ಹಳ್ಳಿಯಲ್ಲಿ ಸ್ವಚ್ಛಂದವಾಗಿ ನಲಿದು. ಬೆಳೆದ ನಾನು ಪಟ್ಟಣಕ್ಕೆ ಬಂದಾಗ ನನ್ನ ಮನಸ್ಸಿನ ಭಯ, ಆತಂಕ, ಸ್ವಾಭಿಮಾನ, ಧೈರ್ಯ, ಸಂತೃಪ್ತಿ ಇವುಗಳ ಸರಮಾಲೆಯೇ ಈ 'ನೆನಪುಗಳು'.
ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನನ್ನ ಅಣ್ಣ ಮುಂದಿನ ಶಿಕ್ಷಣವನ್ನು ಕೊಡಿಸುವ ನಿಸ್ವಾರ್ಥ ಸೇವೆಗೆ ಮುಂದಾದರು. ಒಂದು ದಿನ ಪಿ. ಯೂ. ಸಿ. ಗೆ ಪ್ರವೇಶ ಪಡೆಯಲು ಒಂದು ಪ್ರತಿಷ್ಠಿತ ಕಾಲೇಜಿಗೆ ಕರೆದುಕೊಂಡು ಹೋದರು. ಯಾಕೋ ಏನೋ ಆ ಕಾಲೇಜಿನ ಕಟ್ಟಡವನ್ನು ನೋಡಿಯೇ ನನ್ನ ಕಣ್ಣುಗಳು ಬೆರಗುಗೊಂಡಿದ್ದವು. ನಮ್ಮ ಊರಿನಲ್ಲಿ ಶಾಲಾ - ಕಾಲೇಜುಗಳು ವಿಶಾಲವಾದ ಹೆಚ್ಚೆಂದರೆ ಒಂದು ಮಹಡಿಯುಳ್ಳ ಕಟ್ಟಡಗಳು. ಸುತ್ತಲೂ ಹಸಿರು ಕಂಗೊಳಿಸುವ ಕೈತೋಟಗಳು. ಎಲ್ಲೆಲ್ಲೂ ವಿಶಾಲತೆ. ಮನಸ್ಸಿನಲ್ಲಿ ಆಗಲೇ ತಕ್ಕಡಿ ತೂಗಲು ಆರಂಭವಾಗಿತ್ತು. ಬೆಂಗಳೂರಿನ ಕಾಲೇಜು. ನಾಲ್ಕು ದಿಕ್ಕುಗಳಿಗೂ ಆವರಿಸಿಕೊಂಡು ಎತ್ತರವಾಗಿ ಎದ್ದುನಿಂತ ಬಹುಮಹಡಿ ಕಟ್ಟಡ. ಒಳಗೆ ಹೋಗಲು. ಹೊರಬರಲು ಒಂದೇ ಬಾಗಿಲು! ಅದಕ್ಕೂ ಕಬ್ಬಿಣದ ಸರಳುಗಳ ರಕ್ಷಣೆ. ಜೊತೆಗೆ ಒಬ್ಬ ಕಾವಲುಗಾರ!. ಯಾಕೋ ನನ್ನ ಅಣ್ಣನ ಮೇಲೆ ಸಂಶಯ. ಪತ್ರಿಕೆಗಳಲ್ಲಿ ಶಾಲಾ ದಿನಗಳಲ್ಲಿ ಜೈಲಿನ ಚಿತ್ರ ಕಂಡ ನೆನಪು. ಕೈಕಾಲುಗಳಲ್ಲಿ ಸಣ್ಣನೆಯ ನಡುಕ.
'ನನಗೆ ಇಲ್ಲಿ ಪ್ರವೇಶ ದೊರೆಯದಂತೆ ಮಾಡು' ದೇವರಲ್ಲಿ ಪರಿಪರಿಯಾಗಿ ಬೇಡಿಕೊಂಡೆ. ಆದರೆ ದೇವರು ದಯೆ ತೋರಲಿಲ್ಲ. ಅದೇ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಒಳಗೆ ಪ್ರವೇಶ ಮಾಡಿ ತಲೆ ಎತ್ತಿ ನೋಡಿದರೆ ಬೆಂಕಿಪೊಟ್ಟಣಗಳು ಒಂದರ ಮೇಲೊಂದು ಜೋಡಿಸಿದಂತಹ ನೋಟ. ಇನ್ನೂ ಕತ್ತೆತ್ತಿ ಮೇಲಕ್ಕೆ ನೋಡಿದರೆ ಕಂಡದ್ದು? ಆಕಾಶವೇ ಚೌಕಾಕಾರ!
ನನ್ನ ಅಣ್ಣನಿಗೋ ತಂಗಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ದೊರೆಯಿತು ಎಂಬ ಸಮಾಧಾನ. ನನಗೋ ಒಳಗೊಳಗೇ ಶೂನ್ಯದ ಅನುಭವ. ಅಂತೂ ಕಾಲೇಜು ದಿನಗಳು ಪ್ರಾರಂಭವಾದವು. ಮೊದಲ ದಿನ ಮೌನ. ನಮ್ಮ ಶಾಲೆಯಲ್ಲಿ ತರಗತಿಗೇ ಪ್ರಥಮ ಸ್ಥಾನ ಪಡೆಯುತ್ತಿದ್ದ ನನಗೆ ಸಂಗೀತ, ಪ್ರಬಂಧ, ಭಾಷಣ ಮುಂತಾದುವುಗಳಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ಇಲ್ಲಿಗೆ ಬಂದು ಮೊತ್ತ ಮೊದಲಿಗೆ ಇಂಗ್ಲೀಷ್ ಭಾಷೆಗೆ ನಡುಗಿ ಹೋದೆ. ಒಬ್ಬಳಾದರೂ ಬಂದು ಕನ್ನಡದಲ್ಲಿ ಮಾತನಾಡಿಸಬಾರದೇ? ಎಂದು ಹಾತೊರೆಯುತ್ತಿದ್ದಾಗ ಒಬ್ಬಳು ಬಂದು ನನ್ನ ಪರಿಚಯವನ್ನು ಕನ್ನಡದಲ್ಲಿ ಕೇಳಿದಳು. ಕನ್ನಡವೂ, ನಾನೂ ಇಬ್ಬರೂ ಈ ಪಟ್ಟಣದಲ್ಲಿ ಇನ್ನೂ ಬದುಕಿದ್ದೇವೆ ಎಂಬ ಅನುಭವವಾಯಿತು. ಮುಂದೆ ಎಲ್ಲರೊಡನೆ ಬೆರೆತು ಅಲ್ಪ ಸ್ವಲ್ಪ ಇಂಗ್ಲೀಷ್ ಸಂಭಾಷಣೆಯನ್ನು ಕಲಿತೆ.
ಇನ್ನು ಪರೀಕ್ಷೆಗಳ ಸರದಿ. ಯಾಕೋ ಮೊದಮೊದಲ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗುವುದಕ್ಕೇ ಹೆಣಗಬೇಕಾಯಿತು. ಮುಂದೆ ಗೆಳತಿಯರ ಸಾಂತ್ವನಗಳಿಂದ, ಗುರುಗಳ ಪ್ರೋತ್ಸಾಹದಿಂದ, ಅಣ್ಣನ ಧೈರ್ಯ ತುಂಬುವ ಮಾತುಗಳಿಂದ ಉತ್ತಮ ಫಲಿತಾಂಶವನ್ನು ಪಡೆದು ಡಿಗ್ರಿಯನ್ನು ಉತ್ತಮ ಶ್ರೇಣಿಯಲ್ಲಿಯೇ ಪಡೆದುಕೊಂಡೆ. ಆಗಲೇ ನನಗೆ ಏನೋ ಸಾಧಿಸಿದ ಸಂತೋಷ.
ಆ ವೇಳೆಗಾಗಲೇ 'ಇಂಗ್ಲೀಷ್' ಭೂತದ ಭಯವು ಕಡಿಮೆಯಾಗಿತ್ತು. ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿದಾಗ ನನ್ನ ಅಣ್ಣನಿಗೆ ಸಾರ್ಥಕ ಭಾವನೆ. ನನಗೋ ಧನ್ಯತಾ ಭಾವನೆ. ಮುಂದಿನ ದಿನಗಳಲ್ಲಿ ನನ್ನ ಸಂಗೀತದ ಆಸಕ್ತಿಯನ್ನು ಬೆಳೆಸಲು ಅವಕಾಶವೂ ದೊರೆಯಿತು.
ಮುಂದೆ ಕನ್ನಡಾಂಬೆಯ ಆಶೀರ್ವಾದದಿಂದ, ಮಂಗಳೂರು ಮೂಲದ, ಬೆಂಗಳೂರಿನಲ್ಲಿ ನೆಲೆಸಿದ ಒಬ್ಬ ಅಚ್ಚ ಕನ್ನಡಿಗನೇ ಪತಿಯಾಗಿ ದೊರೆತರು. ಬಿಡುವಿನ ವೇಳೆಯಲ್ಲಿ ಸಂಗೀತ, ಮೃದಂಗ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಪ್ರೀತಿಯ ಮಗನಿದ್ದಾನೆ. ನಮ್ಮ ಮನೆಯ ಸುತ್ತಲೂ ಬಾಲ್ಯವನ್ನು ಮೆಲಕು ಹಾಕಿಸುವ ಸುಂದರ ಕೈತೋಟವಿದೆ. ಅದೆಷ್ಟೋ ಹಕ್ಕಿಗಳು, ಚಿಟ್ಟೆಗಳು, ಅಳಿಲುಗಳು, ನಾಯಿ ಮತ್ತು ಬೆಕ್ಕುಗಳು ನಮ್ಮ ಸಂಸಾರದ ಸಂತೋಷದಲ್ಲಿ ಭಾಗಿಯಾಗಿವೆ.
ಬಾಲ್ಯದಲ್ಲಿ ನನ್ನ ತಾತನಿಂದ ಕಲಿತ ಶಿಸ್ತು, ಸಮಯ ಪ್ರಜ್ಞೆ, ಸರಳ ಜೀವನ ಇವುಗಳೇ ನನ್ನ 'ಸುಖೀ ಸಂಸಾರ'ದ ತಳಹದಿ. ತಾಯಿಯ ಸಹನೆ, ಅಣ್ಣಂದಿರ ಕರ್ತವ್ಯ ಪಾಲನೆ, ಅಕ್ಕಂದಿರ ಪ್ರೀತಿಯನ್ನು ಕಂಡು ಬೆಳೆದ ನನಗೆ 'ನಾನೇ ಪುಣ್ಯವಂತೆ' ಎನ್ನುವ ತೃಪ್ತಿ. ಪತಿ ಹಾಗೂ ಮಗನ ಪ್ರೋತ್ಸಾಹವೇ ನಾನು ಇಂದು ನನ್ನ ನೆನಪುಗಳನ್ನು ಹಂಚಿಕೊಳ್ಳಲು ಪ್ರೇರೇಪಣೆ.
ಕನ್ನಡ ನಾಡು, ನುಡಿಯ ಪ್ರೀತಿ, ಅಭಿಮಾನಗಳು ನಮ್ಮನ್ನು ಬಂಧಿಸಿ ಕನ್ನಡ ನಾಡಿನಲ್ಲಿಯೇ ಬೇರೂರುವಂತೆ ಮಾಡಿವೆ. ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಕನ್ನಡಿಗರನ್ನು ತಾಯಿ ಕನ್ನಡಾಂಬೆ ಎಂದೆಂದೂ ಕೈಹಿಡಿದು ಮುನ್ನಡೆಸುತ್ತಾಳೆ.
'ಜೈ ಕರ್ನಾಟಕ ಮಾತೆ'
ಲೇಖಕರ ಕಿರುಪರಿಚಯ | |
ಶ್ರೀಮತಿ ನಯನಾ ಕಾರಂತ್ ಮೂಲತಃ ಉಡುಪಿ ಜಿಲ್ಲೆಯವರಾದ ಇವರಿಗೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ