ಅಂದಹಾಗೆ ಕನಸುಗಳು ಎಂದರೆ ಹೇಗೆ? ಎಂತಹ ಕನಸುಗಳು? ಈ ಕನಸುಗಳ ವಿಚಾರಕ್ಕೆ ಬಂದಾಗ ಪ್ರತಿಯೊಬ್ಬರ ಕನಸುಗಳೂ ಬೇರೆ ಬೇರೆಯಾಗಿರುತ್ತವೆ. ನೂರರಲ್ಲಿ ತೊಂಭತ್ತು ಜನರಿಗೆ ಸಾಫ್ಟ್ ವೇರ್ ಇಂಜಿನಿಯರ್ ಆಗುವ ಆಸೆ. ಐದರಷ್ಟು ಜನರಿಗೆ ಡಾಕ್ಟರ್ ಆಗುವ ಆಸೆ. ಉಳಿದ ಐದರಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಬಹುದು, ವಕೀಲ ಆಗಬಹುದು, ವ್ಯಾಪಾರಿಯಾಗಬಹುದು ಒಟ್ಟಾರೆ ಹಣ ಗಳಿಸುವ ಕಸುಬುಗಳು. ಎಲ್ಲರ ಮನಸ್ಸುಗಳಲ್ಲೂ ಹಣ ಗಳಿಸುವ ಕಸುಬುಗಳ ಕನಸಿನ ಜೆರಾಕ್ಸ್ ಗಳೇ ಹಾರಾಡುತ್ತೀವೆ. ಹೀಗಾದರೆ ಮುಂದೇನು? ಸಮಾಜಕ್ಕೆ ಇವರಷ್ಟೆ ಸಾಕೇ? ಸಂಶೋಧನೆಗಳನ್ನು ನಡೆಸಲು ವಿಜ್ಞಾನಿಗಳೆಲ್ಲಿ? ನಾಳಿನ ಸತ್ಪ್ರಜೆಗಳನ್ನು ರೂಪಿಸುವ ಉತ್ತಮ ಶಿಕ್ಷಕ ಸಮುದಾಯವೆಲ್ಲಿ? ಮನುಕುಲದ ಏಳಿಗೆಯನ್ನು ಚಿಂತಿಸುವ ಬುದ್ಧಿಜೀವಿಗಳೆಲ್ಲಿ? ದೇಶವನ್ನು ಕಾಯುವ ಮತ್ತು ರಕ್ಷಣೆಕೊಡುವ ಸೈನಿಕರೆಲ್ಲಿ? ವಿಜ್ಞಾನ, ತಂತ್ರಜ್ಞಾನ, ಪ್ರಗತಿಯೆಂಬ ಹೆಸರಿನಲ್ಲಿ ನಾವೆಲ್ಲ ಕಳೆದುಕೊಳ್ಳುತ್ತಿರುವ ಮನಃಶಾಂತಿಯನ್ನು ನೀಡಲು ತತ್ವಜ್ಞಾನಿಗಳು ಎಲ್ಲಿದ್ದಾರೆ? ಹೀಗೆಯೇ ಎಲ್ಲರೂ ತಮ್ಮ ತಮ್ಮ ಸ್ವಂತ ಲಾಭವನ್ನು ಯೋಚಿಸಿದರೆ ದೇಶದ ಗತಿಯೇನು?
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಅದ್ಭುತ ಮಾತನ್ನು ಲೋಕಕ್ಕೆ ಸಾರಿರುವ ನಮ್ಮ ದೇಶದಿಂದಲೇ ಸುಮಾರು ಆರುಲಕ್ಷಕ್ಕೂ ಹೆಚ್ಚುಜನ ಯುವಕರು ಐ. ಟಿ., ಬಿ. ಟಿ. ಹೆಸರಿನಲ್ಲಿ ತಾಯಿ ಮತ್ತು ತಾಯ್ನಾಡು ಎರಡನ್ನೂ ಬಿಟ್ಟು ವಿದೇಶಗಳಲ್ಲಿ ತಮ್ಮ ಬುದ್ಧಿಶಕ್ತಿ ಪ್ರದರ್ಶಿಸುತ್ತಿದ್ದಾರೆ. ಹೀಗೆಯೇ ಬುದ್ಧಿವಂತರು, ಪ್ರತಿಭಾಶಾಲಿಗಳು, ಸಜ್ಜನರು ತಮಗೆ ಹಣ ಹಾಗೂ ಅನುಕೂಲತೆ ಸಿಗುವ ಉದ್ಯೋಗಗಳಲ್ಲಿ ತೊಡಗಿಬಿಟ್ಟರೆ ಚಿಪ್ಪೊಳಗಿನ ಆಮೆಯಂತೆ ಆಗಿಬಿಡುತ್ತಾರೆ. ಆಗ ಕಳ್ಳರು, ಸುಳ್ಳರು, ದಡ್ಡರು, ಅಜ್ಞಾನಿಗಳು ಹೊರಬರುತ್ತಾರೆ, ನಮ್ಮ ನಾಯಕರಾಗುತ್ತಾರೆ, ಜನಪ್ರತಿನಿಧಿಗಳಾಗುತ್ತಾರೆ. ಕಾನೂನುಗಳನ್ನು ಮಾಡುತ್ತಾರೆ, ಆಮೇಲೆ ಇನ್ನೇನಾಗಲು ಸಾಧ್ಯ ನೀವೆ ಯೋಚಿಸಿ.. ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅರಾಜಕತೆ ತಲೆದೋರುತ್ತದೆ. ಆಗ ನಾವು ಯಾರನ್ನೂ ಬೈದು ಪ್ರಯೋಜನವಿಲ್ಲ.
ನಾವು ಈಗ ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತೇವೊ ಹಾಗೆ ನಮ್ಮ ದೇಶದ ಭವಿಷ್ಯ ರೂಪುಗೊಳ್ಳುತ್ತದೆ. ಎಲ್ಲರೂ ಮಾವಿನ ಗಿಡವನ್ನೇ ನೆಟ್ಟರೆ? ಸಾರಿಗೆ ಕರಿಬೇವೂ ಬೇಕಲ್ಲವೇ? ಮೊದಲೆಲ್ಲಾ ಹಲವಾರು ಮಕ್ಕಳನ್ನು ಪಡೆಯುತ್ತಿದ್ದರು; ಒಬ್ಬೊಬ್ಬರನ್ನು ಒಂದೊಂದು ಉದ್ಯೋಗಕ್ಕೆ ಕಳುಹಿಸುತ್ತಿದ್ದರು. ಆದರೆ ಈಗ ಇರುವುದೊಂದೇ ಮಗು, ಅವನು ಅಥವಾ ಅವಳು ಇಂಜಿನಿಯರ್ ಆಗಬೇಕು, ವಿದೇಶಕ್ಕೆ ಹೋಗಬೇಕು ಎಂದು ಆಶಿಸುತ್ತಾರೆ. ಆದ್ದರಿಂದ ಎಲ್ಲರ ಮನೆಗಳಲ್ಲಿ ಕೇವಲ ಪುಸ್ತಕ ಓದಿ ಅಂಕಗಳಿಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಗಳಿಸುವ ಗುರಿಯೊಂದಿಗೆ ಹಿಂದೆಮುಂದೆ ನೋಡದೇ ಮುಂದೆ ದೊಡ್ಡದೊಂದು ಪ್ರಪಾತವಿದೆ ಎಂದು ಕಾಣದೇ ಕುರಿಮಂದೆಯಂತೆ ಒಬ್ಬರ ಹಿಂದೊಬ್ಬರು ಓಡುತ್ತಿರುತ್ತಾರೆ. ಅವರಿಗೆ ನಿಜವಾದ ಜೀವನದ ಪಾಠವಾಗಲೀ, ಅದರ ಅನುಭವವಾಗಲೀ ತಿಳಿದಿರುವುದಿಲ್ಲ.
ಪ್ರತಿಷ್ಠಿತ ಶಾಲೆಗಳೆಂದು ಸಮಾಜದಲ್ಲಿ ಒಂದು ಬೋರ್ಡು ತಗುಲಿಹಾಕಿಕೊಂಡು ಉತ್ತಮ ಸುಸಜ್ಜಿತ ಆಕರ್ಷಣೀಯ ಕಟ್ಟಡಗಳನ್ನು ಹೊಂದಿ ಕೇವಲ ಪಠ್ಯ ಪುಸ್ತಕ, ನೋಟ್ಸ್ ಗಳನ್ನೇ ಉರು ಹೊಡೆಸಿ ಶೇಕಡ 100 ಅಂಕಗಳನ್ನು ಗಳಿಸುವಂತೆ ಮಾಡುವ ಆಂಗ್ಲ ಮಾಧ್ಯಮದ ಶಾಲೆ, ಕಾಲೇಜುಗಳಲ್ಲಿ ಇಂತಹ ಹುಡುಗರು ಕಲಿಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅವರ ಲಕ್ಷಣಗಳು ಹೇಗಿರುತ್ತವೆ ಎಂದರೆ ಅವರಿಗೆ ನಮ್ಮ ಮಾತೃ ಭಾಷೆಯ ಬಗ್ಗೆ ಅಸಡ್ಡೆ ಇರುತ್ತದೆ. ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನವಿರುವುದಿಲ್ಲ. ವಿದ್ಯುನ್ಮಾನ ಉಪಕರಣಗಳ ಮೇಲೆ ಅವಲಂಬಿತರಾಗಿರುತ್ತಾರೆ. ಪ್ರಾಯೋಗಿಕ ಬದುಕಿನ ಅನುಭವದ ಕೊರತೆ ಇರುತ್ತದೆ. ಅಂತರ್ಜಾಲ, ಟಿ. ವಿ. ಮತ್ತು ಮೊಬೈಲ್ ಪ್ರೇರಿತ ಜಗತ್ತಿನಲ್ಲಿಯೇ ಉಳಿದು ನೈಜ ಅನುಭವದ ಜಗತ್ತಿನಿಂದ ದೂರ ಉಳಿಯುತ್ತಾರೆ. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ದಾರ್ಶನಿಕತೆ ಇವುಗಳ ಬಗ್ಗೆ ಇವರಿಗೆ ಆಸಕ್ತಿಯೇ ಇರುವುದಿಲ್ಲ. ಜೀನ್ಸ್ ಧರಿಸಿ, ಪಿಜ್ಜಾ, ಬರ್ಗರ್ ತಿಂದು, ಕಂಪ್ಯೂಟರ್ ಕೀಲಿಮಣೆ ಕುಟ್ಟುತ್ತಾ, ಮನರಂಜನೆಗೆ ಅಂತರ್ಜಾಲವನ್ನು ತಡಕಾಡುತ್ತಾ ತಮ್ಮ ಸುಖದ ಬೊಜ್ಜನ್ನು ಜಿಮ್ ಗಳಲ್ಲಿ ಕರಗಿಸಲೆತ್ನಿಸುತ್ತಾ ಬದುಕುತ್ತಾರೆ.
ಈ ಮಕ್ಕಳ ತಂದೆತಾಯಿಗಳು ಅಷ್ಟೆ, ತಮ್ಮ ಮಕ್ಕಳ ಬದುಕನ್ನು ಬೇರೆ ರೀತಿ ರೂಪಿಸುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದ ಈ ಏಕಮುಖ ಆಧುನಿಕ ಬದುಕಿನ ದೃಷ್ಟಿಕೋನದಂತೆಯೇ ಬೆಳೆಸುತ್ತಾರೆ. ಸಮಾಜವೆಂಬ ಈ ದಿಬ್ಬಣದಲ್ಲಿ ಶ್ರೀಮಂತಿಕೆಯ ವಿಜಯಮಾಲೆ ಧರಿಸಿ ಹಣೆಬರಹ ಚೆನ್ನಾಗಿರುವವರು ಹೊರಟರೆ, ಅವರನ್ನು ನೋಡಿ ಉಳಿದವರು ಅವರ ಮಕ್ಕಳನ್ನೂ ಸಹ ವಿಜಯಮಾಲೆ ಧರಿಸಿದವರಂತಾಗಿಸಲು ಕೇವಲ ಗುರಿಯೆಡೆಗೆ ದೃಷ್ಟಿ ಕೇಂದ್ರೀಕರಿಸಿ ಓಡಲು ತರಬೇತಿ ನೀಡುತ್ತಾರೆ. ಕಾಲುಗಳು ಜೊರಾಗಿ ಓಡಲು ಅದಕ್ಕೇ ಬೇಕಾದ ವಿಶೇಷ ಪೋಷಕಾಂಶಗಳನ್ನು ನೀಡುತ್ತಾರೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ, ಅಕ್ಕಪಕ್ಕ ಓಡುವವರನ್ನು ಸರಿಸಿ, ಹಿಮ್ಮೆಟ್ಟಿಸಿ, ಕೆಡವಿ ಕಡೆಗೆ ತುಳಿದಾದರೂ ಹಣದ ಹಿಂದೆಯೇ ಬೆನ್ನತ್ತಿ ಓಡಬೇಕೆಂಬ ಪೈಪೋಟಿಯ ಪಾಠ ಹೇಳಿಕೊಡುತ್ತಾರೆ. ಇದು ಸರಿಯೇ? ಏಕೆ ಹೀಗೆ ಮಾಡುತ್ತಿದ್ದೇವೆ. ಅವರು ನಮ್ಮ ಮಕ್ಕಳು, ನಮ್ಮ ದೇಶದ ಆಸ್ತಿ ಅಲ್ಲವೇ? ನಾವೇ ಅವರನ್ನು ಹೀಗೆ ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆಯ ಗತಿಯೇನು? ಎಂದು ಯೋಚಿಸಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕಾದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ತಿಳಿಸಿದಂತಹ ನೈತಿಕ ಅಧ್ಯಾತ್ಮಿಕ ಶಿಕ್ಷಣ ಹಾಗೂ ಭಗವಾನ್ ಶ್ರೀ ಸತ್ಯ ಸಾಯಿಬಾಬ ಅವರು ವಿಶ್ವಶಾಂತಿಗಾಗಿ ಹುಟ್ಟುಹಾಕಿದ ಮಾನವೀಯ ಮೌಲ್ಯಗಳ ಶಿಕ್ಷಣದ ಅವಶ್ಯಕತೆ ಇದೆ.
ಲೇಖಕರ ಕಿರುಪರಿಚಯ | |
ಶ್ರೀ ತ್ರಿಮೂರ್ತಿ ಮೂಲತಃ ಮೈಸೂರಿನವರಾದ ಇವರು ಸಮಾಜದ ಬಗ್ಗೆ ಕಾಳಜಿ ಹಾಗೂ ಯುವಶಕ್ತಿಯ ಬಗ್ಗೆ ಭರವಸೆ ಹೊಂದಿದ್ದಾರೆ; ಪ್ರಸ್ತುತ ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ