ಭಾನುವಾರ, ನವೆಂಬರ್ 9, 2014

ಕಲರ್ ಸ್ಕೋಪ್ ಕಸ್ತೂರಿ ನಿವಾಸ

ಆತ್ಮೀಯರೇ, ಇಂದು ನವಂಬರ್ 9, ಶಂಕರ್ ನಾಗ್ ಅವರ ಹುಟ್ಟುಹಬ್ಬ. ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ವ್ಯಕ್ತಿತ್ವ. ಜೀವಿತಾವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅನನ್ಯ ಕೊಡುಗೆಗಳನ್ನು ಮರೆಯಲು ಹೇಗೆ ಸಾಧ್ಯ? ಆದ್ದರಿಂದ, ಪ್ರತಿ ವರ್ಷ ಕಹಳೆ ಕಾರ್ಯಕ್ರಮದಲ್ಲಿ ನವಂಬರ್ 9ನೇ ತಾರೀಖಿನಂದು ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಲೇಖನವನ್ನು ಪ್ರಕಟಿಸಿ ಶಂಕರ್ ನಾಗ್ ಅವರಿಗೆ ಗೌರವ ಸೂಚಿಸುವ ಆಶಯ ನಮ್ಮದು.ಬಹುಶಃ ಲೇಖನದ ಶೀರ್ಷಿಕೆ ನೋಡುತ್ತಲೇ, 'ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೋಗದು.. ಏನೇ ಬರಲಿ ಯಾರಿಗು ಸೋತು ತಲೆಯ ಬಾಗದು..' ಈ ಹಾಡು ನಿಮ್ಮ ಮನದ ಅಂತರಾಳದಿಂದೆಲ್ಲೋ ಮೆಲ್ಲನೆ ತೇಲಿಬಂದಂತಾಗಿರಬೇಕು! ನಾಲ್ಕು ದಶಕಗಳ ಹಿಂದೆ ಕನ್ನಡ ಚಿತ್ರರಂಗದ ಬೆಳ್ಳಿ ಪರದೆಯನ್ನಲಂಕರಿಸಿದ, ಕನ್ನಡ-ಕರ್ನಾಟಕದ ವರನಟ ಡಾ. ರಾಜ್ ಕುಮಾರ್ ಅಭಿನಯಿಸಿದ ಕಸ್ತೂರಿ ನಿವಾಸ ಚಿತ್ರದ ಜನಪ್ರಿಯತೆ ಹಾಗೂ ಯಶಸ್ಸಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲವೇನೋ..

ಜಿ. ಬಾಲಸುಬ್ರಹ್ಮಣ್ಯಂ ಅವರ ಕಸ್ತೂರಿ ನಿವಾಸ ಕಥೆಯ ನಾಯಕನ ಪಾತ್ರ ಅಭಿನಯಿಸಲು ಡಾ. ರಾಜ್ ಸೇರಿದಂತೆ ಅಂದಿನ ಜನಪ್ರಿಯ ನಾಯಕರ್ಯಾರೂ ಸಿದ್ಧರಿರಲಿಲ್ಲ; ಕಾರಣ, ನಾಯಕನ ವಿಶೇಷ ವ್ಯಕ್ತಿತ್ವದ ಹೊರೆತಾಗಿಯೂ, ಚಿತ್ರದುದ್ದಕ್ಕೂ ಅವನು ಕಷ್ಟಗಳನ್ನೇ ಎದುರಿಸಿ ಅನುಭವಿಸುವುದು ಹಾಗೂ ಅಂತ್ಯದಲ್ಲಿ ಆತನ ಸಾವು. ಆದರೆ, ಚಿತ್ರಕಥೆ ಕೇಳಿದ ವರದಪ್ಪ ಹಾಗೂ ಚಿ. ಉದಯಶಂಕರ್ ಅವರು ಈ ಚಿತ್ರಕ್ಕೆ ಡಾ. ರಾಜ್ ಅವರೇ ನಾಯಕರಾಗಬೇಕೆಂದು ನಿರ್ಧರಿಸಲಾಗಿ, ಸಿನಿಮಾ ಸೆಟ್ಟೇರಿತು.

ಅಂದಿನ ಕಾಲಕ್ಕೆ, ಈ ಸಿನಿಮಾ ತಯಾರಿಸಲು ಬಳಕೆಯಾದ ಹಣ ಮೂರು ಮುಕ್ಕಾಲು ಲಕ್ಷ ಮಾತ್ರ; ಇದರಲ್ಲಿ ಕಸ್ತೂರಿ ನಿವಾಸದ ಭವ್ಯ ಬಂಗಲೆಯ ಸೆಟ್‌ ಗಾಗಿಯೇ ಒಂದು ಲಕ್ಷ ಖರ್ಚು ಮಾಡಲಾಗಿತ್ತು. ದೊರೆ-ಭಗವಾನ್ ಜೋಡಿ ನಿರ್ದೇಶನದ ಹೊಣೆ ಹೊತ್ತಿದ್ದರೆ, ಸಾಹಿತ್ಯ ಚಿ. ಉದಯಶಂಕರ್, ಸಂಗೀತ ಸಂಯೋಜನೆ ಜಿ. ಕೆ. ವೆಂಕಟೇಶ್ ಅವರದ್ದಾಗಿತ್ತು; ಇದಕ್ಕೆ ಸಾಥ್ ನೀಡಿದ್ದು ಜಯಂತಿ, ಅಶ್ವಥ್, ನರಸಿಂಹರಾಜು, ಬಾಲಕೃಷ್ಣ ಮುಂತಾದ ಮಹಾನ್ ಕಲಾವಿದರು. ಡಾ. ರಾಜ್ ಅವರ ಮನೋಜ್ಞ ಅಭಿನಯವಂತೂ ವರ್ಣನಾತೀತ.

ಹೀಗೆ ಚಿತ್ರದ ಬಹುಪಾಲು ಚಿತ್ರೀಕರಣದ ಮುಗಿದಿದ್ದ ಸಮಯದಲ್ಲಿ, ನಿರ್ಮಾಪಕರಾದ ಕೆ.ಸಿ.ಎನ್. ಗೌಡ ಅವರಿಗೆ ಈ ಸಿನಿಮಾವನ್ನು ಕಪ್ಪು-ಬಿಳುಪಿನ ಬದಲಿಗೆ ಬಣ್ಣದಲ್ಲಿ ನಿರ್ಮಿಸಬೇಕೆಂಬ ಬಯಕೆ ಕಾಡಿತಾದರೂ, ಅಷ್ಟರಲ್ಲಾಗಲೇ ಖರ್ಚು ಮಾಡಿದ್ದ ಹಣವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದು ಡಾ. ರಾಜ್ ಸ್ವತಃ ಕೆ.ಸಿ.ಎನ್. ಗೌಡರನ್ನು ಸಮಾಧಾನ ಪಡಿಸಿದ್ದರು. ಒಂದೇ ದಿನದಲ್ಲಿ 'ನೀ ಬಂದು ನಿಂತಾಗ.. ನಿಂತು ನೀ ನಕ್ಕಾಗ..' ಹಾಡು ಹಾಗೂ ಕೇವಲ 20 ದಿನಗಳಲ್ಲಿ ಸಂಪೂರ್ಣ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಸಿನಿಮಾ ಕಂಡ ಯಶಸ್ಸು ಎಂತಹುದು ಎಂಬುದು ನಮಗೆಲ್ಲಾ ತಿಳಿದಿದೆ. ತದನಂತರದಲ್ಲಿ ಇದೇ ಚಲನಚಿತ್ರವು ತಮಿಳಿನಲ್ಲಿ (ಅವನಂತನ್ ಮನಿದನ್, ಶಿವಾಜಿ ಗಣೇಶನ್) ಹಾಗೂ ಹಿಂದಿಯಲ್ಲಿ (ಶಾಂದಾರ್, ಸಂಜೀವ್ ಕುಮಾರ್) ರೀಮೇಕ್ ಆಯಿತಾದರೂ, ಕನ್ನಡದ ಡಾ. ರಾಜ್ ಅವರ ಕಸ್ತೂರಿ ನಿವಾಸದಷ್ಟು ಯಶಸ್ಸು ಕಾಣಲಿಲ್ಲ.

ಸತ್ಯ ಹರಿಶ್ಚಂದ್ರ ಸಿನಿಮಾವನ್ನು ಬಣ್ಣದಲ್ಲಿ ಮರುನಿರ್ಮಾಣ ಮಾಡಿದಾಗ ಕನ್ನಡ ಪ್ರೇಕ್ಷಕರಿಂದ ದೊರೆತ ಅಪೂರ್ವ ಪ್ರೋತ್ಸಾಹದಿಂದ ಪ್ರೇರಿತರಾದ ಕೆ.ಸಿ.ಎನ್. ಗೌಡರು ಕಸ್ತೂರಿ ನಿವಾಸ ಚಿತ್ರವನ್ನೂ ಸಹ ಕಲರ್ ಸ್ಕೋಪ್ ಮಾಡುವ ಕನಸು ಕಂಡರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೆ.ಸಿ.ಎನ್. ಗೌಡರಿಗೆ ಈ ಸಿನಿಮಾ ಕಲರ್ ಸ್ಕೋಪ್ ಮಾಡುವಲ್ಲಿ ಬೆಂಗಳೂರಿನ ಡಿಜಿಮಾಜಿಕ್ ಸಂಸ್ಥೆ ಬೆಂಬಲವಾಗಿ ನಿಂತಿತು. ಅರವತ್ತಕ್ಕೂ ಹೆಚ್ಚು ತಂತ್ರಜ್ಞರ ಸುಮಾರು ಆರು ವರ್ಷಗಳ ಸತತ ಪರಿಶ್ರಮದ ಫಲವಾಗಿ ಇಂದು ಕಸ್ತೂರಿ ನಿವಾಸ ಚಿತ್ರವು ಎರಡು ಕೋಟಿ ವೆಚ್ಚದಲ್ಲಿ ಕಲರ್ ಸ್ಕೋಪ್ ರೂಪ ಪಡೆದುಕೊಂಡು ಮತ್ತೆ ತೆರೆಕಂಡಿದೆ; ಆದರೆ, ಈ ಹಂತದಲ್ಲಿ ಇದರ ಕನಸು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ ನಿರ್ಮಾಪಕ ಕೆ.ಸಿ.ಎನ್. ಗೌಡರು ಇಲ್ಲದಿರುವುದು ಬಹಳ ನೋವಿನ ಸಂಗತಿ. ಅವರ ಅನುಪಸ್ಥಿತಿಯಲ್ಲಿ ಇದರ ಸಂಪೂರ್ಣ ಜವಬ್ದಾರಿ ಹೊತ್ತವರು ಕೆ.ಸಿ.ಎನ್. ಗೌಡರ ಮಗ ಕೆ.ಸಿ.ಎನ್. ಮೋಹನ್ ಅವರು.

ಕಪ್ಪು-ಬಿಳುಪಿನಲ್ಲಿ ಚಿತ್ರೀಕರಿಸಲಾಗಿರುವ ಒಂದು ಸಿನಿಮಾವನ್ನು ಸಂಪೂರ್ಣವಾಗಿ ವರ್ಣರಂಜಿತಗೊಳಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಚಿತ್ರದಲ್ಲಿರುವ ಸುಮಾರು ಎರಡುವರೆ ಲಕ್ಷ ಫ್ರೇಮ್ ಗಳಿಗೆ ನೈಜ ಬಣ್ಣ ತುಂಬಲು ತಂತ್ರಜ್ಞರು ಸಮಕಾಲೀನ ಎನ್ನಬಹುದಾದ ಸಿನಿಮಾಗಳ ಬಣ್ಣ, ಬೆಳಕುಗಳ ಜಾಡು ಅನುಸರಿಸುವ ಜೊತೆಗೆ ವರ್ಣಜೋಡಣೆಯಲ್ಲಿ ಬಹುತೇಕವಾಗಿ ಕಲಾತ್ಮಕ ಕಲ್ಪನೆಯನ್ನೂ ಬಳಸಿಕೊಂಡಿದ್ದಾರೆ. ಸಂಗೀತವನ್ನು ಇಂದಿನ ತಂತ್ರಜ್ಞಾನಕ್ಕೆ ಹೊಂದುವ ರೀತಿಯಲ್ಲಿ ಮರುಸೃಷ್ಟಿಸಲಾಗಿದೆ. ಚಿತ್ರದ ಅದ್ಭುತ ಹಾಡುಗಳನ್ನು ವರ್ಣರಂಜಿತವಾಗಿ ನೋಡುವುದೇ ಒಂದು ಸೌಭಾಗ್ಯ ಎಂದರೆ ತಪ್ಪಾಗಲಾರದು. ನುರಿತ ತಂತ್ರಜ್ಞರ ಈ ಪರಿಶ್ರಮವು ಕಲರ್ ಸ್ಕೋಪ್ ಕಸ್ತೂರಿ ನಿವಾಸ ಚಿತ್ರದ ಪ್ರಮುಖ ಧನಾತ್ಮಕ ಅಂಶ; ಇದರ ಸೊಬಗನ್ನು ಬೆಳ್ಳಿತೆರೆಯ ಮೇಲೆ ನೋಡಿಯೇ ಆನಂದಿಸಬೇಕು. ಈ ಸಿನಿಮಾ ಯಶಸ್ಸು ಕಾಣಲಿ, ರೀಮೇಕ್‌ ಗೆ ಹೊಸ ಅರ್ಥ ಕಲ್ಪಿಸಿಕೊಡುವ ಇಂತಹ ಅನೇಕ ಪ್ರಯತ್ನಗಳು ಫಲಕಾರಿಯಾಗಲಿ, ಈ ಮೂಲಕ ಕನ್ನಡ ಚಿತ್ರರಂಗ ನೂತನ ಆಯಾಮಗಳಲ್ಲಿ ಬೆಳೆಯಲಿ ಎನ್ನುವುದು ಕನ್ನಡ ಸಿನಿಪ್ರಿಯರ ಆಶಯ.

ಲೇಖಕರ ಕಿರುಪರಿಚಯ
ಶ್ರೀ ವಿವೇಕಾನಂದ್ ವಿ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಇವರು ಬಿ. ಇ. ಪದವೀಧರರು; ಪ್ರಸ್ತುತ ಉದ್ಯಾನ ನಗರಿಯ ಪ್ರತಿಷ್ಠಿತ ಐ.ಟಿ. ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ