ಗುರುವಾರ, ನವೆಂಬರ್ 5, 2015

ಮಾಯಾಬಜಾರ್

ಇಲ್ಲಿ ಬಯಸಿದ್ದೆಲ್ಲವೂ ದೊರೆಯುತ್ತದೆ
ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾಲು
ದಿನದ ಇಪ್ಪತ್ನಾಲ್ಕು ತಾಸೂ ತೆರೆದಿರುತ್ತದೆ
ಚೌಕಾಸಿ ವ್ಯಾಪಾರಕ್ಕೂ ಅವಕಾಶವುಂಟು
ಆದರೂ ಯಾವ ಷರತ್ತುಗಳು ಅನ್ವಯಿಸುವುದಿಲ್ಲ!
ಎಂಬಿತ್ಯಾದಿ ತಲೆಬರಹದೊಂದಿಗೆ
ಮನುಜನ ಮನಸಿನ ಮಾರುಕಟ್ಟೆಯ ಗಲ್ಲಿಯೊಳಗೆ
ಮಾಸಿದ ಗೋಡೆಗೆ ಹೊಸರಂಗು ಬಳಿದುಕೊಂಡು
ಬಾಗಿಲು ತೆರೆದಿರುವ ಹೈಟೆಕ್ದುಖಾನಿನ ಹೆಸರು - ಕಾಮ!

ಕಾಮದಂಗಡಿಯ ತುಂಬೆಲ್ಲಾ ಅಚ್ಚುಕಟ್ಟಾಗಿ
ಜೋಡಿಸಿಟ್ಟ ಹೆಣ್ಣಿನ ಅಂಗಾಂಗಗಳು
ಎಳೆ, ಮಧ್ಯಮ, ತಾಜಾ, ಮೃದು, ಬಲಿತ
ಎಂದು ವರ್ಗೀಕರಿಸಲಾಗಿದೆ.

ಆಸೆಗಣ್ಣಿನಿಂದ ವ್ಯಾಪಾರ-ವಹಿವಾಟಿಗೆ ಮುಗಿಬಿದ್ದ ಜನ
ಇದರ ಪರಿಣಾಮ ಕಾಲ್ತುಳಿತಕ್ಕೆ ಅಸುನೀಗಿದ ಮಾನವೀಯತೆ
ನಿಸ್ಸಹಾಯಕ ಸಜ್ಜನರಿಂದ ಒಂದು ಮಿನೀಟಿನ ಮೌನಾಚಾರಣೆ
ಇವೆಲ್ಲವೂ ಅಂಗಡಿ ಬೀದಿಯಲ್ಲಿ ಜರುಗುತ್ತಿರುವ ವಿದ್ಯಮಾನಗಳು.

ಈಗ ಮಾರುಕಟ್ಟೆಯ ತುಂಬೆಲ್ಲಾ
ಕಾಮದಂಗಡಿಯ ಮಾಲಿನದೇ ಕಾರುಬಾರು.
ಎದೆಯುಬ್ಬಿಸಿ, ಮೀಸೆತಿರುವಿಕೊಂಡು
ಹೊರಬರುವ ಗ್ರಾಹಕ ಮಹಾಶಯನ
ಕಣ್ಣಿಗೆ ಕಾಣುವಂತೆ ಎದ್ದು ಕಾಣುವ
''ಧನ್ಯವಾದಗಳು, ಮತ್ತೊಮ್ಮೆ ಬನ್ನಿ"
ಎಂಬ ದೊಡ್ಡ ಅಕ್ಷರದ ಸಾಲು!!!

ಅಂತೆಯೇ ಮಾರುಕಟ್ಟೆಯ ಇನ್ನೊಂದು ಬದಿಗೆ
'ಒಂದುಕೊಂಡರೆ, ಮತ್ತೊಂದು ಉಚಿತ'
ಎಂದು ಊರ ತುಂಬೆಲ್ಲಾ ಡಂಗೂರ ಹೊಡೆಸಿ
ಜಾಹೀರಾತು ಕೊಟ್ಟರೂ ಸಹಿತ
ಯಾವ ಬಿಕನಾಸಿಯೂ ವ್ಯಾಪಾರಕ್ಕೆ
ತಲೆ ಹಾಕದ ಪ್ರತಿಫಲದಿಂದ
ಬಾಗಿಲು ಮುಚ್ಚಿಕೊಂಡು, ಪಲಾಯನವಾದ
'ಪ್ರೀತಿ', 'ನಂಬಿಕೆ', 'ಸ್ನೇಹ', 'ವಿಶ್ವಾಸ'
ಎಂಬ ಅಂಗಡಿಯ ಪಳೆಯುಳಿಕೆಗಳಷ್ಟೇ ಕಾಣಸಿಗುತ್ತಿವೆ...!!!

ಲೇಖಕರ ಕಿರುಪರಿಚಯ
ಡಾ. ಮಹೇಂದ್ರ, ಎಸ್. ತೆಲಗರಹಳ್ಳಿ

ಆನೇಕಲ್‍ ತಾಲೂಕಿನ ತೆಲಗರಹಳ್ಳಿಯವರಾದ ಇವರು ಪ್ರಸ್ತುತ ಪ್ರಾಣಿ ಪ್ರಸೂತಿ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕವಿತೆಗಳನ್ನು ಬರೆಯುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ