ಮಂಗಳವಾರ, ನವೆಂಬರ್ 10, 2015

ವಚನ ಸಾಹಿತ್ಯ ದರ್ಪಣ

ಉಳ್ಳವರು ಶಿವಾಲಯವ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ||
                                                         ~ ಬಸವಣ್ಣ

ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. ಹನ್ನೊಂದನೆಯ ಶತಮಾನದಲ್ಲಿ ಉದಯಿಸಿ, 12ನೆಯ ಶತಮಾನದಲ್ಲಿ ಆಂದೋಳನದ ಭಾಗವಾಗಿ ಇದು ಬೆಳೆದು ಬಂದಿತು. ಈ ಪ್ರಕಾರವು ಸಾಹಿತ್ಯ ಪರಿಭಾಷೆಯಲ್ಲಿ ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಒಂದು ವಿಶಿಷ್ಟ ಕಾವ್ಯಪ್ರಭೇದ.

'ವಚನ' ಎಂದರೆ ಮಾತು ಹಾಗೂ ಪ್ರಮಾಣ ಎಂದರ್ಥ. ಹನ್ನೊಂದನೆಯ ಶತಮಾನದಲ್ಲಿ, ದಕ್ಷಿಣದ ಚಾಲೂಕ್ಯರ ಕಾಲದ ಸಂತ ಕವಿ ಮಾದಾರ ಚೆನ್ನಯ್ಯ ವಚನ ಸಾಹಿತ್ಯದ ಮೊದಲ ಕವಿಯಾಗಿದ್ದು, ನಂತರ ಉತ್ತರದ ಕಲಚೂರಿ ರಾಜ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣ (ಅಥವಾ ಬಸವೇಶ್ವರ) ವಚನ ಸಾಹಿತ್ಯದ ಪಿತಾಮಹ ಎಂದು ಕರೆಸಿಕೊಳ್ಳುತ್ತಾನೆ.

ವಚನಗಳ ಮೂಲ ಅಂಶ ಅಥವಾ ಸಾರಾಂಶ ದಿನನಿತ್ಯ ನಡೆಯುವ ಯಾವುದಾದರೂ ಒಂದು ಘಟನೆಯಾಗಿರಬಹುದು, ಅಥವಾ ಪ್ರತಿಯೊಬ್ಬ ಮಾನವನ ಗುಣಾವಗುಣಗಳ ಸಾರವಿರಬಹುದು. ಕೆಲವು ವಚನಗಳಲ್ಲಿ, ಮೊದಲು ಒಂದು ಸಂದೇಶವನ್ನು ನಿರೂಪಿಸಿ, ನಂತರ ಅದಕ್ಕೆ ಉದಾಹರಣೆಗಳನ್ನು ನೀಡುವ ಕ್ರಮವಿದ್ದರೆ, ಮತ್ತೆ ಕೆಲವು ವಚನಗಳಲ್ಲಿ ನೀತಿ-ನಿರೂಪಣೆಯೇ ಸಂಪೂರ್ಣವಾಗಿರಬಹುದು. ವಚನಗಳು ಸರಳ ಭಾಷೆಯಲ್ಲಿ ರಚಿತವಾಗಿದ್ದು, ಜೀವನಕ್ಕೆ ಬಹು ಮುಖ್ಯವಾದ ತತ್ವಗಳನ್ನು ಬೋಧಿಸಿ, ಬದುಕಿಗೆ ದಾರಿದೀಪವಾಗಿ ಮುಖ್ಯಪಾತ್ರವನ್ನು ವಹಿಸುತ್ತವೆ. ಇವುಗಳಲ್ಲಿ ಒಂದೆಡೆ ತಾತ್ವಿಕ, ಶಾಸ್ತ್ರೀಯ, ಹಾಗೂ ವೈಜ್ಞಾನಿಕ ರೀತಿಯಲ್ಲಿ ಮತ-ಧರ್ಮಗಳ ತತ್ವಗಳ ಸುಲಲಿತ ಬೋಧನೆಯಿದ್ದರೆ, ಮತ್ತೊಂದೆಡೆ ಅಂತರ್ವ್ಯಕ್ತೀಯ ಸಂಬಂಧಗಳ ಮೌಲ್ಯಗಳ ಬಗ್ಗೆ, ಭಾವನಾತ್ಮಕ ಘರ್ಷಣೆಗಳ ಬಗ್ಗೆ, ಮತ್ತು ಮಾನವಸಹಜ ಪ್ರವೃತ್ತಿಗಳು ಹಾಗೂ ನ್ಯೂನತೆಗಳ ನಿರೂಪಣೆಯಿರುತ್ತದೆ. ಒಟ್ಟಿನಲ್ಲಿ, ವಚನ ಸಾಹಿತ್ಯ ಶಿವಶರಣರು ನಮಗೆ ಕೊಟ್ಟ ಅತ್ಯಮೂಲ್ಯ ಆಸ್ತಿ.

ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರನ್ನು ಹೆಸರಿಸಬೇಕಾದರೆ, ಕೂಡಲೇ ಮನಸ್ಸಿಗೆ ಬರುವವರು ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಚೆನ್ನ ಬಸವಣ್ಣ, ಇತ್ಯಾದಿ. ಎಲ್ಲಾ ಶರಣ-ಶರಣೆಯರು ಕರ್ಮಯೋಗವನ್ನು ಪಾಲಿಸಿ, ಸಮಾಜದ ಕೆಡಕುಗಳನ್ನು ಬುಡಸಮೇತ ನಿರ್ಮೂಲಮಾಡುವ ಮಾರ್ಗೋಪಾಯಗಳನ್ನು ನಿರೂಪಿಸಿದ್ದಾರೆ.

ವಚನ ಚಳುವಳಿಯ ಪ್ರಮುಖ ಉದ್ದೇಶವೇ ಸಾಮಾನ್ಯ ಮನುಷ್ಯನನ್ನು ವಿಚಾರವಂತನನ್ನಾಗಿ ಮಾಡುವುದು. ಈ ದಿಕ್ಕಿನಲ್ಲಿ, ವಚನ ಚಳುವಳಿಯ ಮೂರು ಬುನಾದಿಯ ತತ್ವಗಳೆಂದರೆ 'ಕಾಯಕ', 'ದಾಸೋಹ' ಮತ್ತು 'ಲಿಂಗಪೂಜೆ'. 'ಕಾಯಕ' ತತ್ವವೆಂದರೆ, ಸಮಾಜದಲ್ಲಿ ಭಿನ್ನ ವರ್ಗಗಳು ಮಾಡುವ ಎಲ್ಲಾ ಭಿನ್ನ ಭಿನ್ನ ವೃತ್ತಿಗಳಿಗೂ ಸಮಾನ ಗೌರವವನ್ನು ಕೊಡುವುದು ಮತ್ತು ವೃತ್ತಿಗಳಲ್ಲಿ ಶ್ರೇಷ್ಠ-ನೀಚ ಎಂಬ ಮೌಲ್ಯಮಾಪನೆಯಿಲ್ಲ ಎಂದು ಪ್ರತಿಪಾದಿಸುವುದು. 'ದಾಸೋಹ'ವೆಂದರೆ ನಮ್ಮಲ್ಲಿರುವುದನ್ನು ಇತರರೊಡನೆ ಹಂಚಿಕೊಂಡು ಬಾಳುವುದು; ಇದು ಹಸಿದವರಿಗೆ ನೀಡುವ ಅನ್ನವಾಗಬಹುದು, ಅವಿದ್ಯಾವಂತರಿಗೆ ನೀಡುವ ವಿದ್ಯೆಯಾಗಬಹುದು. 'ಲಿಂಗಪೂಜೆ'ಯ ಅರ್ಥವೆಂದರೆ ಸಾಂಕೇತಿಕ ನೆಲೆಯಲ್ಲಿ 'ಏಕದೇವೋಪಾಸನೆ'. 'ಶಿವ' (ಈಶ್ವರ/ ಮಂಗಳಕರವಾದದ್ದು) ತತ್ವದ ಸಂಕೇತವೇ ಲಿಂಗ.

ಬಸವಣ್ಣನವರ ನೇತೃತ್ವದಲ್ಲಿ, ಶಿವಶರಣರು ಜಾತಿಹೀನ ಸಮಾಜದ ಕನಸನ್ನು ಕಾಣುತ್ತಾ, ಮಾನವರಲ್ಲಿ ಸರ್ವಸಮಾನತೆಯ ತತ್ವವನ್ನು ಎತ್ತಿ ಹಿಡಿದರು; ಎಲ್ಲಾ ಬಗೆಯ ಸಾಮಾಜಿಕ ಅನ್ಯಾಯಗಳು, ಮೂಢನಂಬಿಕೆಗಳು, ಇತ್ಯಾದಿಗಳನ್ನು ಬಲವಾಗಿ ಖಂಡಿಸಿದರು; 'ಕಾಯಕವೇ ಕೈಲಾಸ' ಎಂದು ನಂಬಿ ನಡೆದರು. ಈ ತತ್ವಗಳನ್ನು ಬಸವಣ್ಣನವರು ತಮ್ಮ ಈ ವಚನದಲ್ಲಿ ತುಂಬಾ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ:

"ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸ್ತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯ"

ಅಕ್ಕ ಮಹಾದೇವಿಯ ವಚನಗಳಲ್ಲಿ ಸಾಹಿತ್ಯ ಸುಭಗತೆ ಹಾಗೂ ಉಪಯೋಗಿಸಲ್ಪಟ್ಟಿರುವ ಅಸಾಧಾರಣ ಉಪಮೆಗಳು ರೋಮಾಂಚಕಾರಿಯಾಗಿವೆ; ಏಕೆಂದರೆ, ಅವು ಜೀವನಮೌಲ್ಯಗಳಿಗೆ ತುಂಬಾ ಹತ್ತಿರವಾಗಿದ್ದು, ತಮ್ಮ ಪದ ಲಾಲಿತ್ಯದಿಂದ ಕೂಡಲೇ ನಮ್ಮನ್ನು ಆಕರ್ಷಿಸುತ್ತವೆ. ಉದಾಹರಣೆಗೆ:

"ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಭಾವಿಗಳುಂಟು
ನಮನಕೆ ಹಾಳು ದೇಗುಲಗಳುಂಟು
ಆತ್ಮಸಂಗಾತಿಗೆ ಚೆನ್ನಮಲ್ಲಿಕಾರ್ಜುನ, ನೀ ಎನಗುಂಟು."

ಬುದ್ಧನ ಸಂದೇಶವನ್ನು ನೆನಪಿಸುವ ಮಹಾನ್ ದಾರ್ಶನಿಕ ಅಲ್ಲಮನ ವಚನವೊಂದು ಹೀಗಿದೆ:

"ಹೊನ್ನು ಮಾಯೆಯೆಂಬರು / ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು / ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು / ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ / ಕಾಣಾ ಗುಹೇಶ್ವರ"

ಒಟ್ಟಿನಲ್ಲಿ ಹೇಳುವುದಾದರೆ, ವಚನಸಾಹಿತ್ಯ ಭಂಡಾರದಲ್ಲಿ ದಿನನಿತ್ಯದ ಜೀವನಕ್ಕೆ ಅತ್ಯವಶ್ಯಕವಾದ ತತ್ವಗಳು ಹಾಗೂ ನೀತಿರತ್ನಗಳು ಅಡಗಿದ್ದು, ಎಲ್ಲರೂ ಅದನ್ನು ಅರಿತು ಒಳ್ಳೆಯ ಪಥದಲ್ಲಿ ಜೀವನ ಸಾಗಿಸಿದರೆ ಅದೇ ನಾವೆಲ್ಲರೂ ಆ ಮಹಾನ್ ಶರಣರಿಗೆ ಮಾಡುವ ನಮ್ರ ನಮನ.

ಲೇಖಕರ ಕಿರುಪರಿಚಯ
ಶ್ರೀಮತಿ ಕೃತ್ತಿಕಾ ಶ್ರೀನಿವಾಸನ್‍

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಮೂಲತಃ ಬೆಂಗಳೂರಿನವರು; ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾ ಅನೇಕ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌: