ಭಾನುವಾರ, ನವೆಂಬರ್ 22, 2015

ನಾನು ಕಾಣೆಯಾಗಿದ್ದೇನೆ...!

ಹೌದು ನಾನು ಕಾಣೆಯಾಗಿದ್ದೇನೆ...!
ಹುಡುಕುತ್ತಿದ್ದೇನೆ ನನ್ನನ್ನು ನಾನೇ...!
ಎಲ್ಲಿ ಕಳೆದುಹೋದೆನೆಂದು...?

ನನ್ನ ಧ್ವನಿಗೆ ಕಿವುಡನಾಗಿ
ಕಾಲವು ಹವಣಿಸಿ
ಹೊಂಚು ಹಾಕಿದ
ಸಂಚಿನ ಮಿಂಚಿಗೆ ಸಿಕ್ಕಿ
ನನ್ನದೇ ಮನಸ್ಸಿನ ಅಂಚಿಗೆ
ಬಂದು ನಿಂತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಮನಸಿನ ಒಳಗಿನ
ಕನಸಿನ ದಾರಿಯ
ಕವಲೊಡೆದು, ಬದಿಸರಿದು
ಬೆರಗಾಗಿ, ದಿಗಿಲಾಗಿ
ಮುಗಿಲೆಡೆ ಮುಖಮಾಡಿ
ನಿಂತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಕಾಲ ಸರಿದಂತೆ ಕಂಡ
ಮುಖವಾಡಗಳ ಪವಾಡಗಳನ್ನು
ಕಂಡು ದಿಗ್ಮೂಢನಾಗಿದ್ದೇನೆ...!
ಗಾಢ ನಿದ್ರೆಯ
ಗೋಡೆ ಒಡೆಯದೇ
ನನ್ನದೇ ಜಾಡು ಹಿಡಿದು ಓಡಿ
ನನಗೆ ನಾನೇ ಸಿಗದೇ
ಕಾಡುವ ರೂಢಿಗೆ
ಈಡಾಗಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಕಾಲದ ಕಟುಕಲೆಯ
ಬಲೆಗೆ ಸಿಲುಕಿ
ನೆಲೆಸಿಗದೇ ತಡಕಾಡಿ
ವಿರುದ್ಧದ ಅಲೆಗಳ
ನಡುವೆಯೂ ನಲುಗದೇ
ಅಲೆಮಾರಿಯಾಗಿ
ಅಲೆಯುತ್ತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಬಿಕ್ಕಿ ದುಃಖಿಸುವ
ಕಠಿಣ ಕಾಲದಲ್ಲೂ
ನಕ್ಕು ಹಗುರಾಗಿ
ಹಕ್ಕಿಯಾಗಿ ಹಾರುವ
ನನ್ನನ್ನು ನಾನು
ಹೆಕ್ಕಿ ತೆಗೆಯುತ್ತಿದ್ದೇನೆ
ನಾನು ಕಾಣೆಯಾಗಿದ್ದೇನೆ...!

ಲೇಖಕರ ಕಿರುಪರಿಚಯ
ಡಾ. ಅರುಣ ಜಿ. ಖರಾಟೆ

ಗದಗ ಜಿಲ್ಲೆಯ ಲಕ್ಷ್ಮೀಶ್ವರದವರಾದ ಇವರು ಪ್ರಸ್ತುತ ಬೀದರಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕವಿತೆ, ವೈಜ್ಞಾನಿಕ ಲೇಖನ ಬರೆಯುವುದು ಮತ್ತು ವಿಶೇಷವಾಗಿ ಚಿತ್ರಕಲೆ ಇವರ ಹವ್ಯಾಸಗಳು.

Blog  |  Facebook  |  Twitter

5 ಕಾಮೆಂಟ್‌ಗಳು:

  1. ಅರಣ್ ಅವರೇ ನಿಮ್ಮ 'ಕಾಣೆಯಾಗಿದ್ದೇನೆ' ಕವನ ನಿಜಕ್ಕೂ ವಾಸ್ತವದ ವೈರುಧ್ಯಗಳನ್ನು ಹುಡುಕುವ ಪ್ರಯತ್ನ ಮಾಡಿದೆ. ವೈಯಕ್ತಿಕವಾಗಿ ನನಗಂತೂ ತುಂಬಾ ಇಷ್ಟವಾಯಿತು. ಕವನ ಕಟ್ಟುವಲ್ಲಿ ನೀವು ಖಂಡಿತವಾಗಿ ಖರಾಟೆಯಾಡಿ ಗೆಲುವು ಸಾಧಿಸಿದ್ದೀರಿ ಎನಿಸಿತು.

    ಪ್ರತ್ಯುತ್ತರಅಳಿಸಿ