ಬುಧವಾರ, ನವೆಂಬರ್ 4, 2015

ಮ್ಯಾರಥಾನ್

ಇತಿಹಾಸ
ಇತ್ತೀಚಿಗೆ ನೀವೆಲ್ಲ ಗಮನಿಸಿರಬಹುದು: ಓಡುವುದರಲ್ಲಿ ಬಹಳ ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲರೂ ಮ್ಯಾರಥಾನ್ ಓಡುತ್ತಿದ್ದಾರೆ. ಏನು ಈ ಮ್ಯಾರಥಾನ್? ಇದನ್ನು ತಿಳಿಯಲು ಸ್ವಲ್ಪ ಇತಿಹಾಸದತ್ತ ಗಮನ ಹರಿಸಬೇಕು. ಕ್ರಿಸ್ತ ಪೂರ್ವ 490 ಇಸವಿ. ಗ್ರೀಕರು ಮತ್ತು ಪರ್ಷಿಯನ್ ರ ನಡುವೆ ಭಯಂಕರ ಸಮರ ನಡೆದಿತ್ತು. ಇದನ್ನು ಗ್ರೀಕರ ವಿಜಯದ ಮೂಲಕ ಯುರೋಪ್ – ಅಮೇರಿಕ – ಕೆನಡಾ ಪ್ರಾಂತ್ಯದ ಅಭ್ಯುದಯಕ್ಕೆ ನಾಂದಿ ಇತ್ತ ಸಮರ ಅನ್ನಲೂ ಬಹುದು (ಕೆಲವು ವಿಮರ್ಶಕರ ದೃಷ್ಟಿಕೋನವಿದು). ಸಮರ ನಡೆದ ಪ್ರದೇಶದ ಹೆಸರು ಮ್ಯಾರಥಾನ್. ಸಮರದ ಹೆಸರು ಇತಿಹಾಸದಲ್ಲಿ 'ದಿ ಬ್ಯಾಟಲ್ ಆಫ್ ಮ್ಯಾರಥಾನ್' ಎಂದೇ ಪ್ರಸಿದ್ಧವಾಗಿದೆ. ವಿಜಯ ಸಂದೇಶವನ್ನು ಗ್ರೀಕರ ರಾಜಧಾನಿಯಾದ ಅಥೆನ್ಸ್ ಗೆ ಬಹುಬೇಗ ತಿಳಿಸಬೇಕೆಂಬ ಹಂಬಲದಿಂದ ಅದೇ ಸಮರದಲ್ಲಿ ಹೋರಾಡಿದ ಒಬ್ಬ ಸೈನಿಕ ಮ್ಯಾರಥಾನ್ ನಿಂದ ಅಥೆನ್ಸ್ ಕಡೆಗೆ ಧಾವಿಸುತ್ತಾನೆ. ಅವನ ಹೆಸರು ಫೈಡಿಪೆಡಿಸ್ (Pheidippides). ಫೈಡಿಪೆಡಿಸ್ ಮ್ಯಾರಥಾನ್ ನಿಂದ ಅಥೆನ್ಸ್ ಗೆ ಎಲ್ಲೂ ನಿಲ್ಲದೆ ಓಡಿ ಅಲ್ಲಿದ್ದ ಮಂತ್ರಿಗಳಿಗೆ ವಿಷಯ ತಿಳಿಸುತ್ತಾನೆ. ಫೈಡಿಪೆಡಿಸ್ ಓಡಿದ ದೂರ 26.2 ಮೈಲಿಗಳು. ಅಂದರೆ 42.2 ಕಿಲೋಮೀಟರುಗಳು. ಅದು ಅಥೆನ್ಸ್ ಮತ್ತು ಮ್ಯಾರಥಾನ್ ಪ್ರದೇಶಗಳ ಮಧ್ಯದ ಅಂತರ.

ಸ್ಪರ್ಧೆ
1896 ನೇ ಇಸವಿಯಲ್ಲಿ ನವೀನ (ಈಗಿನ) ಒಲಿಂಪಿಕ್ಸ್ ಕ್ರೀಡೆಗಳನ್ನು ಆರಂಭಿಸುವಾಗ ಒಲಿಂಪಿಕ್ಸ್ ವ್ಯವಸ್ಥಾಪಕರು ಒಲಿಂಪಿಕ್ಸ್ ನ ಜನಪ್ರಿಯತೆಯನ್ನು ಹೆಚ್ಚಿಸಲು, ಗ್ರೀಕ್ ಇತಿಹಾಸಕ್ಕೆ ಗೌರವ ಸಲ್ಲಿಸಲು ಅತಿ-ದೂರದ ಓಟ ಸ್ಪರ್ಧೆಯನ್ನು ಏರ್ಪಡಿಸಿ ಅದಕ್ಕೆ ಫೈಡಿಪೆಡಿಸ್ ತನ್ನ ಓಟ ಶುರು ಮಾಡಿದ ಊರು, 'ಮ್ಯಾರಥಾನ್' ಎಂದು ಹೆಸರಿಟ್ಟರು. 1921 ನೇ ಇಸವಿಯಲ್ಲಿ ಮ್ಯಾರಥಾನ್ ಸ್ಪರ್ಧೆಯ ದೂರವನ್ನು ಅಥೆನ್ಸ್ – ಮ್ಯಾರಥಾನ್ ಊರಗಳು ನಡುವಿನ ದೂರವನ್ನು ನಿಗದಿ ಮಾಡಿದರು. ಅದೇ ಇವತ್ತಿಗೂ ಇರುವ ಸುಮಾರು 42 ಕಿಲೋಮೀಟರುಗಳ ಓಟ. 1896 ರಲ್ಲಿ ಮ್ಯಾರಥಾನ್ ಸ್ಪರ್ಧೆಯು 40 ಕಿಲೋಮೀಟರುಗಳ ಓಟವಾಗಿತ್ತು. 1924 ರಿಂದ ಇಂದಿನವರೆಗೂ ಅದು 42.195 ಕಿಲೋಮೀಟರುಗಳು.

1896 ರಲ್ಲಿ ಶುರುವಾದರೂ 1918 ರವರೆಗೆ ಮಹಿಳೆಯರು ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಮೇರಿ-ಲೂಯಿ ಲೆಡ್ರೂ ಅನ್ನುವ ಮಹಿಳೆ, ಗಂಡಸರೊಂದಿಗೆ ಮ್ಯಾರಥಾನ್ ನಲ್ಲಿ ಸ್ಪರ್ಧಿಸಿ 40.2 ಕಿಲೋಮೀಟರುಗಳ ದೂರವನ್ನು 5 ಘಂಟೆ 40 ನಿಮಿಷಗಳಲ್ಲಿ ಮುಗಿಸಿ 38 ನೆಯ ಸ್ಥಾನ ಪಡೆದರು.

ಮ್ಯಾರಥಾನ್ ಮತ್ತು ಭಾರತ
ಮ್ಯಾರಥಾನ್ ಗಳಲ್ಲಿ ಭಾರತದ ಪಾತ್ರ ಅತಿ ಹೆಚ್ಚು. ಜಗತ್ತಿನ ಅತಿ ಹಿರಿಯ ಮ್ಯಾರಥಾನ್ ಓಟಗಾರ ಫೌಜ ಸಿಂಗ್ ಭಾರತ ಮೂಲದ ಬ್ರಿಟಿಶ್ ಓಟಗಾರ. ಅವರು 2011 ರಲ್ಲಿ 8 ಘಂಟೆ 11 ಮಿನಿಶಗಳಲ್ಲಿ ಮ್ಯಾರಥಾನ್ ಮುಗಿಸಿದರು. ಆಗ ಅವರ ವಯಸ್ಸು 100. ಮ್ಯಾರಥಾನ್ ಮುಗಿಸಿದ ಜಗತ್ತಿನ ಅತಿ ಪುಟ್ಟ ಕೂಸು ಭಾರತದ ಓಡಿಶ ರಾಜ್ಯದ ಬುಧಿಯಾ ಸಿಂಗ್. ಅವರು ಮ್ಯಾರಥಾನ್ ಓಡಿದಾಗ ಅವರಿಗೆ ಕೇವಲ 3 ವರ್ಷಗಳು. ಪುಟ್ಟಮಗುವಿನ ಪ್ರಾಣಕ್ಕೆ ಆಪತ್ತು ತಂದ ಓಟ ಅದು. ಅವರ ಕೋಚ್ ಬಿರಾಂಚಿ ದಾಸ್ ಅವರನ್ನು ಪುಟ್ಟ ಮಗುವಿನ ಜೀವ ಪಣಕ್ಕಿಟ್ಟು ಓಡಿಸಿದ ಕಾರಣಕ್ಕೆ ಬಂಧಿಸಲ್ಪಟ್ಟರು.

ನಮ್ಮ ಬೆಂಗಳೂರಿನಲ್ಲಿ ಮ್ಯಾರಥಾನ್ ಓಟಗಾರರು ಅತಿ ಹೆಚ್ಚು. ಬೆಂಗಳೂರಿನಲ್ಲೇ ಬ್ಯಾಂಗಳೋರ್ ಮ್ಯಾರಥಾನ್, ಬ್ಯಾಂಗಳೋರ್ ಅಲ್ಟ್ರಾ, ಬ್ಯಾಂಗಳೋರ್ ಮಿಡ್ ನೈಟ್ ಮ್ಯಾರಥಾನ್ ಎಂಬ 3 ಜಗತ್ಪ್ರಸಿದ್ಧ ಸ್ಪರ್ಧೆಗಳನ್ನು ಪ್ರತಿವರ್ಷ ಏರ್ಪಡಿಸಲಾಗುತ್ತದೆ. ಏಷ್ಯಾ ದ ಅತಿ ಕಷ್ಟಕರ ಮ್ಯಾರಥಾನ್ ಗಳಲ್ಲಿ ಒಂದಾದ ಕಾವೇರಿ ಟ್ರೈಲ್ ಮ್ಯಾರಥಾನ್ ನಮ್ಮ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದ ಬಳಿ ನಡೆಯುತ್ತದೆ. ಒಂದೆಡೆ ನಮ್ಮ ವಿಶ್ವೇಶ್ವರಯ್ಯನವರ ಕಾವೇರಿ ನೀರು ಹರಿಯುವ ನಾಲೆ ಇನ್ನೊಂದೆಡೆ ಅದೇ ನೀರಿನಿಂದ ಬೆಳೆದ, ಕಣ್ಣ ತಣಿಸುವ ಹಸಿರು ಸೀರೆಯುಟ್ಟ ಗದ್ದೆಗಳು, ಇವೆರೆಡರ ಮಧ್ಯೆ ಓಡುವುದು ವರ್ಣಿಸಲಾಗದ ಅನುಭವ.

ದಿ ಬಾಸ್ಟನ್ ಮ್ಯಾರಥಾನ್
ಮ್ಯಾರಥಾನ್ ಗಳ ಬಗ್ಗೆ ಮಾತನಾಡುವಾಗ ಬಾಸ್ಟನ್ ಮ್ಯಾರಥಾನ್ ಬಗ್ಗೆ ಹೇಳದೇ ಇರಲಾಗುವುದಿಲ್ಲ. ಪ್ರತೀವರ್ಷದ ಏಪ್ರಿಲ್ ತಿಂಗಳಲ್ಲಿ ಅಮೆರಿಕಾದ ಬಾಸ್ಟನ್ ನಗರದಲ್ಲಿ ನಡೆಯುವ ಮ್ಯಾರಥಾನ್. ಮ್ಯಾರಥಾನ್ ಓಡುಗರ ಕನಸು ಬಾಸ್ಟನ್ ಮ್ಯಾರಥಾನ್.  ಬಾಸ್ಟನ್ ಮ್ಯಾರಥಾನ್ ಗೆ ಆಯ್ಕೆ ಆಗಲು ಬೇರೆ ಮ್ಯಾರಥಾನ್ ನನ್ನು ಸುಮಾರು 3 ಘಂಟೆ 5 ನಿಮಿಷಗಳಲ್ಲಿ ಮುಗಿಸಿರಬೇಕು. ಬಾಸ್ಟನ್ ಮ್ಯಾರಥಾನ್ ಗೆ ಆಯ್ಕೆ ಆಗುವುದೇ ಮ್ಯಾರಥಾನ್ ಓಡುಗರ ಒಂದು ಹೆಗ್ಗಳಿಕೆ. ಓಡುಗರ ಕೂಟದಲ್ಲಿ BQ (BOSTON QUALIFIED) ಅಂದರೆ ಅತಿ ದೊಡ್ಡ ಬಿರುದು. ಬಾಸ್ಟನ್ ಮ್ಯಾರಥಾನ್ ನಲ್ಲಿ ಓಡದೆ ಇದ್ದರೂ BQ ಅನ್ನಿಸಿಕೊಳ್ಳುವುದೇ ಒಂದು ದೊಡ್ಡ ವಿಷಯ.

ಮ್ಯಾರಥಾನ್ ಗಳನ್ನು ಮೀರಿ
42.125 ಕಿಲೋ ಮೀಟರ್ ಗಿಂತ ಹೆಚ್ಚು ದೂರವಿದ್ದರೆ, ಅದನ್ನು ಅಲ್ಟ್ರಾ ಮ್ಯಾರಥಾನ್ ಅನ್ನುತ್ತಾರೆ. ಇತ್ತೀಚಿಗೆ ಅಲ್ಟ್ರಾ ಮ್ಯಾರಥಾನ್ ಗಳು ಪ್ರಸಿದ್ಧಿ ಪಡೆಯುತ್ತಿವೆ. ಬೆಂಗಳೂರಿನ ಬ್ಯಾಂಗಳೋರ್ ಅಲ್ಟ್ರಾ 2007 ರಲ್ಲಿ ಶುರಿವಾಗಿದೆ. ಅಲ್ಟ್ರಾ ಮ್ಯಾರಥಾನ್ ಗಳು 50, 100, 160, 333 ಹಾಗೂ 1600 ಕಿಲೋಮೀಟರುಗಳ ದೂರದ ಓಟಗಳು. ಹೌದು ಸಾವಿರದ ಆರು ನೂರು ಕಿಲೋಮೀಟರು ಗಳ ಓಟ.  ಬಹುದಿನಗಳ ಓಟಗಳು ಇವು.  ಹಿಮಾಲಯದಲ್ಲಿ ನಡೆಯುವ ಲ-ಅಲ್ಟ್ರಾ, 333 ಕಿಲೋಮೀಟರ್ಗಳದ್ದು.  ಬಹಳ ವರ್ಷಗಳ ನಿರಂತರ ಶ್ರಮ ಹಾಗೂ ಶ್ರದ್ಧಾಪೂರ್ವಕ ಅಭ್ಯಾಸದಿಂದ ಕೆಲವೇ ಕೆಲವರು ಆಯ್ಕೆಆಗುತ್ತಾರೆ, ಓಡುತ್ತಾರೆ ಕೊನೆಗೆ ಗೆಲ್ಲುತಾರೆ.

ಓಡುವುದರಿಂದ ಬೆನ್ನು ನೋವು, ಮಂಡಿ ನೋವು ಇತ್ಯಾದಿ ಅಪಾಯಗಳಿವೆ ಎಂದು ಎಂದೂ ಓಡದ ಜನ ಹೇಳುತ್ತಾರೆ. ಕೈಗೆಟುಕದ ದ್ರಾಕ್ಷಿಯ ಹಣ್ಣನ್ನು ಹುಳಿಯೆನ್ನುವ ಜನರಿವರು. ಗಾಯಗಳು ಓಡುವುರಿಂದ ಆಗುವುದಿಲ್ಲ, ಸರಿಯಾಗಿ ಓಡದೆ ಇರುವುದರಿಂದ ಉಂಟಾಗುತ್ತವೆ.

ಮತ್ತೆ ಇತಿಹಾಸಕ್ಕೆ
ಫೈಡಿಪೆಡಿಸ್ ತಮ್ಮ ವಿಜಯವಾರ್ತೆಯನ್ನು ತಿಳಿಸಲು ಓಡಿದ ಜ್ಞಾಪಕಾರ್ಥ ಇಷ್ಟೆಲ್ಲಾ ಸ್ಪರ್ಧೆಗಳು, ಸೋಲು-ಗೆಲುವುಗಳು. ಫೈಡಿಪೆಡಿಸ್ ತಾನು ಓಡಿಬಂದು ಮಂತ್ರಿಗಳೆಲ್ಲ ಇದ್ದಲ್ಲಿ  ಧಾವಿಸಿ ಬಂದು 'ನೆನಿಕೇಕಮೆನ್'  ಎಂದು ಕೂಗುತ್ತಾನೆ, ಅಂದ್ರೆ 'ನಾವು ಗೆದ್ದೆವು' ಎಂದು. ತನ್ನ ದೇಶದ ವಿಜಯವಾರ್ತೆಯನ್ನು ಮುಟ್ಟಿಸುತ್ತಾನೆ, ಅಭ್ಯಾಸವಿಲ್ಲದೆ ಅಷ್ಟು ದೂರ ಓಡಿಬಂದದ್ದರಿಂದ ಫೈಡಿಪೆಡಿಸ್ ಅಲ್ಲೇ ಮರಣ ಹೊಂದುತ್ತಾನೆ. ತನ್ನ ದೇಶದ ಪರ ಹೋರಾಡಿ, ಗೆದ್ದು, ಜಗತ್ತಿನ ಮೊಟ್ಟ ಮೊದಲ ಮ್ಯಾರಥಾನ್ ಓಡಿ, ವಿಜಯವಾರ್ತೆ ಮುಟ್ಟಿಸಿ ಸ್ಥಳದಲ್ಲೇ ಮರಣ ಹೊಂದಿದ ಹುತಾತ್ಮ ಫೈಡಿಪೆಡಿಸ್.

ಲೇಖಕರ ಕಿರುಪರಿಚಯ
ಶ್ರೀ ವಿಜಯಮೋಹನ್ ಚಿಂತಾಮಣಿ

ಬೆಂಗಳೂರಿನ ಮೂಲದವರಾದ ಇವರ ವಿದ್ಯಾಭ್ಯಾಸ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಕಾರ್ಯನಿವಹಿಸುತ್ತಿರುವ ಇವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ