ಭಾನುವಾರ, ನವೆಂಬರ್ 10, 2013

ಋತುಮಾನ ಸಂಪುಟ

ಕಾಡಗಿಚ್ಚು ಹತ್ತಿತು, ಜ್ವಾಲೆಯು ಉಕ್ಕಿತು
ಬಾಯಾರಿ ನಿಂತಿತು ಧರಣಿ, ಬೇಸತ್ತು ಬೆಂದಿತು ಭುರಮಣಿ
ಪ್ರಿಯಕರನ ಅಟ್ಟಹಾಸವ ಕಂಡು ಬಾಡಿತು ಸೂರ್ಯಕಾಂತಿ
ಬೆದರಿ ನಿಂತಿತು ಜಗವು ಮೂಡುತ್ತಿರೆ ಸೂರ್ಯೋದಯವ
ನಿಟ್ಟುಸಿರು ಬಿಟ್ಟರೆ ಲೋಕದೊಳು
ಆಗುತ್ತಿರೆ ಸೂರ್ಯಾಸ್ತವವನೇಸರನ ನೆತ್ತರದ ರೌದ್ರಾವತಾರದ ದರ್ಶನ
ಸೂಚಿಸಿತು ಗ್ರೀಷ್ಮ ಋತುವಿನ ಆಗಮನ.

ಅರಳಿತು ಸುಮರಾಶಿ, ಮೆರೆದಾಡಿತು ಸಸ್ಯಕಾಶಿ
ಹಾರಿದವು ಬಾನಂಗಳದಿ ಪಕ್ಷಿಗಳು, ಗಾನಸುಧೆಯ ಹರಿಸಿದವು ಭ್ರಮರಗಳು
ನೀಲವರ್ಣವ ಕಳಚಿತು ಗಗನದೊಳು
ಹಸಿರಿನ ಛಾಯೆ ಮೂಡಿತು ಬಾನಿನೊಳು
ಹಾಡಿದವು ಕೋಗಿಲೆಗಳು ಸಂಕೀರ್ತನೆಯ
ಕಂಡಿತು ಧರೆಯು ಸ್ವರ್ಗದ ಭ್ರಮೆಯ
ಹಸಿರು ಹೊನ್ನಿನ ವರ್ಣರಂಜಿತ ವಿಹಂಗಮ ಪ್ರಹಸನ
ಸೂಚಿಸಿತು ವಸಂತ ಋತುವಿನ ಆಗಮನ.

ಘರ್ಜಿಸಿದವು ಜಲಧಾರೆಗಳು, ಭೋರ್ಗರೆದವು ಜಲಪಾತಗಳು
ನಲಿದಾಡಿದವು ನವಿಲುಗಳು, ಮೈಮರೆತವು ವನರಾಶಿಗಳು
ಕೃಪೆತೋರಿತು ಗಗನವು ಭೂರಮೆಯ ಕರೆಗೆ
ಇಳಿದು ಬಂದನು ವರುಣನು ಈ ಧರೆಗೆ
ಮೃತ್ತಿಕೆಯ ಸುವಾಸನೆ ಹರಡಿತು ಮುಗಿಲೆತ್ತರದಿ
ಹರುಷದ ಹೊಳೆಯು ಉಕ್ಕಿತು ನಿಸರ್ಗದಿ
ಗುಡುಗು ಸಿಡಿಲ ಅಬ್ಬರದ ರೋಮಾಂಚನ
ಸೂಚಿಸಿತು ವರ್ಷ ಋತುವಿನ ಆಗಮನ.

ಹಿಮವೃಷ್ಟಿಗರೆಯಿತು ಆಕಾಶದಿ, ಹಿಮಪಾತಗಳು ಅರಳಿದವು ಮುಗಿಲೆತ್ತರದಿ
ಮಬ್ಬು ಹಬ್ಬಿತು ಜಗದಿ, ನಸುಗತ್ತಲು ಹರಡಿತು ಮನುಕುಲದಿ
ಓಡಿದವು ಜೀವಕೋಟಿ ಆಸರೆಯ ಬಯಸಿ, ಧರೆಯ ಮಡಿಲಿಗೆ
ಅವಿತು ಕುಳಿತನು ಹೊರಬಾರದೆ ರವಿಯು ಕೊರೆವ ಚಳಿಗೆ
ಶ್ವೇತವರ್ಣದಿ ಶೃಂಗರಿಸಿ ಮೆರೆದವು ಗಿರಿಶಿಖರಗಳು
ಹಾಲಿನ ಹೊಳೆಯಂತೆ ಹೆಪ್ಪುಗಟ್ಟಿ ನಿಂತವು ಸಾಗರಗಳು
ಆವರಿಸಿತು ಎಲ್ಲೆಡೆ ಮಂಜು ಮುಸುಕಿದ ಹವಾಮಾನ
ಸೂಚಿಸಿತು ಶಿಶಿರ ಋತುವಿನ ಆಗಮನ.

  - ಮು. ಸ. ಕೃ.

ಲೇಖಕರ ಕಿರುಪರಿಚಯ
ಶ್ರೀ ಸುಧೀಂದ್ರ ಮುತ್ಯ

ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ-ಗೌರವ ಹೊಂದಿದ್ದಾರೆ.

ಕರ್ನಾಟಕದ ಸುವರ್ಣ ಯುಗ ಮತ್ತೆ ಬರಲಿ, ಕನ್ನಡ ಭಾಷೆ ಉತ್ತುಂಗಕ್ಕೆ ಏರಲಿ, ಕನ್ನಡಿಗರು ಸ್ವಾಭಿಮಾನಿಗಳಾಗಿ ಬಾಳಲಿ ಎಂಬುದು ಇವರ ಮನದಾಳದ ಮಾತು.

Blog  |  Facebook  |  Twitter

1 ಕಾಮೆಂಟ್‌: