ಸೋಮವಾರ, ನವೆಂಬರ್ 17, 2014

ದಾಸವಾಣಿ: ಸಮಾಜ ಸುಧಾರಣೆಯಲ್ಲಿ ಹರಿದಾಸರ ಪಾತ್ರ

ಸಂಗೀತ ಪಿತಾಮಹರೆಂದೇ ಪ್ರಸಿದ್ಧರಾಗಿರುವ ಶ್ರೀ ಪುರಂದರದಾಸರನ್ನು 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಅವರ ಗುರುಗಳಾದ ವ್ಯಾಸರಾಯರು ಕರೆದಿದ್ದಾರೆ. ಅವರು ಬಾಲಕೃಷ್ಣನ ಲೀಲೆಗಳು, ಮಹಾ ವಿಷ್ಣುವಿನ ಅವತಾರಗಳು ಮತ್ತು ಮಹಾನ್ ಕಾರ್ಯಗಳು, ಇಹಲೋಕದ ನಶ್ವರತೆ ಮತ್ತು ಪರಲೋಕದ ಶಾಶ್ವತತೆ, ಇತ್ಯಾದಿ ಅನೇಕ ವಿಷಯಗಳನ್ನು ಕುರಿತು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ, ಹಾಡಿದ್ದಾರೆ. ಈ ಮಾತು ಕೇವಲ ಪುರಂದರದಾಸರಿಗೆ ಮೀಸಲಾಗದೆ ಇತರ ಹಲವಾರು ದಾಸ ಶ್ರೇಷ್ಠರಿಗೂ ಅನ್ವಯಿಸುತ್ತದೆ. ಆದರೆ, ಈ ಕಿರು ಲೇಖನದಲ್ಲಿ ನಾನು, ಪ್ರಾತಿನಿಧಿಕವಾಗಿ, ಇಬ್ಬರು ದಾಸವರೇಣ್ಯರಾದ ಪುರಂದರ ದಾಸರು ಮತ್ತು ಕನಕ ದಾಸರ ಸಮಾಜ ಸುಧಾರಣೆಯನ್ನು ಕುರಿತ ಕೀರ್ತನೆಗಳನ್ನು ಮಾತ್ರ ಪರಿಗಣಿಸಿದ್ದೇನೆ.

ಆಗಿನ (16ನೆಯ ಶತಮಾನದ ಕರ್ನಾಟಕದ) ಸಮಾಜದ ರೀತಿ ನೀತಿಯಲ್ಲಿ ಸುಧಾರಣೆ ತರುವುದರಲ್ಲಿ ಶ್ರೀ ಪುರಂದರದಾಸರ ಕೊಡುಗೆ ಅಪಾರ. ಇವರು ಈ ಕಾರ್ಯಕ್ಕೆ ಹಿಡಿದಿದ್ದ ಮಾರ್ಗವಾದರೂ ಯಾವುದು? ಎಲ್ಲರಿಗೂ ಮನಮುಟ್ಟುವ ನಾದೋಪಾಸನೆಯ ಮಾರ್ಗ, ಎಂದರೆ ಸಂಗೀತದ ಹಾದಿ. ಕೇವಲ ಭಾಷಣ ಮಾಡಿ ಜನರ ಮನಸ್ಸನ್ನು ಪರಿವರ್ತಿಸುವ ಬದಲು ಹರಿ ಪದಗಳ ಮೂಲಕ ಶ್ರೇಷ್ಠ ಬದುಕಿನ ವೈಶಿಷ್ಟ್ಯವನ್ನು ಎತ್ತಿ ಹಿಡಿದು ತೋರಿಸಿದ್ದಾರೆ.

ಉದಾಹರಣೆಗೆ: 'ರಾಗಿ ತಂದಿರಾ, ಭಿಕ್ಷಕೆ ರಾಗಿ ತಂದೀರ/ ಯೊಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಮಾತಾ ಪಿತೃಗಳ ಸೇವಿಪರಾಗಿ, ಅನ್ನ ಛತ್ರವನಿಟ್ಟವರಾಗಿ ಅನ್ಯವಾರ್ತೆಯ ಬಿಟ್ಟವರಾಗಿ, ಅನುದಿನ ಭಜನೆಯ ಮಾಡುವರಾಗಿ|| ರಾಗಿ ತಂದಿರಾ' - ಇದು ಪುರಂದರ ದಾಸರ ಒಂದು ಅತ್ಯಂತ ಜನಪ್ರಿಯ ಕೀರ್ತನೆ; ಈ ಕೀರ್ತನೆಯಲ್ಲಿ, 'ರಾಗಿ' ಎಂಬುದನ್ನು ಒಂದು ರೂಪಕವಾಗಿ ಬಳಸುತ್ತಾ, 'ಯೋಗ್ಯರಾಗಿ ಬದುಕಿ' ಎಂದು ಅವರು ಎಲ್ಲರಿಗೂ ಉಪದೇಶ ಮಾಡುತ್ತಾರೆ. 'ಯೋಗ್ಯ ಬದುಕು' ಎಂದರೆ 'ಮಾತಾಪಿತೃಗಳ ಸೇವೆ ಮಾಡುವುದು, ಅನ್ನದಾನ ಮಾಡುವುದು, ಮತ್ತು ಅವರಿವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಶ್ರೀ ಹರಿಯ ಭಜನೆಯನ್ನು ಸದಾ ಮಾಡುತ್ತಿರುವುದು'. ಇದು ಒಂದು ರೀತಿಯ ಬೋಧನೆಯ ಕ್ರಮ; ರೂಪಕಗಳ ಮೂಲಕ ಮಾಡುವ ಬೋಧನೆ. ಇದೇ ರೀತಿಯಲ್ಲಿ ಅವರು 'ಕಲ್ಲು ಸಕ್ಕರೆ ಕೊಳ್ಳಿರೋ' (ಇಲ್ಲಿ 'ಕಲ್ಲು ಸಕ್ಕರೆ' ಎಂದರೆ 'ಹರಿಭಕ್ತಿ'), 'ಡೊಂಕು ಬಾಲದ ನಾಯಕರೆ' (ಇಲ್ಲಿ ಡೊಂಕು ಬಾಲದವರೆಂದರೆ 'ಭಕ್ತಿಯಿಲ್ಲದವರು'), 'ಅಂಬಿಗ ನಾ ನಿನ್ನ ನಂಬಿದೆ, ಜಗದಂಬಾ ರಮಣ ನಿನ್ನ ನಂಬಿದೆ' (ಇಲ್ಲಿ 'ಅಂಬಿಗ'ನೆಂದರೆ ಈ ಸಂಸಾರ ಸಾಗರವನ್ನು ದಾಟಿಸುವಂತಹ ಪರಮಾತ್ಮ/ ವಿಷ್ಣು), ಇತ್ಯಾದಿ ಅಸಂಖ್ಯಾತ ಕೃತಿಗಳನ್ನು ರಚಿಸಿದ್ದಾರೆ.

ದಾಸವಾಣಿಯ ಮತ್ತೊಂದು ಕ್ರಮವೆಂದರೆ, ಆಗಿನ ಸಮಾಜದಲ್ಲಿ ನಡೆಯುತ್ತಿದ್ದುದನ್ನು ಕಂಡು, ಮನನೊಂದು ನೇರವಾಗಿ ಸಾರುವುದು: 'ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ/ ನಿತ್ಯ ದಾನವ ಮಾಡಿ ಫಲವೇನು,/ ಸತ್ಯ ಸದಾಚಾರ ಇಲ್ಲದವನು ಜಪ/ ಹತ್ತು ಸಾವಿರ ಮಾಡಿ ಫಲವೇನು' ಎಂದು. 'ಸದಾಚಾರ'ವೆಂದರೆ ಜಪ ಮಾಡುವುದು ಮಾತ್ರವಲ್ಲ; ಬದಲಿಗೆ ನಮ್ಮ ಜನ್ಮದಾತರ ಮನಸ್ಸನ್ನು ನೋಯಿಸುವಂತಹ ಯಾವ ಕೆಲಸವನ್ನೂ ಮಾಡದಿರುವುದು; ಅದೇ ನಿಜವಾದ ಜಪ. ಇದೇ ನೀತಿಯನ್ನು, ಕೆಲವು ಬಾರಿ ಕೋಪದಿಂದಲೂ ಅವರು ಕೂಗಿ ಹೇಳಿದ್ದಾರೆ: 'ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ/ ಮಡಿ ಎಲ್ಲಿ ಬಂತೆ ಭಿಕನಾಸಿ!// ಹುಟ್ಟುತ ಸೂತಕ ಸಾಯುತ ಸೂತಕ/ ನಟ್ಟ ನಡುವಿನಲ್ಲಿ ನಿಂತೆ ಭಿಕನಾಸಿ// ಮರುಳಾಟವೇಕೋ ಮನುಜ... ಕದ್ದು ಹೊಟ್ಟೆ ಹೊರೆಯುವವಗೆ ಶುದ್ಧ ಶೀಲ ವೃತ್ತಿಯೇಕೆ' ಇತ್ಯಾದಿ.

ಈ ಎರಡೂ ರೀತಿಗಳಲ್ಲಿ ಶ್ರೀ ಪುರಂದರದಾಸರು ಆಗಿನ ಸಮಾಜದಲ್ಲಿ ಸಾಮಾಜಿಕ ಪೀಡೆಗಳೆಂದೇ ಕರೆಯಲ್ಪಟ್ಟ ಜಾತೀಯತೆ, ಮಾನವೀಯ ಮೌಲ್ಯಗಳ ಅಧಃಪತನ, ಮೂಢ ನಂಬಿಕೆಗಳು, ಕಾಮದ ಮೋಹ, ಚಿನ್ನದ/ಭೂಮಿಯ ಮೋಹ, ಇತ್ಯಾದಿಗಳನ್ನು ಖಂಡಿಸುತ್ತಾ, ಊರೂರು ಸುತ್ತುತ್ತಾ, ಅವುಗಳ ನಿವಾರಣೆಗಾಗಿ ದಣಿವಿಲ್ಲದೆ ಶ್ರಮಿಸಿದರು.

ಇದೇ ಬಗೆಯ ಸಮಾಜ ಸುಧಾರಣೆಯನ್ನು ಕೈಗೊಂಡ ಮತ್ತೊಬ್ಬರು ದಾಸರೆಂದರೆ ಶ್ರೀ ಕನಕದಾಸರು. ಹುಟ್ಟಿನಿಂದ ಕುರುಬರಾಗಿದ್ದ ತಿಮ್ಮಪ್ಪನಾಯಕರನ್ನು ಇಡೀ ಊರಿನ ಜನರು ಬಹಿಷ್ಕರಿಸಿ, ದೇವಸ್ಥಾನದೊಳಗೆ ಪ್ರವೇಶ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಶ್ರೀ ಕೃಷ್ಣನೇ ಅವರಿದ್ದ ಕಡೆಗೆ ತಿರುಗಿ ದರ್ಶನ ನೀಡಿ ಅವರಿಗೆ ಮುಕ್ತಿ ದೊರಕಿಸಿಕೊಟ್ಟ ಪ್ರಸಂಗ ಎಲ್ಲರಿಗೂ ತಿಳಿದಿದ್ದೇ ಆಗಿದೆ. (ಉಡುಪಿಯ ಕೃಷ್ಣ ದೇವಸ್ಥಾನದ 'ಕನಕನ ಕಿಂಡಿ' ಪ್ರಸಂಗ). ಮೊದಲಿಗೆ ತಿಮ್ಮಪ್ಪನಾಯಕನಾಗಿದ್ದವರು ಹರಿದಾಸ ಚಳುವಳಿ ಸೇರಿ, ವ್ಯಾಸರಾಯರ ಶಿಷ್ಯನಾಗಿ, ಅವರಿಂದ ಕನಕದಾಸರೆಂದು ಕರೆಯಲ್ಪಟ್ಟರು. ಅವರೂ ನೂರಾರು ಕೃತಿಗಳನ್ನು ರಚಿಸಿ, ಕೇಳುಗರನ್ನು ಭಕ್ತಿಮಾರ್ಗದಲ್ಲಿ ಕರೆದೊಯ್ಯಲು ಅಹರ್ನಿಶಿ ಶ್ರಮಿಸಿದರು. ಉದಾಹರಣೆಗೆ: ಅಂದಿನ ಕಾಲದ (ಇದು ಇಂದಿನ ಸಮಾಜದಲ್ಲಿಯೂ ಕಾಣುವಂತಹ) ಸಮಾಜದ ಅಧಃಪತನವನ್ನು ಕಂಡು, ನೊಂದು, ಒಂದು ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ: 'ಸತ್ಯ ಧರ್ಮಗಳೆಲ್ಲ ಎತ್ತ ಪೋದವೋ ಕಾಣೆ/ ಉತ್ತಮರ ಜೀವನಕೆ ದಾರಿಯಿಲ್ಲ' ('ಕಲಿಯುಗದ ಮಹಿಮೆ'). ಹಾಗೆಯೇ, ಸಮಾಜ ಸುಧಾರಣೆಯೊಡನೆ ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ಜ್ಞಾನವನ್ನೂ ಅವರು ನೀಡಿದರು. ಉದಾಹರಣೆಗೆ: 'ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ/ ನೀ ದೇಹದೊಳಗೊ ನಿನ್ನೊಳು ದೇಹವೊ' ಎಂಬ ಕೀರ್ತನೆ. ಈ ಲೋಕವನ್ನೆ ಸುತ್ತಿರುವುದು ಮಾಯೆ; ಆದುದರಿಂದ ಅಧಿಕಾರ-ಧನ-ಕನಕ ಮೋಹವನ್ನು ನಾವೆಲ್ಲರೂ ಬಿಡಬೇಕು. ಉಪನಿಷತ್ತುಗಳೂ ಕೂಡಾ ಇದನ್ನೇ ಹೇಳುವುದು ತಾನೆ!

ಒಟ್ಟಿನಲ್ಲಿ, ಎಲ್ಲಾ ಹರಿದಾಸರು ವಿವಿಧ ಕಾಲಘಟ್ಟಗಳಲ್ಲಿ ಸಾರಿರುವುದು ಒಂದೇ: ಮನುಷ್ಯರಲ್ಲಿ 'ಉಚ್ಚ'-'ನೀಚ' ಎಂಬ ಭೇದವಿಲ್ಲ; 'ಜಾತಿ'-'ಧರ್ಮ'ಗಳು ಮನುಷ್ಯರು ಸೃಷ್ಟಿಸಿಕೊಂಡಿರುವುದು; ನಿರ್ಜೀವ ಕಲ್ಲುಗಳ ಪೂಜೆಗಿಂತ ಬದುಕಿರುವ ಮಾನವ ಜಾತಿಯನ್ನು ಪ್ರೀತಿಸಬೇಕು, ಪೂಜಿಸಬೇಕು; ಮತ್ತು ದೇವರೆದುರು ಎಲ್ಲರೂ ದೀನರೆ: 'ದೀನ ನಾನು ಸಮಸ್ತ ಲೋಕಕೆ, ದಾನಿ ನೀನು' ಎಂದು ಕನಕದಾಸರು ಒಂದು ಕೀರ್ತನೆಯಲ್ಲಿ ಹಾಡಿದ್ದಾರೆ. ಹರಿದಾಸ ಚಳುವಳಿಯು ಪ್ರಜಾಸತ್ತಾತ್ಮಕವಾಗಿದ್ದು, ಜನರಿಂದ, ಜನರಿಗೋಸ್ಕರ, ಮತ್ತು ಜನರದ್ದೇ ಆಗಿತ್ತು.

ಲೇಖಕರ ಕಿರುಪರಿಚಯ
ಶ್ರೀಮತಿ ಕೃತ್ತಿಕಾ ಶ್ರೀನಿವಾಸನ್‍

ಮೂಲತಃ ಬೆಂಗಳೂರಿನವರಾದ ಇವರು ಸಾಫ್ಟ್ ವೇರ್‍ ಇಂಜಿನಿಯರ್‍; ಕಲಾತ್ಮಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮ ಐಟಿ ವೃತ್ತಿಯ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಹಲವು ವರ್ಷಗಳಿಂದ ಅಭ್ಯಾಸ ಮಾಡುತ್ತಾ ಅನೇಕ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ