ಆರಂಭಿಕ ಜೀವನ: ಸಾಧನೆಗೆ ಬಡತನ ಎಂದೂ ಅಡ್ಡಿಯಲ್ಲ ಎಂಬುದಕ್ಕೆ ಚಂದ್ರಶೇಖರ ಶಾಸ್ತ್ರಿಗಳೇ ನಿದರ್ಶನ. ಬಾಲ್ಯದಿಂದ ಜೀವನದುದ್ದಕ್ಕೂ ಬಡತನದ ಬೇಗೆಯಲ್ಲೇ ಬೆಂದವರು. ಆಗಿನ ಮದ್ರಾಸ್ ಪ್ರಾಂತದ ಹೊಳಲು ಗ್ರಾಮದ (ಈಗಿನ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಗ್ರಾಮ) ಜಂಗಮ ಮನೆತನದವರಾದ ಪಟ್ಟದಯ್ಯ ಹಾಗೂ ಬಸಮ್ಮನವರ ಏಕೈಕ ಪುತ್ರನಾಗಿ 1892ರ ಜನವರಿ 3ರಂದು ಚಂದ್ರಶೇಖರ ಶಾಸ್ತ್ರಿಗಳು ಜನಿಸಿದರು. ಜಂಗಮ ದಾಸೋಹದಿಂದಲೇ ಹೊಟ್ಟೆ ತುಂಬಿಸುತ್ತಿದ್ದ ಪಟ್ಟದಯ್ಯನವರು ಅಕಾಲಿಕ ಮರಣ ಹೊಂದಿದಾಗ, ಎರಡು ವರ್ಷದ ಹಸುಗೂಸಿನೊಂದಿಗೆ ಬಸಮ್ಮ ತನ್ನ ತವರು ಮನೆಯಾದ ಮಾಗಳ ಗ್ರಾಮಕ್ಕೆ (ಹಡಗಲಿ ತಾಲೂಕಿನ ಗ್ರಾಮ) ಬಂದರು.
ಮಾಗಳದ ಸೂರ್ಯ ನಾರಾಯಣ ದೇವಸ್ಥಾನದ ಶಾಲೆಯಲ್ಲಿ ಅಕ್ಷರಾಭ್ಯಾಸ ಪ್ರಾರಂಭವಾಯಿತು. 4ನೇ ಇಯತ್ತೆ ಸೇರುವ ವೇಳೆಗೆ ಅಮರಕೋಶ, ಸೋಮೇಶ್ವರ ಶತಕ, ನಿಜಲಿಂಗ ಶತಕ ಮೊದಲಾದ ಗ್ರಂಥಗಳ ಅಧ್ಯಯನ ಮಾಡಿದ್ದರು.
ಹೋರಾಟದ ಹಾದಿ: ಚಂದ್ರಶೇಖರ ಶಾಸ್ತ್ರಿಯವರು ತರಗತಿಯ ಎಲ್ಲಾ ವಿಷಯಗಳ ಕಲಿಕೆಯಲ್ಲಿ ಮುಂದಿದ್ದರು. ಒಮ್ಮೆ ತರಗತಿಯ ಶಿಕ್ಷಕರು ಲೆಕ್ಕ ಮಾಡಲು ಹೇಳಿದರು. ಪಕ್ಕದ ವಿದ್ಯಾರ್ಥಿ ಲೆಕ್ಕ ತಪ್ಪಾಗಿ ಮಾಡಿದ್ದರೂ ಸಹ ಶಿಕ್ಷಕರು ಸರಿಯೆಂದು ಅಂಕ ನೀಡಿದ್ದರು. ಇದು ಶಾಸ್ತ್ರಿಯವರಿಗೆ ಸರಿ ಕಾಣಲಿಲ್ಲ. ಶಿಕ್ಷಕರ ಕ್ರಮವನ್ನು ವಿರೋಧಿಸಿ ಧೈರ್ಯವಾಗಿ ಎದ್ದು ನಿಂತು ಹೇಳಿದರು. ಶಾಸ್ತ್ರಿಯವರ ಮಾತುಗಳಿಂದ ಉಗ್ರವಾದ ಶಿಕ್ಷಕರು ಅವರನ್ನು ಸಿಕ್ಕಾಪಟ್ಟೆ ಹೊಡೆದುದಲ್ಲದೇ ಪ್ರಶ್ನೆ ಮಾಡಿದುದಕ್ಕಾಗಿ ಶಾಲೆಯಿಂದ ಹೊರಹಾಕಿದರು. ಅದು ಅನ್ಯಾಯದ ವಿರುದ್ದ ಶಾಸ್ತ್ರಿಯವರ ಮೊದಲ ಹೋರಾಟ ಎನ್ನಬಹುದು.
ಕೂಲಿಯಿಂದ ಶಾಲೆಗೆ: ಶಾಲೆ ಬಿಟ್ಟು ಬಂದ ಚಂದ್ರಶೇಖರ ಶಾಸ್ತ್ರಿಗೆ ತಾಯಿಯ ಜೊತೆ ಕೂಲಿ ಕೆಲಸ ಅನಿವಾರ್ಯವಾಗಿತ್ತು. ನಾಲ್ಕು ವರ್ಷಗಳು ಸದಸಿಲ್ಲದೇ ಕಳೆದವು. ಆದರೂ ವಿದ್ಯೆ ಕಲಿಯುವ ಆಸೆ ಬತ್ತಿರಲಿಲ್ಲ. ಇಂತಹ ವೇಳೆ ಇವರ ಜೀವನಕ್ಕೆ ಬೆಳಕಾಗಿ ಬಂದವರು ಬ್ಯಾಡಗಿಯ ಸಿದ್ದಲಿಂಗ ಹೊಸಅಂಗಡಿಯವರು. ಚಂದ್ರಶೇಖರ ಶಾಸ್ತ್ರಿಯವರಲ್ಲಿದ್ದ ಕಲಿಯುವ ಆಸೆಯನ್ನು ನೋಡಿ ಸಿದ್ದಲಿಂಗ ಹೊಸಅಂಗಡಿಯವರು ಬ್ಯಾಡಗಿಯ ಮುಪ್ಪಿನಸ್ವಾಮಿಗಳ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಆಗ ಚಂದ್ರಶೇಖರ ಶಾಸ್ತ್ರಿಯವರಿಗೆ 17ವರ್ಷ. ಸಂಸ್ಕೃತ ಎಂದರೇನೆಂದು ತಿಳಿಯದ ಶಾಸ್ತ್ರಿಗಳಿಗೆ ಯಾವುದಾದರೇನು ಕಲಿಯಬೇಕೆಂಬ ಹಂಬಲವಿತ್ತು. ಹೀಗಾಗಿ ಅರ್ಧಕ್ಕೆ ನಿಂತು ಹೋಗಿದ್ದ ವ್ಯಾಸಂಗ ಪುನಃ ಮುಂದುವರೆಯಿತು. 1912ರಲ್ಲಿ ಬ್ಯಾಡಗಿಯಲ್ಲಿ ಪ್ಲೇಗ್ ಹರಡಿದ್ದರಿಂದ ಶಿರಹಟ್ಟಿಯ ಫಕ್ಕೀರಸ್ವಾಮಿಗಳ ಮಠದಲ್ಲಿ ಜ್ಯೋತಿಷ್ಯ ಪಾಠಶಾಲೆಗೆ ಸೇರಿದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಮೂಡದ ಕಾರಣ ಶಿರಹಟ್ಟಿ ಬಿಟ್ಟು ಹಾವೇರಿಗೆ ಹೋದರು. ಅಲ್ಲಿನ ಹುಕ್ಕೇರಿ ಮಠದ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಮೂರು ವರ್ಷ ಸಂಸ್ಕೃತ ಕಾವ್ಯಗಳನ್ನು ಅಭ್ಯಾಸ ಮಾಡಿದರು. ನಂತರ ಗದುಗಿನ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಅಭ್ಯಾಸ ಮುಂದುವರೆಸಿದರು.
ಓದುವ ಹುಚ್ಚು: ವಿದ್ಯಾರ್ಥಿ ದೆಸೆಯಿಂದಲೂ ಚಂದ್ರಶೇಖರ ಶಾಸ್ತ್ರಿಗಳಿಗೆ ಓದುವ ಹುಚ್ಚು ಹೆಚ್ಚಿತ್ತು. ಗದುಗಿನ ತೋಂಟದಾರ್ಯ ಮಠದಲ್ಲಿನ ನಿಯಮಾನುಸಾರ ರಾತ್ರಿ 10 ಗಂಟೆಗೆ ಮಠದ ದೀಪಗಳನ್ನು ಆರಿಸಲಾಗುತ್ತಿತ್ತು. ಇದರಿಂದಾಗಿ ಇವರ ಓದಿಗೆ ಕತ್ತರಿ ಬೀಳುತ್ತಿತ್ತು. ಇದನ್ನು ತಪ್ಪಿಸಲು ಗದ್ದುಗೆಯ ದೀಪದಿಂದ ಎಣ್ಣೆಯನ್ನು ಕದ್ದು ತಂದು ಜೊತೆಗಾರರು ಮಲಗಿದ ನಂತರ ದೀಪ ಹಚ್ಚಿಕೊಂಡು ಓದುತ್ತಿದ್ದರು. ಈ ನಡುವೆ ದಿನಪತ್ರಿಕೆಗಳನ್ನು ಓದುವ ಹುಚ್ಚೂ ಹತ್ತಿತ್ತು. ಅದು ಅವರನ್ನು ಪತ್ರಿಕೆ ತರಿಸುವವರ ಮನೆ ಬಾಗಿಲಿಗೆ ತಂದು ನಿಲ್ಲಿಸಿತ್ತು. ಬಡ ವಿದ್ಯಾರ್ಥಿಯ ಪತ್ರಿಕೆ ಓದುವ ಹವ್ಯಾಸಕ್ಕೆ ಮಣಿದ ಮನೆಯವರು ಪತ್ರಿಕೆ ಓದಲು ಕೊಡುತ್ತಿದ್ದರು.
ವ್ಯಾಕರಣ ತೀರ್ಥರಾದದ್ದು: ಕಲಿಯಬೇಕೆಂಬ ಛಲ ಚಂದ್ರಶೇಖರ ಶಾಸ್ತ್ರಿಯವರನ್ನು ವಾರಣಾಸಿಗೆ ಕರೆದೊಯ್ದಿತ್ತು. ತಮ್ಮ ೨೫ನೇ ವಯಸ್ಸಿನಲ್ಲಿ ವಾರಣಾಸಿಯ ಜಗದ್ಗುರು ಜಂಗಮವಾಡಿ ಮಠದ ಸಂಸ್ಕೃತ ಪಾಠಶಾಲೆಗೆ ಸೇರಿದ ಶಾಸ್ತ್ರಿಗಳು ಆರು ವರ್ಷಗಳ ಕಾಲ ಸಂಸ್ಕೃತ ಅಧ್ಯಯನ ಮಾಡಿದ ಫಲವಾಗಿ ವ್ಯಾಕರಣ ತೀರ್ಥ ಪರೀಕ್ಷೆಯನ್ನು ಪಾಸಾದರು. ವಾರಣಾಸಿಗೆ ಹೋಗುವಾಗ ಕೇವಲ ಚಂದ್ರಶೇಖರ ಶಾಸ್ತ್ರಿಯಾಗಿದ್ದವರು ಕರ್ನಾಟಕಕ್ಕೆ ಹಿಂದಿರುಗಿ ಬಂದಾಗ 'ವ್ಯಾಕರಣ ತೀರ್ಥ', 'ಸಾಹಿತ್ಯಾಚಾರ್ಯ' ಮೊದಲಾದ ಪದವಿಗಳನ್ನು ಮುಡಿಗೇರಿಸಿಕೊಂಡು ಬಂದರು.
ಏಕೀಕರಣಕ್ಕೆ ಸ್ಪೂರ್ತಿ: ಚಂದ್ರಶೇಖರ ಶಾಸ್ತ್ರಿಗಳು ವಾರಣಾಸಿಯಲ್ಲಿದ್ದಾಗ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತಿಕ ಸಭೆ-ಸಮಾರಂಭಗಳಿಗೆ ತಪ್ಪದೇ ಭಾಗವಹಿಸುತ್ತಿದ್ದರು. ಅಲ್ಲಿ ರಾಷ್ಟ್ರೀಯ ನೇತಾರರ ಭಾಷಣವನ್ನು ಕೇಳುವ ಸದವಕಾಶ ಸಿಗುತ್ತಿತ್ತು. ಹೀಗೆ ಮಹಾತ್ಮಗಾಂಧೀ, ಬಾಬು ರಾಜೇಂದ್ರ ಪ್ರಸಾದ್, ಜವಾಹರ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಅನಿಬೆಸೆಂಟ್, ಸಿ. ಆರ್. ಗುಪ್ತ, ಮದನ ಮೋಹನ ಮಾಳವೀಯ ಮುಂತಾದವರ ಸ್ಪೂರ್ತಿಯ ನುಡಿಗಳು ಕರ್ನಾಟಕ ಏಕೀಕರಣ ಹೋರಾಟಕ್ಕೆ ಪ್ರೇರಣೆಯಾದವು. ಜೊತೆಗೆ ಅಲ್ಲಿನ ಗ್ರಂಥಾಲಯದಿಂದ ಸ್ವಾತಂತ್ರದ ಕಿಚ್ಚನ್ನು ಬಿಂಬಿಸುವ ಪತ್ರಿಕೆಗಳಾದ 'ಆಜ್', 'ಮಾಧುರಿ', 'ಶಾಮ್' ಮುಂತಾದ ಪತ್ರಿಕೆಗಳೂ ಸಹ ಪ್ರೇರಣೆಯಾದವು.
ಅಧ್ಯಾಪಕ ವೃತ್ತಿ: ಚಂದ್ರಶೇಖರ ಶಾಸ್ತ್ರಿಯವರು ಪ್ರಕಾಂಡ ಪಂಡಿತರಾಗಿದ್ದು ಅಭೂತಪೂರ್ವ ಬೋಧನಾ ಸಾಮರ್ಥ್ಯ ಹೊಂದಿದ್ದರು. ಇದರಿಂದಾಗಿ ನಾಡಿನಾದ್ಯಂತ ಅಪಾರ ಶಿಷ್ಯಂದಿರ ಪ್ರೀತಿಗೆ ಪಾತ್ರರಾದರು. ಯಾದಗಿರಿಯಲ್ಲಿ ಗುರುಮಠಕಲ್ಲಿನ ಸ್ವಾಮಿಗಳ ಸಹಾಯದಿಂದ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿ, ಅದನ್ನು ಶೈಕ್ಷಣಿಕವಾಗಿ ಹಿಂದುಳಿದಿದ್ದ ಆ ಪ್ರದೇಶದಲ್ಲಿ ಹೆಸರುವಾಸಿಯಾದ ಕಾಲೇಜನ್ನಾಗಿ ಮಾಡಿದರು. ಆ ನಂತರ, ಹುಬ್ಬಳ್ಳಿ ಮೂರು ಸಾವಿರ ಮಠದ ಸ್ವಾಮಿಗಳಾದ ಶ್ರೀಗುರುಸಿದ್ಧ ಜಗದ್ಗರುಗಳ ಕೋರಿಕೆಯಂತೆ ಹುಬ್ಬಳ್ಳಿಯಲ್ಲಿಯೂ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿ ಆ ಭಾಗದ ವಿದ್ಯಾರ್ಥಿಗಳಿಗೆ ಕಲಿಯಲು ಅನುವುಮಾಡಿಕೊಟ್ಟರು.
ಜ್ಞಾನದಾಹಿಗಳಾಗಿದ್ದ ಶಾಸ್ತ್ರಿಗಳು ತಮ್ಮ ಕೆಲಸ ಕಾರ್ಯಗಳ ನಡುವೆಯೂ ಓದುವುದು, ಬರೆಯುವುದು ಹಾಗೂ ಗಣ್ಯರ ಉಪನ್ಯಾಸ ಕೇಳುವುದನ್ನು ನಿಲ್ಲಿಸಿರಲಿಲ್ಲ. ಯಾದಗಿರಿಯಲ್ಲಿ ೧೯೨೪ ರಲ್ಲಿ ತಮ್ಮ ಹೆಸರಿನಲ್ಲೇ 'ಗ್ರಂಥಮಾಲೆ' ಪ್ರಾರಂಭಿಸಿ ಅನೇಕ ಪುಸ್ತಕಗಳನ್ನು ಬರೆದು ಪ್ರಟಿಸಿದರು. ನಂತರ ಹುಬ್ಬಳ್ಳಿಯಲ್ಲಿಯೂ ಗ್ರಂಥಸೇವೆ ಮುಂದುವರೆಸಿದರು. ಹಳೇಯ ಗ್ರಂಥಗಳ ಸಂಶೋಧನೆಯ ಜೊತೆಗೆ ತಾಳೆಗರಿಗಳನ್ನು ಸಂಗ್ರಹಿಸಿ ಸಂಶೋಧನೆ ಕೈಗೊಂಡರು. ಕಾಲೇಜಿಗೆ ರಜೆ ಇದ್ದಾಗಲೆಲ್ಲ ಹಳ್ಳಿ ಹಳ್ಳಿಗಳನ್ನು ತಿರುಗಾಡಿ ತಾಳೆಗರಿಗಳನ್ನು ಸಂಗ್ರಹಿಸಿ ಸಂಶೋಧಿಸಿದರು. ಹೀಗೆ ಒಟ್ಟು 1500 ಕ್ಕೂ ಹೆಚ್ಚು ತಾಳೆಗರಿಗಳನ್ನು ಸಂಶೋಧಿಸಿದ್ದಾರೆ.
ಸಾಹಿತ್ಯ ಸೇವೆ: ಚಂದ್ರಶೇಖರ ಶಾಸ್ತ್ರಿಗಳು ವೃತ್ತಿಯಲ್ಲಿ ಸಂಸ್ಕೃತ ವ್ಯಾಕರಣ ಪಂಡಿತರಾಗಿದ್ದರೂ, ಪ್ರವೃತ್ತಿಯಲ್ಲಿ ಅದ್ಭುತ ಸಾಹಿತಿಗಳಾಗಿದ್ದರು. ಅವರ ಸಾಹಿತ್ಯದಲ್ಲಿ ಸಂಶೋಧನಾ ವಿದ್ಯಾರ್ಥಿಯ ತುಡಿತ ಮಿಡಿತವಿದೆ. ಕ್ಷೇತ್ರಕಾರ್ಯದ ಛಾಯೆ ಎದ್ದು ಕಾಣುತ್ತದೆ. ಅವರು ಹಲವಾರು ಮೌಲಿಕವಾದ ಸಾಹಿತ್ಯ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಅವುಗಳಲ್ಲಿ ಕಾಡಸಿದ್ದೇಶ್ವರ ವಚನಗಳು, ಬಸವತತ್ವ ರತ್ನಾಕರ, ಚಾಣ್ಕಯ ನೀತಿ ದರ್ಪಣ, ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಸ್ವತಂತ್ರ ಸಿದ್ದಲಿಂಗೇಶ್ವರ ವಚನಗಳು ಪ್ರಮುಖವಾದ ಕೃತಿಗಳು.
ಏಕೀಕರಣ ಶಾಸ್ತ್ರಿ: ವಾರಣಾಸಿಯಿಂದ ಶಾಸ್ತ್ರಿಗಳು ಹಿಂದಿರುಗಿದ ಸಮಯದಲ್ಲಿ ದೇಶದಾದ್ಯಂತ ಸ್ವಂತಂತ್ರ ಚಳುವಳಿಯ ಕಾವು ಏರತೊಡಗಿತ್ತು. ಆದರೆ ಕರ್ನಾಟಕದ ಪರಿಸ್ಥಿತಿ ಇದಕ್ಕೆ ಭಿನ್ನವಾಗಿತ್ತು. ಆಗಿನ ಕನ್ನಡದ, ಕನ್ನಡಿಗರ ಮತ್ತು ಕರ್ನಾಟಕದ ಪರಿಸ್ಥಿತಿ ಕಂಡ ಅವರು ಮೊದಲು ಏಕೀಕರಣವಾಗಬೇಕೆಂದು ನಿರ್ಧರಿಸಿದರು. ಕರ್ನಾಟಕ ಏಕೀಕರಣವಾಗದ ಹೊರತು ದೇಶಕ್ಕೆ ಸ್ವಾತಂತ್ರ ಸಿಕ್ಕರೂ ಪ್ರಯೋಜನವಿಲ್ಲ ಎಂದು ಘೋಷಿಸಿದರು. ರಾಷ್ಟ್ರೀಯ ಚಳುವಳಿ ನೇತಾರರು ಇವರ ಅಭಿಪ್ರಾಯವನ್ನು ತಿರಸ್ಕರಿಸಿದರು. ಆದರೂ ಶಾಸ್ತ್ರಿಯವರು ತಮ್ಮ ನಿಲುವು ಮತ್ತು ಹೋರಾಟದಿಂದ ಹಿಂದೆ ಸರಿಯಲಿಲ್ಲ.
ಕನ್ನಡದ ದುಸ್ಥಿತಿ ಸರಿಪಡಿಸಲು ಒಬ್ಬಂಟಿಯಾಗಿ ನಾಡಿನಾದ್ಯಂತ ಸಂಚರಿಸಿದರು. ಅನೇಕ ವ್ಯಕ್ತಿಗಳನ್ನು, ಸಂಘ-ಸಂಸ್ಥೆಗಳನ್ನು ಭೇಟಿ ಮಾಡಿ ಕನ್ನಡದ ಬಗ್ಗೆ ಜನಜಾಗೃತಿ ಮೂಡಿಸಿದರು. ಗಡಿಭಾಗದ ಪ್ರದೇಶಗಳಾದ ಬಳ್ಳಾರಿ, ರಾಯದುರ್ಗ, ಆದೋನಿ, ಕಡಪ, ಕರ್ನೂಲು, ಮೊಳಕಾಲ್ಮೂರು, ಬೆಳಗಾಂ, ಸಾಂಗ್ಲಿ, ಕೊಲ್ಲಾಪುರ, ಸೊಲ್ಲಾಪುರ, ಕಾಸರಗೋಡು ಮುಂತಾದವುಗಳಲ್ಲಿ ಸಂಚರಿಸಿ ಏಕೀಕರಣದ ಕಿಚ್ಚನ್ನು ಹೊತ್ತಿಸಿದರು. ಸಭೆ, ಸಮಾರಂಭ, ಭಾಷಣಗಳಿಂದ ಜನರ ಮನಸ್ಸನ್ನು ಏಕೀಕರಣದತ್ತ ವಾಲುವಂತೆ ಮಾಡಿದರು. 'ಕನ್ನಡವೇ ಕನ್ನಡಿಗರ ಉಸಿರು, ಕರ್ನಾಟಕದ ಏಕೀಕರಣವೇ ಕನ್ನಡಿಗರ ಜೀವಾಳ' ಎಂಬ ಧ್ಯೇಯ ವಾಕ್ಯದೊಂದಿಗೆ ನಾಡಿನಾದ್ಯಂತ ಕನ್ನಡಿಗರನ್ನು ಬಡಿದೆಬ್ಬಿಸಿದರು.
ಕರ್ನಾಟಕದ ಏಕೀಕರಣ ಆದ ಕೂಡಲೇ ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ 1975ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ 'ಕರ್ನಾಟಕ'ವೆಂದು ಪುನರ್ ನಾಮಕರಣ ಮಾಡಲು ಹಂಪಿಯಲ್ಲಿ ಉತ್ಸವ ಆಚರಿಸಲಾಯಿತು. ಅಂದಿನ ಮೈಸೂರು ಮಹಾರಾಜರಾದ ಶ್ರೀಜಯಚಾಮರಾಜೇಂದ್ರ ಒಡೆಯರು 'ಕರ್ನಾಟಕ'ವೆಂದು ಘೋಷಿಸಿದರು. ಇಂತಹ ಅಭೂತಪೂರ್ವ ಕಾರ್ಯಕ್ರಮದ ಯಶಸ್ವೀ ಕಾರ್ಯದರ್ಶಿಯಾಗಿ ಅವಿರತವಾಗಿ ಶ್ರಮಿಸಿದ ಇವರು ಏಕೀಕರಣ ಶಾಸ್ತ್ರಿ ಎಂದು ಪ್ರಸಿದ್ಧರಾದರು.
ಲೈಫ್‌ಟೆಸ್ಟ್‌ನಲ್ಲಿ ಶತಕ: ಚಂದ್ರಶೇಖರ ಶಾಸ್ತ್ರಿಗಳು 105 ವರ್ಷಗಳ ಸುದೀಘವಾದ ಆರೋಗ್ಯಪೂರ್ಣ ಜೀವನ ನೆಡೆಸಿದರು. ಬಡತನ, ತಿರುಗಾಟಗಳ ನಡುವೆಯೂ ಆರೋಗ್ಯದ ಮೇಲೆ ತುಂಬಾ ಹಿಡಿತ ಇಟ್ಟುಕೊಂಡಿದ್ದರು. ಜೀವನದ ಕೊನೆಯ ದಿನಗಳಲ್ಲಿ ತುಂಗಭದ್ರ ನದಿ ದಂಡೆಯ ಮೇಲಿನ ಮಾಗಳ ಗ್ರಾಮದಲ್ಲಿ ನೆಲೆನಿಂತು ವ್ಯವಸಾಯದಲ್ಲಿ ತೊಡಗಿಕೊಂಡಿದ್ದ ಶಾಸ್ತ್ರಿಗಳಿಗೆ ದಿನಪತ್ರಿಕೆ ಹಾಗೂ ರೇಡಿಯೋಗಳು ಅನನ್ಯ ಸಂಗಾತಿಗಳಾಗಿದ್ದವು.
ಹಂಪೆಯ ಕನ್ನಡ ವಿಶ್ವವಿದ್ಯಾಲಯವು 1997ರ 'ನಾಡೋಜ' ಪ್ರಶಸ್ತಿಗೆ ಚಂದ್ರಶೇಖರ ಶಾಸ್ತ್ರಿಗಳನ್ನು ಆಯ್ಕೆ ಮಾಡಿತು. ನವೆಂಬರ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 24-10-1997 ರಂದು ನಿಯೋಗದ ಸದಸ್ಯರನ್ನು ಚಂದ್ರಶೇಖರ ಶಾಸ್ತ್ರಿಗಳ ಮನೆಗೆ ಕಳಿಸಲು ತೀರ್ಮಾನಿಸಲಾಗಿತ್ತು. ಆದರೆ ದುರ್ದೈವವಶಾತ್ ಶಾಸ್ತ್ರಿಗಳು 23-10-1997 ರಂದು ತಮ್ಮ 105ನೇ ವಯಸ್ಸಿನಲ್ಲಿ ಇಹಲೋಕ ಪ್ರಯಾಣ ಮಾಡಿದರು. ಇದರಿಂದಾಗಿ ಶಾಸ್ತ್ರಿಯವರಿಗೆ ಮರಣೋತ್ತರ 'ನಾಡೋಜ' ಪದವಿ ನೀಡಿ ಗೌರವಿಸಲಾಯಿತು.
ಗೌರವ ಪುರಸ್ಕಾರಗಳು:
- 1940 ರಲ್ಲಿ ೨೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- 1946 ರಲ್ಲಿ ಹೈದರಾಬಾದ್ ಸ್ಟೇಟ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- 1966 ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- 1983 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
- 1997 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ.
- 1997 ರಲ್ಲಿ ಡಾ.ಎಂ.ಚಿದಾನಂದಮೂರ್ತಿ ಪ್ರಶಸ್ತಿ.
- 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಪ್ರಶಸ್ತಿ (ಮರಣೋತ್ತರ).
- ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ವಿಶೇಷ ಸನ್ಮಾನಗಳು.
- ಮಾಗಳ, ಹೊಳಲು ಗ್ರಾಮಗಳ ಸಂಘ-ಸಂಸ್ಥೆಗಳಿಂದ ಸನ್ಮಾನಗಳು.
ಲೇಖಕರ ಕಿರುಪರಿಚಯ | |
ಶ್ರೀ ಆರ್. ಬಿ. ಗುರುಬಸವರಾಜ ಶೈಕ್ಷಣಿಕ ಮತ್ತು ವೈಜ್ಞಾನಿಕ ಲೇಖನಗಳನ್ನು ಬರೆಯುವುದು ಇವರ ಹವ್ಯಾಸ. ಬಳ್ಳಾರಿ ಜಿಲ್ಲೆಯ ಹೊಳಗುಂದಿ ಗ್ರಾಮದವರಾದ ಇವರು ಪ್ರಸ್ತುತ ಹಗರಿಬೊಮ್ಮನಹಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. Blog | Facebook | Twitter |
nimma barahagalannu yavaagalu noduttiddene, yuvakarige bahala olleya margadarshakaraagiddira
ಪ್ರತ್ಯುತ್ತರಅಳಿಸಿdanyavaadagalu nimage