ಇಲ್ಲದಿದ್ದರೆ ನಮ್ಮ ರೈಮ್ಸ್ ಹೇಳುವ ಪರಿ ಇದು:
ರೇನ್ ರೇನ್ ಗೋವಾ ವೇ
ದಿಸ್ಸೀ ಸ್ಮದರ್ ವಾಶಿಂಗ್ ಡೇ
ಕಮ ಗೇನ ನದರ್ ಡೇ
ಟು ಮಾರ್ಕೆಟ್ ಟು ಮಾರ್ಕೆಟ್
ಟು ಬೈಯ್ಯೆ ಫ಼್ಯಾಟ್ ಪಿಗ್
ಹೋಮಗೇನ್ ಹೋಮಗೇನ್
ಜಿಗ್ಗಟಿ ಜಿಗ್!!
ದಿಸ್ಸೀ ಸ್ಮದರ್ ವಾಶಿಂಗ್ ಡೇ
ಕಮ ಗೇನ ನದರ್ ಡೇ
ಟು ಮಾರ್ಕೆಟ್ ಟು ಮಾರ್ಕೆಟ್
ಟು ಬೈಯ್ಯೆ ಫ಼್ಯಾಟ್ ಪಿಗ್
ಹೋಮಗೇನ್ ಹೋಮಗೇನ್
ಜಿಗ್ಗಟಿ ಜಿಗ್!!
ಆದರೆ ಐದನೇ ವರ್ಗದವರೆಗೂ ಗಣಿತ ಬಾರದ ದಡ್ಡ ನಾನಾಗಿದ್ದು ನಿಜ. ಮೂರು ಮತ್ತು ನಾಲ್ಕನೇ ವರ್ಗದಲ್ಲಿದ್ದಾಗ ಬೇಲೀಫ಼ ಮಾಸ್ತರರು ಗಣಿತ ಕಲಿಸುತ್ತಿದ್ದರು. ಅವರ ಕೆಂಪು ಕಣ್ಣುಗಳನ್ನು ನೋಡಿಯೇ ನನ್ನ ಕೈಕಾಲುಗಳು ನಡುಗುತ್ತಿದ್ದವು. ಆಗಿನ ಮೂರು-ನಾಲ್ಕನೇ ತರಗತಿಯ ಗಣಿತದಲ್ಲೇನಿರುತ್ತಿತ್ತು ಮಹಾ? ಕೂಡುವುದು, ಕಳೆಯುವುದು, ಕೊಂಚ ಗುಣಾಕಾರ, ಭಾಗಾಕಾರ ಅಷ್ಟೇ. ಅದನ್ನೂ ಮಾಡಲಾಗದೇ ಒದ್ದಾಡಿಹೋಗುತ್ತಿದ್ದೆ. ಸಾಲದ್ದಕ್ಕೆ ಬೇಲೀಫ಼ ಮಾಸ್ತರರ 'ನಿನಗೆ ಗಣಿತ ತಲೆಗೆ ಹತ್ತೂದಿಲ್ಲ ಬಿಡು' ಎಂಬ ಮೂದಲಿಕೆ ಬೇರೆ. ಎರಡು ವರ್ಷ ಹೀಗೇ ಕಳೆದು ಐದನೇ ಇಯತ್ತೆಗೆ ಬಂದಾಗ ಶಾಲೆಗೆ ವರ್ಗವಾಗಿ ಬಂದವರು ಎಚ್. ಎನ್ .ನಾಯ್ಕ ಮಾಸ್ತರರು. ಗುಂಗುರು ಕೂದಲಿನ ಅಜಾನುಬಾಹು ವ್ಯಕ್ತಿತ್ವ. ಸುಂದರ ಹಸ್ತಾಕ್ಷರ. ಅವರು ಕಾಗುಣಿತದ ವ್ಯಂಜನದಲ್ಲಿ 'ಆ' ಬರೆಯುವಾಗ ಎಲ್ಲರೂ ಬರೆಯುವಂತೆ ತಲೆಗೊಟ್ಟನ್ನು ಕೆಳಗಿನ ತನಕ ತಂದು ಸುರುಳಿ ಸುತ್ತುವ ಬದಲು ವಿಶಿಷ್ಟವಾಗಿ ಮೇಲೆಯೇ ಸುತ್ತುತ್ತಿದ್ದರು. ಅದೊಂಥರ ತೆಲುಗು ಅಕ್ಷರದಂತೆ ಕಾಣುತ್ತಿತ್ತು.
ಅವರು ಬಂದ ಮೇಲೆಯೇ ಐದನೇ ತರಗತಿಯಲ್ಲಿದ್ದು ಮಹಾ ದಡ್ಡನಾಗಿದ್ದ ನನ್ನ ದೆಸೆ ತಿರುಗಿದ್ದು. ಆರನೇ ತರಗತಿಯಲ್ಲಿ ಮೊದಲ ಬಾರಿಗೆ ಹಿಂದಿ ವಿಷಯ ಬಂದ ಮೇಲೆ, ನಾಯ್ಕ ಮಾಸ್ತರರು ತೆಗೆದುಕೊಳ್ಳುತ್ತಿದ್ದ ಹಿಂದಿ ನನಗೆ ಬಲು ಪ್ರಿಯವಾಗಿಬಿಟ್ಟಿತು. ಐದನೇ ತರಗತಿಯಲ್ಲಿ ಇಂಗ್ಲೀಷಿನ ಸ್ಮಾಲ್ ಲೆಟರ್ ನ 'ಬಿ' ಬರೆಯಲು ಎಡಗಡೆ ಸುರುಳಿ ಸುತ್ತಬೇಕೋ ಬಲಗಡೆಗೋ ಎಂದು ಕನ್ ಫ಼್ಯೂಸ್ ಆಗುವ ಸ್ಥಿತಿಯಲ್ಲಿದ್ದು, ಅಲ್ಲಿಯ ತನಕ ಕಲಿಕೆಯಲ್ಲಿ ಏದುಸಿರು ಬಿಡುತ್ತಿದ್ದ ನಾನು ಆರನೇ ಕ್ಲಾಸಿನಲ್ಲಿ ತರಗತಿಗೆ ಎರಡನೇ ಸ್ಥಾನ, ಏಳನೇ ಕ್ಲಾಸಿನಲ್ಲಿ ಪ್ರಥಮ ಸ್ಥಾನ ಪಡೆದೆ. ನಂತರ ಹೈಸ್ಕೂಲಿನಲ್ಲಿ ಸತತ ಮೂರು ವರ್ಷಗಳಲ್ಲೂ ಇದೇ ಸಾಧನೆ ಮುಂದುವರೆಯಿತು. ಎಸ್. ಎಸ್. ಎಲ್. ಸಿ. ಪಬ್ಲಿಕ್ ಪರೀಕ್ಷೆಯಲ್ಲಿಯೂ ಮೊದಲಿಗನಾಗುವುದರೊಂದಿಗೆ ಅಂಕ ಗಳಿಕೆಯಲ್ಲಿ 25 ವರ್ಷಗಳಿಗೂ ಹಿಂದೆ ನೀರ್ನಳ್ಳಿ ಹೈಸ್ಕೂಲು ಪ್ರಾರಂಭವಾದಾಗಿನಿಂದ ಇದ್ದ ದಾಖಲೆ ಮುರಿದೆ. ಆದರೆ ಮರುವರ್ಷವೇ ನನ್ನ ಈ ದಾಖಲೆ ಮುರಿದ ಪ್ರತಿಭಾವಂತ, ಇದೇ ನಾಯ್ಕ ಮಾಸ್ತರರ ಮಗ! ಪ್ರಸ್ತುತ ಅವರ ಮಗಳು ಕೂಡ ಇದೇ ದೇವರಕೊಪ್ಪ ಶಾಲೆಯಲ್ಲಿ ಶಿಕ್ಷಕಿ. ಸ್ವರ್ಗದಲ್ಲಿರುವ ಮಾಸ್ತರರ ಆತ್ಮ ಸಂತೃಪ್ತವಾಗಿರಬಹುದು.
ಅವರು ಮಕ್ಕಳನ್ನು ಶಿಕ್ಷಿಸುವ ರೀತಿ ವಿಶಿಷ್ಟವಾಗಿತ್ತು. ತಮ್ಮ ಎರಡೂ ಹಸ್ತಗಳನ್ನು ಅಗಲಿಸಿ ತಪ್ಪು ಮಾಡಿದ ಹುಡುಗನ ಎರಡೂ ಕಿವಿಗಳ ಮೇಲೆ ಒತ್ತಿ ಹಿಡಿದು ಅವನನ್ನು ಅನಾಮತ್ತು ನೆಲ ಬಿಟ್ಟು ಒಂದಡಿ ಮೇಲೆತ್ತುತ್ತಿದ್ದರು. ಅಲ್ಲಿಂದ ತಮ್ಮ ಹಸ್ತ ಅಗಲಿಸಿಬಿಡುತ್ತಿದ್ದರು!
ದಿನಾ ಬೆಳಿಗ್ಗೆ ಶಿರಸಿಯಿಂದ ಬರುತ್ತಿದ್ದ ಇನ್ನೊಬ್ಬ ಶಿಕ್ಷಕ ಪದ್ನಾಭ ಮಾಸ್ತರರು ತಮ್ಮ ಸೈಕಲ್ಲಿನಲ್ಲಿ ಶಾಲೆಗೆ ಬಿಜಯಂಗೈತ್ತಿದ್ದಂತೆ ಕೆಲವು ದೊಡ್ಡ ಮಕ್ಕಳು ನಾಮುಂದು ತಾಮುಂದು ಎಂಬಂತೆ ಪೈಪೋಟಿಯಿಂದ ಮಾಸ್ತರರ ಬಳಿ ಓಡಿ ಅವರ ಕೈಯಲ್ಲಿದ್ದ ಸೈಕಲನ್ನು ಹೆಚ್ಚು ಕಮ್ಮಿ ಕಸಿದುಕೊಂಡು ತಳ್ಳುತ್ತ ಶಾಲೆಯ ಕಂಪೌಂಡಿನೊಳಕ್ಕೆ ತಂದು ನಿಲ್ಲಿಸುತ್ತಿದ್ದರು. ನಿಲ್ಲಿಸಿದ ನಂತರ ಸೈಕಲ್ಲಿನ ಸ್ಟಾಂಡ್ ಲಾಕ್ ಒದೆಯಲೂ ಮಕ್ಕಳಲ್ಲಿ ಪೈಪೋಟಿ. ಈ ಪೈಪೋಟಿಯಲ್ಲಿ ಟಿಫ಼ಿನ್ ಬಾಕ್ಸಿನಲ್ಲಿರುವ ತಮ್ಮ ತಿಂಡಿಯನ್ನೆಲ್ಲ ಚೆಲ್ಲಿಬಿಟ್ಟಾರೆಂಬ ಭಯದಿಂದ ಮಾಸ್ತರರು 'ತಡೀರಲೇ.... ತಡೀರಲೇ....' ಅಂತ ಕೀರಲು ಧ್ವನಿಯಲ್ಲಿ ಕೂಗಿದ್ದೂ ಕೇಳದಷ್ಟು ಮಕ್ಕಳ ಹೇಷಾರವ. ಸೈಕಲನ್ನೂ ನಾವು ಸರಿಯಾಗಿ ನೋಡಿರದ ದಿನಗಳವು. ಸೈಕಲ್ ಹೊಡೆಯುವುದಿರಲಿ ಅದನ್ನು ಒಮ್ಮೆ ಮುಟ್ಟಿದರೂ ಏನೋ ಒಂಥರ ಪುಳಕ.
ನಮ್ಮ ಶಾಲೆಯಲ್ಲಿ ಮಾತಾಡಲು ನಾಲಿಗೆ ಸರಿಯಾಗಿ ಹೊರಳದ ಪಿಳ್ಳೆಗಳಿದ್ದರು. ಜಾರುತ್ತಿರುವ ಚಡ್ಡಿಗೆ ಯಾವುದೋ ಕಾಡು ಬಳ್ಳಿಯನ್ನು ಬಿಗಿದುಕೊಂಡು ಅದನ್ನು ಸೊಂಟದ ಮೇಲೆಯೇ ಇರುವಂತೆ ನೋಡಿಕೊಳ್ಳಲು ಸದಾ ಹೆಣಗುವ ಬಡ ಮಕ್ಕಳಿದ್ದರು. ಮೂಗಿನಿಂದ ಸುರಿಯುವ ಸಿಂಬಳ ಬಾಯಿಯವರೆಗೆ ಬಂದು ಉಪ್ಪುಪ್ಪಾದ ರುಚಿ ಹತ್ತಿದೊಡನೆ ಕೈಯಿಂದ ಒರೆಸಿಕೊಂಡು ಲಟಕ್ಕನೆ ಚಡ್ಡಿಗೆ ಒರೆಸುವ ರಭಸಕ್ಕೆ ಕಾಡು ಬಳ್ಳಿ ಹರಿದು ಹೋಗಿ ಬ್ರಹ್ಮಾಂಡದ ದಿವ್ಯ ದರ್ಶನವಾಗುತ್ತಿದ್ದಂತೆ ನಾಚಿ ಓಡುವ ಹೈಕಳಿದ್ದರು. ಜೊತೆಗೆ ಇತರ ತುಂಟ ಮತ್ತು ಬುದ್ಧಿವಂತ ಮಕ್ಕಳೂ ಇದ್ದರು. ಈ ಎಲ್ಲರನ್ನೂ ಬಹಳ ಪ್ರೀತಿಯಿಂದಲೇ ಅವರು ನೋಡಿಕೊಳ್ಳುತ್ತಿದ್ದರು. ಆದರೆ ಸಿಟ್ಟು ಬಂದರೆ ಮಾತ್ರ ಬಹಳ ಕಷ್ಟ. ರಪರಪ ಹೊಡೆಯುತ್ತಿದ್ದರು. ಹೊಡೆತದ ವೇಗವೂ ಅನೂಹ್ಯ. ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ನಾಲ್ಕಾರು ಏಟುಗಳು ಬಿದ್ದಿರುತ್ತಿದ್ದವು.
ಇನ್ನು, ಶಾಲೆಗೆ ಅನತಿ ದೂರದಲ್ಲಿದ್ದ ಗುಂಡಪ್ಪೆ ಮರ. ಬುಡವನ್ನು ನಾಲ್ಕು ಜನ ಕೈ ಸೇರಿಸಿ ಅಪ್ಪಿದರೂ ಒಂದು ಸುತ್ತು ಬರಲಾರದಷ್ಟು ಬೃಹದ್ಗಾತ್ರ. ಒಂದಿಡೀ ಬೊಗಸೆ ತುಂಬುವಷ್ಟು ದೊಡ್ಡದಾದ ಹೊಂಬಣ್ಣದ ಹಣ್ಣು. ಅದರ ರುಚಿ ಸವಿದ ಸುಯೋಗ ನನ್ನದು. ಹುಟ್ಟಿ ಎಷ್ಟು ನೂರು ವರ್ಷಗಳಾಗಿತ್ತೋ! ನಮ್ಮೆದುರಿಗೇ ಅವಸಾನವನ್ನೂ ಕಂಡಿತು. ಆಗಿನ ದಿನಗಳಲ್ಲಿಯೇ ಅದರ ಬೀಜವನ್ನು ತಂದು ನಮ್ಮನೆಯ ಹತ್ತಿರ ನೆಟ್ಟಿದ್ದೆ. ಈಗ ಅದು ಸಣ್ಣ ಮರದ ಗಾತ್ರದಲ್ಲಿ ಬೆಳೆದಿದ್ದರೂ ಇನ್ನೂ ಕಾಯಿ ಬಿಟ್ಟಿಲ್ಲ. ದೇವರಕೊಪ್ಪ ಶಾಲೆಯ ಪ್ರತಿನಿಧಿಯಾದ ನಾನು ಸಮಸ್ತ ದೇವರಕೊಪ್ಪದ ಪ್ರತಿನಿಧಿಯಾದ ಗುಂಡಪ್ಪೆ ಮರದ ಪ್ರತಿರೂಪಕ್ಕಾಗಿ ಇನ್ನೂ ಕಾಯುತ್ತಿದ್ದೇನೆ.
ಲೇಖಕರ ಕಿರುಪರಿಚಯ | |
ಡಾ. ಗಣೇಶ ಹೆಗಡೆ, ನೀಲೇಸರ ವೃತ್ತಿಯಲ್ಲಿ ಪಶುವೈದ್ಯರಾದ ಇವರ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿಲ್ಲಾ ಪಶು ರೋಗ ತನಿಖಾ ಪ್ರಯೋಗಾಲಯದಲ್ಲಿ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಪುಸ್ತಕಗಳನ್ನು ರಚಿಸಿರುವ ಇವರು 'ಪಶುವೈದ್ಯ ಸಾಹಿತ್ಯ ಲೋಕ' ಪತ್ರಿಕೆಯ ಸಂಪಾದಕರು. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ