ಶುಕ್ರವಾರ, ನವೆಂಬರ್ 14, 2014

ಕವಣೆ

ಮುಖ ತೊಳೆದು, ಸಿದ್ಧವಾಗಿದ್ದ ರಾಗಿರೊಟ್ಟಿಯ ಬುತ್ತಿ ಕಟ್ಟಿಕೊಂಡು, ಎಮ್ಮೆ ಓಡಿಸಿಕೊಂಡು ಕೆಂಪ ಮತ್ತು ಮಂಜು ಎಮ್ಮೆ ಮೇಯಿಸಲು ಹೊರಟರು. ಯಥಾಪ್ರಕಾರ, ಎಮ್ಮೆಗೆ ನೀರು ಕುಡಿಸುವ ಸ್ಥಳದಲ್ಲಿ ಒಂದು ಗುಬ್ಬಚ್ಚಿಯ ಗೂಡನ್ನು ನೋಡುತ್ತಿದ್ದರು. ಆ ದಿನ ಗುಬ್ಬಚ್ಚಿಯು ಇರಲಿಲ್ಲ. ಆದ್ದರಿಂದ ಹತ್ತಿರ ಹೋಗಿ ನೋಡುತ್ತಾರೆ.

ಹಾಗೆ ನೋಡುತ್ತಿದ್ದಾಗ ಪಕ್ಕದಲ್ಲಿರುವ ಪೊದೆಯಲ್ಲಿ ಗುಬ್ಬಚ್ಚಿಯು ಕಾಣುತ್ತದೆ. ಕೆಂಪ ಕಲ್ಲೊಂದನ್ನು ತೆಗೆದುಕೊಂಡು ಕವಣೆಯಲ್ಲಿ ಹಾಕಿ ಹೊಡೆಯಲು ಹೋಗುತ್ತಿದ್ದಾಗ, ಮಂಜು 'ಗೂಡಿನಲ್ಲಿ ಮರಿಗಳಿವೆ. ಬೇಡ ಕಣೋ' ಅನ್ನುತ್ತಾನೆ.  ಈ ರೀತಿ ಹೇಳುತ್ತಿರುವಾಗಲೇ ಗುಬ್ಬಿಯು ಅಲ್ಲಿಗೆ ಬರಲು, ಕೆಂಪನು ಕವಣೆಯಿಂದ ಹೊಡೆದ ಕಲ್ಲು ಗುಬ್ಬಿಗೆ ತಾಗಿ, ಗುಬ್ಬಿಯು ಕೆಳಗೆ ಬಿದ್ದಿತು.

ಕಲೆ: ಕಹಳೆ ತಂಡ
ಇಬ್ಬರೂ ಗುಬ್ಬಿಯ ಹತ್ತಿರಕ್ಕೆ ಧಾವಿಸುತ್ತಾರೆ. ಕೆಂಪನು 'ಬಿದ್ದಿತು ಗುಬ್ಬಿ' ಎಂದು ಸಂತೋಷದಿಂದ ಕುಣಿದರೆ, ಮಂಜು 'ಅಯ್ಯೋ, ಗುಬ್ಬಿಯು ಕೆಳಗೆ ಬಿದ್ದಿತಲ್ಲ' ಎಂದು ವೇದನೆಯಿಂದ ನೋಡುತ್ತಾನೆ. ಮಂಜು 'ರೆಕ್ಕೆ ಮುರಿದಿದೆ, ಆದರೆ ಜೀವ ಇನ್ನೂ ಇದೆ' ಎಂದಾಗ ಕೆಂಪ, 'ನನ್ನ ಹೊಡೆತಕ್ಕೆ ಇದು ಹೇಗೆ ತಪ್ಪಿಸಿಕೊಂಡಿತು ಎಂಬುದೇ ಅರ್ಥವಾಗುತ್ತಿಲ್ಲ' ಎಂದನು. ಆಗ ಮಂಜು ಕೆಂಪನಿಗೆ ಹಿಡಿ ಶಾಪ ಹಾಕುತ್ತಾ, ಎಮ್ಮೆಗೆ ನೀರು ಕುಡಿಸುವ ಜಾಗಕ್ಕೆ ಗುಬ್ಬಿಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ನೀರನ್ನು ಕುಡಿಸುತ್ತಾನೆ. ಕೆಂಪ 'ಕೊಡೋ ಇಲ್ಲಿ ಅದನ್ನ' ಎಂದಾಗ ಮಂಜು 'ಇದನ್ನ ನಿನಗೆ ಕೊಡೋಕ್ಕೆ ಆಗಲ್ಲ. ಗುಬ್ಬಿ ಇನ್ನೂ ಜೀವಂತವಾಗಿದೆ. ಇದನ್ನು ಕಾಪಾಡಬೇಕು' ಎಂದನು.

ಮಂಜು ಗುಬ್ಬಿಗೆ ನೀರು ಕುಡಿಸಿ, ಕರವಸ್ತ್ರದೊಳಗೆ ಅದನ್ನು ಸುತ್ತಿ 'ಇದನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋಗುವೆ' ಎಂದನು.  ಅದಕ್ಕೆ ಕೆಂಪ 'ಗುಬ್ಬಿಯನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋದರೆ ಊರಲ್ಲಿ ಜನರೆಲ್ಲಾ ನಗ್ತಾರೆ ಅಷ್ಟೇ' ಎಂದನು. ಮಂಜು, 'ಯಾರು ಏನೇ ಹೇಳಿದರೂ ನಾನು ತೆಗೆದುಕೊಂಡು ಹೋಗುವೆ' ಎಂದು ಅದನ್ನು ಅಂಗಿಯ ಜೇಬಿನಲ್ಲಿ ಹಾಕಿಕೊಳ್ಳುತ್ತಿರುವಾಗ ಕೆಂಪ 'ಸರಿ, ಇದನ್ನು ಕಾಪಾಡಬಹುದು, ಆ ಗೂಡಿನಲ್ಲಿರುವ ಮರಿಗಳನ್ನು ಯಾರು ನೋಡುತ್ತಾರೆ' ಎಂದು ಹೇಳುತ್ತಲೇ ಇಬ್ಬರೂ ಆ ಗೂಡಿನ ಕಡೆಗೆ ನಡೆದರು.

ಮಂಜು 'ನೀನು ನೆಲದಲ್ಲಿ ಯಾವಾದರೂ ಹುಳುಗಳು ಸಿಕ್ಕರೆ ಹಿಡಿದುಕೊಂಡು ಬಾ ಹೇಳುತ್ತೇನೆ' ಎಂದಾಗ ಕೆಂಪ 'ಸರಿ' ಎಂದು ಹುಡುಕಲು ಹೋದಾಗ ಮರದಲ್ಲಿ ಒಂದು ಹುಳು ಸಿಕ್ಕಿತು. ಮಂಜು ಕಡ್ಡಿಯಿಂದ ಆ ಹುಳುವನ್ನು ಮರಿಗಳಿಗೆ ಕೊಡುತ್ತಾ 'ಈ ಮರಿಗಳಿಗೆ ಇಷ್ಟು ಆಹಾರ ಸಾಕು, ಗುಬ್ಬಿಯನ್ನು ನಾನು ವೈದ್ಯರ ಹತ್ತಿರ ಕರೆದುಕೊಂಡು ಹೋಗುತ್ತೇನೆ, ಎಮ್ಮೆಗಳನ್ನು ನೀನು ಓಡಿಸಿಕೊಂಡು ಹೋಗು' ಎಂದನು. ಕೆಂಪ ಎಮ್ಮೆಗಳನ್ನು ಮೇಯಿಸಿಕೊಂಡು ಮನೆಗೆ ಹೋದನು. ಇಲ್ಲಿ ಮಂಜು ಗುಬ್ಬಿಯನ್ನು ವೈದ್ಯರ ಬಳಿ ತೋರಿಸಿದನು. ವೈದ್ಯರು ಗುಬ್ಬಿಯನ್ನು ಪರೀಕ್ಷಿಸಿ 'ಇದಕ್ಕೆ ಹೆಚ್ಚೇನೂ ಪೆಟ್ಟು ಬಿದ್ದಿಲ್ಲ. ಆದರೂ ಬ್ಯಾಂಡೇಜ್ ಹಾಕಿದ್ದೇನೆ. ಇದು ಸರಿಯಾಗಲು ಸುಮಾರು ಒಂದು ವಾರ ಬೇಕಾಗುತ್ತದೆ' ಎಂದರು. ಮಂಜು 'ಇದರ ಮರಿಗಳು?' ಎಂದು ಪ್ರಶ್ನಿಸಲು, ವೈದ್ಯರು 'ಅವುಗಳು ಇಷ್ಟೊತ್ತಿಗೆ ಆಹಾರವಿಲ್ಲದೆ ಜೀವ ಬಿಟ್ಟಿರುತ್ತದೆ' ಎಂದರು. ಆಗ ಮಂಜು 'ನಾವು ಅವುಗಳಿಗೆ ಬೇಕಾದ ಆಹಾರವನ್ನು ನೀಡಿ ಬಂದಿದ್ದೇವೆ ಡಾಕ್ಟರೆ' ಎಂದಾಗ ವೈದ್ಯರು 'ಹಾಗಾದರೆ ಒಂದು ವಾರ ಆ ಮರಿಗಳಿಗೆ ಅದೇ ರೀತಿ ಆಹಾರ ನೀಡಿ' ಎಂದರು.

ನಂತರ ಮಂಜು ಗುಬ್ಬಿಯನ್ನು ಮನೆಗೆ ಒಯ್ದನು. ಮನೆಯಲ್ಲಿ ಅತ್ತೆ, ಅಕ್ಕಂದಿರು, 'ಎಲ್ಲಿಗೆ ಹೋಗಿದ್ದೆ' ಎಂದು ಕೇಳಿದರು. ಮಂಜು ನಡೆದ ವಿಷಯವನ್ನು ತಿಳಿಸಿ 'ಅಣ್ಣ ಎಲ್ಲಿ' ಎಂದು ಕೇಳಿದನು. ಅಕ್ಕ 'ಹೊಲಕ್ಕೆ ಹೋಗಿದ್ದಾನೆ' ಎನ್ನಲು, ಮಂಜು 'ಅಣ್ಣನನ್ನು ನಾನು ನೋಡಬೇಕಿತ್ತು' ಎಂದು ಓಡಿ ಹೋದನು. ಕೆಂಪನು ಹೊಲದಲ್ಲಿ ನಿಂತಿದ್ದ. ಮಂಜು 'ಅಣ್ಣಾ' ಎಂದು ಕೂಗಿದನು. ಕೆಂಪನು ತಿರುಗಿ ನೋಡಿದನು. ಮಂಜು 'ನಾವು ಈಗಲೇ ಗುಬ್ಬಿಯ ಮರಿಗಳನ್ನು ನೋಡಬೇಕು, ಬೇಗ ಬಾ ಹೋಗೋಣ' ಎಂದನು. ಕೆಂಪ 'ಯಾಕೆ, ಏನಾಯಿತು? ವೈದ್ಯರು ಏನು ಹೇಳಿದರು?' ಎಂದು ಕೇಳಿದ.  ಮಂಜು 'ಗುಬ್ಬಿ ಸರಿ ಹೋಗಲು ಇನ್ನೂ ಒಂದು ವಾರ ಆಗುತ್ತದೆ ಅಂದರು ವೈದ್ಯರು. ಆ ಮರಿಗಳ ಪರಿಸ್ಥಿತಿಗೆ ನೀನೇ ಕಾರಣನಾಗಿದ್ದೀಯ, ಏಕೆಂದರೆ ನೀನು ತಾನೆ ಗುಬ್ಬಿಯನ್ನು ಕವಣೆ ಹೊಡೆದು ಬೀಳಿಸಿದ್ದು. ಅದಕ್ಕೆ ನೀನೇ ಆ ಮರಿಗಳಿಗೆ ಒಂದು ವಾರಕ್ಕೆ ಬೇಕಾದ ಆಹಾರವನ್ನು ಹುಡುಕಿಸಿಕೊಡಬೇಕು. ಬೇಗ ಬಾ ಅಣ್ಣ ಹೋಗೋಣ. ದಾರಿಯಲ್ಲಿ ಯಾವುದಾದರು ಹುಳು ಸಿಕ್ಕಿದರೆ ಹಿಡಿದುಕೊ, ಬಾ ಹೋಗುವ' ಎಂದನು.

ಕೆಂಪ 'ಇದು ಒಳ್ಳೆ ಸಮಸ್ಯೆ ಅಯಿತಲ್ಲಪ್ಪ, ಸರಿ ಬಾ ಹೋಗೋಣ ಆ ಜಾಗಕ್ಕೆ', ಎಂದು ಇಬ್ಬರು ನಡೆದರು. ಅವರಿಗೆ ದಾರಿಯಲ್ಲಿ ಎರಡು ಹುಳುಗಳು ಸಿಕ್ಕಿದವು. ಮೊದಲು ಆಹಾರ ನೀಡಿದ ರೀತಿಯಲ್ಲಿಯೇ ಆ ಮರಿಗಳಿಗೆ ಹುಳುಗಳನ್ನು ತಿನ್ನಿಸಿದರು. ಮರಿಗಳಿಗೆ ಹುಳುಗಳನ್ನು ನೀಡಿ ಬಂದ ಬಳಿಕ ಇಬ್ಬರೂ ಮನೆಗೆ ಬಂದು ಸೇರಿದರು. ಮನೆಯಲ್ಲಿ ಅಕ್ಕ ಆ ಗುಬ್ಬಿಗೆ ಸ್ವಲ್ಪ ರಾಗಿ ಕಾಳನ್ನು ನೀಡಿ, ಜೊತೆಗೆ ಕುಡಿಯಲು ನೀರನ್ನೂ ಇಟ್ಟಿದ್ದಕ್ಕೆ ಗುಬ್ಬಿಯು ಸ್ವಲ್ಪ ಮಟ್ಟಿಗೆ ಸುಧಾರಿಸಿತು. ಕೆಂಪ 'ಗುಬ್ಬಿ ಸತ್ತಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಇದು ಜೀವಂತ ಆಗಿಬಿಟ್ಟಿತಲ್ಲಪ್ಪ. ಇದನ್ನಲ್ಲದೆ, ಇದರ ಮರಿಗಳನ್ನು ಸಹ ನಾನೇ ನೋಡಿಕೊಳ್ಳಬೇಕು' ಎಂದು ಬೇಸರದಿಂದ ನುಡಿದನು.

ಅದನ್ನು ಕೇಳಿಸಿಕೊಂಡ ಅಕ್ಕ 'ಆ ಗುಬ್ಬಿಯನ್ನು ನೀನು ಕವಣೆಯಿಂದ ಹೊಡೆಯದೆ ಇದ್ದಿದ್ದರೆ, ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ' ಎಂದಳು. ಕೆಂಪ ಮತ್ತು ಮಂಜು ಇಬ್ಬರೂ ಒಂದು ವಾರ ಗುಬ್ಬಿ ಮತ್ತು ಅದರ ಮರಿಗಳ ಸೇವೆ ಮಾಡಿದರು. ದಿನಗಳು ಕಳೆದು, ವಾರದ ಕಡೆಯ ದಿನವೂ ಬಂದಿತು. ಆ ಮುಂಜಾನೆ ಗುಬ್ಬಿಯು ಸ್ವಲ್ಪ ಸ್ವಲ್ಪವಾಗಿ ರೆಂಬೆ ಕೊಂಬೆಗಳಿಗೆ ಹಾರಲು ಪ್ರಯತ್ನಿಸಿ ಪ್ರಯತ್ನಿಸಿ, ಕೊನೆಗೂ ಯಶಸ್ವಿಯಾಯಿತು. ಮಂಜು ಮತ್ತು ಕೆಂಪ ಮುಂಜಾನೆ ಎದ್ದು ಕುಳಿತು ಗುಬ್ಬಿ ಹಾರಿ ಹೋಗುತ್ತಿದ್ದ ಸನ್ನಿವೇಶವನ್ನು ನೋಡುತ್ತಿದ್ದರು. ಆಗ ಕೆಂಪ ಗುಬ್ಬಿಯ ಕಷ್ಟ ನೋಡಲಾಗದೆ 'ಇನ್ನೊಮ್ಮೆ ಈ ಕವಣೆಯನ್ನು ನಾನು ಮುಟ್ಟುವುದೇ ಇಲ್ಲ' ಎಂದು ನುಡಿದನು. ಮಂಜು ಮನಸ್ಸಿನಲ್ಲೇ ಸಂತಸ ಪಡುತ್ತಾ ನಿಟ್ಟುಸಿರು ಬಿಟ್ಟನು.

ಲೇಖಕರ ಕಿರುಪರಿಚಯ
ಆಶಾ ಪ್ರಸಾದ್

ಭದ್ರಾವತಿಯಲ್ಲಿ ಹುಟ್ಟಿ ಬೆಳೆದಿರುವ ಇವರು ತಮ್ಮ ಶಿಕ್ಷಕರ ಸ್ಪೂರ್ತಿಯಿಂದ ಕನ್ನಡವನ್ನು ಐಚ್ಛಿಕ ವಿಷಯವಾಗಿ ಕಲಿತು, ಪ್ರಸ್ತುತ ಕನ್ನಡ ಸಾಹಿತ್ಯದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ