ಡೊನೇಷನ್ ಇಲ್ಲದ ಶಾಲೆ
ವರದಕ್ಷಿಣೆ ಇಲ್ಲದ ಮದುವೆ
ಲಂಚವಿಲ್ಲದ ಕಛೇರಿ
ದ್ವಂದ್ವಾರ್ಥವಿಲ್ಲದ ಸಿನಿಮಾ
ಎಲ್ಲಿಯೂ ಸಿಗದೋ ಗುಂಡಣ್ಣ
ಅಪ್ಪನ ಜೇಬಿಗೆ ಅಮ್ಮನ ಕಣ್ಣು
ಅಮ್ಮನ ಡಬ್ಬಿಯ ದುಡ್ಡು
ಮಗನ ಪಾಲು
ಮಗನ ಹಿಂದೆಯೇ ಉಂಟು
ಪೋಲಿ ಪುಂಡರ ದಂಡೋ ದಂಡು ಗುಂಡಣ್ಣ
ಮಾತೃ ಹೋಗಿ ಅಮ್ಮ ಆಯ್ತು
ಅಮ್ಮ ಹೋಗಿ ಮಮ್ಮಿ ಆಯ್ತು
ಅಮ್ಮ ಗುಮ್ಮ ಎಲ್ಲ ಹೋಗಿ
ಮಾಮ್ಸ್ ಆಯ್ತಲ್ಲೋ ಗುಂಡಣ್ಣ
ಕೊಡು ನಿನ್ನ ಓಟು
ತಗೋ ನನ್ನೀ ನೋಟು
ಮುಳುಗಿಸುವೆ ನಿನ್ನ ಹೆಂಡದಿ
ಗೆದ್ದೆನಾದರೆ ಮುಂದೆ
ಹೇರುವೇ ನಾ ನಿನ್ನ ಬೆನ್ನಿಗೆ
ವಿದೇಶಿ ಸಾಲದ ಭಾರೀ ದೊಡ್ಡ ಮೂಟೆಯ ಗುಂಡಣ್ಣ
ಕೆಟ್ಟದ್ದು ಕೇಳದಿರು
ಕೆಟ್ಟದ್ದು ನೋಡದಿರು
ಕೆಟ್ಟದ್ದು ಮಾಡದಿರು ಓ ಮಂಗ
ದಿಟ್ಟತನವೇ ಎಲ್ಲಕ್ಕೂ ಮೂಲವಯ್ಯ ಗುಂಡಣ್ಣ
ಒಲಿದರೆ ನಾರಿ
ಮುನಿದರೆ ಮಾರಿ
ಉಟ್ಟಿಹಳು ಭಾರೀ ಜರತಾರಿ ಸಾರಿ
ಬಾಯ್ಬಿಟ್ಟರೆ ಚಿನ್ನಕೆ ಪಿತೂರಿ
ಜಿರಳೆ ಕಂಡರೆ ಮಾತ್ರ ಕೂಡಲೇ ಪರಾರಿಯಲ್ಲೋ ಗುಂಡಣ್ಣ
ಎಲೈ ಮತದಾರ ಪ್ರಭುವೆ
ನಿನಗೇನು ಕಡಿಮೆ ಮಾಡಿದೆ ನಾನು
ನೀರು, ಲೈಟು, ಹಾಲು, ಗ್ಯಾಸು
ನಿನ್ನ ಜೀವನ ಮಟ್ಟವ
ಬೆಲೆಗಳಂತೆಯೇ ಆಗಸದೆತ್ತರಕೆ ಮೇಲೇರಿಸಲಿಲ್ಲವೇ ಗುಂಡಣ್ಣ
ಒಳಗಡಿ ಇಡೆ ಬರುವ ಪರಿಮಳ
ಮಾಣಿ ಉಸುರುವ ಖಾದ್ಯ ನಾಮಾವಳಿ
ಮೆಲ್ಲುವ ತನಕ ಎಲ್ಲವೂ ರುಚಿಯಯ್ಯಾ
ಮಿಗೆ ಮುಂಬರುವ ಬಿಲ್ಲು ಮಾತ್ರ
ಕಣ್ಣಿಗೆ ಕಂಡೊಡೆ ಕಹಿಯೋ ಕಹಿಯಾಗಿರುವುದಲ್ಲೋ ಗುಂಡಣ್ಣ.
ಲೇಖಕರ ಕಿರುಪರಿಚಯ | |
ಶ್ರೀ ಸು. ವಿ. ಮೂರ್ತಿ ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಾಗಿರುವ ಇವರದು ಬಹುಮುಖ ಪ್ರತಿಭೆ; ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜ್ಞಾನಾರ್ಜನೆ ಮತ್ತು ಸಮಾಜಿಕ ಅರಿವು ಮೂಡಿಸುವುದು ಇವರ ಬರೆಹ ಹಾಗೂ ಕಲಾಕೃತಿಗಳ ಮೂಲ ಉದ್ದೇಶ. Blog | Facebook | Twitter |
Namasthe. I need Sri Su V murthy contact please
ಪ್ರತ್ಯುತ್ತರಅಳಿಸಿ