ಶುಕ್ರವಾರ, ನವೆಂಬರ್ 22, 2019

ಯಕ್ಷಗಾನ

ಚಿತ್ರ ಕೃಪೆ: ದಿ ಹಿಂದೂ

ಯಕ್ಷಗಾನ - ನೃತ್ಯ, ಹಾಡಗಾರಿಕೆ, ಮಾತುಗಾರಿಕೆ ಮತ್ತು ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. 

ಉಗಮ: ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ" ದಲ್ಲಿ (ಕ್ರಿ.ಶ. 1210) "ಜಕ್ಕ" ಎಂದು ಆಗಿದ್ದು, ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿಹೋಗಿರುವ ಗಾನ ಪದ್ಧತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪುಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. 1500 ರಷ್ಟರಲ್ಲಿ ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.

ಪ್ರಭೇದಗಳು: ಯಕ್ಷಗಾನದ ಇನ್ನೊಂದು ಪ್ರಮುಖ ಭಾಗವೆಂದರೆ "ತಾಳ ಮದ್ದಳೆ". ಬಯಲಾಟಗಳಿಗಿಂತ ಇದು ವಿಭಿನ್ನವಾದುದು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡುಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ. ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಸಾಮಾನ್ಯವಾಗಿ ಇದನ್ನು "ಆಟ" ಎಂದೂ ಕರೆಯುತ್ತಾರೆ.

ಯಕ್ಷಗಾನದ ಪ್ರಮುಖ ಅಂಶಗಳು ಹೀಗಿವೆ:
ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ.

ಪಾತ್ರಧಾರಿಗಳು: ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು.
ವೇಷಭೂಷಣ: ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳು ಇರುತ್ತವೆ. ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷಭೂಷಣಗಳಿಗಿಂತ ಭಿನ್ನವಾಗಿರುತ್ತದೆ.

ಭಾಗವತಿಕೆ: ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ.

ಮಾತುಗಾರಿಕೆ: ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತಪಡಿಸುತ್ತಾರೆಯೋ ಅದೇ ಭಾಗದ ಅರ್ಥವನ್ನು ಜನಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.

ವಿದ್ಯಾರ್ಥಿ ಕಿರುಪರಿಚಯ
ಅನ್ನಪೂರ್ಣ, ಎ.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ