ನಾನು ಹತ್ತಬೇಕಾದ ನಿಲ್ದಾಣದಲ್ಲಿ ನಾನಾಗಲೇ ಕಾಯುತ್ತಾ ನಿಂತಿದ್ದೆ. ಏಕೆಂದರೆ ಒಮ್ಮೆ ಈ ಬಸ್ಸು ತಪ್ಪಿದರೆ ಇನ್ನೂ ಹದಿನೈದು ನಿಮಿಷ ಕಾಯುವ ವ್ಯವಧಾನ ಖಂಡಿತ ನನಗಿಲ್ಲ. ತಲುಪಬೇಕಾದ ಸ್ಥಳ ಸುಮಾರು ಮುಕ್ಕಾಲು ಘಂಟೆಯ ಸಮಯಯನ್ನು ಒಳಗೊಂಡಿದ್ದರಿಂದ ಯಾವಾಗಲೂ ತೇಜಸ್ವಿಯವರದ್ದೋ ಇಲ್ಲ ಯಂಡಮೂರಿಯವರದ್ದೋ ಪುಸ್ತಕಗಳು ಬ್ಯಾಗಿನ ಒಳಗಿರುತ್ತಿದ್ದವು. ನೋಡುತಿದ್ದಂತೆ ನನ್ನ ಬಸ್ಸು ಬಂದಿತು. ನಿರ್ವಾಹಕ 'ಉಡುಪಿ , ಉಡುಪಿ....' ಎಂದೊಮ್ಮೆ ಜೋರಾಗಿ ಕೂಗಿದ. ನಾನೂ ಸೇರಿದಂತೆ ಒಂದೈದು ಜನ ಹತ್ತಿಕೊಂಡೆವು. ಹಿಂದಿನ ಮೂಲೆಯ ಕಿಟಕಿಯ ಪಕ್ಕದ ಸೀಟ್ ಹಿಡಿಯುವುದು ಅಭ್ಯಾಸ. ಹತ್ತಿದ ಕೆಲವೇ ಕ್ಷಣಗಳಿಗೆ ನನ್ನ ಟಿಕೆಟ್ ನನ್ನ ಕೈ ಸೇರಿತ್ತು. ಮಾಮೂಲಿ ಅಭ್ಯಾಸದಂತೆ ಬ್ಯಾಗಿನೊಳಕ್ಕೆ ಕೈ ಹಾಕಿದೆ ತಕ್ಷಣಕ್ಕೇನೂ ಸಿಗಲಿಲ್ಲ. ಮತ್ತೊಮ್ಮೆ ಕೈಯಾಡಿಸಿದೆ ಈ ಬಾರಿ ಆಶ್ಚರ್ಯಗೊಳ್ಳಲೇ ಬೇಕಾದ ಸರದಿ ನನ್ನದಾಗಿತ್ತು. ಮೊದಲ ಬಾರಿಗೆ ನಾನು ಯಾವುದೇ ಕಾದಂಬರಿ ಇಲ್ಲದೇ ಬಸ್ಸು ಹತ್ತಿದ್ದೆ! . ಎಫ್.ಎಂ. ಕೇಳುವ ಹವ್ಯಾಸ ನನಗಿರಲಿಲ್ಲ. ಮೊದಲ ಬಾರಿಗೆ ನಾನೆಂದೂ ಬಿಡುವಾಗಿ ಮಾಡದ ಕೆಲಸವೊಂದನ್ನು ಮಾಡಹತ್ತಿದೆ. ಅದು 'ಯೋಚನೆ' - ನಾನು ಯೋಚನೆ ಮಾಡಹತ್ತಿದೆ!!
ನನ್ನ ಯೋಚನೆಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ರಾಜ್ಯ, ರಾಷ್ಟ್ರ, ಕಾಲೇಜು ಹೀಗೇ ಎಲ್ಲೆ ಇಲ್ಲದಂತೆ ಯಾವುದೇ ಕೊನೆಯಿಲ್ಲದೇ ವೇಗವಾಗಿ ಅನಂತವಾಗಿ ಸಾಗಿದ್ದವು. ಒಮ್ಮೆ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ನೋಡಿದೆ ಎಲ್ಲೋ ನೋಡಿದಂತಿದೆ.... ಅರೇ ಇವರು ನನ್ನ ಹಳೇ ಶಾಲೆಯ ಟೀಚರ್ ಅಲ್ಲವೇ? ಸರಿ ಮತ್ತೇನೂ ಮಾಡಲಾಗದೆ ಅವರನ್ನೊಮ್ಮೆ ಮಾತನಾಡೋಣ ಎನ್ನಿಸಿತು. ಸ್ಡಲ್ಪ ಮುಜುಗರವಾದರೂ ನಾನೇ ಶುರು ಮಾಡಿದೆ...
'ಹಾಯ್ ಸರ್' ಬಲಗೈ ಎತ್ತಿ ಒಮ್ಮೆ ಆಡಿಸಿದೆ.
'ಹಾಯ್....' ನನ್ನಲ್ಲಿ ಉಂಟಾದ ಸಮಾನ ಆಶ್ಚರ್ಯ ಅವರಿಗಾಗಿತ್ತು. ಬೆಂಗಳೂರಿನಲ್ಲಿ ಇರಬೇಕಾದ ಅವರು ಅಚಾನಕ್ಕಾಗಿ ಇಲ್ಲಿರುವುದು ನನಗೂ ಆಶ್ಚರ್ಯ ಉಂಟುಮಾಡಿತ್ತು. ಕೆಲವು ಕ್ಷಣಗಳವರೆಗೆ ನಾವಿಬ್ಬರೂ ಹಳೆಯ ಶಾಲೆಯ ಬಗ್ಗೆ, ಈಗಿನ ಸಮಾರಂಭ-ಅತಿಥಿಗಳ ಆಗಮನ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆವು. ಆದರೆ ನನ್ನ ಗಮನಕ್ಕೆ ಬಂದ ಒಂದು ವಿಷಯವೆಂದರೆ ನಾನು ಬಂದಮೆಲೂ ಏನೂ ಬದಲಾವಣೆ ಆಗಿರಲಿಲ್ಲ. ಎಲ್ಲವೂ ಕರಾರುವಕ್ಕಾಗಿ ನಾನು ಹಿಂದೆ ಅನುಭವಿಸಿದ - ಭಾಗಿಯಾಗಿದ್ದ ಘಟನೆಗಳೇ ನೆಡೆದಿದ್ದವು ಅನ್ನಿಸುತ್ತಿತ್ತು. ಹೇಗೆ...?
'ಟಣ್...!!'
ಸದ್ದಾದೆಡೆಗೆ ನೋಡಿದೆ. ಲಿಖಿತ್.... ನನ್ನ ಹಳೆಯ ಶಾಲೆಯ ಅತ್ಯಾಪ್ತ ಗೆಳೆಯ. ಆದರೆ ಅವನಿಲ್ಲಿ?? ಒಂದೇ ಬಾರಿಗೆ ಹಳೆಯ ಶಾಲೆಯ ಇಬ್ಬರು ವ್ಯಕ್ತಿಗಳು? ಈ ಬಾರಿ ನನ್ನ ಎದೆ ಬಡಿತ ಹೆಚ್ಚಾದದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಆಶ್ಚರ್ಯದೊಂದಿಗೆ ಪಕ್ಕಕ್ಕೆ ನೋಡಿದೆ.. ಅರೇ ಯಾರೂ ಇಲ್ಲ!! ನನ್ನ ಹಳೆಯ ಶಿಕ್ಷಕರು, ಅವರು ಇಲ್ಲೇ ಇದ್ದರು ಈಗತಾನೇ ಆದರೆ ಈಗ.. ನನ್ನ ಯೋಚನೆ ಮುಗಿಯುವಷ್ಟರಲ್ಲಿಯೇ ಲಿಖಿತ್ ಬಂದು ಮಾಮೂಲಿಯಂತೆ ಕೈ ಬೀಸಿ ಹಾಯ್ ಎಂದ. ನಾನೂ ಅಭ್ಯಾಸದಂತೆಯೇ ಒಮ್ಮೆ ಕೈ ಬೀಸಿ ಇಲ್ಲಿ ಕರೆದೆ. ನನ್ನ ಬಳಿಗೆ ಬಂದಾಕ್ಷಣ ನಾನೇ ಮೊದಲು ಮಾತು ಪ್ರಾರಂಬಿಸಿದೆ.
'ಹಾಯ್. ನಮ್ಮ ಶಾಲೆಯ ಶಿಕ್ಷಕರು ಇಲ್ಲಿಯೇ ಪಕ್ಕದಲ್ಲಿಯೇ ಇದ್ದರು ನೋಡಿದೆಯಾ?'
'ಯಾರು?? ನಿನ್ನ ಪಕ್ಕದಲ್ಲಿಯೇ ಯಾರೂ ಇರಲಿಲ್ಲವಲ್ಲ! ನಿನ್ನ ಸುತ್ತಮುತ್ತ ಯಾರೂ ಇರಲಿಲ್ಲ ಅದಕ್ಕೇ ನಿನ್ನನ್ನು ಗುರುತಿಸಲು ಸಾಧ್ಯವಾಗಿದ್ದು!' ಆಶ್ಚರ್ಯವಾದರೂ ಆಗ ನೆಡೆದಿದ್ದು ನನ್ನ ಭ್ರಮೆ ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದಾದ ಮೇಲೆ ಸ್ವಲ್ಪ ಹೊತ್ತು ಅದೇ ಹಳೆಯ ನೆನಪುಗಳಿಗೆ ಬಣ್ಣ ಕೊಟ್ಟೆವು. ಜಾಸ್ತಿ ಹೊತ್ತಾಗತೊಡಗಿತ್ತು. ಆದರೆ ನನ್ನ ಆ ಕಡೆಯ ತೀರ ಇನ್ನೂ ಬಂದಿಲ್ಲ!.
'ಸರಿ ಕಣೋ ನನಗೆ ಟೈಮ್ ಆಯ್ತು ಇನ್ನೊಂದಿನ ಬರ‍್ತೀನಿ' ಅವನಿಂದ ಬಂದ ಆ ತಿಲಾಂಜಲಿಗೆ ನಾನು 'ಸರಿ ಕಣೋ, ಮತ್ತೊಮ್ಮೆ ಸಿಗೋಣ.' ಎಂದೆ. ನಾವಿಬ್ಬರೂ ಎಂಟು ವರ್ಷಕ್ಕೂ ಹೆಚ್ಚಿನ ಗೆಳೆಯರಾದ್ದರಿಂದ ಮಾತುಗಳು ತುಂಬಾನೆ 'ಇನ್ ಫಾರ‍್ಮಲ್' ಆಗಿದ್ದವು. ನಾನು ಅವನನ್ನು ಬೀಳ್ಕೊಡಲು ಮೇಲೇಳಲು ನನ್ನ ತೊಡೆಯ ಮೇಲಿದ್ದ ಬ್ಯಾಗನ್ನು ಪಕ್ಕಕ್ಕಿಟ್ಟೆ. ಸರಿ '......' ಅರೇ!! ಲಿಖಿತ್ ಹಾಗಿರಲಿ ಈಗ ಬಸ್ಸಿನಲ್ಲಿದ್ದವರು ಯಾರೂ ಕಾಣುತ್ತಿಲ್ಲ!!
ಅಸಲಿಗೆ ನಾನು ಬಸ್ಸಿನಲ್ಲಿಯೇ ಇರಲಿಲ್ಲ. ನಾನು ಶಾಲೆಯಲ್ಲಿದ್ದೆ. ಈಗಿನದಲ್ಲ ಹಳೆಯದು!!!!. ಯಾಕೋ ಈ ಶಾಲೆ ಇವತ್ತು ಮತ್ತೆ ಮತ್ತೆ ತನ್ನ ಕಬಂಧ ಬಾಹುಗಳಿಂದ ನನಗೆ ಕಾಡುತ್ತಿದೆಯಲ್ಲಾ.. ಎನ್ನಿಸಿತು. ಇದನ್ನೇನಾದರೂ ಮುಂದೊಮ್ಮೆ ಬರೆದರೆ ಐದಾರು ಆಶ್ಚರ್ಯಕರ ಚಿಹ್ನೆಗಳನ್ನು ಹಾಕಬಹುದುತ್ತು. (ಅದನ್ನು ಈಗ ಹಾಕಿದ್ದೇನೆ...!!).
ನನ್ನ ಗೆಳೆಯರು, ನಾನು ಎಲ್ಲರೂ ನನಗೀಗ ಕಾಣುತಿತ್ತು. ನಾನೇನೋ ಹೇಳುತಿದ್ದೆ. ಏನದು?? ಈ ತರಹದ ಕುತೂಹಲ ಎಲ್ಲರಂತೆ ನನಗೂ ಇತ್ತು. ನಿಧಾನವಾಗಿ ಅತ್ತ ನೆಡೆದೆ. ಯಾವುದೋ ಸಿನಿಮಾದಂತೆ ಕಾಣುತಿತ್ತು. ನಾನು ಅದೃಶ್ಯ ಮಾನವನೋ, ಇಲ್ಲಿ ನೆರೆದಿರುವರಿಗೆಲ್ಲಾ 'ನನ್ನನ್ನು' ನೋಡಿದಾಗ ಏನೆನ್ನಿಸಬಹುದು? ನನ್ನ ಮನಸ್ಸು ಪಕ್ಕಾ ಸಿನಿಮೀಯವಾಗಿ ಯೋಚಿಸಹತ್ತಿತು. ಅವರೆಲ್ಲರ ಮಾತುಗಳು ಕೇಳುತ್ತಿದ್ದವು.
'ಈ ರಿಸಲ್ಟ್ ಬಂದ್ಬಿಟ್ಟರೆ ಮತ್ತೊಮ್ಮೆ ಇಲ್ಲಿ ತಲೆಹಾಕಿಯೂ ಮಲಗುವುದಿಲ್ಲ ಕಣೋ' ಮತ್ತೊಂದು ಇನ್ ಫಾರ‍್ಮಲ್ ಮಾತು.
'ನಾನೂ ಅಷ್ಟೇ ಕಣೋ. ಕಮ್ಮಿ ಮಾರ್ಕ್ಸ್ ಬರೋದಂತು ಗ್ಯಾರೆಂಟಿ, ಅದ್ಯಾವ ಮುಖ ಎತ್ತಿಕೊಂಡು ಇಲ್ಲಿಗೆ ಬರೋದು?' ಇದು ನನ್ನ ಸ್ವರದಂತೆ ಕೇಳಿತು. ನನಗೆ ಎಪ್ಪತ್ನ್ಲಾಲ್ಕು ಪ್ರತಿಶತ ಬಂದಿದ್ದರೂ ಅದು ಆಗಲೂ ನನಗೆ ಕಮ್ಮಿ ಎಂದೆನ್ನಿಸತೊಡಗಿದ್ದು ಸತ್ಯ.
ಅದೆಲ್ಲಾ ಮಂಜಾಗತೊಡಗಿತು. ಏನೂ ಕಾಣುತ್ತಿರಲಿಲ್ಲ. ನನ್ನ ಗೆಳೆಯರು.. ನಾನು... ಉಹೂಂ.. ಇಲ್ಲ, ಏನೂ ಇಲ್ಲ... ನಾನು ಅಲುಗಾಡುತ್ತಿರುವುದು ಅರಿವಿಗೆ ಬಂತು. ಅದಲ್ಲ, ಯಾರೋ ತಳ್ಳುತ್ತಿದ್ದಾರೆ ಅಲುಗಾಡಿಸುತ್ತಿದ್ದಾರೆ. ಈಗ ಕಾಣತೊಡಗಿತು. ನನ್ನ ಪಕ್ಕದ ಸೀಟಿನವ. ಉಡುಪಿ, ಅಂದರೆ ನಾನು ಇಳಿಯಬೇಕಾದ ಸ್ಥಳ ಬಂತೆಂದು ಸನ್ನೆ ಮಾಡಿದ. ಮೌನವಾಗಿ ಕೆಳಗಿಳಿದೆ. ಹತ್ತಿರದ ವಿರಾಮ ಕುರ್ಚಿಯಲ್ಲಿ ಕುಳಿತೆ. ನನ್ನ ಸರ್ ಬಳಿ ಮಾತನಾಡುವಾಗ ಏಕೆ ನನಗೆ ಹಿಂದೆ ನೆಡೆದಿದ್ದ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದೆನೆಂದು ಅರ್ಥವಾಯಿತು. ನನಗೆ ಈಗಿನ ಸಂಗತಿ ಗೊತ್ತಿದ್ದರಲ್ಲವೇ ಅದರ ಬಗ್ಗೆ ಕನಸುಗಳು ಬೀಳುವುದು!?. ನಾನೇ ಕರೆದ ಸ್ವಪ್ನ ಪಾತ್ರಕ್ಕೆ ಅಂತ್ಯದ ಗುರುತೆಲ್ಲಿದೆ? ಇಷ್ಟಕ್ಕೂ ನನಗೆ ಬಿದ್ದ ಕನಸು ನನ್ನ ಶಾಲೆ ಸಂಗತಿಗಳ ಬಗ್ಗೆಯೇ ಏಕೆ ತಿರುಗುತಿತ್ತು? ಇದಕ್ಕೆ ಉತ್ತರ ತಿಳಿಯಲು ಹೊರಟಾಗ ಬೆಳಿಗ್ಗೆ ನನ್ನ ಹಳೆಯ ಶಾಲೆಯ ಗೆಳೆಯರು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಾರ್ಯಕ್ರಮವೊಂದಿದೆ, ಬರಬೇಕೆಂದು ಕರೆದಿದ್ದರು. ನಾನು ತುಂಬು ಹೃದಯದಿಂದ ಒಪ್ಪಿಕೊಂಡಿದ್ದು ಜ್ಞಾಪಕಕ್ಕೆ ಬಂದಿತು.
ಅಬ್ಬಾ!! ಸಮಯ ಕಳೆದಂತೆಲ್ಲಾ ಕಹಿ ಘಟನೆಗಳಾವುದೇ ಇರಲಿ ಒಲುಮೆ ಇಟ್ಟುಕೊಂಡ, ನೆನಪುಗಳನ್ನು ಉಳಿಸಿದ ಯಾವುದೇ ವಸ್ತುವಾದರೂ ಜೀವವಾದರೂ ಅದನ್ನು ಎದುರಿಗೆ ತೋರ್ಪಡಿಸದೇ ಇದ್ದರೂ ಒಳಗೊಳಗೇ ಅದರೆಡೆಗೆ ವಿಶೇಷವಾದುದೊಂದು ಕಾಳಜಿ-ಜವಾಬ್ದಾರಿ ಹಾಗೂ ಮುಖ್ಯವಾಗಿ ಪ್ರೀತಿ ಇರುತ್ತದೆ ಎಂಬುದು ಎಂತಹ ಅದ್ಭುತ ಸತ್ಯ ಅನ್ನಿಸಿತು.
ಕೊನೆಯ ಪ್ರಶ್ನೆ - ಈ ಸತ್ಯದರ್ಶನಕ್ಕೆ ಕಾರಣವಾದ ಕನಸಿನ ಲೊಕಕ್ಕೆ ಕರೆದೊಯ್ಯಲು ಯಾವುದೇ ಪುಸ್ತಕ ತರದಂತೆ ಮಾಡಿದ ಮರೆವಿಗೊಂದು ಧನ್ಯವಾದ ಹೇಳಲೇ!!??
ಲೇಖಕರ ಕಿರುಪರಿಚಯ | |
ಶ್ರೀ ಆಶ್ರಿತ್ ಎಸ್. ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾದ ಇವರು ಕನ್ನಡ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದಾರೆ. ಪ್ರಸ್ತುತ ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಬಿ.ಬಿ.ಎಂ. ವ್ಯಾಸಂಗ ಮಾಡುತ್ತಿದ್ದಾರೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ