ಸೋಮವಾರ, ನವೆಂಬರ್ 30, 2015

ಚಾಲುಕ್ಯ ಪುಲಿಕೇಶಿ

ನವಂಬರ್ 2015ರ ಮಾಹೆಯುದ್ದಕ್ಕೂ ನಡೆದ ಕಹಳೆ ಐದನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.


ಚಿತ್ರ: ಇಮ್ಮಡಿ ಪುಲಿಕೇಶಿ; ಕೃಪೆ: YouTube/TubeChop

ಭಾರತದ ಉಜ್ವಲ ಇತಿಹಾಸದ ಭವ್ಯ ಕ್ಷಾತ್ರಪರಂಪರೆಗೆ ಕನ್ನಡಿಗರ ಕೊಡುಗೆ ಆಚಂದ್ರಾರ್ಕವಾಗಿ ಉಳಿಯುವಂಥದ್ದು. ಒಂದೊಂದು ಸಾಮ್ರಾಜ್ಯವೂ ಕೂಡ ಯೂರೋಪಿಗಿಂತಲೂ ನಾಲ್ಕಾರುಪಟ್ಟು ವಿಸ್ತಾರವಾದ ಭೂಪ್ರದೇಶ ಹೊಂದಿದ್ದು, ಸುಮಾರು 100-200 ವರ್ಷಗಳಷ್ಟು ದೀರ್ಘಕಾಲ ದುರ್ಭೇದ್ಯವಾಗಿ ಆಳಿದ ರಾಜಮನೆತನಗಳ ಕೊಡುಗೆಯಂತೂ ಅನ್ಯಾದೃಶ. ಅದರಲ್ಲಿ ಎದ್ದುಕಾಣುವ ರಾಜವಂಶಗಳು - ಹೊಯ್ಸಳರು, ಚಾಳುಕ್ಯರು, ಗಂಗರು, ಕದಂಬರು, ರಾಷ್ಟ್ರಕೂಟರು, ಚಂದೇಲರು, ಪರಮಾರರು, ವಿಜಯನಗರದ ಅರಸರು, ಬಲ್ಲಾಳರು, ಯಾದವರು ಇತ್ಯಾದಿ. ಈ ವಂಶಗಳನ್ನು ಮತ್ತು ಕನ್ನಡನಾಡನ್ನು  ಬೆಳಗಿ, ಕೀರ್ತಿಯ ಉತ್ತುಂಗ ಶಿಖರಕ್ಕೇರಿಸಿದವರಲ್ಲಿ ಪ್ರಮುಖರು - ವಿಷ್ಣುವರ್ಧನ, ಮೊದಲನೇ ಸೋಮೇಶ್ವರ, ಪ್ರೌಢದೇವರಾಯ, ಬುಕ್ಕರಾಯ, ಕೃಷ್ಣದೇವರಾಯ, ಆರನೇ ವಿಕ್ರಮಾದಿತ್ಯ, ಮಯೂರ ವರ್ಮ  ಹಾಗು ಇಮ್ಮಡಿ ಪುಲಿಕೇಶೀ ಮೊದಲಾದವರು. ಈ ಲೇಖನದಲ್ಲಿ ಚಾಳುಕ್ಯರ ಮತ್ತು ಅದೇ ಪರಂಪರೆಯ ಇಮ್ಮಡಿ ಪುಲಿಕೇಶಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಬಾದಾಮಿ ಚಾಲುಕ್ಯರ ಮೂಲಪುರುಷ, ಉತ್ತಮ ಕ್ಷತ್ರಿಯರ ಸೃಷ್ಟಿಗಾಗಿ ಇಂದ್ರನಿಂದ ಪ್ರಾರ್ಥಿತನಾದ ಬ್ರಹ್ಮನ ಚುಲಕದಿಂದ (ಹಸ್ತ) ಅರ್ಘ್ಯ ಕೊಡುವಾಗ ಹುಟ್ಟಿಬಂದ, ಆದ್ದರಿಂದ ಅವನ ಪರಂಪರೆಯವರು ಚಾಲುಕ್ಯರೆಂದು ಹೆಸರಾದರು ಎಂಬುದಾಗಿ ಬಿಲ್ಹಣ ಕವಿ ತನ್ನ "ವಿಕ್ರಮಾಂಕದೇವ ಚರಿತಂ" ಎಂಬ ಕಾವ್ಯದಲ್ಲಿ ಹೇಳುತ್ತಾನೆ. ಕೆಲವು ಇತಿಹಾಸಕಾರರು, ಚುಲುಕಿ, ಚುಲ್ಕಿ, ಸಲುಕಿ ಎಂಬ ಕಬ್ಬಿಣದ ಹಾರೆಯಂತ: ವಸ್ತುವನ್ನು ಉಪಯೋಗಿಸುವ ಕುಲಕ್ಕೆ ಸಂಬಂಧಪಟ್ಟದ್ದು ಚಾಲುಕ್ಯ ಎಂದು ಅಭಿಪ್ರಾಯ ಪಡುತ್ತಾರೆ. ಅದೇನೇ ಇದ್ದರೂ, ಚಾಲುಕ್ಯ ಸಾಮ್ರಾಜ್ಯದ ಮೂಲಪುರುಷ ಒಂದನೇ ಪುಲಿಕೇಶೀ ಎಂದು ಗೊತ್ತಾಗುತ್ತದೆ. (ಪುಲಿಕೇಶೀ ಹೆಸರ ಬಗ್ಗೆ ಕೂಡ ಅದು ಪುಲಿಕೆಶಿಯೋ, ಪುಲಕೇಶಿಯೊ, ಪೊಲೆಕೆಶಿಯೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ).

ಒಂದನೇ ಪುಲಿಕೇಶಿಗೆ ಕೀರ್ತಿವರ್ಮ ಮತ್ತು ಮಂಗಳೇಶ ಇಬ್ಬರು ಮಕ್ಕಳು. ಕೀರ್ತಿವರ್ಮ ಪಟ್ಟವೇರಿ ಕೆಲವೇ ಕಾಲದಲ್ಲಿ ಮೃತನಾದಾಗ, ಅವನ ಮಕ್ಕಳು ಚಿಕ್ಕವರಾದ್ದರಿಂದ ಮಂಗಳೇಶನೇ ರಾಜ್ಯವಹಿಸಿಕೊಂಡು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಹಾಗೆಯೇ ರಾಜ್ಯದ ಗಡಿಗಳನ್ನೂ ವಿಸ್ತರಿಸಿ ಬಲಪಡಿಸುತ್ತಾನೆ. ಆದರೆ, ರಾಜ್ಯದ ಅಧಿಕಾರದಾಹದಿಂದ ಕೀರ್ತಿವರ್ಮನ ಹಿರಿಯಮಗನಿಗೆ ನ್ಯಾಯಯುತವಾಗಿ ಕೊಡಬೇಕಾದ ರಾಜ್ಯವನ್ನು ಕೊಡುವುದಿಲ್ಲ. ಆಗ ಕೀರ್ತಿವರ್ಮನ ಹಿರಿಯಮಗನೇ ಪರಾಕ್ರಮದಿಂದ ತನ್ನ ರಾಜ್ಯವನ್ನು ಹಿಂಪಡೆಯುತ್ತಾನೆ.

ಆತನೇ, ರಾಜಪರಮೇಶ್ವರ, ಪರಮ ಭಟ್ಟಾರಕ, ಉರುರಣವಿಕ್ರಮ, ದಕ್ಷಿಣಾಪಥೇಶ್ವರ, ಸತ್ಯಾಶ್ರಯ ಎಂದು ಖ್ಯಾತನಾದ "ಇಮ್ಮಡಿ ಪುಲಿಕೇಶೀ". ಅವನ ಆಡಳಿತದ ಮೊದಲ ಕೆಲವು ವರ್ಷಗಳು ಮುಳ್ಳಿನ ದಾರಿಯಾಗಿದ್ದಿತು. ಮೊದಲಿಗೆ, ಗಡಿಗಳನ್ನು ರಕ್ಷಿಸುವುದಲ್ಲದೆ, ರಾಜಪರಿವಾರದ ಒಳಜಗಳಗಳನ್ನು ಕೂಡ ಹತ್ತಿಕ್ಕಿ, ಶಾಂತಿ ನೆಲೆಗೊಳಿಸುವ ಮಹತ್ತರ ಜವಾಬ್ದಾರಿ ಹೆಗಲಮೇಲಿತ್ತು. ಆದರೆ, ಸ್ವಭಾವತಃ ಪರಾಕ್ರಮಿಯೂ, ಕುಶಾಗ್ರಮತಿಯೂ, ಸಕಲವಿದ್ಯಾ ಪಾರಂಗತನೂ ಆದ ಇಮ್ಮಡಿ ಪುಲಿಕೇಶಿಯು ತನ್ನ ಆಪ್ತ ಸಚಿವರ, ಸೇನಾಪತಿಗಳ ಸಹಾಯದಿಂದ, ಸಾಮ, ದಾನ, ಭೇದ ದಂಡಗಳೆಂಬ ಚತುರೋಪಾಯಗಳಿಂದ ಹಿತಶತ್ರುಗಳನ್ನು, ಒಳಜಗಳಗಳನ್ನು ಹತ್ತಿಕ್ಕಿ, ಗಡಿಗಳನ್ನು ಬಲಪಡಿಸುತ್ತಾನೆ. ಒಮ್ಮೆ ಒಳನಾಡಿನಲ್ಲಿ ಶಾಂತಿ ನೆಲೆಸಿದ ಮೇಲೆ ಅಪಾರ ಸೇನೆಯೊಂದಿಗೆ ದಿಗ್ವಿಜಯಕ್ಕೆ ಹೊರಡುತ್ತಾನೆ.

ಮೊದಲಿಗೆ ಸೇನೆಯನ್ನು ಎದುರಿಸಿದ ಕದಂಬರನ್ನು ಸೋಲಿಸಿ ಬನವಾಸಿಯನ್ನು ವಶಪಡಿಸಿಕೊಂಡು, ಮುಂದೆ ತಲಕಾಡಿನ ಗಂಗರು, ಮಹಾರಾಷ್ಟ್ರದ ರಾಜಮನೆತನಗಳು, ಲಾಟರು, ಗುರ್ಜರರು, ಕೊಂಕಣದ ಮೌರ್ಯರು, ಘೂರ್ಜರರು ಮೊದಲಾದ ದಕ್ಷಿಣದ ಕರ್ನಾಟಕ ಮತ್ತು ಪಶ್ಚಿಮದ ಎಲ್ಲ ರಾಜ್ಯಗಳನ್ನು ವಶಪಡಿಸಿಕೊಂಡು, ಕೋಸಲ, ಕಳಿಂಗ, ಗೋದಾವರಿ ಪ್ರಾಂತ, ಆಂಧ್ರದ ಎಲ್ಲೋರಾ, ಕಂಚಿಯ ಪಲ್ಲವ ಮಹೇಂದ್ರವರ್ಮನ ಬಹುದೊಡ್ಡ ಸೇನೆಯನ್ನು ಸೋಲಿಸಿ ಕಾವೇರಿಯವರೆಗೂ ಆಕ್ರಮಿಸಿಕೊಳ್ಳುತ್ತಾನೆ. ತರುವಾಯ ಚೋಳ, ಚೇರ ಮತ್ತು ಪಾಂಡ್ಯ ದೊರೆಗಳೊಂದಿಗೆ ಸ್ನೇಹ ಬೆಳೆಸಿ, ತನ್ನ ಸೋದರರಾದ ಕುಬ್ಜ ವಿಷ್ಣುವರ್ಧನ ಮತ್ತು ಜಯಸಿಂಹರನ್ನು ಮಾಂಡಲಿಕರನ್ನಾಗಿ ನೇಮಿಸಿ, ಕಾವೇರಿಯಿಂದ ಗೋದಾವರಿಯನ್ನು ದಾಟಿ ನರ್ಮದಾ ತೀರದವರೆಗೂ ವ್ಯಾಪಿಸಿದ ತನ್ನ ವಿಶಾಲ ಸಮ್ರಾಜ್ಯದ ಗಡಿಗಳನ್ನು ಬಲಪಡಿಸಿಕೊಳ್ಳುತ್ತಾನೆ.

ಉತ್ತರದ ಸಾಮ್ರಾಟ ಕನ್ಯಾಕುಬ್ಜದ (ಕನೂಜ್) ಶೀಲಾದಿತ್ಯ ಹರ್ಷವರ್ಧನನ ವಿರುದ್ಧದ ಗೆಲುವು ಇವನಿಗೆ ಬಹು ದೊಡ್ಡ ಕೀರ್ತಿಯನ್ನು ಕೊಟ್ಟಿತು.

ಉತ್ತರಾಪಥೇಶ್ವರ ಹರ್ಷವರ್ಧನ ತನ್ನ ಸಾಮ್ರಾಜ್ಯವನ್ನು ದಕ್ಷಿಣಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ನರ್ಮಾದಾತೀರದಲ್ಲಿ 60,000 ಆನೆಗಳ ಗಜಪಡೆಯ ಬೃಹತ್ ಸೇನೆಯೊಂದಿಗೆ ಮುತ್ತಿಗೆ ಹಾಕಿದ. ಆದರೆ, ಪುಲಿಕೇಶೀ ಕೂಡ ದೊಡ್ಡ ಸೇನೆಯೊಂದಿಗೆ ಎದಿರುಗೊಂಡ. ನರ್ಮದೆಯ ಕಣಿವೆಯಲ್ಲಿ ರಕ್ತದ ಹೊಳೆಯೇ ಹರಿಯಿತು. ಕೊನೆಗೆ ಶೀಲಾದಿತ್ಯ ಹರ್ಷವರ್ಧನ ಕನ್ನಡಿಗರ ಸೇನೆಯಮುಂದೆ ಸೋಲೊಪ್ಪಿಕೊಂಡು, ಇಮ್ಮಡಿ ಪುಲಿಕೇಶಿಯೊಂದಿಗೆ ಸಂಧಾನ ಮಾಡಿಕೊಂಡ. ಹರ್ಷನ ಅದೃಷ್ಟ, ಅವನಿಗೆ ಪುಲಿಕೇಶಿಯಂಥ ಉದಾರಿಯಾದ ಎದುರಾಳಿ ಸಿಕ್ಕಿದ್ದ. ಹಾಗಾಗಿ, ತನ್ನ ಮಾನ ಪ್ರಾಣಗಳೆರಡನ್ನೂ ಉಳಿಸಿಕೊಂಡ.

ವಿಶೇಷವೆಂದರೆ, ಹರ್ಷ ರಾಜಕೀಯವಾಗಿ ಸೋತರೂ ಅವನ ಆಸ್ಥಾನ ಕವಿಸಾರ್ವಭೌಮ ಬಾಣಭಟ್ಟ ಸಾಂಸ್ಕೃತಿಕವಾಗಿ ಗೆದ್ದ. ಹೇಗೆಂದರೆ, ಬಾಣಭಟ್ಟ ಹರ್ಷವರ್ಧನನ ಬಗ್ಗೆ ಬರೆದ ಹರ್ಷಚರಿತ ಮಹಾಕಾವ್ಯದ "ನಮಶ್ಚಂದ್ರ ಶಿರಶ್ಚುಂಬಿ ಚಂದ್ರಶೇಖರ ಚಾರವೇ ಬ್ರಹ್ಮಾಂಡ ಭುವನಾರಂಭ ಮೂಲಸ್ಥಂಬಾಯ ಶಂಭವೇ" ಎಂಬ ಮಂಗಳಶ್ಲೋಕವನ್ನು, ಸ್ವತಃ ವಿದ್ವಾತ್ಕವಿಯೂ, ವಿದ್ವತ್ಪ್ರಿಯನೂ ಆಗಿದ್ದ ಪುಲಿಕೇಶಿಯು ತನ್ನ ಎಲ್ಲ ಶಾಸನಗಳ ಮಂಗಳಶ್ಲೋಕವನ್ನಾಗಿ ಬಳಸಿಕೊಂಡ. ಮುಂದಿನ ಅನೇಕ ರಾಜರೂ ಕೂಡ ಇದೇ ಶ್ಲೋಕವನ್ನು ತಮ್ಮ ಎಲ್ಲ ಶಾಸನಗಳ ಮಂಗಳಶ್ಲೋಕವನ್ನಾಗಿ ಮಾಡಿಕೊಂಡು ಬಾಣನನ್ನು ಹರ್ಷನನ್ನು ಅಜರಾಮರ ಮಾಡಿದರು. ಹೀಗೆ, ತನ್ನಿಂದ ಸೋತ ಒಬ್ಬ ಚಕ್ರವರ್ತಿಯಮೇಲೆ ಬರೆದ ಕಾವ್ಯದ ಶ್ಲೋಕವನ್ನು ಗೌರವಿಸುವ ಉದಾರಿ ಪುಲಿಕೇಶಿಗೆ ತನ್ನ ಕೊನೆಯ ಕಾಲ ಆನಂದದಾಯಕವಾಗಿರಲಿಲ್ಲ. ಒಂದುಕಡೆ ಕುಬ್ಜ ವಿಷ್ಣುವರ್ಧನನ ವಿದ್ರೋಹ, ತಲೆಯೆತ್ತಿದ ಒಳಜಗಳಗಳಿಂದ ಬಳಲಿದ್ದ ಪುಲಿಕೇಶಿಗೆ ಇನ್ನೊಂದೆಡೆ, ಹಳೆಯ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಿಂದ ಅಪಾರ ಸೇನೆಯೊಂದಿಗೆ ಮುತ್ತಿಗೆಹಾಕಿದ ಪಲ್ಲವ ಮಹೇಂದ್ರವರ್ಮನ ಮಗ ನರಸಿಂಹವರ್ಮನನ್ನು ಎದುರಿಸುವುದು ಕಷ್ಟಸಾಧ್ಯವಾಯಿತು. ಜಯಿಸಿದ ನರಸಿಂಹವರ್ಮ ಚಾಲುಕ್ಯ ರಾಜಧಾನಿ ಬಾದಾಮಿಗೆ ಬೆಂಕಿ ಇಟ್ಟು ನಾಶಮಾಡಿದ. ಈ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲಾರದ ಪುಲಿಕೇಶಿ ಹಾಸಿಗೆ ಹಿಡಿದು ಹಾಗೆಯೇ ಕೊನೆಯುಸಿರೆಳೆದ.

ಹೀಗೆ, ಕ್ರಿ. ಶ. 610 ರಿಂದ 655 ರ ವರೆಗೆ, ಸುಮಾರು 45 ವರ್ಷಗಳಕಾಲ  ಕಾವೇರಿಯಿಂದ ನರ್ಮದೆಯ ವರೆಗೆ ವ್ಯಾಪಿಸಿದ್ದ ಬಹುದೊಡ್ಡ ಸಾಮ್ರಾಜ್ಯವನ್ನು ಕಳ್ಳಕಾಕರ ಭಯವಿಲ್ಲದೆ ಸುಭಿಕ್ಷವಾಗಿ ಆಳಿ, ತನ್ನ ಶೌರ್ಯ, ಪರಾಕ್ರಮ, ಔದಾರ್ಯಗಳಿಂದ ಕನ್ನಡಿಗರ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಲ್ಲಿ ದಿಗಂತಕ್ಕೇರಿಸಿ, ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗ್ ನಿಂದ ಭಾರತದಲ್ಲೇ ಅತ್ಯಂತ ಸಮರ್ಥನಾದ ಸಾಮ್ರಾಟ ಎಂದು ಹೊಗಳಿಸಿಕೊಂಡ, ಉರುರಣವಿಕ್ರಮ, ದಕ್ಷಿಣಾಪಥೇಶ್ವರ, ಸತ್ಯಾಶ್ರಯ ಇಮ್ಮಡಿ ಪುಲಿಕೇಶಿಯು, ಕನ್ನಡ ಕ್ಷಾತ್ರಾಕಾಶದಲ್ಲಿ ಎಂದೆಂದೂ ಮಾಸದೆ ಮಿನುಗುವ ಧೃವತಾರೆಯಾಗಿ ಶೋಭಿಸುತ್ತಿದ್ದಾನೆ. ಇಂಥಾ ಸಾಮ್ರಾಟನನ್ನು ಪಡೆದ ಈ ನಾಡು, ಇಲ್ಲಿ ಹುಟ್ಟಿದ ನಮ್ಮ ಭಾಗ್ಯವೇ ಭಾಗ್ಯ.

"ಸಿರಿಗನ್ನಡಂ ಗೆಲ್ಗೆ"
"ಸಿರಿಗನ್ನಡಂ ಬಾಳ್ಗೆ"

ಲೇಖಕರ ಕಿರುಪರಿಚಯ
ಶ್ರೀ ಬಿ. ಆರ್. ಕೃಷ್ಣ

ಮಂಡ್ಯ ಮೂಲದವರಾದ ಇವರು ಪ್ರಸ್ತುತ ಭಾರತ ಅಂಚೆ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಕೃತ ಹಾಗೂ ಕನ್ನಡ ಪುಸ್ತಕಗಳನ್ನು ಓದುವುದು ಇವರ ಹವ್ಯಾಸ.

Blog  |  Facebook  |  Twitter

ಭಾನುವಾರ, ನವೆಂಬರ್ 29, 2015

ಬೆತ್ತಲಾದ ಚಂದ್ರ

ಚಿತ್ರಕೃಪೆ: ಗೂಗಲ್
ತಿಳಿ ಮುಗಿಲ ಮಗ್ಗುಲು ಸುತ್ತಲು ಕತ್ತಲು
ತಂಪು ಸೂಸುವ ತಾರೆಗಳು ಅತ್ತ-ಇತ್ತಲೂ
ಹಾಯೆಂದಿದೆ ಭೂವಲಯದ ತಪ್ಪಲು
ಹೊಂಗನಸ ನೇಸರ ನಿದ್ರೆಗೆ ಜಾರಲು

ನಗು ನಗುತ ಬಂದ ಕುಣಿದಾಡುತ ಬಂದ
ಇಡೀ ರಾತ್ರಿ ನನ್ನದೇ ಆಳ್ವಿಕೆಯೆಂದ
ಜಗವ ಕಂಡ ತನ್ನ ಬಾಡಿಗೆ ಬೆಳಕಿಂದ
ಅಂದ-ಚಂದ ನನ್ನ ಬಿಟ್ಟು ಬೇರಾರಿಲ್ಲೆಂದ

ಚುಕ್ಕಿಗಳು ಮೈ ಬಳುಕಿಸಿ ಕುಳಿತಿರಲು
ಕಪ್ಪು ನೆಟ್ಟ ದಟ್ಟ ಇರುಳು ಕವಿದಿರಲು
ಬಿಳಿ ಅಂಗಿಯ ಬಿಟ್ಟು ಚಂದ್ರ ನಗ್ನವಾಗಲು
ತನು ಬರಿದಾಗಲು ಮನ ಬಯಲಾಗಲು

ದಿನಕರನದಿದು ತೀರ್ಥಂಕರರ ಅನುಕರಣ
ನಿಶೆಗದು ಭರಿಸಲಾಗದ ಏಕಾಂಗಿ ಅಂತಃಕರಣ
ಮನಶ್ಶುದ್ಧಿಗೆ ಬೇಕು ನಗ್ನತೆಯ ಆವರಣ
ಇದೇ ಬೆತ್ತಲಾದ ಚಂದಿರನ ಅನಾವರಣ

ಲೇಖಕರ ಕಿರುಪರಿಚಯ
ಶ್ರೀ ಆದರ್ಶ ಹೆಗಡೆ

ಸಿರ್ಸಿಯಲ್ಲಿ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿರುವ ಇವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಪುಸ್ತಕಗಳನ್ನು ಓದುವ ಗೀಳು ಹಚ್ಚಿಕೊಂಡಿರುವ ಇವರಿಗೆ ಕವಿತೆಗಳನ್ನು ಬರೆಯುವುದು ಹವ್ಯಾಸ.

Blog  |  Facebook  |  Twitter

ಶನಿವಾರ, ನವೆಂಬರ್ 28, 2015

ಪಟಾಕಿ ಬಿಟ್ಹಾಕಿ

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲವೂ ಜಗಮಗ. ಮನೆಯಲ್ಲಿ ಸಿಹಿತಿಂಡಿ, ಹಬ್ಬದೂಟದ ರಾಯಭಾರ. ಕತ್ತಲಾಗುವುದನ್ನೇ ಅಸಹನೆಯಿಂದ ಕಾಯುವ ಮಕ್ಕಳಿಗಂತೂ ಪಟಾಕಿ ಪ್ಯಾಕೆಟ್ ಬಿಚ್ಚಿ, ಹಚ್ಚಿ, ಹುಚ್ಚೆದ್ದು ಕುಣಿಯುವ ತವಕ. ದುಬಾರಿ ಬೆಲೆ ತೆತ್ತು ಅದನ್ನು ಕೊಂಡ ಅಪ್ಪನಿಗೆ ಆ ಚಿಂತೆಯಲ್ಲೂ ಮಕ್ಕಳ ನಗು ನೋಡಿ ಏನೋ ಒಂದು ಸಮಾಧಾನ. ಈ ಎಲ್ಲಾ ಸಂಭ್ರಮದ ನಡುವೆ, ಮೂಲೆಯಲ್ಲಿ ಭಯದಿಂದ ಕಂಗಾಲಾಗಿ ಥರಥರನೆ ನಡುಗುತ್ತಾ ಕುಳಿತ ಮನೆಯ ಮುದ್ದಿನ ನಾಯಿಯನ್ನು ಕಂಡವರು ಕಡಿಮೆ.
ಚಿತ್ರ ಕೃಪೆ: ಗೂಗಲ್
ಸಿಡಿಮದ್ದಿನ ಶಬ್ಧದಿಂದ ನಮ್ಮ ಸುತ್ತಮುತ್ತಲ ಜೀವ ಸಂಕುಲಕ್ಕಾಗುವ ಹಿಂಸೆ ಅಷ್ಟಿಷ್ಟಲ್ಲ. ಪಕ್ಷಿಗಳು ದಿಕ್ಕೆಟ್ಟು ಪಲಾಯನಗೈಯುತ್ತವೆ. ನಮ್ಮ ಶ್ವಾನಮಿತ್ರರಂತೂ ಕಂಗಾಲು. ನಾಯಿಗಳ ಕಿವಿಗಳು ನಮಗಿಂತ ಎಷ್ಟೋ ಪಟ್ಟು ಹೆಚ್ಚು ಸೂಕ್ಷ್ಮ. ಅವು 60,000 ಹರ್ಟ್ಜ್ ಕಂಪನಾಂಕದವರೆಗಿನ ಸದ್ದುಗಳಿಗೂ ಸಂವೇದನಾಶೀಲ. ನಮಗಿಂತ 4 ಪಟ್ಟು ದೂರದ ಸದ್ದುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಲ್ಲವು. ಅಂಥದರಲ್ಲಿ, ನಮ್ಮ ಒಂದೊಂದು ಆಟಂ ಬಾಂಬ್ - ಲಕ್ಷ್ಮೀ ಬಾಂಬ್ ಗಳು, ಅವರ ಪಾಲಿನ ಹಿರೋಶಿಮ - ನಾಗಸಾಕಿ ಬಾಂಬುಗಳು! ಅದರಿಂದಾಗಿಯೇ ಅವುಗಳು ಭಯದಿಂದ ತತ್ತರಿಸಿ ಅವಿತುಕೊಳ್ಳಲು ಜಾಗ ಹುಡುಕುವುದನ್ನು ನೀವು ನೋಡಿರಬಹುದು. ಎಷ್ಟೋ ನಾಯಿಗಳು ಕಿವುಡಾಗುವುದು ಬಿಡಿ, ಭಯದಿಂದ ಸತ್ತೇ ಹೋದ ಉದಾಹರಣೆಗಳು ಬೇಕಾದಷ್ಟಿವೆ. ಇನ್ನು ನಾಯಿಗಳ ಬಾಲಕ್ಕೆ ಮಾಲೆ ಪಟಾಕಿ ಕಟ್ಟಿ ಸಿಡಿಸುವ ವಿಕೃತ ಮನಗಳ ಬಗ್ಗೆ ಏನು ಹೇಳೋಣ?

ಸಿಡಿಮದ್ದಿನ ಅವಾಂತರಗಳು ಇಲ್ಲಿಗೇ ಮುಗಿದಿಲ್ಲ. ಬೆಂಕಿ ಅಪಘಾತಗಳು, ಆರೋಗ್ಯದ ಮೇಲಿನ ದುಷ್ಪರಿಣಾಮಗಳು ನಮಗೆಲ್ಲ ಗೊತ್ತೇ ಇದೆ. ಕ್ಷಣಿಕ ಉತ್ಸಾಹಕ್ಕಾಗಿ ದುಬಾರಿ ಬೆಲೆ ತೆರಬೇಕಾಗುತ್ತದೆ, ದುಡ್ಡಿನ ದೃಷ್ಟಿಯಿಂದಲೂ ಹಾಗೂ ಆರೋಗ್ಯದ ದೃಷ್ಟಿಯಿಂದಲೂ. ಪ್ರತೀ ವರ್ಷವೂ ಪಟಾಕಿ ಸಿಡಿಸುವಾಗ ಆದ ಅಪಘಾತಗಳಿಂದ ಅನೇಕ  ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸುದ್ದಿಯನ್ನು ನಾವೆಲ್ಲಾ ಕೇಳತ್ತಲೇ ಇದ್ದೇವೆ ಹಾಗೂ ಓದುತ್ತಲೇ ಇರುತ್ತೇವೆ. ಅಷ್ಟೇ ಅಲ್ಲ, ಶಿವಕಾಶಿಯ ಬಾಲಕಾರ್ಮಿಕರ ಎಳೆಯ ಕನಸುಗಳನ್ನು ಸುಡುತ್ತದೆ ಈ ಪಟಾಕಿ. ಮತ್ತೆ ಪರಿಸರಕ್ಕೂ ಯಮ.
ಚಿತ್ರ ಕೃಪೆ: ಗೂಗಲ್
ಹಾಗಂತ ಇದನ್ನು ಒಂದೇ ಸಲಕ್ಕೆ 'ಬ್ಯಾನ್ ಆಗ್ಬೇಕ್' ಅಂತ ಅಂದು ಬಿಡಲೂ ಆಗುವುದಿಲ್ಲ. ಆದ್ದರಿಂದ ಸಮಾಜ ಜಾಗೃತಗೊಳ್ಳುವುದೇ ಒಳ್ಳೆಯ ದಾರಿ. ಏಷ್ಟೋ ಕುಟುಂಬಗಳು ಈ ಉದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾವೆ. ಅವರಿಗೊಂದು ಪರ್ಯಾಯ ವ್ಯವಸ್ಥೆ ಆಗಿ, ಪಟಾಕಿಯ ಬಳಕೆ ಕ್ರಮೇಣ ನಿಂತು, ಮುಂಬರುವ ದೀಪಾವಳಿಗಳು ಕೇವಲ ಹಣತೆ ದೀಪಗಳ 'ಗ್ರೀನ್ ದೀಪಾವಳಿ' ಆಗಲಿ ಎಂಬುದು ನನ್ನ ಆಶಯ.

ಲೇಖಕರ ಕಿರುಪರಿಚಯ
ಶ್ರೀ ಸುಧನ್ವ ಉಪಾಧ್ಯ

ಮೂಲತಃ ಮಂಗಳೂರಿನವರಾದ ಇವರು, ಪ್ರಸ್ತುತ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿ. ಶಾಸ್ತ್ರಿಯ ಸಂಗೀತ ಹಾಡುಗಾರಿಕೆ ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಶುಕ್ರವಾರ, ನವೆಂಬರ್ 27, 2015

ಅಂತರಂಗದ ಒಳಹೊಕ್ಕಾಗ

ನೆನಪುಗಳ ದೋಣಿಯಲಿ
ಸ್ವಾರ್ಥದ ಕಮರಿನಲಿ
ಮತ್ತದೇ ನೆನಪುಗಳು
ತೇಲುತಿವೆ ಕಣ್ಣೆದುರು.

ಹೊರ ಜಗದ ಮೋಹದ ಸುಳಿಯಲಿ
ಬದುಕು ಪ್ರಹಸನವಾಗಿದೆ ಇಂದು
ಒಳಗೆ ಇಣುಕಿ ನೋಡಿದರೆ
ತಿಳಿಯುವುದು ತಿರುಳಿಲ್ಲ ಎಂದು.

'ನೀ ನನ್ನವ, ನಾ ನಿನ್ನವ'
ಬರಿಯ ಮಾತಿನ ನುಡಿಗಳಾದವ?
ಇಷ್ಟು ದಿನ ಬೆರೆತರೂ, ನಾವು
ಏಕೆ ಅರಿತಿಲ್ಲ ನಮ್ಮ ಅಂತರಂಗವ?

ತುಕ್ಕು ಹಿಡಿದ ಮನದ
ಕವಾಟಗಳೆರಡು ಬಡಿದು, ಎಚ್ಚರಿಸಿದೆ!
ಬಾಹ್ಯ ಕಾಣುವುದು
ಬರಿಯ ಬೆರಗು
ಅಂತರಂಗದ ಒಳಹೊಕ್ಕಾಗ
ಕಾಣುವುದೇ ನಿಜವಾದ ಅರಿವು!

ಲೇಖಕರ ಕಿರುಪರಿಚಯ
ಕುಮಾರಿ ಮಾನಸ, ಎಂ. ಆರ್.

ಮೈಸೂರು ಜಿಲ್ಲೆಯವರಾದ ಇವರು ಪ್ರಸ್ತುತ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾದಂಬರಿ ಓದುವುದು, ಚಿತ್ರಕಲೆ ಹಾಗೂ ಹಾಡುಗಾರಿಕೆ ಇವರ ಹವ್ಯಾಸಗಳು.

Blog  |  Facebook  |  Twitter

ಗುರುವಾರ, ನವೆಂಬರ್ 26, 2015

ಜೀವನ ಪ್ರೀತಿ

ಈ ನಮ್ಮ ಕಾಲೇಜಿನಲ್ಲಿ ಅನುಭವಗಳಿಗೆ ಬರವೇ ಇಲ್ಲಾ... ಎಷ್ಟು ಕಲೀಲಿಕ್ಕೆ ನಮ್ಕೈಲಿ ಆಗುತ್ತೋ ಅಷ್ಟನ್ನು ಕಲೀಬಹುದು. ಅಂದರೆ, ಬರೀ ವಿಷಯಾಧಾರಿತ ಮೌಲ್ಯಗಳೇ ಅಲ್ಲ; ಅದಕ್ಕೂ ಮಿಗಿಲಾಗಿ (ಪಿಲ್ಮಿ ರೀತೀಲಿ ಹೇಳೋದಾದ್ರೆ 'ಅದಕ್ಕೂ ಮ್ಯಾಲೆ') ವಿವಿಧ ರೀತಿಯ ಅನುಭವ, ಜೀವನ ಪ್ರೀತಿ, ಜೀವನ ಕ್ರಮ, ಸ್ತರಗಳನ್ನ ಕಾಣಬಹುದು.

ಕಾಲೇಜಿನ ಪಠ್ಯವನ್ನ ಬೋಧಿಸೋ ಕಟ್ಟಡಗಳನ್ನು ಬಿಟ್ಟರೆ ಆವರಣದಲ್ಲಿ ಎಡಕ್ಕೆ ನಮ್ಗಳ ಹಾಸ್ಟೆಲ್. ಭೂತ ಬಂಗಲೆಗಳ್ಹಾಗೆ ಸಾವಿರಾರು ವಿದ್ಯಾರ್ಥಿಗಳನ್ನ ಹೊಂದಿರೋ ಗುಹೆಗಳು. ಪ್ರತಿಯೊಂದು ಬ್ಲಾಕ್ನಲ್ಲೂ ಕೊನೆಯ ತುದಿಗೆ ಸ್ನಾನದ ಕೋಣೆಗಳು, ವಾಷ್ರೂಂಗಳು. ಅಲ್ಲಲ್ಲಿ ಕಟ್ಟಡಗಳ ಸ್ತಂಭಗಳಿಗೆ ಇಟ್ಟಿರೋ ನೀಳ್ಗನ್ನಡಿಗಳು ಹುಡುಗರ ಅಂಗೋಪಾಂಗಗಳ ಕಾಳಜಿಗೋ, ಕೇಶವಿನ್ಯಾಸಕ್ಕೋ ಮತ್ತೊಂದಕ್ಕೋ ತುಂಬಾ ಉಪಕಾರಿ.

ಹಾಂ... ಈ ನಡುವೆ ಆ ಆವರಣದಲ್ಲಿ ವಾತಾವರಣದ ಮುನ್ನುಡಿಗೆ ಬಾರದೇ ಹಿನ್ನುಡಿಯಾಗಿಯೇ ಇದ್ದು, ಆ ಮಗ್ಗಲುಗಳಲ್ಲೇ ಹಿಂದೆ ಸರಿದು ಕೊನೆಗೊಂದು ದಿನ ಹೇಳಹೆಸರಿಲ್ಲದವರಾಗಿ ನಶಿಸಿಹೋಗುವ ಈ ಮಂದಿ ನಮ್ಮ ಕಾಲ ಚಪ್ಪಲಿ, ಬೂಟುಗಳ ಧೂಳನ್ನು ನಾಜೂಕಾಗಿ ಗುಡಿಸುತ್ತಾ, ಶೌಚಾಲಯವನ್ನ ಶುಭ್ರವಾಗಿ ತೊಳೆಯುವವರು. ಅವರು ತಮ್ಮ ಶೋಚನೀಯ ಸ್ಥಿತಿಯನ್ನು ಎಂದಿಗೂ ತೆರೆಗೆ ತರದ ಜನ. ತಂದರಾದರೂ ಏನಾದರೂ ಬದಲಾದೀತೆ? ಬದಲು ಮಾಡುವವರು ಯಾರಾದರೂ ಬರುವರೇ? ಇಲ್ಲ.

ಶೌಚಾಲಯವನ್ನ ಶುಭ್ರ ಮಾಡಲು ಸದಾ ಒಬ್ಬ ಮುದುಕ ಬರುತ್ತಿದ್ದ. ಸುಮಾರು 65ರ ಮೇಲಿನ ವಯಸ್ಸು. ಬಂದು ತನ್ನ ಪಾಡಿಗೆ ತಾನು ಕೆಲಸ ಮುಗಿಸಿ ಹಿಂದಿರುಗುತ್ತಿದ್ದ. ನಾವೇನಾದರೂ ಮುಗಳ್ನಕ್ಕರೆ ಒಂದು ನಗೆ ಬಿಸಾಕಿ ಹೋಗುತ್ತಿದ್ದ. ಹೀಗೆ ನಕ್ಕಾಗ ಕೆಲವು ಸಲ ನಮ್ಮ ರೂಮಿಗೂ ಬಂದು 'ಈ ದಿನ ನಾ ಬಂದಿದ್ದೆ ಅಂತ ಬರೆದು ರುಜು ಮಾಡಿ' ಎನ್ನುತ್ತಿದ್ದ.

ಹೀಗೆಯೇ ಒಂದು ದಿನ "ಅಜ್ಜಾ, ನಿಮ್ಮದು ಯಾವೂರು?" ಎಂದೆ.
"ನಮ್ಮದು ತುಂಬಾ ದೂರದ ಊರು.. ಅಲ್ಲಿಂದ ಬಂದಿದೀನಿ. ಮೂಲತಃ ಆಂಧ್ರ. ಈ ಕಡೆ ಬಂದು ಸುಮಾರು 25-30 ವರ್ಷ ಆಯ್ತು".. ನಿರುತ್ಸಾಹದಿಂದ ಉತ್ತರಿಸಿದ.
"ಅಜ್ಜಾ, ಮನೇಲಿದ್ಬಿಡ್ರೀ. ಯಾಕೆ ಈ ವಯಸ್ಸಿನಲ್ಲೂ ಸುಮ್ನೆ ಇಷ್ಟೊಂದು ತ್ರಾಸ ತಗೋತಿರಲ್ಲಾ? ಈ ನಿತ್ರಾಣ ವಯಸ್ಸಲ್ಲೂ...".. ಅನುಕಂಪದಿಂದ ನುಡಿದೆ.
"ಮಗಾ, ನಿಮ್ಮಪ್ಪ ಅಮ್ಮನನ್ನ ಚೆನ್ನಾಗಿ ನೋಡಿಕೋ" ಅಂತಂದು ಕ್ರೂರ ಮನಸ್ಸಿನ ತನ್ನ ಮಗನಂತೆ ಆಗಬೇಡ ಅಂತ ಹೇಳಿ ಹೊರನಡೆದ. ಮ್ಲಾನತೆಯ ಮೌನ ಆವರಿಸಿತು.

ಅದೇ ದಿನದ ರಾತ್ರಿ ಎಂದಿನಂತೆ ಬಂದ ಅಡುಗೆಮನೆ ಕೆಲಸದಾಳು ತನ್ನ ಹಾಸಿಗೆ ಕಾಣಿಸದಿದ್ದದ್ದನ್ನ ಹುಡುಕುತ್ತಾ ಇರುವುದನ್ನು ಕಂಡು ನಾನು, ನನ್ ದೋಸ್ತಿ ಭರತ್ "ಯಾಕೆ? ಏನಾಯ್ತು?" ಅಂದಿದಕ್ಕೆ, "ಆ ನಾಯಿ ನನ್ನ ರಗ್ಗನ್ನ ಹೊಯ್ದಿದೆ.. ಎಲ್ಲಿ ಅಂತ ಹುಡುಕುತ್ತಾ ಇದೀನಿ" ಅಂದ. ಈತನದೂ ದಿನಾಲೂ ಹೀಗೆಯೇ ಮನೆಗೆ ಹೋಗದ ಕಾರಣ ಮಾತ್ರ ಗೊತ್ತಿಲ್ಲದ್ದು.

ಇನ್ನೊಬ್ಬ ಅಜ್ಜಿ.. ಅವಳಿಗೂ ಸುಮಾರು 70ರ ಆಸುಪಾಸು. ಇಲ್ಲಿನ ಕೆಲ ಹುಡುಗರ ಬಟ್ಟೆ ಒಗೆದುಕೊಡುವುದು, ಮೆಸ್ಸಿನ ಕೆಲಸ. ಅವಳಿಗೂ ಒಬ್ಬ ಮಗನಿದ್ದಾನೆ. ಆದರೇ??

ಹೀಗೆ ಸುಮಾರು ಸಂಖ್ಯೆಯ ಕೆಲಸಿಗರು.. ಹುಡುಗಿಯರ ಹಾಸ್ಟೆಲ್ಲು, ಪಿ. ಜಿ. ಗಳು, ಡಿಪ್ಲೊಮಾ, ಡಿಪಾರ್ಟ್ಮೆಂಟ್ಗಳಲ್ಲಿ ಹೀಗೆ ಎಲ್ಲರನ್ನೂ ಎಣಿಸಿದರೆ ತುಂಬಾ ಲೆಕ್ಕಾಚಾರ. ಇನ್ನು ರಾಜ್ಯ, ದೇಶದ ಕಾಲೇಜುಗಳಲ್ಲಿ ಎಷ್ಟಿರಬಹುದು? ತುಂಬಾ ಜನ..
ಚಿತ್ರ ಕೃಪೆ: ಗೂಗಲ್
ಯಾರದೋ ಎಂಜಲು ತಟ್ಟೆಗಳನ್ನ, ಕಸ, ಶೌಚ ತೊಳೆಯುವುದು ಇತ್ಯಾದಿ ಕೆಲಸ ಮಾಡುವ ಎಲ್ಲ ವರ್ಗಗಳ ಜನರೂ ನಮಗಾಗಿ ದುಡಿಯುತ್ತಿರುವವರು. ಇವರೇನು ಸುಮ್ನೆ ಮಾಡ್ತಾರೇನು? ದುಡ್ಡು ಕಟ್ಟಲ್ವೇನು? ಎಂಬ ಉಡಾಫೆ ಮಾತುಗಳು ಬೇಡ. ಅಂತಹವರ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕ್ಕೊಳೋಣ. ನಾವು ಹೇಳುವ ಒಂದು ಧನ್ಯವಾದಿಂದ ಅವರ ಆ ಕ್ಷಣದ ನಗು, ಸಂತೋಷ ಅನಾವರಣಗೊಳ್ಳುವುದು ಎಂದರೆ ಅತಿಶಯೋಕ್ತಿಯೇನಲ್ಲ. ನನ್ನ ಗೆಳತಿ ಪೂಜ, "ಹೌದು ರಾಮ್. ಇವರೆಲ್ಲರೂ ನಮ್ಮ ಸಮಾಜದ ಮುಖ್ಯ ಭಾಗಗಳು. ಇವರೆಲ್ಲಾ ತಮ್ಮ ಹೊಟ್ಟೇಪಾಡಿಗಾಗಿ ಬೇರೆಯವರ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಇವರೆಲ್ಲಾ ತಮ್ಮ ನೋವು-ನಲಿವು, ಹತಾಷೆಗಳನ್ನ ತಾವೇ ನುಂಗಿ ಕೆಲಸ ಮಾಡುವರು" ಎಂದಳು ಪೂಜ್ಯಭಾವದಿಂದ.

ಹೌದು, ಮಾನವೀಯ ಗುಣ, ಜೀವನ ಪ್ರೀತಿ ಇಲ್ಲದೆ ಹೋದರೆ ಮಾನವ ಕುಲಕ್ಕೆ ಲಾಯಕ್ಕಾಗದವರಾದೇವೂ..!!

ಲೇಖಕರ ಕಿರುಪರಿಚಯ
ಶ್ರೀ ರಾಮಾಂಜಿನಯ್ಯ, ವಿ.

ಕೋಲಾರ ಮೂಲದವರಾದ ಇವರು, ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿ. ಪುಸ್ತಕ ಓದುವುದು, ಕಥೆ- ಕವನ ಬರೆಯುವುದು, ಪಕ್ಷಿಗಳ ವೀಕ್ಷಣೆ, ಸಂಚಾರ, ಚಿತ್ರ ಬಿಡಿಸುವುದು ಹಾಗೂ ಎಲ್ಲ ತರದ ಜನರನ್ನ ಪ್ರೀತಿಸುವುದು ಇವರ ಹವ್ಯಾಸ.

Blog  |  Facebook  |  Twitter

ಬುಧವಾರ, ನವೆಂಬರ್ 25, 2015

ನನ್ನ ಊರು ನನ್ನ ನೆನಪು

ಕಡಲ ಚಾಪೆಯನ್ನು ಎರಡು ಸುತ್ತು ಮಡಚಿದಾಗ ಹುಟ್ಟಿದ್ದೇ ನನ್ನೂರು. ಸದಾ ಪೂರ್ವದ ಅನಂತ ದೂರದವರೆಗೂ ಚಾಚಿರುವ ಶರಧಿಯಿಂದ ಬೀಸಿ ಬರುವ ತಂಗಾಳಿಯನ್ನು ಮೆಲ್ಲುತ್ತಾ, ಪಶ್ಚಿಮ ಘಟ್ಟವನ್ನು ಮೋಡದ ಕಡಲು ತಬ್ಬಿದ್ದನ್ನು ಕಣ್ತುಂಬಿಕೊಳ್ಳುತ್ತಾ, ಸಂಗಾತಿಯನ್ನು ಮೆಚ್ಚಿಸಲೆಂದೇ ಟೊಂಗೆಯ ಮೇಲೆ ಕೂತು ಮುಕ್ತಕಂಠದಿಂದ ಹಾಡುತ್ತಿರುವ ಹಕ್ಕಿಯ ಲವಲವಿಕೆಯ ಹಾಡು ಕೇಳುತ್ತಾ, ಮೊರೆದು ಬಂದ ಅವಿಶ್ರಾಂತ ನದಿಯು ಕಡಲ ಒಡಲನ್ನು ಸೇರುವ ನಿಶ್ಚಲ ಮೌನದಲ್ಲಿ ತಾನೂ ಸೇರಿಕೊಳ್ಳುತ್ತಾ, ವಿಸ್ಮಯ ದಿಗಂತದಲ್ಲಿ ಮೆಹೆಂದಿ ಹಚ್ಚಿದಂತೆ ಬಂದ ಕಡುಕೆಂಪು ಬಣ್ಣವನ್ನು ಸವಿಯುತ್ತಾ, ಯಾವಾಗಲೂ ಉಲ್ಲಾಸಕರ ವಾತಾವರಣದ ಮುಖಮುದ್ರೆಯಲ್ಲಿ ದಿನ ಪ್ರಾರಂಭ ಮಾಡುತ್ತಾ, ಪ್ರಕೃತಿಯ ಅನವರತ ಸೋಜಿಗಗಳಿಗೆ ಬೆರಗಾಗಿ, ಶಿಳ್ಳೆ ಹೊಡೆಯುತ್ತಾ, ತನ್ನದೂ ಒಂದು ಪಾಲಿರಲಿ ಎಂದು ಜೀಕುತ್ತಾ, ಬೆಟ್ಟದ ಮೇಲಿನ ದೇವಾಲಯದ ದೊಡ್ಡ ಘಂಟೆಯ ಶಬ್ದವನ್ನು ಆಲಿಸುತ್ತಾ, ಹಸಿರ ಚಾದರ ಹೊದ್ದು, ಅದನ್ನೇ ತನ್ನ ಉಸಿರಾಗಿಸಿಕೊಂಡಿರುವುದು ನನ್ನ ಊರು. ಇಲ್ಲಿ ಭಣ-ಭಣ ಮಧ್ಯಾಹ್ನವು ಬಹು ಸಲೀಸಾಗಿ ಕಳೆದುಹೋಗುತ್ತದೆ. ಪುಟ್ಟ ಊರಾದರೂ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಜಲಧಾರೆಗಳ ಕಂಡಾಗ ಎಂಥವರನ್ನೂ ಮೋಹಿತರನ್ನಾಗಿ ಮಾಡುವ ಭವ್ಯ ದೃಶ್ಯಗಳ ಪರದೆ . . . ರಾತ್ರಿಯ ಪ್ರಶಾಂತ ಮೌನದಲ್ಲೇ ಜೋಗುಳ ಹಾಡಿ ಮಲಗಿಸಿಬಿಡುತ್ತೆ. ದಾರಿಯುದ್ದಕ್ಕೂ ಸಿಗುವ ತೆಂಗು-ಕಂಗುಗಳ ಸಾಲು ಕಂಡರೆ ನನ್ನೂರು ಸೊಬಗಿನ ತೇರು ಎಂದೆನಿಸುತ್ತದೆ. ಆಲದ ಮರದ ನೆರಳಲ್ಲಿ ಕೂತಾಗ ಆಗುವ ಹಿತವಾದ ಅನುಭವ ಎಲ್ಲವನ್ನೂ ಮರೆಸಿಬಿಡುತ್ತದೆ. ಕಾಲ್ದಾರಿಯಲ್ಲಿ ಅರಳಿದ ಮಲ್ಲಿಗೆಯ ಸುಗಂಧ ಹೀರಿಕೊಂಡಾಗ, ಬದುಕಿನಲ್ಲಿ ಅರಿಯಬೇಕಾದ ಎಷ್ಟೋ ಅಂಶಗಳ ನಿಟ್ಟುಸಿರು. ಕಡಲ ತಟದಲ್ಲಿ ಚೈತನ್ಯದ ಅಲೆಗಳ ಕಾಣುತ್ತಾ, ನಿಂತಿರುವ ಅಪರಂಜಿ ಚಿನ್ನದಂತಹ ಊರು-ನನ್ನೂರು. ಇಡೀ ಪ್ರಕೃತಿಯು ಒಂದು ಸಹಜ ಸುಂದರ ಕಥೆಯಾದರೆ, ನನ್ನೂರು ಅದರೊಳಗೆ ಬರುವ ಚೆಂದದ ಉಪಕತೆ.

ಅದೆಷ್ಟೋ ಜನರು ಹಲವಾರು ಕಾರಣಗಳಿಂದಾಗಿ ತಮ್ಮ ಊರು ಬಿಟ್ಟು ಹೋಗಿ ವಿದ್ಯಾಭ್ಯಾಸಕ್ಕೋ, ಕೆಲಸಕ್ಕೋ ಅಥವಾ ಅನಿವಾರ್ಯ ಕಾರಣಕ್ಕೋ ಅಲ್ಲೇ ಉಳಿದುಕೊಂಡಾಗ, ತಮ್ಮ ಊರಿನ ಮೇಲಿನ ಪ್ರೀತಿ ಅದನ್ನು ಅಗಲಿದ ಅರೆಕ್ಷಣಕ್ಕೆ ಮನಸ್ಸನ್ನು ಅಲ್ಲೋಲ ಕಲ್ಲೋಲವಾದ ಸಮುದ್ರದಂತೆ ಮಾಡಿಬಿಡುತ್ತದೆ. ಆ ಮೊನಚು ನೆನಪುಗಳು ಹುಟ್ಟೂರನ್ನು ಸೇರುವ ಅದಮ್ಯ ಹಂಬಲಕ್ಕೆ ಮೊಂಬತ್ತಿಯಾಗುತ್ತವೆ. ಬಾಲ್ಯದಲ್ಲಿ ನಾ ನೆಟ್ಟ ಸಂಪಿಗೆ ಗಿಡ ದೊಡ್ಡದಾಗಿ ಸೂಸಿದ ಕಂಪು ದೂರದಲ್ಲಿರುವ ನನ್ನ ಮೂಗಿಗೆ ಬಂದು ಬಡಿದಾಗ, ಅಂದೆಂದೊ ಮುಂಜಾವಿನಲ್ಲಿ ಕೇಳಿದ ಹಕ್ಕಿ ಹಾಡು, ಗಿಜುಗುಡುವ ಗಲಾಟೆಯ ನಡುವೆಯೂ ಕಿವಿಯಲ್ಲಿ ಇಂಪಾಗಿ ಕೇಳಿಸುತ್ತಿರುವಾಗ ನನ್ನೂರು ನನ್ನನ್ನು ತುಂಬಾನೇ ಕಾಡಿಬಿಡುತ್ತದೆ. ಪ್ರತಿಯೊಬ್ಬರೂ ಬಾಲ್ಯವೆಂಬ ಅಮೋಘ ಘಟ್ಟವನ್ನು ಹತ್ತಿಯೇ ಬಂದಿರುತ್ತೇವೆ. ಅದನ್ನು ಕಳೆದ ಆ ಊರನ್ನು, ಪರಿಸರವನ್ನು ನೆನೆದಾಗ ಮೈಮನಗಳಲ್ಲಿ ಹರುಷದ ಬುಗ್ಗೆ ಹುಟ್ಟುತ್ತದೆ. ಸ್ನೇಹಿತರೆಲ್ಲಾ ಮನೆಯ ಅಂಗಳದಲ್ಲಿ ಕುಳಿತು ಹುಣ್ಣಿಮೆಯ ಬೆಳದಿಂಗಳಲ್ಲಿ ಊಟಮಾಡುತ್ತಿದ್ದ ಆ ಸಂತಸದ ಕ್ಷಣ ಈಗ ಕಪ್ಪು-ಬಿಳುಪು ಚಿತ್ರವಾಗಿ ಮನದಲ್ಲಿ ಅಚ್ಚೊತ್ತಿ ನಿಂತಿದೆ. ನಿಂತೂ ನಿಲ್ಲದಂತೆ ಎರಡೇ ಉಸಿರಿಗೆ ಬೆಟ್ಟ ಹತ್ತುತ್ತಿದ್ದ ಬಲ, ಸಮುದ್ರದ ದಂಡೆಯ ಮೇಲೆ ಮರಳಿನಿಂದ ಕಟ್ಟುತ್ತಿದ್ದ ಮನೆ, ಅಲೆಗಳ ಹೊಡೆತಕ್ಕೆ ಕೊಚ್ಚಿಹೋದಾಗ ಮತ್ತೆ ಕಟ್ಟಲು ಉಕ್ಕುತ್ತಿದ್ದ ಛಲ ಇಂದು ಬದುಕಿನ ಹೋರಾಟದಲ್ಲಿ ಸೋತಾಗ ಬರುತ್ತಿಲ್ಲವೆಂದು ವೇದನೆಯಾಗುತ್ತದೆ. ವಾಸ್ತವದಲ್ಲಿ ಎಲ್ಲಿಗೋ ಹೊರಟಿರುವ ನನಗೆ, ನನ್ನೂರಿನ ದಾರಿ ಹಿಡಿಯುವ ಉತ್ಸಾಹ ಕೊನರುತ್ತದೆ. ಅದರ ಓಜಸ್ಸು, ಎಂಥದೆಂದರೆ ಒಂದು ಘಳಿಗೆ ಸ್ವಪ್ನದಲ್ಲೂ ಮೂಡಿ ಕುಪ್ಪಳಿಸಿ ಕುಣಿದು ಪಲ್ಲಕ್ಕಿ ಉತ್ಸವದೊಂದಿಗೆ ಕರೆದೊಯ್ಯಲು ಬಂದು ನಿಂತಿರುತ್ತದೆ. ತಮಾಷೆ ಎಂಬಂತೆ ಮನದಲ್ಲೂ ಊರಿಗೆ ಹೊರಡುವ ದಿಬ್ಬಣ ತಯಾರಾಗಿರುತ್ತದೆ. ಇದ್ದಕ್ಕಿದ್ದ ಹಾಗೆ ನನ್ನ ಮನದ ಬಾಗಿಲು ಬಡಿಯದೇ ಸೀದಾ ಒಳಗೆ ಪ್ರವೇಶಿಸಿ ಕರೆಯುತ್ತದೆ. ಹಲವಾರು ವರ್ಷಗಳ ನಂತರ ನನ್ನೂರನ್ನು ಸೇರ ಹೊರಟಾಗ ಖುಷಿಯ ಚಿಲುಮೆ ಒಮ್ಮೆಗೇ ಚಿಮ್ಮಿಬಿಡುತ್ತದೆ. ಆ ಹೊತ್ತಿಗೆ ನನ್ನೂರು ಪದಗಳಲ್ಲಿ ವರ್ಣಿಸಲಾಗದ ಚೆಂದದ ಕವನವಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಸೂರ್ಯೋದಯವನ್ನು ನೋಡಿರುವ ನನಗೆ ಇಲ್ಲಿನ ಬೆಟ್ಟದ ತೆನೆಗಾಳಿಯನ್ನು ಉಸಿರಾಡುತ್ತಾ ಕಣ್ತುಂಬಿಕೊಂಡ ಪರಿ ಬಾಡೂಟ ಬಡಿಸಿದೆ. ಮುಸ್ಸಂಜೆಯ ಹೊತ್ತಲ್ಲಿ ಕಡಲ ಅನಂತ ದೂರದಲ್ಲಿ ಮುಳುಗುವ ಕೆಂಪು ಗೋಲಾಕಾರದ ಸೂರ್ಯನ ಕಂಡಾಗ ಮನಸ್ಸಿಗೆ ಆದ ಹಿತ, ನೆಮ್ಮದಿ ಈಗಿರುವ ಊರಲ್ಲಿ ಸಿಗದಾಗಿದೆ. ಮಕರಂದವನ್ನು ಅರಸುತ್ತಾ ಸುತ್ತುತ್ತಿರುವ ಪಾತರಗಿತ್ತಿಯಾಗಿಬಿಟ್ಟಿದ್ದೇನೇನೋ ಎಂದೆನಿಸುತ್ತದೆ. ನನ್ನೂರಿನ ತೋಟದ ಮಾವಿನ ಮರದ ಕೊಂಬೆಗೆ ಉಯ್ಯಾಲೆ ಕಟ್ಟಿ ಆಡಬೇಕೆಂಬ ಆಸೆ ಮನದಲ್ಲಿ ಗುಲ್ಲೆಬ್ಬಿಸುತ್ತದೆ.

ಮನದ ಭಾವಗಳ ಭೋರ್ಗರೆತ, ನೆನಪುಗಳು ವರ್ಷಧಾರೆ
ಚಿತ್ರ : ಅಭಿಷೇಕ್ ಪೈ
ಆಗಾಗ ಇದಿರಾಗುವ ನಿಸ್ಸಹಾಯಕ ಸ್ಥಿತಿ, ಗೊಂದಲ, ಹತಾಶೆ, ನಿರಾಶೆ, ತಾಪತ್ರಯಗಳಿಂದ ಬಿಡುಗಡೆಯನ್ನು, ಶಾಂತತೆಯನ್ನು ಬಯಸಿದಾಗ ಕೂಡಲೇ ನನ್ನೂರಿನ ಕಡೆಗೆ ಮನಸ್ಸು ಹಾಯುತ್ತದೆ. ನೆನಪಿನ ಬತ್ತಿ ತಂತಾನೇ ಬಿಚ್ಚಿಕೊಳ್ಳುತ್ತದೆ. ಎಣಿಸಲಾರದಷ್ಟು ನೆನಪುಗಳು ಮನದ ಪರದೆಯಲ್ಲಿ ಮೂಡುತ್ತವೆ. ನೆನೆದಾಗ ಮುಖದಲ್ಲಿ ಮುಗುಳ್ನಗೆ ಹುಟ್ಟುತ್ತದೆ. ಮನದ ಅಕ್ಷಯ ಪಾತ್ರೆಯಲ್ಲಿ ತುಂಬಿಕೊಂಡಿರುವ ಆ ನೆನಪುಗಳು ತೆರೆದಷ್ಟೂ ಉಕ್ಕುತ್ತಾ ಹೋಗುತ್ತವೆ. ನೆನಪುಗಳು ಹಾಗೆಯೇ ಅಲ್ವಾ, . . ಗಾಳಿಗೆ ಬಿಡಿಸಿಟ್ಟ ಪುಸ್ತಕದ ಹಾಳೆಗಳಂತೆ ಆಗಾಗ ಒಂದೊಂದಾಗಿ ಎದ್ದು ಹಾರಿ ಮತ್ತೆ ಮಡಚಿಕೊಳ್ಳುತ್ತವೆ. ಎಲ್ಲವೂ ಮಧುವಿನಷ್ಟೇ ಸಿಹಿ. ಬಾಲ್ಯದಲ್ಲಿ ಆಡಿದ ಮೈದಾನ, ಈಜು ಕಲಿತ ಹೊಳೆ, ಶಾಲೆಗೆ ನಡೆದು ಹೋಗುತ್ತಿದ್ದ ದಾರಿ, ಗದ್ದೆಯ ಅಂಚು, ನೇರಳೆ ಹಣ್ಣಿನ ಮರ, ಬಾಳೆ ತೋಟ, ಕಾಡಿನ ಸೆರಗು ನೆನಪಾದಾಗ ಮತ್ತೆ ಆ ಹುಡುಗಾಟದ ಬಾಲ್ಯದ ಲೋಕಕ್ಕೆ ಹೋಗೋಣವೆಂದು ಮನಸ್ಸು ಹಪಹಪಿಸುತ್ತದೆ.

ನನ್ನೂರಿನ ಕಡಲ ಅಲೆಗಳ ಸಪ್ಪಳ ಇನ್ನೆಲ್ಲೋ ಇರುವ ನನ್ನ ಕಿವಿಗೆ ಬಂದು ಅಪ್ಪಳಿಸುತ್ತದೆ. ಅಂದೊಮ್ಮೆ ನಾ ನೆಟ್ಟ ಸಂಪಿಗೆ ಗಿಡದ ಮೇಲೆ ವಿಪರೀತ ಕಾಳಜಿ ಬಂದುಬಿಡುತ್ತದೆ. ಮನೆಯಲ್ಲಿ ಹುಟ್ಟಿ ಬೆಳೆದ ಹಸುವಿನ ಮೇಲೆ, ಅದರ ಕರುವಿನ ಮೇಲಿನ ಪ್ರೀತಿ ಕರೆಯುತ್ತದೆ. ನನ್ನೂರನ್ನು ಸೇರಿ ಬಿಡುವ ಉತ್ಸಾಹದಲ್ಲಿ ಬಂದಿಳಿದ ನನಗೆ ನನ್ನೂರು ಅದೆಷ್ಟೋ ಬದಲಾಗಿದೆ ಅನ್ನಿಸಿಬಿಟ್ಟಿದೆ. . . . ಮನೋಹರವಾದ ಪ್ರಕೃತಿ, ಹಕ್ಕಿಯ ಸೊಲ್ಲು, ಭತ್ತದ ಗದ್ದೆ, ಅಡಿಕೆ ತೋಟ, ಎಲ್ಲ ಕಾಣದಾಗಿ ಆಧುನಿಕತೆಯ ನಿಮಿತ್ತ ಹೇಳಿಕೊಂಡು ಮರೆಯಾಗಿಸಿದ್ದಾರೆ. ನನ್ನೂರು ತನ್ನತನವನ್ನು ಕಳೆದುಕೊಂಡು ಬಿಟ್ಟಿದೆ. ಮಳೆಗಾಲದಲ್ಲಿ ಹೆಂಚಿನ ಮನೆಯಲ್ಲಿ ಇರುವುದೇ ಒಂದು ಸಡಗರ. ಇಂದು ಸಿಮೆಂಟಿನಿಂದ ಕಟ್ಟಿದ ಚೌಕುಳಿ ಮನೆಗಳೇ ತಲೆಯೆತ್ತಿವೆ, ಎತ್ತುತ್ತಲೇ ಇವೆ. ನನ್ನೂರು ಮೂಕವಾಗಿ ಕೊರಗುತ್ತಿದೆ. ಬಾಲ್ಯದ ನೆನಪುಗಳೊಂದಿಗೆ ಮತ್ತಷ್ಟು ಅಕ್ಕರೆಯ ನೆನಪುಗಳನ್ನು ಮಡಿಲಿನಲ್ಲಿ ತುಂಬಿಕೊಂಡು ಹೋಗಲು ಬಂದ ನನಗೆ ನಿರಾಸೆ. ನನ್ನ ಊರು ಬೇರಾರದ್ದೋ ಊರಾಗಿದೆ ಎಂದು ಅನಿಸಲು ಶುರುವಾಗಿದೆ. ಬದಲಾಗುವ ಮುಂಚೆಯೇ ಈ ಊರಲ್ಲಿ ಹುಟ್ಟಿ ಬೆಳೆದ ನಾನೇ ಭಾಗ್ಯವಂತ. ನನ್ನ ಊರಿನ ನನ್ನ ನೆನಪುಗಳು ನನ್ನಿಂದ ಎಂದಿಗೂ ಮಾಸಿ ಹೋಗಲಾರವು.

ಲೇಖಕರ ಕಿರುಪರಿಚಯ
ಶ್ರೀ ಅಭಿಷೇಕ್ ಪೈ, ಸಾಬ್ರಕಟ್ಟೆ

ಮೂಲತಃ ಕರಾವಳಿಯವರಾದ ಇವರು, ಪ್ರಸ್ತುತ ಪೇಡಾ ನಗರಿ ಧಾರವಾಡದಲ್ಲಿ ಕೃಷಿ ಪದವಿಯ ಅಭ್ಯಾಸದೊಂದಿಗೆ ಬಿಡುವಿನ ವೇಳೆಯಲ್ಲಿ ಹಾಳೆಗಳ ಮೇಲೆ ಅಕ್ಷರವನ್ನೂ ಬಿತ್ತುತ್ತಿದ್ದಾರೆ. ಛಾಯಾಗ್ರಹಣ ಕೂಡ ಇವರ ಹವ್ಯಾಸದ ಕಾಯಕವಾಗಿದೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 24, 2015

ವರ್ಷಧಾರೆಯೇ ನಿನ್ನೊಳಿದೆ ಎನ್ನ ಮನಸು..

ಭೋರ್ಗರೆವ ಜಡಿಮಳೆಯ ರಭಸಕ್ಕೆ
ಮನದ ಹಳೆಯ ಕೊಳೆ ತೊಳೆದು ಮರು ಜೀವ ಬಂದಂತಿತ್ತು
ಗುಡಿಸಲಂಚಿನಲ್ಲಿ ನಿಂತು ನಿನ್ನ ಆರ್ಭಟವನ್ನು ನೋಡುತ್ತಿದ್ದರೆ
ಬೇರೆಲ್ಲ ಶಬ್ದಗಳನ್ನು ಅಡಗಿಸುವ ನಿನ್ನ ಘರ್ಜನೆಯನ್ನು ಕೇಳುತ್ತಿದ್ದರೆ
ಭೂತ-ಭವಿಷ್ಯಗಳ ಪರಿವೆಯೇ ಇಲ್ಲದಂತಿತ್ತು ಮನ.

ಸೂರಂಚಿನ ಜಡಿಮಳೆಗೆ ಮೈ ಒದ್ದೆಯಾಗಿರಲು
ನಿನ್ನ ಸೌಂದರ್ಯತೆಯ ಸ್ಪರ್ಶಕ್ಕೆ ಭಾವುಕತೆಯಿಂದ ಕಣ್ಣಂಚು ನೆನೆದಿರಲು
ನಿನ್ನ ಆರ್ದ್ರತೆಗೆ ಮನ ಕರಗಿತ್ತು
ಸಮಯ ಸರಿದಿರೆ ಆರ್ಭಟವು ದೂರಾಗಿ
ತುಂತುರು ಹನಿಗಳ ಚಿಟ ಪಟ ಸದ್ದು ಪಟಲ ಸ್ಪರ್ಶ ಮಾಡಿತ್ತು.

ನಿನ್ನ ಚುಂಬನಕ್ಕೆ ಹಸಿರೆಲೆಗಳು ನೃತ್ಯವಾಡುತಿರಲು
ಹಕ್ಕಿಗಳ ಚಿಲಿಪಿಲಿ ಎಲ್ಲೆಲ್ಲೂ ತುಂಬಿರಲು
ಬಣ್ಣ ಬಣ್ಣದ ಕಾಮನಬಿಲ್ಲು ಕಣ್ತುಂಬಿತ್ತು.


ಪ್ರಾಣಿ-ಪಕ್ಷಿ ಲೋಕಕ್ಕೆ ಜೀವಧಾರೆಯೆರೆವ
ಸಸ್ಯ ಪ್ರಪಂಚಕ್ಕೆ ಹಸಿರು ತೊಡಿಸುವ ನಿನ್ನ ಅಗಾಧ ಸಾಮರ್ಥ್ಯ
ಪ್ರಾಪಂಚಿಕ ಕೃತಕತೆಗಳನ್ನು ಮೀರಿ ಮೆಟ್ಟಿ ನಿಲ್ಲುವ
ನಿನ್ನ ಅದ್ಭುತ ಸೊಬಗನ್ನು ಬಣ್ಣಿಸಲು
ಸಾಲದು ಏಳೇಳು ಜನುಮ.

ಲೇಖಕರ ಕಿರುಪರಿಚಯ
ಶ್ರೀಮತಿ ಅಪರ್ಣ ಹೆಗಡೆ

ಮುಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಇವರು ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಣ್ಣ ಕಥೆ ಬರೆಯುವುದು, ಕಸೂತಿ ಹಾಗೂ ಪ್ರವಾಸ ಇವರ ಹವ್ಯಾಸಗಳು.

Blog  |  Facebook  |  Twitter

ಸೋಮವಾರ, ನವೆಂಬರ್ 23, 2015

ಮೊಟ್ಟೆ ಮಾಂಸಾಹಾರವಲ್ಲವೆ?

ಬಹುಶಃ ಎಲ್ಲರೂ ಆಗಾಗ 'ಮೊಟ್ಟೆ ಸಸ್ಯಾಹಾರ' ಎಂಬ ಹೇಳಿಕೆಗಳನ್ನು ಗಮನಿಸಿರುತ್ತಾರೆ. ಅದೇಕೆ ಹಾಗೆ ಹೇಳಲಾಗುತ್ತದೆ ಎಂದು ಸ್ಪಷ್ಟವಾಗಿ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಆ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ:

ಎಲ್ಲರಿಗೂ ತಿಳಿದಿರುವ ವಿಷಯ: ಯಾವುದೇ ಪ್ರಾಣಿ ಅಥವಾ ಪಕ್ಷಿಗಳಲ್ಲಿ ವಂಶಾಭಿವೃದ್ಧಿ ನಡೆಯಲು ಗಂಡಿನ ವೀರ್ಯಾಣು ಮತ್ತು ಹೆಣ್ಣಿನ ಅಂಡಾಣು ಸಂಯೋಗ ಹೊಂದಬೇಕು. ಈ ಸಂಯೋಗ ಸಾಮಾನ್ಯವಾಗಿ ಹೆಣ್ಣಿನ ಜನನೇಂದ್ರಿಯ ವ್ಯೂಹದಲ್ಲಿ ನಡೆಯುತ್ತದೆ. ಪ್ರಾಯಕ್ಕೆ ಬಂದ ಗಂಡಿನಲ್ಲಿನ ವೃಷಣಗಳಲ್ಲಿ ವೀರ್ಯಾಣುಗಳು ಸದಾಕಾಲ ಅನೇಕಾನೇಕ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತಿರುತ್ತವೆ. ಹಾಗೂ ಪ್ರಾಯಕ್ಕೆ ಬಂದ ಹೆಣ್ಣಿನ ಅಂಡಾಶಯದಲ್ಲಿ ನಿರ್ದಿಷ್ಠ ಸಮಯಕ್ಕೊಮ್ಮೆ ಸಾಮಾನ್ಯವಾಗಿ ಒಂದು ಅಂಡಾಣು ಬಿಡುಗಡೆಯಾಗುತ್ತದೆ.

ಹೀಗೇ, ಹೆಣ್ಣು ಕೋಳಿಯಲ್ಲಿಯೂ ನಿರ್ದಿಷ್ಠ ಸಮಯಕ್ಕೊಮ್ಮೆ ಅಂಡಾಣು ಬಿಡುಗಡೆಯಾಗಬೇಕಲ್ಲವೆ? ಹೌದು, ಹೆಣ್ಣು ಕೋಳಿಯಲ್ಲಿ ಪ್ರತಿದಿನವೂ ಒಂದೊಂದು ಅಂಡಾಣು ಬಿಡುಗಡೆಯಾಗುತ್ತದೆ. ಕೆಲವು ದಿನಗಳು, ಇದು ದಿನವೂ ನಡೆಯುತ್ತದೆ. ನಂತರ ಕೆಲವು ದಿನಗಳ ಬಿಡುವು ಇರುತ್ತದೆ. ಮತ್ತೆ ಕೆಲವು ದಿನಗಳು ದಿನವೂ ಬಿಡುಗಡೆಯಾಗುತ್ತದೆ. ಈ ಕ್ರಿಯೆ ಹೀಗೆಯೇ ಮುಂದುವರೆಯುತ್ತಿರುತ್ತದೆ.

ಪ್ರಾಣಿಗಳಲ್ಲಿ ನಡೆಯುವಂತೆ, ಮರಿ ಸ್ವತಂತ್ರ ಜೀವನ ನಡೆಸಲು ಶಕ್ತವಾಗುವವರೆಗೆ ತಾಯಿಯ ಗರ್ಭದಲ್ಲಿ ಅದರ ಬೆಳವಣಿಗೆ, ಕೋಳಿಗಳಲ್ಲಿ ನಡೆಯುವುದಿಲ್ಲ. ಬದಲಿಗೆ ಭ್ರೂಣದ ಸುತ್ತಲೂ ಕೆಲವು ದಿನಗಳವರೆಗೆ ಅದಕ್ಕೆ ಬೇಕಾಗುವಷ್ಟು ಅಹಾರ ಶೇಖರವಾಗಿ, ಅದರ ಸುತ್ತಲೂ ರಕ್ಷಣೆಗಾಗಿ ಕವಚ ನಿರ್ಮಾಣವಾಗಿ, ಹೊರಬರುವ ವ್ಯವಸ್ಥೆ ಇದೆ. ಇದನ್ನೇ ಮೊಟ್ಟೆ ಎನ್ನತ್ತೇವೆ. ಅಂಡಾಣುಗಳ ಬಿಡುಗಡೆಯ ಮೇರೆಗೆ ಕೋಳಿಗಳು ಕೆಲವು ದಿನಗಳು, ದಿನವೂ ಮೊಟ್ಟೆ ಇಡುತ್ತವೆ ಹಾಗೂ ಕೆಲವು ದಿನಗಳ ಬಿಡುವಿನ ನಂತರ ಮತ್ತೆ ಕೆಲವು ದಿನಗಳು ಇಡುತ್ತವೆ. ಈ ಮೊಟ್ಟೆ ಹೊರಬಂದು, ಅದಕ್ಕೆ ತಾಯಿ ತನ್ನ ದೇಹದ ಕಾವು ಕೊಟ್ಟು, ಸುಮಾರು 21 ದಿನಗಳ ನಂತರ ಮೊಟ್ಟೆ ಒಡೆದು ಮರಿ ಹೊರಬರುತ್ತದೆ. ಸರಿ, ಇದು ಅಂಡಾಣುವಿನೊಂದಿಗೆ ವೀರ್ಯಾಣು ಸೇರಿ ಭ್ರೂಣವಾಗಿದ್ದರೆ ನಡೆಯುವ ಕ್ರಿಯೆ. ಒಂದು ವೇಳೆ ಅಂಡಾಣುವಿನೊಂದಿಗೆ ವೀರ್ಯಾಣು ಸೇರದಿದ್ದರೆ ಏನಾಗುತ್ತದೆ ನೋಡೋಣ.

ಇಲ್ಲೊಂದು ವಿಶೇಷತೆಯಿದೆ: ಕೋಳಿಗಳಲ್ಲಿ ಅಂಡಾಣು ಬಿಡುಗಡೆಯಾದ ನಂತರ ಅದನ್ನು ವೀರ್ಯಾಣು ಸೇರಲೀ ಬಿಡಲಿ, ಅದರ ಸುತ್ತಲೂ ಆಹಾರ ಶೇಖರವಾಗುವ ಮತ್ತು ಕವಚ ನಿರ್ಮಾಣವಾಗುವ ಕ್ರಿಯೆ ನಿಯಮಿತವಾಗಿ ನಡೆದೇ ತೀರುತ್ತದೆ. ಹಾಗಾಗಿ ಭ್ರೂಣವಿಲ್ಲದಿದ್ದರೂ ಮೊಟ್ಟೆ ತಯಾರಾಗುತ್ತದೆ. ಅಂದರೆ, ಗಂಡು ಕೋಳಿಯ ಸಂಪರ್ಕ ಇಲ್ಲದಿದ್ದರೂ ಹೆಣ್ಣು ಕೋಳಿ ಮೊಟ್ಟೆ ಇಡುತ್ತವೆ. 'ಹುಂಜದ ಸಂಪರ್ಕವಿಲ್ಲದೇ ಕೋಳಿ ಮೊಟ್ಟೆ ಇಡಲು ಸಾಧ್ಯವೇ? ಸುಳ್ಳು ಹೇಳುತ್ತಿದ್ದಾನೆ' ಎನ್ನತ್ತೀರಾ? ವಿಜ್ಞಾನದಾಣೆಗೂ ಇದು ಸತ್ಯ. ಇಂತಹ ಭ್ರೂಣವಿಲ್ಲದ ಮೊಟ್ಟೆಯಿಂದ ಮರಿಯಾಗುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿಯೇ ಅವುಗಳನ್ನು ನಿರ್ಜೀವ ಮೊಟ್ಟೆಗಳು ಎನ್ನಬಹುದು.

ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಸಾವಿರಗಳಲ್ಲಿ, ಲಕ್ಷಗಳಲ್ಲಿ ಮೊಟ್ಟೆ ಉತ್ಪಾದನಾ ಕೋಳಿಗಳನ್ನು ಸಾಕುವ ಫಾರಂಗಳಲ್ಲಿ ಕೇವಲ ಹೆಣ್ಣು ಕೋಳಿಗಳನ್ನು ಮಾತ್ರ ಸಾಕುತ್ತಾರೆ. ಹುಂಜ ಅಥವಾ ಗಂಡು ಕೋಳಿಗಳನ್ನು ಇಟ್ಟಿರುವುದೇ ಇಲ್ಲ. ಆದ್ದರಿಂದ ಫಾರಂ ಕೋಳಿ ಮೊಟ್ಟೆಗಳು ಭ್ರೂಣವಿಲ್ಲದ ಮೊಟ್ಟೆಗಳು. ಅಂದರೆ ಅವುಗಳಲ್ಲಿ ಜೀವವಿಲ್ಲ. ಅಂತಹ ಮೊಟ್ಟೆಗಳನ್ನು 'ಟೇಬಲ್ ಎಗ್ಸ್' ಎನ್ನುತ್ತಾರೆ. ಆದ್ದರಿಂದಲೇ ಮೊಟ್ಟೆ ಮಾಂಸಾಹಾರವಲ್ಲ ಎನ್ನುವ ವಾದವಿರುವುದು.

ಇಲ್ಲಿ ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ, ಹುಂಜದ ಸಂಪರ್ಕಕ್ಕೆ ಬರಬಹುದಾದ ಕೋಳಿಗಳು, ಅಂದರೆ ಗ್ರಾಮೀಣ ಪರಿಸರದಲ್ಲಿ ಹಗಲಿನಲ್ಲಿ ಹೊರಗೆ ಬಿಟ್ಟು ಸಾಕಲಾಗುವ ಕೋಳಿಗಳು ಹುಂಜಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದ್ದು, ಅವು ಇಡುವ ಮೊಟ್ಟೆಗಳಲ್ಲಿ ಭ್ರೂಣವಿರುವ, ಹಾಗಾಗಿ ಅವುಗಳಲ್ಲಿ ಜೀವವಿರುವ ಸಾಧ್ಯತೆಯಿದೆ. ಅಂತಹ ಮೊಟ್ಟೆಗಳನ್ನು 'ಫಲಿತ ಮೊಟ್ಟೆಗಳು (ಫರ್ಟಿಲೈಸ್ಡ್ ಎಗ್ಸ್)' ಎನ್ನುತ್ತಾರೆ. ಅಂತಹ ಮೊಟ್ಟೆಗಳಿಂದ ಮರಿ ಮಾಡಬಹುದು.
ಚಿತ್ರ ಕೃಪೆ: ಗೂಗಲ್
ಆದರೆ ಇಲ್ಲೊಂದು ಪ್ರಶ್ನೆ. ಭ್ರೂಣವಿಲ್ಲ ಅಥವಾ ಜೀವವಿಲ್ಲ ಎನ್ನುವ ಕಾರಣಕ್ಕೆ ಸಸ್ಯವರ್ಗಕ್ಕೆ ಸೇರದ, ಪ್ರಾಣಿವರ್ಗಕ್ಕೆ ಸೇರಿದ ಪಕ್ಷಿಯೊಂದರ ಮೊಟ್ಟೆಯನ್ನು ಸಸ್ಯಾಹಾರ ಎಂದು ಒಪ್ಪಬಹುದೇ?

ಈಗ ಪ್ರಶ್ನೆ, ಸಸ್ಯಾಹಾರವೆಂದರೇನು? ಮಾಂಸಾಹಾರವೆಂದರೇನು? ಎಂಬುದು. ಎಲ್ಲರಿಗೂ ತಿಳಿದಿರುವಂತೆ, ಸಸ್ಯಗಳಿಂದ ಬಂದ ಆಹಾರ ಸಸ್ಯಾಹಾರವೆನಿಸಿಕೊಳ್ಳುತ್ತದೆ ಹಾಗೂ ಪ್ರಾಣಿಗಳಿಂದ ಬಂದ ಆಹಾರ ಮಾಂಸಾಹಾರವೆನಿಸಿಕೊಳ್ಳುತ್ತದೆ. ಹಾಗಾದರೆ ಈ ವರ್ಗೀಕರಣದ ಆಧಾರದ ಮೇಲೆಯೇ ಹೇಳುವುದಾದರೆ, ಹಸುಗಳಿಂದ ಬರುವ ಹಾಲು ಮತ್ತು ಜೇನು ಹುಳುಗಳು ಉತ್ಪಾದಿಸುವ ಜೇನುತುಪ್ಪಗಳನ್ನು ಏನನ್ನಬೇಕು? ನಾವು ಇವುಗಳನ್ನು ಸಸ್ಯಾಹಾರವೆಂದು ಒಪ್ಪಿರುವ ಕಾರಣವೇನೆಂದರೆ, ಅವುಗಳನ್ನು ಪಡೆಯುವಾಗ ಪ್ರಾಣಿಹಿಂಸೆಯಾಗಲೀ, ವಧೆಯಾಗಲೀ ಆಗುವುದಿಲ್ಲ ಎಂಬುದು (ಜೇನಿನ ವಿಷಯದಲ್ಲಿ ಅದೂ ಪ್ರಶ್ನಾರ್ಹ). ಸರಿ ಹಾಗಾದರೆ, ಇದೇ ಕಾರಣದ ಮೇಲೆ ಹೇಳುವುದಾದರೆ, ಭ್ರೂಣವಿಲ್ಲದ ಮೊಟ್ಟೆಯೂ ಸಹ ಸಸ್ಯಾಹಾರವೇ ಅಲ್ಲವೇ?

ಈ ಲೇಖನ ಬರೆಯುತ್ತಿರುವ ನಾನು ಒಬ್ಬ ಪಶುವೈದ್ಯ. ನನ್ನ ಅಭಿಪ್ರಾಯದಲ್ಲಿ, ಆಹಾರಗಳನ್ನು ಕೇವಲ ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ವರ್ಗೀಕರಣ ಮಾಡುವುದರ ಜೊತೆಗೆ, ಸಸ್ಯಜನ್ಯ ಅಥವಾ ಸಸ್ಯಮೂಲದ ಆಹಾರ ಮತ್ತು ಪ್ರಾಣಿಜನ್ಯ ಅಥವಾ ಪ್ರಾಣಿಮೂಲದ ಆಹಾರ ಎಂದು ವರ್ಗೀಕರಿಸುವುದು ಹೆಚ್ಚು ಸೂಕ್ತ. ಆಗ ಹಾಲು, ಜೇನು, ಮೊಟ್ಟೆಗಳನ್ನು ಪ್ರಾಣಿಜನ್ಯ ಅಥವಾ ಪ್ರಾಣಿ ಮೂಲದ ಸಸ್ಯಾಹಾರಗಳು ಎನ್ನಬಹುದು.

ಈ ಲೇಖನದ ಮೂಲಕ ಅಥವಾ ಈ ಹೇಳಿಕೆಗಳ ಮೂಲಕ ಯಾರ ಭಾವನೆಗಳನ್ನಾಗಲೀ ಅಥವಾ ನಂಬಿಕೆಗಳನ್ನಾಗಲೀ ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ನನಗಿಲ್ಲ. ಕೆಲವು ವೈಜ್ಞಾನಿಕ ವಿಚಾರಗಳನ್ನು ಉಲ್ಲೇಖಿಸುತ್ತಿದ್ದೇನೆ, ಅಷ್ಟೇ. ಯಾರಾದರೂ ಇದನ್ನು ಒಪ್ಪದಿದ್ದರೆ, ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ.

ಗಮನಿಸಿ: ಮನುಷ್ಯರ ದೇಹಕ್ಕೆ ಅಗತ್ಯವಿರುವ ಬಹುತೇಕ ಎಲ್ಲ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆ ಜಗತ್ತಿನ ಅತ್ಯುತ್ತಮ ಪೌಷ್ಠಿಕ ಆಹಾರಗಳಲ್ಲೊಂದು. ದಿನಕ್ಕೊಂದು ಮೊಟ್ಟೆಯಿಂದ ತುಂಬುವುದು ಹೊಟ್ಟೆ ಎಂಬ ಘೋಷಣಾ ವಾಕ್ಯದಲ್ಲಿ ಸತ್ಯವಿದೆ. ಆದ್ದರಿಂದ ಮೊಟ್ಟೆಯು, ಪೌಷ್ಠಿಕತೆಯ ಅಗತ್ಯವಿರುವ ಎಲ್ಲ ವ್ಯಕ್ತಿಗಳೂ ಧಾರಾಳವಾಗಿ ಸೇವಿಸಬಹುದಾದ ಅಥವಾ ಸೇವಿಸಬೇಕಾದ ಆಹಾರ ಪದಾರ್ಥ. ವಿಶೇಷವಾಗಿ ಗರ್ಭಿಣಿ ಸ್ತ್ರೀಯರಿಗೆ, ಹಾಲುಣಿಸುವ ತಾಯಂದಿರಿಗೆ, ಬೆಳೆಯುತ್ತಿರುವ ಮಕ್ಕಳಿಗೆ, ರೋಗದಿಂದ ಗುಣಮುಖರಾಗುತ್ತಿರುವ ವ್ಯಕ್ತಿಗಳಿಗೆ ಮೊಟ್ಟೆ ತುಂಬಾ ಉಪಯುಕ್ತವಾದ ಅಹಾರ ಪದಾರ್ಥ.

ಅಲ್ಲದೇ, ವೈದ್ಯಕೀಯ ಸಂಶೋಧನೆಗಳ ಪ್ರಕಾರ ರಕ್ತದೊತ್ತಡ, ಮಧುಮೇಹದಂತಹ ರೋಗಗಳನ್ನು ಹೊಂದಿರುವ ವ್ಯಕ್ತಿಗಳೂ ಸಹ ದಿನಕ್ಕೊಂದು ಮೊಟ್ಟೆಯನ್ನು ಧಾರಾಳವಾಗಿ ಸೇವಿಸಬಹುದು. ಈಗಾಗಲೇ ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಸಮಸ್ಯೆಯಿರುವ ಅಥವಾ ಹೃದಯ ಸಂಬಂಧೀ ರೋಗವುಳ್ಳ ವ್ಯಕ್ತಿಗಳು, ಸ್ವಲ್ಪ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಹಾಕಿ, ಬಿಳಿ ಭಾಗವನ್ನು ಸೇವಿಸಲು ಯಾವುದೇ ತೊಂದರೆಯಿಲ್ಲ.

ಲೇಖಕರ ಕಿರುಪರಿಚಯ
ಡಾ. ಎ. ಎಂ. ಶಿವಕುಮಾರ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರಾದ ಇವರು, ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಳೆಯ ಕನ್ನಡ ಚಲನಚಿತ್ರ ಮತ್ತು ಹಾಡುಗಳ ಸಿ.ಡಿ. ಸಂಗ್ರಹಣೆ, ಸಂಗೀತ ಕೇಳುವುದು, ಕನ್ನಡ ಕಾದಂಬರಿಗಳನ್ನು ಓದುವುದು ಇವರ ಹವ್ಯಾಸ.

Blog  |  Facebook  |  Twitter

ಭಾನುವಾರ, ನವೆಂಬರ್ 22, 2015

ನಾನು ಕಾಣೆಯಾಗಿದ್ದೇನೆ...!

ಹೌದು ನಾನು ಕಾಣೆಯಾಗಿದ್ದೇನೆ...!
ಹುಡುಕುತ್ತಿದ್ದೇನೆ ನನ್ನನ್ನು ನಾನೇ...!
ಎಲ್ಲಿ ಕಳೆದುಹೋದೆನೆಂದು...?

ನನ್ನ ಧ್ವನಿಗೆ ಕಿವುಡನಾಗಿ
ಕಾಲವು ಹವಣಿಸಿ
ಹೊಂಚು ಹಾಕಿದ
ಸಂಚಿನ ಮಿಂಚಿಗೆ ಸಿಕ್ಕಿ
ನನ್ನದೇ ಮನಸ್ಸಿನ ಅಂಚಿಗೆ
ಬಂದು ನಿಂತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಮನಸಿನ ಒಳಗಿನ
ಕನಸಿನ ದಾರಿಯ
ಕವಲೊಡೆದು, ಬದಿಸರಿದು
ಬೆರಗಾಗಿ, ದಿಗಿಲಾಗಿ
ಮುಗಿಲೆಡೆ ಮುಖಮಾಡಿ
ನಿಂತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಕಾಲ ಸರಿದಂತೆ ಕಂಡ
ಮುಖವಾಡಗಳ ಪವಾಡಗಳನ್ನು
ಕಂಡು ದಿಗ್ಮೂಢನಾಗಿದ್ದೇನೆ...!
ಗಾಢ ನಿದ್ರೆಯ
ಗೋಡೆ ಒಡೆಯದೇ
ನನ್ನದೇ ಜಾಡು ಹಿಡಿದು ಓಡಿ
ನನಗೆ ನಾನೇ ಸಿಗದೇ
ಕಾಡುವ ರೂಢಿಗೆ
ಈಡಾಗಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಕಾಲದ ಕಟುಕಲೆಯ
ಬಲೆಗೆ ಸಿಲುಕಿ
ನೆಲೆಸಿಗದೇ ತಡಕಾಡಿ
ವಿರುದ್ಧದ ಅಲೆಗಳ
ನಡುವೆಯೂ ನಲುಗದೇ
ಅಲೆಮಾರಿಯಾಗಿ
ಅಲೆಯುತ್ತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಬಿಕ್ಕಿ ದುಃಖಿಸುವ
ಕಠಿಣ ಕಾಲದಲ್ಲೂ
ನಕ್ಕು ಹಗುರಾಗಿ
ಹಕ್ಕಿಯಾಗಿ ಹಾರುವ
ನನ್ನನ್ನು ನಾನು
ಹೆಕ್ಕಿ ತೆಗೆಯುತ್ತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಲೇಖಕರ ಕಿರುಪರಿಚಯ
ಡಾ. ಅರುಣ ಜಿ. ಖರಾಟೆ

ಗದಗ ಜಿಲ್ಲೆಯ ಲಕ್ಷ್ಮೀಶ್ವರದವರಾದ ಇವರು ಪ್ರಸ್ತುತ ಬೀದರಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕವಿತೆ, ವೈಜ್ಞಾನಿಕ ಲೇಖನ ಬರೆಯುವುದು ಮತ್ತು ವಿಶೇಷವಾಗಿ ಚಿತ್ರಕಲೆ ಇವರ ಹವ್ಯಾಸಗಳು.

Blog  |  Facebook  |  Twitter

ಶನಿವಾರ, ನವೆಂಬರ್ 21, 2015

ನಿನ್ನಾಗಿಸು

ತೊದಲ ಅರಿವಿನ ಕೊದಲ ಪದಗಳಲಿ
ತಿಳಿಸೆ ಚಡಪಡಿಸಿಹೆ ನನ್ನಾವರಿಸಿದ ವಾತ್ಸಲ್ಯದ
ಸವಿಯ ಮಾಧುರ್ಯವಾ!... ಕರವೆಳೆಯುತ
ಮಗುವಿನಂತೆ ನಿನ್ನೇ ಬೆರಳೆತ್ತಿ ತೋರಿಸಿಹೆ-
ಪಡೆದುಕೊಳಲಿ ಎಲ್ಲರೂ ನಿನ್ನ
'ಅನಂತತೆ'-ಗಳೊಳಗಿನ 'ಪರಿಪೂರ್ಣತೆ'ಯನೆಂದು!

ಎಂದಿಲ್ಲ!?... ಮುಗಿಯೋಲ್ಲ!... ನಿನ್ನರಿಯಲು
ತರ-ತರಹದ ದೊಂಬರು!... ಹೇಗೆಲ್ಲಾ ಬಣ್ಣಿಸಿದರೂ
ಬಿಂಬಿಸಲಾಗದ ವಿಸ್ಮಯ ರೂಪ!... ಇದಿರಿದ್ದರೂ ಕಾಣದ...
ಉಸಿರಾಗಿದ್ದರೂ ಅರಿಯದ... ನಿನ್ನ ಅನುಭವ-ವಾಗುವುದು
ನಿನ್ನ ಕಟಾಕ್ಷವಿದ್ದರೆ ಮಾತ್ರ!!

'ಅಲ್ಪ'ಯತ್ನಕೆ ನೀಡಿ ಬೇಗ ಬೇಡುವ
'ವರ'ವ... ಅಂದುಕೊಳುವಂತಾಯ್ತು 'ನಾನು'
ಎಲ್ಲವೂ 'ನನ್ನಿಂದ'!... 'ಅರಿ'ಯಿದಕೆ
'ಒರೆ'ಹಚ್ಚಿ 'ಚಿತ್ತ'ದ ಬಿಗಿಹಿಡಿದು
ಜನ್ಮಗಳ 'ಪಾಪ'ಕಳೆಯೆ 'ಮಹದೇವ'
ನಿನಕಂಡೆ ನಾ... ನನ್ನದೇ ಮೊಗದ
'ಸುಪ್ರಸನ್ನತೆಯಲಿ'!!

'ಸರಳವು'!... 'ಜಟಿಲವೋ'!?...
ನೀನೊಂದು 'ನಾನು'...! ಇನ್ನೂ
ಏಕಿತ್ತೆ ಈ ಕೃತಕ ವ್ಯಾಮೋಹದ ಪಾಶ!?
... ನೀರರಗದ ಜೀವಗಳು; ತಾಳಲಾರದ
ಬರೆಯೇಕೆ... ಬೇರ್ಪಡಿಸುವೆ ಇನ್ನೆಷ್ಟು...
... ಆಗಿರಲು ನಾನು ನಿನ್ನದೇ ಕರುಳ ಒಂದು ಭಾಗ!

ಜುಗುಳು ಗುಮ್ಮಗಳಿಂದ ಬಿಡಿಸಿ...
ಸದ್ಗುಣಗಳ ಸುಧೆಯ ಒಲವಾಗಿಸಿ...
ಬ್ರಹ್ಮಜ್ಞಾನದ ಸತ್ಯಜ್ಯೋತಿಯ ದಿವ್ಯಬೆಳಗಿನಂತೆ... ನಿನ್ನೊಳಗೆ
ನನ್ನ ಲೀನವಾಗಿಸಿಕೋ!!

ಲೇಖಕರ ಕಿರುಪರಿಚಯ
ಶ್ರೀಮತಿ ಶೈಲಜ, ಜೆ. ಸಿ.

ಮೂಲತಃ ಬೆಂಗಳೂರಿನವರಾದ ಇವರು ಪ್ರಸ್ತುತ ಚೆನ್ನೈ ನಲ್ಲಿರುವ ಭಾರತ ಹವಾಮಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕಥೆ ಹಾಗೂ ಕವಿತೆ ಬರೆಯುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಶುಕ್ರವಾರ, ನವೆಂಬರ್ 20, 2015

ಪ್ರಕೃತಿ ವಿಕೋಪಗಳಲ್ಲಿ ಪ್ರಾಣಿಗಳ ವರ್ತನೆ ಹಾಗೂ ರಕ್ಷಣೆ

ಆಧುನಿಕ ಯುಗದ ಮಾನವನು ತಂತ್ರಜ್ಞಾನದ ಸಹಾಯದಿಂದ ಅನೇಕ ವಿಸ್ಮಯಕಾರಿ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿರುವನಾದರೂ, ಪ್ರಕೃತಿಯನ್ನು ಹಾಗೂ ಪ್ರಾಕೃತಿಕ ವಿದ್ಯಮಾನಗಳನ್ನು ನಿಯಂತ್ರಿಸುವಲ್ಲಿ ಸಫಲನಾಗಿಲ್ಲ. ಬೆಂಕಿ ಆಕಸ್ಮಕ/ಅವಗಢ, ಪ್ರವಾಹ, ಸುನಾಮಿ, ಭೂಕಂಪ, ಜ್ವಾಲಾಮುಖಿ, ಹರಿಕೈನ್, ಸನ್-ಸ್ಟ್ರೋಕ್ ಗಳಂತಹ ಪ್ರಕೃತಿ ವಿಕೋಪಗಳನ್ನು ಇಲ್ಲಿ ಉದಾಹರಿಸಬಹುದು. ಇಂತಹ ಸಂದರ್ಭಗಳಲ್ಲಿ ಮನುಕುಲದೊಂದಿಗೆ ಪ್ರಾಣಿಗಳೂ ಸಹ ತೊಂದರೆಗೊಳಗಾಗುತ್ತವೆ. ಅವುಗಳೆಂದರೆ, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಮೊಲ, ದನ, ಎಮ್ಮೆ, ಕುದುರೆ, ಕುರಿ, ಮೇಕೆ, ಇತರೆ. ಅಲ್ಲದೇ ಕಾಡುಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಆನೆ, ನರಿ ಹಾಗೂ ಮೃಗಾಲಯಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಬಂಧಿತ ಪ್ರಾಣಿಗಳೂ ಸಹ ಪ್ರಕೃತಿ ವಿಕೋಪಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಇವುಗಳ ರಕ್ಷಣೆಯ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

ಪ್ರಕೃತಿ ವಿಕೋಪದ ಮುನ್ಸೂಚನೆ: ಸಾಮಾನ್ಯವಾಗಿ ಪ್ರಾಣಿಗಳು ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಮಾನವರಿಗಿಂತ ಬಹುಬೇಗನೇ ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಈ ದಿನದ ಮಾನವನು ಕೆಲವು ಪ್ರಕೃತಿ ವಿಕೋಪಗಳ ಬಗ್ಗೆ ಮುನ್ಸೂಚನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಹಿಂದನ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು ಅವರವರ ಭೌಗೋಳಿಕ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಬಗ್ಗೆ ದೊರಕಬಹುದಾದ ಮುನ್ಸೂಚನೆಗಳನ್ನು ಪ್ರಕೃತಿಯಲ್ಲಾಗಬಹುದಾದ ಸೂಕ್ಷ್ಮ ಬದಲಾವಣೆಗಳು ಹಾಗೂ ಅನುಭವಗಳಿಂದ ಅರಿತುಕೊಳ್ಳಲು ಶಕ್ತರಾಗಿದ್ದರು. ಆದರೆ, ಪ್ರಾಣಿಗಳಿಗೆ ಪ್ರಕೃತಿ ವಿಕೋಪಗಳ ಮುನ್ಸೂಚನೆಯನ್ನು ನೈಸರ್ಗಿಕವಾಗಿಯೇ ಗ್ರಹಿಸಿಕೊಳ್ಳುವ ಶಕ್ತಿ ಇರುತ್ತದೆ. ಉದಾಹರಣೆಗೆ ಗೂಬೆಗಳು ಕೂಗುವುದು, ನಾಯಿ/ತೋಳಗಳು ಊಳಿಡುವುದು, ಗಾಬರಿಗೊಂಡು ಓಡಾಡುವುದು, ಸುರಕ್ಷಿತ ಪ್ರದೇಶಗಳನ್ನು ಅರಸಿ ಅವಿತುಕೊಳ್ಳುವುದು, ಇತ್ಯಾದಿ ವರ್ತನೆಯಲ್ಲಾಗಬಹುದಾದ ಬದಲಾವಣೆಗಳನ್ನು ನಾವು ಗಮನಿಸಬಹುದು. ಪ್ರಾಣಿಗಳ ಪಂಚೇಂದ್ರಿಯಗಳು ಬಹಳ ಚುರುಕಾಗಿರುವುದರಿಂದ ಇದು ಸಾಧ್ಯವಾಗುತ್ತದೆ.

ಸಾಧನ-ಸಲಕರಣೆಗಳು: ಸಾಕು ಪ್ರಾಣಿ, ಕ್ರೂರ ಪ್ರಾಣಿ ಹಾಗೂ ಬಂಧಿತ ಪ್ರಾಣಿಗಳನ್ನು ಪ್ರಕೃತಿ ವಿಕೋಪದಿಂದ ಕಾಪಾಡಲು ಕೆಲವಾರು ಮೂಲಭೂತ ಸಾಧನ-ಸಲಕರಣೆಗಳ ಅವಶ್ಯಕತೆ ಇರುತ್ತದೆ. ಉದಾಹರಣೆಗೆ, ಚೈನು, ಹಗ್ಗ, ಬಿದಿರು/ಪ್ಲಾಸ್ಟಿಕ್ ಬುಟ್ಟಿಗಳು, ಏಣಿ, ಬಲೆಗಳು, ಬ್ಯಾಗುಗಳು, ದೊಡ್ಡ ಕೋಲು ಅಥವಾ ದಡಿ, ಅರಿವಳಿಕೆ ಮದ್ದು, ವಾಹನ, ಇತ್ಯಾದಿ. ಇದರೊಂದಿಗೆ ವಿವಿಧ ಪ್ರಾಣಿಗಳಿಗೆ ಅವಶ್ಯವಿರುವ ಆಹಾರ, ನೀರು (ಸಾಕಷ್ಟು ಪ್ರಮಾಣದಲ್ಲಿ), ಟವೆಲ್, ಬ್ಲಾಂಕೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಔಷಧಗಳು, ಬಿರಟೆ ಸಹಿತ ಡಬ್ಬಗಳೂ ಸಹ ಬೇಕಾಗುತ್ತವೆ.

ಸಮನ್ವಯತೆ: ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರಕ್ಷಣಾ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ಬೇರೆ ಬೇರೆ ದೇಶಗಳು, ವಿವಿಧ ಹಂತದ ಸರ್ಕಾರಗಳು, ಸಂಘ-ಸಂಸ್ಥೆಗಳು, ಇಲಾಖೆಗಳು ಹಾಗೂ ಸ್ವಯಂ ಸೇವಕರ ನಡುವೆ ಸಮನ್ವಯ ಸಾಧಿಸುವ ಅವಶ್ಯಕತೆ ಇರುತ್ತದೆ. ಅಲ್ಲದೇ, ವಿಷಯ ತಜ್ಞರುಗಳ (ಪಶುವೈದ್ಯರು, ಅರಣ್ಯ, ಆರೋಗ್ಯ, ಇತರೆ) ವೃತ್ತಿಪರ ಜ್ಞಾನ/ಸೇವೆಗಳನ್ನು ರಕ್ಷಣಾ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು ಸೂಕ್ತ.

ಮುಂಜಾಗ್ರತೆ: ಪ್ರಾಣಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೊದಲು ಅಗತ್ಯ ಸಾಧನ-ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ತಂಡದಲ್ಲಿ ವಿವಿಧ ಪ್ರಾಣಿಗಳ ವರ್ತನೆ ಹಾಗೂ ಅವುಗಳ ಸ್ವಭಾವಗಳ ಬಗ್ಗೆ ಅರಿವು ಹೊಂದಿರುವವರು ಅಥವಾ ವಿಷಯ ತಜ್ಞರ ಮಾರ್ಗದರ್ಶನ ಅತ್ಯಗತ್ಯ. ಅಲ್ಲದೇ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವವರು ದೈಹಿಕವಾಗಿ ಸಮರ್ಥ ಹಾಗೂ ಸದೃಢವಾಗಿರಬೇಕಾಗಿರುತ್ತದೆ, ಏಕೆಂದರೆ ಪ್ರಾಣಿಗಳನ್ನು ನಿಯಂತ್ರಿಸಲು ಯುಕ್ತಿಯೊಂದಿಗೆ ಶಕ್ತಿ/ಬಲದ ಅವಶ್ಯಕತೆಯೂ ಇರುವ ಸಾಧ್ಯತೆಯಿದೆ.

ಚಿತ್ರ ಕೃಪೆ: MyPetSource
ಪ್ರಾಣಿಗಳ ವರ್ತನೆ ಹಾಗೂ ರಕ್ಷಣೆ: ಅಸಹಜ ಸಂದರ್ಭಗಳಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದು ಕಷ್ಟಸಾಧ್ಯ. ಸಾಮಾನ್ಯ ಸಂದರ್ಭಗಳಲ್ಲಿನ ಪ್ರಾಣಿಗಳ ವರ್ತನೆಗೂ, ಅಸಹಜ ಸಂದರ್ಭಗಳಲ್ಲಿನ ಅವುಗಳ ವರ್ತನೆಗೂ ಬಹಳ ವ್ಯತ್ಯಾಸಗಳಿರುತ್ತದೆ. ಸ್ವಾಭಾವಿಕವಾಗಿ ಪ್ರಾಣಿಗಳು ಪ್ರಕೃತಿ ವಿಕೋಪಗಳಂತಹ ಅಸಹಜ ಸಂದರ್ಭಗಳಲ್ಲಿ ಮೂರು ವಿಧವಾಗಿ ನಡೆದುಕೊಳ್ಳಬಹುದು: ಅನಗತ್ಯ ಗಾಬರಿ (Fear), ಆಕ್ರಮಣ (Fight) ಮತ್ತು ತಪ್ಪಿಸಿಕೊಂಡು ಓಡುವುದು (Flight). ಆದ್ದರಿಂದ, ರಕ್ಷಣಾ ಕಾರ್ಯಾಚರಣೆಯ ವೇಳೆ ಪ್ರಾಣಿಗಳನ್ನು ಬಹಳ ಜಾಗರೂಕತೆಯಿಂದ ಸಮೀಪಿಸಬೇಕು. ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡುವ ಸಮಯಗಳಲ್ಲಿ, ಅವುಗಳ ಮಾಲಿಕರು ಹೇಳಬಹುದಾದ ’ನಮ್ಮ ನಾಯಿ ಬಹಳ ಸಾಧು, ಏನೂ ಮಾಡುವುದಿಲ್ಲ, ಯಾರಿಗೂ ಕಚ್ಚುವುದಿಲ್ಲ..’ ಎಂಬಿತ್ಯಾದಿ ಮಾತುಗಳನ್ನು ನಂಬಲೇಬಾರದು. ಇಂತಹ ಪರಿಸ್ಥಿತಿಗಳಲ್ಲಿ ಸಾಕು ಪ್ರಾಣಿಗಳು ತಮ್ಮ ಮಾಲಿಕರ ಊಹೆಗೂ ಮೀರಿ, ಅಸ್ವಾಭಾವಿಕವಾಗಿ ವರ್ತಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಕ್ಷಣಾ ಸಿಬ್ಬಂದಿ ಪ್ರಾಣಿಗಳ ರಕ್ಷಣೆ ಮಾತ್ರವಲ್ಲ, ತಮ್ಮ ಸ್ವಯಂ ರಕ್ಷಣೆಯ ಬಗ್ಗೆಯೂ ಸಾಕಷ್ಟು ಗಮನ ವಹಿಸುವುದು ಅತೀ ಮುಖ್ಯವಾಗುತ್ತದೆ. ಬಹುತೇಕ ಸಣ್ಣ ಪ್ರಾಣಿಗಳು ಸಾಮಾನ್ಯವಾಗಿ ಬಾಯಿಯಿಂದ ಕಚ್ಚಿ ಆಕ್ರಮಣ ಮಾಡುವುದರಿಂದ, ರಕ್ಷಣೆ ನಂತರ ಸುರಕ್ಷತೆಯ ದೃಷ್ಟಿಯಿಂದ ಅವುಗಳ ಬಾಯಿಯನ್ನು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಟ್ಟು ಕಟ್ಟಬೇಕು. ರಗ್ಗು, ಬಲೆಯಂತಹ ಸಾಧನಗಳು ಸಣ್ಣ ಪ್ರಾಣಿಗಳನ್ನು ರಕ್ಷಿಸಲು ಉಪಯುಕ್ತವಾದರೆ, ದೊಡ್ಡ ಪ್ರಾಣಿಗಳನ್ನು ರಕ್ಷಿಸಲು ಹಗ್ಗ, ದಡಿ, ಕೋಲುಗಳ ಬಳಕೆ ಮಾಡಬಹುದು. ಹಾವುಗಳನ್ನು ರಕ್ಷಿಸಲು ಉದ್ದನೆಯ ಕೋಲು ಮತ್ತು ಚೀಲಗಳನ್ನು ಬಳಸಬಹುದು. ಕ್ರೂರ ವನ್ಯ ಜೀವಿಗಳಿಗೆ ಅರಿವಳಿಕೆ ಮದ್ದನ್ನು ಅಗತ್ಯ ಪ್ರಮಾಣದಲ್ಲಿ ಬಳಸಿ ರಕ್ಷಿಸಬಹುದು. ಪ್ರಾಣಿಗಳ ಗಮನವನ್ನು ಸೆಳೆಯಲು ಒಬ್ಬರು ಮುಂದಾದರೆ, ಮತ್ತೊಬ್ಬರು ಅವುಗಳನ್ನು ಹಿಡಿಯುವಲ್ಲಿ ಕಾರ್ಯಪ್ರವೃತ್ತರಾದರೆ ರಕ್ಷಣಾ ಕಾರ್ಯವು ಸುಲಭವಾಗುತ್ತದೆ.

ರಕ್ಷಿಸಿದ ನಂತರ ವಿವಿಧ ಜಾತಿಯ ಪ್ರಾಣಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರತ್ಯೇಕವಾದ ಬಂಧನಗಳಲ್ಲಿ ಇರಿಸಬೇಕು. ರಕ್ಷಿಸಲ್ಪಟ್ಟ ಪ್ರಾಣಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅನುಗುಣವಾಗಿ ಪ್ರಥಮ ಚಿಕಿತ್ಸೆ ನೀಡಿ, ನಂತರ ತ್ವರಿತವಾಗಿ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಾಣಿಕೆ ಮಾಡಬೇಕು. ಸಾಗಾಣಿಕೆ ಸಮಯವನ್ನು ಆದಷ್ಟೂ ಮಿತಗೊಳಿಸಿ, ದೂರದ ಪ್ರಯಾಣಗಳನ್ನು ಅವುಗಳ ಆರೋಗ್ಯ ಸುಧಾರಣೆ/ಸುಸ್ಥಿರತೆಯನ್ನು ಆಧರಿಸಿ ಯೋಜಿಸಬೇಕು. ಪ್ರಕೃತಿ ವಿಕೋಪದ ಸಮಯದಲ್ಲಿ ಪ್ರಾಣಿಗಳ ರಕ್ಷಣಾ ಕಾರ್ಯವು ಯಶಸ್ವಿಯಾಗಬೇಕಾದರೆ, ಅವುಗಳನ್ನು ಮನುಷ್ಯರ ಜೊತೆ ಜೊತೆಗೇ ರಕ್ಷಣೆ ಮಾಡಬೇಕಾಗುತ್ತದೆ.

ಲೇಖಕರ ಕಿರುಪರಿಚಯ
ಡಾ. ರಾಘವ

ಮೂಲತಃ ಮೈಸೂರಿನವರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಸ್ತರಣೆ ಹಾಗೂ ತರಬೇತಿ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Blog  |  Facebook  |  Twitter

ಗುರುವಾರ, ನವೆಂಬರ್ 19, 2015

ಹಾಳೆಯ ಹೂವು

ಬರೆಯಲೇ ಬೇಕೆಂದು ಹಠಕ್ಕೆ ಬಿದ್ದಾಗ
ಬರೆವುದೆಲ್ಲವೂ ಸಪ್ಪೆ
ತಾನಾಗೇ ಬರೆಯಿಸಿಕೊಳ್ಳುವ ಒಂದು ಪದವಾದರೂ
ಕಾವ್ಯ ಕುಪ್ಪೆ

ಬರೆವ ನಾನೊಬ್ಬನೇ ಬಲ್ಲವನೆಂದನಿಸಿದೊಡೆ
ಬರೆಯದಿರುವುದೇ ಒಳಿತು
ಬರೆವುದೇ ಆದರೆ ಬರಿದಾಗಬೇಕು ನಾ
ಬರಹದಲಿ ಮಿಂದು ಬೆರೆತು

ಅರೆ-ಬರೆ ಬರೆವುದು, ಭಾರಿ ಏನಲ್ಲ ಇದು
ಬರಿ ಮೌನದೊಂದು ಛಾಯೆ
ಬರೆದಷ್ಟೂ ಬರಿದಾಗದ ಭಾಷೆ ನನ್ನದು
ಏನಿದರ ಮರ್ಮ ಮಾಯೆ?!!

ಬರವಿಲ್ಲ, ನೆರೆಯಿಲ್ಲ ಬಂದಷ್ಟೂ ಸಿರಿಯೇ
ಇರದಲ್ಲಿಯೂ ಸುಸ್ಥಿತಿ
ಎಲ್ಲ ಮುಗಿದಿರಲೊಂದು ಮತ್ತೆ ಮೊದಲಾಗಲು
ಹಿಡಿದಂತೆ ತಿಳಿ ಆರತಿ

ಬನ್ನಣೆಗೆ ಬಣ್ಣ, ಬವಣೆಗೂ ಬಾಣ
ಬಿನ್ನವಿದು ಭಾವಗಳಿಗೆ
ಹೆಸರಿಡಲು ಮತ್ತಷ್ಟು ಮೆರುಗು ಮೂಡುವುದು
ಹಾಳೆಯ ಹೂವುಗಳಿಗೆ!!
                                                                              -- ರತ್ನಸುತ

ಲೇಖಕರ ಕಿರುಪರಿಚಯ
ಶ್ರೀ ಭರತ್‍ ಎಂ. ವೆಂಕಟಸ್ವಾಮಿ

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಸಮೀಪದ ಮಂಚಪ್ಪನಹಳ್ಳಿ ಇವರ ಹುಟ್ಟೂರು.

Blog  |  Facebook  |  Twitter

ಬುಧವಾರ, ನವೆಂಬರ್ 18, 2015

ರೈತರ ಸ್ವಾವಲಂಬನೆಗೆ ಶೂನ್ಯ ಬಂಡವಾಳ ಕೃಷಿ

ನೈದಿಲೆಯು ಸೂರ್ಯನ ಬಿಸಿಲಿನೆಡೆಗೆ ಬಾಗುವಂತೆ, ಒಕ್ಕಲುತನದ ಕಸುಬು ಇಂದು ನೈಸರ್ಗಿಕತೆಯ ಮಹತ್ವವನ್ನರಿತು ಶೂನ್ಯ ಬಂಡವಾಳದ ಕೃಷಿಕ ಜೀವನವನ್ನು ಆಯ್ಕೆಮಾಡಿಕೊಂಡರೆ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗೆ ಪರಿಹಾರ ಸಿಗುತ್ತದೆಯೇ ವಿನಃ, ಸ್ವಾವಲಂಬನೆಯ ಜೀವನ ಮರೆತು ಪರಾವಲಂಬನೆಯ ಜೀವನವನ್ನು ಆಯ್ಕೆಮಾಡಿಕೊಂಡಲ್ಲಿ ಈ ದಿನಗಳ ರೈತನ ಸಾವು ಹೀಗೆಯೇ ಮುಂದುವರೆಯುತ್ತದೆ. ಕಾರಣ, ಒಂದು ಗಾದೆ ಮಾತಿನಂತೆ "ಎತ್ತಾಕಿದ ನಾಯಿ ಮೊಲವನ್ನು ಹಿಡಿಯುತ್ತದೆಯೇ" ಎನ್ನುವಂತೆ ಕುಲಕಸುಬಿನ ಸಾಧಕ-ಬಾಧಕಗಳ ಬಗ್ಗೆ ಬೇರೆಯವರ ಮೇಲೆ ಅವಲಂಬಿತವಾದೊಡೆ ಈ ಸಾವು ನ್ಯಾಯವೇ ಆಗಿರುತ್ತದೇನೋ..?

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾದ ಸ್ವಾವಲಂಬಿ ಗ್ರಾಮ ಸ್ವರಾಜ್ಯದ ಕನಸಿನ ಅರಿವು ಮಾಡಿಕೊಂಡು ಜೀವನವನ್ನು ಅಳವಡಿಸಿಕೊಂಡರೆ ಬದುಕು ಭವ್ಯತೆಯೆಡೆಗೆ ಸಾಗುತ್ತದೆ. ಇಂದು ಪ್ರಚಲಿತವಾಗುತ್ತಿರುವ ಶೂನ್ಯ ಬಂಡವಾಳದ ಕೃಷಿಯ ಅಳವಡಿಕೆ, ಜೀವನ ಸಾರ್ಥಕತೆಯತ್ತ ನಮ್ಮನ್ನು ಕೊಂಡೊಯ್ಯುವಲ್ಲಿ ಯಾವುದೇ ಹುಸಿಯಿಲ್ಲ.

ಚಿತ್ರ ಕೃಪೆ: ಗೂಗಲ್
ಶೂನ್ಯ ಬಂಡವಾಳದ ಕೃಷಿಯೆಂದರೆ ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಇಂದು ನಡೆಯುತ್ತಿರುವ ರಾಸಾಯನಿಕ ಕೃಷಿಯ ಅನಾಚಾರಗಳ ಅನಾವರಣ ಒಂದೊಂದೇ ತೆರೆದುಕೊಳ್ಳುತ್ತಾ ಸಾಗುತ್ತದೆ. ಶೂನ್ಯ ಬಂಡವಾಳದ ಕೃಷಿಗೆ ಮುಖ್ಯವಾಗಿ ನಮಗೆ ಬೇಕಾಗಿರುವುದು ಗೋಮಾತೆ. ಅಂದರೆ ನಾಟಿ ಹಸು. ಈ ವಿಷಯದಲ್ಲಿ ಜನಜನಿತವಾಗಿರುವ ಹಾಗೆ 36 ಕೋಟಿ ದೇವರುಗಳು ನೆಲೆಸಿದ್ದಾರೆ ಎನ್ನುತ್ತದೆ ಹಿಂದು ಧಾರ್ಮಿಕತೆ. ಇದರ ಅರ್ಥ ನನಗನ್ನಿಸುವ ಹಾಗೆ ಅದರ ಮಹತ್ವವನ್ನು ಅರಿಯುವ ಕಡೆ ಗಮನ ಹರಿಸಬೇಕಿದೆ. ಒಂದು ಗ್ರಾಂ ದೇಶೀ ಗೋಮಾತೆಯ ಸಗಣಿಯಲ್ಲಿ 300 ಕೋಟಿ ಉಪಯುಕ್ತ ವಿಘಟನಾಕಾರ್ಯ ಕೈಗೊಳ್ಳುವ ಸೂಕ್ಷ್ಮಜೀವಿಗಳಿವೆ. ಈ ಸೂಕ್ಷ್ಮಜೀವಿಗಳು ಭೂಮಿಯ ಮೇಲೆ ಬೀಳುವ ಕೌಷ್ಠ ಪದಾರ್ಥಗಳ ವಿಘಟನೆ ಮಾಡುವ ಮೂಲಕ ಮುಕ್ತವಾಗಿ ಬಿಡುಗಡೆ ಹೊಂದುವ ಅನ್ನ ಘಟಕಗಳನ್ನು ಆಳದವರೆಗೆ ತಲುಪಿಸುತ್ತವೆ. ಇದರ ಅರ್ಥ ಭೂಮಿಯ ಮೇಲೆ ಬೀಳುವ ಕಸ-ಕಡ್ಡಿಗಳನ್ನು ಗೊಬ್ಬರವಾಗಿ ಪರಿವರ್ತಿಸಲು ಗೋಮಾತೆಯ ಸಗಣಿ ಅವಶ್ಯಕ.

ನಾವು ಮಾಡುವ ಬೇಸಾಯ ಬೆಳೆಗಳಿಗೆ ಮೊದಲು ಭೂಮಿ ಉಳಿಮೆ ಮಾಡಿ ಹದ ಮಾಡಿಕೊಂಡ ಭೂಮಿಗೆ ಕೊಟ್ಟಿಗೆ ಗೊಬ್ಬರವನ್ನು ಸಾಧಾರಣವಾಗಿ ನೀಡಿ ನಂತರ ಬೆಳೆಗಳ ಬಿತ್ತನೆ ಮಾಡಿದ ನಂತರ ನಾವು ನಾಟಿ ಹಸುವಿನ ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಮತ್ತು ದಿಬ್ಬದ ಮಣ್ಣನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ಈ ದ್ರವವನ್ನು ಮೂರು ದಿನದ ನಂತರ ಐದು ದಿನಗಳ ಒಳಗೆ 15 ದಿನಗಳಿಗೊಮ್ಮೆ ಭೂಮಿ ತೇವಾಂಶ ಹೊಂದಿರುವಾಗ ಹಾಗೂ ಸೂರ್ಯನ ಕಿರಣಗಳ ಪ್ರಖರತೆ ಕಡಿಮೆ ಇರುವಾಗ ಬಳಕೆ ಮಾಡುತ್ತಾ ಬಂದರೆ ನಮ್ಮ ಬೇಸಾಯಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳ ಬಳಕೆ ಅವಶ್ಯವಿರುವುದಿಲ್ಲ. ಈ ರೀತಿ ಮಾಡಿದಾಗ ನಮ್ಮ ಬೇಸಾಯ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚುತ್ತಾ ಬಂದು ಭೂಮಿ ಫಲವತ್ತತೆಯತ್ತ ಸಾಗುತ್ತದೆ. ಈ ರೀತಿ ಸಾಗಿದಾಗ ನೀರಿನ ಅವಶ್ಯಕತೆಯೂ ಸಹ ಕಡಿಮೆಯಾಗುತ್ತದೆ.

ನಿಜವಾದ ರೈತನಾದೊಡೆ ಒಂದು ಸತ್ಯದ ಅರಿವಾಗಿರಲೇ ಬೇಕು - ಅದೆಂದರೆ, ಆಕಳು ಸಾಯಂಕಾಲ ಹೊಲಗಳಿಂದ ಮನೆಗೆ ಬರುವಾಗ ಭೂತಾಯಿಯ ಮೇಲೆ ಸಗಣಿ ಹಾಕಿದ ಸಂದರ್ಭದಲ್ಲಿ ಬೆಳಿಗ್ಗೆ ಎದ್ದು ಆ ಸಗಣಿಯನ್ನು ಗಮನಿಸಿದಾಗ ಸಗಣಿಯ ಒಳಗೆಲ್ಲಾ ಅನೇಕ ರೀತಿಯ ಹುಳು-ಉಪ್ಪಟೆಗಳು ಇರುತ್ತವೆ. ಈ ಹುಳು-ಉಪ್ಪಟೆಗಳೆಲ್ಲಾ ತಿಂದು ಉಳಿದ ಸಗಣಿ ಗೊತ್ತಿಲ್ಲದ ಹಾಗೆ ಭೂತಾಯಿಯ ಒಡಲನ್ನು ಸೇರಿ ಭೂತಾಯಿಯ ಫಲವತ್ತತೆಗೆ ಕಾರಣವಾಗುತ್ತದೆ. ರಾಸಾಯನಿಕ ಕೃಷಿಗೆ ಬಳಸುವ ಅಮೋನಿಯಾ, ನೈಟ್ರೇಟ್, ಫಾಸ್ಫರಸ್‌ಗಳ ಒಂದಿಷ್ಟು ಪುಡಿಯನ್ನು ಭೂತಾಯಿಯ ಮೇಲ್ಭಾಗದಲ್ಲಿ ಸಗಣಿಯಂತೆ ಹಾಕಿ ಪರೀಕ್ಷಿಸಿದಾಗ ಅಲ್ಲಿ ಯಾವುದೇ ಹುಳು-ಉಪ್ಪಟೆಗಳು ಅದರ ಕಡೆ ಮುಖ ಮಾಡಿರುವುದನ್ನು ನೋಡಲಾಗದು. ಹಾಗೆಯೇ, ಅದರ ಪ್ರಭಾವಕ್ಕೆ ಅಪ್ಪಿ ತಪ್ಪಿ ಸಿಕ್ಕ ಹುಳುಗಳು ತಮ್ಮ ಪ್ರಾಣ ತ್ಯಾಗ ಮಾಡಿರುತ್ತವೆ. ಈ ಘಟನೆಯ ಅರಿವು ನಮಗಾದಾಗ ನಾವು ನ್ಯಾಯವಾಗಿ ಆಯ್ಕೆಮಾಡಿಕೊಳ್ಳಬೇಕಾದ್ದು ನೈಸರ್ಗಿಕ ಕೃಷಿಯೇ? ಅಥವಾ ರಾಸಾಯನಿಕ ಕೃಷಿಯೇ? ಎಂಬ ನಿಜವಾದ ಸತ್ಯದ ಅರಿವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಾವು ನಿಧಾನವಾಗಿಯಾದರೂ ಸರಿಯೇ ನೈಸರ್ಗಿಕವಾಗಿ ನಮ್ಮ ಭೂಮಾತೆಯನ್ನು ಬೇಸಾಯಕ್ಕೆ ಅಳವಡಿಸುತ್ತಾ ಸಾಗಬೇಕಾಗುತ್ತದೆ. ಹೀಗೆ ಸಾಗಬೇಕಾದಾಗ ನಮಗೆ ಮೊದಲು ದೇಶೀ ತಳಿಯ ಹಸುಗಳು ತುಂಬಾ ಅವಶ್ಯಕ. ಕಾರಣ, ಇವು ನಮ್ಮ ಪರಿಸರಕ್ಕೆ ಹೊಂದಿಕೊಂಡು ದಷ್ಟಪುಷ್ಟವಾಗಿ, ಆರೋಗ್ಯದಾಯಕವಾಗಿರುತ್ತವೆ. ನಮ್ಮ ಬೇಸಾಯಕ್ಕೆ ಪೂರಕ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಟ್ರಾಕ್ಟರಿನಿಂದ ಉಳಿಮೆ ಹಾಗೂ ಇನ್ನಿತರೆ ಕಾರ್ಯಗಳಿಗೆ ಕೊಡಬೇಕಾದ ಹಣದ ಉಳಿತಾಯವೂ ಆಗುತ್ತದೆ. ನಂತರ ಇವು ಕೊಡುವ ಸಗಣಿ-ಗಂಜಲಗಳನ್ನು ಬೇಸಾಯಕ್ಕೆ ಗೊಬ್ಬರವಾಗಿ ಬಳಸಿದಾಗ ರಾಸಾಯನಿಕ ಗೊಬ್ಬರಕ್ಕೆ ಕೊಡುವ ಹಣ ಉಳಿತಾಯವಾಗುತ್ತದೆ. ಇದೇ ರೀತಿ ದೇಶೀ ತಳಿಯ ಬೆಳೆಗಳ ಬಿತ್ತನೆ ಬೀಜಗಳನ್ನು ಬಳಸಿದಾಗ ದೇಶೀ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ರೋಗ ನಿವಾರಕ, ಕೀಟ ನಿವಾರಕ, ರಾಸಾಯನಿಕ ಔಷಧಿಗಳ ಬಳಕೆ ಕಡಿಮೆ ಮಾಡಿದಂತಾಗುತ್ತದೆ. ಇದರಿಂದಲೂ ಹಣ ಉಳಿತಾಯವಾಗುವುದಲ್ಲದೇ ನಮ್ಮ ಭೂಮಾತೆಯನ್ನು ವಿಷ ಸಿಂಪಡಣೆಯಿಂದ ದೂರವಿಟ್ಟು ಭೂಮಾತೆಯನ್ನು ಬೇಸಾಯಕ್ಕೆ ಯೋಗ್ಯಳನ್ನಾಗಿ ಮುಂದುವರೆಸಿದಂತಾಗುತ್ತದೆ. ಈಗ ನಡೆಯುತ್ತಿರುವ ಹಾಗೆ ರಾಸಾಯನಿಕ ಕೃಷಿಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲು ಅಸಾಧ್ಯ ವಾತಾವರಣ ಸೃಷ್ಟಿಯಾಗಿ, ಆಹಾರ ಕೊರತೆ ಹೆಚ್ಚಾಗಿ ರೋಗ-ರುಜಿನಗಳು ಹೆಚ್ಚಾಗಿ ಮಾನವ ತನ್ನ ಸಾವಿನ ಗುಂಡಿಯನ್ನು ತಾನೇ ತೋಡಿಕೊಂಡಂತಾಗುತ್ತದೆ.

ಯಾವುದೇ ವೃತ್ತಿಯಾದರೂ ಇಂದು ಮುಖ್ಯವಾಗಿ ಬೇಕಾಗಿರುವುದು ವೃತ್ತಿ ನೈಪುಣ್ಯತೆ, ಶಿಸ್ತು ಹಾಗೂ ಸಮಗ್ರತೆಯ ಅಳವಡಿಕೆ. ಇವಿಲ್ಲವಾದರೆ ಸಾಧನೆ ಅಸಾಧ್ಯ. ಇಂದು ಕೃಷಿಯಲ್ಲಿ ಮಿಶ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಕೃಷಿಗೆ ಉಪ ಕಸುಬುಗಳು ಬಹಳ ಅವಶ್ಯಕ. ಕೃಷಿ ಹಾಗೂ ಕೃಷಿ ಸಂಬಂಧಿಸಿದ ಉಪ ಕಸುಬುಗಳು ಒಂದಕ್ಕೊಂದು ಪೂರಕವೆಂಬುದನ್ನು ನಾವು ಅರಿತಾಗ ಗುರಿ ತಲುಪುವುದು ಸುಲಭ. ಕೃಷಿಯ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಮತ್ತು ಮೇಕೆಗಳ ಸಾಕಾಣಿಕೆ - ಎಲ್ಲವೂ ಕೃಷಿ ಪೂರಕವಾಗಿವೆ. ಇವುಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ನಮ್ಮ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯ.

ಲೇಖಕರ ಕಿರುಪರಿಚಯ
ಶ್ರೀ ಸಿ. ಎಂ. ಶಿವಣ್ಣ

ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನವರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೂನ್ಯ ಬಂಡವಾಳ ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು, ರೈತರಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 17, 2015

ಕಾರು ಬೇಕೆ? ಕಾರು..?

ಒಂದು ದಿನ ಕಛೇರಿಯಿಂದ ಮನೆಗೆ ಹಿಂದಿರುಗಿ, ಉಸ್ಸೆಂದು ಸೋಫಾ ಮೇಲೆ ಕುಕ್ಕರಿಸಿದೆ. ಕೆಲ ಕ್ಷಣಗಳಲ್ಲೇ ಅಡುಗೆ ಮನೆಯಿಂದ ಕಾಫಿ ಲೋಟವನ್ನು ತಂದ ನನ್ನ ಮಡದಿ, ನನ್ನ ಮುಂದಿದ್ದ ಟೀಪಾಯಿಯ ಮೇಲೆ ಕಾಫಿ ಲೋಟವನ್ನು ಕುಕ್ಕಿ (ಅಲ್ಲ.. ಅಲ್ಲ.. ಇಟ್ಟು): "ಜ್ಞಾಪಕ ಇದೆ ತಾನೆ? ನಾಳಿದ್ದು ಭಾನುವಾರ ನಮ್ಮ ಕಿಟ್ಟಣ್ಣನ ಮನೆ ಗೃಹ ಪ್ರವೇಶ. ಇವತ್ತೇ ಅಂಗಡಿಗೆ ಹೋಗಿ ಜಯಂತಿ ಅತ್ತಿಗೆಗೆ ಒಂದು ಸೀರೆ, ಕಿಟ್ಟಣ್ಣನಿಗೆ ಶರ್ಟ್-ಪ್ಯಾಂಟ್ ಪೀಸು ತರಬೇಕು; ಬೇಗ ಕಾಫಿ ಕುಡಿದು ಹೊರಡಿ" ಎಂದಳು. ಕಾಫಿ ಲೋಟವನ್ನು ತೆಗೆದುಕೊಳ್ಳಲು ಚಾಚಿದ ನನ್ನ ಕೈ ಹಾಗೆಯೇ ಉಳಿಯಿತು; ಎನೋ ಹೇಳಬೇಕೆಂದು ತೆರೆದ ಬಾಯಿ (ಧೈರ್ಯ ಸಾಲದೇ) ತೆರೆದೇ ಇತ್ತು; ಹಾಗೇ ಹೆಂಡತಿ ಮುಖ ನೋಡುತ್ತಾ ಕುಳಿತೆ. "ಅಯ್ಯೋ! ಅದೇನು ಹಾಗೆ ಬಾಯಿ ಬಿಟ್ಕೊಂಡು ನೋಡ್ತಾ ಕೂತಿರಿ? ಕಾಫಿ ಲೋಟ ತೊಗೊಳ್ಳಿ" ಎಂದು ಎಚ್ಚರಿಸಿದಳು.

ಆಜ್ಞಾನುಸಾರವಾಗಿ ನಾನು ಕಾಫಿ ಹೀರುತ್ತಾ ಕುಳಿತೆ. ಅಷ್ಟರಲ್ಲಿ ಮಹಡಿಯಿಂದ ಇಳಿದು ಬಂದ ನನ್ನ ಮಗಳು: "ಅಪ್ಪಾ.. ನಾಳಿದ್ದೂ ಟ್ಯಾಕ್ಸಿಲೇ ಹೋಗಬೇಕಾ? ಒಂದು ಸೆಕೆಂಡ್ ಹ್ಯಾಂಡಾದ್ರೂ ಸರಿ, ಕಾರು ತಗೋಳ್ಳೀಪ್ಪಾ! ನಾವೆಷ್ಟು ಹೇಳಿದ್ರೂ ಕಿವಿ ಮೇಲೆ ಹಾಕ್ಕೊಳ್ಳೋಲ್ಲ ನೀವು. ನಮ್ಮೆಲ್ಲಾ ರಿಲೇಟೀವ್ಸ್ ಅವರವರ ಕಾರುಗಳಲ್ಲಿ ಬಂದಿಳೀತಾರೆ; ನಾವು ಮಾತ್ರ ಬಸ್ಸಲ್ಲೋ, ಟ್ಯಾಕ್ಸಿಯಲ್ಲೋ ಹೋಗಬೇಕು. ಎಷ್ಟು ಮುಜುಗರ ಆಗುತ್ತೆ ಗೊತ್ತಾ?" ಎಂದುಲಿದಳು. "ಅಯ್ಯೋ ಬಿಡು, ನಾವೆಲ್ಲಾ ಎಷ್ಟು ಹೇಳಿದ್ರೂ ನಿಮ್ಮಪ್ಪ ತಮ್ಮ ಮನಸ್ಸಿಗೆ ಬಾರದ ಹೊರೆತೂ ಯಾವ ಕೆಲಸವನ್ನೂ ಮಾಡೋಲ್ಲಾ. ನಾನೂ ದುಡೀತಾ ಇದೀನಿ, ನನ್ನ ಮಾತಿಗೆ ಸ್ವಲ್ಪನಾದ್ರೂ ಬೆಲೆ ಇದೆಯಾ? ಊಹೂಂ, ಇಲ್ವೇ ಇಲ್ಲ" ಎಂದು ಆರೋಪಿಸಿದಳು ಪತ್ನಿ. "ಅಪ್ಪಾ.. ಈಗ ಎಲ್ಲ ಬ್ರಾಂಡಿನ ಕಾರುಗಳ ಬೆಲೇನೂ ಕಡಿಮೆ ಆಗಿದೆ. ಅಲ್ಲದೇ ಪ್ರೀ-ಓನ್ಡ್ ಕಾರುಗಳಿಗೂ ಲೋನ್ ಕೊಡ್ತಾರೆ. ಕಾರು ಕೊಳ್ಳೋದು ಈಗ ಬಹಳ ಸುಲಭ ಅಪ್ಪಾ" ಎಂದ ಪಕ್ಕದಲ್ಲಿದ್ದ ನನ್ನ ಮಗರಾಯ.

ಅಂದು ರಾತ್ರಿ ಯಾಕೋ ಬೇಗ ನಿದ್ದೆಯೇ ಹತ್ತಲಿಲ್ಲ. ಹೆಂಡತಿಯ ಕೊರೆತ ತಾಳಲಾರದೇ ನಾನೂ ಬೆಂಗಳೂರಿನಲ್ಲಿ 30x40 ನಿವೇಶನದಲ್ಲಿ ಮೂರು ರೂಮುಗಳ ಒಂದು ಡೂಪ್ಲೆಕ್ಸ್ ಮನೆ ಕಟ್ಟಿ ಆರೇಳು ವರ್ಷಗಳೇ ಕಳೆದಿವೆ. ಮಕ್ಕಳಿಬ್ಬರೂ ಇಂಜಿನಿಯರಿಂಗ್ ಓದಿಗಾಗಿ ಬೆಂಗಳೂರಿನಲ್ಲೇ ಸೇರಿದ್ದಾಗಿದೆ. ಇಬ್ಬರದ್ದೂ ಮೆರಿಟ್ ಸೀಟೇ ಆದುದರಿಂದ ಹೆಚ್ಚೇನೂ ಕಷ್ಟವಾಗಲಿಲ್ಲ. ಆದರೂ ನಾನು ಈ ಕಾರು ಕೊಳ್ಳುವ ಯೋಜನೆಯನ್ನು ಸುಮಾರು ದಿನಗಳಿಂದ ಮುಂದೂಡುತ್ತಾ ಬಂದಿದ್ದೇನೆ.

ಕಿಟ್ಟಣ್ಣನ ಮನೆಯ ಗೃಹ ಪ್ರವೇಶಕ್ಕೆ ಅಂತೂ ಬಾಡಿಗೆ ಟ್ಯಾಕ್ಸಿಯಲ್ಲೇ ಹೋಗಿಬಂದದ್ದಾಯಿತು. ಕಾರು ಕೊಳ್ಳುವ ಯೋಚನೆ ತಲೆ ಕೊರೆಯಲು ಪ್ರಾರಂಭವಾಯ್ತು- ಹೊಸ ಕಾರು ಕೊಳ್ಳುವುದಾದರೆ ಹೆಚ್ಚು ಹಣ ಹೊಂದಿಸಬೇಕಾಗುತ್ತದೆ; ಸಾಲ ಹೆಚ್ಚಾಗುತ್ತದೆ. ಈ ಮನೆ ಕಟ್ಟಲು ಮಾಡಿದ ಹೌಸಿಂಗ್ ಲೋನ್ ಇನ್ನೂ ಪೂರ್ತಿ ತೀರಿಲ್ಲ. ಮಕ್ಕಳ ಓದಿನ ಖರ್ಚೂ ಇರುತ್ತೆ. ಒಂದು ಸೆಕೆಂಡ್ ಹ್ಯಾಂಡ್ ಕಾರು ವಾಸಿ ಎನ್ನಿಸಿತು. ಮನಸ್ಸು ಗಟ್ಟಿಯಾದ ಮೇಲೆ ಒಂದು ದಿನ ತೀರ್ಮಾನವನ್ನು ಮನೆಯಲ್ಲಿ ಘೋಷಿಸಿದೆ, ಎಲ್ಲರಿಗೂ ಸಂತಸವಾಯಿತು. "ಅಪ್ಪಾ ಫೋರ್ಡ್ ಐಕಾನ್, ಹುಂಡೈ ಅಕ್ಸೆಂಟ್ ಅಂತಹಾ ಕಾರುಗಳಾದರೆ ವಾಸಿ, ಐದೂ ಜನ ಆರಾಮವಾಗಿ ಹೋಗಬಹುದು" ಎಂದ ಮಗರಾಯ. "ನೀವು ಕೆಲಸಕ್ಕೆ ಸೇರಿ, ನಿಮಗೆ ಯಾವುದು ಬೇಕೋ ತೊಗೊಳ್ಳಿ. ನಮಗೆ ಅದೆಲ್ಲಾ ಬೇಡಾ; ನಮ್ಮ ದೇಶದ ಜನಪ್ರಿಯ ಬ್ರಾಂಡಿನ ಸಣ್ಣ ಕಾರು ಸಾಕು" ಎಂದು ನಾನು ಹೇಳಿದಾಗ ಅವನಿಗೆ ನಿರಾಶೆಯಾಯಿತು. ಆಯಾ ಕಂಪನಿಗಳವರೇ ಈಗ ಪ್ರೀ-ಓನ್ಡ್ ಕಾರುಗಳನ್ನೂ ಮಾರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಮೂರು ಕಡೆ ಸುತ್ತಾಡಿ, ಒಂದು ಕಡೆ ನಮಗೆ ಇಷ್ಟವೆನಿಸಿದ ಕಾರಿನ ಬೆಲೆ, ಇತ್ಯಾದಿ ಹೊಂದಾಣಿಕೆ ಆದ ನಂತರ ಹತ್ತು ಸಾವಿರ ರೂಪಾಯಿಗಳ ಚೆಕ್ ನೀಡಿ ಬಂದದ್ದಾಯಿತು. ನಂತರ ಪಿ. ಎಫ್. ನಿಂದ ಹಣ ತೆಗೆದುಕೊಂಡು, ಹೆಂಡತಿಯು ನೀಡಿದ ದೇಣಿಗೆಯನ್ನೂ ಸೇರಿಸಿ, ಮತ್ತಿನ್ನೆಲ್ಲೂ ಸಾಲ ತೆಗೆದುಕೊಳ್ಳದೇ, ಕೇವಲ 80000(!!) ಕಿ.ಮೀ. ಓಡಿದ್ದ ಒಂದು ಕಾರನ್ನು ಖರೀದಿಸಿದ್ದಾಯಿತು. ಡ್ರೈವಿಂಗ್ ಸ್ಕೂಲಿನಲ್ಲಿ ಕಲಿತು, ಲೈಸನ್ಸ್ ಕೂಡ ಪಡೆದದ್ದಾಯಿತು.

ನಮ್ಮ ಮನೆ ಸ್ವಲ್ಪ ತಗ್ಗು ಪ್ರದೇಶದಲ್ಲಿದೆ (ಆದರೆ, ನಮ್ಮ ಮನೆಯ ಹಿಂದಕ್ಕೆ ಇನ್ನೂ ಇಳಿಜಾರಿನ ಪ್ರದೇಶವಿದೆ, ಆ ಮಾತು ಬೇರೆ). ಕಾರು ಕೊಂಡ ಹೊಸತರಲ್ಲಿ ಎಲ್ಲರನ್ನೂ ಕೂಡಿಸಿಕೊಂಡು ಒಂದು ಸುತ್ತು ಹೋಗಿಬರೋಣವೆಂದು ಮನೆಯವರನ್ನು ಹೊರಡಿಸಿದೆ. ಎಲ್ಲರೂ ಬಹು ಉತ್ಸಾಹದಿಂದ ಹೊರಟರು. ಸ್ವಲ್ಪ ದೂರ ಏರು ಪ್ರದೇಶದ ರಸ್ತೆಯಲ್ಲಿ ಕ್ರಮಿಸಿಯಾದ ಮೇಲೆ ಮೊದಲ ಗೇರಿನಿಂದ ಎರಡನೇ ಗೇರಿಗೆ ಬಂದಕೂಡಲೇ, ಆ ಏರು ಪ್ರದೇಶವನ್ನು ಹತ್ತಲಾಗದೇ ಕಾರು ನಿಂತು ಬಿಟ್ಟಿತು; ಹೇಗೋ ಹ್ಯಾಂಡ್ ಬ್ರೇಕ್ ಹಾಕಿ, ಕಾರು ಹಿಂದೆ ಜಾರದಂತೆ ನಿಲ್ಲಿಸಿದೆ. ಸ್ಟಾರ್ಟ್ ಮಾಡಿ ಮೊದಲ ಗೇರಿಗೆ ಹಾಕಿ ಹ್ಯಾಂಡ್ ಬ್ರೇಕ್ ತೆಗೆದ ಕೂಡಲೇ ಮತ್ತೆ ಹಿಂದೆ ಜಾರಲು ಪ್ರಾರಂಭಿಸಿ, ಒಳಗಿದ್ದವರೆಲ್ಲಾ ಗಾಬರಿಗೊಳ್ಳುವಂತೆ ಆಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಮಡದಿಯಂತೂ ಹೆದರಿ ಕಂಗಾಲಾಗಿ, ಕೈಜೋಡಿಸಿ, ಬಾಯಲ್ಲಿ ಪಿಟಿ ಪಿಟಿ ಎಂದು ಗುರು ರಾಘವೇಂದ್ರರ ಶ್ಲೋಕ ಪಠಿಸಲು ಪ್ರಾರಂಭಿಸಿದಳು. "ಅಪ್ಪಾ, ಹೋಗಲಿ, ನಾವೆಲ್ಲಾ ಇಳಿದಕೊಂಡು ಬಿಡೋಣ್ವಾ? ತೂಕ ಕಡಿಮೆಯಾದರೆ ಕಾರು ಈ ಅಪ್ಪು ಹತ್ತಬಹುದೇನೋ?" ಎಂದಳು ಮಗಳು. ನನಗಂತೂ ಯಾರ ಮಾತೂ ತಲೆಗೆ ಹೋಗದು, ಪುನಃ ಪುನಃ ಪ್ರಯತ್ನಿಸುತ್ತಿದ್ದೆ. ಕೊನೆಗೂ ನಮ್ಮ ಕಾರು ಆ ಏರು ರಸ್ತೆಯನ್ನು ದಾಡಿಬಿಟ್ಟಿತು! ಆದರೆ ಈ ಯಶಸ್ಸು ಕ್ಷಣಿಕವಾಯ್ತು; ಸ್ವಲ್ಪ ದೂರ ಓಡಿ, ಹಠಹಿಡಿದು ಮುಂದೆ ಓಡದೇ ನಿಂತೇ ಬಿಟ್ಟಿತು! ಬಾನೆಟ್ಟಿನಿಂದ ಹೊಗೆ ಹೊರಡಲು ಪ್ರಾರಂಭವಾಯಿತು. ನಾನು ಗಾಬರಿಗೊಂಡು ಎಂಜಿನ್ ಆಫ್ ಮಾಡಿ ಕುಳಿತೆ. ಇದಿಷ್ಟಾಗುವ ವೇಳೆಗೆ ಎಲ್ಲರಿಗೂ "ಜಾಲಿ ರೈಡ್" ಸಾಕಾಗಿಹೋಗಿತ್ತು.
ಚಿತ್ರ ಕೃಪೆ: ಎಡ್ರಿಯಾನ

"ನಾವೆಲ್ಲರೂ ಮನೆಗೆ ನಡೆದುಕೊಂಡು ಹೋಗಿರ‍್ತೀವಿ; ನೀವು, ನಿಮ್ಮ ಮಗ ಇದ್ದು, ಅದೇನೋ ನೋಡಿಕೊಂಡು ಕಾರು ತಗೊಂಡು ಬನ್ನಿ" ಎಂದು ಹೇಳಿದ ಮಡದಿ, ತನ್ನ ಅತ್ತೆ, ಮಗಳನ್ನು ಕರೆದುಕೊಂಡು ಹೊರಟೇಬಿಟ್ಟಳು. "ಅಪ್ಪಾ.. ಈ ವಿಂಡೋ ಗ್ಲಾಸಿನ ಮೇಲೆ ಹೆಲ್ಪ್‌ಲೈನ್ ನಂಬರ್ ಕೊಟ್ಟಿದ್ದಾರೆ, ಫೋನ್ ಮಾಡಿ ನೋಡಿ, ಯಾರನ್ನಾದರೂ ಕಳಿಸಬಹುದು" ಎಂದು ಸಲಹೆ ನೀಡಿದ ಮಗ. ಅಂತೂ ಅರ್ಧ ಘಂಟೆಯೊಳಗೆ ಕಂಪನಿಯ ಇಬ್ಬರು ಒಂದು ಬೈಕಿನಲ್ಲಿ ಬಂದಿಳಿದು, ಅವರಲ್ಲೊಬ್ಬ ಬಾನೆಟ್ ತೆಗೆದು ಪರೀಕ್ಷಿಸಿ "ಸರ್, ಕೂಲೆಂಟ್ ಆಯಿಲ್ ಖಾಲಿಯಾಗಿದೆ" ಎಂದು ಹೇಳಿದ. "ಅಲ್ಲರೀ, ನಿಮ್ಮ ಕಂಪನಿಯಿಂದ ಕಾರು ತೊಗೊಂಡ ಮೇಲೆ ಇಪ್ಪತ್ತೈದು ಕಿಲೋಮೀಟರ್ ಕೂಡ ಓಡಿಸಿಲ್ಲ, ನಿಮ್ಮ ವಾರಂಟಿ ಒಂದು ವರ್ಷದವರೆಗೂ ಇದೆ, ಗೊತ್ತು ತಾನೆ?" ಎಂದು ಕೋಪದಿಂದಲೇ ಹೇಳಿದೆ. "ಸರಿ ಸರ್.. ಆದರೆ ಆ ವಾರಂಟಿಲಿ ಕೂಲೆಂಟ್ ಆಯಿಲ್ ಸೇರಿದೆಯೋ ಇಲ್ಲವೋ ಕಂಪನಿಗೆ ಫೋನ್ ಮಾಡಿ ಕೇಳ್ತೀನಿ ಇರಿ" ಎಂದು ಹೇಳಿದವನು ನಂತರ "ಆಯ್ತು ಸಾರ್.. ಕೂಲೆಂಟ್ ನಾವೇ ಹಾಕಿಕೊಡ್ತೀವಿ" ಎಂದು ಹೇಳಿ, ಬೈಕ್ ನಲ್ಲೇ ಹೋಗಿ ಕೂಲೆಂಟ್ ಆಯಿಲ್ ತಂದು ಹಾಕಿ, ಮತ್ತೇನೋ ಮಾಡಿ ಕಾರು ಸ್ಟಾರ್ಟ್ ಮಾಡಿದ. "ನೀವೇ ತಂದು ಮನೆಯಲ್ಲಿ ಪಾರ್ಕ್ ಮಾಡಿ ಬಿಡೀಪ್ಪಾ, ನನಗಂತೂ ಸಾಕಾಗಿ ಹೋಯ್ತು" ಎಂದು ಹೇಳಿದೆ. ಅವರು ಅಂತೆಯೇ ಮಾಡಿದರು. ಡ್ರೈವಿಂಗ್ ಚೆನ್ನಾಗಿ ಕಲಿಯುವವರೆಗೂ ಮನೆಯವರೆಲ್ಲರನ್ನೂ ಕರೆದುಕೊಂಡು ಎಲ್ಲೂ ಹೋಗಬಾರದೆಂದು ತೀರ್ಮಾನಿಸಿದೆ.

ಮತ್ತೊಂದು ಭಾನುವಾರ ಡ್ರೈವಿಂಗ್ ಪ್ರಾಕ್ಟೀಸ್ ಮಾಡೋಣವೆಂದುಕೊಂಡು ಮಗನನ್ನು ಪುಸಲಾಯಿಸಿ ಜೊತೆಮಾಡಿಕೊಂಡು ಹೊರಟೆ. ಒಂದೆರಡು ಕಿಲೋಮೀಟರ್ ಪ್ಯಾಯಾಣ ಚೆನ್ನಾಗಿತ್ತು, ಸ್ವಲ್ಪ ಧೈರ್ಯ ಬಂದಂತಾಯ್ತು. ಹಾಗೆಯೇ ಒಂದು ಕಡೆ ಬಲಕ್ಕೆ ಕಾರನ್ನು ತಿರುಗಿಸುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಕಾರು ಇನ್ನೇನು ನಮ್ಮ ಕಾರಿಗೆ ಢಿಕ್ಕಿ ಹೊಡೆದೇ ಬಿಡುವಷ್ಟು ಹತ್ತಿರ ಬಂದು ಕರ್ರೆಂದು ನಿಂತಿತು. ಆ ಕಾರಿನಿಂದ ಕೆಳಗಿಳಿದ ಒಬ್ಬನು "ಅಲ್ರೀ ಸ್ವಾಮಿ.. ಮೈನ್ ರೋಡಿನಲ್ಲಿ ಕಾರು ಓಡಿಸುವವರು ನಿದ್ದೆ ಮಾಡುತ್ತೀರೋ, ಏನು ಕತೆ? ಇಂಡಿಕೇಟರ್ ಹಾಕಬೇಕು ಅನ್ನುವ ಜ್ಞಾನ ಬೇಡ್ವಾ ನಿಮಗೆ?" ಎಂದು ಹಿಗ್ಗಾ ಮುಗ್ಗಾ ಬೈಯಲಾರಂಭಿಸಿದ. ನಾನು ಗಾಬರಿಗೊಂಡು ಪರೀಕ್ಷಿಸಿದರೆ, ಇಂಡಿಕೇಟರ್ ನಾಬ್ ಆನ್ ಆಗಿತ್ತು.. ಆದರೆ ಹೊರಗಡೆ ಇಂಡಿಕೇಟರ್ ಲೈಟು ಆನ್ ಅಗುತ್ತಿರಲಿಲ್ಲ. "ಓಹೋ.. ಇನ್ನೂ ಎಲ್ ಬೋರ್ಡು ಬೇರೆ" ಎಂದುಕೊಂಡು ಆತ ಹೊರಟುಹೋದ. ಮತ್ತೆ ಅದೇ ಹೆಲ್ಪ್ ಲೈನ್ ನಂಬರಿಗೆ ಫೋನ್ ಮಾಡಿ ಕೂಗಾಡಿದೆ. "ಸಾರ್, ನೀವು ಹೇಗೂ ನಮ್ಮ ಕಂಪನಿಯ ಹತ್ತಿರಾನೇ ಇದ್ದೀರಾ, ಇಲ್ಲಿಗೇ ಬಂದುಬಿಡಿ ನೋಡೋಣ" ಎಂದ ಆ ಕಡೆಯಿಂದ.

ಮತ್ತೊಮ್ಮೆ, ಬಿಗ್ ಬಜಾರಿಗೆ ಹೋಗಿ ತಿಂಗಳಿಗೆ ಬೇಕಾಗುವ ದವಸ, ಧಾನ್ಯ, ಇನ್ನಿತರೆ ಕೆಲವು ಸಾಮಾನು ತರೋಣವೆಂದು ಹೋದೆವು. ಖರೀದಿಯೆಲ್ಲಾ ಮುಗಿಸಿ, ಕಾರಿನಲ್ಲಿ ಹಾಕಿಕೊಂಡು ಹಿಂದಿರುಗುತ್ತಿದ್ದೆವು. ರಸ್ತೆಯಲ್ಲಿ ಎರಡೂ ಬದಿಗೆ ಅವರ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸಿದ್ದರು. ನಾನು ಬಹಳ ಜಾಗರೂಕತೆಯಿಂದ ಕಾರು ಓಡಿಸುತ್ತಿದ್ದೆ. ಆದರೆ, ಎದುರಿನಿಂದ ಬಂದ ಒಂದು ಟಾಟಾ ಸೂಮೋ ಟ್ಯಾಕ್ಸಿ ಇನ್ನೇನು ನಮ್ಮ ಕಾರನ್ನು ಉಜ್ಜಿಕೊಂಡು ಹೋಯಿತೇನೋ ಎನ್ನುವಂತೆ ನುಗ್ಗಿಸಿಕೊಂಡು ಹೋಗಿಬಿಟ್ಟ. ನಾನು ಗಾಬರಿಗೊಂಡು ಸೀದಾ ರಸ್ತೆಯ ಎಡಭಾಗಕ್ಕೆ ತಿರುಗಿಸಿಬಿಟ್ಟೆ ನೋಡಿ! ಮತ್ತೊಂದು ಕಾರಿಗೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸಿ, ಒಂದು ಮನೆಯ ಕಾಂಪೌಂಡಿಗೆ ಢಿಕ್ಕಿ ಹೊಡೆದೇ ಬಿಟ್ಟಿತು. ಕಾಂಪೌಂಡ್ ಮುರಿದಿದ್ದರಿಂದ, ಆ ಮನೆಯವರು ರಿಪೇರಿ ಖರ್ಚನ್ನು ಕೊಡುವವರೆಗೂ ಬಿಡುವುದಿಲ್ಲವೆಂದು ಪಟ್ಟು ಹಿಡಿದ ಕಾರಣ, ಕಾರಿನಲ್ಲಿದ್ದ ಚೆಕ್ ಬುಕ್ಕಿನಿಂದ ಹತ್ತು ಸಾವಿರಕ್ಕೆ ಬರೆದ ಒಂದು ಚೆಕ್ ಕೊಟ್ಟಿದ್ದಾಯ್ತು. ಕಾರಿನ ಮುಂಭಾಗ ಸಾಕಷ್ಟು ಜಜ್ಜಿ ಹೋಗಿ, ಸ್ಟಾರ್ಟ್ ಮಾಡಲೂ ಸಾಧ್ಯವಾಗಲಿಲ್ಲ.

ಮತ್ತೆ ಹೆಲ್ಪ್ ಲೈನ್ ನಂಬರಿಗೆ ಫೋನ್ ಮಾಡಿ, ಹೀಗಾಗಿದೆಯೆಂದು ತಿಳಿಸಿದೆ. ಅವರು ಟೋ ವ್ಯಾನಿನ ಸಹಾಯದಿಂದ ಕಾರನ್ನು ಗೆರಾಜಿಗೆ ತೆಗೆದುಕೊಂಡು ಹೋದರು. ಒಂದೆರಡು ದಿನಗಳಲ್ಲಿ ಕಾರಿನ ಕಂಪನಿಯವರು ನನಗೆ ಫೋನ್ ಮಾಡಿ, ರಿಪೇರಿ ಖರ್ಚಾ ಸುಮಾರು 70-75 ಸಾವಿರಗಳಾಗಬಹುದೆಂದೂ, ಇನ್ಷುರೆನ್ಸ್ ಕಂಪನಿಯವರಿಂದ 50 ಸಾವಿರದವರೆಗೂ ಸಿಗಬಹುದೆಂದು ತಿಳಿಸಿದರು. ಮತ್ತೇನು ಮಾಡುವುದು? ರಿಪೇರಿ ಕಾರ್ಯ ಮಾಡಿಮುಗಿಸಲು ತಿಳಿಸಿದೆ.

ರಿಪೇರಿಗೊಂಡ ಕಾರನ್ನು ಹಿಂದೆ ಪಡೆಯಲು ಹೋದಾಗ ಆ ಕಂಪನಿಯವರಿಗೆ "ಈ ಕಾರನ್ನು ಮಾರಿಬಿಡುತ್ತೇನೆ, ನೀವೇ ಕೊಂಡುಕೊಳ್ಳಿ" ಎಂದು ಹೇಳಿದೆ. "ಸರ್, ಈಗ ಯುಸ್ಡ್ ಕಾರುಗಳಿಗೆ ಬೆಲೆಯೇ ಇಲ್ಲ. ಕೆಲವರು ಕೊಂಡ ಹೊಸ ಕಾರುಗಳನ್ನೇ ಮಾರಲು ಕೆಲವೇ ದಿನಗಳಲ್ಲಿ ಬರ‍್ತಾರೆ, ಅಂತಹ ಹೊಸ ಕಾರುಗಳಿಗೇ 50% ಸಹ ಸಿಗೋಲ್ಲ. ಈ ಕಾರು ಐದಾರು ವರ್ಷ ಹಳೆಯದು, 80000 ಕಿ.ಮೀ. ಓಡಿದೆ; ಸಾಲದ್ದಕ್ಕೆ ಈಗ ಆಕ್ಸಿಡೆಂಟ್ ಆಗಿರುವ ಗಾಡಿ ಬೇರೆ; ಈ ಕಾರಿಗೆ ಏನು ಬೆಲೆ ಬರಬಹುದು ನೀವೇ ಹೇಳಿ ಸಾರ್" ಎಂದು ಹೇಳಿ, ಕೊಳ್ಳುವ ಆಸಕ್ತಿಯೇ ತೋರಿಸಲಿಲ್ಲ.

ಈ ಕಾರು ಕೊಂಡು, ಇಷ್ಟೆಲ್ಲಾ ಕಷ್ಟ ಅನುಭವಿಸಿ, ಮನೆಯವರುಗಳಿಂದಲೂ ಮೂತಿ ತಿವಿಸಿಕೊಂಡು ಸಾಕಾಗಿದೆ. ಕಾರನ್ನು ಹೊರಗೆ ತೆಗೆಯಲು ಧೈರ್ಯ ಬಾರದು, ಮನೆಯಲ್ಲಿ ಉಪಯೋಗಿಸದೇ ಹಾಗೆಯೇ ಇಟ್ಟುಕೊಳ್ಳಲಾಗದು. ಅಂದ ಹಾಗೆ.. ನಿಮಗೇನಾದರೂ ಕಾರು ಕೊಳ್ಳುವ ಬಯಕೆಯಿದ್ದರೆ ಒಮ್ಮೆ ಬನ್ನಿ,.. ನೋಡಿ.. ಸಸ್ತಾ ಬೆಲೆಗೇ ಕೊಟ್ಟುಬಿಡ್ತೇನೆ.. ಬರ‍್ತೀರಾ?

ಲೇಖಕರ ಕಿರುಪರಿಚಯ
ಶ್ರೀ ಜೆ. ಆರ್. ನರಸಿಂಹಸ್ವಾಮಿ

ಇವರ ಅನೇಕ ಬರವಣಿಗೆಗಳು ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ನಾಗಪುರದಲ್ಲಿನ ಭಾರತೀಯ ಅಂಚೆ ಕಚೇರಿಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಭಾಷಾಂತರ ತಜ್ಞರು.

Blog  |  Facebook  |  Twitter

ಸೋಮವಾರ, ನವೆಂಬರ್ 16, 2015

ದೇಶೀಯ ಗೋತಳಿಗಳ ಸಂರಕ್ಷಣೆ

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಮುಕ್ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋ ಮಾತೆಗೆ ತನ್ನ ಸಂಪರ್ಕಕ್ಕೆ ಬಂದದ್ದೆಲ್ಲವನ್ನೂ ಪಾವನಗೊಳಿಸುವ ಶಕ್ತಿ ಎನ್ನುತ್ತಾರೆ. ಪುಣ್ಯಕೋಟಿ, ಕಪಿಲೆ, ಸುರಭೀ, ನಂದಿನಿ, ಕಾಮಧೇನು, ಗೋಮಾತೆ ಎಂತಲೂ ಕರೆಯುವುದುಂಟು. ನಮ್ಮ ಧರ್ಮ, ಆಚಾರ, ವಿಚಾರ, ಆಚರಣೆ, ಪುರಾಣ, ಪುಣ್ಯಕಥೆಗಳಲ್ಲಿ ಗೋವು ಹಾಸುಹೊಕ್ಕಾಗಿದೆ. ಗೋಪೂಜೆ, ಗೋವ್ರತ, ಗೋದಾನ ಇತ್ಯಾದಿಗಳು ಸಹ ಕಂಡುಬರುತ್ತವೆ. ಋಗ್ವೇದದಲ್ಲಿ ಗೋವಿನ ಬಗ್ಗೆ ಹೀಗೆ ಹೇಳಿದೆ. 'ಮಾತಾ ರುದ್ರಾಣಾಂ ದು ಹಿತಾ ವಸುನಾಂ ಸ್ವಸಾದಿತ್ಯಾನಾಮಮೃತ್ಸಸ್ಯನಾಭಿ, ಪ್ರನುಮೋಚಂ ಚಕಿತುಷೇ ಜನಾಯ ಯಾಗಾಮನಾಗಾಮದಿತಿಂ ವವಿಷ್ಟ' ಅಂದರೆ ಗೋವು ರುದ್ರನ ತಾಯಿ, ವಸುಗಳ ಪುತ್ರಿ, ಅದಿತೇಯರ ಸೋದರಿ, ಕ್ಷೀರವೆಂಬ ಅಮೃತದ ನಿಧಿ, ಅವಳು ಅದಿತಿ, ಅವಳನ್ನು ಕತ್ತರಿಸಬಾರದು ಎಂಬರ್ಥ. ಇಲ್ಲಿ ಗೋವನ್ನು ತಾಯಿಯಾಗಿ, ಪುತ್ರಿಯಾಗಿ, ಸೊದರಿಯಾಗಿ, ಅಮೃತದ ತವನಿಧಿಯಾಗಿ ಗುರುತಿಸಲ್ಪಟ್ಟಿದೆ.

ದೇಶವನ್ನು ಆಳಿದ ರಾಜರು, ಸುಲ್ತಾನರು, ಪಾದ್ರಿಗಳು ಹಾಗೂ ವಿದೇಶಿಯರೂ ಕೂಡ ಗೋವಿಗೆ ಉನ್ನತ ಸ್ಥಾನ ನೀಡಿದ್ದರು. ಪುರಾತನ ಕಾಲದಲ್ಲಿ ಮನೆಯಲ್ಲಿ ಗೋವುಗಳಿರುವುದು ಪ್ರತಿಷ್ಠೆ ಹಾಗೂ ಶ್ರೀಮಂತಿಕೆಯ ಸಂಕೇತವಾಗಿತ್ತು. ಅಂತೆಯೇ ಗೋವುಗಳಿರುವ ಸಂಖ್ಯೆಯಿಂದ ಆತನನ್ನು ಬಿರುದು ನೀಡಿ ಗೌರವಿಸಲಾಗುತ್ತಿತ್ತು. ಹತ್ತು ಸಾವಿರ ಗೋವುಗಳನ್ನು ಹೊಂದಿದವನಿಗೆ 'ವೃಜ', ಐದು ಲಕ್ಷ ಇದ್ದರೆ ಉಪನಂದಿ, ಒಂಬತ್ತು ಲಕ್ಷ ಇದ್ದರೆ ನಂದಿ, 10 ಲಕ್ಷ ಇದ್ದರೆ ವೃಷಭಾನು, 50 ಲಕ್ಷ ಇದ್ದರೆ ವೃಷಭಾನುಜ ಹಾಗೂ ಒಂದು ಕೋಟಿ ಇದ್ದರೆ ಆತನನ್ನು 'ನಂದಿರಾಜ' ಎನ್ನುತ್ತಿದ್ದರು.

ವೈಜ್ಞಾನಿಕ ಹಿನ್ನೆಲೆಯಿಂದ ಗೋವುಗಳ ಇತಿಹಾಸವನ್ನು ಅವಲೋಕಿಸಿದಾಗ 20 ಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲಿದ್ದ ಯುರಾಕ್ಷ್ ಇಂದಿನ ದನಗಳ ಪೂರ್ವಜ ಎನ್ನುವುದು ಕೋಲಂಬಿಯಾ ದೇಶದ ಓಹ್ಲೋ ವಿಶ್ವವದ್ಯಾಲಯದಲ್ಲಿರುವ ದಾಖಲೆಗಳಿಂದ ದೃಡಪಟ್ಟಿದೆ. ಯರಾಕ್ಷ್ ಜಗತ್ತಿನ ಮೂರು ಭಾಗಗಳಲ್ಲಿ ಅಂದರೆ ಇಂಡಸ್ ಕಣಿವೆ, ಉರೇಶೀಯಾ ಹಾಗೂ ಉತ್ತರ ಆಪ್ರಿಕಾದಲ್ಲಿ ಕಾಣಿಸಿಕೊಂಡ ಬಗ್ಗೆ ದಾಖಲೆಗಳಿವೆ. ದೈತ್ಯ ಗಾತ್ರ, ಮುಂದೆ ಭಾಗಿದ ಚೂಪಾದ ಕೊಂಬು, 1700 ಕಿಲೋ ಗ್ರಾಂಗೂ ಅಧಿಕ ತೂಕವಿದ್ದ ಯರಾಕ್ಸ ಕಾಲಾಂತರದಲ್ಲಿ ವಿಕಸಿತಗೊಂಡು ಇಂದಿನ ಎರಡು ಬಗೆಯ ಪ್ರಾಣಿ ಬಾಸ್ ಇಂಡಿಕಸ್ ಹಾಗೂ ಬಾಸ್ ಟಾರಸ್ ಸಂಕುಲಕ್ಕೆ ಕಾರಣವಾಯಿತು.

ನಾವಿಂದು ಜಗತ್ತಿನ ದನಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತೇವೆ. ಬಾಸ್ ಇಂಡಿಕಸ್ ಅಥವಾ ಜೆಬು ಅಥವಾ ಭುಜ ಹೊಂದಿದ ದನಗಳು ಹಾಗೂ ಯುರೋಪಿನ ಬಾಸ್ ಟಾರಸ್ ಅಥವಾ ಭುಜ ಇರದ ಪ್ರಾಣಿಗಳು. ಉಷ್ಣವಲಯದ ದೇಶಗಳಲ್ಲಿ ಅಲ್ಲಿನ ವಾತಾವರಣದ ಉಷ್ಣವನ್ನು ಸಹಿಸಿಕೊಳ್ಳುವ ಹಾಗೂ ನೀರಿಲ್ಲದ ಸಂದರ್ಭಗಳಲ್ಲಿ ಭುಜದಲ್ಲಿ ಶೇಖರಿಸಿಟ್ಟುಕೊಂಡ ಕೊಬ್ಬು ಕರಗಿಸಿ ಹಸಿವು ನೀರಡಿಕೆಯನ್ನು ನೀಗಿಸಿಕೊಳ್ಳಲು ಹಾಗೂ ಸಡಿಲ ಚರ್ಮದ ಮೂಲಕ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಅನುಕೂಲವಾಗುವಂತ ದೇಹದಾಕೃತಿ ಹೊಂದಿದ ದನಗಳು ಜೆಬು ವರ್ಗಕ್ಕೆ ಸೇರುತ್ತವೆ. ಭುಜ ಹೊಂದಿರದ ಮೈಗೆ ಚರ್ಮ ಅಂಟಿಕೊಂಡಿರುವ ದನಗಳು ಶೀತವಲಯದ ದೇಶಗಳಲ್ಲಿ ಕಂಡುಬರುತ್ತವೆ. ಅವುಗಳೆಂದರೆ ಜರ್ಶಿ, ಹೆಚ್. ಎಫ್, ಬ್ರೌನ್‌ಸ್ವಿಸ್, ರೆಡ್‌ಡೇನ್ ಮುಂತಾದವು.

ಜಗತ್ತಿನ ಗೊಸಂಪತ್ತಿನಲ್ಲಿ ಶೇ.15 ರಷ್ಟು ಅಂದರೆ 20 ಕೋಟಿ ಗೋವುಗಳು ಭಾರತದಲ್ಲಿಯೇ ಇವೆ. ವಿಶಿಷ್ಟವಾದ 37 ತಳಿಯ ದನಗಳು, 13 ತಳಿಯ ಎಮ್ಮೆಗಳು, 23 ತಳಿಯ ಮೇಕೆ, 39 ಜಾತಿಯ ಕುರಿಗಳಿಂದ ನಮ್ಮ ದೇಶ ಸಮೃದ್ಧವಾಗಿದೆ. ಭಾರತೀಯ ಗೋವುಗಳನ್ನು ಹಾಲು, ಕೆಲಸ ಹಾಗೂ ದ್ವಿ-ಉದ್ದೇಶಿತ ಎಂದು ಗುರುತಿಸಲಾಗಿದೆ.

ಹಾಲಿನ ತಳಗಳು - ಕೆಂಪುಸಿಂದಿ, ಸಾಹಿವಾಲ್, ಗೀರ್, ಥಾರ್ಪಾರ್ಕರ್ ಹಾಗೂ ರಾಥಿ.

ಕೆಲಸದ ತಳಿಗಳು - ಕರ್ನಾಟಕದ ಅಮೃತಮಹಲ್, ಹಳ್ಳಿಕಾರ್, ಕಿಲ್ಲಾರಿ, ಕೃಷ್ಣವ್ಯಾಲಿ ಹಾಗೂ ಮಲ್ನಾಡ್‌ಗಿಡ್ಡ,  ತಮಿಳುನಾಡಿನ ಅಂಬ್ಲಾಚರಿ, ಕಂಗಾಯಮ್, ಬರ್ಗೂರ್ ಹಾಗೂ ಪುಲ್ಲಕುಲಂ, ಕೇರಳದ ವೆಚೂರ್, ಮಹರಾಷ್ಟ್ರದ ಡಾಂಗಿ, ರೆಡ್ ಕಾಂದಾರಿ, ಆಂದ್ರಪ್ರದೇಶದ ಪುಂಗನೂರ್, ಓರಿಸ್ಸಾದ ಮೋಟು, ಘುಮುಸಾರಿ, ಬಿಂಝರಪುರಿ, ಕಾರಿಯಾರ್, ರಾಜಸ್ಥಾನದ ಮೇವತಿ ಹಾಗೂ ನಗೋರಿ, ಮಧ್ಯಪ್ರದೇಶದ ನಿಮಾರಿ, ಉತ್ತರಪ್ರದೇಶದ ಪೊನ್ವಾರ್, ಕಂಕಥಾ, ಖೇರಿಘರ್, ಬಿಹಾರದ ಬಾಚೂರ್, ಸಿಕಿಂನ ಸಿರಿ ಇವು ಕೆಲಸದ ತಳಿಗಳಾಗಿವೆ.

ದ್ವಿ-ಉದ್ದೇಶಿತ ತಳಿಗಳು - ಕರ್ನಾಟಕದ ದೇವಣಿ, ಆಂದ್ರಪ್ರದೇಶದ ಒಂಗೋಲ್, ಹರಯಾಣಾದ ಹರ‍್ಯಾನಾ, ಗುಜರಾತಿನ ಕಾಂಕ್ರೇಜ್, ಮಧ್ಯಪ್ರದೇಶದ  ಮಾಲ್ವಿ ಹಾಗೂ ಗೆಲಾವೋ ಪ್ರಮುಖವಾಗಿವೆ.

ಭಾರತೀಯ ಗೋವುಗಳ ವಿಶೇಷತೆ:
  • ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ವೈಪರಿತ್ಯಗಳನ್ನು ಸಹಿಸುವ ಶಕ್ತಿ.
  • ಕನಿಷ್ಟ ದರ್ಜೆಯ ಆಹಾರ ಸೇವಿಸಿ ಉತ್ಕೃಷ್ಟ ದರ್ಜೆಯ ಹಾಲು ನೀಡುವ ಗುಣ.
  • ಅನೇಕ ಸಾಂಕ್ರಾಮಿಕ ಹಾಗೂ ಪರೋಪಜೀವಿ ರೊಗಗಳಿಗೆ ಸ್ವಾಭವಿಕವಾದ ರೋಗನಿರೋಧಕಶಕ್ತಿ.
  • ಕೃಷಿ ಹಾಗೂ ವ್ಯವಸಾಯಕ್ಕೆ ಸೂಕ್ತವಾದ ದೇಹ ರಚನೆ.
  • ಹಾಲು ಹಾಗೂ ಮೂತ್ರದಲ್ಲಿ ಔಷಧಿಯ ಗುಣ -ಹಾಲಿನಲ್ಲಿ ಲ್ಯಾಕ್ಟೋಪೆರಿನ್, ಮೂತ್ರದಲ್ಲಿ ಆಂಟಿಬಯಾಟಿಕ್.
ದೇಶೀ ತಳಿ ಸಂರಕ್ಷಣೆ ಏಕೆ?
  • ದೇಶೀಯ ತಳಿಗಳೆಂದರೆ ಮತ್ತೆ ಸೃಷ್ಟಿಸಲಾಗದ ಜೀವರಾಶಿ. ಮುಂದಿನ ಪೀಳಿಗೆಗೆ ಇದರ ಸಂರಕ್ಷಣೆ ಅವಶ್ಯಕ.
  • ನೈಸರ್ಗಿಕ ವಿಪತ್ತುಗಳು ಬಂದರೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಇವುಗಳಿಗೆ ಮಾತ್ರ ಸಾಧ್ಯ.
  • ರೋಗನಿರೋಧಕ ಶಕ್ತಿ.
  • ನಮ್ಮ ಚರಿತ್ರೆ ಹಾಗೂ ಸಂಸ್ಕೃತಿ ಪ್ರತೀಕ ಈ ದೇಶೀಯ ಗೋವುಗಳು.

ದೇಶೀಯ ತಳಿಗಳ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿರುವುದನ್ನು ನಾವು ಇನ್ನಾದರೂ ಮನಗಾಣಬೇಕಾಗಿದೆ. ಅನಾದಿ ಕಾಲದಿಂದ ನಮ್ಮ ಜೀವನದ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗಗಳಂತಿರುವ ಈ ಅಮೂಲ್ಯ ಜೀವರಾಶಿಗಳನ್ನು ಉಳಿಸಿ-ಬೆಳೆಸುವ ಮಹತ್ಕಾರ್ಯವು ವಿವಿಧ ಹಂತಗಳಲ್ಲಿ, ಅಂದರೆ ರೈತರಿಂದ, ಸಂಘ-ಸಂಸ್ಥೆಗಳಿಂದ, ಸರ್ಕಾರದಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಪ್ರಾರಂಭಗೊಂಡು ಕ್ಷಿಪ್ರ ಗತಿಯಲ್ಲಿ ಅನುಷ್ಠಾನಗೊಳ್ಳಬೇಕಾದ ಅನಿವಾರ್ಯತೆಯಿದೆ. ಈಗಲಾದರೂ ದೇಶೀಯ ತಳಿಗಳ ಸಂರಕ್ಷಣೆ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ನಮ್ಮ ದೇಶದ ಉತ್ಕೃಷ್ಟ ತಳಿಗಳನ್ನು ಡೈನೋಸಾರ್‌ಳನ್ನು ನೋಡಿದಂತೆ ಫೋಟೋಗಳಲ್ಲಿ ನೋಡೇ ತೃಪ್ತಿಪಡಬೇಕಾದೀತು.

ಲೇಖಕರ ಕಿರುಪರಿಚಯ
ಡಾ. ನಾಗರಾಜ್, ಕೆ. ಎಂ.

ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಯ ಗೋತಳಿಗಳ ಸಂರಕ್ಷಣೆ ಇವರ ಆಸಕ್ತಿಯ ಕ್ಷೇತ್ರ. ಪಶುವೈದ್ಯ ಸಾಹಿತ್ಯ ಪರಿಷತ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮುನ್ನಡೆಸುತ್ತಿದ್ದಾರೆ.

Blog  |  Facebook  |  Twitter

ಭಾನುವಾರ, ನವೆಂಬರ್ 15, 2015

ಮಳೆಯ ಮುತ್ತು

ನೆನೆದು ಬರುತ್ತಿದ್ದೆ ನಾನು
ನಿನ್ನನ್ನು. ಅಂದು ಯಾಕೋ
ನನಗೆ ನೆನೆಯದೇ ಇರಲಾಗಲಿಲ್ಲ ನಿನ್ನನ್ನು.
ಬೇಡವೆಂದರೂ ನನ್ನನೇ ಏಕೆ ಕಾಡುತ್ತಿದ್ದೆ ನೀನು?
ನಾ, ಹೋದರೂ ಹೋದೇನು ದೂರಕ್ಕೆ
ಹೊಗಲಾರೆ ನಿನ್ನ ನೆನಪುಗಳನ್ನು
ಬಗೆದು ನಾ, ಇನ್ನೆಂದೂ ಮತ್ತೆ ಬಾರದ
ಆ ಲೋಕಕ್ಕೆ.

ಹೇಳಲು ಇರಲಿಲ್ಲ ಯಾರೂ, ಕಾಡುತ್ತಿರುವ
ನಿನ್ನ ನೆನಪುಗಳೇನೆಂದು ಎಲ್ಲರಿಗೂ ತಿಳಿಸಲು.
ನಲ್ಲೆ, ನಿನ್ನ ನೆನಪಲ್ಲೆ ತೊಯ್ದು ತೊಪ್ಪೆ
ಯಾಗಿದ್ದ ನನ್ನ ಮನಸ್ಸಿಗೆ ಮುದ
ವಾಗುತ್ತಿತ್ತು. ಏಕೆಂದರೆ, ಅದಾಗಲೇ
ನಾನು ನಿಜವಾಗಿಯೂ ನೆನೆದಿದ್ದೆ,
ಧುತ್ತೆಂದು ಧರೆಗಿಳಿದ ಬಿರುಗಾಳಿಯಂತಹ ಮಳೆಗೆ.

ಏನೇ ಆಗಲಿ ನಲ್ಲೆ, ನಿನ್ನ ನೆನೆಯದೆ
ಇರಲಾಗುತ್ತಿಲ್ಲ ನನಗೆ. ಸಿಗಲಾರದ
ಮುತ್ತು ನೀನೆಂದೂ ನನಗೆ.

ಲೇಖಕರ ಕಿರುಪರಿಚಯ
ಶ್ರೀ ಶ್ರೀನಿವಾಸಮೂರ್ತಿ, ಎಸ್. ಜಿ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ದಾವಣಗೆರೆಯವರು. ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಶನಿವಾರ, ನವೆಂಬರ್ 14, 2015

ಶಾಕ್ ಕಿರಣ!!!

ಇವನು ನನಗೆ ತಗ್ಲಾಕ್ಕೊಂಡಿದ್ದು ಎರಡನೇ ಪದವಿಪೂರ್ವ ಕಾಲೇಜ್ ಟೈಮ್ನಲ್ಲಿ. ಗೋಧಿ ಮೈಬಣ್ಣ, ಬೆಂಕಿಕಡ್ಡಿ ಅಷ್ಟು ದಪ್ಪ, ಆರು ಅಡಿ ಕುಳ್ಳ ಮತ್ತು ಸೋಡಾಬುಡ್ಡಿ? ನಾಮಧೇಯ ಕಿರಿಕ್ ಕಿರಣ್. ಹತ್ತು ವರ್ಷ ಆಯಿತು ಇವನ ನನ್ನ ದೋಸ್ತಿಗೆ. ಇವನ ಹವ್ಯಾಸ - ಎಲ್ಲರಿಗೂ ಶಾಕ್ ಕೊಡೋದು!

ಅಂದು ಜೀವಶಾಸ್ತ್ರ (ಬಯಾಲಜಿ) ಲ್ಯಾಬ್ ಪರೀಕ್ಷೆ.. ನಮ್ ಅಣ್ಣಾಬಾಂಡ್ ಸರಿಯಾಗಿ ತಯಾರಿ ಆಗಿಲ್ಲ ಅಂತ ಪರೀಕ್ಷೆಗೆ ಚಕ್ಕರ್ ಹಾಕ್ಬಿಟ್ಟ. ಅಷ್ಟೇ ಆ ವರ್ಷ ಎಗರ್ಕೊಂಡುಹೋಯ್ತು. ಎದ್ದುಬಿದ್ದು ಎಂಜಿನಿಯರಿಂಗ್ಗೆ ಬಂದು ಸೇರ್ಕೊಂಡ. ಒಂದು ದಿನ ಬಸ್ಸಿಗ್ಲಿಲ್ಲ ಅಂತ ಮುಖ್ಯಪರೀಕ್ಷೆಗೆ ನಾಮ ಇಟ್ಟ. ಡುಮ್ಕಿ ಮೇಲೆ ಡುಮ್ಕಿ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ. ಯಾವ್ದಾದ್ರು ಹುಡುಗಿ ಹಿಂದೆ ಪ್ರೀತಿ ಪ್ರೇಮ ಅಂತ ಬಿದ್ನಾ ಅಂತ ನಮಗೆಲ್ಲ ಚಿಂತೆ. ಎಂಜಿನಿಯರಿಂಗಿನ ಕೊನೆಯ ಸೆಮಿಸ್ಟರ್ ನಲ್ಲಿ ಅವನಿಗೆ ಕೆಲ್ಸಾ ಸಿಕ್ತು. ಎಲ್ಲರಿಗೂ ಖುಷಿ ಮನೆ ತುಂಬಾ ಸಂತೋಷ. ಅಷ್ಟರಲ್ಲಿ ಕೊಟ್ಟಾ ಷಾಕ್ ಇನ್ನೊಂದು. ಕೆಲ್ಸಾ ಮಾಡಲು ಇಷ್ಟ ಇಲ್ಲ. ವಿಜ್ಞಾನಿ ಆಗಬೇಕು ಅಂತ ಎಲ್ಲಾ ಬಿಟ್ಟು ಮಾಸ್ಟರ್ಸ್ ಊದಲು ನಿರ್ಧರಿಸಿದ. ಮಾಸ್ಟರ್ಸ್ ಎಲ್ಲಿ?? ಅಮೇರಿಕದಲ್ಲೇ ಮಾಡ್ಬೇಕಂತೆ. ಸರಿ ಎಲ್ಲಾ ತಯಾರಿ ಮಾಡ್ಕೊಂಡ. ವಿಮಾನ ಹತ್ತುವ ದಿನ ಬಂತು. ಆದಷ್ಟು ಸಾಮಾನು ಇಟ್ಕೊಂಡು ಅವನು ವಿಮಾನ ನಿಲ್ದಾಣಕ್ಕೆ ಹೋಗಿದ್ದು ಹೇಗೆ ಗೊತ್ತಾ? ನನ್ನ ದ್ವಿಚಕ್ರವಾಹನದಲ್ಲಿ.

ಒಂದ್ವಿಷಯ ಮೆಚ್ಚಬೇಕು ಅವನ ಯೋಚನೆ ಗಣಕಯಂತ್ರದಷ್ಟು ವೇಗ. ನಿಯತ್ತು ಅವನ ಪ್ರತಿ ಉಸಿರಿನಲ್ಲಿ. ಪುಸ್ತಕವೇ ಅವನ ಪ್ರಪಂಚ. ಅವನಿಗೆ ಏನು ಇಷ್ಟಾನೋ ಅದೇ ಮಾಡೋವ್ನು. ವಾರಕ್ಕೊಮ್ಮೆ ಫೋನ್ಮಾಡಿ ಮಾತಾಡುತಿದ್ದ ಇವನು, ಸುಮಾರು ಒಂದು ವರ್ಷ ಆಯ್ತು, ಪತ್ತೆನೇ ಇಲ್ಲ. ಒಂದು ಮಿಂಚಂಚೆ (email) ಕೂಡ ಇಲ್ಲ. ಹಠಾತ್ತಾಗಿ ಒಮ್ಮೆ ನಮ್ ಹೀರೊ ನನ್ಮೊಬೈಲ್ಗೆ ಫೋನಾಯಿಸಿದ. ನಾನು ವಾಪಸ್ ಸ್ವದೇಶಕ್ಕೆ ಬಂದ್ಬಿಟ್ಟೆ ಮಗ ಅಂದ. ಎಲಾ ಇವನ.. ಹೋಗಿ ಒಂದು ವರ್ಷ ಆಗಿದೆ ಅಷ್ಟೇ, ಆವಾಗ್ಲೇ ವಾಪಸ್ಯಾಕೋ ಬಂದೆ?? ನನ್ನ, ನಮ್ಮ ಸೈನ್ಸ್ ಪ್ರೊಫೆಸರ್ ಓಡಿಸಿಬಿಟ್ರು ಕಣ್ಲಾ ಅಂದ. ಅಯ್ಯೋ ಯಾಕೋ ಏನಾಯ್ತೋ ಅಂತ ಕೇಳಿದ್ದಕ್ಕೆ ಕಾಲೇಜ್ನಲ್ಲಿ ಒಂದು ಪುಟ್ಟ ಜಗಳ ಆಯಿತು, ಅದಿಕ್ಕೆ ಪ್ರೊಫೆಸರ್ ಹೊರಗೆ ಹಾಕ್ಬಿಟ್ರು ಅಂದ.

ಈ ನಮ್ಮ ಕಿರಣ ಹೇಳಿರೋದು ಯಾಕೋ ನಂಬೊಕೆ ಆಗ್ತಿಲ್ಲ ನನಗೆ. ಪುಟ್ಟ ಜಗಳಕ್ಕೆ ಹೊರಹಾಕೋದಾ? ಒಮ್ಮೆ ಒಟ್ಟಿಗೆ ಊಟಕ್ಕೆ ಹೋಗಿದ್ವಿ. ಕಳೆದ ಒಂದು ವರ್ಷದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ವಿ. ಆವಾಗ ಹೇಳಿದ ನಿಜವಾದ ಕಥೆ.

ಗೀತಾಂಜಲಿ (ಅಂಜಲಿ) ಅನ್ನೋ ಒಬ್ಳು ಹುಡುಗಿ ಜೊತೆ ಪರಿಚಯ ಆಯ್ತು. ಇಬ್ಬರೂ ಒಂದೇ ಊರು. ಒಂದೇ ಭಾಷೆ. ಕಾಲೇಜ್ನಲ್ಲಿ ಒಂದೇ ವರ್ಗ. ಇಬ್ಬರೂ ಒಳ್ಳೆ ಸ್ನೇಹಿತರಾದರು. ಅಂಜಲಿಗೆ ಕಿರಣ್ಮೇಲೆ ಪ್ರೀತಿ ಶುರುವಾಯಿತು.  ಒಳ್ಳೆ ದಿನ ನೋಡಿ ಅಂಜಲಿ ತನ್ನ ಪ್ರೀತಿ ಬಗ್ಗೆ ಕಿರಣ್ಗೆ ಹೇಳಿದಳು. ಕಿರಣ ಅಂಜಲಿಯ ಪ್ರೀತಿಯನ್ನು ತಿರಸ್ಕರಿಸಿದ. ಯಾಕೆಂದರೆ ನಮ್ ಕಿರಣ, ಶಶಿರೇಖಾ (ರೇಖಾ) ಜೊತೆ ಪ್ರೀತಿಪ್ರೇಮ ಅನ್ನೋ ಮಾಯಾಲೋಕದಲ್ಲಿ ಬಿದ್ದಾಗಿತ್ತು. ಮುಂಚೆನೇ ಹೇಳಿದ್ದೆ ತಾನೇ ಇವನ ಹವ್ಯಾಸ ಶಾಕ್ಕೊಡೋದು ಅಂತ. ತನ್ನ ಪ್ರೀತಿಯನ್ನು ತಿರಸ್ಕರಿಸಿದ ಕೂಡಲೇ ಇವನಿಂದ ದೂರ ಹೋದಳು ಅಂಜಲಿ. ಒಂದು ವಾರ ನಂತರ, ಕಿರಣ ಯಾಕೊ ಬೇಜಾರಾಗಿದ್ದ. ರೇಖಾ ಪಕ್ಕದಲ್ಲೇ ಇದ್ದರೂ ಸಹ, ಯಾಕೋ ಏನೋ ಯೋಚನೆ. ತನ್ನ ಕೊಠಡಿಯಲ್ಲಿ ಇದ್ದಾಗ್ಲೂ ಅದೇ ಯೋಚನೆ. ಅದು ಬೇರೆ ಏನೋ ಅಲ್ಲ. ಅವೆಲ್ಲಾ ಅಂಜಲಿಯ ನೆನಪುಗಳು. ಅಂಜಲಿ ಜೊತೆ ಸ್ನೇಹ ಇವನ ಜೀವನದಲ್ಲಿ ಸುಮಾರು ಬಲವಾದ ಬದಲಾವಣೆಗಳನ್ನ ತಂದಿತ್ತು. ಇವನ ರುಚಿ, ಅಭಿರುಚಿ, ಮಾತು, ಆಲೋಚನೆ ಎಲ್ಲಾ ಅವಳಂತೆಯೇ. ಅಂಜಲಿ ಇವನ ಜೀವನದಲ್ಲಿ ಇಲ್ಲದ ಕೊರಗು ಇವನಿಗೆ ಅರ್ಥವಾಗುತಿತ್ತು. ಅಂಜಲಿಯನ್ನು ಹೇಗಾದರೂ ಭೇಟಿ ಆಗಲೇಬೇಕು ಅಂತ ಅವಳ ಮನೆಗೆ ಹೋಗುತ್ತಾನೆ. ಇಲ್ಲಿ ತನಕ ನಮ್ಗೆಲ್ಲಾ ಶಾಕ್ಕೊಟ್ಟ ಇವನಿಗೆ ಒಂದು ಬಂಪರ್ ಶಾಕ್. ಅಂಜಲಿ ಮತ್ತು ರೇಖಾ ಬೇರೆ ಯಾರೂ ಅಲ್ಲ. ಇಬ್ಬರೂ ಅಕ್ಕ ತಂಗಿಯರು! ಇನ್ನೊಂದು ಶಾಕ್ ಅಂದರೆ ಆ ಸೈನ್ಸ್ ಪ್ರೊಫೆಸರ್ ಅವರಿಬ್ಬರ ತಂದೆ!!

ನಾನಂದುಕೊಂಡಂತೆ ಪ್ರೊಫೆಸರ್ ಇವನನ್ನು ಹೊರಹಾಕಿದ ಕಥೆ ಕಿರಣ ಹೇಳಿದ ಸುಳ್ಳಾಗಿತ್ತು. ಅಂಜಲಿಗೆ ಅವನ ಮೇಲಿದ್ದ ಪ್ರೀತಿನ ತಿಳ್ಕೊಂಡು, ಅವಳನ್ನು ಕರ್ಕೊಂಡು ಕಿರಣ ಸ್ವದೇಶಕ್ಕೆ ಬಂದ್ಬಿಟ್ಟಿದ್ದ!! ಮುಂದೆ..??? ನಮ್ ಕಿರಣ್ ಇನ್ನೇನ್ ಶಾಕ್ ಕೊಡ್ತಾನೋ ಗೊತ್ತಿಲ್ಲ...

ಲೇಖಕರ ಕಿರುಪರಿಚಯ
ಶ್ರೀ ಸುರೇಶ್ ಕುಮಾರ್ ದೇಸು

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಪ್ರಸ್ತುತ ಸಾಫ್ಟ್- ವೇರ್ ಇಂಜಿನಿಯರ್ ಆಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ವಿಶೇಷ ಪ್ರೀತಿ-ಗೌರವ. ಮಾತನಾದಿದಷ್ಟೇ ಸರಳ-ಸರಾಗವಾಗಿ ಬರೆಯುವುದು ಇವರ ವಿಭಿನ್ನ ಶೈಲಿ.

Blog  |  Facebook  |  Twitter

ಶುಕ್ರವಾರ, ನವೆಂಬರ್ 13, 2015

ವಿದ್ಯಾರ್ಥಿಜೀವನದಲ್ಲಿ ಶಿಸ್ತು

ವಿದ್ಯಾರ್ಥಿ ಪದದ ಅರ್ಥ 'ವಿದ್ಯೆಯ ಅರ್ಥಿ' ಅಂದರೆ ವಿದ್ಯೆಯನ್ನು ಅರ್ಥಿಸುವವನು, ಸಂಪಾದಿಸುವವನು. ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಯಾವುದೋ ಒಂದು ವಿಷಯ ಸಂಪಾದನೆಯ, ಅಂದರೆ ಜ್ಞಾನ ಸಂಗ್ರಹದ ಗುರಿ ಹೊಂದಿರುವವನು ವಿದ್ಯಾರ್ಥಿ. ವಿದ್ಯಾರ್ಥಿ ತನ್ನ ಜೀವದಲ್ಲಿ ಈ ಗುರಿಯನ್ನು ಸಾಧಿಸಲು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸುವುದು ಕೂಡ ಇಲ್ಲಿ ಅತಿ ಮುಖ್ಯವಾದ ಸಂಗತಿ. ಅದರಲ್ಲಿಯೂ ಶಿಸ್ತಿನ ಪಾಲನೆ ವಿದ್ಯಾರ್ಥಿ ಜೀವನದಲ್ಲಿ ಪಾಲಿಸಲೇ ಬೇಕಾದ ಅತೀ ಮುಖ್ಯವಾದ ನಿಯಮವಾಗಿದೆ.

ಶಿಸ್ತು ಸಂಯುಮಗಳಿಲ್ಲದ ನಡುವಳಿಕೆಯನ್ನು ಇಂದಿನ ವಿದ್ಯಾರ್ಥಿಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. ಸಮಯ ಪಾಲನೆಯಲ್ಲಿ, ತರಗತಿಯ ಓದಿನಲ್ಲಿ, ಶಿಕ್ಷಕರು ನೀಡಿದ ಚಟುವಟಿಕೆಗಳನ್ನು ಮಾಡಿ ಒಪ್ಪಿಸುವಲ್ಲಿ, ಹೀಗೆ ಪ್ರತಿಯೊಂದು ಕಾರ್ಯದಲ್ಲಿಯೂ ಹೇಗಾದರೂ ಮಾಡಿದರಾಯಿತು, ಹೇಗೋ ಮಾಡಿ ಮುಗಿಸಿದರಾಯಿತು ಎಂಬ ಆಲಸ್ಯದ ಮನೋಭಾವ ಹೊಂದಿರುವ ವಿದ್ಯಾರ್ಥಿಗಳ ಸಮುದಾಯ ಶಿಕ್ಷಣದ ಘನ ಉದ್ದೇಶಗಳನ್ನು ಈಡೇರಿಸುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಮನೋಭಾವ ಮೂಡಿಸುವಲ್ಲಿ ಶಿಕ್ಷಕರ ಜವಾಬ್ದಾರಿಯಂತೆ ಪಾಲಕರ ಕರ್ತವ್ಯವೂ ಅಡಗಿರುವುದನ್ನು ಗಮನಿಸಬೇಕಾದುದು ಅತೀ ಅಗತ್ಯ. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಶಿಸ್ತಿನ ಪಾಲನೆ ಹೇಗೆ ಸಾಧ್ಯ ಎನ್ನುವುದರ ಅರಿವು ಮಕ್ಕಳಿಗೆ ಮನೆಯಲ್ಲಿಯೇ ಮೂಡುವ ವಾತಾವರಣ ನಿರ್ಮಾಣವಾಗಬೇಕು.

ಮುಂಜಾನೆ ಒಂದು ನಿರ್ದಿಷ್ಠ ಸಮಯದಲ್ಲಿ ಏಳುವುದು, ತನ್ನ ಕೆಲಸ ಕಾರ್ಯಗಳನ್ನು ಬೇರೆಯವರ ಸಹಾಯ ಪಡೆಯದೇ ಆದಷ್ಟೂ ತಾನೇ ನಿಭಾಯಿಸುವುದು, ತಾನು ಬಳಸಿದ ವಸ್ತುಗಳನ್ನು ಯಾವ ಜಾಗದಿಂದ ತೆಗೆದುಕೊಂಡಿದ್ದನೋ ಅಲ್ಲಿಯೇ ಮತ್ತೆ ಮೊದಲಿನ ಹಾಗೆ ಜೋಡಿಸಿಡುವುದು, ಮನೆಯಲ್ಲಿ ಆಟವಾಡಲು ಬಳಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡದಂತೆ ನೋಡಿಕೊಳ್ಳುವುದು, ದೇಹದ ಸ್ವಚ್ಛತೆ ಕಾಯ್ದುಕೊಳ್ಳುವುದು, ಶಾಲೆಯಿಂದ ಮರಳಿದಾಗ  ಪುಸ್ತಕಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನೋಡಿಕೊಳ್ಳುವುದು, ಗುರುಹಿರಿಯರಿಗೆ ಗೌರವ ತೋರುವುದು, ಆಟವಾಡಲು ಹೋದರೆ ನಿಗದಿತ ಸಮಯಕ್ಕೆ ಮನೆಗೆ ಮರಳುವುದು ಹೀಗೆ ಪ್ರತಿ ಸಂದರ್ಭದಲ್ಲಿಯೂ ಆದಷ್ಟೂ ಶಿಸ್ತು ಕಾದುಕೊಳ್ಳಲು ತಿಳಿಹೇಳುವುದು ಮನೆಯವರ ಅಂದರೆ ಪಾಲಕರ ಕರ್ತವ್ಯವಾಗಿದೆ.

ಇನ್ನು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು.

ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುರಾಯ
ಬಂಧನವ ಕಳೆವ ಸರ್ವಜ್ಞ ||

ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ. ಶಿಕ್ಷೆಯಿಂದ ಮಾತ್ರವೇ ಶಿಸ್ತನ್ನು ರೂಢಿಸುವುದು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯವಾದ ಸಂದರ್ಭಗಳಲ್ಲಿ ಜಾಣನಿಗೆ ಮಾತಿನ ಪೆಟ್ಟಿನಿಂದ ತಿದ್ದಬೇಕಾಗುವುದು. ವಿದ್ಯಾರ್ಥಿ ಸರಿಯಾದ ಸಮಯಕ್ಕೆ ಪ್ರಾರ್ಥನೆಯ ವೇಳೆಗೆ ಹಾಜರಿರುವಂತೆ,  ಶಿಕ್ಷಕರು ವಹಿಸಿದ ಕಾರ್ಯವನ್ನು ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ನಿಭಾಯಿಸುವಂತೆ ವಿದ್ಯಾರ್ಥಿಯ ಮನವೊಲಿಕೆ, ಅವನಲ್ಲಿ ಸ್ಫೂರ್ತಿ ನೀಡುವುದು ಅತಿ ಅಗತ್ಯವಾದುದು. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ವಿದ್ಯಾರ್ಥಿಯ ಆಶಿಸ್ತಿನ ನಡುವಳಿಕೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ತಿದ್ದುವ ಕಾರ್ಯವಾಗಬೇಕು. ಇಲ್ಲವಾದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬಂತೆ 'ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ' ಎಂಬಂತಾಗಬಾರದು. ಆದ್ದರಿಂದ ಶಾಲಾ ಪ್ರಾರಂಭದ ದಿನಗಳಿಂದಲೂ ವಿದ್ಯಾರ್ಥಿಯ ಅಶಿಸ್ತಿನ ನಡುವಳಿಕೆಯನ್ನು ಸಾಧ್ಯವಾದಷ್ಟು ತಿದ್ದುತ್ತಾ, ಶಿಸ್ತಿನ ನಡುವಳಿಕೆಯ ಹೆಜ್ಜೆ ಬದುಕಿನ ಪಥದಲ್ಲಿ ಗೆಲುವಿನ ನಗುವಿಗೆ ಕಾರಣವಾಗುವ ಬಗೆಯನ್ನು ವಿವರಿಸಬೇಕು.

ವಿದ್ಯಾರ್ಥಿಯಾದವನು ಶಿಸ್ತನ್ನು ಸ್ವಯಂ ಅಳವಡಿಸಿಕೊಳ್ಳಬೇಕು. ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಬಹಳ ದಿನ ಉಳಿಯಲಾರದು. ಶಿಸ್ತಿನ ಪಾಠ ವಿದ್ಯಾರ್ಥಿಗಳಿಯೇ ಪ್ರಕೃತಿಯಲ್ಲಿಯೇ ದೊರೆಯುವುದು. ಆಹಾರವನ್ನು ಅರಸುತ್ತಾ ಹೊರಡುವ ಇರುವೆಗಳಿಗೆ ಸಾಲಾಗಿಯೇ ಹೋಗಬೇಕೆಂಬ ಶಿಸ್ತಿನ ಪಾಠವನ್ನು ಯಾರೂ ಕಲಿಸಿಲ್ಲ ಅಲ್ಲವೇ? ಆಕಾಶದಲ್ಲಿ ಒಂದೇ ವೇಗದಲ್ಲಿ, ಒಂದೇ ದಾರಿಯಲ್ಲಿ ಹಾರುವ ಪಕ್ಷಿಗಳಿಗೆ ಆ ಶಿಸ್ತನ್ನು ಕಲಿಸಿದವರು ಯಾರು? ಮೇವು ಅರಸುತ್ತ ಹೋಗುವ ದನಕರುಗಳ ಹಿಂಡು ಸಂಜೆಯಾದೊಡನೆ ತಮ್ಮ ತಮ್ಮ ಮನೆ ಸೇರುವುದಿಲ್ಲವೇ? ಪ್ರಾಣಿ, ಪಕ್ಷಿಗಳಲ್ಲಿರುವ ಜೀವನದ ಶಿಸ್ತಿನ ನಡೆ ವಿದ್ಯಾರ್ಥಿಗಳಿಗೆ ಮಾದರಿಯಲ್ಲವೇ?

ಪ್ರಕೃತಿಯ ವೈವಿಧ್ಯತೆಯಲ್ಲಿಯೂ ಒಂದು ಶಿಸ್ತುಬದ್ಧತೆಯಿದೆ ಎನ್ನುವುದನ್ನು ಅರಿತರೆ ವಿದ್ಯಾರ್ಥಿ ತನ್ನನ್ನು ಸ್ವಯಂಶಿಸ್ತಿಗೆ ಒಳಪಡಿಸಿಕೊಳ್ಳಬಲ್ಲ. ನಿಗದಿತ ವೇಳೆಯಲ್ಲಿ ವಹಿಸಿದ ಕಾರ್ಯವನ್ನು ವ್ಯವಸ್ಥಿತವಾಗಿ ಪೂರೈಸಬಲ್ಲ.

ಅಂದು? ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತಿತ್ತು ಧೀರರ ದಂಡು,
ಇಂದು? ಹಿಂದೆ ಗುರಿಯಿಲ್ಲ, ಮುಂದೆ ಗುರುವಿಲ್ಲ ಸಾಗುತಿದೆ ರಣಹೇಡಿಗಳ ಹಿಂಡು...
- ಕುವೆಂಪು.


ಇಂದಿನ ದಿನಗಳಲ್ಲಿ ಗೊತ್ತು ಗುರಿಯಿಲ್ಲದ ವಿದ್ಯಾರ್ಥಿಗಳ ಸಮುದಾಯ ನಮ್ಮೆದುರಿಗಿದೆ. ಅವರಲ್ಲಿರುವ ಕಾರ್ಯಶೀಲತೆಯನ್ನು ಗುರುತಿಸಿ ಜೀವನದ ಉತ್ತಮ ಮಾರ್ಗ ತೋರುವ ಗುರುವಿನ ಅವಶ್ಯಕತೆಯೂ ಇಲ್ಲದಿಲ್ಲ. ಆದರೆ ಡಿ. ವಿ. ಜಿ. ಯವರು ಹೇಳುವಂತೆ:
ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ |
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು |
ದಿನವ ಕಳೆ; ಗುರು ಶಿಷ್ಯ ಪಟ್ಟಗಳು ನಿನಗೇಕೆ?
ನಿನಗೆ ನೀನೇ ಗುರುವೊ -ಮಂಕುತಿಮ್ಮ

ಆದ್ದರಿಂದ ಇನ್ನೊಬ್ಬರು ಹೇಳುವ ಸಲಹೆಗಳಿಗೆ ಕಾಯದೇ ವಿಚಾರಮಂಥನದಿಂದ, ಅನುಭವಗಳ ಪಾಠದಿಂದ ವಿದ್ಯಾರ್ಥಿ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಮುಂದೆ ಸಾಗಬೇಕು.ಶಿಸ್ತು ಕೇವಲ ವಿದ್ಯಾರ್ಥಿ ಜೀವನದ ಭಾಗವಲ್ಲ. ಇಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಶವಾಗಿ ಅಳವಡಿಕೆಯಾದರೆ ಎಲ್ಲಿದ್ದರೂ ಯಶಸ್ಸು ಕಟ್ಟಿಟ್ಟ ಬುತ್ತಿ.

ಲೇಖಕರ ಕಿರುಪರಿಚಯ
ಶ್ರೀಮತಿ ಮಮತಾ ಭಾಗ್ವತ್

ವೃತ್ತಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿರುವ ಇವರು ಮೂಲತಃ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದವರು. ಇತಿಹಾಸ ಮತ್ತು ಕನ್ನಡ ವಿಷಯದಲ್ಲಿ ಎಂ.ಎ., ಬಿ.ಎಡ್. ಪದವಿ ಪಡೆದಿರುವ ಇವರು ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಗುರುವಾರ, ನವೆಂಬರ್ 12, 2015

ಚಂದ್ರಿ

ಅದೊಂದು ಮಲೆನಾಡ ನಟ್ಟನಡುವಿನ ಹಳ್ಳಿ. ನಾನು ಆ ಊರಿಗೆ ಪಶುವೈದ್ಯನಾಗಿ ವರ್ಗವಾಗಿ ಹೋಗಿ ಒಂದು ವಾರವಾಗಿರಬಹುದಷ್ಟೆ. ಅಂದು ಬೆಳಿಗ್ಗೆಯಿಂದ ಬಿಡುವಿಲ್ಲದ ಕೆಲಸ ಮುಗಿಸಿ ಆಸ್ಪತ್ರೆಯ ಪಕ್ಕದ ಹೊಟೇಲಿನಲ್ಲಿ ಮಧ್ಯಾಹ್ನ ಸೊಂಪಾಗಿ ಊಟ ಮಾಡಿ ಅರ್ಧ ಘಂಟೆ ವಾಡಿಕೆಯ ನಿದ್ದೆ ತೆಗೆದೆ. ನಂತರ ಅದೇ ಹೊಟೇಲಿನಲ್ಲಿ ಸ್ಟ್ರಾಂಗ್ ಕೇಟಿ ಕುಡಿದು ಅದರ ಗುಂಗು ತಲೆಗೆ ಹತ್ತುತ್ತಿದ್ದಂತೆ ಪರಮಾನಂದ ಅನುಭವಿಸುತ್ತ ಕಚೇರಿಯಲ್ಲಿ ಕಾಲು ಚಾಚಿ ನಿರಾಳವಾಗಿ ಕುಳಿತಿದ್ದೆ.
ಅಷ್ಟರಲ್ಲಿ ರೈತರೊಬ್ಬರ ಫ಼ೋನ್. ಅವರ ಜೆರ್ಸಿ ಹಸುವೊಂದಕ್ಕೆ ರಕ್ತ ಭೇದಿಯಂತೆ, ಆಹಾರ ಏನೂ ತಿನ್ನುತ್ತಿಲ್ಲ, ಒಮ್ಮೆ ಮನೆಗೆ.. ಅಲ್ಲಲ್ಲ, ಕೊಟ್ಟಿಗೆಗೆ ಬಂದು ನೋಡಬೇಕೆಂಬ ವಿನಂತಿ. ಮನೆಯ ಅಡ್ರೆಸ್ಸು ಕೇಳಿಕೊಂಡು ಹೊರಟೆ. ಬೈಕಿನಲ್ಲಿ ಹತ್ತು ನಿಮಿಷದ ಹಾದಿ. ಬಾಗಿಲಲ್ಲೇ ನಿಂತು ಸ್ವಾಗತಿಸಿದ ರೈತ ರಾಮಣ್ಣ ನನ್ನನ್ನು ಕೊಟ್ಟಿಗೆಗೆ ಕರೆದೊಯ್ದರು.

ಹಳೆಯ ಕಾಲದ ಕಟ್ಟಡ. ಯಾವುದೋ ಕಾಲದಲ್ಲಿ ನೆಲಕ್ಕೆ ಹಾಕಿದ್ದ ಕಾಂಕ್ರೀಟು ಅಲ್ಲಲ್ಲಿ ಕಿತ್ತು ಬಂದು ನಮ್ಮ ಪಿಡಬ್ಲ್ಯೂಡಿ ರಸ್ತೆಗಳನ್ನೂ ನಾಚಿಸುವಂತೆ ಹೊಂಡ ಹೊಂಡವಾದ ನೆಲ. ಆ ಹೊಂಡದಲ್ಲಿ ಸಂಗ್ರಹವಾದ ಸಗಣಿ ಮೂತ್ರ. ಒತ್ತೊತ್ತಾಗಿ ಕಟ್ಟಿಹಾಕಿದ ಮೂರು ಹಸು ಒಂದು ಎಮ್ಮೆ ಹಾಗೂ ಅದರ ಕರು.

ಕೊಟ್ಟಿಗೆಯ ಒಳಹೊಕ್ಕೊಡನೆ ರೋಗಿಯನ್ನು ಗುರುತಿಸಲು ತಡವಾಗಲಿಲ್ಲ. ಕೆಂಪಾದ ಕೆಟ್ಟ ವಾಸನೆಯ ನೀರಿನಂತೆ ನೆಲದ ಮೇಲೆ ಹರಡಿದ ಸಗಣಿ. ತಲೆ ಬಗ್ಗಿಸಿ ಮಂಕಾಗಿ ನಿಂತ ಹಸು.

ಆ ಇರುಕಲು ಜಾಗದಲ್ಲೇ ಒಂದೆಡೆ ನಿಂತು ರಾಮಣ್ಣರಿಗೆ ನಿರ್ದೇಶನ ಕೊಡತೊಡಗಿದೆ. ಬಿಸಿನೀರು, ಸೋಪನ್ನು ತರಲು ಹೇಳಿದೆ. ಹಗ್ಗವೊಂದರಿಂದ ಹಸುವನ್ನು ಅಲುಗಾಡದಂತೆ ಬಿಗಿದು ಕಟ್ಟಿಸಿದೆ. ಪರೀಕ್ಷೆ ಮತ್ತು ಚಿಕಿತ್ಸೆಗಳಿಗೆ ಅನುಕೂಲವಾಗುವಂತೆ, ರಾಡಿಯಾಗಿದ್ದ ಅದರ ಹಿಂಭಾಗವನ್ನು ತಣ್ಣೀರಿನಿಂದ ತೊಳೆಯಲು ಹೇಳುತ್ತಿರುವಷ್ಟರಲ್ಲಿ ನನ್ನನ್ನು ಹಿಂದಿನಿಂದ ಮೃದುವಾಗಿ ಯಾರೋ ತಳ್ಳಿದಂತಾಯಿತು. ಜೊತೆಗೆ ನನ್ನ ಅಂಗಿಯನ್ನು ಸ್ವಲ್ಪ ಎಳೆದ ಅನುಭವ. ಅಯಾಚಿತವಾಗಿ ಹಿಂದೆ ತಿರುಗಿ ನೋಡಿದರೆ ಅಲ್ಲಿದ್ದುದು ಒಂದು ಎಮ್ಮೆ. ರೈತರೊಂದಿಗೆ ಮಾತಾಡುವ ಭರದಲ್ಲಿ ನನ್ನ ಪೇಷೆಂಟಿನ ಪಕ್ಕದಲ್ಲಿಯೇ ಕಟ್ಟಿಹಾಕಿದ್ದ ಆ ಎಮ್ಮೆಯನ್ನು ನಾನು ಗಮನಿಸಿರಲಿಲ್ಲ. ಅದಕ್ಕೆ ಹೆಚ್ಚೂ ಕಡಿಮೆ ಒತ್ತಿಕೊಂಡೇ ಇಷ್ಟುಹೊತ್ತು ನಿಂತಿದ್ದೆ.

ಇಲ್ಲಿ ನಮ್ಮ ನಾಟಿ ಎಮ್ಮೆಗಳ ಸ್ವಭಾವದ ಬಗ್ಗೆ ಸ್ವಲ್ಪ ನಿಮಗೆ ಹೇಳಬೇಕು. ಸಾಮಾನ್ಯವಾಗಿ ಅವು ತೀರಾ ಸಂಶಯ ಸ್ವಭಾವದವು. ಹೊಸಬರನ್ನು ಸಹಿಸುವುದಿಲ್ಲ. ಭುಸುಗುಟ್ಟುತ್ತ ನಮ್ಮನ್ನು ಹೊರದಬ್ಬಲೇ ನೋಡುತ್ತವೆ. ಎಲ್ಲಿಂದ ಬಂದ ಶನಿ ಎಂಬಂತೆ ಕಣ್ಣಲ್ಲಿ ಕಣ್ಣಿಟ್ಟು ಗುರಾಯಿಸುತ್ತವೆ. ಹೊಸಬರು ಹಾಗಿರಲಿ, ಮನೆಯವರೇ ಆದರೂ ಸಹಾ ಎಲ್ಲರ ಜೊತೆಗೂ ಸಲಿಗೆ ಇಟ್ಟುಕೊಳ್ಳಲಾರವು. ಹಾಲು ಹಿಂಡುವಾಗಲೂ ಅಷ್ಟೇ. ಏನಾದರೂ ಕಿರಿಕಿರಿಯಾದರೆ ಮುಲಾಜಿಲ್ಲದೇ ಝಾಡಿಸಿ ಒದ್ದೋ ಅಥವಾ ಒಂದು ಹನಿ ಹಾಲು ಕೂಡ ಹೊರಡದಂತೆ ಸೊರವು ಬಿಡದೆಯೋ ಕಕ್ಕಾಬಿಕ್ಕಿ ಮಾಡಿಬಿಡುತ್ತವೆ. ಮನೆಯಲ್ಲಿ ಹೆಂಗಸರು ಮಾತ್ರ ಹಾಲು ಹಿಂಡಿ ರೂಢಿಯಾಗಿಬಿಟ್ಟರಂತೂ ಮುಗಿದೇಹೋಯಿತು, ಅವರನ್ನು ಬಿಟ್ಟು ಬೇರೆಯವರಿಗೆ ಹಾಲು ಕೊಡಲಾರವು. ಅಕಸ್ಮಾತ್ ಮನೆಯ ಯಜಮಾನಿತಿ ನೆಂಟರ ಮೆನೆಗೆ ಹೋಗಿ ಹಾಲು ಹಿಂಡುವ ಸಮಯಕ್ಕೆ ಹಿಂತಿರುಗದಿದ್ದರೆ ಯಜಮಾನ ಆಕೆಯ ಸೀರೆ ಸುತ್ತಿಕೊಂಡು ಎಮ್ಮೆಯ ಹಾಲು ಹಿಂಡಿಕೊಂಡು ಬರುವ ಸಂದರ್ಭಗಳೂ ಉಂಟು. ಹೀಗಾಗಿಯೇ ಮದುವೆ ಮುಂಜಿ ತಿಥಿ ಶ್ರಾದ್ಧದಂತಹ ಸಮಾರಂಭಗಳಲ್ಲಿ ಸಂಜೀಗ್ ಬೇಗ ಮನೀಗೆ ಹೋಗಿ ಮುಟ್ಗ್ಯಳಕ್ಕು ಮಾರಾಯ. ಇಲ್ದಿದ್ರೆ ಯಮ್ಮನೆ ಯಮ್ಮೆ ಹಾಲು ಕೊಡಲ್ಲೆ ಎಂಬ ಉದ್ಗಾರ ಸಾಮಾನ್ಯ. ಇದು ರೈತರ ಪಾಡಾದರೆ ಅವಕ್ಕೆ ಚಿಕಿತ್ಸೆ ನೀಡಲು ಹೋಗುವ ನಮ್ಮ ಪರಿಸ್ಥಿತಿ ಇನ್ನೂ ಕಷ್ಟ. ರೋಗ ತಪಾಸಣೆಗೂ ಮುಂದಿನ ಕಾಲುಗಳನ್ನು ಸೇರಿಸಿ ಕಟ್ಟಿಸಿಕೊಂಡು ತಲೆ ಅಲ್ಲಾಡಿಸದಂತೆ ಭದ್ರವಾಗಿ ಹಗ್ಗದಿಂದ ಬಂಧಿಸಿಕೊಂಡೇ ಹತ್ತಿರ ಹೋಗಬೇಕು. ಆದರೂ ಮುಂದಿನ ಕಾಲುಗಳಿಂದಲೇ ಬ್ಯಾಲೆನ್ಸ್ ಮಾಡಿಕೊಂಡು ಎರಡೂ ಹಿಂಗಾಲುಗಳನ್ನು ಒಮ್ಮೆಲೇ ಎತ್ತಿ ಕತ್ತೆ ಒದ್ದಂತೆ ಜಾಡಿಸಿ ಒದೆಯುವ ಕಲೆ ಇವಕ್ಕೆ ಕರಗತ. ಇವೆಲ್ಲವುಗಳಿಂದಲೂ ವಿಚಲಿತರಾಗದೇ ನಾವು ಇಂಜೆಕ್ಷನ್ ಕೊಡಲು ಮುಂದುವರಿದರೆ ಪದೇ ಪದೇ ಚರ್ರೆಂದು ಉಚ್ಚೆ ಹೊಯ್ಯಲಾರಂಭಿಸುತ್ತವೆ. ಸೂಜಿ ಹಿಡಿದು ನಾವು ಹತ್ತಿರ ಹೋದೊಡನೆ ಉಚ್ಚೆ ಹಾರಿಸಲು ಶುರು. ದೂರ ನಿಂತರೆ ಏಕ್ದಂ ಉಚ್ಚೆ ಹೊಯ್ಯುವುದನ್ನು ನಿಲ್ಲಿಸುತ್ತವೆ. ಹತ್ತಿರ ಹೋದರೆ ಪುನಃ ಶುರು. ಬೇಕೆಂದಾಗಲೆಲ್ಲ ಉಚ್ಚೆಯನ್ನು ಯಾರು ಬೇಕಾದರೂ ಹೊಯ್ಯಬಹುದು. ಆದರೆ ಹೊಯ್ಯುತ್ತಿರುವ ಉಚ್ಚೆಯನ್ನು ಬಂದ್ ಮಾಡಿ ಪುನಃ ಅದೇ ವೇಗದಲ್ಲಿ ಹಾರಿಸುವುದು ಬಹುಶಃ ನಮ್ಮ ನಾಟಿ ಎಮ್ಮೆಗಳಿಗೆ ಮಾತ್ರ ಸಿದ್ಧಿಸಿದ ಕಲೆ ಎಂಬುದು ನನ್ನ ಅಚಲವಾದ ನಂಬಿಕೆ. ನಮ್ಮಂಥವರನ್ನು ದೂರವಿರಿಸಲು ಕೆಲವು ಎಮ್ಮೆಗಳದ್ದು ಇನ್ನೂ ಉತ್ತಮ ವರಸೆಯಿದೆ. ನಾವು ಹತ್ತಿರ ಬಂದೊಡನೆ ಜೋರಾಗಿ ಉಚ್ಚೆ ಹೊಯ್ಯುತ್ತ ಅರ್ಧಚಂದ್ರಾಕೃತಿಯಲ್ಲಿ ವೇಗವಾಗಿ ಅತ್ತಿಂದಿತ್ತ ತಿರುಗುತ್ತವೆ. ಸುತ್ತ ಹತ್ತು ಅಡಿ ದೂರದಲ್ಲಿ ನಿಂತವರಿಗೆಲ್ಲ ಉಚಿತ ಮೂತ್ರ ಸಿಂಚನ. ಆದರೆ ಅವುಗಳ ಆರೋಗ್ಯದ ಜವಾಬ್ದಾರಿ ಹೊತ್ತ ನಾವು ಸುಮ್ಮನಿರುವುದಿಲ್ಲವಲ್ಲ! ಏನೇನೋ ಉಪಾಯದಿಂದ ಅಥವಾ ಕೊನೆಗೆ ಬಡಿಗೆಯ ರುಚಿ ತೋರಿಸಿಯಾದರೂ ಇಂಜೆಕ್ಶನ್ ಚುಚ್ಚುವ ಕರ್ತವ್ಯ ಮುಗಿಸಿಯೇ ಅಲ್ಲಿಂದ ಹೊರಡುತ್ತೇವೆ! ಇವುಗಳ ಮೂತ್ರ ಪ್ರೋಕ್ಷಣೆಯಲ್ಲೂ ಒಂದು ವಿಶೇಷವಿದೆ. ಅದೆಂದರೆ ಎಮ್ಮೆ ಮೂತ್ರಕ್ಕಿರುವ ಒಂದು ಪ್ರತ್ಯೇಕವಾದ ವಾಸನೆ. ಅದನ್ನು ದುರ್ವಾಸನೆಯೆಂತಲೂ ಬೇಕಾದರೆ ನೀವು ಅಂದುಕೊಳ್ಳಬಹುದು. ಇಂತಹ ಎಮ್ಮೆಗಳ ಚಿಕಿತ್ಸೆ ಮುಗಿಸಿ ಮನೆಗೆ ಹೋದರೆ ರಾತ್ರಿ ನನ್ನ ಹೆಂಡತಿಯೂ ಇವತ್ತು ಎಷ್ಟು ಎಮ್ಮೆಗೆ ಟ್ರೀಟ್ಮೆಂಟ್ ಮಾಡಿದ್ರಿ? ಎಂದು ಪ್ರಶ್ನಿಸುವಷ್ಟು ಬುದ್ಧಿವಂತಳಾಗಿದ್ದಾಳೆ. ಏನಿದ್ದರೂ ಅವಳದು ಹದಿನೈದು ವರ್ಷ ನನ್ನ ಜೊತೆ ಏಗಿದ ಅನುಭವ! ಏನಾದರೂ ಆಗಲೀ ಈ ಎಮ್ಮೆ ಹಾಲಿನದು ಒಂದು ಅದ್ಭುತ ರುಚಿ. ಅದರ ಕಾಫಿ, ಟೀ, ಮೊಸರುಗಳನ್ನು ಸವಿದವರಿಗೇ ಗೊತ್ತು ಅದರ ವಿಶೇಷತೆ. ಈ ರುಚಿಗಾಗಿಯೇ ರೈತರು ಅದು ಕೊಡುವ ಎಲ್ಲ ತಾಪತ್ರಯಗಳನ್ನೂ ಸಹಿಸುತ್ತಾರೆ ಎಂದು ಕಾಣುತ್ತದೆ. ಹೀಗಾಗಿ ಎಮ್ಮೆ ಸಾಕಿದವರ ಮನೆಗೆ ನಾನು ಚಿಕಿತ್ಸೆಗಾಗಿ ಹೋದರೆ ಎಷ್ಟೇ ಅವಸರದಲ್ಲಿದ್ದರೂ ಅಲ್ಲಿನ ಕಾಫಿ ಟೀ ಬೇಡವೆನ್ನುವುದೇ ಇಲ್ಲ!

ವಿಷಯ ಎಲ್ಲೆಲ್ಲಿಗೋ ಹೋಯಿತು. ಎಮ್ಮೆಯ ಸಾಮಾನ್ಯ ಸ್ವಭಾವಕ್ಕೆ ವಿರುದ್ಧವಾಗಿ ರಾಮಣ್ಣನವರ ಮನೆಯ ಈ ಎಮ್ಮೆ ಹೊಸಬನಾದ ನನ್ನ ಉಪಸ್ಥಿತಿಯಲ್ಲೂ ನಿರಾಳವಾಗಿ ಮೆಲುಕುಹಾಕುತ್ತ ನಿಂತಿತ್ತು. ಗುಂಡನೆಯ ಅದರ ಮಿಂಚುಗಣ್ಣುಗಳು ನನ್ನನ್ನೇ ದೃಷ್ಟಿಸುತ್ತ ಸ್ನೇಹಭಾವ ಸೂಚಿಸುತ್ತಿದ್ದಂತೆ ಅನಿಸಿತು. ಇಷ್ಟು ಶಾಂತವಾದ ಸಾಧುಸ್ವಭಾವ ಎಮ್ಮೆ ನನ್ನ ಅನುಭವದಲ್ಲಿ ಅಪರೂಪವೇ. ಆ ರೈತರೊಂದಿಗೆ ಮಾತನಾಡುತ್ತಿರುವಾಗ, ಅದು ತನ್ನ ಸ್ವಭಾವಕ್ಕೆ ಅನುಗುಣವಾಗಿ, ನಾವು ಹೊಸಬರನ್ನು ಪರಿಚಯ ಮಾಡಿಕೊಳ್ಳುವಾಗ ಹಸ್ತಲಾಘವ ಮಾಡುವಂತೆ, ತನ್ನದೇ ಆದ ರೀತಿಯಲ್ಲಿ ಆ ಎಮ್ಮೆ ನನ್ನ ಸೊಂಟವನ್ನು ಮೃದುವಾಗಿ ಒತ್ತಿ ತನ್ನೊಂದಿಗೂ ಮಾತನಾಡು ಎಂಬಂತೆ ತನ್ನ ಬಾಯಲ್ಲಿ ಷರ್ಟಿನ ತುದಿಯನ್ನು ಎಳೆದಿತ್ತು!

ಚಂದ್ರಿ
ಈಗ ನಾನು ಕೂಡ ಸಂತೋಷದಿಂದ ಅದರ ಕೊಂಬುಗಳ ನಡುವಿನ ತಲೆಯ ಭಾಗವನ್ನು ಮೃದುವಾಗಿ ಕೆರೆಯುತ್ತಾ ಎಮ್ಮೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ನಸುಗಪ್ಪು ಬಣ್ಣ. ಚಕ್ರಕೋಡುಗಳು. ಹಣೆಯ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಬಿಳಿ ಬಣ್ಣ. ಅದರ ಮಧ್ಯದಲ್ಲಿ ಕುಂಕುಮವಿಟ್ಟಂತೆ ಬೊಟ್ಟು ಗಾತ್ರದ ಬಿಳಿಯ ಚುಕ್ಕೆ. ಸೊಂಪಾದ ಎಮ್ಮೆಯದು.

ನನ್ನ ಗಮನ ಎಮ್ಮೆಯತ್ತ ಹೊರಳಿದ್ದನ್ನು ಗಮನಿಸಿದ ಯಜಮಾನರು ನೋಡಿ ನಸುನಕ್ಕು, ಡಾಕ್ಟ್ರೇ, ಹ್ಯಾಗಿದೆ ಎಮ್ಮೆ? ಭಾಳಾ ಸಭ್ಯ. ಚಿಕ್ ಮಕ್ಳೂ ಸೈತ ಅದ್ರ ಹೊಟ್ಟೇ ಆಡೀಗೆ ನುಸೀಬಹ್ದು ನೋಡಿ. ಮನೇಲೇ ಹುಟ್ಟಿ ಬೆಳೆದದ್ದು. ಚಂದ್ರೀನ ಭಾಳ ಪ್ರೀತಿಂದ ಸಾಕಿದೀವಿ ಎಂದರು. ತನ್ನ ಯಜಮಾನನ ಮಾತನ್ನು ಅನುಮೋದಿಸುವಂತೆ ಅದು ತಲೆ ತುರಿಸುತ್ತಿದ್ದ ನನ್ನ ಕೈಯನ್ನು ಉದ್ದ ನಾಲಿಗೆಯಿಂದ ನೆಕ್ಕಿತು. ಸ್ಯಾಂಡ್ ಪೇಪರಿನಿಂದ ಉಜ್ಜಿದಂತಾದರೂ ಮೃದುವಾಗಿ ಒಮ್ಮೆ ಅದರ ಕೆನ್ನೆ ತಟ್ಟಿ ಹಸುವಿನ ಚಿಕಿತ್ಸೆಯತ್ತ ಗಮನ ಹರಿಸಿದೆ.

ಇದಾಗಿ ಕೇವಲ ಹದಿನೈದು ದಿನಗಳ ನಂತರ ಅದೇ ಎಮ್ಮೆ ಖಾಯಿಲೆ ಬಿತ್ತು. ದೇಹದ ದುಗ್ಧರಸ ಗ್ರಂಥಿಗಳು ಊದಿಕೊಂಡು ತೀವ್ರ ಜ್ವರ ಬರುವ ಆ ರೋಗಕ್ಕೆ ಎರಡು ಮೂರು ದಿನಗಳ ಸತತ ಚಿಕಿತ್ಸೆ ಅಗತ್ಯ. ಹಾಗಾಗಿ ಪ್ರತಿದಿನ ಹೋಗಿ ನಾನು ಇಂಜೆಕ್ಷನ್ ಮಾಡುವಾಗಲೂ ಒಂಚೂರೂ ಅಲುಗಾಡದೇ  ನಿಂತಲ್ಲೇ ನಿಂತು ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ಇದೆಲ್ಲದರಿಂದ ನನಗೆ ಆ ಚಂದ್ರಿ ಎಮ್ಮೆಯ ಮೇಲೇ ತುಂಬ ಆತ್ಮೀಯತೆ ಬೆಳೆಯಿತು. ಬೇರೆ ಕೆಲಸಕ್ಕೆ ಅವರ ಮನೆಗೆ ಹೋದಾಗಲೆಲ್ಲ ಚಂದ್ರಿಯ ಕೆನ್ನೆ ಸವರಿ ತಲೆ ತುರಿಸಿ ಮಾತನಾಡಿಸಿಯೇ ಬರುತ್ತಿದ್ದೆ.

ಹೀಗೇ ಮೂರು ನಾಲ್ಕು ತಿಂಗಳು ಕಳೆದಿರಬೇಕು. ಒಂದು ದಿನ ಅಲ್ಲೇ ಪಕ್ಕದ ಹಳ್ಳಿಯ ಸೋಮಭಟ್ಟರು ಗಾಬರಿಯಿಂದ ಆಸ್ಪತ್ರೆಗೆ ಓಡೋಡುತ್ತ ಬಂದರು. ಏದುಸಿರು ಬಿಡುತ್ತ  ಅವರು ಹೇಳಿದ್ದಿಷ್ಟು. ಕೆರೆಯ ಕೆಳಗಿರುವ ಅವರ ಭತ್ತದ ಗದ್ದೆಯ ಮೇಲ್ಭಾಗದಲ್ಲಿ ದೊಡ್ಡ ಕಾಲುವೆಯೊಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನೀರು ರಭಸವಾಗಿ ಹರಿದು ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ಕೊರಕಲೇ ಆಗಿದೆ. ನಿನ್ನೆ ಭಟ್ಟರು ಗದ್ದೆಯ ಕಡೆ ಹೋದಾಗ ಆ ಕಾಲುವೆಯ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅಲ್ಲಿ ಹೋಗಿ ನೋಡಿದರೆ ಒಂದು ಎಮ್ಮೆ ಅಲ್ಲಿ ಸಿಲುಕಿಕೊಂಡಿದೆ. ಪಾಪ ಯಾರ ಎಮ್ಮೆಯೋ, ಅಡವಿಯಲ್ಲಿ ಮೇಯುತ್ತಿರುವಾಗ ಕಾಲು ಜಾರಿಯೋ ಏನೋ ಕೊರಕಲಿಗೆ ಬಿದ್ದುಬಿಟ್ಟಿದೆ. ಮೇಲೇಳಲಾಗದೇ ಒದ್ದಾಡಿ ಒದ್ದಾಡಿ ಅದರ ಕಾಲುಗಳೆಲ್ಲ ಕೆತ್ತಿ ಹೋಗಿವೆ. ಅಲ್ಲೆಲ್ಲ ನೊಣ ಮೊಟ್ಟೆಯಿಟ್ಟು ಅರ್ಧ ಕೊಳೆತುಹೋಗಿ ಹುಳುಗಳಾಗಿ ಮಿಜಿಮಿಜಿಗುಡುತ್ತಿವೆ. ಅಲ್ಲಿ ಅದು ಬಿದ್ದು ಮೂರ್ನಾಲ್ಕು ದಿನಗಳೇ ಆಗಿರಬೇಕು. ಅತ್ತ ಸಾಯದೇ ಬದುಕಲೂ ಆಗದೇ ಪಾಪದ ಎಮ್ಮೆ ನರಕಯಾತನೆ ಅನುಭವಿಸುತ್ತಿದೆ.

ಸೋಮಭಟ್ಟರ ಜೊತೆ ಆ ಕೊರಕಲಿಗೆ ಹೋಗಿ ದುರ್ವಾಸನೆ ತಪ್ಪಿಸಲು ಕರ್ಚೀಫಿನಿಂದ ಮೂಗು ಮುಚ್ಚಿಕೊಂಡು ಅಡ್ಡಡ್ಡ ಮಲಗಿದ್ದ ಎಮ್ಮೆಯನ್ನು ಪರೀಕ್ಷಿಸಿದೆ. ಸೊಂಟದ ಎಲುಬು ಮುರಿದುಹೋಗಿದೆ. ಮೈಗೆಲ್ಲ ನಂಜು ಆವರಿಸಿದೆ. ಹುಳುಗಳಾಗಿ ಚರ್ಮ ಮಾಂಸ ಕೊಳೆಯುತ್ತಿದೆ. ಚಿಕಿತ್ಸೆಯಿಂದ ಗುಣಮಾಡಲು ಸಾಧ್ಯವೇ ಇಲ್ಲದಿರುವುದರಿಂದ ಇದಕ್ಕೆ ದಯಾಮರಣ ಕಲ್ಪಿಸುವುದೊಂದೇ ದಾರಿ ಅನಿಸಿತು. ಲಗುಬಗೆಯಿಂದ ಔಷಧವನ್ನು ಪೆಟ್ಟಿಗೆಯಿಂದ ಹೊರತೆಗೆದು ಎಮ್ಮೆಯ ರಕ್ತನಾಳದೊಳಕ್ಕೆ ವೇಗವಾಗಿ ಕಳಿಸಿದೆ. ನೋಡನೋಡುತ್ತಿದ್ದಂತೆ ಆ ನತದೃಷ್ಟ ಮೂಕ ಪ್ರಾಣಿ ಕೊಟ್ಟಕೊನೆಯ ಬಾರಿ ನಿಡಿದಾಗಿ ಉಸಿರು ತೆಗೆದು ತನ್ನೆಲ್ಲಾ ಯಾತನೆಯಿಂದ ಮುಕ್ತಿ ಪಡೆಯಿತು. ಕೈಲಿ ಹಿಡಿದ ಸಿರಿಂಜನ್ನು ಒಳಗಿಡುತ್ತ ಯಾಕೋ ಅನುಮಾನದಿಂದ ಎಮ್ಮೆಯ ಮುಖದತ್ತ ನೋಡಿದೆ. ಎದೆ ಧಸಕ್ಕೆಂದಿತು. ಅದೇ ಚಕ್ರಕೋಡು! ಹಣೆಯ ಮೇಲೆ ಅರ್ಧಚಂದ್ರಾಕೃತಿಯ ಬಿಳಿ ಬಣ್ಣ! ಮಧ್ಯದಲ್ಲಿ ಕುಂಕುಮವಿಟ್ಟಂತೆ ಬೊಟ್ಟು ಗಾತ್ರದ ಬಿಳಿಯ ಚುಕ್ಕೆ! ಮೂಗು ಮುಚ್ಚಿದ್ದ ಕರ್ಚೀಫನ್ನು ತೆಗೆದು ಕಣ್ಣೊರೆಸಿಕೊಂಡೆ.

ಲೇಖಕರ ಕಿರುಪರಿಚಯ
ಡಾ. ಗಣೇಶ ಹೆಗಡೆ ನೀಲೇಸರ

ವೃತ್ತಿಯಲ್ಲಿ ಪಶುವೈದ್ಯರು; ಉತ್ತರಕನ್ನಡದ ಶಿರಸಿಯಲ್ಲಿ ಜಿಲ್ಲಾ ಪಶುರೋಗ ತನಿಖಾ ಪ್ರಯೋಗಾಲಯದಲ್ಲಿ ಪಶು ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಹೈನು ಹೊನ್ನು' ಪುಸ್ತಕದ ಸಹಲೇಖಕರಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2014ರ 'ಶ್ರೇಷ್ಠ  ಲೇಖಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

Blog  |  Facebook  |  Twitter

ಬುಧವಾರ, ನವೆಂಬರ್ 11, 2015

ಪ್ರೀತಿ

ಮೋಜಿನ ಸಂಗತಿಯಲ್ಲ ಈ ಪ್ರೀತಿ
ಭಾವನೆಗಳ ಸಂಗಮವಾಗಬೇಕು ವಿಶೇಷ ರೀತಿ
ಪ್ರೀತಿ ಕುರುಡು ಎನ್ನುವುದು ಪ್ರತೀತಿ
ಪ್ರೀತಿಸುವವರು ಕುರುಡರಲ್ಲ ಇದು ನಿಜಸ್ಥಿತಿ.

ನಮಗೆ ಅನ್ನಿಸುತ್ತದೆ 'ಇವಳು ಬೇಕು, ಇವಳು ಬೇಕು'
ಆದರೆ ದೇವರು ನಮಗೆ ಕೊಟ್ಟಿದ್ದಾನೆ
ನಾವು ಅದನ್ನು ಉಪಯೋಗಿಸಬೇಕು..?
ಅದೇ ಸಹನೆ,ಯೋಚನೆ..
ಹಳ್ಳಕ್ಕೆ ಬೀಳಬಾರದು ದುಡುಕಿ.

ಕೆಲ ಸಮಯದ ನಂತರ
ನೀವು ಯೋಚನೆ ಮಾಡಿದರೆ
ನಾನು ಪ್ರೀತಿ ಮಾಡಿದ್ದೆ ಇಂತಿಪ..
ಆಗ ನಿಮಗಾಗಬಾರದು ಪಶ್ಚಾತ್ತಾಪ!

ಬದಲಾಗಿ ಸಾರ್ಥಕವೆನಿಸಿದರೆ
ಜೀವನ ಎಷ್ಟು ಸುಂದರ.
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ
ಪ್ರೀತಿಮಾಡುವ ಮುನ್ನ ಅನುಮಾನಿಸಿ
ಆದರೆ ಪ್ರೀತಿಯಲ್ಲಿ ಅನುಮಾನ ಬೇಡ.

ಲೇಖಕರ ಕಿರುಪರಿಚಯ
ಶ್ರೀ ಶಿಶಿರ್ ಹೆಗಡೆ

ಮಂಗಳೂರು ಮೂಲದವರಾದ ಇವರು ಹುಟ್ಟಿ ಬೆಳೆದದ್ದು ಸಿರ್ಸಿಯಲ್ಲಿ; ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ-ಅಭಿಮಾನ ಇವರಿಗೆ. ಚುಟುಕ ಹಾಗೂ ಕವನಗಳ ಮೂಲಕ ಭಾವನೆಗಳಿಗೆ ಜೀವ ತುಂಬುವುದು ಇವರ ಹವ್ಯಾಸ.

Blog  |  Facebook  |  Twitter

ಮಂಗಳವಾರ, ನವೆಂಬರ್ 10, 2015

ವಚನ ಸಾಹಿತ್ಯ ದರ್ಪಣ

ಉಳ್ಳವರು ಶಿವಾಲಯವ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ||
                                                         ~ ಬಸವಣ್ಣ

ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. ಹನ್ನೊಂದನೆಯ ಶತಮಾನದಲ್ಲಿ ಉದಯಿಸಿ, 12ನೆಯ ಶತಮಾನದಲ್ಲಿ ಆಂದೋಳನದ ಭಾಗವಾಗಿ ಇದು ಬೆಳೆದು ಬಂದಿತು. ಈ ಪ್ರಕಾರವು ಸಾಹಿತ್ಯ ಪರಿಭಾಷೆಯಲ್ಲಿ ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಒಂದು ವಿಶಿಷ್ಟ ಕಾವ್ಯಪ್ರಭೇದ.

'ವಚನ' ಎಂದರೆ ಮಾತು ಹಾಗೂ ಪ್ರಮಾಣ ಎಂದರ್ಥ. ಹನ್ನೊಂದನೆಯ ಶತಮಾನದಲ್ಲಿ, ದಕ್ಷಿಣದ ಚಾಲೂಕ್ಯರ ಕಾಲದ ಸಂತ ಕವಿ ಮಾದಾರ ಚೆನ್ನಯ್ಯ ವಚನ ಸಾಹಿತ್ಯದ ಮೊದಲ ಕವಿಯಾಗಿದ್ದು, ನಂತರ ಉತ್ತರದ ಕಲಚೂರಿ ರಾಜ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣ (ಅಥವಾ ಬಸವೇಶ್ವರ) ವಚನ ಸಾಹಿತ್ಯದ ಪಿತಾಮಹ ಎಂದು ಕರೆಸಿಕೊಳ್ಳುತ್ತಾನೆ.

ವಚನಗಳ ಮೂಲ ಅಂಶ ಅಥವಾ ಸಾರಾಂಶ ದಿನನಿತ್ಯ ನಡೆಯುವ ಯಾವುದಾದರೂ ಒಂದು ಘಟನೆಯಾಗಿರಬಹುದು, ಅಥವಾ ಪ್ರತಿಯೊಬ್ಬ ಮಾನವನ ಗುಣಾವಗುಣಗಳ ಸಾರವಿರಬಹುದು. ಕೆಲವು ವಚನಗಳಲ್ಲಿ, ಮೊದಲು ಒಂದು ಸಂದೇಶವನ್ನು ನಿರೂಪಿಸಿ, ನಂತರ ಅದಕ್ಕೆ ಉದಾಹರಣೆಗಳನ್ನು ನೀಡುವ ಕ್ರಮವಿದ್ದರೆ, ಮತ್ತೆ ಕೆಲವು ವಚನಗಳಲ್ಲಿ ನೀತಿ-ನಿರೂಪಣೆಯೇ ಸಂಪೂರ್ಣವಾಗಿರಬಹುದು. ವಚನಗಳು ಸರಳ ಭಾಷೆಯಲ್ಲಿ ರಚಿತವಾಗಿದ್ದು, ಜೀವನಕ್ಕೆ ಬಹು ಮುಖ್ಯವಾದ ತತ್ವಗಳನ್ನು ಬೋಧಿಸಿ, ಬದುಕಿಗೆ ದಾರಿದೀಪವಾಗಿ ಮುಖ್ಯಪಾತ್ರವನ್ನು ವಹಿಸುತ್ತವೆ. ಇವುಗಳಲ್ಲಿ ಒಂದೆಡೆ ತಾತ್ವಿಕ, ಶಾಸ್ತ್ರೀಯ, ಹಾಗೂ ವೈಜ್ಞಾನಿಕ ರೀತಿಯಲ್ಲಿ ಮತ-ಧರ್ಮಗಳ ತತ್ವಗಳ ಸುಲಲಿತ ಬೋಧನೆಯಿದ್ದರೆ, ಮತ್ತೊಂದೆಡೆ ಅಂತರ್ವ್ಯಕ್ತೀಯ ಸಂಬಂಧಗಳ ಮೌಲ್ಯಗಳ ಬಗ್ಗೆ, ಭಾವನಾತ್ಮಕ ಘರ್ಷಣೆಗಳ ಬಗ್ಗೆ, ಮತ್ತು ಮಾನವಸಹಜ ಪ್ರವೃತ್ತಿಗಳು ಹಾಗೂ ನ್ಯೂನತೆಗಳ ನಿರೂಪಣೆಯಿರುತ್ತದೆ. ಒಟ್ಟಿನಲ್ಲಿ, ವಚನ ಸಾಹಿತ್ಯ ಶಿವಶರಣರು ನಮಗೆ ಕೊಟ್ಟ ಅತ್ಯಮೂಲ್ಯ ಆಸ್ತಿ.

ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರನ್ನು ಹೆಸರಿಸಬೇಕಾದರೆ, ಕೂಡಲೇ ಮನಸ್ಸಿಗೆ ಬರುವವರು ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಚೆನ್ನ ಬಸವಣ್ಣ, ಇತ್ಯಾದಿ. ಎಲ್ಲಾ ಶರಣ-ಶರಣೆಯರು ಕರ್ಮಯೋಗವನ್ನು ಪಾಲಿಸಿ, ಸಮಾಜದ ಕೆಡಕುಗಳನ್ನು ಬುಡಸಮೇತ ನಿರ್ಮೂಲಮಾಡುವ ಮಾರ್ಗೋಪಾಯಗಳನ್ನು ನಿರೂಪಿಸಿದ್ದಾರೆ.

ವಚನ ಚಳುವಳಿಯ ಪ್ರಮುಖ ಉದ್ದೇಶವೇ ಸಾಮಾನ್ಯ ಮನುಷ್ಯನನ್ನು ವಿಚಾರವಂತನನ್ನಾಗಿ ಮಾಡುವುದು. ಈ ದಿಕ್ಕಿನಲ್ಲಿ, ವಚನ ಚಳುವಳಿಯ ಮೂರು ಬುನಾದಿಯ ತತ್ವಗಳೆಂದರೆ 'ಕಾಯಕ', 'ದಾಸೋಹ' ಮತ್ತು 'ಲಿಂಗಪೂಜೆ'. 'ಕಾಯಕ' ತತ್ವವೆಂದರೆ, ಸಮಾಜದಲ್ಲಿ ಭಿನ್ನ ವರ್ಗಗಳು ಮಾಡುವ ಎಲ್ಲಾ ಭಿನ್ನ ಭಿನ್ನ ವೃತ್ತಿಗಳಿಗೂ ಸಮಾನ ಗೌರವವನ್ನು ಕೊಡುವುದು ಮತ್ತು ವೃತ್ತಿಗಳಲ್ಲಿ ಶ್ರೇಷ್ಠ-ನೀಚ ಎಂಬ ಮೌಲ್ಯಮಾಪನೆಯಿಲ್ಲ ಎಂದು ಪ್ರತಿಪಾದಿಸುವುದು. 'ದಾಸೋಹ'ವೆಂದರೆ ನಮ್ಮಲ್ಲಿರುವುದನ್ನು ಇತರರೊಡನೆ ಹಂಚಿಕೊಂಡು ಬಾಳುವುದು; ಇದು ಹಸಿದವರಿಗೆ ನೀಡುವ ಅನ್ನವಾಗಬಹುದು, ಅವಿದ್ಯಾವಂತರಿಗೆ ನೀಡುವ ವಿದ್ಯೆಯಾಗಬಹುದು. 'ಲಿಂಗಪೂಜೆ'ಯ ಅರ್ಥವೆಂದರೆ ಸಾಂಕೇತಿಕ ನೆಲೆಯಲ್ಲಿ 'ಏಕದೇವೋಪಾಸನೆ'. 'ಶಿವ' (ಈಶ್ವರ/ ಮಂಗಳಕರವಾದದ್ದು) ತತ್ವದ ಸಂಕೇತವೇ ಲಿಂಗ.

ಬಸವಣ್ಣನವರ ನೇತೃತ್ವದಲ್ಲಿ, ಶಿವಶರಣರು ಜಾತಿಹೀನ ಸಮಾಜದ ಕನಸನ್ನು ಕಾಣುತ್ತಾ, ಮಾನವರಲ್ಲಿ ಸರ್ವಸಮಾನತೆಯ ತತ್ವವನ್ನು ಎತ್ತಿ ಹಿಡಿದರು; ಎಲ್ಲಾ ಬಗೆಯ ಸಾಮಾಜಿಕ ಅನ್ಯಾಯಗಳು, ಮೂಢನಂಬಿಕೆಗಳು, ಇತ್ಯಾದಿಗಳನ್ನು ಬಲವಾಗಿ ಖಂಡಿಸಿದರು; 'ಕಾಯಕವೇ ಕೈಲಾಸ' ಎಂದು ನಂಬಿ ನಡೆದರು. ಈ ತತ್ವಗಳನ್ನು ಬಸವಣ್ಣನವರು ತಮ್ಮ ಈ ವಚನದಲ್ಲಿ ತುಂಬಾ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ:

"ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸ್ತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯ"

ಅಕ್ಕ ಮಹಾದೇವಿಯ ವಚನಗಳಲ್ಲಿ ಸಾಹಿತ್ಯ ಸುಭಗತೆ ಹಾಗೂ ಉಪಯೋಗಿಸಲ್ಪಟ್ಟಿರುವ ಅಸಾಧಾರಣ ಉಪಮೆಗಳು ರೋಮಾಂಚಕಾರಿಯಾಗಿವೆ; ಏಕೆಂದರೆ, ಅವು ಜೀವನಮೌಲ್ಯಗಳಿಗೆ ತುಂಬಾ ಹತ್ತಿರವಾಗಿದ್ದು, ತಮ್ಮ ಪದ ಲಾಲಿತ್ಯದಿಂದ ಕೂಡಲೇ ನಮ್ಮನ್ನು ಆಕರ್ಷಿಸುತ್ತವೆ. ಉದಾಹರಣೆಗೆ:

"ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಭಾವಿಗಳುಂಟು
ನಮನಕೆ ಹಾಳು ದೇಗುಲಗಳುಂಟು
ಆತ್ಮಸಂಗಾತಿಗೆ ಚೆನ್ನಮಲ್ಲಿಕಾರ್ಜುನ, ನೀ ಎನಗುಂಟು."

ಬುದ್ಧನ ಸಂದೇಶವನ್ನು ನೆನಪಿಸುವ ಮಹಾನ್ ದಾರ್ಶನಿಕ ಅಲ್ಲಮನ ವಚನವೊಂದು ಹೀಗಿದೆ:

"ಹೊನ್ನು ಮಾಯೆಯೆಂಬರು / ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು / ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು / ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ / ಕಾಣಾ ಗುಹೇಶ್ವರ"

ಒಟ್ಟಿನಲ್ಲಿ ಹೇಳುವುದಾದರೆ, ವಚನಸಾಹಿತ್ಯ ಭಂಡಾರದಲ್ಲಿ ದಿನನಿತ್ಯದ ಜೀವನಕ್ಕೆ ಅತ್ಯವಶ್ಯಕವಾದ ತತ್ವಗಳು ಹಾಗೂ ನೀತಿರತ್ನಗಳು ಅಡಗಿದ್ದು, ಎಲ್ಲರೂ ಅದನ್ನು ಅರಿತು ಒಳ್ಳೆಯ ಪಥದಲ್ಲಿ ಜೀವನ ಸಾಗಿಸಿದರೆ ಅದೇ ನಾವೆಲ್ಲರೂ ಆ ಮಹಾನ್ ಶರಣರಿಗೆ ಮಾಡುವ ನಮ್ರ ನಮನ.

ಲೇಖಕರ ಕಿರುಪರಿಚಯ
ಶ್ರೀಮತಿ ಕೃತ್ತಿಕಾ ಶ್ರೀನಿವಾಸನ್‍

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಮೂಲತಃ ಬೆಂಗಳೂರಿನವರು; ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾ ಅನೇಕ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

Blog  |  Facebook  |  Twitter