ಶುಕ್ರವಾರ, ನವೆಂಬರ್ 15, 2013

ರಗಸದಅ ಜವಮಬನ

ಈ ಸಾರಿಯ ದೀಪಾವಳಿಗೆಂದು ಅಕ್ಕನ ಮನೆಗೆ ಹೋದಾಗ, ಅಕ್ಕನ ಮಗ ಪುಟ್ಟನನ್ನು ಮಾತಿಗೆಳೆಯಲೆಂದು ಹಿಡಿದು ನಿಲ್ಲಿಸಿ 'ಏನೋ ತರಲೆ.. ಮನೆ ಮನೆ ಸುತ್ತುವುದೇ ಕಾಯಕವೋ ಅಥವಾ ಸ್ಕೂಲಿಗೆ ಹೋಗುತ್ತೀಯೋ?' ಎಂದು ಪ್ರೀತಿ ಮಿಶ್ರಿತ ಸುಳ್ಳು ಸಿಟ್ಟಿನಿಂದ ಕೇಳಿದೆ. ತನ್ನ ತೊದಲು ನುಡಿಯಿಂದ 'ಹೌದು ಹೋಗ್ತೀನಿ, ಒಂದನೇ ಕ್ಲಾಸು..' ಎಂದು ಕೂಗಿದ. 'ಓ.. ಹೌದಾ?.. ಹಾಗಾದರೆ ಎಲ್ಲಿ ಅಆಇಈ ಹೇಳು ನೋಡೋಣ' ಎಂದೆ. ಅದಕ್ಕೆ ಅವನು ಪಿಳಿ ಪಿಳಿ ಕಣ್ಣು ಬಿಟ್ಟನೇ ಹೊರತು ಬಾಯಿಂದ ಯಾವ ಉತ್ತರ ಹೊರಡಲಿಲ್ಲ. ಸ್ವಲ್ಪ ತಡೆದು ನಾನೇ 'ಏನೋ.. ಅಆಇಈ ಕೂಡ ಬರೋಲ್ವೆ ನಿನಗೆ?' ಎಂದು ಗದರಿದೆ. ಅವನಿಗೆ ಏನು ಅನ್ನಿಸಿತೋ, ನನ್ನ ಮುಖ ನೋಡಿಕೊಂಡು ಕೈಕಟ್ಟಿ 'ರಗಸದಅ.. ಜವಮಬನ' ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ.. 'ಏನೋ ಇದು ಮಂಗಣ್ಣ, ಸರಿಯಾಗಿ ಅಕ್ಷರಗಳನ್ನು ಹೇಳಬಾರದೇನೋ?' ಎಂದೆ. ಅದಕ್ಕೆ ಅವನು 'ಅಯ್ಯೋ.. ಡಾಕ್ಟರ್ ಮಾವನಿಗೆ ರಗಸದಅ ಬರೋಲ್ಲ, ರಗಸದಅ ಬರೋಲ್ಲ' ಎಂದು ಇಡೀ ಓಣಿ ಕೇಳಿಸುವ ಹಾಗೆ ಕೂಗಿಕೊಂಡು ಹೊರಗೆ ಓಡಿದ.

ನಂತರ, ಪ್ರಾಥಮಿಕ ಶಾಲಾ ಶಿಕ್ಷಕರಾದ ನನ್ನ ತಾಯಿಯನ್ನು ಈ ಬಗ್ಗೆ ಕೇಳಿದಾಗ ತಿಳಿದ ಒಂದಿಷ್ಟು ಅಂಶಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹವು.

ಹೌದು, ಇಂದಿನ ದಿನಗಳಲ್ಲಿ ಮಕ್ಕಳ ಕಲಿಕಾ ಕ್ರಮದಲ್ಲಿ ಅದಮ್ಯ ಬದಲಾವಣೆಗಳಾಗಿವೆ. ನಾವೆಲ್ಲ ಪ್ರಾಥಮಿಕ ಶಿಕ್ಷಣ ಪಡೆಯುವಾಗ ಮೊದಲು ಕಲಿತ ಅಕ್ಷರವೇ 'ಅ', ನಂತರದಲ್ಲಿ ಸ್ವರಗಳು, ವ್ಯಂಜನಗಳು. ಈಗ ಈ ಕ್ರಮದ ಬದಲು ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಹತ್ತು ಹಂತಗಳಾಗಿ ವಿಂಗಡಿಸಿ ಕಲಿಸಲಾಗುತ್ತಿದೆ. ಅದರಲ್ಲಿನ ಮೊದಲನೇ ಹಂತವೇ ಪುಟ್ಟ ಹೇಳಿದ 'ರಗಸದಅ'. ಈ ರೀತಿಯ ಹಂತದ ಕಲಿಕೆಯಲ್ಲಿ ಮಗುವು ಅಕ್ಷರಗಳನ್ನು ಕಲಿಯುವುದರ ಜೊತೆಗೆ ಮೆಲ್ಲನೆ ಪದಗಳ ರಚನೆ ಕೂಡಾ ಸಾಧ್ಯವಾಗುತ್ತದೆ. ಉದಾಹರಣೆಗೆ, ಅರ, ಗರ, ಅರಸ.. ಹೀಗೆ. ಅಕ್ಷರಗಳ ಜೊತೆಗೆ ಪದಗಳ ರಚನೆಯಿಂದ ಮಗು ಹೆಚ್ಚು ಉಲ್ಲಾಸಭರಿತವಾಗುತ್ತದೆ. ಈ ವಿಧಾನದಲ್ಲಿ ಮಗುವಿನ ಸ್ವವೇಗ, ಸಂತಸ ಹಾಗೂ ಕಲಿಕೆಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ.

ಹಿಂದಿನ ವಿಧಾನದ ಕಲಿಕೆಯಲ್ಲಿ ಮೊದಲು ಎಲ್ಲ ಸ್ವರಗಳ ಪರಿಚಯವಾಗುತ್ತಿತ್ತು. ಆದರೆ, ಸ್ವರಗಳ ಸಂಯೋಗದಿಂದ ಯಾವುದೇ ಪದಗಳ ರಚನೆ ಸಾಧ್ಯವಾಗುವುದಿಲ್ಲ. ಹಾಗೆಯೇ, 14 ಸ್ವರಗಳನ್ನು ಕಲಿಯಲು ಬೇಕಾಗುವ ಕಾಲಾವಕಾಶ ಕೂಡ ಹೆಚ್ಚು. ಅಂದರೆ, ಪದಗಳ ರಚನೆಗೆ ಒಂದು ಮಗು ಮೂರನೇ ತರಗತಿ ಉತ್ತೀರ್ಣಗೊಳ್ಳಬೇಕಿತ್ತು.

ಈ ಹೊಸ ವಿಧಾನದ ಕಲಿಕೆಯನ್ನು 'ನಲಿ-ಕಲಿ' ಎನ್ನಲಾಗುತ್ತದೆ. ಇದು ಕರ್ನಾಟಕದಲ್ಲಿ 2010 ರಲ್ಲಿ ಆರಂಭಗೊಂಡಿತು. ಈ ಯೋಜನೆಯ ಪ್ರಕಾರ ಪ್ರತಿ ಶಿಕ್ಷಕರಿಗೆ ತರಗತಿಯಲ್ಲಿ 30 ಮಕ್ಕಳು ಮಾತ್ರ. ಅದರಲ್ಲಿ ಮೊದಲನೇ ತರಗತಿಯ 10, ಎರಡನೇ ತರಗತಿಯ 10 ಮತ್ತು ಮೂರನೇ ತರಗತಿಯ 10 ವಿದ್ಯಾರ್ಥಿಗಳಿರುತ್ತಾರೆ. ಅಂದರೆ ಈ ಯೋಜನೆಯಲ್ಲಿ ವರ್ಗ (ತರಗತಿ)ದ ಕಲ್ಪನೆ ಇಲ್ಲ. ಆದರೆ ಕಲಿಕೆಯ ಮುಖಾಂತರ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲಾಗುತ್ತದೆ.
ಇಲ್ಲಿ ಮಗುವು ತನ್ನ ಹಿರಿಯ ಗೆಳೆಯರಿಂದ ಕಲಿಯಲು ಅವಕಾಶ ಇರುತ್ತದೆ. ಹಾಗೂ 30 ಮಕ್ಕಳಿರುವುದರಿಂದ, ಪ್ರತ್ಯೇಕ ನಿಗಾ ವಹಿಸುವುದು ಸಾಧ್ಯವಾಗಿ ಪ್ರತಿಯೊಂದು ಮಗುವೂ ತನ್ನದೇ ಆದ ವೇಗದಲ್ಲಿ ಕಲಿಯಬಹುದು. ಮುಂದಿನ ಹಂತಕ್ಕೆ ಏರಬೇಕಾದರೆ, ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ಕಲಿತಿರಲೇಬೇಕು, 'ಗುಂಪಿನಲ್ಲಿ ಗೋವಿಂದ' ಎನ್ನುವ ಹಾಗಾಗುವುದಿಲ್ಲ.

ಇನ್ನೊಂದು ಅಂಶವೆಂದರೆ ಇಲ್ಲಿ ಕಾಗುಣಿತಾಕ್ಷರಗಳನ್ನು ಕೂಡ ಕಲಿಸುವುದಿಲ್ಲ, ಸ್ವರ ಚಿಹ್ನೆಗಳ ಬಳಕೆಯನ್ನು ಎಲ್ಲ ಅಕ್ಷರಗಳಿಗೆ ಹೋಲಿಸಿ ಕಲಿಸಲಾಗುತ್ತದೆ.

ಇಷ್ಟೆಲ್ಲಾ ನನ್ನ ತಾಯಿಯವರಿಂದ ಕೇಳಿ ತಿಳಿದ ನನ್ನ ಪರಿಸ್ಥಿತಿ ಪುಟ್ಟನಿಗಿಂತ ಹೊರತಾಗಿರಲಿಲ್ಲ, ಕಣ್ಣು ಪಿಳಿ ಪಿಳಿ ಮಿಟುಕಿಸುತ್ತಿದ್ದೆ.

ಇದೇ ಪುಟ್ಟನಿಗೆ ಕಳೆದ ಯುಗಾದಿಯಂದು ದೇವಸ್ಥಾನದಲ್ಲಿ ಅಕ್ಕಿ ತುಂಬಿದ ದೊಡ್ಡ ತಟ್ಟೆಯಲ್ಲಿ ಅಕ್ಷರಭ್ಯಾಸ ಮಾಡಿಸುವಾಗ 'ಅ' ಎಂದು ಬರೆಸಿದ್ದು ನನಗೆ ಈಗಲೂ ನೆನಪಿದೆ. ಇದೆಲ್ಲ ತಿಳಿದ ಮೇಲೆ ಪುಟ್ಟನಿಗೆ 'ಅ' ಬದಲು 'ರ' ಎಂದು ಅಕ್ಷರಾಭ್ಯಾಸ ಪ್ರಾರಂಭಿಸಬೇಕಿತ್ತು ಎಂದಿದ್ದಕ್ಕೆ ನನ್ನ ತಾಯಿ ಮುಗುಳ್ನಕ್ಕರು.

ಲೇಖಕರ ಕಿರುಪರಿಚಯ
ಡಾ. ಮಲ್ಲಿಕಾರ್ಜುನ ಈಳಿಗೇರ್

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ಹಾವೇರಿ ಜಿಲ್ಲೆಯವರು. ಪ್ರಸ್ತುತ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಲಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ.

ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಇವರು ಕನ್ನಡ ಸಾಹಿತ್ಯ ಓದುವ ಮತ್ತು ಬರೆಯುವ ಹವ್ಯಾಸ ಹೊಂದಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ