ಸೋಮವಾರ, ನವೆಂಬರ್ 3, 2014

ಸಿದ್ಧಾಂತಗಳ ಹರಿಕಾರ ಹಾನ್ಸ್‌ ಬೆಥ್

ವ್ಯಾಯಾಮ ಶಾಲೆಯಲ್ಲಿ ಓದುತ್ತಿದ್ದ ಆ ವಿದ್ಯಾರ್ಥಿಗೆ ತನ್ನ ಸಾಮರ್ಥ್ಯಗಳೇನು ಎಂಬುದು ತಿಳಿದಿರಲಿಲ್ಲ. ಆ ಹುಡುಗ ಗಣಿತದ ಸಮಸ್ಯೆಗಳನ್ನು ಪಟಪಟನೆ ಬಿಡಿಸುತ್ತಿದ್ದ. ಅವನಲ್ಲಿ ಗಣಿತಾತ್ಮಕ ಹಾಗೂ ಸಂಖ್ಯಾತ್ಮಕ ಸಾಮರ್ಥ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅವನಲ್ಲಿದ್ದ ಅಸಾಧಾರಣ ಗಣಿತದ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಅವನಿಗೆ ಗಣಿತ ಮತ್ತು ಭೌತಶಾಸ್ತ್ರ ಕಲಿಯುವಂತೆ ಮಾರ್ಗದರ್ಶನ ನೀಡಿದರು. ಆದರೆ ಮುಂದೆ ಆತ ಹೈಡ್ರೋಜನ್ ಬಾಂಬ್ ತಯಾರಿಕೆಯ ವಿನ್ಯಾಸದಲ್ಲಿ ಭಾಗಿಯಾಗುತ್ತಾನೆ, 20ನೇ ಶತಮಾನದ ಶ್ರೇಷ್ಠ ವಿಜ್ಞಾನಿಯಾಗುತ್ತಾನೆ ಎಂದು, ಅಂದು ಆ ಶಿಕ್ಷಕರು ಊಹಿಸಿರಲಿಲ್ಲ. ಅಂತಹ ಜಗತ್ಪ್ರಸಿದ್ಧ ಖಭೌತ ವಿಜ್ಞಾನಿಯೇ "ಹಾನ್ಸ್‌ ಬೆಥ್".

ಖಭೌತ ವಿಜ್ಞಾನಿ ಹಾನ್ಸ್‌ ಬೆಥ್

ಹಾನ್ಸ್ ಬೆಥ್ 1906 ರ ಜುಲೈ 2 ರಂದು ಜರ್ಮನಿಯ ಸ್ಟ್ರಾಸ್‌ಬರ್ಗ್‌ನಲ್ಲಿ ಜನಿಸಿದನು. 4 ನೇ ವಯಸ್ಸಿನಲ್ಲಿ ತನ್ನ ತಾಯಿಯಿಂದ ಓದುವುದು ಮತ್ತು ಬರೆಯುವುದನ್ನು ಪ್ರಾರಂಭಿಸಿದನು. ಬಾಲ್ಯದಲ್ಲಿಯೇ ಗಣಿತದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಹಾನ್ಸ್‌ ಬೆಥ್ ಗಣಿತದ ಯಾವುದೇ ಸಮಸ್ಯೆಯನ್ನು ಕ್ಷಣಾರ್ಧದಲ್ಲಿಯೇ ಬಿಡಿಸುತ್ತಿದ್ದ. 14ನೇ ವಯಸ್ಸಿಗೆ ಸ್ವಪ್ರಯತ್ನದಿಂದ ತನ್ನಷ್ಟಕ್ಕೆ ತಾನೇ ಕ್ಯಾಲ್ಕುಲಸ್(ಅಶ್ಮರಿ)ನ್ನು ಬೋಧಿಸಿಕೊಂಡ. 18ನೇ ವಯಸ್ಸಿನಲ್ಲಿ "ವಿಸರಣೆ ಮತ್ತು ಜೀವಿಗಳಲ್ಲಿ ದ್ರವ ಹರಿಯುವಿಕೆ" ಕುರಿತ ಸಂಶೋಧನಾ ಬರಹವನ್ನು ಪ್ರಕಟಿಸಿ ಮಂಡಿಸಿದನು. ಇದು ಇಡೀ ಸಂಶೋಧನಾ ವಲಯದಲ್ಲೇ ಅತೀ ಹೆಚ್ಚು ಸುದ್ದಿ ಮಾಡಿತು.

1928 ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಿಂದ "ಸೈದ್ಧಾಂತಿಕ ಭೌತಶಾಸ್ತ್ರ" ಎನ್ನುವ ವಿಷಯದಲ್ಲಿ ಪಿ. ಎಚ್. ಡಿ. ಪದವಿ ಪಡೆದರು. ನಂತರ 1929 ರಿಂದ 1933 ರವರೆಗೆ ಅದೇ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ಸೌರಶಕ್ತಿಯ ಮೂಲ ಕುರಿತ ಸಂಶೋಧನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ಹಾನ್ಸ್‌ ಬೆಥ್ ತಮ್ಮ ಪೀಳಿಗೆಯ ಪ್ರಮುಖ 'ಸೈದ್ಧಾಂತಿಕ ಭೌತವಿಜ್ಞಾನಿ' ಎನಿಸಿಕೊಂಡರು. ಪರಮಾಣು ಸಮ್ಮಿಳನ ಕ್ಷೇತ್ರದ ಮೇಲೆ ಅನೇಕ ಸಂಶೋಧನೆಗಳನ್ನು ಕೈಗೊಂಡರು. ಇದು ಪರಮಾಣು ನ್ಯೂಕ್ಲಿಯಸ್ ಸಿದ್ಧಾಂತವಾದ 'ಹೊಸ ಕ್ವಾಂಟಮ್ ಸಿದ್ಧಾಂತ'ವನ್ನು ಪ್ರತಿಪಾದಿಸಲು ದಾರಿ ಮಾಡಿಕೊಟ್ಟಿತು. ಕ್ವಾಂಟಮ್ ಮೆಕಾನಿಕಲ್ ಲೆಕ್ಕಾಚಾರಕ್ಕಾಗಿ ಗುಂಪು ವಿಧಾನಗಳನ್ನು ಅನ್ವಯಿಸಿದವರಲ್ಲಿ ಹಾನ್ಸ್‌ ಬೆಥ್ ಮೊದಲಿಗರು. ಒಟ್ಟಾರೆ ಕ್ವಾಂಟಮ್ ಭೌತಶಾಸ್ತ್ರ ಸ್ಥಾಪಕರಲ್ಲಿ ಹಾನ್ಸ್‌ ಬೆಥ್ ಒಬ್ಬರು.

ಅವರ ವೈಜ್ಞಾನಿಕ ಸಂಶೋಧನೆಗಳು ಪರಮಾಣುವಿನ ನ್ಯೂಕ್ಲಿಯಸ್‌ಗಳ ರಚನೆ ಮತ್ತು ಅವುಗಳನ್ನು ನಿಯಂತ್ರಿಸುವ ಶಕ್ತಿ ಗುಣಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಹಾಯ ಮಾಡಿದವು. ಪರಮಾಣು ಸಾಗಾಣಿಕೆಯಲ್ಲಿ ವಿದ್ಯುತ್ ಕಣಗಳ ಶಕ್ತಿನಷ್ಟ ಕುರಿತಾದ ಅವರ ಸಿದ್ಧಾಂತವು ಪರಮಾಣುಗಳ ಮಿಶ್ರಣ(ಸಮ್ಮಿಳನ)ದ ಮೇಲಿನ ಸಂಶೋಧನೆಗೆ ನಾಂದಿಯಾಯಿತು. ನಂತರ ಸಮ್ಮಿಳಿತ ಬಾಂಬುಗಳನ್ನು ಉತ್ಪಾದಿಸುವ ಕಾರ್ಯ ಸಾಧ್ಯತೆಯ ಸಂಶೋಧನೆಗಳಲ್ಲಿ ತೊಡಗಿಕೊಂಡರು.

ಪರಮಾಣು ರಚನೆ ಮತ್ತು ಅವುಗಳ ಪ್ರತಿಕ್ರಿಯೆಗಳ ಮೇಲೆ ಸಾಕಷ್ಟು ಸಿದ್ಧಾಂತಗಳನ್ನು ಮಂಡಿಸಿದರು. ಹೀಗಾಗಿ ಪ್ರಪಂಚದ 2ನೇ ಮಹಾಯುದ್ಧದ ಅವಧಿಯಲ್ಲಿ ಮೊದಲ ಅಣುಬಾಂಬ್ ಅಭಿವೃದ್ಧಿಪಡಿಸಿದವರಲ್ಲಿ ಹಾನ್ಸ್‌ ಬೆಥ್ ಗಣನೀಯ ಪಾತ್ರ ವಹಿಸಿದರು. ಅಣುಬಾಂಬ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಪರಿಣಾಮಗಳೇನು? ಎಂಬುದನ್ನು ಕುರಿತು ವಿವರಿಸುವುದು ಅವರ ಕಾರ್ಯವಾಗಿತ್ತು.

ಹಾನ್ಸ್‌ ಬೆಥ್ ಅವರ ಕುಸುರಿ ಕೆಲಸವು ಅವರ ಅನೇಕ ಕಾರ್ಯಗಳಲ್ಲಿ ಎದ್ದು ಕಾಣುತ್ತದೆ. ಪ್ರಯೋಗಕ್ಕೊಳಪಡಿಸದೇ ಯಾವುದೇ ಸಿದ್ಧಾಂತವನ್ನು ಅವರು ಒಪ್ಪಿದವರಲ್ಲ. ಅವರ ಪ್ರತಿಯೊಂದು ಸಿದ್ಧಾಂತಗಳು ಹೊಸ ವಿದ್ಯಮಾನಗಳನ್ನು ವಿವರಿಸಲು ಗಣಿತೀಯ ಮತ್ತು ಪರಿಮಾಣಾತ್ಮಕ ತಿಳುವಳಿಕೆ ಹೊಂದಿದ್ದವು. ಊಹೆಗೆ ಅವಕಾಶ ಇರುತ್ತಿರಲಿಲ್ಲ.

ತಮ್ಮ ವಿಪುಲವಾದ ಜ್ಞಾನದ ಹರವಿನಿಂದ ಅವರ ವಿದ್ಯುತ್ ಕಾಂತೀಯ ಸಿದ್ಧಾಂತ, ಅಘಾತ ತರಂಗಗಳ ಸಿದ್ಧಾಂತಗಳು ಜನಮನ್ನಣೆ ಗಳಿಸಿದವು. ಅಲ್ಲದೆ ಅವರು ಬೈಜಿಕ ಭೌತವಿಜ್ಞಾನದ ಬಗ್ಗೆ ಆಳವಾದ ಸಂಶೋಧನೆಗಳನ್ನು ನಡೆಸಿದರು. ಶಕ್ತಿಯ ರಚನಾತ್ಮಕ ಸಿದ್ಧಾಂತಗಳ ಸೂತ್ರೀಕರಣದಲ್ಲಿ ಅವರ ಸಂಶೋಧನೆಗಳು ಕೇಂದ್ರೀಕರಣಗೊಂಡಿದ್ದವು. ನಕ್ಷಕ್ರಗಳಲ್ಲಿನ ಶಕ್ತಿಯ ಉತ್ಪಾದನೆ ಮತ್ತು ಪ್ರತಿಕ್ರಿಯೆಗಳ ಮೇಲೆ ಇವರ ಸಂಶೋಧನೆ ಮುಂದುವರೆಯಿತು. ಮುಂದೆ ಇವರು "ಖಭೌತ ವಿಜ್ಞಾನ" (ಆಸ್ಟ್ರೋ ಫಿಸಿಕ್ಸ್) ಎಂಬ ಹೊಸ ವಿಜ್ಞಾನದ ಶಾಖೆಯನ್ನು ಸೃಷ್ಟಿಸಿದರು. 'ನಕ್ಷತ್ರಗಳಲ್ಲಿನ ಶಕ್ತಿಯ ಉತ್ಪಾದನೆ'ಯ ಮೇಲಿನ ಸಂಶೋಧನೆಗಾಗಿ 1967 ರಲ್ಲಿ ಭೌತಶಾಸ್ತ್ರದಲ್ಲಿ 'ನೊಬೆಲ್' ಪ್ರಶಸ್ತಿ ದೊರೆಯಿತು. ಇದು ಇವರ ಜೀವಮಾನದ ಸಂಶೋಧನೆಗಾಗಿ ಒದಗಿದ ಮೌಲ್ಯಯುತ ಗೌರವವಾಗಿತ್ತು. ನಂತರ ಅವರು ಅಂತರಾಷ್ಟ್ರೀಯ ರಕ್ಷಣಾತ್ಮಕ ಮತ್ತು ಪರಮಾಣುಗಳ ಸಮಿತಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

ವಿಜ್ಞಾನದಲ್ಲಿನ ಅಂತರ್ ಶಾಸ್ತ್ರೀಯ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಅವರಿಗೆ ಸಂಪೂರ್ಣ ತೃಪ್ತಿ ನೀಡಿದ್ದವು. ಅನೇಕ ಮಹತ್ತರವಾದ ಸಂಶೋಧನೆಗಳು ಮತ್ತು ಸಿದ್ಧಾಂತಗಳಿಗೆ ಸಾಕ್ಷಿ ಪುರಾವೆಗಳನ್ನು ಒದಗಿಸಿದ ಹಾನ್ಸ್‌ ಬೆಥ್ ತಮ್ಮ 98ನೇ ವಯಸ್ಸಿನಲ್ಲಿ, ಅಂದರೆ 2005 ರ ಮಾರ್ಚಿ 6 ರಂದು ಹೃದಯಸ್ತಂಭನದಿಂದ ನಿಧನರಾದರು. ಅಂದು ಇಡೀ ವಿಶ್ವವೇ ಕಂಬನಿ ಮಿಡಿಯಿತು.

ಲೇಖಕರ ಕಿರುಪರಿಚಯ
ಶ್ರೀ ಅರ್. ಬಿ. ಗುರುಬಸವರಾಜ

ಹಗರಿಬೊಮ್ಮನಹಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಸ್ವಗ್ರಾಮ ಬಳ್ಳಾರಿ ಜಿಲ್ಲೆಯ ಹೊಳಗುಂದಿ. ವೈಜ್ಞಾನಿಕ ಮತ್ತು ಶೈಕ್ಷಣಿಕ ಲೇಖನಗಳನ್ನು ಬರೆಯುವುದು ಇವರ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ