ಮಂಗಳವಾರ, ನವೆಂಬರ್ 19, 2019

ಕನ್ನಡ ನಾಡಿನ ಏಕೀಕರಣ

ಆಲೂರು ವೆಂಕಟರಾಯರು
(ಚಿತ್ರ ಕೃಪೆ: ಸಿಟಿ ಐಡಲ್)

ಕನ್ನಡ ನಾಡು ಕನ್ನಡಿಗರ ನಾಡು. ಅದು ಹರಿದು ಹಂಚಿ ಹೋಗಿ ಬೇರೆ ಬೇರೆಯಾಗಿದ್ದ ಕಾಲವೊಂದಿತ್ತು. ಕನ್ನಡಿಗರು ಚಳುವಳಿಯ ಮೂಲಕ ನ್ಯಾಯ ಪಡೆಯಲು ಹೋರಾಟ ನಡೆಸಿದರು. ಅಂದಿನ ಕರ್ನಾಟಕ ಏಕೀಕರಣ ಚಳುವಳಿಯನ್ನು ಇಂದೂ ನಾವು ಸ್ಮರಿಸಿಕೊಳ್ಳಬೇಕು.

ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ನಾಡು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿವೆ. ಹಲವು ಸಾಮ್ರಾಜ್ಯಗಳ ಆಳ್ವಿಕೆಯ ನಂತರ ಕನ್ನಡ ನಾಡಿನ ಅಸ್ತಿತ್ವ ಮೈಸೂರು ಸಂಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಸಮಗ್ರ ಕನ್ನಡಕ್ಕಾಗಿ ಕೆಲವು ಮಹನೀಯರು ಹೋರಾಟ ನಡೆಸಿದರು. ಇಂಥವರಲ್ಲಿ ರಾ.ಹ. ದೇಶಪಾಂಡೆ, ಶ್ರೀನಿವಾಸ್ ರಾವ್, ಆಲೂರು ವೆಂಕಟರಾಯ, ಡೆಪ್ಯೊಟಿ ಚೆನ್ನಬಸಪ್ಪ ಮೊದಲಾದವರು ಅಗ್ರಗಣ್ಯರು.

ದಕ್ಷಿಣ ಭಾಗದಲ್ಲಿ ಅಂದಿನ ಮೈಸೂರು ಸಂಸ್ಥಾನದ ಕೆಲವು ಹಿರಿಯರು, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರು ಕನ್ನಡದ ಬಗ್ಗೆ ಚಿಂತಿಸಿದರು. 1915 ರಲ್ಲಿ "ಕರ್ನಾಟಕ ಸಾಹಿತ್ಯ ಪರಿಷತ್ತು" ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಕನ್ನಡ ಗ್ರಂಥಗಳ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಮುಂತಾದ ಸವಾಲುಗಳನ್ನು ಗಟ್ಟಿತನದಿಂದ ಎದುರಿಸಿ ಕನ್ನಡಕ್ಕೊಂದು ನೆಲೆ ಕಲ್ಪಿಸುವಲ್ಲಿ ಸಾಹಿತ್ಯ ಪರಿಷತ್ತಿನ ಸಾಧನೆ ಅಗಾಧವಾದುದು.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅನಂತರ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳ ರಚನೆಗೆ ನಿರ್ಧರಿಸಿದ್ದರಿಂದ, ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956 ರ ನವಂಬರ್ 1 ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದರು. ಆಗ ಅದನ್ನು "ಮೈಸೂರು ರಾಜ್ಯ" ಎಂದು ಕರೆಯಲಾಯಿತು. ಮುಂದೆ 1973 ರ ನವಂಬರ್ 1 ರಂದು ಮೈಸೂರು ರಾಜ್ಯವು "ಕರ್ನಾಟಕ" ಎಂಬ ಹೆಸರು ಪಡೆಯಿತು.

ವಿದ್ಯಾರ್ಥಿ ಕಿರುಪರಿಚಯ
ನವ್ಯ, ಎನ್.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ