ಜಗತ್ತಿನ ಮುಂದುವರಿದ ದೇಶಗಳು ಪರಿಸರದ ಸ್ವಚ್ಛತೆಗೆ ತುಂಬಾ ಮಹತ್ವ ಕೊಟ್ಟಿವೆ. ಕಸ ಹಾಗೂ ಕೊಳಕು ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ನಗರಗಳನ್ನು ಹಾಗೂ ಜನರು ವಾಸಿಸುವ ಸ್ಥಳಗಳನ್ನು ಶುದ್ಧವಾಗಿಡಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಹೀಗೆ ಜನ ವಸತಿಯ ಪ್ರದೇಶವನ್ನು ಕೊಳಕು ಮುಕ್ತ ಮಾಡುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು. ತನ್ಮೂಲಕ ದೇಶದ ಪ್ರಗತಿಗೆ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ. ಬಹುಶಃ ಸ್ವಚ್ಛತೆಯನ್ನು ಪಾಲಿಸುತ್ತಿರುವುದರಿಂದಲೇ, ಅನೇಕ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ, ಸ್ವಚ್ಛತೆಗೆ ಮಹತ್ವ ನೀಡುತ್ತಿವೆ. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿವೆ. ಭಾರತ ದೇಶವೂ ಸ್ವಚ್ಛತೆಗೆ ಮಹತ್ವ ನೀಡಿದ್ದು, ಭಾರತ ಸರಕಾರವು ಸ್ವಚ್ಛತೆಯನ್ನು ಸಾಧಿಸಲು ಅನೇಕ ಮಹತ್ತರ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ.
ಗ್ರಾಮೀಣ ಜನತೆ ಹಾಗೂ ನಗರ ಪ್ರದೇಶದ ಕೊಳಗೇರಿ ನಿವಾಸಿಗಳಿಗೆ ಸ್ವಚ್ಛತೆಯ ಮಹತ್ವವನ್ನು ತಿಳಿಸಿಕೊಡಲು ಸರಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ. ರೇಡಿಯೋ ಹಾಗೂ ದೂರದರ್ಶನಗಳಂತಹ ಮಾಧ್ಯಮಗಳಲ್ಲಿ ಸ್ವಚ್ಛತೆಯ ಕುರಿತ ಜಾಹಿರಾತುಗಳು, ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಜನರಿಗೆ ಶೌಚಾಲಯಗಳ ನಿರ್ಮಾಣಕ್ಕೆ ಸರಕಾರವು ಅನುದಾನ ನೀಡುತ್ತದೆ. ಕೆಲ ದೊಡ್ಡ ಗ್ರಾಮಗಳಲ್ಲಿ, ಪಟ್ಟಣ ಹಾಗೂ ಬೃಹತ್ ನಗರ ಪ್ರದೇಶಗಳಲ್ಲಿ ಸರಕಾರವೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಜನರ ಉಪಯೋಗಕ್ಕೆ ಒದಗಿಸಿದೆ.
ಇದೇ ಅಕ್ಟೋಬರ್ 2 ಅಂದರೆ ಗಾಂಧೀ ಜಯಂತಿಯ ದಿನದಿಂದ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 'ಸ್ವಚ್ಛ ಭಾರತ' ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಮೂಲಕ, ಸರಕಾರದ ಅಧಿಕಾರಿಗಳೂ, ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಸಾಮಾನ್ಯ ಜನತೆ ಹೀಗೆ ಎಲ್ಲರು, ದೇಶದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಗಿದೆ. ಸ್ವಚ್ಛತಾ ಕಾರ್ಯವು ಸರಕಾರದ ಯೋಜನೆ ಅಥವಾ ಕೇವಲ ಕಸಗುಡಿಸುವ ಅಥವಾ ಸ್ವಚ್ಛತಾ ಕಾರ್ಯಕ್ಕಾಗಿಯೇ ನಿಯೋಜಿಸಲ್ಪಟ್ಟ ಕೆಲಸಗಾರರ ಕಾರ್ಯವಲ್ಲ. ಅದು ನಮ್ಮ-ನಿಮ್ಮೆಲ್ಲರ ಹೊಣೆಗಾರಿಕೆ. ನಮ್ಮ ನಮ್ಮ ದೇಹಗಳನ್ನು, ಧರಿಸುವ ಬಟ್ಟೆಗಳನ್ನು, ಕೋಣೆಯನ್ನು, ಮನೆಯನ್ನು, ಕೆಲಸ ಮಾಡುವ ಕಛೇರಿ/ಸ್ಥಳಗಳನ್ನು, ಪರಿಸರವನ್ನು ಸದಾ ಶುಚಿಯಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಾವೆಲ್ಲರೂ ನಮ್ಮ ನಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಂಡರೆ, ಇಡೀ ದೇಶವೂ ತಾನಾಗಿಯೇ ಸ್ವಚ್ಛವಾಗುತ್ತದೆ. ಈ ಮೂಲಕ, ನಾವು ಮಲೇರಿಯಾ, ಡೆಂಗಿ, ಕಾಲರ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಬರದಂತೆ ತಡೆಗಟ್ಟಬಹುದು. ತನ್ಮೂಲಕ ನಾವು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸಬಹುದು. ಇದರಿಂದ ನಮ್ಮ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಬಹುದು. ಅಷ್ಟೇ ಅಲ್ಲದೇ, ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರನ್ನು ಇನ್ನೂ ಹೆಚ್ಚು ಹೆಚ್ಚು ಆಕರ್ಷಿಸಬಹುದು. ಈ 'ಸ್ವಚ್ಛಭಾರತ ಅಭಿಯಾನ'ವು ಕೇವಲ ಸರಕಾರದ ಒಂದು ಯೋಜನೆಯಾಗದೇ, ಒಂದು ದೊಡ್ಡ ಮಟ್ಟದ ಆಂದೋಲನವಾಗಬೇಕು. ನಾವೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು. ಇದನ್ನು ನಮ್ಮ ಮೂಲಭೂತ ಕರ್ತವ್ಯವೆಂದು ಮನಗಾಣಬೇಕು. ಈ ಕಾರ್ಯಕ್ಕೆ ರಾಜಕೀಯವನ್ನು ಬೆರೆಸದೇ, ನಾವೆಲ್ಲರೂ ತನು, ಮನ, ಧನ ಅರ್ಪಿಸಿ ಸಹಕರಿಸಬೇಕು.
ನನ್ನ ದೃಷ್ಟಿಯಲ್ಲಿ, ಕೇವಲ ಭೌತಿಕ ಸ್ವಚ್ಛತೆ ಮಾತ್ರ ಸಾಲದು; ನಮ್ಮೆಲ್ಲರ ಮನಸ್ಸುಗಳೂ ಶುದ್ಧವಾಗಿರುವುದು ಅತ್ಯಗತ್ಯ. ದುರಾಸೆ, ಸ್ವಾರ್ಥ, ಅಪ್ರಾಮಾಣಿಕತೆ, ಭ್ರಷ್ಟತೆ ಇವುಗಳು ಮನಸ್ಸಿನ ಮಾಲಿನ್ಯ. ಮಲಿನಗೊಂಡ ಮನಸ್ಸು ಕೂಡ ದೇಶದ ಅಭಿವೃದ್ಧಿಗೆ ಮಾರಕ. ಹಾಗಾಗಿ ನಾವೆಲ್ಲರೂ ನಮ್ಮ ಅಂತಃಕರಣ ಶುದ್ಧಿಗೆ ಆಧ್ಯತೆ ನೀಡುವ ಅಗತ್ಯವೂ ಇದೆ. ಅಲ್ಲದೇ, ಭೌತಿಕ ಸ್ವಚ್ಛತೆಯನ್ನು ಹೊಂದಲು ಅಂತಃಶುದ್ಧಿಯು ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆ ಇದೆ. ನಮ್ಮ ಔಪಚಾರಿಕ ಶಿಕ್ಷಣದಲ್ಲಿ ಭೌತಿಕ ಹಾಗೂ ಮಾನಸಿಕ ಸ್ವಚ್ಛತೆಯ ಬಗೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಮನೆಯಲ್ಲಿ ತಂದೆ-ತಾಯಿಯರು ತಮ್ಮ ತಮ್ಮ ಮಕ್ಕಳಿಗೆ ಸ್ವಚ್ಛತೆಯ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿಕೊಡುವ ಅಗತ್ಯ ಇದೆ. ಇದು ದೇಶಕ್ಕಾಗಿ ನಮ್ಮೆಲ್ಲರ ಕರ್ತವ್ಯ. ಬನ್ನಿ, ನಾವೆಲ್ಲರೂ ಒಟ್ಟಾಗಿ 'ಸ್ವಚ್ಛ ಭಾರತ'ದ ನಿರ್ಮಾಣಕ್ಕೆ ಕೈ ಜೋಡಿಸೋಣ.
ಲೇಖಕರ ಕಿರುಪರಿಚಯ | |
ಶ್ರೀ ಶ್ರೀಧರ್ ಟಿ. ಎಸ್., ಅಬಸಿ ತಾವೊಬ್ಬ ಕನ್ನಡ ಅಭಿಮಾನಿ ಎಂದು ಹೆಮ್ಮೆಪಡುವ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ಬಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. Blog | Facebook | Twitter |
ನಿಮ್ಮೊಂದಿಗೆ ನಾವೂ ಇದ್ದೇವೆ.
ಪ್ರತ್ಯುತ್ತರಅಳಿಸಿನನಗೆ ತುಂಬಾ ಇಷ್ಟವಾಯಿತು
ಪ್ರತ್ಯುತ್ತರಅಳಿಸಿಧನ್ಯವಾದಗಳು
ಧನ್ಯವಾದಗಳು ಸೆರ್
ಪ್ರತ್ಯುತ್ತರಅಳಿಸಿಸೂಪರ್ 👍👍
ಪ್ರತ್ಯುತ್ತರಅಳಿಸಿಧನ್ಯವಾದಗಳು