ಭಾನುವಾರ, ನವೆಂಬರ್ 8, 2015

ಕನ್ನಡ ತಾಯ್ನುಡಿ

ಬರಿಯ ಬಾಯಿಯ ಒಣಮಾತಲ್ಲ
ಕನ್ನಡ ತಾಯ್ನುಡಿಯು;
ಹಿರಿದು ಜೀವ ನಮ್ಮೊಳಗೆ ಅಡಗಿದ
ಉಸಿರ ಉಸಿರ ಕಿಡಿಯು.

ಮಿಳಿತವಾಗಿ ಮೈಯೊಳಗೆ ಹರಿವ
ಸಿರಿಸರಕು ನಮ್ಮ ನುಡಿಯು;
ಮೊಳಕೆಯಲ್ಲೆ ಸಿರಿತನವ ತೋರೋ
ನವಿರಾದ ನುಡಿಯ ಕುಡಿಯು.

ಒಡಲೊಳಗೆ ಅವಿತ ನಮ್ಮುಸಿರ ಪ್ರಾಣ
ಸಂಸ್ಕೃತಿಯು ಅದರ ನಡೆಯು;
ಹೊರ ಬಿದ್ದ ಚಣದಿ ತಿಳಿಯುವುದು ಅದರ
ಸಂಸ್ಕಾರ ಸಿರಿಯ ಪರಿಯು.

ತ್ವರಿತ ಹರಿತ ಕಡಲಂತೆ ಮೊರೆತ
ಗಂಭೀರ ನಡೆಯ ನುಡಿಯು;
ನೀತಿ-ತತ್ವ ಅನುರಾಗ ಪ್ರೀತಿಗಳ
ಸಂಗಮದ ಮೂಲ ನೆಲೆಯು.

ಗಡಿಯಾಚೆಗೀಚೆ ಇಡೀ ನಾಡ ಜನರ
ಒಳ ನೋಟ ಮಾತ ಅರ್ಥ;
ಅರಿಯದಿದ್ದ ನೆರೆಹೊರೆಯ ಜನರು
ಈ ಮಣ್ಣಲಿದ್ದು ವ್ಯರ್ಥ.

ಲೇಖಕರ ಕಿರುಪರಿಚಯ
ಶ್ರೀ ಎಸ್. ಬಿ. ಜಗದೀಶ್ವರ

ಕವಿಗಳೂ ಆಗಿರುವ ಇವರು ನಿವೃತ್ತ ಶಿಕ್ಷಕರು; ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕು ಇವರ ಹುಟ್ಟೂರು. ಶ್ರೀಯುತರ ಕನ್ನಡ ಭಾಷೆಯು ಅತ್ಯಂತ ಶ್ರೀಮಂತವಾದುದು ಎಂಬುದು ಅವರ ಬರೆಹಗಳಿಂದಲೇ ತಿಳಿದುಬರುತ್ತದೆ.

Blog  |  Facebook  |  Twitter

1 ಕಾಮೆಂಟ್‌:

  1. ಶ್ರೀಯುತರು ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದವರಾಗಿದ್ದು, ಈಗಾಗಲೇ ಎರಡು ಕವನ ಸಂಕಲನಗಳು ಬಿಡುಗಡೆಯಾಗಿವೆ. ಮೂರನೇ ಕವನ ಸಂಕಲನದ ಮುದ್ರಣ ಹಂತದಲ್ಲಿದೆ. ಶ್ರೀಯುತರನ್ನು ಸಾಹಿತ್ಯವನ್ನು ಮೆಚ್ಚಿ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಅಲ್ಲದೇ ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರೂ ಅಗಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಪ್ರವೃತ್ತಿಯಲ್ಲಿನ್ನೂ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಪ್ರಕಟವಾದ ಶ್ರೀಯುತರ ಕವನವನ್ನು ಗಮಕರೂಪದಲ್ಲಿ ಮಕ್ಕಳಿಗೆ ಹೇಳಿಕೊಡಬಹುದು.

    ಪ್ರತ್ಯುತ್ತರಅಳಿಸಿ