ಶನಿವಾರ, ನವೆಂಬರ್ 30, 2019

ಹಂಪೆ ಹಾಳು ಕೊಂಪೆಯಲ್ಲ

ನವಂಬರ್ 2019ರ ಮಾಹೆಯುದ್ದಕ್ಕೂ ಪ್ರಸ್ತುತಗೊಂಡ ಕಹಳೆ ಒಂಭತ್ತನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಸಿದ್ಧಪಡಿಸಿದ ಹೆಸರಘಟ್ಟದ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಕಡ್ಲೆಕಾಳು ಗಣಪತಿ
ಚಿತ್ರ ಕೃಪೆ : ಗೂಗಲ್

ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅದರ ಗತವೈಭವದ ಗಾಥೆ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಹರಡಿತ್ತು. ಅದರಲ್ಲೂ ಕೃಷ್ಣದೇವರಾಯನ ಕಾಲದಲ್ಲಿ ಹಂಪೆಯು ಎಂತಹ ಅದ್ದೂರಿಯಲ್ಲಿ ಮೆರೆಯಿತೆಂದರೆ, ಅದರ ಮನಮೋಹಕ ಮತ್ತು ಅಪರೂಪದ ಕೆತ್ತನೆಗಳನ್ನು ವರ್ಣಿಸಲಸಾಧ್ಯವಾಗಿತ್ತು. ಹಂಪಿ ಈಗ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿದೆ.

ವಿರೂಪಾಕ್ಷ ದೇವಾಲಯ: ಹಂಪಿಗೆ ಹೋಗಿ ಮುಂಭಾಗದ ಪಶ್ಚಿಮ ದಿಕ್ಕಿನತ್ತ ತಿರುಗಿದರೆ ಭವ್ಯವಾಗಿ ಎತ್ತರವಾಗಿ ಕಂಗೊಳಿಸುವಂತಹ ದೇವಾಲಯ ಇದು. ಈ ವಿರೂಪಾಕ್ಷ ದೇವಾಲಯದ ಗೋಪುರ ಸುಮಾರು 165 ಅಡಿ ಎತ್ತರವಿದ್ದು, ತಳಭಾಗ 150 ಅಡಿಗಳಷ್ಟು ಅಗಲವಾಗಿಯೂ 120 ಅಡಿ ಉದ್ದನಾಗಿಯೂ ಇದ್ದು ಒಟ್ಟು ಹನ್ನೊಂದು ಅಂತಸ್ತುಗಳಿಂದ ಕೂಡಿದೆ. ಈ ದೇವಾಲಯಕ್ಕೆ ಎರಡು ಗೋಪುರಗಳಿವೆ. ಇವುಗಳನ್ನು ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ಸವಿನೆನಪಿಗಾಗಿ ಕಟ್ಟಿಸಿದನೆಂದು ಹೇಳಲಾಗುತ್ತದೆ.

ಅಚ್ಯುತರಾಯನ ಗುಡಿ: ಈ ದೇವಾಲಯವು 1513 ರಲ್ಲಿ ಕೃಷ್ಣದೇವರಾಯನ ತಮ್ಮನಾದ ಅಚ್ಯುತರಾಯನಿಂದ ಕಟ್ಟಿಸಲ್ಪಟ್ಟಿತು. ಇಲ್ಲಿ ಏಕಶಿಲೆಯಲ್ಲಿ ನಿರ್ಮಿಸಿರುವ ಅವಳಿ ಕಂಬಗಳಿದ್ದು, ಕಂಬದ ಕೆತ್ತನೆ ಮನಮೋಹಕವಾಗಿದೆ. ಈ ದೇವಾಲಯದ ದಕ್ಷಿಣ ಬಾಗಿಲಿನಿಂದ ಹೊರಬಂದರೆ ಸಕಲಾಯುಧ ಪಾಣಿಯಾದ ಹತ್ತು ಕೈಗಳುಳ್ಳ ಒಂದೇ ಶಿಲೆಯಿಂದ ನಿರ್ಮಿಸಲ್ಪಟ್ಟಿರುವ ದೇವಿಯ ವಿಗ್ರಹವು ಕಾಣುತ್ತದೆ.

ವಿಜಯ ವಿಠಲ ದೇವಸ್ಥಾನ ಮತ್ತು ಕಲ್ಲಿನ ರಥ: ವಾಸ್ತುಶಿಲ್ಪದ ಶ್ರೇಷ್ಠತೆಗೆ ಸೇರಿದ ಮೂರು ದೇವಾಲಯಗಳು ಹಂಪಿಯಲ್ಲಿವೆ. ಅದರಲ್ಲಿ ಮೊದಲನೆಯದು ವಿಜಯ ವಿಠಲ ದೇವಾಲಯ. ಇಲ್ಲಿರುವ ಕಲ್ಲಿನ ರಥವನ್ನು ಒರಟು ಬೆಣಚು ಕಲ್ಲಿನಿಂದ ನಿರ್ಮಿಸಲಾಗಿದೆ.

ಉಗ್ರ ನರಸಿಂಹ ಮೂರ್ತಿ: ಇದು ಹಂಪೆಯಲ್ಲಿರುವ ಎಲ್ಲಾ ಮೂರ್ತಿಗಳಿಗಿಂತÀಲೂ ಬೃಹದಾಕಾರವಾದ ಮೂರ್ತಿ. ಇದರ ಸುತ್ತು ಎತ್ತರ ಸುಮಾರು 22 ಅಡಿಗಳು. 1528ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಓರ್ವ ಬ್ರಾಹ್ಮಣನಿಂದ ನಿರ್ಮಿಸಲ್ಪಟ್ಟಿತೆಂದು ಹೇಳಲಾಗಿದೆ. ಈ ಮೂರ್ತಿಯ ಹಿಂದೆ ಬೃಹದಾಕಾರದ ಪ್ರಭಾವಳಿ, ಹೆಡೆಬಿಚ್ಚಿದ ಸರ್ಪ ಇದೆ.

ಪಾತಾಳೇಶ್ವರ ದೇವಾಲಯ: ಈ ದೇವಾಲಯವು ಭೂಮಿ ಮಟ್ಟಕ್ಕಿಂತ ಕೆಳಗಿದೆ. ಇದರ ನಿರ್ಮಾಣ ಬುಕ್ಕರಾಯನ ಕಾಲದ್ದಾಗಿರಬಹುದೆಂದೆ ಊಹಿಸಲಾಗಿದೆ. ದೇವಾಲಯವು ಅನೇಕ ಕಂಬಗಳಿಂದ ಕೂಡಿದೆ. ದೇವಾಲಯದ ಒಳಭಾಗದಲ್ಲಿ ಕಾಲುವೆಯ ನೀರು ಹರಿಯುತ್ತದೆ, ಅದ್ದರಿಂದ ಸದಾ ತಂಪಾಗಿರುತ್ತದೆ.

ಹಂಪಿಯಲ್ಲಿ ಈ ಶಿಲ್ಪಕಲೆಗಳಲ್ಲದೆ, ವೀರಭದ್ರ ದೇವಾಲಯ, ಅಕ್ಕ-ತಂಗಿಯರ ಗುಡ್ಡ, ದಂಡನಾಯಕನ ಕೋಟೆ, ಹೇಮಕೂಟ, ಕಡ್ಲೆಕಾಳು ಗಣಪತಿ, ಕೃಷ್ಣ ದೇವಾಲಯ, ಕಮಲ ಮಹಲ್, ಗಜಶಾಲೆ, ಗಾನಗಿತ್ತಿ ಮಹಲ್, ವಸ್ತು ಸಂಗ್ರಹಾಲಯ, ಮಲ್ಲಪ್ಪನ ಗಡಿ, ಅನಂತಶಯನ ಗುಡಿ ಮುಂತಾದ ಅನೇಕ ಸ್ಥಳಗಳಿವೆ. ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ಸುಲ್ತಾನರ ನಡುವೆ ರಕ್ಕಸ ತಂಗಡಿಯೆಂಬ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಮುಸಲ್ಮಾನರ ಕೈ ಮೇಲಾಗಿ ವಿಜಯನಗರದ ವಿನಾಶಕ್ಕೆ ಕಾರಣವಾಯಿತು.

ವಿದ್ಯಾರ್ಥಿ ಕಿರುಪರಿಚಯ
ವೈಷ್ಣವಿ, ಎಂ. ಎಸ್.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter