ಬುಧವಾರ, ನವೆಂಬರ್ 25, 2015

ನನ್ನ ಊರು ನನ್ನ ನೆನಪು

ಕಡಲ ಚಾಪೆಯನ್ನು ಎರಡು ಸುತ್ತು ಮಡಚಿದಾಗ ಹುಟ್ಟಿದ್ದೇ ನನ್ನೂರು. ಸದಾ ಪೂರ್ವದ ಅನಂತ ದೂರದವರೆಗೂ ಚಾಚಿರುವ ಶರಧಿಯಿಂದ ಬೀಸಿ ಬರುವ ತಂಗಾಳಿಯನ್ನು ಮೆಲ್ಲುತ್ತಾ, ಪಶ್ಚಿಮ ಘಟ್ಟವನ್ನು ಮೋಡದ ಕಡಲು ತಬ್ಬಿದ್ದನ್ನು ಕಣ್ತುಂಬಿಕೊಳ್ಳುತ್ತಾ, ಸಂಗಾತಿಯನ್ನು ಮೆಚ್ಚಿಸಲೆಂದೇ ಟೊಂಗೆಯ ಮೇಲೆ ಕೂತು ಮುಕ್ತಕಂಠದಿಂದ ಹಾಡುತ್ತಿರುವ ಹಕ್ಕಿಯ ಲವಲವಿಕೆಯ ಹಾಡು ಕೇಳುತ್ತಾ, ಮೊರೆದು ಬಂದ ಅವಿಶ್ರಾಂತ ನದಿಯು ಕಡಲ ಒಡಲನ್ನು ಸೇರುವ ನಿಶ್ಚಲ ಮೌನದಲ್ಲಿ ತಾನೂ ಸೇರಿಕೊಳ್ಳುತ್ತಾ, ವಿಸ್ಮಯ ದಿಗಂತದಲ್ಲಿ ಮೆಹೆಂದಿ ಹಚ್ಚಿದಂತೆ ಬಂದ ಕಡುಕೆಂಪು ಬಣ್ಣವನ್ನು ಸವಿಯುತ್ತಾ, ಯಾವಾಗಲೂ ಉಲ್ಲಾಸಕರ ವಾತಾವರಣದ ಮುಖಮುದ್ರೆಯಲ್ಲಿ ದಿನ ಪ್ರಾರಂಭ ಮಾಡುತ್ತಾ, ಪ್ರಕೃತಿಯ ಅನವರತ ಸೋಜಿಗಗಳಿಗೆ ಬೆರಗಾಗಿ, ಶಿಳ್ಳೆ ಹೊಡೆಯುತ್ತಾ, ತನ್ನದೂ ಒಂದು ಪಾಲಿರಲಿ ಎಂದು ಜೀಕುತ್ತಾ, ಬೆಟ್ಟದ ಮೇಲಿನ ದೇವಾಲಯದ ದೊಡ್ಡ ಘಂಟೆಯ ಶಬ್ದವನ್ನು ಆಲಿಸುತ್ತಾ, ಹಸಿರ ಚಾದರ ಹೊದ್ದು, ಅದನ್ನೇ ತನ್ನ ಉಸಿರಾಗಿಸಿಕೊಂಡಿರುವುದು ನನ್ನ ಊರು. ಇಲ್ಲಿ ಭಣ-ಭಣ ಮಧ್ಯಾಹ್ನವು ಬಹು ಸಲೀಸಾಗಿ ಕಳೆದುಹೋಗುತ್ತದೆ. ಪುಟ್ಟ ಊರಾದರೂ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಜಲಧಾರೆಗಳ ಕಂಡಾಗ ಎಂಥವರನ್ನೂ ಮೋಹಿತರನ್ನಾಗಿ ಮಾಡುವ ಭವ್ಯ ದೃಶ್ಯಗಳ ಪರದೆ . . . ರಾತ್ರಿಯ ಪ್ರಶಾಂತ ಮೌನದಲ್ಲೇ ಜೋಗುಳ ಹಾಡಿ ಮಲಗಿಸಿಬಿಡುತ್ತೆ. ದಾರಿಯುದ್ದಕ್ಕೂ ಸಿಗುವ ತೆಂಗು-ಕಂಗುಗಳ ಸಾಲು ಕಂಡರೆ ನನ್ನೂರು ಸೊಬಗಿನ ತೇರು ಎಂದೆನಿಸುತ್ತದೆ. ಆಲದ ಮರದ ನೆರಳಲ್ಲಿ ಕೂತಾಗ ಆಗುವ ಹಿತವಾದ ಅನುಭವ ಎಲ್ಲವನ್ನೂ ಮರೆಸಿಬಿಡುತ್ತದೆ. ಕಾಲ್ದಾರಿಯಲ್ಲಿ ಅರಳಿದ ಮಲ್ಲಿಗೆಯ ಸುಗಂಧ ಹೀರಿಕೊಂಡಾಗ, ಬದುಕಿನಲ್ಲಿ ಅರಿಯಬೇಕಾದ ಎಷ್ಟೋ ಅಂಶಗಳ ನಿಟ್ಟುಸಿರು. ಕಡಲ ತಟದಲ್ಲಿ ಚೈತನ್ಯದ ಅಲೆಗಳ ಕಾಣುತ್ತಾ, ನಿಂತಿರುವ ಅಪರಂಜಿ ಚಿನ್ನದಂತಹ ಊರು-ನನ್ನೂರು. ಇಡೀ ಪ್ರಕೃತಿಯು ಒಂದು ಸಹಜ ಸುಂದರ ಕಥೆಯಾದರೆ, ನನ್ನೂರು ಅದರೊಳಗೆ ಬರುವ ಚೆಂದದ ಉಪಕತೆ.

ಅದೆಷ್ಟೋ ಜನರು ಹಲವಾರು ಕಾರಣಗಳಿಂದಾಗಿ ತಮ್ಮ ಊರು ಬಿಟ್ಟು ಹೋಗಿ ವಿದ್ಯಾಭ್ಯಾಸಕ್ಕೋ, ಕೆಲಸಕ್ಕೋ ಅಥವಾ ಅನಿವಾರ್ಯ ಕಾರಣಕ್ಕೋ ಅಲ್ಲೇ ಉಳಿದುಕೊಂಡಾಗ, ತಮ್ಮ ಊರಿನ ಮೇಲಿನ ಪ್ರೀತಿ ಅದನ್ನು ಅಗಲಿದ ಅರೆಕ್ಷಣಕ್ಕೆ ಮನಸ್ಸನ್ನು ಅಲ್ಲೋಲ ಕಲ್ಲೋಲವಾದ ಸಮುದ್ರದಂತೆ ಮಾಡಿಬಿಡುತ್ತದೆ. ಆ ಮೊನಚು ನೆನಪುಗಳು ಹುಟ್ಟೂರನ್ನು ಸೇರುವ ಅದಮ್ಯ ಹಂಬಲಕ್ಕೆ ಮೊಂಬತ್ತಿಯಾಗುತ್ತವೆ. ಬಾಲ್ಯದಲ್ಲಿ ನಾ ನೆಟ್ಟ ಸಂಪಿಗೆ ಗಿಡ ದೊಡ್ಡದಾಗಿ ಸೂಸಿದ ಕಂಪು ದೂರದಲ್ಲಿರುವ ನನ್ನ ಮೂಗಿಗೆ ಬಂದು ಬಡಿದಾಗ, ಅಂದೆಂದೊ ಮುಂಜಾವಿನಲ್ಲಿ ಕೇಳಿದ ಹಕ್ಕಿ ಹಾಡು, ಗಿಜುಗುಡುವ ಗಲಾಟೆಯ ನಡುವೆಯೂ ಕಿವಿಯಲ್ಲಿ ಇಂಪಾಗಿ ಕೇಳಿಸುತ್ತಿರುವಾಗ ನನ್ನೂರು ನನ್ನನ್ನು ತುಂಬಾನೇ ಕಾಡಿಬಿಡುತ್ತದೆ. ಪ್ರತಿಯೊಬ್ಬರೂ ಬಾಲ್ಯವೆಂಬ ಅಮೋಘ ಘಟ್ಟವನ್ನು ಹತ್ತಿಯೇ ಬಂದಿರುತ್ತೇವೆ. ಅದನ್ನು ಕಳೆದ ಆ ಊರನ್ನು, ಪರಿಸರವನ್ನು ನೆನೆದಾಗ ಮೈಮನಗಳಲ್ಲಿ ಹರುಷದ ಬುಗ್ಗೆ ಹುಟ್ಟುತ್ತದೆ. ಸ್ನೇಹಿತರೆಲ್ಲಾ ಮನೆಯ ಅಂಗಳದಲ್ಲಿ ಕುಳಿತು ಹುಣ್ಣಿಮೆಯ ಬೆಳದಿಂಗಳಲ್ಲಿ ಊಟಮಾಡುತ್ತಿದ್ದ ಆ ಸಂತಸದ ಕ್ಷಣ ಈಗ ಕಪ್ಪು-ಬಿಳುಪು ಚಿತ್ರವಾಗಿ ಮನದಲ್ಲಿ ಅಚ್ಚೊತ್ತಿ ನಿಂತಿದೆ. ನಿಂತೂ ನಿಲ್ಲದಂತೆ ಎರಡೇ ಉಸಿರಿಗೆ ಬೆಟ್ಟ ಹತ್ತುತ್ತಿದ್ದ ಬಲ, ಸಮುದ್ರದ ದಂಡೆಯ ಮೇಲೆ ಮರಳಿನಿಂದ ಕಟ್ಟುತ್ತಿದ್ದ ಮನೆ, ಅಲೆಗಳ ಹೊಡೆತಕ್ಕೆ ಕೊಚ್ಚಿಹೋದಾಗ ಮತ್ತೆ ಕಟ್ಟಲು ಉಕ್ಕುತ್ತಿದ್ದ ಛಲ ಇಂದು ಬದುಕಿನ ಹೋರಾಟದಲ್ಲಿ ಸೋತಾಗ ಬರುತ್ತಿಲ್ಲವೆಂದು ವೇದನೆಯಾಗುತ್ತದೆ. ವಾಸ್ತವದಲ್ಲಿ ಎಲ್ಲಿಗೋ ಹೊರಟಿರುವ ನನಗೆ, ನನ್ನೂರಿನ ದಾರಿ ಹಿಡಿಯುವ ಉತ್ಸಾಹ ಕೊನರುತ್ತದೆ. ಅದರ ಓಜಸ್ಸು, ಎಂಥದೆಂದರೆ ಒಂದು ಘಳಿಗೆ ಸ್ವಪ್ನದಲ್ಲೂ ಮೂಡಿ ಕುಪ್ಪಳಿಸಿ ಕುಣಿದು ಪಲ್ಲಕ್ಕಿ ಉತ್ಸವದೊಂದಿಗೆ ಕರೆದೊಯ್ಯಲು ಬಂದು ನಿಂತಿರುತ್ತದೆ. ತಮಾಷೆ ಎಂಬಂತೆ ಮನದಲ್ಲೂ ಊರಿಗೆ ಹೊರಡುವ ದಿಬ್ಬಣ ತಯಾರಾಗಿರುತ್ತದೆ. ಇದ್ದಕ್ಕಿದ್ದ ಹಾಗೆ ನನ್ನ ಮನದ ಬಾಗಿಲು ಬಡಿಯದೇ ಸೀದಾ ಒಳಗೆ ಪ್ರವೇಶಿಸಿ ಕರೆಯುತ್ತದೆ. ಹಲವಾರು ವರ್ಷಗಳ ನಂತರ ನನ್ನೂರನ್ನು ಸೇರ ಹೊರಟಾಗ ಖುಷಿಯ ಚಿಲುಮೆ ಒಮ್ಮೆಗೇ ಚಿಮ್ಮಿಬಿಡುತ್ತದೆ. ಆ ಹೊತ್ತಿಗೆ ನನ್ನೂರು ಪದಗಳಲ್ಲಿ ವರ್ಣಿಸಲಾಗದ ಚೆಂದದ ಕವನವಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಸೂರ್ಯೋದಯವನ್ನು ನೋಡಿರುವ ನನಗೆ ಇಲ್ಲಿನ ಬೆಟ್ಟದ ತೆನೆಗಾಳಿಯನ್ನು ಉಸಿರಾಡುತ್ತಾ ಕಣ್ತುಂಬಿಕೊಂಡ ಪರಿ ಬಾಡೂಟ ಬಡಿಸಿದೆ. ಮುಸ್ಸಂಜೆಯ ಹೊತ್ತಲ್ಲಿ ಕಡಲ ಅನಂತ ದೂರದಲ್ಲಿ ಮುಳುಗುವ ಕೆಂಪು ಗೋಲಾಕಾರದ ಸೂರ್ಯನ ಕಂಡಾಗ ಮನಸ್ಸಿಗೆ ಆದ ಹಿತ, ನೆಮ್ಮದಿ ಈಗಿರುವ ಊರಲ್ಲಿ ಸಿಗದಾಗಿದೆ. ಮಕರಂದವನ್ನು ಅರಸುತ್ತಾ ಸುತ್ತುತ್ತಿರುವ ಪಾತರಗಿತ್ತಿಯಾಗಿಬಿಟ್ಟಿದ್ದೇನೇನೋ ಎಂದೆನಿಸುತ್ತದೆ. ನನ್ನೂರಿನ ತೋಟದ ಮಾವಿನ ಮರದ ಕೊಂಬೆಗೆ ಉಯ್ಯಾಲೆ ಕಟ್ಟಿ ಆಡಬೇಕೆಂಬ ಆಸೆ ಮನದಲ್ಲಿ ಗುಲ್ಲೆಬ್ಬಿಸುತ್ತದೆ.

ಮನದ ಭಾವಗಳ ಭೋರ್ಗರೆತ, ನೆನಪುಗಳು ವರ್ಷಧಾರೆ
ಚಿತ್ರ : ಅಭಿಷೇಕ್ ಪೈ
ಆಗಾಗ ಇದಿರಾಗುವ ನಿಸ್ಸಹಾಯಕ ಸ್ಥಿತಿ, ಗೊಂದಲ, ಹತಾಶೆ, ನಿರಾಶೆ, ತಾಪತ್ರಯಗಳಿಂದ ಬಿಡುಗಡೆಯನ್ನು, ಶಾಂತತೆಯನ್ನು ಬಯಸಿದಾಗ ಕೂಡಲೇ ನನ್ನೂರಿನ ಕಡೆಗೆ ಮನಸ್ಸು ಹಾಯುತ್ತದೆ. ನೆನಪಿನ ಬತ್ತಿ ತಂತಾನೇ ಬಿಚ್ಚಿಕೊಳ್ಳುತ್ತದೆ. ಎಣಿಸಲಾರದಷ್ಟು ನೆನಪುಗಳು ಮನದ ಪರದೆಯಲ್ಲಿ ಮೂಡುತ್ತವೆ. ನೆನೆದಾಗ ಮುಖದಲ್ಲಿ ಮುಗುಳ್ನಗೆ ಹುಟ್ಟುತ್ತದೆ. ಮನದ ಅಕ್ಷಯ ಪಾತ್ರೆಯಲ್ಲಿ ತುಂಬಿಕೊಂಡಿರುವ ಆ ನೆನಪುಗಳು ತೆರೆದಷ್ಟೂ ಉಕ್ಕುತ್ತಾ ಹೋಗುತ್ತವೆ. ನೆನಪುಗಳು ಹಾಗೆಯೇ ಅಲ್ವಾ, . . ಗಾಳಿಗೆ ಬಿಡಿಸಿಟ್ಟ ಪುಸ್ತಕದ ಹಾಳೆಗಳಂತೆ ಆಗಾಗ ಒಂದೊಂದಾಗಿ ಎದ್ದು ಹಾರಿ ಮತ್ತೆ ಮಡಚಿಕೊಳ್ಳುತ್ತವೆ. ಎಲ್ಲವೂ ಮಧುವಿನಷ್ಟೇ ಸಿಹಿ. ಬಾಲ್ಯದಲ್ಲಿ ಆಡಿದ ಮೈದಾನ, ಈಜು ಕಲಿತ ಹೊಳೆ, ಶಾಲೆಗೆ ನಡೆದು ಹೋಗುತ್ತಿದ್ದ ದಾರಿ, ಗದ್ದೆಯ ಅಂಚು, ನೇರಳೆ ಹಣ್ಣಿನ ಮರ, ಬಾಳೆ ತೋಟ, ಕಾಡಿನ ಸೆರಗು ನೆನಪಾದಾಗ ಮತ್ತೆ ಆ ಹುಡುಗಾಟದ ಬಾಲ್ಯದ ಲೋಕಕ್ಕೆ ಹೋಗೋಣವೆಂದು ಮನಸ್ಸು ಹಪಹಪಿಸುತ್ತದೆ.

ನನ್ನೂರಿನ ಕಡಲ ಅಲೆಗಳ ಸಪ್ಪಳ ಇನ್ನೆಲ್ಲೋ ಇರುವ ನನ್ನ ಕಿವಿಗೆ ಬಂದು ಅಪ್ಪಳಿಸುತ್ತದೆ. ಅಂದೊಮ್ಮೆ ನಾ ನೆಟ್ಟ ಸಂಪಿಗೆ ಗಿಡದ ಮೇಲೆ ವಿಪರೀತ ಕಾಳಜಿ ಬಂದುಬಿಡುತ್ತದೆ. ಮನೆಯಲ್ಲಿ ಹುಟ್ಟಿ ಬೆಳೆದ ಹಸುವಿನ ಮೇಲೆ, ಅದರ ಕರುವಿನ ಮೇಲಿನ ಪ್ರೀತಿ ಕರೆಯುತ್ತದೆ. ನನ್ನೂರನ್ನು ಸೇರಿ ಬಿಡುವ ಉತ್ಸಾಹದಲ್ಲಿ ಬಂದಿಳಿದ ನನಗೆ ನನ್ನೂರು ಅದೆಷ್ಟೋ ಬದಲಾಗಿದೆ ಅನ್ನಿಸಿಬಿಟ್ಟಿದೆ. . . . ಮನೋಹರವಾದ ಪ್ರಕೃತಿ, ಹಕ್ಕಿಯ ಸೊಲ್ಲು, ಭತ್ತದ ಗದ್ದೆ, ಅಡಿಕೆ ತೋಟ, ಎಲ್ಲ ಕಾಣದಾಗಿ ಆಧುನಿಕತೆಯ ನಿಮಿತ್ತ ಹೇಳಿಕೊಂಡು ಮರೆಯಾಗಿಸಿದ್ದಾರೆ. ನನ್ನೂರು ತನ್ನತನವನ್ನು ಕಳೆದುಕೊಂಡು ಬಿಟ್ಟಿದೆ. ಮಳೆಗಾಲದಲ್ಲಿ ಹೆಂಚಿನ ಮನೆಯಲ್ಲಿ ಇರುವುದೇ ಒಂದು ಸಡಗರ. ಇಂದು ಸಿಮೆಂಟಿನಿಂದ ಕಟ್ಟಿದ ಚೌಕುಳಿ ಮನೆಗಳೇ ತಲೆಯೆತ್ತಿವೆ, ಎತ್ತುತ್ತಲೇ ಇವೆ. ನನ್ನೂರು ಮೂಕವಾಗಿ ಕೊರಗುತ್ತಿದೆ. ಬಾಲ್ಯದ ನೆನಪುಗಳೊಂದಿಗೆ ಮತ್ತಷ್ಟು ಅಕ್ಕರೆಯ ನೆನಪುಗಳನ್ನು ಮಡಿಲಿನಲ್ಲಿ ತುಂಬಿಕೊಂಡು ಹೋಗಲು ಬಂದ ನನಗೆ ನಿರಾಸೆ. ನನ್ನ ಊರು ಬೇರಾರದ್ದೋ ಊರಾಗಿದೆ ಎಂದು ಅನಿಸಲು ಶುರುವಾಗಿದೆ. ಬದಲಾಗುವ ಮುಂಚೆಯೇ ಈ ಊರಲ್ಲಿ ಹುಟ್ಟಿ ಬೆಳೆದ ನಾನೇ ಭಾಗ್ಯವಂತ. ನನ್ನ ಊರಿನ ನನ್ನ ನೆನಪುಗಳು ನನ್ನಿಂದ ಎಂದಿಗೂ ಮಾಸಿ ಹೋಗಲಾರವು.

ಲೇಖಕರ ಕಿರುಪರಿಚಯ
ಶ್ರೀ ಅಭಿಷೇಕ್ ಪೈ, ಸಾಬ್ರಕಟ್ಟೆ

ಮೂಲತಃ ಕರಾವಳಿಯವರಾದ ಇವರು, ಪ್ರಸ್ತುತ ಪೇಡಾ ನಗರಿ ಧಾರವಾಡದಲ್ಲಿ ಕೃಷಿ ಪದವಿಯ ಅಭ್ಯಾಸದೊಂದಿಗೆ ಬಿಡುವಿನ ವೇಳೆಯಲ್ಲಿ ಹಾಳೆಗಳ ಮೇಲೆ ಅಕ್ಷರವನ್ನೂ ಬಿತ್ತುತ್ತಿದ್ದಾರೆ. ಛಾಯಾಗ್ರಹಣ ಕೂಡ ಇವರ ಹವ್ಯಾಸದ ಕಾಯಕವಾಗಿದೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ