಡಗುತ್ತಾರೆ. ಬೆಳಗಾವಿಯ ಕಮಾಂಡೋ ವಿಂಗ್‌ ನಲ್ಲಿ ಅತ್ಯಂತ ಕ್ಲಿಷ್ಟವಾದ 'ಘಾತಕ್' ಎಂಬ ತರಬೇತಿಯಲ್ಲಿ ಮೊದಲಿಗರಾಗುತ್ತಾರೆ. ಆ ಕಾರಣದಿಂದ ಅವರನ್ನು ಅಲ್ಲಿ ಬೋಧಕರಾಗಿ ಪರಿಗಣಿಸಲಾಗುತ್ತದೆ. ಇಷ್ಟೆಲ್ಲಾ ಸಾಧಿಸಿದ ಅವರನ್ನು ಎನ್‌.ಎಸ್‌.ಜಿ. ಯ ಕಮಾಂಡೋ ಮಾಡಲು ಮೇಲಧಿಕಾರಿಗಳು ನಿರ್ಧರಿಸುತ್ತಾರೆ. 2006 ರಲ್ಲಿ ಎನ್‌.ಎಸ್‌.ಜಿ. ಯ ಕಮಾಂಡೋ ಆಗಿ ನೇಮಕಗೊಳ್ಳುತ್ತಾರೆ ನಮ್ಮ ಸಂದೀಪ್ ಉನ್ನಿಕೃಷ್ಣನ್.

ಇಷ್ಟು ಸಾಧನೆಗಳ ಹಿನ್ನೆಲೆ ಇದ್ದ ಸಂದೀಪ್ ಉನ್ನಿಕೃಷ್ಣನ್ ಅವರು 2008ರ ನವೆಂಬರ್ 27 ರಂದು 100 ವರ್ಷಗಳಷ್ಟು ಹಳೆಯ ತಾಜ್ ಮಹಲ್ ಹೋಟೆಲ್‌ ನ ಮೇಲ್ಮಹಡಿಯಲ್ಲಿ ಹೆಲಿಕ್ಯಾಪ್ಟರ್‌ ನಿಂದ ಇಳಿದು ನಿಂತಿದ್ದಾರೆ. ಹೋಟೆಲ್‌ ನ ಒಳಗಡೆ ಹಳೆಯ ವೈರಿ ಪಾಕಿಸ್ತಾನದ ಭಯೋತ್ಪಾದಕರು. ಹಿಂದೆ ಕಾರ್ಗಿಲ್ ಕಾಳಗದ ಸಮಯದಲ್ಲಿ, ಪಾಕಿಸ್ತಾನದ ನಿರಂತರ ಧಾಳಿಯ ನಡುವೆ ತಮ್ಮೊಂದಿಗಿದ್ದ 6 ಸೈನಿಕರನ್ನು ಪಾಕಿಸ್ತಾನದ ಪಡೆಯಿಂದ ಕೇವಲ 200 ಮೀಟರ್ ದೂರದ ತನಕ ನುಗ್ಗಿಸಿ ವೈರಿಗಳನ್ನು ಗೆದ್ದಿರುತ್ತಾರೆ. ಅಷ್ಟು ಹತ್ತಿರ ಬರುತ್ತಿರುವುದನ್ನು ನೋಡಿಯೂ ಏನೂ ಮಾಡಲಿಕ್ಕಾಗದೇ ಪಾಕಿಸ್ತಾನದವರು ಕಂಗಾಲಾಗಿ ಕಕ್ಕಾಬಿಕ್ಕಿಯಾಗಿ ಇವರ ರಣನೀತಿಯನ್ನು ತಿಳಿಯಲು ವಿಫಲರಾಗಿ ಸೋತು ಸತ್ತ ನೆನೆಪು ಬಂದಿತ್ತೇನೋ.. ಅದೇ ರೀತಿಯಲ್ಲಿ ಇಲ್ಲಿ ಮತ್ತೆ ಧಾಳಿ. 6 ಮಹಡಿ ಕೆಳಗಿಳಿಯುತ್ತಾರೆ. ತಮ್ಮೊಂದಿಗಿದ್ದ 10 ಕಮಾಂಡೋಗಳನ್ನೂ ಇಳಿಸುತ್ತಾರೆ. 3ನೇ ಮಹಡಿಯಲ್ಲಿ ಭಯೋತ್ಪಾಕರು ಇರುವ ಗುಮಾನಿ. ಭಯೋತ್ಪಾದಕರು 3ನೇ ಮಹಡಿಯ ಒಂದು ಕೋಣೆಯಲ್ಲಿ ಕೆಲವು ಹೆಂಗಸರನ್ನು ಒತ್ತೆಯಾಳಾಗಿಟ್ಟುಕೊಂಡು ಒಳಗಿಂದ ಬಾಗಿಲ ಚಿಲಕ ಹಾಕಿಕೊಂಡಿರುತ್ತಾರೆ. ಸಂದೀಪ್ ಅವರ ನೇತೃತ್ವದಲ್ಲಿ ಆ ಬಾಗಿಲನ್ನು ಮುರಿದು ಕಮಾಂಡೋಗಳು ಒಳನುಗ್ಗುತ್ತಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಕಮಾಂಡೋ ಸುನಿಲ್ ಯಾದವ್ ಅವರನ್ನು ಹಾಗೂ ಅಲ್ಲಿ ಬಂಧಿಯಾಗಿದ್ದವರನ್ನು ಹೊರಗೆ ಹೋಗುವಂತೆ ಮಾಡುತ್ತಾರೆ. ತಮ್ಮೊಡನೆ ಇದ್ದ ಕಮಾಂಡೋಗಳಿಗೆ ಒತ್ತೆಯಾಳುಗಳನ್ನೂ ಹಾಗೂ ಸುನಿಲ್ ಯಾದವ್ ಅವರನ್ನು ಬಿಡುಗಡೆ ಮಾಡುವ ಆಜ್ಞೆ ಕೊಡುತ್ತಾರೆ. ಅಷ್ಟರಲ್ಲಿ ಭಯೋತ್ಪಾದಕರು ಮುಂದಿನ ಮಹಡಿಗೆ ತಪ್ಪಿಸಿಕೊಳ್ಳುವುದನ್ನು ಗಮನಿಸುತ್ತಾರೆ. ಭಯೋತ್ಪಾದಕರ ಧಾಳಿಯಿಂದ ತಮ್ಮವರನ್ನು ರಕ್ಷಿಸಲು ಸಂದೀಪ್ ತಾವೊಬ್ಬರೇ ಭಯೋತ್ಪಾದಕರನ್ನು ಹಿಂಬಾಲಿಸಿಕೊಂಡು ಅವರ ಹಿಂದೆ ಹೋಗುತ್ತಾರೆ. ಹೀಗೆ ಮಾಡುವಾಗ ಅವರು ತಮ್ಮ ವಯ್ಯಕ್ತಿಕ ಸುರಕ್ಷತೆ ಮರೆತುಬಿಡುತ್ತಾರೆ. ನಿರಂತರವಾಗಿ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ಮಾಡುತ್ತಲೇ ಇರುತ್ತಾರೆ. 3ನೇ ಮಹಡಿಯಿಂದ 4ನೇ ಮಹಡಿಯತ್ತ  ಹೋಗಿದ್ದ ಅವರನ್ನು 5ನೇ ಮಹಡಿಯ ತನಕ ಓಡಿಸುತ್ತಾರೆ. ಭಯಾನಕವಾದ ಗುಂಡಿನ ಸುರಿಮಳೆಯೇ ನಡೆಯುತ್ತದೆ. ಅಷ್ಟರಲ್ಲಿ ಒಬ್ಬ ಹೇಡಿ ಭಯೋತ್ಪಾದಕ, ಹಿಂದಿನಿಂದ ಸಂದೀಪ್ ಅವರ ಬೆನ್ನಿನ ಮೇಲೆ ಗುಂಡು ಹಾರಿಸುತ್ತಾನೆ. ತೀವ್ರವಾಗಿ ಗಾಯಗೊಂಡ ಸಂದೀಪ್, ಹಿಂತಿರುಗಿ ಅವನನ್ನು ಕೊಂದು ತಾವೂ ಅಸುನೀಗುತ್ತಾರೆ. ಆಗ ಅವರ ವಯಸ್ಸು ಕೇವಲ 31.

ನಮ್ಮ ನಾಡಿನ ಈ ವೀರಯೋಧನಿಗೆ ಭಾರತ ಸರ್ಕಾರ ಅಶೋಕ ಚಕ್ರ ಪ್ರಶಸ್ತಿ ಕೊಟ್ಟಿರುತ್ತದೆ. ಸಾವಿರಾರು ಜನರ ಮಧ್ಯೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ಸಂದೀಪ್ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತದೆ. ಸಂದೀಪ್ ಅವರನ್ನು ಭಾರತ ಭೂಮಿಯ ಸೇವೆಗೆಂದೇ ಹೆತ್ತ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮೀ ದಂಪತಿಗಳೇ ಧನ್ಯರು. ಅಂತಹ ವೀರ ಯೋಧನನ್ನು ನಾಡಿಗೆ ಕೊಟ್ಟ ಕೀರ್ತಿ ಕರುನಾಡಿನದ್ದು.  ಅವರನ್ನು ನೆನಪಿಸಿಕೊಳ್ಳುವ ಹೊಣೆ ನಮ್ಮದು. ಇಂಥವರ ಕೀರ್ತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಹೇಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಲೇಖಕರ ಕಿರುಪರಿಚಯ
ಶ್ರೀ ಸಿ. ಎನ್‍. ವಿಜಯ್‍

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ. ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ