ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲವೂ ಜಗಮಗ. ಮನೆಯಲ್ಲಿ ಸಿಹಿತಿಂಡಿ, ಹಬ್ಬದೂಟದ ರಾಯಭಾರ. ಕತ್ತಲಾಗುವುದನ್ನೇ ಅಸಹನೆಯಿಂದ ಕಾಯುವ ಮಕ್ಕಳಿಗಂತೂ ಪಟಾಕಿ ಪ್ಯಾಕೆಟ್ ಬಿಚ್ಚಿ, ಹಚ್ಚಿ, ಹುಚ್ಚೆದ್ದು ಕುಣಿಯುವ ತವಕ. ದುಬಾರಿ ಬೆಲೆ ತೆತ್ತು ಅದನ್ನು ಕೊಂಡ ಅಪ್ಪನಿಗೆ ಆ ಚಿಂತೆಯಲ್ಲೂ ಮಕ್ಕಳ ನಗು ನೋಡಿ ಏನೋ ಒಂದು ಸಮಾಧಾನ. ಈ ಎಲ್ಲಾ ಸಂಭ್ರಮದ ನಡುವೆ, ಮೂಲೆಯಲ್ಲಿ ಭಯದಿಂದ ಕಂಗಾಲಾಗಿ ಥರಥರನೆ ನಡುಗುತ್ತಾ ಕುಳಿತ ಮನೆಯ ಮುದ್ದಿನ ನಾಯಿಯನ್ನು ಕಂಡವರು ಕಡಿಮೆ.
ಸಿಡಿಮದ್ದಿನ ಶಬ್ಧದಿಂದ ನಮ್ಮ ಸುತ್ತಮುತ್ತಲ ಜೀವ ಸಂಕುಲಕ್ಕಾಗುವ ಹಿಂಸೆ ಅಷ್ಟಿಷ್ಟಲ್ಲ. ಪಕ್ಷಿಗಳು ದಿಕ್ಕೆಟ್ಟು ಪಲಾಯನಗೈಯುತ್ತವೆ. ನಮ್ಮ ಶ್ವಾನಮಿತ್ರರಂತೂ ಕಂಗಾಲು. ನಾಯಿಗಳ ಕಿವಿಗಳು ನಮಗಿಂತ ಎಷ್ಟೋ ಪಟ್ಟು ಹೆಚ್ಚು ಸೂಕ್ಷ್ಮ. ಅವು 60,000 ಹರ್ಟ್ಜ್ ಕಂಪನಾಂಕದವರೆಗಿನ ಸದ್ದುಗಳಿಗೂ ಸಂವೇದನಾಶೀಲ. ನಮಗಿಂತ 4 ಪಟ್ಟು ದೂರದ ಸದ್ದುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಲ್ಲವು. ಅಂಥದರಲ್ಲಿ, ನಮ್ಮ ಒಂದೊಂದು ಆಟಂ ಬಾಂಬ್ - ಲಕ್ಷ್ಮೀ ಬಾಂಬ್ ಗಳು, ಅವರ ಪಾಲಿನ ಹಿರೋಶಿಮ - ನಾಗಸಾಕಿ ಬಾಂಬುಗಳು! ಅದರಿಂದಾಗಿಯೇ ಅವುಗಳು ಭಯದಿಂದ ತತ್ತರಿಸಿ ಅವಿತುಕೊಳ್ಳಲು ಜಾಗ ಹುಡುಕುವುದನ್ನು ನೀವು ನೋಡಿರಬಹುದು. ಎಷ್ಟೋ ನಾಯಿಗಳು ಕಿವುಡಾಗುವುದು ಬಿಡಿ, ಭಯದಿಂದ ಸತ್ತೇ ಹೋದ ಉದಾಹರಣೆಗಳು ಬೇಕಾದಷ್ಟಿವೆ. ಇನ್ನು ನಾಯಿಗಳ ಬಾಲಕ್ಕೆ ಮಾಲೆ ಪಟಾಕಿ ಕಟ್ಟಿ ಸಿಡಿಸುವ ವಿಕೃತ ಮನಗಳ ಬಗ್ಗೆ ಏನು ಹೇಳೋಣ?
ಸಿಡಿಮದ್ದಿನ ಅವಾಂತರಗಳು ಇಲ್ಲಿಗೇ ಮುಗಿದಿಲ್ಲ. ಬೆಂಕಿ ಅಪಘಾತಗಳು, ಆರೋಗ್ಯದ ಮೇಲಿನ ದುಷ್ಪರಿಣಾಮಗಳು ನಮಗೆಲ್ಲ ಗೊತ್ತೇ ಇದೆ. ಕ್ಷಣಿಕ ಉತ್ಸಾಹಕ್ಕಾಗಿ ದುಬಾರಿ ಬೆಲೆ ತೆರಬೇಕಾಗುತ್ತದೆ, ದುಡ್ಡಿನ ದೃಷ್ಟಿಯಿಂದಲೂ ಹಾಗೂ ಆರೋಗ್ಯದ ದೃಷ್ಟಿಯಿಂದಲೂ. ಪ್ರತೀ ವರ್ಷವೂ ಪಟಾಕಿ ಸಿಡಿಸುವಾಗ ಆದ ಅಪಘಾತಗಳಿಂದ ಅನೇಕ ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸುದ್ದಿಯನ್ನು ನಾವೆಲ್ಲಾ ಕೇಳತ್ತಲೇ ಇದ್ದೇವೆ ಹಾಗೂ ಓದುತ್ತಲೇ ಇರುತ್ತೇವೆ. ಅಷ್ಟೇ ಅಲ್ಲ, ಶಿವಕಾಶಿಯ ಬಾಲಕಾರ್ಮಿಕರ ಎಳೆಯ ಕನಸುಗಳನ್ನು ಸುಡುತ್ತದೆ ಈ ಪಟಾಕಿ. ಮತ್ತೆ ಪರಿಸರಕ್ಕೂ ಯಮ.
|
ಚಿತ್ರ ಕೃಪೆ: ಗೂಗಲ್ |
ಹಾಗಂತ ಇದನ್ನು ಒಂದೇ ಸಲಕ್ಕೆ 'ಬ್ಯಾನ್ ಆಗ್ಬೇಕ್' ಅಂತ ಅಂದು ಬಿಡಲೂ ಆಗುವುದಿಲ್ಲ. ಆದ್ದರಿಂದ ಸಮಾಜ ಜಾಗೃತಗೊಳ್ಳುವುದೇ ಒಳ್ಳೆಯ ದಾರಿ. ಏಷ್ಟೋ ಕುಟುಂಬಗಳು ಈ ಉದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾವೆ. ಅವರಿಗೊಂದು ಪರ್ಯಾಯ ವ್ಯವಸ್ಥೆ ಆಗಿ, ಪಟಾಕಿಯ ಬಳಕೆ ಕ್ರಮೇಣ ನಿಂತು, ಮುಂಬರುವ ದೀಪಾವಳಿಗಳು ಕೇವಲ ಹಣತೆ ದೀಪಗಳ 'ಗ್ರೀನ್ ದೀಪಾವಳಿ' ಆಗಲಿ ಎಂಬುದು ನನ್ನ ಆಶಯ.
ಲೇಖಕರ ಕಿರುಪರಿಚಯ |
| ಶ್ರೀ ಸುಧನ್ವ ಉಪಾಧ್ಯ
ಮೂಲತಃ ಮಂಗಳೂರಿನವರಾದ ಇವರು, ಪ್ರಸ್ತುತ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿ. ಶಾಸ್ತ್ರಿಯ ಸಂಗೀತ ಹಾಡುಗಾರಿಕೆ ಇವರ ನೆಚ್ಚಿನ ಹವ್ಯಾಸ.
Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ