ಬುಧವಾರ, ನವೆಂಬರ್ 19, 2014

ಕಾಲುಬಾಯಿ ರೋಗ - ನಿರ್ಮೂಲನೆ ಸಾದ್ಯವೇ?

ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಗಳಲ್ಲಿ ಕಾಲುಬಾಯಿ ಜ್ವರ ಭೀಕರವಾದುದು. ದೇಶದಲ್ಲಿ ಪ್ರತಿ ವರ್ಷ ಈ ರೋಗೋದ್ರೇಕದಿಂದಾಗುವ ಹಾನಿ 20,000 ಕೋಟಿ ರೂಪಾಯಿಗಳಷ್ಟು! ವಿಶ್ವ ಆರೋಗ್ಯ ಸಂಸ್ಥೆ (WHO) ಈ ರೋಗವನ್ನು ಶತಮಾನದ ಮಹಾಮಾರಿ ಎಂದಿದೆ.

ಭಾರತ ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಜಾಗತೀಕರಣ, ಉದಾರೀಕರಣ ನೀತಿಯಂತೆ ಆಮದು ರಪ್ತಿನಲ್ಲಿ ಭಾಗವಹಿಸುವ ರಾಷ್ಟ್ರಗಳು ಸಾಂಕ್ರಮಿಕ ರೋಗಗಳಿಂದ ಮುಕ್ತವಾಗಿರಬೇಕು ಎನ್ನುವ ನೀತಿ ಭಾರತದ ಪಾಲಿಗೆ ಉರುಳಾಗಿದೆ. ಕಾಲು ಬಾಯಿ ರೋಗ ಇಂದು ನಿನ್ನೆಯದಲ್ಲ. ಉತ್ತರಾಂಚಲ ರಾಜ್ಯದ ಮುಕ್ತೇಶ್ವರದಲ್ಲಿ ಈ ರೋಗದ ಸಂಶೋಧನಾ ಕೇಂದ್ರ 1943 ರಲ್ಲಿಯೇ ಸ್ಥಾಪಿತವಾಗಿದೆ. ಆದಾಗ್ಯೂ ಪ್ರತಿ ವರ್ಷ ಒಂದಿಲ್ಲೊಂದು ಭಾಗದಲ್ಲಿ ರೋಗೋದ್ರೇಕ ಕಂಡುಬರುತ್ತದೆ.  ಕಳೆದ ವರ್ಷ ಕೂಡ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿಯೂ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ರೋಗ ಮಾರಣಾಂತಿಕವಾಗಿ ಪರಿಣಮಿಸಿ ಸಾವಿರಾರು ರಾಸುಗಳನ್ನು ಬಲಿ ತೆಗೆದುಕೊಂಡಿದ್ದರಿಂದ ದೊಡ್ಡ ಸುದ್ದಿಯಾಗಿದೆ. ಸುದ್ದಿ ಹಳೆಯದಾಗಿ ಮಹತ್ವ ಕಳೆದುಕೊಳ್ಳುವ ಮುನ್ನ ರೋಗ ನಿರ್ಮೂಲನೆ ಬಗ್ಗೆ ಚಿಂತನೆ ನಡೆದು ಕಾರ್ಯರೂಪಕ್ಕೆ ಬಂದರೆ ಒಳಿತು. 

ಕಾಲುಬಾಯಿ ಬೇನೆ, ಸೀಳು ಗೊರಸು ಹೊಂದಿದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಅಲ್ಲದೇ ವನ್ಯ ಜೀವಿಗಳಲ್ಲಿಯೂ ಕಂಡು ಬರುತ್ತದೆ. ಶುದ್ಧ ವಿದೇಶಿ ಹಾಗೂ ಮಿಶ್ರತಳಿ ರಾಸುಗಳಲ್ಲಿ ರೋಗದ ತೀವ್ರತೆ ಹೆಚ್ಚು. ರೋಗಕ್ಕೆ ಕಾರಣವಾದ ವೈರಾಣುವಿನಲ್ಲಿ ಏಳು ಪ್ರಬೇಧಗಳಿದ್ದು, ಇವುಗಳ ಮಧ್ಯ-ರಕ್ಷಣೆ (Cross Protection) ಇಲ್ಲದ ಕಾರಣ ಪ್ರತಿಯೊಂದು ಪ್ರಬೇಧವೂ ಒಂದೊಂದು ರೋಗವೇ ಸರಿ. ಭಾರತದಲ್ಲಿ ಎ, ಓ, ಹಾಗೂ ಏಷ್ಯಾ-1 ಪ್ರಬೇಧಗಳು ರೋಗವುಂಟು ಮಾಡುತ್ತವೆ.

ಜಾನುವಾರು ಜಾತ್ರೆ ಅಥವಾ ಮಾರುಕಟ್ಟೆಗಳು ಈ ರೋಗದ ಆಶ್ರಯ ತಾಣಗಳಿದ್ದಂತೆ. ದೂರದ ಸಾಗಾಣಿಕೆಯಿಂದ ಆಗುವ ಒತ್ತಡ, ಬಂದ ನಂತರ ವಾತಾವರಣ ಹಾಗೂ ಆಹಾರ ಕ್ರಮದ ವ್ಯತ್ಯಾಸಗಳಿಂದ ಒತ್ತಡದಲ್ಲಿರುವ ಲಸಿಕೆ ಹಾಕಿಸದ ಜಾನುವಾರುಗಳು ರೋಗಕ್ಕೆ ಮೊದಲು ಬಲಿಯಾಗುತ್ತವೆ. ರೋಗದಿಂದ ನರಳುತ್ತಿರುವ ಪ್ರಾಣಿಯ ಜೊಲ್ಲು, ವಿಸರ್ಜಿತ ದ್ರವ, ಕಲುಷಿತ ನೀರು, ಮೇವು, ಆಹಾರ, ಇತ್ಯಾದಿಗಳಿಂದ ಪಕ್ಕದ ಮನೆಯ ಜಾನುವಾರುಗಳು ನಂತರ ಪಕ್ಕದ ಊರು, ಹೀಗೆ ತೀವ್ರಗತಿಯಲ್ಲಿ ವ್ಯಾಪಕವಾಗಿ ರೋಗ ಹರಡುತ್ತದೆ. ಅಲ್ಲದೇ ಕಲುಷಿತ ಗಾಳಿ, ಕೊಟ್ಟಿಗೆಯಲ್ಲಿ ಕೆಲಸ ಮಾಡುವರು, ರೋಗ ಪೀಡಿತ ಪ್ರಾಣಿಗಳ ಸಾಗಾಣಿಕೆ, ನೊಣ, ಸೊಳ್ಳೆ, ಕಾಗೆ, ಹಕ್ಕಿ-ಪಕ್ಷಿಗಳ ಮೂಲಕ ಸಹಾ ರೋಗ ಹರಡುತ್ತದೆ. ಅಲ್ಲದೇ ರೋಗಪೀಡಿತ ಕುರಿ ಹಾಗೂ ಹಂದಿಗಳಿಂದ ವೈರಾಣು ಅತ್ಯಧಿಕ ಪ್ರಮಾಣದಲ್ಲಿ ವಿಸರ್ಜಿತವಾಗಿ ರೋಗ ಹರಡುತ್ತದೆ. ಇದು ವೈರಸ್‌ನಿಂದ ಬರುವ ರೋಗವಾಗಿರುವುದರಿಂದ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುಂಜಾಗೃತಾ ಲಸಿಕೆಯೇ ಮದ್ದು. ರೋಗ ಬಂದ ಪ್ರಾಣಿಗಳಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ. (ನಾಟಿ ದನಗಳಲ್ಲಿ ಶೇ. 2 ಹಾಗೂ ಮಿಶ್ರತಳಿ ಹಾಗೂ ಕರುಗಳಲ್ಲಿ ಶೇ. 10-20 ರಷ್ಟು; ಆದರೆ ಈ ವರ್ಷ ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡ ರೋಗದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದಿದ್ದು ವಿಶೇಷ). ರೋಗದಿಂದ ನರಳಿ ಗುಣಮುಖ ಹೊಂದಿದರೂ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದು, ಎತ್ತುಗಳಲ್ಲಿ ಕೆಲಸದ ಸಾಮರ್ಥ್ಯ ಕುಂದುವುದು, ಗರ್ಭಪಾತ, ಬರಡಾಗುವುದು, ಇತ್ಯಾದಿ ಪರಿಣಾಮಗಳಿಂದ ಆರ್ಥಿಕ ಹಾನಿ ಸಂಭವಿಸುತ್ತದೆ. ಡಬ್ಲೂ. ಹೆಚ್. ಒ. ವರದಿಯಂತೆ ಪ್ರತಿ ವರ್ಷ ಭಾರತದಲ್ಲಿ ಈ ಕಾಯಿಲೆಯಿಂದಾಗುವ ಆರ್ಥಿಕ ಹಾನಿ 20,000 ಕೋಟಿ ರೂಪಾಯಿಗಳು!

ಈ ರೋಗದ ನಿರ್ಮೂಲನೆಗೆ ಕೇಂದ್ರ ಪುರಷೃತ ಕಾಲುಬಾಯಿ ರೋಗ ನಿಯಂತ್ರಣ (ಎಫ್. ಎಂ. ಡಿ. ಸಿ. ಪಿ.) ಯೋಜನೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ (ಫೆಬ್ರವರಿ-ಮಾರ್ಚ್ ಹಾಗೂ ಆಗಸ್ಟ್-ಸೆಪ್ಟೆಂಬರ್) ಉಚಿತ ಲಸಿಕಾ ಕಾರ್ಯಕ್ರಮ ರಾಜ್ಯದಲ್ಲಿ 2011 ರಿಂದಲೇ ಜಾರಿಯಲ್ಲಿದ್ದು ಐದನೇ ಹಂತ ಪೂರ್ಣಗೊಂಡಿದೆ. ಆದಾಗ್ಯೂ ಈ ವರ್ಷ 20,000 ಕ್ಕೂ ಹೆಚ್ಚು ಜಾನುವಾರುಗಳಿಗೆ ರೋಗೊದ್ರೇಕ ಕಂಡುಬಂದಿದ್ದು ಕಳವಳಕಾರಿ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರೋಗೋದ್ರೇಕ ಕಂಡದ್ದು ಈಗಲೇ. ಲಸಿಕಾ ಕಾರ್ಯಕ್ರಮ ಜಾರಿಯಲ್ಲಿದ್ದಾಗಲೇ ರೋಗೋದ್ರೇಕ ಕಾಣಿಸಿಕೋಡಿದ್ದಕ್ಕೆ ಕಳಪೆ ಗುಣಮಟ್ಟದ ಲಸಿಕೆ ಕಾರಣವೇ? ಅಸಮರ್ಪಕ ಲಸಿಕಾ ವಿಧಾನ ಅಥವಾ ರೋಗಕ್ಕೆ ಕಾರಣವೆಂದು ಹೇಳುವ 'ಓ' ಪ್ರಬೇಧದ ರೂಪಾಂತರ (Mutation) ಕಾರಣವೇ? ಸಂಬಂದಿಸಿದ ವಿಜ್ಞಾನಿಗಳು ಅಥವಾ ಸರ್ಕಾರ ರಚಿಸಿದ ಉನ್ನತ ಮಟ್ಟದ ತಜ್ಞರ ಸಮಿತಿಯೇ ಉತ್ತರಿಸಬೇಕು.

ರೋಗ ನಿರ್ಮೂಲನೆಗೆ ಇರುವ ಅಡಚಣೆಗಳು
ರೋಗಕ್ಕೆ ಕಾರಣವಾದ ವೈರಾಣು ಏಳು ಪ್ರಬೇಧಗಳನ್ನು ಹೊಂದಿದ್ದು ಅತಿ ಬಲಿಷ್ಠವಾಗಿದೆ. ರೋಗ ಕಾಣಿಸಿಕೊಂಡ ಜಾಗದಿಂದ 60 ಕಿ.ಮೀ. ದೂರ ಗಾಳಿಯಲ್ಲಿ ಚಲಿಸಬಲ್ಲದು. ರೋಗದಿಂದ ನರಳಿ ಗುಣಮುಖ ಹೊಂದಿದ ಪ್ರಾಣಿಗಳ ದೇಹದಲ್ಲಿ ಮೂರು ವರ್ಷದವರೆಗೆ ಇದ್ದು ರೋಗ ಹರಡುವ ಸಾಮರ್ಥ್ಯ ಹೊಂದಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಆ ಪ್ರದೇಶದ ಎಲ್ಲ ಜಾನುವಾರುಗಳನ್ನೂ ಸಾಯಿಸುತ್ತಾರೆ. ಅದು ನಮ್ಮ ದೇಶದಲ್ಲಿ ಆಗದ ಮಾತು. ಲಸಿಕೆಯನ್ನು ಶೀತಲ (4 ಡಿಗ್ರೀ ಸೆಲ್ಸಿಯಸ್) ವಾತಾವರಣದಲ್ಲಿ ಸಂಗ್ರಹಿಸಿ ಉಪಯೋಗಿಸಿದರೆ ಮಾತ್ರ ಅದು ಫಲಕಾರಿ. ಕೇವಲ ನಾಲ್ಕಾರು ಗಂಟೆಗಳವರೆಗೆ ವಿದ್ಯುತ್ ಸರಬರಾಜು ಇರುವ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಈ ಕೋಲ್ಡ್ ಚೈನ್ ನಿರ್ವಹಣೆ ಸಾಧ್ಯವಿಲ್ಲ. ಅಂತಹ ಲಸಿಕೆ ಹಾಕಿದರೆ ರೋಗನಿರೋಧಕ ಶಕ್ತಿ ಎಲ್ಲಿಂದ ಬರಬೇಕು? ಅತಿವೃಷ್ಟಿ, ಅನಾವೃಷ್ಟಿ, ಬರಗಾಲದಿಂದ ತತ್ತರಿಸುವ ಭಾರತದಂತಹ ದೇಶದಲ್ಲಿ ಪ್ರಾಣಿಗಳ ವಲಸೆ ಸಾಮಾನ್ಯ. ಇದನ್ನು ತಡೆದರೆ ರೋಗ ತಹಬಂದಿಗೆ ಬರುತ್ತದೆ. ಆದರೆ ಪ್ರಾಣಿಗಳ ವಲಸೆ ತಡೆಯುವುದು ಸುಲಭವೇ? ಸುಮಾರು 50 ಬಗೆಯ ವನ್ಯ ಜೀವಿಗಳೂ ಸೇರಿದಂತೆ ಸೀಳು ಗೊರಸುಗಳುಳ್ಳ ಎಲ್ಲ ಪ್ರಾಣಿಗಳಿಗೂ ಈ ರೋಗ ಬರುತ್ತದೆ. ಅಲ್ಲದೇ ಒಂದು ಜಾತಿಯ ಪ್ರಾಣಿಯಿಂದ ಇನ್ನೊಂದಕ್ಕೆ ಹರಡುತ್ತದೆ. ಅಂದರೆ ಹಂದಿಗಳಿಗೆ ರೋಗ ಬಂದರೆ ಅದರ ಸಂಪರ್ಕಕ್ಕೆ ಬರುವ ಹಸು ಎಮ್ಮೆಗಳಿಗೆ ಬರುತ್ತದೆ. ಅದೇ ರೀತಿ ರೋಗವಿರುವ ಹಸು ಎಮ್ಮೆಗಳು ಕಾಡಿನಲ್ಲಿ ಮೇವುವಾಗ ಕಾಡು ಪ್ರಾಣಿಗಳಿಗೆ ಹರಡುತ್ತದೆ. ಈ ರೀತಿ ನೆಟ್‌ ವರ್ಕ್ ಹೊಂದಿದ ರೋಗವನ್ನು ತಡೆಯುವುದು ಕಷ್ಟ. ಪ್ರಸ್ತುತ ಜಾರಿಯಲ್ಲಿರುವ ಲಸಿಕಾ ಕಾರ್ಯಕ್ರಮ ಎಮ್ಮೆ ದನಗಳಿಗೆ ಮಾತ್ರ ಸಿಮಿತವಾಗಿದೆ. ಅಲ್ಲದೆ, ಕಸಾಯಿಖಾನೆಗಳು ವೈರಾಣು ಬ್ಯಾಂಕುಗಳಿದ್ದಂತೆ. ಇಲ್ಲಿಂದ ಹೊರಡುವ ಮಾಂಸ ರೋಗಾಣುಗಳನ್ನು ಹೊರ ರಾಜ್ಯ ಅಥವಾ ಹೊರ ದೇಶಗಳಿಗೆ ಸುಲಭವಾಗಿ ಕೊಂಡೊಯ್ಯಬಹುದು.

ಲಸಿಕೆ ಹಾಕಿಸಿಕೊಂಡ ಜಾನುವಾರುಗಳಿಗೆ ಜ್ವರ, ಗರ್ಭಪಾತ, ಹಾಲು ಕಡಿಮೆಯಾಗುತ್ತದೆ ಎನ್ನುವ ನೆಪ ಹೇಳಿ ಲಸಿಕೆ ಹಾಕಿಸಿಕೊಳ್ಳಲು ಕೆಲವು ಗೋಪಾಲಕರು ನಿರಾಕರಿಸುತ್ತಾರೆ. ನೂರಕ್ಕೆ ನೂರರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸದಿದ್ದರೆ ರೋಗ ನಿರ್ಮೂಲನೆ ಸಾಧ್ಯವಿಲ್ಲ.

ನಿರ್ಮೂಲನೆ ಹೇಗೆ?

ರೋಗದ ಬಗ್ಗೆ ಆಳವಾದ ಸಂಶೋಧನೆ, ಶಿಸ್ತುಬದ್ಧ ಕಾರ್ಯಯೋಜನೆ, ಗುಣಮಟ್ಟದ ಸುರಕ್ಷಿತ ಲಸಿಕೆಯ ಅವಶ್ಯಕತೆ ಉಂಟು. ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ನುರಿತ ತಜ್ಞರು ಹಾಗೂ ಸಿಬ್ಬಂದಿಗಳ ತಂಡ ರಚಿಸಿ ನೂರಕ್ಕೆ ನೂರರಷ್ಟು ಲಸಿಕೆ ಹಾಕುವಂತೆ ಕ್ರಮ ಜರುಗಿಸಬೇಕು. ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಗೆ ಹನಿ ಹಾಕುವ (ಪಲ್ಸ್ ಪೋಲಿಯೋ ಮಾದರಿ ಲಸಿಕೆ) ಅಭಿವೃದ್ಧಿಗೊಂಡರೆ ಈ ಕಾರ್ಯ ಸುಲಭವಾಗುವುದು. ಜಾನುವಾರು ಮಾಲೀಕರಿಗೆ ರೋಗದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದರ ಜೊತೆಗೆ ಲಸಿಕೆ ಹಾಕಿಸುವುದು ಕಡ್ಡಾಯಗೊಳಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಈ ಬಗ್ಗೆ ಸೂಕ್ತ ನಿಗಾ ಅಗತ್ಯ. ಕಾನೂನು ಬಾಹಿರ ಪ್ರಾಣಿಗಳ ವಲಸೆ ತಡೆಯುವುದು, ಪ್ರಾಣಿಜನ್ಯ ಆಹಾರ ವಸ್ತುಗಳ ಆಮದು-ರಪ್ತಿಗೆ ಮುನ್ನ ಸೂಕ್ತ ಪರೀಕ್ಷೆ ಅವಶ್ಯ. ರೋಗ ಕಂಡುಬಂದಾಗ ಜಾನುವಾರು ಸಾಗಾಣಿಕೆಯನ್ನು ಸ್ಥಗಿತಗೊಳಿಸುವುದು/ನಿಯಂತ್ರಿಸುವುದು. ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲಿಂದಲ್ಲಿ ಬಿಸಾಡದೇ ಸೂಕ್ತ ರೀತಿಯಲ್ಲಿ ಶವಸಂಸ್ಕಾರ ಮಾಡುವುದೂ ಕೂಡ ಅತಿ ಮುಖ್ಯ.

ಲೇಖಕರ ಕಿರುಪರಿಚಯ
ಡಾ. ನಾಗರಾಜ  ಕೆ. ಎಂ.

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಅತ್ಯತ್ತುಮ ಯುವ ವಿಜ್ಞಾನಿ', 'ಶ್ರೇಷ್ಠ ಪಶುವೈದ್ಯ', 'ಸರ್ವಧಾರಿ ಸಮ್ಮಾನ' ಮುಂತಾದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ