ಶುಕ್ರವಾರ, ನವೆಂಬರ್ 13, 2015

ವಿದ್ಯಾರ್ಥಿಜೀವನದಲ್ಲಿ ಶಿಸ್ತು

ವಿದ್ಯಾರ್ಥಿ ಪದದ ಅರ್ಥ 'ವಿದ್ಯೆಯ ಅರ್ಥಿ' ಅಂದರೆ ವಿದ್ಯೆಯನ್ನು ಅರ್ಥಿಸುವವನು, ಸಂಪಾದಿಸುವವನು. ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಯಾವುದೋ ಒಂದು ವಿಷಯ ಸಂಪಾದನೆಯ, ಅಂದರೆ ಜ್ಞಾನ ಸಂಗ್ರಹದ ಗುರಿ ಹೊಂದಿರುವವನು ವಿದ್ಯಾರ್ಥಿ. ವಿದ್ಯಾರ್ಥಿ ತನ್ನ ಜೀವದಲ್ಲಿ ಈ ಗುರಿಯನ್ನು ಸಾಧಿಸಲು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸುವುದು ಕೂಡ ಇಲ್ಲಿ ಅತಿ ಮುಖ್ಯವಾದ ಸಂಗತಿ. ಅದರಲ್ಲಿಯೂ ಶಿಸ್ತಿನ ಪಾಲನೆ ವಿದ್ಯಾರ್ಥಿ ಜೀವನದಲ್ಲಿ ಪಾಲಿಸಲೇ ಬೇಕಾದ ಅತೀ ಮುಖ್ಯವಾದ ನಿಯಮವಾಗಿದೆ.

ಶಿಸ್ತು ಸಂಯುಮಗಳಿಲ್ಲದ ನಡುವಳಿಕೆಯನ್ನು ಇಂದಿನ ವಿದ್ಯಾರ್ಥಿಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. ಸಮಯ ಪಾಲನೆಯಲ್ಲಿ, ತರಗತಿಯ ಓದಿನಲ್ಲಿ, ಶಿಕ್ಷಕರು ನೀಡಿದ ಚಟುವಟಿಕೆಗಳನ್ನು ಮಾಡಿ ಒಪ್ಪಿಸುವಲ್ಲಿ, ಹೀಗೆ ಪ್ರತಿಯೊಂದು ಕಾರ್ಯದಲ್ಲಿಯೂ ಹೇಗಾದರೂ ಮಾಡಿದರಾಯಿತು, ಹೇಗೋ ಮಾಡಿ ಮುಗಿಸಿದರಾಯಿತು ಎಂಬ ಆಲಸ್ಯದ ಮನೋಭಾವ ಹೊಂದಿರುವ ವಿದ್ಯಾರ್ಥಿಗಳ ಸಮುದಾಯ ಶಿಕ್ಷಣದ ಘನ ಉದ್ದೇಶಗಳನ್ನು ಈಡೇರಿಸುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಮನೋಭಾವ ಮೂಡಿಸುವಲ್ಲಿ ಶಿಕ್ಷಕರ ಜವಾಬ್ದಾರಿಯಂತೆ ಪಾಲಕರ ಕರ್ತವ್ಯವೂ ಅಡಗಿರುವುದನ್ನು ಗಮನಿಸಬೇಕಾದುದು ಅತೀ ಅಗತ್ಯ. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಶಿಸ್ತಿನ ಪಾಲನೆ ಹೇಗೆ ಸಾಧ್ಯ ಎನ್ನುವುದರ ಅರಿವು ಮಕ್ಕಳಿಗೆ ಮನೆಯಲ್ಲಿಯೇ ಮೂಡುವ ವಾತಾವರಣ ನಿರ್ಮಾಣವಾಗಬೇಕು.

ಮುಂಜಾನೆ ಒಂದು ನಿರ್ದಿಷ್ಠ ಸಮಯದಲ್ಲಿ ಏಳುವುದು, ತನ್ನ ಕೆಲಸ ಕಾರ್ಯಗಳನ್ನು ಬೇರೆಯವರ ಸಹಾಯ ಪಡೆಯದೇ ಆದಷ್ಟೂ ತಾನೇ ನಿಭಾಯಿಸುವುದು, ತಾನು ಬಳಸಿದ ವಸ್ತುಗಳನ್ನು ಯಾವ ಜಾಗದಿಂದ ತೆಗೆದುಕೊಂಡಿದ್ದನೋ ಅಲ್ಲಿಯೇ ಮತ್ತೆ ಮೊದಲಿನ ಹಾಗೆ ಜೋಡಿಸಿಡುವುದು, ಮನೆಯಲ್ಲಿ ಆಟವಾಡಲು ಬಳಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡದಂತೆ ನೋಡಿಕೊಳ್ಳುವುದು, ದೇಹದ ಸ್ವಚ್ಛತೆ ಕಾಯ್ದುಕೊಳ್ಳುವುದು, ಶಾಲೆಯಿಂದ ಮರಳಿದಾಗ  ಪುಸ್ತಕಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನೋಡಿಕೊಳ್ಳುವುದು, ಗುರುಹಿರಿಯರಿಗೆ ಗೌರವ ತೋರುವುದು, ಆಟವಾಡಲು ಹೋದರೆ ನಿಗದಿತ ಸಮಯಕ್ಕೆ ಮನೆಗೆ ಮರಳುವುದು ಹೀಗೆ ಪ್ರತಿ ಸಂದರ್ಭದಲ್ಲಿಯೂ ಆದಷ್ಟೂ ಶಿಸ್ತು ಕಾದುಕೊಳ್ಳಲು ತಿಳಿಹೇಳುವುದು ಮನೆಯವರ ಅಂದರೆ ಪಾಲಕರ ಕರ್ತವ್ಯವಾಗಿದೆ.

ಇನ್ನು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು.

ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುರಾಯ
ಬಂಧನವ ಕಳೆವ ಸರ್ವಜ್ಞ ||

ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ. ಶಿಕ್ಷೆಯಿಂದ ಮಾತ್ರವೇ ಶಿಸ್ತನ್ನು ರೂಢಿಸುವುದು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯವಾದ ಸಂದರ್ಭಗಳಲ್ಲಿ ಜಾಣನಿಗೆ ಮಾತಿನ ಪೆಟ್ಟಿನಿಂದ ತಿದ್ದಬೇಕಾಗುವುದು. ವಿದ್ಯಾರ್ಥಿ ಸರಿಯಾದ ಸಮಯಕ್ಕೆ ಪ್ರಾರ್ಥನೆಯ ವೇಳೆಗೆ ಹಾಜರಿರುವಂತೆ,  ಶಿಕ್ಷಕರು ವಹಿಸಿದ ಕಾರ್ಯವನ್ನು ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ನಿಭಾಯಿಸುವಂತೆ ವಿದ್ಯಾರ್ಥಿಯ ಮನವೊಲಿಕೆ, ಅವನಲ್ಲಿ ಸ್ಫೂರ್ತಿ ನೀಡುವುದು ಅತಿ ಅಗತ್ಯವಾದುದು. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ವಿದ್ಯಾರ್ಥಿಯ ಆಶಿಸ್ತಿನ ನಡುವಳಿಕೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ತಿದ್ದುವ ಕಾರ್ಯವಾಗಬೇಕು. ಇಲ್ಲವಾದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬಂತೆ 'ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ' ಎಂಬಂತಾಗಬಾರದು. ಆದ್ದರಿಂದ ಶಾಲಾ ಪ್ರಾರಂಭದ ದಿನಗಳಿಂದಲೂ ವಿದ್ಯಾರ್ಥಿಯ ಅಶಿಸ್ತಿನ ನಡುವಳಿಕೆಯನ್ನು ಸಾಧ್ಯವಾದಷ್ಟು ತಿದ್ದುತ್ತಾ, ಶಿಸ್ತಿನ ನಡುವಳಿಕೆಯ ಹೆಜ್ಜೆ ಬದುಕಿನ ಪಥದಲ್ಲಿ ಗೆಲುವಿನ ನಗುವಿಗೆ ಕಾರಣವಾಗುವ ಬಗೆಯನ್ನು ವಿವರಿಸಬೇಕು.

ವಿದ್ಯಾರ್ಥಿಯಾದವನು ಶಿಸ್ತನ್ನು ಸ್ವಯಂ ಅಳವಡಿಸಿಕೊಳ್ಳಬೇಕು. ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಬಹಳ ದಿನ ಉಳಿಯಲಾರದು. ಶಿಸ್ತಿನ ಪಾಠ ವಿದ್ಯಾರ್ಥಿಗಳಿಯೇ ಪ್ರಕೃತಿಯಲ್ಲಿಯೇ ದೊರೆಯುವುದು. ಆಹಾರವನ್ನು ಅರಸುತ್ತಾ ಹೊರಡುವ ಇರುವೆಗಳಿಗೆ ಸಾಲಾಗಿಯೇ ಹೋಗಬೇಕೆಂಬ ಶಿಸ್ತಿನ ಪಾಠವನ್ನು ಯಾರೂ ಕಲಿಸಿಲ್ಲ ಅಲ್ಲವೇ? ಆಕಾಶದಲ್ಲಿ ಒಂದೇ ವೇಗದಲ್ಲಿ, ಒಂದೇ ದಾರಿಯಲ್ಲಿ ಹಾರುವ ಪಕ್ಷಿಗಳಿಗೆ ಆ ಶಿಸ್ತನ್ನು ಕಲಿಸಿದವರು ಯಾರು? ಮೇವು ಅರಸುತ್ತ ಹೋಗುವ ದನಕರುಗಳ ಹಿಂಡು ಸಂಜೆಯಾದೊಡನೆ ತಮ್ಮ ತಮ್ಮ ಮನೆ ಸೇರುವುದಿಲ್ಲವೇ? ಪ್ರಾಣಿ, ಪಕ್ಷಿಗಳಲ್ಲಿರುವ ಜೀವನದ ಶಿಸ್ತಿನ ನಡೆ ವಿದ್ಯಾರ್ಥಿಗಳಿಗೆ ಮಾದರಿಯಲ್ಲವೇ?

ಪ್ರಕೃತಿಯ ವೈವಿಧ್ಯತೆಯಲ್ಲಿಯೂ ಒಂದು ಶಿಸ್ತುಬದ್ಧತೆಯಿದೆ ಎನ್ನುವುದನ್ನು ಅರಿತರೆ ವಿದ್ಯಾರ್ಥಿ ತನ್ನನ್ನು ಸ್ವಯಂಶಿಸ್ತಿಗೆ ಒಳಪಡಿಸಿಕೊಳ್ಳಬಲ್ಲ. ನಿಗದಿತ ವೇಳೆಯಲ್ಲಿ ವಹಿಸಿದ ಕಾರ್ಯವನ್ನು ವ್ಯವಸ್ಥಿತವಾಗಿ ಪೂರೈಸಬಲ್ಲ.

ಅಂದು? ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತಿತ್ತು ಧೀರರ ದಂಡು,
ಇಂದು? ಹಿಂದೆ ಗುರಿಯಿಲ್ಲ, ಮುಂದೆ ಗುರುವಿಲ್ಲ ಸಾಗುತಿದೆ ರಣಹೇಡಿಗಳ ಹಿಂಡು...
- ಕುವೆಂಪು.


ಇಂದಿನ ದಿನಗಳಲ್ಲಿ ಗೊತ್ತು ಗುರಿಯಿಲ್ಲದ ವಿದ್ಯಾರ್ಥಿಗಳ ಸಮುದಾಯ ನಮ್ಮೆದುರಿಗಿದೆ. ಅವರಲ್ಲಿರುವ ಕಾರ್ಯಶೀಲತೆಯನ್ನು ಗುರುತಿಸಿ ಜೀವನದ ಉತ್ತಮ ಮಾರ್ಗ ತೋರುವ ಗುರುವಿನ ಅವಶ್ಯಕತೆಯೂ ಇಲ್ಲದಿಲ್ಲ. ಆದರೆ ಡಿ. ವಿ. ಜಿ. ಯವರು ಹೇಳುವಂತೆ:
ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ |
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು |
ದಿನವ ಕಳೆ; ಗುರು ಶಿಷ್ಯ ಪಟ್ಟಗಳು ನಿನಗೇಕೆ?
ನಿನಗೆ ನೀನೇ ಗುರುವೊ -ಮಂಕುತಿಮ್ಮ

ಆದ್ದರಿಂದ ಇನ್ನೊಬ್ಬರು ಹೇಳುವ ಸಲಹೆಗಳಿಗೆ ಕಾಯದೇ ವಿಚಾರಮಂಥನದಿಂದ, ಅನುಭವಗಳ ಪಾಠದಿಂದ ವಿದ್ಯಾರ್ಥಿ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಮುಂದೆ ಸಾಗಬೇಕು.ಶಿಸ್ತು ಕೇವಲ ವಿದ್ಯಾರ್ಥಿ ಜೀವನದ ಭಾಗವಲ್ಲ. ಇಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಶವಾಗಿ ಅಳವಡಿಕೆಯಾದರೆ ಎಲ್ಲಿದ್ದರೂ ಯಶಸ್ಸು ಕಟ್ಟಿಟ್ಟ ಬುತ್ತಿ.

ಲೇಖಕರ ಕಿರುಪರಿಚಯ
ಶ್ರೀಮತಿ ಮಮತಾ ಭಾಗ್ವತ್

ವೃತ್ತಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿರುವ ಇವರು ಮೂಲತಃ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದವರು. ಇತಿಹಾಸ ಮತ್ತು ಕನ್ನಡ ವಿಷಯದಲ್ಲಿ ಎಂ.ಎ., ಬಿ.ಎಡ್. ಪದವಿ ಪಡೆದಿರುವ ಇವರು ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ಅತ್ಯುತ್ತಮ ಲೇಖನ, ಈ ಬಾರಿಯ ಎಸ್,ಎಸ್,ಎಲ್,ಸಿ.ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಈ ವಿಷಯದ ಮೇಲೆ ಪ್ತಬಂಧ ಬರೆಯಲು ಕೊಟ್ಟಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಲೇಖನ ಉತ್ತಮವಾಗಿದೆ ಆದರೆ - ಹಿಂದೆ ಗುರುವಿಲ್ಲ ,ಮುಂದೆ ಗುರಿಯಿಲ್ಲ ಅಂತಾಗಬೇಕು

    ಪ್ರತ್ಯುತ್ತರಅಳಿಸಿ