ಬುಧವಾರ, ನವೆಂಬರ್ 6, 2019

ಸುಂದರವಾದ ಮೀನು

ಚಿತ್ರ ಕೃಪೆ: ವೆಕ್ಟರ್ ಸ್ಟಾಕ್
ಆಳವಾದ ನೀರಿನಲ್ಲಿ ಎರಡು ಚಿನ್ನದ ಮೀನುಗಳಿದ್ದವು. ಒಂದು ಮೀನು ಗಂಗಾ ನದಿಯಲ್ಲಿದ್ದರೆ ಮತ್ತೊಂದು ಮೀನು ಯಮುನಾ ನದಿಯಲ್ಲಿತ್ತು. ಒಂದು ದೊಡ್ಡ ಅಲೆ ಬಂದಾಗ ಎರಡೂ ಮೀನುಗಳು ಭೇಟಿಯಾದವು.

ಮೊದಲನೇ ಚಿನ್ನದ ಮೀನು ಹೇಳಿತು "ಹೇ.. ನಾನು ಇಡೀ ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಮೀನು". ಇದನ್ನು ಕೇಳಿದ ಎರಡನೇಯ ಮೀನು ಮೂತಿ ತಿರುಗಿಸುತ್ತಾ ಹೀಗೆ ಹೇಳಿತು "ಯಾರು ಮಾತಾಡುತ್ತಿರುವುದು? ಸರಿಯಾಗಿ ನೋಡು. ನೀನು ನಿನ್ನ ಪ್ರತಿಬಿಂಬವನ್ನು ನೋಡಿರುವೆಯಾ? ನಾನೇ ಬಹಳ ಸುಂದರವಾಗಿರುವ ಮೀನು". ಹೀಗೇ ವಾದ ವಿವಾದ ನಡೆದು ಅವರಿಬ್ಬರಲ್ಲಿ ಜಗಳ ಪ್ರಾರಂಭವಾಯಿತು.

ಅದೇ ಸಮಯಕ್ಕೆ ಒಂದು ಆಮೆ ಅಲ್ಲಿಗೆ ಬಂದಿತು. ಎರಡೂ ಮೀನುಗಳು ಆಮೆಯ ಹತ್ತಿರ ಹೋಗಿ ತಮ್ಮಿಬ್ಬರಲ್ಲಿ ಯಾರು ಅತ್ಯಂತ ಸುಂದರವಾಗಿರುವವರು ಎಂದು ತೀರ್ಮಾನಿಸಲು ಕೇಳಿದವು. ಆಮೆಯು ಇಬ್ಬರನ್ನೂ ಚೆನ್ನಾಗಿ ಗಮನಿಸಿ ಹೀಗೆ ಹೇಳಿತು "ನನಗೆ ತುಂಬಾ ಹಸಿವೆಯಾಗಿದೆ. ನಾನು ಎಷ್ಟು ಹಸಿದಿದ್ದೇನೆಂದರೆ ನಿಮ್ಮಿಬ್ಬರನ್ನೂ ಈಗಲೇ ತಿನ್ನುತ್ತೇನೆ.."

ಕೂಡಲೇ ಎರಡೂ ಮೀನುಗಳು ಜಗಳ ಮರೆತು ತಮ್ಮ ಜೀವವನ್ನು ಉಳಿಸಿಕೊಳ್ಳಲು ವೇಗವಾಗಿ ಈಜಿಕೊಂಡು ಹೊರಟುಹೋದವು.

ನೀತಿ: ಬೇಡದ ಜಗಳ ಅಪಾಯವನ್ನು ತಂದೊಡ್ಡುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ರೋಹಿಣಿ, ಎಂ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ