ಮಂಗಳವಾರ, ನವೆಂಬರ್ 4, 2014

ಭಾವನೆಗಳಿಗೆ ಕಣ್ಣಿಲ್ಲ, ಬಾಯೂ ಇಲ್ಲ

ನಾನು ಒಬ್ಬ ವೈದ್ಯೆಯಾಗಿ ಗ್ರಾಂಥಿಕ ಬರವಣಿಗೆ ಬಾರದೆ ಇದ್ದರೂ, ಕಹಳೆಯಂತಹ ಅದ್ಭುತ ವೇದಿಕೆಯಲ್ಲಿ ಎಲ್ಲರೂ ಬರೆಯುವಾಗ ನನಗೂ ನನ್ನ ಒಂದು ಸುಂದರ ಅನುಭವ ನಿಮ್ಮಲ್ಲಿ ಬಿಚ್ಚಿಡುವ ಆಸೆ..

ಅದೊಂದು ದಿನ ನಾನು ನನ್ನ ಗೆಳೆಯರನ್ನು ಭೇಟಿ ಮಾಡಲು ಬೆಂಗಳೂರಿನ ಜಯನಗರಕ್ಕೆ ಹೋಗಲು ಶಾಂತಿನಗರದ ಬಸ್ಸಿನ ನಿಲ್ದಾಣಕ್ಕೆ ತೆರಳಿದೆ. ಅಲ್ಲಿ ಸದಾ ಜನರ ಹಾವಳಿ, ತಮಗೆಲ್ಲರಿಗೂ ಗೊತ್ತೇ ಇದೆ. ಪ್ರತಿಯೊಬ್ಬರಿಗೂ ಬಸ್ ಏರುವ, ಇಳಿಯುವ ಕಾತರ. ಜನರ ಗಿಜಿ-ಗಿಜಿ ಸದ್ದು; ಬಸ್ಸು, ಕಾರು ಇತ್ಯಾದಿಗಳ ಝೇಂಕಾರ. "ಅಯ್ಯೋ.. ಈ ಶಬ್ದ ಮಾಲಿನ್ಯದಿಂದ ನನ್ನ ಬಿಡುಗಡೆ ಎಂದು?" ಅಂತ ಯೋಚಿಸುತ್ತಾ ಬಸ್‌ಗಾಗಿ ಕಾಯುತ್ತಾ ನಿಂತೆ.

ಆದರೆ, ನಿಂತವಳು ಅರ್ಧ ಗಂಟೆ ಹಾಗೆಯೇ ನಿಂತು ಬಿಟ್ಟೆ!

ಯಾಕಂತೀರ? ನನ್ನ ಮುಂದೆ ಮೂವರು ವ್ಯಕ್ತಿಗಳು ನಿಂತು ಮಾತನಾಡುತ್ತಿದ್ದರು. "ಅದರಲ್ಲೇನಿದೆ ವಿಶೇಷ? ಬೇಗ ವಿಷಯ ಏನು ಹೇಳು.." ಅಂತ ಬೈಕೋಬೇಡಿ. ಮೂರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಕುರುಡ, ಮಿಕ್ಕ ಇಬ್ಬರು ಮೂಗರು.


ಈಗ ನೀವೇ ಊಹಿಸಿಕೊಳ್ಳಿ ಅವರ ಮಧ್ಯೆ ಹೇಗೆ ಮಾತುಕತೆ ನಡೆಯುತ್ತಿರಬಹುದು ಎಂದು..

ಅದ್ದನ್ನೇ ನಾನೂ ಸಹ ಕುತೂಹಲದಿಂದ ನೋಡುತ್ತಾ ಮೈಮರೆತಿದ್ದು, ಹಾಗೂ 5-6 ಬಸ್ಸುಗಳನ್ನು ಹತ್ತದೇ ಬಿಟ್ಟದ್ದು. ಅವರು ಮಾತನಾಡಿಕೊಳ್ಳುತ್ತಿದ್ದುದು ಹೇಗೆಂದರೆ, ಮೂಗರಿಬ್ಬರೂ ಕುರುಡನ ಹತ್ತಿರ ಮಾತನಾಡುವಾಗ ಕುರುಡನ ಕೈ ಹಿಡಿದು ಮೂಗರ ಮುದ್ರಾ ಸಂಭಾಷಣೆಯನ್ನು ಕುರುಡನ ಕೈಗಳಲ್ಲಿ ಮೂಡಿಸುತ್ತಿದ್ದರು ಹಾಗೂ ಮೂಗರ ನಡುವಿನ ಸಂಭಾಷಣೆಯನ್ನೂ ಕುರುಡನ ಕೈಯಲ್ಲಿ ಮುದ್ರಿಸುತ್ತಾ ಎಲ್ಲರಿಗೂ (3 ಜನರಿಗೂ) ಅರ್ಥವಾಗುವಂತೆ ಅತಿ ವೇಗದಲ್ಲಿ ಸಂಭಾಷಣೆ ನಡೆಸುತ್ತಿದ್ದರು. ನಂತರ ಕುರುಡ ವ್ಯಕ್ತಿ ತೆರಳಬೇಕಾದ ಜಾಗಕ್ಕೆ ಬಸ್ಸು ಬಂದಾಗ ಮೂಗರು ಅವನನ್ನು ಬಸ್ಸು ಹತ್ತಿಸಿ ತಮ್ಮ ಮೂಕರ ಸನ್ನೆಯ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾ ಬಹಳ ಖುಷಿಯಿಂದ ಅಲ್ಲಿಂದ ಹೋರಟು ಹೋದರು.

ನಿಜ ಹೇಳಬೇಂಕಂದ್ರೆ, ನಾನು ದಿಗ್ಭ್ರಾಂತಳಾಗಿ ನಿಂತಿದ್ದೆ! ನನಗೆ ಬರಹದಲ್ಲಿ ವಿವರಿಸುವುದೇ ಕಷ್ಟ ಅನ್ನಿಸುತ್ತಿದೆ; ಆದರೆ, ಅವರ ಮಧ್ಯದ ಮಾತಿನ ರಭಸ ಹಾಗೂ ಭಾವನೆಗಳ ಹಂಚಿಕೆಯ ಸ್ವರೂಪ ಸಹಜ ಸುಂದರವಾಗಿತ್ತು. ನಾವು ದೇವರನ್ನು ಸದಾ ದೂರುತ್ತೇವೆ - ನನಗೆ ಇದಿಲ್ಲ, ಅದಿಲ್ಲ.. ಅಂತ. ಆದರೆ, ನ್ಯೂನತೆಯಲ್ಲೂ ನೈಪುಣ್ಯತೆ ಬೆಳೆಸಿಕೊಂಡಿದ್ದ ಅವರೆಲ್ಲರನ್ನು ಕಂಡ ನನಗೆ ಆಶ್ಚರ್ಯದ ಜೊತೆಗೆ ನಾಚಿಕೆ, ನನ್ನ ಮೇಲೆಯೇ ನನಗೆ ಬೇಜಾರು, ಎಲ್ಲವೂ ಆಯಿತು! ನಾವೆಂದೂ ಯಾವ ಕೆಲಸವನ್ನೂ ನನ್ನಿಂದ ಆಗದು.. ಎಂದು ಹೇಳಬಾರದು ಅಂದುಕೊಂಡೆ. ಮತ್ತೆ ಅನಿಸಿತು.. ಪ್ರೀತಿಗಷ್ಟೇ ಅಲ್ಲ, ಭಾವನೆಗಳಿಗೂ ಸಹ ಕಣ್ಣೂ ಬೇಡ, ಬಾಯಿಯೂ ಬೇಡ.. ಮನಸ್ಸೊಂದಿದ್ದರೆ ಸಾಕು, ಸಹಬಾಳ್ವೆಗೆ.

ನನ್ನ ನಮನ ನನ್ನ ದೇಶದ ಪ್ರತಿಯೊಬ್ಬ ವಿಕಲ ಚೇತನನಿಗೆ. ಜೈ ಭಾರತ, ಜೈ ಕರ್ನಾಟಕ..

ಲೇಖಕರ ಕಿರುಪರಿಚಯ
ಡಾ. ದಿವ್ಯಾ ವಿಶ್ವೇಶ್ವರಯ್ಯ

ಇವರು ವೃತ್ತಿಯಲ್ಲಿ ಪಶುವೈದ್ಯರಾಗಿ, ಜೈವಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಚಿನ್ನದ ಪದಕ ಪಡೆಯುವುದರೊಂದಿಗೆ ಮುಗಿಸಿ, ಪ್ರಸ್ತುತ ಪಶುವೈದ್ಯಾಧಿಕಾರಿಯಾಗಿ ಸೋಮವಾರಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಅಬ್ಬಾ ಇದನ್ನು ಕಲ್ಪಿಸಿಕೊಳ್ಳಲೂ ಕಷ್ಟವೆನಿಸುತ್ತಿದೆ.. ಅವರು ಅದನ್ನು ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ ಎಂದರೆ ನಿಜಕ್ಕೂ ಶ್ಲಾಘನೀಯ. ಚಿಕ್ಕದಾದರು ಚೊಕ್ಕ ಬರಹ. ಹೀಗೇ ಬರೆಯುತ್ತಿರಿ.

    ಪ್ರತ್ಯುತ್ತರಅಳಿಸಿ
  2. DR DIVYA VISVESHWARAIAH'S ABOVE EXPERIENCE/OBSERVATION WRT PHYSICALLY CHALLENGED, IS VERY TOUCHING AND VERY EDUCATIVE TO US. AS ENGLISH PROVERB SAYS " WHERE THERE IS A WILL THERE IS ALWAYS A WAY". EVERY HUMAN HAS GOT STRENGTH ESPECIALLY PHYSICALLY CHALLENGED HAS GOT MORE STRENGTH WRT HIS ACHIEVING GOAL. OUR SPECIAL THANKS TO DR DIVYA & KAHALE TEAM IN PUBLISHING THIS ON THIS RAJYOTHSAVA OCCASION.
    REGARDS,
    S NARAYANAN,
    (HORA RAJYADA KANNADA ABHIMANI)
    NEW PANVEL.(MAHARASHTRA)

    ಪ್ರತ್ಯುತ್ತರಅಳಿಸಿ